ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 2/1 ಪು. 21-22
  • ಒಬ್ಬ ಸುಶಿಕ್ಷಿತ ಪುರುಷನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಬ್ಬ ಸುಶಿಕ್ಷಿತ ಪುರುಷನು
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತಾರ್ಸದ ನಾಡಿಗ
  • ರೋಮನ್‌ ನಾಗರಿಕನು
  • ತಕ್ಕದಾದ ನೋಟ
  • ರಾಜ್ಯದ ಆಶೀರ್ವಾದಗಳು ನಿಮ್ಮದಾಗಸಾಧ್ಯವಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • “ನಾನು ಹೇಳೋದನ್ನ ಕೇಳಿಸ್ಕೊಳ್ಳಿ”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಶಿಕ್ಷಣವನ್ನು ಅದರ ಸ್ಥಾನದಲ್ಲಿಡುವುದು
    ಎಚ್ಚರ!—1994
ಇನ್ನಷ್ಟು
ಕಾವಲಿನಬುರುಜು—1993
w93 2/1 ಪು. 21-22

ಒಬ್ಬ ಸುಶಿಕ್ಷಿತ ಪುರುಷನು

“ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕ ದೃಷ್ಟಿಯಲ್ಲಿ ಜ್ಞಾನಿಗಳು ಅನೇಕರಿಲ್ಲ, ಅಧಿಕಾರಿಗಳು ಅನೇಕರಿಲ್ಲ, ಕುಲೀನರು ಅನೇಕರಿಲ್ಲ.” (1 ಕೊರಿಂಥ 1: 26) ಈ ಮಾತುಗಳು ಸೂಚಿಸುವಂತೆ ಲೋಕಜ್ಞಾನದಲ್ಲಿ ಮಗ್ನರಾಗಿರುವುದು ಅಥವಾ ಸಮಾಜದ ಉನ್ನತ ಸ್ಥಾನದಲ್ಲಿರುವುದು ಗಂಡಾಂತರಕಾರಿಯಾಗಿದೆ. ಇವು ಒಬ್ಬನಿಗೆ ಸುವಾರ್ತೆಯನ್ನು ಸ್ವೀಕರಿಸಲು ತಡೆಯುಂಟು ಮಾಡಸಾಧ್ಯವಿದೆ.—ಜ್ಞಾನೋಕ್ತಿ 16:5; ಮಾರ್ಕ 10:25.

ಆದರೂ, ಪೌಲನ ದಿನಗಳಲ್ಲಿ ಕೆಲವು ಐಹಿಕ ಜ್ಞಾನಿಗಳು ಸತ್ಯವನ್ನು ಸ್ವೀಕರಿಸಿದರು. ಅವರಲ್ಲಿ ಪೌಲನೇ ಒಬ್ಬನಾಗಿದ್ದನು. ಸುಶಿಕ್ಷಿತ ಮತ್ತು ಪ್ರಖ್ಯಾತ ಕುಟುಂಬದಿಂದ ಬಂದ ಈತನು ಆಸಕ್ತಿಭರಿತ ಸೌವಾರ್ತಿಕನಾಗಿದ್ದನು. ಅವನು ಅದರಿಂದ ತೋರಿಸಿದ್ದೇನಂದರೆ ಈ ಲೋಕದಲ್ಲಿ ಸುಯೋಗಗಳಿರುವವರು ಸಹ ಯೆಹೋವನನ್ನು ಸೇವಿಸಸಾಧ್ಯವಿದೆ. ಅವರು ತಮ್ಮ ಲೌಕಿಕ ಯೋಗ್ಯತೆಗಳನ್ನು ಸಹ ಯೆಹೋವನ ಸೇವೆಯಲ್ಲಿ ಉಪಯೋಗಿಸ ಸಾಧ್ಯವಿದೆ.—ಲೂಕ 16:9.

ತಾರ್ಸದ ನಾಡಿಗ

ತಾನು ಆ ಬಳಿಕ ವರ್ಣಿಸುವಂತೆ ಪೌಲನು “ಪ್ರಖ್ಯಾತ ಪಟ್ಟಣ” ವಾದ ತಾರ್ಸದಲ್ಲಿ ಜನಿಸಿದನು. (ಅ. ಕೃತ್ಯಗಳು 21:39) ಪ್ರಾಯಶಃ ಆತನು ಇಲ್ಲಿಯೇ ತನ್ನ ಮಿಷನೆರಿ ಕೆಲಸಕ್ಕೆ ಬಹುಮೂಲ್ಯವಾದ ಭಾಷೆಗಳ ಜ್ಞಾನ—ವಿಶೇಷವಾಗಿ ಗ್ರೀಕ್‌ ಪಾಂಡಿತ್ಯ—ವನ್ನು ಪಡೆದನು. ತಾರ್ಸದ ಜೀವನ ಪೌಲನನ್ನು ಯೆಹೂದಿ ಜೀವನಶೈಲಿಗೆ ಒಡ್ಡಿದ್ದು ಮಾತ್ರವಲ್ಲ, ಯೆಹೂದ್ಯೇತರ ಸಂಸ್ಕೃತಿಗೂ ಒಡ್ಡಿ, ಆತನು ಈ ಅನುಭವವನ್ನು ಮುಂದಿನ ವರ್ಷಗಳಲ್ಲಿ ರಾಷ್ಟ್ರಗಳಿಗೆ ಅಪೊಸ್ತಲನಾಗುವಾಗ ಉಪಯೋಗಿಸುವಂತಾಯಿತು. ಸತ್ಯವನ್ನು ಅವರಿಗೆ ಅರ್ಥವಾಗುವ ಹಾಗೆ ತಿಳಿಸುವುದು ಆತನಿಗೆ ಗೊತ್ತಿತ್ತು. (1 ಕೊರಿಂಥ 9:21) ಉದಾಹರಣೆಗಾಗಿ, ಅ. ಕೃತ್ಯಗಳ 17 ನೆಯ ಅಧ್ಯಾಯದಲ್ಲಿ ದಾಖಲಾಗಿರುವ, ಅವನು ಅಥೇನದವರಿಗೆ ಕೊಟ್ಟ ಭಾಷಣವನ್ನು ಗಮನಿಸಿರಿ. ಅಲ್ಲಿ ಅವರಿಗೆ ಸತ್ಯವನ್ನು ನೀಡುವಾಗ ಅವನು ಚಾತುರ್ಯದಿಂದ ಅಥೇನೆಯ ಧರ್ಮದ ವಿಷಯಗಳನ್ನು ಜೋಡಿಸಿದ್ದಲ್ಲದೆ ತನ್ನ ಸತ್ಯದ ನೀಡುವಿಕೆಯಲ್ಲಿ, ಅವರ ಕವಿಯಿಂದ ಹೇಳಲ್ಪಟ್ಟ ವಿಷಯಗಳನ್ನು ಉದ್ಧರಿಸಿ ಮಾತಾಡಿದನು.

ರೋಮನ್‌ ನಾಗರಿಕನು

ಪೌಲನಿಗೆ ಲೌಕಿಕವಾಗಿ ಇನ್ನೊಂದು ಅನುಕೂಲವಿತ್ತು. ಆತನು ರೋಮಿನ ನಾಗರಿಕನಾಗಿದ್ದನು. ಇದನ್ನು ಆತನು ಸುವಾರ್ತೆಯ ಅಭಿವೃದ್ಧಿಗಾಗಿ ಉಪಯೋಗಿಸಿದನು. ಫಿಲಿಪ್ಪಿಯಲ್ಲಿ ಆತನು ಮತ್ತು ಸಂಗಡಿಗರು ಹೊಡೆಯಲ್ಪಟ್ಟು ನ್ಯಾಯವಿಚಾರಣೆಯಿಲ್ಲದೆ ಬಂದಿಖಾನೆಯಲ್ಲಿ ಹಾಕಲ್ಪಟ್ಟರು. ರೋಮಿನ ನಾಗರಿಕನಿಗೆ ಹೀಗೆ ಮಾಡುವದು ಕಾನೂನುಬಾಹಿರವಾಗಿತ್ತು. ಇದನ್ನು ಪೌಲನು ಅಧಿಕಾರಿಗಳ ಗಮನಕ್ಕೆ ತಂದಾಗ, ಅವನು ಮುಂದಿನ ಗಮ್ಯ ಸ್ಥಾನಕ್ಕೆ ಹೋಗುವ ಮೊದಲು ಅಲಿಯ್ಲೆ ಉಳಿದು ಸಭೆಗಳಿಗೆ ಶುಶ್ರೂಷೆ ಮಾಡುವಂತೆ ಅನುಮತಿ ಕೊಟ್ಟರು.—ಅ. ಕೃತ್ಯಗಳು 16:37-40.

ತದನಂತರ ಗವರ್ನರ್‌ ಫೆಸ್ತನ ಮುಂದೆ ಕಾಣಿಸಿಕೊಂಡಾಗ, ತನ್ನ ವ್ಯಾಜ್ಯವನ್ನು ಕೈಸರನಿಗೆ ಅರಿಕೆ ಮಾಡುವದಕ್ಕಾಗಿ ರೋಮನ್‌ ನಾಗರಿಕ ಹಕ್ಕಿನ ಅನುಕೂಲತೆಯನ್ನು ಉಪಯೋಗಿಸಿದನು. ಹೀಗೆ, ಆತನು ಸುವಾರ್ತೆಯ ಪ್ರತಿವಾದವನ್ನು ರೋಮಿನ ಪ್ರಧಾನ ಅಧಿಕಾರಿಯ ಎದುರಲ್ಲಿ ಸಹ ಮಾಡಿದನು.—ಅ. ಕೃತ್ಯಗಳು 25:11, 12; ಫಿಲಿಪ್ಪಿ 1:7.

ಪೌಲನು, ತನಗೆ ಮುಂದೆ ಪ್ರಯೋಜನಕಾರಿಯಾದ ತರಬೇತನ್ನು ಪ್ರಾಯೋಗಿಕ ರೀತಿಯಲ್ಲಿ ಪಡೆದನು. ಆತನು ತನ್ನ ತಂದೆಯಿಂದ ಗುಡಾರ ಮಾಡುವದನ್ನು ಪ್ರಾಯಶಃ ಕಲಿತಿದ್ದನು. ಶುಶ್ರೂಷೆಯಲ್ಲಿ ಹಣದ ಕೊರತೆ ಇದ್ದಾಗ ತನ್ನನ್ನು ತಾನೆ ಸಂರಕ್ಷಣೆ ಮಾಡಿಕೊಳ್ಳುವಂತೆ ಇದರಿಂದ ಸಹಾಯವಾಯಿತು. (ಅ. ಕೃತ್ಯಗಳು 18:1-3) ಆತನು ಆಳವಾದ ಧಾರ್ಮಿಕ ಶಿಕ್ಷಣವನ್ನು ಸಹ ಪಡೆದನು. ಆತನು “ಫರಿಸಾಯನು, ಫರಿಸಾಯನ ಮಗನು” ಆಗಿ ಬೆಳೆದನು. (ಅ. ಕೃತ್ಯಗಳು 23:6) ನಿಶ್ಚಯವಾಗಿಯೂ, ಆತನು ಅತ್ಯಂತ ಸುಪ್ರಸಿದ್ಧ ಯೆಹೂದಿ ಶಿಕ್ಷಕರಲ್ಲಿ ಒಬ್ಬನಾದ ಗಮಲಿಯೇಲನ ಪಾದಸನ್ನಿಧಿಯಲ್ಲಿ ಕಲಿತನು. (ಅ. ಕೃತ್ಯಗಳು 22:3) ಪ್ರಾಯಶಃ ಇಂದಿನ ವಿಶ್ವವಿದ್ಯಾನಿಲಯಗಳ ಶಿಕ್ಷಣಕ್ಕೆ ಸಮಾನವಾದ ಇಂಥ ಶಿಕ್ಷಣವು, ಆತನ ಕುಟುಂಬ ಪ್ರಮುಖವಾಗಿತ್ತೆಂದು ಸೂಚಿಸುತ್ತದೆ.

ತಕ್ಕದಾದ ನೋಟ

ಪೌಲನ ಹಿನ್ನೆಲೆ ಮತ್ತು ತರಬೇತಿಯು, ಆತನಿಗೆ ಯೆಹೂದ ಮತದಲ್ಲಿ ಪ್ರಕಾಶಮಯವಾದ ಭವಿಷ್ಯತ್ತನ್ನು ನೀಡಿತ್ತು. ಆತನು ಬಹು ಯಶಸ್ವಿಯಾಗಬಹುದಿತ್ತು, ಆದರೆ ಯೇಸುವನ್ನು ಉದ್ಧಾರಕನೆಂದು ಸ್ವೀಕರಿಸಿದ ಮೇಲೆ ಪೌಲನ ಗುರಿಗಳು ಬದಲಾದುವು. ಫಿಲಿಪ್ಪಿಯವರಿಗೆ ಬರೆಯುವಾಗ ಅವನು ತನ್ನ ಕೆಲವು ಹಿಂದಿನ ಲೌಕಿಕ ಅನುಕೂಲತೆಗಳ ಬಗ್ಗೆ ಹೇಳುವದು: “ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.”—ಫಿಲಿಪ್ಪಿ 3:7, 8.

ಈ ಸುಶಿಕ್ಷಿತ ಪುರುಷನು ತನ್ನ ಲೌಕಿಕ ಶಿಕ್ಷಣದಿಂದ ಏನಾದರೂ ಮಾಡಬಹುದಿತ್ತು ಎಂದು ಹಿಂದೆ ತಿರುಗಿ ಅದಕ್ಕಾಗಿ ಹಂಬಲಿಸಲಿಲ್ಲ. ಅಥವಾ ಆತನ “ಶ್ರೇಷ್ಠ ವಿದ್ಯಾಭ್ಯಾಸದಿಂದ” ಇತರರನ್ನು ಭೀತಿಯ ಅಧೀನತೆಗೂ ಒಳಪಡಿಸಲಿಲ್ಲ. (ಅ. ಕೃತ್ಯಗಳು 26:24, NW; 1 ಕೊರಿಂಥ 2:1-4) ಬದಲಾಗಿ ಯೆಹೋವ ದೇವರ ಮೇಲಿನ ಪೂರ್ಣ ವಿಶ್ವಾಸದಿಂದ, ತನ್ನ ಹಿಂದಿನ ಪ್ರತೀಕ್ಷೆಯನ್ನು ಸೂಚಿಸಿ ಹೇಳುವುದು: “ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿಪ್ಪಿ 3:13, 14) ಪೌಲನು ಅಧ್ಯಾತ್ಮಿಕ ವಿಷಯಗಳನ್ನು ಬೆಲೆಯುಳ್ಳದ್ದೆಂದೆಣಿಸಿದನು.

ಆದಾಗ್ಯೂ ಪೌಲನು ಹಿಂದಿನ ತರಬೇತಿಯನ್ನು ಯೆಹೋವನ ಸೇವೆಯಲ್ಲಿ ಉಪಯೋಗಿಸಿದನು. ಅವನು ಯೆಹೂದ್ಯರ ವಿಷಯ ತನ್ನ ವೈಯಕ್ತಿಕ ಅನುಭವದಿಂದ ಹೇಳಿದ್ದು, “ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ.” (ರೋಮಾಪುರ 10:2) ಕಾರ್ಯಶೀಲ ಫರಿಸಾಯನಾದ ಅವನಿಗೆ ದೇವರ ಬಗ್ಗೆ ಮತ್ತು ವಚನಗಳ ಬಗ್ಗೆ ಖಂಡಿತವಾಗಿಯೂ ಆಸಕ್ತಿ ಇತ್ತು. ಪೌಲನು ಕ್ರೈಸ್ತನಾದ ನಂತರ ಆತನ ಆಸಕ್ತಿಯು ಸ್ಪಷ್ಟವಾಗಿದ ಜ್ಞಾನದೊಂದಿಗೆ ಹದ ಮಾಡಲ್ಪಟ್ಟಿತ್ತು. ಮತ್ತು ಆತನು ತನ್ನ ಮೊದಲ ಶಿಕ್ಷಣವನ್ನು ನೀತಿಯ ಉದ್ದೇಶಗಳಿಗಾಗಿ ಉಪಯೋಗಿಸಬಹುದಾಗಿತ್ತು. ಉದಾಹರಣೆಗಾಗಿ, ಇಬ್ರಿಯ ಪುಸ್ತಕದಲ್ಲಿ ಇಸ್ರಾಯೇಲ್ಯ ಚರಿತ್ರೆಯ ಬಗ್ಗೆ ಮತ್ತು ದೇವಾಲಯದ ಆರಾಧನೆಯ ಬಗ್ಗೆ ತನಗಿದ್ದ ಅಗಾಧ ಜ್ಞಾನವನ್ನು, ಆತನು ಕ್ರೈಸ್ತ ಪದ್ಧತಿಯ ಶ್ರೇಷ್ಠತೆಯನ್ನು ಪ್ರದರ್ಶಿಸಲು ಉಪಯೋಗಿಸಿದನು.

ಇಂದು ಶಾರೀರಿಕ ರೀತಿಯಲ್ಲಿ ಜಾಣರಾಗಿರುವ ಕೆಲವರು ಸಹ ಸುವಾರ್ತೆಗೆ ಕಿವಿಗೊಡುತ್ತಾರೆ. ವಿವಿಧ ಶಿಕ್ಷಣದ ಅರ್ಹತೆಯುಳ್ಳ ಜನರು ಹಾಗೂ, ವಿವಿಧ ಕಸಬು ಮತ್ತು ವ್ಯವಹಾರಗಳಲ್ಲಿರುವವರು, ಸತ್ಯವನ್ನು ಸ್ವೀಕರಿಸಿ ತಮ್ಮ ಹಿಂದಿನ ತರಬೇತಿಯನ್ನು ಯೆಹೋವನ ಸೇವೆಯಲ್ಲಿ ಉಪಯೋಗಿಸಿದ್ದಾರೆ. ಆದಾಗ್ಯೂ ಲೌಕಿಕ ವಿದ್ಯಾಭ್ಯಾಸ ಎಷ್ಟೇ ಆಗಿರಲಿ, ಕ್ರೈಸ್ತರು ಆತ್ಮಿಕ ಅರ್ಹತೆಗಳೇ ಪ್ರಾಮುಖ್ಯ ಎಂಬ ದೃಷ್ಟಿಯನ್ನು ಕಳೆದುಕೊಳ್ಳುವುದಿಲ್ಲ. ಇವು “ಹೆಚ್ಚು ಪ್ರಾಮುಖ್ಯವಾದ ವಿಷಯ” ಗಳಾಗಿವೆ ಯಾಕಂದರೆ ಅವು ನಮ್ಮನ್ನು ನಿತ್ಯಜೀವಕ್ಕೆ ನಡೆಸ ಬಲ್ಲವು.—ಫಿಲಿಪ್ಪಿ 1:10, NW.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ