ಪಾಠ 22
ಕೆಂಪು ಸಮುದ್ರದ ಬಳಿ ನಡೆದ ಅದ್ಭುತ
ಇಸ್ರಾಯೇಲ್ಯರು ಈಜಿಪ್ಟಿನಿಂದ ಹೋದರು ಎಂದು ಫರೋಹನಿಗೆ ಗೊತ್ತಾದಾಗ ಅವನ ಮನಸ್ಸು ಬದಲಾಯಿತು. ಅವರನ್ನು ಕಳುಹಿಸಬಾರದಿತ್ತು ಅಂದುಕೊಂಡ. ಹಾಗಾಗಿ ಅವನು ತನ್ನ ಸೈನಿಕರಿಗೆ ‘ಎಲ್ಲಾ ಯುದ್ಧರಥಗಳನ್ನು ಸಿದ್ಧಮಾಡಿ. ಇಸ್ರಾಯೇಲ್ಯರನ್ನು ಹಿಂದಟ್ಟಿ ಹೋಗೋಣ! ನಾವು ಅವರನ್ನು ಬಿಡಬಾರದಿತ್ತು’ ಅಂದನು. ಅವನು ಮತ್ತು ಅವನ ಜನರು ಇಸ್ರಾಯೇಲ್ಯರನ್ನು ಹಿಡಿದುಕೊಂಡು ಬರಲು ಹೋದರು.
ಹಗಲಿನಲ್ಲಿ ಮೋಡ ಹಾಗೂ ರಾತ್ರಿಯಲ್ಲಿ ಬೆಂಕಿ ಮೂಲಕ ಯೆಹೋವನು ತನ್ನ ಜನರನ್ನು ನಡೆಸುತ್ತಿದ್ದನು. ಹೀಗೆ ಅವರನ್ನು ಕೆಂಪು ಸಮುದ್ರದ ಹತ್ತಿರ ಕರೆದುಕೊಂಡು ಬಂದು ಅಲ್ಲಿ ಡೇರೆಗಳನ್ನು ಹಾಕಲು ಹೇಳಿದನು.
ಆಮೇಲೆ ಫರೋಹನ ಸೈನ್ಯ ತಮ್ಮನ್ನು ಬೆನ್ನಟ್ಟಿ ಬರುತ್ತಿರುವುದನ್ನು ಇಸ್ರಾಯೇಲ್ಯರು ನೋಡಿದರು. ಮುಂದೆ ನೋಡಿದರೆ ಕೆಂಪು ಸಮುದ್ರ, ಹಿಂದೆ ಫರೋಹನ ಸೈನ್ಯ! ಇವೆರಡರ ಮಧ್ಯೆ ಇಸ್ರಾಯೇಲ್ಯರು ಸಿಕ್ಕಿಹಾಕಿಕೊಂಡಿದ್ದರು. ಅವರು ಭಯದಿಂದ ‘ನಾವು ಸಾಯೋದಂತೂ ಖಂಡಿತ! ನೀನು ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬರಬಾರದಿತ್ತು’ ಅಂದರು. ಆದರೆ ಮೋಶೆ ‘ಹೆದರಬೇಡಿ. ಸುಮ್ಮನೆ ನಿಂತು ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅಂತ ನೋಡಿ’ ಅಂದನು. ಮೋಶೆಗೆ ಯೆಹೋವನ ಮೇಲೆ ಎಷ್ಟೊಂದು ಭರವಸೆ ಇತ್ತಲ್ವಾ?
ಆಮೇಲೆ ಯೆಹೋವನು ಇಸ್ರಾಯೇಲ್ಯರಿಗೆ ಮುಂದೆ ಹೋಗಲು ಹೇಳಿದನು. ಆ ರಾತ್ರಿ ಆತನು ಇಸ್ರಾಯೇಲ್ಯರ ಮತ್ತು ಈಜಿಪ್ಟಿನವರ ಮಧ್ಯೆ ಮೋಡವನ್ನು ಅಡ್ಡ ತಂದನು. ಆಗ ಈಜಿಪ್ಟಿನವರು ಇದ್ದ ಕಡೆ ಕತ್ತಲಿತ್ತು. ಆದರೆ ಇಸ್ರಾಯೇಲ್ಯರಿದ್ದ ಕಡೆ ಬೆಳಕಿತ್ತು.
ಯೆಹೋವನು ಮೋಶೆಗೆ ಕೆಂಪು ಸಮುದ್ರದ ಮೇಲೆ ಕೈಚಾಚಲು ಹೇಳಿದನು. ಆಮೇಲೆ ಯೆಹೋವನು ಇಡೀ ರಾತ್ರಿ ಬಲವಾಗಿ ಗಾಳಿ ಬೀಸುವಂತೆ ಮಾಡಿದನು. ಆ ಗಾಳಿಗೆ ಸಮುದ್ರವು ಎರಡು ಭಾಗವಾಯಿತು ಮತ್ತು ಮಧ್ಯೆ ಜನರು ನಡೆಯಲು ದಾರಿ ಆಯಿತು. ಲಕ್ಷಾಂತರ ಇಸ್ರಾಯೇಲ್ಯರು ನೀರಿನ ಎರಡು ಗೋಡೆಗಳ ಮಧ್ಯೆ ಒಣನೆಲದಲ್ಲಿ ನಡೆಯುತ್ತಾ ಆಚೆ ಬದಿಗೆ ಹೋದರು.
ಫರೋಹನ ಸೈನ್ಯ ಸಹ ಇಸ್ರಾಯೇಲ್ಯರನ್ನು ಹಿಂದಟ್ಟಿ ಒಣನೆಲಕ್ಕೆ ಬಂದಿತು. ಆಗ ಯೆಹೋವನು ಅವರ ರಥಗಳ ಚಕ್ರಗಳು ಕಳಚಿ ಬೀಳುವಂತೆ ಮಾಡಿದನು. ಅವರಲ್ಲಿ ಗಲಿಬಿಲಿ ಶುರುವಾಯಿತು. ಆಗ ಸೈನಿಕರು ‘ನಾವು ಇಲ್ಲಿಂದ ಓಡಿ ಹೋಗೋಣ! ಇಸ್ರಾಯೇಲ್ಯರ ಪರವಾಗಿ ಯೆಹೋವನೇ ಯುದ್ಧ ಮಾಡ್ತಿದ್ದಾನೆ’ ಎಂದು ಕಿರುಚಾಡಿದರು.
ಆಮೇಲೆ ಯೆಹೋವನು ಮೋಶೆಗೆ ‘ಸಮುದ್ರದ ಮೇಲೆ ನಿನ್ನ ಕೈಚಾಚು’ ಎಂದನು. ಒಂದೇ ಕ್ಷಣದಲ್ಲಿ ನೀರು ಈಜಿಪ್ಟಿನವರನ್ನು ಮುಳುಗಿಸಿಬಿಟ್ಟಿತು. ಫರೋಹ ಮತ್ತು ಅವನ ಜನರೆಲ್ಲರೂ ಸತ್ತುಹೋದರು. ಅವರಲ್ಲಿ ಒಬ್ಬನೂ ಉಳಿಯಲಿಲ್ಲ.
ಸಮುದ್ರದ ಆಚೆ ದಡದಲ್ಲಿ ನಿಂತಿದ್ದ ಇಸ್ರಾಯೇಲ್ಯರು ದೇವರನ್ನು ಸ್ತುತಿಸುತ್ತಾ “ಯೆಹೋವನನ್ನ ಹೊಗಳ್ತಾ ನಾನು ಹಾಡ್ತೀನಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ. ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ” ಎಂದು ಹಾಡಿದರು. ಜನರು ಹಾಡುತ್ತಿದ್ದಾಗ ಅವರಲ್ಲಿದ್ದ ಹೆಂಗಸರು ದಮ್ಮಡಿಯನ್ನು ಬಡಿಯುತ್ತಾ ಕುಣಿದಾಡಿದರು. ಇಸ್ರಾಯೇಲ್ಯರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಈಗ ಅವರಿಗೆ ನಿಜವಾಗಿಯೂ ಬಿಡುಗಡೆ ಸಿಕ್ಕಿತ್ತು.
“ಹಾಗಾಗಿ ‘ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?’ ಅಂತ ನಾವು ಧೈರ್ಯವಾಗಿ ಹೇಳ್ತೀವಿ.”—ಇಬ್ರಿಯ 13:6