ವಾಷಿಂಗ್ಟನ್ ಕೋಡೆಕ್ಸ್ ಸುವಾರ್ತೆಗಳ
ಡಿಸೆಂಬರ್ 1906ರಲ್ಲಿ, ಅಮೆರಿಕದ ಧನಿಕ ಉದ್ಯಮಿ ಮತ್ತು ಕಲಾ ಸಂಗ್ರಹಗಾರ ಚಾರ್ಲ್ಸ್ ಎಲ್. ಫ್ರೀಯರ್, ಈಜಿಪ್ಟಿನ ಗೀಝದಲ್ಲಿ ಆಲಿ ಎಂಬ ಅರಬ್ಬೀ ವ್ಯಾಪಾರಿಯಿಂದ ಕೆಲವು ಹಳೆಯ ಹಸ್ತಪ್ರತಿಗಳನ್ನು ಖರೀದಿಸಿದರು. ಸೋಹಾಗ್ ಸಮೀಪದ ವೈಟ್ ಸನ್ಯಾಸಿ ಮಠದಿಂದ ಅದು ಬಂದಿದೆಯೆಂದು ಆಲಿ ಹೇಳಿದರೂ ನೈಲ್ ಮುಖಜ ಭೂಮಿಯಲ್ಲಿರುವ ಗೀಝದ ಮೂರನೆಯ ಪಿರಮಿಡಿನ ಬಳಿಯಿರುವ ವೈನ್ಡ್ರೆಸರ್ ಸನ್ಯಾಸಿ ಮಠದ ಅವಶೇಷಗಳಿಂದ ಅವು ಬಂದಿದ್ದದ್ದು ಹೆಚ್ಚು ಸಂಭವನೀಯವಾಗಿತ್ತು.
ಫ್ರೀಯರ್ಗೆ ಮೂರು ಹಸ್ತಪ್ರತಿಗಳೂ “ಅಂಟಿನ ಹೊರಮೈ ಹೇಗೆ ಗಟ್ಟಿ ಮತ್ತು ಭಿದುರವಾಗಿದೆಯೊ ಹಾಗಿನ ಕಪ್ಪಾದ, ಶಿಥಿಲವಾದ ಚರ್ಮಕಾಗದದ ಮುದ್ದೆಯೊಂದೂ” ಕೊಡಲ್ಪಟ್ಟವು. ಇದರ ಉದ್ದ ಸುಮಾರು 6.5 ಇಂಚು, ಅಗಲ 4.5 ಇಂಚು ಮತ್ತು ದಪ್ಪ 1.5 ಇಂಚಾಗಿತ್ತು. ಇದು ಮಾರಲ್ಪಟ್ಟದ್ದು ಅದರ ಸ್ವಂತ ಮೌಲ್ಯಕ್ಕಾಗಿ ಅಲ್ಲ, ಹಸ್ತಪ್ರತಿಗಳೊಂದಿಗೆ ಅವು ಇದ್ದುದರಿಂದಲೆ. ಈ ಘನೀಕರಿಸಿದ ತುಂಡು ಪುಟಗಳ ಮುದೆಯ್ದನ್ನು ಪ್ರತ್ಯೇಕಿಸುವುದು ತಾಳ್ಮೆ ಹಾಗೂ ಲಲಿತ ರೀತಿಯ ಕೆಲಸವಾಗಿತ್ತು, ಆದರೆ ಕೊನೆಗೆ, ಪೌಲನ ಪತ್ರಿಕೆಗಳ ಸಾ.ಶ. ಐದನೆಯ ಯಾ ಆರನೆಯ ಶತಮಾನಗಳ ಹಸ್ತಾಕ್ಷರ ಗ್ರಂಥದ 84 ಹಾಳೆಗಳು ತೋರಿಬಂದವು.
ಉಳಿದ ಮೂರು ಹಸ್ತಾಕ್ಷರ ಪ್ರತಿಗಳಲ್ಲಿ ಒಂದು ಧರ್ಮೋಪದೇಶಕಾಂಡ ಮತ್ತು ಯೆಹೋಶುವ ಪುಸ್ತಕಗಳದ್ದಾಗಿತ್ತು. ಇನ್ನೊಂದು, ಗ್ರೀಕ್ ಸೆಪ್ಟುಜಿಂಟ್ ಭಾಷಾಂತರದ ಕೀರ್ತನೆ ಪುಸ್ತಕದ್ದಾಗಿತ್ತು. ಆದರೆ ಮೂರನೆಯ ಮತ್ತು ಅತ್ಯಂತ ಪ್ರಾಮುಖ್ಯವಾಗಿದ್ದ ಹಸ್ತಪ್ರತಿ ನಾಲ್ಕು ಸುವಾರ್ತೆಗಳ ಹಸ್ತಪ್ರತಿಯೆ.
ಈ ಕೊನೆಯ ಹಸ್ತಪ್ರತಿಯಲ್ಲಿ ಚರ್ಮಕಾಗದದ 187, ಅಧಿಕಾಂಶ ಕುರಿಚರ್ಮದ ಹಾಳೆಗಳಿದ್ದು ಅವನ್ನು ಓರೆ ಗ್ರೀಕ್ ದೊಡ್ಡಕ್ಷರಗಳಿಂದ ಬರೆಯಲಾಗಿದೆ. ವಿರಾಮ ಚಿಹ್ನೆಗಳು ವಿರಳ, ಆದರೆ ಪದಸಮೂಹಗಳ ಮಧ್ಯೆ ಆಗಾಗ ತೆರಪೆಡೆಗಳಿವೆ. ಹಸ್ತಪ್ರತಿಯ ಅಂಚುಗಳು ತೀರಾ ಕ್ಷಯಿಸಿದ್ದರೂ ಬರೆವಣಿಗೆಯಲ್ಲಿ ಅಧಿಕಾಂಶ ಉಳಿದಿದೆ. ಇದನ್ನು ಕೊನೆಗೆ ವಾಷಿಂಗ್ಟನ್ ಡಿ.ಸಿ. ಯ ಸ್ಮಿತ್ಸೋನಿಯನ್ ಇನ್ಸಿಟ್ಟ್ಯೂಟಿನ ಫ್ರೀಯರ್ ಗ್ಯಾಲರಿ ಆಫ್ ಆರ್ಟ್ಗೆ ನೀಡಲಾಯಿತು. ಸುವಾರ್ತೆಗಳ ವಾಷಿಂಗ್ಟನ್ ಕೋಡೆಕ್ಸ್ ಎಂದು ಕರೆಯಲ್ಪಟ್ಟ ಇದನ್ನು “ಡಬ್ಲ್ಯು” ಎಂಬ ಅಕ್ಷರದಿಂದ ಗುರುತಿಸಲಾಯಿತು.
ಈ ಚರ್ಮಕಾಗದ ಸಾ.ಶ. 4ನೆಯ ಶತಮಾನದ ಅಂತ್ಯಭಾಗದ್ದು ಯಾ 5ನೆಯ ಶತಕದ ಆದಿಭಾಗದ್ದು ಎಂದೆಣಿಸಲ್ಪಟ್ಟಿರುವುದರಿಂದ, ಇದು ಸೈನೈಟಿಕ್, ವ್ಯಾಟಿಕನ್ ಮತ್ತು ಅಲೆಕ್ಸಾಂಡ್ರಿನ್ ಎಂಬ ಮೂರು ಪ್ರಾಮುಖ್ಯ ಹಸ್ತಪ್ರತಿಗಳಿಗಿಂತ ಜಾಸ್ತಿ ಕಡಮೆ ಪ್ರಾಮುಖ್ಯತೆಯದ್ದಾಗಿರುವುದಿಲ್ಲ. ಸುವಾರ್ತೆಗಳು (ಕಳೆದು ಹೋಗಿರುವ ಎರಡು ಹಾಳೆಗಳನ್ನು ಬಿಟ್ಟು) ಮತ್ತಾಯ, ಯೋಹಾನ, ಲೂಕ ಮತ್ತು ಮಾರ್ಕ ಪುಸ್ತಕಗಳ ಪಾಶ್ಚಿಮಾತ್ಯವೆಂದೆಣಿಸಲ್ಪಡುವ ಕ್ರಮದಲ್ಲಿದೆ.
ಈ ಹಸ್ತಪ್ರತಿಯ ವಾಚನ, ಮೂಲಪಾಠ ವಿಧಗಳ ವಿಚಿತ್ರ ಮಿಶ್ರಣವನ್ನು ತೋರಿಸುತ್ತಾ ಪ್ರತಿಯೊಂದು ವಿಧವು ದೊಡ್ಡ, ಮುಂದುವರಿಯುವ ವಿಭಾಗಗಳಿಂದ ಪ್ರತಿನಿಧೀಕರಿಸಲ್ಪಟ್ಟಿದೆ. ವಿಭಿನ್ನ ವಿಧಗಳ ಮೂಲಪಾಠವಿದ್ದ, ಪಾರಾಗಿ ಉಳಿದಿದ್ದ ಅನೇಕ ಹಸ್ತಪ್ರತಿಗಳ ಅವಶಿಷ್ಟಗಳಿಂದ ಅದನ್ನು ನಕಲು ಮಾಡಿರುವಂತೆ ತೋರುತ್ತದೆ. ಇದು ಸಾ.ಶ. 303ರಲ್ಲಿ ಡಾಯೊಕೀಷ್ಲನ್ ಚಕ್ರವರ್ತಿಯಿಂದ ಕ್ರೈಸ್ತರ ಮೇಲೆ ಥಟ್ಟನೆ ಬಂದ ಹಿಂಸೆಯ ಸಮಯದಲ್ಲಿ ಆಗಿದ್ದಿರಬೇಕೆಂದು ಪ್ರೊಫೆಸರ್ ಎಚ್. ಎ. ಸ್ಯಾಂಡರ್ಸ್ ಸೂಚಿಸುತ್ತಾರೆ. ಆಗ ಬಂದ ಆಜ್ಞೆಯು ಶಾಸ್ತ್ರದ ಎಲ್ಲ ಪ್ರತಿಗಳನ್ನು ಬಹಿರಂಗವಾಗಿ ಸುಡಬೇಕೆಂದು ಹೇಳಿತು. ಐತಿಹಾಸಿಕ ದಾಖಲೆಗಳಿಂದ ನಮಗೆ ಆಗ ಕೆಲವು ಹಸ್ತಪ್ರತಿಗಳನ್ನು ಅಡಗಿಸಿಡಲಾಗಿತ್ತೆಂದು ತಿಳಿದುಬರುತ್ತದೆ. ದಶಕಗಳು ಕಳೆದ ಬಳಿಕ ಒಬ್ಬ ಅಜ್ಞಾತ ವ್ಯಕ್ತಿ ವಿವಿಧ ಹಸ್ತಪ್ರತಿಗಳ ಅವಶಿಷ್ಟಗಳನ್ನು ನಕಲು ಮಾಡಿ ವಾಷಿಂಗ್ಟನ್ ಕೋಡೆಕ್ಸ್ನ ಮೂಲಪಾಠವನ್ನುಂಟುಮಾಡಿದನೆಂದು ಕಂಡುಬರುತ್ತದೆ. ಆ ಬಳಿಕ ಯಾವುದೊ ಸಮಯದಲ್ಲಿ ಯೋಹಾನ ಪುಸ್ತಕದ ಮೊದಲನೆಯ ದಸ್ತು (ಯೋಹಾನ 1:1 ರಿಂದ 5:11) ಕಳೆದು ಹೋದಾಗ ಅದನ್ನು ಸಾ.ಶ. ಏಳನೆಯ ಶತಮಾನದಲ್ಲಿ ಪುನಃ ಬರೆಯಬೇಕಾಯಿತು.
ಈ ಮೂಲಪಾಠದಲ್ಲಿ ಕೆಲವು ರಸಕರವಾದ ಬದಲಾವಣೆಗಳಿವೆ ಮತ್ತು ಮಾರ್ಕ 16ನೆಯ ಅಧ್ಯಾಯಕ್ಕೆ, ಪ್ರಾಯಶಃ ಅಂಚುಟಿಪ್ಪಣಿಯಾಗಿ ಆರಂಭವಾದ, ಅಸಾಮಾನ್ಯವಾದರೂ ಬಿಡಿಕೆಗೆ ಯೋಗ್ಯವೆಂದೆಣಿಸಲ್ಪಟ್ಟಿರುವ ಸಂಕಲನವಿದೆ. ಈ ಹಸ್ತಪ್ರತಿಯ ವಿಶೇಷ ಮೌಲ್ಯವು ಹಳೆಯ ಲ್ಯಾಟಿನ್ ಮತ್ತು ಸಿರಿಯ್ಯಾಕ್ ಭಾಷಾಂತರಗಳೊಂದಿಗೆ ಇದಕ್ಕಿರುವ ಸಂಯೋಜನೆಯೆ. ಚರ್ಮಕಾಗದಕ್ಕೆ ಬಿದ್ದಿರುವ ಮೋಂಬತ್ತಿ ಕಲೆಗಳು, ಇದು ಚೆನ್ನಾಗಿ ಉಪಯೋಗಿಸಲ್ಪಟ್ಟಿರುವ ಹಸ್ತಪ್ರತಿ ಎಂದು ಸೂಚಿಸುತ್ತವೆ.
ಹಿಂಸೆ, ವಿರೋಧ ಮತ್ತು ಕಾಲವು ಮಾಡಿರುವ ಧ್ವಂಸದ ಎದುರಿನಲ್ಲೂ ಬೈಬಲು ಆಶ್ಚರ್ಯಕರವಾಗಿ ಅನೇಕ ಹಸ್ತಪ್ರತಿಗಳ ರೂಪದಲ್ಲಿ ನಮಗಾಗಿ ಉಳಿಸಲ್ಪಟ್ಟಿದೆ. ಸತ್ಯವಾಗಿಯೆ, “ಯೆಹೋವನ ಮಾತೋ ಸದಾಕಾಲಕ್ಕೂ ಬಾಳಿಕೆ ಬರುತ್ತದೆ.”—1 ಪೇತ್ರ 1:25, NW; ಯೆಶಾಯ 40:8. (w90 5/1)
[ಪುಟ 25 ರಲ್ಲಿರುವ ಚಿತ್ರ ಕೃಪೆ]
Courtesy of Freer Gallery of Art, Smithsonian Institution