ವಾಗ್ದಾನ ದೇಶದಿಂದ ದೃಶ್ಯಗಳು
ದಾವೀದನು ದೈತ್ಯನೊಬ್ಬನನ್ನು ಹತಿಸಿದ ಏಲಾ ತಗ್ಗು
ಕೆಲವೇ ಬೈಬಲ್ ವೃತ್ತಾಂತಗಳು, ಹೇಗೆ “ದಾವೀದನು ಬರೇ ಒಂದು ಕವಣೇ ಕಲ್ಲಿನಿಂದ ಫಿಲಿಷ್ಟಿಯ” ಧೈತ್ಯ ಗೊಲ್ಯಾತನನ್ನು ಸೋಲಿಸಿದ ವರ್ಣನೆಗಿಂತ ಹೆಚ್ಚು ರೊಮಾಂಚಕವಾಗಿವೆ. (1 ಸಮುವೇಲ 17:50) ಇದು ನಡೆದದ್ದು ಏಲಾ ತಗ್ಗಿನಲ್ಲಿ.
ಆದರೆ ಆ ತಗ್ಗು ಎಲ್ಲಿದೆ ಮತ್ತು ಹೇಗಿದೆ? ಇದನ್ನು ತಿಳಿಯುವದರಿಂದ ಇಸ್ರೇಲ್ಯರ ಭಾವೀ ರಾಜನಾಗಿ ಅಭಿಷೇಕ ಹೊಂದಿದ ಆ ಬಾಲಕನ ಪ್ರಖ್ಯಾತ ವಿಜಯವನ್ನು ಮನದಲ್ಲಿ ಚಿತ್ರಿಸಲು ನಾವು ಶಕ್ತರಾಗಬಹುದು. ತದನಂತರ ದೇವರು ದಾವೀದನೊಂದಿಗೆ ಮಾಡಿದ ರಾಜ್ಯದ ಒಡಂಬಡಿಕೆಯು ಸಹಾ ನಮಗೆ ಶಾಶ್ವತ ಪ್ರಯೋಜನವನ್ನು ತರಲಿದೆ, ಮತ್ತು ಇದು ನಮಗೆ ಏಲಾ ತಗ್ಗಿನಲ್ಲಿ ಏನು ಸಂಭವಿಸಿತ್ತೆಂದು ಕಲಿಯಲು ಹೆಚ್ಚಿನ ಕಾರಣವನ್ನು ಕೊಡಬೇಕು.
ಫಿಲಿಷ್ಟಿಯರು ಕಾನಾನಿನ ಕರಾವಳಿ ಪ್ರದೇಶದಲ್ಲಿ ವಾಸಿಸಿದ್ದರು. ಯೂದಾಯದ ಪರ್ವತಗಳು (ಯೆರೂಸಲೇಮಿನ ದಕ್ಷಿಣಕ್ಕೆ) ಇಸ್ರಾಯೇಲ್ಯರ ಹಸ್ತದಲ್ಲಿದ್ದವು. ಹೀಗೆ—ಪಶ್ಚಿಮ ಕರಾವಳೀ ತಗ್ಗಿನಲ್ಲಿ ಶತ್ರುಗಳು, ಮತ್ತು ಪೂರ್ವಕಡೆಯ ಉನ್ನತ ಪ್ರದೇಶದಲ್ಲಿ ದೇವರ ಸೇವಕರು ನಿವಾಸಿ ಸಿದ್ದರೆಂದು ನಿಮಗೀಗ ತಿಳಿಯುತ್ತದೆ. ಅವರ ನಡುವೆ ಒಂದು ವಾಗ್ವಾದದ ತಡೆಪ್ರದೇಶವಾದ ಶಿಫಿಲಾ ಎಂಬ ಹೆಸರಿನ ಗುಡ್ಡಪ್ರಾಂತ್ಯವಿತ್ತು. ಆದರೆ ಫಿಲಿಷ್ಟಿಯರು ಇಸ್ರೇಲ್ಯರನ್ನು ಆಕ್ರಮಿಸಲು ಹೇಗೆ ಸಾಧ್ಯ? ಒಂದು ಸಮಂಜಸ ದಾರಿಯು ಪೂರ್ವ-ಪಶ್ಚಿಮ ತಗ್ಗು ಅಥವಾ ಕಣಿವೆ, ಇದರಲ್ಲಿ ಮುಖ್ಯವಾದದ್ದೇ ಏಲಾ ತಗ್ಗು. ಇದು, ಅವರ ಶಹರಗಳಾದ ಗತ್ ಮತ್ತು ಎಕ್ರೋನ್ನ ಸಮೀಪದ ಬಯಲುಗಳ ತನಕ, ಮುಂದಕ್ಕೆ ಶಿಫೆಲ್ಲಾದ ತನಕ ಮತ್ತು ಯೆರೂಸಲೇಮ್-ಬೆತ್ಲೆಹೇಮಿನ ಸುಮಾರು 15 ಮೈಲು ನೈರುತ್ಯಕ್ಕೆ ಇರುವ ಬೆಟ್ಟಗಳ ತನಕ ವಿಸ್ತರಿಸಿತ್ತು. ಈ ತಗ್ಗಿನ ಮೇಲ್ಗಡೆಯ ಕೊನೆಯನ್ನು ಚಿತ್ರವು (ಆಗ್ನೇಯ ಮೂಲೆಯಿಂದ) ತೋರಿಸುತ್ತದೆ. ದೂರ ದಿಗಂತದಲ್ಲಿ ಯುದಾಯದ ಬೆಟ್ಟಗಳನ್ನು ನೀವು ಕಾಣುವಿರಿ.a
ಈ ಚಿತ್ರವನ್ನು ನೋಡುವಲ್ಲಿ, ಫಿಲಿಷ್ಟಿಯರು ಈ ಸಮತಟ್ಟಾದ ಕಣಿವೆಯ ಮಾರ್ಗವಾಗಿ ಬೆಟ್ಟಗಳ ಕಡೆಗೆ ಬರುವುದನ್ನು ನೀವು ಕಲ್ಪಿಸಿ ಕೊಳ್ಳಬಹುದು. ಅವರನ್ನು ತಡೆಯಲು ಇಸ್ರಾಯೇಲ್ಯರು ಯೂದಾಯದ ನೈರುತ್ಯದಿಂದ ಬಂದರು. ಇಲ್ಲಿ ಒಂದು ವಿಘ್ನವು ವಿಕಾಸಗೊಂಡಿತು. ಏಕೆ? “ಫಿಲಿಷ್ಟಿಯರು ಒಂದು ಗುಡ್ಡದ ಪಕ್ಕದಲ್ಲಿಯೂ ಇಸ್ರಾಯೇಲ್ಯರು ಇನ್ನೊಂದು ಗುಡ್ಡದ ಪಕ್ಕದಲ್ಲಿಯೂ ನಿಂತರು. ಉಭಯರ ಮಧ್ಯದ ಒಂದು ತಗ್ಗು ಇತ್ತು.”—1 ಸಮುವೇಲ 17:3.
ತಗ್ಗಿನ ಉದ್ದಕ್ಕೂ ಸರಿಯಾಗಿ ಯಾವ ಜಾಗದಲ್ಲಿ ಅದು ಸಂಭವಿಸಿತು ಎಂದು ನಮಗೆ ಗೊತ್ತಿಲ್ಲವಾದರೂ, ಫಿಲಿಷ್ಟಿಯರು ಗುಡ್ಡದ ಕೆಳಗೆ ಬಲಗಡೆಯಲ್ಲಿದ್ದನ್ನು ನಾವು ಚಿತ್ರಿಸಬಹುದು. ಸೌಲನ ಸೇನೆಯು ಕಂದುಬಣ್ಣದ ಹೊಲದ ಆಚೇಕಡೆ ಗುಡ್ಡದ ಮೇಲೆ ನಿಂತಿದ್ದಿರಬೇಕು. ಎರಡೂ ಸೇನೆಗಳು ತಾವು ನಿಂತಿರುವ ಉನ್ನತವಾದ, ಸುಭದ್ರಸ್ಥಾನದಿಂದ ಕೆಳಗಿಳಿದು ಕಣಿವೆಯನ್ನು ದಾಟಿ ವಿರುದ್ಧ ಸೈನ್ಯವನ್ನು ಆಕ್ರಮಿಸುವಂತಿರಲಿಲ್ಲ. ಫಲಿತಾಂಶವಾಗಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಅವರು ನಿಂತಲ್ಲಿಯೇ ನಿಂತರು. ಕದನ ಆರಂಭಿಸುವುದು ಹೇಗೆ?
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ, ಸುಮಾರು ಒಂಭತ್ತು ಅಡಿಗಿಂತಲೂ ಹೆಚ್ಚು ಎತ್ತರದ ಫಿಲಿಷ್ಟಿಯ ರಣವೀರನೊಬ್ಬನು ಬಂದು ತಗ್ಗಿನಲ್ಲಿ ನಿಂತು ಏಕೈಕ ಕದನದಿಂದ ವಿಷಯವನ್ನು ತೀರ್ಮಾನಿಸುವಂತೆ ಸೌಲನ ಪಾಳೆಯಕ್ಕೆ ಕರೆಗೊಟ್ಟು ಮೂದಲಿಸುತ್ತಿದ್ದನು. ಆದರೆ ಒಬ್ಬ ಇಸ್ರಾಯೇಲ್ಯನಿಗೂ ಪ್ರತ್ಯುತ್ತರ ಕೊಡಲು ಧೈರ್ಯವಿಲ್ಲ. ಕೊನೆಗೆ, ಬೆತ್ಲೆಹೇಮಿನಿಂದ ದಾವೀದನೆಂಬ ಹೆಸರಿನ ಯುವ ಕುರುಬನೊಬ್ಬನು ಪಾಳೆಯದಲ್ಲಿದ್ದ ತನ್ನ ಅಣ್ಣಂದಿರಿಗಾಗಿ ಆಹಾರದೊಂದಿಗೆ ಬಂದನು. ಈ ಅವಮಾನಕರ ಪಂಥಾಹ್ವಾನಕ್ಕೆ ಅವನ ಪ್ರತಿಕ್ರಿಯೆಯೇನು? “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವುದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು?” (1 ಸಮುವೇಲ 17:4-30) ದಾವೀದನ ನೋಟವು, 1990ರ ಯೆಹೋವನ ಸಾಕ್ಷಿಗಳ ವರ್ಷವಚನದ ಮೇಲೆ ಸ್ವಷ್ಟವಾಗಿ ಪ್ರತಿಬಿಂಬಿಸಿತ್ತು: “ಯೆಹೋವನು ನನ್ನ ಸಹಾಯಕನು, ಭಯಪಡೆನು.”—ಇಬ್ರಿಯ 13:6; ಕೀರ್ತನೆ 56:11; 118:6.
ಯಾವ ಸೈನಿಕತರಬೇತೂ ಶಸ್ತ್ರವೂ ಇಲ್ಲದ ಈ ಬಾಲಕನು ಆ ಮಹಾಕಾಯ ಗೊಲ್ಯಾತನೊಂದಿಗೆ ಕಾದಾಡುವನೆಂಬ ಸುದ್ಧಿಯನ್ನು ಸೌಲನು ಕೇಳಿದಾಗ, ಅವನಿಗೆ ಯುದ್ಧಶಸ್ತ್ರಗಳನ್ನು ಕೊಡಿಸಿದನು. ದಾವೀದನು ಅವನ್ನು ನಿರಾಕರಿಸಿದನು. ಬದಲಿಗೆ, ತನ್ನ ಕುರುಬರ ಕೋಲು, ಚರ್ಮದ ಕವಣೆ ಮತ್ತು ತಗ್ಗಿನಲ್ಲಿ ಅವನು ಹೆಕ್ಕಿದ ಐದು ನುಣುಪಾದ ಕಲ್ಲುಗಳೊಂದಿಗೆ ಆ ಧೈತ್ಯನನ್ನು ಎದುರಿಸಲು ಸಿದ್ಧನಾದನು. ಆ ಕಲ್ಲುಗಳು ಹೇಗಿದ್ದವು? ದ್ರಾಕ್ಷೆ ಯಾ ಆಲಿವ್ ಹಣ್ಣುಗಳ ಆಕಾರದ ಉರುಟಾದ ಚಿಕ್ಕ ಕಲ್ಲುಗಳು ಅವುಗಳಾಗಿರಲಿಕ್ಕಿಲ್ಲ. 2-3 ಇಂಚು ವ್ಯಾಸದ, ಒಂದು ಚಿಕ್ಕ ಕಿತ್ತಳೆಹಣ್ಣಿನಷ್ಟು ದೊಡ್ಡ ಕವಣೇ ಕಲ್ಲುಗಳು ಕಾಣಸಿಕ್ಕಿವೆ. ಕವಣೆಗಾರರು ಅಂಥ ಒಂದು ಕಲ್ಲನ್ನು ತಾಸಿಗೆ 100-150 ಮೈಲು ವೇಗದಲ್ಲಿ ಬೀಸಿಹೊಡೆಯಬಲ್ಲರು.
ಆ ಕಣಿವೆಯಲ್ಲಿ ಕೆಳಗೆ, ಎರಡೂ ಸೇನೆಗಳ ದೃಷ್ಟಿಯೆದುರು ಸಂಭವಿಸಿದ ಸಂಗತಿಯನ್ನು ನೀವು ಓದಿರಬಹುದೆಂಬದಕ್ಕೆ ಸಂಶಯವಿಲ್ಲ. ದಾವೀದನು ಘೋಷಿಸಿದ್ದು: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವ ದೇವರ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.” ಯೆಹೋವನು ಆಗ ಅವನಿಗೆ ಜಯವನ್ನು ಕೊಟ್ಟನು. ಆ ಬಾಲಕನು ಬಲವಾಗಿ ಬೀಸಿಹೊಡೆದ ಕಲ್ಲು ಗೊಲ್ಯಾತನ ಹಣೆಯನ್ನು ಹೊಕ್ಕಿತು, ಅವನು ಸತ್ತುಬಿದ್ದನು. ಆಗ ಕುರುಬನು ಓಡಿಹೋಗಿ ಆ ಧೈತ್ಯನ ಸ್ವಂತ ಕತ್ತಿಯಿಂದಲೇ ಅವನ ತಲೆಯನ್ನು ಸವರಿ ಹಾಕಿದನು.—1 ಸಮುವೇಲ 17:31-51.
ದೇವರಲ್ಲಿ ದಾವೀದನ ನಂಬಿಕೆ ಮತ್ತು ಭರವಸದಿಂದ ಇಸ್ರಾಯೇಲ್ಯರು ಪ್ರೇರಿತರಾಗಿ, ಹೆದರಿ ಓಡತೊಡಗಿದ ಫಿಲಿಷ್ಟಿಯರನ್ನು ಶಿಫಿಲಾದ ಮಾರ್ಗವಾಗಿ ಹಿಂದೆ ಫಿಲಿಷ್ಟಿಯದ ವರೆಗೂ ಹಿಂದಟ್ಟಿದರು.—1 ಸಮುವೇಲ 17:31-51.
ಆಗ ಯೂದಾಯದಲ್ಲಿ ಕೇಳಿಬಂದಿರಬಹುದಾದ ಸಂತೋಷ ಸಂಭ್ರಮಗಳನ್ನು ನೀವು ಊಹಿಸಬಹುದು! ದೇವಜನರು ಬೆಟ್ಟಗಳಿಂದ ಪಶ್ಚಿಮಕ್ಕೆ ಏಲಾ ತಗ್ಗು ಮತ್ತು ಶಿಫಿಲಾದ ಕಡೆ ಇಣಿಕಿ ನೋಡಶಕ್ತರಿದ್ದರು, ಈಗ ಹೆಬ್ರೋನಿನ ಸಮೀಪದ ಒಂದು ಕ್ಷೇತ್ರದಿಂದ ಕೆಳಗಿನ ಅದರ ಆಧುನಿಕ ನೋಟವನ್ನು ಜನರು ನೋಡುವಂತೆಯೇ. ಬಾದಾಮಿ ಮರದ ಬಿಳೀ ಹೂಗೊಂಚಲುಗಳು ನೋಟಕ್ಕೆ ರಮ್ಯವಾಗಿವೆ, ಆದರೆ ದೇವರ ಶತ್ರುಗಳ ಮೇಲೆ ಗಳಿಸಿದ ವಿಜಯವು ನೋಟಕ್ಕೆ ಮತ್ತಷ್ಟು ರಮ್ಯವಾಗಿತ್ತು. ಇಸ್ರಾಯೇಲ್ಯ ಸ್ತ್ರೀಯರಂದ ಮಾತುಗಳು ಯಥೋಚಿತವಾಗಿದ್ದವು: “ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ಮತ್ತು ದಾವೀದನು ಹತ್ತು ಸಾವಿರಗಟ್ಟಳೆಯಾಗಿ ಕೊಂದನು,” ಏಲಾ ತಗ್ಗಿನಲ್ಲಿ ಅವನು ಹತಿಸಿದ ಆ ಧೈತ್ಯನೂ ಅದರಲ್ಲಿ ಸೇರಿದ್ದಾನೆ.—1 ಸಮುವೇಲ 18:7. (w90 1/1)
[ಅಧ್ಯಯನ ಪ್ರಶ್ನೆಗಳು]
a ಇದೇ ಚಿತ್ರವು ದೊಡ್ಡ ಸೈಜಿನಲ್ಲಿ 1990 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ ನಲ್ಲಿದೆ, ಅದರ ರಕ್ಷಾವರಣದ ನಕ್ಷೆಯಲ್ಲಿ ಸ್ಥಾನ ನಿರ್ದೇಶನವನ್ನೂ ಕೊಟ್ಟಿದೆ.
[ಪುಟ 28 ರಲ್ಲಿರುವಚಿತ್ರಗಳು]
[ಪುಟ 28 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.