ಯೆಹೋವನನ್ನು ಸಂತೋಷದಿಂದ ಸೇವಿಸುವುದು
“ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಹರ್ಷಧ್ವನಿ ಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ.”—ಕೀರ್ತನೆ 100:2.
1, 2. (ಎ) ಜರ್ಮನಿಯ ಬರ್ಲಿನ್ನಲ್ಲಿ ಜಾತೀಯತೆಯು ಮುಂತರಲ್ಪಟ್ಟದ್ದು ಹೇಗೆ, ಆದರೆ, “ಸಹಸ್ರ ವರ್ಷದ ರಾಷ್ಟ್ರ”ಕ್ಕಾಗಿ ಹೋರಾಟವು ಹೇಗೆ ಕೊನೆಗೊಂಡಿತು? (ಬಿ) 1936ಕ್ಕೆ ಪ್ರತಿವಿರುದ್ಧವಾಗಿ 1990 ರಲ್ಲಿ ಒಲಿಂಪಿಕ್ ಸ್ಟೇಡಿಯಂನಲ್ಲಿ ಏನನ್ನು ಅವಲೋಕಿಸಲಾಯಿತು, ಮತ್ತು ಅಲ್ಲಿ ನೆರೆದುಬಂದ ಅಂತರ್ರಾಷ್ಟ್ರೀಯ ಗುಂಪಿನ ಸಂತೋಷವು ಯಾವುದರಲ್ಲಿ ಆಧರಿತವಾಗಿತ್ತು?
ದೃಶ್ಯವು ಬರ್ಲಿನಿನ ಒಲಿಂಪಿಯಾ ಸ್ಟೇಡಿಯಂ. ಐವತ್ತು ವರ್ಷಗಳ ಹಿಂದೆ, ಈ ಉತ್ತಮ ಸ್ಟೇಡಿಯಂ ಒಂದು ವಾಗ್ವಾದದ ಕೇಂದ್ರವಾದದ್ದು ಯಾವಾಗವೆಂದರೆ, ನಾಲ್ಕು ಸುವರ್ಣ ಪದಕಗಳನ್ನು ಜಯಿಸಿದ ಒಬ್ಬ ಕರಿಯ ಆಮೆರಿಕನ್ ಓಟಗಾರನನ್ನು ನಾಜೀ ಸರ್ವಾಧಿಕಾರಿ ಎಡಾಲ್ಪ್ ಹಿಟ್ಲರನು ತಿರಸ್ಕರಿಸಿದಾಗಲೇ. “ಆರ್ಯರ ಶ್ರೇಷ್ಠತ್ವ”ದ ಬಗ್ಗೆ ಹಿಟ್ಲರನಿಗಿದ್ದ ಜಾತೀಯ ದುರಭಿಮಾನಕ್ಕೆ ಆಗ ಒಂದು ಬಲವಾದ ಹೊಡೆತಬಿತ್ತು ನಿಶ್ಚಯ.a ಆದರೆ ಈಗ ಜುಲೈ 26, 1990ರಲ್ಲಿ, ಕರಿಯರು, ಬಿಳಿಯರು ಮತ್ತು ಹಳದಿ ವರ್ಣದವರೆನ್ನದೆ—64 ರಾಷ್ಟ್ರೀಯ ಗುಂಪುಗಳಿಂದ ಬಂದ 44,532 ಮಂದಿ ಐಕ್ಯತೆಯುಳ್ಳ ಜನರು—ಯೆಹೋವನ ಸಾಕ್ಷಿಗಳ “ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕಾಗಿ ಕೂಡಿಬಂದರು. ಆ ಗುರುವಾರ ಅಪರಾಹ್ನದಂದು ಎಂತಹ ಸಂತೋಷವು ಅಲ್ಲಿ ತುಂಬಿತುಳುಕಿತು! ದೀಕ್ಷಾಸ್ನಾನದ ಭಾಷಣವನ್ನು ಹಿಂಬಾಲಿಸಿ, 1,018 ಅಭ್ಯರ್ಥಿಗಳು, ಯೆಹೋವ ದೇವರಿಗೆ ಆತನ ಚಿತ್ತವನ್ನು ಮಾಡಲು ತಮ್ಮ ಸಮರ್ಪಣೆಯನ್ನು ದೃಢೀಕರಿಸುತ್ತಾ, “ಜಾ!” ಮತ್ತು ಪುನಹಾ, “ಜಾ!” ಎಂದು ಕೂಗಿ ಹೇಳಿದರು.
2 ದೀಕ್ಷಾಸ್ನಾನದ ಕೊಳಕ್ಕೆ ದಾರಿಯಾಗಿ ಸ್ಟೇಡಿಯಂನಿಂದ ಹೊರನಡಿಯಲು ಈ ಹೊಸ ಸಾಕ್ಷಿಗಳಿಗೆ 19 ನಿಮಿಷ ಹಿಡಿಯುತ್ತದೆ. ಮತ್ತು ಆ ನಿಮಿಷಗಳಲ್ಲೆಲ್ಲಾ, ವಿಸ್ತಾರವಾದ ಸಭಾಂಗಣದಿಂದ ಪ್ರಚಂಡವಾದ ಕರತಾಡನದ ಅನುಮೋದನೆಯು ಪ್ರತಿಧ್ವನಿಸಿತು. ಲೋಕವನ್ನು ಜಯಿಸುವ ನಂಬಿಕೆಯನ್ನು ಪ್ರದರ್ಶಿಸಿದ ಈ ಅನೇಕ ರಾಷ್ಟ್ರೀಯ ಗುಂಪುಗಳ ಈ ನೂರಾರು ಜನರನ್ನು ಸ್ವಾಗತಿಸಿದ ಇಂತಹ ಶ್ಲಾಘನೆಯನ್ನು, ಒಲಿಂಪಿಕ್ ಪಂದ್ಯಗಳ ವಿಜೇತರು ಸಹಾ ಎಂದೂ ಅನುಭವಿಸಿಲ್ಲ. (1 ಯೋಹಾನ 5:3, 4) ಅವರ ಸಂತೋಷವು, ಕ್ರಿಸ್ತನ ಮೂಲಕವಾದ ದೇವರ ರಾಜ್ಯವು ಮಾನವಕುಲಕ್ಕೆ ಸಹಸ್ರ ವರ್ಷಗಳ ಮಹಾ ಆಶೀರ್ವಾದಗಳನ್ನು ಖಂಡಿತವಾಗಿ ತರಲಿದೆ ಎಂಬ ಭರವಸದಲ್ಲಿ ದೃಢವಾಗಿ ಆತುಕೊಂಡಿದೆ.—ಇಬ್ರಿಯರಿಗೆ 6:17, 18; ಪ್ರಕಟನೆ 20:6; 21:4, 5.
3. ಅಧಿವೇಶನಗಾರರ ಭರವಸದಿಂದ ಯಾವ ಸತ್ಯತೆಯು ಒತ್ತಿಹೇಳಲ್ಪಟ್ಟಿತು, ಮತ್ತು ಹೇಗೆ?
3 ಅಲ್ಲಿ ಯಾವ ಜಾತೀಯ ಅಥವಾ ರಾಷ್ಟ್ರೀಯ ದ್ವೇಷಗಳು ಇಲ್ಲ ಯಾಕೆಂದರೆ, ಎಲ್ಲರೂ ದೇವರ ವಾಕ್ಯದ ಶುದ್ಧ ಭಾಷೆಯನ್ನು ಆಡುವವರಾಗಿದ್ದಾರೆ. ಇದು ಪೇತ್ರನ ಮಾತುಗಳ ಸತ್ಯತೆಯನ್ನು ಒತ್ತಿಹೇಳುತ್ತದೆ: “ದೇವರು ಪಕ್ಷಪಾತಿಯಲ್ಲ. ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಕೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದು ಬಂದಿದೆ.”— ಅಪೊಸ್ತಲರ ಕೃತ್ಯ 10:34, 35; ಚೆಫನ್ಯ 3:9.
4. ಯಾವ ಪರಿಸ್ಥಿತಿಗಳ ಕೆಳಗೆ ಅಧಿಕಾಂಶ ಅಧಿವೇಶನಗಾರರು ವಿಶ್ವಾಸಿಗಳಾಗಿ ಪರಿಣಮಿಸಿದ್ದರು, ಮತ್ತು ಅವರ ಪ್ರಾರ್ಥನೆಗಳು ಉತ್ತರಿಸಲ್ಪಟ್ಟದ್ದು ಹೇಗೆ?
4 ಬರ್ಲಿನಿನ ಈ ಅಧಿವೇಶನಗಾರರಲ್ಲಿ ಬಹು ಸಂಖ್ಯಾತರು, ನಾಝೀ ಯುಗದಲ್ಲಿ (1933-45) ಮತ್ತು ಪಶ್ಚಿಮ ಜರ್ಮನಿಯಾಗಿ ಮಾರ್ಪಟ್ಟ ಸಮತಾವಾದಿ ಯುಗವನ್ನಾವರಿಸಿದ ದೀರ್ಘಕಾಲದ ದಬ್ಬಾಳಿಕೆಯ ಸಮಯದಲ್ಲಿ ವಿಶ್ವಾಸಿಗಳಾದವರು. ಅಲ್ಲಿ ಯೆಹೋವನ ಸಾಕ್ಷಿಗಳ ಮೇಲಿನ ನಿಷೇಧವು ನ್ಯಾಯಬದ್ಧವಾಗಿ ತೆಗೆಯಲ್ಪಟ್ಟದ್ದು 1990ರ ಮಾರ್ಚ್ 14ರಷ್ಟು ಈಚೆಗೆ. ಆದ್ದರಿಂದ ಅವರಲ್ಲಿ ಹೆಚ್ಚಿನವರು, “ಬಹಳ ಹಿಂಸೆಯನ್ನು ಅನುಭವಿಸ ಬೇಕಾಗಿದ್ದರೂ ಪವಿತ್ರಾತ್ಮದಿಂದ ಉಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ”ದವರು. (1 ಥೆಸಲೊನೀಕ 1:6) ಅವರಿಗೆ ಈಗ ಯೆಹೋವನನ್ನು ಸೇವಿಸಲು ಹೆಚ್ಚಿನ ಸ್ವತಂತ್ರತೆಯು ಇದೆ ಮತ್ತು ಅವರ ಸಂತೋಷ ಅಪರಿಮಿತ.—ಯೆಶಾಯ 51:11 ಹೋಲಿಸಿ.
ಸಂತೋಷಿಸುವ ಸಂದರ್ಭಗಳು
5. ಕೆಂಪು ಸಮುದ್ರದಲ್ಲಿ ಯೆಹೋವನು ಕೊಟ್ಟ ಬಿಡುಗಡೆಯನ್ನು ಇಸ್ರಾಯೇಲ್ಯರು ಆಚರಿಸಿದ್ದು ಹೇಗೆ?
5 ಪಶ್ಚಿಮ ಯುರೋಪಿನಲ್ಲಿ ಮತ್ತು ಪ್ರಸ್ತುತ ಆಫ್ರಿಕಾ ಮತ್ತು ಏಸ್ಯಾದ ಇತರ ಭಾಗಗಳಲ್ಲಿ ನಮ್ಮ ಸಹೋದರರ ಬಿಡುಗಡೆಯು, ಪೂರ್ವಕಾಲಗಳಲ್ಲಿ ಯೆಹೋವನು ನಡಿಸಿದ ಬಿಡುಗಡೆಗಳ ಜ್ಞಾಪಕವನ್ನು ನಮಗೆ ಕೊಡುತ್ತದೆ. ಕೆಂಪು ಸಮುದ್ರದಲ್ಲಿ ಯೆಹೋವನು ಮಾಡಿದ ಮಹತ್ಕಾರ್ಯಗಳು ನಮಗೆ ನೆನಪಿವೆ, ಮತ್ತು ಇಸ್ರಾಯೇಲಿನ ಕೃತಜ್ಞತಾಸ್ತುತಿಯು ಆಗ ಪರಮಾವಧಿಯ ಶಿಖರವನ್ನು ಮುಟ್ಟಿತ್ತು: “ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತಕೃತ್ಯಗಳನ್ನು ಮಾಡಿರುವುದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ?” (ವಿಮೋಚನಕಾಂಡ 15:11) ಯೆಹೋವನು ತನ್ನ ಜನರಿಗಾಗಿ ಮಾಡುತ್ತಿರುವ ಮಹತ್ತಾದ ಕಾರ್ಯಗಳಲ್ಲಿ ನಾವು ಇಂದೂ ಉಲ್ಲಾಸಿಸುವುದಿಲ್ಲವೋ? ಖಂಡಿತವಾಗಿಯೂ ಉಲ್ಲಾಸಿಸುತ್ತೇವೆ!
6. ಸಾ.ಶ.ಪೂ. 537 ರಲ್ಲಿ ಇಸ್ರಾಯೇಲ್ಯರು ಗೈದ ಹರ್ಷಧ್ವನಿಯಿಂದ ನಾವೇನು ಕಲಿಯಬಹುದು?
6 ಬಬಿಲೋನ್ಯ ಬಂಧಿವಾಸದ ನಂತರ ಸಾ.ಶ.ಪೂ. 537ರಲ್ಲಿ ಇಸ್ರಾಯೇಲು ತನ್ನ ಸ್ವದೇಶಕ್ಕೆ ಪುನಃಸ್ಥಾಪಿಸಲ್ಪಟ್ಟಾಗ, ಸಂತೋಷವು ಪ್ರವಾಹವಾಗಿ ಹರಿಯಿತು. ಯೆಶಾಯನು ಪ್ರವಾದಿಸಿದ ಪ್ರಕಾರವೇ, ಜನಾಂಗವೀಗ ಹೀಗೆ ಘೋಷಿಸಶಕ್ತವಾಯಿತು: “ಇಗೋ, ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸವಿಡುವೆನು. ನನ್ನ ಬಲವೂ ಕೀರ್ತನೆಯೂ ಯಾಹು ಯೆಹೋವನಷ್ಟೇ.” ಎಂತಹ ಸಂತಸ! ಮತ್ತು ಜನಾಂಗವು ಆ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದು? ಯೆಶಾಯನು ಮುಂದರಿಸುವುದು: “ಆ ದಿನದಲ್ಲಿ ನೀವು ಹೇಳುವದೇನಂದರೆ—ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಅತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ. ಆತನ ನಾಮವು ಉನ್ನತೋನ್ನತವೆಂದು ಜ್ಞಾಪಕಪಡಿಸಿರಿ. ಯೆಹೋವನನ್ನು ಗಾನದಿಂದ ಸ್ತುತಿಸಿರಿ. ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ.” ಅವರು ಆಗ ಆತನ ಮಹತ್ಕಾರ್ಯಗಳನ್ನು “ಭೂಮಂಡಲದಲ್ಲೆಲ್ಲಾ ತಿಳಿಯಪಡಿಸುವುದರಲ್ಲಿ” “ಹರ್ಷಧ್ವನಿ” ಮಾಡಶಕ್ತರಿದ್ದರು, ವಿಮುಕ್ತರಾದ ಇಂದಿನ ಯೆಹೋವನ ಸೇವಕರಂತೆಯೇ.—ಯೆಶಾಯ 12:1-6.
ಯೆಹೋವನ ಕಾರ್ಯದಲ್ಲಿ ಸಂತೋಷ
7. 1919 ರಲ್ಲಿ ಯಾವ ಬಿಡುಗಡೆಗಳು ಹರ್ಷಧ್ವನಿಗಾಗಿ ಕೇಳಿಕೊಂಡವು?
7 ಆಧುನಿಕ ಕಾಲದಲ್ಲಿ ಯೆಹೋವನ ಜನರು ಹರ್ಷಧ್ವನಿಯೆತ್ತಲು ಪ್ರಾರಂಭಿಸಿದ್ದು, 1919ರಲ್ಲಿ ಒಂದು ಆಶ್ಚರ್ಯಕರವಾದ ಬಿಡುಗಡೆಯನ್ನು ಅತನು ಅವರಿಗೆ ದಯಪಾಲಿಸಿದಾಗಲೇ. ಆ ವರ್ಷದ ಮಾರ್ಚ್ 26 ರಂದು, ಆಡಳಿತಾ ಮಂಡಲಿಯ ಸದಸ್ಯರು ಅಮೇರಿಕದ ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟರು. ಅವರು ಅಲ್ಲಿ ಒಂಭತ್ತು ತಿಂಗಳ ಬಂಧನದಲ್ಲಿದ್ದದ್ದು ದೇಶದ್ರೋಹದ ಸುಳ್ಳಾರೋಪದಿಂದಾಗಿಯೇ. ಅವರನ್ನು ಬ್ರೂಕ್ಲಿನ್ ಬೆತೆಲಿಗೆ ಮರು ಸ್ವಾಗತಿಸಿದಾಗ ಎಂತಹ ಮಹಾ ಸಂಭ್ರಮವು ಅಲ್ಲುಂಟಾಯಿತು! ಅದಲ್ಲದೆ, ಅಭಿಷಿಕ್ತ ಉಳಿಕೆಯವರಲ್ಲಿ ಎಲ್ಲರೂ ಈಗ, ಸೈತಾನನು ಭೂಲೋಕವನ್ನೆಲ್ಲಾ ಯಾವುದರಿಂದ ಬಂಧಿಸಿಟ್ಟಿದ್ದಾನೋ ಆ ಮಹಾ ಬಾಬೆಲಿನಿಂದ ಆತ್ಮಿಕವಾಗಿ ಬಿಡುಗಡೆ ಪಡೆದದರ್ದಲ್ಲಿ ಸಂತೋಷ ಪಡಸಾಧ್ಯವಿತ್ತು.—ಪ್ರಕಟನೆ 17:3-6; 18:2-5.
8. 1919 ರ ಸೀಡರ್ ಪೊಯಿಂಟ್ ಒಹಾಯೋ ಅಧಿವೇಶನದಲ್ಲಿ ಯಾವ ಅಚ್ಚರಿಯ ಹೊರಡಿಸುವಿಕೆಯನ್ನು ಪ್ರಕಟಿಸಲಾಯಿತು, ಮತ್ತು ಯಾವ ಕ್ರಿಯೆಗಾಗಿ ಕರೆಯು ನೀಡಲ್ಪಟ್ಟಿತು?
8 1919ರ ಆ ಐತಿಹಾಸಿಕ ವಿಕಸನಗಳು, ಅಮೆರಿಕದ ಸೀಡರ್ ಪೊಯಿಂಟ್ ಒಹಾಯೋದಲ್ಲಿ, ಸಪ್ಟಂಬರ 1-8ರಲ್ಲಿ ನಡೆದ ದೇವಜನರ ಅಧಿವೇಶನದಿಂದ ಮತ್ತಷ್ಟು ಭೂಷಿತವಾಯಿತು. “ಸಹ-ಕಾರ್ಯಕರ್ತರ ದಿನ”ವಾದ ಸಮ್ಮೇಳನದ ಐದನೇ ದಿನದಲ್ಲಿ, ವಾಚ್ಟವರ್ ಸೊಸೈಟಿಯ ಅಧ್ಯಕ್ಷ ಜೆ. ಎಫ್. ರಥರ್ಫರ್ಡರು, “ದೇವರ ರಾಜ್ಯವನ್ನು ಪ್ರಕಟಿಸುವುದು” ಎಂಬ ವಿಷಯದ ಮೇಲೆ, ನೆರೆದ 6,000 ಮಂದಿಗೆ ಹುರಿದುಂಬಿಸುವ ಭಾಷಣವನ್ನಿತ್ತರು. ಪ್ರಕಟನೆ 15:2 ಮತ್ತು ಯೆಶಾಯ 52:7ನ್ನು ಚರ್ಚಿಸಿದ ನಂತರ, ವಿಶೇಷವಾಗಿ ಕ್ಷೇತ್ರದಲ್ಲಿ ಹಂಚುವುದಕ್ಕಾಗಿ (ಈಗ ಅವೇಕ್! ಎಂದು ಕರೆಯಲ್ಪಡುವ) ದ ಗೋಲ್ಡನ್ ಏಜ್ ಎಂಬ ಹೊಸ ಪತ್ರಿಕೆಯು ಪ್ರತೀ ಎರಡು ವಾರಕ್ಕೊಮ್ಮೆ ಪ್ರಕಾಶಿಸಲ್ಪಡುವುದೆಂದು ಅವರು ಸಭಿಕರಿಗೆ ತಿಳಿಸಿದರು. ಸಮಾಪ್ತಿಯಲ್ಲಿ ಅವರಂದದ್ದು: “ಯಾರು ಕರ್ತನಿಗೆ ಪೂರ್ಣವಾಗಿ ಮೀಸಲಾಗಿದ್ದಾರೋ, ನಿರ್ಭೀತರೋ, ದೇವರನ್ನೂ ಕರ್ತನಾದ ಕ್ರಿಸ್ತನನ್ನೂ ಪೂರ್ಣ ಮನಸ್ಸು, ಶಕ್ತಿ, ಆತ್ಮ ಮತ್ತು ದೇಹದಿಂದ ಪ್ರೀತಿಸುತ್ತಾರೋ ಅವರು, ಸಂದರ್ಭಗಳು ದೊರೆತ ಹಾಗೆ, ಈ ಕಾರ್ಯದಲ್ಲಿ ಸಂತೋಷದಿಂದ ಭಾಗವಹಿಸುವರು. ನಿಮ್ಮನ್ನು ಒಬ್ಬ ನಿಜ, ನಂಬಿಗಸ್ತ, ಮತ್ತು ದಕ್ಷರಾದ ರಾಜದೂತರಾಗುವಂತೆ ಮಾಡಲು ಮಾರ್ಗದರ್ಶನೆ ಸಲಹೆಗಾಗಿ ಕರ್ತನನ್ನು ಬೇಡಿಕೊಳ್ಳಿರಿ. ಅನಂತರ, ಹೃದಯದಲ್ಲಿ ಹರ್ಷಧ್ವನಿಯೊಂದಿಗೆ ಹೊರಟುಹೋಗಿ ಆತನ ಸೇವೆ ಮಾಡಿರಿ.”
9, 10. ಯೆಹೋವನು ವಾಚ್ಟವರ್ ಮತ್ತು ಅವೇಕ್! ಪತ್ರಿಕೆಗಳ ಪ್ರಕಾಶನವನ್ನು ಸಮೃದ್ಧಿಗೊಳಿಸಿದ್ದು ಹೇಗೆ?
9 ಆ “ಹರ್ಷಧ್ವನಿಯು” ಭೂಮಿಯಲ್ಲೆಲ್ಲೂ ಕೇಳಿ ಬಂದಿದೆ. ನಮ್ಮ ವಾಚಕರಲ್ಲಿ ಅನೇಕರು, ಅವೇಕ್! ಪತ್ರಿಕೆಯ ಪ್ರತೀ ಸಂಚಿಕೆಯ ಸಂಚಲನೆಯನ್ನು 64 ಭಾಷೆಗಳಲ್ಲಿ ಪ್ರಸ್ತುತ 1,29,80,000 ಪ್ರತಿಗಳಿಗೇರಿಸಿದರಲ್ಲಿ ಭಾಗಿಗಳಾಗಿದ್ದರೆಂಬದು ನಿಸ್ಸಂಶಯ. ಆಸಕ್ತ ಜನರನ್ನು ಸತ್ಯಕ್ಕೆ ನಡಿಸುವ ಒಂದು ಪ್ರಬಲ ಸಾಧನವಾದ ಅವೇಕ್!, ವಾಚ್ಟವರ್ ಪತ್ರಿಕೆಗೆ ಸಂಗಡಿಗನಾಗಿ ಕಾರ್ಯನಡಿಸುತ್ತಾ ಇದೆ. ಪೌರಾತ್ಯ ದೇಶವೊಂದರಲ್ಲಿನ ಪಯನೀಯರ ಸಹೋದರಿಯು, ಕ್ರಮದ ಪತ್ರಿಕಾ ಮಾರ್ಗದ ಸೇವೆಯಲ್ಲಿ ಪ್ರತೀಸಾರಿ ಹೊಸಪತ್ರಿಕೆಗಳನ್ನು ನೀಡಿದಾಗ ಮನೆಯವನು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕಾರ್ಯಕ್ಕಾಗಿ 7 ಅಮೆರಿಕನ್ ಡಾಲರುಗಳಷ್ಟು ಹಣವನ್ನು ದಾನಮಾಡುವುದನ್ನು ಕಂಡು ಚಕಿತಳಾದಳು— ರಾಜ್ಯ ಕಾರ್ಯಕ್ಕಾಗಿ ನಿಶ್ಚಯವಾಗಿಯೂ ಅತ್ಯುತ್ತಮ ಗಣ್ಯತೆಯ ತೋರಿಸುವಿಕೆಯಿದು!
10 ಈಗ ತನ್ನ 112ನೇ ವರ್ಷದ ಪ್ರಕಾಶನವನ್ನು ಆರಂಭಿಸುತ್ತಾ ಇರುವ ವಾಚ್ಟವರ್ ಪತ್ರಿಕೆಯ ಸಂಚಲನೆಯು ಇಂದು 111 ಭಾಷೆಗಳಲ್ಲಿ 1,52,90,000 ಸಂಖ್ಯೆಗೇರಿದೆ. ಇವುಗಳಲ್ಲಿ 59 ಸಂಚಿಕೆಗಳು ಒಂದೇ ಪರಿವಿಡಿಯೊಂದಿಗೆ ಲೋಕವ್ಯಾಪಕವಾಗಿ ಏಕಕಾಲದಲ್ಲಿ ಹೊರಡುತ್ತವೆ. ನಂಬಿಗಸ್ತ ಮನೆವಾರ್ತೆಗಾರನೋಪಾದಿ ಅಭಿಷಿಕ್ತ ಉಳಿಕೆಯವರು, ಗಣ್ಯತೆಯುಳ್ಳ ವಾಚಕರಿಗೆ “ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದ (ಆತ್ಮಿಕ ಆಹಾರವನ್ನು) ಅಳೆದುಕೊಡು”ವುದನ್ನು ಮುಂದರಿಸುತ್ತಿದ್ದಾರೆ. (ಲೂಕ 12:42) 1990 ರಲ್ಲಿ ಯೆಹೋವನ ಸಾಕ್ಷಿಗಳು, ಈ ಎರಡು ಪತ್ರಿಕೆಗಳಿಗೆ 29,68,309 ಹೊಸ ಚಂದಾಗಳನ್ನು ಪಡೆದರು, ಇದು 1989 ಕ್ಕಿಂತ 22.7 ಶೇಕಡಾ ಅಭಿವೃದ್ಧಿಯು.
ಸಂತೋಷದ ಸಮೃದ್ಧಿ
11. (ಎ) 1922ರಲ್ಲಿ ಸೀಡರ್ ಪೊಯಿಂಟ್ನಲ್ಲಿ ದೇವಜನರಿಗೆ ಯಾವ ಕರೆಯು ನೀಡಲ್ಪಟ್ಟಿತು? (ಬಿ) ಹರ್ಷಧ್ವನಿಯು ವಿಸ್ತಾರ್ಯಗೊಂಡದ್ದು ಹೇಗೆ?
11 ಸಪ್ಟಂಬರ 22 ರಲ್ಲಿ, ಈಗ 10,000 ಸಂಖ್ಯೆಗೇರಿದ ದೇವರ ಜನರು ಎರಡನೆಯ ಅಧಿವೇಶನಕ್ಕೆ ಸೀಡರ್ ಪೊಯಿಂಟ್ನಲ್ಲಿ ಕೂಡಿಬಂದಾಗ, ಸಂತೋಷವು ಪುನಃ ತುಂಬಿತುಳುಕಿತು; ಆಗ 361 ಜನರು ದೀಕ್ಷಾಸ್ನಾನ ಪಡೆದರು. ಮತ್ತಾಯ 4:17 ರಲ್ಲಿ ಆಧರಿತವಾದ, “ಪರಲೋಕ ರಾಜ್ಯವು ಸಮೀಪವಾಯಿತು” ಎಂಬ ಹುರಿದುಂಬಿಸುವ ಭಾಷಣದ ಸಾರೋಕ್ತಿಯಲ್ಲಿ ಸಹೋದರ ರಥರ್ಫರ್ಡರು ಅಂದದ್ದು: “ಯೆಹೋವನು ದೇವರೆಂದೂ ಯೇಸು ಕ್ರಿಸ್ತನು ರಾಜರ ರಾಜನೂ ಕರ್ತರ ಕರ್ತನೂ ಆಗಿದ್ದಾನೆಂದೂ ಲೋಕಕ್ಕೆ ತಿಳಿಯಲೇಬೇಕು. ಇದು ಪರಮ ದಿನ. ಅಗೋ, ಅರಸನು ರಾಜ್ಯವಾಳುತ್ತಾನೆ! ನೀವಾತನ ಬಹಿರಂಗ ಘೋಷಕರು. ಆದ್ದರಿಂದ, ಪ್ರಕಟಿಸಿರಿ, ಪ್ರಕಟಿಸಿರಿ, ರಾಜನನ್ನೂ ರಾಜ್ಯವನ್ನೂ ಪ್ರಕಟಿಸಿರಿ.” ಆ ಅಧಿವೇಶನದಲ್ಲಿ ಶಿಖರಕ್ಕೇರಿದ ಹರ್ಷಧ್ವನಿಯ ಕೂಗಿನಲ್ಲಿ ಧ್ವನಿಯೆತ್ತಿ,ದವರ ಸಂಖ್ಯೆಯು ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾ ಬಂದು, 1989 ರಲ್ಲಿ, ಲೋಕವ್ಯಾಪಕವಾಗಿ ನಡೆದ ಯೆಹೋವನ ಸಾಕ್ಷಿಗಳ 1,210 ಅಧಿವೇಶನಗಳಲ್ಲಿ 66,00,000 ಕ್ಕಿಂತಲೂ ಹೆಚ್ಚು ಜನರು ಹಾಜರಿದ್ದರು ಮತ್ತು 1,23,688 ದೀಕ್ಷಾಸ್ನಾನಗಳಾದವು.
12. (ಎ) ಇಂದು ಯಾವ ಅಪರಿಮಿತ ಸಂತೋಷದಲ್ಲಿ ದೇವಜನರು ಪಾಲಿಗರಾಗುತ್ತಾರೆ? (ಬಿ) “ಮೇಲಧಿಕಾರಿಗಳಿಗೆ” ವಿಧೇಯತೆಯಲ್ಲಿ ನಾವು ಯೆಹೋವನಿಗೆ ನಮ್ಮ ಸೇವೆಯನ್ನು ಸಮತೂಕದಲ್ಲಿಡುವುದು ಹೇಗೆ?
12 ಯೆಹೋವನ ಸಾಕ್ಷಿಗಳು ತಮ್ಮ ಸ್ವಾತಂತ್ರ್ಯವನ್ನು ನೆಚ್ಚುತ್ತಾರೆ. ಎಲ್ಲಾದ್ದಕ್ಕಿಂತ ಹೆಚ್ಚಾಗಿ ಅವರು, “ಸತ್ಯವನ್ನು ತಿಳುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂಬ ಯೇಸುವಿನ ಮಾತುಗಳ ಆಧುನಿಕ ನೆರವೇರಿಕೆಯಲ್ಲಿ ಉಲ್ಲಾಸಿಸುತ್ತಾರೆ. ಸುಳ್ಳು ಧರ್ಮದ ಮರ್ಮಗಳಿಂದ ಮತ್ತು ಮೂಢಭಕ್ತಿಗಳಿಂದ ಬಿಡುಗಡೆಯನ್ನು ಹೊಂದುವುದು ಎಂತಹ ಸಂತೋಷ! ಯೆಹೋವನನ್ನೂ ಆತನ ಕುಮಾರನನ್ನೂ ತಿಳಿಯುವುದು ಮತ್ತು ನಿತ್ಯ ಜೀವದ ಪ್ರತೀಕ್ಷೆಯೊಂದಿಗೆ, ಆತನ ಜೊತೆಗೆಲಸದವರಾಗಿರುವುದು ಎಂತಹ ಅಮೂಲ್ಯವಾದ ಸಂತೋಷವು! (ಯೋಹಾನ 8:32; 17:3; 1 ಕೊರಿಂಥ 3:9-11) ತಾವು ಯಾರ ಕೆಳಗೆ ಜೀವಿಸುತ್ತಾರೋ ಆ ಲೋಕದ “ಮೇಲಧಿಕಾರಿಗಳು,” ಕ್ರಿಸ್ತನ ಕೈಕೆಳಗಿನ ಯೆಹೋವನ ರಾಜ್ಯದ ಮಹಿಮಾಯುಕ್ತ ನಿರೀಕ್ಷೆಯನ್ನು ಸಾರುವ ನಮ್ಮ ಸ್ವಾತಂತ್ರ್ಯವನ್ನು ಗೌರವಿಸುವುದನ್ನೂ, ದೇವಜನರು ಗಣ್ಯಮಾಡುತ್ತಾರೆ. ಅವರು ಮನಪೂರ್ವಕವಾಗಿ “ಕೈಸರನದ್ದನ್ನು ಕೈಸರನಿಗೆ ಕೊಡುತ್ತಾರೆ,” ಮತ್ತು ಅದೇ ಸಮಯದಲ್ಲಿ “ದೇವರದನ್ನು ದೇವರಿಗೆ” ಸಲ್ಲಿಸುತ್ತಾರೆ.—ರೋಮಾಪುರ 13:1-7; ಲೂಕ 20:25.
13. ದಬ್ಬಾಳಿಕೆಯಿಂದ ಬಿಡುಗಡೆಯಾದದ್ದಕ್ಕಾಗಿ ಯೆಹೋವನ ಸಾಕ್ಷಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು ಹೇಗೆ?
13 ಆದರೂ, ಮಾನವ ಅಧಿಪತಿಗಳು ದೇವರ ಕಡೆಗಿನ ಈ ನಮ್ಮ ಕರ್ತವ್ಯವನ್ನು ಪ್ರತಿಬಂಧಿಸಲು ಪ್ರಯತ್ನಿಸಿದರೆ ಯೆಹೋವನ ಸಾಕ್ಷಿಗಳ ಉತ್ತರವು, ಅಪೊಸ್ತಲರು ಕೊಟ್ಟಂತೆಯೇ ಇದೆ: “ಮನುಷ್ಯರಿಗಿಂತಲೂ ಹೆಚ್ಚಾಗಿ ಆಳುವವನಾದ (NW) ದೇವರಿಗೆ ವಿಧೇಯರಾಗಬೇಕಲ್ಲಾ.” ಆ ಸಂದರ್ಭದಲ್ಲಿ ಅಧಿಪತಿಗಳು ಅಪೊಸ್ತಲರನ್ನು ಬಿಡುಗಡೆ ಮಾಡಿದಾಗ, “ ಅವರು ಸಂತೋಷಿಸುತ್ತಾ . . . ಹೊರಟುಹೋದರು.” ಮತ್ತು ಅವರು ಆ ಸಂತೋಷವನ್ನು ವ್ಯಕ್ತಪಡಿಸಿದ್ದು ಹೇಗೆ? “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅಪೊಸ್ತಲರ ಕೃತ್ಯ 5:27-32, 41, 42) ಇದೇ ರೀತಿ ಆಧುನಿಕ ಕಾಲದ ಯೆಹೋವನ ಸಾಕ್ಷಿಗಳು, ತಮ್ಮ ಶುಶ್ರೂಷೆಯನ್ನು ನಡಿಸಲು ಅಧಿಕ ಸ್ವಾತಂತ್ರ್ಯವನ್ನು ಪಡೆಯುವಾಗ ಬಹು ಸಂತೋಷ ಪಡುತ್ತಾರೆ. ಎಲ್ಲಿ ಯೆಹೋವನು ಮಾರ್ಗವನ್ನು ತೆರೆದಿರುವನೋ ಆ ಅನೇಕ ದೇಶಗಳಲ್ಲಿ, ಯೆಹೋವನ ನಾಮಕ್ಕೂ ಮತ್ತು ಕ್ರಿಸ್ತ ಯೇಸುವಿನ ಮೂಲಕ ಬರಲಿರುವ ದೇವರ ರಾಜ್ಯಕ್ಕೂ ಪೂರ್ತಿ ಸಾಕ್ಷಿಯನ್ನು ನೀಡುವ ದ್ವಾರ ಅವರೀ ತೀವ್ರ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.—ಅಪೊಸ್ತಲರ ಕೃತ್ಯ 20:20, 21, 24; 23:11; 28:16, 23 ಹೋಲಿಸಿರಿ.
ಸಂತೋಷದಿಂದ ತಾಳಿಕೊಳ್ಳುವುದು
14. ದೇವರಾತ್ಮದ ಒಂದು ಫಲವಾದ ಈ ಸಂತೋಷವು ಒಂದು ಶಬ್ದಕೋಶದಿಂದ ವರ್ಣಿಲ್ಪಟ್ಟದ್ದಕ್ಕಿಂತ ಉತ್ಕೃಷ್ಟವಾಗಿರುವುದು ಹೇಗೆ?
14 ನಿಜ ಕ್ರೈಸ್ತರು ಅನುಭವಿಸುವ ಈ ಗಾಢವಾದ ಸಂತೋಷವು ಯಾವುದು? ಒಲಿಂಪಿಕ್ ಪಂದ್ಯಾಟಗಳಲ್ಲಿ ವಿಜೇತನು ಗಳಿಸುವ ತಾತ್ಕಾಲಿಕ ಸಂತೋಷಕ್ಕಿಂತ ಎಷ್ಟೋ ಆಳವಾದ, ಎಷ್ಟೋ ಅಧಿಕ ನಿರಂತರವಾದ ಸಂತೋಷವು ಅದಾಗಿದೆ. ಅದು ದೇವರ ಆತ್ಮದ ಒಂದು ಫಲವು, ‘ಆಳುವವನಾದ ತನಗೆ ವಿಧೇಯರಾಗುವ’ ಜನರಿಗೆ ದೇವರು ಅದನ್ನು ಕೊಡುತ್ತಾನೆ. (ಅಪೊಸ್ತಲರ ಕೃತ್ಯ 5:32) ವೆಬ್ಸರ್ಟ್ ಶಬ್ದಕೋಶವು ಸಂತೋಷವನ್ನು, ‘ಉಲ್ಲಾಸಕ್ಕಿಂತ ಆಳವಾಗಿ ಬೇರೂರಿರುವ, ಆನಂದಕ್ಕಿಂತ ಹೆಚ್ಚು ಬೆಳಗುವ ಅಥವಾ ಪ್ರದರ್ಶಿನೀಯವಾದ ಭಾವ’ವಾಗಿ ವರ್ಣಿಸುತ್ತದೆ. ಕ್ರೈಸ್ತರಿಗಾದರೋ ಸಂತೋಷವು ಇನ್ನೂ ಹೆಚ್ಚು ಅಗಾಧವಾದ ಅರ್ಥವುಳ್ಳದ್ದು. ನಮ್ಮ ನಂಬಿಕೆಯಲ್ಲಿ ಅದು ಆಧರಿತವಾಗಿರುವುದರಿಂದ, ಅದೊಂದು ಪ್ರಬಲವಾದ, ಬಲವರ್ಧಕ ಗುಣವಾಗಿದೆ. “ಯೆಹೋವನ ಸಂತೋಷವೇ ನಿಮ್ಮ ಆಶ್ರಯವಾಗಿದೆ.” (ನೆಹೆಮೀಯ 8:10) ದೇವಜನರು ಬೆಳೆಸಿಕೊಳ್ಳುವ ಈ ಯೆಹೋವನ ಸಂತೋಷವು, ಮಾಂಸಿಕವಾದ ಲೌಕಿಕ ಅಭಿಲಾಶೆಗಳಿಂದ ಜನರು ಪಡೆಯುವ ಯಾವುದೇ ಪೊಳ್ಳು ಉದ್ರೇಕಕ್ಕಿಂತ ಎಷ್ಟೋ ಉತ್ಕೃಷ್ಟವು.—ಗಲಾತ್ಯ 5:19-23.
15. (ಎ) ನಂಬಿಗಸ್ತ ಕ್ರೈಸ್ತರ ಅನುಭವದಲ್ಲಿ, ತಾಳ್ಮೆಯು ಸಂತೋಷದೊಂದಿಗೆ ಜತೆಗೂಡಿರುವುದು ಹೇಗೆ? (ಬಿ) ಸಂತೋಷವನ್ನು ಕಾಪಾಡಿಕೊಳ್ಳುವ ಸಂಬಂಧದಲ್ಲಿ ಬಲವುಳ್ಳ ಆಶ್ವಾಸನೆಕೊಡುವ ಕೆಲವು ಶಾಸ್ತ್ರವಚನಗಳನ್ನು ಕೊಡಿರಿ.
15 ಉಕ್ರೈನಿನ ನಮ್ಮ ಸಹೋದರನ್ನು ಗಮನಿಸಿರಿ. 1950ರ ಆರಂಭದಲ್ಲಿ, ಇವರಲ್ಲಿ ಸಾವಿರಾರು ಮಂದಿಯನ್ನು ‘ಮೇಲಧಿಕಾರಿಗಳು’ ಸೈಬೀರಿಯಕ್ಕೆ ಗಡೀಪಾರು ಮಾಡಿದಾಗ, ಬಹಳ ಕಷ್ಟವನ್ನು ಅವರು ಅನುಭವಿಸಿದರು. ತದನಂತರ ಅಧಿಕಾರಿಗಳು ಅವರನ್ನು ದೋಷಮುಕ್ತರಾಗಿ ಮಾಡಿದಾಗ, ಅವರು ಕೃತಜ್ಞರಾಗಿದ್ದರೂ, ಅವರಲ್ಲಿ ಎಲ್ಲರೂ ಸ್ವದೇಶಕ್ಕೆ ಹಿಂದೆ ಬರಲಿಲ್ಲ. ಯಾಕೆ? ಪೂರ್ವ ದೇಶದಲ್ಲಿ ಅವರು ಮಾಡಿದ ಪ್ರಯಾಸವು, ಯಾಕೋಬ 1:2-4ರ ಜ್ಞಾಪಕವನ್ನು ಅವರಿಗೆ ಕೊಟ್ಟಿತು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟು ಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಸಂತೋಷಕರವಾದದ್ದೆಂದು ಎಣಿಸಿರಿ.” ಆ ಸಂತೋಷಭರಿತ ಕೊಯ್ಲಿನಲ್ಲಿ ತಾಳುತ್ತಾ ಮುಂದರಿಯಲು ಅವರು ಬಯಸಿದರು. ಮತ್ತು ಪೋಲೆಂಡಿನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಇತ್ತೀಚಿನ ಅಧಿವೇಶನಗಳಲ್ಲಿ, ಪ್ಯಾಸಿಫಿಕ್ ಕರಾವಳಿಯಷ್ಟು ಪೂರ್ವದ ಸಮಾಜಗಳಿಂದ ಬಂದ ಸಾಕ್ಷಿಗಳನ್ನು ಸ್ವಾಗತಿಸಲು ಎಷ್ಟೊಂದು ಸಂತೋಷವಾಗಿತ್ತು. ಈ ಫಲವನ್ನು ಉತ್ಪಾದಿಸಲು ತಾಳ್ಮೆ ಮತ್ತು ಸಂತೋಷವು ಕೈಕೈಯಾಗಿ ಅನ್ಯೋನ್ಯತೆಯಿಂದ ಕೆಲಸಮಾಡಿತ್ತು. ನಿಶ್ಚಯವಾಗಿ, ಯೆಹೋವನ ಸೇವೆಯಲ್ಲಿ ಸಂತೋಷದಿಂದ ತಾಳಿಕೊಳ್ಳುವ ನಾವೆಲ್ಲರೂ ಹೀಗನ್ನಬಹುದು: “ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು. ಕರ್ತನಾದ ಯೆಹೋವನೇ ನನ್ನ ಬಲ.”—ಹಬಕ್ಕೂಕ 3:18, 19; ಮತ್ತಾಯ 5:11, 12.
16. ಯೆರೆಮೀಯ ಮತ್ತು ಯೋಬರ ಒಳ್ಳೇ ಮಾದರಿಗಳು ನಮ್ಮ ಕ್ಷೇತ್ರಸೇವೆಯಲ್ಲಿ ನಮಗೆ ಹೇಗೆ ಪ್ರೋತ್ಸಾಹನೆ ಕೊಡಬೇಕು?
16 ನಿರ್ದಾಕ್ಷಿಣ್ಯ ಪ್ರಕೃತಿಯ ವಿರೋಧಕರ ನಡುವೆ ಸಾಕ್ಷಿಕೊಡುವಾಗಲಾದರೋ, ನಾವು ನಮ್ಮ ಸಂತೋಷವನ್ನು ಉಳಿಸಿಕೊಳ್ಳುವುದು ಹೇಗೆ? ಅಂತಹ ಪರಿಸ್ಥಿತಿಗಳ ಕೆಳಗೆ ದೇವರ ಪ್ರವಾದಿಗಳು ಒಂದು ಸಂತೋಷಭರಿತ ಹೊರನೋಟವನ್ನಿಟ್ಟರೆಂಬದನ್ನು ನೆನಪಿನಲ್ಲಿಡಿರಿ. ಸಂಕಷ್ಟಗಳ ಕೆಳಗೆ ಯೆರೆಮೀಯನು ಹೇಳಿದ್ದು: “ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರ ಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ.” (ಯೆರೆಮೀಯ 15:16) ಯೆಹೋವನ ನಾಮದಿಂದ ಕರೆಯಲ್ಪಡುವುದೂ ಮತ್ತು ಆತನ ಆ ನಾಮಕ್ಕೆ ಸಾಕ್ಷಿಕೊಡುವುದೂ ಎಂತಹ ಸೌಭಾಗ್ಯವು! ನಮ್ಮ ಶ್ರದ್ಧೆಯುಳ್ಳ ವೈಯಕ್ತಿಕ ಅಭ್ಯಾಸ ಮತ್ತು ಕ್ರೈಸ್ತ ಕೂಟಗಳಲ್ಲಿ ಪೂರ್ಣವಾಗಿ ಭಾಗವಹಿಸುವಿಕೆಯು, ಸತ್ಯದಲ್ಲಿ ಸಂತೋಷಿಸುತ್ತಾ ಇರುವಂತೆ ನಮ್ಮನ್ನು ಕಟ್ಟಿ, ಬಲಪಡಿಸುತ್ತದೆ. ಕ್ಷೇತ್ರದಲ್ಲಿ ನಮ್ಮ ನಡಾವಳಿ ಮತ್ತು ರಾಜ್ಯ ನಸುನಗೆಯಲ್ಲಿ ನಮ್ಮ ಸಂತೋಷವು ತೋರಿಬರುವುದು. ಕಟುವಾದ ಕಷ್ಟದ ಕೆಳಗೂ ಯೋಬನು ತನ್ನ ವಿರೋಧಿಗಳ ವಿಷಯವಾಗಿ ಹೀಗನ್ನಶಕ್ತನಾದನು: “ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು, ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.” (ಯೋಬ 29:24) ಆ ನಂಬಿಗಸ್ತ ಯೋಬನಂತೆ ನಾವು ಸಹಾ, ವಿರೋಧಿಗಳು ನಮಗೆ ಗೇಲಿ ಮಾಡುವಾಗ ನಿರುತ್ತೇಜಿತರಾಗುವ ಅಗತ್ಯವಿಲ್ಲ. ಪ್ರಸನ್ನವದನರಾಗಿರ್ರಿ! ನಮ್ಮ ನಗುಮುಖವು ನಮ್ಮ ಸಂತೋಷವನ್ನು ಪ್ರತಿಬಿಂಬಿಸಲಿ ಮತ್ತು ಹೀಗೆ, ಆಲಿಸುವ ಕಿವಿಗಳನ್ನು ಸಂಪಾದಿಸಲಿ.
17. ತಾಳ್ಮೆಯೊಂದಿಗೆ ಸಂತೋಷವು ಹೇಗೆ ಫಲಕೊಡಬಹುದು?
17 ನಾವು ಟೆರಿಟೆರಿಯನ್ನು ಪದೇ ಪದೇ ಆವರಿಸುವಾಗ ನಮ್ಮ ತಾಳ್ಮೆ ಮತ್ತು ಸಂತೋಷವು, ನೀತಿಗೆ ಹಸಿದಿರುವ ಜನರನ್ನು ಪ್ರಭಾವಿಸಬಹುದು ಮತ್ತು ನಮ್ಮಲ್ಲಿರುವ ಮಹಿಮೆಯ ನಿರೀಕ್ಷೆಯನ್ನು ಅವರೂ ಪರೀಕ್ಷಿಸುವಂತೆ ಪ್ರೋತ್ಸಾಹಿಸಬಹುದು. ಅವರೊಂದಿಗೆ ಕ್ರಮವಾಗಿ ಬೈಬಲ್ ಅಧ್ಯಯನಗಳನ್ನು ನಡಿಸುವುದು ಎಷ್ಟು ಸಂತೋಷವು! ಮತ್ತು ದೇವರ ವಾಕ್ಯದ ಅಮೂಲ್ಯ ಸತ್ಯವನ್ನು ಅವರು ತಮ್ಮ ಹೃದಯಕ್ಕೆ ತಕ್ಕೊಳ್ಳುವಾಗ ಮತ್ತು ಕೊನೆಗೆ ಯೆಹೋವನ ಸೇವೆಯಲ್ಲಿ ನಮ್ಮ ಸಂಗಡಿಗರಾಗಿ ಪರಿಣಮಿಸುವಾಗ ಎಂತಹ ಸಂತೋಷದ ಅನಿಸಿಕೆ ನಮಗಾಗುತ್ತದೆ! ಆಗ ನಾವು, ಅಪೊಸ್ತಲ ಪೌಲನು ತನ್ನ ದಿನಗಳ ಹೊಸ ವಿಶ್ವಾಸಿಗಳಿಗೆ ಹೇಳಿದಂತೆ ಹೇಳಶಕ್ತರಾಗುವೆವು: “ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ಆತನ ಮುಂದೆ ನಮ್ಮ ಭರವಸವೂ ಸಂತೋಷವೂ ನಾವು ಹೊಗಳಿಸಿಕೊಳ್ಳುವ ಜಯಮಾಲೆಯೂ ಯಾರು? ನೀವೇ ಅಲ್ಲವೇ; ನಿಜವಾಗಿಯೂ ನೀವೇ ನಮ್ಮ ಗೌರವವೂ ಸಂತೋಷವೂ ಆಗಿದ್ದೀರಿ.” (1 ಥೆಸಲೊನೀಕ 2:19, 20) ನಿಜವಾಗಿಯೂ ಹೊಸಬರನ್ನು ದೇವರ ವಾಕ್ಯದ ಸತ್ಯಕ್ಕೆ ನಡಿಸುವುದರಲ್ಲಿ ಮತ್ತು ಅವರನ್ನು ಸಮರ್ಪಿತ, ಸ್ನಾನಿತ ಸಾಕ್ಷಿಗಳನ್ನಾಗಿ ಮಾಡುವುದಕ್ಕೆ ನೆರವಾಗುವುದರಲ್ಲಿ ಒಂದು ಸಂತೃಪ್ತಿಕರವಾದ ಸಂತೋಷವು ಕಂಡುಬರುತ್ತದೆ.
ಬಲಪಡಿಸುವ ಸಂತೋಷವು
18. ಆಧುನಿಕ ಸಮಯದ ನಾನಾ ಕಷ್ಟಗಳನ್ನು ನಿಭಾಯಿಸಲು ನಮಗೆ ಯಾವುದು ಸಹಾಯ ಮಾಡುವುದು?
18 ನಮ್ಮ ದೈನಂದಿನದ ಜೀವಿತದಲ್ಲಿನ ಎಷ್ಟೋ ಪರಿಸ್ಥಿತಿಗಳು, ತಾಳ್ಮೆಗಾಗಿ ಕೇಳಿಕೊಳ್ಳಬಹುದು. ದೈಹಿಕ ಅನಾರೋಗ್ಯ, ಕುಗ್ಗು ಮತ್ತು ಆರ್ಥಿಕ ಮುಗ್ಗಟ್ಟುಗಳು ಅವುಗಳಲ್ಲಿ ಕೆಲವಾಗಿವೆ. ಅಂತಹ ಕಷ್ಟಗಳನ್ನು ನಿಭಾಯಿಸುವುದರಲ್ಲಿ ಕ್ರೈಸ್ತನು ತನ್ನ ಸಂತೋಷವನ್ನು ಹೇಗೆ ಕಾಪಾಡಿಕೊಳ್ಳಬಹುದು? ಸಾಂತ್ವನ ಮತ್ತು ಮಾರ್ಗದರ್ಶನೆಗಾಗಿ ದೇವರ ವಾಕ್ಯದ ಕಡೆಗೆ ಹೋಗುವ ಮೂಲಕ ಇದನ್ನು ಮಾಡ ಸಾಧ್ಯವಿದೆ. ಕೀರ್ತನೆಗಳ ವಾಚನ ಅಥವಾ ಅವುಗಳ ವಾಚನಕ್ಕೆ ಕಿವಿಗೊಡುವಿಕೆಯು, ಸಂಕಷ್ಟದ ಸಮಯದಲ್ಲಿ ಬಹಳಷ್ಟು ಚೈತನ್ಯವನ್ನು ಒದಗಿಸಬಲ್ಲದು. ಮತ್ತು ದಾವೀದನ ವಿವೇಕದ ಸಲಹೆಯನ್ನು ಗಮನಿಸಿರಿ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರ ಮಾಡುವನು. ನೀತಿವಂತರನ್ನು ಎಂದೂ ಕದಲಗೊಡಿಸನು.” (ಕೀರ್ತನೆ 55:22) ಯೆಹೋವನು ನಿಶ್ಚಯವಾಗಿಯೂ “ಪ್ರಾರ್ಥನೆಯನ್ನು ಕೇಳುವವನಾಗಿದ್ದಾನೆ” ನಿಶ್ಚಯ.—ಕೀರ್ತನೆ 65:2.
19. ದಾವೀದ ಮತ್ತು ಪೌಲರಂತೆ ಯಾವ ಭರವಸವು ನಮಗಿರ ಸಾಧ್ಯವಿದೆ?
19 ನಿರ್ಬಲ ಮಾನವರಾದ ನಾವು, ನಮ್ಮ ಸಮಸ್ಯೆಗಳೊಂದಿಗೆ ಹೋರಾಡುವಂತೆ ಸಹಾಯ ಮಾಡಲು ಯೆಹೋವನ ಸಂಸ್ಥೆಯು ತನ್ನ ಸಾಹಿತ್ಯಗಳ ಮೂಲಕ ಮತ್ತು ಸಭಾ ಹಿರಿಯರ ಮೂಲಕ ಸದಾ ಸಿದ್ಧವಾಗಿ ನಿಂತದೆ. ದಾವೀದನು ಹೃತ್ಪೂರ್ವಕವಾಗಿ ಸಲಹೆ ಕೊಟ್ಟದ್ದು: “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು. ಆತನೇ ಅದನ್ನು ಸಾಗಿಸುವನು.” ಅವನು ಇದನ್ನೂ ಹೇಳಶಕ್ತನಾದನು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ.” ಕ್ರೈಸ್ತ ಸಭೆಯೊಂದಿಗಿನ ಸಹವಾಸದಲ್ಲಿ, “ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ನನಗೆ ದುರ್ಗಸ್ಥಾನ” ಎಂಬದನ್ನು ನಾವು ಮನಗಾಣುವೆವು. (ಕೀರ್ತನೆ 37:5, 25, 39) ಯಾವಾಗಲೂ ನಾವು ಪೌಲನ ಸಲಹೆಯನ್ನು ಪಾಲಿಸೋಣ: “ಆದದರಿಂದ ನಾವು ಧೈರ್ಯಗೆಡುವದಿಲ್ಲ. . . . ನಾವು ಕಾಣುವಂಥದನ್ನು ಲಕ್ಷ್ಯಿಸದೆ ಕಾಣದಿರುವಂಥದ್ದನ್ನು ಲಕ್ಷ್ಯಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರವೇ ಇರುವದು. ಕಾಣದಿರುವಂಥದ್ದು ಸದಾಕಾಲವೂ ಇರುವದು.”—2 ಕೊರಿಂಥ 4:16-18.
20. ನಂಬಿಕೆಯ ಕಣ್ಣುಗಳಿಂದ ನಾವೇನನ್ನು ನೋಡುತ್ತೇವೆ, ಮತ್ತು ಇದು ನಮ್ಮನ್ನು ಹೇಗೆ ಪ್ರಚೋದಿಸುತ್ತದೆ?
20 ನಮ್ಮ ನಂಬಿಕೆಯ ಕಣ್ಣುಗಳಿಂದ ನಾವು, ಮುಂದೆಯೇ ಇರುವ ಯೆಹೋವನ ಹೊಸ ವ್ಯವಸ್ಥೆಯನ್ನು ಕಾಣುತ್ತೇವೆ. ಎಂತಹ ಅಸದೃಶವಾದ ಸಂತೋಷಗಳು ಮತ್ತು ಆಶೀರ್ವಾದಗಳು ಅಲ್ಲಿರುವವು! (ಕೀರ್ತನೆ 37:34; 72:1, 7; 145:16) ಆ ಮಹಿಮಾಯುಕ್ತ ಸಮಯಕ್ಕಾಗಿ ತಯಾರಿಯಲ್ಲಿ, ಕೀರ್ತನೆ 100:2ರ ಮಾತುಗಳನ್ನು ನಾವು ಪಾಲಿಸುವವರಾಗೋಣ: “ಯೆಹೋವನನ್ನು ಸಂತೋಷದಿಂದ ಸೇವಿಸಿರಿ. ಹರ್ಷಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ.” (w91 1/1)
[ಅಧ್ಯಯನ ಪ್ರಶ್ನೆಗಳು]
a ಆರ್ಯರ ಶ್ರೇಷ್ಠತ್ವದ” ಸಂಬಂಧದಲ್ಲಿ, ಫೆಬ್ರವರಿ 17, 1940ರ ನ್ಯೂ ಯೋರ್ಕ್ ಟೈಮ್ಸ್, ಜಾರ್ಜ್ಟೌನ್ ಯುನಿರ್ವಸಿಟಿಯ ಕಥೋಲಿಕ ಅಧಿಕಾರಿಯೊಬ್ಬನನ್ನು ಉದ್ದರಿಸುತ್ತಾ, “ಒಂದು ಜರ್ಮನ್ ಸಾಮ್ರಾಜ್ಯವಾಗಿದ್ದ ಪವಿತ್ರ ರೋಮನ್ ಸಾಮ್ರಾಜ್ಯವು ಪುನಃ ಸ್ಥಾಪಿಸಲ್ಪಡಲೇಬೇಕು ಎಂದು ಎಡಾಲ್ಪ್ ಹಿಟ್ಲರನು ಹೇಳುವುದನ್ನು ಅವನು ಕೇಳಿದ್ದನು” ಎಂದು ಹೇಳಿದೆ. ಆದರೆ, ಇತಿಹಾಸಕಾರ ವಿಲ್ಯಂ ಎಲ್. ಶೈರರ್ ಫಲಿತಾಂಶವನ್ನು ವರ್ಣಿಸುವುದು: “ಮೂರನೆಯ ಜರ್ಮನ್ ರಾಷ್ಟ್ರ ಜನವರಿ 30, 1933 ರಲ್ಲಿ ಜನಿಸಿದಾಗ, ಅದು ಸಹಸ್ರ ವರ್ಷ ಬಾಳುವುದು ಎಂದು ಹಿಟ್ಲರನು ಜಂಬಕೊಚ್ಚಿದ್ದನು. ಮತ್ತು ನಾಜೀ ಬಳಕೆಯ ಮಾತಿನಲ್ಲಿ ಅದು, “ಸಹಸ್ರ ವರ್ಷದ ರಾಷ್ಟ್ರ”ವಾಗಿ ನಿರ್ದೇಶಿಸಲ್ಪಟ್ಟಿತ್ತು. ಅದು ಬಾಳಿದ್ದು ಹನ್ನೆರಡು ವರ್ಷ ಮತ್ತು ನಾಲ್ಕು ತಿಂಗಳುಗಳು ಮಾತ್ರ.”
ಪುನರ್ವಿಮರ್ಶೆಯಲ್ಲಿ:
◻ ಜಾತೀಯತೆಯ ಯಾವ ಸಂತೋಷಕರ ವಿಜಯವು ಇಂದು ಕಂಡು ಬರುತ್ತದೆ?
◻ ದೇವರ ಪ್ರಾಚೀನ ಜನರನ್ನು ಹಾಡಲು ಮತ್ತು ಹರ್ಷಧ್ವನಿಗೈಯಲು ಯಾವುದು ಕಾರಣ ಮಾಡಿತು?
◻ ಆಧುನಿಕ ಸಮಯದಲ್ಲಿ ನಿಜ ಸಂತೋಷವು ಹೆಚ್ಚಿದ್ದು ಹೇಗೆ?
◻ ತಾಳ್ಮೆ ಮತ್ತು ಸಂತೋಷವು ಹೇಗೆ ಕೈಕೈಯಾಗಿ ಕೆಲಸಮಾಡುತ್ತದೆ?
◻ ಯಾವುದರ ಮೂಲಕ ನಾವು ನಮ್ಮ ಸಂತೋಷವನ್ನು ಬಲಪಡಿಸಬಹುದು?