ಬೈಬಲು ಅದೃಷ್ಟದಲ್ಲಿ ನಂಬಿಕೆಯನ್ನು ಕಲಿಸುತ್ತದೊ?
ಮಿಥ್ಯಾರೋಪ! ಅಪವಾದ! ಸಮಾಜದ ಒಬ್ಬ ಗೌರವಸ್ಥ ಸದಸ್ಯನು, ತನ್ನ ಹೆಸರು ಅಥವಾ ಖ್ಯಾತಿಯು ಒಂದು ಸುಳ್ಳು ವರದಿಯಿಂದ ಹಾಳುಮಾಡಲ್ಪಟ್ಟಿದೆಯೆಂದು ನಂಬುವಾಗ, ವಿಷಯಗಳನ್ನು ಸರಿಪಡಿಸುವಂತೆ ನಿರ್ಬಂಧಿಸಲ್ಪಡುವ ಅನಿಸಿಕೆ ಅವನಿಗಾಗುತ್ತದೆ. ಆ ಮಿಥ್ಯಾರೋಪಕ್ಕೆ ಜವಾಬ್ದಾರರಾಗಿರುವವರ ವಿರುದ್ಧ ಅವನು ನ್ಯಾಯಬದ್ಧ ಕ್ರಮವನ್ನೂ ಕೈಕೊಳ್ಳಬಹುದು.
ಸರಿ, ಅದೃಷ್ಟವಾದವು ವಾಸ್ತವವಾಗಿ ಸರ್ವಶಕ್ತ ದೇವರ ವಿರುದ್ಧವಾದ ಅಪವಾದವಾಗಿದೆ. ಮಾನವಕುಲವನ್ನು ಬಾಧಿಸುವ ಎಲ್ಲ ದುರಂತಗಳು ಹಾಗೂ ದುರ್ಘಟನೆಗಳಿಗೆ ದೇವರೇ ವೈಯಕ್ತಿಕವಾಗಿ ಜವಾಬ್ದಾರನೆಂದು, ಅದೃಷ್ಟವಾದದ ಸಿದ್ಧಾಂತವು ವಾದಿಸುತ್ತದೆ. ನೀವು ಅದೃಷ್ಟದಲ್ಲಿ ನಂಬಿಕೆಯನ್ನಿಡುವುದಾದರೆ, ಒಂದು ಕಾರ್ಯ ಸೂಚಿಯನ್ನು ವಿಶ್ವದ ಪರಮಾಧಿಕಾರಿಯು ಸಂಕಲ್ಪಿಸಿದ್ದಾನೆಂದು ನೀವು ಭಾವಿಸಿಕೊಳ್ಳಬಹುದು. ಅದು ಮುಂದೆ ಬರೆದಿರುವಂತೆ ಓದುತ್ತದೆ: ‘ಇಂದು, ಜಾನ್ ಒಂದು ಕಾರಿನ ಅಪಘಾತದಲ್ಲಿ ಗಾಯಗೊಳ್ಳುವನು, ಫಾಟೂ ಎಂಬವಳಿಗೆ ಮಲೇರಿಯ ತಗಲುವುದು, ಮಾಮಾಡೂವಿನ ಮನೆಯು ಬಿರುಗಾಳಿಯೊಂದರಲ್ಲಿ ನಾಶವಾಗುವುದು’! ಇಂತಹ ಒಬ್ಬ ದೇವರಿಗೆ ಸೇವೆಸಲ್ಲಿಸಲು ನೀವು ನಿಜವಾಗಿಯೂ ಪ್ರೇರೇಪಿಸಲ್ಪಡುವುದು ಸಾಧ್ಯವೊ?
‘ಆದರೆ ನಮ್ಮ ದುರದೃಷ್ಟಗಳಿಗೆ ದೇವರು ಜವಾಬ್ದಾರನಾಗಿಲ್ಲವಾದರೆ, ಯಾರು ಜವಾಬ್ದಾರನು?’ ಎಂಬುದಾಗಿ ಅದೃಷ್ಟದಲ್ಲಿ ನಂಬಿಕೆಯನ್ನಿಡುವವರು ಕೇಳುತ್ತಾರೆ. ಹಿಂದಿನ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಯುವ ಪುರುಷನಾದ ಊಸ್ಮಾನ್, ಸ್ವತಃ ಇದರ ಕುರಿತು ಕುತೂಹಲಪಟ್ಟನು. ಆದರೆ ಸತ್ಯವನ್ನು ತಲಪಲು ಅವನಿಗೆ ಅಂದಾಜು ಮಾಡುವ ಅಥವಾ ಊಹಿಸುವ ಅಗತ್ಯವಿರಲಿಲ್ಲ. ದೇವರು ತನ್ನನ್ನು, ತನ್ನ ಪ್ರೇರಿತ ವಚನವಾದ ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ಬೋಧನೆಗಳ ಮೂಲಕ ನಿರ್ದೋಷಿಯೆಂದು ಪ್ರತಿಪಾದಿಸಿಕೊಂಡಿದ್ದಾನೆಂದು ಅವನು ತಿಳಿದುಕೊಂಡನು. (2 ತಿಮೊಥೆಯ 3:16) ಹಾಗಾದರೆ, ಈ ವಿಷಯದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ನಾವು ಪರಿಗಣಿಸೋಣ.
ತಪ್ಪು ಯಾರದ್ದು?
ನೆರೆಗಳು, ಬಿರುಗಾಳಿಗಳು, ಭೂಕಂಪಗಳು—ಇಂತಹ ಮಹಾದುರಂತಗಳು ಅನೇಕ ವೇಳೆ ದೇವರ ಕ್ರಿಯೆಗಳೆಂದು ಕರೆಯಲ್ಪಡುತ್ತವೆ. ಆದರೂ ದೇವರು ಇಂತಹ ವಿಪತ್ತುಗಳನ್ನು ಆಗಿಸುತ್ತಾನೆಂದು ಬೈಬಲು ಸೂಚಿಸುವುದಿಲ್ಲ. ಶತಮಾನಗಳ ಹಿಂದೆ ಮಧ್ಯ ಪೂರ್ವದಲ್ಲಿ ಸಂಭವಿಸಿದ ಒಂದು ದುರಂತವನ್ನು ಪರಿಗಣಿಸಿರಿ. ಈ ಮಹಾದುರಂತದಲ್ಲಿ ಬದುಕಿ ಉಳಿದ ಏಕೈಕ ವ್ಯಕ್ತಿಯು ಹೀಗೆ ವರದಿಸಿದನೆಂದು ಬೈಬಲು ನಮಗೆ ಹೇಳುತ್ತದೆ: “ದೇವರ ಬೆಂಕಿ [ಅನೇಕ ವೇಳೆ ಸಿಡಿಲನ್ನು ಅರ್ಥೈಸುವ ಹೀಬ್ರು ಅಭಿವ್ಯಕ್ತಿ] ಆಕಾಶದಿಂದ ಬಿದ್ದು ಕುರಿಗಳನ್ನೂ ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ.”—ಯೋಬ 1:16.
ಬೆಂಕಿಗೆ ದೇವರು ಜವಾಬ್ದಾರನಾಗಿದ್ದನೆಂದು ಈ ಗಾಬರಿಗೊಂಡ ಮನುಷ್ಯನು ನೆನಸಿದ್ದಿರಬಹುದಾದರೂ, ಆತನು ದೋಷಕ್ಕೆ ಕಾರಣನಾಗಿರಲಿಲ್ಲವೆಂದು ಬೈಬಲು ತೋರಿಸುತ್ತದೆ. ಸ್ವತಃ ಯೋಬ 1:7-12ನ್ನು ಓದಿರಿ, ಮತ್ತು ಸಿಡಿಲು ದೇವರಿಂದಲ್ಲ, ಆದರೆ ಆತನ ವೈರಿ, ಪಿಶಾಚನಾದ ಸೈತಾನನಿಂದ ಉಂಟುಮಾಡಲ್ಪಟ್ಟಿತ್ತೆಂದು ನೀವು ತಿಳಿದುಕೊಳ್ಳುವಿರಿ! ಎಲ್ಲ ದುರ್ಘಟನೆಗಳು ನೇರವಾಗಿ ಸೈತಾನನಿಂದ ಉಂಟುಮಾಡಲ್ಪಡುತ್ತವೆ ಎಂದಲ್ಲ. ಆದರೆ, ಸ್ಪಷ್ಟವಾಗಿಯೇ, ದೇವರನ್ನು ದೂಷಿಸಲು ಯಾವ ಕಾರಣವೂ ಇರುವುದಿಲ್ಲ.
ವಾಸ್ತವದಲ್ಲಿ, ವಿಷಯಗಳು ತಪ್ಪಾಗಿ ಪರಿಣಮಿಸುವಾಗ ಅನೇಕ ವೇಳೆ ಜನರು ದೋಷಕ್ಕೆ ಕಾರಣರಾಗಿದ್ದಾರೆ. ಶಾಲೆಯಲ್ಲಿ, ಕೆಲಸದಲ್ಲಿ, ಅಥವಾ ಸಾಮಾಜಿಕ ಸಂಬಂಧಗಳಲ್ಲಿನ ಸೋಲುಗಳು, ಪ್ರಯತ್ನ ಹಾಗೂ ಒಳ್ಳೆಯ ತರಬೇತಿಯ ಕೊರತೆಯಿಂದ ಅಥವಾ ಬಹುಶಃ ಇತರರಿಗಾಗಿ ಪರಿಗಣನೆಯ ಒಂದು ಕೊರತೆಯಿಂದ ಫಲಿಸಬಹುದು. ಅಂತೆಯೇ, ಅಸ್ವಸ್ಥತೆಗಳು, ಅಪಘಾತಗಳು, ಮತ್ತು ಮರಣಗಳು ಅಸಡ್ಡೆಯ ಪರಿಣಾಮವಾಗಿರಬಹುದು. ಅಷ್ಟೇಕೆ, ವಾಹನವನ್ನು ಚಲಾಯಿಸುವಾಗ ಕೇವಲ ಆಸನ ಪಟ್ಟಿಯನ್ನು (ಸೀಟ್ಬೆಲ್ಟ್) ಧರಿಸಿಕೊಳ್ಳುವುದು, ಕಾರಿನ ಒಂದು ಅಪಘಾತದಲ್ಲಿ ಒಬ್ಬನು ಕೊಲ್ಲಲ್ಪಡುವುದರ ಸಂಭವನೀಯತೆಯನ್ನು ಮಹತ್ತರವಾಗಿ ಕಡಿಮೆಗೊಳಿಸುತ್ತದೆ. ಬದಲಿಸಲಾಗದ “ಅದೃಷ್ಟ”ವು ವಿಷಯಗಳನ್ನು ನಿಯಂತ್ರಿಸುತ್ತಿದ್ದಲ್ಲಿ, ಒಂದು ಆಸನ ಪಟ್ಟಿಯು ಯಾವ ವ್ಯತ್ಯಾಸವನ್ನೂ ಮಾಡುತ್ತಿರಲಿಲ್ಲ. ಯೋಗ್ಯವಾದ ವೈದ್ಯಕೀಯ ಆರೈಕೆ ಹಾಗೂ ನೈರ್ಮಲ್ಯವು ಕೂಡ, ಎದ್ದುಕಾಣುವಂತಹ ರೀತಿಯಲ್ಲಿ ಅಕಾಲಿಕ ಮರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ. “ದೈವ ಘಟನೆಗಳು” ಎಂಬುದಾಗಿ ಸಾಮಾನ್ಯವಾಗಿ ಹೆಸರಿಸಲ್ಪಟ್ಟಿರುವ ಕೆಲವು ವಿಪತ್ತುಗಳು ಸಹ, ವಾಸ್ತವದಲ್ಲಿ ಮನುಷ್ಯನ ಕ್ರಿಯೆಗಳು—ಭೂಮಿಯ ವಿಷಯದಲ್ಲಿ ಮನುಷ್ಯನ ಅವ್ಯವಸ್ಥಿತ ನಿರ್ವಹಣೆಯ ದುಃಖಕರ ಪರಂಪರೆ—ಆಗಿವೆ.—ಹೋಲಿಸಿ ಪ್ರಕಟನೆ 11:18.
“ಕಾಲವೂ ಮುನ್ನರಿತಿರದ ಸಂಭವವೂ”
ಕಾರಣಗಳು ಸ್ಪಷ್ಟವಾಗಿ ವ್ಯಕ್ತವಾಗದ ಅನೇಕ ದುಃಖಕರ ಘಟನೆಗಳಿವೆ ಎಂಬುದು ನಿಜ. ಆದರೂ, ಪ್ರಸಂಗಿ 9:11ರಲ್ಲಿ ಬೈಬಲ್ ಹೇಳುವುದನ್ನು ಗಮನಿಸಿರಿ: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ [“ಕಾಲವೂ ಮುನ್ನರಿತಿರದ ಸಂಭವವೂ,” NW] ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು.” (ಓರೆಅಕ್ಷರಗಳು ನಮ್ಮವು.) ಆದುದರಿಂದ ಸೃಷ್ಟಿಕರ್ತನು ಅಪಘಾತಗಳ ಕಾರಣನೆಂದು ಅಥವಾ ಅಪಘಾತಗಳ ಬಲಿಪಶುಗಳು ಯಾವುದೊ ವಿಧದಲ್ಲಿ ಶಿಕ್ಷಿಸಲ್ಪಡುತ್ತಿದ್ದಾರೆಂದು ನಂಬಲು ಯಾವ ಕಾರಣವೂ ಇರುವುದಿಲ್ಲ.
ಸ್ವತಃ ಯೇಸು ಕ್ರಿಸ್ತನು ಅದೃಷ್ಟವಾದಾತ್ಮಕ ವಿವೇಚನೆಯ ವಿರುದ್ಧ ವಾದಿಸಿದನು. ತನ್ನ ಕೇಳುಗರಿಗೆ ಚಿರಪರಿಚಿತವಾಗಿದ್ದ ಒಂದು ದುರಂತಕ್ಕೆ ಸೂಚಿಸುತ್ತಾ, ಯೇಸು ಕೇಳಿದ್ದು: “ಸಿಲೊವಾಮಿನಲ್ಲಿ ಬುರುಜುಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳೆಂದು ಭಾವಿಸುತ್ತೀರೋ? ಹಾಗಲ್ಲವೆಂದು ನಿಮಗೆ ಹೇಳುತ್ತೇನೆ.” (ಲೂಕ 13:4, 5) ಯೇಸು ವಿಪತ್ತನ್ನು ಸ್ಪಷ್ಟವಾಗಿ ದೇವರ ಹಸ್ತಕ್ಷೇಪಕ್ಕಲ್ಲ, ಬದಲಿಗೆ ‘ಕಾಲ ಮತ್ತು ಮುನ್ನರಿತಿರದ ಸಂಭವ’ಕ್ಕೆ ಆರೋಪಿಸಿದನು.
ಅಪರಿಪೂರ್ಣತೆಯ ವಿಧ್ವಂಸಕ ಪರಿಣಾಮಗಳು
ಹಾಗಾದರೆ, ವಿವರಿಸಲಾಗದ ಮರಣಗಳು ಹಾಗೂ ಅಸ್ವಸ್ಥತೆಗಳ ಕುರಿತೇನು? ಮಾನವ ಪರಿಸ್ಥಿತಿಯ ಕುರಿತು ಬೈಬಲು ಈ ನೇರವಾದ ವರ್ಣನೆಯನ್ನು ನೀಡುತ್ತದೆ: ‘ಆದಾಮನಲ್ಲಿ ಎಲ್ಲರೂ ಸಾಯುತ್ತಿದ್ದಾರೆ.’ (1 ಕೊರಿಂಥ 15:22) ನಮ್ಮ ಪೂರ್ವಜನಾದ ಆದಾಮನು ಅವಿಧೇಯತೆಯ ಪಥವನ್ನು ಮೆಟ್ಟಿದ ಸಮಯದಿಂದ ಮರಣವು ಮಾನವಕುಲವನ್ನು ಬಾಧಿಸಿದೆ. ದೇವರು ಎಚ್ಚರಿಸಿದಂತೆಯೇ, ಆದಾಮನು ತನ್ನ ಸಂತಾನಕ್ಕೆ ಮರಣದ ಪರಂಪರೆಯನ್ನು ಬಿಟ್ಟುಹೋದನು. (ಆದಿಕಾಂಡ 2:17; ರೋಮಾಪುರ 5:12) ಹಾಗಾದರೆ, ಕಟ್ಟಕಡೆಗೆ, ಎಲ್ಲ ಅಸ್ವಸ್ಥತೆಗಳನ್ನು ನಮ್ಮ ಸಾಮಾನ್ಯ ಪೂರ್ವಜನಾದ ಆದಾಮನಿಗೆ ಪತ್ತೆಹಚ್ಚಸಾಧ್ಯವಿದೆ. ಪಿತ್ರಾರ್ಜಿತವಾಗಿ ಪಡೆದ ನಮ್ಮ ಬಲಹೀನತೆಗಳಿಗೆ ನಾವು ಜೀವನದಲ್ಲಿ ಅನುಭವಿಸುವ ನಿರಾಶೆಗಳು ಮತ್ತು ಸೋಲುಗಳ ಸಂಬಂಧದಲ್ಲಿಯೂ ಹೆಚ್ಚನ್ನು ಮಾಡಲಿಕ್ಕಿದೆ.—ಕೀರ್ತನೆ 51:5.
ಬಡತನದ ಸಮಸ್ಯೆಯನ್ನು ಪರಿಗಣಿಸಿರಿ. ತಮ್ಮ ಕಷ್ಟಕರ ಅಸ್ತಿತ್ವಕ್ಕೆ ತಮ್ಮನ್ನು ಅಧೀನಪಡಿಸಿಕೊಳ್ಳುವಂತೆ, ಅದೃಷ್ಟದಲ್ಲಿನ ನಂಬಿಕೆಯು ಅನೇಕ ವೇಳೆ ಕಷ್ಟಾನುಭವಿಸುವವರನ್ನು ಉತ್ತೇಜಿಸಿದೆ. ‘ಇದು ನಮ್ಮ ವಿಧಿ’ ಎಂದು ಅವರು ನಂಬುತ್ತಾರೆ. ಆದರೆ, ಇದಕ್ಕೆ ಅದೃಷ್ಟವಲ್ಲ, ಮಾನವ ಅಪರಿಪೂರ್ಣತೆ ದೂಷಿಸಲ್ಪಡಬೇಕೆಂದು ಬೈಬಲು ತೋರಿಸುತ್ತದೆ. ಕೆಲವರು, ಸೋಮಾರಿತನ ಅಥವಾ ಸಂಪನ್ಮೂಲಗಳ ಅವ್ಯವಸ್ಥಿತ ನಿರ್ವಹಣೆಯ ಮೂಲಕ, ತಾವು ‘ಏನು ಬಿತ್ತಿರುತ್ತಾರೊ ಅದನ್ನು ಕೊಯ್ಯು’ವಾಗ ಬಡವರಾಗುತ್ತಾರೆ. (ಗಲಾತ್ಯ 6:7; ಜ್ಞಾನೋಕ್ತಿ 6:10, 11) ಅಗಣಿತ ಕೋಟಿಗಟ್ಟಲೆ ಜನರು ಬಡತನದಲ್ಲಿ ಜೀವಿಸುತ್ತಾರೆ ಏಕೆಂದರೆ ಅವರು ಅಧಿಕಾರದಲ್ಲಿರುವ ಧನಲೋಭಿ ಜನರಿಂದ ಬಲಿಪಶುಗಳಾಗಿಸಲ್ಪಟ್ಟಿದ್ದಾರೆ. (ಹೋಲಿಸಿ ಯಾಕೋಬ 2:6.) “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆಂದು ಬೈಬಲು ಹೇಳುತ್ತದೆ. (ಪ್ರಸಂಗಿ 8:9) ದೇವರಿಗೆ ಅಥವಾ ಅದೃಷ್ಟಕ್ಕೆ ಸಕಲ ಬಡತನವನ್ನು ಆರೋಪಿಸಲು ಯಾವ ಪ್ರಮಾಣವೂ ಇರುವುದಿಲ್ಲ.
ಅದೃಷ್ಟದಲ್ಲಿನ ನಂಬಿಕೆ—ಅದರ ಹಾನಿಕಾರಕ ಪರಿಣಾಮಗಳು
ವಿಶ್ವಾಸಿಗಳ ಮೇಲೆ ಅದೃಷ್ಟವಾದವು ಬೀರಸಾಧ್ಯವಿರುವ ಪರಿಣಾಮವು, ಅದೃಷ್ಟದಲ್ಲಿನ ನಂಬಿಕೆಯ ವಿರುದ್ಧವಿರುವ ಮತ್ತೊಂದು ಮನವೊಲಿಸುವಂತಹ ವಾದವಾಗಿದೆ. ಯೇಸು ಕ್ರಿಸ್ತನು ಹೇಳಿದ್ದು: “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು.” (ಮತ್ತಾಯ 7:17) ಅದೃಷ್ಟವಾದದ ಒಂದು “ಫಲವನ್ನು”—ಜನರಲ್ಲಿರುವ ಹೊಣೆಗಾರಿಕೆಯ ಪ್ರಜ್ಞೆಯನ್ನು ಅದು ಪ್ರಭಾವಿಸುವ ವಿಧವನ್ನು ನಾವು ಪರಿಗಣಿಸೋಣ.
ವೈಯಕ್ತಿಕ ಹೊಣೆಗಾರಿಕೆಯ ಒಂದು ಹಿತಕರವಾದ ಪ್ರಜ್ಞೆಯು ಪ್ರಾಮುಖ್ಯವಾಗಿದೆ. ಇದು, ತಮ್ಮ ಕುಟುಂಬಗಳಿಗಾಗಿ ಹೆತ್ತವರು ಒದಗಿಸುವಂತೆ, ತಮ್ಮ ಕೆಲಸಗಳನ್ನು ಕಾರ್ಮಿಕರು ಶುದ್ಧಾಂತಃಕರಣದಿಂದ ಪೂರೈಸುವಂತೆ, ಒಂದು ಗುಣಮಟ್ಟದ ಉತ್ಪಾದನೆಯನ್ನು ತಯಾರಕರು ಒದಗಿಸುವಂತೆ ಪ್ರಚೋದಿಸುವ ಸಂಗತಿಗಳಲ್ಲಿ ಒಂದಾಗಿದೆ. ಅದೃಷ್ಟದಲ್ಲಿನ ನಂಬಿಕೆಯು ಆ ಪ್ರಜ್ಞೆಯನ್ನು ಜಡಗೊಳಿಸಬಹುದು. ಉದಾಹರಣೆಗೆ, ಒಬ್ಬ ಮನುಷ್ಯನ ಕಾರಿನಲ್ಲಿ, ದೋಷಯುಕ್ತವಾದ ಸ್ಟೀಯರಿಂಗ್ ವ್ಹೀಲ್ ಇದೆಯೆಂದು ಇಟ್ಟುಕೊಳ್ಳಿರಿ. ಅವನಲ್ಲಿ ಹೊಣೆಗಾರಿಕೆಯ ಒಂದು ತೀವ್ರವಾದ ಪ್ರಜ್ಞೆಯಿರುವಲ್ಲಿ, ತನ್ನ ಸ್ವಂತ ಜೀವ ಹಾಗೂ ತನ್ನ ಪ್ರಯಾಣಿಕರ ಜೀವಗಳಿಗಾಗಿರುವ ಚಿಂತೆಯಿಂದ ಅವನು ಅದನ್ನು ದುರಸ್ತುಗೊಳಿಸುತ್ತಾನೆ. ಇನ್ನೊಂದು ಕಡೆಯಲ್ಲಿ ಅದೃಷ್ಟದಲ್ಲಿ ನಂಬಿಕೆಯನ್ನಿಡುವವನಾದರೊ, ಅದು ‘ದೇವರ ಚಿತ್ತ’ವಾಗಿದ್ದಲ್ಲಿ ಮಾತ್ರ ವಾಹನದ ನಿಂತುಹೋಗುವಿಕೆಯು ಸಂಭವಿಸುವುದೆಂದು ವಿವೇಚಿಸುತ್ತಾ, ಗಂಡಾಂತರವನ್ನು ಅಲಕ್ಷಿಸಬಹುದು!
ಹೌದು, ಅದೃಷ್ಟದಲ್ಲಿನ ನಂಬಿಕೆಯು, ಅಜಾಗರೂಕತೆ, ಸೋಮಾರಿತನ, ಒಬ್ಬನ ಕ್ರಿಯೆಗಳಿಗೆ ಹೊಣೆಗಾರಿಕೆಯನ್ನು ಅಂಗೀಕರಿಸಲು ತಪ್ಪುವುದು, ಮತ್ತು ಇತರ ಹಲವಾರು ನಕಾರಾತ್ಮಕ ಗುಣಗಳನ್ನು ಸುಲಭವಾಗಿ ಪ್ರವರ್ಧಿಸಬಹುದು.
ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಒಂದು ತಡೆಯೊ?
ಎಲ್ಲಕ್ಕಿಂತ ಅತ್ಯಂತ ಹಾನಿಕಾರಕವಾಗಿ, ಅದೃಷ್ಟದಲ್ಲಿನ ನಂಬಿಕೆಯು, ದೇವರ ಕಡೆಗಿನ ಒಬ್ಬನ ಹೊಣೆಗಾರಿಕೆಯ ಅಥವಾ ಹಂಗಿನ ಪ್ರಜ್ಞೆಯನ್ನು ನಿಗ್ರಹಿಸಬಲ್ಲದು. (ಪ್ರಸಂಗಿ 12:13) “ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದು”ಕೊಳ್ಳುವಂತೆ ಕೀರ್ತನೆಗಾರನು ಸಕಲ ಮಾನವಕುಲಕ್ಕೆ ಪ್ರೇರೇಪಣೆ ನೀಡುತ್ತಾನೆ. (ಕೀರ್ತನೆ 34:8, NW) ತನ್ನ ಒಳ್ಳೆಯತನವನ್ನು ಅನುಭವಿಸಲಿರುವವರಿಗಾಗಿ ದೇವರು ನಿರ್ದಿಷ್ಟ ಆವಶ್ಯಕತೆಗಳನ್ನು ಸ್ಥಾಪಿಸುತ್ತಾನೆ.—ಕೀರ್ತನೆ 15:1-5.
ಅಂತಹ ಒಂದು ಆವಶ್ಯಕತೆಯು ಪಶ್ಚಾತ್ತಾಪವಾಗಿದೆ. (ಅ. ಕೃತ್ಯಗಳು 3:19; 17:30) ಅದು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಬೇಕಾದ ಬದಲಾವಣೆಗಳನ್ನು ಮಾಡುವುದನ್ನು ಒಳಗೊಳ್ಳುತ್ತದೆ. ಅಪರಿಪೂರ್ಣ ಮಾನವರೋಪಾದಿ, ನಾವು ಪಶ್ಚಾತ್ತಾಪ ಪಡಬೇಕಾದ ವಿಷಯಗಳು ಹೇರಳವಾಗಿವೆ. ಆದರೆ ತಾನು ಅದೃಷ್ಟದ ನಿಸ್ಸಹಾಯಕ ಬಲಿಪಶುವೆಂದು ವ್ಯಕ್ತಿಯೊಬ್ಬನು ನಂಬುವುದಾದರೆ, ಪಶ್ಚಾತ್ತಾಪ ಪಡಬೇಕೆಂಬ ಅನಿಸಿಕೆಯಾಗುವುದು ಅಥವಾ ತನ್ನ ತಪ್ಪುಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದು ಕಷ್ಟಕರ.
ದೇವರ ಕುರಿತು ಕೀರ್ತನೆಗಾರನು ಹೇಳಿದ್ದು: “ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ.” (ಕೀರ್ತನೆ 63:3) ಆದರೂ, ಅದೃಷ್ಟದಲ್ಲಿನ ನಂಬಿಕೆಯು, ದೇವರು ತಮ್ಮ ಸಂಕಟದ ಮೂಲನಾಗಿದ್ದಾನೆಂದು ಕೋಟಿಗಟ್ಟಲೆ ಜನರಿಗೆ ಮನಗಾಣಿಸಿದೆ. ಸ್ವಾಭಾವಿಕವಾಗಿ, ಇದು ಸೃಷ್ಟಿಕರ್ತನೊಂದಿಗೆ ನಿಜವಾಗಿಯೂ ಆಪ್ತವಾದ ಸಂಬಂಧವನ್ನು ತಾವು ಪಡೆದುಕೊಂಡಿರುವುದಕ್ಕೆ ಬಾಗಿಲನ್ನು ಮುಚ್ಚಿಬಿಡುತ್ತಾ, ಆತನ ವಿರುದ್ಧ ಅನೇಕರನ್ನು ರೇಗಿಸಿದೆ. ಎಷ್ಟೆಂದರೂ, ನಿಮ್ಮ ಎಲ್ಲ ಸಮಸ್ಯೆಗಳು ಹಾಗೂ ಪರೀಕ್ಷೆಗಳನ್ನು ಉಂಟುಮಾಡುವವನಾಗಿ ನೀವು ವೀಕ್ಷಿಸಿರುವ ವ್ಯಕ್ತಿಗಾಗಿ ಪ್ರೀತಿಯು ನಿಮ್ಮಲ್ಲಿ ಹೇಗೆ ಮೂಡಸಾಧ್ಯವಿದೆ? ಹೀಗೆ ಅದೃಷ್ಟವಾದವು ದೇವರು ಮತ್ತು ಮನುಷ್ಯನ ನಡುವೆ ಒಂದು ತಡೆಯನ್ನು ನಿರ್ಮಿಸುತ್ತದೆ.
ಅದೃಷ್ಟದ ದಬ್ಬಾಳಿಕೆಯಿಂದ ಮುಕ್ತಗೊಳಿಸಲ್ಪಟ್ಟದ್ದು
ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಯುವ ಊಸ್ಮಾನ್, ಒಮ್ಮೆ ಅದೃಷ್ಟದಲ್ಲಿನ ನಂಬಿಕೆಯಿಂದ ದಾಸತ್ವಕ್ಕೊಳಗಾಗಿದ್ದನು. ಹಾಗಿದ್ದರೂ, ಬೈಬಲಿನ ಬೆಳಕಿನಲ್ಲಿ ಅವನ ಆಲೋಚನೆಯನ್ನು ಪರಿಶೀಲಿಸುವಂತೆ ಯೆಹೋವನ ಸಾಕ್ಷಿಗಳು ಅವನಿಗೆ ಸಹಾಯ ಮಾಡಿದಾಗ, ಅದೃಷ್ಟದಲ್ಲಿನ ತನ್ನ ನಂಬಿಕೆಯನ್ನು ತ್ಯಜಿಸಿಬಿಡುವಂತೆ ಊಸ್ಮಾನ್ ಪ್ರೇರೇಪಿಸಲ್ಪಟ್ಟನು. ಫಲಿತಾಂಶಗಳು ಉಪಶಮನದ ಆಗಾಧವಾದ ಪ್ರಜ್ಞೆ ಮತ್ತು ಜೀವಿತದ ಕುರಿತಾದ ಒಂದು ಹೊಸ, ಸಕಾರಾತ್ಮಕ ಹೊರನೋಟವಾಗಿದ್ದವು. ಹೆಚ್ಚು ಪ್ರಾಮುಖ್ಯವಾಗಿ, ಅವನು ಯೆಹೋವನನ್ನು, “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳ” ದೇವರಾಗಿ ಅರಿತಿದ್ದಾನೆ.—ವಿಮೋಚನಕಾಂಡ 34:6.
ದೇವರು, ನಮ್ಮ ಜೀವಿತಗಳ ಪ್ರತಿಯೊಂದು ವಿವರವನ್ನು ಯೋಜಿಸದಿದ್ದರೂ, ಆತನಲ್ಲಿ ಭವಿಷ್ಯತ್ತಿಗಾಗಿ ಒಂದು ಉದ್ದೇಶವಿದೆಯೆಂದು ಸಹ ಊಸ್ಮಾನ್ ಗ್ರಹಿಸಿಕೊಂಡಿದ್ದಾನೆ.a 2 ಪೇತ್ರ 3:13 ಹೇಳುವುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” ಈ ವಾಗ್ದಾನಿತ “ನೂತನಭೂಮಂಡಲ”ದ ಒಂದು ಭಾಗವಾಗಿ ಸದಾ ಜೀವಿಸುವ ನಿರೀಕ್ಷೆಯನ್ನು ಬೆಳೆಸಿಕೊಳ್ಳುವಂತೆ ಯೆಹೋವನ ಸಾಕ್ಷಿಗಳು ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ. ನಿಮಗೂ ಸಹಾಯ ಮಾಡಲು ಅವರು ಬಯಸುವರು.
ಬೈಬಲಿನ ನಿಷ್ಕೃಷ್ಟ ಜ್ಞಾನದಲ್ಲಿ ನೀವು ಬೆಳೆದಂತೆ, ನಿಮ್ಮ ಭವಿಷ್ಯತ್ತು, ಯಾವುದರ ಮೇಲೆ ನಿಮಗೆ ನಿಯಂತ್ರಣವಿಲ್ಲವೊ ಆ ಯಾವುದೊ ಪೂರ್ವನಿರ್ಧಾರಿತ ಅದೃಷ್ಟದ ಮೇಲೆ ಅವಲಂಬಿಸಿಲ್ಲ ಎಂಬುದನ್ನು ನೀವು ಗಣ್ಯಮಾಡುವಿರಿ. ಪ್ರಾಚೀನ ಇಸ್ರಾಯೇಲ್ಯರಿಗೆ ಮೋಶೆಯ ಮಾತುಗಳು ಚೆನ್ನಾಗಿ ಅನ್ವಯಿಸುತ್ತವೆ: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ. ಆತನನ್ನು ಹೊಂದಿಕೊಂಡೇ ಇರ್ರಿ. ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣ ಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.” (ಧರ್ಮೋಪದೇಶಕಾಂಡ 30:19, 20) ಹೌದು, ನಿಮ್ಮ ಭವಿಷ್ಯತ್ತಿನ ಸಂಬಂಧದಲ್ಲಿ ನೀವೊಂದು ಆಯ್ಕೆಯನ್ನು ಮಾಡಬಲ್ಲಿರಿ. ಅದು ಅದೃಷ್ಟದ ಕೈಗಳಲ್ಲಿಲ್ಲ.
[ಪಾದಟಿಪ್ಪಣಿ]
a ದೇವರ ಮುನ್ನರಿವಿನ ಕುರಿತಾದ ಸಂಪೂರ್ಣ ಚರ್ಚೆಗಾಗಿ, ದ ವಾಚ್ಟವರ್, ಜುಲೈ 15, 1984, 3-7ನೆಯ ಪುಟಗಳನ್ನು ನೋಡಿರಿ.
[ಪುಟ 6,7 ರಲ್ಲಿರುವಚಿತ್ರಗಳು]
ಈ ವಿಪತ್ತುಗಳು ‘ದೈವ ಘಟನೆಗಳಾ’ಗಿರಲಿಲ್ಲ
[ಕೃಪೆ]
U.S. Coast Guard photo
WHO
UN PHOTO 186208/M. Grafman