ಒಂದು ಸ್ಪ್ಯಾನಿಷ್ ಬೈಬಲಿಗಾಗಿ ಕಾಸ್ಯೊಡೋರೊ ಡೀ ರೇನಾನ ಹೋರಾಟ
ಹದಿನಾರನೆಯ ಶತಮಾನದ ಸ್ಪೆಯ್ನ್ ದೇಶವು, ಬೈಬಲನ್ನು ಓದಲಿಕ್ಕಾಗಿ ಅಪಾಯಕರವಾದ ಒಂದು ಸ್ಥಳವಾಗಿತ್ತು. ಸಂಪ್ರದಾಯ ಬದ್ಧತೆರಹಿತವಾದ ತೀರ ಸಣ್ಣ ರುಜುವಾತನ್ನೂ ನಂದಿಸಿಬಿಡುವಂತೆ, ಕ್ಯಾಥೊಲಿಕ್ ಚರ್ಚು ಪಾಷಂಡ ವಿಚಾರಣಾಸ್ಥಾನಕ್ಕೆ ಉಪದೇಶಿಸಿತ್ತು. ಆದರೆ ಶಾಸ್ತ್ರಗಳನ್ನು ಓದಿದ್ದು ಮಾತ್ರವಲ್ಲ, ಪ್ರತಿಯೊಬ್ಬ ಸ್ಪೆಯ್ನ್ ದೇಶೀಯನು ಅವುಗಳನ್ನು ಓದಲು ಸಾಧ್ಯವಾಗುವಂತೆ, ಅವುಗಳನ್ನು ದೇಶೀಯ ಭಾಷೆಗೆ ಭಾಷಾಂತರಿಸುವ ಪ್ರತಿಜ್ಞೆಯನ್ನು ಮಾಡಿದ ಒಬ್ಬ ಯುವ ಪುರುಷನು ಸ್ಪೆಯ್ನ್ನ ದಕ್ಷಿಣ ಭಾಗದಲ್ಲಿದ್ದನು. ಕಾಸ್ಯೊಡೋರೊ ಡೀ ರೇನಾ ಎಂಬುದು ಅವನ ಹೆಸರಾಗಿತ್ತು.
ಸ್ಪೆಯ್ನ್ನಲ್ಲಿನ ಸೆವಿಲ್ನ ಹೊರವಲಯದಲ್ಲಿರುವ, ಸಾನ್ ಈಸೀಡ್ರೊ ಡೆಲ್ ಕಾಂಪೊದ ಸಂನ್ಯಾಸಿ ಮಠದಲ್ಲಿ ಅವನು ಕಳೆದ ಅನೇಕ ವರ್ಷಗಳ ಸಮಯದಲ್ಲಿ, ಬೈಬಲಿನಲ್ಲಿ ರೇನಾನ ಆಸಕ್ತಿಯು ಕೆರಳಿಸಲ್ಪಟ್ಟಿತು. 1550ಗಳ ಸಮಯದಲ್ಲಿ, ಅಸಾಧಾರಣವಾದ ಈ ಸಂನ್ಯಾಸಿ ಮಠದಲ್ಲಿದ್ದ ಅಧಿಕಾಂಶ ಸಂನ್ಯಾಸಿಗಳು, ತಮ್ಮ ಕ್ರೈಸ್ತ ಶಾಸ್ತ್ರಸಮ್ಮತ ಕರ್ತವ್ಯಗಳಿಗೆ ಗಮನಕೊಡುವುದಕ್ಕೆ ಬದಲಾಗಿ, ಶಾಸ್ತ್ರಗಳನ್ನು ಓದುತ್ತಾ ಹೆಚ್ಚು ತಾಸುಗಳನ್ನು ಕಳೆದರು. ಮತ್ತು ಬೈಬಲಿನ ಸಂದೇಶವು ಅವರ ಆಲೋಚನೆಯನ್ನು ಬದಲಾಯಿಸಿತು. ವಿಗ್ರಹಗಳ ಉಪಯೋಗ ಮತ್ತು ಪರ್ಗೆಟರಿಯಲ್ಲಿನ ನಂಬಿಕೆಗೆ ಸಂಬಂಧಿಸಿದ ಕ್ಯಾಥೊಲಿಕ್ ತತ್ವವನ್ನು ಅವರು ತಿರಸ್ಕರಿಸಿದರು. ಅನಿವಾರ್ಯವಾಗಿ, ಅವರ ವೀಕ್ಷಣಗಳು ಆ ಕ್ಷೇತ್ರದಲ್ಲಿ ಪ್ರಸಿದ್ಧವಾದವು, ಮತ್ತು ಸ್ಪ್ಯಾನಿಷ್ ಪಾಷಂಡ ವಿಚಾರಣಾಸ್ಥಾನದಿಂದ ಸೆರೆಹಿಡಿಯಲ್ಪಡುವ ಭಯದಿಂದ, ಅವರು ಹೊರದೇಶಕ್ಕೆ ಪಲಾಯನಗೈಯಲು ನಿರ್ಧರಿಸಿದರು. ಸ್ವಿಟ್ಸರ್ಲೆಂಡ್ನ ಜಿನೀವಕ್ಕೆ ತಪ್ಪಿಸಿಕೊಂಡು ಹೋಗುವುದರಲ್ಲಿ ಸಫಲರಾದ 12 ಮಂದಿ ಸಂನ್ಯಾಸಿಗಳಲ್ಲಿ ರೇನಾ ಒಬ್ಬನಾಗಿದ್ದನು.
ಆ ಇಕ್ಕಟ್ಟಿನ ತಪ್ಪಿಸಿಕೊಳ್ಳುವಿಕೆಯ ನಂತರ, ಸದಾ ಹೇಗಾದರೂ ಮಾಡಿ ವಿರೋಧಿಗಳ ಕೈಗೆ ಸಿಕ್ಕದಿರುವುದರಲ್ಲಿ ಸಫಲನಾಗುತ್ತಾ, ಅವನು ಒಂದು ಯೂರೋಪಿಯನ್ ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಿದನು. 1562ರಲ್ಲಿ, ಆಶಾಭಂಗಗೊಂಡ ಪಾಷಂಡ ವಿಚಾರಣಾಧಿಕಾರಿಗಳು, ಸೆವಿಲ್ನಲ್ಲಿ ಅವನ ಪ್ರತಿಕೃತಿಯನ್ನು ಸುಟ್ಟುಹಾಕಿದರಾದರೂ, ಆ ಪಾಶವೀಯ ಬೆದರಿಕೆಯೂ, ಶಾಸ್ತ್ರಗಳನ್ನು ಭಾಷಾಂತರಿಸುವ ತನ್ನ ಕೆಲಸದಿಂದ ರೇನಾನನ್ನು ಹಿಮ್ಮೆಟ್ಟುವಂತೆ ಮಾಡಲಿಲ್ಲ. ಹಿಂಸಕರು ಅವನ ಬಂಧನಕ್ಕಾಗಿ ಒಂದು ಬಹುಮಾನವನ್ನು ಇಟ್ಟಿರುವ ಮತ್ತು ಸೆರೆಹಿಡಿಯಲ್ಪಡುವುದರ ಕುರಿತಾದ ಸತತ ಭಯದಲ್ಲಿ ಜೀವಿಸುತ್ತಿರುವ ಹೊರತಾಗಿಯೂ, ಅವನು ತನ್ನ ಸ್ಪ್ಯಾನಿಷ್ ಭಾಷಾಂತರದ ಮೇಲೆ ಎಡೆಬಿಡದೆ ಕಾರ್ಯವೆಸಗಿದನು. “ನಾನು ಅಸ್ವಸ್ಥನಾಗಿದ್ದ ಅಥವಾ ಪ್ರಯಾಣಿಸುತ್ತಿದ್ದ ಸಮಯದ ಹೊರತಾಗಿ, . . . ಲೇಖನಿಯು ಎಂದಿಗೂ ನನ್ನ ಕೈಯನ್ನು ಬಿಟ್ಟಿರಲಿಲ್ಲ” ಎಂದು ಅವನು ವಿವರಿಸಿದನು.
ಹತ್ತು ವರ್ಷಗಳೊಳಗೆ ರೇನಾ ತನ್ನ ಭಾಷಾಂತರವನ್ನು ಪೂರ್ಣಗೊಳಿಸಿದನು. 1569ರಲ್ಲಿ, ಸ್ವಿಟ್ಸರ್ಲೆಂಡ್ನ ಬಾಸೆಲ್ನಲ್ಲಿ, ಇಡೀ ಬೈಬಲಿನ ಅವನ ಭಾಷಾಂತರವು ಪ್ರಕಾಶಿಸಲ್ಪಟ್ಟಿತು. ಈ ಪ್ರಮುಖ ಕೃತಿಯು, ಮೂಲ ಭಾಷೆಗಳಿಂದ ಭಾಷಾಂತರಿಸಲ್ಪಟ್ಟ ಪ್ರಪ್ರಥಮ ಸಂಪೂರ್ಣ ಸ್ಪ್ಯಾನಿಷ್ ಭಾಷಾಂತರವಾಗಿತ್ತು. ಶತಮಾನಗಳ ವರೆಗೆ ಲ್ಯಾಟಿನ್ ಭಾಷೆಯ ಬೈಬಲುಗಳು ಲಭ್ಯವಿದ್ದವು, ಆದರೆ ಲ್ಯಾಟಿನ್ ಭಾಷೆಯು ಗಣ್ಯವ್ಯಕ್ತಿಗಳ ಭಾಷೆಯಾಗಿತ್ತು. ಬೈಬಲನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕೆಂದು ರೇನಾ ನಂಬಿದ್ದನು, ಮತ್ತು ಆ ಗುರಿಯ ಮುನ್ನಡೆಯಲ್ಲಿ ಅವನು ತನ್ನ ಜೀವವನ್ನು ಅಪಾಯಕ್ಕೊಡ್ಡಿದನು.
ತನ್ನ ಭಾಷಾಂತರದ ಪೀಠಿಕೆಯಲ್ಲಿ, ಅವನು ತನ್ನ ಕಾರಣಗಳನ್ನು ವಿವರಿಸಿದನು. “ಸಾಮಾನ್ಯ ಭಾಷೆಯಲ್ಲಿ ಪವಿತ್ರ ಶಾಸ್ತ್ರಗಳಿರುವುದನ್ನು ನಿಷೇಧಿಸುವುದು, ದೇವರಿಗೆ ವಿಪರೀತ ಅಪನಿಂದೆಯನ್ನೂ, ಜನರ ಕ್ಷೇಮಕ್ಕೆ ವಿಪರೀತ ಹಾನಿಯನ್ನೂ ಅನಿವಾರ್ಯವಾಗಿ ತರುತ್ತದೆ. ನಿಷೇಧಿಸುವಿಕೆಯು, ಸೈತಾನನ ಹಾಗೂ ಅವನು ಯಾರನ್ನು ನಿಯಂತ್ರಿಸುತ್ತಾನೋ ಅವರ ಸ್ಪಷ್ಟ ಕೃತ್ಯವಾಗಿದೆ. . . . ತನ್ನ ವಾಕ್ಯವು ಎಲ್ಲರಿಂದಲೂ ಅರ್ಥಮಾಡಿಕೊಳ್ಳಲ್ಪಟ್ಟು, ದೈನಂದಿನ ಜೀವಿತಗಳಲ್ಲಿ ಅನ್ವಯಿಸಲ್ಪಡಲಿ ಎಂಬುದಾಗಿ ಅಪೇಕ್ಷಿಸುತ್ತಾ, ದೇವರು ತನ್ನ ವಾಕ್ಯವನ್ನು ಮನುಷ್ಯರಿಗೆ ಕೊಟ್ಟನೆಂಬ ವಾಸ್ತವಾಂಶದ ನೋಟದಲ್ಲಿ, ಅದನ್ನು ಯಾವುದೇ ಭಾಷೆಯಲ್ಲಿ ನಿಷೇಧಿಸುವ ಯಾವನೇ ಒಬ್ಬನು, ಏನೇ ಆದರೂ ಒಂದು ಒಳ್ಳೆಯ ಹೇತುವುಳ್ಳವನಾಗಿರಸಾಧ್ಯವಿಲ್ಲ.”
ಸ್ಪ್ಯಾನಿಷ್ ಪಾಷಂಡ ವಿಚಾರಣಾಸ್ಥಾನದ ಪರಿವಿಡಿಯು, “ಕ್ಯಾಸ್ಟಿಲಿನ ಭಾಷೆ [ಸ್ಪ್ಯಾನಿಷ್]ಯಲ್ಲಿ ಅಥವಾ ಯಾವುದೇ ಇತರ ದೇಶೀಯ ಭಾಷೆಯಲ್ಲಿ” ಬೈಬಲನ್ನು ನಿರ್ದಿಷ್ಟವಾಗಿ ಬಹಿಷ್ಕೃತಗೊಳಿಸಿದ ಕೇವಲ 18 ವರ್ಷಗಳ ಬಳಿಕ ಇದು ಪ್ರಕಾಶಿಸಲ್ಪಟ್ಟಿದ್ದರಿಂದ, ಈ ಹೇಳಿಕೆಯು ಒಂದು ಧೀರವಾದ ಹೇಳಿಕೆಯಾಗಿತ್ತು. ಸತ್ಯಕ್ಕಾಗಿರುವ ತನ್ನ ಪ್ರೀತಿಗೆ ಮನುಷ್ಯನ ಭಯವು ಕಡಿವಾಣಹಾಕುವಂತೆ ರೇನಾ ಅನುಮತಿಸಲಿಲ್ಲ ಎಂಬುದು ಸ್ಪಷ್ಟ.
ಸ್ಪ್ಯಾನಿಷ್ ಭಾಷೆಯನ್ನು ಮಾತಾಡುವ ಜನರೆಲ್ಲರಿಗೆ ಬೈಬಲು ದೊರೆಯುವಂತೆ ಮಾಡುವ ಒಂದು ಬಲವಾದ ಅಪೇಕ್ಷೆಯಿರುವುದರೊಂದಿಗೆ, ಸಾಧ್ಯವಿರುವಷ್ಟು ಅತ್ಯಂತ ನಿಷ್ಕೃಷ್ಟವಾದ ಭಾಷಾಂತರವನ್ನು ಉತ್ಪಾದಿಸಲು ಸಹ ರೇನಾ ಬಯಸಿದನು. ಮೂಲ ಭಾಷೆಗಳಿಂದ ನೇರವಾಗಿ ಭಾಷಾಂತರಿಸುವುದರ ಕುರಿತಾದ ಪ್ರಯೋಜನಗಳನ್ನು, ತನ್ನ ಪೀಠಿಕೆಯಲ್ಲಿ ಅವನು ವಿಷದವಾಗಿ ನಿರೂಪಿಸಿದನು. ವಲ್ಗೆಟ್ನ ಲ್ಯಾಟಿನ್ ಗ್ರಂಥದೊಳಗೆ ಕೆಲವು ಲೋಪದೋಷಗಳು ನುಸುಳಿದ್ದವೆಂದು ರೇನಾ ವಿವರಿಸಿದನು. ಅತ್ಯಂತ ದೂಷಣೀಯವಾದ ಈ ಲೋಪದೋಷಗಳಲ್ಲಿ ಒಂದು, ದೈವಿಕ ಹೆಸರಿನ ತೆಗೆದುಹಾಕುವಿಕೆಯಾಗಿತ್ತು.
ಸ್ಪ್ಯಾನಿಷ್ ಭಾಷಾಂತರಗಳಲ್ಲಿ ದೈವಿಕ ಹೆಸರು
ಯೆಹೋವ ಎಂಬ ದೇವರ ಹೆಸರು ಮೂಲ ಗ್ರಂಥದಲ್ಲಿ ಕಂಡುಬರುವಂತೆಯೇ, ಬೈಬಲಿನ ಯಾವುದೇ ಶುದ್ಧಾಂತಃಕರಣದ ಭಾಷಾಂತರದಲ್ಲಿ ಕಂಡುಬರಬೇಕೆಂಬುದನ್ನು ರೇನಾ ಗ್ರಹಿಸಿದನು. ಅವನು ದೈವಿಕ ಹೆಸರನ್ನು “ದೇವರು” ಅಥವಾ “ಕರ್ತನು” ಎಂಬಂತಹ ಬಿರುದುಗಳಿಂದ ಸ್ಥಾನಭರ್ತಿಮಾಡುವ ಸಂಪ್ರದಾಯವನ್ನು ಅನುಸರಿಸಲು ನಿರಾಕರಿಸಿದನು. ತನ್ನ ಭಾಷಾಂತರದ ಮುನ್ನುಡಿಯಲ್ಲಿ, ಅವನು ತನ್ನ ಕಾರಣಗಳನ್ನು ಮುಚ್ಚುಮರೆಯಿಲ್ಲದೆ ವಿವರಿಸಿದನು.
“ನಮಗೆ ಅತ್ಯಂತ ಗುರುತರವಾದ ಕಾರಣಗಳಿರುವುದರಿಂದ, ನಾವು (ಯೆಹೋವ) ಎಂಬ ಹೆಸರನ್ನು ಸುರಕ್ಷಿತವಾಗಿಟ್ಟಿದ್ದೇವೆ. ಏಕೆಂದರೆ, ಮೊದಲಾಗಿ, ನಮ್ಮ ಭಾಷಾಂತರದಲ್ಲಿ ದೇವರ ಹೆಸರನ್ನು ಕಂಡುಕೊಳ್ಳಬಹುದಾದ ಸ್ಥಳಗಳಲ್ಲೆಲ್ಲಾ, ತದ್ರೀತಿಯಲ್ಲಿ ಅದು ಹೀಬ್ರು ಗ್ರಂಥದಲ್ಲಿಯೂ ಕಂಡುಬರುತ್ತದೆ, ಮತ್ತು ಯಾವ ವಿಷಯವನ್ನೂ ತೆಗೆದುಹಾಕಬಾರದು ಅಥವಾ ಕೂಡಿಸಬಾರದು ಎಂಬ ಆಜ್ಞೆಯನ್ನೀಯುವ ದೇವರ ನಿಯಮಶಾಸ್ತ್ರದ ಕಡೆಗೆ ಅಪನಂಬಿಗಸ್ತಿಕೆಯನ್ನು ಹಾಗೂ ದೈವದ್ರೋಹವನ್ನು ಮಾಡದೆ, ನಾವು ಅದನ್ನು ಬಿಟ್ಟುಬಿಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲವೆಂಬುದು ನಮ್ಮ ಅಭಿಪ್ರಾಯವಾಗಿತ್ತು. . . . [ಹೆಸರನ್ನು ಬಿಟ್ಟುಬಿಡುವ] ಪಿಶಾಚನಿಂದ ಉಂಟುಮಾಡಲ್ಪಟ್ಟ ಸಂಪ್ರದಾಯವು, ಅದನ್ನು ಪೂಜ್ಯಭಾವದಿಂದ ಕಾಣುತ್ತೇವೆಂದು ಪ್ರತಿಪಾದಿಸುವ, ಆದರೆ ಯಾವುದರ ಮೂಲಕ ವಾಸ್ತವವಾಗಿ ಇತರ ಎಲ್ಲಾ . . . ದೇವರುಗಳಿಂದ ತಾನು ಪ್ರತ್ಯೇಕವಾಗಿರಿಸಲ್ಪಡುವಂತೆ ಆತನು ಹಾರೈಸಿದನೋ, ಆ ಹೆಸರನ್ನು ದೇವರ ಜನರು ಮರೆಯುವಂತೆ ಮಾಡುತ್ತಾ, ಆತನ ಪವಿತ್ರ ಹೆಸರನ್ನು ದೃಷ್ಟಿಗೆ ಮರೆಮಾಡಿದ, ಆಧುನಿಕ ರಬ್ಬಿಗಳ ಒಂದು ಮೂಢಾಚರಣೆಯಿಂದ ಎಬ್ಬಿಸಲ್ಪಟ್ಟಿತು.”
ದೇವರ ಹೆಸರನ್ನು ಘನತೆಗೇರಿಸಲಿಕ್ಕಾಗಿರುವ ರೇನಾನ ಶ್ಲಾಘನೀಯ ಅಪೇಕ್ಷೆಯು, ಬಹಳ ದೂರದ ವರೆಗೆ ತಲಪುವ ಪರಿಣಾಮಗಳನ್ನು ಹೊಂದಿತ್ತು. ನಮ್ಮ ದಿನಗಳ ತನಕವೂ, ಆದ್ಯಂತವಾಗಿ ಆ ದೈವಿಕ ಹೆಸರನ್ನು ಉಪಯೋಗಿಸುತ್ತಾ, ಸ್ಪ್ಯಾನಿಷ್ ಭಾಷಾಂತರಗಳ ಬಹುದೊಡ್ಡ ಸಂಖ್ಯೆಯು—ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟಾಂಟ್, ಇಬ್ಬರೂ—ಈ ಪೂರ್ವನಿದರ್ಶನವನ್ನು ಅನುಸರಿಸಿದೆ. ಪ್ರಮುಖವಾಗಿ ರೇನಾನಿಂದಾಗಿ, ದೇವರನ್ನು ಇತರ ಎಲ್ಲಾ ದೇವರುಗಳಿಂದ ಪ್ರತ್ಯೇಕವಾಗಿರಿಸುವ ಒಂದು ವೈಯಕ್ತಿಕವಾದ ಹೆಸರು ಆತನಿಗಿದೆ ಎಂಬುದನ್ನು, ಬೈಬಲಿನ ಸ್ಪ್ಯಾನಿಷ್ ಭಾಷಾಂತರದ ಬಹುತೇಕ ಯಾವುದೇ ಓದುಗರು ಸುಲಭವಾಗಿ ವಿವೇಚಿಸಬಲ್ಲರು.
ರೇನಾನ ಬೈಬಲಿನ ಶಿರೋನಾಮದ ಪುಟದ ಮೇಲೆ, ಯೆಹೋವನ ಹೆಸರು ಹೀಬ್ರು ಭಾಷೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆಯೆಂಬ ವಾಸ್ತವಾಂಶವು ಗಮನಾರ್ಹವಾಗಿದೆ. ಕೋಟ್ಯಂತರ ಮಂದಿ ಓದಲು ಸಾಧ್ಯವಾಗುವ ಒಂದು ಭಾಷೆಯಲ್ಲಿ ದೇವರ ವಾಕ್ಯವು ದೊರೆಯುವಂತೆ ಮಾಡುವ ಮೂಲಕ, ರೇನಾನು ಅದನ್ನು ಸುರಕ್ಷಿತವಾಗಿಡುವ ಶ್ರೇಷ್ಠ ಕೆಲಸಕ್ಕಾಗಿ ತನ್ನ ಜೀವಿತವನ್ನು ಮೀಸಲಾಗಿಟ್ಟನು.