ಪಾರಾಗುವಿಕೆಗಾಗಿ ಸ್ಪ್ಯಾನಿಷ್ ಬೈಬಲ್ನ ಹೋರಾಟ
ಉತ್ತರದಲ್ಲಿರುವ ವಾಲೆಡಲಿಡ್ ಶಹರಕ್ಕೆ ಸುಮಾರು 2,00,000 ಸ್ಪಾನಿಷ್ ಕ್ಯಾತೊಲಿಕರು 1559 ರ ಒಂದು ಅಕ್ಟೋಬರ ದಿನದಂದು ಕೂಡಿಬಂದಿದ್ದರು. “ಇಬ್ಬರು ಸಜೀವವಾಗಿ ಸುಡಲ್ಪಟ್ಟ ಮತ್ತು ಹತ್ತು ಮಂದಿ ಕುತ್ತಿಗೆ ಹಿಸುಕಿಕೊಲ್ಲಲ್ಪಟ್ಟ” ಧರ್ಮಭ್ರಷ್ಟರ ದಹನವು ಆ ಆಕರ್ಷಣೆಯಾಗಿತ್ತು. ಅವರು “ಪಾಷಂಡಿ” ಗಳಾಗಿದ್ದರು.
ಜನಪ್ರಿಯ ಯುವ ಅರಸ ಫಿಲಿಪ್ II ಸ್ವತಃ ಆ ಘಟನಾವಳಿಯ ಅಧ್ಯಕ್ಷತೆ ವಹಿಸಿದ್ದನು. ಮರಣ ದಂಡನೆಗೆ ಗುರಿಯಾಗಿದ್ದ ಒಬ್ಬ ಮನುಷ್ಯನು ಕೃಪಾಭಿಕ್ಷೆಯನ್ನು ಬೇಡಿದಾಗ, ಅರಸನು ಮಾರ್ನುಡಿದದ್ದು: “ನನ್ನ ಸ್ವಂತ ಮಗನು ನಿನ್ನಂತಹ ನೀಚನಾಗಿದ್ದರೆ, ಸ್ವತಃ ನಾನೇ ಸೌದೆಯ ಕಂತೆಯನ್ನು ತಂದು ಅವನನ್ನು ಸುಟ್ಟು ಬಿಡುತ್ತಿದ್ದೆನು.” ಆ ದುರವಸ್ಥೆಗೆ ತುತ್ತಾದ ವ್ಯಕ್ತಿಯು ಮಾಡಿದ ತಪ್ಪೇನು? ಅವನು ಕೇವಲ ಬೈಬಲಿನ ವಾಚನವನ್ನು ಮಾಡಿದ್ದನು.
ಅದೇ ಸಮಯದಲ್ಲಿ, ಕ್ಯಾತೊಲಿಕ್ ಮಠೀಯ ನ್ಯಾಯಸ್ಥಾನದ ಸಂಘಟನೆಯು ಸ್ಯಾವಿಲ್ನ ಆ್ಯಂಡಲೂಶಿಯನ್ ಶಹರದಲ್ಲಿ ಕಾರ್ಯಮಗ್ನವಾಗಿತ್ತು. ಅಲ್ಲಿ ಸಾನ್ ಎಸೆಡ್ರೊ ಡೆಲ್ ಕ್ಯಾಂಪೊ ಸಂನ್ಯಾಸಿ ಮಠದಲ್ಲಿ ಸಂನ್ಯಾಸಿಗಳ ಒಂದು ಗುಂಪಿಗೆ ಸ್ಪ್ಯಾನಿಷ್ ಬೈಬಲಿನ ಒಂದು ಗುಪ್ತ ರವಾನೆಯು ಆಗಲೇ ದೊರಕಿತ್ತು. ಗುಟ್ಟು ಕೊಡುವವರು ತಮಗೆ ದ್ರೋಹ ಮಾಡ್ಯಾರೇ? ತಾವು ಮರಣಾಂತ ಅಪಾಯದಲ್ಲಿದ್ದೇವೆಂದು ಗ್ರಹಿಸಿದ ಕೆಲವರು ದೇಶದಿಂದ ಪಲಾಯನಗೈದರು. ಆದರೆ ಉಳಿದವರಲ್ಲಿ ನಾಲ್ವತ್ತು ಮಂದಿ ಕಡಿಮೆ ಭಾಗ್ಯವಂತರಾಗಿದ್ದು ಕಂಭದ ಮೇಲೆ ಸುಡಲ್ಪಟ್ಟರು, ಅವರೊಂದಿಗೆ ದೇಶದೊಳಗೆ ಬೈಬಲ್ಗಳನ್ನು ಕಳ್ಳಸಾಗಣೆ ಮಾಡಿದ್ದ ಅದೇ ಮನುಷ್ಯನೂ ಸೇರಿದ್ದನು. ಹದಿನಾರನೆಯ ಶತಮಾನದ ಸ್ಪೈಯ್ನ್, ಬೈಬಲ್ ವಾಚಕರಿಗೆ—ಒಂದು ಆಪತ್ಕಾರಕ ಸ್ಥಳವಾಗಿತ್ತು—ಮಠೀಯ ನ್ಯಾಯಸ್ಥಾನದ ಬಿಗಿಮುಷ್ಟಿಯನ್ನು ತಪ್ಪಿಸಿಕೊಂಡವರು ಕೊಂಚಜನ.
ತಪ್ಪಿಸಿಕೊಂಡ ಕೆಲವರಲ್ಲಿ ಹಿಂದಣ ಸಂನ್ಯಾಸಿ ಕ್ಯಾಸಡೊರೊ ಡಾ ರೇನ ಒಬ್ಬನಾಗಿದ್ದನು. (ಸುಮಾರು 1520-94) ಅವನು ಲಂಡನಿಗೆ ಪಲಾಯನಗೈದನು, ಆದರೆ ಅಲಿಯ್ಲೂ ಅವನು ಸುರಕ್ಷಿತನಾಗಿರಲಿಲ್ಲ. ಮಠೀಯ ನ್ಯಾಯಸ್ಥಾನವು ಅವನ ತಲೆಗೆ ಬೆಲೆಯಿಟ್ಟಿತು, ಮತ್ತು ಇಂಗ್ಲಿಷ್ ಕೋರ್ಟಿನ ಸ್ಪ್ಯಾನಿಷ್ ರಾಯಭಾರಿಯು ನ್ಯಾಯದಿಂದಲೋ ಅನ್ಯಾಯದಿಂದಲೋ ಅವನನ್ನು ಸ್ಪ್ಯಾನಿಷ್-ಪ್ರಭುತ್ವದ ಕ್ಷೇತ್ರದೊಳಗೆ ಹಿಂದೆ ಸೆಳೆಯಲು ಸಂಚುಹೂಡಿದನು. ಸ್ವಲ್ಪ ಸಮಯದೊಳಗೆ ವ್ಯಭಿಚಾರ ಮತ್ತು ಸಲಿಂಗಿಕಾಮದ ಸುಳ್ಳು ಅಪಾದನೆಗಳು ಅವನನ್ನು ಇಂಗ್ಲೆಂಡನ್ನು ಬಿಟ್ಟುಹೋಗುವಂತೆ ನಿರ್ಬಂಧಿಸಿದವು.
ಜೀವನೋಪಾಯಕ್ಕಾಗಿ ಕೊಂಚವೇ ಸಾಧನಗಳು ಮತ್ತು ಸದಾ ಬೆಳೆಯುತ್ತಿದ್ದ ಕುಟುಂಬದ ಪೋಷಣೆಯೊಂದಿಗೆ, ಅವನು ಮೊದಲಾಗಿ ಫ್ರಾಂಕ್ಫರ್ಟ್ನಲ್ಲಿ ಆಶ್ರಯವನ್ನು ಕಂಡುಕೊಂಡನು. ತದನಂತರ, ಅವನ ಧಾರ್ಮಿಕ ಆಸರೆಯ ಶೋಧನೆಯು ಅವನನ್ನು ಫ್ರಾನ್ಸ್, ಹೊಲ್ಲೆಂಡ್, ಮತ್ತು ಕೊನೆಗೆ ಸ್ವಿಟ್ಸರ್ಲ್ಯಾಂಡಿಗೆ ನಡಿಸಿತು. ಆದರೂ, ಈ ಎಲ್ಲಾ ಸಮಯದಲ್ಲಿ ಅವನು ಕಾರ್ಯಮಗ್ನನಾಗಿಯೇ ಇದ್ದನು. ‘ಅಸ್ವಸ್ಥನಿದ್ದ ಅಥವಾ ಪ್ರಯಾಣದಲ್ಲಿದ್ದ ಸಮಯವನ್ನು ಬಿಟ್ಟು . . . ನಾನು ನನ್ನ ಕೆಲಸವನ್ನು ನಿಲ್ಲಿಸಿರಲಿಲ್ಲ,’ ಎಂದು ವಿವರಿಸಿದನವನು. ಬೈಬಲನ್ನು ಸ್ಪ್ಯಾನಿಷ್ಗೆ ಭಾಷಾಂತರಿಸುವುದರಲ್ಲಿ ಅವನು ಅನೇಕ ವರ್ಷಗಳನ್ನು ಕಳೆದನು. ರೇನಸ್ ಬೈಬಲಿನ 2,600 ಪ್ರತಿಗಳ ಮುದ್ರಣವು ಕಟ್ಟಕಡೆಗೆ 1568 ರಲ್ಲಿ ಸ್ವಿಟ್ಸರ್ಲೆಂಡ್ನಲ್ಲಿ ಆರಂಭಿಸಿತು ಮತ್ತು 1569 ರಲ್ಲಿ ಕೊನೆಮುಟ್ಟಿತು. ರೇನಸ್ ಭಾಷಾಂತರದ ಒಂದು ಮಹತ್ತಾದ ವೈಶಿಷ್ಟ್ಯವು, ಯೆಹೋವನ ವೈಯಕ್ತಿಕ ನಾಮದ ನಾಲ್ಕು ಹಿಬ್ರೂ ಅಕ್ಷರಗಳ ಪವಿತ್ರಪದವನ್ನು ಸ್ವೇನರ್ [ಕರ್ತನು] ಎಂಬದರ ಬದಲಿಗೆ ಯಿಹೋವ (ಜೆಹೋವ) ಎಂದು ಬಳಸಿರುವುದೇ ಆಗಿದೆ.
ಸ್ಪ್ಯಾನಿಷ್ ಬೈಬಲ್ ರಚನೆಯಲ್ಲಿ
ಅಸಂಗತವಾಗಿಯೋ ಎಂಬಂತೆ, ಮುದ್ರಣ ಯಂತ್ರದ ಸಂಶೋಧನೆಯ ನೆರವಿನಿಂದಾಗಿ, ಬೈಬಲ್ಗಳು ಯೂರೋಪಿನಲ್ಲಿ ಸಮೃದ್ಧವಾಗುತ್ತಾ ಬರುತ್ತಿದ್ದಾಗ, ಸ್ಪೆಯ್ನ್ನಲ್ಲಿ ಅವು ಅಪೂರ್ವವಾಗುತ್ತಾ ಬರುತ್ತಿದ್ದವು. ಅದು ಯಾವಾಗಲೂ ಹೀಗೆ ಇದ್ದಿರಲಿಲ್ಲ. ಶತಮಾನಗಳಿಂದ ಬೈಬಲು ಸ್ಪೆಯ್ನ್ನಲ್ಲಿ ಅತ್ಯಂತ ವಿಸ್ತಾರ್ಯವಾಗಿ ವಿತರಣೆಯಾಗಿದ್ದ ಪುಸ್ತಕವಾಗಿತ್ತು. ಕೈಬರಹದ ಪ್ರತಿಗಳು ಲ್ಯಾಟಿನ್ನಲ್ಲಿ ದೊರಕುತ್ತಿದ್ದವು, ಮತ್ತು ಕೆಲವು ಶತಮಾನಗಳ ತನಕ ಗಾತಿಕ್ ಭಾಷೆಯಲ್ಲಿ ಸಹ ಸಿಗುತ್ತಿದ್ದವು. ಮಧ್ಯ ಯುಗಗಳ ಸಮಯದಲ್ಲಿ, “ಬೈಬಲ್—ಪ್ರೇರಣೆ ಮತ್ತು ಅಧಿಕಾರದ ಒಂದು ಉಗಮವಾಗಿ, ನಂಬಿಕೆ ಮತ್ತು ನಡವಳಿಕೆಯ ಒಂದು ಮಾನದಂಡವಾಗಿ—ಜರ್ಮನಿ ಮತ್ತು ಇಂಗ್ಲೆಂಡಿಗಿಂತ ಸ್ಪೆಯ್ನ್ನಲ್ಲಿ ಹೆಚ್ಚು ಪ್ರಧಾನವಾಗಿತ್ತು” ಎಂದು ಒಬ್ಬ ಚರಿತ್ರೆಗಾರನು ವಿವರಿಸಿದ್ದಾನೆ. ವಿವಿಧ ಬೈಬಲ್ ಇತಿಹಾಸಗಳು, ಸ್ತೋತ್ರಗೀತಗಳು (ಅಥವಾ ಕೀರ್ತನೆಗಳು), ಲಘು ಶಬ್ದಕೋಶಗಳು, ನೈತಿಕ ಕಥೆಗಳು ಮತ್ತು ತದ್ರೀತಿಯ ಕೃತಿಗಳು ಆ ಯುಗದ ಜನಪ್ರಿಯ ಗಿರಾಕಿ ಪುಸ್ತಕಗಳಾಗಿದ್ದವು.
ತರಬೇತುಹೊಂದಿದ ನಕಲುಗಾರರು ಪರಿಶ್ರಮಪೂರ್ವಕವಾಗಿ ಉತ್ಕೃಷ್ಟ ಬೈಬಲ್ ಹಸ್ತಪ್ರತಿಗಳನ್ನು ಉತ್ಪಾದಿಸಿದರು. ಉತ್ತಮ ತರಗತಿಯ ಕೇವಲ ಒಂದು ಹಸ್ತಪ್ರತಿಯನ್ನು ಉತ್ಪಾದಿಸಲು 20 ಮಂದಿ ಶಾಸ್ತ್ರಿಗಳಿಗೆ ಒಂದು ಇಡೀ ವರ್ಷ ತಗಲಿದ್ದರೂ, 15 ನೆಯ ಶತಮಾನದೊಳಗೆ ಸ್ಪೆಯ್ನ್ನಲ್ಲಿ ಅನೇಕ ಲ್ಯಾಟಿನ್ ಬೈಬಲ್ಗಳು ಮತ್ತು ಲ್ಯಾಟಿನ್ ಬೈಬಲಿನ ಮೇಲಿನ ಸಾವಿರಾರು ವ್ಯಾಖ್ಯಾನಗಳು ಚಲಾವಣೆಯಲ್ಲಿದ್ದವು.
ಅದಲ್ಲದೆ, ಸ್ಪ್ಯಾನಿಷ್ ಭಾಷೆಯು ವಿಕಾಸವಾಗ ತೊಡಗಿದಾಗ, ದೇಶಭಾಷೆಯಲ್ಲಿ ಬೈಬಲನ್ನು ಪಡೆಯುವುದರಲ್ಲಿ ಆಸಕ್ತಿಯು ಎದಿತ್ದು. 12 ನೆಯ ಶತಮಾನದಷ್ಟು ಆರಂಭದಲ್ಲೇ, ಸಾಮಾನ್ಯ ಜನರು ಆಡುತ್ತಿದ್ದ ಭಾಷೆಯಾಗಿದ್ದ ರೊಮಾನ್ಸ್ನಲ್ಲಿ ಅಥವಾ ಪ್ರಾರಂಭದ ಸ್ಪ್ಯಾನಿಷ್ನಲ್ಲಿ ಬೈಬಲು ಭಾಷಾಂತರವಾಗಿತ್ತು.
ಅಲ್ಪಕಾಲದ ಕಾರ್ಯಪರತೆ
ಆದರೆ ಈ ಕಾರ್ಯಪರತೆಯು ಹೆಚ್ಚು ಕಾಲ ಬಾಳಲಿಕ್ಕಿರಲಿಲ್ಲ. ವಾಲ್ಡೆನ್ಸಿಯರು, ಲೊಲಾರ್ಡರು, ಮತ್ತು ಹಸ್ಸೈಟ್ಸರು ತಮ್ಮ ನಂಬಿಕೆಗಳನ್ನು ಪ್ರತಿವಾದಿಸುವುದಕ್ಕಾಗಿ ಶಾಸ್ತ್ರ ವಚನಗಳನ್ನು ಉಪಯೋಗಿಸಿದಾಗ, ಪ್ರತಿಕ್ರಿಯೆಯು ತೀವ್ರವೂ ಹಿಂಸಾತ್ಮಕವೂ ಆಗಿತ್ತು. ಕ್ಯಾತೊಲಿಕ್ ಅಧಿಕಾರಿಗಳು ಬೈಬಲ್ ವಾಚನವನ್ನು ಸಂದೇಹಾಸ್ಪದವಾಗಿ ನೋಡಿದರು, ಮತ್ತು ಸಾಮಾನ್ಯ ಭಾಷೆಗಳಲ್ಲಿ ಅನನುಭವಿ ಭಾಷಾಂತರಗಳು ಆ ಕೂಡಲೇ ಖಂಡಿಸಲ್ಪಟ್ಟವು.
ಕ್ಯಾತ್ಲಿಕ್ ಕೌನ್ಸಿಲ್ ಆಫ್ ಟುಲೂಸ್ (ಫ್ರಾನ್ಸ್), 1229 ರಲ್ಲಿ ಕೂಡಿಬಂದಾಗ ಹೀಗೆ ಘೋಷಿಸಿತು: “ಯಾವನೇ ಜನಸಾಮಾನ್ಯನು ಸಾಧಾರಣ ಭಾಷೆಗೆ ಭಾಷಾಂತರಿಸಲ್ಪಟ್ಟ ಹಳೇ ಮತ್ತು ಹೊಸ ಒಡಂಬಡಿಕೆಯ ಪುಸ್ತಕಗಳನ್ನು ಇಟ್ಟುಕೊಳ್ಳುವುದನ್ನು ನಾವು ಪ್ರತಿಬಂಧಿಸುತ್ತೇವೆ. ಧಮಶ್ರದ್ಧೆಯುಳ್ಳ ಒಬ್ಬ ವ್ಯಕ್ತಿಯು ಬಯಸುವುದಾದರೆ, ಸ್ತೋತ್ರಗೀತೆಗಳ ಅಥವಾ ಒಂದು ಪಾರಾಯಣ [ಗೀತಗಳ ಮತ್ತು ಪ್ರಾರ್ಥನೆಗಳ ಪುಸ್ತಕ] ವನ್ನು ಇಟ್ಟುಕೊಳ್ಳಬಹುದು. . . . ಆದರೆ ಯಾವ ಸಂದರ್ಭ ಒದಗಿದರೂ, ರೊಮಾನ್ಸ್ಗೆ ಭಾಷಾಂತರಿಸಲ್ಪಟ್ಟ ಮೇಲೆ ತಿಳಿಸಲ್ಪಟ್ಟ ಪುಸ್ತಕಗಳನ್ನು ಅವನು ಇಟ್ಟುಕೊಳ್ಳಲೇಬಾರದು.” ನಾಲ್ಕು ವರ್ಷಗಳ ಅನಂತರ, ಅರಗಾನ್ನ ಜೇಮ್ಸ್ I (ದ್ವೀಪಕಲ್ಪದ ಒಂದು ದೊಡ್ಡ ಪ್ರಾಂತದ ಅರಸನು), ಯಾರಲ್ಲಿ ಸಾಮಾನ್ಯ ಭಾಷೆಯ ಬೈಬಲ್ ಇದೆಯೇ ಅವರೆಲ್ಲರು ಕೇವಲ ಎಂಟು ದಿನಗಳೊಳಗೆ ಅದನ್ನು ಸ್ಥಳೀಕ ಬಿಷಪರಿಗೆ ಸುಡುವುದಕ್ಕಾಗಿ ಒಪ್ಪಿಸಬೇಕೆಂಬದಾಗಿ ಅಪ್ಪಣೆಮಾಡಿದನು. ವೈದಿಕನಾಗಲಿ ಅಥವಾ ಲೌಕಿಕನಾಗಲಿ ಹಾಗೆ ಮಾಡಲು ತಪ್ಪಿದ್ದಲ್ಲಿ, ಅದು ಪಡೆದಿರುವವನನ್ನು ಪಾಷಂಡಿತನದ ಸಂದೇಹಕ್ಕೆ ಗುರಿಮಾಡುವುದು.
ಯಾವುವು ಯಾವಾಗಲೂ ಕಟ್ಟುನಿಟ್ಟಾಗಿ ಪಾಲಿಸಲ್ಪಟ್ಟಿರಲಿಲ್ಲವೋ—ಅಂಥ ಈ ಪ್ರತಿಷೇಧನೆಗಳ ನಡುವೆಯೂ ಕೆಲವು ಸ್ಪ್ಯಾನಿಯಾರ್ಡರು ಮಧ್ಯಯುಗಗಳ ಉತ್ತರಾರ್ಧದಲ್ಲಿ ರೊಮಾನ್ಸ್ ಬೈಬಲೊಂದರ ಒಡೆಯರು ತಾವೆಂದು ಅಭಿಮಾನದಿಂದ ಹೇಳಶಕ್ತರಿದ್ದರು. ರಾಣಿ ಇಸಬೆಲ ಮತ್ತು ರಾಜ ಫರ್ಡಿನಾಂಡ್ ಕೈಕೆಳಗೆ 1478 ರಲ್ಲಿ ಸ್ಪ್ಯಾನಿಷ್ ಮಠೀಯ ನ್ಯಾಯಸ್ಥಾನದ ಸ್ಥಾಪನೆಯೊಂದಿಗೆ ಇದು ಥಟ್ಟನೆ ನಿಂತುಹೋಯಿತು. ಸಾಲಮಾಂಕ ಶಹರ ಒಂದರಲ್ಲಿಯೇ, 1492 ರಲ್ಲಿ 20 ಅಮೂಲ್ಯ ಹಸ್ತಲಿಖಿತ ಬೈಬಲ್ ಪ್ರತಿಗಳು ಸುಟ್ಟುಹಾಕಲ್ಪಟ್ಟವು. ಪಾರಾಗಿ ಉಳಿದ ಕೇವಲ ರೊಮಾನ್ಸ್ ಬೈಬಲ್ ಹಸ್ತಪ್ರತಿಗಳು, ಸಂಶಯಕ್ಕೆ ಎಡೆಯಿಲ್ಲದ ಅರಸನ ಅಥವಾ ಕೆಲವು ಕುಲೀನ ಮನೆತನದ ಪ್ರಬಲ ಪುರುಷರ ವೈಯಕ್ತಿಕ ಲೈಬ್ರೆರಿಯಲ್ಲಿ ಇಡಲ್ಪಟ್ಟವುಗಳು ಮಾತ್ರ.
ಮುಂದಿನ ಇನ್ನೂರು ವರ್ಷಗಳಲ್ಲಿ, ಸ್ಪೆಯ್ನ್ನಲ್ಲಿ ಪ್ರಕಟವಾದ ಒಂದೇ ಅಧಿಕೃತ ಕ್ಯಾತೊಲಿಕ್ ಬೈಬಲ್—ಲ್ಯಾಟಿನ್ ವಲ್ಗೇಟ್ ನ್ನು ಬಿಟ್ಟು—ಕಂಪ್ಲ್ಯೂಟೆನ್ಸಿಯನ್ ಪಾಲ್ಲಿಗಾಟ್ ಆಗಿತ್ತು, ಅದು ಕಾರ್ಡಿನಲ್ ಸಿಸ್ನರಾಸ್ನಿಂದ ಹೊರಡಿಸಲ್ಪಟ್ಟ ಮೊದಲನೆಯ ಪಾಲ್ಲಿಗಾಟ್ ಬೈಬಲ್. ಅದು ಖಂಡಿತವಾಗಿ ಒಂದು ಪಂಡಿತಕೃತಿ, ಸಾಮಾನ್ಯ ವ್ಯಕ್ತಿಗೆ ನಿಶ್ಚಯವಾಗಿ ಹೇಳಿದ್ದಲ್ಲ. ಕೇವಲ 600 ಪ್ರತಿಗಳು ತಯಾರಿಸಲ್ಪಟ್ಟವು, ಮತ್ತು ಕೆಲವರೇ ಅದನ್ನು ತಿಳುಕೊಳ್ಳ ಶಕ್ತರಿದ್ದರು, ಏಕೆಂದರೆ ಅದರ ಬೈಬಲ್ ವಚನಗಳು ಹಿಬ್ರೂ, ಅರ್ಯಾಮಿಕ್, ಗ್ರೀಕ್ ಮತ್ತು ಲ್ಯಾಟಿನ್ನಲ್ಲಿದ್ದವು—ಸ್ಪ್ಯಾನಿಷ್ನಲ್ಲಿ ಅಲ್ಲ. ಅದಲ್ಲದೆ ಅದರ ಬೆಲೆಯು ವಿಪರೀತ ಹೆಚ್ಚಾಗಿತ್ತು. ಅದಕ್ಕೆ ಮೂರು ಚಿನ್ನದ ಡಕಟ್ ನಾಣ್ಯ (ಸಾಮಾನ್ಯ ಕೂಲಿಕೆಲಸದವನ ಆರು ತಿಂಗಳ ಮಜೂರಿಗೆ ಸಮಾನ) ದಷ್ಟು ಬೆಲೆಯಿತ್ತು.
ಸ್ಪ್ಯಾನಿಷ್ ಬೈಬಲ್ ಭೂಗತವಾಗುತ್ತದೆ
ಫ್ರಾನ್ಸಿಸ್ಕೊ ಡಾ ಎನ್ಸಿನಾಸ್ ಎಂಬ ವ್ಯಕ್ತಿಯಲ್ಲಿ, ಒಬ್ಬ ಸ್ಪ್ಯಾನಿಷ್ “ಟಿಂಡೇಲ್” 16 ನೆಯ ಶತಮಾನದ ಆರಂಭದಲ್ಲಿ ಎದ್ದನು. ಒಬ್ಬ ಧನಿಕ ಜಮೀನುದಾರನ ಮಗನಾಗಿದ್ದ ಅವನು ಯುವ ವಿದ್ಯಾರ್ಥಿಯಾಗಿದ್ದಾಗಲೇ ಕ್ರೈಸ್ತ ಗ್ರೀಕ್ ಶಾಸ್ತ್ರವನ್ನು ಸ್ಪ್ಯಾನಿಷ್ಗೆ ಭಾಷಾಂತರಿಸ ತೊಡಗಿದ್ದನು. ತದನಂತರ ಅವನು ಆ ಭಾಷಾಂತರದ ಮುದ್ರಣವನ್ನು ನೆದರ್ಲ್ಯಾಂಡ್ಸ್ನಲ್ಲಿ ಮಾಡಿಸಿದನು. ಮತ್ತು 1544 ರಲ್ಲಿ ಅದನ್ನು ಸ್ಪೆಯ್ನ್ನಲ್ಲಿ ವಿತರಣೆ ಮಾಡುವಂತೆ ಅರಸನ ಅನುಮತಿ ಪಡೆಯಲು ಧೀರ ಪ್ರಯತ್ನವನ್ನು ಮಾಡಿದನು. ಆ ಸಮಯದಲ್ಲಿ ಸ್ಪೆಯ್ನ್ನ ಸಾಮ್ರಾಟ ಚಾರ್ಲ್ಸ್ I ಬ್ರಸ್ಸೆಲ್ಸ್ನಲಿದ್ಲನ್ದು, ಮತ್ತು ಎನ್ಸಿನಾಸ್ ತನ್ನ ಯೋಜನೆಗೆ ರಾಜನ ಒಪ್ಪಿಗೆ ದೊರೆಯುವಂತೆ ವಿನಂತಿಸಲು ಈ ಸಂದರ್ಭದ ಸದುಪಯೋಗ ಮಾಡಿದನು.
ಆ ಇಬ್ಬರು ಪುರುಷರ ನಡುವೆ ನಡೆದ ಅಸಾಮಾನ್ಯ ಸಂಭಾಷಣೆಯು ಈ ಕೆಳಗಿನಂತೆ ವರದಿಯಾಗಿದೆ: “ಇದೆಂಥ ಪುಸ್ತಕ?” ಕೇಳಿದನು ಸಾಮ್ರಾಟನು. ಎನ್ಸಿನಾಸ್ ಉತ್ತರಿಸಿದ್ದು: “ಇದು ಹೊಸ ಒಡಂಬಡಿಕೆ ಎಂದು ಕರೆಯಲ್ಪಡುವ ಪವಿತ್ರ ಶಾಸ್ತ್ರದ ಭಾಗ.” “ಪುಸ್ತಕದ ಗ್ರಂಥಕರ್ತನಾರು?” ಎಂದು ಅವನನ್ನು ಕೇಳಲಾಯಿತು. “ಪವಿತ್ರ ಆತ್ಮ,” ಎಂದು ಉತ್ತರಿಸಿದನವನು.
ಸಾಮ್ರಾಟನು ಪ್ರಕಾಶನಕ್ಕೆ ಅನುಮತಿಕೊಟ್ಟನು, ಆದರೆ ಒಂದು ಷರತ್ತಿನ ಮೇಲೆ—ಅವನ ಖಾಸಗಿ ಪಾಪ ನಿವೇದನೆ ಕೇಳುವ ಒಬ್ಬ ಸ್ಪ್ಯಾನಿಷ್ ಸಂನ್ಯಾಸಿಯು ಸಹ ಅವನ ಒಪ್ಪಿಗೆಯನ್ನು ಸ್ಥಿರೀಕರಿಸಬೇಕು. ಎನ್ಸಿನಾಸ್ನ ದುರ್ಭಾಗ್ಯದಿಂದ ಅಂಥ ಒಂದು ಸಮ್ಮತಿಯು ಸಿಗುವಂತಿರಲಿಲ್ಲ, ಮತ್ತು ಶೀಘ್ರದಲ್ಲೇ ಅವನು ಮಠೀಯ ನ್ಯಾಯಸ್ಥಾನದಿಂದ ಸೆರೆಮನೆಗೆ ಹಾಕಲ್ಪಟ್ಟನು. ಎರಡು ವರ್ಷಗಳ ಅನಂತರ ಅವನು ಅಲ್ಲಿಂದ ಪಾರಾಗ ಶಕ್ತನಾದನು.
ಕೆಲವು ವರ್ಷಗಳ ಅನಂತರ, ಈ ಭಾಷಾಂತರದ ಒಂದು ಪರಿಷ್ಕೃತ ಆವೃತ್ತಿಯು ಇಟೆಲಿಯ ವೆನಿಸ್ನಲ್ಲಿ ಮುದ್ರಿಸಲ್ಪಟ್ಟಿತು, ಮತ್ತು ಹುಲ್ಯನ್ ಅರ್ನಾಂಡಿಸ್ ಸ್ಪೆಯ್ನ್ನ ಸೆವಿಲ್ಗೆ ಗುಪ್ತವಾಗಿ ಒಯ್ದದ್ದು ಶಾಸ್ತ್ರಗ್ರಂಥದ ಈ ಆವೃತ್ತಿಯನ್ನೇ. ಆದರೆ ಅವನು ಹಿಡಿಯಲ್ಪಟ್ಟನು ಮತ್ತು ಎರಡು ವರ್ಷಗಳ ಚಿತ್ರಹಿಂಸೆ ಮತ್ತು ಸೆರೆವಾಸದ ನಂತರ, ಇತರ ಜೊತೆ ಬೈಬಲ್ ವಿದ್ಯಾರ್ಥಿಗಳೊಂದಿಗೆ ಅವನನ್ನು ಕೊಲಲ್ಲಾಯಿತು.a
ಕೌನ್ಸಿಲ್ ಆಫ್ ಟ್ರೆಂಟ್ (1545-63) ನಲ್ಲಿ, ಕ್ಯಾತೊಲಿಕ್ ಚರ್ಚು ದೇಶಭಾಷೆಗಳಲ್ಲಿ ಬೈಬಲ್ ಭಾಷಾಂತರಗಳ ತನ್ನ ಖಂಡನೆಯನ್ನು ಪುನಃ ಮುಂದುವರಿಸಿತು. ನಿಷೇಧಿಸಲ್ಪಟ್ಟ ಪುಸ್ತಕಗಳ ಒಂದು ಸೂಚಿಕೆಯನ್ನು ಅದು ಪ್ರಕಟಿಸಿತು, ಅದರಲ್ಲಿ ಚರ್ಚಿನ ಸಮ್ಮತಿಯಿಲ್ಲದೆ ಉತ್ಪಾದಿಸಲಾಗಿದ್ದ ಆ ಎಲ್ಲಾ ಬೈಬಲ್ ಭಾಷಾಂತರಗಳು ಒಳಗೂಡಿದ್ದವು. ಸ್ಪ್ಯಾನಿಷ್ ದೇಶಭಾಷೆಯ ಬೈಬಲ್ಗಳು ನ್ಯಾಯಬಾಹಿರವೆಂದು ಕಾರ್ಯತಃ ಇದರ ಅರ್ಥವಾಗಿತ್ತು ಮತ್ತು ಇದರಲ್ಲಿ ಒಂದನ್ನಾದರೂ ಪಡೆದಿರುವುದು ಆ ವ್ಯಕ್ತಿಯ ಮರಣಕ್ಕೆ ವಾರಂಟ್ನಲ್ಲಿ ಕೊನೆಗೊಳ್ಳ ಸಾಧ್ಯವಿತ್ತು.
ರೇನನ ಭಾಷಾಂತರವು ಪ್ರಕಾಶಿಸಲ್ಪಟ್ಟ ಕೆಲವು ವರ್ಷಗಳ ಮೇಲೆ, ಮಠೀಯ ನ್ಯಾಯಸ್ಥಾನದ ಕ್ರೋಧವನ್ನು ಸೆವಿಲ್ನಲ್ಲಿ ಪಾರಾದ ಸೆಪ್ರಿಯಾನೊ ಡಿ ವಾಲೆರ ಎಂಬ ಇನ್ನೊಬ್ಬ ಹಿಂದಣ ಸಂನ್ಯಾಸಿಯು ಅದನ್ನು ಪರಿಷ್ಕರಿಸಿದನು. ಈ ಆವೃತ್ತಿಯು ಆ್ಯಮ್ಸರ್ಡ್ಟ್ಮ್ನಲ್ಲಿ ಸಾ.ಶ. 1602 ರಲ್ಲಿ ಮುದ್ರಿಸಲ್ಪಟ್ಟಿತು, ಮತ್ತು ಕೆಲವು ಪ್ರತಿಗಳು ಸ್ಪೆಯ್ನ್ಗೆ ಒಯ್ಯಲ್ಪಟ್ಟವು. ಅದರ ಮೂಲ ಮತ್ತು ಪರಿಷ್ಕೃತ ಆವೃತ್ತಿಗಳಲ್ಲಿ, ರೇನ-ವಾಲೆರ ಬೈಬಲ್, ಸ್ಪ್ಯಾನಿಷ್ ಭಾಷೆಯನ್ನಾಡುವ ಪ್ರಾಟೆಸ್ಟಂಟರಲ್ಲಿ ಇನ್ನೂ ಅತಿ ವಿಸ್ತಾರವಾಗಿ ಬಳಕೆಯಲ್ಲಿದೆ.
ತೂಬುಗಳು ತೆರೆದವು
ಕೊನೆಗೆ 1782 ರಲ್ಲಿ, ಮಠೀಯ ನ್ಯಾಯಸ್ಥಾನದ ಪೀಠವು, ಬೈಬಲ್ನಲ್ಲಿ ಇತಿಹಾಸ ಮತ್ತು ಮತತತ್ವಗಳ ಟಿಪ್ಪಣಿಗಳು ಒಳಗೂಡಿದ್ದರೆ ಮಾತ್ರ ಅದನ್ನು ಪ್ರಕಾಶಿಸಬಹುದು ಎಂದು ವಿಧಿಸಿತು. ಸೆಗಾವಿಯದ ಕ್ಯಾತೊಲಿಕ್ ಬಿಷಪನಾದ ಫಲಿಪೆ ಸಿಯೊ ಡ ಸಾನ್ ಮೆಗಲ್, 1790 ರಲ್ಲಿ ಲ್ಯಾಟಿನ್ ವಲ್ಗೇಟ್ ನ್ನು ಉಪಯೋಗಿಸಿ ಬೈಬಲನ್ನು ಸ್ಪ್ಯಾನಿಷ್ಗೆ ಭಾಷಾಂತರ ಮಾಡಿದನು. ದುರ್ಭಾಗ್ಯದಿಂದ ಅದು ದುಬಾರಿ ಬೆಲೆಯದ್ದಾಗಿತ್ತು, 1,300 ರಿಯಾಲ್ಸ್, ಆ ಸಮಯದಲ್ಲಿ ಕೊಂಡುಕೊಳ್ಳಲಾಗದಷ್ಟು ಹೆಚ್ಚು ಬೆಲೆ—ಮತ್ತು ಶಬ್ದ ಪ್ರಯೋಗವು ಅಸ್ಪಷ್ಟ, ಎಷ್ಟರ ಮಟ್ಟಿಗೆ ಎಂದರೆ ಒಬ್ಬ ಸ್ಪ್ಯಾನಿಷ್ ಇತಿಹಾಸಗಾರನು ಅದನ್ನು “ಅತಿ ದುರ್ಭಾಗ್ಯದ್ದು” ಎಂದು ವರ್ಣಿಸಿದ್ದಾನೆ.
ಕೆಲವು ವರ್ಷಗಳ ಅನಂತರ, ಲ್ಯಾಟಿನ್ ವಲ್ಗೇಟ್ ಮೇಲೆಯೇ ಆಧರಿಸಿದ ಒಂದು ಪರಿಷ್ಕೃತ ಭಾಷಾಂತರವನ್ನು ಮಾಡುವಂತೆ ಸ್ಪ್ಯಾನಿಷ್ ಅರಸ ಫೆರ್ನಾಂಡೊ VII, ಅಸ್ಟಾರ್ಗದ ಬಿಷಪನಾದ ಫಾಲಿಕ್ಸ್ ಟಾರಸ್ ಆಮಟ್ಗೆ ಅಪ್ಪಣೆಕೊಟ್ಟನು. ಈ ಭಾಷಾಂತರವು 1823 ರಲ್ಲಿ ಪ್ರಕಾಶಿತವಾಯಿತು ಮತ್ತು ಸಿಯೊ ಭಾಷಾಂತರಕ್ಕಿಂತ ವಿಸ್ತಾರವಾದ ವಿತರಣೆಯನ್ನು ಪಡೆಯಿತು. ಆದರೂ ಅದು ಮೂಲ ಹಿಬ್ರೂ ಮತ್ತು ಗ್ರೀಕ್ನಲ್ಲಿ ಆಧಾರಿತವಾಗಿರದರ್ದಿಂದ, ಒಂದು ಭಾಷಾಂತರದ ಭಾಷಾಂತರಕ್ಕೆ ಇರುವ ಸಾಮಾನ್ಯ ನ್ಯೂನತೆಗಳು ಅದಕ್ಕಿದ್ದವು.
ಈ ಪ್ರಗತಿಯ ಮಧ್ಯೆಯೂ, ಪವಿತ್ರ ಶಾಸ್ತ್ರವು ಸಾಮಾನ್ಯ ಜನರಿಂದ ಓದಲ್ಪಡಬೇಕು ಎಂಬ ವಿಷಯದಲ್ಲಿ ಚರ್ಚಿಗೆ ಮತ್ತು ದೇಶದ ಅಧಿಪತಿಗಳಿಗೆ ಇನ್ನೂ ಖಾತ್ರಿಯಾಗಿರಲಿಲ್ಲ. ಬ್ರಿಟಿಷ್ ಆ್ಯಂಡ್ ಫಾರೆನ್ ಬೈಬಲ್ ಸೊಸೈಟಿಯ ಒಬ್ಬ ಪ್ರತಿನಿಧಿಯಾಗಿದ್ದ ಜಾರ್ಜ್ ಬಾರೊ, ಸ್ಪೆಯ್ನ್ನಲ್ಲಿ ಬೈಬಲನ್ನು ಮುದ್ರಿಸಲು 1830 ಗಳಲ್ಲಿ ಅನುಮತಿ ಕೇಳಿದಾಗ, ಸರಕಾರದ ಮಂತ್ರಿಯಾಗಿದ್ದ ಮೆಂಡಿಸಬಲ್ ಅವನಿಗಂದದ್ದು: “ಮಹನೀಯರೇ, ನಮಗೆ ಬೇಕಾಗಿರುವುದು ಬೈಬಲುಗಳಲ್ಲ, ಬದಲಿಗೆ ದಂಗೆಖೋರರನ್ನು ಅಣಗಿಸಲು ಕೋವಿಗಳು ಮತ್ತು ಕೋವಿಮದ್ದು, ಮತ್ತು ಎಲ್ಲಾದಕ್ಕಿಂತ ಹೆಚ್ಚಾಗಿ ದಂಡುಗಳಿಗೆ ವೇತನ ಕೊಡಲು ಹಣಬೇಕು.” ಬಾರೊ ಮುಂದರಿದು ಲೂಕನ ಸುವಾರ್ತೆಯನ್ನು ಸ್ಪಾನಿಷ್ ಜಿಪ್ಸಿಗಳ ಭಾಷೆಗೆ ಭಾಷಾಂತರ ಮಾಡ ತೊಡಗಿದನು ಮತ್ತು 1837 ರಲ್ಲಿ ಅವನ ಪ್ರಯತ್ನಗಳಿಗಾಗಿ ಅವನು ಸೆರೆಮನೆಗೆ ಹಾಕಲ್ಪಟ್ಟನು!
ಕೊನೆಗೆ, ಉಬ್ಬರವನ್ನು ಇನ್ನು ಮುಂದೆ ತಡೆದು ಹಿಡಿಯಲು ಅಸಾಧ್ಯವಾಯಿತು. ಸ್ಪ್ಯಾನಿಷ್ ಚರ್ಚು ಮೂಲಭಾಷೆಗಳಲ್ಲಾಧಾರಿತ ಪವಿತ್ರ ಶಾಸ್ತ್ರದ ತನ್ನ ಮೊದಲನೆಯ ಭಾಷಾಂತರವನ್ನು 1944 ರಲ್ಲಿ—ಕ್ಯಾಸಿಯಾಡ್ರೊ ಡಾ ರೇನನ ಭಾಷಾಂತರದ ಸುಮಾರು 375 ವರ್ಷಗಳ ನಂತರ—ಮುದ್ರಿಸಿತು. ಇದೇ ಕ್ಯಾಥ್ಲಿಕ್ ಪಂಡಿತರಾದ ನಾಕಾರ್ ಮತ್ತು ಕೋಲಂಗ ಇವರ ಭಾಷಾಂತರವಾಗಿತ್ತು. ಇದನ್ನು ಹಿಂಬಾಲಿಸಿ 1947 ರಲ್ಲಿ ಬೊವೇರ್ ಮತ್ತು ಕಂತೇರ ಭಾಷಾಂತರ ಬಂತು. ಅಂದಿನಿಂದ ಬೈಬಲಿನ ಸ್ಪ್ಯಾನಿಷ್ ಭಾಷಾಂತರಗಳ ಒಂದು ಪ್ರವಾಹವೇ ಹೊರಬಂದಿರುತ್ತದೆ.
ವಿಜಯದ ಭರವಸೆಕೊಡಲ್ಪಟ್ಟದ್ದು
ಪಾರಾಗಲು ಸ್ಪ್ಯಾನಿಷ್ ಬೈಬಲಿಗೆ ಶತಮಾನಗಳ ಹೋರಾಟವನ್ನು ನಡಿಸಬೇಕಾದರೂ, ಕೊನೆಗೆ ಹೋರಾಟವು ಜಯಶಾಲಿಯಾಯಿತು. ರೇನನಂಥ ಧೀರ ತರ್ಜುಮೆಗಾರರ ಮಹಾ ತ್ಯಾಗಗಳು ಖಂಡಿತವಾಗಿಯೂ ವ್ಯರ್ಥವಾಗಲಿಲ್ಲ. ಇಂದು ಬೈಬಲನ್ನು ಖರೀದಿಸುವ ಎಷ್ಟು ಮಂದಿ ಬೈಬಲಿನ ಪಡೆಯುವಿಕೆಯೇ ನಿಷೇಧವಾಗಿದ್ದ ಆ ಸಮಯದ ಕುರಿತು ಯೋಚಿಸಲು ಸಮಯಕೊಡುತ್ತಾರೆ?
ಇಂದು ಬೈಬಲು ಸ್ಪೆಯ್ನ್ನಲ್ಲಿ ಮತ್ತು ಸ್ಪ್ಯಾನಿಷ್ ಭಾಷೆಯನ್ನಾಡುವ ದೇಶಗಳಲ್ಲಿ ಅತ್ಯುತ್ತಮ ಗಿರಾಕಿ ಪುಸ್ತಕವಾಗಿದೆ, ಮತ್ತು ಅದರ ಅನೇಕ ಭಾಷಾಂತರಗಳು ದೊರೆಯುತ್ತವೆ. ಇವುಗಳಲ್ಲಿ ದೇವರ ಹೆಸರಾದ ಹೆವೋವ (ಯೆಹೋವ) ಎಂಬದನ್ನು ಹೊಂದಿಕೆಯಾಗಿ ಉಪಯೋಗಿಸುವ ವರ್ಷಿಯನ್ ಮಾಡರ್ನಾ (ಮಾಡರ್ನ್ ವರ್ಷನ್ 1893); ಹಿಬ್ರೂ ಶಾಸ್ತ್ರದಲ್ಲಿ ಯಾವೆ ಹೆಸರನ್ನು ಉಪಯೋಗಿಸುವ ಪಾಲಿನ್ ಎಡಿಷನ್ ಅಫ್ ದ ಬೈಬಲ್ (1964); ದುಭಾರ್ಗ್ಯದಿಂದ ಜೆಹೋವ ಅಥವಾ ಯಾವೆಯನ್ನಾಗಲಿ ಉಪಯೋಗಿಸದ ನ್ಯೂವಾ ಬೆಬಿಯ್ಲ ಇಸ್ಪಾನಿಯೋಲ (ನ್ಯೂ ಸ್ಪಾನಿಷ್ ಬೈಬಲ್, 1975); ಮತ್ತು ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಹಾಗೂ ಯೆಹೋವ ಹೆಸರನ್ನು ಉಪಯೋಗಿಸುವ ಟ್ರಾಡುಕ್ಸಿಯನ್ ಡೆಲ್ ನ್ಯೂಎಜಾ ಮುಂಡಾ (ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್, 1967) ಸೇರಿರುತ್ತವೆ.
ಜೀವವನ್ನು ಕೊಡಲರ್ಹವಾದ ಮತ್ತು ಬದುಕಲರ್ಹವಾದ ಒಂದು ಗ್ರಂಥವಾದ ಪವಿತ್ರ ಬೈಬಲಿನ ಮೂಲ್ಯತೆಯನ್ನು ಗಣ್ಯಮಾಡುವಂತೆ ಸಹಾಯಕ್ಕಾಗಿ, ಸ್ಪ್ಯಾನಿಷ್ ಭಾಷೆಯನ್ನಾಡುವ ಲಕ್ಷಾಂತರ ಜನರ ಮನೆಗಳನ್ನು ಯೆಹೋವನ ಸಾಕ್ಷಿಗಳು ಸಂದರ್ಶಿಸುತ್ತಾರೆ. ವಾಸ್ತವದಲ್ಲಿ, ಪಾರಾಗಿ ಉಳಿಯಲು ಸ್ಪ್ಯಾನಿಷ್ ಬೈಬಲಿನ ಹೋರಾಟವು, “ನಮ್ಮ ದೇವರ ಮಾತೋ ಸದಾಕಾಲವೂ ಇರುವದು” ಎಂಬದಕ್ಕೆ ಒಂದು ಅಧಿಕ ರುಜುವಾತು ಆಗಿರುತ್ತದೆ.—ಯೆಶಾಯ 40:8.
[ಅಧ್ಯಯನ ಪ್ರಶ್ನೆಗಳು]
a ಆ ಸಮಯದಲ್ಲಿ ಒಂದು ವಿಶೇಷ ಪರವಾನೆಯ ಹೊರತು ಯಾವ ಪುಸ್ತಕವನ್ನಾದರೂ ಆಮದು ಮಾಡ ಸಾಧ್ಯವಿರಲಿಲ್ಲ, ಮತ್ತು ಪವಿತ್ರ ಅಧಿಕಾರದ (ಮಠೀಯ ನ್ಯಾಯಸ್ಥಾನ) ಹೊರತು ಯಾವ ಪುಸ್ತಕ ಭಂಡಾರದ ಅಧಿಕಾರಿಯಾಗಲಿ ಯಾವುದೇ ಪುಸ್ತಕಗಳ ಸರಕನ್ನು ತೆರೆಯಬಾರದಿತ್ತು.
[ಪುಟ 10 ರಲ್ಲಿರುವ ಚಿತ್ರ]
ದ ಕಂಪ್ಲ್ಯೂಟೆನ್ಸಿಯನ್ ಪಾಲ್ಲಿಗಾಟ್ ಪುನರುತ್ಪತ್ತಿ ಮಾಡಲ್ಪಟ್ಟಿದೆ ಮತ್ತು ಹೀಗೆ ಸುಲಭವಾಗಿ ಪರೀಕ್ಷಿಸಲ್ಪಡ ಸಾಧ್ಯವಿದೆ. (8 ನೆಯ ಪುಟ ನೋಡಿರಿ)
[ಕೃಪೆ]
Courtesy of the Biblioteca Nacional, Madrid, Spain