ವಿಗ್ರಹಗಳ ಕಡೆಗೆ ಪೂಜ್ಯಭಾವನೆ—ಒಂದು ವಾಗ್ವಾದ
ಪೋಲೆಂಡ್ ದೇಶದ ಒಂದು ಸ್ಥಳದಲ್ಲಿ ಒಬ್ಬ ಮನುಷ್ಯನು ತನ್ನ ಪ್ರಯಾಣಕ್ಕಾಗಿ ಬಹುಮಟ್ಟಿಗೆ ಸಿದ್ಧನೇ ಆಗಿದ್ದನು. ಆದಾಗ್ಯೂ, ಅವನಿಗಿನ್ನೂ ಒಂದು ಮಹತ್ವದ ವಿಷಯವನ್ನು ಮಾಡಲೇ ಬೇಕು. ಅವನು ಯೇಸುವಿನ ಒಂದು ವಿಗ್ರಹದ ಮುಂದೆ ಮೊಣಕಾಲೂರುತ್ತಾನೆ, ಒಂದು ಮುಡುಪನ್ನು ನೀಡುತ್ತಾನೆ, ತನ್ನ ಪ್ರಯಾಣವು ಸುರಕ್ಷಿತವಾಗಿರುವಂತೆ ಪ್ರಾರ್ಥಿಸುತ್ತಾನೆ.
ಸಾವಿರಾರು ಮೈಲುಗಳ ದೂರದಲ್ಲಿ, ಥಾಯ್ಲೆಂಡಿನ ಬ್ಯಾಂಗಾಕ್ನಲ್ಲಿ, ಬೌದ್ಧರು ವಾರ್ಷಿಕ ಚಕ್ರದ ಮೊದಲನೆ ಹಬ್ಬವನ್ನು ಮೇ ತಿಂಗಳ ಹುಣ್ಣಿಮೆಯ ಸಮಯದಲ್ಲಿ ನೀವು ಕಾಣಬಹುದು. ಆ ಹಬ್ಬದ ಸಮಯದಲ್ಲಿ ಬುದ್ಧನ ಪ್ರತಿಮೆಯನ್ನು ಬೀದಿಗಳ ಸುತ್ತಲೂ ಮೆರವಣಿಗೆಯಾಗಿ ಒಯ್ಯಲಾಗುತ್ತದೆ.
ಈಗಲೇ ವಿವರಿಸಿದ ಪ್ರಕಾರ, ವಿಗ್ರಹಗಳ ಕಡೆಗೆ ಪೂಜ್ಯಭಾವವು ಬಹು ವ್ಯಾಪಕವಾಗಿರುವುದು ನಿಮಗೆ ತಿಳಿದೇ ಇದೆ. ಸಾಕ್ಷಾತ್ತಾಗಿ ಕೋಟ್ಯಾಂತರ ಜನರು ವಿಗ್ರಹಗಳ ಮುಂದೆ ಅಡ್ಡಬೀಳುತ್ತಾರೆ. ಸಾವಿರಾರು ವರ್ಷಗಳಿಂದ ವಿಗ್ರಹಗಳು ದೇವರನ್ನು ಹತ್ತರಿಸುವ ಒಂದು ಮಹತ್ವದ ದಾರಿಯಾಗಿ ವೀಕ್ಷಿಸಲ್ಪಡುತ್ತಾ ಇವೆ.
ಭಕ್ತಿಯಲ್ಲಿ ವಿಗ್ರಹಗಳನ್ನು ಉಪಯೋಗಿಸುವ ಕುರಿತು ನಿಮ್ಮ ನೆನಸಿಕೆ ಏನು? ವಿಗ್ರಹಗಳ ಕಡೆಗೆ ಪೂಜ್ಯತೆಯು ಸರಿಯೋ ಅಥವಾ ತಪ್ಪೋ? ಅದರ ವಿಷಯವಾಗಿ ದೇವರ ಅನಿಸಿಕೆಯೇನು? ಅಂಥ ಆರಾಧನೆಯನ್ನು ಆತನು ಸ್ವೀಕರಿಸುತ್ತಾನೆಂಬದಕ್ಕೆ ಏನಾದರೂ ರುಜುವಾತು ಇದೆಯೇ? ಪ್ರಾಯಶಃ ವೈಯಕ್ತಿಕವಾಗಿ ಅಂಥ ಪ್ರಶ್ನೆಗಳಿಗೆ ನೀವೆಂದೂ ಹೆಚ್ಚು ಮನಸ್ಸು ಕೊಟ್ಟಿರಲಿಕ್ಕಿಲ್ಲ. ಆದರೂ, ದೇವರೊಂದಿಗೆ ಒಂದು ಸಂಬಂಧವನ್ನು ನೀವು ಮೂಲ್ಯವೆಂದೆಣಿಸುವುದಾದರೆ, ಅವುಗಳಿಗೆ ಉತ್ತರವನ್ನು ಪಡೆಯುವ ಅಗತ್ಯವಿದೆ.
ಅನೇಕರಿಗೆ ಈ ವಿಷಯವನ್ನು ನಿರ್ಣಯಿಸುವುದು ಸುಲಭವಾಗಿಲ್ಲವೆಂಬದು ಗ್ರಾಹ್ಯ. ವಾಸ್ತವದಲ್ಲಿ ಅದು ಸಾವಿರಾರು ವರ್ಷಗಳಿಂದ ಉದ್ರೇಕಭರಿತ ಮತ್ತು ಕೆಲವೊಮ್ಮೆ ತೀಕವಾಗ್ವಾದಗಳ ವಿಷಯವಾಗಿ ಪರಿಣಮಿಸಿದೆ. ದೃಷ್ಟಾಂತಕ್ಕಾಗಿ, ಹಿಂದೆ ಸಾ.ಶ. 1513ನೆಯ ವರ್ಷದಲ್ಲಿ, ಇಬ್ರಿಯರ ನಾಯಕನಾಗಿದ್ದ ಮೋಶೆಯು ಚಿನ್ನದ ಬಸವನ ವಿಗ್ರಹವನ್ನು ನಾಶಗೊಳಿಸಿದ್ದನು ಮತ್ತು ಅದನ್ನು ಪೂಜಿಸುತ್ತಿದ್ದ 3,000 ಮಂದಿಯನ್ನು ಖಡ್ಗದಿಂದ ಸಂಹರಿಸಿದ್ದನು.—ವಿಮೋಚನಕಾಂಡ 32ನೆಯ ಅಧ್ಯಾಯ.
ಧಾರ್ಮಿಕ ವಿಗ್ರಹಗಳನ್ನು ಉಪಯೋಗಿಸುವುದಕ್ಕೆ ಕಟು ವಿರೋಧವನ್ನು ತೋರಿಸಿದವರು ಯೆಹೂದ್ಯರು ಮಾತ್ರವಲ್ಲ. ಮೋಶೆಗಿಂತಲೂ ನೂರಾರು ವರ್ಷಗಳ ಮುಂಚೆ ವಿಗ್ರಹಗಳನ್ನು ಪೂಜಿಸುವ ವಿರುದ್ಧವಾಗಿ ವಿಸ್ತಾರ್ಯ ದಂಡಯಾತ್ರೆಯನ್ನು ಕೈಕೊಂಡ ಪಾರಸಿ ಅಧಿಪತಿ ತಕಮ್ಮರಪ್ ಎಂಬವನ ಐತಿಹ್ಯವನ್ನು ಲೌಕಿಕ ಇತಿಹಾಸಕಾರರು ಕಾಪಾಡಿ ಉಳಿಸಿದ್ದಾರೆ. ಚೈನಾದಲ್ಲಿ ಒಬ್ಬ ಪ್ರಾಚೀನ ಐತಿಹ್ಯಕ ಅರಸನು ಹಲವಾರು ದೇವರುಗಳ ಪ್ರತಿಮೆಗಳ ವಿರುದ್ಧ ಮಿಲಿಟರಿ ಆಕ್ರಮಣವನ್ನು ಗೈದನೆಂದು ವರದಿ ಇದೆ. ಪ್ರತಿಮೆಗಳನ್ನು ನಾಶಮಾಡಿದ ಮೇಲೆ, ಮಣ್ಣಿನಿಂದ ಮಾಡಿದ ದೇವರುಗಳ ಕಡೆಗೆ ಪೂಜ್ಯ ಭಾವನೆಯು ಮೂರ್ಖತೆಯೆಂದು ಅವನು ಜರೆದನು. ತರುವಾಯ, ಮಹಮ್ಮದನು ಇನ್ನೂ ಮಗುವಾಗಿದ್ದಾಗ, ಆರಾಧನೆಯಲ್ಲಿ ಮೂರ್ತಿಗಳ ಉಪಯೋಗವನ್ನು ವಿರೋಧಿಸಿದ್ದ ಅರಬರು ಅಲಿದ್ದರು. ಮಹಮ್ಮದನ ಮೇಲೆ ಅವರ ಪ್ರಭಾವವು ತದನಂತರದ ವರ್ಷಗಳಲ್ಲಿ ವಿಗ್ರಹಾರಾಧನೆಯ ಬಗ್ಗೆ ಅವನು ತಕ್ಕೊಂಡ ಸ್ಥಾನಕ್ಕೆ ನೆರವಾಯಿತು. ವಿಗ್ರಹಾರಾಧನೆಯು ಅಕ್ಷಮ್ಯ ಪಾಪ, ವಿಗ್ರಹಾರಾಧಕರಿಗಾಗಿ ಪ್ರಾರ್ಥನೆ ಮಾಡಬಾರದು, ವಿಗ್ರಹಾರಾಧಕರೊಂದಿಗೆ ವಿವಾಹ ಸಂಬಂಧ ನಿಷಿದ್ಧವೆಂದು ಕುರಾನ್ನಲ್ಲಿ ಮಹಮ್ಮದನು ಕಲಿಸುತ್ತಾನೆ.
ಕ್ರೈಸ್ತ ಪ್ರಪಂಚದಲ್ಲೂ ಸಾ.ಶ. ಎರಡನೆಯ, ಮೂರನೆಯ, ನಾಲ್ಕನೆಯ ಮತ್ತು ಐದನೆಯ ಶತಮಾನದ ಪ್ರಧಾನ ಧಾರ್ಮಿಕ ವ್ಯಕ್ತಿಗಳಾದ ಐರೇನಿಯಸ್, ಓರಿಗನ್, ಕೈಸರೈಯದ ಯೂಸ್ಬಿಯಸ್, ಎಫಿಫೇನ್ಯಸ್ ಮತ್ತು ಔಗುಸ್ಟಿನ್ ಮುಂತಾದವರು ಭಕ್ತಿಯಲ್ಲಿ ವಿಗ್ರಹಗಳ ಉಪಯೋಗವನ್ನು ವಿರೋಧಿಸಿದ್ದರು. ಸುಮಾರು ಸಾ.ಶ. ನಾಲ್ಕನೆಯ ಶತಮಾನದ ಆರಂಭಕ್ಕೆ ಸ್ಪೈನ್ನ ಎಲೆರ್ವದಲ್ಲಿ ಬಿಷಪರುಗಳ ಒಂದು ಗುಂಪು ವಿಗ್ರಹಗಳ ಕಡೆಗೆ ಪೂಜ್ಯಭಾವನೆಯ ವಿರುದ್ಧವಾಗಿ ಹಲವಾರು ಮಹತ್ವದ ನಿರ್ಧಾರಗಳನ್ನು ಸೂತ್ರೀಕರಿಸಿದರು. ಈ ಪ್ರಖ್ಯಾತ ಕೌನ್ಸಿಲ್ ಆಫ್ ಎಲೆರ್ವ, ಚರ್ಚುಗಳಲ್ಲಿ ವಿಗ್ರಹಗಳನ್ನು ನಿಷೇಧಿಸುವುದರಲ್ಲಿ ಮತ್ತು ವಿಗ್ರಹಾರಾಧಕರ ವಿರುದ್ಧವಾಗಿ ತೀವ್ರ ದಂಡನೆಗಳ ವ್ಯವಸ್ಥಾಪನೆಯಲ್ಲಿ ಪರ್ಯವಸಾನಗೊಂಡಿತು.
ವಿಗ್ರಹಭಂಜಕರು
ಈ ವಿಕಾಸಗಳು ಇತಿಹಾಸದ ವಾಗ್ವಾದಗಳಲ್ಲಿ ಅತ್ಯಂತ ಮಹತ್ವದ್ದಕ್ಕೆ ದಾರಿ ಸಿದ್ಧಮಾಡಿದವು: ಅದೇ ಎಂಟನೆಯ ಮತ್ತು ಒಂಭತನ್ತೆಯ ಶತಮಾನಗಳ ವಿಗ್ರಹಭಂಜಕ ವಾಗ್ವಾದ. ಒಬ್ಬ ಚರಿತ್ರೆಗಾರನು ಹೇಳುವುದು, “ಆ ಕಟು ವಾಗ್ವಾದವು ಒಂದೂವರೆ ಶತಮಾನಗಳ ತನಕ ಬಾಳಿತು ಮತ್ತು ಅದು ಅಗಣಿತ ಕಷ್ಟಾನುಭವಗಳನ್ನು ತಂದಿತ್ತು,” ಮತ್ತು ಅದು “ಪೂರ್ವ ಮತ್ತು ಪಶ್ಚಿಮ ಸಾಮ್ರಾಜ್ಯಗಳ ನಡುವಣ ವಿಭಜನೆಯ ಒಂದು ನೇರವಾದ ಕಾರಣವಾಗಿತ್ತು.”
ಐಕಾನ್ ಅಂದರೆ “ವಿಗ್ರಹ” ಮತ್ತು ಕ್ಲಾಸ್ಟಸ್ ಅಂದರೆ “ಭಂಜಕ” ಎಂಬರ್ಥವಿರುವ ಗ್ರೀಕ್ಪದಗಳಿಂದ “ಐಕಾನೊಕ್ಲಾಸ್ಟ್” (ವಿಗ್ರಹಭಂಜಕ) ಎಂಬ ಪದರೂಪವು ಬಂದಿದೆ. ತನ್ನ ಹೆಸರಿಗೆ ಹೊಂದಿಕೆಯಲ್ಲಿ, ವಿಗ್ರಹಗಳ ವಿರುದ್ಧವಾದ ಈ ಚಟುವಟಿಕೆಯಲ್ಲಿ ಯೂರೋಪಿನಲ್ಲೆಲ್ಲೂ ಇರುವ ವಿಗ್ರಹಗಳ ತೆಗೆದುಹಾಕುವಿಕೆ ಮತ್ತು ನಾಶವು ಸೇರಿತ್ತು. ಆರಾಧನೆಯಲ್ಲಿ ವಿಗ್ರಹಗಳ ಬಳಸುವಿಕೆಯನ್ನು ನಿರ್ಮೂಲಗೊಳಿಸಲು ಹಲವಾರು ವಿಗ್ರಹ-ವಿರೋಧಿ ನಿಯಮಗಳು ಜಾರಿಗೆ ತರಲ್ಪಟ್ಟವು. ವಿಗ್ರಹಗಳ ಕಡೆಗೆ ಪೂಜ್ಯಭಾವನೆಯು ಸಾಮ್ರಾಟರನ್ನು ಮತ್ತು ಪೋಪ್ರುಗಳನ್ನು, ಸೈನ್ಯಾಧಿಪತಿಗಳನ್ನು ಮತ್ತು ಬಿಷಪರುಗಳನ್ನು ಸಾಕ್ಷತ್ ದೇವತಾಶಾಸ್ತ್ರದ ಹೋರಾಟಕ್ಕೇ ಎಳೆದ ಉದ್ರೇಕಿತ ರಾಜಕೀಯ ವಾಗ್ವಾದವಾಗಿ ಪರಿಣಮಿಸಿತ್ತು.
ಮತ್ತು ಇದು ಕೇವಲ ಮಾತುಗಳ ಹೋರಾಟಕ್ಕಿಂತ ಹೆಚ್ಚಾಗಿತ್ತು. ಸಾಮ್ರಾಟನಾದ III ನೆಯ ಲಿಯೋ ಚರ್ಚುಗಳಲ್ಲಿ ವಿಗ್ರಹಗಳ ಉಪಯೋಗಕ್ಕೆ ವಿರುದ್ಧವಾಗಿ ಒಂದು ಶಾಸನವನ್ನು ಹೊರಡಿಸಿದಾಗ, ಜನರು “ಆ ಶಾಸನದ ವಿರುದ್ಧವಾಗಿ ಸಾಮೂಹಿಕವಾಗಿ ದಂಗೆ ಎದ್ದರು ಮತ್ತು ವಿಶೇಷವಾಗಿ ಕಾನ್ಸ್ಟೆಂಟಿನೋಪಲಿನಲ್ಲಿ ಉಗ್ರ ಗಲಭೆಗಳು” ಪ್ರತಿದಿನವೂ ನಡಿಯುತ್ತಿದ್ದವು ಎಂದು ಮೆಕ್ಲಿಂಟಕ್ ಮತ್ತು ಸ್ಟ್ರಾಂಗ್ ಇವರ ದ ಸೈಕ್ಲೊಪೀಡಿಯಾ ಆಫ್ ಬಿಬ್ಲಿಕಲ್, ಥಿಯೊಲಾಜಿಕಲ್, ಆ್ಯಂಡ್ ಎಕ್ಲೀಸಿಯಾಸ್ಟಿಕ್ ಲಿಟ್ರೇಚರ್ ತಿಳಿಸುತ್ತದೆ. ಸಾಮ್ರಾಟನ ಸೇನೆ ಮತ್ತು ಜನರ ನಡುವಣ ಸಂಘರ್ಷಣೆಗಳು ಸಂಹಾರಗಳಲ್ಲಿ ಮತ್ತು ಸಾಮೂಹಿಕ ಕೊಲೆಗಳಲ್ಲಿ ಪರ್ಯವಸಾನಗೊಂಡವು. ಪಾದ್ರಿಗಳನ್ನು ಕ್ರೂರವಾಗಿ ಹಿಂಸಿಸಲಾಯಿತು. ನೂರಾರು ವರ್ಷಗಳ ಅನಂತರ, 16ನೆಯ ಶತಮಾನದ ಸಮಯದಲ್ಲಿ, ಚರ್ಚುಗಳಲ್ಲಿ ಮೂರ್ತಿಗಳ ಪ್ರಶ್ನೆಯ ಬಗ್ಗೆ, ಸ್ವಿಟ್ಸರ್ಲೆಂಡಿನ ಜ್ಯೂರಿಚ್ನಲ್ಲಿ ಹಲವಾರು ಸಾರ್ವಜನಿಕ ಚರ್ಚೆಗಳು ನಡೆದವು. ಫಲಿತಾಂಶವಾಗಿ, ಎಲ್ಲಾ ಚರ್ಚುಗಳಿಂದ ವಿಗ್ರಹಗಳನ್ನು ತೆಗೆದುಹಾಕಲು ನಿಬಂರ್ಧಿಸುವ ಆಜ್ಞೆಯನ್ನು ಶಾಸನೀಯವಾಗಿ ಮಾಡಲಾಯಿತು. ಕೆಲವು ಸುಧಾರಕರಾದರೋ ಮೂರ್ತಿಪೂಜೆಯ ತಮ್ಮ ಖಂಡನೆಯಲ್ಲಿ ತೀಕರೂ ಕೆಲವೊಮ್ಮೆ ಉಗ್ರರೂ ಆಗಿ ತೋರಿಬಂದರು.
ಇಂದು ಕೂಡ ಆರಾಧನೆಯಲ್ಲಿ ಮೂರ್ತಿಗಳ ಉಪಯೋಗದ ಕುರಿತು ಆಧುನಿಕ ದೇವತಾಶಾಸ್ತ್ರಜ್ಞರ ನಡುವೆ ವಿಸ್ತಾರ ಭಿನ್ನಾಭಿಪ್ರಾಯಗಳಿವೆ. ವಿಗ್ರಹಗಳು ದೇವರನ್ನು ಸಮೀಪಿಸಲು ನಿಜವಾಗಿ ಮನುಷ್ಯನಿಗೆ ಸಹಾಯ ಮಾಡುತ್ತವೋ ಇಲ್ಲವೋ ಎಂಬದನ್ನು ತೂಗಿನೋಡಲು ಮುಂದಿನ ಲೇಖನವು ನಿಮಗೆ ಸಹಾಯ ಮಾಡುವುದು. (w92 2/15)