ವಾಗ್ದಾನ ದೇಶದಿಂದ ದೃಶ್ಯಗಳು
ಗಿಲ್ಯಾದ್—ಧೈರ್ಯಶಾಲಿ ಜನರಿಗಾಗಿ ಪ್ರಾಂತ
ಇಸ್ರಾಯೇಲ್ಯರು ಯೊರ್ದನ್ ಹೊಳೆಯನ್ನು ದಾಟಿ ವಾಗ್ದಾನ ದೇಶದೊಳಗೆ ಸೇರುವ ತುಸು ಮುಂಚಿತವಾಗಿ, ಮೋಶೆಯು ಅವರನ್ನು ಪ್ರೋತ್ಸಾಹಿಸಿದ್ದು: “ನೀವು ಶೂರರಾಗಿ ಧೈರ್ಯದಿಂದಿರ್ರಿ. . . . ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ.”—ಧರ್ಮೋಪದೇಶಕಾಂಡ 31:6.
ರೂಬೇನ್ ಮತ್ತು ಗಾದನ ಕುಲಗಳು ಮತ್ತು ಮನಸ್ಸೆಯ ಕುಲದವರಲ್ಲಿ ಅರ್ಧ, ಮೋಶೆಯ ಪ್ರಬೋಧನೆಯಲ್ಲಿ ಸೇರಿದ್ದರು. ‘ಗಿಲ್ಯಾದ್ ಪ್ರದೇಶವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು’ ಅವರು ಕಂಡಿದ್ದರು, ಆದುದರಿಂದ ಗಿಲ್ಯಾದ್ ಪ್ರಾಂತದಲ್ಲಿ ವಾಸಿಸುವಂತೆ ನೇಮಿಸಲ್ಪಡಬೇಕೆಂದು ಕೇಳಿಕೊಂಡರು.—ಅರಣ್ಯಕಾಂಡ 32:1-40.
ಗಿಲ್ಯಾದ್ ಯೊರ್ದನಿನ ಆಚೇ ಕಡೆಯಲ್ಲಿ, ಅಂದರೆ ಪೂರ್ವ ಕಡೆಯಲ್ಲಿತ್ತು. ಅದು ಮೂಲತಃ ಮೃತ ಸಮುದ್ರದ ಉತ್ತರ ಮೂಲೆಯಿಂದ ಗಲಿಲಾಯ ಸಮುದ್ರದ ವರೆಗಿನ ಇಡೀ ಪೂರ್ವ ಪಾರ್ಶ್ವವಾಗಿತ್ತು. ಈ ಪ್ರದೇಶವು ಯೊರ್ದನ್ ಕಣಿವೆಯಿಂದ ಮೇಲೇರಿ ಸಮೃದ್ಧನೀರಿನ ಹುಲ್ಲುಗಾವಲುಗಳು ಮತ್ತು ದುಂಡಗಿನ ಗುಡ್ಡಗಳಿಗೆ ಚಾಚಿತ್ತು. ಆದುದರಿಂದ ದವಸಧಾನ್ಯಗಳನ್ನು ಬೆಳೆಸಲು ಮತ್ತು ದನಕುರಿಗಳನ್ನು ಮೇಯಿಸಲು ಗಿಲ್ಯಾದ್ ಒಂದು ಉತ್ತಮ ಪ್ರದೇಶವಾಗಿತ್ತು. ಗಿಲ್ಯಾದ್ನ ಕ್ಷೇತ್ರವು ಹೇಗಿತ್ತೆಂಬ ಕಲ್ಪನೆಯನ್ನು ಮೇಲಿನ ಚಿತ್ರವು ನಿಮಗೆ ಕೊಡುತ್ತದೆ. ಆದರೆ ತುಲನಾತ್ಮಕವಾಗಿ ಅಂಥ ಹಿತಕರವಾದ ಕ್ಷೇತ್ರದೊಂದಿಗೆ ಧೈರ್ಯವನ್ನು ಜೋಡಿಸಬೇಕೇಕೆ?
ಗಿಲ್ಯಾದ್ನಲ್ಲಿ ವಾಸಿಸಲಿಕ್ಕೆ ಆಯ್ಕೆಮಾಡಿದ ಕುಲಗಳು ಹೆದರಿಕೆಯಿಂದ ಹಾಗೆ ಮಾಡಿರಲಿಲವ್ಲೆಂಬದು ಸ್ಫುಟ. ವಾಗ್ದಾನ ದೇಶದಲ್ಲಿದ್ದ ಶತ್ರುಗಳ ವಿರುದ್ಧ ಹೋರಾಡುವುದಕ್ಕಾಗಿ ಯೊರ್ದನನ್ನು ದಾಟಲು ಅವರು ಒಪ್ಪಿದ್ದರೆಂಬದನ್ನು ನೆನಪಿಸಿಕೊಳ್ಳಿರಿ. ಮತ್ತು ಗಿಲ್ಯಾದ್ಗೆ ಹಿಂತಿರುಗಿದ ಮೇಲೆ, ಅವರಿಗೆ ಹೆಚ್ಚಿನ ಧೈರ್ಯದ ಅಗತ್ಯವಿತ್ತು. ಏಕೆ? ಒಳ್ಳೇದು, ಅವರು ಗಡಿನಾಡಿನಲಿದ್ದರು, ಆಗ್ನೇಯದಲ್ಲಿ ಅಮ್ಮೋನಿಯರಿಂದ ಮತ್ತು ಉತ್ತರದಲ್ಲಿ ಸಿರಿಯದವರಿಂದ ಆಕ್ರಮಣಕ್ಕೆ ಒಡ್ಡಲ್ಪಟ್ಟಿದ್ದರು. ಮತ್ತು ಅವರು ಆಕ್ರಮಿಸಲ್ಪಟ್ಟರು ಸಹ.—ಯೆಹೋಶುವ 22:9; ನ್ಯಾಯಸ್ಥಾಪಕರು 10:7, 8; 1 ಸಮುವೇಲ 11:1; 2 ಅರಸು 8:28; 9:14; 10:32, 33.
ಆ ಆಕ್ರಮಣಗಳು ಧೈರ್ಯವು ಅಗತ್ಯವಾಗಿದ್ದ ವಿಶಿಷ್ಟ ಸಂದರ್ಭಗಳಾಗಿದ್ದವು. ದೃಷ್ಟಾಂತಕ್ಕೆ, ಗಿಲ್ಯಾದನ್ನು ಅದುಮಿಬಿಡುವಂತೆ ಯೆಹೋವನು ಅಮ್ಮೋನಿಯರನ್ನು ಬಿಟ್ಟ ಮೇಲೆ, ದೇವಜನರು ಪಶ್ಚಾತ್ತಾಪಪಟ್ಟರು ಮತ್ತು ಯಾವನ ತಂದೆಗೆ ಸಹ ಗಿಲ್ಯಾದ್ ಎಂಬ ಹೆಸರಿಡಲ್ಪಟ್ಟಿತ್ತೋ ಆ “ಮಹಾಪರಾಕ್ರಮಿಯಾಗಿದ್ದ” ಪುರುಷನ ನಾಯಕತ್ವಕ್ಕೆ ತಿರುಗಿದರು. ಈ ಪರಾಕ್ರಮಿ ಯಾ ಧೈರ್ಯಶಾಲಿ ಪುರುಷನೇ ಯೆಪ್ತಾಹನಾಗಿದ್ದನು. ಅವನು ಧೈರ್ಯಶಾಲಿಯಾಗಿದ್ದರೂ ಕೂಡ, ದೇವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಕೋರಿದನ್ದೆಂಬದನ್ನು ಪ್ರತಿಬಿಂಬಿಸುವ ಒಂದು ಹರಕೆಗೆ ಅವನು ಪ್ರಖ್ಯಾತನಾಗಿದ್ದಾನೆ. ಪೀಡಿಸುತ್ತಿದ್ದ ಅಮ್ಮೋನಿಯರನ್ನು ಬಗ್ಗಿಸಿಬಿಡಲು ದೇವರು ಅವನನ್ನು ಶಕ್ತನನ್ನಾಗಿ ಮಾಡಿದರೆ, ಅವನನ್ನು ಎದುರುಗೊಳ್ಳುವುದಕ್ಕಾಗಿ ಅವನ ಮನೆಯೊಳಗಿಂದ ಮೊದಲು ಬರುವವನನ್ನು ದೇವರಿಗೆ ‘ಹೋಮವಾಗಿ,’ ಯಾ ಯಜ್ಞವಾಗಿ ಅರ್ಪಿಸಲ್ಪಡಲಾಗುವುದು ಎಂದು ಯೆಪ್ತಾಹನು ಹರಕೆ ಹೊತ್ತನು.a ಅದು ಯೆಪ್ತಾಹನ ಒಂದೇ ಮಗುವಾಗಿದ್ದ, ಅವನ ಮಗಳಾಗಿ ಪರಿಣಮಿಸಿದಳು, ತದನಂತರ, ಅವಳು ದೇವರ ಪವಿತ್ರಾಲಯದಲ್ಲಿ ಸೇವೆಮಾಡಲು ಹೊರಟುಹೋದಳು. ಹೌದು, ಯೆಪ್ತಾಹನು, ಮತ್ತು ಒಂದು ಭಿನ್ನ ರೀತಿಯಲ್ಲಿ ಅವನ ಮಗಳು, ಧೈರ್ಯವನ್ನು ತೋರಿಸಿದರು.—ನ್ಯಾಯಸ್ಥಾಪಕರು 11:1, 4-40.
ಪ್ರಾಯಶಃ ಅಷ್ಟು ಪ್ರಖ್ಯಾತವಾಗಿರದಿರುವ ಧೈರ್ಯದ ಒಂದು ಪ್ರದರ್ಶನವು ಸೌಲನ ಸಮಯದಲ್ಲಿ ಸಂಭವಿಸಿತು. ಆ ದೃಶ್ಯವನ್ನು ಕಲ್ಪಿಸಿಕೊಳ್ಳಲು, ಸೌಲನು ರಾಜನಾದಾಗ ಅಮ್ಮೋನಿಯರು, ಗುಡ್ಡಗಳ ಮಾರ್ಗವಾಗಿ ಯೊರ್ದನಿಗೆ ಹರಿಯುವ ಒಂದು ಹಳ್ಳದ ಮೇಲೆ ನೆಲೆಸಿದ್ದಿರಬಹುದಾದ ನಗರವಾದ ಯಾಬೇಷ್-ಗಿಲ್ಯಾದಿನ ಜನರ ಬಲಗಣ್ಣನ್ನು ಕಿತ್ತುಹಾಕುವ ಬೆದರಿಕೆ ಹಾಕಿದ್ದನ್ನು ನೆನಪಿಗೆ ತನ್ನಿರಿ. ಸೌಲನು ಬೇಗನೆ ಯಾಬೇಷನ್ನು ಬಲಪಡಿಸಲು ಸೈನ್ಯವನ್ನು ಸಿದ್ಧಮಾಡಿದನು. (1 ಸಮುವೇಲ 11:1-11) ಆ ಹಿನ್ನೆಲೆಯನ್ನು ಮನಸ್ಸಿನಲ್ಲಿಟ್ಟವರಾಗಿ, ನಾವು ಸೌಲನ ಆಳಿಕೆಯ ಅಂತ್ಯದ ಸಮಯಕ್ಕೆ ತೆರಳೋಣ ಮತ್ತು ಧೈರ್ಯವು ತೋರಿಸಲ್ಪಟ್ಟ ವಿಧವನ್ನು ನೋಡೋಣ.
ಫಿಲಿಷ್ಟಿಯರೊಂದಿಗೆ ಯುದ್ಧದಲ್ಲಿ ಸೌಲನು ಮತ್ತು ಅವನ ಮೂವರು ಗಂಡು ಮಕ್ಕಳು ಮಡಿದರೆಂಬದು ನಿಮಗೆ ನೆನಪಿರಬಹುದು. ಆ ಶತ್ರುಗಳು ಸೌಲನ ತಲೆಯನ್ನು ಕಡಿದು, ಸೌಲನ ಮತ್ತು ಅವನ ಗಂಡು ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಗೆ ಜಯೋತ್ಸವದಿಂದ ನೇತುಹಾಕಿದರು. (1 ಸಮುವೇಲ 31:1-10; ಬಲಗಡೆಯಲ್ಲಿ, ಬೇತ್ಷೆಯಾನಿನ ಅಗೆದು ಹೊರದೆಗೆದ ದಿಬ್ಬವನ್ನು ನೀವು ನೋಡುತ್ತೀರಿ.) ಈ ವರ್ತಮಾನವು ಯೊರ್ದನಿನ ಆಚೇಕಡೆ ಗಿಲ್ಯಾದಿನ ಗುಡ್ಡಗಳಲ್ಲಿದ್ದ ಯಾಬೇಷಿಗೆ ಮುಟ್ಟಿತು. ಇಸ್ರಾಯೇಲ್ಯ ರಾಜನನ್ನೇ ಸೋಲಿಸ ಶಕ್ತವಾಗುವಷ್ಟು ಬಲಾಢ್ಯವಾದ ಶತ್ರುವಿನ ಎದುರಲ್ಲಿ ಗಿಲ್ಯಾದಿನವರಾದರೂ ಏನು ಮಾಡಾರು?
ಗಿಲ್ಯಾದಿನವರು ತೆಗೆದುಕೊಂಡ ಮಾರ್ಗವನ್ನು ಗಮನಿಸಲು ನಕ್ಷೆಯನ್ನು ನೋಡಿರಿ. “[ಕೂಡಲೆ] ಅವರಲ್ಲಿದ್ದ ಶೂರರೆಲ್ಲರು ಹೊರಟು ರಾತ್ರಿಯೆಲ್ಲಾ ನಡೆದುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಯಿಂದ ಇಳಿಸಿ ಯಾಬೇಷಿಗೆ ತೆಗೆದುಕೊಂಡು ಬಂದು ಅಲ್ಲಿ ಅವುಗಳನ್ನು ಸುಟ್ಟುಬಿಟ್ಟರು.” (1 ಸಮುವೇಲ 31:12) ಹೌದು, ಅವರು ಶತ್ರುವಿನ ಪ್ರಬಲಸ್ಥಾನದೊಳಗೆ ಒಂದು ರಾತ್ರಿಜಾವದ ಧಾಳಿಯನ್ನು ನಡಿಸಿದರು. ಬೈಬಲ್ ಅವರನ್ನು ಪರಾಕ್ರಮಿಗಳು ಯಾ ಧೈರ್ಯಶಾಲಿಗಳೆಂದು ಕರೆಯುವುದೇಕೆಂಬದನ್ನು ನೀವು ತಿಳಿಯಬಲ್ಲಿರಿ.
ತಕ್ಕ ಕಾಲದಲ್ಲಿ, ಹತ್ತು ಕುಲಗಳು ಇಸ್ರಾಯೇಲಿನ ಉತ್ತರ ರಾಜ್ಯವನ್ನು ರೂಪಿಸಲಿಕ್ಕಾಗಿ ಬೇರ್ಪಟ್ಟು ಹೋದರು, ಇದರಲ್ಲಿ ಗಿಲ್ಯಾದ್ ಒಳಗೊಂಡಿತ್ತು. ಸುತ್ತಮುತ್ತಲಿನ ರಾಷ್ಟ್ರಗಳು, ಮೊದಲು ಸಿರಿಯದವರು ಮತ್ತು ಅಶ್ಶೂರ್ಯರು ಯೊರ್ದನಿನ ಪೂರ್ವ ಕಡೆಯ ಆ ಕ್ಷೇತ್ರದ ಭಾಗಗಳನ್ನು ಹಸ್ತಗತ ಮಾಡಲಾರಂಭಿಸಿದರು. ಹೀಗೆ ಹಿಂದಣ ಧೈರ್ಯದ ಉದಾಹರಣೆಗಳ ನಡುವೆಯೂ, ಗಿಲ್ಯಾದಿನ ಜನರು ಒಂದು ಗಡಿನಾಡಿನಲ್ಲಿ ನೆಲೆಸಿದಕ್ಕಾಗಿ ಬೆಲೆಯನ್ನು ತೆತ್ತರು.—1 ಅರಸು 22:1-3; 2 ಅರಸು 15:29.
[ಅಧ್ಯಯನ ಪ್ರಶ್ನೆಗಳು]
a ದಾಖಲೆಯ ಜಾಗರೂಕತೆಯ ವಿಶೇಷ್ಲಣೆಯು ತನ್ನ ಮಗುವಿನ ನರ ಯಜ್ಞವನ್ನು ಯೆಪ್ತಾಹನು ಮಾಡಿದನೆಂಬ ಆರೋಪವನ್ನು ತಪ್ಪೆಂದು ಸಿದ್ಧ ಮಾಡಿಕೊಡುತ್ತದೆ. ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 27-8 ನ್ನು ನೋಡಿರಿ.
[ಪುಟ 8 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 8ರಲ್ಲಿರುವಚಿತ್ರ]
ಗಲಿಲಾಯ ಸಮುದ್ರ
ಮೃತ ಸಮುದ್ರ
ಯೊರ್ದನ್ ನದಿ
ಬೇತ್ಷೆಯಾನ್
ರಾಮೋತ್-ಗಿಲ್ಯಾದ್
ಯಾಬೇಷ್
ಗಿಲ್ಯಾದ್
[ಕೃಪೆ]
Based on a map copyrighted by Pictorial Archive (Near Eastern History) Est. and Survey of Israel.