ರಾಶಿಚಕ್ರ—ಜ್ಯೋತಿಶ್ಯಾಸ್ತ್ರದೊಂದಿಗಿನ ಅದರ ಸಂಬಂಧ
ಸೂರ್ಯನ ಸುತ್ತ ಭೂಮಿಯ ಕಕ್ಷೆಯ ಸಮತಲದ ಎರಡೂ ಪಕ್ಕದಲ್ಲಿ ಒಂಬತ್ತು ಡಿಗ್ರಿ (ಕೋನಾಂಶ) ಗಳೊಳಗೆ ಕಾಣಿಸಿಕೊಳ್ಳುವುದಾಗಿ ಭೂಮಿಯಿಂದ ತೋರಿಬರುವ ನಕ್ಷತ್ರಗಳ ತಂಡವನ್ನು ರಾಶಿಚಕ್ರವೆಂದು ಕರೆಯಲಾಗುತ್ತದೆ. ಯೆಹೂದದ ಅರಸ ಯೋಷೀಯನ ಕುರಿತು 2 ಅರಸುಗಳು 23:5 ಹೇಳುವುದು: “ಇದಲ್ಲದೆ ಯೆಹೂದಪ್ರಾಂತದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಸುತ್ತಣ ಪ್ರದೇಶದಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳನಿಗೂ ಸೂರ್ಯಚಂದ್ರನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ [ರಾಶಿಚಕ್ರದ ನಕ್ಷತ್ರಪುಂಜಕ್ಕೂ, NW] ಧೂಪಸುಡುವದಕ್ಕಾಗಿ ಯೆಹೂದರಾಜರಿಂದ ನೇಮಿಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.” ಇಲ್ಲಿ “ರಾಶಿಚಕ್ರದ ನಕ್ಷತ್ರಪುಂಜ” ಎಂದು ತರ್ಜುಮೆಯಾದ ಅಭಿವ್ಯಕ್ತಿಯು ಹೀಬ್ರು ಶಬ್ದ ಮಸ್ಜಾಲಹತ್ ನಿಂದ ಬಂದಿರುತ್ತದೆ. ಬೈಬಲಿನಲ್ಲಿ ಒಂದೇ ಸಾರಿ ಬರುತ್ತದಾದರೂ ಯೋಬ 38:32 ರಲ್ಲಿ ಕಂಡುಬರುವ ಮಸ್ಜಾರಹತ್ಗೆ ಇದು ಸಂಬಂಧಿಸಿದ್ದೀತು. ಅದರ ಪೂರ್ವಾಪರವು ತಾನೇ ಅದರ ಅರ್ಥವನ್ನು ಸ್ಫುಟಗೊಳಿಸಲು ಸಹಾಯಿಸುತ್ತದೆ.
ಯಾವುದನ್ನು ರಾಶಿಚಕ್ರದ ಮಂಡಲವೆಂದು ಕರೆಯಬಹುದೊ ಅದರ ಸಂಶೋಧನೆಯ ಪ್ರಶಸ್ತಿಯನ್ನು ಸಾಮಾನ್ಯವಾಗಿ ಆರಂಭದ ಬಬಿಲೋನ್ಯರಿಗೆ ಕೊಡಲಾಗುತ್ತದೆ. ಅವರು ನಿಸ್ಸಂದೇಹವಾಗಿ ನಕ್ಷತ್ರಗಳ ನಡುವೆ ಸೂರ್ಯನ ವಾರ್ಷಿಕ ಕಾಂತಿಪಥವನ್ನು ಅವಲೋಕಿಸಿದರು, ಆ ಪಥವು ಈಗ ಸೂರ್ಯನ ಆಪಾತ ಪಥವಾಗಿ ಜ್ಞಾತವಾಗಿದೆ. ಭೂಮಿಯಿಂದ ವೀಕ್ಷಿಸುವಾಗ, ಸೂರ್ಯನ, ಚಂದ್ರನ, ಮತ್ತು ದೊಡ್ಡ ಗ್ರಹಗಳ ಕಾಂತಿಪಥಗಳು, ಆಪಾತ ಪಥದ ಪ್ರತಿ ಪಕ್ಕದಲ್ಲಿ 9 ಡಿಗ್ರಿಗಳಷ್ಟು ಚಾಚಿದ್ದು, ಸುಮಾರು 18 ಡಿಗ್ರಿ ಅಗಲದ ವಲಯದೊಳಗೆ ನೆಲೆಸಿರುವುದಾಗಿ ಖಗೋಳ ವಿಜ್ಞಾನಿಗಳು ಗಮನಿಸಶಕ್ತರಾದರು. ಆದರೂ, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಒಬ್ಬ ಗ್ರೀಕ್ ಖಗೋಳ ವಿಜ್ಞಾನಿಯು ರಾಶಿಚಕ್ರದಲ್ಲಿ ಪ್ರತಿಯೊಂದನ್ನು 30 ಡಿಗ್ರಿಗಳ 12 ಸಮ ಭಾಗಗಳಾಗಿ ವಿಭಜಿಸಿದ ಬಳಿಕವೇ ಈ ಭಾಗಗಳು ರಾಶಿಚಕ್ರದ ಚಿಹ್ನೆಗಳಾಗಿ ಕರೆಯಲ್ಪಟ್ಟವು ಮತ್ತು ಸಂಬಂಧಿತ ನಕ್ಷತ್ರಪುಂಜಗಳ ಹೆಸರನ್ನು ಪಡೆದವು. “ಜೋಡಿಆ್ಯಕ್” (ರಾಶಿಚಕ್ರ) ಎಂಬ ಪದವು ಗ್ರೀಕ್ ಶಬ್ದದಿಂದ ಬಂದದ್ದಾಗಿ, “ಪ್ರಾಣಿಗಳ ವೃತ್ತ” ಎಂದು ಅದರ ಅರ್ಥ. ಯಾಕಂದರೆ ರಾಶಿಚಕ್ರದ 12 ನಕ್ಷತ್ರಪುಂಜಗಳಲ್ಲಿ ಹೆಚ್ಚಿನವು ಮೂಲತಃ ಪ್ರಾಣಿಗಳ ಅಥವಾ ಕಡಲ ಜೀವಿಗಳ ಹೆಸರುಗಳಿಂದ ನಿರ್ದೇಶಿಸಲ್ಪಟ್ಟವು.
ಇಂದು ಈ ಚಿಹ್ನೆಗಳು ಅವು ಮೂಲತಃ ಹೆಸರಿಸಲ್ಪಟ್ಟ ನಕ್ಷತ್ರಪುಂಜಗಳೊಂದಿಗೆ ಇನ್ನುಮೇಲೆ ಸಾಮ್ಯಹೊಂದುವುದಿಲ್ಲ. ಇದು ಯಾವುದನ್ನು ವಿಷುವತ್ಸಂಕ್ರಾಂತಿಗಳ ಮಂದಚಲನೆಯೆಂದು ತಿಳಿಯಲಾಗುತ್ತದೊ ಆ ಕಾರಣದಿಂದಾಗಿದೆ. ಮುಗಿಸಲಿಕ್ಕೆ ಸುಮಾರು 26,000 ವರ್ಷಗಳನ್ನು ತೆಗೆದುಕೊಳ್ಳುವ ಒಂದು ಆವರ್ತನೆಯಲ್ಲಿ ನಕ್ಷತ್ರಪುಂಜಗಳು ಪ್ರತಿ 70 ವರ್ಷಕ್ಕೆ ಕ್ರಮೇಣ, ಸುಮಾರು ಒಂದು ಡಿಗ್ರಿಯಷ್ಟು ಪೂರ್ವಾಭಿಮುಖವಾಗಿ ಚಲಿಸುವ ಕಾರಣದಿಂದಲೆ ಈ ಮಂದಚಲನೆಯಾಗುತ್ತದೆ. ಹೀಗೆ ಮೇಷರಾಶಿಯ ಚಿಹ್ನೆಯು ಕಳೆದ 2,000 ವರ್ಷಗಳಲ್ಲಿ, ಸುಮಾರು 30 ಡಿಗ್ರಿಗಳಷ್ಟು, ಮೀನ ನಕ್ಷತ್ರಪುಂಜದೊಳಗೆ ಚಲಿಸಿದೆ.
ಜ್ಯೋತಿಶ್ಶಾಸ್ತ್ರದೊಂದಿಗೆ ಸಂಬಂಧ
ರಾಶಿಚಕ್ರದ ನಕ್ಷತ್ರಪುಂಜಗಳು ಆರಂಭದ ಮೆಸಪೊಟೇಮ್ಯರ ಕಾಲದಿಂದ ಹಿಡಿದು ಮಿಥ್ಯಾರಾಧನೆಯ ವಸ್ತುಗಳಾಗಿ ಮಾಡಲ್ಪಟ್ಟವು. ವಿವಿಧ ನಕ್ಷತ್ರಪುಂಜಗಳಲ್ಲಿ ಪ್ರತಿಯೊಂದಕ್ಕೆ ನಿರ್ದಿಷ್ಟ ಗುಣಗಳು ಅಧ್ಯಾರೋಪಿಸಲ್ಪಟ್ಟವು, ಬಳಿಕ ಇವನ್ನು, ಕೊಡಲಾದ ಯಾವುದೆ ಸಮಯದಲ್ಲಿ ರಾಶಿಚಕ್ರದ ಚಿಹ್ನೆಗಳಿಗೆ ಆಕಾಶಸ್ಥ ಕಾಯಗಳ ನಿರ್ದಿಷ್ಟ ಸ್ಥಾನ ಮತ್ತು ಸಂಬಂಧದ ಮೇಲೆ ಆಧರಿಸಿ, ಜ್ಯೋತಿಶ್ಶಾಸ್ತ್ರದ ಭವಿಷ್ಯವಾಣಿಗಳಲ್ಲಿ ಬಳಸಲ್ಪಟ್ಟವು. ಎರಡನೆಯ ಅರಸುಗಳು 23:5ರ ವಚನದಲ್ಲಿ ತೋರಿಸಲ್ಪಟ್ಟಂತೆ, ಜ್ಯೋತಿಶ್ಶಾಸ್ತ್ರದ ಅಂತಹ ಉಪಯೋಗವು ಯಾರನ್ನು ನಿರ್ದಿಷ್ಟ ರಾಜರು ದೇಶದೊಳಗೆ ಕರತಂದರೋ ಆ ವಿಧರ್ಮಿ ದೇವರ ಪೂಜಾರಿಗಳಿಂದ ಯೂದಾಯಲ್ಲಿ ಒಳಸೇರಿಸಲ್ಪಟ್ಟಿತು. ಅಂತಹ ನಕ್ಷತ್ರ ಪೂಜೆಯನ್ನು ಯೆಹೋವ ದೇವರು ಬಹಳ ಹಿಂದೆಯೆ ಮರಣಶಿಕ್ಷೆಯ ಮೇಲೆ ನಿಷೇಧಿಸಿದ್ದನು.—ಧರ್ಮೋಪದೇಶಕಾಂಡ 17:2-7.
ಜ್ಯೋತಿಶ್ಶಾಸ್ತ್ರವು ಬಬಿಲೋನ್ಯ ಭಕ್ತಿಯ ಒಂದು ಪ್ರಧಾನ ಭಾಗವಾಗಿತ್ತು. ಆದರೂ ಅವಳ ಜ್ಯೋತಿಷ್ಯರಿಂದ ರಾಶಿಚಕ್ರದ ಮೇಲೆ ಆಧರಿಸಿ ನುಡಿದ ಭವಿಷ್ಯವಾಣಿಗಳು, ಪ್ರವಾದಿ ಯೆಶಾಯನು ನಿಷ್ಕೃಷ್ಟವಾಗಿ ಮುನ್ನೆಚ್ಚರಿಕೆ ಕೊಟ್ಟರೂ ಬಬಿಲೋನನ್ನು ನಾಶನದಿಂದ ರಕ್ಷಿಸಲಿಲ್ಲ.
ಆಧುನಿಕ ಕಾಲದಲ್ಲಿ ರಾಶಿಚಕ್ರದ ಚಿಹ್ನೆಗಳು ಅನೇಕ ಜನರ ಆರಾಧನೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಾ ಇವೆ. ಕುತೂಹಲಕರವಾಗಿ, ರಾಶಿಚಕ್ರದ ಚಿಹ್ನೆಗಳು ಕ್ರೈಸ್ತಪ್ರಪಂಚದ ಕೆಲವು ಧಾರ್ಮಿಕ ಕತೀಡ್ರಲ್ಗಳೊಳಗೆ ಸೇರಿರುತ್ತವೆ ಮತ್ತು ಪ್ಯಾರಿಸ್ನ ಕತೀಡ್ರಲ್ ಆಫ್ ನೋಟ್ರ ಡಾಮ್ ಹಾಗೂ ಫ್ರಾನ್ಸ್ನ ಆ್ಯಮಿಯನ್ಸ್ ಮತ್ತು ಚಾರ್ಟ್ರಸ್ ಕತೀಡ್ರಲ್ಗಳಂತಹ ಸ್ಥಳಗಳಲ್ಲಿ ಇಂದು ಕಾಣಸಿಗುತ್ತವೆ.