ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 49 ಪು. 255-ಪು. 257 ಪ್ಯಾ. 4
  • ಬಲವಾದ ವಾದಸರಣಿಗಳನ್ನು ನೀಡುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಲವಾದ ವಾದಸರಣಿಗಳನ್ನು ನೀಡುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಶಾಸ್ತ್ರವಚನಗಳನ್ನು ಸರಿಯಾಗಿ ಅನ್ವಯಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಭಿಕರಿಗೆ ಬೋಧಪ್ರದವಾದ ವಿಷಯ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಬೈಬಲನ್ನು ಉಪಯೋಗಿಸಲು ಪ್ರೋತ್ಸಾಹಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 49 ಪು. 255-ಪು. 257 ಪ್ಯಾ. 4

ಅಧ್ಯಾಯ 49

ಬಲವಾದ ವಾದಸರಣಿಗಳನ್ನು ನೀಡುವುದು

ನೀವೇನು ಮಾಡುವ ಅಗತ್ಯವಿದೆ?

ನೀವು ಮಾಡುವ ಹೇಳಿಕೆಗಳನ್ನು ಸಮರ್ಥಿಸಲು ತೃಪ್ತಿಕರವಾದ ರುಜುವಾತನ್ನು ಒದಗಿಸಿರಿ.

ಇದು ಪ್ರಾಮುಖ್ಯವೇಕೆ?

ನೀವು ಏನು ಹೇಳುತ್ತೀರೋ ಅದು ಸತ್ಯವೆಂದು ಮನದಟ್ಟಾಗುವ ತನಕ ನಿಮ್ಮ ಕೇಳುಗರು ಅದನ್ನು ನಂಬುವುದೂ ಇಲ್ಲ, ಅದರಂತೆ ವರ್ತಿಸುವುದೂ ಇಲ್ಲ.

ನೀವು ಒಂದು ಹೇಳಿಕೆಯನ್ನು ಮಾಡುವಾಗ, “ಅದೇಕೆ ಸತ್ಯ? ಭಾಷಣಕಾರನು ಏನು ಹೇಳುತ್ತಿದ್ದಾನೋ ಅದನ್ನು ಅಂಗೀಕರಿಸಬೇಕೆಂಬುದಕ್ಕೆ ಯಾವ ಪುರಾವೆಯಿದೆ?” ಎಂದು ಕೇಳಲು ನಿಮ್ಮ ಸಭಿಕರಿಗೆ ಸಕಾರಣವಿದೆ. ಬೋಧಕರಾಗಿರುವ ನಿಮಗೆ ಅಂತಹ ಪ್ರಶ್ನೆಗಳಿಗೆ ಒಂದೇ ಉತ್ತರ ಕೊಡುವ ಜವಾಬ್ದಾರಿ ಇದೆ ಇಲ್ಲವೆ ನಿಮ್ಮ ಕೇಳುಗರು ಉತ್ತರಗಳನ್ನು ಕಂಡುಕೊಳ್ಳುವಂತೆ ಸಹಾಯಮಾಡುವ ಜವಾಬ್ದಾರಿ ಇದೆ. ನಿಮ್ಮ ಹೇಳಿಕೆಯು ನಿಮ್ಮ ವಾದಸರಣಿಗೆ ಬಹುಮುಖ್ಯವಾಗಿರುವಲ್ಲಿ, ನಿಮ್ಮ ಕೇಳುಗರು ಅದನ್ನು ಅಂಗೀಕರಿಸಲು ಬಲವಾದ ಕಾರಣಗಳನ್ನು ಕೊಡುವುದನ್ನು ಖಾತ್ರಿಪಡಿಸಿಕೊಳ್ಳಿರಿ. ಇದು ನಿಮ್ಮ ಭಾಷಣವನ್ನು ಒಡಂಬಡಿಸುವಂಥದ್ದಾಗಿ ಮಾಡಲು ಸಹಾಯಕರವಾಗಿರುವುದು.

ಅಪೊಸ್ತಲ ಪೌಲನು ಒಡಂಬಡಿಸುವ ಸಾಮರ್ಥ್ಯವನ್ನು ಉಪಯೋಗಿಸಿದನು. ಬಲವಾದ ವಾದಸರಣಿ, ನ್ಯಾಯವಾದ ತರ್ಕಬದ್ಧತೆ ಮತ್ತು ತೀವ್ರಾಭಿಲಾಷೆಯ ಬೇಡಿಕೆಗಳನ್ನು ಉಪಯೋಗಿಸುತ್ತಾ, ಅವನು ಯಾರೊಂದಿಗೆ ಮಾತಾಡುತ್ತಿದ್ದನೋ ಅವರ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿದನು. ಅವನು ನಮಗೆ ಉತ್ತಮವಾದ ಮಾದರಿಯನ್ನಿಟ್ಟನು. (ಅ. ಕೃ. 18:4; 19:8) ಕೆಲವು ಮಂದಿ ವಾಕ್ಚತುರರು ಜನರನ್ನು ದಾರಿತಪ್ಪಿಸಲು ಈ ಒಡಂಬಡಿಸುವಿಕೆಯನ್ನು ಉಪಯೋಗಿಸುತ್ತಾರೆ. (ಮತ್ತಾ. 27:20; ಅ. ಕೃ. 14:19; ಕೊಲೊ. 2:4) ಅವರು ತಪ್ಪಾದ ಕಲ್ಪನೆಯಿಂದ ಪ್ರಾರಂಭಿಸಿ, ಪೂರ್ವಗ್ರಹವುಳ್ಳ ಮೂಲಗಳನ್ನು ಆಧಾರವಾಗಿ ಮಾಡಿಕೊಂಡು, ಟೊಳ್ಳಾದ ವಾದಾಂಶಗಳನ್ನು ಉಪಯೋಗಿಸಿ, ತಮ್ಮ ಅಭಿಪ್ರಾಯದೊಂದಿಗೆ ಸಮ್ಮತಿಸದಂಥ ನಿಜತ್ವಗಳನ್ನು ಅಸಡ್ಡೆ ಮಾಡಿ, ತರ್ಕಬದ್ಧತೆಗಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ರಂಜಿಸುವಂಥ ವಿಷಯಗಳನ್ನು ಹೇಳಬಹುದು. ಇಂತಹ ಸಕಲ ವಿಧಾನಗಳಿಂದ ದೂರವಿರಲು ನಾವು ಜಾಗರೂಕತೆಯಿಂದಿರಬೇಕು.

ದೇವರ ವಾಕ್ಯದ ಮೇಲೆ ಸ್ಥಿರವಾಗಿ ಆಧಾರಿತವಾದದ್ದು. ನಾವು ಏನನ್ನು ಕಲಿಸುತ್ತೇವೊ ಅದು ನಮ್ಮ ಮೂಲದ್ದಾಗಿರಬಾರದು. ನಾವು ಬೈಬಲಿನಿಂದ ಏನನ್ನು ಕಲಿತಿದ್ದೇವೋ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ. ಈ ಕೆಲಸದಲ್ಲಿ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಪ್ರಕಾಶನಗಳಿಂದ ನಮಗೆ ತುಂಬ ಸಹಾಯ ದೊರೆತಿದೆ. ಈ ಪ್ರಕಾಶನಗಳು, ನಾವು ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಪರೀಕ್ಷಿಸುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತವೆ. ಅದೇ ರೀತಿಯಲ್ಲಿ, ನಾವು ಇತರರನ್ನು ಬೈಬಲಿನ ಕಡೆಗೆ ನಡೆಸುತ್ತೇವೆ. ನಾವು ಇದನ್ನು, ನಾವು ಹೇಳಿದ್ದೇ ಸರಿಯೆಂದು ರುಜುಪಡಿಸುವ ಉದ್ದೇಶದಿಂದಲ್ಲ, ಬದಲಿಗೆ ಬೈಬಲು ಏನು ಹೇಳುತ್ತದೆಂಬುದನ್ನು ಸ್ವತಃ ಅವರೇ ನೋಡಬೇಕೆಂಬ ನಮ್ರವಾದ ಅಪೇಕ್ಷೆಯಿಂದಲೇ ಮಾಡುತ್ತೇವೆ. “ನಿನ್ನ ವಾಕ್ಯವೇ ಸತ್ಯವು” ಎಂದು ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಹೇಳಿದ ಯೇಸು ಕ್ರಿಸ್ತನೊಂದಿಗೆ ನಾವು ಪೂರ್ಣವಾಗಿ ಸಮ್ಮತಿಸುತ್ತೇವೆ. (ಯೋಹಾ. 17:17) ಭೂಪರಲೋಕಗಳ ಸೃಷ್ಟಿಕರ್ತನಾದ ಯೆಹೋವ ದೇವರಿಗಿಂತ ಉನ್ನತನಾದ ಅಧಿಕಾರಿ ಇನ್ನಾವನೂ ಇಲ್ಲ. ನಮ್ಮ ವಾದಸರಣಿಗಳ ಸಪ್ರಮಾಣತೆಯು, ಅವು ಆತನ ವಾಕ್ಯದ ಮೇಲೆ ಆಧಾರಿತವಾಗಿವೆಯೊ ಎಂಬುದರ ಮೇಲೆ ಅವಲಂಬಿಸಿದೆ.

ಕೆಲವೊಮ್ಮೆ ನೀವು ಬೈಬಲಿನ ಪರಿಚಯವಿಲ್ಲದಂಥ ಅಥವಾ ಅದನ್ನು ದೇವರ ವಾಕ್ಯವೆಂದು ಒಪ್ಪಿಕೊಳ್ಳದಂಥ ಜನರೊಂದಿಗೆ ಮಾತಾಡಬಹುದು. ಆ ಸಂದರ್ಭದಲ್ಲಿ, ನೀವು ಬೈಬಲಿನ ವಚನಗಳನ್ನು ಯಾವಾಗ ಮತ್ತು ಹೇಗೆ ಪರಿಚಯಿಸುತ್ತೀರಿ ಎಂಬ ವಿಷಯದಲ್ಲಿ ವಿವೇಚನೆಯನ್ನು ಉಪಯೋಗಿಸಬೇಕು. ಆದರೆ ಆದಷ್ಟು ಬೇಗನೆ, ಆ ಮಾಹಿತಿಯ ಅಧಿಕೃತ ಮೂಲದ ಕಡೆಗೆ ಅವರ ಗಮನವನ್ನು ಸೆಳೆಯಲು ನೀವು ಪ್ರಯತ್ನಿಸಬೇಕು.

ವಿಷಯಕ್ಕೆ ಸಂಬಂಧಪಟ್ಟಿರುವ ಒಂದು ವಚನವನ್ನು ಕೇವಲ ಉಲ್ಲೇಖಿಸುವುದಷ್ಟೇ ನಿರಾಕರಿಸಲಾಗದಂಥ ವಾದವನ್ನು ಒದಗಿಸುತ್ತದೆಂಬ ತೀರ್ಮಾನಕ್ಕೆ ನೀವು ಬರಬೇಕೊ? ಹಾಗೆ ತೀರ್ಮಾನಿಸಬೇಕೆಂದಿಲ್ಲ. ನೀವು ಆ ಶಾಸ್ತ್ರವಚನದ ಪೂರ್ವಾಪರ ವಿಷಯಕ್ಕೆ ಗಮನವನ್ನು ಸೆಳೆದು, ಅದು ನೀವು ಏನು ಹೇಳುತ್ತಿದ್ದೀರೋ ಅದನ್ನು ನಿಜವಾಗಿಯೂ ಸಮರ್ಥಿಸುತ್ತದೆಂದು ತೋರಿಸಬೇಕಾಗಬಹುದು. ನೀವು ಒಂದು ಶಾಸ್ತ್ರವಚನದಿಂದ ಕೇವಲ ಒಂದು ಮೂಲತತ್ತ್ವವನ್ನು ಮಾತ್ರ ಸೂಚಿಸಿ ಹೇಳುತ್ತಿರುವಲ್ಲಿ ಮತ್ತು ಅದರ ಪೂರ್ವಾಪರವು ಆ ವಿಷಯವಸ್ತುವನ್ನು ಚರ್ಚಿಸದೆ ಇರುವಲ್ಲಿ, ಇನ್ನೂ ಹೆಚ್ಚಿನ ರುಜುವಾತು ಬೇಕಾಗಬಹುದು. ನೀವು ಏನು ಹೇಳುತ್ತಿದ್ದೀರೋ ಅದು ನಿಜವಾಗಿಯೂ ಪವಿತ್ರ ಶಾಸ್ತ್ರಗಳ ಮೇಲೆ ಬಲವಾಗಿ ಆಧಾರಿತವಾಗಿದೆ ಎಂಬುದನ್ನು ಸಭಿಕರಿಗೆ ಮನದಟ್ಟುಮಾಡಲಿಕ್ಕಾಗಿ, ಆ ವಿಷಯಕ್ಕೆ ಸಂಬಂಧಿಸಿರುವ ಬೇರೆ ಶಾಸ್ತ್ರವಚನಗಳನ್ನು ನೀವು ಉಪಯೋಗಿಸಬೇಕಾದೀತು.

ಒಂದು ಶಾಸ್ತ್ರವಚನವು ಏನನ್ನು ರುಜುಪಡಿಸುತ್ತದೊ ಅದನ್ನು ಉತ್ಪ್ರೇಕ್ಷಿಸಿ ಹೇಳುವುದನ್ನು ತಪ್ಪಿಸಿರಿ. ಅದನ್ನು ಜಾಗರೂಕತೆಯಿಂದ ಓದಿರಿ. ಆ ವಚನವು ನೀವು ಚರ್ಚಿಸುತ್ತಿರುವ ಸಾಮಾನ್ಯ ವಿಷಯಕ್ಕೆ ಸಂಬಂಧಪಟ್ಟದ್ದಾಗಿರಬಹುದು. ಆದರೂ, ನಿಮ್ಮ ವಾದವು ಒಡಂಬಡಿಸುವಂಥದ್ದಾಗಿ ಇರಬೇಕಾದರೆ, ಅದು ಏನನ್ನು ರುಜುಪಡಿಸುತ್ತದೆಂದು ನೀವು ಹೇಳುತ್ತೀರೊ ಅದನ್ನು ನಿಮ್ಮ ಕೇಳುಗನು ಗ್ರಹಿಸಲು ಶಕ್ತನಾಗಬೇಕು.

ದೃಢೀಕರಿಸುವಂಥ ರುಜುವಾತಿನಿಂದ ಬೆಂಬಲಿಸಲ್ಪಟ್ಟದ್ದು. ಕೆಲವು ಸಂದರ್ಭಗಳಲ್ಲಿ, ಶಾಸ್ತ್ರವಚನಗಳ ತರ್ಕಬದ್ಧತೆಯನ್ನು ಜನರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ಬೈಬಲಿನ ಹೊರಗಿನ ನಂಬಲರ್ಹವಾದಂಥ ಒಂದು ಮೂಲದಿಂದ ರುಜುವಾತನ್ನು ಉಪಯೋಗಿಸುವುದು ಸಹಾಯಕರವಾಗಿದ್ದೀತು.

ಉದಾಹರಣೆಗೆ, ಒಬ್ಬ ಸೃಷ್ಟಿಕರ್ತನಿದ್ದಾನೆಂಬುದಕ್ಕೆ ರುಜುವಾತಾಗಿ ನೀವು ದೃಶ್ಯ ವಿಶ್ವಕ್ಕೆ ಸೂಚಿಸಬಹುದು. ಗುರುತ್ವಾಕರ್ಷಣದಂತಹ ಪ್ರಕೃತಿ ನಿಯಮಗಳಿಗೆ ನೀವು ಗಮನ ಸೆಳೆದು, ಇಂತಹ ನಿಯಮಗಳ ಅಸ್ತಿತ್ವವೇ ನಿಯಮದಾತನೊಬ್ಬನು ಇರುವುದನ್ನು ಅವಶ್ಯಪಡಿಸುತ್ತದೆಂದು ತರ್ಕಿಸಬಹುದು. ನಿಮ್ಮ ತರ್ಕವು ದೇವರ ವಾಕ್ಯದಲ್ಲಿ ಏನು ಹೇಳಲ್ಪಟ್ಟಿದೆಯೊ ಅದಕ್ಕೆ ಹೊಂದಿಕೆಯಲ್ಲಿರುವಲ್ಲಿ, ಅದು ಸದೃಢವಾದದ್ದಾಗಿರುವುದು. (ಯೋಬ 38:31-33; ಕೀರ್ತ. 19:1; 104:24; ರೋಮಾ. 1:20) ಇಂತಹ ರುಜುವಾತು ಸಹಾಯಕರವಾದದ್ದಾಗಿದೆ, ಏಕೆಂದರೆ ಬೈಬಲು ಏನು ಹೇಳುತ್ತದೊ ಅದು ದೃಷ್ಟಿಗೋಚರವಾದ ನಿಜತ್ವಗಳಿಗೆ ಹೊಂದಿಕೆಯಲ್ಲಿದೆ ಎಂದು ಅದು ತೋರಿಸುತ್ತದೆ.

ಬೈಬಲು ನಿಜವಾಗಿಯೂ ದೇವರ ವಾಕ್ಯವಾಗಿದೆ ಎಂದು ಗ್ರಹಿಸುವಂತೆ ಯಾರಿಗಾದರೂ ಸಹಾಯಮಾಡಲು ನೀವು ಪ್ರಯತ್ನಿಸುತ್ತಿದ್ದೀರೊ? ಅದು ನಿಜವಾಗಿಯೂ ದೇವರ ವಾಕ್ಯ ಎಂದು ಹೇಳುವಂಥ ವಿದ್ವಾಂಸರನ್ನು ನೀವು ಉಲ್ಲೇಖಿಸಬಹುದಾದರೂ, ಅದು ಇದನ್ನು ರುಜುಪಡಿಸುತ್ತದೊ? ಆ ವಿದ್ವಾಂಸರನ್ನು ಗೌರವಿಸುವವರಿಗೆ ಮಾತ್ರ ಅಂತಹ ಉಲ್ಲೇಖಗಳು ಸಹಾಯಮಾಡುತ್ತವೆ. ಬೈಬಲು ಸತ್ಯವೆಂದು ರುಜುಪಡಿಸಲು ನೀವು ವಿಜ್ಞಾನವನ್ನು ಉಪಯೋಗಿಸಬಲ್ಲಿರೊ? ಅಪರಿಪೂರ್ಣರಾದ ವಿಜ್ಞಾನಿಗಳ ಅಭಿಪ್ರಾಯಗಳನ್ನು ನೀವು ನಿಮ್ಮ ಪ್ರಮಾಣವಾಕ್ಯವಾಗಿ ಉಪಯೋಗಿಸುವಲ್ಲಿ, ನೀವು ಅಸ್ಥಿರವಾದಂಥ ಒಂದು ಅಸ್ತಿವಾರದ ಮೇಲೆ ಕಟ್ಟುತ್ತಿರಬಹುದು. ಆದರೆ, ನೀವು ಮೊದಲು ದೇವರ ವಾಕ್ಯದಿಂದ ಆರಂಭಿಸಿ, ಅನಂತರ ಬೈಬಲಿನ ನಿಷ್ಕೃಷ್ಟತೆಯನ್ನು ಎತ್ತಿತೋರಿಸುವ ವೈಜ್ಞಾನಿಕ ಕಂಡುಹಿಡಿತಗಳಿಗೆ ಸೂಚಿಸುವುದಾದರೆ, ಆಗ ನಿಮ್ಮ ವಾದಗಳು ಸ್ಥಿರವಾದ ಅಸ್ತಿವಾರದ ಮೇಲೆ ಸ್ಥಾಪಿಸಲ್ಪಡುವವು.

ನೀವು ರುಜುಪಡಿಸಲು ಪ್ರಯತ್ನಿಸುವ ವಿಷಯವು ಯಾವುದೇ ಆಗಿರಲಿ, ಅದಕ್ಕೆ ಸಾಕಷ್ಟು ಪುರಾವೆಯನ್ನು ನೀಡಿರಿ. ಬೇಕಾಗುವ ರುಜುವಾತಿನ ಮೊತ್ತವು ನಿಮ್ಮ ಸಭಿಕರ ಮೇಲೆ ಹೊಂದಿಕೊಂಡಿರುವುದು. ಉದಾಹರಣೆಗೆ, 2 ತಿಮೊಥೆಯ 3:1-5 ರಲ್ಲಿ ವರ್ಣಿಸಲ್ಪಟ್ಟಿರುವ ಕಡೇ ದಿವಸಗಳ ಕುರಿತು ನೀವು ಚರ್ಚಿಸುತ್ತಿರುವಲ್ಲಿ, ನಿಮ್ಮ ಸಭಿಕರ ಗಮನವನ್ನು, ಜನರು “ಮಮತೆಯಿಲ್ಲದವರು” ಎಂಬುದನ್ನು ಸೂಚಿಸುವಂಥ ಒಂದು ಚಿರಪರಿಚಿತ ವಾರ್ತಾವರದಿಯ ಕಡೆಗೆ ಸೆಳೆಯಬಹುದು. ಕಡೇ ದಿವಸಗಳ ಸೂಚನೆಯ ಈ ಭಾಗವು ಈಗ ನೆರವೇರುತ್ತಿದೆಯೆಂಬುದನ್ನು ರುಜುಪಡಿಸಲು ಅದೊಂದೇ ಉದಾಹರಣೆ ಸಾಕಾದೀತು.

ಹೋಲಿಕೆ, ಅಂದರೆ ಪ್ರಾಮುಖ್ಯವಾದ ಅಂಶಗಳು ಸಾಮಾನ್ಯವಾಗಿರುವ ಎರಡು ವಿಷಯಗಳ ನಡುವಿನ ತುಲನೆಯು ಅನೇಕವೇಳೆ ಸಹಾಯಕರವಾಗಿರಬಲ್ಲದು. ಆ ಹೋಲಿಕೆಯು ತಾನೇ ಒಂದು ವಿಷಯವನ್ನು ರುಜುಪಡಿಸುವುದಿಲ್ಲ; ಅದರ ಸಪ್ರಮಾಣತೆಯನ್ನು ಬೈಬಲು ತಾನೇ ಏನು ಹೇಳುತ್ತದೋ ಅದರೊಂದಿಗೆ ಪರೀಕ್ಷಿಸಬೇಕು. ಆದರೆ ಆ ಹೋಲಿಕೆಯು ಒಂದು ವಿಚಾರದ ತರ್ಕಸಂಗತತೆಯನ್ನು ಒಬ್ಬನು ಗ್ರಹಿಸುವಂತೆ ಸಹಾಯಮಾಡಬಹುದು. ಉದಾಹರಣೆಗೆ, ದೇವರ ರಾಜ್ಯವು ಒಂದು ಸರಕಾರವಾಗಿದೆ ಎಂಬುದನ್ನು ವಿವರಿಸುವಾಗ ಇಂತಹ ಹೋಲಿಕೆಯನ್ನು ಉಪಯೋಗಿಸಬಹುದು. ಮಾನವ ಸರಕಾರಗಳಂತೆ, ದೇವರ ರಾಜ್ಯದಲ್ಲಿಯೂ ರಾಜರೂ ಪ್ರಜೆಗಳೂ ನಿಯಮಗಳೂ ನ್ಯಾಯಾಂಗ ವ್ಯವಸ್ಥೆಯೂ ಶಿಕ್ಷಣ ವ್ಯವಸ್ಥೆಯೂ ಇದೆಯೆಂಬುದನ್ನು ನೀವು ತೋರಿಸಿಕೊಡಬಹುದು.

ಬೈಬಲಿನ ಸಲಹೆಯನ್ನು ಅನ್ವಯಿಸುವುದರ ವಿವೇಕವನ್ನು ತೋರಿಸಲಿಕ್ಕಾಗಿ ಅನೇಕವೇಳೆ ನಿಜ ಜೀವನದ ಅನುಭವಗಳನ್ನು ಉಪಯೋಗಿಸಸಾಧ್ಯವಿದೆ. ಮಾಡಲ್ಪಡುವ ಹೇಳಿಕೆಗಳನ್ನು ಸಮರ್ಥಿಸಲಿಕ್ಕಾಗಿ ವೈಯಕ್ತಿಕ ಅನುಭವಗಳನ್ನೂ ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ, ಬೈಬಲನ್ನು ಓದುವ ಹಾಗೂ ಅಧ್ಯಯನಮಾಡುವುದರ ಪ್ರಾಮುಖ್ಯತೆಯನ್ನು ನೀವು ಒಬ್ಬ ವ್ಯಕ್ತಿಗೆ ತೋರಿಸುವಾಗ, ಹಾಗೆ ಮಾಡಿರುವುದರಿಂದ ನಿಮ್ಮ ಜೀವನವು ಹೇಗೆ ಉತ್ತಮಗೊಂಡಿದೆಯೆಂಬುದನ್ನು ನೀವು ವಿವರಿಸಬಹುದು. ತನ್ನ ಸಹೋದರರನ್ನು ಪ್ರೋತ್ಸಾಹಿಸಲಿಕ್ಕಾಗಿ ಅಪೊಸ್ತಲ ಪೇತ್ರನು, ತಾನು ಯಾವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದನೊ ಆ ರೂಪಾಂತರವನ್ನು ಸೂಚಿಸಿ ಮಾತಾಡಿದನು. (2 ಪೇತ್ರ 1:16-18) ಪೌಲನು ಸಹ ತನ್ನ ಸ್ವಂತ ಅನುಭವಗಳ ಕುರಿತು ಮಾತಾಡಿದನು. (2 ಕೊರಿಂ. 1:8-10; 12:7-9) ಆದರೆ ನಿಮ್ಮತ್ತ ಅನುಚಿತವಾದ ಗಮನವನ್ನು ಸೆಳೆಯದಿರಲಿಕ್ಕಾಗಿ ನೀವು ಇಂತಹ ಸ್ವಂತ ಅನುಭವಗಳನ್ನು ವಿರಳವಾಗಿ ಉಪಯೋಗಿಸಬೇಕೆಂಬುದು ನಿಶ್ಚಯ.

ಜನರ ಹಿನ್ನೆಲೆ ಮತ್ತು ಯೋಚನೆ ವಿಭಿನ್ನವಾಗಿರುವುದರಿಂದ, ಒಬ್ಬನ ಮನವೊಪ್ಪಿಸುವಂಥ ರುಜುವಾತು ಇನ್ನೊಬ್ಬನಿಗೆ ತೃಪ್ತಿ ಕೊಡಲಿಕ್ಕಿಲ್ಲ. ಆದಕಾರಣ, ನೀವು ಯಾವ ವಾದಸರಣಿಗಳನ್ನು ಉಪಯೋಗಿಸುವಿರಿ ಮತ್ತು ನೀವು ಅವುಗಳನ್ನು ಹೇಗೆ ನೀಡುವಿರಿ ಎಂಬುದನ್ನು ನಿರ್ಣಯಿಸುವಾಗ, ನಿಮ್ಮ ಕೇಳುಗರ ದೃಷ್ಟಿಕೋನಗಳನ್ನು ಪರಿಗಣಿಸಿರಿ. ಜ್ಞಾನೋಕ್ತಿ 16:23 ಹೇಳುವುದು: “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶಶಕ್ತಿ [“ಒಡಂಬಡಿಸುವ ಶಕ್ತಿ,” NW]ಯನ್ನೂ ಹೆಚ್ಚಿಸುವದು.”

ಇದನ್ನು ಮಾಡುವ ವಿಧ

  • ಕೇವಲ ಪ್ರತಿಪಾದನೆಗಳನ್ನು ಮಾಡುವ ಬದಲು, ಮುಖ್ಯ ವಿಷಯಗಳನ್ನು ಸಮರ್ಥಿಸಲಿಕ್ಕಾಗಿ ತೃಪ್ತಿಕರವಾದ ರುಜುವಾತನ್ನು ಕೊಡಿರಿ.

  • ವಾದಸರಣಿಗಳನ್ನು ಶಾಸ್ತ್ರವಚನಗಳ ಮೇಲೆ ಸ್ಥಿರವಾಗಿ ಆಧಾರಿಸಿರಿ.

  • ನಿಮ್ಮ ಉದ್ದೇಶಗಳಿಗೆ ಮತ್ತು ನಿಮ್ಮ ಸಭಿಕರ ಆವಶ್ಯಕತೆಗಳಿಗೆ ಹೊಂದಿಕೊಳ್ಳಲಿಕ್ಕಾಗಿ, ದೃಢೀಕರಿಸುವ ರುಜುವಾತನ್ನು ಉಪಯೋಗಿಸಿರಿ.

ಅಭ್ಯಾಸಪಾಠಗಳು: (1) ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದಲ್ಲಿ “ಯೇಸು ಕ್ರಿಸ್ತ” (Jesus Christ) ಎಂಬ ಮುಖ್ಯ ಶಿರೋನಾಮವನ್ನು ತೆರೆಯಿರಿ. ಅಲ್ಲಿ ಬೈಬಲಿನ ಮೇಲೆ ಮುಖ್ಯ ಒತ್ತನ್ನು ಹಾಕಿ ಪ್ರಶ್ನೆಗಳನ್ನು ಹೇಗೆ ಉತ್ತರಿಸಲಾಗಿದೆಯೆಂಬುದನ್ನು ಗಮನಿಸಿರಿ. (2) ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಸಂಚಿಕೆಯಲ್ಲಿ ಆರಂಭದ ಲೇಖನಮಾಲೆಯನ್ನು ಪರೀಕ್ಷಿಸಿರಿ. ಅಲ್ಲಿ ವಿಕಸಿಸಲಾಗಿರುವ ಅನೇಕ ಮುಖ್ಯಾಂಶಗಳನ್ನು ಆರಿಸಿಕೊಳ್ಳಿ. ಮುಖ್ಯ ಶಾಸ್ತ್ರವಚನಗಳಿಗೆ ಅಡಿಗೆರೆ ಹಾಕಿ, ದೃಢೀಕರಿಸುವ ರುಜುವಾತಿಗೆ ಗುರುತುಹಾಕಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ