ಪಾಠ 82
ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ
ಫರಿಸಾಯರು ಏನೇ ಮಾಡಿದರೂ ಜನರನ್ನು ಮೆಚ್ಚಿಸಲಿಕ್ಕಾಗಿ ಮಾಡುತ್ತಿದ್ದರು. ಅವರು ಏನಾದರೂ ಒಳ್ಳೇ ಕೆಲಸ ಮಾಡುವಾಗ ಬೇರೆಯವರು ನೋಡಬೇಕಂತ ಮಾಡುತ್ತಿದ್ದರು. ಪ್ರಾರ್ಥಿಸುವಾಗ ಎಲ್ಲರೂ ತಮ್ಮನ್ನು ನೋಡಬೇಕೆಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥಿಸುತ್ತಿದ್ದರು. ಫರಿಸಾಯರು ಉದ್ದವಾದ ಪ್ರಾರ್ಥನೆಗಳನ್ನು ಬಾಯಿಪಾಠ ಮಾಡಿಕೊಂಡು ಅದನ್ನು ಸಭಾಮಂದಿರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕೇಳಿಸುವಂತೆ ಮಾಡುತ್ತಿದ್ದರು. ಯೇಸು ಜನರಿಗೆ, ‘ಫರಿಸಾಯರ ಹಾಗೆ ನೀವು ಪ್ರಾರ್ಥಿಸಬೇಡಿ. ಪ್ರಾರ್ಥನೆಯಲ್ಲಿ ತುಂಬ ಮಾತಾಡಿದ್ರೆ ನೋಡಿ ದೇವರು ಮೆಚ್ಚುತ್ತಾನೆಂದು ಅವರು ನೆನಸುತ್ತಾರೆ. ಆದರೆ ದೇವರು ಖಂಡಿತ ಮೆಚ್ಚುವುದಿಲ್ಲ. ಪ್ರಾರ್ಥನೆ ಅನ್ನುವುದು ನಿಮಗೆ ಮತ್ತು ಯೆಹೋವನಿಗೆ ಮಾತ್ರ ಸಂಬಂಧಪಟ್ಟಿದ್ದು. ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡಿ. ನಿಮ್ಮ ಅನಿಸಿಕೆ ಅಥವಾ ಭಾವನೆಗಳನ್ನು ತನಗೆ ಹೇಳಬೇಕೆಂದು ಯೆಹೋವ ಬಯಸುತ್ತಾನೆ’ ಎಂದನು. ಇದನ್ನು ಕೇಳಿದಾಗ ಅವರು ಆಶ್ಚರ್ಯಪಟ್ಟರು.
‘ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ: “ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ. ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ”’ ಅಂತ ಯೇಸು ಹೇಳಿಕೊಟ್ಟನು. ಅವರು ಪ್ರತಿದಿನದ ಆಹಾರಕ್ಕಾಗಿ, ತಮ್ಮ ತಪ್ಪುಗಳ ಕ್ಷಮೆಗಾಗಿ ಮತ್ತು ಇತರ ವೈಯಕ್ತಿಕ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬೇಕೆಂದು ಯೇಸು ಹೇಳಿದನು.
‘ಪ್ರಾರ್ಥನೆ ಮಾಡುವುದನ್ನ ಯಾವತ್ತೂ ನಿಲ್ಲಿಸಬೇಡಿ. ಒಳ್ಳೇ ವಿಷ್ಯಗಳಿಗಾಗಿ ನಿಮ್ಮ ತಂದೆಯಾದ ಯೆಹೋವನ ಹತ್ತಿರ ಕೇಳ್ತಾ ಇರಿ. ಪ್ರತಿಯೊಬ್ಬ ಹೆತ್ತವರು ತಮ್ಮ ಮಕ್ಕಳಿಗೆ ಒಳ್ಳೇ ವಸ್ತುಗಳನ್ನು ಕೊಡಲು ಬಯಸುತ್ತಾರೆ. ನಿಮ್ಮ ಮಗ ರೊಟ್ಟಿ ಕೇಳಿದ್ರೆ ಕಲ್ಲು ಕೊಡ್ತೀರಾ? ಮೀನು ಕೇಳಿದ್ರೆ ಹಾವು ಕೊಡ್ತೀರಾ?’ ಎಂದು ಯೇಸು ಕೇಳಿದನು.
ಬಳಿಕ ಯೇಸು ಆ ಮಾತಿನ ಅರ್ಥವನ್ನು ಕಲಿಸಿದನು, ‘ಮನುಷ್ಯರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ನಿಮ್ಮ ತಂದೆಯಾದ ಯೆಹೋವ ತನ್ನನ್ನು ಕೇಳುವವರಿಗೆ ಇನ್ನೂ ಜಾಸ್ತಿ ಪವಿತ್ರಶಕ್ತಿ ಕೊಡಲ್ವಾ? ಅದಕ್ಕೇ ನೀವು ಬೇಡಿಕೊಳ್ಳಬೇಕು’ ಅಂದನು. ಯೇಸುವಿನ ಸಲಹೆಯನ್ನು ನೀವು ಪಾಲಿಸುತ್ತೀರಾ? ಯಾವೆಲ್ಲ ವಿಷಯಗಳಿಗಾಗಿ ನೀವು ಪ್ರಾರ್ಥಿಸುತ್ತೀರಿ?
“ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ. ಹುಡುಕ್ತಾ ಇರಿ, ನಿಮಗೆ ಸಿಗುತ್ತೆ. ತಟ್ಟುತ್ತಾ ಇರಿ, ತೆರಿಯುತ್ತೆ.”—ಮತ್ತಾಯ 7:7