ರೋಮಾಂಚಕಾರಿ ಅಧಿವೇಶನಗಳು ದೈವಿಕ ಬೋಧನೆಯನ್ನು ಪ್ರವರ್ತಿಸುತ್ತವೆ
ಇಂದು, ಲೋಕವು ಮಾಹಿತಿಯ ಸ್ಫೋಟನವನ್ನು ಅನುಭವಿಸುತ್ತಿದೆ. ದೂರದರ್ಶನ ಮತ್ತು ರೇಡಿಯೊಗಳಲ್ಲಿ, ಪುಸ್ತಕಗಳಲ್ಲಿ ಯಾ ಕಂಪ್ಯೂಟರ್ಗಳ ಮುಖಾಂತರವಾಗಲಿ, ಕಲ್ಪಿಸಿಕೊಳ್ಳಬಹುದಾದ ಯಾವುದೇ ವಿಷಯದ ಮೇಲೆ ಬಹುಮಟ್ಟಿಗೆ ಅಸೀಮಿತವಾದ ಜ್ಞಾನದ ಸಂಗ್ರಹವು ಇದೆ. ಆದರೂ, ಜನರು ಅಸ್ವಸ್ಥಗೊಂಡು ಸಾಯುತ್ತಾರೆ. ಅಪರಾಧ, ಹಸಿವು, ಮತ್ತು ಬಡತನವು ಭೂಮಿಯ ಎಲ್ಲೆಡೆಯು ಅಸ್ತಿತ್ವದಲ್ಲಿದೆ, ಮತ್ತು ಭಾವನಾತ್ಮಕ ಅಸ್ವಸ್ಥತೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಜನರಿಗೆ ತಟ್ಟುತ್ತವೆ. ಲಭ್ಯವಿರುವ ಎಲ್ಲಾ ಜ್ಞಾನವು ವಿಷಯಗಳನ್ನು ಸರಿಪಡಿಸುವಲ್ಲಿ ತಪ್ಪಿಹೋಗಿದೆ. ಏಕೆ? ಏಕೆಂದರೆ ಮಾನವಕುಲವು ದೇವರ ವಿವೇಕಕ್ಕೆ ಬೆನ್ನುಹಾಕಿದೆ.
ಹಾಗಾದರೆ, ಯೆಹೋವನ ಸಾಕ್ಷಿಗಳ ಇತ್ತೀಚೆಗಿನ ಅಧಿವೇಶನಗಳಿಗಾಗಿ ಆರಿಸಲಾದ ಮುಖ್ಯವಿಷಯವು “ದೈವಿಕ ಬೋಧನೆ” ಯಾಗಿತ್ತು ಎಂಬುದು ಎಷ್ಟು ಸೂಕ್ತ! ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಕೊಳ್ಳಲಾದ ಬೋಧನೆಗೆ ಮಾತ್ರ ನಿಜವಾದ, ಜೀವವನ್ನು ರಕ್ಷಿಸುವ ಬೆಲೆಯಿದೆ ಎಂಬ ವಿಷಯವನ್ನು ಕಾರ್ಯಕ್ರಮವು ಹಾಜರಿದ್ದವರ ಜ್ಞಾಪಕಕ್ಕೆ ತಂದಿತು.
ಪ್ರಥಮ ಅಧಿವೇಶನವು ಅಮೆರಿಕದ, ನ್ಯೂ ಯಾರ್ಕ್ನಲ್ಲಿರುವ ಯೂನ್ಯನ್ಡೇಲ್ ನಲ್ಲಿ, ಜೂನ್ 3, ಗುರುವಾರದಂದು ಆರಂಭಿಸಿತು. ಆಗಿನಿಂದ, ಆಫ್ರಿಕ ಮತ್ತು ದಕ್ಷಿಣ ಅಮೆರಿಕದ ಭೂಖಂಡಗಳಲ್ಲಿ ಕೊನೆಗೊಳ್ಳುತ್ತಾ, ಒಂದು ದೇಶದ ಅನಂತರ ಇನ್ನೊಂದರಲ್ಲಿ ವಿಭಿನ್ನ ಪಟ್ಟಣಗಳಲ್ಲಿ, ಕಾರ್ಯಕ್ರಮವನ್ನು ಸಾದರಪಡಿಸಲಾಯಿತು.
ಪ್ರಥಮ ದಿನದ ಅಪರಾಹ್ಣ
ದೈವಿಕ ಬೋಧನೆಯ ಒಂದು ಅಂಶದ ಮೇಲೆ ಒತ್ತನ್ನು ನೀಡಿದ ಮುಖ್ಯವಿಷಯವನ್ನು ಪ್ರತಿದಿನವು ಪಡೆದಿತ್ತು. ಉದಾಹರಣೆಗೆ, ಪ್ರಥಮ ದಿನದ ಕಾರ್ಯಕ್ರಮವು, “ಬೋಧನೆಯು ದೇವರಿಂದಲೇ ಎಂದು ತಿಳಿಯುವುದು” ಎಂಬ ಮುಖ್ಯ ವಿಷಯದ ಮೇಲೆ ಆಧಾರಿತವಾಗಿತ್ತು. (ಯೋಹಾನ 7:17) ದಿನವು ಮುಂದುವರಿದಂತೆ, ಈ ವಿಷಯವು ಉತ್ತಮವಾಗಿ ವಿಕಸಿಸಲ್ಪಟ್ಟಿತು.
ಸಂಗೀತ ಮತ್ತು ಪ್ರಾರ್ಥನೆಯ ಬಳಿಕ, “ದೈವಿಕ ಬೋಧನೆ ನಮ್ಮನ್ನು ಒಟ್ಟಾಗಿ ತರುತ್ತದೆ,” ಎಂಬ ಶೀರ್ಷಿಕೆಯ ಭಾಷಣದೊಂದಿಗೆ ಅಧಿವೇಶನ ಅಧ್ಯಕ್ಷನು ಕಾರ್ಯಕ್ರಮವನ್ನು ಆರಂಭಿಸಿದನು. ಯೆಹೋವನ ಮಾರ್ಗಗಳ ಕುರಿತು ಕಲಿಯುವ ಮೂಲಕ ಮತ್ತು ಆತನ ದಾರಿಗಳಲ್ಲಿ ನಡೆಯುವ ಮೂಲಕ, ಆತನ ಜನರು ಐಕ್ಯರಾಗಿದ್ದಾರೆಂದು ಅವನು ತೋರಿಸಿದನು. (ಮೀಕ 4:1-5) ದೈವಿಕ ಬೋಧನೆ ಅವರ ಐಕ್ಯವನ್ನು ಬಲಗೊಳಿಸುತ್ತದೆ. ತಮ್ಮ ಐಕ್ಯ ಸಹಭಾಗಿತ್ವದಲ್ಲಿ ಹರ್ಷಿಸುವಂತೆ ಅಧಿವೇಶನಕ್ಕೆ ಹಾಜರಾದವರು ಉತ್ತೇಜಿಸಲ್ಪಟ್ಟರು.—ಕೀರ್ತನೆ 133:1-3.
ಅಪರಾಹ್ಣದಲ್ಲಿ ಸ್ವಲ್ಪ ಸಮಯದ ಬಳಿಕ, “ಯೆಹೋವನ ಮಾರ್ಗಗಳ ಕುರಿತು ನಮ್ಮನ್ನು ಬೋಧಿಸುವ ಕೂಟಗಳು,” ಎಂಬ ಶೀರ್ಷಿಕೆಯ ಒಂದು ಭಾಷಣಮಾಲೆಯಲ್ಲಿ ಕ್ರಮವಾದ ಸಭಾ ಕೂಟಗಳು ಚರ್ಚಿಸಲ್ಪಟ್ಟವು. ನಾವು ಒಟ್ಟಿಗೆ ಕೂಡುವಾಗ, ಯೆಹೋವನಿಗೆ ಮಾನ್ಯತೆ ಕೊಡುತ್ತೇವೆ ಮತ್ತು ಹೀಗೆ ಆತನ ಆಶೀರ್ವಾದವನ್ನು ಪಡೆಯುತ್ತೇವೆ ಎಂದು ಪ್ರಥಮ ಭಾಷಣಕಾರನು ಅಧಿವೇಶನಕ್ಕೆ ಹಾಜರಾದವರ ಜ್ಞಾಪಕಕ್ಕೆ ತಂದನು. ಮುಂದಿನ ಭಾಷಣಕಾರನು ಕೂಟಗಳಲ್ಲಿ ಭಾಗವಹಿಸುವುದರ ಅಗತ್ಯದ ಕುರಿತು ಒತ್ತಿ ಹೇಳಿದನು. ಹಾಗೆ ಮಾಡುವಲ್ಲಿ, ನಾವು ಯೆಹೋವನನ್ನು ಬಹಿರಂಗವಾಗಿ ಸ್ತುತಿಸುತ್ತೇವೆ, ನಮ್ಮ ನಂಬಿಕೆಯನ್ನು ಪ್ರದರ್ಶಿಸುತ್ತೇವೆ, ಮತ್ತು ಇತರರ ನಂಬಿಕೆಯನ್ನು ಬಲಗೊಳಿಸುತ್ತೇವೆ. ಕೂಟಗಳಲ್ಲಿ ನಾವು ಏನನ್ನು ಕಲಿಯುತ್ತೇವೊ ಅದನ್ನು ಕಾರ್ಯರೂಪಕ್ಕೆ ಹಾಕುವುದರ ಅಗತ್ಯವನ್ನು, ಭಾಷಣಮಾಲೆಯ ಮೂರನೆಯ ಭಾಷಣಕಾರನು ತೋರಿಸಿದನು. ನಾವು ‘ವಾಕ್ಯದ ಪ್ರಕಾರ ನಡೆಯುವವರಾಗಿರಬೇಕು; ಅದನ್ನು ಕೇಳುವವರು ಮಾತ್ರವೇ ಆಗಿರಬಾರದು.’—ಯಾಕೋಬ 1:22.
ಯೆಹೋವನಿಗೆ ಸ್ತುತಿಗಳನ್ನು ಹಾಡುವುದರ ಕುರಿತು ಒಂದು ಉತ್ತಮ ಚರ್ಚೆಯು ಮುಂದಿನ ವಿಷಯವಾಗಿತ್ತು. ಹೃತ್ಪೂರ್ವಕ ಗೀತೆಯು ನಮ್ಮ ಆರಾಧನೆಯ ಗಮನಾರ್ಹ ಭಾಗವಾಗಿದೆ. “ದೈವಿಕ ಬೋಧನೆ ವಿಜಯಿಯಾಗುತ್ತದೆ” ಎಂಬ ಮುಖ್ಯಭಾಷಣದಿಂದ, ಈ ಭಾಷಣವು ಹಿಂಬಾಲಿಸಲ್ಪಟ್ಟಿತು. ಎಂತಹ ಅತ್ಯುತ್ತಮವಾದ ಮುಖ್ಯ ವಿಷಯ! “ಯಾರಾದರೂ ಪಡೆಯಬಲ್ಲ ಅತ್ಯುತ್ತಮ ಬೋಧನೆಯ ಮೂಲನು ಯೆಹೋವನಾಗಿದ್ದಾನೆ” ಎಂದು ಭಾಷಣಕಾರನು ಹೇಳಿದನು. ಆಮೇಲೆ, ಮಾನವ ಮಿದುಳಿನ ಚಮತ್ಕಾರದ ಕುರಿತು ಚಿಕ್ಕ ಚರ್ಚೆಯ ತರುವಾಯ, ಅವನಂದದ್ದು: ನಾವು ನಮ್ಮ ಯೋಚನಾ ಸಾಮರ್ಥ್ಯವನ್ನು ಪ್ರಾಥಮಿಕವಾಗಿ ದೈವಿಕ ಬೋಧನೆಯನ್ನು ಪಡೆಯಲು ಉಪಯೋಗಿಸಬೇಕು. ಅದು ಮಾತ್ರ ಯಥಾರ್ಥವಾದ ವಿವೇಕದಲ್ಲಿ ಫಲಿಸುತ್ತದೆ.” ಎಷ್ಟು ಸತ್ಯ!
ಎರಡನೆಯ ದಿನ ಬೆಳಗ್ಗೆ
ಅಧಿವೇಶನದ ಎರಡನೆಯ ದಿನದ ಮುಖ್ಯ ವಿಷಯವು, “ನಮ್ಮ ರಕ್ಷಕನಾದ ದೇವರ ಉಪದೇಶವನ್ನು ಅಲಂಕಾರವಾಗಿಡುತ್ತಾ ಇರ್ರಿ” ಎಂಬುದಾಗಿತ್ತು. (ತೀತ 2:10) “ದೆವ್ವಗಳ ಬೋಧನೆಗಳ ವಿರುದ್ಧ ದೈವಿಕ ಬೋಧನೆ” ಎಂಬ ಭಾಷಣದಲ್ಲಿ ಈ ತತ್ವವು ಎದ್ದು ಕಂಡಿತು. ಹೌದು, ದೆವ್ವಗಳಿಗೆ ತಮ್ಮ ಬೋಧನೆಗಳಿವೆ. (1 ತಿಮೊಥೆಯ 4:1) ಭಾಷಣಕಾರನು ವಿವರಿಸಿದಂತೆ, ಪಿಶಾಚನ ಕುಯುಕ್ತಿಗಳನ್ನು ಮತ್ತು ಸುಳ್ಳು ಬೋಧನೆಗಳನ್ನು ಬಯಲು ಮಾಡುವ ಮೂಲಕ, ದೈವಿಕ ಬೋಧನೆಯು ಸೈತಾನನ “ವಿವೇಕ”ದ ಮೇಲೆ ವಿಜಯಿಯಾಗುತ್ತದೆ. ಇದರಿಂದಾಗಿ, ಸುಮಾರು 45,00,000 ಯೋಗ್ಯಮನಸ್ಸುಳ್ಳ ಕ್ರೈಸ್ತರು ಸೈತಾನನ ಅಂಧಕಾರದಲ್ಲಿ ಇನ್ನು ಮುಂದೆ ಗುಲಾಮರಾಗಿಲ್ಲ.—ಯೋಹಾನ 8:32.
ಆದರೂ ನಾವು ಸೈತಾನನನ್ನು ಪ್ರತಿರೋಧಿಸುತ್ತಾ ಇರಬೇಕು. ಇದನ್ನು, “ನೀವು ಲೋಕದ ಆತ್ಮವನ್ನು ಪ್ರತಿರೋಧಿಸುತ್ತಿದ್ದೀರೊ?” ಎಂಬ ಭಾಷಣದ ಮೂಲಕ ಒತ್ತಿಹೇಳಲಾಯಿತು. ಈ ಲೋಕದ ಆತ್ಮವು ಮಾರಕವಾಗಿದೆ. ಅದು ಕೀಳ್ಮಟ್ಟದ ನೈತಿಕತೆಯನ್ನು, ಅಧಿಕಾರದ ಕುರಿತು ಪ್ರತಿಭಟನಾ ನೋಟವನ್ನು, ಪ್ರಾಪಂಚಿಕ ವಿಷಯಗಳಿಗಾಗಿ ಅತ್ಯಾಸೆಯನ್ನು ಉತ್ತೇಜಿಸುತ್ತದೆ. ಕ್ರೈಸ್ತನೊಬ್ಬನು ತನ್ನನ್ನು ಸಂತತವಾಗಿ ಪರೀಕ್ಷಿಸಿಕೊಳ್ಳಬೇಕು. ತಾನು ವೀಕ್ಷಿಸುವ, ಆಲಿಸುವ, ಯಾ ಓದುವ ಸಂಬಂಧದಲ್ಲಿ, ಉನ್ನತ ಮಟ್ಟಗಳನ್ನು ಅವನು ಇನ್ನೂ ಹೊಂದಿರುತ್ತಾನೊ? ಉತ್ತೇಜನಕರವಾಗಿ, ಭಾಷಣಕಾರನು ಹೇಳಿದ್ದು: “ಈ ಸಂಬಂಧದಲ್ಲಿ ನೀವು ಈಗಾಗಲೇ ಪ್ರಯೋಗಿಸುತ್ತಿರುವ ಶ್ರದ್ಧೆಯ ಪ್ರಯತ್ನಕ್ಕಾಗಿ, ನಾವು ನಿಮ್ಮನ್ನು—ಸಹೋದರರನ್ನು, ಸಹೋದರಿಯರನ್ನು, ಮತ್ತು ಯುವ ಜನರನ್ನು ಪ್ರಶಂಸಿಸುತ್ತೇವೆ.”—1 ಯೋಹಾನ 2:15-17.
ಲೋಕದ ಆತ್ಮವನ್ನು ಪ್ರತಿರೋಧಿಸುವುದನ್ನು ಕಠಿನವಾಗಿ ಮಾಡುವ ಅಂಶವೊಂದು ಇದೆ. ಯಾವುದದು? ನಾವೆಲ್ಲರು ಅಪರಿಪೂರ್ಣರಾಗಿದ್ದೇವೆ. ಯೇಸು ನಮ್ಮ ಪಾಪಗಳಿಗಾಗಿ ಮರಣ ಹೊಂದಿದನು ನಿಜ, ಆದರೆ ಪಾಪದ ಕಡೆಗೆ ಇರುವ ಪ್ರವೃತ್ತಿಯ ವಿರುದ್ಧ ನಾವು ಇನ್ನೂ ಹೋರಾಡಬೇಕು. ಇದನ್ನು “ಪತನಗೊಂಡ ಶರೀರದ ಮೇಲಿನ ಪಾಪದ ಹಿಡಿತದೊಂದಿಗೆ ಹೋರಾಡುವುದು” ಎಂಬ ಭಾಷಣದಲ್ಲಿ ಪರಿಗಣಿಸಲಾಯಿತು. ಬೇರೆ ವಿಷಯಗಳ ನಡುವೆ, ನಾವು ನೂತನ ವ್ಯಕ್ತಿತ್ವವನ್ನು ಧರಿಸಿಕೊಂಡು, ನಮ್ಮ ಪಾಪಪೂರ್ಣ ಪ್ರವೃತ್ತಿಗಳನ್ನು ತೃಪ್ತಿಪಡಿಸುವ ಯಾವುದೇ ವಿಷಯವನ್ನು ತೊರೆದರೆ, ಪಾಪದೊಂದಿಗೆ ಇರುವ ನಮ್ಮ ಹೋರಾಟವನ್ನು ನಾವು ಜಯಿಸಬಲ್ಲೆವು ಎಂಬುದಾಗಿ ಭಾಷಣಕಾರನು ಹೇಳಿದನು.
“ಸ್ವಸ್ಥಬೋಧನೆಯನ್ನು ನಿಮ್ಮ ಜೀವಿತದ ವಿಧಾನವನ್ನಾಗಿ ಮಾಡಿರಿ” ಎಂಬುದು ಮುಂದಿನ ಭಾಷಣದ ಶೀರ್ಷಿಕೆಯಾಗಿತ್ತು. ಕೆಲವರಿಗೆ ತಮ್ಮ ಶಾರೀರಿಕ ಆರೋಗ್ಯದ ಕುರಿತು ಅತಿರೇಕ ಚಿಂತೆ ಇದೆ. ಆದರೂ, ವಾಸ್ತವವಾಗಿ, ಆತ್ಮಿಕ ಆರೋಗ್ಯವು ಹೆಚ್ಚು ಪ್ರಾಮುಖ್ಯವಾದದ್ದು. ಈ ಸಂಬಂಧದಲ್ಲಿ ನಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದರ ಅಗತ್ಯವನ್ನು ಭಾಷಣಕಾರನು ಒತ್ತಿಹೇಳಿದನು, ಮತ್ತು ವಿಶೇಷವಾಗಿ ಕ್ರೈಸ್ತ ಸ್ತ್ರೀಯರಿಗೆ ಉತ್ತೇಜನದ ಮಾತು ಅವನಲ್ಲಿತ್ತು. ಅವನಂದದ್ದು: “ಶುಶ್ರೂಷೆಗಾಗಿ ತಮಗಿರುವ ಹುರುಪಿನಲ್ಲಿ ಮತ್ತು ವೈಯಕ್ತಿಕ ಜವಾಬ್ದಾರಿಗಳ ತಮ್ಮ ಪರಾಮರಿಕೆಯಲ್ಲಿ ಉತ್ತಮ ಸಮತೂಕವಿರುವ ವೃದ್ಧ ಸಹೋದರಿಯರನ್ನು ಮತ್ತು ಎಳೆಯ ಸಹೋದರಿಯರನ್ನು ನಾವು ಬಹಳವಾಗಿ ಗಣ್ಯಮಾಡುತ್ತೇವೆ.” ಹೌದು, ಮತ್ತು ಲೋಕದಿಂದ ನಮ್ಮನ್ನು ಬೇರ್ಪಡಿಸುವ ಸ್ವಸ್ಥ ಬೋಧನೆಗಾಗಿ ನಾವೆಲ್ಲರು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇವೆ.
ಬೆಳಗ್ಗಿನ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದ ಭಾಷಣವು “ದೈವಿಕ ಬೋಧನೆಯು ಜೀವಿತದ ಉದ್ದೇಶವನ್ನು ಪ್ರಕಟಿಸುತ್ತದೆ” ಎಂಬುದಾಗಿತ್ತು. ಭಾಷಣಕಾರನು ಹೇಳಿದ್ದು; “ಇಂದೋ ಮುಂದೋ, ಬಹುಮಟ್ಟಿಗೆ ಪ್ರತಿಯೊಬ್ಬರೂ, ‘ಜೀವಿತದ ಉದ್ದೇಶವೇನು?’ ಎಂದು ತಿಳಿಯಲು ಕುತೂಹಲವುಳ್ಳವರಾಗುತ್ತಾರೆ.” ಶಕ್ತಿಶಾಲಿ ವಾದಗಳೊಂದಿಗೆ, ಆ ಪ್ರಶ್ನೆಗೆ ವಾಸ್ತವವಾದ ಉತ್ತರವನ್ನು ಕೇವಲ ಬೈಬಲ್ ಕೊಡುತ್ತದೆ ಎಂದು ಅವನು ರುಜುಪಡಿಸಿದನು. ಆಮೇಲೆ, ದೇವರ ಅದ್ಭುತಕರವಾದ ವಾಗ್ದಾನಗಳು ಪರಿಣಾಮಕಾರಿಯಾಗಿ ನಮಗೆ ಜೀವಿತದಲ್ಲಿ ಉದ್ದೇಶವನ್ನು ಕೊಡುತ್ತವೆ ಎಂಬುದನ್ನು ಭಾಷಣಕಾರನು ತೋರಿಸಿದನು. ‘ನನ್ನ ಟೆರಿಟೊರಿಯಲ್ಲಿರುವ ಜನರು ಇದನ್ನೇ ಕೇಳುವ ಅಗತ್ಯವಿದೆ,’ ಎಂದು ಪ್ರಾಯಶಃ ಸಭಿಕರಲ್ಲಿ ಅನೇಕರು ಯೋಚಿಸುತ್ತಿದ್ದರು. ಆಡಳಿತ ಮಂಡಲಿಯು ಕೂಡ ಅದೇ ಅಭಿಪ್ರಾಯವುಳ್ಳದ್ದಾಗಿತ್ತು. ಭಾಷಣದ ಕೊನೆಯಲ್ಲಿ, ಜೀವಿತದ ಉದ್ದೇಶವೇನು? ಎಂಬ ಶೀರ್ಷಿಕೆಯ ಒಂದು ಹೊಸ ಬ್ರೋಷರ್ ಬಿಡುಗಡೆ ಹೊಂದಿತು. ಪ್ರತಿಯೊಬ್ಬರು ಎಷ್ಟು ಹರ್ಷಗೊಂಡಿದ್ದರು! ಮಧ್ಯಾಹ್ನದ ವಿರಾಮ ಹೊಸ ಪ್ರಕಾಶನದ ಒಳವಿಷಯವನ್ನು ನೋಡುವ ಅವಕಾಶವನ್ನು ಒದಗಿಸಿತು.
ಎರಡನೆಯ ಅಪರಾಹ್ಣ
ಅಪರಾಹ್ಣದಲ್ಲಿ ಪ್ರಥಮ ಭಾಷಣಕ್ಕೆ ಸಂತೈಸುವ “ನಿಮ್ಮ ಎಲ್ಲಾ ಚಿಂತೆಗಳನ್ನು ಯೆಹೋವನ ಮೇಲೆ ಹಾಕಿರಿ” ಎಂಬ ಮುಖ್ಯವಿಷಯವಿತ್ತು, ಅನೇಕ ವಿಷಯಗಳು ಚಿಂತೆಯನ್ನುಂಟುಮಾಡುತ್ತವೆ, ಆದರೂ ನಾವು ನಮ್ಮ ಎಲ್ಲಾ ಚಿಂತೆಗಳನ್ನು ಆತನ ಮೇಲೆ ಹಾಕಬೇಕೆಂದು ದೇವರ ವಾಕ್ಯವು ಹೇಳುತ್ತದೆ. (1 ಪೇತ್ರ 5:6, 7) ಕೆಲವು ಸಮಸ್ಯೆಗಳು ನಿತ್ಯವಾಗಿರುತ್ತವೆ ನಿಜ, ಮತ್ತು ಇದರ ಕುರಿತು ಭಾಷಣಕಾರನು ಪ್ರೋತಾಹಿಸಿದ್ದು: ‘ತಾಳ್ಮೆಯಿಂದಿರ್ರಿ. ಯೆಹೋವನನ್ನು ಕಾಯಿರಿ. ಬೈಬಲನ್ನು ಅನುಸರಿಸುವುದು ಯಾವಾಗಲೂ ಅತ್ಯುತ್ತಮವಾದದ್ದೆಂದು ದೃಢವಾಗಿ ನಂಬಿರಿ. ನಮ್ಮ ಹೃದಯವನ್ನು ನಾವು ಯೆಹೋವನ ಮೇಲೆ ಕೇಂದ್ರೀಕರಿಸುವುದಾದರೆ, ಎಲ್ಲಾ ಗ್ರಹಿಕೆಯನ್ನು ಮೀರುವ “ದೇವರ ಶಾಂತಿಯನ್ನು” ನಾವು ಅನುಭವಿಸುವೆವು.’—ಫಿಲಿಪ್ಪಿ 4:6, 7.
ದೈವಿಕ ಬೋಧನೆಯು ಕುಟುಂಬ ಜೀವಿತಕ್ಕೆ ಅನ್ವಯಿಸುತ್ತದೆ ಎಂಬುದನ್ನು ಮುಂದಿನ ನಾಲ್ಕು ಭಾಷಣಗಳು ತೋರಿಸಿದವು. “ಮದುವೆಯನ್ನು ಒಂದು ಬಾಳುವ ಬಂಧವನ್ನಾಗಿ ಮಾಡುವುದು” ಎಂಬ ಮೊದಲನೆಯ ಭಾಷಣವು, ಲೋಕದಲ್ಲಿ ಅನೇಕರಿಂದ ವೀಕ್ಷಿಸಲ್ಪಡುವಂತೆ, ಯೆಹೋವನ ದೃಷ್ಟಿಯಲ್ಲಿ ಮದುವೆಯು ತೊಲಗಿಸಿಬಿಡಬಹುದಾದ ಏರ್ಪಾಡಲವ್ಲೆಂಬುದನ್ನು ಅಧಿವೇಶನಕ್ಕೆ ಹಾಜರಾದವರ ಜ್ಞಾಪಕಕ್ಕೆ ತಂದಿತು. ಹಾಗಿದ್ದರೂ, ಮದುವೆಯನ್ನು ಯಶಸ್ವಿಯಾಗಿ ಮಾಡಲು, ಯೆಹೋವನ ಮಾರ್ಗದರ್ಶನವನ್ನು ನಾವು ಅನುಸರಿಸಬೇಕು. ಆತನು ನಮ್ಮನ್ನು ರಚಿಸಿದನು. ಆದುದರಿಂದ, ಲಭ್ಯವಿರುವ ಮದುವೆಯ ಅತ್ಯುತ್ತಮ ಸಲಹೆಯು ಆತನ ಪ್ರೇರಿತ ವಾಕ್ಯದಲ್ಲಿದೆ.
“ನಿಮ್ಮ ಮನೆವಾರ್ತೆಯವರ ರಕ್ಷಣೆಗಾಗಿ ಶ್ರಮಪಟ್ಟು ಕ್ರಿಯೆಗೈಯಿರಿ” ಎಂಬ ಭಾಷಣವು, ಈ ಕಠಿನ ಸಮಯಗಳಲ್ಲಿ ಒಂದು ಕುಟುಂಬಕ್ಕಾಗಿ ಕಾಳಜಿ ವಹಿಸುವುದರ ಪಂಥಾಹ್ವಾನಗಳನ್ನು ಚರ್ಚಿಸಿತು. (2 ತಿಮೊಥೆಯ 3:1) ಹೆತ್ತವರು ತಮ್ಮ ಮಕ್ಕಳಿಗೆ ಶಾರೀರಿಕ ಆರೋಗ್ಯ ಸೂತ್ರಗಳನ್ನು, ಸಭ್ಯ ನಡತೆಯನ್ನು, ಹೇಗೆ ಕೆಲಸಮಾಡಬೇಕೆಂಬುದನ್ನು, ಹೇಗೆ ಉದಾರಿಗಳಾಗಿರಬೇಕು ಮತ್ತು ಇತರರ ಕುರಿತು ಚಿಂತಿಸಬೇಕು ಎಂಬುದನ್ನು ಕಲಿಸುತ್ತಾರೆ. ಅಧಿಕ ಪ್ರಾಮುಖ್ಯವಾಗಿ, ಯೆಹೋವನ ಅನುರಕ್ತ ಸೇವಕರಾಗಿರಲು ಅವರು ತಮ್ಮ ಸಂತಾನಕ್ಕೆ ಕಲಿಸಬೇಕು.—ಜ್ಞಾನೋಕ್ತಿ 22:6.
“ಹೆತ್ತವರೇ—ನಿಮ್ಮ ಮಕ್ಕಳಿಗೆ ವಿಶೇಷತಮ ಗಮನ ಆವಶ್ಯಕವಾಗಿದೆ” ಎಂಬ ಮುಂದಿನ ಚರ್ಚೆಯಲ್ಲಿ, ಮಕ್ಕಳ ಬಲಹೀನತೆಗಳನ್ನು ನೋಡಲು ನಿರಾಕರಿಸದೆ ಇರುವಾಗ, ಅವರನ್ನು ಪ್ರಶಂಸಿಸುವ ಅಗತ್ಯದ ಕುರಿತು ಭಾಷಣಕಾರನು ಅಧಿವೇಶನಕ್ಕೆ ಹಾಜರಾದವರನ್ನು ಜ್ಞಾಪಿಸಿದನು. ಅಪ್ರಾಮಾಣಿಕತೆ, ಪ್ರಾಪಂಚಿಕತೆ, ಯಾ ಸ್ವಾರ್ಥತೆಯ ಪ್ರವೃತ್ತಿಗಳಿಗಾಗಿ ಹೆತ್ತವರು ವಿಶೇಷವಾಗಿ ಎಚ್ಚರವಾಗಿರಬೇಕು.’
“ಯುವಕರೇ—ನೀವು ಯಾರ ಬೋಧನೆಗಳಿಗೆ ಲಕ್ಷ್ಯಕೊಡುತ್ತೀರಿ?” ಎಂಬ ಭಾಷಣವನ್ನು ವಿಶೇಷವಾಗಿ ಯುವ ಅಧಿವೇಶನಗಾರರು ಜಾಗರೂಕವಾಗಿ ಆಲಿಸಿದರು. ಇಂದು ಯುವ ಕ್ರೈಸ್ತರಿಗಾಗಿ ವಿಷಯಗಳು ಕಷ್ಟಕರವಾಗಿವೆ. ಲೋಕದೊಂದಿಗೆ ಮುಂದುವರಿಯುವುದು ಸುಲಭವಾಗಿದೆ, ಆದರೆ ಇದು ಮರಣಕ್ಕೆ ನಡೆಸುತ್ತದೆ. ದೈವಿಕ ಬೋಧನೆಯೊಂದಿಗೆ ಅಂಟಿಕೊಂಡಿರಲು ಆರಿಸುವುದು ಒಬ್ಬ ಯುವ ವ್ಯಕ್ತಿಯಲ್ಲಿ ಧೈರ್ಯವನ್ನು ಕೇಳಿಕೊಳ್ಳುತ್ತದಾದರೂ, ಅದು ಈಗ ಮಹಾ ಆಶೀರ್ವಾದಗಳನ್ನು ಮತ್ತು ಮುಂದಕ್ಕೆ ಅನಂತ ಜೀವನವನ್ನು ತರುತ್ತದೆ.—1 ತಿಮೊಥೆಯ 4:8.
ಎರಡನೆಯ ದಿನವು ತಮ್ಮ ಸೃಷ್ಟಿಕರ್ತನನ್ನು ಈಗ ಜ್ಞಾಪಿಸಿಕೊಳ್ಳುವ ಯುವ ಜನರು ಎಂಬ ಹೃದಯೋತ್ತೇಜಕ ಡ್ರಾಮದೊಂದಿಗೆ ಕೊನೆಗೊಂಡಿತು. ಪೀಠಿಕೆಯಲ್ಲಿ ನಿರ್ದೇಶಕನು, ದೇವರ ಸಂಸ್ಥೆಯಲ್ಲಿರುವ ಯುವ ಜನರನ್ನು, “ಯೆಹೋವ ದೇವರಿಗೆ ಮತ್ತು ಆತನ ನೇಮಿತ ಸ್ವರ್ಗೀಯ ರಾಜನಾದ ಯೇಸು ಕ್ರಿಸ್ತನಿಗೆ ಸಮರ್ಪಿತ ಸೇವೆಯಲ್ಲಿ ನಿಷ್ಠೆಯಿಂದ ತೊಡಗಿರುವ ಒಂದು ದೇವಪ್ರಭುತ್ವ ಸೇನೆ,” ಎಂಬುದಾಗಿ ಕರೆದನು. ಅವನು ಕೂಡಿಸಿದ್ದು: “ನಮ್ಮ ಯುವ ಜನರು ನಿಜವಾಗಿಯೂ ಯಾವುದೊ ಒಂದು ಒಳ್ಳೆಯದನ್ನು ಸಾಧಿಸುತ್ತಿದ್ದಾರೆ!” ಹೆತ್ತವನೊಬ್ಬನು ಒಂದು ಮಗುವನ್ನು ಸರಿಯಾಗಿ ತರಬೇತುಗೊಳಿಸಿದರೆ, ಅವನು ಬೆಳೆದು ಸ್ವಂತವಾಗಿ ಯೆಹೋವನನ್ನು ಸೇವಿಸುವಾಗ ಅದು ಆ ಹುಡುಗನಿಗೆ ಪ್ರಯೋಜನಕರವಾಗಿರುವುದೆಂದು, ಡ್ರಾಮವು ಸುಸ್ಪಷ್ಟವಾಗಿಗಿ ತೋರಿಸಿತು.
ಮೂರನೆಯ ದಿನದ ಬೆಳಗ್ಗೆ
ಮೂರನೆಯ ದಿನಕ್ಕಾಗಿ ಮುಖ್ಯವಿಷಯವು “ಎಲ್ಲಾ ಜನಾಂಗಗಳ ಜನರಿಗೆ ಬೋಧಿಸುವುದನ್ನು ಮುಂದುವರಿಸಿರಿ” ಎಂಬುದಾಗಿತ್ತು. (ಮತ್ತಾಯ 28:19, 20) ಸಾರುವ ಕೆಲಸದ ಕುರಿತು ಸಮಯೋಚಿತ ಬುದ್ಧಿವಾದವನ್ನು ಅಧಿವೇಶನಗಾರರು ನಿಸ್ಸಂದೇಹವಾಗಿ ನಿರೀಕ್ಷಿಸಿದರು, ಮತ್ತು ಅವರು ನಿರಾಶೆಗೊಳ್ಳಲಿಲ್ಲ. “ನಮ್ಮ ಸಾರುವ ಮತ್ತು ಬೋಧಿಸುವ ನಿಯೋಗವನ್ನು ಆನಂದದಿಂದ ನೆರವೇರಿಸುವುದು” ಎಂಬ ಶೀರ್ಷಿಕೆಯ ಭಾಷಣಮಾಲೆಯು, ಸಾಕ್ಷಿಕಾರ್ಯದಲ್ಲಿ ಭಾಗವಹಿಸುತ್ತಾ ಇರುವ ಅವರ ನಿರ್ಧಾರವನ್ನು ಬಲಗೊಳಿಸಿತು. ಪ್ರಾರಂಭಿಕ ಭಾಷಣ ಪ್ರಥಮ ಭೇಟಿಗಳನ್ನು; ಎರಡನೆಯದು ಪುನಃ ಸಂದರ್ಶನಗಳನ್ನು; ಮತ್ತು ಮೂರನೆಯದು ಬೈಬಲ್ ಅಧ್ಯಯನಗಳನ್ನು ಚರ್ಚಿಸಿತು. ಲೋಕದಾದ್ಯಂತ ಮಿಷನೆರಿಗಳು ಮನೆಗೆ ಹಿಂದಿರುಗಿ ತಮ್ಮ ಕುಟುಂಬಗಳು ಹಾಗೂ ಮಿತ್ರರೊಂದಿಗೆ ಅಧಿವೇಶನವೊಂದನ್ನು ಹಾಜರಾಗುವಂತೆ ಆಮಂತ್ರಿಸಲ್ಪಟ್ಟಿದ್ದರು. ಕೆಲವು ಸ್ಥಳಗಳಲ್ಲಿ, ಮಿಷನೆರಿಗಳು ಕಾರ್ಯಕ್ರಮದ ಈ ಭಾಗದಲ್ಲಿ ಭಾಗವಹಿಸಿದರು. ಅವರ ನೇಮಕಗಳಲ್ಲಿ ಅವರು ಹೊಂದುತ್ತಿರುವ ಸಾಫಲ್ಯದೊಳಗಿನ ಸ್ಪಲ್ಪ ಒಳನೋಟವನ್ನು ಪಡೆಯುವುದು ಹರ್ಷಭರಿತವಾಗಿತ್ತು. “ಪ್ರತಿಯೊಬ್ಬರನ್ನೂ ಸುವಾರ್ತೆಯೊಂದಿಗೆ ತಲಪುವುದು” ಎಂಬ ಮುಂದಿನ ಭಾಷಣವು, ಅನೌಪಚಾರಿಕ ಸಾಕ್ಷಿಕಾರ್ಯದ ಪರಿಣಾಮವನ್ನು ಪರಿಗಣಿಸಿತು.
ಯೆಹೋವನ ಸಾಕ್ಷಿಗಳ ದೊಡ್ಡ ಒಕ್ಕೂಟಗಳಲ್ಲಿ ಯಾವಾಗಲೂ ಒಂದು ಮುಖ್ಯಾಂಶವಾಗಿರುವ ದೀಕ್ಷಾಸ್ನಾನದ ಭಾಷಣದೊಂದಿಗೆ ಬೆಳಗ್ಗಿನ ಕಾರ್ಯಕ್ರಮವು ಸಮಾಪ್ತಿಗೊಂಡಿತು. ಎಲ್ಲಾ ಅಧಿವೇಶನಗಳಲ್ಲಿ, ಹೊಸದಾಗಿ ಸಮರ್ಪಣೆ ಮಾಡಿಕೊಂಡವರ ದೊಡ್ಡ ಗುಂಪುಗಳು ನೆರೆದ ಜನಸಮೂಹಗಳ ಮುಂದೆ ನಿಂತು, ಅವರ ಕಡೆಗೆ ನಿರ್ದೇಶಿಸಲಾದ ಎರಡು ಪ್ರಶ್ನೆಗಳಿಗೆ ಭರವಸೆಯಿಂದ ಹೌದೆಂದು ಉತ್ತರಿಸಿದವು. ಆಮೇಲೆ ಅವರು ಬಹಿರಂಗ ದೀಕ್ಷಾಸ್ನಾನವನ್ನು ಪಡೆದರು. ದೈವಿಕ ಬೋಧನೆಯ ಮಹಾ ಪರಿಣಾಮದ ಎಂತಹ ಶಕ್ತಿಶಾಲಿ ಪ್ರಮಾಣ!
ಮೂರನೆಯ ದಿನದ ಅಪರಾಹ್ಣ
ಅಪರಾಹ್ಣದ ಕಾರ್ಯಕ್ರಮವು ಆಳವಾದ ಶಾಸ್ತ್ರೀಯ ಚರ್ಚೆಯೊಂದಿಗೆ ಆರಂಭಿಸಿತು. ಯೆಹೋವನ ಸಾಕ್ಷಿಗಳು ಮತ್ತಾಯ 24 ನೆಯ ಅಧ್ಯಾಯ ಮತ್ತು ಲೂಕ 21 ನೆಯ ಅಧ್ಯಾಯದ ಮಾತುಗಳೊಂದಿಗೆ ಚಿರಪರಿಚಿತರಾಗಿದ್ದಾರೆ. ಈ ಬೈಬಲ್ ಅಧ್ಯಾಯಗಳ ಕುರಿತು ಯಾವುದೇ ಹೊಸ ವಿಷಯವನ್ನು ಹೇಳಸಾಧ್ಯವಿಲ್ಲವೆಂದು ಕೆಲವರು ಯೋಚಿಸಿದರೊ? ಅವರು ಎಷ್ಟು ತಪ್ಪಾಗಿ ಯೋಚಿಸಿದರು! “ನಿನ್ನ ಸಾನ್ನಿಧ್ಯದ ಸೂಚನೆ ಏನಾಗಿರುವುದು?” ಮತ್ತು “ನಮಗೆ ಹೇಳು, ಈ ಸಂಗತಿಗಳು ಯಾವಾಗ ಸಂಭವಿಸುವುವು?” ಎಂಬ ಭಾಷಣಗಳು, ಅಧಿವೇಶನಕ್ಕೆ ಹಾಜರಾದವರನ್ನು ಆ ಎರಡು ಅಧ್ಯಾಯಗಳ ಭಾಗಗಳ ಕುರಿತು ಚಿತ್ತಾಕರ್ಷಕ ಚರ್ಚೆಗಳಿಗೆ ನಡೆಸಿದವು ಮತ್ತು ಕೆಲವೊಂದು ವಚನಗಳ ಸದ್ಯೋಚಿತವಾದ ವಿವರಣೆಯನ್ನು ನೀಡಿದವು. ತಾವು ವಿಷಯಗಳನ್ನು ತಿಳಿದುಕೊಂಡೆವೂ ಎಂಬುದನ್ನು ನೋಡಲು ಅಧಿವೇಶನಕ್ಕೆ ಹಾಜರಾದವರು ಸೇಶನ್ಸ್ಗಳ ಅನಂತರ, ಟಿಪ್ಪಣಿಗಳನ್ನು ಹೋಲಿಸುವಾಗ ಉಲ್ಲಾಸಗೊಳಿಸುವ ಚರ್ಚೆಗಳು ನಡೆದವು. ಈ ಮಾಹಿತಿಯು ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಟಗೊಳ್ಳುವಾಗ, ನಿಸ್ಸಂದೇಹವಾಗಿ ಅನೇಕ ಪ್ರಶ್ನೆಗಳು ಉತ್ತರಿಸಲ್ಪಡುವವು.
“ನಿಮ್ಮ ಬೈಬಲ್ ಪ್ರಶ್ನೆಗಳಿಗೆ ಬೋಧಪ್ರದ ಉತ್ತರಗಳು” ಎಂಬ ಭಾಷಣದಲ್ಲಿ ಬೈಬಲ್ ಅಧ್ಯಯನ ಮುಖ್ಯ ವಿಷಯವು ಮುಂದುವರಿಸಲ್ಪಟ್ಟಿತು. ತದನಂತರ ಕಾರ್ಯಕ್ರಮವು ಭಿನ್ನವಾದ ವಿಷಯದ ಕಡೆಗೆ ಗಮನವನ್ನು ನಿರ್ದೇಶಿಸಿತು. ಇಸವಿ 1993, ವಾಚ್ಟವರ್ ಸ್ಕೂಲ್ ಆಫ್ ಗಿಲ್ಯಾದ್ನ 50 ನೆಯ ವಾರ್ಷಿಕೋತ್ಸವವನ್ನು ಗುರುತಿಸಿತು. “ಗಿಲ್ಯಾದ್ ಮಿಷನೆರಿ ತರಬೇತಿ ಮತ್ತು ಚಟುವಟಿಕೆಯ ಐವತ್ತು ವರ್ಷಗಳು” ಎಂಬ ಭಾಷಣವು, ಆ ಸಮಯದಲ್ಲಿ ಏನನ್ನು ಸಾಧಿಸಲಾಗಿತ್ತೊ ಅದನ್ನು ಅಧಿವೇಶನಕ್ಕೆ ಹಾಜರಾದವರಿಗೆ ತೋರಿಸಿತು. “ಭೌಗೋಲಿಕ ಕ್ಷೇತ್ರದಲ್ಲಿ ಸೌವಾರ್ತಿಕ ಸಾಧನೆಗಳು” ಎಂಬ ಭಾಷಣವು ನಡೆಯುವಾಗ, ಯಾವುದೇ ಮಿಷನೆರಿಗಳು ಅಲ್ಲಿ ಉಪಸ್ಥಿತಿರಿದ್ದರೆ, ಸಭಿಕರೊಂದಿಗೆ ತಮ್ಮ ಅನುಭವಗಳಲ್ಲಿ ಕೆಲವೊಂದನ್ನು ಹಂಚಿಕೊಳ್ಳಲು ಅವರು ಆಮಂತ್ರಿಸಲ್ಪಟ್ಟರು. ಮಿಷನೆರಿಗಳ ವರದಿಗಳನ್ನು ಕೇಳುವುದು ರೋಮಾಂಚಕಾರಿಯಾಗಿತ್ತು!
“ಯೆಹೋವನ ಸಾಕ್ಷಿಗಳು ಎಚ್ಚರದಿಂದಿರುವ ಕಾರಣ” ಎಂಬ ಮುಂದಿನ ಭಾಷಣವು ಇನ್ನೊಂದು ಇತಿಹಾಸದ ಪಾಠವಾಗಿತ್ತು. ಸಾ.ಶ. ಮೊದಲನೆಯ ಶತಮಾನದಿಂದ ಇಂದಿನ ವರೆಗೆ ಕ್ರೈಸ್ತರು ಎಚ್ಚರದಿಂದ ಇದ್ದರೆಂದು ಅದು ತೋರಿಸಿತು. ಅದು ಇನ್ನೊಂದು ಆಶ್ಚರ್ಯಕ್ಕೆ ನಡೆಸಿತು. “ಭೂಮಿಯ ಎಲ್ಲೆಡೆಯೂ ಸಕ್ರಿಯರಾಗಿರುವ ರಾಜ್ಯ ಘೋಷಕರು” ಎಂಬ ಶೀರ್ಷಿಕೆಯ ಮುಂದಿನ ಭಾಷಣದ ಪ್ರಾರಂಭದಲ್ಲಿ, ಭಾಷಣಕಾರನು ಒಂದು ದೊಡ್ಡ ಸಂಪುಟವನ್ನು (ಈಗಾಗಲೇ ಸ್ಥಳೀಯ ಭಾಷೆಯಲ್ಲಿ ದೊರೆಯುವಾಗ) ಎತ್ತಿಹಿಡಿದು ಹೇಳಿದ್ದು: “ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್ನಲ್ಲಿ ಲಭ್ಯವಿದೆ) ಎಂಬ ಶೀರ್ಷಿಕೆಯ ಈ ಹೊಸ ಪುಸ್ತಕದ ಬಿಡುಗಡೆಯನ್ನು ಇಂದು ಇಲ್ಲಿ ಪ್ರಕಟಿಸುವುದು ಸಂತೋಷದ ಒಂದು ವಿಷಯವಾಗಿದೆ.” ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಇತಿಹಾಸದ ಸವಿಸ್ತಾರ ದಾಖಲೆಯು ಪುಸ್ತಕದಲ್ಲಿದೆ. ಆತನ ಸೇವಕರ ಮೇಲೆ ಸಕ್ರಿಯವಾಗಿರುವ ಯೆಹೋವನ ಆತ್ಮದ ಶಕ್ತಿಶಾಲಿ ಪ್ರಮಾಣವನ್ನು ಕೊಡುತ್ತಾ, ಅದು ತಾಳ್ಮೆಯ, ದೃಢ ಸಂಕಲ್ಪದ, ಮತ್ತು ಯಶಸ್ಸಿನ ರೋಮಾಂಚಕಾರಿ ಕಥೆಯನ್ನು ಹೇಳುತ್ತದೆ.
ನಾಲ್ಕನೆಯ ದಿನದ ಬೆಳಗ್ಗೆ
ಆಗಲೇ ಅದು ಅಧಿವೇಶನದ ಅಂತಿಮ ದಿನವಾಗಿತ್ತು. “ದೈವಿಕ ಬೋಧನೆಯಿಂದ ನಾವಾಗಿಯೇ ಪ್ರಯೋಜನ ಹೊಂದುವುದು” ಎಂಬ ಆ ದಿನದ ಶೀರ್ಷಿಕೆಯು, ಕಾರ್ಯಕ್ರಮಕ್ಕೆ ಉತ್ತಮ ಪರಾಕಾಷ್ಠೆಯನ್ನು ವಾಗ್ದಾನಿಸಿತು. (ಯೆಶಾಯ 48:17, NW) ಬೆಳಗ್ಗೆ ಅಧಿವೇಶನಕ್ಕೆ ಹಾಜರಾದವರ ಗಮನವನ್ನು ಒಂದು ಭಾಷಣಮಾಲೆಯ ಮೂರು ಶಕ್ತಿಶಾಲಿ ಭಾಷಣಗಳ ಮೇಲೆ ಸೆಳೆದು ನಿಲ್ಲಿಸಲಾಯಿತು. “ಯೆರೆಮೀಯನ ದೇವಪ್ರೇರಿತ ಎಚ್ಚರಿಕೆಯ ಸಂದೇಶ—ಗತಕಾಲಕ್ಕೆ ಮತ್ತು ವರ್ತಮಾನ ಕಾಲಕ್ಕೆ” ಎಂಬ ಶೀರ್ಷಿಕೆಯ ಭಾಷಣಮಾಲೆಯು, ಯೆರೆಮೀಯ 23, 24, ಮತ್ತು 25 ನೆಯ ಅಧ್ಯಾಯಗಳ ಪ್ರತಿ ವಚನದ ಚರ್ಚೆಯನ್ನು ಒಳಗೊಂಡಿತ್ತು. ಈ ಅಧ್ಯಾಯಗಳು ಎಂತಹ ಬಲವಾದ ಒಂದು ಸಂದೇಶವನ್ನು ಹೊಂದಿವೆ! ಯೆರೆಮೀಯನ ದಿನದ ಅವಿಶ್ವಾಸಿ ಇಸ್ರಾಯೇಲ್, ಅವನ ಮುಚ್ಚುಮರೆ ಇಲ್ಲದ ದೈವಿಕವಾಗಿ ಪ್ರೇರಿತ ಎಚ್ಚರಿಕೆಗಳಿಂದ ಭಯಪಟ್ಟು ನಡುಗಿದ್ದಿರಬೇಕು. ಆ ಎಚ್ಚರಿಕೆಗಳು ನೆರವೇರಿದಾಗ, ಇಡೀ ಲೋಕವು ಅದಕ್ಕಿಂತ ಹೆಚ್ಚಾಗಿ ಭಯದಿಂದ ನಡುಗಿತು. ವಿಷಯಗಳು ಇಂದು ಭಿನ್ನವಾಗಿವೆಯೊ? ಇಲ್ಲವೇ ಇಲ್ಲ. ದೇವರ ನ್ಯಾಯತೀರ್ಪಿನ ಸಂದೇಶಗಳನ್ನು ಯೆಹೋವನ ಸಾಕ್ಷಿಗಳು ಧೈರ್ಯದಿಂದ ಸಾರುತ್ತಾರೆ. ಕಟ್ಟಕಡೆಗೆ, ವಿಷಯಗಳ ಈ ಇಡೀ ವ್ಯವಸ್ಥೆಯ ಯೆಹೋವನ ನ್ಯಾಯತೀರ್ಪಿನ ಕ್ರಿಯೆಗಳನ್ನು ಎದುರಿಸಲೇ ಬೇಕಾಗುವುದು. ಅದು ಸೈತಾನನ ಲೋಕಕ್ಕೆ ಸಂಪೂರ್ಣ ನಾಶನದ ಅರ್ಥದಲ್ಲಿರುವುದು.
ಮೋಸ ಹೋಗಬೇಡಿರಿ ಅಥವಾ ದೇವರನ್ನು ಕೆಣಕಬೇಡಿರಿ ಎಂಬ ಎರಡನೆಯ ಡ್ರಾಮದೊಂದಿಗೆ ಆದಿತ್ಯವಾರದ ಬೆಳಗ್ಗಿನ ಕಾರ್ಯಕ್ರಮವು ಕೊನೆಗೊಂಡಿತು. ಸುಸ್ಪಷ್ಟವಾಗಿದ ರೀತಿಯಲ್ಲಿ, ಕೀಳ್ಮಟ್ಟದ ವಿಡಿಯೊ ಮತ್ತು ಸಂಗೀತದ ಮೂಲಕ ಮತ್ತು ಜೊತೆ ಕ್ರೈಸ್ತರೊಳಗೆ ವೈಷಮ್ಯದ ಬೀಜಗಳನ್ನು ನೆಡುವ ಪ್ರವೃತ್ತಿಯ ಮೂಲಕ ಪ್ರಭಾವಿತರಾಗುವುದರಿಂದ, ದೈವಿಕ ಬೋಧನೆಯು ನಮ್ಮನ್ನು ಹೇಗೆ ರಕ್ಷಿಸಬಲ್ಲದು ಎಂಬುದನ್ನು ಅದು ತೋರಿಸಿತು. ಡ್ರಾಮದ ಸಮಾಪ್ತಿಯಲ್ಲಿ, ಪಾತ್ರಧಾರಿಗಳಲ್ಲಿ ಒಬ್ಬನ ಈ ಯೋಚನಾ ಪ್ರೇರಕ ಮಾತುಗಳನ್ನು ಅಧ್ಯಕ್ಷನು ನಮೂದಿಸಿದನು: “ಲೋಕದ ಪ್ರಭಾವಕ್ಕೆ ನಾವು ಹೊರತಾಗಿಲ್ಲ. ನಾವು ಪ್ರತಿರೋಧಿಸದಿದ್ದರೆ, ಲೋಕವು ನಮ್ಮ ಆಲೋಚನೆಯನ್ನು ನವಿರಾಗಿ ಭ್ರಷ್ಟಗೊಳಿಸಬಲ್ಲದು. ಮತ್ತು ನಾವು ನಂಬಿಗಸ್ತರಾಗಿ ಉಳಿಯುತ್ತೇವೊ ಇಲ್ಲವೊ ಎಂಬುದು ನಾವು ಏನನ್ನು ಬಿತ್ತುತ್ತಾ ಇದ್ದೇವೊ ಅದರ ಮೇಲೆ ಅವಲಂಬಿಸಿರುತ್ತದೆ.” ಎಷ್ಟು ಸತ್ಯ!
ಅಂತಿಮ ಅಪರಾಹ್ಣ
“ನಮ್ಮ ಕಠಿನ ಸಮಯಗಳಿಗಾಗಿ ಸಹಾಯಕಾರಿ ಬೋಧನೆ” ಎಂಬ ಶೀರ್ಷಿಕೆಯ ಸಾರ್ವಜನಿಕ ಭಾಷಣವನ್ನು ನೀಡಲು ಭಾಷಣಕಾರನು ವೇದಿಕೆಯ ಬಳಿ ಹೋದಂತೆ, ಅಧಿವೇಶನವು ತೀವ್ರವಾಗಿ ಕೊನೆಯನ್ನು ಸಮೀಪಿಸುತ್ತಿತ್ತು. ಸ್ಪಷ್ಟವಾಗಿದ ಹಾಗೂ ತರ್ಕಬದ್ಧವಾದ ರೀತಿಯಲ್ಲಿ, ನಮ್ಮನ್ನು ಇಂದು ಪ್ರಭಾವಿಸುವ ಮುಖ್ಯ ಸಮಸ್ಯೆಗಳನ್ನು ಅವನು ಗುರುತಿಸಿದನು ಮತ್ತು ಉತ್ತಮವಾದ ಜೀವಿತವನ್ನು ಆನಂದಿಸಲು ನಮಗೆ ಸಹಾಯ ಮಾಡಬಲ್ಲ ದೈವಿಕ ಬೋಧನೆಯ ಕೆಲವೊಂದು ಮಾರ್ಗಗಳನ್ನು ಸೂಚಿಸಿದನು. ಶಾಸ್ತ್ರೀಯ ಬೋಧನೆಯನ್ನು ಈಗ ನಾವು ಅನುಸರಿಸುತ್ತಾ ಇದ್ದರೆ, ಯೆಹೋವನ ಹೊಸ ಲೋಕದಲ್ಲಿ ಸದಾಕಾಲ ಅದನ್ನು ಅನುಸರಿಸಲು ನಾವು ಶಕ್ತರಾಗಿರುವೆವು ಎಂದು ಅವನು ಹೇಳಿದನು.
ವಾರದ ಕಾವಲಿನಬುರುಜು ಪಾಠದ ಸಾರಾಂಶದ ತರುವಾಯ, ಅಂತಿಮ ಭಾಷಣದ ಸಮಯವು ಅದಾಗಿತ್ತು. ಭಾಷಣಕಾರನು ನಾಲ್ಕು ದಿನದ ಕಾರ್ಯಕ್ರಮದ ಮುಖ್ಯ ವಿಷಯಗಳನ್ನು ತೀವ್ರವಾಗಿ ಪರಿಗಣಿಸಿದನು ಮತ್ತು ಅಧಿವೇಶನಕ್ಕೆ ಹಾಜರಾದವರಿಗೆ ಹೊಸ ಪ್ರಕಾಶನಗಳ ಕುರಿತು ಜ್ಞಾಪಿಸಿದನು. ಬೈಬಲ್—ನಿಜತ್ವ ಮತ್ತು ಪ್ರವಾದನೆಯ ಒಂದು ಪುಸ್ತಕ (ಇಂಗ್ಲಿಷ್ನಲ್ಲಿ ಲಭ್ಯವಿದೆ) ಎಂಬ ಶ್ರೇಣಿಯಲ್ಲಿ ಎರಡನೆಯ ವಿಡಿಯೊಕ್ಯಾಸೆಟ್, ಬೇಗನ ಬಿಡುಗಡೆ ಹೊಂದುವುದೆಂದು ಕೂಡ ಅವನು ಪ್ರಕಟಿಸಿದನು. ವಾಸ್ತವದಲ್ಲಿ, ಬೈಬಲ್—ಮಾನವಕುಲದ ಅತ್ಯಂತ ಹಳೆಯ ಆಧುನಿಕ ಪುಸ್ತಕ ಎಂಬ ಶೀರ್ಷಿಕೆಯ ಆ ವಿಡಿಯೊಕ್ಯಾಸೆಟ್ ಈಗ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಗಂಭೀರ ಉತ್ಕಟಕಾಲಗಳಿರುವ ಬಾಸ್ನಿಯ ಮತ್ತು ಹೆರ್ಸಗೋವಿನಗಳಂಥ ಸ್ಥಳಗಳಿಂದ ಮನಃಸ್ಪರ್ಶಿಸುವ ವರದಿಗಳನ್ನು ಓದಲಾಯಿತು. ಸಮಾಪ್ತಿಯಲ್ಲಿ, ಭಾಷಣಕಾರನು ಪ್ರಸಂಗಿ 12:13ರ ಮಾತುಗಳನ್ನು ಓದಿದನು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”
ಎಂತಹ ಉತ್ತಮ ಮರುಜ್ಞಾಪನ! ಎಲ್ಲಾ ಮಾನವಕುಲವು ನಮ್ಮ ಮಹಾ ಶಿಕ್ಷಕನಾದ ಯೆಹೋವನನ್ನು ಸ್ತುತಿಸುವ, ಮತ್ತು ಆತನ ದೈವಿಕ ಬೋಧನೆಗೆ ಕಿವಿಗೊಡುವ ದಿನಕ್ಕಾಗಿ ನಾವು ಜೀವಿಸೋಣ.
[ಪುಟ 24,25 ರಲ್ಲಿರುವಚಿತ್ರಗಳು]
ಮಾಸ್ಕೊ ಮತ್ತು ಕೀಯೆವ್ ನಲ್ಲಿ ನಡೆದ “ದೈವಿಕ ಬೋಧನೆ” ಅಧಿವೇಶನಗಳು ಮಹಾ ಆನಂದವನ್ನು ಫಲಿಸಿತು
[ಪುಟ 26,27 ರಲ್ಲಿರುವಚಿತ್ರಗಳು]
1. ದೀಕ್ಷಾಸ್ನಾನ ಪಡೆಯುವ ಮೂಲಕ, ಅನೇಕರು ದೇವರಿಗೆ ತಮ್ಮ ಸಮರ್ಪಣೆಯನ್ನು ಸಂಕೇತವಾಗಿ ನಿರೂಪಿಸಿದರು
2. ಹೊಸದೊಂದು ಪ್ರಕಾಶನವನ್ನು ಪಡೆಯಲು, 100 ವರ್ಷ ಪ್ರಾಯದ ಒಬ್ಬ ಅಧಿವೇಶನಗಾರನು ರೋಮಾಂಚಗೊಂಡನು
3, 4. ಯೋಚನಾ ಪ್ರೇರಕ ಡ್ರಾಮಗಳು ಬಹಳವಾಗಿ ಗಣ್ಯಮಾಡಲ್ಪಟ್ಟವು
5. ಅಧಿವೇಶನದಲ್ಲಿ ಇಂಟರ್ವ್ಯೂ ಮಾಡಲ್ಪಟ್ಟ ಮಿಷನೆರಿಗಳು, ದೈವಿಕ ಬೋಧನೆಯ ಪ್ರಯೋಜನಗಳನ್ನು ಎತ್ತಿತೋರಿಸಿದರು