ಆಮೆನ್—ಅದರ ಅರ್ಥ ಮತ್ತು ಉಪಯೋಗ
ಇಂಗ್ಲಿಷ್ ಮತ್ತು ಗ್ರೀಕ್ ಎರಡರಲ್ಲೂ ಆಮೆನ್ ಎಂಬದು, ಹೀಬ್ರು ’ಆ.ಮೆನ್’ ನ ಲಿಪ್ಯಂತರವಾಗಿದೆ. “ಹಾಗೆಯೇ ಆಗಲಿ,” ಅಥವಾ “ನಿಶ್ಚಯವಾಗಿಯೂ” ಎಂದೇ ಅದರರ್ಥವು. ಯಾವುದರಿಂದ ಅದು ತೆಗೆಯಲ್ಪಟ್ಟಿದೆಯೇ ಆ ಹೀಬ್ರು ಮೂಲಪದ (’ಆ.ಮನ್’) ನ ಅರ್ಥವು “ನಂಬಿಗಸ್ತನಾಗಿರು; ಭರವಸಯೋಗ್ಯನಾಗಿರ” ಎಂದಾಗಿದೆ.
ಹೀಬ್ರು ಶಾಸ್ತ್ರಗ್ರಂಥದಲ್ಲಿ ಈ ಶಬ್ದವು ಒಬ್ಬನನ್ನು ನ್ಯಾಯವಾಗಿ ಒಂದು ಶಪಥಕ್ಕೆ ಅಥವಾ ಒಡಂಬಡಿಕೆಗೆ ಮತ್ತು ಅದರ ಫಲಿತಾಂಶಗಳಿಗೆ ಬದ್ಧಪಡಿಸುವ ಗಂಭೀರ ಹೇಳಿಕೆಯಾಗಿ (ಅರಣ್ಯಕಾಂಡ 5:22; ಧರ್ಮೋಪದೇಶಕಾಂಡ 27:15-26; ನೆಹೆಮೀಯ 5:13), ಅಲ್ಲದೆ, ವ್ಯಕ್ತಪಡಿಸಲ್ಪಟ್ಟ ಒಂದು ಪ್ರಾರ್ಥನೆಗೆ (1 ಪೂರ್ವಕಾಲ 16:36), ನುಡಿಯಲ್ಪಟ್ಟ ಒಂದು ಸ್ತೋತ್ರಕ್ಕೆ (ನೆಹೆಮೀಯ 8:6), ಅಥವಾ ತಿಳಿಸಲ್ಪಟ್ಟ ಉದ್ದೇಶಕ್ಕೆ (1 ಅರಸು 1:36; ಯೆರೆಮೀಯ 11:5) ಅನುಮೋದನೆ ಕೊಡುವ ಒಂದು ಗಂಭೀರ ಹೇಳಿಕೆಯಾಗಿ ಉಪಯೋಗಿಸಲ್ಪಟ್ಟಿದೆ. ಕೀರ್ತನೆಗಳ ಮೊದಲನೆಯ ನಾಲ್ಕು ಪುಸ್ತಕಗಳಲ್ಲಿ ಅಥವಾ ಸಂಕಲನಗಳಲ್ಲಿ ಪ್ರತಿಯೊಂದು ಈ ಹೇಳಿಕೆಯಿಂದ ಕೊನೆಗೊಳ್ಳುತ್ತದೆ, ಪ್ರಾಯಶಃ ಇದು ಸೂಚಿಸುವುದೇನಂದರೆ ಕೀರ್ತನೆಯ ಅಥವಾ ಹಾಡಿನ ಕೊನೆಯಲ್ಲಿ “ಆಮೆನ್” ನೊಂದಿಗೆ ಜತೆಗೂಡುವಿಕೆಯು ಇಸ್ರಾಯೇಲ್ ಸಭೆಯಲ್ಲಿ ವಾಡಿಕೆಯಾಗಿತ್ತು.—ಕೀರ್ತನೆ 41:13; 72:19; 89:52; 106:48.
ಹೀಬ್ರು ಪದವಾದ ’ಆ.ಮನ್’ ಯೆಹೋವನಿಗೆ “ನಂಬಿಗಸ್ತ ದೇವರೋ”ಪಾದಿ ಅನ್ವಯಿಸಲ್ಪಟ್ಟಿದೆ (ಧರ್ಮೋಪದೇಶಕಾಂಡ 7:9; ಯೆಶಾಯ 49:7) ಮತ್ತು ಆತನ ಕಟ್ಟಳೆಗಳು ಮತ್ತು ವಾಗ್ದಾನಗಳು “ಭರವಸಯೋಗ್ಯವು” ಮತ್ತು “ನಂಬಿಗಸ್ತವೂ” ಆಗಿವೆಯೆಂದು ವರ್ಣಿಸುತ್ತದೆ. (ಕೀರ್ತನೆ 19:7; 89:28, 37) ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿ “ಆಮೆನ್” ಎಂಬ ಪದವಿಯು “ನಂಬತಕ್ಕ ಸತ್ಯಸಾಕ್ಷಿ” ಯೋಪಾದಿ ಯೇಸು ಕ್ರಿಸ್ತನಿಗೆ ಅನ್ವಯಿಸಲ್ಪಟ್ಟಿದೆ. (ಪ್ರಕಟನೆ 3:14) ಯೇಸು ತನ್ನ ಸಾರುವಿಕೆ ಮತ್ತು ಕಲಿಸುವಿಕೆಯಲ್ಲಿ ಈ ಹೇಳಿಕೆಯನ್ನು ವಿಶಿಷ್ಟವಾಗಿ ಬಳಸುತ್ತಾ, ಒಂದು ವಾಸ್ತವಿಕ ಹೇಳಿಕೆ, ಒಂದು ವಾಗ್ದಾನ ಅಥವಾ ಒಂದು ಪ್ರವಾದನೆಯ ಪ್ರಸ್ತಾವನೆಯಲ್ಲಿ ಹೆಚ್ಚಾಗಿ ಉಪಯೋಗಿಸಿ, ತಾನು ಹೇಳಿದ ವಿಷಯಗಳ ಸಂಪೂರ್ಣ ಸತ್ಯತೆಯನ್ನು ಮತ್ತು ನಂಬಲರ್ಹತೆಯನ್ನು ಆ ಮೂಲಕ ಒತ್ತಿಹೇಳಿದನು. (ಮತ್ತಾಯ 5:18; 6:2, 5, 16; 24:34) ಈ ಸನ್ನಿವೇಶಗಳಲ್ಲಿ ಗ್ರೀಕ್ ಪದವಾದ (ಆ.ಮೆನ್’), “ಸತ್ಯವಾಗಿ” (KJ, “ನಿಜವಾಗಿ”) ಅಥವಾ ಯೋಹಾನನ ಇಡೀ ಪುಸ್ತಕದಲ್ಲಿರುವಂತೆ, ದ್ವಿಗುಣವಾದಾಗ, “ನಿಜನಿಜವಾಗಿ” ಎಂದು ತರ್ಜುಮೆಯಾಗಿದೆ. (ಯೋಹಾನ 1:51) “ಆಮೆನ್” ನನ್ನು ಯೇಸು ಈ ರೀತಿ ಉಪಯೋಗಿಸಿದ್ದು ಪವಿತ್ರ ಸಾಹಿತ್ಯದಲ್ಲಿ ಅಸದೃಶವೆಂದು ಹೇಳಲ್ಪಡುತ್ತದೆ, ಮತ್ತು ಅದು ದೈವಿಕವಾಗಿ ಕೊಡಲ್ಪಟ್ಟ ಅವನ ಅಧಿಕಾರದೊಂದಿಗೆ ಹೊಂದಿಕೆಯಲ್ಲಿತ್ತು.—ಮತ್ತಾಯ 7:29.
ಆದರೂ, ಪೌಲನು 2 ಕೊರಿಂಥ 1:19, 20 ರಲ್ಲಿ ತೋರಿಸುವ ಪ್ರಕಾರ, “ಆಮೆನ್” ಎಂಬ ಪದವಿಯು ಯೇಸುವಿಗೆ ಸತ್ಯವನ್ನಾಡುವವನಾಗಿ ಅಥವಾ ಸತ್ಯ ಪ್ರವಾದಿಯಾಗಿ ಮತ್ತು ದೇವರ ವದನಕನಾಗಿ ಮಾತ್ರವಲ್ಲದೆ, ದೇವರ ವಾಗ್ದಾನಗಳೆಲ್ಲವೂ ಯಾವನಲ್ಲಿ ನೆರವೇರಿಕೆಯನ್ನು ಕಾಣುತ್ತವೋ ಆತನಾಗಿಯೂ ಅನ್ವಯಿಸುತ್ತದೆ. ಯಜ್ಞಾರ್ಪಣೆಯ ಮರಣದ ತನಕವೂ ಆತನ ನಂಬಿಗಸ್ತಿಕೆ ಮತ್ತು ವಿಧೇಯತೆಯ ನಡೆವಳಿಯು ದೇವರ ಉದ್ದೇಶದ ಎಲ್ಲಾ ವಾಗ್ದಾನಗಳನ್ನು ಮತ್ತು ಪ್ರಕಟಣೆಗಳನ್ನು ಸಿದ್ಧಿಗೆ ತರುವುದನ್ನು ದೃಢೀಕರಿಸುತ್ತದೆ ಮತ್ತು ಶಕ್ಯವನ್ನಾಗಿ ಮಾಡುತ್ತದೆ. ಯಾವ ವಿಷಯಗಳ ಮೇಲೆ ದೇವರು ಆಣೆಯಿಟ್ಟು ನುಡಿದನೋ ಆ ದೇವರ ಉದ್ದೇಶದ ಪ್ರಕಟನೆಗಳ ಜೀವಂತ ಸತ್ಯವು ಆತನಾಗಿದ್ದನು.—ಹೋಲಿಸಿರಿ ಯೋಹಾನ 1:14, 17; 14:6; 18:37.
“ಆಮೆನ್” ಎಂಬ ಹೇಳಿಕೆಯು ಪತ್ರಿಕೆಗಳಲ್ಲಿ, ವಿಶೇಷವಾಗಿ ಪೌಲನವುಗಳಲ್ಲಿ, ಒಂದು ತೆರದ ಸ್ತುತಿಯನ್ನು ಲೇಖಕನು ದೇವರಿಗೆ ವ್ಯಕ್ತಪಡಿಸುವಾಗ, (ರೋಮಾಪುರ 1:25; 16:27; ಎಫೆಸ 3:21; 1 ಪೇತ್ರ 4:11), ಅಥವಾ ಪತ್ರಿಕೆಯನ್ನು ಪಡೆಯುವವರೆಡೆಗೆ ಯಾವುದೇ ರೀತಿಯಲ್ಲಿ ದೇವರ ಅನುಗ್ರಹವಾಗುವಂತೆ ಕೋರಿಕೆಯನ್ನು ಮಾಡುವಲ್ಲಿ ಅನೇಕ ಬಾರಿ ಉಪಯೋಗಿಸಲ್ಪಟ್ಟಿದೆ. (ರೋಮಾಪುರ 15:33; ಇಬ್ರಿಯ 13:20, 21) ಯಾವುದು ಹೇಳಲ್ಪಟ್ಟಿದೆಯೋ ಅದಕ್ಕೆ ಲೇಖಕನು ಮನಃಪೂರ್ವಕವಾದ ಅನುಮೋದನೆ ಕೊಡುವಲ್ಲಿಯೂ ಅದು ಉಪಯೋಗಿಸಲ್ಪಟ್ಟಿದೆ.—ಪ್ರಕಟನೆ 1:7; 22:20.
ಪ್ರಾರ್ಥನೆಯ ಕೊನೆಯಲ್ಲಿ “ಆಮೆನ್” ಉಪಯೋಗದ ಔಚಿತ್ಯವನ್ನು, 1 ಪೂರ್ವಕಾಲ 16:36 ರಲ್ಲಿ ತಿಳಿಸಲ್ಪಟ್ಟ ಪ್ರಾರ್ಥನೆ ಮತ್ತು ಕೀರ್ತನೆಗಳಲ್ಲಿ (41:13; 72:19; 89:52; 106:48) ಅಡಕವಾಗಿರುವುವುಗಳು ಹಾಗೂ ಅಂಗೀಕೃತ ಪತ್ರಿಕೆಗಳಲ್ಲಿ ಅಡಕವಾಗಿರುವ ಹೇಳಿಕೆಗಳೆಲ್ಲವೂ ಸೂಚಿಸುತ್ತವೆ. ದಾಖಲೆಯಾದ ಪ್ರಾರ್ಥನೆಗಳೆಲ್ಲವು, ಸೊಲೊಮೋನನಿಗಾಗಿ ದಾವೀದನ ಕೊನೆಯ ಪ್ರಾರ್ಥನೆ (1 ಪೂರ್ವಕಾಲ 29:19), ಅಥವಾ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಸೊಲೊಮೋನನ ಸಮರ್ಪಣೆಯ ಪ್ರಾರ್ಥನೆ (1 ಅರಸು 8:53-61) ಗಳಂಥವುಗಳು ಅಂತಹ ಸಮಾಪ್ತಿಯನ್ನು ತೋರಿಸುವುದಿಲ್ಲವೆಂಬದು ನಿಜವಾದಾಗ್ಯೂ, ಅಂಥ ಹೇಳಿಕೆಯು ನುಡಿಯಲ್ಪಟ್ಟಿರಬಹುದಾಗಿದೆ. (ಗಮನಿಸಿರಿ 1 ಪೂರ್ವಕಾಲ 29:20.) ತದ್ರೀತಿಯಲ್ಲಿ, ಅದರ ಉಪಯೋಗವು ಯೇಸುವಿನ ಪ್ರಾರ್ಥನೆಗಳಲ್ಲಿ (ಮತ್ತಾಯ 26:39, 42; ಯೋಹಾನ 17:1-26) ಅಥವಾ ಅಪೊಸ್ತಲರ ಕೃತ್ಯಗಳು 4:24-30 ರಲ್ಲಿ ದಾಖಲೆಯಾಗಿರುವ ಶಿಷ್ಯರ ಪ್ರಾರ್ಥನೆಯಲ್ಲಿ ದಾಖಲೆಯಾಗಿರುವುದಿಲ್ಲ. ಆದರೂ, ಮೊದಲು ನೀಡಲಾದ ಸಾಕ್ಷ್ಯಗಳ ತೂಕವು, ಒಂದು ಪ್ರಾರ್ಥನೆಯ ಕೊನೆಯಾಗಿ “ಆಮೆನ್” ನ ಉಪಯೋಗದ ಔಚಿತ್ಯವನ್ನು ಬಲವಾಗಿ ಸೂಚಿಸುತ್ತದೆ, ಮತ್ತು ಕ್ರೈಸ್ತ ಸಮ್ಮೇಲನದಲ್ಲಿ ಕೂಡಿರುವವರು ಒಂದು ಪ್ರಾರ್ಥನೆಗೆ ಆಮೆನ್ನಲ್ಲಿ ಜತೆಗೂಡುವುದು ರೂಢಿಯಾಗಿತ್ತೆಂದು ವಿಶಿಷ್ಟವಾಗಿ 1 ಕೊರಿಂಥ 14:16 ರಲ್ಲಿ ಪೌಲನ ಮಾತುಗಳು ತೋರಿಸುತ್ತವೆ. ಅದಲ್ಲದೆ, ಪ್ರಕಟನೆ 5:13, 14; 7:10-12; ಮತ್ತು 19:1-4 ರಲ್ಲಿ ದಾಖಲೆಯಾಗಿರುವ ಪ್ರಕಾರ, ಪರಲೋಕದಲ್ಲಿರುವವರ ಮಾದರಿಗಳೆಲ್ಲವೂ, ಪ್ರಾರ್ಥನೆಗಳ ಅಥವಾ ಗಂಭೀರ ಹೇಳಿಕೆಗಳ ಅನುಮೋದನೆಯಲ್ಲಿ ಅದರ ಉಪಯೋಗಕ್ಕೆ ಬೆಂಬಲವನ್ನು ಕೊಡುತ್ತವೆ ಮತ್ತು ಹೀಗೆ ಈ ಒಂದು ಶಬ್ದದ ಉಪಯೋಗದ ಮೂಲಕ ಅವರ ಹೃದಯಗಳಲ್ಲಿರುವ ಭರವಸೆ, ದೃಢವಾದ ಸಮ್ಮತಿ, ಮತ್ತು ಮನಃಪೂರ್ವಕವಾದ ನಿರೀಕ್ಷೆಯು ವ್ಯಕ್ತಪಡಿಸಲ್ಪಟ್ಟಿದೆ.