ಯೆಹೋವನ ಮಾರ್ಗದರ್ಶನವನ್ನು ಸಂತೋಷದಿಂದ ಸ್ವೀಕರಿಸುವುದು
ಯುಲಿಸೀಸ್ ವಿ. ಗ್ಲಾಸ್ ಅವರಿಂದ ಹೇಳಲ್ಪಟ್ಟಂತೆ
ಅದೊಂದು ವಿಶೇಷ ಸಮಾರಂಭವಾಗಿತ್ತು. ಪದವಿ ಪಡೆಯುತ್ತಿದ್ದ ತರಗತಿಯಲ್ಲಿ ಕೇವಲ 127 ಮಂದಿ ವಿದ್ಯಾರ್ಥಿಗಳಿದ್ದರು. ಆದರೆ, ಹಲವಾರು ದೇಶಗಳಿಂದ ಬಂದಿದ್ದ 1,26,387 ಮಂದಿ ಉತ್ಸಾಹಿತ ಸಭಿಕರೂ ಅಲ್ಲಿ ನೆರೆದಿದ್ದರು. ಅದು, ಜುಲೈ 19, 1953ರಂದು ನ್ಯೂಯಾರ್ಕ್ ಸಿಟಿಯ ಯಾಂಕಿ ಕ್ರೀಡಾಂಗಣದಲ್ಲಿ ಜರುಗಿದ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 21ನೆಯ ತರಗತಿಯ ಪದವಿಪ್ರಾಪ್ತಿ ಸಮಾರಂಭವಾಗಿತ್ತು. ಅದು ಏಕೆ ನನ್ನ ಜೀವನದ ಒಂದು ಮಹತ್ವಪೂರ್ಣ ಘಟನೆಯಾಗಿತ್ತು? ಅದನ್ನು ಹೇಳುವ ಮುಂಚೆ ತುಸು ನನ್ನ ಹಿನ್ನೆಲೆಯನ್ನು ತಿಳಿಸುತ್ತೇನೆ.
ನಾನು ಅಮೆರಿಕದ ಇಂಡಿಯಾನದಲ್ಲಿರುವ ವಿನ್ಸೆನ್ಸ್ನಲ್ಲಿ, 1912, ಫೆಬ್ರವರಿ 17ರಂದು ಜನಿಸಿದೆ. ಇದು ಪ್ರಕಟನೆ 12:1-5ರಲ್ಲಿ ವರ್ಣಿಸಲ್ಪಟ್ಟಿರುವ ಮೆಸ್ಸೀಯನ ರಾಜ್ಯದ ಜನನಕ್ಕೆ ಎರಡು ವರ್ಷಗಳ ಮುಂಚೆ ಸಂಭವಿಸಿತು. ಅದರ ಹಿಂದಿನ ವರ್ಷ, ಅಂದರೆ 1913ರಲ್ಲಿ, ನನ್ನ ಹೆತ್ತವರು ಶಾಸ್ತ್ರಗಳಲ್ಲಿ ಅಧ್ಯಯನ (ಇಂಗ್ಲಿಷ್) ಎಂಬ ಸಂಪುಟಗಳೊಂದಿಗೆ ಬೈಬಲಿನ ಅಧ್ಯಯನವನ್ನು ಆರಂಭಿಸಿದ್ದರು. ಪ್ರತಿ ರವಿವಾರ ಬೆಳಗ್ಗೆ, ತಂದೆಯವರು ಆ ಪುಸ್ತಕಗಳಲ್ಲೊಂದರ ವಿಷಯವನ್ನು ನಮಗೆ ಓದಿ ತಿಳಿಸಿದ ನಂತರ ನಾವು ಅದರ ಬಗ್ಗೆ ಮಾತಾಡುತ್ತಿದ್ದೆವು.
ತಾವು ಕಲಿಯುತ್ತಿದ್ದ ವಿಷಯಗಳನ್ನು ತಾಯಿಯವರು, ಮಕ್ಕಳಾದ ನಮ್ಮ ಆಲೋಚನಕ್ರಮಕ್ಕೆ ತಕ್ಕ ಆಕಾರ ಕೊಡಲು ಉಪಯೋಗಿಸಿದರು. ಅವರು ತುಂಬ ಒಳ್ಳೆಯವರೂ, ದಯಾವಂತರೂ, ಸಹಾಯ ಮಾಡಲು ಸದಾ ಸಿದ್ಧರೂ ಆಗಿದ್ದರು. ನಮ್ಮ ಹೆತ್ತವರಿಗೆ ನಾವು ನಾಲ್ಕು ಜನ ಮಕ್ಕಳಿದ್ದೆವು. ಆದರೂ, ತಾಯಿಯವರು ನೆರೆಹೊರೆಯಲ್ಲಿದ್ದ ಮಕ್ಕಳನ್ನೂ ಬಹಳ ಪ್ರೀತಿಸುತ್ತಿದ್ದರು. ಅವರು ನಮ್ಮೊಂದಿಗೆ ಸಮಯ ಕಳೆಯುತ್ತಿದ್ದರು. ನಮಗೆ ಬೈಬಲ್ ಕಥೆಗಳನ್ನು ಹೇಳುವುದರಲ್ಲಿ ಮತ್ತು ನಮ್ಮೊಂದಿಗೆ ಹಾಡುವುದರಲ್ಲಿ ಅವರು ಬಹಳವಾಗಿ ಆನಂದಿಸುತ್ತಿದ್ದರು.
ಶುಶ್ರೂಷೆಯಲ್ಲಿ ಪೂರ್ಣಸಮಯದ ಸೇವೆಸಲ್ಲಿಸುತ್ತಿದ್ದ ಹಲವಾರು ಸಹೋದರರನ್ನು ಸಹ ತಾಯಿಯವರು ಮನೆಗೆ ಆಮಂತ್ರಿಸುತ್ತಿದ್ದರು. ಅವರು ಒಂದೆರಡು ದಿನ ನಮ್ಮ ಮನೆಯಲ್ಲಿ ತಂಗಿ, ಕೂಟಗಳನ್ನು ನಡೆಸಿ, ಭಾಷಣಗಳನ್ನು ಕೊಡುತ್ತಿದ್ದರು. ದೃಷ್ಟಾಂತಗಳನ್ನು ಉಪಯೋಗಿಸುತ್ತಿದ್ದ ಮತ್ತು ನಮಗೆ ಕಥೆಗಳನ್ನು ಹೇಳುತ್ತಿದ್ದ ಸೇವಕರನ್ನು ನಾವು ಬಹಳವಾಗಿ ಇಷ್ಟಪಡುತ್ತಿದ್ದೆವು. ಒಮ್ಮೆ, ಪ್ರಥಮ ಜಾಗತಿಕ ಯುದ್ಧವು ಕೊನೆಗೊಂಡು ಒಂದು ವರ್ಷವಾದ ಬಳಿಕ, ಅಂದರೆ 1919ರಲ್ಲಿ, ಸಂದರ್ಶಿಸುತ್ತಿದ್ದ ಸಹೋದರನು ಮಕ್ಕಳಾದ ನಮ್ಮನ್ನು ಉದ್ದೇಶಿಸಿ ಮಾತಾಡಿದನು. ಅವನು ಅರ್ಪಣೆಯ ವಿಷಯವಾಗಿ, ಅಂದರೆ ಈಗ ನಾವು ಹೆಚ್ಚು ನಿಷ್ಕೃಷ್ಟವಾಗಿ ಸಮರ್ಪಣೆ ಎಂಬುದಾಗಿ ಸೂಚಿಸಿ ಮಾತಾಡುವ ವಿಷಯವನ್ನು ಚರ್ಚಿಸಿ, ಅದು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಿದನು. ತದನಂತರ ಆ ದಿನ ರಾತ್ರಿ, ನಾನು ಮಲಗುವ ಮುಂಚೆ ನನ್ನ ಸ್ವರ್ಗೀಯ ತಂದೆಗೆ ಪ್ರಾರ್ಥಿಸಿ, ಆತನನ್ನು ಸದಾ ಸೇವಿಸುವ ನನ್ನ ಬಯಕೆಯನ್ನು ವ್ಯಕ್ತಪಡಿಸಿದೆ.
ಆದರೆ, 1922ರ ತರುವಾಯ, ಜೀವನದ ಇತರ ಚಿಂತೆಗಳು ಆ ನಿರ್ಧಾರವನ್ನು ಎರಡನೆಯ ಸ್ಥಾನಕ್ಕೆ ತಳ್ಳಿದವು. ನಾವು ಒಂದು ಸ್ಥಳದಿಂದ ಮತ್ತೊಂದಕ್ಕೆ ಸ್ಥಳಾಂತರಿಸಿದ ಕಾರಣ, ಯೆಹೋವನ ಜನರ ಸಭೆಯೊಂದಿಗೆ ಸಹವಾಸಿಸಲು ಸಾಧ್ಯವಾಗಲಿಲ್ಲ. ತಂದೆಯವರು ರೈಲುಮಾರ್ಗಗಳಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಮನೆಯಿಂದ ದೂರ ಇರುತ್ತಿದ್ದರು. ಈ ಕಾರಣ ನಮ್ಮ ಬೈಬಲ್ ಅಧ್ಯಯನವು ನಿಯಮಿತವಾಗಿರಲಿಲ್ಲ. ಮತ್ತು ನಾನು, ವಾಣಿಜ್ಯೋಪಯೋಗಿ ಕಲೆಗಾರನಾಗುವ ಉದ್ದೇಶದಿಂದ ತರಬೇತಿ ಪಡೆಯಲಾರಂಭಿಸಿದೆ, ಹಾಗೂ ಪ್ರಸಿದ್ಧವಾದೊಂದು ವಿಶ್ವವಿದ್ಯಾನಿಲಯವನ್ನು ಸೇರುವ ಯೋಜನೆಗಳನ್ನು ಮಾಡುತ್ತಿದ್ದೆ.
ನನ್ನ ಜೀವಿತದ ಗುರಿಗಳನ್ನು ಸರಿಹೊಂದಿಸುವುದು
ಲೋಕವು 1930ರ ಮಧ್ಯವರ್ಷಗಳಲ್ಲಿ ಮತ್ತೆ ಭೌಗೋಲಿಕ ಯುದ್ಧದ ಕಡೆಗೆ ಸಾಗಲಾರಂಭಿಸಿತು. ಆಗ ನಾವು ಓಹೈಯೊದ ಕ್ಲೀವ್ಲೆಂಡ್ನಲ್ಲಿ ವಾಸಿಸುತ್ತಿದ್ದೆವು. ಅಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಮ್ಮನ್ನು ಸಂದರ್ಶಿಸಿದರು. ನಾವು ಮಕ್ಕಳಾಗಿದ್ದಾಗ ಕಲಿತಿದ್ದ ವಿಷಯಗಳ ಕುರಿತು ಈಗ ಗಂಭೀರವಾಗಿ ಯೋಚಿಸಲಾರಂಭಿಸಿದೆವು. ನಮ್ಮಲ್ಲಿ, ನನ್ನ ಅಣ್ಣನಾದ ರಸಲ್ ವಿಶೇಷವಾಗಿ ಗಂಭೀರಮನಸ್ಕನಾಗಿದ್ದು, ದೀಕ್ಷಾಸ್ನಾನ ಪಡೆದುಕೊಂಡವರಲ್ಲಿ ಪ್ರಥಮನಾದನು. ನಾನು ಅವನಷ್ಟು ಗಂಭೀರ ಸ್ವಭಾವದವನಾಗಿರದಿದ್ದರೂ, ಫೆಬ್ರವರಿ 3, 1936ರಂದು ದೀಕ್ಷಾಸ್ನಾನ ಪಡೆದುಕೊಂಡೆ. ಯೆಹೋವನಿಗೆ ಮಾಡಿದ ಸಮರ್ಪಣೆಯಲ್ಲಿ ಒಳಗೊಂಡಿದ್ದ ವಿಷಯಗಳಿಗಾಗಿ ನನ್ನ ಗಣ್ಯತೆಯು ಹೆಚ್ಚಾದಂತೆ, ನಾನು ಯೆಹೋವನ ಮಾರ್ಗದರ್ಶನವನ್ನು ಸ್ವೀಕರಿಸಲು ಕಲಿತುಕೊಂಡೆ. ಅದೇ ವರ್ಷ, ನನ್ನ ಅಕ್ಕ ಕ್ಯಾತ್ರಿನ್ ಮತ್ತು ನನ್ನ ತಂಗಿ ಗೆರ್ಟ್ರೂಡ್ ಸಹ ದೀಕ್ಷಾಸ್ನಾನವನ್ನು ಪಡೆದುಕೊಂಡರು. ನಾವೆಲ್ಲರೂ ಪಯನೀಯರರೋಪಾದಿ ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದೆವು.
ಇದರರ್ಥ, ನಾವು ಬೇರೆ ವಿಷಯಗಳ ಕುರಿತು ಯೋಚಿಸಲೇ ಇಲ್ಲ ಎಂದಲ್ಲ. ನನ್ನ ಅತ್ತಿಗೆಯವರು, ಆ್ಯನ್ ಎಂಬ ಒಬ್ಬ ಸುಂದರ ಹುಡುಗಿಯ ಕುರಿತು ನನಗೆ ಹೇಳಿದಾಗ, ನಾನು ಲಕ್ಷ್ಯಕೊಟ್ಟು ಕೇಳಿದೆ. ಅವಳು ಸತ್ಯದ ಕುರಿತು ತಿಳಿದುಕೊಂಡ ಸಮಯದಿಂದ ತುಂಬ “ಲವಲವಿಕೆಯಿಂದ ಕೂಡಿದ್ದು” ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಬರಲಿದ್ದಾಳೆಂದು ಅವರು ಹೇಳಿದರು. ಆ ಸಮಯದಲ್ಲಿ ಆ್ಯನ್ ಒಂದು ಕಾನೂನು ಸಂಬಂಧಿತ ಆಫೀಸಿನಲ್ಲಿ ಸೆಕ್ರಿಟರಿಯಾಗಿ ಕೆಲಸಮಾಡುತ್ತಿದ್ದಳು. ಒಂದು ವರ್ಷದೊಳಗೆ ಅವಳು ದೀಕ್ಷಾಸ್ನಾನ ಪಡೆದುಕೊಂಡಳು. ನಾನು ಮದುವೆಯಾಗಲು ನಿಶ್ಚಯಿಸಿರಲಿಲ್ಲ, ಆದರೆ ಆ್ಯನ್ 100 ಪ್ರತಿಶತ ಸತ್ಯದ ಪರವಾಗಿದ್ದಳು ಎಂಬುದು ಸುಸ್ಪಷ್ಟವಾಗಿತ್ತು. ಅವಳು ಪೂರ್ಣವಾಗಿ ಯೆಹೋವನ ಸೇವೆಯಲ್ಲಿ ಒಳಗೂಡಿರಲು ಬಯಸಿದಳು. “ನಾನು ಅದನ್ನು ಮಾಡಬಲ್ಲೆನೊ?” ಎಂಬುದಾಗಿ ಅವಳೆಂದೂ ಕೇಳುತ್ತಿರಲಿಲ್ಲ. ಬದಲಿಗೆ, “ಅದನ್ನು ಮಾಡಬಹುದಾದ ಅತ್ಯುತ್ತಮ ವಿಧಾನವು ಯಾವುದು?” ಎಂದೇ ಕೇಳುತ್ತಿದ್ದಳು. ಮತ್ತು ಅದನ್ನು ಮಾಡಿಮುಗಿಸುವ ಛಲ ಅವಳಲ್ಲಿರುತ್ತಿತ್ತು. ಈ ಸಕಾರಾತ್ಮಕ ನೋಟವು ನನ್ನನ್ನು ಆಕರ್ಷಿಸಿತು. ಅಲ್ಲದೆ, ಅವಳು ತುಂಬ ಸುಂದರಿಯಾಗಿದ್ದಳು, ಈಗಲೂ ಹಾಗೆಯೇ ಇದ್ದಾಳೆ. ಅವಳು ನನ್ನ ಪತ್ನಿಯಾದಳು, ಮತ್ತು ಬೇಗನೆ ಪಯನೀಯರ್ ಸೇವೆಯಲ್ಲಿ ನನ್ನ ಜೊತೆಗಾರ್ತಿಯೂ ಆದಳು.
ಪಯನೀಯರರೋಪಾದಿ ಬೆಲೆಬಾಳುವ ತರಬೇತಿ
ಪಯನೀಯರರೋಪಾದಿ, ಆಹಾರ ಸಾಮಗ್ರಿಗಳು ಕೊಂಚವಾಗಿದ್ದರೂ ಸರಿ ಹೇರಳವಾಗಿದ್ದರೂ ಸರಿ, ಸಂತೃಪ್ತರಾಗಿರುವ ರಹಸ್ಯವನ್ನು ನಾವು ಕಲಿತುಕೊಂಡೆವು. (ಫಿಲಿಪ್ಪಿ 4:11-13) ಒಂದು ದಿನ ಸಂಜೆ ನಮಗೆ ಊಟಕ್ಕೆ ಏನೂ ಇರಲಿಲ್ಲ. ನಮ್ಮಲ್ಲಿ ಐದು ಸೆಂಟುಗಳು ಮಾತ್ರ ಇದ್ದವು. ನಾವೊಂದು ಮಾಂಸದ ಅಂಗಡಿಗೆ ಹೋಗಿ, ಅಲ್ಲಿ ನಾನು “ಐದು ಸೆಂಟುಗಳಿಗೆ ಮಾಂಸದ ಸಾಸಿಜ್ ಕೊಡುವೆಯೊ?” ಎಂದು ಕೇಳಿದೆ. ಅವನು ನಮ್ಮನ್ನೊಮ್ಮೆ ನೋಡಿ, ನಾಲ್ಕು ತುಂಡುಗಳನ್ನು ಕತ್ತರಿಸಿದನು. ಅವುಗಳ ಬೆಲೆ, ಐದು ಸೆಂಟುಗಳಿಗಿಂತಲೂ ಹೆಚ್ಚಾಗಿತ್ತೆಂಬುದರಲ್ಲಿ ಸಂದೇಹವೇ ಇಲ್ಲ. ಆ ದಿನ ಅದು ನಮಗೆ ಒಂದಿಷ್ಟು ಪೋಷಣೆಯನ್ನು ನೀಡಿತು.
ಶುಶ್ರೂಷೆಯಲ್ಲಿ ತೀವ್ರವಾದ ವಿರೋಧವನ್ನು ಎದುರಿಸುವುದು ತುಂಬ ಸಾಮಾನ್ಯವಾದ ಸಂಗತಿಯಾಗಿತ್ತು. ನ್ಯೂಯಾರ್ಕಿನ ಸಿರಕ್ಯೂಸ್ನ ಹತ್ತಿರವಿದ್ದ ಒಂದು ಪಟ್ಟಣದಲ್ಲಿ, ಒಂದು ವಿಶೇಷ ಬಹಿರಂಗ ಕೂಟಕ್ಕೆ ಜನರನ್ನು ಆಮಂತ್ರಿಸಲು, ನಾವು ಪ್ರಕಟನಫಲಕವನ್ನು ಧರಿಸಿಕೊಂಡು, ಬೀದಿಯಲ್ಲಿ ಕರಪತ್ರಗಳನ್ನು ವಿತರಿಸುತ್ತಾ ಇದ್ದೆವು. ಗಟ್ಟಿಮುಟ್ಟಾದ ಇಬ್ಬರು ಪುರುಷರು ನನ್ನನ್ನು ಬಿಗಿಯಾಗಿ ಹಿಡಿದು, ನನ್ನೊಂದಿಗೆ ಒರಟಾಗಿ ವರ್ತಿಸಲಾರಂಭಿಸಿದರು. ಅವರಲ್ಲಿ ಒಬ್ಬನು ಪೊಲಿಸ್ ಅಧಿಕಾರಿಯಾಗಿದ್ದರೂ, ಸಮವಸ್ತ್ರವನ್ನು ಧರಿಸಿಕೊಂಡಿರಲಿಲ್ಲ. ತನ್ನ ಗುರುತಿನ ಬಿಲ್ಲೆಯನ್ನು ತೋರಿಸುವಂತೆ ಅವನಲ್ಲಿ ನಾನು ವಿನಂತಿಸಿಕೊಂಡರೂ ಅವನು ಕಿವಿಗೊಡಲಿಲ್ಲ. ಆಗ ತಾನೇ ಬ್ರೂಕ್ಲಿನ್ ಬೆತೆಲ್ನಿಂದ ಬರುತ್ತಿದ್ದ ಗ್ರ್ಯಾಂಟ್ ಸೂಟರ್ ಅಲ್ಲಿಗೆ ಬಂದು, ವಿಷಯವನ್ನು ಇತ್ಯರ್ಥಮಾಡಲು ಪೊಲಿಸ್ ಸ್ಟೇಷನಿಗೆ ಹೋಗೋಣ ಎಂದು ಹೇಳಿದರು. ತದನಂತರ, ಅವರು ಬ್ರೂಕ್ಲಿನ್ನಲ್ಲಿರುವ ಸೊಸೈಟಿಯ ಆಫೀಸಿಗೆ ಫೋನ್ ಮಾಡಿದರು. ಒಂದು ನಿರ್ಧಾರಕ ಮೊಕದ್ದಮೆಗಾಗಿ ಆಧಾರ ಒದಗಿಸಲು, ಅದೇ ದಿನ ಮತ್ತೆ ಪ್ರಕಟನಫಲಕವನ್ನು ಧರಿಸಿಕೊಂಡು ಕರಪತ್ರಗಳನ್ನು ವಿತರಿಸುವಂತೆ ನಮ್ಮಿಬ್ಬರಿಗೂ ಹೇಳಲಾಯಿತು. ನಿರೀಕ್ಷಿಸಿದಂತೆಯೇ ನಮ್ಮನ್ನು ದಸ್ತಗಿರಿಮಾಡಲಾಯಿತು. ಆದರೆ, ಕಾನೂನುಬಾಹಿರವಾದ ಬಂಧನಕ್ಕಾಗಿ ನಾವು ಪೊಲೀಸರ ಮೇಲೆ ದಾವಾ ಹೂಡಲಿದ್ದೇವೆಂದು ಹೇಳಿದಾಗ, ಅವರು ನಮ್ಮನ್ನು ಬಿಟ್ಟುಬಿಟ್ಟರು.
ಮರುದಿನ, ಪಾದ್ರಿಯ ಪ್ರಚೋದನೆಯ ಮೇರೆಗೆ, ಹದಿವಯಸ್ಕ ರೌಡಿಗಳ ಒಂದು ಗುಂಪು ನಮ್ಮ ಕೂಟದ ಸ್ಥಳವನ್ನು ಆಕ್ರಮಿಸಿತು. ಆ ಸಮಯದಲ್ಲಿ ಅಲ್ಲಿ ಪೊಲೀಸರ ಸುಳಿವೇ ಇರಲಿಲ್ಲ. ಆ ಪುಂಡರು ಹಲಗೆಯ ನೆಲಹಾಸನ್ನು ಬ್ಯಾಟ್ಗಳಿಂದ ಬಲವಾಗಿ ಹೊಡೆಯುತ್ತ, ಕುಳಿತುಕೊಂಡಿದ್ದ ಸಭಿಕರಲ್ಲಿ ಕೆಲವರನ್ನು ಬೆಂಚುಗಳಿಂದ ಬೀಳಿಸಿದರು, ಮತ್ತು ವೇದಿಕೆಯನ್ನೇರಿ ಅಮೆರಿಕದ ಧ್ವಜವನ್ನು ಮೇಲೆತ್ತಿ, “ಇದನ್ನು ವಂದಿಸಿರಿ! ಇದನ್ನು ವಂದಿಸಿರಿ!” ಎಂದು ಕೂಗಿದರು. ತದನಂತರ, “ಬಿಯರ್ ಬ್ಯಾರೆಲ್ ಪೋಲ್ಕ” ಎಂಬ ಜನಪ್ರಿಯ ಅಮೆರಿಕನ್ ಹಾಡನ್ನು ಹಾಡಲಾರಂಭಿಸಿದರು. ಕೂಟಕ್ಕೆ ಸಂಪೂರ್ಣ ಭಂಗವನ್ನು ಉಂಟುಮಾಡಿದರು. ಹೀಗೆ “ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ” ಎಂದು ಯೇಸು ಹೇಳಿದಾಗ, ಆ ಮಾತಿನ ಅರ್ಥದ ಪ್ರತ್ಯಕ್ಷ ಅನುಭವ ನಮಗಾಯಿತು.—ಯೋಹಾನ 15:19.
ಬಹಿರಂಗ ಭಾಷಣವು, ವಾಚ್ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೆ. ಎಫ್. ರದರ್ಫರ್ಡ್ ಅವರು ನೀಡಿದ್ದ ಭಾಷಣದ ರೆಕಾರ್ಡಿಂಗ್ ಆಗಿತ್ತು. ಆ್ಯನ್ ಮತ್ತು ನಾನು ಆ ಪಟ್ಟಣದಲ್ಲಿ ಸ್ವಲ್ಪ ದಿನಗಳ ವರೆಗೆ ಇದ್ದು, ಜನರು ಆ ಭಾಷಣವನ್ನು ತಮ್ಮ ಮನೆಗಳಲ್ಲೇ ಕೇಳುವ ಅವಕಾಶವನ್ನು ನೀಡಿದೆವು. ಕೆಲವರು ಅದಕ್ಕೆ ಒಪ್ಪಿಕೊಂಡರು.
ವಿದೇಶಿ ಸ್ವಯಂಸೇವೆಗಾಗಿ ಮುಂದೆ ಬರುವುದು
ಸಕಾಲದಲ್ಲಿ ಸೇವೆಯ ಅನೇಕ ದ್ವಾರಗಳು ತೆರೆದುಕೊಂಡವು. ನನ್ನ ಅಣ್ಣನಾದ ರಸಲ್ ಮತ್ತು ಅವನ ಹೆಂಡತಿಯಾದ ಡಾರಥಿಯನ್ನು 1943ರಲ್ಲಿ ಗಿಲ್ಯಡ್ ಶಾಲೆಯ ಪ್ರಥಮ ತರಗತಿಗೆ ಆಮಂತ್ರಿಸಲಾಯಿತು. ತರುವಾಯ ಅವರು ಕ್ಯೂಬ ದೇಶಕ್ಕೆ ಮಿಷನೆರಿಗಳಂತೆ ಕಳುಹಿಸಲ್ಪಟ್ಟರು. ನನ್ನ ಅಕ್ಕ ಕ್ಯಾತ್ರಿನ್ ನಾಲ್ಕನೆಯ ತರಗತಿಗೆ ಹೋದಳು. ಅವಳು ಸಹ ಕ್ಯೂಬ ದೇಶಕ್ಕೆ ನೇಮಿಸಲ್ಪಟ್ಟಳು. ಅವಳು ತರುವಾಯ ಡೊಮಿನಿಕನ್ ರಿಪಬ್ಲಿಕ್ಗೆ ಮತ್ತು ಅನಂತರ ಪೋರ್ಟೊರಿಕೊಗೆ ನೇಮಿಸಲ್ಪಟ್ಟಳು. ಆ್ಯನ್ ಮತ್ತು ನನ್ನ ವಿಷಯವೇನು?
ನಾವು ಗಿಲ್ಯಡ್ ಶಾಲೆ ಮತ್ತು ಸೊಸೈಟಿಯು ಮಿಷನೆರಿಗಳನ್ನು ಬೇರೆ ದೇಶಗಳಿಗೆ ಕಳುಹಿಸಲು ಇಷ್ಟಪಡುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡಾಗ, ವಿದೇಶಿ ಸೇವೆಗಾಗಿ ನಮ್ಮನ್ನು ಲಭ್ಯವಾಗಿಸಿಕೊಳ್ಳಲು ಬಯಸಿದೆವು. ಮೊದಲಿಗೆ ನಾವೇ ಮೆಕ್ಸಿಕೊ ದೇಶಕ್ಕೆ ಹೋಗಲು ಇಷ್ಟಪಟ್ಟೆವು. ಆದರೆ ಬಳಿಕ, ಗಿಲ್ಯಡ್ ಶಾಲೆಗೆ ಹಾಜರಾದ ಬಳಿಕ, ಸೊಸೈಟಿಯು ನೇಮಿಸಿದಲ್ಲಿಗೆ ಹೋಗುವುದೇ ಒಳ್ಳೆಯದೆಂದು ನಾವು ತೀರ್ಮಾನಿಸಿದೆವು. ಏಕೆಂದರೆ, ಇದು ಯೆಹೋವನು ಉಪಯೋಗಿಸುತ್ತಿರುವ ಏರ್ಪಾಡೆಂದು ನಾವು ಗ್ರಹಿಸಿದೆವು.
ನಾವು ಗಿಲ್ಯಡ್ ಶಾಲೆಯ ನಾಲ್ಕನೆಯ ತರಗತಿಗೆ ಆಮಂತ್ರಿಸಲ್ಪಟ್ಟೆವು. ಆದರೆ, ಕ್ಲಾಸು ಆರಂಭವಾಗುವ ಮುಂಚೆ, ಬಾಲ್ಯಾವಸ್ಥೆಯ ಪೋಲಿಯೊದ ಕಾರಣ ಆ್ಯನ್ಳಲ್ಲಿದ್ದ ಇತಿಮಿತಿಗಳ ಬಗ್ಗೆ ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಎನ್. ಏಚ್. ನಾರ್ ಅವರಿಗೆ, ಹೆಚ್ಚು ತಿಳಿವಳಿಕೆ ಸಿಕ್ಕಿತು. ಅದರ ಬಗ್ಗೆ ಅವರು ನನ್ನೊಟ್ಟಿಗೆ ಮಾತಾಡಿದರು ಮತ್ತು ಸೇವೆಸಲ್ಲಿಸುವಂತೆ ಮತ್ತೊಂದು ದೇಶಕ್ಕೆ ನಮ್ಮನ್ನು ಕಳುಹಿಸುವುದು ಅಷ್ಟೊಂದು ಉಚಿತವಾಗಿರಲಾರದೆಂದು ತೀರ್ಮಾನಿಸಿದರು.
ಎರಡು ವರ್ಷಗಳ ತರುವಾಯ, ನಾನು ಅಧಿವೇಶನಪೂರ್ವ ಕೆಲಸದಲ್ಲಿ ನಿರತನಾಗಿದ್ದಾಗ ಸಹೋದರ ನಾರ್ ನನ್ನನ್ನು ಪುನಃ ಭೇಟಿಯಾಗಿ, ಗಿಲ್ಯಡ್ ಶಾಲೆಗೆ ಹಾಜರಾಗುವ ವಿಷಯದಲ್ಲಿ ನಾವು ಇನ್ನೂ ಆಸಕ್ತರಾಗಿಯೇ ಇದ್ದೇವೊ ಎಂದು ಕೇಳಿದರು. ನಾವು ಗಿಲ್ಯಡ್ಗೆ ಹೋದರೂ ವಿದೇಶಿ ನೇಮಕಕ್ಕೆ ಹೋಗುವುದಿಲ್ಲವೆಂದು, ಮತ್ತು ತನ್ನ ಮನಸ್ಸಿನಲ್ಲಿ ನಮಗಾಗಿ ಇನ್ನೇನೊ ಇದೆಯೆಂದು ಅವರು ಹೇಳಿದರು. ಹೀಗೆ, ಫೆಬ್ರವರಿ 26, 1947ರಂದು ಒಂಬತ್ತನೆಯ ತರಗತಿಯ ದಾಖಲಾತಿ ನಡೆಯುತ್ತಿದ್ದಾಗ, ನಾವೂ ಅದರಲ್ಲಿದ್ದೆವು.
ಗಿಲ್ಯಡ್ನಲ್ಲಿ ಕಳೆದ ಆ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ಆ ತರಬೇತಿಯು ಆತ್ಮಿಕವಾಗಿ ಬಹಳ ಸಮೃದ್ಧವಾಗಿತ್ತು. ಅಲ್ಲಿ ಬೆಳೆಸಿದ ಮಿತ್ರತ್ವಗಳು ಜೀವನಪರ್ಯಂತ ಉಳಿದವು. ಆದರೆ ಶಾಲೆಯೊಂದಿಗಿನ ನನ್ನ ಸಂಬಂಧವು ಅದಕ್ಕಿಂತಲೂ ಹೆಚ್ಚು ವ್ಯಾಪಕವಾಗಿತ್ತು.
ವಾಷಿಂಗ್ಟನ್ ಮತ್ತು ಗಿಲ್ಯಡ್ನ ಮಧ್ಯೆ
ಗಿಲ್ಯಡ್ ಶಾಲೆ ಇನ್ನೂ ಹೊಸದಾಗಿಯೇ ಇದ್ದ ಕಾರಣ, ಅಮೆರಿಕದ ಸರಕಾರಕ್ಕೆ ಈ ಶಾಲೆಯ ಉದ್ದೇಶಗಳು ಅಷ್ಟೇನೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದುದರಿಂದ ಅನೇಕ ಪ್ರಶ್ನೆಗಳು ಎಬ್ಬಿಸಲ್ಪಟ್ಟಿದ್ದವು. ತನ್ನ ಒಬ್ಬ ಪ್ರತಿನಿಧಿ ವಾಷಿಂಗ್ಟನ್ ಡಿ. ಸಿ.ಯಲ್ಲಿರಬೇಕೆಂದು ಸೊಸೈಟಿ ಬಯಸಿತು. ಗಿಲ್ಯಡ್ನಿಂದ ಪದವಿ ಪಡೆದುಕೊಂಡ ಮೇಲೆ ನಮ್ಮನ್ನು ಕೆಲವು ತಿಂಗಳುಗಳಿಗಾಗಿ ಅಲ್ಲಿಗೆ ಕಳುಹಿಸಲಾಯಿತು. ಬೇರೆ ದೇಶಗಳಿಂದ ಗಿಲ್ಯಡ್ಗೆ ಬರುವಂತೆ ಆಮಂತ್ರಿಸಲ್ಪಟ್ಟವರಿಗಾಗಿ ವೀಸಾಗಳನ್ನು ಪಡೆಯುವುದರಲ್ಲಿ ಮತ್ತು ಪದವೀಧರರು ಮಿಷನೆರಿ ಸೇವೆಗಾಗಿ ಹೊರದೇಶಗಳಿಗೆ ಹೋಗಲು ಬೇಕಾದ ಕಾನೂನು ಸಂಬಂಧಿತ ದಾಖಲೆಗಳನ್ನು ದೊರಕಿಸಿಕೊಡುವ ಕೆಲಸದಲ್ಲಿ ನಾನು ಸಹಾಯಮಾಡಬೇಕಾಗಿತ್ತು. ಕೆಲವು ಅಧಿಕಾರಿಗಳು ನ್ಯಾಯವಂತರೂ, ಸಹಾಯಮಾಡುವ ಮನೋಭಾವದವರೂ ಆಗಿದ್ದರು. ಇತರರಲ್ಲಿ ಸಾಕ್ಷಿವಿರೋಧಿ ಭಾವನೆಗಳು ಪ್ರಬಲವಾಗಿದ್ದವು. ಬಲವಾದ ರಾಜಕೀಯ ನೋಟಗಳಿದ್ದ ಕೆಲವರು, ನಮಗೆ ಸಮಾಜ ವಿರೋಧಿ ಶಕ್ತಿಗಳೊಂದಿಗೆ ಸಂಬಂಧವಿದೆಯೆಂದು ಪ್ರತಿಪಾದಿಸಿದರು.
ನಾನು ಒಬ್ಬ ವ್ಯಕ್ತಿಯ ಆಫೀಸಿಗೆ ಹೋಗಿದ್ದಾಗ, ನಾವು ಧ್ವಜವಂದನೆ ಮಾಡದಿರುವ ಕಾರಣ, ಇಲ್ಲವೆ ಯುದ್ಧಕ್ಕೆ ಹೋಗದಿರುವ ಕಾರಣ ಅವನು ನಮ್ಮನ್ನು ಬಹಳ ಟೀಕಿಸಿದನು. ಅವನು ಸ್ವಲ್ಪ ಸಮಯ ಕೂಗಾಡಿದ ನಂತರ ನಾನು ಕೊನೆಗೆ ಹೇಳಿದ್ದು: “ಯೆಹೋವನ ಸಾಕ್ಷಿಗಳು ಲೋಕದಲ್ಲಿರುವ ಯಾರೊಂದಿಗೂ ಯುದ್ಧಮಾಡುವುದಿಲ್ಲ ಎಂಬುದು ನಿಮಗೆ ತಿಳಿದಿರಬೇಕೆಂದು ನಾನು ಬಯಸುತ್ತೇನೆ, ಮತ್ತು ಅದು ನಿಮಗೆ ತಿಳಿದಿದೆ. ನಾವು ಲೋಕದ ವಿಷಯಗಳಲ್ಲಿ ತಲೆಹಾಕುವುದಿಲ್ಲ. ನಾವು ಅವರ ಯುದ್ಧಗಳಲ್ಲಿ, ಅವರ ರಾಜಕೀಯದಲ್ಲಿ ಕೈಹಾಕುವುದಿಲ್ಲ. ನಾವು ಸಂಪೂರ್ಣವಾಗಿ ತಟಸ್ಥರು. ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ನಾವು ಈಗಗಾಲೇ ಜಯಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಏಕತೆ ಇದೆ. . . . ಈಗ ನಾವು ಏನು ಮಾಡಬೇಕೆಂದು ನೀವು ಹೇಳಬಯಸುತ್ತೀರಿ? ನಮ್ಮ ರೀತಿನೀತಿಗಳನ್ನು ಬಿಟ್ಟುಬಿಟ್ಟು, ನಿಮ್ಮನ್ನು ಅನುಸರಿಸಬೇಕೆಂದು ಹೇಳುತ್ತಿದ್ದೀರೋ?” ಅದರ ನಂತರ ಅವನಿಗೆ ಮಾತೇ ಹೊರಡಲಿಲ್ಲ.
ಸರಕಾರಿ ಆಫೀಸುಗಳಲ್ಲಿ ಮಾಡಬೇಕಾದ ಕೆಲಸಕ್ಕಾಗಿ ವಾರದಲ್ಲಿ ಎರಡು ದಿನಗಳನ್ನು ನಿಗದಿಪಡಿಸಲಾಗಿತ್ತು. ಅದಲ್ಲದೆ, ನಾವು ವಿಶೇಷ ಪಯನೀಯರರೋಪಾದಿ ಸೇವೆಸಲ್ಲಿಸುತ್ತಿದ್ದೆವು. ಆ ಸಮಯದಲ್ಲಿ, ನಾವು ಪ್ರತಿ ತಿಂಗಳು ಕ್ಷೇತ್ರ ಸೇವೆಯಲ್ಲಿ 175 ತಾಸುಗಳನ್ನು ವರದಿಸಬೇಕಿತ್ತು. (ತದನಂತರ ಅದು 140 ತಾಸುಗಳಿಗೆ ಬದಲಾಯಿತು) ಈ ಕಾರಣ, ನಾವು ಅನೇಕ ವೇಳೆ ಸಂಜೆ ತುಂಬ ಹೊತ್ತಿನ ವರೆಗೆ ಸೇವೆಮಾಡುತ್ತಿದ್ದೆವು. ನಾವು ಅದನ್ನು ಬಹಳವಾಗಿ ಆನಂದಿಸಿದೆವು. ನಾವು ಹಲವಾರು ಒಳ್ಳೆಯ ಅಧ್ಯಯನಗಳನ್ನು ಇಡೀ ಕುಟುಂಬಗಳೊಂದಿಗೆ ನಡೆಸಿದೆವು, ಮತ್ತು ಅವರು ಉತ್ತಮ ಪ್ರಗತಿಯನ್ನು ಮಾಡಿದರು. ನಮಗೆ ಮಕ್ಕಳು ಬೇಡವೆಂದು ಆ್ಯನ್ ಮತ್ತು ನಾನು ನಿರ್ಧರಿಸಿದ್ದೆವಾದರೂ, ಆತ್ಮಿಕವಾಗಿ ಹೇಳುವುದಾದರೆ, ನಮಗೆ ಮಕ್ಕಳು ಮಾತ್ರವಲ್ಲ, ಮೊಮ್ಮಕ್ಕಳೂ ಮರಿಮಕ್ಕಳೂ ಇದ್ದಾರೆ. ಅವರು ನಮಗೆ ಎಷ್ಟೊಂದು ಆನಂದವನ್ನು ತರುವವರಾಗಿದ್ದಾರೆ!
ಇಸವಿ 1948ರ ಕೊನೆಯ ಭಾಗದಲ್ಲಿ, ನನಗೆ ಮತ್ತೊಂದು ನೇಮಕವು ಸಿಕ್ಕಿತು. ಗಿಲ್ಯಡ್ ಶಾಲೆಯ ರಿಜಿಸ್ಟ್ರಾರ್ ಮತ್ತು ಶಿಕ್ಷಕರಲ್ಲಿ ಒಬ್ಬರಾದ ಸಹೋದರ ಶ್ರೋಡರ್, ಬೇರೊಂದು ಪ್ರಮುಖ ಕೆಲಸದಲ್ಲಿ ಕಾರ್ಯಮಗ್ನರಾಗಿ ಇರಲಿದ್ದ ಕಾರಣ, ಅಗತ್ಯವಿದ್ದಾಗ ಗಿಲ್ಯಡ್ ತರಗತಿಗಳಿಗೆ ಕಲಿಸುವಂತೆ ನನ್ನನ್ನು ಸಹೋದರ ನಾರ್ ಕೇಳಿಕೊಂಡರು. ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ನಾನು ಆ್ಯನ್ಳೊಂದಿಗೆ ಡಿಸೆಂಬರ್ 18ರಂದು ನ್ಯೂಯಾರ್ಕಿನ ಸೌತ್ ಲ್ಯಾನ್ಸಿಂಗ್ನಲ್ಲಿರುವ ಗಿಲ್ಯಡ್ಗೆ ಆಗಮಿಸಿದೆ. ಆರಂಭದಲ್ಲಿ ನಾವು ಕೆಲವು ವಾರಗಳು ಮಾತ್ರ ಗಿಲ್ಯಡ್ನಲ್ಲಿ ತಂಗಿ, ತದನಂತರ ವಾಷಿಂಗ್ಟನ್ಗೆ ತೆರಳುತ್ತಿದ್ದೆವು. ಆದರೆ ಕಟ್ಟಕಡೆಗೆ, ನಾನು ವಾಷಿಂಗ್ಟನ್ನಲ್ಲಿ ಇರುವುದಕ್ಕಿಂತಲೂ ಗಿಲ್ಯಡ್ನಲ್ಲೇ ಹೆಚ್ಚಾಗಿ ತಂಗುತ್ತಿದ್ದೆ.
ಈ ಸಮಯಾವಧಿಯಲ್ಲೇ, ನಾನು ಈ ಮೊದಲು ಉಲ್ಲೇಖಿಸಿದಂತೆ, ನ್ಯೂಯಾರ್ಕಿನ ಯಾಂಕಿ ಕ್ರೀಡಾಂಗಣದಲ್ಲಿ ಗಿಲ್ಯಡ್ನ 21ನೆಯ ತರಗತಿಯ ಪದವಿಪ್ರಾಪ್ತಿ ಸಮಾರಂಭವು ನಡೆಯಿತು. ನಾನು ಶಿಕ್ಷಕರಲ್ಲಿ ಒಬ್ಬನಾಗಿದ್ದ ಕಾರಣ, ಪದವಿಪ್ರಾಪ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುಯೋಗವನ್ನು ಪಡೆದಿದ್ದೆನು.
ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಸಲ್ಲಿಸುವುದು
ಇಸವಿ 1955, ಫೆಬ್ರವರಿ 12ರಂದು, ನಾವು ಮತ್ತೊಂದು ಸೇವಾ ನೇಮಕವನ್ನು ಆರಂಭಿಸಿದೆವು. ನಾವು ಯೆಹೋವನ ದೃಶ್ಯ ಸಂಸ್ಥೆಯ ಜಾಗತಿಕ ಮುಖ್ಯಕಾರ್ಯಾಲಯಗಳ ಬೆತೆಲ್ ಕುಟುಂಬದ ಸದಸ್ಯರಾದೆವು. ಇದು ನಮ್ಮಿಂದ ಏನನ್ನು ಕೇಳಿಕೊಳ್ಳಲಿತ್ತು? ನೇಮಿಸಲ್ಪಟ್ಟ ಕೆಲಸವನ್ನು ಮನಃಪೂರ್ವಕವಾಗಿ ಮಾಡುವುದನ್ನು ಮತ್ತು ಇತರರೊಂದಿಗೆ ಸಹಕರಿಸಬೇಕಾದ ಯೋಜನೆಗಳಲ್ಲಿ ಭಾಗವಹಿಸುವುದನ್ನು ಇದು ಮೂಲಭೂತವಾಗಿ ಅವಶ್ಯಪಡಿಸಿತು. ಇದನ್ನು ನಾವು ಈ ಮೊದಲು ಮಾಡಿದ್ದೇವಾದರೂ, ಈಗ ಒಂದು ದೊಡ್ಡ ಗುಂಪಿನ, ಅಂದರೆ ಮುಖ್ಯಕಾರ್ಯಾಲಯದಲ್ಲಿ ಇರುವ ಬೆತೆಲ್ ಕುಟುಂಬದ ಭಾಗವಾಗಿರಲಿದ್ದೆವು. ಯೆಹೋವನ ಮಾರ್ಗದರ್ಶನದ ಪುರಾವೆಯಾಗಿ ನಾವು ಈ ಹೊಸ ನೇಮಕವನ್ನು ಸಂತೋಷದಿಂದ ಸ್ವೀಕರಿಸಿದೆವು.
ನನ್ನ ಕೆಲಸದ ಹೆಚ್ಚಿನ ಭಾಗವು ವಾರ್ತಾಮಾಧ್ಯಮಕ್ಕೆ ಸಂಬಂಧಿಸಿದ ಕೆಲಸವಾಗಿತ್ತು. ಈ ವಾರ್ತಾಮಾಧ್ಯಮವು ಭಾವೋದ್ರೇಕಕಾರಿ ಕಥೆಗಳನ್ನು ಬಯಸಿದ ಕಾರಣ, ಮತ್ತು ಪೂರ್ವಾಗ್ರಹಪೀಡಿತ ಮೂಲಗಳಿಂದ ಅದು ಮಾಹಿತಿಯನ್ನು ಪಡೆಯುತ್ತಿದ್ದ ಕಾರಣ, ಯೆಹೋವನ ಸಾಕ್ಷಿಗಳ ಬಗ್ಗೆ ಕೆಲವು ಆಕ್ಷೇಪಣೀಯ ವಿಷಯಗಳನ್ನು ಬರೆದಿತ್ತು. ಈ ಸನ್ನಿವೇಶವನ್ನು ಸುಧಾರಿಸಲು ನಾವು ಬಯಸಿದೆವು.
ನಮಗೆಲ್ಲರಿಗೂ ಸಾಕಷ್ಟು ಕೆಲಸವಿತ್ತೆಂಬುದನ್ನು ಖಚಿತಪಡಿಸಿಕೊಳ್ಳಲು ಸಹೋದರ ನಾರ್ ಬಯಸಿದ್ದರಿಂದ, ನಮಗೆ ಬೇರೆ ನೇಮಕಗಳೂ ಕೊಡಲ್ಪಟ್ಟವು. ಈ ನೇಮಕಗಳಲ್ಲಿ ಕೆಲವು, ನಾನು ವಾಣಿಜ್ಯೋಪಯೋಗಿ ಕಲೆಗಾರನಾಗಿ ಈಗಾಗಲೇ ವಿಕಸಿಸಿಕೊಂಡಿದ್ದ ಕೌಶಲಗಳನ್ನು ಉಪಯೋಗಿಸಿಕೊಂಡವು. ಇತರ ನೇಮಕಗಳು ಸೊಸೈಟಿಯ ರೇಡಿಯೊ ಕೇಂದ್ರವಾದ ಡಬ್ಲ್ಯೂಬಿಬಿಆರ್ ಅನ್ನು ಒಳಗೊಂಡವು. ಸೊಸೈಟಿಯು ಸಿದ್ಧಗೊಳಿಸಿದ್ದ ಚಲನಚಿತ್ರಗಳ ಸಂಬಂಧದಲ್ಲಿಯೂ ಕೆಲಸವಿತ್ತು. ದೇವಪ್ರಭುತ್ವ ಇತಿಹಾಸವು ಗಿಲ್ಯಡ್ ಪಾಠಕ್ರಮದ ಒಂದು ಭಾಗವಾಗಿದ್ದರೂ, ಆಧುನಿಕ ದಿನದ ದೇವಪ್ರಭುತ್ವ ಸಂಸ್ಥೆಯ ಇತಿಹಾಸದ ವಿವರಗಳನ್ನು ಯೆಹೋವನ ಜನರಲ್ಲಿ ಹೆಚ್ಚಿನವರಿಗೆ ತಿಳಿಯಪಡಿಸಲು ಮತ್ತು ಸಾರ್ವಜನಿಕರಿಗೂ ಆ ಮಾಹಿತಿಯನ್ನು ಲಭ್ಯಗೊಳಿಸಲು ಹಲವಾರು ಯೋಜನೆಗಳು ಕೈಗೊಳ್ಳಲ್ಪಟ್ಟವು. ಗಿಲ್ಯಡ್ ತರಬೇತಿಯ ಮತ್ತೊಂದು ಅಂಶವು ಬಹಿರಂಗ ಭಾಷಣದ ವಿಷಯವಾಗಿತ್ತು. ಮತ್ತು ಬಹಿರಂಗ ಭಾಷಣದ ಮೂಲಭೂತ ವಿಷಯಗಳನ್ನು ಸಭೆಗಳಲ್ಲಿರುವ ಸಹೋದರರಿಗೆ ಲಭ್ಯಗೊಳಿಸಲಿಕ್ಕಾಗಿ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿತ್ತು. ಆದುದರಿಂದ ಮಾಡಲು ನನಗೆ ಸಾಕಷ್ಟು ಕೆಲಸವಿತ್ತು.
ಕ್ರಮಬದ್ಧವಾಗಿ ಗಿಲ್ಯಡ್ ನೇಮಕದಲ್ಲಿ
ನಿಕಟ ಭವಿಷ್ಯದಲ್ಲಿ ಸಂಚರಣ ಮೇಲ್ವಿಚಾರಕರ ಹಾಗೂ ಬ್ರಾಂಚ್ ಸಿಬ್ಬಂದಿಗಳ ತರಬೇತಿಯು ನಡೆಯಲಿದ್ದ ಕಾರಣ, 1961ರಲ್ಲಿ ಗಿಲ್ಯಡ್ ಶಾಲೆಯನ್ನು ಬ್ರೂಕ್ಲಿನ್ಗೆ ಸ್ಥಳಾಂತರಿಸಲಾಯಿತು. ಅಲ್ಲಿಯೇ ವಾಚ್ ಟವರ್ ಸೊಸೈಟಿಯ ಪ್ರಧಾನ ಆಫೀಸುಗಳಿವೆ. ನಾನು ಪುನಃ ತರಗತಿಯನ್ನು, ಒಬ್ಬ ಬದಲಿ ಶಿಕ್ಷಕನಾಗಿಯಲ್ಲ ಬದಲಿಗೆ, ಅದರ ಖಾಯಂ ಸದಸ್ಯನಾಗಿ ಸೇರಿಕೊಂಡೆ. ಇದು ಎಂತಹ ಒಂದು ಸುಯೋಗ! ಗಿಲ್ಯಡ್ ಶಾಲೆಯು ಯೆಹೋವನಿಂದ ಬಂದ ಒಂದು ಕೊಡುಗೆಯೆಂದು ನಾನು ದೃಢವಾಗಿ ನಂಬುತ್ತೇನೆ. ಮತ್ತು ಈ ಕೊಡುಗೆಯು ಆತನ ಇಡೀ ದೃಶ್ಯ ಸಂಸ್ಥೆಗೆ ಪ್ರಯೋಜನವನ್ನು ತಂದಿದೆ.
ಮಾಜಿ ಗಿಲ್ಯಡ್ ವಿದ್ಯಾರ್ಥಿಗಳು ಅನುಭವಿಸದಿದ್ದ ಕೆಲವೊಂದು ವಿಷಯಗಳನ್ನು ಬ್ರೂಕ್ಲಿನ್ನಲ್ಲಿದ್ದ ಗಿಲ್ಯಡ್ ವಿದ್ಯಾರ್ಥಿಗಳು ಅನುಭವಿಸಿದರು. ಅವರು ಅನೇಕ ಅತಿಥಿ ಉಪನ್ಯಾಸಕರ ಬೋಧನೆಯನ್ನು, ಆಡಳಿತ ಮಂಡಳಿಯೊಂದಿಗೆ ನಿಕಟ ಸಹವಾಸವನ್ನು ಮತ್ತು ಮುಖ್ಯಕಾರ್ಯಲಯದ ಬೆತೆಲ್ ಕುಟುಂಬದೊಂದಿಗೆ ವ್ಯಾಪಕವಾದ ಸಾಹಚರ್ಯವನ್ನೂ ಅನುಭವಿಸಿದರು. ವಿದ್ಯಾರ್ಥಿಗಳು ಆಫೀಸು ಕಾರ್ಯವಿಧಾನಗಳಲ್ಲಿ, ಬೆತೆಲ್ ಗೃಹ ಕಾರ್ಯಾಚರಣೆಗಳಲ್ಲಿ, ಮತ್ತು ಫ್ಯಾಕ್ಟರಿ ಕೆಲಸದ ಹಲವಾರು ವಿಭಾಗಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳಲೂ ಶಕ್ತರಾಗಿದ್ದರು.
ವರ್ಷಗಳು ಕಳೆದಂತೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂಖ್ಯೆಯಲ್ಲಿ ಬದಲಾವಣೆ ಉಂಟಾಯಿತು. ಶಾಲೆಯ ಸ್ಥಾನವೂ ಹಲವಾರು ಬಾರಿ ಬದಲಾಯಿತು. ಈಗ ಅದು ನ್ಯೂಯಾರ್ಕಿನಲ್ಲಿರುವ ಪ್ಯಾಟರ್ಸನ್ನ ಸುಂದರವಾದ ಪರಿಸರದ ಮಧ್ಯೆ ನೆಲೆಗೊಂಡಿದೆ.
ವಿದ್ಯಾರ್ಥಿಗಳೊಂದಿಗೆ ಕೆಲಸಮಾಡುವುದು
ಈ ತರಗತಿಗಳಿಗೆ ಕಲಿಸುವುದು ಎಷ್ಟೊಂದು ಆನಂದದಾಯಕವಾಗಿತ್ತು! ಈ ಯುವ ಜನರು ಹಳೆಯ ವ್ಯವಸ್ಥೆಯ ಕೆಲಸಗಳಲ್ಲಿ ಆಸಕ್ತರಾಗಿರುವುದಿಲ್ಲ. ಅವರು ತಮ್ಮ ಕುಟುಂಬವನ್ನು, ಮಿತ್ರರನ್ನು, ಮನೆಯನ್ನು, ತಮ್ಮ ಭಾಷೆಯನ್ನಾಡುವ ಜನರನ್ನು ಬಿಟ್ಟುಬರುತ್ತಾರೆ. ಹವಾಮಾನ ಮತ್ತು ಆಹಾರವನ್ನು ಸೇರಿಸಿ, ಎಲ್ಲವೂ ಭಿನ್ನವಾಗಿರಲಿದೆ. ತಾವು ಯಾವ ದೇಶಕ್ಕೆ ಹೋಗಲಿದ್ದೇವೆಂದು ತಮಗೆ ಗೊತ್ತಿರದಿದ್ದರೂ, ಅವರ ಗುರಿಯು ಮಿಷನೆರಿಗಳಾಗಬೇಕೆಂದಿದೆ. ಆ ರೀತಿಯ ಜನರಿಗೆ ಪ್ರಚೋದನೆ ನೀಡಬೇಕೆಂದಿಲ್ಲ.
ನಾನು ತರಗತಿಯನ್ನು ಪ್ರವೇಶಿಸಿದಾಗ, ವಿದ್ಯಾರ್ಥಿಗಳು ನಿರಾತಂಕವಾಗಿ ಇರಬೇಕೆಂಬುದು ಯಾವಾಗಲೂ ನನ್ನ ಗುರಿಯಾಗಿರುತ್ತಿತ್ತು. ಯಾವ ವ್ಯಕ್ತಿಯೂ ಒತ್ತಡದಲ್ಲಿರುವಾಗ ಮತ್ತು ಚಿಂತಿತನಾಗಿರುವಾಗ ಸರಿಯಾಗಿ ಕಲಿಯಲು ಸಾಧ್ಯವಿಲ್ಲ. ನಾನು ಶಿಕ್ಷಕನಾಗಿದ್ದರೂ, ವಿದ್ಯಾರ್ಥಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಸಾಧ್ಯವಿತ್ತು. ಏಕೆಂದರೆ, ನಾನೂ ಒಮ್ಮೆ ವಿದ್ಯಾರ್ಥಿಯಾಗಿದ್ದೆ. ಅವರು ಗಿಲ್ಯಡ್ನಲ್ಲಿ ಕಷ್ಟಪಟ್ಟು ಅಭ್ಯಾಸಿಸಿ, ಬಹಳಷ್ಟು ವಿಷಯಗಳನ್ನು ಕಲಿತುಕೊಂಡರು. ಹಾಗಿದ್ದರೂ, ಗಿಲ್ಯಡ್ನಲ್ಲಿ ಅವರು ಕಳೆಯುವ ಸಮಯವನ್ನು ಪೂರ್ತಿಯಾಗಿ ಅನುಭವಿಸಬೇಕೆಂದು ನಾನು ಬಯಸಿದೆ.
ಅವರು ತಮ್ಮ ನೇಮಕಗಳಿಗೆ ಹೋದಾಗ, ನಿರ್ದಿಷ್ಟವಾದ ವಿಷಯಗಳು ಇರುವಲ್ಲಿ ಮಾತ್ರ ಅವರು ಸಫಲರಾಗಬಹುದಿತ್ತು. ಅವರಿಗೆ ಬಲವಾದ ನಂಬಿಕೆಯ ಮತ್ತು ಬಹಳಷ್ಟು ದೀನತೆಯ ಅಗತ್ಯವಿತ್ತು. ಜನರೊಂದಿಗೆ ಹೊಂದಿಕೊಂಡು ಹೋಗಲು, ಸನ್ನಿವೇಶಗಳನ್ನು ಎದುರಿಸಲು, ಧಾರಾಳವಾಗಿ ಕ್ಷಮಿಸಲು ಅವರು ಕಲಿತುಕೊಳ್ಳಬೇಕಾಗಿತ್ತು. ಅವರು ಆತ್ಮದ ಫಲಗಳನ್ನು ಬೆಳೆಸಿಕೊಳ್ಳುತ್ತಾ ಇರಬೇಕಾಗಿತ್ತು. ಅವರು ಜನರನ್ನೂ ತಮ್ಮ ಕೆಲಸವನ್ನೂ ಪ್ರೀತಿಸಬೇಕಾಗಿತ್ತು. ಈ ವಿಷಯಗಳನ್ನು ನಾನು ಗಿಲ್ಯಡ್ನ ವಿದ್ಯಾರ್ಥಿಗಳಿಗೆ ಒತ್ತಿಹೇಳುತ್ತಿದ್ದೆ.
ನಾನು ಎಷ್ಟು ಮಂದಿ ವಿದ್ಯಾರ್ಥಿಗಳಿಗೆ ಕಲಿಸಿದ್ದೇನೆಂಬುದು ನನಗೆ ನೆನಪಿಲ್ಲ. ಆದರೆ, ಅವರ ಬಗ್ಗೆ ನನಗಿರುವ ಭಾವನೆಯ ಅರಿವು ಮಾತ್ರ ಇದೆ. ತರಗತಿಯಲ್ಲಿ ಅವರೊಂದಿಗೆ ಐದು ತಿಂಗಳುಗಳನ್ನು ಕಳೆದ ಬಳಿಕ, ಅವರನ್ನು ಪ್ರೀತಿಸದೆ ಇರಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಪದವಿಪ್ರಾಪ್ತಿಯ ದಿನದಂದು ಅವರು ವೇದಿಕೆಯನ್ನೇರಿ ತಮ್ಮ ಪ್ರಶಸ್ತಿಪತ್ರಗಳನ್ನು ಸ್ವೀಕರಿಸುವುದನ್ನು ನೋಡುವಾಗ, ಅವರು ಈ ತರಬೇತಿಯನ್ನು ಸಫಲವಾಗಿ ಮುಗಿಸಿ, ಬೇಗನೆ ಇಲ್ಲಿಂದ ಹೊರಟುಹೋಗುವರು ಎಂಬುದು ನನ್ನ ಅರಿವಿಗೆ ಬರುತ್ತಿತ್ತು. ನನ್ನ ಕುಟುಂಬದ ಒಂದು ಭಾಗವು ದೂರ ಹೋಗುತ್ತಿರುವಂತೆ ಅನಿಸುತ್ತಿತ್ತು. ತಮ್ಮನ್ನೇ ಸ್ವಇಚ್ಛೆಯಿಂದ ಅರ್ಪಿಸಿಕೊಂಡು, ಈ ರೀತಿಯ ಸೇವೆಗಾಗಿ ಸಿದ್ಧರಾಗಿರುವ ಜನರನ್ನು ಹೇಗೆ ತಾನೆ ಪ್ರೀತಿಸದೆ ಇರಸಾಧ್ಯವಿದೆ?
ಅನೇಕ ವರ್ಷಗಳ ತರುವಾಯ ಅವರು ಸಂದರ್ಶಿಸಲು ಹಿಂದಿರುವಾಗ, ತಮ್ಮ ಸೇವೆಯಲ್ಲಿ ಅನುಭವಿಸುತ್ತಿರುವ ಸಂತೋಷದ ಕುರಿತು ಅವರು ತಿಳಿಸುತ್ತಾರೆ. ಅವರು ಇನ್ನೂ ತಮ್ಮ ನೇಮಕಗಳಲ್ಲಿದ್ದು, ಯಾವುದಕ್ಕಾಗಿ ತರಬೇತುಗೊಳಿಸಲ್ಪಟ್ಟರೊ ಅದರಲ್ಲಿ ಮುಂದುವರಿಯುತ್ತಾ ಇದ್ದಾರೆಂದು ನನಗೆ ತಿಳಿದುಬರುತ್ತದೆ. ಅದು ನನ್ನಲ್ಲಿ ಯಾವ ಅನಿಸಿಕೆಯನ್ನು ಉಂಟುಮಾಡುತ್ತದೆ? ಅದೊಂದು ಮಧುರ ಭಾವನೆ ಎಂಬುದರಲ್ಲಿ ಎರಡು ಮಾತಿಲ್ಲ.
ಭವಿಷ್ಯದ ಕಡೆಗೆ ನೋಟಹರಿಸುವುದು
ನನ್ನ ಕಣ್ಣಿನ ದೃಷ್ಟಿಯು ಈಗ ಮಬ್ಬಾಗಿದೆ, ಮತ್ತು ಅದರಿಂದಾಗುವ ನಿರಾಶೆಗಳನ್ನು ನಾನು ಅನುಭವಿಸಿದ್ದೇನೆ. ಗಿಲ್ಯಡ್ನ ತರಗತಿಯಲ್ಲಿ ಕಲಿಸಲು ನನ್ನಿಂದ ಈಗ ಸಾಧ್ಯವಿಲ್ಲ. ಪ್ರಾರಂಭದಲ್ಲಿ ಈ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ತುಂಬ ಕಷ್ಟಕರವಾಗಿತ್ತು. ಆದರೆ, ನನ್ನ ಜೀವನದಲ್ಲಿ ಎದುರಾದಂತಹ ಸನ್ನಿವೇಶಗಳನ್ನು ಸ್ವೀಕರಿಸಲು ಮತ್ತು ಅವುಗಳನ್ನು ನಿಭಾಯಿಸಲು ನಾನು ಕಲಿತುಕೊಂಡಿದ್ದೇನೆ. ನಾನು ಅನೇಕ ಬಾರಿ ಅಪೊಸ್ತಲ ಪೌಲನನ್ನೂ ಅವನ ‘ಶರೀರದಲ್ಲಿ ನಾಟಿರುವ ಶೂಲ’ವನ್ನೂ ಜ್ಞಾಪಿಸಿಕೊಳ್ಳುತ್ತೇನೆ. ಆ ವೇದನೆಯನ್ನು ತೆಗೆದುಹಾಕುವಂತೆ ಪೌಲನು ಮೂರು ಬಾರಿ ಪ್ರಾರ್ಥಿಸಿದರೂ, ಕರ್ತನು ಅವನಿಗೆ ಹೇಳಿದ್ದು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” (2 ಕೊರಿಂಥ 12:7-10) ಪೌಲನು ಈ ವೇದನೆಯೊಂದಿಗೇ ಜೀವಿಸಿದನು. ಅವನಿಗೆ ಅದು ಸಾಧ್ಯವಾಗಿದ್ದರೆ, ನಾನು ಪ್ರಯತ್ನಿಸಿಯಾದರೂ ನೋಡಬೇಕು. ನಾನು ಬೋಧಿಸದಿದ್ದರೂ, ವಿದ್ಯಾರ್ಥಿಗಳು ದಿನವೂ ಬಂದುಹೋಗುವುದನ್ನು ಈಗಲೂ ನೋಡಲು ಸಾಧ್ಯವಾಗಿರುವುದಕ್ಕೆ ಆಭಾರಿಯಾಗಿದ್ದೇನೆ. ಕೆಲವೊಮ್ಮೆ ನಾನು ಅವರೊಂದಿಗೆ ಮಾತಾಡುತ್ತೇನೆ, ಮತ್ತು ಅವರು ಪ್ರದರ್ಶಿಸುವ ಉತ್ತಮ ಮನೋಭಾವದ ಕುರಿತು ನೆನಸಿ ಸಂತೋಷಿಸುತ್ತೇನೆ.
ಭವಿಷ್ಯತ್ತು ಕಾದಿರಿಸಿರುವ ವಿಷಯಗಳ ಕುರಿತು ಧ್ಯಾನಿಸುವುದು ಅದ್ಭುತಕರವಾಗಿದೆ. ಅದಕ್ಕಾಗಿ ಈಗ ಒಂದು ಅಸ್ತಿವಾರವನ್ನು ಹಾಕಲಾಗುತ್ತಿದೆ. ಅದರಲ್ಲಿ ಗಿಲ್ಯಡ್ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಹಾಸಂಕಟದ ನಂತರ, ಪ್ರಕಟನೆ 20:12ರಲ್ಲಿ ತಿಳಿಸಲ್ಪಟ್ಟಿರುವ ಸುರಳಿಗಳು ತೆರೆಯಲ್ಪಟ್ಟಾಗ, ಯೆಹೋವನ ಮಾರ್ಗಗಳಲ್ಲಿ ಇನ್ನೂ ವ್ಯಾಪಕವಾದ ಶಿಕ್ಷಣಕ್ಕೆ ಸಾವಿರ ವರ್ಷಗಳು ಇರುವವು. (ಯೆಶಾಯ 11:9) ಅದು ಕೂಡ ಅಂತ್ಯವಲ್ಲ. ಅದು ಕೇವಲ ಆರಂಭವಾಗಿದೆ. ನಿತ್ಯತೆಯ ವರೆಗೂ, ಯೆಹೋವನ ಕುರಿತು ಕಲಿಯಲು ಮತ್ತು ಆತನ ಉದ್ದೇಶಗಳು ನೆರವೇರುವುದನ್ನು ನೋಡುವಾಗ ಹೆಚ್ಚಿನದ್ದನ್ನು ಮಾಡಲು ಆಗ ಸಾಕಷ್ಟಿರುವುದು. ತಾನು ಮಾಡಿರುವ ಎಲ್ಲ ಮಹಾ ವಾಗ್ದಾನಗಳನ್ನು ಯೆಹೋವನು ನೆರವೇರಿಸುವನೆಂಬ ವಿಷಯದಲ್ಲಿ ನನಗೆ ಸಂಪೂರ್ಣ ಭರವಸೆಯಿದೆ. ಮತ್ತು ಆಗ ಯೆಹೋವನು ನಮಗೆ ನೀಡುವ ಮಾರ್ಗದರ್ಶನಗಳನ್ನು ಸ್ವೀಕರಿಸಲಿಕ್ಕಾಗಿ ಅಲ್ಲಿರಲು ನಾನು ಬಯಸುತ್ತೇನೆ.
[ಪುಟ 26 ರಲ್ಲಿರುವ ಚಿತ್ರ]
ನ್ಯೂಯಾರ್ಕಿನ ಯಾಂಕಿ ಕ್ರೀಡಾಂಗಣದಲ್ಲಿ 1953ರಲ್ಲಿ ನಡೆದ ಗಿಲ್ಯಡ್ ಪದವಿಪ್ರಾಪ್ತಿಯ ಸಮಾರಂಭ
[ಪುಟ 26 ರಲ್ಲಿರುವ ಚಿತ್ರ]
ಗೆರ್ಟ್ರೂಡ್, ನಾನು, ಕ್ಯಾತ್ರಿನ್ ಮತ್ತು ರಸಲ್
[ಪುಟ 26 ರಲ್ಲಿರುವ ಚಿತ್ರ]
ಅಧಿವೇಶನವನ್ನು ಸಂಘಟಿಸುತ್ತಾ ಎನ್. ಏಚ್. ನಾರ್ (ತೀರ ಎಡಕ್ಕೆ) ಮತ್ತು ಎಮ್. ಜಿ. ಹೆನ್ಷಲ್ ಅವರೊಂದಿಗೆ ಕೆಲಸಮಾಡುತ್ತಿರುವುದು
[ಪುಟ 26 ರಲ್ಲಿರುವ ಚಿತ್ರ]
ಡಬ್ಲ್ಯೂಬಿಬಿಆರ್ ಪ್ರಸಾರಣ ಕೇಂದ್ರದಲ್ಲಿ
[ಪುಟ 29 ರಲ್ಲಿರುವ ಚಿತ್ರ]
ಗಿಲ್ಯಡ್ ತರಗತಿಯಲ್ಲಿ
[ಪುಟ 31 ರಲ್ಲಿರುವ ಚಿತ್ರ]
ಇತ್ತೀಚೆಗೆ ಆ್ಯನ್ಳೊಂದಿಗೆ