1914—ಲೋಕವನ್ನೇ ತಲ್ಲಣಗೊಳಿಸಿದ ವರ್ಷ
“1914-18 ರ ಮಹಾ ಯುದ್ಧವು ನಮ್ಮ ಸಮಯದಿಂದ ಅದನ್ನು ವಿಭಜಿಸಿದ ಒಂದು ಕಮರಿಹೋದ ಭೂ ಪಟ್ಟೆಯಂತೆ ನೆಲೆಸಿದೆ. ಅಷ್ಟೊಂದು ಜೀವಗಳನ್ನು ನಾಶಗೊಳಿಸಿದರಲ್ಲಿ, . . . ನಂಬಿಕೆಗಳನ್ನು ನಷ್ಟಗೊಳಿಸಿದರಲ್ಲಿ, ವಿಚಾರಗಳನ್ನು ಬದಲಾಯಿಸಿದರಲ್ಲಿ, ಭ್ರಾಂತಿಗಳ ಗುಣವಾಗದ ಗಾಯಗಳನ್ನು ಬಿಟ್ಟುಹೋದದ್ದರಲ್ಲಿ, ಅದು ಎರಡು ಯುಗಗಳ ನಡುವೆ ಒಂದು ಶಾರೀರಿಕ ಹಾಗೂ ಮಾನಸಿಕ ಕಂದರವನ್ನೇ ನಿರ್ಮಿಸಿತು.”—ಫ್ರಮ್ ದ ಪ್ರೌಡ್ ಟೌಅರ್—ಎ ಪೋರ್ಟ್ರೆಟ್ ಆಫ್ ದ ವರ್ಲ್ಡ್ ಬಿಫೋರ್ ದ ವಾರ್ 1890-1914, ಬಾರ್ಬ್ರಾ ಟೆಕ್ಮೆನ್ರಿಂದ.
“ಅದು ಬಹುಮಟ್ಟಿಗೆ—ಇತಿಹಾಸದ ಭಾಗ—ಆದರೆ ಇನ್ನೂ ಪೂರ ಅಲ್ಲ, ಏಕೆಂದರೆ ಈ ಮಹತ್ವದ ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಎಳೆಯರಾಗಿದ್ದ ಸಾವಿರಾರು ಜನರು ಇನ್ನೂ ಜೀವಿಸುತ್ತಿದ್ದಾರೆ.”—1987 ರಲ್ಲಿ ಪ್ರಕಟವಾದ, ಲಿನ್ ಮೆಕ್ಡಾನಲ್ಡ್ ಇವರ 1914 ಎಂಬ ಪುಸ್ತಕದಿಂದ.
ಆ 1914 ನೆಯ ವರ್ಷದಲ್ಲಿ ಏಕೆ ಆಸಕ್ತಿ ತೋರಿಸಬೇಕು? ‘ನಾನು ಚಿಂತಿಸುವುದು ಭವಿಷ್ಯತ್ಕಾಲದ ಕುರಿತಾಗಿ,’ ಎಂದು ನೀವನ್ನಬಹುದು, ‘ಗತಕಾಲದ ಕುರಿತಲ್ಲ.’ ವಿಶ್ವವ್ಯಾಪಕ ಮಾಲಿನ್ಯ, ಕುಟುಂಬ ಜೀವಿತದ ಒಡೆತ, ಪಾತಕ, ಮಾನಸಿಕ ವ್ಯಾಧಿ ಮತ್ತು ನಿರುದ್ಯೋಗವೇ ಮುಂತಾದ ಸಮಸ್ಯೆಗಳ ಅಭಿವೃದ್ಧಿಯ ನೋಟದಲ್ಲಿ, ಮನುಷ್ಯನ ಭವಿಷ್ಯವು ಆಶಾಶೂನ್ಯವಾಗಿ ಕಾಣಬಹುದು. ಆದರೆ 1914 ರ ವಿಶೇಷತೆಯನ್ನು ಅಧ್ಯಯನ ಮಾಡಿದ ಅನೇಕರು, ಒಂದು ಉತ್ತಮ ಭವಿಷ್ಯತ್ತಿನಲ್ಲಿ ನಿರೀಕ್ಷೆಗಾಗಿ ಆಧಾರವನ್ನು ಕಂಡುಕೊಂಡಿದ್ದಾರೆ.
1914 ರಲ್ಲಿ ಮಾನವ ಕುಲವು ಒಂದು “ಪ್ರಸವ ವೇದನೆಯ ಪ್ರಾರಂಭ” ವೆಂದು ಕರೆಯಲ್ಪಡುವುದನ್ನು ಅನುಭವಿಸಿತ್ತೆಂದು ಕಾವಲಿನಬುರುಜು ದಶಮಾನಗಳಿಂದ ವಿವರಿಸಿಯದೆ. ಆ ಹೇಳಿಕೆಯು, ಮನುಷ್ಯನ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ಮುಂಚಿತವಾಗಿ ಬರಲಿರುವ ಘಟನಾವಳಿಗಳ ಕುರಿತಾದ ಯೇಸುವಿನ ಮಹಾ ಪ್ರವಾದನೆಯ ಒಂದು ಭಾಗವಾಗಿರುತ್ತದೆ.—ಮತ್ತಾಯ 24:7, 8.
ಇಂದು ಮಾನವ ಕುಲದ ಒಂದು ಚಿಕ್ಕ ಪ್ರತಿಶತವು 1914 ರ ಆ ನಾಟಕೀಯ ಘಟನಾವಳಿಗಳನ್ನು ಇನ್ನೂ ಮರುಕಳಿಸಬಲ್ಲದು. ವಯಸ್ಸಾದ ಆ ಸಂತತಿಯು ದೇವರು ಭೂಮಿಯನ್ನು ಧ್ವಂಸದಿಂದ ರಕ್ಷಿಸುವ ಮುಂಚೆ ದಾಟಿಹೋಗುವುದೋ? ಬೈಬಲ್ ಪ್ರವಾದನೆಗೆ ಅನುಸಾರವಾಗಿ—ಇಲ್ಲ. “ನೀವು ಸಹ ಇದನ್ನೆಲ್ಲಾ ನೋಡುವಾಗ,” ಯೇಸು ವಾಗ್ದಾನಿಸಿದ್ದು, “ಆ ದಿನವು ಹತ್ತರವದೆ, ಬಾಗಲಲ್ಲೇ ಅದೆ ಎಂದು ತಿಳಿದುಕೊಳ್ಳಿರಿ. ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 24:33, 34.
ಅಂಥ ಚಾರಿತ್ರಿಕ ಗರ್ಭಿತಾರ್ಥವು 1914 ನೆಯ ವರ್ಷಕ್ಕೆ ಇರುವುದೇಕೆ ಎಂಬದನ್ನು ತಿಳಿಯಲಿಕ್ಕಾಗಿ, 1914 ರ ಮಧ್ಯದ ತನಕದ ಜಾಗತಿಕ ಪರಿಸ್ಥಿತಿಯನ್ನು ತುಸು ಗಮನಿಸಿರಿ. ಆ ಸಮಯಕ್ಕೆ ಮುಂಚೆ, ರಶ್ಯಾದ ಟ್ಸಾರ್ ನಿಕೊಲಸ್ ಮತ್ತು ಜರ್ಮನಿಯ ಕೈಸರ್ ವಿಲ್ಹೆಲ್ಮ್ ಮತ್ತು ಆಷ್ಟ್ರಿಯ-ಹಂಗೆರಿಯ ಸಾಮ್ರಾಟ ಫ್ರಾಂಟ್ಸ್ ಯೊಸೀಫ್ ಮಹಾ ಪ್ರಾಬಲ್ಯವನ್ನು ಪ್ರದರ್ಶಿಸಿದ್ದರು. ಇವರಲ್ಲಿ ಪ್ರತಿಯೊಬ್ಬ ಪುರುಷನು ಸುಮಾರು ನಾಲ್ವತ್ತು ಲಕ್ಷ ಕಾದಾಳುಗಳನ್ನು ಸಜ್ಜುಗೊಳಿಸಿ, ಯುದ್ಧಕ್ಕೆ ಕಳುಹಿಸಲು ಶಕ್ತರಿದ್ದನು. ಆದರೆ ಅವರ ಮೂಲಪಿತೃಗಳು, ಏಕ “ಕ್ರೈಸ್ತ ರಾಷ್ಟ್ರ” ದ ವಿವಿಧ ಭಾಗಗಳನ್ನಾಳಲು ದೇವರು ಅವರನ್ನು ನೇಮಿಸಿದ್ದಾನೆಂದು ಘೋಷಿಸುತ್ತಾ, ಪವಿತ್ರ ಬೀಗತನ ಎಂಬ ಮೈತ್ರಿಗೆ ಸಹಿಹಾಕಿದ್ದರು.
ದ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಕ್ಕೆ ಅನುಸಾರವಾಗಿ, ಈ ಪ್ರಮಾಣಪತ್ರವು “19 ನೆಯ ಶತಮಾನದ ಯೂರೋಪಿಯನ್ ರಾಜತಂತ್ರದ ಕಾರ್ಯವಿಧಾನದ ಮೇಲೆ ಪ್ರಬಲವಾದ ಪರಿಣಾಮ ಬೀರಿತು.” ಪ್ರಜಾರಾಜ್ಯದ ಚಳವಳಿಯನ್ನು ವಿರೋಧಿಸಲು ಮತ್ತು ಅರಸರ ದೈವಿಕ ಹಕ್ಕಿನ ವಾದಕ್ಕೆ ಬೆಂಬಲವೀಯಲು ಅದನ್ನು ಬಳಸಲಾಗಿತ್ತು. “ಕ್ರೈಸ್ತ ಅರಸುಗಳಾದ ನಮಗೆ,” ಕೈಸರ ವಿಲ್ಹೆಲ್ಮ್ನು ಟ್ಸಾರ್ ನಿಕೊಲಸ್ಗೆ ಬರೆದದ್ದು, “ಪರಲೋಕದಿಂದ ವಿಧಿಸಲ್ಪಟ್ಟ ಒಂದು ಪವಿತ್ರ ಕರ್ತವ್ಯವು ಇದೆ, ಅದ್ಯಾವುದಂದರೆ, [ಅರಸರ ದೈವಿಕ ಹಕ್ಕು] ಎಂಬ ತತ್ವವನ್ನು ಎತ್ತಿಹಿಡಿಯುವುದೇ.” ಯೂರೋಪಿನ ಅರಸರಿಗೆ ಹೇಗೋ ದೇವರ ರಾಜ್ಯದೊಂದಿಗೆ ಸಂಬಂಧವಿತ್ತೆಂದು ಇದರ ಅರ್ಥವಾಗಿತ್ತೋ? (1 ಕೊರಿಂಥ 4:8 ಕ್ಕೆ ಹೋಲಿಸಿರಿ.) ಮತ್ತು ಈ ಅರಸುಗಳನ್ನು ಬೆಂಬಲಿಸಿದ್ದ ಚರ್ಚುಗಳ ಕುರಿತಾಗಿ ಏನು? ಅವರ ಕ್ರೈಸ್ತತ್ವದ ವಾದವು ಸತ್ಯವಾಗಿತ್ತೋ? ಈ ಪ್ರಶ್ನೆಗಳಿಗೆ ಉತ್ತರವು 1914 ನ್ನು ಒಡನೆ ಹಿಂಬಾಲಿಸಿ ಬಂದ ವರ್ಷಗಳಲ್ಲಿ ಸ್ಪಷ್ಟವಾಗಿಗಿ ತೋರಿಬಂತು.
ಆಗಸ್ಟ್ನಲ್ಲಿ, ಫಕ್ಕನೆ
“ಯೂರೋಪಿನಲ್ಲಿ 1914 ರ ವಸಂತ ಋತು ಮತ್ತು ಬೇಸಗೆಯು ಒಂದು ಅಸಾಧಾರಣವಾದ ಪ್ರಶಾಂತಿಯಿಂದ ಗುರುತಿಸಲ್ಪಟ್ಟಿತ್ತು,” ಎಂದು ಬರೆದರು ಬ್ರಿಟಿಷ್ ರಾಜನೀತಿಜ್ಞ ವಿನ್ಸ್ಟನ್ ಚರ್ಚಿಲ್. ಜನರು ಸಾಮಾನ್ಯವಾಗಿ ಭವಿಷ್ಯತ್ತಿನ ಕುರಿತಾಗಿ ಆಶಾವಾದಿಗಳಾಗಿದ್ದರು. “1914 ರ ಲೋಕವು ನಿರೀಕ್ಷೆ ಮತ್ತು ಆಶಾಪೂರ್ಣತೆಯಿಂದ ತುಂಬಿತ್ತು,” ಎಂದರು ಲೂಯಿ ಸ್ನೆಯ್ಡರ್, ವರ್ಲ್ಡ್ ವಾರ್ I ಎಂಬ ತನ್ನ ಪುಸ್ತಕದಲ್ಲಿ.
ಹೌದು, ಅನೇಕ ವರ್ಷಗಳ ತನಕ ಜರ್ಮನಿ ಮತ್ತು ಬ್ರಿಟನ್ನ ನಡುವೆ ತೀವ್ರ ಪ್ರತಿಸ್ಪರ್ಧೆಯು ನಡಿಯುತ್ತಿತ್ತು. ಆದಾಗ್ಯೂ, ಚರಿತ್ರೆಗಾರ ಜಿ. ಪಿ. ಗೂಚ್ ತನ್ನ ಪುಸ್ತಕವಾದ ಅಂಡರ್ ಸಿಕ್ಸ್ ರೆಯ್ನ್ಸ್ ನಲ್ಲಿ ವಿವರಿಸುವುದು: “ಒಂದು ಯೂರೋಪಿಯನ್ ಹೋರಾಟಕ್ಕೆ 1911, 1912 ಅಥವಾ 1913 ರಲ್ಲಿ ಇದದ್ದಕ್ಕಿಂತ 1914 ರಲ್ಲಿ ಕಡಿಮೆ ಸಂಭವನೀಯತೆ ಇತ್ತು. . . . ಎರಡೂ ಸರಕಾರಗಳ ನಡುವಣ ಸಂಬಂಧವು ಬೇರೆ ವರ್ಷಗಳಲ್ಲಿದ್ದದ್ದಕ್ಕಿಂತ ಹೆಚ್ಚು ಉತ್ತಮವಾಗಿತ್ತು.” 1914 ರ ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ವಿನ್ಸ್ಟನ್ ಚರ್ಚಿಲ್ರಿಗನುಸಾರ: “ಶಾಂತಿಯನ್ನು ತರುವ ನಿರ್ಧಾರದಲ್ಲಿ ಜರ್ಮನಿಯು ನಮ್ಮೊಂದಿಗಿದ್ದಂತೆ ಕಂಡುಬಂದಿತ್ತು.”
ಆದರೂ ಜೂನ್ 28, 1914 ರಲ್ಲಿ, ಆಸ್ಟ್ರಿಯ-ಹಂಗೆರಿ ಸಾಮ್ರಾಜ್ಯದ ಯುವರಾಜನನ್ನು ಸಾರಾಯೆವೂದಲ್ಲಿ ಹತ್ಯೆಮಾಡಿದಾಗ, ದಿಗಂತದಲ್ಲಿ ಒಂದು ಕರಾಳ ಮೋಡವು ಗೋಚರಿಸಿತು. ಒಂದು ತಿಂಗಳ ನಂತರ ಸಾಮ್ರಾಟ ಫ್ರಾಂಟ್ಸ್ ಯೊಸೀಫ್ ಸರ್ಬಿಯದ ಮೇಲೆ ಯುದ್ಧ ಘೋಷಣೆ ಮಾಡಿದನು ಮತ್ತು ಆ ರಾಜ್ಯವನ್ನು ಆಕ್ರಮಿಸಲು ತನ್ನ ದಂಡುಗಳನ್ನು ಕಳುಹಿಸಿದನು. ಈ ಮಧ್ಯೆ, ಆಗಸ್ಟ್ 3, 1914 ರ ರಾತ್ರಿ ಕೈಸರ ವಿಲ್ಹೆಲ್ಮ್ನ ಅನುಜ್ಞೆಪಡೆದ ಒಂದು ದೊಡ್ಡ ಜರ್ಮನ್ ಸೇನೆಯು ಫಕ್ಕನೆ ಬೆಲ್ಚಿಯಂ ರಾಜ್ಯವನ್ನು ಆಕ್ರಮಿಸಿ, ಫ್ರಾನ್ಸಿನ ಕಡೆಗೆ ಹೋರಾಟ ನಡಿಸುತ್ತಾ ಮುಂದರಿಯಿತು. ಮರುದಿನವೇ ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿತು. ಟ್ಸಾರ್ ನಿಕೊಲಸ್ನಾದರೋ ಜರ್ಮನಿ ಮತ್ತು ಆಸ್ಟ್ರಿಯ-ಹಂಗೆರಿ ಮೇಲೆ ಯುದ್ಧ ನಡಿಸಲು ಒಂದು ಮಹಾ ರಶ್ಯನ್ ದಂಡನ್ನು ಸಜ್ಜುಗೊಳಿಸುವಂತೆ ಆಜ್ಞೆಕೊಟ್ಟನು. ಭೂಖಂಡವನ್ನು ಪರಸ್ಪರ ಸಂಹಾರದ ರಕ್ತಪಾತಕ್ಕೆ ದುಮುಕಿಸುವುದರಿಂದ ಯೂರೋಪಿನ ಅರಸರನ್ನು ತಡೆಯಲು ಪವಿತ್ರ ಬೀಗತನವು ತಪ್ಪಿಹೋಯಿತು. ಆದರೆ ದೊಡ್ಡ ಧಕ್ಕೆಗಳು ಇನ್ನೂ ಬರಲಿಕ್ಕಿದ್ದವು.
ಕ್ರಿಸ್ಮಸ್ನೊಳಗೆ ಮುಗಿಯುವುದೋ?
ಯುದ್ಧದ ತಲೆದೋರುವಿಕೆಯು ಜನರ ಆಶಾವಾದವನ್ನು ಕುಗ್ಗಿಸಲಿಲ್ಲ. ಅದು ಒಂದು ಹೆಚ್ಚು ಉತ್ತಮವಾದ ಲೋಕವನ್ನು ಉಂಟುಮಾಡುವುದೆಂದು ಅನೇಕರು ನಂಬಿದರು, ಮತ್ತು ಅದಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಯೂರೋಪಿನಲ್ಲೆಲ್ಲೂ ಜನ ಸಮುದಾಯವು ಕೂಡಿಬಂತು. “1914 ರಲ್ಲಿ ಯಾರೂ,” ಎ.ಜೆ.ಪಿ. ಟೈಲರ್, ದ ಸ್ಟ್ರಗಲ್ ಫಾರ್ ಮಾಸ್ಟರಿ ಇನ್ ಯೂರೋಪ್ ಎಂಬ ತನ್ನ ಪುಸ್ತಕದಲ್ಲಿ ಬರೆದದ್ದು, “ಮಿಲಿಟರಿ ವೈಶಿಷ್ಟ್ಯಕ್ಕೇ ಹೊರತು ಯುದ್ಧದ ಗಂಡಾಂತರಗಳಿಗೆ ಗಂಭೀರ ಗಮನವನ್ನು ಕೊಟ್ಟಿರಲಿಲ್ಲ. . . . ಒಂದು ಸಾಮಾಜಿಕ ವಿನಾಶವನ್ನು ಯಾರೂ ನಿರೀಕ್ಷಿಸಿರಲಿಲ್ಲ.” ಬದಲಿಗೆ ಕೆಲವೇ ತಿಂಗಳುಗಳೊಳಗೆ ಯುದ್ಧವು ಮುಗಿಯುವುದೆಂದು ಅನೇಕರು ಕಾಲಜ್ಞಾನ ನುಡಿದರು.
ಆದರೂ, ಯೂರೋಪಿಯನರು 1914 ರ ತಮ್ಮ ಕ್ರಿಸ್ಮಸನ್ನು ಆಚರಿಸುವ ಬಹಳ ಮುಂಚೆಯೇ, ದಕ್ಷಿಣದಲ್ಲಿ ಸ್ವಿಟ್ಸ್ರ್ಲೆಂಡ್ನಿಂದ ಹಿಡಿದು ಉತ್ತರದಲ್ಲಿ ಬೆಲ್ಚಿಯಂ ಕರಾವಳಿಯ ತನಕ 700 ಕಿಲೊಮೀಟರಿಗಿಂತಲೂ ಉದ್ದ ಚಾಚಿದ್ದ ಕಂದಕಗಳ ಸಾಲಿನಲ್ಲಿ ಒಂದು ರಕ್ತಮಯ ತಡೆಗಟ್ಟು ವಿಕಸನಗೊಂಡಿತ್ತು. ಇದನ್ನು ಪಶ್ಚಿಮ ಸೇನಾಮುಖವೆಂದು ಕರೆಯಲಾಗಿತ್ತು, ಮತ್ತು ಜರ್ಮನ್ ಕರ್ತೃ ಹರ್ಬರ್ಟ್ ಸೆಲ್ಸ್ಬೆಕ್ 1914 ರ ಕೊನೆಯ ದಿನದಂದು ತನ್ನ ಡೈರಿಯಲ್ಲಿ ಮಾಡಿದ್ದ ಒಂದು ದಾಖಲೆಯಲ್ಲಿ ಅದನ್ನು ತಿಳಿಸಿದ್ದನು. ಆ ದಾಖಲೆ ಓದುವುದು: “ಈ ಭೀಕರ ಯುದ್ಧವು ಮುಂದೆ ಮುಂದಕ್ಕೇ ಸಾಗುತ್ತಿದೆ. ಪ್ರಾರಂಭದಲ್ಲಿ ಕೆಲವೇ ವಾರಗಳೊಳಗೆ ಅದು ಮುಗಿಯುವುದೆಂದು ಯಾರಾದರೂ ನೆನಸಿದ್ದರೆ, ಅದೀಗ ಮುಗಿಯುವಂತೆಯೇ ತೋರುವುದಿಲ್ಲ.” ಈ ಮಧ್ಯೆ, ಯೂರೋಪಿನ ಇತರ ಭಾಗಗಳಲ್ಲಿ ರಶ್ಯಾ, ಜರ್ಮನಿ, ಆಸ್ಟ್ರಿಯ-ಹಂಗೆರಿ, ಮತ್ತು ಸರ್ಬಿಯದ ಸೇನೆಗಳ ನಡುವೆ ರಕ್ತಮಯ ಯುದ್ಧಗಳು ಉಗ್ರವಾಗ ತೊಡಗಿದವು. ಸಮರವು ಬೇಗನೇ ಯೂರೋಪಿನ ಆಚೆ ಕಡೆಗೂ ಹರಡಿತು, ಮತ್ತು ಸಾಗರಗಳಲ್ಲಿ ಮತ್ತು ಆಫ್ರಿಕದಲ್ಲಿ, ಮಧ್ಯಪೂರ್ವ ಮತ್ತು ಪ್ಯಾಸಿಫಿಕ್ ದ್ವೀಪಗಳಲ್ಲಿ ಹೋರಾಟಗಳು ನಡಿಸಲ್ಪಟ್ಟವು.
ನಾಲ್ಕು ವರ್ಷಗಳ ತರುವಾಯ ಯೂರೋಪು ಧ್ವಂಸವಾಗಿ ಹೋಗಿತ್ತು. ಜರ್ಮನಿ, ರಶ್ಯಾ, ಆಸ್ಟ್ರಿಯ-ಹಂಗೆರಿಯಲ್ಲಿ ಪ್ರತಿಯೊಂದು ಸುಮಾರು ಹತ್ತು-ಇಪ್ಪತ್ತು ಲಕ್ಷ ಸೈನಿಕರನ್ನು ಕಳಕೊಂಡಿತ್ತು. ರಶ್ಯವು 1917 ರ ಬಾಲಿವ್ಷಿಕ್ ಕ್ರಾಂತಿಯಲ್ಲಿ ತನ್ನ ರಾಜ ಪ್ರಭುತ್ವವನ್ನು ಸಹ ಕಳಕೊಂಡಿತ್ತು. ಯೂರೋಪಿನ ಅರಸರುಗಳಿಗೆ ಮತ್ತು ವೈದಿಕ ಬೆಂಬಲಿಗರಿಗೆ ಎಂಥ ಧಕ್ಕೆಯದು! ಆಧುನಿಕ ಇತಿಹಾಸಗಾರರು ಆ ಬಗ್ಗೆ ಇನ್ನೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಗೋರ್ಡನ್ ಬ್ರೂಕ್ ಶೆಪರ್ಡ್, ತನ್ನ ಪುಸ್ತಕವಾದ ರಾಯಲ್ ಸನ್ಸೆಟ್ನಲ್ಲಿ ಕೇಳುವುದು: “ಹೆಚ್ಚಾಗಿ ರಕ್ತ ಸಂಬಂಧಿಗಳೂ ಯಾ ವಿವಾಹ ಸಂಬಂಧಿಗಳೂ ಆಗಿದ್ದ ಆ ಅರಸರು ಮತ್ತು ರಾಜಪದದ ಸಂರಕ್ಷಣೆಗಾಗಿ ಮುಡಿಪಾಗಿದ್ದ ಅವರೆಲ್ಲರು, ತಮ್ಮಲ್ಲಿ ಹಲವಾರು ಮಂದಿಯನ್ನು ನಿರ್ಮೂಲಗೊಳಿಸಿದ ಹಾಗೂ ಪಾರಾಗಿ ಉಳಿದವರನ್ನು ನಿರ್ಬಲರಾಗಿ ಬಿಟ್ಟುಹೋದ ಒಂದು ಭಾತೃಘಾತಕ ರಕ್ತಸ್ನಾನದೊಳಗೆ ಜಾರಿಬೀಳುವಂತೆ ತಮ್ಮನ್ನು ಬಿಟ್ಟುಕೊಟ್ಟದ್ದು ಹೇಗೆ?”
ಫ್ರಾನ್ಸ್ ಗಣರಾಜ್ಯ ಸಹ ಹತ್ತು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡಿತು, ಮತ್ತು ಯಾರ ರಾಜಪ್ರಭುತ್ವವು ಯುದ್ಧಕ್ಕೆ ಬಹುಮುಂಚೆ ಆವಾಗಲೇ ನಿರ್ಬಲವಾಗಿತ್ತೋ ಆ ಬ್ರಿಟಿಷ್ ಸಾಮ್ರಾಜ್ಯವು 9,00,000 ಕ್ಕಿಂತಲೂ ಹೆಚ್ಚು ಮಂದಿಯನ್ನು ಕಳಕೊಂಡಿತು. ಎಲ್ಲಾ ಒಟ್ಟಿಗೆ 90 ಲಕ್ಷ ಸೈನಿಕರು ಸತ್ತರು ಮತ್ತು ಇನ್ನು 2 ಕೋಟಿ 10 ಲಕ್ಷ ಗಾಯಗೊಂಡರು. ಯೋಧ್ಯೇತರ ನಷ್ಟಗಳ ಕುರಿತು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ವ್ಯಾಧಿ, ಹಸಿವು, ಮತ್ತು ಬೇರೆ ಯುದ್ಧ ಸಂಬಂಧಿತ ಕಾರಣಗಳಿಂದಾಗಿ ಇನ್ನೆಷ್ಟು ಮಂದಿ ನಾಗರಿಕರು ಸತ್ತರೆಂಬದು ಯಾರಿಗೂ ಗೊತ್ತಿಲ್ಲ. ಸೈನಿಕರಷ್ಟೇ ಸಂಖ್ಯೆಯಲ್ಲಿ ನಾಗರಿಕರೂ ಸತ್ತರೆಂದು ಕೆಲವು ಇತಿಹಾಸಕಾರರು ನಂಬುತ್ತಾರೆ.” 1918 ರ ಸ್ಪೇನಿಶ್ ಫ್ಲೂ ಅಂಟು ಜಾಡ್ಯವು ಭೂಸುತ್ತಲೂ ಇನ್ನೊಂದು 2,10,00,000 ಜೀವಗಳನ್ನು ಬಲಿ ತಕ್ಕೊಂಡಿತು.
ಆಮೂಲಾಗ್ರ ಬದಲಾವಣೆ
ಆಗ ಮಹಾ ಯುದ್ಧವೆಂದು ಕರೆಯಲ್ಪಟ್ಟಿದ್ದ ಆ ಯುದ್ಧದ ನಂತರ ಲೋಕವೆಂದೂ ಅದೇ ಆಗಿರಲಿಲ್ಲ. ಕ್ರೈಸ್ತ ಪ್ರಪಂಚದ ಎಷ್ಟೋ ಹೆಚ್ಚು ಚರ್ಚುಗಳು ಅದರಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರ್ದಿಂದ, ಆಶಾಭಂಗಗೊಂಡ ಪಾರಾದವರು ತಮ್ಮ ಧರ್ಮಕ್ಕೆ ಬೆನ್ನು ಹಾಕಿ ನಾಸ್ತಿಕತೆಯನ್ನು ಅವಲಂಬಿಸಿದರು. ಇತರರು ಪ್ರಾಪಂಚಿಕ ಐಶ್ವರ್ಯ ಮತ್ತು ಸುಖಭೋಗಗಳನ್ನು ಬೆನ್ನಟ್ಟಲು ತಿರುಗಿದರು. 1920 ನೆಯ ವರ್ಷಗಳು “ಸುಖತತ್ವ ವಿಚಾರ ಮತ್ತು ಸ್ವಾರಾಧನಾ ಪ್ರವೃತ್ತಿಗಳು ಗಮನಾರ್ಹವಾಗಿ ಹೆಚ್ಚುವುದನ್ನು ಕಂಡವು” ಎಂದು ಪ್ರೊಫೆಸರ್ ಮಾಡ್ರಿಸ್ ಎಕ್ಸ್ಟಿನ್ಸ್ ತನ್ನ ಪುಸ್ತಕವಾದ ರೈಟ್ಸ್ ಆಫ್ ಸ್ಪ್ರಿಂಗ್ನಲ್ಲಿ ತಿಳಿಸಿದ್ದಾನೆ.
“ಆ ಯುದ್ಧವು,” ಪ್ರೊಫೆಸರ್ ಎಕ್ಸ್ಟಿನ್ಸ್ ವಿವರಿಸುವುದು, “ನೈತಿಕ ಮಟ್ಟಗಳ ಮೇಲೆ ಆಕ್ರಮಣ ಮಾಡಿತು.” ಸಾಮೂಹಿಕ ಕೊಲೆಯು ನೈತಿಕವಾಗಿ ಉತ್ತಮವೆಂದು ಎರಡೂ ಪಕ್ಷಗಳ ಜನರಿಗೆ ಧಾರ್ಮಿಕ, ಮಿಲಿಟರಿ ಮತ್ತು ರಾಜಕೀಯ ಮುಖಂಡರಿಂದ ಕಲಿಸಲ್ಪಟ್ಟಿತ್ತು. ಇದು, ಎಕ್ಸ್ಟಿನ್ಸ್ ಒಪ್ಪುವುದು, “ಒಂದು ಯೆಹೂದಿ-ಕ್ರಿಸ್ತೀಯ ನೀತಿತತ್ವಗಳಲ್ಲಿ ಬೇರೂರಿದ್ದೆಂದು ವಾದಿಸಲ್ಪಟ್ಟ ನೈತಿಕ ವ್ಯವಸ್ಥೆಯ ಮೇಲಣ ಆಕ್ರಮಣಗಳಲ್ಲಿ ಅತ್ಯಂತ ಅಸಂಸ್ಕೃತವಾಗಿತ್ತು.” “ಪಶ್ಚಿಮ ಸೇನಾಮುಖದಲ್ಲಿ,” ಅವನು ಮತ್ತೂ ಅಂದದ್ದು, “ಬೇಗನೇ ವೇಶ್ಯಾಗೃಹಗಳು ಮಿಲಿಟರಿ ಶಿಬಿರಗಳ ಕ್ರಮದ ಉಪಬಂಧಗಳಾದವು. . . . ಮನೆಯ ಸರಹದ್ದಿನಲ್ಲೂ ಸ್ತ್ರೀಯರು ಮತ್ತು ಪುರುಷರ ಅನೈತಿಕತೆಗಿಳಿದರು. ವೇಶ್ಯಾವೃತ್ತಿಯು ಗಮನಾರ್ಹವಾಗಿ ವೃದ್ಧಿಯಾಯಿತು.”
ನಿಶ್ಚಯವಾಗಿ 1914 ಹೆಚ್ಚನ್ನು ಬದಲಾಯಿಸಿತು. ಅದು ಒಂದು ಹೆಚ್ಚು ಉತ್ತಮ ಲೋಕವನ್ನು ಉತ್ಪಾದಿಸಲಿಲ್ಲ, ಮತ್ತು ಅನೇಕ ಜನರು ನಿರೀಕ್ಷಿಸಿದ್ದ ಮೇರೆಗೆ “ಎಲ್ಲಾ ಯುದ್ಧಗಳನ್ನು ಅಂತ್ಯಗೊಳಿಸುವ ಯುದ್ಧವಾಗಿ” ಪರಿಣಮಿಸಲೂ ಇಲ್ಲ. ಬದಲಿಗೆ, ಚರಿತ್ರೆಗಾರ್ತಿ ಬಾರ್ಬ್ರಾ ಟಕ್ಮನ್ ಅವಲೋಕಿಸಿದಂತೆ: “1914 ರ ತನಕ ಶಕ್ಯವಾಗಿದ್ದ ಭ್ರಾಂತಿಕಾರಕ ವಿಚಾರಗಳು ಮತ್ತು ಅತ್ಯುತ್ಸಾಹಗಳು ಮಹಾ ಆಶಾಭಂಗದ ಸಾಗರದೊಳಗೆ ನಿಧಾನವಾಗಿ ಮುಳುಗಿಹೋದವು.”
ಆದರೂ 1914 ರ ದುರಂತವನ್ನು ಕಣ್ಣಾರೆ ಕಂಡ ಕೆಲವರು ಆ ವರ್ಷದ ಘಟನಾವಳಿಗಳಿಂದ ಆಶ್ಚರ್ಯಪಡಲಿಲ್ಲ. ವಾಸ್ತವದಲ್ಲಿ ಆ ಯುದ್ಧವು ತಲೆದೋರುವ ಮುಂಚೆಯೇ ಅವರು “ಬಹಳ ತೊಂದರೆಯ ಕಾಲವನ್ನು” ಎದುರುನೋಡುತ್ತಿದ್ದರು. ಅವರು ಯಾರು? ಮತ್ತು ಇತರರಿಗೆ ತಿಳಿಯದೆ ಇದ್ದ ಏನನ್ನು ಅವರು ತಿಳಿದಿದ್ದರು? (w92 5⁄1)
[ಪುಟ 5 ರಲ್ಲಿರುವ ಚೌಕ]
1914 ರಲ್ಲಿ ಬ್ರಿಟಿಷ್ ಆಶಾವಾದ
“ಸುಮಾರು ಒಂದು ಶತಮಾನದಿಂದ ನಮ್ಮ ದ್ವೀಪದ ಸುತ್ತಲ ಸಾಗರಗಳಲ್ಲಿ ಯಾವ ಶತ್ರುವೂ ಗೋಚರಿಸಿರಲಿಲ್ಲ. . . . ಈ ಶಾಂತಿಭರಿತ ತೀರಗಳಿಗೆ ಒಂದು ಬೆದರಿಕೆಯ ಶಕ್ಯತೆಯನ್ನು ಮನದಲ್ಲಿ ರೂಪಿಸಿಕೊಳ್ಳುವುದು ಕೂಡ ಕಷ್ಟವಾಗಿತ್ತು. . . . ಲಂಡನ್ ಹಿಂದೆಂದೂ ಅಷ್ಟು ಗೆಲವಿನಲ್ಲಿ ಮತ್ತು ಅಷ್ಟು ಸಮೃದ್ಧಿಯಲ್ಲಿ ಇದ್ದಂತೆ ತೋರಿರಲಿಲ್ಲ. ಮಾಡಲು, ನೋಡಲು ಮತ್ತು ಕೇಳಲು ಅರ್ಹವಾದ ಅಷ್ಟೊಂದು ವಿಷಯಗಳು ಹಿಂದೆಂದೂ ಇರಲಿಲ್ಲ. ವೃದ್ಧರಿಗಾಗಲಿ ಯುವಕರಿಗಾಗಲಿ, ಆ ಅತುಲ್ಯವಾದ 1914ರ ಕಾಲಾವಧಿಯಲ್ಲಿ ತಾವೇನನ್ನು ನೋಡುತ್ತಿದ್ದೇವೋ ಅದು ವಾಸ್ತವದಲ್ಲಿ ಒಂದು ಯುಗದ ಅಂತ್ಯವೇ ಎಂಬ ಯಾವ ಸುಳಿವೂ ಇರಲಿಲ್ಲ.”—ಬಿಫೋರ್ ದ ಲ್ಯಾಂಪ್ಸ್ ವೆಂಟ್ ಔಟ್, ಜೆಫಿ ಮಾರ್ಕುಸ್ ಇವರಿಂದ.