ವಾಗ್ದಾತ್ತ ದೇಶದ ದೃಶ್ಯಗಳು
ಶೀಲೋವಿಗೆ ಹೋಗುವುದು ಒಳ್ಳೆಯ ಮತ್ತು ಕೆಟ್ಟ ಮಕ್ಕಳು
ನೀವು ವಾಗ್ದಾತ್ತ ದೇಶದ ನಗರಗಳ, ಪಟ್ಟಣಗಳ, ಪ್ರದೇಶಗಳ ಬಗ್ಗೆ ಯೋಚಿಸುವಾಗ ಕೆಲವು ನಿರ್ದಿಷ್ಟ ಗಮನ ಸೆಳೆಯುವ ಸ್ತ್ರೀ ಮತ್ತು ಪುರುಷರು ನಿಮ್ಮ ಮನಸ್ಸಿಗೆ ಬರುತ್ತಾರೋ? ಪ್ರಾಯಶಃ ಹೌದು, ಏಕೆಂದರೆ, ಅಧಿಕ ಸಂಖ್ಯೆಯ ಬೈಬಲಿನ ದಾಖಲೆಗಳು ವಯಸ್ಕರನ್ನೊಳಗೂಡಿರುತ್ತವೆ. ಆದರೆ ಆವಾಗಿನ ಮಕ್ಕಳ ಬಗ್ಗೆ ಏನು? ನೀವು ದೃಶ್ಯಗಳಲ್ಲಿ ಅವರನ್ನು ಕಲ್ಪಿಸಿಕೊಳ್ಳುತ್ತೀರೋ?
ಮೇಲಿನ ನೋಟವು ಯುವಕರನ್ನು ಒಳಗೊಂಡಿರುವ ವೃತ್ತಾಂತಗಳ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯ ಮಾಡಬಲ್ಲದು. ಇವರಲ್ಲಿ ಕೆಲವರು ಕ್ರೈಸ್ತರಿಗೆ ಒಳ್ಳೆಯ ಮಾದರಿಗಳಾಗಿಯೂ ಇತರರು ಕೆಟ್ಟ ಉದಾಹರಣೆಗಳಾಗಿಯಾ ಇದ್ದರು. ಮಧ್ಯದಲ್ಲಿರುವ ಗುಂಡಗಿನ ಬೆಟ್ಟವೇ ಶೀಲೋವಿನ ಕ್ಷೇತ್ರವೆಂದು ತೋರಿಬರುತ್ತದೆ.a
ಇಸ್ರಾಯೇಲ್ಯರು ವಾಗ್ದಾತ್ತ ದೇಶವನ್ನು ಪ್ರವೇಶಿಸಿದಾಗ ಅವರು ಮೊದಲು ದೇವರ ಗುಡಾರವನ್ನು ಯೆರಿಕೋವಿನ ಹತ್ತಿರ ಗಿಲ್ಗಾಲೆಂಬಲ್ಲಿ ಸ್ಥಾಪಿಸಿದರೆಂದು ನೀವು ಪ್ರಾಯಶಃ ಜ್ಞಾಪಿಸಿಕೊಂಡೀರಿ. (ಯೆಹೋಶುವ 4:19) ಆದರೆ ದೇಶವು ವಿಭಾಗಿಸಲ್ಪಟ್ಟಾಗ ಇಸ್ರಾಯೇಲ್ಯರ ಆರಾಧನೆಯ ಕೇಂದ್ರವಾಗಿದ್ದ ಈ ಪವಿತ್ರ ಗುಡಾರವನ್ನು ಶೀಲೋವಿಗೆ ಒಯ್ಯಲಾಯಿತು. (ಯೆಹೋಶುವ 18:1) ಇದು ಯೆರೂಸಲೇಮಿನ ಉತ್ತರಕ್ಕೆ 30 ಕಿಲೊ ಮೀಟರ್ ದೂರದಲ್ಲಿ ಎಫ್ರಾಯಿಮನ ಪರ್ವತಪ್ರಾಂತಗಳಲ್ಲಿತ್ತು. ಇಸ್ರಾಯೇಲಿನ ಸ್ತ್ರೀ ಮತ್ತು ಪುರುಷರೆಲ್ಲರು ಶೀಲೋವಿಗೆ ಪ್ರಯಾಣಿಸುತ್ತಿದ್ದರು; ಅವರು ಗುಂಪುಗಳಾಗಿ ಪ್ರಾಯಶಃ ಗುಡಾರವು ಎಲ್ಲಿ ನಿಂತಿತ್ತೊ ಅಲ್ಲಿಂದ ದಕ್ಷಿಣದಲ್ಲಿರುವ ಕಣಿವೆಯಲ್ಲಿ ಕೂಡಿ ಬರಸಾಧ್ಯವಿತ್ತು. (ಯೆಹೋಶುವ 22:12) ಮಕ್ಕಳು ಇಲ್ಲಿಗೆ ಬರುವದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ?
ಕೆಲವರು ಬಂದರು. ನಾವು ತಿಳಿದಿರಬೇಕಾದ ಅತಿ ಗಮನಾರ್ಹ ಉದಾಹರಣೆ ಬಾಲಕ ಸಮುವೇಲನದು. ಆತನ ತಂದೆ ತಾಯಿ ಎಲ್ಕಾನ ಮತ್ತು ಹನ್ನ ಪಶ್ಚಿಮದ ಗುಡ್ಡಗಳ ಹತ್ತಿರದಲ್ಲಿರುವ ಒಂದು ಪಟ್ಟಣದಲ್ಲಿ ಜೀವಿಸುತ್ತಿದ್ದರು. ಪ್ರತಿ ವರ್ಷ ಇಲ್ಲಿಗೆ ಪ್ರಯಾಣಿಸುವಾಗ ಪ್ರಾಯಶಃ ಅವರು ಎಲ್ಕಾನನ ಬೇರೆ ಪತ್ನಿಯ ಕೆಲವು ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿರಬಹುದು. ಕೊನೆಯದಾಗಿ ಯೆಹೋವನು ಸಮುವೇಲ ಎಂಬ ಹೆಸರಿನ ಮಗನನ್ನು ಕೊಡುವದರ ಮೂಲಕ ಹನ್ನಳನ್ನು ಆಶೀರ್ವದಿಸಿದನು. ಸಮಯಾನಂತರ ಅವನ ಹೆತ್ತವರು ಅವನು ಮಹಾಯಾಜಕ ಏಲಿಯೊಂದಿಗೆ ಸೇವೆ ಮಾಡಲಾಗುವಂತೆ ಶೀಲೋವಿನಲ್ಲಿ ಜೀವಿಸಲಿಕ್ಕಾಗಿ ಆತನನ್ನು ತಂದರು.—1 ಸಮುವೇಲ 1:1–2:11.
ಬಾಲಕನು ದೇವರ ಆಲಯದ ಕೆಲಸವನ್ನು ಮಾಡಲಿಕ್ಕಿತ್ತು. ಅವನಿಗೆ ಹತ್ತಿರದ ಗುಡ್ಡಗಳಿಗೆ ಹೋಗಲು ಅನೇಕ ಅವಕಾಶಗಳಿದಿರ್ದಬೇಕು. (1 ಸಮುವೇಲ 3:1, 15) ಪುಟ 9ರ ಚಿತ್ರದಲ್ಲಿ ನೋಡುವಂತೆ, ಅವುಗಳಲ್ಲಿ ಕೆಲವು ಅಂತಸ್ತುಗಳದ್ದಾಗಿದ್ದು ಆಲಿವ್ ಮರಗಳಿಂದ ತುಂಬಿದ್ದವು. ಶಿಲೆಯ ಚಿಕ್ಕ ಕಾವಲಿನಬುರುಜನ್ನು ಗಮನಿಸಿರಿ. ಪ್ರತ್ಯೇಕಿಸಲ್ಪಟ್ಟ ವ್ಯವಸಾಯಗಾರರು ಇಲ್ಲವೇ ಕುರುಬರು ಇಂತಹ ಕಾವಲಿನಬುರುಜಿನಿಂದ ಕಾಯಬಹುದಾಗಿತ್ತು. ಆದರೆ ಬಾಲಕ ಸಮುವೇಲನು ನೋಟಕ್ಕಾಗಿ ಇದನ್ನು ಹತ್ತುವದನ್ನು ನೀವು ಭಾವಿಸಿಕೊಳ್ಳಬಹುದು. (ಹೋಲಿಸಿ 2 ಪೂರ್ವಕಾಲವೃತಾಂತ 20:24) ಕಾಡುಮೃಗಗಳನ್ನು ನೋಡುವದಕ್ಕೂ ಇದು ಆಯಕಟ್ಟಾದ ಸ್ಥಳವಾಗಿತ್ತು.
ಹಿಂದೆ ಅಲ್ಲಿ ತುಂಬ ಮರಗಳು ಮತ್ತು ಕಾಡುಮೃಗಗಳು ಅಲೆದಾಡುತ್ತಿದ್ದ ಅರಣ್ಯಗಳೂ ಇದ್ದವು. (ಯೆಹೋಶುವ 17:15, 18) ಇದನ್ನು ನಾವು ದೇವರ ಮುಖ್ಯ ಪ್ರವಾದಿಯಾದ ಎಲೀಷನಿಗೆ ಸಂಭವಿಸಿದ ಘಟನೆಗಳಿಂದ ನೋಡಬಹುದು. ಎಲೀಷನು ಯೆರಿಕೋವಿನಿಂದ ಬೇತೇಲಿಗೆ ಪ್ರಯಾಣಿಸುವಾಗ ಶಿಲೋವಿನಿಂದ ಸುಮಾರು ಹತ್ತು ಮೈಲು ದಕ್ಷಿಣಕ್ಕಿರುವ ಈ ಪ್ರದೇಶದಲ್ಲಿದ್ದನು. ಬೇತೇಲನ್ನು ಚಿನ್ನದ ಬಸವ ಆರಾಧನೆಯ ಕೇಂದ್ರವನ್ನಾಗಿ ಮಾಡಿದ್ದ ಜನರಿಂದ ಯಾವ ಸ್ವಾಗತವು ಅವನಿಗೆ ದೊರಕಬಹುದಾಗಿತ್ತು? (1 ಅರಸುಗಳು 12:27-33; 2 ಅರಸುಗಳು 10:29) ಆ ವಯಸ್ಕರು ಯೆಹೋವನ ಪ್ರವಾದಿಗೆ ವಿರುದ್ಧವಾಗಿದ್ದರೆಂದು ತೋರಿಬರುತ್ತದೆ. ಮತ್ತು ಅವರ ಮನೋಭಾವಗಳು ಅವರ ಸಂತತಿಯ ಮೇಲೆ ಅಚ್ಚೊತ್ತಿದ್ದವೆಂದು ತೋರಿ ಬರುತ್ತದೆ.
ಒಂದು ಯುವಕರ ಗುಂಪು ದೇವರ ಪ್ರವಾದಿಯನ್ನು ಅಪಹಾಸ್ಯ ಮಾಡಿತೆಂದು ಎರಡನೇ ಅರಸುಗಳು 2:23, 24 ತಿಳಿಸುತ್ತದೆ: “ಬೋಳಮಂಡೆಯವನೇ, ಏರು; ಬೋಳಮಂಡೆಯವನೇ, ಏರು.” ಅದಕ್ಕೆ ಉತ್ತರವಾಗಿ, “ಎಲೀಷನು ಯೆಹೋವನ ಹೆಸರಿನಲ್ಲಿ ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣು ಕರಡಿಗಳು ಬಂದು ಆ ಹುಡುಗರಲ್ಲಿ ನಾಲ್ವತ್ತೆರಡು ಮಂದಿಯನ್ನು ಹರಿದು ಬಿಟ್ಟವು.” ಸಿರಿಯದ ಇಂತಹ ಕಂದುಬಣ್ಣದ ಕರಡಿಗಳನ್ನು ಅನಿರೀಕ್ಷಿತವಾಗಿ ಸಂಧಿಸಿದಾಗ ಯಾ ಅವುಗಳ ಮರಿಗಳಿಗೆ ಅಪಾಯವಿದೆಯೆಂದು ಕಂಡುಬಂದಾಗ ಅವು ಉಗ್ರತೆಯನ್ನು ತೋರಿಸಬಲ್ಲವು. (2 ಸಮುವೇಲ 17:8; ಜ್ಞಾನೋಕ್ತಿ 17:12; 28:15) ಅವರು ಕೇವಲ ಆತನ ಪ್ರತಿನಿಧಿಗಳನ್ನು ಹೀನೈಸಿದ್ದೇ ಅಲ್ಲ, ಯೆಹೋವನನ್ನು ಸಹ ಹೀನೈಸಿದ ಕಾರಣ ಅವುಗಳನ್ನು ಅವನು ದೈವಿಕ ನ್ಯಾಯದಂಡನೆಗಾಗಿ ಉಪಯೋಗಿಸಿದನು.
ಸಮುವೇಲನಿಗೆ ಶೀಲೋವಿನ ಸುತ್ತಮುತ್ತ ಗುಡ್ಡಗಳಲ್ಲಿ ಇರುವ ವನ್ಯ ಜೀವಿಗಳನ್ನು ಎದುರಿಸಬೇಕಿತ್ತಾದರೂ ಆತನನ್ನು ಸಾಕ್ಷಿಗುಡಾರದ ಬಳಿ ಸೇವೆ ಮಾಡಲಿಕ್ಕೆ ತಂದ ಆತನ ಹೆತ್ತವರ ವಿಶ್ವಾಸಕ್ಕೆ ನಾವು ಹೆಚ್ಚಿನ ಗಣ್ಯತೆ ತೋರಿಸುವಂತೆ ಇದು ಸಹಾಯ ಮಾಡುತ್ತದೆ.
ಸಮಾನ ರೂಪದ ವಿಶ್ವಾಸವನ್ನು ವ್ಯಕ್ತಪಡಿಸಿದ ಇನ್ನೊಬ್ಬ ಸತ್ಯಾರಾಧಕನು ನ್ಯಾಯಾಧಿಪತಿ ಯೆಪ್ತಾಹ. ಆತನು ಯೊರ್ದನಿನ ಪೂರ್ವಕ್ಕಿರುವ ಗುಡ್ಡಗಾಡಿನ ಪ್ರದೇಶವಾದ ಗಿಲ್ಯಾದಿನಲ್ಲಿ ಜೀವಿಸುತ್ತಿದ್ದನು. ಆತನು ವೈರಿಗಳಾದ ಅಮ್ಮೋನಿಯರ ವಿರುದ್ಧವಾಗಿ ಯೆಹೋವನ ಮೇಲಿರುವ ಶ್ರದ್ಧೆಯಿಂದಾಗಿ, ತನ್ನ ಮನೆಯಿಂದ ತನ್ನನ್ನು ಎದುರುಗೊಳ್ಳಲು ಬರುವ ಮೊದಲನೆಯದನ್ನು ಯೆಹೋವನಿಗೆ ಅರ್ಪಿಸುವದಾಗಿ ಶಪಥ ಮಾಡಿದನು. ಅವನನ್ನು ಎದುರುಗೊಳ್ಳಲು ಬಂದವಳು ಅವನ ಅವಿವಾಹಿತ ಮಗಳೇ ಆಗಿದ್ದಳು. ಹೀಗೆ ತನ್ನ ಒಬ್ಬಳೇ ಮಗಳನ್ನು ಅವನು ಶೀಲೋವಿನಲ್ಲಿದ್ದ ದೇವರ ಪವಿತ್ರಾಲಯಕ್ಕೆ ಕರೆತಂದನು. ಅಲ್ಲಿ ಅವಳು ನಂಬಿಗಸ್ತಿಕೆಯಿಂದ ಅನೇಕ ವರ್ಷಗಳ ವರೆಗೆ ಸೇವೆ ಮಾಡಿದಳು.—ನ್ಯಾಯಸ್ಥಾಪಕರು 11:30-40.
ಸಮುವೇಲ ಮತ್ತು ಯೆಪ್ತಾಹನ ಮಗಳು ಶೀಲೋವಿನಂಥ ಪ್ರದೇಶದಲ್ಲಿ ಪ್ರದರ್ಶಿಸಿದ ನಂಬಿಗಸ್ತ ಭಕ್ತಿಗೆ, ಯೆಹೋವನ ಪ್ರವಾದಿಯನ್ನು ಪರಿಹಾಸ್ಯ ಮಾಡಿದ 42 ಬಾಲಾಪರಾಧಿಗಳ ನಕಾರಾತ್ಮಕ ಉದಾಹರಣೆಯು ಒಳ್ಳೇ ತದ್ವಿರುದ್ಧ ಉದಾಹರಣೆಯಾಗಿದೆ.—ಹೋಲಿಸಿ 1 ಕೊರಿಂಥ 10:6, 11.
[ಅಧ್ಯಯನ ಪ್ರಶ್ನೆಗಳು]
a ದೊಡ್ಡ ಚಿತ್ರದ ಸಲುವಾಗಿ 1992 ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರನ್ನು ನೋಡಿ.
[ಪುಟ 8 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Safari Zoo, Ramat-Gan, Tel Aviv