“ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳು
ಯೆಹೋವನಿಂದ ಕಲಿಸಲ್ಪಡಲು ಅಪೇಕ್ಷಿಸುವವರೆಲ್ಲರೂ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳಿಗೆ ಆತುರದಿಂದ ಎದುರುನೋಡುತ್ತಾರೆ. ಬೆಳೆಯುತ್ತಿರುವ ವೈಯಕ್ತಿಕ ಸಮಸ್ಯೆಗಳ ಮತ್ತು ಲೋಕ ಸಂಕ್ಷೋಭೆಯ ಈ ಸಮಯದಲ್ಲಿ ಕ್ರೈಸ್ತರನ್ನು ಸುಭದ್ರಗೊಳಿಸುವ ಶಾಸ್ತ್ರೀಯ ಬೋಧನೆಗಳ ಗಮನಾರ್ಹ ವಿಷಯಗಳನ್ನು ಈ ನಾಲ್ಕು-ದಿನದ ಕಾರ್ಯಕ್ರಮವು ಎತ್ತಿಹೇಳುವುದು. ‘ಸ್ವಸ್ಥ ಬೋಧನೆಗೆ ಪ್ರತಿಕೂಲವಾಗಿ ಬೇರೆ ಏನಾದರೂ ಇದ್ದರೆ’ ಅದನ್ನು ದೃಢವಾಗಿ ಎದುರಿಸುವಂತೆ ಕಾರ್ಯಕ್ರಮವು ಅವರಿಗೆ ಸಹಾಯ ಮಾಡುವುದು. (1 ತಿಮೊಥೆಯ 1:10) ಹಾಜರಾಗುವ ಎಲ್ಲರು ದೇವರ ವಾಕ್ಯದ ಒಳ್ಳೆಯ ಬೋಧಕರಾಗುವಂತೆಯೂ ಅದು ಉತ್ತೇಜನ ಕೊಡುವುದು.
ನಮಗೆ ಅನುಕರಿಸಲು ಎಂತಹ ಉತ್ತಮ ಮಾದರಿಗಳು ಇವೆ! ಮಹಾನ್ ಬೋಧಕನು ಬೇರೆ ಯಾರೂ ಅಲ್ಲದೆ ಸ್ವತಃ ಯೆಹೋವ ದೇವರು ಆಗಿದ್ದಾನೆ! ಹೀಗೆ, ಎಲೀಹು ಯೋಬನಿಗೆ ಸರಿಯಾಗಿಯೇ ಹೇಳಿದ್ದೇನಂದರೆ ಯೆಹೋವನು “ಕಾಡುಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನು ಬೋಧಿಸುತ್ತಾ ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿಯನ್ನು ನಮಗೆ ಕಲಿಸುತ್ತಾನೆ.” ಅವನು ಯೆಹೋವನ ಕುರಿತು ಹೀಗೆಯೂ ಕೇಳಿದನು: “ಆತನಂಥ ಉಪದೇಶಕನು ಯಾರು?” (ಯೋಬ 35:11; 36:22) ಯೆಶಾಯ 30:20, (NW) ರಲ್ಲಿ ದೇವರು “ಮಹಾ ಬೋಧಕನು” ಎಂದು ನಿರ್ದೇಶಿಸಲ್ಪಟ್ಟಿದ್ದಾನೆ.
ಬೋಧಕನೋಪಾದಿ ಆತನ ಮಗನಾದ ಯೇಸು ಕ್ರಿಸ್ತನು ಯೆಹೋವನಿಗೆ ದ್ವಿತೀಯನು ಮಾತ್ರ. ಸುವಾರ್ತೆಗಳಲ್ಲಿ ಸುಮಾರು 50 ಸಾರಿ ಹಾಗೆಂದು ನಿರ್ದೇಶಿಸಲ್ಪಟ್ಟ ಆತನು, “ಗುರು” ಮತ್ತು “ಬೋಧಕ” ನೋಪಾದಿ ಪ್ರಖ್ಯಾತನಾಗಿದ್ದನು. ಆತನ ಅನೇಕ ಕೌತುಕಕಾರಿ ವಾಸಿಗಳ ಮತ್ತು ಅದ್ಭುತಗಳ ಮಧ್ಯೆಯೂ, ಯೇಸುವು ವೈದ್ಯನಾಗಿ ಅಲ್ಲ ಬದಲಾಗಿ ಗುರು, ಬೋಧಕನು ಎಂದು ಪ್ರಖ್ಯಾತನಾಗಿದ್ದನು.—ಮತ್ತಾಯ 8:19; ಲೂಕ 5:5; ಯೋಹಾನ 13:13.
ಅತಿ ಯುಕ್ತವಾಗಿಯೇ, ಯೇಸು ತನ್ನ ಶಿಷ್ಯರಿಗೆ ಮತ್ತು ಅಪೊಸ್ತಲರಿಗೆ ತನ್ನಂತೆ ಬೋಧಕರಾಗುವಂತೆ ಕಲಿಸಿದನು. ಇದನ್ನು ನಾವು ಮತ್ತಾಯ 10:5 ರಿಂದ 11:1 ಮತ್ತು ಲೂಕ 10:1-11 ರಲ್ಲಿ ಕಾಣಬಲ್ಲೆವು. ಪರಲೋಕಕ್ಕೆ ಏರಿಹೋಗುವ ಸ್ವಲ್ಪ ಮುಂಚೆ, ಯೇಸು ತನ್ನ ಶಿಷ್ಯರಿಗೆ ಮತ್ತಾಯ 28:19, 20 ರಲ್ಲಿ ದಾಖಲೆಯಾದ ಆ ಪ್ರಖ್ಯಾತ ಬೋಧನಾ ನಿಯೋಗವನ್ನು ಕೊಟ್ಟನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.” ಈ ಬೋಧನಾ ನಿಯೋಗವನ್ನು ಯೇಸುವಿನ ಆರಂಭದ ಹಿಂಬಾಲಕರು ಎಷ್ಟು ಹುರುಪಿನಿಂದ, ಕೌಶಲ್ಯದಿಂದ, ಮತ್ತು ನಂಬಿಗಸ್ತಿಕೆಯಿಂದ ನಿರ್ವಹಿಸಿದ್ದರೆಂಬದನ್ನು, ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿನ ಅಪೊಸ್ತಲರ ಕೃತ್ಯಗಳ ಪುಸ್ತಕ ಹಾಗೂ ಅದನ್ನು ಹಿಂಬಾಲಿಸುವ ಪ್ರೇರಿತ ಪತ್ರಿಕೆಗಳು ತಿಳಿಸುತ್ತವೆ.
ಈ ಬೋಧಿಸುವ ಕೆಲಸವು ಹಿಂದೆಂದಿಗಿಂತಲೂ ಹೆಚ್ಚು ಜರೂರಿಯದ್ದಾಗಿದೆ. ಈ ವಿಷಯಗಳ ವ್ಯವಸ್ಥೆಯ ಕಡೇ ದಿನಗಳಲ್ಲಿ ನಾವು ಜೀವಿಸುತ್ತಿದ್ದೇವೆ, ಮತ್ತು ಆ ಕಾರಣದಿಂದ, ಜೀವಗಳು ಒಳಗೂಡಿವೆ. ಮಹಾ ಬಾಬೆಲಿನ ಪಾಪಗಳಲ್ಲಿ ಜನರು ಪಾಲುಗಾರರಾಗದಂತೆ ಮತ್ತು ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗದಂತೆ, ಮಹಾ ಬಾಬೆಲಿನಿಂದ ಅವರು ಹೊರಬರುವಂತೆ ಮತ್ತು ಯೆಹೋವನಿಗಾಗಿ ಮತ್ತು ಆತನ ರಾಜ್ಯಕ್ಕಾಗಿ ತಮ್ಮ ನಿಲುವನ್ನು ತಕ್ಕೊಳ್ಳುವಂತೆ ಕಲಿಸಲ್ಪಡಬೇಕು ಮತ್ತು ಸಹಾಯ ಮಾಡಲ್ಪಡಬೇಕು.—ಪ್ರಕಟನೆ 18:4.
ಅವರ ಬೋಧನಾ ನಿಯೋಗವನ್ನು ನಿರ್ವಹಿಸುವ ಅವರ ಪ್ರಯತ್ನಗಳಲ್ಲಿ ಯೆಹೋವನ ಸಾಕ್ಷಿಗಳೆಲ್ಲರಿಗೆ ಸಹಾಯ ಮಾಡಲು, ಯೆಹೋವನು ತನ್ನ ಸಂಸ್ಥೆಯ ಮೂಲಕ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳನ್ನು ಒದಗಿಸಿದ್ದಾನೆ. ಈ ನಾಲ್ಕು-ದಿನದ ಅಧಿವೇಶನಗಳು ಭಾರತದಲ್ಲಿ 1993 ರ ಸಪ್ಟಂಬರದಲ್ಲಿ ಪ್ರಾರಂಭಿಸುವುವು. ಯೆಹೋವನ ಸಮರ್ಪಿತ ಸೇವಕರಲ್ಲಿ ಪ್ರತಿಯೊಬ್ಬರು, ಗುರುವಾರ ಅಪರಾಹ್ನದ ಆರಂಭದ ಸಂಗೀತ ಮತ್ತು ಪ್ರಾರ್ಥನೆಯಿಂದ ಹಿಡಿದು ಆದಿತ್ಯವಾರ ಅಪರಾಹ್ನದ ಕೊನೆಯ ಪ್ರಾರ್ಥನೆಯ ತನಕ ಹಾಜರಾಗುವ ಮತ್ತು ಗಮನ ಕೊಡುವ ಮೂಲಕ, ಈ ಅಧಿವೇಶನಗಳಲ್ಲಿ ಕಡಿಮೆಪಕ್ಷ ಒಂದಕ್ಕಾದರೂ ಹಾಜರಾಗುವಂತೆ ನಿಶ್ಚಯ ಮಾಡಿಕೊಳ್ಳಲಿ.