ಯಾವ ಧರ್ಮವಾದರೂ ತಕ್ಕಷ್ಟು ತೃಪ್ತಿಕರವೊ?
“ನಮ್ಮ ಕಾಲದ ಪಾಡು ದುರಂತಮಯ. ನಮಗೆ ಒಂದು ಧರ್ಮವು ಬೇಕು, ಆದರೆ ಅದಕ್ಕೆ ಒಪ್ಪುವ ಒಬ್ಬ ದೇವರು ನಮಗೆಲ್ಲಿಯೂ ಕಾಣಸಿಗನು.”—ಲ್ಯೂಕನ್ ಬ್ಲಾಗ, ರುಮೇನಿಯನ್ ಕವಿ ಮತ್ತು ತತ್ವಜ್ಞಾನಿ
“ಧರ್ಮವು ಮತ್ತು ವೈದಿಕರು ಇದ್ದಾರೆ ಮತ್ತು ಪ್ರಾಯಶಃ ಬಹುಕಾಲದ ತನಕ ಇರುವರು, ಆದರೆ ಪ್ರಗತಿ ಮತ್ತು ಸ್ವಾತಂತ್ರ್ಯದ ಮಹಾನ್ ಶತ್ರುಗಳಾಗಿ.”—ಕ್ರಿಸ್ಟೊ ಬಾಟೆಫ್, ಬಲ್ಗೇರಿಯನ್ ಕವಿ
ಪಕ್ಕದಲ್ಲಿರುವ ಉಲ್ಲೇಖನಗಳು ಅನೇಕ ಪ್ರಾಮಾಣಿಕ ಜನರು ತಮ್ಮನ್ನು ಕಂಡುಕೊಳ್ಳುವ ಉಭಯ ಸಂಕಟವನ್ನು ಪ್ರತಿನಿಧಿಸುತ್ತವೆ. ಅಂತರ್ಯದ ಆಳದಲ್ಲಿ ಅವರಿಗೆ ಧರ್ಮದ ಅಗತ್ಯತೆಯು ಭಾಸವಾಗುತ್ತದೆ, ಆದರೆ ವೈದಿಕರು ಕಲಿಸುತ್ತಿರುವ ಆ ನಿಗೂಢ ದೇವರು ಅವರು ತಿಳುಕೊಳ್ಳಬಲ್ಲ ಮತ್ತು ಪ್ರೀತಿಸಬಲ್ಲ ದೇವರಲ್ಲ. ಅಷ್ಟಲ್ಲದೆ, ವೈದಿಕರು ಮತ್ತು ಅವರ ಧರ್ಮಗಳು ಮಾನವ ಪ್ರಗತಿ ಮತ್ತು ಸ್ವಾತಂತ್ರ್ಯವನ್ನು ಪ್ರತಿಬಂಧಿಸಲು ಹೆಚ್ಚನ್ನು ಮಾಡಿವೆ ಎಂಬ ಮನವರಿಕೆ ಅವರಿಗಾಗಿಯದೆ. ಹೌದು, ಧರ್ಮದ ಆವಶ್ಯಕತೆಯು ಅಧಿಕಾಧಿಕವಾಗಿ ಅಂಗೀಕರಿಸಲ್ಪಡುತ್ತಿರುವಾಗ, ಯಾವದಾದರೂ ಒಂದು ಧರ್ಮವನ್ನು ಸ್ವೀಕರಿಸಿಬಿಡಲು ಪ್ರಾಮಾಣಿಕರಾದ ಜನರು ಸಿದ್ಧರಿಲ್ಲ.
ಒಂದು ಪ್ರಧಾನ ಭಿನ್ನತೆ
ಮಾನವ ಕುಲದ ರಚನೆ ಮತ್ತು ಚರಿತ್ರೆಯಲ್ಲಿ ಧರ್ಮವು ಒಂದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ದಿ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಧರ್ಮವನ್ನು, “ಮಾನವ ಅನುಭವದಲ್ಲಿ, ಸಂಸ್ಕೃತಿಯಲ್ಲಿ ಮತ್ತು ಚರಿತ್ರೆಯಲ್ಲಿ ಒಂದು ವಾಸ್ತವಾಂಶ” ಎಂದು ಹೇಳುತ್ತಾ, ಕೂಡಿಸಿದ್ದು: “ಮಾನವ ಜೀವಿತದ ಪ್ರತಿಯೊಂದು ವಿಭಾಗದಲ್ಲಿ ಧಾರ್ಮಿಕ ಮನೋಭಾವನೆಗಳ ಮತ್ತು ನಿಷ್ಠೆಗಳ ರುಜುವಾತುಗಳು ಅಸ್ತಿತ್ವದಲ್ಲಿವೆ.” ಆದರೆ ಲೋಕದ ಪ್ರಧಾನ ಧರ್ಮಗಳಲ್ಲಿ ಯಾವುವೂ ಮಾನವ ಕುಲದ ಆಶೀರ್ವಾದವಾಗಿ ಪರಿಣಮಿಸಿಲ್ಲವೆಂದು ಇತಿಹಾಸವು ತೋರಿಸುತ್ತದೆ.
ಭಾರತೀಯ ರಾಜನೀತಿಜ್ಞರಾದ ಜವಾಹರ್ಲಾಲ ನೆಹರೂ ಒಮ್ಮೆ ಹೇಳಿದ್ದು: “ಧರ್ಮವೆಂದು ಕರೆಯಲ್ಪಡುತ್ತಿರುವ ಕೌತುಕವು, ಅಂತೂ ವ್ಯವಸ್ಥಾಪಿತ ಧರ್ಮವು, ಭಾರತದಲ್ಲಿ ಹಾಗೂ ಬೇರೆ ಕಡೆಗಳಲ್ಲಿ, ನಮ್ಮನ್ನು ಥರ ಥರಿಕೆಯಿಂದ ತುಂಬಿಸಿದೆ.” ನಡಿಸಲ್ಪಟ್ಟ ಯುದ್ಧಗಳನ್ನು ಗಮನಿಸುವಲ್ಲಿ ಮತ್ತು ಧರ್ಮದ ಹೆಸರಲ್ಲಿ ಗೈಯಲ್ಪಟ್ಟ ಪಾತಕಗಳನ್ನು ನೋಡುವಲ್ಲಿ, ಅವರ ಹೇಳಿಕೆಯನ್ನು ನಾವು ಪ್ರಾಮಾಣಿಕತೆಯಿಂದ ಒಪ್ಪದಿರಬಲ್ಲೆವೊ?
18ನೇ ಶತಮಾನದಲ್ಲಿ, ಫ್ರೆಂಚ್ ತತ್ವಜ್ಞಾನಿ ವಾಲ್ಟೈರ್ ಒಂದು ರಸಕರವಾದ ಭಿನ್ನತೆಯನ್ನು ತೋರಿಸಿದ್ದಾನೆ. ಅವನು ಬರೆದದ್ದು: “ಧರ್ಮವು ಅಗಣಿತವಾದ ಕುಪ್ರಸಿದ್ಧ ಕೃತ್ಯಗಳನ್ನು ಉತ್ಪಾದಿಸಿದೆ ಎಂದು ನೀವನ್ನುತ್ತೀರಿ. ಬದಲಾಗಿ ಮೂಢ ಭಕ್ತಿಯು, ನಮ್ಮ ಶೋಚನೀಯ ಭೂಗೋಲವನ್ನು ಆಳುತ್ತಿರುವ ಮೂಢ ಭಕ್ತಿಯೇ ಅದನ್ನುತ್ಪಾದಿಸಿದೆ ಎಂದು ನೀವನ್ನಬೇಕು. ಸರ್ವಶ್ರೇಷ್ಠನಾದಾತನಿಗೆ ನಾವು ಸಲ್ಲಿಸುವ ಶುದ್ಧಾರಾಧನೆಯ ಆ ಅತ್ಯಂತ ಕ್ರೂರ ಶತ್ರುವೇ ಮೂಢಭಕ್ತಿಯು.” ವಾಲ್ಟೈರನು ತನ್ನ ಕಾಲದ ಧಾರ್ಮಿಕ ಅಸಹಿಷ್ಣುತೆಯನ್ನು ಹೋರಾಡಿದ್ದನು. ಆದರೆ ವಿಶ್ವದ ನಿರ್ಮಾಣಿಕನಾದ ದೇವರಲ್ಲಿ ತನ್ನ ನಂಬಿಕೆಯನ್ನು ಅವನು ಕಾಪಾಡಿಕೊಂಡನು. ಸತ್ಯ ಧರ್ಮ ಮತ್ತು ಸುಳ್ಳು ಧರ್ಮದ ನಡುವಣ ಭಿನ್ನತೆಯನ್ನು ಅವನು ಕಾಣಶಕ್ತನಾದನು.
ಆರಿಸಿಕೊಳ್ಳುವ ಅಗತ್ಯ
ವಾಲ್ಟೈರನೊಂದಿಗೆ ಎಲ್ಲರೂ ಸಹಮತದಿಂದಿಲ್ಲ. ಎಲ್ಲ ಧರ್ಮಗಳಲ್ಲೂ ಒಳ್ಳೆಯದು ಇದೆ ಎಂದು ಕೆಲವರ ವಾದ; ಆದದರಿಂದ, ಸತ್ಯ ಧರ್ಮವನ್ನು ಹುಡುಕಿ ತೆಗೆಯಲು ಯಾವ ನಿಜ ಅಗತ್ಯವೂ ಅವರಿಗೆ ಭಾಸವಾಗುವದಿಲ್ಲ. ಅಂಥ ಜನರು ಪ್ರವಾದಿ ಯೆಶಾಯನಿಂದ ಕೊಡಲ್ಪಟ್ಟ ಈ ಎಚ್ಚರಿಕೆಗೆ ಕಿವಿಗೊಡಬೇಕು: “ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಯೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ!” (ಯೆಶಾಯ 5:20) ಸುಳ್ಳು ಧರ್ಮವು ಮಾನವತ್ವಕ್ಕೆ ಯಾವುದು ಕೆಟ್ಟದ್ದೊ ಅದನ್ನು ಉತ್ಪಾದಿಸಿಯದೆ. ಅದು ಆತ್ಮಿಕ ಅಂಧಕಾರವನ್ನು ತಂದಿರುತ್ತದೆ ಮತ್ತು ಪ್ರಾಮಾಣಿಕ ಹೃದಯದ ಜನರ ಬಾಯಲ್ಲಿ ಕಹಿಯಾದ ರುಚಿಯನ್ನು ಬಿಟ್ಟುಹೋಗಿರುತ್ತದೆ.
ಆದುದರಿಂದ ಇರುವ ಆಯ್ಕೆಯು, ನಾಸ್ತಿಕತೆ ಇಲ್ಲವೆ ಯಾವುದಾದರೂ ಒಂದು ಧರ್ಮವನ್ನು ನಂಬುವದು ಇವುಗಳ ನಡುವೆ ಅಲ್ಲ. ಅದೇನೂ ಅಷ್ಟು ಸುಲಭವಾಗಿರುವದಿಲ್ಲ. ಒಮ್ಮೆ ಒಬ್ಬನು ದೇವರ ಅಗತ್ಯವನ್ನು ಕಂಡುಕೊಂಡನೆಂದರೆ ಅವನು ಸತ್ಯ ಧರ್ಮಕ್ಕಾಗಿ ಹುಡುಕಲೇ ಬೇಕು. ಸಂಶೋಧಕ ಎಮಿಲ್ ಪ್ಯೂಲ, ಲ ಗ್ರಾನ್ ಎಟ್ಲಾಸ್ ಡ ರಲಿಜಿಯನ್ (ದಿ ಲಾರ್ಜ್ ಎಟ್ಲಾಸ್ ಆಫ್ ರಿಲಿಜನ್ಸ್)ನಲ್ಲಿ ಸರಿಯಾಗಿ ಹೇಳಿದ ಪ್ರಕಾರ, “[ಧರ್ಮಗಳು] ಕಲಿಸುವ ಮತ್ತು ನಿರ್ಬಂಧಿಸುವ ವಿಷಯಗಳು ಎಷ್ಟು ಭಿನ್ನಭಿನ್ನತೆಯವೆಂದರೆ ಅವೆಲ್ಲವನ್ನೂ ನಂಬಲು ಅಸಾಧ್ಯವೇ ಸರಿ.” ಇದಕ್ಕೆ ಸಹಮತದಲ್ಲಿ ಫ್ರೆಂಚ್ ಎನ್ಸೈಕ್ಲೊಪೀಡಿಯ ಯೂನಿವರ್ಸಲಿಸ್ (ಯೂನಿವರ್ಸಲ್ ಎನ್ಸೈಕ್ಲೊಪೀಡಿಯ) ಹೇಳುವುದು: “21ನೆಯ ಶತಮಾನವು ಧರ್ಮಕ್ಕೆ ಒಂದುವೇಳೆ ಹಿಂದಿರುಗಿದ್ದಾದರೆ, . . . ಮನುಷ್ಯನು ತನಗೆ ನೀಡಲ್ಪಟ್ಟ ಪವಿತ್ರ ವಸ್ತುಗಳು ಸತ್ಯವೊ ಸುಳ್ಳೋ ಎಂಬದನ್ನು ನಿರ್ಧರಿಸಲೇ ಬೇಕು.”
ನಿಜ ಧರ್ಮವನ್ನು ಆರಿಸುವ ವಿಧ
ನಿಜ ಧರ್ಮವನ್ನು ಆರಿಸುವುದರಲ್ಲಿ ನಮಗೆ ಯಾವುದು ಮಾರ್ಗದರ್ಶಕವಾಗಿದೆ? ಸತ್ಯದ ಮಹತ್ವ ಪೂರ್ಣತೆಯನ್ನು ಎತ್ತಿಹೇಳಿದಾಗ ದಿ ಎನ್ಸೈಕ್ಲೊಪೀಡಿಯ ಯೂನಿವರ್ಸಲಿಸ್ ಸರಿಯಾಗಿ ನುಡಿದದೆ. ಸುಳ್ಳನ್ನು ಕಲಿಸುವ ಒಂದು ಧರ್ಮವು ಸತ್ಯವಾಗಿರಲಾರದು. ಭೂಮಿಯಲ್ಲಿ ನಡೆದಾಡಿದವರಲ್ಲಿ ಅತ್ಯಂತ ಮಹಾನ್ ಪ್ರವಾದಿಯು ಹೇಳಿದ್ದು: “ದೇವರು ಆತ್ಮ ಸ್ವರೂಪನು. ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆತನನ್ನು ಆರಾಧಿಸಬೇಕು.”—ಯೋಹಾನ 4:24.
ಆ ಪ್ರವಾದಿಯು ಯೇಸು ಕ್ರಿಸ್ತನು, ಅವನು ಹೀಗೂ ಘೋಷಿಸಿದ್ದನು: “ಸುಳ್ಳು ಧರ್ಮ ಗುರುಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀ ವೇಷಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಅವರು ನಿಜವಾಗಿ ದುರಾಶೆಯುಕ್ತ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. . . . ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು, ಆದರೆ ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು.” (ಮತ್ತಾಯ 7:15-17, ಫಿಲಿಪ್ಸ್) ಲೋಕದ “ಪ್ರಧಾನ” ಧರ್ಮಗಳು, ಹಾಗೂ ಹೊಸದಾಗಿ ಎದ್ದ ಪಂಥ ಪಂಗಡಗಳು ಸಹಾ, ಫಲಿಸಿರುವ ಕೆಟ್ಟ ಫಲಗಳನ್ನು ನೋಡುವಾಗ ಅನೇಕ ಪ್ರಾಮಾಣಿಕ ಜನರು ಅವೆಲ್ಲವನ್ನು ‘ಹುಳುಕು ಮರಗಳಾಗಿ,’ ತಕ್ಕಷ್ಟು ತೃಪ್ತಿಕರವಲ್ಲದವುಗಳೇ ಆಗಿ ವೀಕ್ಷಿಸ ತೊಡಗಿದ್ದಾರೆ. ಆದರೆ ಅವರು ನಿಜ ಧರ್ಮವನ್ನು ಕಂಡುಹಿಡಿಯುವ ಬಗೆ ಹೇಗೆ?
ಒಂದು ಆಯ್ಕೆಯನ್ನು ಮಾಡುವ ಮುಂಚಿತವಾಗಿ ಕ್ರೈಸ್ತ ಪ್ರಪಂಚದ ಒಳಗಿನ ಮತ್ತು ಹೊರಗಿನ ಎಲ್ಲಾ ಸಾವಿರಾರು ಧರ್ಮಗಳನ್ನು ಅಧ್ಯಯನಿಸಿ ನೋಡುವದು ಅಶಕ್ಯವೆಂಬದು ಸ್ಫುಟ. ಆದರೂ, ಯೇಸುವಂದಂತೆ, ಸತ್ಯವನ್ನು ಮತ್ತು ಫಲಗಳನ್ನು ನಾವು ಒರೆಗಲ್ಲುಗಳಾಗಿ ಉಪಯೋಗಿಸಿದರೆ, ಸತ್ಯಧರ್ಮವನ್ನು ಗುರುತಿಸುವ ಶಕ್ಯತೆ ಇದೆ.
ಸತ್ಯ ಮತ್ತು ಫಲಗಳು
ಯೇಸು ಸತ್ಯದ ಕುರಿತು ತಿಳಿಸಿದ್ದಾನೆ. ಈ ವಿಷಯದಲ್ಲಿ, ಪೌರಾಣಿಕ ಕಥೆಗಳಲ್ಲಿ ಮತ್ತು ಗ್ರೀಕ್ ತತ್ವಜ್ಞಾನದಲ್ಲಿ ಆಧಾರಿತವಾಗಿರುವ ಹೆಚ್ಚಿನ ಧರ್ಮಗಳ ಧಾರ್ಮಿಕ ಸುಳ್ಳುಗಳನ್ನು, ವಿಶ್ವಾಸಿಗಳ ಯಾವ ಗುಂಪು ತಿರಸ್ಕರಿಸುತ್ತದೆ? ಅಂಥ ಒಂದು ಸುಳ್ಳು ಮಾನವಾತ್ಮವು ಸಹಜವಾಗಿ ಅಮರವಾಗಿದೆ ಎಂಬ ಬೋಧನೆಯೇ.a ಈ ಬೋಧನೆಯು ದೇವರನ್ನು ಅಗೌರವಕ್ಕೆ ಈಡುಮಾಡುವ ನರಕಾಗ್ನಿಯ ಕಲಿಸುವಿಕೆಯನ್ನು ಉತ್ಪಾದಿಸಿದೆ.
ಯೇಸು ಫಲಗಳ ಕುರಿತಾಗಿಯೂ ತಿಳಿಸಿದನು. ಈ ಸಂಬಂಧದಲ್ಲಿ, ಜಾತೀಯ, ಭಾಷೆಯ ಮತ್ತು ಜನಾಂಗಿಕ ಭೇದಭಾವಗಳನ್ನು ಪ್ರೀತಿ ಮತ್ತು ಪರಸ್ಪರ ತಿಳುವಳಿಕೆಯಿಂದ ಪರಿಹರಿಸಿಕೊಂಡು ಒಂದು ನಿಜವಾದ ಅಂತರಾಷ್ಟ್ರೀಯ ಬಂಧುತ್ವವನ್ನು ಉತ್ಪಾದಿಸಿರುವ ಒಂದು ಧರ್ಮವನ್ನು ನೀವು ಬಲ್ಲಿರೊ? ಯಾರ ಸದಸ್ಯರು, ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಂದ ಅವರ ಸಹೋದರ ಮತ್ತು ಸಹೋದರಿಯರನ್ನು ದ್ವೇಷಿಸಲು ಅಥವಾ ರಾಷ್ಟ್ರೀಯತೆ ಯಾ ಧರ್ಮದ ಹೆಸರಿನಲ್ಲಿ ಅವರನ್ನು ಕೊಲ್ಲಲು ಪ್ರೇರೇಪಿತರಾಗುವ ಬದಲಾಗಿ ಹಿಂಸೆಯನ್ನಾದರೂ ತಾಳಿಕೊಳ್ಳಲು ಸಿದ್ಧರಾಗಿದ್ದಾರೋ ಆ ಒಂದು ವಿಶ್ವವ್ಯಾಪ್ತ ಧಾರ್ಮಿಕ ಸಮಾಜದ ಪರಿಚಯವು ನಿಮಗಿದೆಯೆ? ಅಂಥ ಧಾರ್ಮಿಕ ಸುಳ್ಳುಗಳನ್ನು ತಿರಸ್ಕರಿಸಿರುವ ಮತ್ತು ಇಂಥ ಫಲಗಳನ್ನು ಉತ್ಪಾದಿಸಿರುವ ಒಂದು ಧರ್ಮವು ಸತ್ಯಧರ್ಮವೆಂಬದಕ್ಕೆ ಪ್ರಬಲವಾದ ರುಜುವಾತನ್ನು ಕೊಡುವದು, ಅಲ್ಲವೆ?
ಸತ್ಯ ಧರ್ಮವು ಇಂದು ಆಚರಿಸಲ್ಪಡುತ್ತಿದೆ
ಅಂಥ ಒಂದು ಧರ್ಮವು ಇದೆಯೇ? ಹೌದು, ಇದೆ. ಆದರೆ ಲೋಕದ ಒಂದು ಪ್ರಧಾನ ಧರ್ಮಗಳಲ್ಲಿ ಅದು ಒಂದಲ್ಲ ಎಂಬದನ್ನು ನೀವು ಒಪ್ಪಲೇ ಬೇಕು. ಇದು ನಮ್ಮನ್ನು ಆಶ್ಚರ್ಯಗೊಳಿಸಬೇಕೆ? ಇಲ್ಲ. ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಹೇಳಿದ್ದು: “ಇಕ್ಕಟ್ಟಾದ ಬಾಗಲಿಂದ ಒಳಗೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹುಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡು ಹಿಡಿಯುವವರು ಸ್ವಲ್ಪ ಜನ.”—ಮತ್ತಾಯ 7:13, 14.
ಹಾಗಾದರೆ ನಿಜ ಧರ್ಮವನ್ನು ಎಲ್ಲಿ ಕಂಡುಕೊಳ್ಳಬಹುದು? ಬಹು ದೀನತೆಯಿಂದಲೂ, ಪ್ರಾಮಾಣಿಕತೆಯಿಂದಲೂ ನಾವು ಹೇಳಲೇ ಬೇಕು ಏನಂದರೆ ಆ ‘ಇಕ್ಕಟ್ಟಾದ ಮತ್ತು ಬಿಕ್ಕಟ್ಟಿನ’ ದಾರಿಯಲ್ಲಿ ನಡೆಯುತ್ತಿರುವ ಒಂದು ಅಂತರಾಷ್ಟ್ರೀಯ ಸಮಾಜವು ಯೆಹೋವನ ಸಾಕ್ಷಿಗಳದ್ದೇ ಆಗಿದೆ. ಪ್ರಾಮುಖ್ಯ ಧರ್ಮಗಳು ಯೆಹೋವನ ಸಾಕ್ಷಿಗಳನ್ನು ಧಿಕ್ಕಾರದಿಂದ ಒಂದು ಪಂಥವೆಂದು ಕರೆಯುತ್ತವೆ ನಿಜ. ಆದರೆ ಸಾ. ಶ. ಒಂದನೇ ಶತಕದ ಧರ್ಮಭ್ರಷ್ಟ ಧಾರ್ಮಿಕ ಮುಖಂಡರೂ ಆರಂಭದ ಕ್ರೈಸ್ತರನ್ನು ಹಾಗೆಂದೇ ಕರೆದಿದ್ದರು.—ಅಪೊಸ್ತಲರ ಕೃತ್ಯಗಳು 24:1-14.
ಯೆಹೋವನ ಸಾಕ್ಷಿಗಳು ತಮ್ಮಲ್ಲಿ ಸತ್ಯ ಧರ್ಮವಿದೆ ಎಂದು ಅಷ್ಟು ಆತ್ಮವಿಶ್ವಾಸದಿಂದ ಹೇಳುವದೇಕೆ? ಒಳ್ಳೇದು, ಅವರು 200 ದೇಶಕ್ಕಿಂತಲೂ ಹೆಚ್ಚನ್ನು ತಲಪಿರುವ ಮತ್ತು ರಾಷ್ಟ್ರೀಯತೆ, ಜಾತಿ, ಭಾಷೆ ಮತ್ತು ಸಾಮಾಜಿಕ ಅಂತಸ್ತಿನ ಬೇಧಭಾವಗಳನ್ನು ತೊರೆದಿರುವ ಒಂದು ಅಂತರಾಷ್ಟ್ರೀಯ ಸಹೋದರತ್ವದಲ್ಲಿ ಕೂಡಿರುತ್ತಾರೆ. ಮತ್ತು ಅವರು ಬೈಬಲ್ ಹೇಳುವುದನ್ನು ಸ್ಪಷ್ಟವಾಗಿಗಿ ವಿರೋಧಿಸುವ ಬೋಧನೆಗಳನ್ನು—ಎಷ್ಟೇ ಪುರಾತನದವುಗಳಾಗಿರಲಿ—ನಂಬಲು ನಿರಾಕರಿಸುತ್ತಾರೆ. ಆದರೆ ಅವರು ಅಂಥ ಅಪೇಕ್ಷಣೀಯ ಪರಿಸ್ಥಿತಿಯೊಳಗೆ ಬಂದದ್ದು ಹೇಗೆ? ಮತ್ತು ಸತ್ಯ ಧರ್ಮದ ಆಚರಣೆಯಲ್ಲಿ ಏನೆಲ್ಲಾ ಒಳಗೂಡಿದೆ? ಧರ್ಮದ ಕುರಿತಾದ ಇದು ಮತ್ತು ಇನ್ನಿತರ ಪ್ರಶ್ನೆಗಳು ಮುಂದಿನ ಎರಡು ಲೇಖನಗಳಲ್ಲಿ ಚರ್ಚಿಸಲ್ಪಡುವವು. (w91 12/1)
[ಅಧ್ಯಯನ ಪ್ರಶ್ನೆಗಳು]
a ಈ ನಂಬಿಕೆಯ ಪೌರಾಣಿಕ ಮೂಲದ ಸಪ್ರಾಮಾಣ್ಯ ರುಜುವಾತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ, ನ್ಯೂ ಯೋರ್ಕ್, ಇವರಿಂದ ಪ್ರಕಾಶಿಸಲ್ಪಟ್ಟ, ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಪುಸ್ತಕದ 52-7 ಪುಟಗಳನ್ನು ನೋಡಿರಿ.
[ಪುಟ 7 ರಲ್ಲಿರುವ ಚಿತ್ರ]
ಧರ್ಮ-ಯುದ್ಧಗಳು ಸುಳ್ಳು ಧರ್ಮದ ಕೆಟ್ಟ ಫಲಗಳ ಭಾಗವಾಗಿದ್ದವು
[ಕೃಪೆ]
Bibliothèque Nationale, Paris
[ಪುಟ 8 ರಲ್ಲಿರುವ ಚಿತ್ರ]
ಸತ್ಯ ಧರ್ಮವು ಒಳ್ಳೇ ಫಲಗಳನ್ನು ಕೊಡುತ್ತದೆ