ಅಧ್ಯಾಯ 42
ಸಭಿಕರಿಗೆ ಬೋಧಪ್ರದವಾದ ವಿಷಯ
ನಿಮ್ಮ ನಿರೂಪಣೆಯನ್ನು ಸಭಿಕರಿಗೆ ಬೋಧಪ್ರದವಾದದ್ದಾಗಿ ಮಾಡಬೇಕಾದರೆ, ನೀವು ಪ್ರಯೋಜನಕರವಾದ ವಿಷಯವಸ್ತುವಿನ ಕುರಿತು ಮಾತಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬೇಕು. ಸ್ವತಃ ಹೀಗೆ ಕೇಳಿಕೊಳ್ಳಿ: ‘ಈ ಸಭಿಕರು ಈ ವಿಷಯವಸ್ತುವನ್ನು ಏಕೆ ಕೇಳಿಸಿಕೊಳ್ಳಬೇಕು? ಈ ಚರ್ಚೆಯಿಂದ ತಾವು ನಿಜವಾಗಿಯೂ ಪ್ರಯೋಜನ ಪಡೆದೆವೆಂದು ಸಭಿಕರಿಗೆ ಅನಿಸುವಂತೆ ಮಾಡಲಿಕ್ಕಾಗಿ ನಾನು ಏನನ್ನು ಹೇಳಲು ತಯಾರಿ ಮಾಡಸಾಧ್ಯವಿದೆ?’
ಶುಶ್ರೂಷಾ ಶಾಲೆಯಲ್ಲಿ, ಯಾರಿಗಾದರೂ ಸಾಕ್ಷಿ ನೀಡುವ ಪ್ರತ್ಯಕ್ಷಾಭಿನಯವನ್ನು ಮಾಡುವಂಥ ನೇಮಕವು ನಿಮಗೆ ಕೊಡಲ್ಪಟ್ಟಿರುವುದಾದರೆ, ನಿಮ್ಮ ಸಭಿಕರೇ ನಿಮ್ಮ ಮನೆಯವರಾಗಿರುವರು. ಬೇರೆ ಸಂದರ್ಭಗಳಲ್ಲಿ, ನೀವು ಇಡೀ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿರಬಹುದು.
ನಿಮ್ಮ ಸಭಿಕರಿಗೆ ಏನು ತಿಳಿದಿದೆ? ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಸಭಿಕರಿಗೆ ಭಾಷಣದ ವಿಷಯವಸ್ತುವಿನ ಕುರಿತು ಏನು ತಿಳಿದಿದೆ?’ ಅದು ನೀವು ಎಲ್ಲಿಂದ ನಿಮ್ಮ ಭಾಷಣವನ್ನು ವಿಕಸಿಸುತ್ತೀರೊ ಅದರ ಮೂಲಾಧಾರವಾಗಿರಬೇಕು. ಅನೇಕ ಪ್ರೌಢ ಕ್ರೈಸ್ತರಿರುವಂಥ ಒಂದು ಸಭೆಗೆ ನೀವು ಮಾತಾಡುತ್ತಿರುವುದಾದರೆ, ಅವರಲ್ಲಿ ಹೆಚ್ಚಿನವರಿಗೆ ಗೊತ್ತಿರುವ ಪ್ರಾಥಮಿಕ ಸತ್ಯಗಳನ್ನು ಸುಮ್ಮನೆ ಪುನರಾವರ್ತಿಸಬೇಡಿರಿ. ಈ ಪ್ರಾಥಮಿಕ ಸತ್ಯಗಳ ಅಸ್ತಿವಾರದ ಮೇಲೆ ನಿಮ್ಮ ಭಾಷಣವನ್ನು ಕಟ್ಟಿರಿ. ಆದರೆ ನಿಮ್ಮ ಸಭಿಕರಲ್ಲಿ ಅನೇಕ ಹೊಸ ಆಸಕ್ತ ಜನರೂ ಇರುವಲ್ಲಿ, ಆ ಎರಡೂ ಗುಂಪುಗಳ ಆವಶ್ಯಕತೆಗಳನ್ನು ನೀವು ಪರಿಗಣಿಸಬೇಕು.
ನಿಮ್ಮ ಸಭಿಕರಿಗೆ ಏನು ತಿಳಿದಿದೆಯೊ ಅದರ ಆಧಾರದ ಮೇಲೆ ನಿಮ್ಮ ಭಾಷಣದ ವೇಗವನ್ನು ಹೊಂದಿಸಿಕೊಳ್ಳಿರಿ. ಹೆಚ್ಚಿನವರಿಗೆ ಚಿರಪರಿಚಿತವಾಗಿರುವಂಥ ಕೆಲವು ವಿವರಗಳನ್ನು ನೀವು ಸೇರಿಸುವುದಾದರೆ, ಅವುಗಳನ್ನು ಬೇಗನೆ ಹೇಳಿ ಮುಗಿಸಿರಿ. ಆದರೆ ನಿಮ್ಮ ಕೇಳುಗರಲ್ಲಿ ಹೆಚ್ಚಿನವರಿಗೆ ಹೊಸದಾಗಿರಬಹುದಾದ ವಿಚಾರಗಳನ್ನು ಹೇಳುವಾಗ, ಅವರು ಅವುಗಳನ್ನು ಸ್ಪಷ್ಟವಾಗಿ ಗ್ರಹಿಸಸಾಧ್ಯವಾಗುವಂತೆ, ನಿಧಾನವಾಗಿ ಮಾತಾಡಿರಿ.
ಬೋಧಪ್ರದ ವಿಷಯ. ಬೋಧಪ್ರದವಾಗಿರುವುದೆಂದರೆ, ಸದಾ ಹೊಸ ವಿಷಯಗಳನ್ನು ಹೇಳುತ್ತಿರಬೇಕೆಂದು ಅರ್ಥವಲ್ಲ. ಕೆಲವು ಮಂದಿ ಭಾಷಣಕಾರರು ಕೆಲವು ಸುಪರಿಚಿತ ಸತ್ಯಗಳನ್ನು ಎಷ್ಟು ಸರಳತೆಯಿಂದ ಹೇಳುತ್ತಾರೆಂದರೆ, ಸಭಿಕರಲ್ಲಿ ಅನೇಕರು ಪ್ರಥಮ ಬಾರಿ ಅದನ್ನು ಕೇಳಿಸಿಕೊಂಡಾಗಲೇ ಅದರ ಪೂರ್ಣ ಅರ್ಥವನ್ನು ಗ್ರಹಿಸುತ್ತಾರೆ.
ಕ್ಷೇತ್ರ ಶುಶ್ರೂಷೆಯಲ್ಲಿ, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದನ್ನು ದೃಷ್ಟಾಂತಿಸಲಿಕ್ಕಾಗಿ ಯಾವುದೋ ಒಂದು ವಾರ್ತಾ ವಿಷಯವನ್ನು ಹೇಳುವುದಷ್ಟೇ ಸಾಕಾಗುವುದಿಲ್ಲ. ಆ ಘಟನೆಯ ಅರ್ಥವನ್ನು ತೋರಿಸಲಿಕ್ಕಾಗಿ ಬೈಬಲನ್ನು ಉಪಯೋಗಿಸಿರಿ. ಇದು ಮನೆಯವನಿಗೆ ನಿಜವಾಗಿಯೂ ಬೋಧಪ್ರದವಾಗಿರುವುದು. ತದ್ರೀತಿಯಲ್ಲಿ, ಒಂದು ಪ್ರಕೃತಿ ನಿಯಮದ ಕುರಿತೋ, ಸಸ್ಯ ಅಥವಾ ಪ್ರಾಣಿ ಜೀವನದ ಕುರಿತೋ ತುಸು ವಿವರಣೆಯನ್ನು ಕೊಡುವಾಗ, ಮನೆಯವನು ಈ ಹಿಂದೆ ಎಂದೂ ಕೇಳಿಸಿಕೊಂಡಿರದಂಥ ಒಂದು ಚಿತ್ತಾಕರ್ಷಕ ವೈಜ್ಞಾನಿಕ ನಿಜತ್ವವನ್ನು ತಿಳಿಸುವುದು ನಿಮ್ಮ ಗುರಿಯಾಗಿರಬಾರದು. ಅದಕ್ಕೆ ಬದಲಾಗಿ, ನಮ್ಮನ್ನು ಪ್ರೀತಿಸುವಂಥ ಸೃಷ್ಟಿಕರ್ತನೊಬ್ಬನಿದ್ದಾನೆಂದು ತೋರಿಸಲು ಪ್ರಾಕೃತಿಕ ರುಜುವಾತನ್ನು ಬೈಬಲಿನ ಹೇಳಿಕೆಗಳೊಂದಿಗೆ ಜೋಡಿಸುವುದೇ ನಿಮ್ಮ ಉದ್ದೇಶವಾಗಿರಬೇಕು. ಇದು ಮನೆಯವನಿಗೆ, ಅವನು ಒಂದು ಹೊಸ ದೃಷ್ಟಿಕೋನದಿಂದ ವಿಷಯವನ್ನು ನೋಡಲು ಸಹಾಯಮಾಡುವುದು.
ಈ ಹಿಂದೆ ಅನೇಕಸಲ ಕೇಳಿಸಿಕೊಂಡಿರುವ ವಿಷಯವಸ್ತುವನ್ನೇ ಸಭಿಕರಿಗೆ ಪುನಃ ಸಾದರಪಡಿಸುವುದು ಒಂದು ಪಂಥಾಹ್ವಾನವಾಗಿರಬಲ್ಲದು. ಆದರೆ ಒಬ್ಬ ಪರಿಣಾಮಕಾರಿ ಬೋಧಕನಾಗಿರಬೇಕಾದರೆ, ಇದನ್ನು ಯಶಸ್ವಿಕರವಾದ ರೀತಿಯಲ್ಲಿ ಹೇಗೆ ಮಾಡುವುದು ಎಂಬುದನ್ನು ನೀವು ಕಲಿಯಬೇಕು. ಇದನ್ನು ಹೇಗೆ ಮಾಡಬಹುದು?
ಸಂಶೋಧನೆಯು ಸಹಾಯಮಾಡುತ್ತದೆ ಎಂಬುದಂತೂ ಖಂಡಿತ. ನಿಮಗೆ ಸುಲಭವಾಗಿ ನೆನಪಿಗೆ ಬರುವಂಥ ನಿಜತ್ವಗಳನ್ನು ಮಾತ್ರ ನಿಮ್ಮ ಭಾಷಣದಲ್ಲಿ ಸೇರಿಸುವ ಬದಲಿಗೆ, ಪುಟಗಳು 33ರಿಂದ 38 ರ ವರೆಗೆ ಚರ್ಚಿಸಲ್ಪಟ್ಟಿರುವ ಸಂಶೋಧನಾ ಸಾಧನಗಳನ್ನು ಉಪಯೋಗಿಸಿರಿ. ನೀವು ಯಾವ ಉದ್ದೇಶಗಳನ್ನು ಸಾಧಿಸಲು ಪ್ರಯತ್ನಿಸಬೇಕೊ ಅದರ ಬಗ್ಗೆ ಅಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಸಂಶೋಧನೆ ಮಾಡುತ್ತಿರುವಾಗ, ಸಭಿಕರಿಗೆ ಸ್ವಲ್ಪವೇ ತಿಳಿದಿರುವ ಒಂದು ಐತಿಹಾಸಿಕ ಘಟನೆಯು ನಿಮ್ಮ ಭಾಷಣದ ವಿಷಯವಸ್ತುವಿಗೆ ನೇರವಾಗಿ ಸಂಬಂಧಿಸಿದೆ ಎಂಬುದನ್ನು ನೀವು ಕಂಡುಕೊಳ್ಳಬಹುದು. ಅಥವಾ, ನೀವು ಚರ್ಚಿಸಲು ಯೋಜಿಸುವ ಅಂಶವನ್ನು ದೃಷ್ಟಾಂತಿಸುವ ಇತ್ತೀಚಿನ ಒಂದು ವಾರ್ತಾ ಹೇಳಿಕೆಯು ನಿಮಗೆ ದೊರೆಯಬಹುದು.
ನೀವು ಸಂಗ್ರಹಿಸಿದ ವಿಷಯಗಳನ್ನು ಪರೀಕ್ಷಿಸುವಾಗ, ಏನು? ಏಕೆ? ಯಾವಾಗ? ಎಲ್ಲಿ? ಯಾರು? ಮತ್ತು ಹೇಗೆ? ಎಂಬಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ನಿಮ್ಮ ಸ್ವಂತ ಆಲೋಚನೆಯನ್ನು ಉದ್ರೇಕಿಸಿರಿ. ಉದಾಹರಣೆಗೆ: ಇದೇಕೆ ಸತ್ಯವಾಗಿದೆ? ನಾನು ಇದನ್ನು ಹೇಗೆ ರುಜುಪಡಿಸಬಲ್ಲೆ? ಯಾವ ಜನಪ್ರಿಯ ನಂಬಿಕೆಗಳು ಈ ಬೈಬಲ್ ಸತ್ಯವನ್ನು ಗ್ರಹಿಸುವುದನ್ನು ಕೆಲವರಿಗೆ ಕಷ್ಟಕರವಾಗಿ ಮಾಡುತ್ತವೆ? ಇದೇಕೆ ಪ್ರಾಮುಖ್ಯವಾಗಿದೆ? ಇದು ಒಬ್ಬ ವ್ಯಕ್ತಿಯ ಜೀವಿತವನ್ನು ಹೇಗೆ ಪ್ರಭಾವಿಸಬೇಕು? ಇದನ್ನು ಅನ್ವಯಿಸಿಕೊಳ್ಳುವುದರ ಪ್ರಯೋಜನವನ್ನು ಯಾವ ಉದಾಹರಣೆಯು ತೋರಿಸುತ್ತದೆ? ಈ ಬೈಬಲ್ ಸತ್ಯವು ಯೆಹೋವನ ವ್ಯಕ್ತಿತ್ವದ ಕುರಿತು ಏನನ್ನು ತಿಳಿಯಪಡಿಸುತ್ತದೆ? ನೀವು ಚರ್ಚಿಸುತ್ತಿರುವ ವಿಷಯಭಾಗದ ಮೇಲೆ ಹೊಂದಿಕೊಂಡು ನೀವು ಹೀಗೆ ಕೇಳಿಕೊಳ್ಳಬಹುದು: ಇದು ಯಾವಾಗ ನಡೆಯಿತು? ನಾವಿಂದು ಈ ವಿಷಯಭಾಗದ ಪ್ರಾಯೋಗಿಕ ಅನ್ವಯವನ್ನು ಹೇಗೆ ಮಾಡಬಲ್ಲೆವು? ನೀವು ಭಾಷಣವನ್ನು ಕೊಡುತ್ತಿರುವಾಗ, ಇಂತಹ ಕೆಲವು ಪ್ರಶ್ನೆಗಳನ್ನು ಹಾಕುತ್ತಾ, ಅವುಗಳಿಗೆ ಉತ್ತರವನ್ನು ಕೊಡುತ್ತಾ, ಭಾಷಣ ನೀಡಿಕೆಗೆ ಕಳೆದುಂಬಿಸಬಹುದು.
ನಿಮ್ಮ ಸಭಿಕರಿಗೆ ಚಿರಪರಿಚಿತವಾಗಿರುವಂಥ ಶಾಸ್ತ್ರವಚನಗಳನ್ನು ಉಪಯೋಗಿಸುವಂತೆ ನಿಮ್ಮ ಭಾಷಣವು ಅಗತ್ಯಪಡಿಸಬಹುದು. ಇವುಗಳನ್ನು ಉಪಯೋಗಿಸುವಾಗ ಅವು ಬೋಧಪ್ರದವಾಗಿರುವಂತೆ ನೀವು ಏನು ಮಾಡಬಲ್ಲಿರಿ? ಅವುಗಳನ್ನು ಕೇವಲ ಓದಬೇಡಿರಿ, ವಿವರಿಸಿ ಹೇಳಿ.
ಒಂದು ಚಿರಪರಿಚಿತ ವಚನದ ಚರ್ಚೆಯನ್ನು ಬೋಧಪ್ರದವಾಗಿ ಮಾಡಬಹುದಾದ ವಿಧವು, ನೀವು ಆ ವಚನವನ್ನು ಎರಡು ಭಾಗಗಳಾಗಿ ವಿಂಗಡಿಸಿ, ನಿಮ್ಮ ಭಾಷಣದ ಮುಖ್ಯ ವಿಷಯಕ್ಕೆ ಸಂಬಂಧಿಸುವ ವಿಭಾಗಗಳನ್ನು ಪ್ರತ್ಯೇಕಿಸಿ, ನಂತರ ಅವುಗಳನ್ನು ವಿವರಿಸುವುದೇ ಆಗಿದೆ. ಬೈಬಲಿನಲ್ಲಿ ಮೀಕ 6:8 ರಂತಹ ಒಂದು ವಚನದಲ್ಲಿರುವ ಸಾಧ್ಯತೆಗಳನ್ನು ಪರಿಗಣಿಸಿರಿ. ಅಲ್ಲಿ “ನ್ಯಾಯ” ಎಂದರೇನು? ಅಲ್ಲಿ ಯಾರ ನ್ಯಾಯದ ಮಟ್ಟವು ಚರ್ಚಿಸಲ್ಪಡುತ್ತಿದೆ? ‘ನ್ಯಾಯವನ್ನು ಆಚರಿಸುವುದು’ ಎಂಬುದರ ಅರ್ಥವನ್ನು ನೀವು ಹೇಗೆ ದೃಷ್ಟಾಂತಿಸುವಿರಿ? ಅಥವಾ ‘ದಯೆಯನ್ನು ಪ್ರೀತಿಸುವುದು’ ಎಂಬುದನ್ನು ಹೇಗೆ ದೃಷ್ಟಾಂತಿಸುವಿರಿ? ವಿನಯಶೀಲತೆ ಎಂದರೇನು? ಒಬ್ಬ ವೃದ್ಧ ವ್ಯಕ್ತಿಯ ಸಂಬಂಧದಲ್ಲಿ ಈ ವಿಷಯಭಾಗವನ್ನು ನೀವು ಹೇಗೆ ಅನ್ವಯಿಸುವಿರಿ? ಆದರೆ ನೀವು ವಾಸ್ತವವಾಗಿ ಉಪಯೋಗಿಸಲಿರುವ ಮಾಹಿತಿಯನ್ನು, ನಿಮ್ಮ ಮುಖ್ಯ ವಿಷಯ, ನಿಮ್ಮ ಉದ್ದೇಶ, ನಿಮ್ಮ ಸಭಿಕರು ಮತ್ತು ನಿಮಗೆ ಲಭ್ಯವಿರುವ ಸಮಯದಂಥ ಅಂಶಗಳು ನಿರ್ಧರಿಸಬೇಕು.
ಪದಗಳ ಅರ್ಥವನ್ನು ಸರಳವಾಗಿ ನಿರೂಪಿಸುವುದು ಅನೇಕವೇಳೆ ಸಹಾಯಕರವಾಗಿರುತ್ತದೆ. ಕೆಲವರಿಗೆ ಮತ್ತಾಯ 6:10 ರಲ್ಲಿ ಸೂಚಿಸಲ್ಪಟ್ಟಿರುವ “ರಾಜ್ಯ”ದ ಅರ್ಥವನ್ನು ತಿಳಿಯುವುದು ಕಣ್ಣು ತೆರೆಸುವ ಅನುಭವವಾಗಿರುತ್ತದೆ. ಒಂದು ಅರ್ಥನಿರೂಪಣೆಯನ್ನು ಜ್ಞಾಪಕಕ್ಕೆ ತರುವುದು, ದೀರ್ಘಕಾಲದಿಂದ ಕ್ರೈಸ್ತನಾಗಿರುವ ಒಬ್ಬ ವ್ಯಕ್ತಿಗೂ, ಆ ವಚನವು ವಾಸ್ತವದಲ್ಲಿ ಏನನ್ನುತ್ತಿದೆಯೆಂದು ಹೆಚ್ಚು ನಿಷ್ಕೃಷ್ಟವಾಗಿ ಗ್ರಹಿಸಲು ಸಹಾಯಮಾಡಬಲ್ಲದು. ನಾವು 2 ಪೇತ್ರ 1:5-8 ನ್ನು ಓದಿ, ನಂತರ ಆ ವಚನಗಳಲ್ಲಿರುವ ವಿವಿಧ ಗುಣಗಳ, ಅಂದರೆ ನಂಬಿಕೆ, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ಭಕ್ತಿ, ಸಹೋದರಸ್ನೇಹ ಮತ್ತು ಪ್ರೀತಿಯಂಥ ಗುಣಗಳ ಅರ್ಥನಿರೂಪಿಸುವಾಗ, ಇದು ಸ್ಪಷ್ಟವಾಗುತ್ತದೆ. ಅರ್ಥದಲ್ಲಿ ಪರಸ್ಪರವಾಗಿ ಅತಿವ್ಯಾಪಿಸುವ ಪದಗಳನ್ನು ಒಂದೇ ಸಂದರ್ಭದಲ್ಲಿ ಉಪಯೋಗಿಸುವಾಗ, ನೀವು ಅವುಗಳ ಅರ್ಥನಿರೂಪಣೆ ಮಾಡುವುದು, ಒಂದು ಪದಕ್ಕೂ ಇನ್ನೊಂದು ಪದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಸಹಾಯಕರವಾಗಬಲ್ಲದು. ಜ್ಞಾನೋಕ್ತಿ 2:1-6 ರಲ್ಲಿ ಉಪಯೋಗಿಸಿರುವ ವಿವೇಕ, ಜ್ಞಾನ, ಬುದ್ಧಿ ಮತ್ತು ತಿಳುವಳಿಕೆ ಎಂಬ ಪದಗಳ ವಿಷಯದಲ್ಲಿ ಇದು ಸತ್ಯವಾಗಿದೆ.
ನೀವು ಒಂದು ವಚನವನ್ನು ಕೇವಲ ತಾರ್ಕಿಕವಾಗಿ ವಿವರಿಸುವಲ್ಲಿ, ಅದನ್ನು ನಿಮ್ಮ ಸಭಿಕರು ಬೋಧಪ್ರದವಾಗಿ ಕಂಡುಕೊಳ್ಳಬಹುದು. 1 ಯೋಹಾನ 2:17 ರಲ್ಲಿ ತಿಳಿಸಲ್ಪಟ್ಟಿರುವ ಗತಿಸಿ ಹೋಗಲಿರುವ ಲೋಕವು ದೈವಭಕ್ತಿಯಿಲ್ಲದ ಜನರ ಲೋಕವಾಗಿದೆ, ಏಕೆಂದರೆ ಅಕ್ಷರಾರ್ಥ ಭೂಮಿಗೆ ಬಯಕೆಗಳಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಥಮವಾಗಿ ಗ್ರಹಿಸುವಾಗ, ಅದರಲ್ಲೂ ವಿಶೇಷವಾಗಿ ‘ಭೂಮಿಯು ಯುಗಯುಗಾಂತರಕ್ಕೂ ಕದಲದು’ ಎಂಬ ವಾಸ್ತವಾಂಶವನ್ನು ತಿಳಿಸುವ ಕೀರ್ತನೆ 104:5 ನ್ನು ಓದುವಾಗ ಅನೇಕರಿಗೆ ಆಶ್ಚರ್ಯವಾಗುತ್ತದೆ. ಒಂದು ಸಂದರ್ಭದಲ್ಲಿ ಯೇಸು, ಸದ್ದುಕಾಯರು ತಾವು ಯಾವ ವಚನವನ್ನು ನಂಬುತ್ತೇವೆಂದು ಹೇಳಿಕೊಳ್ಳುತ್ತಿದ್ದರೋ ಆ ವಿಮೋಚನಕಾಂಡ 3:6 ನ್ನೇ ಸೂಚಿಸಿ, ಬಳಿಕ ಅದನ್ನು ಮೃತರ ಪುನರುತ್ಥಾನಕ್ಕೆ ಅನ್ವಯಿಸುವ ಮೂಲಕ ಅವರನ್ನು ಆಶ್ಚರ್ಯಪಡಿಸಿದನು.—ಲೂಕ 20:37, 38.
ಕೆಲವೊಮ್ಮೆ ಒಂದು ಶಾಸ್ತ್ರವಚನದ ಪೂರ್ವಾಪರ ಸಂದರ್ಭವನ್ನು, ಆ ಬರವಣಿಗೆಯ ಸಮಯದಲ್ಲಿದ್ದ ಪರಿಸ್ಥಿತಿಗಳನ್ನು ಮತ್ತು ಅದನ್ನು ಹೇಳುತ್ತಿರುವವನು ಅಥವಾ ಆಲಿಸುತ್ತಿರುವವನು ಯಾರೆಂಬುದನ್ನು ಹೇಳುವುದು ತಿಳಿವಳಿಕೆ ನೀಡುವಂಥ ವಿಷಯವಾಗಿರುತ್ತದೆ. ಫರಿಸಾಯರಿಗೆ 110 ನೆಯ ಕೀರ್ತನೆ ಚೆನ್ನಾಗಿ ಪರಿಚಯವಿತ್ತು. ಆದರೂ ಯೇಸು, ಅಲ್ಲಿ ಒಂದನೆಯ ವಚನದಲ್ಲಿ ಕಂಡುಬರುವ ಪ್ರಮುಖ ವಿವರಕ್ಕೆ ಅವರ ಗಮನವನ್ನು ಸೆಳೆದನು. ಅವನು ಕೇಳಿದ್ದು: “ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು? ಎಂದು ಪ್ರಶ್ನೆಹಾಕಿದ್ದಕ್ಕೆ ಅವರು ಆತನಿಗೆ—ದಾವೀದನ ಮಗನು ಎಂದು ಹೇಳಲು ಆತನು—ಹಾಗಾದರೆ ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು [“ಯೆಹೋವನು,” NW] ನನ್ನ ಒಡೆಯನಿಗೆ ನುಡಿದನು ಎಂಬ ಮಾತಿನಲ್ಲಿ ದಾವೀದನು ಪವಿತ್ರಾತ್ಮಪ್ರೇರಿತನಾಗಿ ಆತನನ್ನು ಒಡೆಯನು ಅನ್ನುವದು ಹೇಗೆ? ದಾವೀದನು ಆತನನ್ನು ಒಡೆಯನೆಂದು ಹೇಳಿದ ಮೇಲೆ ಆತನು ಅವನಿಗೆ ಮಗನಾಗುವದು ಹೇಗೆ?” (ಮತ್ತಾ. 22:41-45) ಯೇಸು ಮಾಡಿದಂತೆ ನೀವು ಶಾಸ್ತ್ರವಚನದ ಕುರಿತು ತರ್ಕಸಮ್ಮತವಾಗಿ ಮಾತಾಡುವುದಾದರೆ, ಜನರು ದೇವರ ವಾಕ್ಯವನ್ನು ಹೆಚ್ಚು ಜಾಗರೂಕತೆಯಿಂದ ಓದುವಂತೆ ನೀವು ಅವರಿಗೆ ಸಹಾಯಮಾಡುವಿರಿ.
ಒಂದು ಬೈಬಲ್ ಪುಸ್ತಕದ ಬರವಣಿಗೆಯ ಸಮಯವನ್ನು ಅಥವಾ ಒಂದು ನಿರ್ದಿಷ್ಟ ಘಟನೆಯು ನಡೆದ ಸಮಯಾವಧಿಯನ್ನು ಭಾಷಣಕಾರನು ತಿಳಿಸುವಾಗ, ಆ ಸಮಯದಲ್ಲಿದ್ದ ಪರಿಸ್ಥಿತಿಗಳನ್ನೂ ಅವನು ವರ್ಣಿಸಬೇಕು. ಆ ರೀತಿಯಲ್ಲಿ, ಸಭಿಕರು ಆ ಪುಸ್ತಕದ ಅಥವಾ ಘಟನೆಯ ಪ್ರಮುಖತೆಯನ್ನು ಹೆಚ್ಚು ಸ್ಪಷ್ಟವಾಗಿ ಗ್ರಹಿಸುವರು.
ಹೋಲಿಕೆಗಳು ಸಹ ನೀವು ಏನು ಹೇಳುತ್ತೀರೋ ಅದನ್ನು ಹೆಚ್ಚು ಬೋಧಪ್ರದವಾಗಿ ಮಾಡಲು ಸಹಾಯಮಾಡಬಲ್ಲವು. ನೀವು ಒಂದು ಜನಪ್ರಿಯ ದೃಷ್ಟಿಕೋನವನ್ನು ಪರಿಗಣಿಸಿ, ಬೈಬಲು ಅದೇ ಅಂಶದ ಕುರಿತು ಏನನ್ನುತ್ತದೆ ಎಂಬುದರೊಂದಿಗೆ ಅದನ್ನು ಹೋಲಿಸಿ ವ್ಯತ್ಯಾಸ ತೋರಿಸಬಹುದು. ಅಥವಾ ಸದೃಶವಾಗಿರುವ ಎರಡು ಬೈಬಲ್ ವೃತ್ತಾಂತಗಳನ್ನು ನೀವು ಹೋಲಿಸಬಹುದು. ಅವುಗಳ ಮಧ್ಯೆ ಭಿನ್ನತೆಗಳಿವೆಯೊ? ಏಕಿವೆ? ಅವುಗಳಿಂದ ನಾವು ಏನು ಕಲಿಯಬಲ್ಲೆವು? ನೀವು ಹೀಗೆ ಮಾಡುವಲ್ಲಿ, ಅದು ನಿಮ್ಮ ಕೇಳುಗರಿಗೆ ನಿಮ್ಮ ವಿಷಯವಸ್ತುವಿನ ಕುರಿತು ಒಂದು ಹೊಸ ನೋಟವನ್ನು ಕೊಡಬಲ್ಲದು.
ಕ್ರೈಸ್ತ ಶುಶ್ರೂಷೆಯ ಯಾವುದೊ ಒಂದು ಅಂಶವನ್ನು ಚರ್ಚಿಸುವ ನೇಮಕವು ನಿಮಗೆ ಕೊಡಲ್ಪಟ್ಟಿರುವಲ್ಲಿ, ಅದರ ಸಾರಾಂಶವನ್ನು ಕೊಡುವ ಮೂಲಕ ಆರಂಭಿಸಿದರೆ, ನಿಮ್ಮ ಭಾಷಣವನ್ನು ಸಂಪದ್ಯುಕ್ತಗೊಳಿಸಬಹುದು. ಏನನ್ನು ಮಾಡಲಿಕ್ಕಿದೆ, ಅದನ್ನು ಏಕೆ ಮಾಡಬೇಕು, ಮತ್ತು ಯೆಹೋವನ ಸಾಕ್ಷಿಗಳೋಪಾದಿ ನಮ್ಮ ಎಲ್ಲ ಗುರಿಗಳಿಗೆ ಅದು ಹೇಗೆ ಸಂಬಂಧಿಸುತ್ತದೆ ಎಂಬುದನ್ನು ಚರ್ಚಿಸಿರಿ. ಆ ಬಳಿಕ ಆ ಕೆಲಸವನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಮಾಡಬೇಕೆಂಬುದನ್ನು ವಿವರಿಸಿರಿ.
“ದೇವರ” ಕೆಲವು “ಅಗಾಧವಾದ ವಿಷಯಗಳನ್ನು” ಚರ್ಚಿಸುವಂತೆ ನಿಮ್ಮ ಭಾಷಣವು ಕೇಳಿಕೊಳ್ಳುವುದಾದರೆ ಆಗೇನು? (1 ಕೊರಿಂ. 2:10) ಆಗ ನೀವು ಆ ಭಾಷಣದ ವಿಷಯವಸ್ತುವಿನ ಕೆಲವು ಮುಖ್ಯ ಭಾಗಗಳನ್ನು ಆರಂಭದಲ್ಲೇ ಗುರುತಿಸಿ ವಿವರಿಸುವುದಾದರೆ, ವಿವರಗಳು ಹೆಚ್ಚು ಸುಲಭವಾಗಿ ಅರ್ಥವಾಗುವವು. ಮತ್ತು ನೀವು ಸಮಾಪ್ತಿಗೆ ಬರುವಾಗ ನಿಮ್ಮ ವಿಷಯಭಾಗದ ಸಂಕ್ಷಿಪ್ತ ಸಾರಾಂಶವನ್ನು ಕೊಡುವುದಾದರೆ, ತಾವು ನಿಜವಾಗಿಯೂ ಕೆಲವು ಸಂಗತಿಗಳನ್ನು ಕಲಿತಿದ್ದೇವೆ ಎಂಬ ತೃಪ್ತಿಕರವಾದ ಅನುಭವವು ನಿಮ್ಮ ಸಭಿಕರಿಗಾಗುವುದು ಸಂಭವನೀಯ.
ಕ್ರಿಸ್ತೀಯ ಬದುಕಿನ ಸಂಬಂಧದಲ್ಲಿ ಸಲಹೆ. ನಿಮ್ಮ ಭಾಷಣದಲ್ಲಿರುವ ಮಾಹಿತಿಯು ಸಭಿಕರ ಜೀವಿತಗಳಿಗೆ ಹೇಗೆ ಅನ್ವಯಿಸುತ್ತದೆಂದು ನೋಡಲು ನೀವು ಅವರಿಗೆ ಸಹಾಯಮಾಡುವಲ್ಲಿ, ಅದರಿಂದ ಅವರಿಗೆ ವಿಶೇಷವಾಗಿ ಪ್ರಯೋಜನವಾಗುವುದು. ನಿಮಗೆ ನೇಮಿಸಲ್ಪಟ್ಟ ವಿಷಯಭಾಗದಲ್ಲಿರುವ ಶಾಸ್ತ್ರವಚನಗಳನ್ನು ನೀವು ಪರೀಕ್ಷಿಸುವಾಗ, ‘ಈ ಮಾಹಿತಿಯು ಶಾಸ್ತ್ರವಚನಗಳಲ್ಲಿ ನಮ್ಮ ದಿನಗಳ ವರೆಗೆ ಏಕೆ ಜೋಪಾನವಾಗಿ ಸಂರಕ್ಷಿಸಿಡಲ್ಪಟ್ಟಿದೆ?’ ಎಂದು ಸ್ವತಃ ಕೇಳಿಕೊಳ್ಳಿರಿ. (ರೋಮಾ. 15:4; 1 ಕೊರಿಂ. 10:11) ನಿಮ್ಮ ಸಭಿಕರು ಜೀವನದಲ್ಲಿ ಎದುರಿಸುತ್ತಿರುವ ಸನ್ನಿವೇಶಗಳ ಕುರಿತು ಯೋಚಿಸಿರಿ. ಆ ಸನ್ನಿವೇಶಗಳನ್ನು ಶಾಸ್ತ್ರವಚನಗಳು ಕೊಡುವ ಸಲಹೆ ಮತ್ತು ಮೂಲತತ್ತ್ವಗಳ ಬೆಳಕಿನಲ್ಲಿ ಪರಿಗಣಿಸಿರಿ. ನಿಮ್ಮ ಭಾಷಣದಲ್ಲಿ, ಅಂತಹ ಸನ್ನಿವೇಶಗಳನ್ನು ವಿವೇಕದಿಂದ ನಿಭಾಯಿಸಲು ಶಾಸ್ತ್ರವಚನಗಳು ಒಬ್ಬ ವ್ಯಕ್ತಿಗೆ ಹೇಗೆ ಸಹಾಯಮಾಡಬಲ್ಲವು ಎಂಬುದನ್ನು ತೋರಿಸಲಿಕ್ಕಾಗಿ ಶಾಸ್ತ್ರವಚನಗಳಿಂದ ತರ್ಕಿಸಿರಿ. ಮೇಲ್ಮೈ ಮಾಹಿತಿಯನ್ನು ಮಾತ್ರ ಕೊಡಬೇಡಿರಿ. ನಿರ್ದಿಷ್ಟ ಮನೋಭಾವಗಳು ಮತ್ತು ವರ್ತನೆಗಳ ಕುರಿತು ಚರ್ಚಿಸಿರಿ.
ನೀವು ತಯಾರಿಸುತ್ತಿರುವ ಭಾಷಣದಲ್ಲಿ, ಮೊದಲನೆಯದಾಗಿ ಈ ಮೇಲೆ ಕೊಡಲ್ಪಟ್ಟಿರುವ ಒಂದೊ ಎರಡೊ ಸಲಹೆಗಳನ್ನು ಅನ್ವಯಿಸಿರಿ. ನೀವು ಅನುಭವ ಪಡೆದಂತೆ, ಅವುಗಳಲ್ಲಿ ಇನ್ನೂ ಕೆಲವನ್ನು ಅನ್ವಯಿಸಿರಿ. ಸಮಯಾನಂತರ, ನಿಮ್ಮ ಭಾಷಣಗಳಿಗಾಗಿ ಸಭಿಕರು ಎದುರುನೋಡುವರು ಎಂಬುದು ನಿಮಗೆ ತಿಳಿದುಬರುವುದು. ಏಕೆಂದರೆ, ತಮಗೆ ನಿಜವಾಗಿಯೂ ಪ್ರಯೋಜನಕರವಾಗಿರುವ ವಿಷಯಗಳನ್ನು ತಾವು ಕೇಳಿಸಿಕೊಳ್ಳಸಾಧ್ಯವಿದೆ ಎಂಬ ಭರವಸೆ ಅವರಿಗಿರುವುದು.