‘ತಾಳಿಕೊಂಡಿರುವವರು ಧನ್ಯರು’
1. 1914 ರಿಂದ ಭೂಮಿಯ ಯಾವ ಸ್ಥಿತಿಗತಿ ಮತ್ತಾಯ 24:3-8 ನ್ನು ನೆರವೇರಿಸಿದೆ, ಮತ್ತು ಜನಾಂಗ ಸಂಘ ಮತ್ತು ಸಂಯುಕ್ತ ರಾಷ್ಟ್ರ ಸಂಘದ ಯಾವ ವಾದವು ವಿಫಲಗೊಂಡಿದೆ?
ರಾಬರ್ಟ್ ನಿಸ್ಬೆಟ್ ದ ಪ್ರೆಸೆಂಟ ಏಜ್ ಎಂಬ ತನ್ನ ಪುಸ್ತಕದಲ್ಲಿ “ಮುಂದುವರಿಯುತ್ತಾ 1914 ರಿಂದ ವಿರಳವಾಗಿ ನಿಂತಿರುವ ಎಪ್ಪತ್ತೈದು ವರ್ಷಗಳ ಯುದ್ಧ” ದ ಕುರಿತು ಮಾತಾಡುತ್ತಾರೆ. ಹೌದು, ಯೇಸು ಕ್ರಿಸ್ತನು ಈ ಅಂತ್ಯ ಸಮಯದಲ್ಲಿ “ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ಧಿಗಳ” ಸಮೇತ ಲೋಕ ಯುದ್ಧಗಳನ್ನು ಮುಂತಿಳಿಸಿದ್ದನು. (ಮತ್ತಾಯ 24:3-8) 1920 ರಲ್ಲಿ ಜನಾಂಗ ಸಂಘ “ಎಂದೆಂದಿಗೂ ಯುದ್ಧವನ್ನು ತಡೆ ಹಿಡಿಯುವ ಕಾರಣ” ಅಸ್ತಿತ್ವಕ್ಕೆ ಬಂತು. ಆದರೆ ಅದೆಷ್ಟು ಶೋಚನೀಯವಾಗಿ ವಿಫಲಗೊಂಡಿತು! 1945 ರಲ್ಲಿ “ಮುಂಬರುವ ಸಂತತಿಗಳನ್ನು ಯುದ್ಧದ ಪೀಡೆಯಿಂದ ರಕ್ಷಿಸುವ” ಕಾರಣ ಸಂಯುಕ್ತ ರಾಷ್ಟ್ರ ಸಂಘವನ್ನು ಸಂಘಟಿಸಲಾಯಿತು. ಆದರೆ ಮ್ಯಾಕ್ಸ್ ಹ್ಯಾರೆಲ್‌ಸನ್ ರವರ ಫಯರ್ ಆಲ್ ಎರೌಂಡ್ ದ ಹೊರೈಸನ್ ಪುಸ್ತಕ ತಿಳಿಸುವಂತೆ, “ಎರಡನೆ ಲೋಕ ಯುದ್ಧದ ಅಂತ್ಯದಿಂದ ಹಿಡಿದರೆ ಒಂದಲ್ಲ ಒಂದು ಕಡೆ ಹೋರಾಟ ನಡೆಯದೇ ಇದ್ದ ದಿನಗಳೇ ವಿರಳ.”
2. ಲೋಕ ಪರಿಸ್ಥಿತಿಗಳ ಕುರಿತು ಕೆಲವರು ಏನು ಪ್ರಶ್ನಿಸಿದ್ದಾರೆ, ಆದರೆ ನಾವು ಯಾವ ಪ್ರಶ್ನೆಗಳನ್ನು ಕೇಳಬೇಕು?
2. ಭಯವಾದ, ಹಿಂಸಾಕೃತ್ಯ, ಭ್ರಷ್ಟಾಚಾರ, ದಾರಿದ್ರ್ಯ, ಅಮಲೌಷದ ಮತ್ತು ಸೋಂಕು ರೋಗ—ಇವೆಲ್ಲವೂ ದೃಶ್ಯದ ದು:ಖಾವಸ್ಥೆಯನ್ನು ಹೆಚ್ಚಿಸುತ್ತವೆ. ಕೆಲವರು ಹೀಗೆ ಪ್ರಶ್ನಿಸಬಹುದು: ‘ಮಾನವ ಕುಲವು ಇಂತಹ ಕದಡಿದ ಅವಸ್ಥೆಯನ್ನು ತಾಳುತ್ತಾ ಹೇಗೆ ಮುಂದರಿಯ ಸಾಧ್ಯವಿದೆ?’ ಆದರೆ, ಹೆಚ್ಚು ಪ್ರಾಮುಖ್ಯವಾಗಿ ನಾವು ಹೀಗೆ ಪ್ರಶ್ನಿಸಬೇಕು: ‘ತನ್ನ ಭೂಸೃಷ್ಟಿಯ ಕೆಡಿಸುವಿಕೆಯನ್ನು ದೇವರು ಹೇಗೆ ತಾಳಿಕೊಳ್ಳುತ್ತಾನೆ? ದುಷ್ಟರು ಭೂಮಿಯನ್ನು ನಾಶಮಾಡಿ ಆತನ ಅಮೂಲ್ಯ ಹೆಸರಿಗೆ ಕಳಂಕ ತರುವಂತೆ ಇನ್ನೆಷ್ಟು ಕಾಲ ಆತನು ಅನುಮತಿಸುವನು?’
3. (ಎ)ಯೆಶಾಯ ಪ್ರವಾದಿ ಯಾವ ಪ್ರಶ್ನೆ ಕೇಳಿದನು, ಮತ್ತು ಯಾಕೆ? (ಬಿ) ಯೆಹೋವನು ಯಾವ ಉತ್ತರ ಕೊಟ್ಟನು, ಮತ್ತು ಇದು ನಮ್ಮ ದಿನಗಳಿಗೇನು ಸೂಚಿಸುತ್ತದೆ?
3. ಪ್ರವಾದಿ ಯೆಶಾಯನು ಇದೇ ರೀತಿಯ ಒಂದು ಪ್ರಶ್ನೆಯನ್ನು ಹಾಕಿದನು. ಯೆಹೋವನಿಂದ ಒಂದು ಸಂದೇಶವನ್ನು ಅವನ ಸ್ವದೇಶಿಗಳಿಗೆ ಸಾರುವಂತೆ ಅವನನ್ನು ನೇಮಿಸಲಾಗಿತ್ತು. ಆದರೆ ಅವರು ಅವನಿಗಾಗಲಿ ಅವನನ್ನು ಕಳುಹಿಸಿದ ದೇವರಿಗಾಗಲಿ ಕಿವಿಗೊಡರೆಂದು ಅವನನ್ನು ಮೊದಲೇ ಎಚ್ಚರಿಸಲಾಗಿತ್ತು. ಈ ಕಾರಣದಿಂದ ಯೆಶಾಯನು, “ಯೆಹೋವನೇ, ಎಂದಿನ ತನಕ?” ಎಂದು ಕೇಳಿದನು. ಹೌದು, ಯೆಶಾಯನು ಈ ಹಟಮಾರಿಗಳಿಗೆ ಎಂದಿನ ತನಕ ಸಾರಬೇಕಿತ್ತು ಮತ್ತು ಯೆಹೋವನು ಅವರು ತನ್ನ ಸಂದೇಶಕ್ಕೆ ಕಿವಿಗೊಡದೆ ನಿಂದೆಯಿಂದ ನಿರಾಕರಿಸುವುದನ್ನು ಎಂದಿನ ತನಕ ತಾಳಿಕೊಳ್ಳಲಿದ್ದನು? ಯೆಹೋವನು ಉತ್ತರಕೊಟ್ಟದ್ದು: “ದೇಶದಲ್ಲಿ ಹಾಳು ಹೆಚ್ಚಿ ಪಟ್ಟಣಗಳು ಜನರಿಲ್ಲದೆ ಮನೆಗಳು ನಿವಾಸಿಗಳಿಲ್ಲದೆ ಧ್ವಂಸವಾಗಿ ಭೂಮಿಯು ತೀರಾ ಹಾಳಾಗುವ ತನಕ ಹೀಗಿರುವುದು.” (ಯೆಶಾಯ 6:8-11) ತದ್ರೀತಿ ಇಂದು, ಯಾವುದರಲ್ಲಿ ಮುಖ್ಯ ಅಪರಾಧಿನಿ ಅಪನಂಬಿಗಸ್ತ ಕ್ರೈಸ್ತ ಪ್ರಪಂಚವೋ ಆ ಲೋಕಕ್ಕೆ ತೀರ್ಪು ವಿಧಿಸುವ ನೇಮಿತ ಸಮಯದ ತನಕ ದೇವರು ಇಂಥ ಅಪಮಾನವನ್ನು ಸಹಿಸಿಕೊಳ್ಳುತ್ತಾನೆ.
4. ಯೋಬನ ಸಹಿಷ್ಣುತೆಯ ಫಲವೇನಾಯಿತು, ಮತ್ತು ಇದು ನಮಗಿಂದು ಯಾವ ಆಶ್ವಾಸನೆ ನೀಡುತ್ತದೆ?
4. ಸೈತಾನನ ಮೂದಲಿಸುವಿಕೆಯನ್ನು ಯೆಹೋವನು ಬಹುಕಾಲದಿಂದ ತಾಳಿದ್ದಾನೆ. ಸುಮಾರು 3600 ವರ್ಷಗಳ ಹಿಂದೆ ನಂಬಿಗಸ್ತ ಯೋಬನೂ, ಪರೀಕ್ಷೆ ಬರುವಾಗ ಅವನು ಸಮಗ್ರತೆ ತಾಳಿಕೊಳ್ಳನು ಎಂಬ ಸೈತಾನನ ಪಂಥಾಹ್ವಾನವನ್ನು ತಳ್ಳಿಹಾಕಿ, ತಾಳಿಕೊಂಡನು. ಇದು ಯೆಹೋವನ ಹೃದಯವನ್ನೆಷ್ಟು ಸಂತೋಷ ಪಡಿಸಿದ್ದಿರಬೇಕು! (ಯೋಬ 2:6-10; 27:5; ಜ್ಞಾನೋಕ್ತಿ 27:11) ಯೇಸುವಿನ ಮಲತಮ್ಮ ಯಾಕೋಬನು ಸಮಯಾನಂತರ ಹೇಳಿದಂತೆ, “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಯೆಹೋವನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” ಹೀಗೆಯೇ ಯೆಹೋವನೊಂದಿಗೆ ಇಂದು ತಾಳಿಕೊಳ್ಳುವವರಿಗೂ ಸಂತೋಷದ ಅಂತ್ಯಫಲದ ಆಶ್ವಾಸನೆ ಇದೆ.—ಯಾಕೋಬ 5:11.
5. ಇಂದು ದೇವಜನರಿಂದ ತಾಳ್ಮೆ ಕೇಳಿಕೊಳ್ಳಲ್ಪಡುತ್ತದೆಂದು ಯೇಸು ಹೇಗೆ ತೋರಿಸಿದನು, ಮತ್ತು ಯಾವ ಕೆಲಸ ಮಾಡುವಾಗ ಅವರಿಗೆ ತಾಳ್ಮೆ ಅಗತ್ಯ?
5. ನಮ್ಮ ದಿನಗಳಲ್ಲಿ ದೇವಜನರಿಂದ ತಾಳ್ಮೆಯನ್ನು ಕೇಳಿಕೊಳ್ಳಲಾಗುತ್ತದೆಂಬದನ್ನು ಯೇಸು ಸ್ಪಷ್ಟ ತೋರಿಸಿದನು. “ಯುಗದ ಸಮಾಪ್ತಿ” ಸೂಚನೆಯನ್ನು ಮುಂತಿಳಿಸುತ್ತಾ, “ಆದರೆ ಕಡೇ ವರೆಗೆ ತಾಳುವವನು ರಕ್ಷಣೆ ಹೊಂದುವನು” ಎಂದು ಅವನಂದನು. ಏನು ಮಾಡುತ್ತಿರುವಾಗ ತಾಳಿಕೊಳ್ಳಬೇಕು? ಯೇಸುವಿನ ಮುಂದಿನ ಮಾತು ಇದಕ್ಕೆ ಉತ್ತರಕೊಡುವುದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆ ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು.” (ಮತ್ತಾಯ 24:3, 13, 14) ಆ ಬಳಿಕವೇ “ಅಂತ್ಯವು ಬರುವುದು.”— ಮಾರ್ಕ 13:10, 13; ಲೂಕ 21:17-19 ಸಹ ನೋಡಿ.
ಯೆಹೋವನು ತಾಳಿಕೊಳ್ಳುವುದಕ್ಕೆ ಕಾರಣ
6. ಯೆಹೋವನು ತಾಳ್ಮೆಯ ಪ್ರಮುಖ ಮಾದರಿಯೇಕೆ, ಮತ್ತು ಆತನು ಹೀಗೆ ತಾಳಿಕೊಳ್ಳಲು ಒಂದು ಕಾರಣವೇನು?
6. “ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಾ ಪಾತ್ರರನ್ನು ಬಹು ಸೈರಣೆಯಿಂದ ಸಹಿಸಿಕೊಂಡಿದ್ದಾನೆ” ಎಂದು ಅಪೋಸ್ತಲ ಪೌಲನು ವಿವರಿಸಿ ಹೇಳಿದನು. (ರೋಮಾಪುರ 9:22) ಈ ನಾಶನಾ ಪಾತ್ರರಾದ ದುಷ್ಟರು ಬದುಕುತ್ತಾ ಮುಂದರಿಯುವುದನ್ನು ಯೆಹೋವನು ಏಕೆ ಸೈರಿಸಿಕೊಂಡಿದ್ದಾನೆ? ಇದಕ್ಕೆ ಒಂದು ಕಾರಣ: ಮಾನವ ಸೃಷ್ಟಿಕರ್ತನನ್ನು ಬಿಟ್ಟು ಪ್ರತ್ಯೇಕವಾಗಿರುವ ಮಾನವ ಆಳಿಕೆ ವೈಫಲ್ಯಾಭಿಮುಖ ಎಂದು ಪ್ರದರ್ಶಿಸಲಿಕ್ಕಾಯೇ. (ಯೆರೆಮೀಯ 10:23) ಶೀರ್ಘವೇ, ತಾನೊಬ್ಬನೇ ಯೇಸುವಿನ ರಾಜ್ಯಾಡಳಿತೆಯ ಮೂಲಕ ಮಾನವಕುಲಕ್ಕೆ ಶಾಂತಿ, ಸಾಮರಸ್ಯ ಮತ್ತು ಸಂತೋಷವನ್ನು ತರಬಲ್ಲನೆಂದು ದೇವರು ರುಜುಪಡಿಸುವಾಗ ಆತನ ಸಾರ್ವಭೌಮತ್ವ ನಿರ್ದೋಷೀಕರಿಸಲ್ಪಡುವುದು.—ಕೀರ್ತನೆ 37:9-11; 45:1, 6, 7.
7. ಇನ್ನಾವ ಕಾರಣಕ್ಕಾಗಿ ಯೆಹೋವನು ತಾಳಿದ್ದಾನೆ, ಮತ್ತು 1930 ರಿಂದ ಇದು ಲಕ್ಷಾಂತರ ಜನರಿಗೆ ಯಾವ ಪ್ರಯೋಜನ ತಂದಿದೆ?
7. ಇದಲ್ಲದೆ, “ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು” ತೋರ್ಪಡಿಸಲಿಕ್ಕಾಗಿಯೂ ಯೆಹೋವನು ಸೈರಿಸಿಕೊಂಡಿದ್ದಾನೆ. (ರೋಮಾಪುರ 9:23) ಕ್ರಿಸ್ತ ಯೇಸುವಿನೊಂದಿಗೆ ಅವನ ಸ್ವರ್ಗೀಯ ರಾಜ್ಯದಲ್ಲಿ ಆಳುವದಕ್ಕಾಗಿ “ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ” ಸಮಗ್ರತೆ ಕಾಪಾಡಿಕೊಳ್ಳುವ ಅಭಿಷಿಕ್ತ ಕ್ರೈಸ್ತರೇ ಈ ಕರುಣಾಪಾತ್ರರು. ಈ 1,44,000 ಮಂದಿಯ ಮೇಲೆ ಮುದ್ರೆ ಒತ್ತುವ ಕೆಲಸವು ಅಪೋಸ್ತಲಿಕ ದಿನಗಳಿಂದ ಮುಂದುವರಿದದೆ. ಅದೀಗ ಮುಗಿಯುತ್ತಲಿದೆ. (ಪ್ರಕಟನೆ 7:3; 14:1, 4) ಮತ್ತು ನೋಡಿ! 1930 ಗಳಿಂದ ಯೆಹೋವನ ಮುಂದುವರಿಯುತ್ತಿರುವ ಸೈರಣೆಯು, ಅಂತಿಮ ಕ್ಲೇಶವನ್ನು ಪಾರಾಗಿ ಭೂಪ್ರಮೋದವನದಲ್ಲಿ ನಿತ್ಯಜೀವಕ್ಕೆ ಬಾಧ್ಯರಾಗುವ ಪ್ರತೀಕ್ಷೆಯಲ್ಲಿ ಸಂತೋಷಿಸುವ ಲಕ್ಷಾಂತರ ಮಂದಿ ಇತರರಾದ ‘ಸಕಲ ಜನಾಂಗಗಳ ಜನಸಮೂಹದ’ ಒಟ್ಟುಗೂಡಿಸುವಿಕೆಯನ್ನು ಅನುಮತಿಸಿದೆ. (ಪ್ರಕಟನೆ 7:4, 9, 10, 13-17) ನೀವು ಈ ಮಹಾಸಮೂಹದಲ್ಲಿ ಒಬ್ಬರೋ? ಹಾಗಿರುವಲ್ಲಿ, ಯೆಹೋವನು ನಾಶನ ಪಾತ್ರರ ಅಸ್ತಿತ್ವವನ್ನು ಇದುವರೆಗೆ ಸೈರಿಸಿಕೊಂಡದ್ದಕ್ಕಾಗಿ ನೀವು ಸಂತೋಷ ಪಡುವುದಿಲ್ಲವೇ? ಆದರೂ ಯೆಹೋವನು ಸೈರಿಸಿಕೊಂಡಿರುವಂತೆಯೇ ನೀವೂ ತಾಳಿಕೊಳ್ಳುತ್ತಾ ಮುಂದುವರಿಯತಕ್ಕದ್ದು.
ಸೈರಣೆಗೆ ಪ್ರತಿಫಲ ನೀಡಲಾಗುವುದು
8. ನಮಗೆಲ್ಲರಿಗೆ ತಾಳ್ಮೆಯ ಅಗತ್ಯ ಏಕಿದೆ, ಮತ್ತು ತಾಳ್ಮೆಯ ಯಾವ ಮಾದರಿಯನ್ನು ನಾವು ಆಸಕ್ತಿಯಿಂದ ಪರಿಗಣಿಸಬೇಕು?
8. ವಾಗ್ದಾನಗಳನ್ನು ಪಡೆಯಬೇಕಾದರೆ ತಾಳಿಕೊಳ್ಳುವ ಅವಶ್ಯಕತೆ ನಮಗೆಲ್ಲರಿಗೂ ಇದೆ. ಇಬ್ರಿಯ 10:36 ರಲ್ಲಿ ಈ ಮೂಲ ಸತ್ಯವನ್ನು ತಿಳಿಸಿದ ಬಳಿಕ ಅಪೋಸ್ತಲ ಪೌಲನು ‘ಮೇಘದೋಪಾದಿಯ ಸಾಕ್ಷಿಗಳ’ ಶುದ್ಧ ನಂಬಿಕೆಯನ್ನೂ ಸೈರಣೆಯನ್ನೂ ವಿವರವಾಗಿ ತಿಳಿಸುತ್ತಾನೆ. ಬಳಿಕ “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆದ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ” ಎಂದು ಬುದ್ಧಿಹೇಳುತ್ತಾನೆ. “ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ“ ಯೇಸು, ಬಹುಮಾನದ ಗುರಿಯನ್ನು ಅಲಕ್ಷಮಾಡದೆ ಪೂರ್ಣ ಹೃದಯದ ಸೇವೆಯನ್ನು ಮಾಡುತ್ತಾ ತಾಳಿಕೊಂಡನು. ಅವನ ಮಾದರಿ ನಾವೂ ತಾಳುವಂತೆ ನಮ್ಮನ್ನೆಷ್ಟು ಬಲಪಡಿಸುತ್ತದೆ!—ಇಬ್ರಿಯ 12:1, 2.
9. ತಾಳ್ಮೆಯ ಆಧುನಿಕ ಮಾದರಿಗಳಿಂದಾಗಿ ಏನು ಪರಿಣಮಿಸಿದೆ?
9. ಸೈರಣೆಯ ಆಧುನಿಕ ದಿನದ ಮಾದರಿಗಳೂ ಹೇರಳವಾಗಿವೆ. ಸೈರಣೆಯಲ್ಲಿ ಪ್ರಮುಖರಾಗಿರುವ ಸಹೋದರ, ಸಹೋದರಿಯರ ವಿಷಯ ನಿಮಗೆ ಗೊತ್ತಿರಬಹುದು ಅಥವಾ ಈ ಮೊದಲು ಗೊತ್ತಿದ್ದಿರಬಹುದು. ಅವರ ನಂಬಿಗಸ್ತಿಕೆ ನಮಗೆಷ್ಟು ಉತ್ತೇಜನ ಕೊಡುತ್ತದೆ! ಮತ್ತು ಪ್ರತಿವರ್ಷ ಯೆಹೋವನ ಸಾಕ್ಷಿಗಳು ತಮ್ಮ ಲೋಕದಾದ್ಯಂತ ಸೇವೆಯನ್ನು ವಾಚ್‌ಟವರ್ ಸೊಸೈಟಿಗೆ ವರದಿಮಾಡುವಾಗ ಸೈರಣೆ ಮತ್ತು ಸಮಗ್ರತೆಯ ಇನ್ನೂ ಹೆಚ್ಚಿನ ರೋಮಾಂಚಕ ಅನುಭವಗಳು ದೊರೆಯುತ್ತವೆ. ಜನವರಿ 1, 1990 ರ ಇಂಗ್ಲಿಷ್ ವಾಚ್‌ಟವರ್ 20-23 ಪುಟಗಳಲ್ಲಿರುವ ತಖ್ತೆಯು, ಸಾಕ್ಷಿಗಳು ‘ನಂಬಿಕೆಗೆ ತಾಳ್ಮೆಯನ್ನು’ ಸೇರಿಸುತ್ತಿರುವಾಗ 1989 ರಲ್ಲಿ ನೆರವೇರಿಸಿರುವ ಮಹಾ ಕೆಲಸವನ್ನು ಸಂಕ್ಷೇಪಿಸುತ್ತದೆ.—2 ಪೇತ್ರ 1:5, 6.
ನಮ್ಮ ಅತ್ಯಂತ ಮಹಾ ಸಂವತ್ಸರ
10. (ಎ)1989 ರಲ್ಲಿ ಎಷ್ಟು ದೇಶ ಮತ್ತು ದ್ವೀಪ ಸಮುದಾಯಗಳು ರಾಜ್ಯ ಸುವಾರ್ತೆ ಸಾರುವುದರಲ್ಲಿ ಭಾಗವಹಿಸಿದವು, ಮತ್ತು ಈ ಕೆಲಸದಲ್ಲಿ ಎಷ್ಟು ಜನರು ಭಾಗವಹಿಸಿದರು? (ಬಿ) ಅತ್ಯುನ್ನತ ತಿಂಗಳಲ್ಲಿ ಎಷ್ಟು ಪಯನೀಯರು ವರದಿಮಾಡಿದರು, ಮತ್ತು ಕ್ಷೇತ್ರ ಸೇವೆಯಲ್ಲಿ ವ್ಯಯಿಸಿದ ತಾಸುಗಳ ಮೊತ್ತವೆಷ್ಟು?
10. ಆ ತಖ್ತೆ ತಿಳಿಸುವಂತೆ, 212 ದೇಶಗಳೂ ದ್ವೀಪ ಸಮುದಾಯಗಳೂ ಒಳಬರುವ ಯೆಹೋವನ ರಾಜ್ಯವನ್ನು ಸಾರುವುದರಲ್ಲಿ ಭಾಗವಹಿಸಿದವು. ಪ್ರಿಯ ಕಾವಲಿನಬುರುಜು ವಾಚಕರೇ, ಈ ಮಹಾ ಕೆಲಸದಲ್ಲಿ ಭಾಗವಹಿಸಿದ 37,87,188 ಮಂದಿಯಲ್ಲಿ ಒಬ್ಬರಾಗುವ ಸುಯೋಗ ನಿಮಗಿತ್ತೋ? ಪಯನೀಯರ ಸೇವೆಯ ಅತ್ಯುನ್ನತಿಯ ತಿಂಗಳಲ್ಲಿ ವರದಿಮಾಡಿದ 8,08,184 ಮಂದಿಯಲ್ಲಿ ನೀವು ಒಬ್ಬರೋ? 1989 ರ ಭೂವ್ಯಾಪಕ ಕ್ಷೇತ್ರ ಸೇವೆಯಲ್ಲಿ ಕಳೆದ 83,54,26,538 ತಾಸುಗಳಲ್ಲಿ ನಿಮ್ಮ ವಂತಿಕೆ ಎಷ್ಟೇ ಇರಲಿ, ನಿಮಗೆ ಹರ್ಷಿಸಲು ಕಾರಣವಿದೆ.—ಕೀರ್ತನೆ 104:33, 34; ಫಿಲಿಪ್ಪಿ 4:6.
11. (ಎ)ಕಳೆದ ಮಾರ್ಚ್ 22 ರ ಸ್ಮಾರಕಾಚರಣೆಯಲ್ಲಿದ್ದ ಯಾವ ಹಾಜರಿ ಹರ್ಷಕ್ಕೆ ಕಾರಣವಾಗಿದೆ, ಮತ್ತು ಏಕೆ? (ಬಿ) ಎಷ್ಟು ಮಂದಿ ದೀಕ್ಷಾಸ್ನಾನ ಪಡೆದರು, ಮತ್ತು ತಖ್ತೆಯಲ್ಲಿ ಯಾವ ದೇಶಗಳು ಈ ವಿಷಯದಲ್ಲಿ ಗಮನಾರ್ಹ ದೇಶಗಳು?
11. ಕಳೆದ ಮಾರ್ಚ್ 22 ರಂದು ಯೇಸುವಿನ ಮರಣದ ಲೋಕವ್ಯಾಪಕಾಚರಣೆಯಲ್ಲಿ ನೆರೆದು ಬಂದ 94,79,064 ಜನರ ಅತ್ಯುತ್ತಮ ಹಾಜರಿಯಲ್ಲಿಯೂ ಹರ್ಷಿಸಿರಿ! ಆಸಕ್ತಿಯ ಕುರಿಸದೃಶರನ್ನು ಪ್ರೀತಿಯಿಂದ ಹಟ್ಟಿಗೆ ಸೇರಿಸಿ ಅವರೂ ಯೆಹೋವನನ್ನು ಕ್ರಮವಾಗಿ ಸೇವಿಸುವಂತೆ ಮಾಡುವದಾದರೆ 56,91,876 ಹೊಸ ರಾಜ್ಯ ಘೋಷಕರಿರುವ ಶಕ್ಯತೆ ಇದೆಂದು ಈ ಮೊದಲಿನ ಸಂಖ್ಯೆ ತೋರಿಸುತ್ತದೆ. ನಾವಿದರಲ್ಲಿ ಅವರಿಗೆ ಸಹಾಯ ನೀಡಬಲ್ಲೆವೋ? (ಯೋಹಾನ 10:16; ಪ್ರಕಟನೆ 7:9, 15) ಅನೇಕರು ಈವಾಗಲೇ ಪ್ರತಿವರ್ತನೆ ತೋರಿಸಿರುತ್ತಾರೆ. 1989ನೇ ಸೇವಾ ವರ್ಷದಲ್ಲಿ ದೀಕ್ಷಾಸ್ನಾನ ಪಡೆದ 2,63,855 ಮಂದಿಯ ಮಹಾ ಸಂಖ್ಯೆ ಇದನ್ನು ತೋರಿಸಿದೆ.
12. (ಎ)ವಾಚ್‌ಟವರ್ ಸೊಸೈಟಿಯ ಮುದ್ರಣಾಲಯಗಳ ವಿಷಯದಲ್ಲಿ (ಬಿ) ಪತ್ರಿಕೆ ಮತ್ತು ಚಂದಾ ನೀಡುವಿಕೆಯ ವಿಷಯದಲ್ಲಿ ತಖ್ತೆಯಲ್ಲಿ ಕಾಣದಿರುವ ಕೆಲವು ವಿಷಯಗಳಾವುವು?
12. ತಖ್ತೆ ತೋರಿಸದಿರುವ ಕೆಲವು ವಿಷಯಗಳೂ ಇವೆ. ಸಾಹಿತ್ಯಗಳಿಗೆ ಅಂದರೆ ಬೈಬಲ್, ಪುಸ್ತಕ, ಬ್ರೊಷರ್ ಮತ್ತು ಪತ್ರಿಕೆಗಳಿಗಾಗಿ ಜನರಿಗಿರುವ ತೃಷೆಯು— ತಣಿಸಲಾರದ್ದು. ಇದರ ಪರಿಣಾಮವಾಗಿ ನ್ಯೂಯಾರ್ಕಿನ ವಾಚ್‌ಟವರ್ ಮುದ್ರಣಾಲಯಗಳು 3,58,11,000 ಬೈಬಲ್, ಪುಸ್ತಕ ಮತ್ತು ಬ್ರೊಷರನ್ನು ಚಾಪಿಸಲು 25,999 ಟನ್ನು ಕಾಗದವನ್ನು ಉಪಯೋಗಿದವು. ಇದು 1988 ಕ್ಕಿಂತ 101 ಸೇಕಡಾ ವೃದ್ಧಿಯು. ವಾಚ್‌ಟವರ್ ಸೊಸೈಟಿಯ ಇತರ ದೊಡ್ಡ ಕಾರ್ಖಾನೆಗಳು, ಮುಖ್ಯವಾಗಿ ಜರ್ಮನಿ, ಇಟೆಲಿ ಮತ್ತು ಜಪಾನಿನಲ್ಲಿ ಹೆಚ್ಚಿನ ಸರದಿ ಕೆಲಸ ಮಾಡಿ ಹೀಗೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” “ಹೊತ್ತುಹೊತ್ತಿಗೆ” ಆತ್ಮಿಕ ಆಹಾರ ಕೊಡುವುದನ್ನು ಬೆಂಬಲಿಸಿದರು. (ಮತ್ತಾಯ 24:45) ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಅನೇಕ ದೇಶಗಳಲ್ಲಿ ಪತ್ರಿಕೆ ಮತ್ತು ಚಂದಾ ನೀಡುವಿಕೆ ವಿಶೇಷವಾಗಿ ಅತ್ಯುತ್ತಮವಾಗಿತ್ತು. “ಮಹಾ ಬಾಬೆಲ್” ಸಂಬಂಧವಾದ ಕಾವಲಿನಬುರುಜು ಸಂಚಿಕೆಗಳ ಹಂಚುವಿಕೆಗೆ ವಿಶೇಷ ಗಮನವನ್ನು ಕೊಡಲಾಗಿತ್ತು. (ಪ್ರಕಟನೆ 17:5) ಮುಂಬರುವ ಎಪ್ರಿಲ್‌ನಲ್ಲಿ ಸಹಾಯಕ ಪಯನೀಯರರೂ ಇತರ ಸಾಕ್ಷಿಗಳೂ ಲೋಕ ಕ್ಷೇತ್ರದೊಳೆಗೆ ಗುಂಪು ಗುಂಪಾಗಿ ಹೋಗಿ, 1990 ರ ಸೇವಾ ವರ್ಷವನ್ನು ಸಾಕ್ಷಿ ನೀಡುವಿಕೆಯ ಅತ್ಯುತ್ತಮ ವರ್ಷವಾಗಿ ಮಾಡುವರೆಂಬದಕ್ಕೆ ಸಂದೇಹವಿಲ್ಲ.—ಯೆಶಾಯ 40:31; ರೋಮಾಪುರ 12:11, 12 ಹೋಲಿಸಿ.
13. ತಖ್ತೆಯಲ್ಲಿ ಕಳೆದ ವರ್ಷ ಇದ್ದಿರದ ಯಾವ ದೇಶಗಳಿವೆ? ವಿವರಿಸಿರಿ.
13. ಪುನ: ನಾವು ತಖ್ತೆಗೆ ಹಿಂದಿರುಗುವಲ್ಲಿ ಕಳೆದ ವರ್ಷ ಇದ್ದಿರದ ಕೆಲವು ದೇಶಗಳ ಹೆಸರುಗಳು ಕಂಡು ಬರುತ್ತವೆ. ಹೌದು! ಇತ್ತೀಚೆಗೆ ನಮ್ಮ ಸೇವೆಯನ್ನು ಶಾಸನಬದ್ಧವಾಗಿ ಮಾಡಿದ ಹಂಗೆರಿ ಮತ್ತು ಪೋಲೆಂಡ್ ದೇಶಗಳೇ ಇವು. ಯೆಹೋವನ ಸಾಕ್ಷಿಗಳಿಗೆ ಇಂಥ ವಿಚಾರಪರತೆಯನ್ನು ಈಗ ತೋರಿಸಿದಕ್ಕಾಗಿ ನಾವು ಆ ದೇಶಗಳ ಅಧಿಕಾರಿಗಳಿಗೆ ಕೃತಜ್ಞರು. ಈ ಸಂಬಂಧದಲ್ಲಿ “ನಮಗೆ ಸುಖ ಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ” ಲೋಕವ್ಯಾಪಕ ಸಹೋದರ ವರ್ಗವು ಮಾಡಿರುವ ಪ್ರಾರ್ಥನೆಗೆ ಉತ್ತರವು ದೊರಕಿದೆ.—1 ತಿಮೋಥಿ 2:1, 2.
14. ಪೋಲೆಂಡಿನಲ್ಲಿ “ದೇವಭಕ್ತಿ” ಜಿಲ್ಲಾ ಅಧಿವೇಶನಗಳಲ್ಲಿ ನಡೆದ ಕೆಲವು ಮುಖ್ಯಾಂಶಗಳನ್ನು ಕೊಡಿ.
14. “ದೇವ ಭಕ್ತಿ”! ಆಗಸ್ಟಿನಲ್ಲಿ “ದೇವಭಕ್ತಿ” ಜಿಲ್ಲಾ ಅಧಿವೇಶನಗಳನ್ನು ಪೋಲೆಂಡಿನ ಮೂರು ಸ್ಥಳಗಳಲ್ಲಿ ಜರಗಿಸಲಿಕ್ಕೂ ಸಾಧ್ಯವಾಯಿತು! ನಮ್ಮ 91,204 ಪೋಲಿಶ್ ಸಹೋದರರು ಎಷ್ಟು ಉತ್ತಮ ಅತಿಥೇಯರಾಗಿ ಕಂಡುಬಂದರು! (ಇಬ್ರಿಯ 13:1, 2, 16) ಅದ್ಭುತವೋ ಎಂಬಂತೆ, ಸಹಸ್ರಾರು ಚೆಕ್, ಜರ್ಮನ್, ರಷ್ಯನ್ ಮತಿತ್ತರ ಸಹೋದರರು ವೀಸಾ ಪಡೆದು ಬಸ್, ಟ್ರೈನ್ ಮತ್ತು ಕಾಲ್ನಡೆಯಿಂದಲೂ ಬಂದರು. ಇತರ ಸಹಸ್ರಾರು ಜನರು ಅಮೇರಿಕ, ಪಶ್ಚಿಮ ಯುರೋಪ್, ಪೆಸಿಫಿಕ್ ದ್ವೀಪ ಮತ್ತು ಜಪಾನಿನಷ್ಟೂ ದೂರದಿಂದ ಬಂದು ಮುಟ್ಟಿದರು. ನಮ್ಮ ಸಹೋದರರು ತಾವೇ ಕುಂದಿಲ್ಲದ ರೀತಿಯಲ್ಲಿ ಶುಚಿಗೊಳಿಸಿದ ದೊಡ್ಡ ಕ್ರೀಡಾಂಗಣಗಳು ಕಾಟೋವಿಟ್ಸ್‌ನಲ್ಲಿ ನೆರೆದು ಬಂದಿದ್ದ 65,710 ಮಂದಿಯನ್ನು, ಪೊಸ್‌ವೈನ್‌ನಲ್ಲಿ ನೆರೆದು ಬಂದಿದ್ದ 40,442 ಮಂದಿಯನ್ನು ಮತ್ತು ವಾರ್ಸೋದಲ್ಲಿ ಕೂಡಿಬಂದಿದ್ದ 60,366 ಮಂದಿಯನ್ನು, ಹೀಗೆ ಒಟ್ಟಿಗೆ 1,66,518 ಮಂದಿಯನ್ನು ಹಿಡಿಸಲು ಮಾತ್ರ ಸಾಕಷ್ಟು ದೊಡ್ಡದಾಗಿದ್ದವು! ಪ್ರತಿಯೊಂದು ಕೇಂದ್ರದಲ್ಲಿ ದೀಕ್ಷಾಸ್ನಾನದ ಮನೋಹರ ದೃಶ್ಯ ಆನಂದ ಬಾಶ್ಪಗಳನ್ನು ತಂದೊಡ್ಡಿತು. ಪೋಸ್‌ವಾನ್‌ನಲ್ಲಿ ಒಂಭತ್ತು ಹಾಗೂ ತೊಂಭತ್ತು ವಯಸ್ಸಿನ ವ್ಯಕ್ತಿಗಳಿಗೆ ದೀಕ್ಷಾಸ್ನಾನವಾಯಿತು. ಮೂರು ಸಮ್ಮೇಲನಗಳಲ್ಲಿ ನಡೆದ ಒಟ್ಟು 6,903 ದೀಕ್ಷಾಸ್ನಾನಗಳಲ್ಲಿ ಅನೇಕಾನೇಕ ಹದಿಹರೆಯವರಿದ್ದು, ಇವರಲ್ಲಿ ಅನೇಕರು, ಧರ್ಮ ಹಳೆಬರೊಂದಿಗೆ ಸಾಯುವದು ಎಂದು ಹೇಳಲಾಗಿದ್ದ ದೇಶಗಳಿಂದ ಬಂದವರಾಗಿದ್ದರು. ಆದರೆ ದೇವರ ವಾಕ್ಯದ ಮೇಲಾಧರಿತ ನಿಜ ಧರ್ಮ ಹಾಗಾಗದು! (ಕೀರ್ತನೆ 148:12, 13; ಆಪೋ. 2:41; 4:4 ಹೋಲಿಸಿ.) ಪೂರ್ವ ಯುರೋಪಿನ ನಮ್ಮ ಸಹೋದರರ ಸೈರಣೆಗೆ ಎಷ್ಟು ಆಶ್ಚರ್ಯಕರವಾಗಿ ಪ್ರತಿಫಲ ದೊರಕಿದೆ!
ಪರೀಕ್ಷೆಯ ಸಮಯದಲ್ಲಿ ಮುಂದುವರಿದ ನಂಬಿಗಸ್ತಿಕೆ
15. ಲೆಬನನಿನ ಸಾಕ್ಷಿಗಳು ಸಹಿಷ್ಣುತೆ ಮತ್ತು ನಿಶ್ಚಲತೆಯನ್ನು ಹೇಗೆ ತೋರಿಸಿದ್ದಾರೆ, ಮತ್ತು ಬಂದಿರುವ ಉತ್ತಮ ಪರಿಣಾಮಗಳೇನು?
15. ಅಪೋಸ್ತಲ ಪೌಲನಂತೆಯೇ ಯೆಹೋವನ ಸಾಕ್ಷಿಗಳು ಸಹಾ ಅನೇಕ ಮತ್ತು ವಿವಿಧ ಸಂದರ್ಭಗಳಲ್ಲಿ ಸೈರಣೆ ತೋರಿಸುವಂತೆ ಕೇಳಲ್ಪಡುತ್ತಾರೆ. (2 ಕೊರಿಂಥ 11:24-27) ಲೆಬನನಿನಲ್ಲಿ ಅಂತರಿಕ ಯುದ್ಧ ಉದ್ರೇಕದಿಂದ ನಡೆಯುತ್ತದೆ. ಇದಕ್ಕೆ ನಮ್ಮ ಸಹೋದರರ ಪ್ರತಿವರ್ತನೆಯೇಸು? ನಿಶ್ಚಲತೆ ಮತ್ತು ದೃಢತೆಯನ್ನು ಅವರು ತೋರಿಸುತ್ತಿದ್ದಾರೆ. 1989 ರಲ್ಲಿ ಸಿಡಿಮದ್ದು, ಬಾಂಬುಗಳ ಮಳೆಯೇ ಸುರಿಯಿತು. ಆದರೆ ಇದು ಅತ್ಯಂತ ಬಿರುಸಾಗಿ ನಡೆದ ಸ್ಥಳಗಳಲ್ಲಿಯೂ ಸಹೋದರರು ನಿಧಾನಿಸದಂತೆ ದೃಢ ನಿಶ್ಚಯ ಮಾಡಿದರು. ಬೇರೂಟಿನ ಒಂದು ಸಭೆ ವರದಿ ಮಾಡುವುದು: “ವಾರದ ಪ್ರತಿ ಸಾಯಂಕಾಲವೂ ಸೇವೆಗಾಗಿ ನಿಯತಕ್ರಮದ ಗುಂಪುಗಳನ್ನು ಏರ್ಪಡಿಸಲಾಯಿತು. ಸುರಕ್ಷೆ ಕಷ್ಟವಾಗಿರುವ ಪರಿಸ್ಥಿತಿಗಳಲಿಯ್ಲಾ ಸಹೋದರರು ನಿರುತ್ತೇಜಗೊಳ್ಳಲಿಲ್ಲ. ನಾವು ಹಿಂದೆಂದಿಗಿಂತಲೂ ಹೆಚ್ಚು ವಿಸ್ತಾರವಾಗಿ ಟೆರಿಟೆರಿಗಳನ್ನು ಮಾಡಿ ಮುಗಿಸಿದೆವು. ಎಪ್ರಿಲಿನಲ್ಲಿ ಪಯನೀಯರರಲ್ಲಿ ಅತ್ಯಂತ ಉನ್ನತ ಸಂಖ್ಯೆ ನಮಗಿತ್ತು. ಹೊಸ ಬೈಬಲಧ್ಯಯನಗಳನ್ನು ಆರಂಬಿಸಿದ್ದು ಮಾತ್ರವಲ್ಲ ಹೆಚ್ಚು ಪತ್ರಿಕೆಗಳೂ ಪುಸ್ತಕಗಳೂ ನೀಡಲ್ಪಟ್ಟವು.”
16. ಸಾಕ್ಷಿಗಳಿದಿರ್ದದ ನಗರಗಳಿಗೆ ಸುವಾರ್ತೆ ತರುವುದರ ಮೂಲಕ ಕೊಲಂಬಿಯದ ನಮ್ಮ ಸಹೋದರರು ಹೇಗೆ ತಾಳ್ಮೆ ತೋರಿಸಿದ್ದಾರೆ?
16. ಅಮಲೌಷದ ವ್ಯಾಪಾರ ಮತ್ತು ಬಲಾತ್ಕಾರಗಳ ಕಾರಣದಿಂದ ಕೊಲಂಬಿಯ ದೇಶವು ಇತ್ತೀಚೆಗೆ ಸಮಾಚಾರದಲ್ಲಿದೆ. ಆದರೆ ಅಲ್ಲಿನ ಕ್ರೈಸ್ತರ ನಂಬಿಗಸ್ತ ಸೈರಣೆಯೂ ಸುದ್ಧಿಯನ್ನುಂಟು ಮಾಡುತ್ತದೆ. ಇತ್ತೀಚೆಗೆ ಅಲ್ಲಿಯ ಹತ್ತು ಸಾವಿರ ಅಥವಾ ಹೆಚ್ಚು ನಿವಾಸಿಗಳಿರುವ ಮತ್ತು ಯೆಹೋವನ ಸಾಕ್ಷಿಗಳಿರದ 31 ನಗರಗಳಿಗೆ ತಾತ್ಕಾಲಿಕ ಸ್ಪೆಷಲ್ ಪಯನೀಯರರನ್ನು ಕಳುಹಿಸಲಾಯಿತು. ಒಂದು ನಗರದಲ್ಲಿ ಅಲ್ಲಿಯ ಹೊಸ ಆಸಕ್ತರು ಪಯನೀಯರರು ಅಲ್ಲಿ ಕೇವಲ ಕೆಲವೇ ತಿಂಗಳು ಇರುವರೆಂದು ಕೇಳಿದಾಗ, ಹೆಚ್ಚು ಸಮಯ ಇರುವಂತೆ ಪಯನೀಯರರನ್ನು ಬೇಡಿಕೊಂಡರು. ಇನ್ನೊಂದು ನಗರದಲ್ಲಿ 18 ಜನ ಆಸಕ್ತರು, ಪಯನೀಯರರು ಕಳೆದ ಮೂರು ತಿಂಗಳುಗಳಲ್ಲಿ ಕೊಟ್ಟ ಆತ್ಮಿಕ ಸಹಾಯಕ್ಕಾಗಿ ಗಣ್ಯತೆಯ ಪತ್ರವೂಂದನ್ನು ಬರೆದು ಸಹಿಹಾಕಿ ಇನ್ನೂ ಹೆಚ್ಚಿನ ಸಹಾಯ ದೊರೆಯುವಂತೆ ಕೇಳಿಕೊಂಡರು. “ಇದು ಗಂಭೀರ ವಿಷಯ” ವೆಂದು ಅವರು ಹೇಳಿದರು. ಎರಡು ಸಂದರ್ಭಗಳಲ್ಲಿಯೂ ಆಸಕ್ತಿಯನ್ನು ಪೋಷಿಸುತ್ತಾ ಮುಂದರಿಯುವ ಏರ್ಪಾಡು ಮಾಡಲ್ಪಟ್ಟಿತ್ತೆಂದು ಹೇಳುವ ಅವಶ್ಯವಿಲ್ಲ. ಇಷ್ಟು ದೂರದ ಪ್ರದೇಶಗಳನ್ನು ವಿಕಸಿಸಲು ತಾಳ್ಮೆ ಅಗತ್ಯ ಆದರೆ ಹಾಗೆ ಮಾಡುವ ಈ ಪಯನೀಯರರ ಕಠಿಣ ಕೆಲಸದ ಮೇಲೆ ಆಶೀರ್ವಾದವೇನೋ ಹೇರಳ.
17, 18. (ಎ)ಇಟೆಲಿಯ ಯೆಹೋವನ ಸಾಕ್ಷಿಗಳು ಯಾವ ಪರಿಸ್ಥಿತಿಯಲ್ಲಿ ತಾಳಿದ್ದಾರೆ? (ಬಿ) ಹಬ್ಬಿಸಲ್ಪಟ್ಟ ಸುಳ್ಳಿನ ಎದುರಿನಲ್ಲಿಯೂ ಸಾಕ್ಷಿಗಳು ಹೇಗೆ ಸಾಫಲ್ಯ ಪಡೆದಿದ್ದಾರೆ?
17. ಇಟೆಲಿಯಲ್ಲಿ ಯೆಹೋವನ ಸಾಕ್ಷಿಗಳು ಬಲಾಢ್ಯ ವೈದಿಕ ವಿರೋಧವನ್ನು ಎದುರಿಸಬೇಕಾದರೂ ಯೆಹೋವನ ಶಕಿಯ್ತಿಂದ ಅವರು ತಾಳಿದ್ದಾರೆ. ವಿವಿಧ ಪ್ಯಾರಿಷ್‌ಗಳಲ್ಲಿ ತಮ್ಮ ಜನರ ಮನೆಬಾಗಲಿಗೆ ಹಚ್ಚಲು ಪಾದ್ರಿಗಳು ಅಂಟು ಕಾಗ್ದವನ್ನು ಹಂಚಿದರು. ಯೆಹೋವನ ಸಾಕ್ಷಿಗಳು ದ್ವಾರಗಂಟೆಯನ್ನು ಬಾರಿಸಬಾರದೆಂದು ಅದರಲ್ಲಿ ಬರೆದಿತ್ತು. ಅನೇಕ ಪಾದ್ರಿಗಳು, ಚಿಕ್ಕ ಹುಡುಗರು ಒಂದು ನಿರ್ದಿಷ್ಟ ವಿಭಾಗದ ಎಲ್ಲಾ ಮನೆಗಳಲ್ಲಿ—ಸಾಕ್ಷಿ ಕುಟುಂಬಗಳ ಮನೆಗಳಲ್ಲಿ ಸಹ—ಈ ಅಂಟು ಕಾಗ್ದಗಳನ್ನು ಹಚ್ಚುವಂತೆ ಅವರನ್ನು ಕೆಲಸಕ್ಕೆ ಹಿಡಿದರು! ಆದರೆ ಸಾಕ್ಷಿಗಳು ಅಷ್ಟು ಸುಲಭವಾಗಿ ಹೆದರುವವರಲ್ಲ. ಅನೇಕವೇಳೆ ಈ ಅಂಟು ಕಾಗ್ದವನ್ನುಪಯೋಗಿಸಿ ಅವರು ಸಂಭಾಷಣೆಗೆ ತೊಡಗುತ್ತಾರೆ. ಅದಲ್ಲದೆ, ಪತ್ರಿಕೆಗಳು ಮತ್ತು ರಾಷ್ಟ್ರೀಯ ಟೀವೀ ಇದನ್ನು ವಿಸ್ತಾರವಾಗಿ ಪ್ರಕಟಮಾಡಿ, ತೋರಿಸಲಾದ ಧಾರ್ಮಿಕ ಅಸಹಿಷ್ಣುತೆಯನ್ನು ಖಂಡಿಸಿ, ಇಂತಹ ಉಪಾಯಗಳು ನಿಜವಾಗಿಯಾ ಚರ್ಚಿನ ಬಲಹೀನತೆಯನ್ನು ಒತ್ತಿಹೇಳುತ್ತದೆಂದು ತಿಳಿಸಿದವು. ಒಬ್ಬ ಯುನಿರ್ವಸಿಟಿಯ ಪ್ರೊಫೆಸರರು ಈ ವಾದಾಸ್ಪದವಾದ ಸಾಕ್ಷಿ ವಿರೋಧಿ ಅಂಟು ಕಾಗದ್ದಿಂದ ಎಷ್ಟು ಬೇಸರಿಸಿದರೆಂದರೆ ಅವರು ವಾಚ್‌ಟವರ್ ಮತ್ತು ಎವೇಕ್! ಪತ್ರಿಕೆಗಳ ಚಂದಾ ಪಡೆದರು.
18. ಇಟೆಲಿಯ ಕ್ಯಾಥ್‌ಲಿಕ್ ಚರ್ಚು ಧರ್ಮಭ್ರಷ್ಟರನ್ನುಪಯೋಗಿಯೂ ಯೆಹೋವನ ಜನರ ವಿರುದ್ಧ ಸುಳ್ಳನ್ನು ಹಬ್ಬಿಸುತ್ತದೆ. ಆದ್ರೆ ಇದರಿಂದಲೂ ಪರಿಣಾಮ ಕೆಟ್ಟದಾಗುತ್ತದೆ. ಏಕೆಂದರೆ ಅಲ್ಲಿಯ 1,72,382 ಪ್ರಚಾರಕರು ಪ್ರಸಿದ್ಧರೂ ಗೌರವಾರ್ಹರೂ ಆಗಿದ್ದಾರೆ. ಒಬ್ಬ ವ್ಯಕ್ತಿ ಅವನನ್ನು ಭೇಟಿಮಾಡಿದ ಸಾಕ್ಷಿಗಳಿಗೆ, ತಾನು ಮಾಜಿ ಸಾಕ್ಷಿಗಳು ಬರೆದ ಪುಸ್ತಕಗಳಲ್ಲಿ ನಮ್ಮ ವಿಷಯ ಕೆಟ್ಟ ವಿಷಯಗಳನ್ನು ಓದಿದ್ದೇನೆಂದು ಹೇಳಿದನು. ಈ ಕಾರಣದಿಂದ, ತನ್ನ ಸಹೋದರನೇ ಯೆಹೋವನ ಸಾಕ್ಷಿಯಾದಾಗ ಇವನೇ ಅವನನ್ನು ಅತಿಯಾಗಿ ವಿರೋಧಿಸಿದನು. ಆದರೆ ತುಸು ಸಮಾಯಾನಂತರ ತನ್ನ ಸಹೋದರನ ಧರ್ಮ ಪರಿವರ್ತನೆ ಅವನಲ್ಲಿ ಮಾಡಿದ ಉತ್ತಮ ಪರಿಣಾಮವನ್ನು ಗಮನಿಸಲಾಗಿ ಅವನು ಹೀಗೆ ಯೋಚಿಸ ತೊಡಗಿದನು: ‘ಅಷ್ಟು ಕೆಟ್ಟದಾಗಿರುವ ವಿಷಯ ಇಷ್ಟು ಉತ್ತಮ ಪರಿಣಾಮವನ್ನು ಉತ್ಪನ್ನ ಮಾಡುವುದು ಹೇಗೆ ಸಾಧ್ಯ?’ ಹೀಗೆ, ಅವನೂ, ತನ್ನನ್ನು ಭೇಟಿಯಾದ ಸಾಕ್ಷಿಗಳ ಸಂಗಡ ಒಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡನು.—ಕೊಲೊಸ್ಸೆ 3:8-10 ಹೋಲಿಸಿ.
ಔದಾಸೀನ್ಯವನ್ನು ನಿಭಾಯಿಸುವುದು
19, 20. (ಎ)ಯಾವ ಸ್ಥಿತಿಗತಿ ಫಿನ್ಲೆಂಡಿನ ಸಾಕ್ಷಿಗಳಿಂದ ಸಹಿಷ್ಣುತೆ ಕೇಳಿಕೊಂಡಿದೆ, ಮತ್ತು ಒಂದು ಚರ್ಚ್ ಸಮೀಕ್ಷಣೆಯಲ್ಲಿ ಯಾವುದು ನಿಜವಾಗಿಯೂ ಗಮನಾರ್ಹವಾಗಿದೆ? (ಬಿ) ಸುವಾರ್ತೆ ಸಾರುವುದರಲ್ಲಿ ತಾಳ್ಮೆಯ ಪ್ರಾಮುಖ್ಯತೆಯನ್ನು ಯಾವ ಅನುಭವ ಚಿತ್ರಿಸುತ್ತದೆ?
19. ಸಾಕ್ಷಿಗಳು ಪದೇಪದೇ ಭೇಟಿಮಾಡುತ್ತಿರುವ ದೇಶಗಳಲ್ಲಿ ಅನೇಕ ವೇಳೆ ಸುವಾರ್ತೆಗೆ ಅತಿವ್ಯಾಪಕವಾದ ಉಪೇಕ್ಷೆ ಕಂಡುಬರುತ್ತದೆ. ಫಿನ್ಲೆಂಡಿನಲ್ಲಿ ಇದು ಸತ್ಯವೆಂಬದು ನಿಶ್ಚಯ. ಆ ದೇಶದ ಚರ್ಚು ನಡಿಸಿದ ಒಂದು ಸಮೀಕ್ಷೆಯಲ್ಲಿ ಅಲ್ಲಿಯ ಜನಸಂಖ್ಯೆಯಲ್ಲಿ 70 ಸೇಕಡಾ ಮಂದಿಗೆ ಸಾಕ್ಷಿಗಳು ತಮ್ಮ ಮನೆಗೆ ಭೇಟಿ ಕೊಡುವುದರಲ್ಲಿ ಇಷ್ಟವಿಲ್ಲವೆಂದು ತಿಳಿಯಿತು. ಆದರೂ, 30 ಸೇಕಡಾ ಜನರು ಬಲವಾದ ಆಕ್ಷೇಪವೆತ್ತದವರು ಮತ್ತು ಅವರಲ್ಲಿ 4 ಸೇಕಡಾ ಜನರು ತಮಗೆ ಯೆಹೋವನ ಸಾಕ್ಷಿಗಳು ಇಷ್ಟವೆಂದು ಹೇಳಿದರು. ಇದು ಗಮನಾರ್ಹ ಸಂಖ್ಯೆ. ಫಿನ್ಲೆಂಡಿನ ಜನಸಂಖ್ಯೆಯಲ್ಲಿ ನಾಲ್ಕು ಸೇಕಡಾ ಜನರೆಂದರೆ 2 ಲಕ್ಷ ಜನರಾಗುತ್ತಾರೆ. ಇದನ್ನು ಈಗಿನ ಪ್ರಚಾರಕ ಸಂಖ್ಯೆಯಾದ 17,303 ರೊಂದಿಗೆ ಹೋಲಿಸಿ!
20. ಸೇವೆಯಲ್ಲಿ ಒಬ್ಬ ಪ್ರಚಾರಕನ ಗಮನವನ್ನು ಈ ಸಮೀಕ್ಷೆಯ ವಿಷಯಕ್ಕೆ ಎಳೆಯಲಾಯಿತು. “ನಮ್ಮಲ್ಲಿ 70 ಸೇಕಡಾ ಜನರು ನಿಮ್ಮನ್ನು ಅನಿಷ್ಟರೆಂದು ಎಣಿಸುತ್ತಾರೆಂದು ನಿಮಗೆ ಗೊತ್ತಿಲ್ಲವೇ? ಹೀಗಿರುವಾಗ ನೀವು ನಮ್ಮ ಮನೆಬಾಗಲಿಗೆ ಏಕೆ ಬರುತ್ತಾ ಇರುತ್ತೀರಿ” ಎಂದು ಕೇಳಲ್ಪಡಲಾಗಿ ಆ ಪ್ರಚಾರಕನು ಉತ್ತರಕೊಟ್ಟದ್ದು: “ಅದು ಹೌದು. ಆದರೆ ಅದೇ ಸಮೀಕ್ಷಣೆಯು 4 ಸೇಕಡಾ ಜನರಿಗೆ ನಾವು ಇಷ್ಟವೆಂದು ತೋರಿಸುತ್ತದೆ. ನಾವು ಅವರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಅವರ ಸಂಖ್ಯೆ 1 ಸೇಕಡಾ ಇದ್ದರೂ ನಾವು ಅವರನ್ನು ಹುಡುಕಲಿಕ್ಕಾಗಿ ಮನೆಮನೆಗೆ ಹೋಗುವೆವು.” ಮನೆಯವನೂ ಇದರ ಕುರಿತು ಒಂದು ಕ್ಷಣ ಯೋಚಿಸಿ ಹೇಳಿದ್ದು: “ನಿಮ್ಮ ಸಂದೇಶ ಜನರಿಗೆ ಅಷ್ಟೊಂದು ಪ್ರಾಮುಖ್ಯವೆ?” ಆಗ ಪ್ರಚಾರಕನು “ಅದನ್ನು ಕೇಳಲು ನೀವು ಇಷ್ಟ ಪಡುವಿರಾ?” ಎಂದು ಉತ್ತರಕೊಟ್ಟನು. ಸ್ವಲ್ಪದರಲ್ಲಿ ಆ ಮನೆಯವನು ಸುವಾರ್ತೆಯಲ್ಲಿ ಆಸಕ್ತಿ ವ್ಯಕ್ತಪಡಿಸಿದನು.
ಭವಿಷ್ಯತ್ತಿನಲ್ಲಿರುವ ವಿಷಯಗಳು
21. (ಎ)ಈ ವ್ಯವಸ್ಥೆಯಲ್ಲಿ ನಾವು ಯಾವ ತರದ ಹೋರಾಟವನ್ನು ನಡಿಸಬೇಕು, ಮತ್ತು ಏಕೆ? (ಬಿ) ನಾವು ಯಾವುದನ್ನು ಸಹಿಸಲೇ ಬೇಕಾದೀತು, ಮತ್ತು ಹಬಕ್ಕೂಕನ ಪ್ರವಾದನೆ ನಮಗೆ ಯಾವುದರ ಆಶ್ವಾಸನೆ ನೀಡುತ್ತದೆ?
21. ಇಂದು ನಮ್ಮ ವಿಷಯದಲ್ಲೇನು? ಯೆಹೋವ ಮತ್ತು ಕ್ರಿಸ್ತಯೇಸು ಇವರೊಂದಿಗೆ ನಾವೂ ಅಂತ್ಯದ ತನಕ ತಾಳಿಕೊಳ್ಳಲು ದೃಢನಿಶ್ಚಯ ಮಾಡಿದ್ದೇವೋ? ಇದಕ್ಕೆ ದೀರ್ಘಕಾಲವಿರಲಿಕ್ಕಿಲ್ಲ. ಆದರೆ ನಾವು ತಾಳಿಕೊಳ್ಳಬೇಕೆಂಬದು ನಿಶ್ಚಯ! ಸೈತಾನನ ವ್ಯವಸ್ಥೆಯಲ್ಲಿ ಲೋಕದ ದುರಾಚಾರ, ಭ್ರಷ್ಟಾಚಾರ ಮತ್ತು ದ್ವೇಷಗಳು ನಮ್ಮನ್ನು ಸರ್ವದಿಕ್ಕುಗಳಿಂದಲೂ ಆವರಿಸುವಾಗ ನಾವು ನಂಬಿಕೆಗಾಗಿ ಕಠಿಣ ಹೋರಾಟವನ್ನು ಮಾಡಬೇಕು. (ಯೂದ 3:20, 21) ಒಂದಲ್ಲ ಒಂದು ವಿಧದ ಹಿಂಸೆಯನ್ನು ನಾವು ತಾಳಬೇಕಾದೀತು. ಇದೇ ಸಮಯದಲ್ಲಿಯೂ ನಮ್ಮ ಸಾವಿರಾರು ಸಹೋದರರು ಸೆರೆಮನೆಗಳಲ್ಲಿ ಕಷ್ಟಾನುಭವಿಸುತ್ತಿದ್ದಾರೆ. ಕೆಲವರನ್ನು ಕ್ರೂರ ರೀತಿಯಲ್ಲಿ ಹೊಡೆಯಲಾಗುತ್ತದೆ. ಇವರು ನಮ್ಮ ಪ್ರಾರ್ಥನೆಗಳಿಗೆ ಕೃತಜ್ಞರಾಗಿದ್ದಾರೆ. (2 ಥೆಸಲೋನಿಕ 3:1, 2) ಅತಿ ಶೀಘದಲ್ಲೇ ಇಂದಿನ ವ್ಯವಸ್ಥೆ ಇಲ್ಲದೆ ಹೋಗುವುದು! ಹಬಕ್ಕೂಕನು ಹೇಳುವಂತೆ: “ಅದು ಕ್ಲುಪ್ತ ಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತರ್ವೆಪಡುತ್ತದೆ. ಮೋಸ ಮಾಡದು; ತಡವಾದರೂ ಅದಕ್ಕೆ ಕಾದಿರು. ಅದು ಬಂದೇ ಬರುವುದು, ತಾಮಸವಾಗದು.”—ಹಬಕ್ಕೂಕ 2:3.
22. ಪ್ರವಾದಿಗಳ ತಾಳ್ಮೆ ಮತ್ತು ಯೋಬನ ಸಹಿಷ್ಣುತೆಯನ್ನು ನಾವು ಅಭ್ಯಸಿಸುವಲ್ಲಿ ಯಾವ ಪ್ರತಿಫಲವನ್ನು ನಾವು ಭರವಸೆಯಿಂದ ಎದುರು ನೋಡಬಹುದು?
22. ಶಿಷ್ಯ ಯಾಕೋಬನು ನಮಗೆ ಪ್ರೀತಿಯಿಂದ ಹೇಳುವುದು: “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಯೆಹೋವನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿಮಾಡಿ ಕೊಳ್ಳಿರಿ.” ಇಂದು, ಯೆಹೋವನ ಹೆಸರಿನಲ್ಲಿ ಮಾತಾಡುವ ನಾವು ಸಹಾ ಕಠಿಣ ಪರೀಕ್ಷೆಯ ಸಮಯದಲ್ಲಿ ಯೆಶಾಯ, ಯೆರೆಮೀಯ, ದಾನಿಯೇಲ ಮತಿತ್ತರರಂತೆ ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲೆವು. ಯೋಬನಂತೆ ನಾವೂ ಅಂತ್ಯದ ತನಕ ತಾಳಿಕೊಳ್ಳಬಲ್ಲೆವು. ಅವನ ಸಹಿಷ್ಣುತೆಗೆ ಎಷ್ಟು ಆಶ್ಚರ್ಯಕರವಾದ ಪ್ರತಿಫಲ ದೊರೆಯಿತು! ನಾವೂ ಅಂತ್ಯದ ತನಕ ಸಹಿಸಿಕೊಳ್ಳುವಲ್ಲಿ ಯೆಹೋವನ ಕರುಣೆ ಮತ್ತು ಪ್ರೀತಿದಯೆ ನಮಗೂ ಸದೃಶವಾದ ಪ್ರತಿಫಲವನ್ನು ತರುವುದು. ಮತ್ತು ಯಾಕೋಬನು ಹೇಳಿದ, “ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಹೇಳುತ್ತೇವಲ್ಲವೇ” ಎಂಬ ಮಾತುಗಳು ನಮ್ಮಲ್ಲಿ ಪ್ರತಿಯೊಬ್ಬನ ಮೇಲೆ ನೆರವೇರುವಂತಾಗಲಿ.—ಯಾಕೋಬ 5:10, 11; ಯೋಬ 42:10-13. (w90 1/1)
ನಿಮ್ಮ ಉತ್ತರವೇನು?
◻ ತಾಳ್ಮೆಯ ಯಾವ ಅವಶ್ಯಕತೆಯನ್ನು ಯೇಸು ಒತ್ತಿ ಹೇಳಿದನು?
◻ ಯೆಹೋವನು ಯಾವ ಕಾರಣಗಳಿಗಾಗಿ ತಾಳಿದ್ದಾನೆ?
◻ 1989 ರಲ್ಲಿ ನೆರವೇರಿಸಲ್ಪಟ್ಟ ಮಹಾ ಕೆಲಸದ ಕೆಲವು ಮುಖ್ಯಾಂಶಗಳಾವುವು?
◻ ಪೋಲೆಂಡಿನ ನಮ್ಮ ಸಹೋದರರ ತಾಳ್ಮೆಗೆ ಯಾವ ಪ್ರತಿಫಲ ಸಿಕ್ಕಿದೆ?
◻ ಲೆಬನನ್, ಕೊಲಂಬಿಯ ಮತ್ತು ಇಟೆಲಿಯ ಸಾಕ್ಷಿಗಳು ಪರೀಕ್ಷೆಯಲ್ಲಿ ನಂಬಿಗಸ್ತಿಕೆಯನ್ನು ಹೇಗೆ ತೋರಿಸಿದ್ದಾರೆ?
[Chart]
1990 SERVICE YEAR REPORT OF JEHOVAH’S WITNESSES WORLDWIDE
NOT IN VERNACULAR PRINTED.