ಶಾಂತಿ ನೈಜತೆ
ಶಾಂತಿಯನ್ನು ತರಲು ಸಂಯುಕ್ತ ರಾಷ್ಟ್ರ ಸಂಘದ ಪ್ರಯತ್ನಗಳ ಹಿಂದಿರುವ ಆದರ್ಶಧ್ಯೇಯಗಳನ್ನು ಠೀಕಿಸುವವರು ಬಹಳ ಕೊಂಚವೇ. “‘ನಮ್ಮ ಕತ್ತಿಗಳನ್ನು ಬಡಿದು ಗುಳಗಳನ್ನಾಗಿ ಮಾಡೋಣ’ ಎಂಬುದು ಸಂಯುಕ್ತ ರಾಷ್ಟ್ರ ಸಂಘದ ಗುರಿಯನ್ನು ವ್ಯಕ್ತ ಪಡಿಸುತ್ತದೆ” ಎಂದು “ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯಾ” ಹೇಳುತ್ತಾ, ಕೂಡಿಸುವುದು, “ಸಂಯಕ್ತ ರಾಷ್ಟ್ರ ಸಂಘಕ್ಕೆ ಎರಡು ಮುಖ್ಯ ಗುರಿಗಳಿವೆ: ಶಾಂತಿ ಮತ್ತು ಮಾನವ ಘನತೆ.”
ಇಲ್ಲಿ ಪ್ರತಿಮೆಯ ಕೆಳಗೆ ಇರುವ ಬರವಣಿಗೆಯು ಬೈಬಲಿನಲ್ಲಿರುವ ಯೆಶಾಯ ಅಧ್ಯಾಯ 2, ವಚನ 4ರ ಪ್ರವಾದನೆಯ ಭಾವಾನುವಾದವನ್ನು ಕೊಡುತ್ತದೆ. ಒಂದು ಆಧುನಿಕ ತರ್ಜುಮೆಗನುಸಾರ ಅದು ಓದಲ್ಪಡುವದು:
“ಮತ್ತು ಅವರು ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಬಡಿದು ಮಾಡತಕ್ಕದ್ದು.”
ಈ ಘನಗಾಂಭೀರ್ಯತೆಯ ನುಡಿಗಳು ಸಂಯುಕ್ತ ರಾಷ್ಟ್ರ ಸಂಘದ ಸದಸ್ಯ ರಾಷ್ಟ್ರಗಳನ್ನು, ಬಾಳುವ ಶಾಂತಿ ಮತ್ತು ನಿಶಸ್ತ್ರೀಕರಣವನ್ನು ತರಲು ಖಂಡಿತವಾಗಿಯೂ ಪ್ರಚೋದಿಸತಕ್ಕದ್ದು. ಆದರೆ, ವಿಷಾಧಕರವಾಗಿಯೇ, 1945 ರಲ್ಲಿ ಎರಡನೆಯ ಲೋಕ ಯುದ್ಧವು ಕೊನೆಗೊಂಡಾಗ ಅದು ಆರಂಭಿತವಾದಂದಿನಿಂದ, ಸಂಯುಕ್ತ ರಾಷ್ಟ್ರ ಸಂಘದ ಇತಿಹಾಸವು ಅನ್ಯಥಾ ಅರುಹುತ್ತದೆ. ಯಾಕೆ? ಮೂಲತಃ ಯೆಶಾಯದಿಂದ ಉದ್ಧರಿತವಾದ ಮೇಲಿನ ಮಾತುಗಳನ್ನು, ಮಾನವ ಸರಕಾರಗಳು ಮಾಡಿದಂತೆ, ಪ್ರತ್ಯೇಕವಾಗಿ ತೆಗೆದು ಕೊಳ್ಳಲು ಸಾಧ್ಯವಿಲ್ಲದ್ದರಿಂದಲೇ. ಈ ಮಾತುಗಳ ಪೂರ್ವಾಪರವು ಬಹು-ಪ್ರಾಮುಖ್ಯತೆಯುಳ್ಳದ್ದು. ಯಾಕೆ ಎಂದು ಪರಿಗಣಿಸಿರಿ.
ಯೆಶಾಯನ ಸಂದೇಶ
ಯೆಶಾಯನು ಒಬ್ಬ ಪ್ರವಾದಿಯಾಗಿದ್ದನು. ಎಲ್ಲಾ ಕುಲಗಳ ಜನರ ಐಕ್ಯತೆ ಮತ್ತು ಶಾಂತಿಯ ಮಹಿಮಾಭರಿತ ದೃಶ್ಯವೊಂದರ ಕುರಿತು ಅವನು ಮಾತಾಡುತ್ತಾನೆ. ಈ ದೃಶ್ಯವು ನೈಜತೆಯಾಗಿ ಪರಿಣಮಿಸಬೇಕಾದರೆ, ಜನರು ಏನೋ ಒಂದನ್ನು ಮಾಡಲಿಕ್ಕಿರುತ್ತದೆ. ಏನನ್ನು? 4 ನೆಯ ವಚನಕ್ಕೆ ಸಂಬಂಧಿತ 2 ಮತ್ತು 3 ನೆಯ ವಚನಗಳ ಪ್ರಾಮುಖ್ಯತೆಯನ್ನು ಪರಿಗಣಿಸಿರಿ.
“[2] ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. [3] ಹೊರಟು ಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚಿಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು. [4] ಆತನು ದೇಶದೇಶಗಳ ವ್ಯಾಜ್ಯಗಳನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ.”
ಮೊದಲು, ನಮ್ಮ ನಿರ್ಮಾಣಿಕನಾದ ಯೆಹೋವನಿಗೆ “ಆತನ ದಾರಿಗಳನ್ನು” ನಮಗೆ ಬೋಧಿಸಲು ಹಕ್ಕು ಇದೆ ಮತ್ತು ತದನಂತರ ಯೆಶಾಯನು ದಾಖಲಿಸಿದ ಪ್ರಕಾರ ಅವು ‘ನಮ್ಮ ದಾರಿಗಳಿಗಿಂತ ಉನ್ನತವಾಗಿವೆ’ ಎಂಬದನ್ನು ನಾವು ಅಂಗೀಕರಿಸಬೇಕು. (ಯೆಶಾಯ 55:9) ಅನೇಕ ಜನರಿಗೆ, ವಿಶೇಷವಾಗಿ ಸ್ವ-ಪ್ರತಿಷ್ಠೆಯ ಲೋಕದ ಧುರೀಣರಿಗೆ, ಇದನ್ನು ಅಂಗೀಕರಿಸಲು ಕಷ್ಟವೆಂದು ಕಾಣುತ್ತದೆ. ಅವರ ಸ್ವಂತ ದೃಷ್ಟಿಯಲ್ಲಿ ಅವರ ಸ್ವಂತ ಮಾರ್ಗಗಳು ಮಾತ್ರ ಸರಿಯೆಂದು ಕಾಣುತ್ತವೆ. ಆದರೂ, ಅವರ ಮಾರ್ಗಗಳು ಲೋಕ ಶಾಂತಿ ಮತ್ತು ನಿಶಸ್ತ್ರೀಕರಣಕ್ಕೆ ನಡಿಸಲಿಲ್ಲವೆಂಬ ವಾಸ್ತವತೆಯು ಅಂಥ ಪಥದಲ್ಲಿ ಮುಂದುವರಿಯುವುದರ ವ್ಯರ್ಥತೆಯನ್ನು ಖಂಡಿತವಾಗಿ ತೋರಿಸುತ್ತದೆ.
ಎರಡನೆಯದಾಗಿ, ದೇವರ ನಿಯಮಗಳಿಗೆ ಸರಿಹೊಂದಿಸಿ ನಡೆಯಲು ವ್ಯಕ್ತಿಗಳಲ್ಲಿರಬೇಕಾದ ತೀವ್ರಾಸಕ್ತಿಯ ಆವಶ್ಯಕತೆಯನ್ನು ಗಮನಿಸಿರಿ: “ಆತನ ದಾರಿಗಳಲ್ಲಿ ನಾವು ನಡೆಯುವೆವು.” ಆ ಅಧಾರದಲ್ಲಿ ಮಾತ್ರವೇ ಭೂವ್ಯಾಪಕ ಪ್ರಮಾಣದಲ್ಲಿ ಕತ್ತಿಗಳನ್ನು ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಕುಲುಮೆಗೆ ಹಾಕಿ ಬಡಿಯಲು ಸಾಧ್ಯವಾಗುತ್ತದೆ. ಅಂಥ ಆಶಿಸಲ್ಪಟ್ಟ ಒಂದು ಧ್ಯೇಯವನ್ನು ಎಟಕಿಸಿ ಕೊಳ್ಳಲು ಹೇಗೆ ಸಾಧ್ಯ?
ದೈವಿಕ ಬೋಧನೆ
ಅನೇಕರ ಹತ್ತಿರ ಬೈಬಲಿನ ಒಂದು ಪ್ರತಿ ಇರುತ್ತದೆ, ಆ ಪುಸ್ತಕದಲ್ಲಿ ಯೆಹೋವ ದೇವರ ಬೋಧನೆಗಳು ಇರುತ್ತವೆ, ಆದರೆ ಕೇವಲ ಅದು ಇರುವುದಕ್ಕಿಂತಲೂ ಹೆಚ್ಚಿನದ್ದು ಬೇಕಾಗುತ್ತದೆ. ಯೆಹೋವನ ನಿಯಮಗಳು ಮತ್ತು ವಾಕ್ಯಗಳು “ಯೆರೂಸಲೇಮಿನಿಂದ ಹೊರಡುತ್ತವೆ ಎಂದು ಯೆಶಾಯನು ಹೇಳುತ್ತಾನೆ. ಅದರ ಅರ್ಥವೇನು? ಯೆಶಾಯನ ದಿನಗಳಲ್ಲಿ, ಈ ನೈಜ ನಗರದೆಡೆಗೆ ಎಲ್ಲಾ ನಂಬಿಗಸ್ತ ಇಸ್ರಾಯೇಲ್ಯರು, ಅರಸನ ಅಧಿಕಾರದ ಒಂದು ಮೂಲದೋಪಾದಿ ವೀಕ್ಷಿಸುತ್ತಿದ್ದರು. (ಯೆಶಾಯ 60:14) ತದನಂತರ, ಯೇಸು ಕ್ರಿಸ್ತನ ಅಪೊಸ್ತಲರ ಸಮಯದಲ್ಲಿ, ಆ ನಗರದಲ್ಲಿದ್ದ ಕ್ರೈಸ್ತ ಆಡಳಿತ ಮಂಡಲಿಯಿಂದ ಬರುವ ಬೋಧನೆಗಳ ಕೇಂದ್ರಬಿಂದುವಾಗಿ ಯೆರೂಸಲೇಮ್ ಇನ್ನೂ ಇತ್ತು.—ಅ. ಕೃತ್ಯಗಳು 15:2; 16:4.
ಇಂದಿನ ಕುರಿತಾಗಿ ಏನು? ತನ್ನ ಸಂದೇಶದ ಮುನ್ನುಡಿಯೋಪಾದಿ ಈ ವಾಕ್ಯದೊಂದಿಗೆ ಆರಂಭಿಸುವುದನ್ನು ಗಮನಿಸಿರಿ: “ದಿನಗಳ ಕೊನೆಭಾಗದಲ್ಲಿ . . . ಇದು ಸಂಭವಿಸುವುದು.” ಇನ್ನೊಂದು ತರ್ಜುಮೆ ಹೇಳುವುದು: “ಕಡೇದಿನಗಳಲ್ಲಿ.” (ನ್ಯೂ ಇಂಟರ್‌ನ್ಯಾಷನಲ್ ವರ್ಷನ್) 1914 ರಿಂದ ನಾವು ಈ ಸದ್ಯದ ಲೋಕ ವ್ಯವಸ್ಥೆಯ ಕಡೇದಿನಗಳಲ್ಲಿ ಜೀವಿಸುತ್ತಾ ಇದ್ದೇವೆ ಎಂಬುದಕ್ಕೆ ಬೆಂಬಲವಾಗಿ ಈ ಪತ್ರಿಕೆಯ ಪುಟಗಳ ಮೂಲಕ ಕ್ರಮಭರಿತವಾಗಿ ಸಾಕ್ಷ್ಯಗಳನ್ನು ಸಾದರ ಪಡಿಸಲಾಗಿದೆ. ಆದುದರಿಂದ, ವಚನ 3 ಮತ್ತು 4 ಕ್ಕನುಸಾರವಾಗಿ ಯಾವುದನ್ನು ಕಾಣಲು ನಾವು ನಿರೀಕ್ಷಿಸತಕ್ಕದ್ದು?
ಇನ್ನು ಮುಂದೆ ಯುದ್ಧಾಭ್ಯಾಸವನ್ನು ಮಾಡದಿರುವ ಮತ್ತು “ಅವರ ಕತ್ತಿಗಳನ್ನು ಗುಳಗಳನ್ನಾಗಿ” ಕುಲುಮೆಗೆ ಹಾಕಿ ಈಗಾಗಲೇ ಬಡಿದಿರುವ ಜನರ ಮಹಾ ಸಮೂಹವೊಂದು ಇದೆ. ಮತ್ತು ಅವರದನ್ನು ಮಾಡುವುದನ್ನು ನಾವು ನೋಡುತ್ತೇವೆ! 200 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಎಲ್ಲಾ ಕುಲಗಳ 40 ಲಕ್ಷಕ್ಕಿಂತಲೂ ಹೆಚ್ಚಿನ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಒಂದು ಸಾಮಾನ್ಯ ಹೊಂದಿಕೆಗೆ ಬಂದಿದ್ದು, ಒಬ್ಬರು ಇನ್ನೊಬ್ಬರೊಂದಿಗೆ ಶಾಂತಿಯಲ್ಲಿ ಜೀವಿಸುತ್ತಾರೆ ಮತ್ತು ಅವರ ನೆರೆಯವರಿಗೆ ಶಾಂತಿಯ ಬೈಬಲ್ ಸಂದೇಶವನ್ನು ಸಾರುತ್ತಿದ್ದಾರೆ. ಲೋಕವ್ಯಾಪಕವಾಗಿ ಅವರು ಯೆಹೋವನ ಸಾಕ್ಷಿಗಳಾಗಿ ಪರಿಚಿತರಾಗಿರುತ್ತಾರೆ.
ದೇವಜನರ ಲೋಕವ್ಯಾಪಕ ಚಟುವಟಿಕೆಗಳ ಮೇಲೆ ಆವಶ್ಯಕವಾದ ಮೇಲ್ವಿಚಾರಣೆ ನೀಡುವ, ಭೂಮಿಯ ವಿವಿಧ ಭಾಗಗಳಿಂದ ಬಂದಿರುವ ವಯಸ್ಸಾದ ಕ್ರೈಸ್ತ ಪುರುಷರ ಒಂದು ಆಧುನಿಕ ಆಡಳಿತ ಮಂಡಲಿಯು ಅವರಿಗಿದೆ. ಮೊದಲನೆಯ ಶತಕದ ಯೆರೂಸಲೇಮಿನ ಅಪೊಸ್ತಲರು ಮತ್ತು ಹಿರೀಪುರುಷರುಗಳಂತೆ” ಈ ಪುರುಷರು, ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಅಭಿಷಿಕ್ತ ಸದಸ್ಯರುಗಳಾಗಿರುತ್ತಾರೆ, ಭೂಮಿಯ ಮೇಲಿನ ಅವನ ರಾಜ್ಯದ ಅಭಿರುಚಿಗಳೆಲ್ಲಾದರ ಮೇಲೆ ಜಾಗ್ರತೆ ವಹಿಸಲು ಯೇಸು ಈ ವರ್ಗವನ್ನು ನೇಮಿಸಿರುತ್ತಾನೆ. ಪವಿತ್ರಾತ್ಮನ ಮಾರ್ಗದರ್ಶನೆಯನ್ನು ಅವರು ಹಿಂಬಾಲಿಸುತ್ತಾರೆಂಬ ಭರವಸೆಯನ್ನು ಇಡಸಾಧ್ಯವಿದೆ ಮತ್ತು ಅಪ್ಪಟವಾದ ಶಾಂತಿಯ ದಾರಿಗಳಲ್ಲಿ ದೇವರ ಮಂದೆಗೆ ಕಲಿಸುವುದರಲ್ಲಿ ಮಾನವ ವಿವೇಕದ ಮೇಲೆ ಆತುಕೊಳ್ಳುವುದಿಲ್ಲವೆಂದು ಇತಿಹಾಸವು ರುಜು ಪಡಿಸಿರುತ್ತದೆ.—ಮತ್ತಾಯ 2ರಿ:45-47; 1 ಪೇತ್ರ 5:1-4.
ಸತ್ಯಾರಾಧನೆ
ಶಾಂತಿಯಲ್ಲಿ ಜೀವಿಸುವುದರಲ್ಲಿ ಕೇವಲ ತಲೇಜ್ಞಾನಕ್ಕಿಂತಲೂ ಇಲ್ಲವೆ ದೈವಿಕ ಉಪದೇಶಗಳಿಗನುಸಾರವಾಗಿ ಜೀವಿಸುವ ಬಯಕೆಗಿಂತಲೂ ಹೆಚ್ಚಿನದ್ದು ಒಳಗೂಡಿರುತ್ತದೆ. ಯೆಶಾಯನು ಕೂಡಾ ಸ್ಪಷ್ಟ ಪಡಿಸುವಂತೆ, ನಮ್ಮ ನಿರ್ಮಾಣಿಕನಾದ ಯೆಹೋವನೆಡೆಗೆ ಹಾರ್ದಿಕ ಭಕ್ತಿ ಮತ್ತು ಆರಾಧನೆಯು ಆಗತ್ಯವಾಗಿರುತ್ತದೆ.
ಪ್ರವಾದಿಯು ಹೇಳುವುದೇನಂದರೆ “ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು.” ಪುರಾತನ ಕಾಲಗಳಲ್ಲಿ, ಕೆಲವು ಗುಡ್ಡಬೆಟ್ಟಗಳು ವಿಗ್ರಹಾರಾಧನೆಯ ಸ್ಥಳಗಳಾಗಿ ಮತ್ತು ಸುಳ್ಳು ದೇವರುಗಳ ಆಶ್ರಯತಾಣಗಳಾಗಿದ್ದವು. ಅರಸನಾದ ದಾವೀದನು ಪವಿತ್ರ ದೇವ ಮಂಜೂಷವನ್ನು ಚಿಯೋನ್ ಗುಡ್ಡದ (ಯೆರೂಸಲೇಮ್) ಮೇಲೆ ರಚಿಸಿದ್ದ ಗುಡಾರಕ್ಕೆ ಸಮುದ್ರ ಮಟ್ಟದಿಂದ ಸುಮಾರು 2500 ಅಡಿಗಳಷ್ಟು ಮೇಲೆ ತಂದಾಗ, ಅವನದನ್ನು ದೈವಿಕ ಮಾರ್ಗದರ್ಶನಕ್ಕನುಸಾರ ಮಾಡಿದಿರ್ದಬೇಕು. ತದನಂತರ ಯೆಹೋವನ ಮಹಾ ದೇವಾಲಯವನ್ನು ಮೋರೀಯ ಗುಡ್ಡದಲ್ಲಿ ಕಟ್ಟಿದಾಗ, “ಚಿಯೋನ್” ಪದವು ದೇವಾಲಯದ ನಿವೇಶನದಲ್ಲಿ ಒಳಗೂಡುವಂತಾಯಿತು, ಹೀಗೆ, ಆಲಯವು ತನ್ನ ಸುತ್ತಲೂ ಇದ್ದ ಕೆಲವು ಅನ್ಯ ಸ್ಥಳಗಳಿಗಿಂತ ಉನ್ನತ ಮಟ್ಟದಲ್ಲಿದ್ದು ಆನಂದಿಸುವಂತಾಯಿತು. ಸ್ವತಃ ಯೆರೂಸಲೇಮ್ ಕೂಡಾ ಅವನ “ಪರಿಶುದ್ಧ ಪರ್ವತ”ವೆಂದು ಕರೆಯಲ್ಪಟ್ಟಿತ್ತು. ಈ ರೀತಿಯಲ್ಲಿ, ಯೆಹೋವನ ಆರಾಧನೆಯು ಒಂದು ಉನ್ನತಕ್ಕೇರಿಸಲ್ಪಟ್ಟ ಸ್ಥಾನದಲ್ಲಿರುವಂತಾಯಿತು.—ಯೆಶಾಯ 8:18; 66:20.
ತದ್ರೀತಿ ಇಂದು, ಯೆಹೋವ ದೇವರ ಆರಾಧನೆಯು ಒಂದು ಸಾಂಕೇತಿಕ ಪರ್ವತದಂತೆ ಉನ್ನತಕ್ಕೇರಿಸಲ್ಪಟ್ಟಿದೆ. ಅದರ ಎದ್ದು ಕಾಣುವಿಕೆಯು ಎಲ್ಲರಿಗೂ ತೋರಲಿಕ್ಕಾಗಿ ಇದೆ, ಬೇರೆ ಯಾವುದೇ ಧರ್ಮವು ಮಾಡಲು ಆಶಕ್ಯವಾದ ಯಾವುದೋ ಒಂದನ್ನು ಅದು ಮಾಡಿರುತ್ತದೆ. ಅದೇನು? ತಮ್ಮ ಕತ್ತಿಗಳನ್ನು ಸಂತೋಷದಿಂದ ಗುಳಗಳನ್ನಾಗಿ ಬಡಿದ ಮತ್ತು ಯುದ್ಧಾಭ್ಯಾಸವನ್ನು ಇನ್ನು ಮುಂದೆ ಮಾಡದ ಯೆಹೋವನ ಎಲ್ಲಾ ಆರಾಧಕರನ್ನು ಅದು ಒಟ್ಟುಗೂಡಿಸಿದೆ. ರಾಷ್ಟ್ರೀಯ ಮತ್ತು ಕುಲವರ್ಣೀಯ ಅಡ್ಡಗೋಡೆಗಳು ಅವರನ್ನು ಇನ್ನು ಮುಂದೆ ವಿಭಾಗಿಸವು. ಪ್ರಪಂಚದ ರಾಷ್ಟ್ರಗಳಲ್ಲೆಲ್ಲಾ ಅವರು ಚದರಿರುವುದಾದರೂ, ಅವರು ಒಂದು ಐಕ್ಯತೆಗೊಂಡ ಜನರೋಪಾದಿ, ಒಂದು ಸಹೋದರತ್ವದಲ್ಲಿ ಜೀವಿಸುವರು.—ಕೀರ್ತನೆ 33:12.
ನಿರ್ಧಾರ ಮಾಡುವ ಸಮಯ
ಇದೆಲ್ಲಾವು ನಿಮಗೆ ಹೇಗೆ ತಟ್ಟುತ್ತದೆ? ಇನ್ನೊಬ್ಬ ಇಬ್ರಿಯ ಪ್ರವಾದಿಯ ಮಾತುಗಳು ಅತಿ ಸಮಂಜಸವಾಗಿರುತ್ತವೆ: “ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು! ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ.” (ಯೋವೇಲ 3:14) ಎಲ್ಲಾ ಮಾನವ ಕುಲಕ್ಕೆ ಇದೊಂದು ನಿರ್ಧಾರಕ ತುರ್ತಿನ ಸಮಯವಾಗಿರುತ್ತದೆ, ಒಂದೇ ದೇವರ ಹಸ್ತದಲ್ಲಿ ನಿಜ ಶಾಂತಿಯ ಮಾರ್ಗಗಳನ್ನು ಕಲಿಯುವುದು ಅಥವಾ ಬೇಗನೆ ಕೊನೆಗೊಳ್ಳಲಿರುವ ಶಸ್ತ್ರಾಭಿಮುಖವಾಗಿರುವ ಜೀವಿತವೊಂದಕ್ಕೆ ಬೆಂಬಲ ಕೊಡುವುದನ್ನು ಮುಂದುವರಿಸುವುದು.
ನಮ್ಮ ದಿನಗಳಲ್ಲಿ ಪೂರೈಸಲ್ಪಡುವ ಒಂದು ಮಹಾ ಸಾರುವ ಕೆಲಸವೊಂದನ್ನು ಯೇಸು ಮುನ್ನುಡಿದನು. ಯುದ್ಧ-ಛಿದ್ರ ಈ ಭೂಮಿಯಲ್ಲಿ ದೇವರ ರಾಜ್ಯವು ತರಲಿರುವ ಶಾಂತಿಯ ಕುರಿತಾದ “ಸುವಾರ್ತೆ”ಗೆ ಈ ಸಾರುವಿಕೆಯು ಸಂಬಂಧಿಸಿದೆ. (ಮತ್ತಾಯ 24:14) ಕಳೆದ ವರ್ಷ 36 ಲಕ್ಷಕ್ಕಿಂತಲೂ ಹೆಚ್ಚು ಕ್ರಮದ ಬೈಬಲ್ ಮನೇ-ಅಧ್ಯಯನಗಳು ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಿಂದ ನಡಿಸಲ್ಪಟ್ಟಿವೆ. ಈ ವಾರದ ಅಧ್ಯಯನಗಳಲ್ಲಿ ಕೆಲವನ್ನು ವ್ಯಕ್ತಿಗಳೊಂದಿಗೆ ನಡಿಸಲಾಗಿತ್ತು, ಆದರೆ ಹೆಚ್ಚಿನವು ಕುಟುಂಬ ಗುಂಪುಗಳೊಂದಿಗೆ ನಡಿಸಲ್ಪಟ್ಟಿವೆ. ಈ ರೀತಿಯಲ್ಲಿ ಲಕ್ಷಾಂತರ ಮಕ್ಕಳಿಗೆ ಅವರ ಭವಿಷ್ಯದ ಕುರಿತಾಗಿ ಒಂದು ಖಚಿತ ನಿರೀಕ್ಷೆಯನ್ನು ಕೊಡಲಾಗುತ್ತದೆ, ಮತ್ತು ಅವರ ಹೆತ್ತವರಿಗೆ ಅವರು ನೋಡಿರುವ ಅಥವಾ ಪಾಲಿಗರಾಗಿರಲೂಬಹುದಾದ ಯುದ್ಧಗಳು, ಯೆಹೋವ ದೇವರ ತಯಾರಿಯ ಹೊಸ ಲೋಕದ ಭಾಗವಾಗಿರುವುದಿಲ್ಲ ಎಂಬ ಆಶ್ವಾಸನೆಯು ದೊರೆಯುತ್ತದೆ.
ಎಂಥಹ ಪರಸ್ಪರ ನೆಚ್ಚಿಕೆಯ ಮತ್ತು ಶಾಂತಿಯ ಲೋಕ ಅದೊಂದಾಗಲಿರುವುದು! ನಿಶಸ್ತ್ರೀಕರಣದ ಚಿಂತೆಯು ಅಲ್ಲಿರುವ ಜರೂರಿಯಿಲ್ಲ, ಯಾಕಂದರೆ ಯುದ್ಧದ ಆಯುಧಗಳು ಗತಕಾಲದ ಸಂಗತಿಗಳಾಗಿರುವವು. “ಶಾಂತಿದಾಯಕ ದೇವರಾದ” ಯೆಹೋವನಿಗೆ ಉಪಕಾರಗಳು, ಅವನ ನೀತಿಯ ರಾಜ್ಯದ ಕೆಳಗೆ ಸಮಗ್ರವಾಗಿ ಜೀವಿತವನ್ನು ಜೀವಿಸಲು, ಅವನು ಈಗಲೇ ನಮಗೆ ಪ್ರೀತಿಯಿಂದ ಉಪದೇಶವನ್ನೀಯುತ್ತಾನೆ.—ರೋಮಾಪುರ 15:33. (w89 12/15)