ಅಧ್ಯಾಯ 29
ಸ್ವರದ ಗುಣಮಟ್ಟ
ಜನರು, ಹೇಳಲ್ಪಡುವಂಥ ವಿಷಯಗಳಿಂದ ಮಾತ್ರವಲ್ಲ, ಅದನ್ನು ಹೇಗೆ ಹೇಳಲಾಗುತ್ತದೊ ಅದರಿಂದಲೂ ಹೆಚ್ಚು ಪ್ರಭಾವಿತರಾಗುತ್ತಾರೆ. ನಿಮ್ಮೊಂದಿಗೆ ಮಾತಾಡುತ್ತಿರುವಂಥ ವ್ಯಕ್ತಿಯ ಸ್ವರವು ಹಿತಕರವೂ, ಹೃತ್ಪೂರ್ವಕವೂ, ಸ್ನೇಹಭಾವದ್ದೂ, ದಯಾಭರಿತವೂ ಆಗಿರುವಲ್ಲಿ, ನೀವು ಅವನಿಗೆ ಪ್ರಸನ್ನತೆಯಿಂದ ಕಿವಿಗೊಡುವ ಪ್ರವೃತ್ತಿಯಿರುತ್ತದೆ, ಮತ್ತು ಅವನ ಸ್ವರವು ನೀರಸವೂ ಒರಟಾದದ್ದೂ ಆಗಿರುವಲ್ಲಿ ಸರಿಯಾಗಿ ಕಿವಿಗೊಡುವ ಪ್ರವೃತ್ತಿಯಿರುವುದಿಲ್ಲ ಎಂಬುದು ನಿಜವಲ್ಲವೊ?
ಅಪೇಕ್ಷಿತ ಗುಣಮಟ್ಟದ ಸ್ವರವನ್ನು ಬೆಳೆಸಿಕೊಳ್ಳುವುದು, ಕೇವಲ ಸ್ವರ ರಚನಾ ವಿಧಾನದ ಮೇಲೆ ಹೊಂದಿಕೊಂಡಿರುವ ವಿಷಯವಲ್ಲ. ಒಬ್ಬನ ವ್ಯಕ್ತಿತ್ವವೂ ಇದರಲ್ಲಿ ಸೇರಿರಬಹುದು. ಒಬ್ಬನು ಬೈಬಲ್ ಸತ್ಯದ ಜ್ಞಾನ ಮತ್ತು ಅನ್ವಯದಲ್ಲಿ ಪ್ರಗತಿಯನ್ನು ಮಾಡುತ್ತಾ ಹೋದಂತೆ, ಅವನು ಮಾತಾಡುವ ರೀತಿಯಲ್ಲಿ ಬದಲಾವಣೆಗಳು ವ್ಯಕ್ತವಾಗುತ್ತವೆ. ಪ್ರೀತಿ, ಸಂತೋಷ ಮತ್ತು ದಯೆಯಂತಹ ದೈವಿಕ ಗುಣಗಳು ಅವನ ಸ್ವರದಲ್ಲಿ ಪ್ರತಿಬಿಂಬಿತವಾಗುತ್ತವೆ. (ಗಲಾ. 5:22) ಅವನು ಇತರರ ಬಗ್ಗೆ ನಿಜ ಚಿಂತೆಯನ್ನು ತೋರಿಸುವಾಗ, ಅವನ ಸ್ವರದಲ್ಲಿ ಅದು ತಿಳಿದುಬರುತ್ತದೆ. ಸತತವಾದ ದೂರುವ ಆತ್ಮವನ್ನು ಕೃತಜ್ಞತಾಭಾವವು ಸ್ಥಾನಪಲ್ಲಟಮಾಡುವಾಗ, ಆಡಲ್ಪಡುವ ಮಾತುಗಳೂ ಸ್ವರದ ನಾದವೂ ಅದನ್ನು ರುಜುಪಡಿಸುತ್ತದೆ. (ಪ್ರಲಾ. 3:39-42; 1 ತಿಮೊ. 1:12; ಯೂದ 16) ಆಡಲ್ಪಡುತ್ತಿರುವ ಭಾಷೆ ನಿಮಗೆ ಅರ್ಥವಾಗದಿದ್ದರೂ, ಒಬ್ಬನು ಅಹಂಕಾರದಿಂದ, ಅಸಹನೆಯಿಂದ, ಟೀಕಾತ್ಮಕವಾಗಿ ಹಾಗೂ ಕಟುವಾಗಿ ಮಾತಾಡುತ್ತಿರುವಲ್ಲಿ ಮತ್ತು ಇನ್ನೊಬ್ಬನು ದೀನಭಾವ, ತಾಳ್ಮೆ, ದಯೆ ಮತ್ತು ಪ್ರೀತಿಯಿಂದ ಮಾತಾಡುವುದನ್ನು ಕೇಳಿಸಿಕೊಳ್ಳುವಲ್ಲಿ, ನಿಮಗೆ ವ್ಯತ್ಯಾಸವನ್ನು ಕಂಡುಹಿಡಿಯಲು ಕಷ್ಟವಾಗುವುದಿಲ್ಲ.
ಕೆಲವು ಸಂದರ್ಭಗಳಲ್ಲಿ ಅನಪೇಕ್ಷಣೀಯವಾದ ಸ್ವರದ ಗುಣಮಟ್ಟವು, ಒಂದು ಕಾಯಿಲೆಯು ಒಬ್ಬನ ಕಂಠಕುಹರಕ್ಕೆ ಹಾನಿಮಾಡಿರುವ ಕಾರಣದಿಂದ ಅಥವಾ ಹುಟ್ಟಿನಿಂದ ಬಂದ ಶಾರೀರಿಕ ರಚನಾ ದೋಷದಿಂದಾಗಿರಬಹುದು. ಇಂತಹ ದೋಷಗಳು ಈ ವಿಷಯಗಳ ವ್ಯವಸ್ಥೆಯಲ್ಲಿ ಪೂರ್ತಿ ಸರಿಪಡಿಸಲಾಗದಷ್ಟು ಗಂಭೀರವಾಗಿರಬಹುದು. ಆದರೆ ಸಾಮಾನ್ಯವಾಗಿ ವಾಕ್ ಶಕ್ತಿಯ ಅಂಗಗಳನ್ನು ಸರಿಯಾಗಿ ಉಪಯೋಗಿಸಲು ಕಲಿಯುವುದರಿಂದ ಇದರಲ್ಲಿ ಅಭಿವೃದ್ಧಿಯನ್ನು ಮಾಡಸಾಧ್ಯವಿದೆ.
ಪ್ರಥಮವಾಗಿ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸ್ವರದ ವೈಶಿಷ್ಟ್ಯಗಳಲ್ಲಿ ಭಿನ್ನತೆಯಿರುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದು ಪ್ರಾಮುಖ್ಯವಾದದ್ದಾಗಿದೆ. ಬೇರೊಬ್ಬ ವ್ಯಕ್ತಿಯನ್ನು ಅನುಕರಿಸುವಂಥ ಸ್ವರವನ್ನು ಬೆಳೆಸಿಕೊಳ್ಳುವುದು ನಿಮ್ಮ ಗುರಿಯಾಗಿರಬಾರದು. ಅದಕ್ಕೆ ಬದಲಾಗಿ, ವಿಶಿಷ್ಟ ಗುಣಗಳಿಂದ ಕೂಡಿರುವ ನಿಮ್ಮ ಸ್ವಂತ ಸ್ವರಕ್ಕಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ. ಇದಕ್ಕೆ ಯಾವುದು ಸಹಾಯಮಾಡಬಲ್ಲದು? ಇದಕ್ಕೆ ಎರಡು ಮುಖ್ಯ ಆವಶ್ಯಕತೆಗಳಿವೆ.
ನಿಮ್ಮ ಉಸಿರಾಟವನ್ನು ಸರಿಯಾಗಿ ನಿಯಂತ್ರಿಸಿರಿ. ನಿಮ್ಮ ಸ್ವರವನ್ನು ಉಪಯೋಗಿಸುವುದರಲ್ಲಿ ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆದುಕೊಳ್ಳಲಿಕ್ಕಾಗಿ, ನಿಮಗೆ ಸಾಕಷ್ಟು ಗಾಳಿಯೂ ಸರಿಯಾದ ಉಸಿರು ನಿಯಂತ್ರಣವೂ ಅಗತ್ಯ. ಇವುಗಳಿಲ್ಲದಿರುವಲ್ಲಿ ನಿಮ್ಮ ಸ್ವರವು ಶಕ್ತಿಹೀನವೂ ನಿಮ್ಮ ಮಾತು ತುಂಡುತುಂಡಾದದ್ದೂ ಆಗಿ ಕೇಳಿಬರುವುದು.
ಶ್ವಾಸಕೋಶಗಳ ಅತಿ ವಿಶಾಲವಾದ ಭಾಗವು ಎದೆಯ ಮೇಲ್ಭಾಗದಲ್ಲಿಲ್ಲ; ಭುಜದ ಎಲುಬುಗಳ ಕಾರಣದಿಂದ ಈ ಭಾಗವು ತುಂಬ ದೊಡ್ಡದಾಗಿ ಕಾಣಿಸುತ್ತದೆ ಅಷ್ಟೆ. ಆದರೆ ಶ್ವಾಸಕೋಶಗಳು ಅತಿ ವಿಶಾಲವಾಗಿರುವುದು ವಪೆಯ ತುಸು ಮೇಲ್ಭಾಗದಲ್ಲಿಯೇ. ಕೆಳ ಪಕ್ಕೆಲುಬುಗಳಿಗೆ ಜೋಡಿಸಲ್ಪಟ್ಟಿರುವ ಈ ವಪೆಯು, ಎದೆಯನ್ನು ಹೊಟ್ಟೆಯ ಕುಹರದಿಂದ ಪ್ರತ್ಯೇಕಿಸುತ್ತದೆ.
ನೀವು ಉಸಿರನ್ನು ಒಳಗೆ ಎಳೆದುಕೊಳ್ಳುವಾಗ ನಿಮ್ಮ ಶ್ವಾಸಕೋಶಗಳ ಮೇಲ್ಭಾಗವನ್ನು ಮಾತ್ರ ತುಂಬಿಸುವಲ್ಲಿ, ನಿಮಗೆ ಬೇಗನೆ ಉಸಿರುಕಟ್ಟಿದ ಅನುಭವವಾಗುವುದು. ಆಗ ನಿಮ್ಮ ಸ್ವರವು ಶಕ್ತಿಹೀನವಾಗಿ, ನಿಮಗೆ ಬೇಗನೆ ಆಯಾಸವಾಗುವುದು. ಸರಿಯಾಗಿ ಉಸಿರಾಡಲಿಕ್ಕಾಗಿ, ನೀವು ನೆಟ್ಟಗೆ ಕುಳಿತುಕೊಳ್ಳಬೇಕು ಅಥವಾ ನಿಂತುಕೊಳ್ಳಬೇಕು ಮತ್ತು ನಿಮ್ಮ ಭುಜಗಳನ್ನು ಹಿಂದಕ್ಕೆ ತಳ್ಳಬೇಕು. ಮಾತಾಡಲಿಕ್ಕಾಗಿ ನೀವು ಉಸಿರನ್ನು ಒಳಗೆಳೆದುಕೊಳ್ಳುವಾಗ, ನಿಮ್ಮ ಎದೆಯ ಮೇಲ್ಭಾಗವನ್ನು ಮಾತ್ರ ಉಬ್ಬಿಸದಿರಲು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಮಾಡಿರಿ. ಮೊದಲಾಗಿ ನಿಮ್ಮ ಶ್ವಾಸಕೋಶಗಳ ಕೆಳಭಾಗವನ್ನು ತುಂಬಿಸಿರಿ. ಈ ಭಾಗವು ತುಂಬಿದಾಗ, ನಿಮ್ಮ ಪಕ್ಕೆಗೂಡಿನ ಕೆಳಭಾಗವು ಪಕ್ಕಾಭಿಮುಖವಾಗಿ ವಿಸ್ತರಿಸುತ್ತದೆ. ಅದೇ ಸಮಯದಲ್ಲಿ ವಪೆಯು ಕೆಳಚಲಿಸಿ, ಹೊಟ್ಟೆಯನ್ನೂ ಕರುಳುಗಳನ್ನೂ ಅವುಗಳ ಸ್ಥಳದಿಂದ ಮೃದುವಾಗಿ ದೂಡುತ್ತದೆ. ಆಗ ನಿಮ್ಮ ಹೊಟ್ಟೆಯ ಮೇಲಿರುವ ಬೆಲ್ಟ್ ಇಲ್ಲವೆ ಬೇರೆ ಬಟ್ಟೆಗಳ ಒತ್ತಡದ ಅನಿಸಿಕೆ ನಿಮಗಾಗುವುದು. ಆದರೆ ಶ್ವಾಸಕೋಶಗಳು ಹೊಟ್ಟೆಯಷ್ಟು ಕೆಳಗೆ ಇರುವುದಿಲ್ಲ; ಅವು ಪಕ್ಕೆಗೂಡಿನ ಒಳಗಿವೆ. ಇದನ್ನು ನೀವೇ ಪರೀಕ್ಷಿಸಿ ನೋಡಲಿಕ್ಕಾಗಿ, ನಿಮ್ಮ ಪಕ್ಕೆಗೂಡಿನ ಪ್ರತಿಯೊಂದು ಪಕ್ಕದ ಕೆಳಭಾಗದಲ್ಲಿ ಒಂದೊಂದು ಕೈಯನ್ನು ಇಡಿರಿ. ಈಗ ಆಳವಾಗಿ ಉಸಿರಾಡಿ. ನೀವು ಸರಿಯಾಗಿ ಉಸಿರಾಡುತ್ತಿರುವುದಾದರೆ, ನೀವು ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ನಿಮ್ಮ ಭುಜಗಳನ್ನು ಮೇಲೆತ್ತುವುದಿಲ್ಲ. ಬದಲಿಗೆ, ನಿಮ್ಮ ಪಕ್ಕೆಲುಬುಗಳು ತುಸು ಮೇಲೆ ಮತ್ತು ಹೊರಾಭಿಮುಖವಾಗಿ ಚಲಿಸುವ ಅನಿಸಿಕೆ ನಿಮಗಾಗುವುದು.
ತದನಂತರ, ಗಾಳಿಯ ಹೊರಹರಿತದ ವಿಷಯದಲ್ಲಿ ಕಾರ್ಯನಡಿಸಿರಿ. ಗಾಳಿಯ ಸರಬರಾಯಿಯು ರಭಸದಿಂದ ಹೊರಗೆ ಹೋಗುವಂತೆ ಬಿಡುವ ಮೂಲಕ ಅದನ್ನು ಹಾಳುಮಾಡಬೇಡಿ. ಅದನ್ನು ಕ್ರಮೇಣ ಹೊರಬಿಡಿರಿ. ನಿಮ್ಮ ಗಂಟಲನ್ನು ಬಿಗಿಯಾಗಿಸುವ ಮೂಲಕ ಅದನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ. ಹಾಗೆ ಮಾಡುವಲ್ಲಿ ಬೇಗನೆ ನಿಮ್ಮ ಸ್ವರವು ದಣಿದದ್ದಾಗಿ ಅಥವಾ ವಿಪರೀತ ಉಚ್ಚ ಸ್ವರದ್ದಾಗಿ ಪರಿಣಮಿಸುವುದು. ಹೊಟ್ಟೆಯ ಸ್ನಾಯುಗಳಿಂದ ಮತ್ತು (ಪಕ್ಕೆಲುಬುಗಳ ಮಧ್ಯದಲ್ಲಿರುವ) ಇಂಟರ್‌ಕಾಸ್ಟಲ್ ಸ್ನಾಯುಗಳಿಂದ ಬರುವ ಒತ್ತಡವು ಗಾಳಿಯನ್ನು ಹೊರದೂಡುತ್ತದೆ. ಮತ್ತು ವಪೆಯು ಅದು ಎಷ್ಟು ಬೇಗನೆ ಹೊರದೂಡುತ್ತೆಂಬುದನ್ನು ಪ್ರಭಾವಿಸುತ್ತದೆ.
ಒಬ್ಬ ಓಟಗಾರನು ಓಟಕ್ಕಾಗಿ ತನ್ನನ್ನೇ ತರಬೇತುಗೊಳಿಸಿಕೊಳ್ಳುವಂತೆಯೇ, ಒಬ್ಬ ಭಾಷಣಕಾರನು ಕೂಡ ಸರಿಯಾದ ಉಸಿರು ನಿಯಂತ್ರಣವನ್ನು ವ್ಯಾಯಾಮದ ಮೂಲಕ ಬೆಳೆಸಿಕೊಳ್ಳಸಾಧ್ಯವಿದೆ. ಭುಜಗಳನ್ನು ಹಿಂದಕ್ಕೆ ಸರಿಸಿ ನೆಟ್ಟಗೆ ನಿಲ್ಲುತ್ತಾ, ಶ್ವಾಸಕೋಶಗಳ ಕೆಳಭಾಗವನ್ನು ತುಂಬಿಸಲಿಕ್ಕಾಗಿ ಗಾಳಿಯನ್ನು ಒಳಗೆಳೆದುಕೊಳ್ಳಿ, ಮತ್ತು ಕ್ರಮೇಣ ಉಸಿರನ್ನು ಹೊರಬಿಡುವಾಗ ಒಂದು ಉಸಿರಿನಲ್ಲಿ ಎಷ್ಟು ಹೆಚ್ಚು ಸಂಖ್ಯೆಗಳನ್ನು ಎಣಿಸಲು ಸಾಧ್ಯವಾಗುತ್ತದೊ ಅಷ್ಟನ್ನು ನಿಧಾನವಾಗಿಯೂ ಸರಾಗವಾಗಿಯೂ ಎಣಿಸಿರಿ. ಬಳಿಕ ಅದೇ ರೀತಿ ಉಸಿರಾಡುವಾಗ ಗಟ್ಟಿಯಾಗಿ ಓದುವುದನ್ನು ಅಭ್ಯಾಸಮಾಡಿಕೊಳ್ಳಿರಿ.
ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲಿಸುವುದು. ಉತ್ತಮ ಸ್ವರದ ಗುಣಮಟ್ಟಕ್ಕೆ ಆವಶ್ಯಕವಾಗಿರುವ ಇನ್ನೊಂದು ಅಂಶವು ಆರಾಮವಾಗಿರುವುದೇ ಆಗಿದೆ! ಮಾತನಾಡುವಾಗ ಆರಾಮವಾಗಿರಲು ಕಲಿಯುವುದರಿಂದ ನೀವು ಮಾಡಸಾಧ್ಯವಿರುವ ಪ್ರಗತಿಯು ನಿಜವಾಗಿಯೂ ಬೆರಗುಗೊಳಿಸುವಷ್ಟು ಹೆಚ್ಚಾಗಿರುವುದು. ಮಾನಸಿಕ ಬಿಗುಪು ಸ್ನಾಯುಗಳ ಬಿಗುಪಿಗೆ ಕಾರಣವಾಗಿರುವುದರಿಂದ, ಮನಸ್ಸೂ ಶರೀರವೂ ಆರಾಮವಾಗಿರಬೇಕು.
ನಿಮ್ಮ ಕೇಳುಗರ ವಿಷಯದಲ್ಲಿ ಸರಿಯಾದ ಮನೋಭಾವವನ್ನು ಪಡೆದುಕೊಳ್ಳುವ ಮೂಲಕ, ಮಾನಸಿಕ ಬಿಗುಪನ್ನು ಸಡಿಲಿಸಿರಿ. ನಿಮ್ಮ ಕೇಳುಗರು ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಸಂಧಿಸುವಂಥ ಜನರಾಗಿರುವಲ್ಲಿ, ಈ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ: ನೀವು ಕೆಲವೇ ತಿಂಗಳುಗಳಿಂದ ಬೈಬಲ್ ಅಧ್ಯಯನ ಮಾಡಿರುವುದಾದರೂ, ಯೆಹೋವನ ಉದ್ದೇಶದ ಕುರಿತು ನೀವು ಅವರೊಂದಿಗೆ ಹಂಚಿಕೊಳ್ಳಸಾಧ್ಯವಿರುವ ಬೆಲೆಬಾಳುವ ವಿಷಯಗಳು ನಿಮಗೆ ತಿಳಿದಿವೆ. ಮತ್ತು ಅವರು ಈ ಸಂಗತಿಯನ್ನು ಗ್ರಹಿಸಲಿ, ಗ್ರಹಿಸದಿರಲಿ, ನೀವು ಅವರನ್ನು ಭೇಟಿಮಾಡುತ್ತಿರುವುದು ಅವರಿಗೆ ಸಹಾಯದ ಅಗತ್ಯವಿರುವುದರಿಂದಲೇ. ಇನ್ನೊಂದು ಕಡೆಯಲ್ಲಿ, ನೀವು ರಾಜ್ಯ ಸಭಾಗೃಹದಲ್ಲಿ ಭಾಷಣವನ್ನು ಕೊಡುತ್ತಿರುವುದಾದರೆ, ನಿಮ್ಮ ಸಭಿಕರಲ್ಲಿ ಹೆಚ್ಚಿನವರು ಯೆಹೋವನ ಸಾಕ್ಷಿಗಳಾಗಿರುತ್ತಾರೆ. ಅವರು ನಿಮ್ಮ ಸ್ನೇಹಿತರಾಗಿದ್ದಾರೆ ಮತ್ತು ನೀವು ಉತ್ತಮ ಭಾಷಣಕಾರರಾಗುವುದರಲ್ಲಿ ಸಫಲರಾಗಬೇಕೆಂಬುದು ಅವರ ಅಪೇಕ್ಷೆಯಾಗಿರುತ್ತದೆ. ಜಗತ್ತಿನ ಬೇರೆ ಯಾವ ಭಾಷಣಕಾರನಿಗೂ, ನಮಗೆ ಕ್ರಮವಾಗಿ ಸಿಗುವಂತೆ, ಇಷ್ಟು ಮಿತ್ರಭಾವದ ಮತ್ತು ಪ್ರೀತಿಯ ಸಭಿಕರ ಮುಂದೆ ಮಾತಾಡುವ ಅವಕಾಶ ಸಿಗುವುದಿಲ್ಲ ಎಂಬುದಂತೂ ಖಂಡಿತ.
ನಿಮ್ಮ ಗಂಟಲಿನ ಸ್ನಾಯುಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತಾ, ಆ ಸ್ನಾಯುಗಳನ್ನು ಆರಾಮವಾಗಿರುವಂತೆ ಮತ್ತು ಪ್ರಜ್ಞಾಪೂರ್ವಕವಾಗಿ ಅವು ಕಡಿಮೆ ಬಿಗಿಯಾಗಿರುವಂತೆ ಮಾಡಿರಿ. ನಿಮ್ಮ ಧ್ವನಿತಂತುಗಳ ಮೂಲಕ ಗಾಳಿಯು ಹಾದುಹೋಗುವಾಗ ಅವು ಕಂಪಿಸುತ್ತವೆಂಬುದನ್ನು ನೆನಪಿನಲ್ಲಿಡಿರಿ. ಗಿಟಾರ್ ಇಲ್ಲವೆ ಪಿಟೀಲಿನ ತಂತಿಯನ್ನು ಬಿಗಿ ಮಾಡುವಾಗ ಇಲ್ಲವೆ ಸಡಿಲಿಸುವಾಗ ನಾದದಲ್ಲಿ ಬದಲಾವಣೆಯಾಗುವಂತೆಯೇ, ಗಂಟಲಿನ ಸ್ನಾಯುಗಳು ಬಿಗಿಯಾಗುವಾಗ ಇಲ್ಲವೆ ಸಡಿಲವಾಗುವಾಗ ಸ್ವರದ ನಾದವು ಬದಲಾವಣೆಗೊಳ್ಳುತ್ತದೆ. ನಿಮ್ಮ ಧ್ವನಿತಂತುಗಳು ಸಡಿಲವಾಗುವಾಗ ನಾದವು ತಗ್ಗುತ್ತದೆ. ಗಂಟಲಿನ ಸ್ನಾಯುಗಳನ್ನು ಸಡಿಲಿಸುವುದು, ಮೂಗಿನ ನಾಳಗಳನ್ನು ತೆರೆದಿಡಲು ಸಹ ಸಹಾಯಮಾಡುತ್ತದೆ ಮತ್ತು ಇದು ನಿಮ್ಮ ಸ್ವರದ ಗುಣಮಟ್ಟದ ಮೇಲೆ ನಿಶ್ಚಿತ ಪರಿಣಾಮವನ್ನು ಬೀರುವುದು.
ನಿಮ್ಮ ಇಡೀ ದೇಹವನ್ನು ಅಂದರೆ ಮೊಣಕಾಲುಗಳು, ಕೈಗಳು, ಭುಜಗಳು, ಕುತ್ತಿಗೆಯನ್ನು ಸಡಿಲಿಸಿರಿ. ಇದು ನಿಮ್ಮ ಸ್ವರವಾಹಕ ಸಾಮರ್ಥ್ಯಕ್ಕೆ ಬೇಕಾಗುವ ಅನುರಣನಕ್ಕೆ ನೆರವಾಗುವುದು. ಇಡೀ ದೇಹವು ಧ್ವನಿವರ್ಧಕ ಫಲಕವಾಗಿ ವರ್ತಿಸುವಾಗ ಅನುರಣನ ಉಂಟಾಗುತ್ತದಾದರೂ, ಬಿಗುಪು ಅದನ್ನು ತಡೆಯುತ್ತದೆ. ಕಂಠಕುಹರದಲ್ಲಿ ಉಂಟಾಗುವ ಸ್ವರದ ನಾದವು, ಮೂಗಿನ ಕುಳಿಗಳಲ್ಲಿ ಮಾತ್ರವಲ್ಲ ಎದೆಯ ಎಲುಬಿನ ರಚನೆಗೆ, ಹಲ್ಲುಗಳಿಗೆ, ಬಾಯಿಯ ಅಂಗುಳಿಗೆ ಮತ್ತು ನಾಳಗುಳಿಗಳಿಗೆ ಬಡಿಯುವಾಗ ಸಹ ಪ್ರತಿಧ್ವನಿಸುತ್ತದೆ. ಇವೆಲ್ಲ ಅನುರಣನದ ಗುಣಮಟ್ಟಕ್ಕೆ ನೆರವಾಗಬಲ್ಲವು. ಗಿಟಾರ್‌ನ ಧ್ವನಿವರ್ಧಕ ಫಲಕದ ಮೇಲೆ ನೀವು ಒಂದು ಭಾರವಾದ ವಸ್ತುವನ್ನು ಇಡುವುದಾದರೆ ಧ್ವನಿಯು ಮಂದವಾಗುತ್ತದೆ. ಏಕೆಂದರೆ, ಧ್ವನಿವರ್ಧಕ ಫಲಕವು ಸರಿಯಾಗಿ ಅನುರಣಿಸಬೇಕಾದರೆ ಅದು ಕಂಪಿಸಲು ಸ್ವತಂತ್ರವಾಗಿರಬೇಕು. ಸ್ನಾಯುಗಳಿಂದ ಬಿಗಿಯಾಗಿ ಹಿಡಿಯಲ್ಪಟ್ಟಿರುವ ನಮ್ಮ ಶರೀರದ ಎಲುಬಿನ ರಚನೆಗಳ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಅನುರಣನವಿರುವಲ್ಲಿ ನೀವು ನಿಮ್ಮ ಸ್ವರವನ್ನು ಸರಿಯಾಗಿ ಏರಿಳಿಸಲು ಮತ್ತು ಭಾವಪೂರ್ಣತೆಯ ಸೂಕ್ಷ್ಮ ಛಾಯೆಗಳನ್ನು ವ್ಯಕ್ತಪಡಿಸಲು ಶಕ್ತರಾಗುವಿರಿ. ಗಟ್ಟಿಯಾದ ಧ್ವನಿಯಿಂದ ಕಿರಿಚದೇ ನೀವು ನಿಮ್ಮ ಸ್ವರವನ್ನು ದೊಡ್ಡ ಸಭೆಗಳಿಗೆ ಮುಟ್ಟಿಸಶಕ್ತರಾಗುವಿರಿ.