ಅಧ್ಯಾಯ 33
ಸಮಯೋಚಿತ ಜಾಣ್ಮೆ ಮತ್ತು ದೃಢತೆ
ಸಮಯೋಚಿತ ಜಾಣ್ಮೆಯು, ಅನಾವಶ್ಯಕವಾಗಿ ಜನರ ಮನನೋಯಿಸದೆ ಅವರೊಂದಿಗೆ ವ್ಯವಹರಿಸುವ ಸಾಮರ್ಥ್ಯವಾಗಿದೆ. ಇದರಲ್ಲಿ, ಹೇಗೆ ಮತ್ತು ಯಾವಾಗ ಮಾತಾಡಬೇಕು ಎಂಬುದನ್ನು ತಿಳಿದಿರುವುದು ಸೇರಿದೆ. ಯಾವುದು ಸರಿಯೊ ಆ ವಿಷಯದಲ್ಲಿ ರಾಜಿಮಾಡಿಕೊಳ್ಳಬೇಕೆಂದಾಗಲಿ, ನಿಜತ್ವಗಳಿಗೆ ತಪ್ಪರ್ಥ ಕಲ್ಪಿಸಬೇಕೆಂದಾಗಲಿ ಇದು ಸೂಚಿಸುವುದಿಲ್ಲ. ಈ ಸಮಯೋಚಿತ ಜಾಣ್ಮೆಯನ್ನು ಮನುಷ್ಯನ ಭಯವೆಂದು ಅರ್ಥೈಸಿಕೊಳ್ಳಬಾರದು.—ಜ್ಞಾನೋ. 29:25.
ಸಮಯೋಚಿತ ಜಾಣ್ಮೆಯನ್ನು ತೋರಿಸುವುದಕ್ಕೆ ಆತ್ಮದ ಫಲವು ಅತ್ಯುತ್ತಮ ಅಸ್ತಿವಾರವನ್ನು ಒದಗಿಸುತ್ತದೆ. ಅಂದರೆ, ಪ್ರೀತಿಯಿಂದ ಪ್ರಚೋದಿತನಾಗಿರುವ ಒಬ್ಬ ವ್ಯಕ್ತಿಯು ಇತರರಿಗೆ ಉಪದ್ರವ ನೀಡಲು ಬಯಸುವುದಿಲ್ಲ; ಅವನು ಅವರಿಗೆ ಸಹಾಯ ನೀಡಲು ಬಯಸುತ್ತಾನೆ. ದಯಾಪರನೂ ಸೌಮ್ಯ ಸ್ವಭಾವದವನೂ ಆಗಿರುವಂಥ ಒಬ್ಬ ವ್ಯಕ್ತಿಯು, ವಿಷಯಗಳನ್ನು ನಿರ್ವಹಿಸುವ ರೀತಿಯಲ್ಲಿ ಮೃದುವಾಗಿರುತ್ತಾನೆ. ಒಬ್ಬ ಶಾಂತಿಪ್ರಿಯ ವ್ಯಕ್ತಿಯು ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನು ಉತ್ತೇಜಿಸುವಂಥ ಮಾರ್ಗಗಳಿಗಾಗಿ ಹುಡುಕುತ್ತಾನೆ. ಜನರು ಕಠೋರವಾಗಿ ವರ್ತಿಸುವಾಗಲೂ, ದೀರ್ಘಶಾಂತನಾಗಿರುವ ವ್ಯಕ್ತಿಯೊಬ್ಬನು ಶಾಂತವಾಗಿಯೇ ಇರುತ್ತಾನೆ.—ಗಲಾ. 5:22, 23.
ಆದರೆ ಬೈಬಲಿನ ಸಂದೇಶವನ್ನು ಯಾವ ವಿಧದಲ್ಲೇ ನೀಡಲಿ, ಅದರ ಬಗ್ಗೆ ಅಸಮಾಧಾನಪಡುವ ಕೆಲವರು ಇದ್ದೇ ಇರುತ್ತಾರೆ. ಒಂದನೆಯ ಶತಮಾನದ ಯೆಹೂದ್ಯರಲ್ಲಿ ಹೆಚ್ಚಿನವರ ಹೃದಯದ ದುಸ್ಥಿತಿಯ ಕಾರಣ, ಯೇಸು ಕ್ರಿಸ್ತನು ಅವರಿಗೆ “ಎಡವುವ ಕಲ್ಲು [ಮತ್ತು] ಮುಗ್ಗರಿಸುವ ಬಂಡೆ”ಯಾಗಿ ಪರಿಣಮಿಸಿದನು. (1 ಪೇತ್ರ 2:7, 8) ತನ್ನ ರಾಜ್ಯ ಸಾರುವಿಕೆಯ ಕೆಲಸದ ಕುರಿತಾಗಿ ಯೇಸು, “ನಾನು ಬೆಂಕಿಯನ್ನು ಭೂಮಿಯ ಮೇಲೆ ಹಾಕಬೇಕೆಂದು ಬಂದೆನು” ಎಂದು ಹೇಳಿದನು. (ಲೂಕ 12:49) ಮತ್ತು ಯಾವುದು ಮಾನವರು ತಮ್ಮ ಸೃಷ್ಟಿಕರ್ತನ ಪರಮಾಧಿಕಾರವನ್ನು ಒಪ್ಪಿಕೊಳ್ಳುವ ಅಗತ್ಯವನ್ನು ಒಳಗೂಡಿದೆಯೋ ಆ ಯೆಹೋವನ ರಾಜ್ಯದ ಸಂದೇಶವು, ಮಾನವಕುಲವನ್ನು ಎದುರಿಸುವ ಜ್ವಲಂತ ವಿವಾದಾಂಶವಾಗಿದೆ. ದೇವರ ರಾಜ್ಯವು ಈಗಿನ ದುಷ್ಟ ವಿಷಯಗಳ ವ್ಯವಸ್ಥೆಯನ್ನು ತೊಲಗಿಸಲಿಕ್ಕಿದೆ ಎಂಬ ಸಂದೇಶವನ್ನು ಕೇಳಿ ಅನೇಕರು ಕೋಪಗೊಳ್ಳುತ್ತಾರೆ. ಆದರೂ ನಾವು ದೇವರಿಗೆ ವಿಧೇಯತೆ ತೋರಿಸುತ್ತಾ, ಸಾರುವುದನ್ನು ಮುಂದುವರಿಸುತ್ತಾ ಹೋಗುತ್ತೇವೆ. ಆದರೆ ಹಾಗೆ ಮಾಡುತ್ತಿರುವಾಗ, “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ” ಎಂಬ ಬೈಬಲಿನ ಬುದ್ಧಿವಾದವನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ.—ರೋಮಾ. 12:18.
ಸಾಕ್ಷಿ ನೀಡುತ್ತಿರುವಾಗ ಸಮಯೋಚಿತ ಜಾಣ್ಮೆ. ಅನೇಕ ಪರಿಸ್ಥಿತಿಗಳ ಕೆಳಗೆ ನಾವು ನಮ್ಮ ನಂಬಿಕೆಯ ಕುರಿತು ಬೇರೆಯವರೊಂದಿಗೆ ಮಾತಾಡುತ್ತೇವೆ. ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಹಾಗೆ ಮಾಡುತ್ತೇವೆಂಬುದು ನಿಜವಾದರೂ, ನಮ್ಮ ಸಂಬಂಧಿಕರೊಂದಿಗೆ, ಜೊತೆಕಾರ್ಮಿಕರೊಂದಿಗೆ ಮತ್ತು ಸಹಪಾಠಿಗಳೊಂದಿಗೆ ಇರುವಾಗಲೂ ಸಾಕ್ಷಿ ನೀಡಲು ತಕ್ಕದಾದ ಸಂದರ್ಭಗಳಿಗಾಗಿ ಹುಡುಕುತ್ತಿರುತ್ತೇವೆ. ಈ ಎಲ್ಲ ಸನ್ನಿವೇಶಗಳಲ್ಲಿಯೂ ಸಮಯೋಚಿತ ಜಾಣ್ಮೆಯ ಅಗತ್ಯವಿದೆ.
ನಾವು ರಾಜ್ಯ ಸಂದೇಶವನ್ನು ಪ್ರಸ್ತುತಪಡಿಸುವ ರೀತಿಯು, ನಾವು ಅವರಿಗೆ ಭಾಷಣ ಬಿಗಿಯುತ್ತಿದ್ದೇವೆಂಬ ಅನಿಸಿಕೆಯನ್ನು ಇತರರಲ್ಲಿ ಉಂಟುಮಾಡುವಲ್ಲಿ, ಅವರು ಅದನ್ನು ಕೇಳಿ ಸಿಟ್ಟುಗೊಳ್ಳಬಹುದು. ಅವರು ಯಾವುದೇ ಸಹಾಯವನ್ನು ಕೇಳಿರದಿರುವಾಗ ಮತ್ತು ಅದರ ಅಗತ್ಯವಿದೆ ಎಂಬುದನ್ನು ಅವರು ಮನಗಾಣದಿರುವಾಗ, ಅವರನ್ನು ಸರಿಪಡಿಸುವ ಅಗತ್ಯವಿದೆ ಎಂಬ ಸೂಚನೆಯನ್ನು ಕೊಡುವ ಯಾವುದೇ ವಿಷಯವು ಅವರನ್ನು ಸಿಟ್ಟಿಗೆಬ್ಬಿಸಬಹುದು. ಹಾಗಾದರೆ, ಅಂತಹ ತಪ್ಪಭಿಪ್ರಾಯವನ್ನು ಕೊಡದಿರಲಿಕ್ಕಾಗಿ ನಾವು ಏನು ಮಾಡಬಲ್ಲೆವು? ಸ್ನೇಹಭಾವದ ಸಂಭಾಷಣಾ ಕಲೆಯನ್ನು ಕಲಿಯುವುದು ಸಹಾಯಕರವಾಗಿರಬಲ್ಲದು.
ನೀವು ಭೇಟಿಮಾಡುವ ವ್ಯಕ್ತಿಗೆ ಆಸಕ್ತಿದಾಯಕವಾಗಿರುವಂಥ ಒಂದು ವಿಷಯದ ಕುರಿತು ಪ್ರಸ್ತಾಪಿಸುವ ಮೂಲಕ ಸಂಭಾಷಣೆಯನ್ನು ಆರಂಭಿಸಲು ಪ್ರಯತ್ನಿಸಿರಿ. ಆ ವ್ಯಕ್ತಿಯು ನಿಮ್ಮ ಒಬ್ಬ ಸಂಬಂಧಿಕನೊ, ಸಹಕರ್ಮಿಯೊ, ಸಹಪಾಠಿಯೊ ಆಗಿರುವಲ್ಲಿ, ಅವನಿಗೆ ಯಾವುದು ಆಸಕ್ತಿದಾಯಕ ಸಂಗತಿಯಾಗಿದೆ ಎಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಅಥವಾ ನೀವು ಆ ವ್ಯಕ್ತಿಯನ್ನು ಈ ಹಿಂದೆ ಎಂದೂ ಸಂಧಿಸಿರದಿದ್ದರೂ, ವಾರ್ತೆಗಳಲ್ಲಿ ಕೇಳಿಸಿಕೊಂಡಿರುವ ಅಥವಾ ವಾರ್ತಾಪತ್ರಿಕೆಯಲ್ಲಿ ಓದಿರುವ ಒಂದು ವಿಷಯವನ್ನು ನೀವು ಪ್ರಸ್ತಾಪಿಸಬಹುದು. ಇಂತಹ ವಿಷಯಗಳು ಸಾಮಾನ್ಯವಾಗಿ ಅನೇಕ ಜನರ ಮನಸ್ಸುಗಳಲ್ಲಿ ಏನಿದೆಯೆಂಬುದನ್ನು ವ್ಯಕ್ತಪಡಿಸುತ್ತವೆ. ನೀವು ಮನೆಯಿಂದ ಮನೆಯ ಸೇವೆಯಲ್ಲಿ ತೊಡಗಿರುವಾಗ, ವಿಷಯಗಳನ್ನು ಗಮನಿಸುವವರಾಗಿರಿ. ಗೃಹಾಲಂಕಾರಗಳು, ಮನೆಯ ಮುಂದಿರುವ ಆಟದ ಸಾಮಾನುಗಳು, ಧಾರ್ಮಿಕ ವಸ್ತುಗಳು, ಮನೆಯ ಮುಂದೆ ನಿಲ್ಲಿಸಿರುವ ಕಾರಿನ ಬಂಪರಿಗೆ ಅಂಟಿಸಿರುವ ಸ್ಟಿಕ್ಕರ್‌ಗಳು—ಇವೆಲ್ಲ ಮನೆಯವನಿಗಿರುವ ಅಭಿರುಚಿಗಳ ಕುರಿತು ಇನ್ನೂ ಹೆಚ್ಚಿನ ಸೂಚನೆಗಳನ್ನು ನೀಡಬಹುದು. ಮನೆಯವನು ಬಾಗಿಲ ಬಳಿ ಬಂದು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವಾಗ ಕಿವಿಗೊಟ್ಟು ಕೇಳಿರಿ. ಅವನು ಏನು ಹೇಳುತ್ತಾನೊ ಅದು, ಅವನ ಅಭಿರುಚಿಗಳು ಮತ್ತು ದೃಷ್ಟಿಕೋನದ ವಿಷಯದಲ್ಲಿ ನೀವು ಮಾಡಿರುವ ತೀರ್ಮಾನಗಳನ್ನು ಒಂದೇ ದೃಢೀಕರಿಸಿ ಇಲ್ಲವೆ ತಿದ್ದಿ, ಅವನಿಗೆ ಸಾಕ್ಷಿ ನೀಡಲಿಕ್ಕಾಗಿ ನೀವು ಇನ್ನೇನನ್ನು ಪರಿಗಣಿಸುವ ಅಗತ್ಯವಿದೆ ಎಂಬ ವಿಷಯದಲ್ಲಿ ಇನ್ನೂ ಹೆಚ್ಚಿನ ಸೂಚನೆಗಳನ್ನು ಕೊಡುವುದು.
ಸಂಭಾಷಣೆ ಮುಂದುವರಿಯುವಾಗ, ಆ ವಿಷಯದ ಬಗ್ಗೆ ಪ್ರಸ್ತಾಪಿಸುವ ಅಂಶಗಳನ್ನು ಬೈಬಲಿನಿಂದ ಮತ್ತು ಬೈಬಲಾಧಾರಿತ ಸಾಹಿತ್ಯಗಳಿಂದ ಅವನೊಂದಿಗೆ ಹಂಚಿಕೊಳ್ಳಿರಿ. ಆದರೆ ಸಂಭಾಷಣೆಯಲ್ಲಿ ಮೇಲುಗೈಯನ್ನು ತೋರಿಸಬೇಡಿ. (ಪ್ರಸಂ. 3:7) ಮನೆಯವನು ಚರ್ಚೆಯಲ್ಲಿ ಭಾಗವಹಿಸಲು ಇಚ್ಛಿಸುವಲ್ಲಿ, ಅವನನ್ನು ಒಳಗೂಡಿಸಿರಿ. ಅವನ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳಲ್ಲಿ ಆಸಕ್ತಿ ತೋರಿಸಿರಿ. ನೀವು ಸಮಯೋಚಿತ ಜಾಣ್ಮೆಯನ್ನು ತೋರಿಸಲು ಬೇಕಾಗಿರುವ ಸುಳಿವುಗಳನ್ನು ಇವು ಒದಗಿಸಬಹುದು.
ನೀವು ಏನನ್ನಾದರೂ ಹೇಳುವ ಮೊದಲು, ಆ ವ್ಯಕ್ತಿಯು ಅದನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ಪರಿಗಣಿಸಿರಿ. ಜ್ಞಾನೋಕ್ತಿ 16:23, ‘ಬಾಯಿಯ ಜಾಣತನವನ್ನು’ ಪ್ರಶಂಸಿಸುತ್ತದೆ. ಇಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಅಭಿವ್ಯಕ್ತಿಯು, ಒಳನೋಟ ಮತ್ತು ವ್ಯವಹಾರ ಪರಿಜ್ಞಾನಗಳಂತಹ ವಿಚಾರಗಳಿಗೆ ಸಂಬಂಧಿಸಿದ್ದಾಗಿದೆ. ಹೀಗೆ ವಿವೇಚನೆಯಲ್ಲಿ, ವಿವೇಕದಿಂದ ವರ್ತಿಸಲಿಕ್ಕಾಗಿ ಒಂದು ವಿಷಯವನ್ನು ಪೂರ್ಣವಾಗಿ ಪರಿಗಣಿಸಿ, ಮಾತುಕತೆಯಲ್ಲಿ ಮುಂಜಾಗ್ರತೆಯನ್ನು ತೋರಿಸುವುದು ಒಳಗೂಡಿದೆ. ಜ್ಞಾನೋಕ್ತಿಯ ಅದೇ ಅಧ್ಯಾಯದ 18ನೆಯ ವಚನವು, “ಕತ್ತಿತಿವಿದ ಹಾಗೆ ದುಡುಕಿ ಮಾತಾಡು”ವುದರ ವಿರುದ್ಧ ನಮ್ಮನ್ನು ಎಚ್ಚರಿಸುತ್ತದೆ. ಇತರರ ಮನನೋಯಿಸದೇ ಬೈಬಲ್ ಸತ್ಯವನ್ನು ಖಂಡಿತವಾಗಿಯೂ ಸಮರ್ಥಿಸಸಾಧ್ಯವಿದೆ.
ನಿಮ್ಮ ಪದಗಳ ಆಯ್ಕೆಯಲ್ಲಿ ವಿವೇಚನೆಯನ್ನು ತೋರಿಸುವುದೇ, ಅನಾವಶ್ಯಕವಾಗಿ ಒಂದು ತಡೆಯನ್ನು ನಿರ್ಮಿಸುವುದನ್ನು ತಪ್ಪಿಸುವಂತೆ ನಿಮಗೆ ಸಹಾಯಮಾಡಲು ಸಾಕಾಗಬಹುದು. “ಬೈಬಲ್” ಎಂಬ ಪದದ ಉಪಯೋಗವು ಮಾನಸಿಕ ತಡೆಯನ್ನು ಉಂಟುಮಾಡುವುದಾದರೆ, “ಪವಿತ್ರ ಬರಹಗಳು” ಎಂದೊ ಅಥವಾ “ಈಗ 2,000ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿರುವ ಒಂದು ಗ್ರಂಥ” ಎಂದೊ ನೀವು ಹೇಳಬಹುದು. ನೀವು ಬೈಬಲಿಗೆ ಸೂಚಿಸುವುದಾದರೆ, ಅದರ ವಿಷಯದಲ್ಲಿ ಆ ವ್ಯಕ್ತಿಯ ಅಭಿಪ್ರಾಯವನ್ನು ಕೇಳಿ, ಅವನ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ನಿಮ್ಮ ಸಂಭಾಷಣೆಯನ್ನು ಮುಂದುವರಿಸಿರಿ.
ಸಮಯೋಚಿತ ಜಾಣ್ಮೆಯಲ್ಲಿ ಅನೇಕವೇಳೆ, ವಿಷಯಗಳನ್ನು ಹೇಳಲಿಕ್ಕಾಗಿ ಸೂಕ್ತವಾದ ಸಮಯವನ್ನು ನಿರ್ಧರಿಸುವುದೂ ಒಳಗೂಡಿದೆ. (ಜ್ಞಾನೋ. 25:11) ಮನೆಯವನು ಹೇಳಿದ ಎಲ್ಲ ಸಂಗತಿಗಳನ್ನು ನೀವು ಒಪ್ಪಲಿಕ್ಕಿಲ್ಲವಾದರೂ, ಅವನು ವ್ಯಕ್ತಪಡಿಸುವ ಪ್ರತಿಯೊಂದು ಅಶಾಸ್ತ್ರೀಯ ಹೇಳಿಕೆಯ ಬಗ್ಗೆ ನೀವು ವಿವಾದಿಸುವ ಅಗತ್ಯವಿಲ್ಲ. ಮನೆಯವನಿಗೆ ಎಲ್ಲವನ್ನೂ ಒಂದೇ ಸಲ ಹೇಳಿ ಮುಗಿಸಲು ಪ್ರಯತ್ನಿಸಬೇಡಿರಿ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ.”—ಯೋಹಾ. 16:12.
ಸಾಧ್ಯವಿರುವಲ್ಲಿ, ನೀವು ಯಾರೊಂದಿಗೆ ಮಾತಾಡುತ್ತೀರೊ ಅವರನ್ನು ಯಥಾರ್ಥವಾಗಿ ಪ್ರಶಂಸಿಸಿರಿ. ಮನೆಯವನು ಅತಿಯಾಗಿ ವಾದಮಾಡುವವನಾಗಿರುವಾಗಲೂ, ಅವನು ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿರುವುದಕ್ಕಾಗಿ ನೀವು ಅವನನ್ನು ಪ್ರಶಂಸಿಸಲು ಶಕ್ತರಾಗಿರಬಹುದು. ಅಪೊಸ್ತಲ ಪೌಲನು ಅಥೇನೆ ಪಟ್ಟಣದ ಅರಿಯೊಪಾಗದಲ್ಲಿನ ತತ್ವವಿಚಾರಕರೊಂದಿಗೆ ಮಾತಾಡುತ್ತಿದ್ದಾಗ ಹಾಗೆಯೇ ಮಾಡಿದನು. ಆ ತತ್ವವಿಚಾರಕರು “ಅವನ ಸಂಗಡ [“ವಿವಾದಾತ್ಮಕವಾಗಿ,” NW] ಚರ್ಚೆಮಾಡಿದರು.” ಆಗ ಅವನು ಅವರ ಮನನೋಯಿಸದೆ ಮುಖ್ಯಾಂಶಗಳನ್ನು ಹೇಗೆ ಒತ್ತಿಹೇಳಸಾಧ್ಯವಿತ್ತು? ಈ ಮುಂಚೆ ಅವನು ತಮ್ಮ ದೇವತೆಗಳಿಗೆ ಅವರು ಮಾಡಿದ್ದ ಬಲಿಪೀಠಗಳನ್ನು ನೋಡಿದ್ದನು. ಆ ಅಥೇನೆಯವರ ವಿಗ್ರಹಾರಾಧನೆಯ ವಿಷಯದಲ್ಲಿ ಅವರನ್ನು ಖಂಡಿಸುವ ಬದಲು, ಅವರ ಬಲವಾದ ಧಾರ್ಮಿಕ ಅನಿಸಿಕೆಗಳಿಗಾಗಿ ಅವನು ಅವರನ್ನು ಜಾಣ್ಮೆಯಿಂದ ಪ್ರಶಂಸಿಸಿದನು. ಅವನು ಹೇಳಿದ್ದು: “ನೀವು ಎಲ್ಲಾದರಲ್ಲೂ ಅತಿ ಭಕ್ತಿವಂತರೆಂದು ನನಗೆ ತೋರುತ್ತದೆ.” ಈ ರೀತಿಯ ಸಮೀಪಿಸುವಿಕೆಯು, ಅವನು ಸತ್ಯ ದೇವರ ವಿಷಯದಲ್ಲಿ ತನ್ನ ಸಂದೇಶವನ್ನು ಪ್ರಸ್ತುತಪಡಿಸಲು ಅವನಿಗೆ ದಾರಿಯನ್ನು ತೆರೆಯಿತು. ಇದರ ಫಲವಾಗಿ ಕೆಲವರು ವಿಶ್ವಾಸಿಗಳಾದರು.—ಅ. ಕೃ. 17:18, 22, 34.
ಆಕ್ಷೇಪಣೆಗಳು ಎಬ್ಬಿಸಲ್ಪಡುವಾಗ ವಿಪರೀತ ಪ್ರತಿಕ್ರಿಯೆಯನ್ನು ತೋರಿಸಬೇಡಿರಿ. ಶಾಂತರಾಗಿಯೇ ಇರಿ. ಇವುಗಳನ್ನು, ಆ ವ್ಯಕ್ತಿಯ ಆಲೋಚನೆಯ ಒಳನೋಟವನ್ನು ಪಡೆದುಕೊಳ್ಳಲಿಕ್ಕಾಗಿರುವ ಅವಕಾಶಗಳಾಗಿ ಪರಿಗಣಿಸಿರಿ. ಅವನು ತನ್ನ ಅಭಿಪ್ರಾಯಗಳನ್ನು ತಿಳಿಯಪಡಿಸಿದ್ದಕ್ಕಾಗಿ ನೀವು ಉಪಕಾರ ಹೇಳಬಹುದು. ಅವನು ಅನಿರೀಕ್ಷಿತವಾಗಿ, “ನನಗೆ ನನ್ನ ಸ್ವಂತ ಧರ್ಮವಿದೆ” ಎಂದು ಹೇಳುವುದಾದರೆ ನೀವೇನು ಮಾಡುವಿರಿ? ಆಗ ನೀವು ಸಮಯೋಚಿತ ಜಾಣ್ಮೆಯನ್ನು ಉಪಯೋಗಿಸುತ್ತಾ, “ನೀವು ನಿಮ್ಮ ಜೀವಮಾನವೆಲ್ಲ ಒಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದಿರೊ?” ಎಂದು ಕೇಳಬಹುದು. ಬಳಿಕ, ಅವನು ಉತ್ತರಕೊಟ್ಟ ಮೇಲೆ, “ಮಾನವಕುಲವು ಎಂದಾದರೂ ಒಂದೇ ಧರ್ಮದಲ್ಲಿ ಐಕ್ಯವಾಗುವುದು ಎಂದು ನೀವು ನೆನಸುತ್ತೀರೊ?” ಎಂದು ಕೇಳಬಹುದು. ಇದು ಇನ್ನೂ ಹೆಚ್ಚಿನ ಸಂಭಾಷಣೆಗೆ ದಾರಿಯನ್ನು ತೆರೆಯಬಹುದು.
ಸ್ವತಃ ನಮ್ಮ ಕುರಿತು ಸರಿಯಾದ ನೋಟವುಳ್ಳವರಾಗಿರುವುದು, ನಾವು ಸಮಯೋಚಿತ ಜಾಣ್ಮೆಯುಳ್ಳವರಾಗಿರುವಂತೆ ಸಹಾಯಮಾಡಬಲ್ಲದು. ಯೆಹೋವನ ಮಾರ್ಗಗಳ ಯುಕ್ತತೆ ಮತ್ತು ಆತನ ವಾಕ್ಯದ ಸತ್ಯತೆಯ ವಿಷಯದಲ್ಲಿ ನಮಗೆ ದೃಢವಾದ ನಿಶ್ಚಿತಾಭಿಪ್ರಾಯವಿದೆ. ನಾವು ಈ ವಿಷಯಗಳ ಕುರಿತು ನಿಶ್ಚಿತಾಭಿಪ್ರಾಯದಿಂದ ಮಾತಾಡುತ್ತೇವೆ. ಆದರೆ ನಾವು ಸ್ವನೀತಿವಂತರಾಗಿರಲು ನಮಗೆ ಯಾವುದೇ ಕಾರಣವಿರುವುದಿಲ್ಲ. (ಲೂಕ 18:9) ಸತ್ಯವನ್ನು ತಿಳಿದಿರುವುದಕ್ಕಾಗಿ ಮತ್ತು ಯೆಹೋವನ ಆಶೀರ್ವಾದಗಳನ್ನು ಅನುಭವಿಸುತ್ತಿರುವುದಕ್ಕಾಗಿ ನಾವು ಕೃತಜ್ಞರು. ಆದರೆ ನಾವು ಆತನ ಅಂಗೀಕಾರವನ್ನು ಪಡೆದಿರುವುದು ಆತನ ಅಪಾತ್ರ ಕೃಪೆ ಮತ್ತು ಕ್ರಿಸ್ತನಲ್ಲಿ ನಮಗಿರುವ ನಂಬಿಕೆಯ ಕಾರಣದಿಂದಲೇ ಆಗಿದೆ, ನಾವು ನೀತಿವಂತರು ಎಂಬ ಕಾರಣದಿಂದಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. (ಎಫೆ. 2:8, 9) ನಾವು ‘ನಂಬಿಕೆಯಲ್ಲಿ ಇದ್ದೇವೋ ಎಂಬುದನ್ನು ಪರೀಕ್ಷಿಸಿಕೊಳ್ಳಲು ಮತ್ತು ಪರಿಶೋಧಿಸಿಕೊಳ್ಳಲು’ ಇರುವ ಆವಶ್ಯಕತೆಯನ್ನು ನಾವು ಒಪ್ಪಿಕೊಳ್ಳುತ್ತೇವೆ. (2 ಕೊರಿಂ. 13:5) ಆದುದರಿಂದ, ದೇವರ ಆವಶ್ಯಕತೆಗಳಿಗೆ ಹೊಂದಿಕೊಳ್ಳುವ ಅಗತ್ಯದ ಕುರಿತು ನಾವು ಜನರಿಗೆ ತಿಳಿಸುವಾಗ, ಬೈಬಲಿನ ಆ ಸಲಹೆಯನ್ನು ನಾವು ದೈನ್ಯಭಾವದಿಂದ ನಮಗೂ ಅನ್ವಯಿಸಿಕೊಳ್ಳುತ್ತೇವೆ. ನಮ್ಮ ಜೊತೆಮಾನವನಿಗೆ ನ್ಯಾಯತೀರ್ಪನ್ನು ನೀಡುವ ಹಕ್ಕು ನಮಗಿಲ್ಲ. ಯೆಹೋವನು “ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ,” ಮತ್ತು ನಾವು ಏನು ಮಾಡುತ್ತೇವೊ ಅದಕ್ಕೆ ಲೆಕ್ಕವನ್ನು ನಾವು ಅವನ ನ್ಯಾಯಾಸನದ ಮುಂದೆ ಕೊಡಬೇಕಾಗಿದೆ.—ಯೋಹಾ. 5:22; 2 ಕೊರಿಂ. 5:10.
ಕುಟುಂಬ ಮತ್ತು ಜೊತೆಕ್ರೈಸ್ತರೊಂದಿಗೆ. ನಮ್ಮ ಸಮಯೋಚಿತ ಜಾಣ್ಮೆಯ ಉಪಯೋಗವು ಕ್ಷೇತ್ರ ಶುಶ್ರೂಷೆಗೆ ಮಾತ್ರ ಸೀಮಿತವಾಗಿರಬಾರದು. ಇಂತಹ ಸಮಯೋಚಿತ ಜಾಣ್ಮೆಯು ದೇವರಾತ್ಮದ ಫಲದ ಒಂದು ಅಭಿವ್ಯಕ್ತಿಯಾಗಿರುವುದರಿಂದ, ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ವ್ಯವಹರಿಸುವಾಗಲೂ ನಾವು ಇದನ್ನು ತೋರಿಸಬೇಕು. ಪ್ರೀತಿಯು, ನಾವು ಇತರರ ಅನಿಸಿಕೆಗಳಿಗೆ ಚಿಂತೆ ತೋರಿಸುವಂತೆ ನಮ್ಮನ್ನು ಪ್ರಚೋದಿಸುವುದು. ಎಸ್ತೇರ ರಾಣಿಯ ಗಂಡನು ಯೆಹೋವನ ಆರಾಧಕನಾಗಿರಲಿಲ್ಲ. ಆದರೂ ಆಕೆ ಅವನಿಗೆ ಗೌರವವನ್ನು ತೋರಿಸಿದಳು, ಮತ್ತು ಯೆಹೋವನ ಸೇವಕರನ್ನು ಒಳಗೊಂಡಿದ್ದ ವಿಷಯಗಳನ್ನು ಆಕೆ ಅವನಿಗೆ ತಿಳಿಯಪಡಿಸಿದಾಗ ಮಹಾ ವಿವೇಚನೆಯನ್ನು ತೋರಿಸಿದಳು. (ಎಸ್ತೇರಳು, ಅಧ್ಯಾ. 3-8) ಕೆಲವು ಸಂದರ್ಭಗಳಲ್ಲಿ, ಸಾಕ್ಷ್ಯೇತರ ಕುಟುಂಬ ಸದಸ್ಯರೊಂದಿಗೆ ಸಮಯೋಚಿತ ಜಾಣ್ಮೆಯಿಂದ ವ್ಯವಹರಿಸುವಾಗ, ನಾವು ನಮ್ಮ ನಂಬಿಕೆಗಳ ಕುರಿತಾದ ವಿವರಣೆಯನ್ನು ನೀಡುವ ಬದಲು, ನಮ್ಮ ನಡತೆಯು ಸತ್ಯದ ಮಾರ್ಗವನ್ನು ಅವರಿಗೆ ಶಿಫಾರಸ್ಸು ಮಾಡುವಂತೆ ಬಿಡಬೇಕಾಗಬಹುದು.—1 ಪೇತ್ರ 3:1, 2.
ಅದೇ ರೀತಿಯಲ್ಲಿ, ನಮ್ಮ ಸಭಾ ಸದಸ್ಯರ ಪರಿಚಯ ನಮಗೆ ಚೆನ್ನಾಗಿ ಇದೆ ಎಂಬ ವಿಷಯವು, ನಾವು ಅವರೊಂದಿಗೆ ನಿರ್ದಾಕ್ಷಿಣ್ಯದಿಂದ ಮಾತಾಡಬಹುದು ಅಥವಾ ನಿರ್ದಯವಾಗಿ ವರ್ತಿಸಬಹುದೆಂಬುದನ್ನು ಅರ್ಥೈಸುವುದಿಲ್ಲ. ಅವರು ಪ್ರೌಢರಾಗಿರುವುದರಿಂದ, ಅವರು ಸ್ವಲ್ಪವೂ ಗುಣಗುಟ್ಟದೆ ಸನ್ನಿವೇಶವನ್ನು ತಾಳಿಕೊಳ್ಳಬೇಕು ಎಂದು ನಾವು ತರ್ಕಿಸಬಾರದು. ಅಥವಾ, “ನಾನು ವರ್ತಿಸುವುದೇ ಹಾಗೆ” ಎಂದು ಹೇಳುವ ಮೂಲಕ ನಾವು ನೆವವನ್ನು ಕೊಟ್ಟುಕೊಳ್ಳಬಾರದು. ನಾವು ಮಾತಾಡುವ ರೀತಿಯು ಇತರರ ಮನಸ್ಸನ್ನು ನೋಯಿಸುತ್ತದೆಂದು ನಮಗೆ ತಿಳಿದುಬರುವಾಗ, ನಾವು ಬದಲಾವಣೆಯನ್ನು ಮಾಡಿಕೊಳ್ಳಲು ದೃಢನಿರ್ಧಾರವನ್ನು ಮಾಡಬೇಕು. ನಮ್ಮ “ಯಥಾರ್ಥವಾದ ಪ್ರೀತಿ”ಯು ನಾವು ‘ಕ್ರಿಸ್ತನಂಬಿಕೆಯುಳ್ಳವರಿಗೆ ಒಳ್ಳೇದನ್ನು ಮಾಡುವಂತೆ’ ನಮ್ಮನ್ನು ಪ್ರೇರಿಸಬೇಕು.—1 ಪೇತ್ರ 4:8, 15; ಗಲಾ. 6:10.
ಸಭಿಕರ ಒಂದು ಗುಂಪನ್ನು ಸಂಬೋಧಿಸುವಾಗ. ವೇದಿಕೆಯ ಮೇಲಿನಿಂದ ಮಾತಾಡುವವರು ಸಹ ಸಮಯೋಚಿತ ಜಾಣ್ಮೆಯನ್ನು ಉಪಯೋಗಿಸುವ ಅಗತ್ಯವಿದೆ. ಸಭಿಕರಲ್ಲಿ ವಿವಿಧ ಹಿನ್ನೆಲೆಗಳು ಮತ್ತು ಪರಿಸ್ಥಿತಿಗಳಿಂದ ಬಂದ ಜನರಿರುತ್ತಾರೆ. ಅವರು ಆತ್ಮಿಕ ಬೆಳವಣಿಗೆಯ ವಿವಿಧ ಹಂತಗಳಲ್ಲಿರುತ್ತಾರೆ. ಅವರಲ್ಲಿ ಕೆಲವರು ರಾಜ್ಯ ಸಭಾಗೃಹಕ್ಕೆ ಪ್ರಥಮ ಬಾರಿ ಬಂದಿರಬಹುದು. ಇತರರು, ಭಾಷಣಕಾರನಿಗೆ ಗೊತ್ತಿಲ್ಲದಿರುವಂಥ ಒಂದು ವಿಶೇಷ ಒತ್ತಡವನ್ನು ಅನುಭವಿಸುತ್ತಿರಬಹುದು. ಇಂತಹ ಸಂದರ್ಭಗಳಲ್ಲಿ, ತನ್ನ ಸಭಿಕರ ಮನಸ್ಸನ್ನು ನೋಯಿಸದಿರಲು ಭಾಷಣಕಾರನಿಗೆ ಯಾವುದು ಸಹಾಯಮಾಡಬಲ್ಲದು?
ಅಪೊಸ್ತಲ ಪೌಲನು ತೀತನಿಗೆ ಬುದ್ಧಿಹೇಳಿದಂತೆ, “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ” ಹೋಗುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ. (ತೀತ 3:2) ಲೋಕವನ್ನು ಅನುಕರಿಸುತ್ತಾ, ಬೇರೊಂದು ಕುಲ, ಭಾಷಾ ಗುಂಪು ಅಥವಾ ಜನಾಂಗದ ಜನರನ್ನು ತುಚ್ಛೀಕರಿಸುವ ಪದಗಳನ್ನು ಉಪಯೋಗಿಸದಿರಿ. (ಪ್ರಕ. 7:9, 10) ಯೆಹೋವನ ಆವಶ್ಯಕತೆಗಳನ್ನು ಮುಚ್ಚುಮರೆಯಿಲ್ಲದೆ ಚರ್ಚಿಸಿ, ಮತ್ತು ಅವುಗಳನ್ನು ಅನ್ವಯಿಸಿಕೊಳ್ಳುವುದರಲ್ಲಿರುವ ವಿವೇಕವನ್ನು ತೋರಿಸಿರಿ. ಆದರೆ ಯೆಹೋವನ ಮಾರ್ಗದಲ್ಲಿ ಇನ್ನೂ ಪೂರ್ಣವಾಗಿ ನಡೆಯದಿರುವವರ ವಿಷಯದಲ್ಲಿ ಅನುಚಿತವಾಗಿ ಮಾತಾಡುವುದನ್ನು ತೊರೆಯಿರಿ. ಅದರ ಬದಲಿಗೆ, ಎಲ್ಲರೂ ದೇವರ ಚಿತ್ತವನ್ನು ಗ್ರಹಿಸಿ, ಆತನಿಗೆ ಮೆಚ್ಚಿಗೆಯಾಗಿರುವುದನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಿರಿ. ಬುದ್ಧಿವಾದದ ಮಾತುಗಳನ್ನು ಹಾರ್ದಿಕವಾದ ಮತ್ತು ಯಥಾರ್ಥಭಾವದ ಪ್ರಶಂಸೆಯ ಮಾತುಗಳಿಂದ ನಯಗೊಳಿಸಿರಿ. ನೀವು ಮಾತಾಡುವ ರೀತಿ ಮತ್ತು ನಿಮ್ಮ ಸ್ವರದ ನಾದದ ಮೂಲಕ, ನಮ್ಮಲ್ಲಿ ಪರಸ್ಪರವಾಗಿ ಇರಬೇಕಾದ ಸಹೋದರ ಪ್ರೀತಿಯನ್ನು ತಿಳಿಯಪಡಿಸಿರಿ.—1 ಥೆಸ. 4:1-12; 1 ಪೇತ್ರ 3:8.