ಆಫ್ರಿಕದಲ್ಲಿ ಕ್ರೈಸ್ತ ಪ್ರಪಂಚದ ಕೊಯ್ಲು
ಅಲ್ಜೀರಿಯವನ್ನು “ಕ್ರೈಸ್ತ ರಾಷ್ಟ್ರ” ವಾಗಿ ಮತಾಂತರಿಸುವ ಚಾರ್ಲ್ಸ್ ಲವೀಸ್ರಿಯ ಕನಸು ಕನಸಾಗಿಯೇ ಪರಿಣಮಿಸಿತು. ಇಂದು ಅಲೀರ್ಜಿಯದ ಜನಸಂಖ್ಯೆಯಲ್ಲಿ 99 ಪ್ರತಿಶತ ಮುಸ್ಲಿಮರು. ಮತ್ತು ಕ್ರೈಸ್ತಪ್ರಪಂಚ ಉತ್ತರ ಆಫ್ರಿಕದ ವಿಶಾಲ ಭಾಗಗಳಲ್ಲಿ ಬಲಹೀನವಾಗಿದೆ. ಆದರೆ ಆ ಭೂಖಂಡದಲ್ಲಿ ಮಿಕ್ಕ ಭಾಗದ ವಿಷಯವೇನು?
ಡಾ. ಜೆ.ಎಚ್. ಕೇನ್ ಎಂಬವರು ಎ ಕನ್ಸೈಸ್ ಹಿಸ್ಟರಿ ಆಫ್ ದ ಕ್ರಿಶ್ಚಿಯನ್ ವರ್ಲ್ಡ್ ಮಿಷನ್ ಎಂಬ ಪುಸ್ತಕದಲ್ಲಿ ವಾದಿಸುವುದು: “ಕ್ರೈಸ್ತತ್ವವು ಕಪ್ಪು ಆಫ್ರಿಕದಲ್ಲಿ ಮಿಕ್ಕ ತೃತೀಯ ಜಗತ್ತಿನ ಮೊತ್ತಕ್ಕಿಂತ ಹೆಚ್ಚು ಪರಿವರ್ತಿತರನ್ನು ಮಾಡಿದೆ.” ಆದರೆ, ಈ ಪರಿವರ್ತನೆ ಹೊಂದಿದವರು ನಿಜವಾಗಿಯೂ ಕ್ರೈಸ್ತರೊ? ಡಾ. ಕೇನ್ ಒಪ್ಪಿಕೊಳ್ಳುವುದು: “ಆಫ್ರಿಕನ್ ಚರ್ಚಿನಲ್ಲಿ ಒಂದು ದೊಡ್ಡ ಅಪಾಯ ಕ್ರಿಸ್ತವಿಧರ್ಮವೇ.” ಅಲ್ಲದೆ, “ಆಫ್ರಿಕನ್ ಚರ್ಚ್” ಎಂಬ ಅವರ ಪದಪ್ರಯೋಗ ಹೆಸರಿನ ಅಪಪ್ರಯೋಗವೇ. ತನ್ನದೇ ಆದ ಆರಾಧನಾ ರೀತಿಯಿರುವ ಅಕ್ಷರಶಃ ಸಾವಿರಾರು ಆಫ್ರಿಕನ್ ಚರ್ಚುಗಳಿವೆ. ಇದೇಕೆ?
ಅನೈಕ್ಯದ ಬೀಜಗಳನ್ನು ಬಿತ್ತುವುದು
ಮಿಷನೆರಿಗಳು ಆಫ್ರಿಕಕ್ಕೆ ಹೋಗಲು ಹಡಗು ಪ್ರಯಾಣಕ್ಕೆ ತೊಡಗುವ ಮೊದಲೇ ಅನೈಕ್ಯದ ಬೀಜಗಳು ಬಿತ್ತಲ್ಪಟ್ಟಿದ್ದವು. ಲಂಡನ್ ಮಿಷನೆರಿ ಸೊಸೈಟಿಯ ಸದಸ್ಯರು ಅನೇಕ ಚರ್ಚುಗಳಿಂದ ಬಂದವರಾಗಿದ್ದರು, ಮತ್ತು ಮಿಷನೆರಿಗಳು ತಮಗೆ ನಿಯಮಿತವಾದ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾಗ ಅವರ ಮಧ್ಯೆ, ಕೋಪದ ತತ್ವಸಂಬಂಧವಾದ ವಾಗ್ವಾದಗಳು ನಡೆದುವು. ಈ ಹೋರಾಟವು, ಅವರು ಅವರ ಮಿಷನ್ ಸೇಷ್ಟನಿನಲ್ಲಿ ನೆಲೆಸಿದ ಬಳಿಕ ಹೆಚ್ಚು ವಿಷಮವಾಗುವುದು ನಿಶ್ಚಯವಾಗಿತ್ತು.
ಪ್ರೊಫೆಸರ್ ರಾಬರ್ಟ್ ರಾಟ್ಬರ್ಗ್, ಕ್ರಿಶ್ಚಿಯನ್ ಮಿಷನೆರೀಸ್ ಆ್ಯಂಡ್ ದ ಕ್ರಿಯೇಷನ್ ಆಫ್ ನಾರ್ತರ್ನ್ ರೊಡೇಸ್ಯ 1880-1924 ಎಂಬ ತನ್ನ ಪುಸ್ತಕದಲ್ಲಿ ಬರೆಯುವುದು: “ಮಿಷನೆರಿಗಳು ತಮ್ಮೊಳಗೆ ಮತ್ತು ತಮ್ಮ ಕಡಲಾಚೆಯ ಡೈರೆಕ್ಟರರೊಂದಿಗೆ, ಸಾಮಾನ್ಯವಾಗಿ ತಮ್ಮ ಸುವಾರ್ತಾ ಧ್ಯೇಯಗಳಿಗೆ ಹಾನಿಯಾಗುವಂತೆ ಕಟುವಾಗಿ ಹೋರಾಡಿದರು. . . . ಮಿಷನೆರಿಗಳು ಮತ ಪರಿವರ್ತನೆಗಳನ್ನು ಸಾಧಿಸಲು ವ್ಯಯಿಸುವಷ್ಟೇ ಸಮಯ ಮತ್ತು ಶಕ್ತಿಯನ್ನು ಈ ಕಲಹಗಳ ಕುರಿತು ಬರೆಯುವುದರಲ್ಲಿ ವ್ಯಯಿಸಿದಂತೆ ಕಾಣುತ್ತಿತ್ತು.”
ಕೆಲವು ಬಾರಿ, ಈ ಮಿಷನೆರಿ ಜಗಳಗಳು ಪ್ರತಿಸ್ಪರ್ಧಿ ಮಿಷನ್ಗಳ ರಚನೆಯಲ್ಲಿ ಅಂತ್ಯಗೊಳ್ಳುತ್ತಿದ್ದವು. ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಮಿಷನ್ಗಳು ಮತಾಂತರಿತರಿಗಾಗಿ ತೀವ್ರವಾಗಿ ಸ್ಪರ್ಧಿಸಿದವು. ಹೀಗೆ, ಈ ಐಕ್ಯದ ಕೊರತೆ ಮತಾಂತರಿತರಲ್ಲಿ ಪ್ರತಿಬಿಂಬಿಸುವುದು ಅನಿವಾರ್ಯವಾಗಿತ್ತು. ಸಕಾಲದಲ್ಲಿ ಲಕ್ಷಾಂತರ ಆಫ್ರಿಕದ ಜನರು ಮಿಷನ್ ಚರ್ಚುಗಳನ್ನು ಬಿಟ್ಟು ತಮ್ಮದೇ ಆದ ಚರ್ಚುಗಳನ್ನು ಸ್ಥಾಪಿಸಿದರು.
ಮಿಷನೆರಿ ಇತಿಹಾಸಗಾರ ಡಾ. ಕೇನ್ ಬರೆಯುವುದು: “ಆಫ್ರಿಕನ್ ಸ್ವತಂತ್ರ ಚರ್ಚುಗಳು ಆಫ್ರಿಕದಲ್ಲೆಲ್ಲೂ ಕಾಣಸಿಗುತ್ತವೆ. . . . ಈ ಪರಂಪರೆಯಲ್ಲಿ ಒಟ್ಟು ಸುಮಾರು ಏಳು ಸಾವಿರ ಪ್ರತ್ಯೇಕ ಗುಂಪುಗಳಿವೆ.” ವಿರೋಧಾತ್ಮಕ ನಂಬಿಕೆಗಳಿದ್ದ ಮಿಷನೆರಿಗಳ ಮಧ್ಯೆ ಇದ್ದ ಸ್ಪರ್ಧೆ ಮಾತ್ರ ಇದಕ್ಕೆ ಕಾರಣವಲ್ಲ. ದ ಮಿಷನೆರೀಸ್ ಎಂಬ ಪುಸ್ತಕದಲ್ಲಿ, ಜಫ್ರಿ ಮೋರ್ಹಾಸ್, ಈ “ಕಪ್ಪು ಸುಧಾರಣೆ” ಗೆ ಇನ್ನೊಂದು ಕಾರಣ “ಬಿಳಿಜನರ ಶ್ರೇಷ್ಠತೆಯ ವಿರುದ್ಧ ಅಸಮಾಧಾನ” ಎಂದು ವಿವರಿಸುತ್ತಾರೆ.
ಕ್ರೈಸ್ತರೋ ಯೂರೋಪಿಯನ್ ಕುಲದ್ವೇಷಿಗಳೋ?
ಡಾ. ಕೇನ್ ಒಪ್ಪಿಕೊಳ್ಳುವುದು: “ಮಿಷನೆರಿಗಳಲ್ಲಿ ಮೇಲರಿಮೆಯಿತ್ತು.” ಏಡ್ರಿಯನ್ ಹೇಸ್ಟಿಂಗ್ಸ್ ತನ್ನ ಆಫ್ರಿಕನ್ ಕ್ರಿಶ್ಚಿಯಾನಿಟಿ ಎಂಬ ಪುಸ್ತಕದಲ್ಲಿ, ಅವರು “ಕ್ರೈಸ್ತ ಧರ್ಮ ಯೂರೋಪಿಯನ್ ಸಂಸ್ಕೃತಿ ಮತ್ತು ಯೂರೋಪಿಯನ್ ನಾಯಕತ್ವದೊಂದಿಗೆ ಜೊತೆಯಾಗಿ ಹೋಗಬೇಕೆಂದು ನಂಬಿದರು” ಎಂದು ಹೇಳುತ್ತಾರೆ.
ಫ್ರಾನ್ಸಿನ ಚಾರ್ಲ್ಸ್ ಲವೀಸ್ರಿ ಈ ವೀಕ್ಷಣವಿದ್ದ ಒಬ್ಬ ಮಿಷನೆರಿ ನಾಯಕ. ಆಫ್ರಿಕದ ದಕ್ಷಿಣಲ್ಲಿನ ಲಂಡನ್ ಮಿಷನೆರಿ ಸೊಸೈಟಿಯ ಮಿಷನ್ ಮೇಲ್ವಿಚಾರಕ ಜಾನ್ ಫಿಲಿಪ್ ಇದರಲ್ಲಿ ಇನ್ನೊಬ್ಬನು. ಅವನು 1828 ರಲ್ಲಿ ಜಂಭದಿಂದ ಹೇಳಿದ್ದು: “ನಮ್ಮ ಮಿಷನೆರಿಗಳು . . . ಬ್ರಿಟಿಷ್ ಹಿತ, ಬ್ರಿಟಿಷ್ ಪ್ರಭಾವ, ಮತ್ತು ಬ್ರಿಟಿಷ್ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದಾರೆ. ಮಿಷನೆರಿಯು ಎಲ್ಲಿ ಒಂದು ಅಸಂಸ್ಕೃತ ಬಣದೊಂದಿಗೆ ಪರಿವರ್ತನೆಯನ್ನು ಪ್ರಾರಂಭಿಸುತ್ತಾನೊ, ಅಲ್ಲಿ ವಸಾಹತು ಸರಕಾರದ ಮೇಲೆ ಅವರಿಗಿದ್ದ ಅವಿಚಾರಾಭಿಪ್ರಾಯ ಬಿದ್ದುಹೋಗುತ್ತದೆ; ಕೃತಕ ಆವಶ್ಯಕತೆಗಳನ್ನು ನಿರ್ಮಿಸುವುದರ ಮೂಲಕ ವಸಾಹತಿನ ಮೇಲೆ ಅವರ ಅವಲಂಬನೆ ಹೆಚ್ಚುತ್ತದೆ; . . . ಉದ್ಯಮ, ವ್ಯಾಪಾರ, ಮತ್ತು ವ್ಯವಸಾಯ ಥಟ್ಟನೆ ವಿಕಾಸಗೊಳ್ಳುತ್ತದೆ; ಮತ್ತು ಅವರೊಳಗೆ ಪ್ರತಿಯೊಬ್ಬ ಶುದ್ಧ ಮತಾಂತರಿತನು . . . ವಸಾಹತು ಸರಕಾರದ ಸಹಕಾರಿಯೂ ಮಿತ್ರನೂ ಆಗಿ ಪರಿಣಮಿಸುತ್ತಾನೆ.”
ಹಾಗಾದರೆ ಇಂಥ ಮಿಷನೆರಿಗಳು ನೆಲಸುನಾಡಿನ ವಿಸ್ತರಣೆಗೆ ಉಪಯೋಗಕಾರಿ ಮಾಧ್ಯಮಗಳೆಂದು ಯೂರೋಪಿಯನ್ ಸರಕಾರಗಳು ವೀಕ್ಷಿಸಿದ್ದು ಆಶ್ಚರ್ಯವೆ? ಮಿಷನೆರಿಗಳ ವಿಷಯದಲ್ಲಿ ಹೇಳುವುದಾದರೆ, ಅವರು ಆಫ್ರಿಕ ನೆಲಸುನಾಡಿನ ವಿಜಯವನ್ನು ಸ್ವಾಗತಿಸಿದರು. ಅವರು 1910 ರಲ್ಲಿ ಎಡಿನ್ಬರ್ಗಿನಲ್ಲಿ ನಡೆದ ವರ್ಲ್ಡ್ ಮಿಷನೆರಿ ಪರಿಷತ್ತಿನಲ್ಲಿ ಘೋಷಿಸಿದ್ದು: “ಮಿಷನೆರಿಗಳ ಗುರಿ ಮತ್ತು ಸರಕಾರದ ಗುರಿ—ಇವುಗಳ ಮಧ್ಯೆ ಯಾವಾಗಲೂ ಒಂದು ಪ್ರತ್ಯೇಕಿಸುವ ರೇಖೆಯನ್ನು ಎಳೆಯುವುದು ಅಸಾಧ್ಯ.”
ಆಫ್ರಿಕದಲ್ಲಿ ರಾಜರಂತೆ ಆಳಿದರು
ತಮ್ಮ ಅಧಿಕಾರವನ್ನು ಪ್ರತಿಪಾದಿಸಲು, ಕೆಲವು ಮಿಷನೆರಿಗಳು ವಸಾಹತಿನ ಮಿಲಿಟರಿ ಬಲದ ಮೇಲೆ ಆಶ್ರಯಿಸಿದರು. ನಿವಾಸಿಗಳು ಮಿಷನೆರಿ ಅಧಿಕಾರವನ್ನು ಒಪ್ಪಲು ನಿರಾಕರಿಸಿದ ಕಾರಣ ಕೆಲವು ಸಲ ಸಮುದ್ರ ತೀರದ ಪಟ್ಟಣಗಳನ್ನು ಬ್ರಿಟಿಷ್ ನೌಕಾ ಫಿರಂಗಿಗಳು ಧ್ವಂಸ ಮಾಡಿದುವು. ಪಶ್ಚಿಮ ಆಫ್ರಿಕಕ್ಕೆ ವೆಸಿಯ್ಲನ್ ಮಿಷನೆರಿಯಾಗಿದ್ದ ಡೆನಿಸ್ ಕೆಂಪ್, 1898 ರಲ್ಲಿ, “ಬ್ರಿಟಿಷ್ ಸೈನ್ಯ ಮತ್ತು ನೌಕಾಪಡೆಯನ್ನು ದೇವರು ಇಂದು ತನ್ನ ಉದ್ದೇಶವನ್ನು ನೆರವೇರಿಸಲು ಉಪಯೋಗಿಸುತ್ತಾನೆಂಬ ದೃಢ ನಿಶಿತ್ಚಾಭಿಪ್ರಾಯ” ವನ್ನು ವ್ಯಕ್ತಪಡಿಸಿದನು.
ತಮ್ಮನ್ನು ಸ್ಥಾಪಿಸಿಕೊಂಡ ಮೇಲೆ, ಮಿಷನೆರಿಗಳು ಕೆಲವು ಸಲ ಬಣಗಳ ಮುಖ್ಯಸ್ಥರ ಐಹಿಕ ಅಧಿಕಾರವನ್ನು ವಶಮಾಡಿಕೊಂಡರು. ಪ್ರೊಫೆಸರ್ ರಾಟ್ಬರ್ಗ್ ಬರೆಯುವುದು: “ಲಂಡನ್ ಮಿಷನೆರಿ ಸೊಸೈಟಿಯ ಮಿಷನೆರಿಗಳು ತಮ್ಮ ದೇವಪ್ರಭುತ್ವ ನಿಯಮಗಳನ್ನು ಕಾಪಾಡಲು ಆಗಾಗ ಬಲಾತ್ಕಾರವನ್ನು ಉಪಯೋಗಿಸಿದರು. ತಮ್ಮ ಅಸಮ್ಮತಿಯನ್ನು ಪ್ರದರ್ಶಿಸಲು ಅವರು ಉಪಯೋಗಿಸಿದ ಮೆಚ್ಚುಗೆಯ ಸಾಧನ ಸೀಕೋಟಿ. ಇದು ನೀರಾನೆಯ ಹದಮಾಡಿದ ಚರ್ಮದಿಂದ ಮಾಡಿದ ಉದ್ದದ ಚಬುಕು. ಇದರಿಂದ ಯಾವುದೇ ನೆಪದ ಮೇಲೆ ಆಫ್ರಿಕದ ಜನರನ್ನು ಅನಿರ್ಬಂಧವಾಗಿ ಹೊಡೆಯಲಾಗುತ್ತಿತ್ತು.” ದಿ ಆಫ್ರಿಕನ್ಸ್ ಎಂಬ ತನ್ನ ಪುಸ್ತಕದಲ್ಲಿ ಡೇವಿಡ್ ಲ್ಯಾಂಬ್ ಗಮನಿಸುವುದು: “ಯುಗಾಂಡದಲ್ಲಿ ಬ್ವಾನ ಬಾಟ್ರಿ ಎಂಬ ಆಂಗ್ಲಿಕನ್ ಮಿಷನೆರಿ, ಆರಾಧನೆಯ ಸಮಯದಲ್ಲಿ ಸಮಯ ಮೀರಿ ಬಂದವರಿಗೆ ಹೊಡೆಯಲು ಪದೇ ಪದೇ ಪೀಠದಿಂದ ಕೆಳಗಿಳಿದು ಬರುವುದನ್ನು ಒಬ್ಬ ಆಫ್ರಿಕನ್ ಮತಾಂತರಿತನು ನೆನಪಿಸಿಕೊಳ್ಳುತ್ತಾನೆ.”
ಇಂಥ ಕೃತ್ಯಗಳಿಂದ ತಲ್ಲಣಗೊಂಡ ಜೇಮ್ಸ್ ಮೆಕೈ ಎಂಬ ಒಬ್ಬ ಮಿಷನೆರಿ, ಲಂಡನ್ ಮಿಷನೆರಿ ಸೊಸೈಟಿಯ ಡೈರೆಕ್ಟರರಿಗೆ ಒಂದು ಫಿರ್ಯಾದು ಬರೆದನು. ಅವನು ಎಚ್ಚರಿಸಿದ್ದು: “ದೇವರ ಪ್ರೀತಿಯ ಸುವಾರ್ತೆಯನ್ನು ಅವರಿಗೆ ಒಯ್ಯುವ ಬಿಳಿ ಜನರು ಎಂದೆಣಿಸಲ್ಪಡುವ ಬದಲಿಗೆ, ಅವರು ನಮ್ಮನ್ನು [ಕು]ಪ್ರಸಿದ್ಧರೆಂದು ತಿಳಿದು ಭಯಪಡುತ್ತಾರೆ.”
ಲೋಕ ಯುದ್ಧಗಳು
ದ ಮಿಷನೆರೀಸ್ ಎಂಬ ಪುಸ್ತಕ ಹೇಳುವುದು: “ಒಂದು ಶತಮಾನಕ್ಕೂ ಹೆಚ್ಚು ಕಾಲ, ಕಾದಾಟ ಮತ್ತು ಅದು ಮುಕ್ತಗೊಳಿಸುವ ಅಸಂಸ್ಕೃತ ಪ್ರವೃತ್ತಿಗಳು ಫಲರಹಿತ ಮತ್ತು ಕೆಟ್ಟದ್ದಾಗಿವೆ ಎಂದು [ಆಫ್ರಿಕದವರಿಗೆ] ಪಟ್ಟುಹಿಡಿದು ಮತ್ತು ಆವೇಶಪೂರಿತವಾಗಿ ಹೇಳಲಾಗುತ್ತಿತ್ತು.” ಆದರೆ, 1914 ರಲ್ಲಿ I ನೆಯ ಲೋಕ ಯುದ್ಧ ಯೂರೋಪಿನ ಕ್ರೈಸ್ತರೆನಿಸಿಕೊಂಡಿದ್ದ ರಾಷ್ಟ್ರಗಳ ಮಧ್ಯೆ ಹೊರಚಿಮ್ಮಿತು.
“ಅಧಿಕಾಂಶ ಪ್ರತಿಯೊಂದು ರಾಷ್ಟ್ರದ ಮಿಷನೆರಿಗಳೂ ಈ ಮಹಾ ಯುದ್ಧದೊಳಗೆ ಹೀರಲ್ಪಟ್ಟರು,” ಎಂದು ವಿವರಿಸುತ್ತಾರೆ ಮೋರ್ಹಾಸ್. ಅವಮಾನಕಾರಕವಾಗಿ, ಮಿಷನೆರಿಗಳು ತಮ್ಮ ಆಫ್ರಿಕನ್ ಮತಾಂತರಿತರನ್ನು ಪಕ್ಷ ವಹಿಸುವಂತೆ ಪ್ರೋತ್ಸಾಹಿಸಿದರು. ಕೆಲವು ಮಿಷನೆರಿಗಳು ತಾವೇ ನಾಯಕತ್ವ ವಹಿಸಿ ಆಫ್ರಿಕನ್ ಸೈನ್ಯಗಳನ್ನು ರಣರಂಗಕ್ಕೆ ನಡೆಸಿದ್ದೂ ಉಂಟು. ಯುದ್ಧದ ಪರಿಣಾಮವನ್ನು ಹಿಸ್ಟರಿ ಆಫ್ ಕ್ರಿಶ್ಚಿಯನ್ ಮಿಷನ್ಸ್ ಎಂಬ ತನ್ನ ಪುಸ್ತಕದಲ್ಲಿ ಪ್ರೊಫೆಸರ್ ಸೀವ್ಟನ್ ನೀಲ್ ಉತ್ತಮವಾಗಿ ವ್ಯಕ್ತಪಡಿಸಿದ್ದಾರೆ: “ಕ್ರೈಸ್ತತ್ವ ಮತ್ತು ನಾಗರಿಕತೆ ತಮ್ಮ ಏಕಸ್ವಾಮ್ಯವೆಂದು ಬೊಬ್ಬೆಹಾಕಿ ವಾದಿಸುವ ಯೂರೋಪಿಯನ್ ರಾಷ್ಟ್ರಗಳು, ಯಾವುದು ಅವರನ್ನು ಆರ್ಥಿಕ ರೀತಿಯಲ್ಲಿ ದರಿದ್ರರಾಗಿ ಮತ್ತು ತುಸು ಸದ್ಗುಣವೂ ಇಲ್ಲದವರಾಗಿ ಬಿಡಲಿಕ್ಕಿತ್ತೋ ಆ ಆಂತರಿಕ ಯುದ್ಧಕ್ಕೆ ಕಣ್ಣುಮುಚ್ಚಿ ಮತ್ತು ಗಲಿಬಿಲಿಗೊಂಡು ಧಾವಿಸಿದವು.” ನೀಲ್ ಮುಂದುವರಿಸಿದ್ದು: “ಎರಡನೆಯ ಲೋಕ ಯುದ್ಧ ಒಂದನೆಯದ್ದನ್ನು ಕೇವಲ ಪೂರ್ತಿಗೊಳಿಸಿತು. ಪಾಶ್ಚಿಮಾತ್ಯರ ನೈತಿಕ ಪ್ರದರ್ಶನ ಠಕ್ಕೆಂದು ತೋರಿಸಲ್ಪಟ್ಟಿತು; ‘ಕ್ರೈಸ್ತಪ್ರಪಂಚ’ ಕಾಲ್ಪನಿಕವಲ್ಲದೆ ಮತ್ತೇನೂ ಅಲ್ಲ ಎಂದು ಬಯಲಾಯಿತು. ‘ಪಶ್ಚಿಮದ ಕ್ರೈಸ್ತ [ರಾಷ್ಟ್ರಗಳು]’ ಎಂದು ಇನ್ನು ಮೇಲೆ ಮಾತಾಡಲಾಗಲಿಲ್ಲ.”
ಗ್ರಹಿಸಸಾಧ್ಯವಾಗುವಂತೆ, ಕಪ್ಪು ಸುಧಾರಣೆ I ನೆಯ ಲೋಕಯುದ್ಧದ ಬಳಿಕ ಚುರುಕುಗೊಂಡಿತು. ಆದರೆ ಕ್ರೈಸ್ತಪ್ರಪಂಚದ ಚರ್ಚುಗಳಿಗೆ ಅಂಟಿಕೊಂಡಿದ್ದ ಆಫ್ರಿಕನ್ ಜನರ ವಿಷಯದಲ್ಲೇನು? ಆ ಬಳಿಕ ಅವರಿಗೆ ಬೈಬಲಿನಿಂದ ಸತ್ಯವನ್ನು ಕಲಿಸಲಾಯಿತೊ?
ಆಫ್ರಿಕದ ಪೂರ್ವಜರ ನಂಬಿಕೆಗಳು
ಕ್ರೈಸ್ತಪ್ರಪಂಚದ ಮಿಷನೆರಿಗಳು, ಸತ್ತ ಪೂರ್ವಿಕರನ್ನು ತೃಪ್ತಿಪಡಿಸಲು ಭವಿಷ್ಯವಾದಗಳನ್ನು ವಿಚಾರಿಸುವ ಆಫ್ರಿಕನ್ ಧಾರ್ಮಿಕ ಆಚಾರವನ್ನು ಖಂಡಿಸಿದರು. ಅದೇ ಸಮಯದಲ್ಲಿ, ಸಕಲ ಮಾನವರಲ್ಲಿ ಒಂದು ಅಮರವಾದ ಆತ್ಮವಿದೆಯೆಂದು ಮಿಷನೆರಿಗಳು ಸಾಧಿಸಿದರು. ಅವರು ಮರಿಯಳನ್ನು ಮತ್ತು “ಸಂತರನ್ನು” ಗೌರವಿಸಬೇಕೆಂಬ ಸಂಗತಿಯನ್ನೂ ಬೆಳೆಯಿಸಿದರು. ಈ ಬೋಧನೆಗಳು, ತಮ್ಮ ಸತ್ತ ಪೂರ್ವಿಕರು ಜೀವಿಸುತ್ತಿದ್ದಾರೆಂಬ ಆಫ್ರಿಕನ್ ನಂಬಿಕೆಯನ್ನು ಸ್ಥಿರಪಡಿಸಿದುವು. ಅಲ್ಲದೆ, ಕ್ರೂಜೆಯಂಥ ಧಾರ್ಮಿಕ ವಿಗ್ರಹಗಳನ್ನು ಪೂಜ್ಯಭಾವದಿಂದ ಕಂಡು, ಆಫ್ರಿಕನ್ ಜನರು ದುಷ್ಟಾತ್ಮಗಳಿಂದ ರಕ್ಷಣೆ ಪಡೆಯಲು ತಾಯಿತಿಯನ್ನು ಉಪಯೋಗಿಸುವುದು ನ್ಯಾಯವೆಂಬುದಕ್ಕೆ ಮಿಷನೆರಿಗಳು ಮನ್ನಣೆ ಕೊಟ್ಟರು.
ಪ್ರೊಫೆಸರ್ ಸಿ.ಜಿ. ಬಯೀಟ ಎಂಬವರು ಕ್ರಿಶ್ಚಿಆ್ಯನಿಟಿ ಇನ್ ಟ್ರಾಪಿಕಲ್ ಆಫ್ರಿಕ ಎಂಬ ತನ್ನ ಪುಸ್ತಕದಲ್ಲಿ ವಿವರಿಸುವುದು: “ಒಬ್ಬ ಆಫ್ರಿಕನ್ ವ್ಯಕ್ತಿಗೆ ತನ್ನ ದೇಹದಲ್ಲಿ ತಾಯಿತಿಯನ್ನು ಕಟ್ಟಿಕೊಂಡಿರುವಾಗ, ಚರ್ಚಿನಲ್ಲಿ ಉತ್ಸಾಹದಿಂದ, ‘ಬೇರೆ ಆಶ್ರಯವಿಲ್ಲವೆನಗೆ’ ಎಂದು ಹಾಡಲು, ಯಾ ತಾನು ಯಾವ ಸೂತ್ರವನ್ನಾದರೂ ಮುರಿಯುತ್ತಿದ್ದೇನೆ ಎಂಬ ಭಾವನೆಯೇ ಇಲ್ಲದೆ ಚರ್ಚಿನಿಂದ ನೇರವಾಗಿ ಭವಿಷ್ಯವಾದಿಯ ಬಳಿಗೆ ಹೋಗುವುದು ಸಾಧ್ಯ.”—ಧರ್ಮೋಪದೇಶಕಾಂಡ 18:10-12 ಮತ್ತು 1 ಯೋಹಾನ 5:21 ಹೋಲಿಸಿ.
ಅನೇಕ ಮಿಷನೆರಿಗಳು ಆಫ್ರಿಕದ ಜನರಿಗೆ, ಅವರ ವಿಧರ್ಮಿ ಪೂರ್ವಿಕರು ಒಂದು ಅಗ್ನಿಮಯ ನರಕದಲ್ಲಿ ಯಾತನೆ ಪಡುತ್ತಾರೆಂದೂ ಮಿಷನೆರಿ ಬೋಧನೆಗಳನ್ನು ಅಂಗೀಕರಿಸಲು ನಿರಾಕರಿಸುವಲ್ಲಿ ಅವರ ವಿಧಿಯೂ ಅಂತೆಯೆ ಆಗುವುದೆಂದೂ ಹೇಳಿದರು. ಆದರೆ ನಿತ್ಯ ಯಾತನೆಯ ಈ ತತ್ವವು, ಮಿಷನೆರಿಗಳು ಆಫ್ರಿಕನ್ ಭಾಷೆಗಳಿಗೆ ಭಾಷಾಂತರ ಮಾಡಲು ಪ್ರಯಾಸಪಟ್ಟಿದ್ದ ಬೈಬಲಿನ ಸರಳ ಹೇಳಿಕೆಗಳನ್ನು ವಿರೋಧಿಸುತ್ತದೆ.—ಆದಿಕಾಂಡ 3:19; ಯೆರೆಮೀಯ 19:5; ರೋಮಾಪುರ 6:23.
ವಾಸ್ತವವೇನಂದರೆ, ಪಾಪಿಗಳಾದ ಮಾನವಾತ್ಮಗಳು ಸಾಯುತ್ತವೆ ಮತ್ತು “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲನ್ನುತ್ತದೆ. (ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಬೈಬಲ್ ಸತ್ಯಗಳನ್ನು ಕೇಳುವ ಸಂದರ್ಭವಿದ್ದಲ್ಲದ ಆಫ್ರಿಕನ್ ವ್ಯಕ್ತಿಗಳ ವಿಷಯದಲ್ಲಿಯಾದರೋ, “ನೀತಿವಂತರಿಗೂ ಅನೀತಿವಂತರಿಗೂ” ಆಗುವ “ಪುನರುತ್ಥಾನ”ದಲ್ಲಿ ಸೇರಿಸಲ್ಪಡುವ ಪ್ರತೀಕ್ಷೆ ಅವರಿಗಿದೆ. (ಅ. ಕೃತ್ಯಗಳು 24:15) ಇಂಥ ಪುನರುತ್ಥಾನಿತರಿಗೆ ರಕ್ಷಣೆಗಿರುವ ದೇವರ ಒದಗಿಸುವಿಕೆಯ ಕುರಿತು ಕಲಿಸಲಾಗುವುದು. ಆಗ ಅವರು ದೇವರ ಪ್ರೀತಿಗೆ ಗಣ್ಯತೆಯಿಂದ ಪ್ರತಿವರ್ತಿಸುವಲ್ಲಿ, ಒಂದು ಪ್ರಮೋದವನವಾದ ಭೂಮಿಯ ಮೇಲೆ ನಿತ್ಯಜೀವದ ಬಹುಮಾನ ಅವರಿಗೆ ನೀಡಲಾಗುವುದು.—ಕೀರ್ತನೆ 37:29; ಲೂಕ 23:43; ಯೋಹಾನ 3:16.
ಈ ಆಶ್ಚರ್ಯಕರವಾದ ಬೈಬಲ್ ಸತ್ಯಗಳನ್ನು ಕಲಿಸುವ ಬದಲಿಗೆ, ಕ್ರೈಸ್ತಪ್ರಪಂಚವು ಆಫ್ರಿಕದ ಜನರನ್ನು ಸುಳ್ಳು ಬೋಧನೆ ಮತ್ತು ಧಾರ್ಮಿಕ ಕಪಟಾಚರಣೆಯಿಂದ ತಪ್ಪು ದಾರಿಗೆಳೆದಿದೆ. ಆಫ್ರಿಕದ ವಸಾಹತು ವಿಜಯದಲ್ಲಿ ಕ್ರೈಸ್ತಪ್ರಪಂಚದ ಮಿಷನೆರಿಗಳು ವಹಿಸಿದ ಪಾತ್ರಕ್ಕೆ ಬೈಬಲಿನಲ್ಲಿ ಯಾವ ಬೆಂಬಲವೂ ಇಲ್ಲವೆಂಬುದು ನಿಶ್ಚಯ. ಇದಕ್ಕೆ ವಿರೋಧಾತ್ಮಕವಾಗಿ, ತನ್ನ ರಾಜ್ಯವು “ಈ ಲೋಕದ್ದಲ್ಲ” ವೆಂದೂ ತನ್ನ ನಿಜ ಹಿಂಬಾಲಕರೂ ಹಾಗೆಯೆ “ಲೋಕದ ಕಡೆಯವರಲ್ಲ” ವೆಂದೂ ಯೇಸು ಹೇಳಿದನು. (ಯೋಹಾನ 15:19; 18:36) ಆದಿ ಕ್ರೈಸ್ತರು ಯೇಸು ಕ್ರಿಸ್ತನ—ಲೋಕದ ಸರಕಾರಗಳದ್ದಲ್ಲ—ರಾಯಭಾರಿಗಳಾಗಿದ್ದರು.—2 ಕೊರಿಂಥ 5:20.
ಆದುದರಿಂದ, ಕ್ರೈಸ್ತಪ್ರಪಂಚದ ಆಫ್ರಿಕದ ಕೊಯ್ಲು ಮೊತ್ತದಲ್ಲಿ, ತಲ್ಲಣಗೊಳಿಸುವ ಅನೈಕ್ಯ, ಅವಿಶ್ವಾಸ, ಮತ್ತು “ಕ್ರಿಸ್ತವಿಧರ್ಮ”—ಈ ಲಕ್ಷಣಗಳುಳ್ಳ ಅಸಂತುಷ್ಟ ಕೊಯ್ಲು. ಆಫ್ರಿಕದ ಅನೇಕ “ಕ್ರೈಸ್ತ” ಭಾಗಗಳಲ್ಲಿ ಕಂಡುಬಂದಿರುವ ಹಿಂಸಾತ್ಮಕ ಕೃತ್ಯಗಳು “ಸಮಾಧಾನದ ಪ್ರಭು” ವಿನ ಬೋಧನೆಗಳಿಗೆ ಹೊಂದಿಕೆಯಾಗಿರುವುದಿಲ್ಲ. (ಯೆಶಾಯ 9:6) ಆಫ್ರಿಕದಲ್ಲಿ ಕ್ರೈಸ್ತಪ್ರಪಂಚದ ಕಾರ್ಯದ ಫಲಗಳು ತನ್ನ ನಿಜ ಹಿಂಬಾಲಕರ ಕುರಿತ ಯೇಸುವಿನ ಮಾತುಗಳಿಗೆ ನೇರವಾಗಿ ವಿರೋಧಾತ್ಮಕವಾಗಿವೆ. ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥಿಸುವಾಗ ಯೇಸು, “ಅವರ ಐಕ್ಯವು ಪೂರ್ಣ ಸಿದ್ಧಿಗೆ ಬರುವದರಿಂದ ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ . . . ಎಂದೂ ಲೋಕಕ್ಕೆ ತಿಳಿದುಬರುವುದು” ಎಂದು ಬೇಡಿಕೊಂಡನು.—ಯೋಹಾನ 17:21, 23; 1 ಕೊರಿಂಥ 1:10.
ಹಾಗಾದರೆ ಆಫ್ರಿಕದಲ್ಲಿ ಮಾಡಿರುವ ಎಲ್ಲ ಮಿಷನೆರಿ ಕೆಲಸವೂ ವಿಫಲವೆಂದು ಇದರ ಅರ್ಥವೆ? ಖಂಡಿತವಾಗಿಯೂ ಅಲ್ಲ. ಆಫ್ರಿಕದಲ್ಲಿ ಮತ್ತು ಲೋಕಾದ್ಯಂತವಾಗಿ ನಿಜ ಕ್ರೈಸ್ತ ಮಿಷನೆರಿ ಸೇವೆಯಲ್ಲಿ ಬಂದಿರುವ ಶ್ರೇಷ್ಠ ಫಲಗಳನ್ನು 10 ನೆಯ ಪುಟದಿಂದ ತೊಡಗುವ ಲೇಖನಗಳಲ್ಲಿ ಚರ್ಚಿಸಲಾಗುವುದು.
[ಪುಟ 6 ರಲ್ಲಿರುವ ಚಿತ್ರ]
ಜಾನ್ ಫಿಲಿಪ್ನಂಥ ಕಳೆದ ಶತಮಾನದ ಮಿಷನೆರಿ ನಾಯಕರುಗಳು ಯೂರೋಪಿಯನ್ ನಾಗರಿಕತೆ ಮತ್ತು ಕ್ರೈಸ್ತತ್ವ ಒಂದೇ ಆಗಿದ್ದುವೆಂದು ನಂಬಿದರು
[ಕೃಪೆ]
Cape Archives M450
[ಪುಟ 7 ರಲ್ಲಿರುವ ಚಿತ್ರ]
ಆತ್ಮದ ಅಮರತ್ವದಂಥ ಬೈಬಲೇತರ ಬೋಧನೆಗಳನ್ನು ಹರಡಿಸಿ ಕ್ರೈಸ್ತಪ್ರಪಂಚದ ಮಿಷನೆರಿಗಳು ಆಫ್ರಿಕದ ಜನರ ಪೂರ್ವಿಕರ ನಂಬಿಕೆಗಳನ್ನು ಪ್ರೋತ್ಸಾಹಿಸಿದರು
[ಕೃಪೆ]
Courtesy Africana Museum, Johannesburg