ಪಾಠ 72
ಬಾಲಕ ಯೇಸು
ಯೋಸೇಫ ಮತ್ತು ಮರಿಯ ನಜರೇತಿನಲ್ಲಿ ವಾಸಿಸುತ್ತಿದ್ದರು. ಅವರೊಂದಿಗೆ ಯೇಸು ಮತ್ತು ಇತರ ಗಂಡು-ಹೆಣ್ಣು ಮಕ್ಕಳೂ ಇದ್ದರು. ಯೋಸೇಫನು ಬಡಗಿಯ ಕೆಲಸಮಾಡಿ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವನು ಯೆಹೋವನ ಬಗ್ಗೆ ಮತ್ತು ನಿಯಮ ಪುಸ್ತಕದ ಬಗ್ಗೆ ತನ್ನ ಮಕ್ಕಳಿಗೆ ಕಲಿಸುತ್ತಿದ್ದನು. ಯೋಸೇಫನು ತನ್ನ ಕುಟುಂಬದ ಜೊತೆಗೆ ಕ್ರಮವಾಗಿ ಸಭಾಮಂದಿರಕ್ಕೆ ಮತ್ತು ಪ್ರತಿ ವರ್ಷ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದನು.
ಯೇಸು ಹನ್ನೆರಡು ವರ್ಷದವನಾಗಿದ್ದಾಗ, ಯೋಸೇಫನ ಕುಟುಂಬ ಪ್ರತಿವರ್ಷದಂತೆ ಯೆರೂಸಲೇಮಿಗೆ ದೀರ್ಘ ಪ್ರಯಾಣ ಮಾಡಿತು. ಪಟ್ಟಣವು ಪಸ್ಕಹಬ್ಬವನ್ನು ಆಚರಿಸಲು ಬಂದಿದ್ದ ಜನರಿಂದ ತುಂಬಿಹೋಗಿತ್ತು. ಹಬ್ಬವನ್ನು ಆಚರಿಸಿದ ನಂತರ, ಯೋಸೇಫ ಮತ್ತು ಮರಿಯ ತಮ್ಮ ಮನೆಗೆ ಪ್ರಯಾಣ ಮಾಡಿದರು. ಯೇಸು ಕೂಡ ತಮ್ಮ ಸಂಬಂಧಿಕರ ಗುಂಪಿನಲ್ಲಿ ಎಲ್ಲೋ ಇದ್ದಾನೆ ಎಂದು ನೆನಸಿದರು. ಆದರೆ, ಅವನನ್ನು ಹುಡುಕಿದಾಗ ಅವನು ಸಿಗಲಿಲ್ಲ.
ಆಗ ಅವರು ಯೆರೂಸಲೇಮಿಗೆ ಹಿಂದಿರುಗಿ ಮೂರು ದಿನಗಳ ತನಕ ಯೇಸುವನ್ನು ಹುಡುಕಿದರು. ಕೊನೆಗೆ, ಅವರು ದೇವಾಲಯಕ್ಕೆ ಹೋದರು. ಅಲ್ಲಿ ಯೇಸು ಗುರುಗಳ ಮಧ್ಯೆ ಕುಳಿತು ಅವರು ಹೇಳುವುದನ್ನು ಗಮನಕೊಟ್ಟು ಕೇಳಿಸಿಕೊಳ್ಳುತ್ತಾ, ಒಳ್ಳೊಳ್ಳೇ ಪ್ರಶ್ನೆಗಳನ್ನು ಕೇಳುತ್ತಾ ಇದ್ದನು. ಗುರುಗಳು ಅವನ ಜ್ಞಾನ ನೋಡಿ ಎಷ್ಟು ಪ್ರಭಾವಿತರಾದರೆಂದರೆ ಅವರು ಯೇಸುವಿಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಯೇಸು ಕೊಟ್ಟ ಉತ್ತರಗಳನ್ನು ನೋಡಿ ಅವರು ಆಶ್ಚರ್ಯಪಟ್ಟರು. ಯೆಹೋವನ ನಿಯಮ ಪುಸ್ತಕವನ್ನ ಯೇಸು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು ಎಂದು ಅವರಿಗೆ ಗೊತ್ತಾಯಿತು.
ಯೋಸೇಫ ಮತ್ತು ಮರಿಯಳಿಗೆ ಎಷ್ಟು ಚಿಂತೆ ಆಗಿತ್ತೆಂದರೆ ಮರಿಯಳು, ‘ಕಂದಾ, ನಿನಗಾಗಿ ಎಲ್ಲ ಕಡೆ ಹುಡುಕ್ತಾ ಇದ್ವಿ! ನೀನೆಲ್ಲಿಗೆ ಹೋಗಿದ್ದೆ?’ ಎಂದು ಕೇಳಿದಳು. ಆಗ ಯೇಸು, ‘ನಾನು ನನ್ನ ಅಪ್ಪನ ಮನೆಯಲ್ಲಿ ಇರಬೇಕು ಅಂತ ನಿಮಗೆ ಗೊತ್ತಿಲ್ವಾ?’ ಅಂದನು.
ಆಮೇಲೆ ಯೇಸು ತನ್ನ ಅಪ್ಪ-ಅಮ್ಮನ ಜೊತೆ ನಜರೇತಿಗೆ ಹೋದನು. ಯೋಸೇಫನು ಯೇಸುವಿಗೆ ಬಡಗಿಯ ಕೆಲಸವನ್ನು ಕಲಿಸಿದನು. ಯೇಸು ಯುವಕನಾಗಿದ್ದಾಗ ಎಂಥಾ ವ್ಯಕ್ತಿಯಾಗಿದ್ದನು? ನಿನಗೆ ಏನನಿಸುತ್ತೆ? ಅವನು ಬೆಳೆಯುತ್ತಾ ಹೋದಂತೆ ವಿವೇಕಿಯಾಗಿ ದೇವರ ಮತ್ತು ಮನುಷ್ಯರ ಅನುಗ್ರಹವನ್ನು ಪಡೆದನು.
“ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ, ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ.”—ಕೀರ್ತನೆ 40:8