ಸುವಾರ್ತೆಯನ್ನು ನೀಡುವುದು—ಸಂತೋಷದಿಂದ
1 ಯೇಸು ಕ್ರಿಸ್ತನು ತನ್ನ ಶುಶ್ರೂಷೆಯಲ್ಲಿ ಮಹಾ ಸಂತೋಷವನ್ನು ಕಂಡುಕೊಂಡನು. ಅವನಿಗೆ ತನ್ನ ತಂದೆಯ ಚಿತ್ತವನ್ನು ಮಾಡುವುದೇ ಆಹಾರವಾಗಿತ್ತು. (ಯೋಹಾ. 4:34) ತದ್ರೀತಿಯಲ್ಲಿ ಪೌಲನೂ, ಶುಶ್ರೂಷೆಯ ತನ್ನ ಕಾರ್ಯದಲ್ಲಿ ಮಹಾ ಸಂತೋಷವನ್ನು ಪಡೆದನು. ಅನೇಕ ಸಂಕಟ ಮತ್ತು ಹಿಂಸೆಗಳನ್ನು ತಾಳಬೇಕಾದಾಗ್ಯೂ, ಶುಶ್ರೂಷೆಯಲ್ಲಿ ಅವರು ಸಂತೋಷಪಟ್ಟದ್ದರ ಒಳಗುಟ್ಟೇನು? ಅವರ ಸೇವೆಯು ಪೂರ್ಣಾತ್ಮದ್ದಾಗಿತ್ತು. ಅವರು ತಮ್ಮ ದೇವದತ್ತ ಕಾರ್ಯದಲ್ಲಿ ಕಷ್ಟಪಟ್ಟು ದುಡಿದರು ಮತ್ತು ಆ ದುಡಿಮೆಯ ಫಲಿತಾಂಶವಾಗಿ ಅವರಿಗೆ ಸಂತೋಷವು ಸಿಕ್ಕಿತು. (ಯೋಹಾ. 13:17; ಪ್ರಕ. 14:13) ಯೆಹೋವನ ಸೇವೆಯಲ್ಲಿ ನೀವು ನಿಮ್ಮ ಸಂತೋಷವನ್ನು ಹೇಗೆ ಹೆಚ್ಚಿಸಬಲ್ಲಿರಿ?
ಜನರಿಗೆ ಸಹಾಯ ಮಾಡುವ ಸಂಬಂಧದಲ್ಲಿ ಯೋಚಿಸಿರಿ
2 ಯೇಸು ಕ್ರಿಸ್ತನು ಮತ್ತು ಪೌಲನು ಅತ್ಯುತ್ತಮ ಶಿಕ್ಷಕರಾಗಿದ್ದರು. ಅವರು ಕಿವಿಗೊಟ್ಟವರ ಹೃದಯವನ್ನು ತಲಪುವ ಗುರಿಯನ್ನಿಟ್ಟರು. ಅನೇಕರು ಪ್ರತಿಕ್ರಿಯೆ ತೋರಿಸಲಿಲ್ಲ, ಆದರೆ ಪ್ರತಿಕ್ರಿಯೆ ತೋರಿಸಿದವರು ನಿಜ ಸಂತೋಷಕ್ಕೆ ಕಾರಣರಾದರು. (ಫಿಲಿ. 4:1; ಲೂಕ 15:7ಕ್ಕೆ ಹೋಲಿಸಿ.) ಹೌದು, ಯೆಹೋವನ ಕುರಿತು ಕಲಿಯಲು ಜನರಿಗೆ ಸಹಾಯ ಮಾಡುವುದು ಮತ್ತು ಅವರು ಸತ್ಯಕ್ಕಾಗಿ ನಿಲ್ಲುವುದನ್ನು ಕಾಣುವುದು ನಮ್ಮನ್ನು ಸಂತೋಷಪಡಿಸುತ್ತದೆ. ಒಂದನೆಯ ಶತಕದಲ್ಲಿ, “ಅನ್ಯಜನರ ಮತಾಂತರವು ಸಹೋದರರೆಲ್ಲರಿಗೆ ಬಹಳವಾದ ಸಂತೋಷಕ್ಕೆ” ಕಾರಣ ಮಾಡಿತ್ತು.—ಅಪೊ. 15:3.
3 ನಿಮಗೆ ತಿಳಿದಿರುವುದನ್ನು ಇತರರೊಂದಿಗೆ ಕೌಶಲ್ಯದಿಂದ ಹಂಚುವ ಮೂಲಕ ನೀವೂ ಈ ಸಂತೋಷವನ್ನು ಅನುಭವಿಸಬಹುದು. ಇತರರಿಗೆ ನಾವು ಸತ್ಯವನ್ನು ಕಲಿಸುವಾಗ ನಮ್ಮ ಸಹಾಯಕ್ಕಾಗಿ ಯೆಹೋವನ ಸಂಸ್ಥೆಯು ನಮಗೆ ಅತ್ಯುತ್ತಮ ಉಪಕರಣಗಳನ್ನು ಒದಗಿಸಿದೆ. ಉದಾಹರಣೆಗೆ, ನಮ್ಮ ರಾಜ್ಯದ ಸೇವೆಯಲ್ಲಿ ಸಂಭಾಷಣೆಗಾಗಿ ವಿಷಯವು ನಮಗೆ ಕೊಡಲ್ಪಟ್ಟಿದೆ. ಅನೇಕ ರಸಕರವಾದ ಪೀಠಿಕೆಗಳುಳ್ಳ ಮತ್ತು ಜನರು ಕೇಳುವ ಮಹತ್ವದ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವ ರೀಸನಿಂಗ್ ಪುಸ್ತಕವು ಸಹಾ ಅಲ್ಲಿದೆ. ಶುಶ್ರೂಷೆಗಾಗಿ ನೀವು ತಯಾರಿಸುವಾಗ, ನಮ್ಮ ರಾಜ್ಯದ ಸೇವೆ ಮತ್ತು ರೀಸನಿಂಗ್ ಪುಸ್ತಕದಲ್ಲಿನ ಸಲಹೆಗಳನ್ನು ನಮ್ಮ ಕ್ಷೇತ್ರದಲ್ಲಿ ವಾಸಿಸುವ ಜನರ ಸಹಾಯಕ್ಕಾಗಿ ಹೇಗೆ ಉಪಯೋಗಿಸಬಹುದೆಂಬ ಸಂಬಂಧದಲ್ಲಿ ಯೋಚಿಸಿರಿ. ಜನರೊಂದಿಗೆ ಒಳ್ಳೇ ಸಂಭಾಷಣೆ ಆರಂಭಿಸಲು ಚೆನ್ನಾಗಿ ತಯಾರಿರುವ ಮೂಲಕ ಜನರನ್ನು ಜೀವದ ದಾರಿಯಲ್ಲಿ ನಡಿಸಲು ಪ್ರಯಾಸಪಡಿರಿ. ಅದು ನಮ್ಮನ್ನು ಫಲಕಾರಿ ಬೈಬಲಭ್ಯಾಸಗಳಿಗೆ ಮತ್ತು ಸೇವೆಯಲ್ಲಿ ಅಧಿಕ ಆನಂದಕ್ಕೆ ನಡಿಸಬಹುದು.—ಯಾಕೋ. 1:25.
ಸಕಾರಾತ್ಮಕ ಭಾವ
4 ನೀವು ಪ್ರಚಾರಕರಾಗಿರ್ರಿ ಅಥವಾ ಪಯನೀಯರರಾಗಿ ಇರ್ರಿ, ಶುಶ್ರೂಷೆಯ ಉದ್ದೇಶವನ್ನು ಮನಸ್ಸಿನಲ್ಲಿಡಿರಿ. (ಮತ್ತಾ. 24:14; 28:19, 20) ಸಾಕ್ಷಿಗಾಗಿ ಸುವಾರ್ತೆಯನ್ನು ಸಾರುವಿಕೆಯು ದೇವರಿಂದ ಬಂದ ನೇಮಕವು. ಅದೊಂದು ಸುಯೋಗವಾಗಿದೆ, ಮತ್ತು ಯೆಹೋವನು ತನ್ನ ಸೇವಕರಿಂದ ಏನು ಕೇಳಿಕೊಳ್ಳುತ್ತಾನೋ ಅದು ಭಾರವಾದದ್ದಲ್ಲ. (1 ಯೋಹಾ. 5:3) ತನ್ನ ಜನರು ಅವನ ಸೇವೆಯನ್ನು ಆನಂದಿಸುವಂತೆ ಆತನು ಬಯಸುತ್ತಾನೆ. ಆದಕಾರಣ, ಕೆಲವರು ಸೇವಾ ಕಾರ್ಯಕ್ಕೆ ಪ್ರತಿಕ್ರಿಯೆ ತೋರಿಸದಿದ್ದರೂ ನಿಮಗಿನ್ನೂ ಶುಶ್ರೂಷೆಯಲ್ಲಿ ಬಹಳ ಸಂತೋಷವನ್ನು ಪಡೆಯ ಸಾಧ್ಯವಿದೆ. ಅದು ಹಾಗೇಕೆ?
5 ಯೇಸುವಿನ ಶಿಷ್ಯರು ತಮ್ಮ ಶುಶ್ರೂಷೆಯಲ್ಲಿ ಬಹಳಷ್ಟು ಸಂತೋಷವನ್ನು ಪಡೆದರು ಮತ್ತು ಅವರ ಸಂತೋಷಕ್ಕೆ ಮುಖ್ಯ ಕಾರಣವು ಏನಾಗಿರಬೇಕೆಂದು ಆತನು ಅವರಿಗೆ ವಿವರಿಸಿದನು. (ಲೂಕ 10:17-20) ಐಹಿಕ ನಿರೀಕ್ಷೆಗಳಿರುವ “ಮಹಾಸಮೂಹ” ದವರಿಗೆ ಸಹಾ, ಸಂತೋಷಪಡಲು ಸಕಾರಣವದೆ. (ಪ್ರಕ. 7:9, 10) ನಿಮ್ಮ ನಿರೀಕ್ಷೆ ಸ್ವರ್ಗೀಯವಾಗಿರಲಿ ಐಹಿಕವಾಗಿರಲಿ, ದೇವರ ಚಿತ್ತವನ್ನು ನೀವು ಮಾಡುತ್ತಿರುವ ನಿಜತ್ವವು ನಿಮಗೆ ಸಂತೋಷವನ್ನು ಕೊಡಬೇಕು ಏಕೆಂದರೆ “ಕರ್ತನ ಸೇವೆಯಲ್ಲಿ ನೀವು ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲ.” (1 ಕೊರಿ. 15:58) ಯೆಹೋವನು “ತನ್ನ ನಾಮದ ವಿಷಯವಾಗಿ ನೀವು ತೋರಿಸಿದ ಪ್ರೀತಿಯನ್ನು ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿ. 6:10) ಯೆಹೋವನ ಸೇವೆಯನ್ನು ಪೂರ್ಣಾತ್ಮದಿಂದ ಮಾಡುವುದು ಆತನನ್ನು ಪ್ರೀತಿಸುವವರಿಗೆ ಸಂತೋಷದ ಉಗಮವಾಗಿದೆ.—ಕೀರ್ತ. 40:8.
6 ಕ್ರೈಸ್ತನು ದೇವರ ತನ್ನ ಸೇವೆಯಲ್ಲಿ ಆನಂದಿಸುವವನಾಗಬೇಕು. ನಿಜ ಭಕ್ತಿಯ ಅತಿ ಚಿಕ್ಕ ಕ್ರಿಯೆಯನ್ನಾದರೂ ಯೆಹೋವನು ಗಣ್ಯಮಾಡುತ್ತಾನೆಂಬ ಆಶ್ವಾಸನೆಯುಳ್ಳವರಾಗಿ, ಶುಶ್ರೂಷೆಯಲ್ಲಿ ಸಂತೋಷವನ್ನು ಪಡೆಯುತ್ತಾ ಇರ್ರಿ. (ಮಾರ್ಕ 12:41-44ನ್ನು ಹೋಲಿಸಿ.) ಹೀಗೆ ನಾವೆಲ್ಲರೂ ‘ನಮ್ಮ ಶುಶ್ರೂಷೆಯನ್ನು ಮಹಿಮೆ ಪಡಿಸುತ್ತಾ’ ಮುಂದರಿಯೋಣ ಮತ್ತು ಅದು ತರುವ ಸಂತೋಷವನ್ನು ಅನುಭವಿಸೋಣ.—ರೋಮಾ. 11:13.