ನಿಜ ಸೌಂದರ್ಯವನ್ನು ನೀವು ವಿಕಸಿಸಬಲ್ಲಿರಿ
ಸುರೂಪದ ವಿಷಯದಲ್ಲಿ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಬೈಬಲು ಬುದ್ಧಿವಾದವನ್ನಿತ್ತಿದೆ. ಪುರುಷರ ವಿಷಯದಲ್ಲಿ ಅದನ್ನುವದು: “ಯುವಕರಿಗೆ ಬಲವು ಭೂಷಣ.” (ಜ್ಞಾನೋಕ್ತಿ 20:29) ಹೌದು, ಯುವಜನರ ಬಲ ಮತ್ತು ಹುರುಪು ಅತ್ಯಾಕರ್ಶಣೀಯವಾಗಬಲ್ಲದು. ಆದರೆ ಆ ಯೌವನದ ಚೈತನ್ಯವು ಕುಂದಿದಾಗ ಏನಾಗುತ್ತದೆ? ಬೈಬಲ್ ಜ್ಞಾನೋಕ್ತಿ ಅನ್ನುವುದು: “ನರೇಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.” (ಜ್ಞಾನೋಕ್ತಿ 16:31) ನೀತಿಯು ಅಂತರಿಕ ಸೌಂದರ್ಯದ ಒಂದು ಲಕ್ಷಣ. ಯುವಕನು ಅದನ್ನು ವಿಕಸಿಸುವದಾದರೆ, ಆ ಆಕರ್ಶಕ ಯುವಶಕ್ತಿಯು ಕುಂದಿದಾಗಲೂ ಅದಿನ್ನೂ ಅಲ್ಲಿರುವುದು.
ಸ್ತ್ರೀಯರ ಕುರಿತು ಬೈಬಲನ್ನುವುದು: “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.” (ಜ್ಞಾನೋಕ್ತಿ 31:30) ಸುಂದರಿಯೂ ಮನಮೋಹಕಳೂ ಆದ ಸ್ತ್ರೀಯು ಆಹ್ಲಾದಕರ ಸಂಗಾತಿಯು. ಆದರೆ ಈ ದೈಹಿಕ ಮೋಹಕತೆಯ ಹಿಂದೆ ಕಪಟತನ ಮತ್ತು ಒಣ ಸ್ವಾರ್ಥತೆ ಅಡಗಿದ್ದರೆ ಆಗೇನು? ಆಗ ಸೌಂದರ್ಯವು ಮೇಲುಮೇಲಿನದ್ದು, ಅಂತರ್ಯದ ಕುರೂಪವನ್ನು ಅಡಗಿಸುವಂತಾದ್ದು. ರೂಪವು ದಾಟಿಹೋದಾಗ ಅಲ್ಲಿ ಉಳಿಯುವದೇನು? ಸುರೂಪವು ‘ಯೆಹೋವನ ಭಯದ’ ಮೇಲೆ ಆಧರಿಸಿರುವ ಒಂದು ಬಾಡದ ಅಂತರಿಕ ಸೌಂದರ್ಯದಿಂದಲೂ ಸಮಕೂಡಿದ್ದಲ್ಲಿ ಅದೆಷ್ಟು ಚಂದ!
ವ್ಯಕ್ತಿತ್ವದ ಬದಲಾವಣೆ
ಈ ಆಂತರಿಕ ಸೌಂದರ್ಯವನ್ನು ವಿಕಸಿಸ ಸಾಧ್ಯವಿದೆಯೇ? ಹೌದು. ವಾಸ್ತವದಲ್ಲಿ, ಅದು ಕ್ರೈಸ್ತರು ಮಾಡಲೇಬೇಕಾದ ಒಂದು ಸಂಗತಿಯು. ನಿಜ ಸೌಂದರ್ಯವು ದೇವರ ದೃಷ್ಟಿಯಲ್ಲಿ ಮೂಲ್ಯವು. ಆತನು “ಪ್ರತಿಯೊಂದು ವಸ್ತುವನ್ನು ಸಮಯಕ್ಕೆ ತಕ್ಕಹಾಗೆ ಅಂದವಾಗಿ ನಿರ್ಮಿಸಿದ್ದಾನೆ.” (ಪ್ರಸಂಗಿ 3:11) ಯಾರ ನಡವಳಿಕೆಯು ಚೆಂದವಿಲ್ಲದ ಅಂತರ್ಯದ ಗುಣಗಳನ್ನು ಪ್ರದರ್ಶಿಸುತ್ತದೋ ಅಂತವರ ಭಕ್ತಿಯನ್ನು ಆತನು ಸ್ವೀಕರಿಸಲಾರನು.
ಒಂದು ಆಂತರಿಕ ಸೌಂದರ್ಯವನ್ನು ಬೆಳೆಸುವ ಅಗತ್ಯವು ಕೊಲೊಸ್ಸೆಯವರಿಗೆ ಅಪೋಸ್ತಲ ಪೌಲನು ಬರೆದ ಮಾತುಗಳಿಂದ ಸೂಚಿತವಾಗಿದೆ. ಮೊದಲಾಗಿ ಅವನು ಎಚ್ಚರಿಸುವುದು: “ಕ್ರೋಧ, ಕೋಪ, ಮತ್ಸರ, ದೂಷಣೆ, ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿ ಬಿಡಿರಿ. ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ. ನೀವು ಪೂರ್ವ ಸ್ವಭಾವಗಳನ್ನು ಅದರ ಕೃತ್ಯಗಳ ಕೂಡ ತೆಗೆದುಬಿಡಿರಿ.” ಹೌದು, ಅಂತಹ ಅಂದಗೆಟ್ಟ ವಿಷಯಗಳನ್ನು ನಡಿಸುವವರು ದೇವರಿಗೆ ಮತ್ತು—ಸುವಿಚಾರಿ ಮಾನವರಿಗೆ ಹೇಯರು. ಅನಂತರ, ಪೌಲನು ಮುಂದರಿಸಿದ್ದು: “ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಇದು ಅದನ್ನು ಸೃಪ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ಪೂರ್ಣ ಜ್ಞಾನಕ್ಕನುಸಾರ ನೂತನವಾಗುತ್ತಾ ಹೋಗುತ್ತದೆ.” (ಕೊಲೊಸ್ಸೆ 3:8-10) ದೇವರ ಚಿತ್ತಕ್ಕೆ ಅನುಗುಣವಾದ ಯೋಚನೆ ಮತ್ತು ಭಾವನಾ ವಿಧವನ್ನು ನಾವು ‘ಧರಿಸಿಕೊಳ್ಳ’ ಬೇಕು. ಈ “ನೂತನ ಸ್ವಭಾವದ” ಗುಣಲಕ್ಷಣಗಳೇನು?
ಕ್ರಿಸ್ತೀಯ ಗುಣಗಳು
ಅದನ್ನುಂಟುಮಾಡುವ ಅನೇಕ ಅಂದವಾದ ಗುಣಗಳನ್ನು ಬೈಬಲು ತಿಳಿಸುತ್ತದೆ. ಆದರೆ ಈ ಅಂತರಿಕ ಸೌಂದರ್ಯದ ಮೂಲಾಧಾರವು ಯೇಸುವಿನ ಈ ಮಾತುಗಳಲ್ಲಿ ವಿವರಿಸಲ್ಪಟ್ಟಿದೆ: “ನಿನ್ನ ದೇವರಾಗಿರುವ ಯೆಹೋವನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಪೂರ್ಣಮನದಿಂದಲೂ ಪ್ರೀತಿಸಬೇಕು. ಇದು ಅತಿ ಮುಖ್ಯವಾದದ್ದು ಮತ್ತು ಮೊದಲನೆಯ ಆಜ್ನೆ. ಇದಕ್ಕೆ ಸಮಾನವಾದ ಎರಡನೆಯದು ಇದೆ. ಅದ್ಯಾವದಂದರೆ ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:37-39) ದೇವರ ಪ್ರೀತಿಯು ನಮ್ಮನ್ನು ಆತನು ಮೆಚ್ಚುವ ವ್ಯಕ್ತಿಗಳಾಗಿರುವಂತೆ ಬಯಸಲು ನಡಿಸುತ್ತದೆ. ಅಂತಹ ಪ್ರೀತಿಯು ಆತನ ಕುರಿತು ಇತರರಿಗೆ ತಿಳಿಸಲು, ಸಹಾಯ ಮಾಡಲು ನಮ್ಮನ್ನು ಪ್ರೇರಿಸುತ್ತದೆ, ಪ್ರತಿಯಾಗಿ, ಅವರೂ ತಮ್ಮ ನಿರ್ಮಾಣಿಕನನ್ನು ತಿಳಿಯ ಶಕ್ತರಾಗುವರು.—ಯೆಶಾಯ 52:7.
ಹೊಸ ವ್ಯಕ್ತಿತ್ವವನ್ನುಂಟುಮಾಡುವ ಬೇರೆ ಕೆಲವು ಗುಣಗಳು ಅಪೋಸ್ತಲ ಪೌಲನಿಂದ ವಿವರಿಸಲ್ಪಟ್ಟಿವೆ: “ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ. ಇಂಥವುಗಳನ್ನು ಯಾವ ಧರ್ಮವೂ ಆಕ್ಷೇಪಿಸುವುದಿಲ್ಲ.”—ಗಲಾತ್ಯ 5:22, 23.
ಇದಕ್ಕೆ ಕೂಡಿಸಿ, ಬೈಬಲು ವಿಶಿಷ್ಟವಾಗಿ ಗಂಡಂದಿರಿಗೆ ಅನ್ನುವುದು: “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. . .ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ 5:23, 25) ಮತ್ತು ಹೆಂಡತಿಯರಿಗೆ ಬೈಬಲನ್ನುವುದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. . .ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.” (ಎಫೆಸ 5:22, 33) ಪ್ರೀತಿಯಲ್ಲಿ, ತಾಳ್ಮೆಯಲ್ಲಿ ಮತ್ತು ನಿಸ್ವಾರ್ಥದಲ್ಲಿ ಗಂಡನು ತನ್ನ ಜವಾಬ್ದಾರಿಕೆಗಳನ್ನು ನೆರವೇರಿಸುವುದಾದರೆ ಕುಟುಂಬ ಜೀವಿತವೆಷ್ಟು ಆಕರ್ಶಕವಾಗಬಲ್ಲದು! ಮತ್ತು ಹೆಂಡತಿಯು ಸ್ವರ್ಧಾತ್ಮಕಳಾಗಿರದೆ ಯಾ ಅತಿ ಟೀಕೆಯನ್ನು ಮಾಡದೆ ತನ್ನ ಗಂಡನಿಗೆ ಪ್ರೀತಿಯ ಬೆಂಬಲವನ್ನು ಕೊಡುವ ಮೂಲಕ ತನ್ನ ಅಂತರ್ಯದ ಸೌಂದರ್ಯವನ್ನು ತೋರಿಸುವಾಗ ಪುರುಷನಿಗೆ ತನ್ನ ಯೋಗ್ಯ ಪಾತ್ರವನ್ನು ನಿರ್ವಹಿಸುವದೆಷ್ಟು ಸುಲಭವು. ಅಂತಹ ಪರಿಸ್ಥಿತಿಗಳ ಕೆಳಗೆ ಕುಟುಂಬ ಜೀವಿತವು ನಿಜವಾಗಿಯೂ ಅಹ್ಲಾದಕರವು.
ಮೊಲನೆಯ ಲೇಖನದಲ್ಲಿ ಉಲ್ಲೇಖಿಸಲಾದ ಉದಾಹರಣೆಗಳು ಈ ಗುಣಗಳಲ್ಲಿ ಕೆಲವನ್ನು ಕ್ರಿಯೆಯಲ್ಲಿ ತೋರಿಸಿವೆ. ಶುಲೇಮ್ಯ ಕನ್ಯೆಯು ಕುರುಬ ಹುಡುಗನಲ್ಲಿ ತನಗಿದ್ದ ದೃಢತೆ ಮತ್ತು ಆಳವಾದ ಪ್ರೀತಿಯನ್ನು ಸೊಲೊಮೋನನ ಆಸ್ಥಾನದ ಥಳಕಿಗಾಗಿ ಅವನನ್ನು ತ್ಯಜಿಸಲು ನಿರಾಕರಿಸುವ ಮೂಲಕ ತೋರಿಸಿದಳು. ತನ್ನ ಧನಿಯಾದ ಫೊಟೀಫರನ ವಿರುದ್ಧ ಪಾಪಗೈಯಲು ನಿರಾಕರಿಸಿದ ಮೂಲಕ ಯೊಸೇಫನು ತನ್ನ ಅಂತರಂಗದ ಒಳ್ಳೇತನವನ್ನು ತೋರಿಸಿದನು. ಫೊಟೀಫರನ ಹೆಂಡತಿಯಿಂದ ಮೋಹಿತನಾಗುವ ಬದಲು ಅಲ್ಲಿಂದ ಓಡಿಹೋದ ಮೂಲಕ ಅವನು ದಮೆಯನ್ನು ತೋರಿಸಿದನು. ತನ್ನ ಜೀವಿತದ ಅನೇಕ ಸಂಕಟಕರ ಘಟನೆಗಳು ತನ್ನನ್ನು ಕಹಿಮಾಡಲು ಬಿಡದ ಮೂಲಕ ಅವನು ಸಾಧುತ್ವ, ಸಮಾಧಾನ ಮತ್ತು ದೀರ್ಘಶಾಂತಿಯನ್ನು ಉದಾಹರಿಸಿದನು.
ಅಂದಗೆಟ್ಟ ಲೋಕದಲ್ಲಿ ಸೌಂದರ್ಯ
ಇಂತಹ ಅಂದವಾದ ಗುಣಗಳು ಇಂದು ವ್ಯಾವಹಾರಿಕವೋ? ಅಲ್ಲವೆಂದು ಅನೇಕರ ಎಣಿಕೆ. ಬದಲಾಗಿ ಅವರು ತಾವಿಂದು ಜೀವಿಸುವ ಸ್ವಾರ್ಥಪರ, ದುರಾಸೆಯ ಲೋಕಕ್ಕೆ ಕಠಿಣತಮ ಮೇಲ್ಮೈನ್ನು ವಿಕಸಿಸುವ ಮೂಲಕ ಪ್ರತಿಕ್ರಿಯೆ ತೋರಿಸುತ್ತಾರೆ. ಪಾರಾಗಿ ಉಳಿಯಬೇಕಾದರೆ ತಾವು ನಿಷ್ಕರುಣಿಗಳೂ, ಮಹತ್ವಾಕಾಂಕ್ಷಿಗಳೂ, ತಾವೇ ಮುಂದಾಗಲು ಹುಡುಕುವವರೂ, ಕೈಗೆ ಸಿಕ್ಕಿದ್ದನ್ನೆಲ್ಲಾ ಗಿಟ್ಟಿಸುವವರೂ ಆಗಿರಬೇಕೆಂದು ಅವರು ಭಾವಿಸುತ್ತಾರೆ.
ವ್ಯತಿರಿಕ್ತವಾಗಿ, ಬೈಬಲ್ ಪ್ರೋತ್ಸಾಹಿಸುವುದು: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಟರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನೂ ನೋಡಲಿ.” (ಪಿಲಿಪ್ಪಿ 2:3, 4) ಸರ್ವಸಾಮಾನ್ಯವಾಗಿ ಮಾನವಕುಲವು ಈ ಉತ್ತಮ ಉಪದೇಶವನ್ನು ಹಿಂಬಾಲಿಸದ ಕಾರಣ ಮಾನವ ಸಮಾಜವು ಇಷ್ಟು ಕೆಟ್ಟದಾಗಿ ಹೋಗುತ್ತಾ ಇದೆ.
ಅದಲ್ಲದೆ, ಸದ್ಯದ ಲೋಕದಲ್ಲಿ ವ್ಯಕ್ತಿಯ ಯಶಸ್ಸನ್ನು ಅವನ ಸ್ಥಾನ ಯಾ ಹಣದಿಂದ ಅಳೆಯಲಾಗುತ್ತದೆ. ಐಶ್ವರ್ಯವಂತನು ಸಾಫಲ್ಯ ವ್ಯಕ್ತಿಯೆಂದೆಣಿಸಲ್ಪಡುತ್ತಾನೆ. ಆದರೆ, ನಿಜ ಮೌಲ್ಯಗಳ ವಿಷಯದಲ್ಲಾದರೋ ವ್ಯಕ್ತಿಯೊಬ್ಬನು ಧನಿಕನಿರಲಿ ಬಡವನಿರಲಿ ಅದು ಪೂರ್ಣ ಅಪ್ರಾಮುಖ್ಯ. ಸಿರಿವಂತಿಕೆಯಲ್ಲಿ ಅದರದ್ದೇ ಆದ ಅಪಾಯಗಳು ಖಂಡಿತವಾಗಿಯೂ ಇವೆ. ಬೈಬಲು ಎಚ್ಚರಿಸುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕಾರಕವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ.” ಅದು ಕೂಡಿಸುವುದು: “ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.”—1 ತಿಮೋಥಿ 6:9, 10.
ಸ್ವಾರ್ಥಿಗಳೂ, ಅತ್ಯಾಶೆಯುಳ್ಳವರೂ, ಪ್ರಾಪಂಚಿಕರೂ ಹಾಗೂ ನಿಷ್ಕರುಣಿಗಳು ಆಗಾಗ್ಯೆ ತಾತ್ಕಾಲಿಕ “ಯಶಸ್ಸನ್ನು” ಇಂದು ಪಡೆಯುತ್ತಾರೆಂಬದು ಸತ್ಯ. ಆದರೆ ಅದು ನಿಜ ಯಶಸ್ಸಲ್ಲ, ಅಂತಹ ಅಂದಗೆಟ್ಟ ಜೀವಿತಮಾರ್ಗದ ಬೆಲೆಯು—ವೈಯಕ್ತಿಕ ಜನಅಪ್ರಿಯತೆ, ಭಗ್ನವಿವಾಹಗಳು, ಅನಾರೋಗ್ಯ ಮತ್ತು ಸಾಮಾನ್ಯ ಹತಾಶೆಗಳು ಬಲುಹೆಚ್ಚು. ಮನುಷ್ಯನು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟನು, ಆದರೆ ದೇವರು ಅವನಲ್ಲಿ ಮೂಲದಲ್ಲಿ ಇಟ್ಟ ಗುಣಗಳನ್ನು ಅವನು ಅಷ್ಟು ಬಲವಾಗಿ ವಿರೋಧಿಸುತ್ತಾನಾದರೆ ಅವನೆಂದೂ ವೈಯಕ್ತಿಕ ಸಂತೋಷವನ್ನು ಗಳಿಸನು.—ಆದಿಕಾಂಡ 1:27.
ಆಂತರಿಕ ಸೌಂದರ್ಯವನ್ನು ವಿಕಸಿಸುವುದು
ಹಾಗಾದರೆ ಈ ಲೋಕದ ದುಷ್ಟ ಪ್ರಭಾವವನ್ನು ನಾವು ಪ್ರತಿಭಟಿಸಿ ಉದಾತ್ತವಾದ ದೈವಿಕ ಗುಣಗಳನ್ನು ಹೇಗೆ ಬೆಳೆಸಬಲ್ಲೆವು? ಪೌಲನು “ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ ಮತ್ತು ಶಮೆದಮೆ” ಎಂಬ ಗುಣಗಳನ್ನು ಪಟ್ಟಿಮಾಡಿದಾಗ, ಅವನದನ್ನು “ಆತ್ಮದ ಫಲಗಳು” ಎಂದು ಕರೆದನು. (ಗಲಾತ್ಯ 5:22, 23) ಆದ್ದರಿಂದ, ಈ ಸುಂದರವಾದ ಅಂತರಿಕ ಗುಣಗಳನ್ನು ನಾವು ಬೆಳೆಸಬೇಕಾದರೆ ದೇವರ ಆತ್ಮದ ಆವಶ್ಯಕತೆ ಇದೆ.
ಹೇಗೆ? ಒಳ್ಳೆದು, ದೇವರಾತ್ಮದ ಮೂಲಕ ಪ್ರೇರಿತವಾದ ಬೈಬಲನ್ನು ಅಭ್ಯಸಿಸುವ ಮೂಲಕ ಈ ಗುಣಗಳನ್ನು ಗುರುತಿಸಲು ನಮಗೆ ಸಹಾಯ ದೊರೆಯುವುದು ಮತ್ತು ಅವನ್ನು ಬೆಳೆಸುವ ನಮ್ಮ ಅಪೇಕ್ಷೆಗೆ ಬಲವು ಸಿಗುವುದು. (2 ತಿಮೋಥಿ 3:16) ಅಂತಹ ಒಂದು ಯೋಜನೆಯಲ್ಲಿ ನೆರವಾಗಲು ಯೆಹೋವನ ಸಾಕ್ಷಿಗಳು ಸದಾ ಸಂತೋಷಿತರು ಯಾಕಂದರೆ ಬೈಬಲನ್ನು ಅಭ್ಯಸಿಸಲು ಜನರಿಗೆ ಸಹಾಯ ನೀಡುವುದು ತಮ್ಮ ಸೇವೆಯ ಒಂದು ಭಾಗವೆಂದು ಅವರೆಣಿಕೆ. ಪ್ರಾಮಾಣಿಕ ಸ್ವಪರೀಕ್ಷಣೆಯು ನಮ್ಮ ಕೊರತೆಯನ್ನು ಕಾಣಲು ನಮಗೆ ಶಕ್ಯವನ್ನಾಗಿ ಮಾಡುತ್ತದೆ ಮತ್ತು ಈ ಕ್ಷೇತ್ರಗಳಲ್ಲಿ ದೇವರ ಆತ್ಮದ ಸಹಾಯಕ್ಕಾಗಿ ನಾವು ಬೇಡ ಸಾಧ್ಯವಿದೆ. ನಮಗೆ ಬೇಕಾದ ನಮ್ಮ ಸಹನಂಬಿಗಸ್ತರ ಬೆಂಬಲ ದೇವರ ಜತೆ ಆರಾಧಕರೊಂದಿಗೆ ಸಹವಾಸ ಮಾಡುವದರಿಂದ ದೊರೆಯುತ್ತದೆ. ಇಲಿಯ್ಲೂ ದೇವರ ಆತ್ಮವು ಸಹಾಯ ನೀಡುತ್ತದೆ ಯಾಕೆಂದರೆ ಯೇಸುವಂದದ್ದು: “ಇಬ್ಬರು ಮೂವರು ಎಲ್ಲಿ ನನ್ನ ಹೆಸರಿನಲ್ಲಿ ಕೂಡಿಬರುತ್ತಾರೋ ಅಲ್ಲಿ ಅವರ ನಡುವೆ ನಾನಿರುತ್ತೇನೆ.”—ಮತ್ತಾಯ 18:20.
ಮುಂದಿರುವ ಒಂದು ಅಂದವಾದ ಲೋಕ
ಸ್ವಾಭಾವಿಕವಾಗಿಯೇ, ನಮ್ಮಲ್ಲಿ ಯಾರೂ ನಮ್ಮ ಅಪೂರ್ಣತೆಗಳನ್ನು ಪೂರ್ಣವಾಗಿ ಪರಿಹರಿಸಿಕೊಳ್ಳಲಾರೆವು. ಆದರೆ ನಾವೀ ಅಂತರ್ಯದ ಸೌಂದರ್ಯವನ್ನು ವಿಕಸಿಸಿಕೊಂಡರೆ, ದೇವರು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು, ಮತ್ತು ಆಶ್ಚರ್ಯಕರವಾಗಿ ಪ್ರತಿಫಲ ಕೊಡುವನು. ಸದ್ಯ ಇರುವುದಕ್ಕಿಂತ ಪೂರ್ಣ ಬೇರೆಯಾದ ಒಂದು ಹೊಸ ಪ್ರಪಂಚ ವ್ಯವಸ್ಥೆಯನ್ನು ಬೇಗನೇ ಬರಮಾಡುವ ದೇವರ ಉದ್ದೇಶವನ್ನು ಬೈಬಲು ತಿಳಿಸುತ್ತದೆ. ಅದರಲ್ಲಿ “ನೀತಿವಂತರು ದೇಶವನ್ನು ಅನುಭವಿಸುವವರಾಗಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಯೇಸು ತಾನೇ ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾಯ 5:5.
ಆ ಸಮಯದಲ್ಲಿ, ಈ ವಿಷಯ ವ್ಯವಸ್ಥೆಯ ಹೇಯವಾದ ಸ್ಪರ್ಧೆಗಳು ಮತ್ತು ಸ್ವಾರ್ಥಗಳು ಸುಂದರವಾದ ಪ್ರಶಾಂತತೆ ಮತ್ತು ನೆಮ್ಮದಿಯಿಂದ ಪಲ್ಲಟಗೊಳ್ಳುವುವು. “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳುಮಾಡುವುದಿಲ್ಲ. ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.” (ಯೆಶಾಯ 11:9) ಹೌದು, ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದು:ಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
ಅಂತಹ ಪರಿಸ್ಥಿತಿಗಳು ರಂಜನೀಯವಾಗಿ ಕೇಳಿಸುತ್ತವೂ? ಅವು ಶಕ್ಯವು ಯಾಕೆಂದರೆ ದೇವರ ಮತ್ತು ನೆರೆಯವನ ಪ್ರೀತಿಯ ಮೇಲಾಧರಿತವಾದ ಆಂತರಿಕ ಸೌಂದರ್ಯವುಳ್ಳವರು ಮಾತ್ರ ಆಗ ಭೂಮಿಯಲ್ಲಿ ನಿವಾಸಿಸುವರು. ಈಗ ಯಾರು ದೇವರನ್ನು ಸೇವಿಸುವವರೂ, “ನೂತನ ವ್ಯಕ್ತಿತ್ವವನ್ನು” ಬೆಳೆಸುವವರೂ, ಆತನ ಮಟ್ಟವನ್ನು ಅನುಸರಿಸಲು ಶ್ರಮಿಸುವವರೂ ಆಗಿದ್ದಾರೋ ಅವರು ದೇವರ ಆ ವಾಗ್ದಾನಗಳ ನೆರವೇರಿಕೆಯನ್ನು ಕಾಣುವರೆಂದು ದೇವರು ವಚನವಿತ್ತಿದ್ದಾನೆ. ಸುರೂಪ, ದೈಹಿಕ ಸೌಂದರ್ಯವು ಅಂತಹ ಆಶೀರ್ವಾದಗಳನ್ನೆಂದೂ ತರಲಾರದು. ಆದ್ದರಿಂದ ಸುವಿಚಾರಿಗಳಾದ ಮಾನವರಿಗೆ ಮತ್ತು ದೇವರಿಗೆ ಸ್ವತಹಾ ಅಷ್ಟೊಂದು ಪ್ರಿಯವಾದ ಬಹುಕಾಲ ಬಾಳುವ ಹಾಗೂ ಬೆಲೆಯುಳ್ಳ ಆ ಆಂತರಿಕ ಸೌಂದರ್ಯವನ್ನು ವಿಕಸಿಸಲು ಎಂತಹ ಉತ್ತಮ ಕಾರಣ ಅಲ್ಲಿದೆ! (w89 2/1)
[ಪುಟ 6 ರಲ್ಲಿರುವ ಚಿತ್ರ]
ದೈಹಿಕವಾಗಿ ಆಕರ್ಶಕರಾಗಿರುವವರು ಸ್ವಾರ್ಥಿಗಳೂ ಕೈವಾಡತೋರಿಸುವವರೂ ಆಗಿರಬಾರದು. ಬದಲು, ದೇವರು ಮೆಚ್ಚುವ ಆಂತರಿಕ ಸೌಂದರ್ಯವನ್ನು ಬೆಳೆಸತಕ್ಕದ್ದು