ಅಧ್ಯಾಯ 12
ಯೆಹೋವನ ಕೆಲಸಕ್ಕೆ ಬೆಂಬಲ ಕೊಡುವ ವಿಧಗಳು
ಕಡೇ ದಿವಸಗಳ ಪ್ರವಾದನೆಯಲ್ಲಿ ಯೇಸು ಸಾರುವ ಕೆಲಸದ ಕುರಿತು ಮುನ್ನುಡಿದ ಮಾತುಗಳು ಇಂದು ನೆರವೇರುತ್ತಿವೆ. ಯೆಹೋವನ ಸಾಕ್ಷಿಗಳಾದ ನಾವು “ಭೂಮಿಯ ಕಟ್ಟಕಡೆಯ ವರೆಗೂ” ಸುವಾರ್ತೆ ಸಾರುತ್ತಿದ್ದೇವೆ. (ಅ. ಕಾ. 1:8; ಮತ್ತಾ. 24:14) ಅದಕ್ಕಾಗಿ ನಮ್ಮೆಲ್ಲ ಸಮಯ, ಶಕ್ತಿಯನ್ನು ಬಳಸುತ್ತಿದ್ದೇವೆ. ನಾವು ಯೆಹೋವನ ಸೇವೆಗೆ ಜೀವನದಲ್ಲಿ ಮೊದಲ ಸ್ಥಾನ ಕೊಡುವಾಗ, ಆತನು ತನ್ನ ಜೊತೆಕೆಲಸಗಾರರಾದ ನಮಗೆ ಅಗತ್ಯವಿರುವುದನ್ನು ಕೊಟ್ಟೇ ಕೊಡುತ್ತಾನೆಂಬ ಭರವಸೆ ನಮಗಿದೆ. (ಮತ್ತಾ. 6:25-34; 1 ಕೊರಿಂ. 3:5-9) ಯೆಹೋವನು ಸಾರುವ ಕೆಲಸವನ್ನು ಮೆಚ್ಚಿದ್ದಾನೆ ಮತ್ತು ಆಶೀರ್ವದಿಸುತ್ತಿದ್ದಾನೆ ಎನ್ನುವುದು ಅದರ ಫಲಿತಾಂಶಗಳಿಂದ ಗೊತ್ತಾಗುತ್ತಿದೆ.
ಲೋಕವ್ಯಾಪಕ ಸಾರುವ ಕಾರ್ಯಕ್ಕೆ ಹಣ ಎಲ್ಲಿಂದ?
2 ಜನರು ನಮ್ಮ ಸಾರುವ ಕಾರ್ಯವನ್ನು ಹಾಗೂ ನಾವು ಉಚಿತವಾಗಿ ಬೈಬಲ್, ಬೈಬಲ್ ಸಾಹಿತ್ಯ ಕೊಡುವುದನ್ನು ನೋಡಿ ‘ಈ ಕೆಲಸಕ್ಕೆ ಹಣ ಹೇಗೆ ಬರುತ್ತೆ?’ ಎಂದು ಆಶ್ಚರ್ಯದಿಂದ ಕೇಳುತ್ತಾರೆ. ಸಾಹಿತ್ಯವನ್ನು ತಯಾರಿಸಿ ಮುದ್ರಿಸಲು ಖರ್ಚಾಗುತ್ತದೆ. ಅಷ್ಟೇ ಅಲ್ಲ ಬೆತೆಲ್ ಗೃಹಗಳನ್ನು ಕಟ್ಟಲು, ಸುಸ್ಥಿತಿಯಲ್ಲಿಡಲು ಹಣ ಬೇಕಾಗುತ್ತದೆ. ಜೊತೆಗೆ ಅಲ್ಲಿ ಮುದ್ರಣ ಯಂತ್ರಗಳನ್ನು ನಿರ್ವಹಿಸುವವರ, ಸಾರುವ ಕೆಲಸದ ಮೇಲ್ವಿಚಾರಣೆ ಮಾಡುವವರ ಮತ್ತು ಸಾರುವ ಕೆಲಸವನ್ನು ಬೆಂಬಲಿಸಲು ಬೇರೆ ಬೇರೆ ಕೆಲಸಗಳನ್ನು ಮಾಡುವವರ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಅಲ್ಲದೆ ಸಂಚರಣ ಮೇಲ್ವಿಚಾರಕರು, ಮಿಷನರಿಗಳು, ವಿಶೇಷ ಪಯನೀಯರರು ಮತ್ತು ಇತರ ವಿಶೇಷ ಪೂರ್ಣ ಸಮಯದ ಸೇವೆ ಮಾಡುವವರಿಗೆ ಸೇವೆಯನ್ನು ಮುಂದುವರಿಸಲು ಸ್ವಲ್ಪ ಹಣ ಮತ್ತು ಅಗತ್ಯವಿರುವ ಸಹಾಯವನ್ನು ನೀಡಲಾಗುತ್ತದೆ. ಹೀಗೆ ಇಂದು ಸ್ಥಳೀಯವಾಗಿಯೂ ಲೋಕವ್ಯಾಪಕವಾಗಿಯೂ ಸಾರುವ ಕಾರ್ಯಕ್ಕೆ ತುಂಬ ಹಣ ಖರ್ಚಾಗುತ್ತಿದೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ?
3 ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಾದ ನಾವು ನೀಡುವ ಬೈಬಲ್ ಶಿಕ್ಷಣವನ್ನು ಅನೇಕರು ಮೆಚ್ಚಿ ಖುಷಿಯಿಂದ ಕಾಣಿಕೆಗಳನ್ನು ಕೊಡುತ್ತಾರೆ. ಹಾಗಿದ್ದರೂ, ಈ ಕೆಲಸವನ್ನು ಮುಖ್ಯವಾಗಿ ಬೆಂಬಲಿಸುತ್ತಿರುವುದು ನಾವೇ. ನಮ್ಮಲ್ಲಿ ಕೆಲವರು ಮನಃಪೂರ್ವಕ ಕಾಣಿಕೆಗಳನ್ನು ನೇರವಾಗಿ ಸ್ಥಳೀಯ ಶಾಖೆಗೆ ಕಳುಹಿಸುತ್ತಾರೆ. ಪ್ರಾಚೀನ ಕಾಲದಲ್ಲಿ ದೇವದರ್ಶನ ಗುಡಾರವನ್ನು ಕಟ್ಟುವಾಗ ಇಸ್ರಾಯೇಲ್ಯರು ಪೂರ್ಣಮನಸ್ಸಿನಿಂದ ಉದಾರವಾಗಿ ಕಾಣಿಕೆಗಳನ್ನು ಕೊಟ್ಟರು. ಅದೇ ಮನೋಭಾವ ಇಂದು ಯೆಹೋವನ ಜನರಲ್ಲೂ ಇದೆ. (ವಿಮೋ. 35:20-29; 1 ಪೂರ್ವ. 29:9) ಸಭೆಗಳು, ಸಂಚರಣ ವಿಭಾಗಗಳು ಸಹ ಕಾಣಿಕೆಗಳನ್ನು ಕಳುಹಿಸುತ್ತವೆ. ಕೆಲವರು ತಮ್ಮ ಮನೆ, ಜಮೀನು, ಆಸ್ತಿ, ಸ್ವತ್ತು ಇವೆಲ್ಲ ತಮ್ಮ ಮರಣದ ನಂತರ ಸಂಘಟನೆಗೆ ಸೇರಬೇಕೆಂದು ಉಯಿಲು ಬರೆಯುತ್ತಾರೆ. ಈ ಎಲ್ಲ ಹಣವನ್ನು ಸಾರುವ ಕೆಲಸ ಮುಂದುವರಿಸಲು ಬಳಸಲಾಗುತ್ತದೆ.
ನಮ್ಮಲ್ಲಿರುವ ಹಣ, ವಸ್ತು, ಆಸ್ತಿಯನ್ನು ಸಾರುವ ಕೆಲಸಕ್ಕಾಗಿ ಬಳಸುವುದನ್ನು ನಾವು ಸುಯೋಗವಾಗಿ ಕಾಣುತ್ತೇವೆ
4 ನಮ್ಮಲ್ಲಿರುವ ಹಣ, ವಸ್ತು, ಆಸ್ತಿಯನ್ನು ಸಾರುವ ಕೆಲಸಕ್ಕಾಗಿ ಬಳಸುವುದನ್ನು ನಾವು ಸುಯೋಗವಾಗಿ ಕಾಣುತ್ತೇವೆ. ಒಂದನೇ ಶತಮಾನದಲ್ಲಿ ಸಾರುವ ಕೆಲಸಕ್ಕೆ ಹಣ ಹೇಗೆ ಸಿಗುತ್ತಿತ್ತು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಗಮನಿಸಿ. ಯೇಸು ಮತ್ತು ಅವನ ಶಿಷ್ಯರ ಬಳಿ ಒಂದು ಕಾಣಿಕೆ ಪೆಟ್ಟಿಗೆ ಇತ್ತು. ಇದರಲ್ಲಿ ಅವರು ತಮ್ಮ ಮತ್ತು ಇತರರ ಕಾಣಿಕೆಗಳನ್ನು ಹಾಕುತ್ತಿದ್ದರು ಮತ್ತು ಆ ಹಣದಿಂದ ಅಗತ್ಯದ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. (ಯೋಹಾ. 13:29) ಕೆಲವು ಸ್ತ್ರೀಯರು ಯೇಸುವಿಗೆ ಮತ್ತು ಅವನ ಶಿಷ್ಯರಿಗೆ ತಮ್ಮ ಸ್ವತ್ತುಗಳಿಂದ ಉಪಚಾರ ಮಾಡಿದರು. (ಮಾರ್ಕ 15:40, 41; ಲೂಕ 8:3) ಸುವಾರ್ತೆ ಇನ್ನೂ ಹೆಚ್ಚು ಸಾರಲ್ಪಡಬೇಕೆಂದು ಹಾರೈಸಿದವರು ಮತ್ತು ಸಾರುವುದರಲ್ಲಿ ಭಾಗವಹಿಸಲು ಬಯಸಿದವರು ಅಪೊಸ್ತಲ ಪೌಲನಿಗೆ ಪ್ರೀತಿಯಿಂದ ಕಾಣಿಕೆಗಳನ್ನು, ವಸ್ತುಗಳನ್ನು ಕೊಟ್ಟರು. ಅದಕ್ಕವನು ತುಂಬ ಕೃತಜ್ಞನಾಗಿದ್ದನು. (ಫಿಲಿ. 4:14-16; 1 ಥೆಸ. 2:9) ಆ ಕ್ರೈಸ್ತರಂತೆಯೇ ಇಂದು ಯೆಹೋವನ ಸಾಕ್ಷಿಗಳು ಉದಾರವಾಗಿ ಕಾಣಿಕೆಗಳನ್ನು ಕೊಡುತ್ತಾರೆ, ಹುರುಪಿನಿಂದ ಸೇವೆ ಮಾಡುತ್ತಾರೆ. ಹೀಗೆ ಲೋಕದಲ್ಲೆಲ್ಲ ಇರುವ ಒಳ್ಳೇ ಮನಸ್ಸಿನ ಜನರಿಗೆ “ಜೀವಜಲವನ್ನು ಉಚಿತವಾಗಿ” ಕೊಡಲು ಆಗುತ್ತಿದೆ.—ಪ್ರಕ. 22:17.
ಸಭೆಯ ಖರ್ಚುವೆಚ್ಚಗಳನ್ನು ನೋಡಿಕೊಳ್ಳುವ ವಿಧ
5 ಸ್ಥಳೀಯ ಸಭೆಯ ಖರ್ಚುವೆಚ್ಚಗಳನ್ನು ಸಹ ಸ್ವಇಷ್ಟದಿಂದ ಕೊಡುವ ಕಾಣಿಕೆಗಳಿಂದಲೇ ನೋಡಿಕೊಳ್ಳಲಾಗುತ್ತದೆ. ಸಭಾಗೃಹದಲ್ಲಿ ಚಂದಾ ಎತ್ತುವುದಿಲ್ಲ ಅಥವಾ ಇಷ್ಟೇ ಹಣ ಕೊಡಬೇಕೆಂದು ಒತ್ತಾಯಿಸುವುದಿಲ್ಲ, ಕಾಣಿಕೆ ಹಾಕಿದ್ದೀರಾ ಇಲ್ಲವಾ ಎಂದು ಪರೀಕ್ಷಿಸುವುದೂ ಇಲ್ಲ. ಬದಲಿಗೆ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿರುತ್ತದೆ. ಅದರಲ್ಲಿ ಪ್ರತಿಯೊಬ್ಬರು “ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರ” ಕಾಣಿಕೆ ಹಾಕಬಹುದು.—2 ಕೊರಿಂ. 9:7.
6 ಕಾಣಿಕೆಯಾಗಿ ಬಂದ ಹಣವನ್ನು ಮುಖ್ಯವಾಗಿ ರಾಜ್ಯ ಸಭಾಗೃಹದ ನಿರ್ವಹಣೆಗೆ ಮತ್ತು ಅದನ್ನು ಸುಸ್ಥಿತಿಯಲ್ಲಿಡಲು ಬಳಸಲಾಗುತ್ತದೆ. ಅದರಲ್ಲಿ ಸ್ವಲ್ಪ ಹಣವನ್ನು ಲೋಕವ್ಯಾಪಕ ಸಾರುವ ಕೆಲಸಕ್ಕಾಗಿ ಶಾಖೆಗೆ ಕಳುಹಿಸಲು ಸಹ ಹಿರಿಯರು ನಿರ್ಧರಿಸಬಹುದು. ಇದನ್ನು ಸಭೆಗೆ ತಿಳಿಸಿ ಅವರ ಒಪ್ಪಿಗೆ ಪಡೆಯಲಾಗುತ್ತದೆ. ಹೀಗೆ ಅನೇಕ ಸಭೆಗಳು ಲೋಕವ್ಯಾಪಕ ಕೆಲಸಕ್ಕೆ ಕ್ರಮವಾಗಿ ಕಾಣಿಕೆಗಳನ್ನು ಕಳುಹಿಸುತ್ತವೆ. ಸ್ಥಳೀಕವಾಗಿ ಆಗುವ ಖರ್ಚುಗಳ ಬಗ್ಗೆ ಮತ್ತು ತಾವು ಅದಕ್ಕೆ ಹೇಗೆ ಸಹಾಯ ನೀಡಬಹುದೆಂಬ ಬಗ್ಗೆ ಎಲ್ಲರಿಗೆ ತಿಳಿದಿದ್ದರೆ ಕಾಣಿಕೆಗಳನ್ನು ಕೊಡುವಂತೆ ಪದೇಪದೇ ಪ್ರಕಟಣೆ ಮಾಡುವ ಅಗತ್ಯವಿಲ್ಲ.
ಕಾಣಿಕೆಗಳ ನಿರ್ವಹಣೆ
7 ಪ್ರತಿ ಕೂಟದ ನಂತರ, ಇಬ್ಬರು ಸಹೋದರರು ಕಾಣಿಕೆ ಪೆಟ್ಟಿಗೆಯಲ್ಲಿರುವ ಹಣವನ್ನು ತೆಗೆದು ಮೊತ್ತವನ್ನು ದಾಖಲಿಸುತ್ತಾರೆ. (2 ಅರ. 12:9, 10; 2 ಕೊರಿಂ. 8:20) ಆ ಹಣವನ್ನು ಸಭೆಗಾಗಿ ಖರ್ಚುಮಾಡುವ ವರೆಗೆ ಅಥವಾ ಶಾಖೆಗೆ ಕಳುಹಿಸುವ ವರೆಗೆ ಭದ್ರವಾಗಿಡಲು ಹಿರಿಯರ ಮಂಡಲಿ ಸೂಕ್ತ ಏರ್ಪಾಡುಗಳನ್ನು ಮಾಡುತ್ತದೆ. ಸಭೆಯ ಲೆಕ್ಕಪತ್ರ ನೋಡಿಕೊಳ್ಳುವ ಸಹೋದರನು ತಿಂಗಳಿನ ಕೊನೆಯಲ್ಲಿ ಆ ತಿಂಗಳಿನ ಲೆಕ್ಕಾಚಾರದ ಸಂಪೂರ್ಣ ಪಟ್ಟಿಯನ್ನು ತಯಾರಿಸುತ್ತಾನೆ ಮತ್ತು ಅದನ್ನು ಸಭೆಯ ಗಮನಕ್ಕೆ ತರಲಾಗುತ್ತದೆ. ಸಂಯೋಜಕನು ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕಪತ್ರಗಳ ಪರಿಶೀಲನೆಗೆ (ಆಡಿಟ್) ಏರ್ಪಾಡು ಮಾಡುವನು.
ಸರ್ಕಿಟಿನ ಖರ್ಚುವೆಚ್ಚಗಳು
8 ಸಮ್ಮೇಳನಕ್ಕಾಗಿ ಮತ್ತು ಸರ್ಕಿಟಿನ ಬೇರೆ ಖರ್ಚುವೆಚ್ಚಗಳನ್ನು ಆಯಾ ಸರ್ಕಿಟಿನ ಸಹೋದರರು ಕೊಡುವ ಕಾಣಿಕೆಗಳಿಂದ ಭರಿಸಲಾಗುತ್ತದೆ. ಸಮ್ಮೇಳನ ಸಭಾಂಗಣದಲ್ಲಿ ಅಲ್ಲಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿರುತ್ತದೆ. ಎಲ್ಲರೂ ತಾವು ಕೊಡಲಿಚ್ಛಿಸುವ ಕಾಣಿಕೆಯನ್ನು ಅದರಲ್ಲಿ ಹಾಕಬಹುದು. ಬೇರೆ ಸಮಯದಲ್ಲಿ ಆಗುವ ಖರ್ಚುಗಳನ್ನು ಸ್ಥಳೀಯ ಸಭೆಗಳು ಕೊಡುವ ಕಾಣಿಕೆಗಳಿಂದ ಭರಿಸಲಾಗುತ್ತದೆ.
9 ಈ ಕಾಣಿಕೆಗಳಿಂದ ಸರ್ಕಿಟಿಗೆ ಆಗೋ ಖರ್ಚುಗಳನ್ನು ನೋಡಿಕೊಳ್ಳಬೇಕು. ಮಿಕ್ಕಿರೋ ಹಣವನ್ನು ಲೋಕವ್ಯಾಪಕ ಕೆಲಸಕ್ಕೆ ಕೊಡಬೇಕು. ಕೆಲವೊಮ್ಮೆ ಸಮ್ಮೇಳನದ ಖರ್ಚುಗಳನ್ನು ಭರಿಸಲು, ಮುಂದಿನ ಸಮ್ಮೇಳನಕ್ಕಾಗಿ ಸಭಾಂಗಣವನ್ನು ಕಾದಿರಿಸಲು ಇಲ್ಲವೆ ಅದಕ್ಕೆ ಸಂಬಂಧಿಸಿದ ಬೇರೆ ಖರ್ಚುಗಳಿಗೆ ಖಾತೆಯಲ್ಲಿ ಹಣ ಇರಲಿಕ್ಕಿಲ್ಲ. ಆಗ ಕಾಣಿಕೆಗಳನ್ನು ಕೊಡುವ ಸುಯೋಗವಿದೆಯೆಂದು ಸಂಚರಣ ಮೇಲ್ವಿಚಾರಕನು ಸಭೆಗಳಿಗೆ ತಿಳಿಸಬಹುದು. ಪ್ರತಿ ಸಭೆಯ ಹಿರಿಯರ ಮಂಡಲಿಯು ಈ ವಿಷಯವನ್ನು ಚರ್ಚಿಸಿ ತಮ್ಮ ಸಭೆಯಿಂದ ಎಷ್ಟು ಹಣ ಕೊಡಲು ಆಗುತ್ತದೆಂದು ನಿರ್ಧರಿಸಬಹುದು. ಅನಂತರ ಅದನ್ನು ಸಭೆಗೆ ತಿಳಿಸಿ ಒಪ್ಪಿಗೆ ಪಡೆದು ಹಣವನ್ನು ಕಳುಹಿಸಬಹುದು.
10 ಹಣಕಾಸಿನ ಬಗ್ಗೆ ಏನಾದರೂ ಚರ್ಚೆ ಮಾಡಬೇಕಿದ್ದರೆ ಅದನ್ನು ಸರ್ಕಿಟಿನಲ್ಲಿರುವ ಎಲ್ಲಾ ಹಿರಿಯರಿಗೆ ತಿಳಿಸುತ್ತಾರೆ ಮತ್ತು ಸರ್ಕಿಟ್ ಸಮ್ಮೇಳನದಲ್ಲಿ ಇದರ ಬಗ್ಗೆ ಹಿರಿಯರ ಕೂಟ ನಡೆಸಲಾಗುತ್ತದೆ. ಸಾಮಾನ್ಯವಾಗಿ ಆಗೋ ಸರ್ಕಿಟ್ ಖರ್ಚುಗಳನ್ನು ಬಿಟ್ಟು ಬೇರೆ ಯಾವುದೇ ಖರ್ಚುಗಳನ್ನು ಮಾಡುವ ಮುಂಚೆ ಹಿರಿಯರೆಲ್ಲರು ಸೇರಿ ಮಾತಾಡಬೇಕು. ಯಾವುದೇ ಖರ್ಚನ್ನು ಭರಿಸಲು ಖಾತೆಯಲ್ಲಿರುವ ಹಣ ಬಳಸುವ ಮುಂಚೆ ಪ್ರತಿ ಸಾರಿ ಖರ್ಚಿನ ಮೊತ್ತವನ್ನು ಠರಾವಿನಲ್ಲಿ ಬರೆದು ಹಿರಿಯರೆಲ್ಲರ ಒಪ್ಪಿಗೆ ಪಡೆಯಬೇಕು.
11 ಸರ್ಕಿಟ್ ಅಕೌಂಟ್‌ಗಳನ್ನು ಕ್ರಮಬದ್ಧವಾಗಿ ಆಡಿಟ್ ಮಾಡಲು ಸೂಕ್ತ ಏರ್ಪಾಡುಗಳನ್ನು ಮಾಡಲಾಗುತ್ತದೆ.
ಬಡ ಸಹೋದರರಿಗೆ ಸಹಾಯ
12 ಯೇಸು ಮತ್ತು ಅವನ ಶಿಷ್ಯರು ಕಾಣಿಕೆ ಪೆಟ್ಟಿಗೆ ಇಟ್ಟುಕೊಂಡದ್ದರ ಒಂದು ಉದ್ದೇಶ ಬಡವರಿಗೆ ಸಹಾಯ ಮಾಡುವುದಾಗಿತ್ತು. (ಮಾರ್ಕ 14:3-5; ಯೋಹಾ. 13:29) “ಬಡವರು ಯಾವಾಗಲೂ ನಿಮ್ಮ ಬಳಿ ಇರುತ್ತಾರೆ” ಎಂಬ ಯೇಸುವಿನ ಮಾತುಗಳಿಂದ ಈಗಲೂ ಬಡವರಿಗೆ ಸಹಾಯ ಮಾಡುವ ಹೊಣೆ ಕ್ರೈಸ್ತರಿಗಿದೆಯೆಂದು ಗೊತ್ತಾಗುತ್ತದೆ. (ಮಾರ್ಕ 14:7) ಈ ಹೊಣೆಯನ್ನು ನಾವು ಹೇಗೆ ಪೂರೈಸುತ್ತಿದ್ದೇವೆ?
13 ಕೆಲವೊಮ್ಮೆ ಸಭೆಯಲ್ಲಿರುವ ನಂಬಿಗಸ್ತ ಸಹೋದರ-ಸಹೋದರಿಯರಿಗೆ ಹಣ ಅಥವಾ ಇನ್ನಿತರ ಸಹಾಯ ಬೇಕಾಗಿರುತ್ತದೆ. ವೃದ್ಧಾಪ್ಯ, ದೇಹದೌರ್ಬಲ್ಯ ಅಥವಾ ನಿಭಾಯಿಸಲು ಆಗದಂಥ ಕಷ್ಟದ ಪರಿಸ್ಥಿತಿ ಇದಕ್ಕೆ ಕಾರಣವಾಗಿರಬಹುದು. ಇಂಥವರಿಗೆ ಅವರ ಕುಟುಂಬದವರು, ಸಂಬಂಧಿಕರು ಮತ್ತು ಅಗತ್ಯವನ್ನು ಅರಿತವರು ನೆರವು ನೀಡಲು ಮುಂದೆ ಬರುತ್ತಾರೆ. ಅಪೊಸ್ತಲ ಯೋಹಾನನ ಈ ಮಾತಿನಂತೆ ಅವರು ನಡೆಯುತ್ತಾರೆ: “ಜೀವನಾಧಾರಕ್ಕಾಗಿ ಈ ಲೋಕದ ಸಂಪತ್ತನ್ನು ಹೊಂದಿರುವ ಯಾವನಾದರೂ ತನ್ನ ಸಹೋದರನು ಕೊರತೆಯಲ್ಲಿರುವುದನ್ನು ನೋಡಿದಾಗ್ಯೂ ಕೋಮಲ ಸಹಾನುಭೂತಿಯ ದ್ವಾರವನ್ನು ಅವನಿಗೆ ಮುಚ್ಚಿಬಿಡುವುದಾದರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ? ಚಿಕ್ಕ ಮಕ್ಕಳೇ, ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ.” (1 ಯೋಹಾ. 3:17, 18; 2 ಥೆಸ. 3:6-12) ನಂಬಿಗಸ್ತ ಸಹೋದರರಿಗೆ ಹಣಸಹಾಯ ಮಾಡುವುದು ಯೆಹೋವ ದೇವರಿಗೆ ನಾವು ಸಲ್ಲಿಸುವ ಆರಾಧನೆಯ ಒಂದು ಭಾಗವಾಗಿದೆ.—ಯಾಕೋ. 1:27; 2:14-17.
14 ಸಹಾಯದ ಅಗತ್ಯವಿರುವ ಅರ್ಹ ವ್ಯಕ್ತಿಗಳಿಗೆ ನೆರವು ನೀಡುವ ಬಗ್ಗೆ ಪೌಲನು 1 ತಿಮೊಥೆಯ 5:3-21ರಲ್ಲಿ ತಿಳಿಸಿದ್ದಾನೆ. ಅಲ್ಲಿ ಹೇಳಿದಂತೆ ಪ್ರತಿಯೊಬ್ಬ ಕ್ರೈಸ್ತನು ತನ್ನ ಮನೆಮಂದಿಗೆ ಅಗತ್ಯವಿರುವುದನ್ನು ಒದಗಿಸಬೇಕು. ವಯಸ್ಸಾದವರನ್ನು, ದೇಹದೌರ್ಬಲ್ಯ ಇರುವವರನ್ನು ನೋಡಿಕೊಳ್ಳುವ ಜವಾಬ್ದಾರಿ ಮುಖ್ಯವಾಗಿ ಅವರ ಮಕ್ಕಳು, ಮೊಮ್ಮಕ್ಕಳು ಅಥವಾ ಹತ್ತಿರದ ಸಂಬಂಧಿಕರದ್ದು. ಕೆಲವು ದೇಶಗಳಲ್ಲಿ ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಇಂಥವರಿಗೆಂದೇ ಸೇವಾಸೌಲಭ್ಯಗಳನ್ನು ಮಾಡಿರುತ್ತವೆ. ಅದನ್ನು ಪಡೆಯಲು ಕುಟುಂಬದವರು ಅಥವಾ ಇತರರು ಸಹಾಯಮಾಡಬಹುದು. ಆದರೆ ಕೆಲವರಿಗೆ ಕುಟುಂಬದವರು, ಸಂಬಂಧಿಕರು ಯಾರೂ ಇರಲಿಕ್ಕಿಲ್ಲ, ಸರ್ಕಾರದಿಂದಲೂ ಯಾವುದೇ ಸೇವಾಸೌಲಭ್ಯ ಇಲ್ಲದಿರಬಹುದು. ಆಗ ಅವರಿಗೆ ನೆರವನ್ನು ನೀಡಲು ಹಿರಿಯರ ಮಂಡಲಿಯು ಯೋಜನೆ ಮಾಡಬೇಕು. ಈ ರೀತಿ ಕಷ್ಟದಲ್ಲಿರುವವರಿಗಾಗಿ ತಮ್ಮ ಹಣ ಸಂಪನ್ಮೂಲ ಬಳಸುವುದನ್ನು ಕ್ರೈಸ್ತರು ಒಂದು ಸುಯೋಗವಾಗಿ ಕಾಣಬೇಕು.
15 ಹಿಂಸೆ, ಯುದ್ಧ, ಭೂಕಂಪ, ನೆರೆ, ಬರಗಾಲ, ಇತರ ಆಪತ್ತುಗಳು ಈ ಕಡೇ ದಿವಸಗಳಲ್ಲಿ ಸಾಮಾನ್ಯ. ಇವುಗಳಿಗೆ ತುತ್ತಾದ ಸಹೋದರರಿಗೆ ಸಹಾಯ ಬೇಕಿರುತ್ತದೆ. (ಮತ್ತಾ. 24:7-9) ಅಲ್ಲಿನ ಸಭೆಗಳಲ್ಲೂ ಒಬ್ಬರು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಏನೂ ಇರಲಿಕ್ಕಿಲ್ಲ. ಹಾಗಾಗಿ ಬೇರೆ ಕಡೆಗಳಲ್ಲಿರುವ ಸಹೋದರರು ನೆರವು ನೀಡುವಂತೆ ಆಡಳಿತ ಮಂಡಲಿ ಯೋಜನೆ ಮಾಡುತ್ತದೆ. ಒಂದನೇ ಶತಮಾನದಲ್ಲಿ ಯೂದಾಯದಲ್ಲಿ ಕ್ಷಾಮ ಬಂದಾಗ ಅಲ್ಲಿನ ಕ್ರೈಸ್ತರಿಗೆ ಆಹಾರ ಸಿಗುವಂತೆ ಏಷ್ಯಾ ಮೈನರ್‌ನಲ್ಲಿದ್ದ ಕ್ರೈಸ್ತರು ಸಹಾಯಮಾಡಿದರು. (1 ಕೊರಿಂ. 16:1-4; 2 ಕೊರಿಂ. 9:1-5) ಅದೇ ಮಾದರಿಯನ್ನು ನಾವಿಂದು ಅನುಸರಿಸುವ ಮೂಲಕ ಸಹೋದರರ ಮೇಲೆ ನಮಗೆ ಪ್ರೀತಿ ಇದೆಯೆಂದು ಮತ್ತು ಯೇಸು ಕ್ರಿಸ್ತನ ನಿಜ ಶಿಷ್ಯರೆಂದು ತೋರಿಸಿಕೊಡುತ್ತೇವೆ.—ಯೋಹಾ. 13:35.
ಪುಸ್ತಕ, ಪತ್ರಿಕೆ ಇತ್ಯಾದಿಗಳ ವಿತರಣೆ
16 ದೇವರ ರಾಜ್ಯದ ಸುವಾರ್ತೆಯನ್ನು ಲೋಕದಲ್ಲೆಲ್ಲ ಹಬ್ಬಿಸುವುದರಲ್ಲಿ ಬೈಬಲ್ ಮತ್ತು ಬೈಬಲ್ ಆಧರಿತ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸಭೆಯಲ್ಲಿ ಹಿರಿಯರ ಮಂಡಲಿಯು ಒಬ್ಬ ಸಹಾಯಕ ಸೇವಕನನ್ನು ಪುಸ್ತಕ, ಕಿರುಹೊತ್ತಗೆ ಮುಂತಾದವುಗಳ ಸರಬರಾಯಿ ನೋಡಿಕೊಳ್ಳಲು ನೇಮಿಸುತ್ತದೆ. ಈ ಸಹೋದರರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಸಭೆಗೆ ಯಾವ ಪುಸ್ತಕ, ಪತ್ರಿಕೆ ಎಷ್ಟೆಷ್ಟು ಬೇಕೆಂದು ಬರೆದಿಡುತ್ತಾರೆ ಮತ್ತು ಆ ಸಾಹಿತ್ಯ ಸಭೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ.
17 ನಮಗಿರುವ ಸಮಯ, ಮಾನಸಿಕ ಮತ್ತು ಶಾರೀರಿಕ ಸಾಮರ್ಥ್ಯ, ಕೌಶಲಗಳು, ಸ್ವತ್ತುಗಳು ಅಷ್ಟೇಕೆ ನಮ್ಮ ಜೀವ ಸಹ ಯೆಹೋವನು ಕೊಟ್ಟಿರುವ ಉಡುಗೊರೆಗಳಾಗಿವೆ. ಅವುಗಳನ್ನು ಕೊಟ್ಟಿರುವುದು ಆತನ ಸೇವೆಯಲ್ಲಿ ಬಳಸಲಿಕ್ಕೆಂದೇ. (ಲೂಕ 17:10; 1 ಕೊರಿಂ. 4:7) ಅವೆಲ್ಲವನ್ನೂ ಯೆಹೋವನ ಸೇವೆಯಲ್ಲಿ ಚೆನ್ನಾಗಿ ಬಳಸುವ ಮೂಲಕ ನಾವಾತನನ್ನು ಎಷ್ಟು ಗಾಢವಾಗಿ ಪ್ರೀತಿಸುತ್ತೇವೆಂದು ತೋರಿಸಿಕೊಡುತ್ತೇವೆ. ನಮ್ಮಲ್ಲಿರುವ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಬೇಕು ಎಂಬುದು ನಮ್ಮ ಆಸೆ. ನಾವು ಆತನಿಗೆ ಯಾವುದೇ ಉಡುಗೊರೆಯನ್ನು ಕೊಟ್ಟರೂ ಪೂರ್ಣ ಮನಸ್ಸಿನ ಭಕ್ತಿಯಿಂದ ಕೊಟ್ಟರೆ ಆತನು ತುಂಬ ಸಂತೋಷಪಡುತ್ತಾನೆ. (ಜ್ಞಾನೋ. 3:9; ಮಾರ್ಕ 14:3-9; ಲೂಕ 21:1-4; ಕೊಲೊ. 3:23, 24) “ನೀವು ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಯೇಸು ಹೇಳಿದನು. (ಮತ್ತಾ. 10:8) ನಮ್ಮನ್ನು ಮತ್ತು ನಮ್ಮಲ್ಲಿ ಇರುವುದೆಲ್ಲವನ್ನೂ ಯೆಹೋವನ ಸೇವೆಯಲ್ಲಿ ಧಾರೆ ಎರೆದರೆ ಅದರಿಂದ ನಮಗೆ ಅಪಾರ ಸಂತೋಷ ಸಿಗುತ್ತದೆ.—ಅ. ಕಾ. 20:35.