ನಕ್ಷತ್ರಗಳು ವಾಸ್ತವವಾಗಿ ನಿಮ್ಮ ಜೀವನವನ್ನು ನಿಯಂತ್ರಿಸುತ್ತವೋ?
ಒಬ್ಬ ಅಂಶಕಾಲಿಕದ ಜ್ಯೋತಿಷಿ ಹೇಳುವುದು: “ಅನೇಕಾನೇಕರು ವಾಡಿಕೆಯ ಅರ್ಥರಹಿತ ವಿಷಯಗಳ ಕುರಿತು ಕೇಳಬಯಸುತ್ತಾರೆ—ನಾನು ಲಕ್ಷಾಧಿಪತಿಯಾಗುವುದು ಯಾವಾಗ ಅಥವಾ ಶ್ರೀ ಅತ್ಯುತ್ತಮನನ್ನು ನಾನು ಯಾವಾಗ ಸಂಧಿಸುವೆ?” ಹೌದು, ಹೆಚ್ಚಿನ ಜನರು ಜ್ಯೋತಿಷಿಗಳನ್ನು ಸಮೀಪಿಸುವುದು ತಮ್ಮ ಭವಿಷ್ಯದ ಕುರಿತು ತಿಳಿಯಲಿಕ್ಕಾಗಿ. ಮತ್ತು ಅನೇಕ ಜ್ಯೋತಿಶ್ಶಾಸ್ತ್ರಜ್ಞರು ಇಂಥವರ ಅಪೇಕ್ಷೆಯನ್ನು ಹಣ ತಕ್ಕೊಂಡು ಪೂರೈಸಲು ತವಕಪಡುತ್ತಾರೆ.
ಆದರೂ, ಆಧುನಿಕರು ಎಂದೆಣಿಸಿಕೊಳ್ಳುವ ಜ್ಯೋತಿಷಿಗಳು ಈ ವೀಕ್ಷಣವನ್ನು ಉಪೇಕ್ಷಿಸುತ್ತಾರೆ. ಮೇಲಿನ ಅಂಶಕಾಲಿಕ ಜ್ಯೋತಿಷಿ ಹೇಳುವುದು: “ನಾನು ಹಾಗಲ್ಲ, ಜನರು ತಮ್ಮನ್ನು ತಿಳಿದುಕೊಳ್ಳುವಂತೆ ನಾನು ಸಹಾಯಮಾಡುತ್ತೇನೆ.” ಹಾಗಾದರೆ, ಜ್ಯೋತಿಶ್ಶಾಸ್ತ್ರವು ಜನರು ತಮ್ಮನ್ನು ತಿಳಿದುಕೊಳ್ಳುವಂತೆ ಯಾವ ವಿಧದಲ್ಲಿ ಸಹಾಯಮಾಡುತ್ತದೆಂದು ಹೇಳಲಾಗುತ್ತದೆ?
ಮಾನವ ಚಟುವಟಿಕೆಗಳು ಸೂರ್ಯ, ಚಂದ್ರ, ನಕ್ಷತ್ರಗಳಿಂದ ಪ್ರಭಾವಿತವಾಗುತ್ತವೆಂದು ಎಲ್ಲರೂ ಬಲ್ಲರು. ಋತು ಮತ್ತು ಬೆಳವಣಿಗೆಯ ಚಕ್ರವನ್ನು ಸೂರ್ಯನು ನಿರ್ಧರಿಸುತ್ತಾನೆ. ಭರತವಿಳಿತಗಳ ಹಿಂದಿರುವ ಮುಖ್ಯಶಕ್ತಿ ಚಂದ್ರನು. ಸಮುದ್ರ ಯಾನದಲ್ಲಿ ದೀರ್ಘಕಾಲದಿಂದ ನಕ್ಷತ್ರಗಳನ್ನು ಮಾರ್ಗದರ್ಶಿಯಾಗಿ ಉಪಯೋಗಿಸಲಾಗಿದೆ. ಹಾಗಾದರೆ, ಈ ಆಕಾಶಸ್ಥ ಕಾಯಗಳು ನಮ್ಮ ಜೀವನದ ಇತರ ಚಟುವಟಿಕೆಗಳಲ್ಲಿ ಪರಿಣಾಮಕರ ಪಾತ್ರವನ್ನು ವಹಿಸುತ್ತವೆಂದು ಊಹಿಸಸಾಧ್ಯವೇ?
ಜ್ಯೋತಿಷ್ಯ ಹೌದೆಂದು ಉತ್ತರಿಸುತ್ತದೆ. ರಹಸ್ಯಗರ್ಭಿತ ನಕ್ಷತ್ರಪುಂಜದಲ್ಲಿ, ನಮ್ಮ ಜನನ ಸಮಯದಲ್ಲಿ ಸೂರ್ಯ, ಚಂದ್ರ ಮತ್ತು ಗ್ರಹಗಳ ಸ್ಥಾನವು ನಮ್ಮ ನಡತೆ ಮತ್ತು ಜೀವನದ ಮೇಲೆ ಪ್ರಭಾವಬೀರುತ್ತವೆಂಬುದು ಜ್ಯೋತಿಶ್ಶಾಸ್ತ್ರದ ಮೂಲಸೂತ್ರ. ಹೀಗೆ, ಒಬ್ಬನ ಜನನ ಸಮಯ ಮತ್ತು ಸ್ಥಳವನ್ನು ತಿಳಿಯುವ ಒಬ್ಬ ಜ್ಯೋತಿಷಿಯು ನಕ್ಷತ್ರ ಮತ್ತು ಗ್ರಹಗಳ ಸ್ಥಾನವನ್ನು ತೋರಿಸಿ ಒಂದು ನಿರ್ದಿಷ್ಟ ಸಮಯದಲ್ಲಿ ಆ ವ್ಯಕ್ತಿಯ ವರ್ತನೆಯನ್ನು ಯಾವ ವಿಷಯಗಳು ಪ್ರಭಾವಿಸಬಹುದೆಂಬ ಜಾತಕವನ್ನು ರಚಿಸಬಲ್ಲನು. ಈ ವಾದಕ್ಕೆ ಅಸ್ತಿವಾರವೇನು? ಇದು ಎಷ್ಟು ವಿಶ್ವಾಸಾರ್ಹ?
ಇದನ್ನು ಪ್ರಯೋಗ ಮಾಡಿನೋಡಲು, ಫ್ರೆಂಚ್ ಮನೋಶಾಸ್ತ್ರಜ್ಞ ಮೈಕಲ್ ಗಾಕೆಲಿನ್ ಎಂಬವರು ಒಬ್ಬ ಗಲ್ಲಿಗೇರಿಸಲ್ಪಟ್ಟಿದ್ದ ಕೊಲೆಪಾತಕಿಯ ಜನ್ಮದಿನ ಮತ್ತು ಸ್ಥಳವನ್ನು ವಿಶ್ಲೇಷಣೆಗಾಗಿ ಒಬ್ಬ ಜೋಯಿಸನಿಗೆ ಕಳುಹಿಸಿದನು. ಮತ್ತು ಈ ವಿಶ್ಲೇಷಣೆಯನ್ನು ಅವರು ತಾವು ಧರ್ಮಾರ್ಥವಾಗಿ ಜಾತಕ ವಿಶ್ಲೇಷಣೆ ಮಾಡುತ್ತೇವೆಂದು ಕೊಟ್ಟ ಜಾಹೀರಾತಿಗೆ ಉತ್ತರಿಸಿದ 150 ಜನರಿಗೆ ಕಳುಹಿಸಿದರು. ಇದರ ಪರಿಣಾಮ? 90 ಸೇಕಡಾ ಜನರು ತಾವು ಪಡೆದ ವಿಶ್ಲೇಷಣೆ ತಮ್ಮ ವ್ಯಕ್ತಿತ್ವದ ನಿಷ್ಕೃಷ್ಟ ವರ್ಣನೆಯೆಂದೂ 80 ಸೇಕಡಾ ಮಂದಿ, ತಮ್ಮ ಸ್ನೇಹಿತರೂ ಕುಟುಂಬಗಳೂ ಇದನ್ನೊಪ್ಪುತ್ತವೆಂದೂ ಹೇಳಿದರು.
ವಾಸ್ತವವಾದ ತರ್ಕಬದ್ಧತೆಯ ವಿಷಯವು ಏನಂದರೆ ಜ್ಯೋತಿಶ್ಶಾಸ್ತ್ರದ ಪಠನಗಳು ಸಾಮಾನ್ಯವಾಗಿ ಎಷ್ಟು ಅಸ್ಪಷ್ಟ ಭಾಷೆಯಲ್ಲಿ ಬರೆಯಲ್ಪಡುತ್ತವೆಂದರೆ, ಜಟಿಲ ಮಾನವ ಪ್ರಕೃತಿಯಿಂದಾಗಿ, ಒಬ್ಬನು ತನ್ನನ್ನು ಸೂಚಿಸುವ ವಿಷಯವನ್ನು ಅದರಲ್ಲಿ ಹುಡುಕುವುದಾದರೆ, ಪಠನವು ಯಾವುದರ ಮೇಲೆ ಆಧಾರವಾಗಿದ್ದರೂ, ಅವನು ಅದನ್ನು ಸದಾ ಕಂಡುಕೊಳ್ಳುವನು.
ಉಗಮ
ಇದು ನಮ್ಮನ್ನು ಅಂತಿಮ ವಿವಾದಾಂಶಕ್ಕೆ ತರುತ್ತದೆ: ನಕ್ಷತ್ರಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆಂದು ಊಹಿಸೋಣ. ಆದರೆ ಆ ಪ್ರಭಾವ ಯಾವ ವಿಧದಲ್ಲಿ ಬರುತ್ತದೆ? ವಿಜ್ಞಾನಕ್ಕೆ ತಿಳಿದಿರುವ ಸಕಲಶಕ್ತಿಗಳಲ್ಲಿ ಯಾವ ಶಕ್ತಿ ಅಥವಾ ಶಕ್ತಿಗಳು ಇದರಲ್ಲಿ ಸೇರಿವೆ? ನಕ್ಷತ್ರಗಳು ಮತ್ತು ಗ್ರಹಗಳು ಅಷ್ಟೊಂದು ದೂರದಲ್ಲಿರುವುದರಿಂದ ಒಬ್ಬ ವಿಜ್ಞಾನಿ ಗಮನಿಸಿದ್ದು: “ಒಂದು ಹೊಸದಾಗಿ ಜನಿಸಿದ ಶಿಶುವಿನ ಮೇಲೆ ಬೀಳುವ ಪರಿಣಾಮದ ಸಂಬಂಧದಲ್ಲಿ, ಅಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯನ ಗುರುತ್ವಾಕರ್ಷಣ ಶಕ್ತಿ ಮತ್ತು ಕೋಣೆಯಲ್ಲಿರುವ ಬೆಳಕಿನಿಂದ ಬರುವ ವಿದ್ಯುತ್ಕಾಂತ ವಿಕಿರಣ ಯಾವ ಗ್ರಹಗಳಿಂದ ಬರುವ ಶಕ್ತಿಗಿಂತಲೂ ಹೆಚ್ಚಾಗಿದೆ.” ಹಾಗಾದರೆ ನಕ್ಷತ್ರಗಳು ಗುರುತ್ವಾಕರ್ಷಣ, ವಿದ್ಯುತ್ಕಾಂತ ಅಥವಾ ವಿಜ್ಞಾನಕ್ಕೆ ತಿಳಿದಿರುವ ಇನ್ನಾವ ಶಕ್ತಿಯ ಮೂಲಕವೂ ನಮ್ಮ ಮೇಲೆ ಪ್ರಭಾವ ಬೀರದಿದ್ದರೆ, ಈ ಪ್ರಭಾವದ ಉಗಮ ಯಾವುದು?
ಈ ರಹಸ್ಯಾರ್ಥದ ಪ್ರಶ್ನೆಯ ವಿಷಯದಲ್ಲಿ ಖಗೋಲ ವಿಜ್ಞಾನದ ಫ್ರೊಫೆಸರ್ ಜಾರ್ಜ್ ಏಬೆಲ್ ಎಂಬವರು ತಮ್ಮ ಸೈಅನ್ಸ್ ಆ್ಯಂಡ್ ಪ್ಯಾರನೊರ್ಮಲ್ ಎಂಬ ಪುಸ್ತಕದಲ್ಲಿ ಬರೆಯುತ್ತಾರೆ. ನಕ್ಷತ್ರ ಮತ್ತು ಗ್ರಹಗಳ ಶಕ್ತಿಯ ವಿಷಯದಲ್ಲಿ ಜ್ಯೋತಿಶ್ಶಾಸ್ತ್ರಜ್ಞರು ಮಾಡಿರುವ ಸಕಲ ವಾದಗಳನ್ನು ಪರೀಕ್ಷಿಸಿದ ಬಳಿಕ ಅವರು ಬರೆಯುವುದು:
“ಗ್ರಹಗಳು ನಮ್ಮ ಮೇಲೆ ಪ್ರಭಾವ ಬೀರುವುದಾದರೆ ಅದು ವಿಚಿತ್ರ ಗುಣಲಕ್ಷಣಗಳಿರುವ ಅಜ್ಞಾತವಾದ ಒಂದು ಶಕ್ತಿಯ ಮೂಲಕವಾಗಿರಬೇಕು: ಅದು ಕೆಲವು ಆಕಾಶಸ್ಥ ಕಾಯಗಳಿಂದ—ಎಲ್ಲವುಗಳಿಂದಲ್ಲ—ಹೊರಡಬೇಕು, ಭೂಮಿಯ ಕೆಲವೇ ವಸ್ತುಗಳಿಗೆ—ಎಲ್ಲವುಗಳಿಗಲ್ಲ—ಅವು ತಟ್ಟಬೇಕು. ಅದರ ಬಲ ಅದನ್ನು ಹೊರಡಿಸುವ ಗ್ರಹಗಳ ದೂರ, ಸಾಂದ್ರತೆ ಅಥವಾ ಇತರ ಗುಣಗಳ ಮೇಲೆ ಹೊಂದಿಕೊಂಡಿರಸಾಧ್ಯವಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಿಜ ವಿಶ್ವದಲ್ಲಿ ಕಂಡುಹಿಡಿಯಲ್ಪಟ್ಟಿರುವ ಇತರ ಪ್ರತಿಯೊಂದು ಶಕ್ತಿ ಮತ್ತು ಪ್ರಕೃತಿ ನಿಯಮಕ್ಕೆ ಅನ್ವಯಿಸುವ ಸಾರ್ವತ್ರಿಕತ್ವ, ಕ್ರಮ, ಮತ್ತು ಸಾಮರಸ್ಯದ ಕೊರತೆ ಇಲ್ಲಿರುವುದು.”
ವಿಜ್ಞಾನಕ್ಕೆ ಇಂಥ ಶಕ್ತಿಯ ಪರಿಚಯವಿಲ್ಲ. ಜ್ಯೋತಿಷ್ಯವು ಕೆಲಸ ನಡಿಸುವುದಾದರೆ ಇದು “ನಿಜ ವಿಶ್ವ”ದ ಹೊರಗಿನ ಶಕ್ತಿ ಅಥವಾ ಶಕ್ತಿಗಳಿಂದಾಗಿ ಕಾರ್ಯನಡಿಸಬೇಕು. ಆದರೆ ಜ್ಯೋತಿಶ್ಶಾಸ್ತ್ರದ ಬೇರುಗಳು ಎಲ್ಲಿ ನಕ್ಷತ್ರ ಮತ್ತು ಗ್ರಹಗಳನ್ನು ದೇವತೆಗಳೆಂದು ಪೂಜಿಸಲಾಗುತ್ತಿತ್ತೋ ಆ ಬಾಬೆಲಿನಲ್ಲಿವೆಯೆಂದು ಜ್ಞಾಪಿಸಿಕೊಳ್ಳುವಾಗ, ಅದರ ಪ್ರಭಾವದ ಉಗಮ “ನಿಜ ವಿಶ್ವ”ದಿಂದಲ್ಲ, ಪ್ರಕೃತ್ಯಾತೀತದಿಂದಲೇ ಎಂಬುದು ನಮ್ಮನ್ನು ಆಶ್ಚರ್ಯಗೊಳಿಸಬಾರದು.
ಜ್ಯೋತಿಶ್ಶಾಸ್ತ್ರದ ಹಿಂದಿರುವ ಶಕ್ತಿ
“ಲೋಕವೆಲ್ಲವು ಕೆಡುಕನ” ಅಂದರೆ ಅದೃಶ್ಯನೂ, ಬಲಾಢ್ಯನೂ ಆದ ಆತ್ಮಜೀವಿಯಾಗಿದ್ದು ಭೂಮಿಯಲ್ಲಿ ಜನರನ್ನು ಮತ್ತು ಘಟನೆಗಳನ್ನು ನಿಯಂತ್ರಿಸಲು ಮತ್ತು ಯುಕ್ತಿಯಿಂದ ಒಯ್ಯಲು ಸಮರ್ಥನಾಗಿರುವವನ “ವಶದಲ್ಲಿ ಬಿದ್ದಿದೆ” ಎಂದು ಬೈಬಲು ತೋರಿಸುತ್ತದೆ. (1ಯೋಹಾನ 5:19) ಕೆಲವು ಭವಿಷ್ಯ ನುಡಿಗಳು ನೆರವೇರುವಂತೆ ತೋರಿಸಲು ವಿಷಯಗಳನ್ನು ಯುಕ್ತಿಯಿಂದ ತಿರುಗಿಸುವುದರ ಮೂಲಕ ಸೈತಾನನೂ ದೆವ್ವಗಳೂ ಜನರ ಗಮನವನ್ನು ವಶಪಡಿಸಿಕೊಳ್ಳುವುದರಲ್ಲಿ ಸಾಫಲ್ಯಹೊಂದಿ ಜ್ಯೋತಿಶ್ಶಾಸ್ತ್ರವನ್ನು ಆರಾಧನಾಪದ್ಧತಿಯಾಗಿ ಮಾಡಿವೆ.
ಆದರೆ ಗಮನಾರ್ಹವಾಗಿ, ನೆರವೇರಿವೆ ಎಂದು ಭಾವಿಸಲ್ಪಡುವ ಭವಿಷ್ಯ ನುಡಿಗಳು ಎಂಥವುಗಳು? ಅವು ಅಧಿಕಾಂಶ, ಭೀಕರವೂ ಅಮಂಗಲಸೂಚಕವೂ, ಸೈತಾನನ ಮತ್ತು ದೆವ್ವಗಳ ಲಕ್ಷಣವುಳ್ಳದ್ದೂ ಆಗಿರುವ ಮರಣ, ಕೊಲೆ, ಮೋಸಹತ್ಯ, ವಿಪತ್ತು—ಇಂಥವುಗಳ ವಿಷಯವಲ್ಲವೇ? ಸರಳ ಸತ್ಯವೇನಂದರೆ, ಜ್ಯೋತಿಷ್ಯವು ತನ್ನ ಉದ್ದೇಶಗಳು ಗುರಿಮುಟ್ಟುವಂತೆ ಜನರನ್ನು ನಿಯಂತ್ರಿಸಿ ಪ್ರಭಾವಿಸುವ ಪಿಶಾಚನ “ತಂತ್ರೋಪಾಯ”ಗಳಲ್ಲಿ ಒಂದಾಗಿದೆ.—ಎಫೆಸ್ಯದವರಿಗೆ 6:11.
ಆ ಉದ್ದೇಶವೇನು? “ಈ ಪ್ರಪಂಚದ ದೇವರು ಅವಿಶ್ವಾಸಿಗಳ ಮನಸ್ಸನ್ನು ಅವರು ಕ್ರಿಸ್ತನ ಪ್ರಭಾವದ ಸುವಾರ್ತೆಯ ಬೆಳಕನ್ನು ಕಾಣದಂತೆ ಕುರುಡುಮಾಡಿದ್ದಾನೆ.” (2ಕೊರಿಂಥದವರಿಗೆ 4:4, RSV) ಈ ಗುರಿ ಮುಟ್ಟುವುದರಲ್ಲಿ ಜ್ಯೋತಿಶ್ಶಾಸ್ತ್ರವು ತನ್ನ ಯಜಮಾನನಿಗೆ ಉತ್ತಮವಾಗಿ ಸೇವೆ ಮಾಡಿದೆ. ಆಸ್ಟ್ರೇಲಿಯದ ಜ್ಯೋತಿ ಭೌತ ವಿಜ್ಞಾನಿ ವಿನ್ಸ್ ಫೋರ್ಡ್ ಗಮನಿಸಿದ್ದು: “ಜ್ಯೋತಿಶ್ಶಾಸ್ತ್ರ ಒಂದು ವಿಧದ ಧರ್ಮವಾಗಿ ಪರಿಣಮಿಸಿದೆಯಾದರೂ ಅದು ತೀರಾ ರುಜುವಾತಾಗದ ವಿಷಯ . . . ನಾನು ಇಷ್ಟೇ ಹೇಳಬಲ್ಲೆ, ಏನಂದರೆ ಅದರಲ್ಲಿ ನಂಬುವವರು ತಮ್ಮ ವರ್ತನೆಗಳಿಗೆ ಜವಾಬ್ದಾರಿಯನ್ನು ಆ ಬಡ ನಕ್ಷತ್ರಗಳ ಮೇಲೆ ಹೊರಿಸುವ ಬದಲಿಗೆ ತಾವೇ ತಕ್ಕೊಳ್ಳದಿರುವುದೇ ನನಗೆ ಬೇಸರ.”
ಸಾ.ಶ.ಪೂ.ಎಂಟನೆಯ ಶತಮಾನದಲ್ಲಿ ಪ್ರವಾದಿ ಯೆಶಾಯನು ಭವಿಷ್ಯಜ್ಞಾನ ಹೇಳುವವರಿಗೆ ಒಂದು ಮೂದಲಿಸುವ ಪಂಥಾಹ್ವಾನವನ್ನು ಕೊಡುವಂತೆ ಪ್ರೇರಿಸಲ್ಪಟ್ಟನು: “ಖಗೋಲಜ್ಞರು, ಜೋಯಿಸರು, ಪಂಚಾಂಗದವರು, ಇವರೆಲ್ಲರೂ ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ.”—ಯೆಶಾಯ 47:13.
ಜ್ಯೋತಿಶ್ಶಾಸ್ತ್ರದಲ್ಲಿ ನಂಬುವವನು, ವಿಧಿವಾದಿಗಳ ‘ಆಗಲಿರುವುದೇ ಆಗುತ್ತದೆ, ಏಕಂದರೆ ಅದು ನಕ್ಷತ್ರಗಳಲ್ಲಿ ಬರೆಯಲ್ಪಟ್ಟಿದೆ’ ಎಂಬ ದೃಷ್ಟಿಕೋನವನ್ನು ಒಪ್ಪುತ್ತಾನೆ. ಇದು ದೇವರ ಇಚ್ಛೆಯನ್ನು ಅಥವಾ ಆ ಇಷ್ಟಕ್ಕನುಸಾರ ಮನುಷ್ಯನು ವರ್ತಿಸುವ ಜವಾಬ್ದಾರಿಯನ್ನು ಅಲ್ಲಗಳೆಯುವುದಕ್ಕೆ ಸಮಾನ.
ಆದುದರಿಂದ, ನಮ್ಮ ಜೀವನವನ್ನು ನಡಿಸಲು ಬೇಕಾದ ಸೂಚನೆ ಮತ್ತು ಶಕುನಗಳಿಗೆ ನಕ್ಷತ್ರಗಳನ್ನು ನೋಡುವ ಬದಲಿಗೆ ನಕ್ಷತ್ರಗಳಿಂದ ನಾವೇನು ಕಲಿಯಬಲ್ಲೆವು? ಹೌದು, ನಕ್ಷತ್ರಗಳು ನಮಗೇನು ತಿಳಿಸಬಲ್ಲವು? ಮುಂದಿನ ಲೇಖನ ಇದಕ್ಕೆ ಒಂದು ಉತ್ತರ ನೀಡುತ್ತದೆ. (g89 11/22)
[Box on page 6]
“ಜ್ಯೋತಿಶ್ಶಾಸ್ತ್ರ ವೈಜ್ಞಾನಿಕವೋ?
ಇತ್ತೀಚೆಗೆ ನಡೆದ ವಿಜ್ಞಾನದ ಕಂಡುಹಿಡಿತಗಳು ಜ್ಯೋತಿಶ್ಶಾಸ್ತ್ರಕ್ಕೆ ದುರ್ಘಟವಾದ ಪಂಥಾಹ್ವಾನಗಳನ್ನು ಕೊಟ್ಟಿವೆ. ಈ ಕೆಳಗಿನ ನಿಜತ್ವಗಳನ್ನು ಪರಿಗಣಿಸಿರಿ:
▪ ನಕ್ಷತ್ರಪುಂಜಗಳಲ್ಲಿ ಇವೆ ಎಂಬಂತೆ ತೋರಿಬರುವ ನಕ್ಷತ್ರಗಳು ಗುಂಪುಗಳಾಗಿ ಇಲ್ಲವೆಂದು ಈಗ ತಿಳಿದುಬಂದಿದೆ. ಇವುಗಳಲ್ಲಿ ಕೆಲವು ದೂರಾಂತರಿಕ್ಷದಲ್ಲಿಯೂ ಇತರ ನಕ್ಷತ್ರಗಳು ಸಾಧಾರಣ ಸಮೀಪದಲ್ಲಿಯೂ ಇವೆ. ಹೀಗೆ, ವಿವಿಧ ನಕ್ಷತ್ರಪುಂಜಗಳ ರಾಶಿಚಕ್ರ ವರ್ಗಗುಣಗಳು ಶುದ್ಧ ಕಾಲ್ಪನಿಕ.
▪ ಆದಿಯ ಜೋಯಿಸರುಗಳಿಗೆ ಯುರೇನಸ್, ನೆಫ್ಜೂನ್ ಮತ್ತು ಪ್ಲೂಟೊ ಗ್ರಹಗಳು ಆಜ್ಞಾತವಾಗಿದ್ದವು. ದೂರದರ್ಶಕ ಯಂತ್ರ ನಿರ್ಮಾಣಕ್ಕೆ ಮೊದಲು ಇವುಗಳನ್ನು ಕಂಡುಹಿಡಿಯಲಾಗಲಿಲ್ಲ. ಹಾಗಾದರೆ ಶತಮಾನಗಳ ಮೊದಲು ಬರೆದಿರುವ ಜ್ಯೋತಿಶ್ಶಾಸ್ತ್ರದ ತಖ್ತೆಗಳಲ್ಲಿ ಇವುಗಳ “ಪ್ರಭಾವಗಳು” ಹೇಗೆ ಎಣಿಕೆಗೆ ಬಂದಿದ್ದವು?
▪ ನಮ್ಮ ವ್ಯಕ್ತಿತ್ವದ ಗುಣಗಳು, ಜನನದಲ್ಲಲ್ಲ, ಗರ್ಭಧಾರಣೆಯಲ್ಲಿ ರಚಿಸಲ್ಪಡುತ್ತವೆಂದು ಅನುವಂಶೀಯತೆಯ ವಿಜ್ಞಾನವು ತಿಳಿಸುತ್ತದೆ. ಆಗ ತಂದೆಯಿಂದ ಬರುವ ಲಕ್ಷಾಂತರ ವೀರ್ಯಕಣಗಳಲ್ಲಿ ಒಂದು ತಾಯಿ ಅಂಡಾಣುವನ್ನು ಸೇರುತ್ತದೆ. ಆದರೂ, ಜ್ಯೋತಿಶ್ಶಾಸ್ತ್ರವು ಒಬ್ಬನ ಜಾತಕವನ್ನು ಒಂಭತ್ತು ತಿಂಗಳುಗಳು ಕಳೆದ ಬಳಿಕ, ಅಂದರೆ ಜನ್ಮ ಸಮಯದಲ್ಲಿ ಗೊತ್ತುಮಾಡುತ್ತದೆ.
▪ ಸೂರ್ಯ, ಚಂದ್ರ ಮತ್ತು ಗ್ರಹಗಳು ಚಲಿಸುತ್ತವೆಂದು ನಮಗೆ ಕಂಡುಬರುವ ರಾಶಿಚಕ್ರವೆಂದು ಕರೆಯಲ್ಪಡುವ ಆಕಾಶದ ಆ ಭಾಗವನ್ನು ಜೋಯಿಸರು 12 ಸಮಾನ ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗಕ್ಕೆ ಒಂದು ನಕ್ಷತ್ರಪುಂಜದ ಚಿಹ್ನೆಯನ್ನು ಕೊಡುತ್ತಾರೆ. ಆದರೆ ವಾಸ್ತವದಲ್ಲಿ, ಆಕಾಶದ ಅದೇ ಭಾಗದಲ್ಲಿ 14 ನಕ್ಷತ್ರಪುಂಜಗಳಿವೆ. ಅವು ಗಾತ್ರದಲ್ಲಿ ಸಮಾನವಲ್ಲ ಮತ್ತು ಅವು ಸ್ವಲ್ಪ ಮಟ್ಟಿಗೆ ಒಂದರ ಮೇಲೊಂದು ವ್ಯಾಪಿಸುವುದೂ ಉಂಟು. ಹೀಗೆ, ಜ್ಯೋತಿಷಿಗಳು ಬರೆಯುವ ತಖ್ತೆಗೂ ಆಕಾಶದಲ್ಲಿರುವುದಕ್ಕೂ ಯಾವ ನಿಜವಾದ ಭೌತಿಕ ಹೋಲಿಕೆಯೂ ಇಲ್ಲ.
▪ ಭೂಮಿಯಿಂದ ಪ್ರೇಕ್ಷಕನು ಸೂರ್ಯನು ನಕ್ಷತ್ರಪುಂಜಗಳ ನಡುವೆ ಯಾತ್ರೆ ಮಾಡುವ ಸಮಯವನ್ನು ನೋಡುವಾಗ ಅದು ಇಂದು, 2,000 ವರ್ಷಗಳ ಹಿಂದೆ ಜೋಯಿಸರ ಪಟ್ಟಿ ಮತ್ತು ತಖ್ತೆಗಳು ಬರೆಯಲ್ಪಟ್ಟಾಗ ಇದ್ದುದಕ್ಕಿಂತ ಸುಮಾರು ಒಂದು ತಿಂಗಳು ಹಿಂದೆ ಇದೆ. ಹೀಗೆ, ಜೂನ್ ತಿಂಗಳ ಉತ್ತರಾರ್ಧದಲ್ಲಿ ಅಥವಾ ಜುಲೈ ತಿಂಗಳ ಮೊದಲಲ್ಲಿ ಹುಟ್ಟಿದ ಒಬ್ಬನನ್ನು ಅವನು ಕರ್ಕಾಟಕ ರಾಶಿಯವನು, ತೀರಾ ಸುಲಭ ಮನೋವಿಕಾರಿ. ಚಿಂತಾಕುಲ ಮತ್ತು ಸೇರ್ಪಡೆಯಾಗದವನು ಎಂದು ಜ್ಯೋತಿಶ್ಶಾಸ್ತ್ರ ಹೇಳುತ್ತದೆ. ಏಕಂದರೆ ಆಗ ಸೂರ್ಯನು, ತಖ್ತೆಗನುಸಾರ, ಕರ್ಕಾಟಕ ರಾಶಿಯಲ್ಲಿದ್ದಾನೆ. ಆದರೆ, ನಿಜವಾಗಿ ಆಗ ಸೂರ್ಯನು ಮಿಥುನ ರಾಶಿಯಲ್ಲಿರುತ್ತಾನೆ. ಇದು ಆ ವ್ಯಕ್ತಿಯನ್ನು “ಸಂಸರ್ಗಿ, ಸ್ವಾರಸ್ಯದ ಮತ್ತು ಹರಟುವ ಸ್ವಭಾವದವನಾಗಿ” ಮಾಡಬೇಕು.
[ಪುಟ 7ರಲ್ಲಿರುವಚೌಕ]
ಮೂಡಣ ಮತ್ತು ಪಡುವಣ ದೇಶಗಳ ಜ್ಯೋತಿಶ್ಶಾಸ್ತ್ರ
ಪಾಶ್ಚಿಮಾತ್ಯ ದೇಶಗಳ ಜ್ಯೋತಿಶ್ಶಾಸ್ತ್ರಪದ್ಧತಿ, ಪ್ರತಿವರ್ಷ ಸೂರ್ಯನು ಹಾದುಹೋಗುತ್ತಾನೆಂದು ತೋರಿಬರುವ 12 ನಕ್ಷತ್ರಪುಂಜಗಳಲ್ಲಿ ಪ್ರತಿಯೊಂದಕ್ಕೆ ವಿಶೇಷ ಗುಣಲಕ್ಷಣಗಳನ್ನು ಕೊಡುತ್ತದೆ. ಈ ನಕ್ಷತ್ರ ಗುಂಪುಗಳಿಗೆ ಗ್ರೀಕರು ಹೆಸರು ಕೊಟ್ಟರು. ಅವರು ಅವುಗಳನ್ನು ಏರಿಈಸ್ ಎಂಬ ಟಗರು, ಟೌರಸ್ ಎಂಬ ಗೂಳಿ, ಜೆಮಿನಿ ಎಂಬ ಜೋಡಿ. ಇತ್ಯಾದಿ ಪ್ರಾಣಿಗಳಾಗಿ ಕಂಡರು.
ರಸಕರವಾಗಿ, ಪುರಾತನದ ಚೀನಾ ಮತ್ತು ಜಪಾನಿನ ಜ್ಯೋತಿಶ್ಶಾಸ್ತ್ರವೂ ರಾಶಿಚಕ್ರವನ್ನು, ನಾಯಿ, ಕೋಳಿ, ಕಪಿ, ಆಡು, ಕುದುರೆ, ಇತ್ಯಾದಿ ಎಂಬ ಭೂಶಾಖೆಯ 12 ಪ್ರಾಣಿಗಳನ್ನು ಸೂಚಿಸುವ 12 ಪ್ರದೇಶಗಳಾಗಿ ವಿಭಾಗಿಸುತ್ತದೆ. ಮತ್ತು ಪ್ರತಿಯೊಂದು ಪ್ರಾಣಿ ಒಂದು ನಿರ್ದಿಷ್ಟ ಸಮಯಾವಧಿಯಲ್ಲಿ ಅದರ ಗುಣಾನುಸಾರವಾಗಿ ಪ್ರಭಾವ ಬೀರುತ್ತದೆಂದು ಹೇಳಲಾಗುತ್ತದೆ. ಹೀಗೆ, ಆಕಾಶಗಳ ಅನುರೂಪ ಭಾಗಗಳನ್ನು ಈ ಕೆಳಗಿನಂತೆ ಮೂಡಣ ಮತ್ತು ಪಡುವಣ ದೇಶಗಳ ಜ್ಯೋತಿಶ್ಶಾಸ್ತ್ರ ಹೆಸರಿಸುತ್ತದೆ:
ಪಡುವಣ ರಾಶಿಚಕ್ರ ಮೂಡಣ ರಾಶಿಚಕ್ರ
ಏರಿಈಸ್ ಟಗರು ನಾಯಿ
ಟೌರಸ್ ಗೂಳಿ ಕೋಳಿ
ಜೆಮಿನಿ ಜೋಡಿ ಕಪಿ
ಕ್ಯಾನ್ಸರ್ ಏಡಿ ಆಡು
ಲಿಯೋ ಸಿಂಹ ಕುದುರೆ
ವರ್ಗೊ ಕನ್ಯೆ ಹಾವು
ಲಿಬ್ರ ತ್ರಾಸು ಘಟಸರ್ಪ
ಸ್ಕಾರ್ಪಿಯೊ ವೃಶ್ಚಿಕ ಮೊಲ
ಸ್ಯಾಗಿಟೇರಿಯಸ್ ಬಿಲ್ಲುಗಾರ ಹುಲಿ
ಕ್ಯಾಪ್ರಿಕಾರ್ನ್ ಆಡು ಗೂಳಿ
ಆ್ಯಕ್ವೇರಿಯಸ್ ಜಲವಾಹಕ ಇಲಿ
ಪಿಸೀಸ್ ಮೀನುಗಳು ಹಂದಿ
ನಾವು ಈ ಎರಡು ಪದ್ಧತಿಗಳನ್ನು ಹೋಲಿಸುವಾಗ ಏನು ಕಂಡುಹಿಡಿಯುತ್ತೇವೆ? ವಿಚಿತ್ರವಾಗಿ, ಮೂಡಣ ಮತ್ತು ಪಡುವಣ ದೇಶಗಳ ನಕ್ಷತ್ರಪುಂಜಗಳು ಪೂರ್ತಿ ವಿಭಿನ್ನ ವಿಧಗಳಲ್ಲಿ ಕಾರ್ಯನಡಿಸುವಂತೆ ಕಾಣುತ್ತದೆ. ಹೀಗೆ, ಉದಾಹರಣೆಗೆ, ಪಾಶ್ಚಿಮಾತ್ಯ ಜ್ಯೋತಿಶ್ಶಾಸ್ತ್ರವು, ಸೂರ್ಯನು ಏರಿಈಸ್ನಲ್ಲಿರುವಾಗ ಹುಟ್ಟುವ ವ್ಯಕ್ತಿ ಸಾಧಿಸಿ ಹೇಳುವವನು, ಟೌರಸ್ನಲ್ಲಿರುವಾಗ ಹುಟ್ಟುವ ವ್ಯಕ್ತಿ ಹಟಮಾರಿ, ಎಂದೆಲ್ಲಾ ಹೇಳುತ್ತದೆ. ಆದರೆ ಈ ಗುಣಗಳು ನಾಯಿ ಮತ್ತು ಕೋಳಿಯ ಗುಣಗಳೊಂದಿಗೆ ಸರಿಬೀಳುವುದಿಲ್ಲ. ಆದರೂ ಮೂಡಣ ಜ್ಯೋತಿಶ್ಶಾಸ್ತ್ರ ಇದನ್ನು ಮುಂತಿಳಿಸುತ್ತದೆ. ಜೋಡಿಗಳ ವಿಷಯದಲ್ಲಿಯೂ ಇದನ್ನೇ ಹೇಳಬಹುದು. ಹೀಗೆ, ಯಾವ ಪದ್ಧತಿಯನ್ನು ಆರಿಸಿಕೊಳ್ಳುತ್ತೇವೋ ಅದನ್ನು ಹೊಂದಿಕೊಂಡು ಒಂದೇ ನಕ್ಷತ್ರವು ಪೂರ್ತಿ ಭಿನ್ನವಾದ ಗುಣಗಳುಳ್ಳದ್ದಾಗಿದೆ ಮತ್ತು ಭಿನ್ನವಾದ ಪ್ರಭಾವವನ್ನು ಬೀರುತ್ತದೆಂದು ಹೇಳಲಾಗುತ್ತದೆ. ಹಾಗಾದರೆ, ನಿಯಂತ್ರಣ ಯಾರದ್ದು, ನಕ್ಷತ್ರಗಳದ್ದೋ, ಜೋಯಿಸರ ಕಲ್ಪನೆಯದ್ದೋ?
[ಪುಟ 8 ರಲ್ಲಿರುವಚಿತ್ರ]
ಜಗತ್ತಿನ ಅತೀ ಪ್ರಾಚೀನ ಜಾತಕ, ಪ್ರಾಯಶಃ ಏಪ್ರಿಲ್ 29, 410 ಸಾ.ಶ.ಪೂ.ಇದು ಬೆಬಿಲೊನಿನಲ್ಲಿ ಅಚ್ಚು ಹೊಯ್ಯಲಾಗಿತ್ತು
[ಕೃಪೆ]
Courtesy of the Visitors of theAshmolean Museum, Oxford