ಪಾಠ 21
ಹತ್ತನೇ ಶಿಕ್ಷೆ
‘ನಿನ್ನನ್ನು ನೋಡಲು ಮತ್ತೆ ಬರುವುದಿಲ್ಲ’ ಎಂದು ಫರೋಹನಿಗೆ ಮೋಶೆ ಮಾತು ಕೊಟ್ಟನು. ಆದರೆ ಹೋಗುವ ಮುಂಚೆ ಫರೋಹನಿಗೆ ‘ಇವತ್ತು ಮಧ್ಯರಾತ್ರಿ ಈಜಿಪ್ಟಿನಲ್ಲಿ ಫರೋಹನ ಮೊದಲನೇ ಮಗನಿಂದ ಹಿಡಿದು ದಾಸಿಯ ಮೊದಲ ಮಗನ ತನಕ ಎಲ್ಲ ಗಂಡು ಮಕ್ಕಳು ಸಾಯ್ತಾರೆ’ ಎಂದು ಹೇಳಿದನು.
ಯೆಹೋವನು ಇಸ್ರಾಯೇಲ್ಯರಿಗೆ ಒಂದು ವಿಶೇಷ ಊಟ ಮಾಡಲು ಹೇಳಿದನು. ಆತನು ಅವರಿಗೆ ‘ಒಂದು ವರ್ಷದ ಗಂಡು ಕುರಿ ಅಥವಾ ಆಡನ್ನು ಕೊಂದು ಅದರ ರಕ್ತವನ್ನು ನಿಮ್ಮ ಬಾಗಿಲುಗಳಿಗೆ ಹಚ್ಚಿರಿ. ಅದರ ಮಾಂಸವನ್ನು ಸುಟ್ಟು ಹುಳಿಯಿಲ್ಲದ ರೊಟ್ಟಿ ಜೊತೆ ತಿನ್ನಬೇಕು. ಬಟ್ಟೆ ಚಪ್ಪಲಿಗಳನ್ನು ಹಾಕಿಕೊಂಡು ಇಲ್ಲಿಂದ ಹೋಗಲು ಸಿದ್ಧರಾಗಿ. ಇವತ್ತು ರಾತ್ರಿ ನಾನು ನಿಮ್ಮನ್ನು ಇಲ್ಲಿಂದ ಬಿಡಿಸುತ್ತೇನೆ’ ಅಂದನು. ಈ ಮಾತನ್ನು ಕೇಳಿದಾಗ ಇಸ್ರಾಯೇಲ್ಯರಿಗೆ ಎಷ್ಟು ನೆಮ್ಮದಿ ಆಗಿರಬೇಕಲ್ವಾ?
ಮಧ್ಯರಾತ್ರಿ ಯೆಹೋವನ ದೂತನು ಈಜಿಪ್ಟಿನಲ್ಲಿರುವ ಎಲ್ಲರ ಮನೆಗಳಿಗೆ ಹೋದನು. ಯಾವೆಲ್ಲಾ ಮನೆಗಳ ಬಾಗಿಲ ಮೇಲೆ ರಕ್ತದ ಗುರುತು ಇರಲಿಲ್ಲವೋ ಆ ಮನೆಯ ಮೊದಲ ಗಂಡು ಮಕ್ಕಳು ಸತ್ತರು. ದೇವದೂತನು ರಕ್ತದ ಗುರುತಿದ್ದ ಮನೆಗಳನ್ನು ಬಿಟ್ಟು ದಾಟಿಹೋದನು. ಈಜಿಪ್ಟಿನ ಪ್ರತಿಯೊಂದು ಕುಟುಂಬ, ಅವರು ಶ್ರೀಮಂತರಾಗಿರಲಿ ಬಡವರಾಗಿರಲಿ ಎಲ್ಲರು ತಮ್ಮ ಮಕ್ಕಳನ್ನು ಕಳೆದುಕೊಂಡರು. ಆದರೆ ಇಸ್ರಾಯೇಲ್ಯರ ಒಂದೇ ಒಂದು ಮಗುವೂ ಸಾಯಲಿಲ್ಲ.
ಫರೋಹನ ಮಗ ಕೂಡ ಸತ್ತ. ಫರೋಹನಿಗೆ ನೋವು ಸಹಿಸಲಿಕ್ಕೆ ಆಗಲಿಲ್ಲ. ತಕ್ಷಣ ಅವನು ಮೋಶೆ ಮತ್ತು ಆರೋನನಿಗೆ ‘ಎದ್ದು ಇಲ್ಲಿಂದ ಹೊರಟು ಹೋಗಿ. ನಿಮ್ಮ ದೇವರನ್ನು ಆರಾಧಿಸಿ. ನಿಮ್ಮ ಪ್ರಾಣಿಗಳನ್ನೂ ತಗೊಂಡು ಹೋಗಿ!’ ಅಂದನು.
ಆಕಾಶದಲ್ಲಿ ಪೂರ್ಣ ಚಂದ್ರ ಕಾಣಿಸುತ್ತಿದ್ದ. ಆ ಬೆಳದಿಂಗಳಲ್ಲಿ ಇಸ್ರಾಯೇಲ್ಯರ ಎಲ್ಲಾ ಕುಟುಂಬ ಮತ್ತು ಕುಲದವರು ಈಜಿಪ್ಟಿನಿಂದ ಹೊರಟರು. ಅವರಲ್ಲಿ ಗಂಡಸರೇ 6,00,000 ಇದ್ದರು. ಅಲ್ಲದೇ ಅನೇಕ ಹೆಂಗಸರು, ಮಕ್ಕಳೂ ಇದ್ದರು. ಅವರೊಟ್ಟಿಗೆ ಇಸ್ರಾಯೇಲ್ಯರಲ್ಲದವರು ಕೂಡ ಯೆಹೋವನನ್ನು ಆರಾಧಿಸಲು ಹೋದರು. ಅಂತೂ ಇಂತೂ ಇಸ್ರಾಯೇಲ್ಯರು ಬಿಡುಗಡೆಯಾದರು!
ಇಸ್ರಾಯೇಲ್ಯರು ಯೆಹೋವನು ತಮ್ಮನ್ನು ರಕ್ಷಿಸಿದ್ದನ್ನು ನೆನಪಿಸಿಕೊಳ್ಳುತ್ತಾ ಇರಬೇಕಿತ್ತು. ಅದಕ್ಕಾಗಿ ಅವರು ಪ್ರತಿ ವರ್ಷ ಈ ವಿಶೇಷ ಊಟವನ್ನು ಮಾಡಬೇಕಿತ್ತು. ಇದನ್ನು ಪಸ್ಕ ಎಂದು ಕರೆಯಲಾಯಿತು.
“ನನ್ನ ಶಕ್ತಿಯನ್ನ ನಿನಗೆ ತೋರಿಸಬೇಕು ಮತ್ತು ನನ್ನ ಹೆಸ್ರನ್ನ ಇಡೀ ಭೂಮಿಗೆ ಗೊತ್ತಾಗೋ ತರ ಮಾಡಬೇಕು ಅಂತಾನೇ ನಾನು ನಿನ್ನನ್ನ ಇನ್ನೂ ಜೀವಂತವಾಗಿ ಉಳಿಸಿದ್ದೀನಿ.”—ರೋಮನ್ನರಿಗೆ 9:17