ನಿಮ್ಮ ಭವಿಷ್ಯವು ಅದೃಷದ್ಟಿಂದ ನಿರ್ಧರಿಸಲ್ಪಟ್ಟಿದೆಯೇ?
ಒಂದು ದುರ್ಘಟನೆಯನ್ನು ನೀವು ಪಾರಾಗಿದ್ದೀರಿ, ಆಗ ಅದು ನಿಮ್ಮ ಅದೃಷ್ಟದ ಭಾಗ್ಯವೆಂಬ ಅನಿಸಿಕೆ ನಿಮಗಾಗುತ್ತದೋ? ಅಥವಾ, ಬರೇ ಒಂದು ಯುಕ್ತ ಸಮಯದಲ್ಲಿ ಒಂದು ಯುಕ್ತವಾದ ಸ್ಥಳದಲ್ಲಿ ಇದದ್ದರಿಂದಲೇ ಹಾಗಾಯಿತೆಂದು ನೆನಸಿ ನೀವು ಕೃತಜ್ಞರಿರುತ್ತೀರೋ?
ಜ್ಞಾನಿ ಪುರುಷ ಸೊಲೊಮೋನನು ಅಂದದ್ದು: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರಕದು; ಯಾಕಂದರೆ ಕಾಲವೂ ಮುಂಗಾಣದ ಸಂಭವಗಳೂ ಅವರೆಲ್ಲರಿಗೂ ಉಂಟಾಗುತ್ತವೆ.” (ಪ್ರಸಂಗಿ 9:11, NW) ಅನಿರೀಕ್ಷಿತ ಸಂಗತಿಗಳು ಎಷ್ಟೋ ಬಾರಿ ಸಂಭವಿಸುತ್ತವೆ! ಗೆಲ್ಲುವನೆಂದು ಅಭಿಪ್ರಾಯಪಟ್ಟ ಕ್ರೀಡಾಪಟು ಗಾಯಗೊಳ್ಳುತ್ತಾನೆ, ಮತ್ತು ಸೋಲುವನೆಂದೆಣಿಸಲ್ಪಟ್ಟವನು ಗೆಲ್ಲುತ್ತಾನೆ. ವಿಚಿತ್ರವಾದ ದುರ್ಘಟನೆಯೊಂದು ಪ್ರಾಮಾಣಿಕ ವ್ಯಾಪಾರಿಯೊಬ್ಬನನ್ನು ಆರ್ಥಿಕ ಬಿಕ್ಕಟ್ಟಿಗೆ ಹಾಕಿ, ಅವನ ಅಪ್ರಾಮಾಣಿಕ ಪ್ರತಿಸ್ಫರ್ಧಿಯನ್ನು ಧನಿಕನಾಗುವಂತೆ ಮಾಡುತ್ತದೆ. ಆದರೆ ಈ ಅಸಂಬಂಧತೆಗಳಿಗೆ ಅದೃಷವ್ಟೇ ಕಾರಣವೆಂದು ಸೊಲೊಮೋನನು ಹೇಳುತ್ತಾನೋ? ಇಲ್ಲವೇ ಇಲ್ಲ. ಅವು ಕೇವಲ “ಕಾಲ ಮತ್ತು ಮುಂಗಾಣದ ಸಂಭವಗಳ” ಪರಿಣಾಮಗಳಾಗಿವೆ.
ಯೇಸು ಕ್ರಿಸ್ತನು ಇದೇ ರೀತಿಯ ಅವಲೋಕನೆಯನ್ನು ಮಾಡಿದನು. ತನ್ನನ್ನು ಆಲೈಸುತ್ತಿದ್ದವರಿಗೆ ಸಾಮಾನ್ಯವಾಗಿ ತಿಳಿದಿದ್ದ ಒಂದು ಸಂಗತಿಗೆ ನಿರ್ದೇಶಿಸುತ್ತಾ, ಯೇಸು ಕೇಳಿದ್ದು: “ಸಿಲೊವಾಮಿಯಲ್ಲಿ ಬುರುಜು ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳು ಎಂದು ಭಾವಿಸುತ್ತೀರೋ?” (ಲೂಕ 13:4) ಈ ಆಪತ್ತುಗಳೆಲ್ಲಾ ಒಂದು ನಿಗೂಢ ದುರದೃಷ್ಟದಿಂದಾಗಲಿ ದೈವಯೋಗದಿಂದಾಗಲಿ ಸಂಭವಿಸಿದವೆಂದು ಯೇಸು ದೂರಲಿಲ್ಲ, ಅಥವಾ, ಅದಕ್ಕೆ ಬಲಿಯಾದವರು ಇತರರಿಗಿಂತ ಹೇಗೂ ಹೆಚ್ಚು ಅಪರಾಧಿಗಳಾಗಿದ್ದಿರಬೇಕೆಂದು ಅವನು ನಂಬಿರಲಿಲ್ಲ. ಆ ಮಾರಕ ದುರ್ಘಟನೆಯು ಕಾಲ ಮತ್ತು ಮುಂಗಾಣದ ಸಂಗತಿಗಳು ಸಂಭವಿಸುವ ಕೇವಲ ಇನ್ನೊಂದು ದೃಷ್ಟಾಂತವು.
ನಾವು ಸಾಯುವ ಸಮಯವನ್ನು ದೇವರು ಮುಂದಾಗಿಯೇ ಗೊತ್ತುಮಾಡಿದ್ದಾನೆ ಎಂಬ ವಿಚಾರವನ್ನು ಬೈಬಲ್ ಎಲ್ಲಿಯೂ ಸಮರ್ಥಿಸುವುದಿಲ್ಲ. ಪ್ರಸಂಗಿ 3:1, 2 ಹೀಗನ್ನುತ್ತದೆ ನಿಜ: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ. ಆಕಾಶದ ಕೆಳಗೆ ನಡಿಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ.” ಆದರೆ ಇಲ್ಲಿ ಸೊಲೊಮೋನನು, ಅಪೂರ್ಣ ಮಾನವರನ್ನು ಬಾಧಿಸುವ ಜೀವ ಮತ್ತು ಮರಣಗಳ ಮುಂದುವರಿಯುವ ಚಕ್ರವನ್ನು ಕೇವಲ ಚರ್ಚಿಸುತ್ತಿದ್ದಾನೆ. ನಾವು ಹುಟ್ಟುತ್ತೇವೆ, ಮತ್ತು ನಮ್ಮ ಸಾಧಾರಣ ಅಪೇಕ್ಷಿತ ಆಯುಷ್ಕಾಲವನ್ನು ಮುಟ್ಟಿದಾಗ—ಸಾಮಾನ್ಯವಾಗಿ 70 ಅಥವಾ 80ರ ವಯಸ್ಸಿನ ನಂತರ—ನಾವು ಸಾಯುತ್ತೇವೆ. ಆದರೂ, ನಾವು ಸಾಯುವ ಸರಿಯಾದ ಗಳಿಗೆಯು, ಬೇಸಾಯಗಾರನು “ನೆಡಲು” ಅಥವಾ “ನೆಟ್ಟದ್ದನ್ನು ಕಿತ್ತುಹಾಕಲು” ನಿರ್ಧರಿಸುವ ಕ್ಷಣಕ್ಕಿಂತ ಹೆಚ್ಚು ನಿಷ್ಕೃಷ್ಟವಾಗಿ ದೇವರಿಂದ ಪೂರ್ವ ನಿರ್ಧರಿತವಾಗಿಲ್ಲ.
ವಾಸ್ತವದಲ್ಲಿ, ಒಬ್ಬ ವ್ಯಕ್ತಿಯು ಅಕಾಲ ಮೃತ್ಯುವಿಗೆ ಗುರಿಯಾಗಬಹುದೆಂದು ಅನಂತರ ತೋರಿಸುತ್ತಾ, ಸೊಲೊಮೋನನು ಅಂದದ್ದು: “ಅಧರ್ಮವನ್ನು ಹೆಚ್ಚಾಗಿ ಆಚರಿಸದಿರು; ಬುದ್ಧಿಹೀನನಾಗಿರಬೇಡ; ಏಕೆ ಅಕಾಲ ಮರಣವನ್ನು ಹೊಂದುವಿ?” (ಪ್ರಸಂಗಿ 7:17) ಒಬ್ಬನ ಮರಣದ ಸಮಯವು ಬದಲಾಗದ ರೀತಿಯಲ್ಲಿ ಪೂರ್ವ ನಿರ್ಧರಿತವಾಗಿದ್ದಲ್ಲಿ, ಈ ಸೂಚನೆಯು ಅರ್ಥವಿಲ್ಲದ್ದಾಗಿರದೇ? ಬೈಬಲ್ ಹೀಗೆ ಅದೃಷ್ಟ ವಾದವನ್ನು ತಿರಸ್ಕರಿಸುತ್ತದೆ. ಈ ವಿಧರ್ಮಿ ಕಲ್ಪನೆಯನ್ನು ಸ್ವೀಕರಿಸಿದ್ದ ಧರ್ಮಭ್ರಷ್ಟ ಇಸ್ರಾಯೇಲ್ಯರು ದೇವರಿಂದ ತೀವ್ರವಾಗಿ ಖಂಡಿಸಲ್ಪಟ್ಟಿದ್ದರು. ಯೆಶಾಯ 65:11 ಅನ್ನುವುದು: “ಆದರೆ ಯೆಹೋವನಾದ ನನ್ನನ್ನು ತೊರೆದು ನನ್ನ ಪವಿತ್ರ ಪರ್ವತವನ್ನು ಮರೆತು ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕ ದೇವತೆಗೆ ಮದ್ಯವನ್ನು ತುಂಬಾ ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗ ಮಾಡುವೆನು.”
ಆದುದರಿಂದ ಆಕಸ್ಮಿಕ ಫಟನೆಗಳು ಮತ್ತು ದುರಂತಗಳಿಗಾಗಿ ಅದೃಷವ್ಟನ್ನು ಹಳಿಯುವುದು ಅಥವಾ ಅದಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿ, ಸ್ವತಃ ದೇವರನ್ನು ದೂರುವುದು ಅದೆಷ್ಟು ಮೂರ್ಖತನ! “ದೇವರು ಪ್ರೀತಿ ಸ್ವರೂಪನು” ಎಂದು ಬೈಬಲ್ ಹೇಳುತ್ತದೆ, ಮತ್ತು ಮಾನವ ದುರ್ದೆಸೆಗೆ ಆತನೇ ಮೂಲ ಕಾರಣನೆಂದು ಆರೋಪ ಹೊರಿಸುವುದು ಈ ಮೂಲಭೂತ ಸತ್ಯಕ್ಕೆ ಪ್ರತಿವಿರುದ್ಧವಾಗಿದೆ.—1 ಯೋಹಾನ 4:8.
ಭವಿಷ್ಯತ್ತಿಗಾಗಿ ದೇವರ ಉದ್ದೇಶಗಳು
ಹಾಗಾದರೆ, ರಕ್ಷಣೆಗಾಗಿ ನಮ್ಮ ಪ್ರತೀಕ್ಷೆಗಳ ಕುರಿತಾಗಿ ಏನು? ತಪ್ಪಿಸಲಾಗದ ಯಾವುದೇ ಒಂದು ಅದೃಷವ್ಟು ನಮ್ಮ ಜೀವಿತಗಳನ್ನು ನಿಯಂತ್ರಿಸುವುದಿಲ್ಲವೆಂಬ ನಿಜತ್ವವು, ಜೀವನವನ್ನು ಗೊತ್ತುಗುರಿಯಿಲ್ಲದೆ ನಾವು ನಡಿಸಬೇಕೆಂದು ಅರ್ಥವೋ? ಅಲ್ಲವೇ ಅಲ್ಲ, ಯಾಕೆಂದರೆ ದೇವರು ಸಾಮಾನ್ಯವಾಗಿ ಮಾನವ ಕುಲದ ಭವಿಷ್ಯವೊಂದನ್ನು ನಿರ್ಧರಿಸಿದ್ದಾನೆ. “ನೀತಿಯು ವಾಸವಾಗಿರುವ” “ಒಂದು ನೂತನ ಭೂಮಿಯ” ನಿರ್ಮಾಣದ ಕುರಿತಾಗಿ ಬೈಬಲ್ ಮಾತಾಡುತ್ತದೆ.—2 ಪೇತ್ರ 3:13.
ಇದನ್ನು ಪೂರೈಸಲಿಕ್ಕಾಗಿ ದೇವರು, ಮಾನವ ಕಾರ್ಯಾಧಿಗಳಲ್ಲಿ ನೇರವಾಗಿ ಹಸ್ತಕ್ಷೇಪವನ್ನು ಮಾಡಲಿದ್ದಾನೆ. “ನಿನ್ನ ರಾಜ್ಯ ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಎಂದು ಹೇಳುವ ಪ್ರಾರ್ಥನೆಯನ್ನು ಪುನಃರುಚ್ಛರಿಸುವ ಮೂಲಕ, ಅದು ಸಂಭವಿಸುವಂತೆ ನೀವು ತಿಳಿಯದೆ ಪ್ರಾರ್ಥಿಸಿರಬಹುದು. (ಮತ್ತಾಯ 6:10) ಈ ರಾಜ್ಯವು, ಪರಲೋಕದಲ್ಲಿ ಸ್ಥಾಪನೆಯಾಗಿರುವ ಒಂದು ನಿಜ ಸರಕಾರವು. ಅದು ಬರುವಂತೆ ಪ್ರಾರ್ಥಿಸುವ ಮೂಲಕ, ಪ್ರಚಲಿತ ಸರಕಾರಗಳಿಂದ ಭೂಮಿಯ ಆಡಳಿತವನ್ನು ಆ ರಾಜ್ಯವು ತಕ್ಕೊಳ್ಳುವುದಕ್ಕಾಗಿಯೇ ನೀವು ಪ್ರಾರ್ಥಿಸುತ್ತೀರಿ.—ದಾನಿಯೇಲ 2:44.
ನಿಮ್ಮ ಸ್ವಂತ ಭವಿಷ್ಯವನ್ನು ಗಳಿಸಿಕೊಳ್ಳುವುದು
ಈ ಗಮನಾರ್ಹ ಘಟನೆಗಳು ನಿಮ್ಮ ಭವಿಷ್ಯವನ್ನು ಪ್ರಭಾವಿಸುವ ವಿಧವು, ಅದೃಷ್ಟದ ಮೇಲೆ ಅಥವಾ ಕಾಲ ಮತ್ತು ಮುಂಗಾಣದ ಸಂಭವಿಸುವಿಕೆಗಳ ಮೇಲೆ ಸಹಾ ಆಧರಿಸದೆ, ನೀವು ಅನುಸರಿಸಲು ಆರಿಸುವ ಮಾರ್ಗದ ಮೇಲೆ ಆಧರಿಸಿದೆ. ಸಿಲೊವಾಮ ಬುರುಜಿನ ಆ ದುರಂತವನ್ನು ನೆನಪಿಸಿಕೊಳ್ಳಿರಿ. ಒಂದು ಮಹತ್ತಾದ ಪಾಠವನ್ನು ಕಲಿಸಲಿಕ್ಕಾಗಿ ಯೇಸು ಆ ವಿಷಾಧ ಘಟನೆಯನ್ನು ಉಪಯೋಗಿಸಿದನು. ಆ ಬುರುಜಿನ ಕುಸಿಯುವಿಕೆಗೆ ಬಲಿಯಾದವರು ಅವರಿಗೆ ಸಂಭವಿಸಿದ ಸಂಕಟದಿಂದ ಪಾರಾಗಲು ಅಶಕ್ತರಾಗಿದ್ದರು. ತುಲನಾತ್ಮಕವಾಗಿ, ಯೇಸುವನ್ನು ಆಲೈಸುತ್ತಿದ್ದವರು ದೈವಿಕ ಅಪ್ರಸನ್ನತೆಯಿಂದ ಉಂಟಾಗುವ ನಾಶನವನ್ನು ಪಾರಾಗ ಶಕ್ತರಿದ್ದರು. ಯೇಸು ಅವರನ್ನು ಎಚ್ಚರಿಸಿದ್ದು: “ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ಹಾಳಾಗಿ ಹೋಗುವಿರಿ.” (ಲೂಕ 13:4, 5) ಅವರು ತಮ್ಮ ಸ್ವಂತ ಭವಿಷ್ಯತ್ತನ್ನು ತಾವಾಗಿಯೇ ಆರಿಸಬಹುದಿತ್ತೆಂಬದು ಸ್ಪಷ್ಟ.
ಅದೇ ಸಂದರ್ಭವು ಇಂದು ನಮಗೆ ನೀಡಲ್ಪಟ್ಟಿರುತ್ತದೆ—ನಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುವಿಕೆಯೇ ಅದು. (ಪಿಲಿಪ್ಪಿಯ 2:12) “ಎಲ್ಲಾ ಮನುಷ್ಯರು . . . ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊಥಿ 2:4) ನಮ್ಮಲ್ಲಿ ಪ್ರತಿಯೊಬ್ಬನೂ ಬಾಧ್ಯತೆಯಿಂದಾಗಿ ಮತ್ತು ಹಿನ್ನೆಲೆಯಿಂದಾಗಿ ಸ್ವಲ್ಪ ಮಟ್ಟಿಗೆ ಬಾಧಿತನಾಗಿದ್ದರೂ, ದೇವರು ನಮಗೆ ಸ್ವತಂತ್ರ ಚಿತ್ತವನ್ನು—ನಮ್ಮ ಜೀವಿತವನ್ನು ಹೇಗೆ ಉಪಯೋಗಿಸ ಬಯಸುತ್ತೇವೆಂಬದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಕೊಟ್ಟಿರುತ್ತಾನೆ. (ಮತ್ತಾಯ 7:13, 14) ಯಾವುದು ಸರಿಯೋ ಅದನ್ನು ಅಥವಾ ಯಾವುದು ತಪ್ಪೋ ಅದನ್ನು ಮಾಡುವ ಸ್ವಾತಂತ್ರ್ಯ ನಮಗಿದೆ. ನಾವು ಯೆಹೋವನೊಂದಿಗೆ ಒಂದು ಮೆಚ್ಚಿಗೆಯ ಸ್ಥಾನವನ್ನು ಗಳಿಸಿ ಜೀವವನ್ನು ಪಡೆದುಕೊಳ್ಳಬಹುದು ಅಥವಾ ಆತನ ವಿರುದ್ಧವಾಗಿ ತಿರುಗಿಬಿದ್ದು ಪ್ರಾಣವನ್ನು ಕಳಕೊಳ್ಳಲೂಬಹುದು.
ಅನೇಕರು ದೇವರಿಂದ ಸ್ವತಂತ್ರರಾಗಿ ಜೀವಿಸುವ ಮಾರ್ಗವನ್ನು ಆರಿಸುತ್ತಾರೆ. ಅವರು ತಮ್ಮ ಜೀವಿತವನ್ನು ಪ್ರಾಪಂಚಿಕ ವಸ್ತುಗಳು, ಸುಖಭೋಗ ಮತ್ತು ಕೀರ್ತಿಯನ್ನು ಬೆನ್ನಟ್ಟುವದಕ್ಕಾಗಿ ಮೀಸಲಾಗಿಡುತ್ತಾರೆ. ಆದರೆ ಯೇಸು ಎಚ್ಚರಿಸಿದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ಹಾಗಾದರೆ ನಮ್ಮ ಜೀವವು ಯಾವುದರ ಮೇಲೆ ಆಧರಿಸಿರುತ್ತದೆ? 1 ಯೋಹಾನ 2:15-17ರಲ್ಲಿ ಬೈಬಲ್ ಉತ್ತರಿಸುವುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. . . . ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಗಳೂ ಗತಿಸಿ ಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”
ಜೀವವನ್ನು ಆರಿಸುವುದು
ದೇವರ ಚಿತ್ತವನ್ನು ನೀವು ನಿಜವಾಗಿಯೂ ಮಾಡುತ್ತೀರೆಂದು ನಿಮಗೆ ಖಾತ್ರಿ ಇರುವುದು ಹೇಗೆ? ಯೇಸು ಘೋಷಿಸಿದ್ದು: “ಒಬ್ಬನೇ ಸತ್ಯ ದೇವರಾದ ನಿನ್ನನ್ನೂ, ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.” (ಯೋಹಾನ 17:3) ಬೈಬಲಿನ ನಿಷ್ಕೃಷ್ಟ ಜ್ಞಾನವು ನಂಬಿಕೆಗೆ ಆಧಾರವನ್ನು ಕೊಡುತ್ತದೆ. “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ನೀವು ಗಳಿಸ ಬೇಕಾದ ಆ ಜ್ಞಾನವು ಸುಲಭವಾಗಿಯೇ ದೊರಕಬಲ್ಲದು. ಬೈಬಲಿನ ಕ್ರಮದ ಅಧ್ಯಯನದ ಮೂಲಕ ಅದನ್ನು ಪಡೆಯುವುದಕ್ಕೆ ಯೆಹೋವನ ಸಾಕ್ಷಿಗಳು ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ.a
ದೇವರನ್ನು ಮೆಚ್ಚಿಸಬೇಕಾದರೆ ಕೆಲವು ಬದಲಾವಣೆಗಳನ್ನು ನೀವು ಮಾಡಲೇಬೇಕು. ನೀಗಿಸಿಕೊಳ್ಳಬೇಕಾದ ಕೆಲವು ದುರಭ್ಯಾಸಗಳು ಅಲ್ಲಿರಬಹುದು ಅಥವಾ ವರ್ಜಿಸಲೇ ಬೇಕಾದ ಅನೈತಿಕ ಪದ್ಧತಿಗಳು ಕೂಡಾ ಇರಬಹುದು. ಆದರೆ ಬದಲಾಗಲು ನಿಮಗೆ ಅಶಕ್ಯವೂ ಎಂಬಂತೆ ಪ್ರಯತ್ನ ಮಾಡುವದನ್ನು ಬಿಟ್ಟುಕೊಡಬೇಡಿರಿ. ವಿಷಯಗಳು ಬದಲಾಗ ಸಾಧ್ಯವಿಲ್ಲವೆಂಬ ವಿಚಾರವು ಅದೃಷ್ಟವಾದದ ಸುಳ್ಳು ಬೋಧನೆಯಿಂದ ಬಂದ ಕೇವಲ ಇನ್ನೊಂದು ಆಲೋಚನೆ. ಯೆಹೋವನ ಸಹಾಯದಿಂದ ಪ್ರತಿಯೊಬ್ಬನಿಗೆ ‘ಅಂತರ್ಯದಲ್ಲಿ ಹೊಸಬನಾಗಲು’ ಮತ್ತು “ನೂತನ ವ್ಯಕ್ತಿತ್ವವನ್ನು” ಗಳಿಸಿಕೊಳ್ಳಲು ಸಾಧ್ಯವಾಗುವುದು. (ರೋಮಾಪುರ 12:2; ಎಫೆಸ 4:22-24) ದೇವರನ್ನು ಮೆಚ್ಚಿಸಲು ನೀವು ಮಾಡುವ ಪ್ರಯತ್ನಗಳು ಗಮನಕ್ಕೆ ಬರದಿರಲಾರವು. ದೇವರು ತನ್ನ ಚಿತ್ತವನ್ನು ಮಾಡುವವರನ್ನು ಆಶೀರ್ವದಿಸಲು ಸದಾ ಸಿದ್ಧನಾಗಿರುತ್ತಾನೆ.
ಬೈಬಲನ್ನು ಕಲಿಯುವುದರಿಂದ ನಿಮ್ಮೆಲ್ಲಾ ಸಮಸ್ಯೆಗಳು ಪರಿಹರಿಸಲ್ಪಡಲಾರವೆಂಬದು ಗ್ರಾಹ್ಯ. ದೇವರ ನಿಜ ಸೇವಕರೂ ಇತರರಂತೆ, ಅಪಘಾತಗಳಿಗೆ ಮತ್ತು ಇತರ ಪ್ರತಿಕೂಲ ಪರಿಸ್ಥಿತಿಗಳಿಗೆ ಗುರಿಯಾಗುತ್ತಾರೆ. ಆದರೂ, ಆ ಪ್ರತಿಕೂಲ ಸ್ಥಿತಿಯನ್ನು ನಿಭಾಯಿಸಿಕೊಳ್ಳಲು ಬೇಕಾದ ವಿವೇಕವನ್ನು ದೇವರು ಕೊಡಬಲ್ಲನು. (ಯಾಕೋಬ 1:5) ದೇವರೊಂದಿಗೆ ಒಬ್ಬನಿಗೆ ಒಂದು ಸುಸಂಬಂಧವಿದೆ ಎಂದು ತಿಳಿಯುವ ಸಂತೋಷವು ಕೂಡಾ ಅಲ್ಲಿರುವುದು. “ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು” ಎನ್ನುತ್ತದೆ ಜ್ಞಾನೋಕ್ತಿ 16:20.
ದೇವರ ರಾಜ್ಯದ ಕೆಳಗೆ ಪುನಃಸ್ಥಾಪನೆಗೊಂಡ ಪರದೈಸದಲ್ಲಿ, ಕಾಲ ಮತ್ತು ಮುಂಗಾಣದ ಸಂಭವಗಳಿಂದ ನಾವು ಇನ್ನು ಮುಂದೆ ಬೆದರಿಸಲ್ಪಡಲಾರೆವು. ಪ್ರಸ್ತುತವಾಗಿ ಮಾನವ ಸಂತೋಷವನ್ನು ಕಳೆಗುಂದಿಸುವ ಎಲ್ಲಾ ಸಂಗತಿಗಳನ್ನು ದೇವರು ನಿಶ್ಚಯವಾಗಿ ತೆಗೆದು ಹಾಕುವನು. “ದೇವರು [ನಮ್ಮ] ಕಣ್ಣೀರನ್ನೆಲ್ಲಾ ಒರಸಿ ಬಿಡುವನು. ಇನ್ನು ಮರಣವಿರುವುದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ” ಎಂದು ಬೈಬಲ್ ವಾಗ್ದಾನಿಸುತ್ತದೆ. (ಪ್ರಕಟನೆ 21:4) ದುರ್ಘಟನೆಗಳಿಗೆ ಬಲಿಯಾದ ಅಸಂಖ್ಯಾತ ಜನರು ಒಂದು ಪುನರುತ್ಥಾನವನ್ನು ಪಡೆದು ಎದ್ದುಬರುವರು.—ಯೋಹಾನ 5:28, 29.
ಈ ಮಹಿಮಾಯುಕ್ತ ಭವಿಷ್ಯವನ್ನು ನೀವು ಬಾಧ್ಯವಾಗಿ ಹೊಂದುವಿರೋ? ಇಸ್ರಾಯೇಲ್ಯರು ವಾಗ್ದಾನ ದೇಶದೊಳಗೆ ಪ್ರವೇಶ ಮಾಡಲಿಕ್ಕಿದ್ದಾಗ, ಮೋಶೆಯು ಅವರಿಗಂದದ್ದು: “ನಾನು ಜೀವ ಮರಣಗಳನ್ನೂ ಆಶೀರ್ವಾದ ಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದೇನ್ದೆ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ. ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತುಗಳಿಗೆ ವಿಧೇಯರಾಗಿರ್ರಿ. ಆತನನ್ನು ಹೊಂದಿಕೊಂಡೇ ಇರ್ರಿ. ನೀವು ಬದುಕಿ ಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.”—ಧರ್ಮೋಪದೇಶಕಾಂಡ 30:19, 20.
ಇಲ್ಲ, ನಾವು ಅದೃಷ್ಟದ ನಿರ್ದಯೆಯ ಹಸ್ತದಡಿಯಲ್ಲಿ ಒತ್ತೆಯಾಗಿರುವ ಸಹಾಯಶೂನ್ಯ ದಾಸರಲ್ಲ. ನಿಮ್ಮ ಭವಿಷ್ಯದ ಸಂತೋಷವು, ನಿಮ್ಮ ನಿತ್ಯ ಜೀವವು ನಿಶ್ಚಯವಾಗಿ ನಿಮ್ಮ ಕೈಯಲ್ಲೇ ಇದೆ. ಆದುದರಿಂದ ಜೀವವನ್ನು ಆರಿಸಿಕೊಳ್ಳುವಂತೆ ನಾವು ನಿಮ್ಮನ್ನು ಪ್ರೇರೇಪಿಸುತ್ತೇವೆ. (w91 10/15)
[ಅಧ್ಯಯನ ಪ್ರಶ್ನೆಗಳು]
a ಅಂಥ ಒಂದು ಅಧ್ಯಯನವನ್ನು ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯುವ ಮೂಲಕ ಏರ್ಪಡಿಸ ಸಾಧ್ಯವಿದೆ.
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅದೃಷ್ಟದ ವಿಧರ್ಮಿ ಕಲ್ಪನೆಯನ್ನು ಅವಲಂಬಿಸಿದ ಧರ್ಮಭ್ರಷ್ಟ ಇಸ್ರಾಯೇಲ್ಯರು ದೇವರಿಂದ ತೀವ್ರವಾಗಿ ಖಂಡಿಸಲ್ಪಟ್ಟರು