ಪಾಠ 30
ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು
ಇಸ್ರಾಯೇಲ್ಯ ಗೂಢಚಾರರು ಯೆರಿಕೋ ಪಟ್ಟಣಕ್ಕೆ ಹೋದಾಗ ರಾಹಾಬ ಎಂಬ ಸ್ತ್ರೀಯ ಮನೆಯಲ್ಲಿ ಉಳಿದುಕೊಂಡರು. ಈ ವಿಷಯ ಯೆರಿಕೋವಿನ ರಾಜನಿಗೆ ಗೊತ್ತಾಯಿತು. ಆಗ ಅವನು ತನ್ನ ಸೈನಿಕರನ್ನು ರಾಹಾಬಳ ಮನೆಗೆ ಕಳುಹಿಸಿದ. ಆದರೆ ರಾಹಾಬಳು ಆ ಇಬ್ಬರು ಗೂಢಚಾರರನ್ನು ಮನೆಯ ಚಾವಣಿ ಮೇಲೆ ಬಚ್ಚಿಟ್ಟಿದ್ದಳು. ಬಂದ ಸೈನಿಕರನ್ನು ಬೇರೆ ದಾರಿಯಲ್ಲಿ ಕಳುಹಿಸಿದಳು. ಅವರು ಹೋದ ಮೇಲೆ ಅವಳು ಗೂಢಚಾರರಿಗೆ ‘ನಾನು ನಿಮಗೆ ಸಹಾಯ ಮಾಡುತ್ತೇನೆ ಏಕೆಂದರೆ ಯೆಹೋವನು ನಿಮ್ಮ ಕಡೆ ಇದ್ದಾನೆ ಮತ್ತು ನೀವು ಈ ದೇಶವನ್ನು ವಶ ಮಾಡಿಕೊಳ್ಳುತ್ತೀರ ಎಂದು ನನಗೆ ಗೊತ್ತು. ದಯವಿಟ್ಟು ನನ್ನ ಕುಟುಂಬವನ್ನು ಕಾಪಾಡುತ್ತೀರೆಂದು ನನಗೆ ಮಾತುಕೊಡಿ’ ಎಂದಳು.
ಆಗ ಆ ಗೂಢಚಾರರು ರಾಹಾಬಳಿಗೆ ‘ನಿನ್ನ ಮನೆಯ ಒಳಗಿರುವ ಯಾರಿಗೂ ಯಾವುದೇ ಹಾನಿ ಆಗುವುದಿಲ್ಲ ಎಂದು ನಾವು ಮಾತು ಕೊಡುತ್ತೇವೆ’ ಅಂದರು. ಅಲ್ಲದೇ, ‘ನಿನ್ನ ಮನೆಯ ಕಿಟಕಿಗೆ ಒಂದು ಕೆಂಪು ಹಗ್ಗವನ್ನು ಕಟ್ಟು. ಆಗ ನಿನ್ನ ಕುಟುಂಬವು ರಕ್ಷಿಸಲ್ಪಡುವುದು’ ಎಂದು ಹೇಳಿದರು.
ರಾಹಾಬಳು ಕಿಟಕಿಗೆ ಒಂದು ಹಗ್ಗ ಕಟ್ಟಿ ಆ ಗೂಢಚಾರರು ಕೆಳಗೆ ಇಳಿಯಲು ಸಹಾಯ ಮಾಡಿದಳು. ಅವರು ಮೂರು ದಿನ ಬೆಟ್ಟದಲ್ಲಿ ಅಡಗಿಕೊಂಡ ನಂತರ ಯೆಹೋಶುವನ ಹತ್ತಿರ ಹೋದರು. ಇದಾದ ಮೇಲೆ ಇಸ್ರಾಯೇಲ್ಯರು ಯೋರ್ದನ್ ನದಿಯನ್ನು ದಾಟಿ ಯೆರಿಕೋ ಪಟ್ಟಣವನ್ನು ವಶಮಾಡಿಕೊಳ್ಳಲು ಸಿದ್ಧರಾದರು. ಇಸ್ರಾಯೇಲ್ಯರು ವಶಮಾಡಿಕೊಂಡ ಮೊದಲ ಪಟ್ಟಣ ಇದಾಗಿತ್ತು. ಯೆಹೋವನು ಇಸ್ರಾಯೇಲ್ಯರಿಗೆ ದಿನಕ್ಕೊಂದು ಸಾರಿ ಆ ಪಟ್ಟಣದ ಸುತ್ತ ಸುತ್ತಬೇಕು. ಈ ತರ ಆರು ದಿನ ಸುತ್ತಬೇಕು ಎಂದು ಹೇಳಿದನು. ಏಳನೇ ದಿನ ಅವರು ಆ ಪಟ್ಟಣವನ್ನು ಏಳು ಬಾರಿ ಸುತ್ತು ಹಾಕಿದರು. ನಂತರ ಪುರೋಹಿತರು ಕೊಂಬುಗಳನ್ನು ಊದಿದರು. ಸೈನಿಕರು ತಮ್ಮಿಂದ ಎಷ್ಟು ಆಗುತ್ತೋ ಅಷ್ಟು ಜೋರಾಗಿ ಕೂಗಿದರು. ಆಗ ಆ ಪಟ್ಟಣದ ಗೋಡೆಗಳು ಕುಸಿದು ಬಿದ್ದು ನೆಲ ಸಮವಾದವು! ಆದರೆ ಗೋಡೆಯ ಮೇಲೆ ಇದ್ದ ರಾಹಾಬಳ ಮನೆಗೆ ಮಾತ್ರ ಏನೂ ಆಗಲಿಲ್ಲ. ಹೀಗೆ ರಾಹಾಬ ಮತ್ತು ಅವಳ ಕುಟುಂಬ ರಕ್ಷಿಸಲ್ಪಟ್ಟಿತು. ಇದಕ್ಕೆ ಕಾರಣ ಅವಳು ಯೆಹೋವನಲ್ಲಿ ಭರವಸೆಯಿಟ್ಟಿದ್ದಳು.
“ಅದೇ ತರ, ವೇಶ್ಯೆ ಆಗಿದ್ದ ರಾಹಾಬ್ ಅವಳ ಒಳ್ಳೇ ಕೆಲಸಗಳಿಂದ ನೀತಿವಂತಳು ಅಂತ ತೋರಿಸ್ಕೊಟ್ಟಳು. ಅವಳು ಗೂಡಚಾರರಿಗೆ ಸಹಾಯ ಮಾಡಿದಳು. ಅವ್ರನ್ನ ಬೇರೆ ದಾರಿಯಲ್ಲಿ ಕಳಿಸ್ಕೊಟ್ಟಳು.”—ಯಾಕೋಬ 2:25