ಧರ್ಮಭ್ರಷ್ಟರ ವಿಷಯದಲ್ಲಿ ಎಚ್ಚರವಿರ್ರಿ
ಯೂದನ ಪತ್ರದಿಂದ ಮುಖ್ಯಾಂಶಗಳು
ಯೆಹೋವನ ಸೇವಕರು “ಕೆಟ್ಟತನಕ್ಕೆ ಹೇಸಿಕೊಳ್ಳ”ಬೇಕು ಮತ್ತು “ಒಳ್ಳೆಯದನ್ನು ಬಿಗಿಯಾಗಿ ಹಿಡಿದು”ಕೊಳ್ಳಬೇಕು. (ರೋಮಾಪುರ 12:9) ಇತರರು ಇದನ್ನು ಮಾಡುವಂತೆ ಬೈಬಲ್ ಲೇಖಕನಾದ ಯೂದನು ಸುಮಾರು ಸಾ.ಶ. 65ರಲ್ಲಿ ಪಲೆಸ್ತೀನದಿಂದ ಕಳುಹಿಸಿದ ತನ್ನ ಪತ್ರದಲ್ಲಿ ಸಹಾಯ ಮಾಡಿದ್ದಾನೆ.
ಯೂದನು ತನ್ನನ್ನು “ಯೇಸು ಕ್ರಿಸ್ತನ ದಾಸನೂ ಯಾಕೋಬನ ತಮ್ಮನೂ” ಆಗಿ ಕರೆದಿದ್ದಾನೆ. ಈ ಯಾಕೋಬನು ಯೇಸು ಕ್ರಿಸ್ತನ ಪ್ರಖ್ಯಾತ ಮಲತಮ್ಮನಾಗಿದ್ದಿರಬೇಕೆಂಬದು ವ್ಯಕ್ತ. (ಮಾರ್ಕ 6:3; ಅಪೊಸ್ತಲರ ಕೃತ್ಯಗಳು 15:13-21; ಗಲಾತ್ಯ 1:19) ಹೀಗೆ ಯೂದನು ತಾನೇ, ಯೇಸುವಿನ ಮಲತಮ್ಮನಾಗಿದ್ದನು. ಆದರೂ ಈ ಮಾಂಸಿಕ ಸಂಬಂಧವನ್ನು ತಿಳಿಸುವುದು ಅನುಚಿತವೆಂದು ಅವನು ನೆನಸಿರಬೇಕು ಯಾಕೆಂದರೆ ಕ್ರಿಸ್ತನು ಆಗ ಮಹಿಮಾಯುಕ್ತ ಆತ್ಮಿಕ ವ್ಯಕ್ತಿಯಾಗಿದ್ದನು. “ಒಳ್ಳೆಯದನ್ನು ಬಿಗಿಯಾಗಿ ಹಿಡಿಯಲು” ಮತ್ತು ಧರ್ಮಭ್ರಷ್ಟರ ಕುರಿತು ಎಚ್ಚರವಿರಲು ನಮಗೆ ಸಹಾಯ ಮಾಡಬಲ್ಲ ಸೂಚನೆಗಳನ್ನು ಕೊಡುವುದರಲ್ಲಿ ಯೂದನ ಪತ್ರಿಕೆಯು ಅತ್ಯಂತ ನೇರವಾಗಿದೆ.
“ಹೋರಾಡಿರಿ”
ಕ್ರೈಸ್ತರಿಗೆ ಸಾಮಾನ್ಯವಾಗಿರುವ ರಕ್ಷಣೆಯ ಕುರಿತು ಬರೆಯಲು ಯೂದನು ಯೋಚಿಸಿದನ್ದಾದರೂ, “ನಂಬಿಕೆಯನ್ನು ಕಾಪಾಡುವುದಕ್ಕೆ ಹೋರಾಡಬೇಕೆಂದು” ತನ್ನ ವಾಚಕರನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಕಂಡುಕೊಂಡನು. (ಯೂದ 1-4 ವಚನಗಳು) ಏಕೆ? ಏಕೆಂದರೆ ಭಕ್ತಿಹೀನ ಜನರು ಸಭೆಯೊಳಗೆ ಕಳ್ಳತನದಿಂದ ಹೊಕ್ಕಿದ್ದರು ಮತ್ತು ‘ದೇವರ ಕೃಪೆಯನ್ನು ನೆವನ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು” ನಡಿಸುತ್ತಿದ್ದರು. ದೇವರ ನಿಯಮಗಳನ್ನು ಮೀರಿಯೂ ಆತನ ಜನರ ನಡುವೆ ಇನ್ನೂ ಉಳಿಯಬಹುದೆಂದು ಅವರು ತಪ್ಪಾಗಿ ನೆನಸಿದ್ದರು. ಅಂಥಾ ಕೆಟ್ಟ ವಿವೇಚನೆಗೆ ನಾವೆಂದೂ ಮಣಿಯದೆ, ಯಾವಾಗಲೂ ನೀತಿಯನ್ನೇ ಬೆನ್ನಟ್ಟುತ್ತಾ, ದೇವರು ಕ್ರಿಸ್ತನ ಮೂಲಕ ಕರುಣೆಯಿಂದ ನಮ್ಮನ್ನು ನಮ್ಮ ಪಾಪಗಳಿಂದ ತೊಳೆದದ್ದಕ್ಕಾಗಿ ಕೃತಜ್ಞರಾಗಿರೋಣ.—1 ಕೊರಿಂಥ 6:9-11; 1 ಯೋಹಾನ 1:7.
ನಮ್ಮೆದುರಿಗಿರುವ ಎಚ್ಚರಿಕೆಗಳು
ನಿರ್ದಿಷ್ಟ ಮನೋಭಾವಗಳು, ನಡವಳಿಕೆ ಮತ್ತು ಜನರ ಕುರಿತು ಎಚ್ಚರ ವಹಿಸುವ ಅಗತ್ಯವು ಅಲ್ಲಿದೆ. (5-16ನೇ ವಚನ) ಐಗುಪ್ತ ದೇಶದಿಂದ ರಕ್ಷಿಸಲ್ಪಟ್ಟ ಕೆಲವು ಇಸ್ರಾಯೇಲ್ಯರು ನಂಬಿಕೆಯ ನ್ಯೂನತೆಯನ್ನು ತೋರಿಸಿದ ಕಾರಣ ನಾಶವಾದರು. ತಮ್ಮ ತಕ್ಕದಾದ್ದ ಸ್ಥಾನವನ್ನು ತೊರೆದ ದೇವದೂತರಿಗೆ “ದೇವರು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಿ ಆಗುವ ದಂಡನೆಯ ತೀರ್ಪಿಗಾಗಿ ಅವರನ್ನು [ಆತ್ಮಿಕ] ಕತ್ತಲೆಯೊಳಗೆ ಹಾಕಿದ್ದಾನೆ.” ಘೋರ ಅನೈತಿಕತೆಯು ಸೊದೋಮ್ ಗಮೋರಗಳ ಮೇಲೆ “ನಿತ್ಯವಾದ ಅಗ್ನಿಯ ದಂಡನೆಯನ್ನು” ಬರಮಾಡಿತು. ಆದ್ದರಿಂದ, ನಾವು ಯಾವಾಗಲೂ ದೇವರನ್ನು ಮೆಚ್ಚಿಸ ಬಯಸುತ್ತಾ “ಜೀವಮಾರ್ಗ”ವನ್ನೆಂದೂ ತೊರೆಯದಿರೋಣ.—ಕೀರ್ತನೆ 16:11.
ಸೈತಾನನ ವಿರುದ್ಧವಾಗಿ ದೂಷಣಾಭಿಪ್ರಾಯದ ಖಂಡನೆಯನ್ನೂ ಹೇಳಲೊಲ್ಲದ ಪ್ರಧಾನದೂತ ಮೀಕಾಯೇಲನಿಗೆ ಅಸದೃಶವಾಗಿ ಈ ಭಕ್ತಿಹೀನ ಜನರಾದರೋ, “ಮಹಾ ಪದವಿಯವರನ್ನು” ಅಂದರೆ ದೇವರಿಂದ ಮತ್ತು ಕ್ರಿಸ್ತನಿಂದ ಅಭಿಷಿಕ್ತ ಹಿರಿಯರಾಗಿ ನಿರ್ದಿಷ್ಟ ಪದವಿಯನ್ನು ಹೊಂದಿರುವವರನ್ನು ಸಹಾ ದೂಷಿಸಿ ಮಾತಾಡಿದರು. ದೇವರು ಕೊಟ್ಟ ಅಧಿಕಾರಕ್ಕಾಗಿ ನಾವು ಅಗೌರವವನ್ನು ತೋರಿಸದಿರೋಣ!
ಕಾಯಿನನ, ಬಿಳಾಮನ ಮತ್ತು ಕೋರಹನ ಕೆಟ್ಟ ಮಾದರಿಗಳನ್ನು ಈ ಭಕ್ತಿಹೀನರು ಅನುಸರಿಸಿದ್ದರು. ಅವರು ಸಮುದ್ರದ ಗುಪ್ತವಾದ ಬಂಡೆಗಳಿಗೆ ಹೋಲಿಕೆಯಲ್ಲಿ ಆತ್ಮಿಕ ಗಂಡಾಂತರವಾಗಿದ್ದರು, ನೀರಿಲ್ಲದ ಮೇಘಗಳಂತಿದ್ದರು ಮತ್ತು ಬೇರು ಸಹಿತ ಕಿತ್ತು ಹಾಕಿದ ಸತ್ತ ಮರಗಳಂತೆ ಉಪಯುಕ್ತವಾದ ಏನನ್ನೂ ಉತ್ಪಾದಿಸದೆ ಇದ್ದರು. ಆ ಧರ್ಮಭ್ರಷ್ಟರು ಗುಣುಗುಟ್ಟುವವರೂ, ದೂರಿಡುವವರೂ, ‘ಸ್ವಪ್ರಯೇಜನಕ್ಕಾಗಿ ಮುಖಸ್ತುತಿ ಮಾಡುವವರು’ ಸಹಾ ಆಗಿದ್ದರು.
ಎದುರಿಸುತ್ತಾ ಇರ್ರಿ
ಕೆಟ್ಟ ಪ್ರಭಾವಗಳನ್ನೂ ಎದುರಿಸುವಂತೆ ಅನಂತರ ಯೂದನು ಸೂಚಿಸಿದ್ದಾನೆ. (17-25ನೇ ವಚನಗಳು) “ಅಂತ್ಯಕಾಲದಲ್ಲಿ” ಕುಚೋದ್ಯಗಾರರು ಇರುವರು ಮತ್ತು ನಿಜ ಕ್ರೈಸ್ತರು ಅವರನ್ನು ಮತ್ತು ಅವರ ನಿಂದೆಗಳನ್ನು ಇಂದು ತಾಳಿಕೊಳ್ಳಬೇಕು. ಅಂಥ ಕೆಟ್ಟ ಪ್ರಭಾವಗಳನ್ನು ಎದುರಿಸಲು ನಾವು ನಮ್ಮ “ಅತಿ ಪರಿಶುದ್ಧವಾದ ನಂಬಿಕೆ”ಯನ್ನು ಬಲಗೊಳಿಸಬೇಕು, ಪವಿತ್ರಾತ್ಮದೊಂದಿಗೆ ಪ್ರಾರ್ಥಿಸಬೇಕು, ಕ್ರಿಸ್ತನ ಕರುಣೆಯನ್ನು ಎದುರು ನೋಡುತ್ತಾ, ದೇವರ ಪ್ರೀತಿಯಲ್ಲಿ ನಮ್ಮನ್ನು ಇರಿಸಿಕೊಳ್ಳಬೇಕು.
ಸುಳ್ಳು ಬೋಧಕರ ತಮ್ಮ ಪಾತ್ರದಲ್ಲಿ ಈ ಭಕ್ತಿಹೀನ ಜನರು ಕೆಲವರನ್ನು ಸಂದೇಹಿಸುವಂತೆ ನಡಿಸಿದರೆಂದು ಕಾಣುತ್ತದೆ. ( 2 ಪೇತ್ರ 2:1-3 ಹೋಲಿಸಿ.) ಮತ್ತು ಆ ಸಂದೇಹಿಗಳಿಗೆ ಏನು ಬೇಕಿತ್ತು? ನಿತ್ಯ ನಾಶನವೆಂಬ “ಬೆಂಕಿಯ” ಬಾಯೊಳಗಿಂದ ಹೊರಗೆಳೆಯುವ ಆತ್ಮಿಕ ಸಹಾಯವೇ! (ಮತ್ತಾಯ 18:8, 9) ಆದರೆ ದೇವಭಕ್ತರು ಅಂಥ ಅಂತ್ಯಕ್ಕಾಗಿ ಹೆದರುವ ಅಗತ್ಯವಿಲ್ಲ ಯಾಕಂದರೆ ದೇವರು ಅವರನ್ನು ಪಾಪಕ್ಕೆ “ಎಡವಿ ಬೀಳ”ದಂತೆ ಮತ್ತು ಧರ್ಮಭ್ರಷ್ಟರಿಗಾಗುವ ನಾಶನದಿಂದ ತಪ್ಪಿಸಿ ಕಾಪಾಡುವನು. (w91 4/15)
[ಪುಟ 32 ರಲ್ಲಿರುವ ಚೌಕ]
ಗುಪ್ತವಾದ ಬಂಡೆಗಳು: ‘ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು ಪ್ರೇಮ ಭೋಜನಗಳಲ್ಲಿ ಸೇರಿರು”ವವರ ಕುರಿತು ಯೂದನು ಜೊತೆ ಕ್ರೈಸ್ತರನ್ನು ಎಚ್ಚರಿಸಿದ್ದನು. (ಯೂದ 12) ನಂಬಿಕೆಯವರಿಗೆ ಪ್ರೀತಿಯ ಸೋಗನ್ನು ತೋರಿಸುತ್ತಾ ಈ ಧರ್ಮಭ್ರಷ್ಟರು, ನೀರಿನೊಳಗಿನ ಮೊನಚಾದ ಬಂಡೆಗಳಂತಿದ್ದು, ಹಡಗುಗಳನ್ನು ಧ್ವಂಸಮಾಡಲು ಅಥವಾ ಈಜಾಡುವವರನ್ನು ಸೀಳಿ ಕೊಂದು ಹಾಕಲು ಶಕ್ತರಾಗಿದ್ದಾರೆ. ಪ್ರೇಮ ಭೋಜನಗಳು, ಐಹಿಕವಾಗಿ ಅನುಕೂಲಸ್ಥರಾದ ಕ್ರೈಸ್ತರು ಬಡವರಾದ ಜತೆ ವಿಶ್ವಾಸಿಗಳನ್ನು ಆಮಂತ್ರಿಸುವ ಔತಣಗಳಾಗಿದ್ದಿರಬಹುದು. ಚರ್ಚ್ ಮತಗ್ರಂಥಕಾರ ಕ್ರಿಸೋಸ್ಟಮ್ (ಸಾ.ಶ. 347?-407) ಅಂದದ್ದು: “ಅವರೆಲ್ಲರೂ ಒಂದು ಸಾಮಾನ್ಯ ಔತಣದಲ್ಲಿ ಕೂಡಿ ಬರುತ್ತಿದ್ದರು: ಧನಿಕರು ತಿಂಡಿಗಳನ್ನು ತರುತ್ತಿದ್ದರು ಮತ್ತು ಬಡವರನ್ನು ಮತ್ತು ಏನೂ ಇಲ್ಲದವರನ್ನು ಆಮಂತ್ರಿಸಲಾಗುತಿತ್ತು. ಅವರೆಲ್ಲರೂ ಒಟ್ಟುಗೂಡಿ ಭೋಜನ ಮಾಡುತ್ತಿದ್ದರು.” ಆರಂಭದ ಪ್ರೇಮ ಭೋಜನಗಳ ರೀತಿಯು ಹೇಗೆಯೇ ಇದ್ದಿರಲಿ, ಯೂದನ ಎಚ್ಚರಿಕೆಯು ನಂಬಿಗಸ್ತರಿಗೆ, ಆತ್ಮಿಕ ಮರಣವನ್ನು ತರಬಲ್ಲ ಆ ಧರ್ಮಭ್ರಷ್ಟ ‘ಗುಪ್ತ ಬಂಡೆಗಳ’ ಕುರಿತು ಎಚ್ಚರವಾಗಿರಲು ಸಹಾಯ ಮಾಡಿತ್ತು. ಕ್ರೈಸ್ತರಿಗೆ ಪ್ರೇಮ ಭೋಜನ ನಡಿಸುವ ಆಜ್ಞೆ ಇರಲಿಲ್ಲ ಮತ್ತು ಅವು ಇಂದು ನಡಿಸಲ್ಪಡುವುದೂ ಇಲ್ಲ, ಆದರೂ, ಯೆಹೋವನ ಜನರು ಕೊರತೆಯಲ್ಲಿರುವಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ ಮತ್ತು ಆನಂದಕರ ಸಾಹಚರ್ಯವನ್ನು ನಡಿಸುತ್ತಾರೆಂಬದು ನಿಶ್ಚಯ.