ದೇವರ ಒಳ್ಳೇತನ ನಿಮ್ಮನ್ನು ಆಕರ್ಷಿಸುತ್ತದೋ?
ಒಬ್ಬ ಅತ್ಯಂತ ಆಪ್ತ ಮಿತ್ರನು ನಿಮಗಿದ್ದಾನೋ? ಇದದ್ದಾದ್ದರೆ ನಿಮಗೆ ಅವನನ್ನು ಆಕರ್ಷಿಸಿದಂತಾದ್ದು ಯಾವುದು ಎಂದು ನೀವೆಂದಾದರೂ ಯೋಚಿಸಿದ್ದೀರೋ? ಅದು ಅವನ (ಯಾ ಅವಳ) ಸುರೂಪವೋ? ಒಂದೇ ವಿಷಯಗಳಲ್ಲಿ ನಿಮಗಿರುವ ಅಭಿರುಚಿಯು ಅದಕ್ಕೆ ನಿಜಕಾರಣವೋ? ಇಲ್ಲವೇ, ದಯೆ ಮತ್ತು ವಿವೇಕವೆಂಬ ಆಳವಾದ ಗುಣವು ಅದಾಗಿತ್ತೋ? ನಿಮ್ಮ ಸ್ನೇಹವನ್ನು ಗಾಢವಾಗಿ ಬಂಧಿಸಿದ ಗುಣವು ಒಳ್ಳೇತನವಾಗಿದ್ದರೆ ಆಗ, ಒಂದು ಬೆಲೆಯುಳ್ಳ ಸಂಬಂಧವು ನಿಮ್ಮದಾಗಿರುವದು. ನಿಜ ಒಳ್ಳೇತನವನ್ನು ಇಂದು ಕಾಣುವುದು ಬಹು ಅಪೂರ್ವ ಯಾಕಂದರೆ ಹೆಚ್ಚಿನವರು “ಒಳ್ಳೇದನ್ನು ಪ್ರೀತಿಸದವರು” ಆಗಿರುತ್ತಾರೆ.—2 ತಿಮೊಥಿ 3:3.
ಕ್ರೈಸ್ತನ ಜೀವಿತದಲ್ಲಿ ಅತಿ ಮಹತ್ವದ ಸಂಬಂಧವು ಇನ್ನೊಬ್ಬ ಮಾನವನೊಂದಿಗಲ್ಲ, ದೇವರೊಂದಿಗೆ. ಹೀಗೆ ಈ ಸಂಬಂಧದ ಕುರಿತು ನೀವು ಯೋಚಿಸುವಾಗ, “ದೇವರ ಗುಣಗಳಲ್ಲಿ ಯಾವುದು ನನ್ನನ್ನು ಅತಿ ಹೆಚ್ಚಾಗಿ ದೇವರ ಕಡೆಗೆ ಎಳೆದಿರುತ್ತದೆ?” ಎಂದು ನೀವೆಂದಾದರೂ ಪರಿಗಣಿಸಿದ್ದೀರೋ?
ದೇವರ ಮುಖ್ಯ ಗುಣಗಳು
ದೇವರ ಮಹತ್ತಾದ ಗುಣಗಳನ್ನು ಬೈಬಲು ತಾನೇ ತಿಳಿಸುತ್ತದೆ. ಸಾಮಾನ್ಯವಾಗಿ ಎತ್ತಿಹೇಳಲ್ಪಟ್ಟದ್ದು ಆತನ ಪ್ರೀತಿ, ಆತನ ನ್ಯಾಯ, ಆತನ ವಿವೇಕ ಮತ್ತು ಆತನ ಸರ್ವಶಕ್ತ ಶಕ್ತಿಯೇ. (ಧರ್ಮೋಪದೇಶ 32:4; ಯೋಬ 12:13; ಕೀರ್ತನೆ 147:5; 1 ಯೋಹಾನ 4:8) ಆ ನಾಲ್ಕು ಮಹತ್ತಾದ ಗುಣಗಳ ನಡುವೆ ಒಂದು ವೇಳೆ ನಮಗೆ ಆಯ್ಕೆ ಮಾಡಲಿದ್ದರೆ ಪ್ರಾಯಶಃ, ದೇವರ ಪ್ರೀತಿಯೇ ನಮ್ಮನ್ನು ಅತಿ ಹೆಚ್ಚಾಗಿ ಆಕರ್ಷಿಸಿತು ಎಂದು ನಾವು ಹೇಳೇವು. ಆತನ ಪ್ರೀತಿಗೆ ಅತಿ ಹತ್ತಿರ ಸಂಬಂಧದಲ್ಲಿ ಇರುವಂಥದ್ದೇ ಆತನ ಪರಮ ಗುಣವಾದ ಒಳ್ಳೇತನ. ಬೈಬಲ್ ಲೇಖಕರು ಇದರ ಕುರಿತು ನಿರರ್ಗಳವಾಗಿ ಬರೆದಿರುತ್ತಾರೆ ಮತ್ತು ಅಂಥ ಒಳ್ಳೇತನವು, ಮಾನವರನ್ನು ತಮ್ಮ ನಿರ್ಮಾಣಿಕನೊಂದಿಗೆ ಒಂದು ಆರೋಗ್ಯಕರವಾದ, ಮನೋಹರ ಸಂಬಂಧಕ್ಕೆ ಎಳೆಯಬಲ್ಲದು.
ಉದಾಹರಣೆಗೆ, ಸಾ. ಶ. ಪೂ. 6 ನೇ ಶತಮಾನದ ಕೊನೆಯಲ್ಲಿ ಪ್ರವಾದಿ ಜೆಕರ್ಯನು, “ಆಹಾ, ಆತನ ಒಳ್ಳೇತನವೆಷ್ಟು, ಆತನ ಸೌಂದರ್ಯವೆಷ್ಟು” ಎಂದು ಉದ್ಗಾರವೆತ್ತಿದ್ದಾನೆ. (ಜೆಕರ್ಯ 9:17) ಜೆಕರ್ಯನಿಗಿಂತ ಅನೇಕ ವರ್ಷಗಳ ಮುಂಚೆ ಯೆಶಾಯನು, ಅದೇ ರೀತಿಯಲ್ಲಿ ಯೆಹೋವನನ್ನು ಸ್ತುತಿಸುತ್ತಾ ಬರೆದದ್ದು: “ಯೆಹೋವನ ಕೃಪಾತಿಶಯವನ್ನು . . . ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನು ಪ್ರಸಿದ್ಧಪಡಿಸುವೆನು.”—ಯೆಶಾಯ 63:7.
ಇದಕ್ಕೆ ಮೂರು ಶತಕಗಳ ಮುಂಚಿತವಾಗಿ ರಾಜ ದಾವೀದನು, ಯೆಹೋವನ ಒಳ್ಳೇತನದ ಕುರಿತಾಗಿ ಅತ್ಯಂತ ಹೃತ್ಪ್ರೇರಕವಾಗಿ ಬರೆದಿದ್ದಾನೆ. ಯೆಹೋವನ ಮಹೋಪಕಾರವನ್ನು ತನ್ನ ಜೀವಮಾನವಿಡೀ ಅನಂದಿಸಿದ ದಾವೀದನು, ಅದನ್ನು ಅನುಭವದಿಂದಲೇ ಬರೆದನು. ದೇವರು ದಾವೀದನಿಗೆ ಅತ್ಯಂತ ಒಳ್ಳೇತನವನ್ನು ತೋರಿಸಿದ್ದನು, ವಿಶೇಷವಾಗಿ, ಬೆತೇಬ್ಷ ಮತ್ತು ಅವಳ ಗಂಡ ಊರೀಯನ ಸಂಬಂಧದಲ್ಲಿ ಅವನ ಅತಿ ಘೋರ ಪಾಪದ ನಂತರ ದೇವರು ಅವನಿಗೆ ದಯೆ ತೋರಿಸಿದಾಗ. (2 ಸಮುವೇಲ 12:9, 13) ಕೀರ್ತನೆ 31:19 ರಲ್ಲಿ ದಾವೀದನು ಗಣ್ಯತೆಯಿಂದ ಘೋಷಿಸಿದ್ದು: “ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಒಳ್ಳೇತನ ಎಷ್ಟೋ ವಿಶೇಷವಾಗಿದೆ.”
ಆ ಪುರಾತನ ಆರಾಧಕರು ದೇವರ ಒಳ್ಳೇತನವನ್ನು ಮೂಲ್ಯ ಮಾಡಿದಷ್ಟು ನೀವು ಮಾಡುತ್ತೀರೋ? ಮಾಡಿದರೆ ನೀವು, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯನ್ನು” ನಿಜವಾಗಿ ಅನುಭವಿಸುವಿರಿ ಹಾಗೂ ಎಲ್ಲಾ ಸಮಯಗಳಲ್ಲಿ ಆತನ ಚಿತ್ತವನ್ನು ಮಾಡಲು ಆಳವಾಗಿ ಪ್ರೇರಿಸಲ್ಪಡುವಿರಿ. (ಫಿಲಿಪ್ಪಿಯವರಿಗೆ 4:7) ನಾವೀಗ, ದೇವರ ಒಳ್ಳೇತನದಲ್ಲಿ ಏನೆಲ್ಲಾ ಸೇರಿದೆ ಮತ್ತು ಅದರ ವ್ಯಾಪ್ತಿಯ ಅಚ್ಚರಿಯೆಷ್ಟು ಎಂಬದನ್ನು ಕೆಲವು ಕ್ಷಣಗಳ ತನಕ ಪರ್ಯಾಲೋಚಿಸುವ. ಇದು ನಿಶ್ಚಯವಾಗಿಯೂ ನಮ್ಮ ನಿರ್ಮಾಣಿಕನ ಕಡೆಗೆ ನಮ್ಮ ಗಣ್ಯತೆಯನ್ನು ಆಳಗೊಳಿಸುವುದು. (w89 12/1)