ಸರ್ವಶ್ರೇಷ್ಠ ನಾಮದ ರಹಸ್ಯವನ್ನು ಹೊರಗೆಡಹುವುದು
ಮುಸ್ಲಿಮ್ ಕೊರಾನ್ ಮತ್ತು ಕ್ರೈಸ್ತ ಬೈಬಲ್ ಎರಡೂ ಆ ಸರ್ವಶ್ರೇಷ್ಠ ನಾಮಕ್ಕೆ ಸೂಚಿಸಿರುವುದು ಕುತೂಹಲಕಾರಿಯಾಗಿದೆ. ಆ ಸರ್ವಶ್ರೇಷ್ಠ ನಾಮದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ಈ ಚರ್ಚೆಯು ವಿವರಿಸುತ್ತದೆ. ಆ ಹೆಸರು ಸಮಸ್ತ ಮಾನವ ಕುಲವನ್ನು ಮತ್ತು ಇಲ್ಲಿ ಭೂಮಿಯ ಮೇಲಿನ ನಮ್ಮ ಭವಿಷ್ಯತ್ತನ್ನು ಹೇಗೆ ಪ್ರಭಾವಿಸುತ್ತದೆ ಎಂಬದನ್ನೂ ಅದು ತೋರಿಸುತ್ತದೆ.
ಲಕ್ಷಾಂತರ ಪುರುಷರು ಮತ್ತು ಸ್ತ್ರೀಯರು ಈ ಭೂಮಿಯಲ್ಲಿ ಜೀವಿಸಿದ್ದಾರೆ ಮತ್ತು ಸತ್ತಿದ್ದಾರೆ. ಹೆಚ್ಚಿನ ವಿದ್ಯಮಾನಗಳಲ್ಲಿ ಅವರ ಹೆಸರುಗಳು ಅವರೊಂದಿಗೆ ಗತಿಸಿಹೋಗಿವೆ, ಮತ್ತು ಅವರ ಜ್ಞಾಪಕವು ಮರೆತುಹೋಗಿದೆ. ಆದರೆ ಕೆಲವು ಪ್ರಖ್ಯಾತ ನಾಮಗಳು—ಅವಿಕೆನ್ನ, ಎಡಿಸನ್, ಪ್ಯಾಸ್ಚ್ಯರ್, ಬೀತೊವೆನ್, ಗಾಂಧಿ, ಮತ್ತು ನ್ಯೂಟನ್—ಜೀವಿಸುತ್ತಾ ಇವೆ. ಯಾರಿಗೆ ಈ ಹೆಸರುಗಳಿದ್ದವೋ ಅವರ ಕಾರ್ಯಸಿದ್ಧಿಗಳು, ಕಂಡುಹಿಡಿತಗಳು ಮತ್ತು ಸಂಶೋಧನೆಗಳೊಂದಿಗೆ ಈ ನಾಮಗಳು ಜೋಡಿಸಲ್ಪಟ್ಟಿವೆ.
ಆದರೂ, ಬೇರೆ ಎಲ್ಲವುಗಳಿಗಿಂತ ಶ್ರೇಷ್ಠವಾದ ಒಂದು ನಾಮವಿದೆ. ಇಡೀ ವಿಶ್ವದ ಭೂತಕಾಲ ಮತ್ತು ವರ್ತಮಾನದ ಎಲ್ಲಾ ಅದ್ಭುತಗಳು ಅದಕ್ಕೆ ಸಂಬಂಧಿಸಿವೆ. ಒಂದು ದೀರ್ಘಕಾಲದ ಮತ್ತು ಸಂತೋಷದ ಜೀವಿತಕ್ಕಾಗಿ ಮಾನವ ಕುಲದ ನಿರೀಕ್ಷೆಯೇ ಈ ಹೆಸರಿನೊಂದಿಗೆ ಜತೆಗೂಡಿರುತ್ತದೆ!
ಈ ಹೆಸರನ್ನು ತಿಳಿಯುವವರಾಗಲು ಅನೇಕರು ಬಯಸಿದ್ದಾರೆ. ಅವರು ಅದಕ್ಕಾಗಿ ಹುಡುಕಿದ್ದಾರೆ, ಅದರ ಕುರಿತು ವಿಚಾರಿಸಿದ್ದಾರೆ, ಆದರೆ ಅದನ್ನು ಕಂಡುಕೊಂಡಿರುವುದಿಲ್ಲ. ಅವರಿಗೆ ಅದೊಂದು ರಹಸ್ಯವಾಗಿ ಉಳಿದಿದೆ. ವಾಸ್ತವದಲ್ಲಿ, ಅದರ ಒಡೆಯನು ಈ ಹೆಸರನ್ನು ಅವನಿಗೆ ಪ್ರಕಟಪಡಿಸದ ಹೊರತು ಯಾವ ಮನುಷ್ಯನೂ ಅದನ್ನು ಕಂಡುಹಿಡಿಯಲಾರನು. ಸಂತೋಷಕರವಾಗಿಯೇ, ಈ ಎಣೆಯಿಲ್ಲದ ಹೆಸರಿನ ಗೋಜು ಬಿಡಿಸಲ್ಪಟ್ಟಿದೆ. ಯಾರು ಆತನಲ್ಲಿ ನಂಬಿಕೆಯಿಡುತ್ತಾರೋ ಅವರು ಆತನ ಕುರಿತು ತಿಳಿಯುವಂತೆ ದೇವರು ತಾನೇ ಇದನ್ನು ಮಾಡಿದ್ದಾನೆ. ಆತನು ತನ್ನ ಹೆಸರನ್ನು ಆದಾಮನಿಗೆ, ಅನಂತರ ಅಬ್ರಹಾಮನಿಗೆ, ಮೋಶೆಗೆ, ಮತ್ತು ತನ್ನ ಇತರ ನಂಬಿಗಸ್ತ ಪುರಾತನ ಸೇವಕರಿಗೆ ಪ್ರಕಟಪಡಿಸಿದನು.
ಸರ್ವಶ್ರೇಷ್ಠ ನಾಮದ ಅನ್ವೇಷಣೆಯಲ್ಲಿ
“ಶಾಸ್ತ್ರವಚನಗಳಲ್ಲಿ ಬಹು ನಿಷ್ಣಾತನಾದ” ಯಾರೋ ಒಬ್ಬನ ಕುರಿತು ಕೊರಾನ್ ತಿಳಿಸುತ್ತದೆ. (27:40) ಈ ವಚನವನ್ನು ವಿವರಿಸುವಲ್ಲಿ, ಟಫ್ಸರ್ ಜಲಾಲ್ಯನ್ ಎಂಬ ವ್ಯಾಖ್ಯಾನವು ಅನ್ನುವುದು: “ಬರ್ಕೀಯನ ಮಗನಾದ ಅಸಫನು ಒಬ್ಬ ಧಾರ್ಮಿಕ ಪುರುಷನಾಗಿದ್ದನು. ಅವನಿಗೆ ದೇವರ ಸರ್ವಶ್ರೇಷ್ಠ ನಾಮವು ತಿಳಿದಿತ್ತು, ಮತ್ತು ಅವನು ಅದನ್ನು ಕರೆದಾಗಲ್ಲೆಲ್ಲಾ, ಅವನು ಆಲಿಸಲ್ಪಟ್ಟನು.” ಇದು ನಮಗೆ ಬೈಬಲ್ ಲೇಖಕನಾದ ಆಸಾಫನ ಜ್ಞಾಪಕವನ್ನು ಕೊಡುತ್ತದೆ, ಅವನು ಕೀರ್ತನೆ 83:18 ರಲ್ಲಿ ಅಂದದ್ದು: “ಆಗ ಯೆಹೋವ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”
ಕೊರಾನ್ 17:2 ರಲ್ಲಿ ನಾವು ಓದುವುದು: “ನಾವು ಮೋಶೆಗೆ ಶಾಸ್ತ್ರವಚನಗಳನ್ನು ಕೊಟ್ಟೆವು ಮತ್ತು ಅವನ್ನು ಇಸ್ರಾಯೇಲ್ಯರಿಗೆ ಒಂದು ಮಾರ್ಗದರ್ಶಕವಾಗಿ ಮಾಡಿದೆವು.” ಆ ಶಾಸ್ತ್ರವಚನಗಳಲ್ಲಿ, ಮೋಶೆಯು ದೇವರಿಗೆ ಉದ್ದೇಶಿಸುತ್ತಾ ಅನ್ನುವುದು: “ನಾನು ಇಸ್ರಾಯೇಲ್ಯರ ಬಳಿಗೆ ಬಂದು ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳಿದಾಗ ಒಂದು ವೇಳೆ ಅವರು—ಆತನ ಹೆಸರೇನೆಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?” ದೇವರು ಉತ್ತರಿಸುತ್ತಾ ಮೋಶೆಗೆ ಅಂದದ್ದು: “ನೀನು ಇಸ್ರಾಯೇಲ್ಯರಿಗೆ ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು; ಇದು ಸದಾಕಾಲಕ್ಕೂ ನನ್ನ ಹೆಸರು.”—ವಿಮೋಚನಕಾಂಡ 3:13, 15.
ಪುರಾತನ ಕಾಲಗಳಲ್ಲಿ ದೇವರ ಈ ಶ್ರೇಷ್ಠ ಹೆಸರು ಇಸ್ರಾಯೇಲ್ಯರಿಗೆ ತಿಳಿದಿತ್ತು. ಅದು ಅವರ ಸ್ವಂತ ಹೆಸರುಗಳ ಒಂದು ಭಾಗವಾಗಿಯೂ ಉಪಯೋಗಿಸಲ್ಪಟ್ಟಿತ್ತು. “ದೇವರ ಸೇವಕ” ಎಂಬರ್ಥವಿರುವ ಅಬ್ದುಲ್ಲಾ ಎಂಬ ಹೆಸರನ್ನು ಒಬ್ಬನು ಇಂದು ಕಾಣುವಂತೆಯೇ, ಪುರಾತನ ಇಸ್ರಾಯೇಲ್ ಜನರಲ್ಲಿ ಓಬದ್ಯ ಅಂದರೆ “ಯೆಹೋವನ ಸೇವಕ” ಎಂಬರ್ಥದ ಹೆಸರಿತ್ತು. ಪ್ರವಾದಿ ಮೋಶೆಯ ತಾಯಿಗೆ ಯೋಕೆಬೆದ್ ಎಂದು ಹೆಸರಿಡಲ್ಪಟ್ಟಿತ್ತು, “ಯೆಹೋವನು ಮಹಿಮೆಯಾಗಿದ್ದಾನೆ” ಎಂಬರ್ಥವು ಅದಕ್ಕಿರಸಾಧ್ಯವಿದೆ. ಯೋಹಾನ ಎಂಬ ಹೆಸರಿಗೆ “ಯೆಹೋವನು ದಯೆಯುಳ್ಳವನು” ಎಂಬರ್ಥವಿದೆ. ಮತ್ತು ಪ್ರವಾದಿಯಾದ ಎಲೀಯನ ಹೆಸರಿನ ಅರ್ಥವು “ನನ್ನ ದೇವರು ಯೆಹೋವನು” ಎಂದಾಗಿದೆ.
ಪ್ರವಾದಿಗಳಿಗೆ ಈ ಶ್ರೇಷ್ಠ ನಾಮವು ತಿಳಿದಿತ್ತು ಮತ್ತು ಆಳವಾದ ಗೌರವದಿಂದ ಅದನ್ನು ಉಪಯೋಗಿಸಿದ್ದರು. ಪವಿತ್ರ ಶಾಸ್ತ್ರಗ್ರಂಥದಲ್ಲಿ ಅದು 7,000 ಕ್ಕಿಂತ ಹೆಚ್ಚು ಬಾರಿ ಕಂಡುಬರುತ್ತದೆ. ಮರಿಯಳ ಮಗನಾದ ಯೇಸು ಕ್ರಿಸ್ತನು, ದೇವರಿಗೆ ತನ್ನ ಪ್ರಾರ್ಥನೆಯಲ್ಲಿ ಅದನ್ನು ಎತ್ತಿ ಹೇಳುತ್ತಾ ಅಂದದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು. . . . ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟಂಥ ಪ್ರೀತಿಯು ಅವರಲ್ಲಿ ಇರಬೇಕೆಂದೂ . . . ಪ್ರಾರ್ಥಿಸುತ್ತೇನೆ.” (ಯೋಹಾನ 17:6, 26) ಬೈಡವಿಯು ಕೊರಾನ್ನ ಮೇಲಣ ತನ್ನ ಪ್ರಖ್ಯಾತ ವ್ಯಾಖ್ಯಾನದಲ್ಲಿ, ಕೊರಾನ್ 2:87ರ ಮೇಲೆ ವ್ಯಾಖ್ಯೆಮಾಡುತ್ತಾ, ಯೇಸುವು “ದೇವರ ಸರ್ವಶ್ರೇಷ್ಠ ನಾಮದ ಮೂಲಕ ಸತ್ತ ಜನರನ್ನು ಬದುಕಿಸು” ತ್ತಿದ್ದನು ಎಂದು ಹೇಳುತ್ತಾನೆ.
ಹೀಗಿರಲಾಗಿ, ಆ ನಾಮವನ್ನು ಒಂದು ರಹಸ್ಯವಾಗಿ ಮಾಡಲು ಸಂಭವಿಸಿದ್ದೇನು? ನಮ್ಮಲ್ಲಿ ಪ್ರತಿಯೊಬ್ಬರ ಭವಿಷ್ಯತ್ತಿನೊಂದಿಗೆ ಆ ಹೆಸರಿಗಿರುವ ಸಂಬಂಧವೇನು?
ಆ ಹೆಸರು ಒಂದು ರಹಸ್ಯವಾದದ್ದು ಹೇಗೆ?
ಹೀಬ್ರುವಿನಲ್ಲಿ “ಯೆಹೋವ” ಎಂದರೆ “ಅಲ್ಲಾ” (ದೇವರು) ಎಂದು ಕೆಲವರು ನೆನಸುತ್ತಾರೆ. ಆದರೆ “ಅಲ್ಲಾ” ಎಂಬದು ’ಇಲೋ’ಹ (ದೇವರು) ಶಬ್ದದ ಘನತೆಯ ಬಹುವಚನ ರೂಪವಾದ ಹೀಬ್ರು ’ಇಲೋಹಿಮ್ಗೆ ಅನುರೂಪವಾಗಿದೆ. ಯೆಹೂದ್ಯರ ನಡುವೆ ಒಂದು ಮೂಢನಂಬಿಕೆಯು ತಲೆದೋರಿ, ದೈವಿಕ ನಾಮವಾದ ಯೆಹೋವ ಎಂಬದನ್ನು ಉಚ್ಚರಿಸುವುದರಿಂದ ಅವರನ್ನು ತಡೆಯಿತು. ಆದುದರಿಂದ, ಪವಿತ್ರ ಶಾಸ್ತ್ರಗ್ರಂಥವನ್ನು ಅವರು ಓದುತ್ತಿದ್ದಾಗ ಯೆಹೋವ ನಾಮವನ್ನು ಕಂಡಾಗಲ್ಲೆಲ್ಲಾ, “ಕರ್ತನು” ಎಂಬರ್ಥ ಕೊಡುವ ’ಅಡೊ.ನೈ’ ಎಂದು ಹೇಳುವುದು ಅವರ ಪದ್ಧತಿಯಾಯಿತು. ಕೆಲವು ಸ್ಥಳಗಳಲ್ಲಿ ಅವರು ಹೀಬ್ರು ಮೂಲಪಾಠವನ್ನು “ಯೆಹೋವ” ಎಂಬದರಿಂದ ’ಅಡೋ.ನೈ‘ಗೆ ಬದಲಾಯಿಸಿದರು ಸಹ.
ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಅದೇ ಮಾರ್ಗವನ್ನು ಅನುಸರಿಸಿದರು. ಯೆಹೋವ ಎಂಬ ಹೆಸರನ್ನು “ದೇವರು” (ಅರ್ಯಾಬಿಕ್ನಲ್ಲಿ “ಅಲ್ಲಾ”) ಮತ್ತು “ಕರ್ತನು” ಎಂದು ಅವರು ಸ್ಥಾನಪಲ್ಲಟ ಮಾಡಿದರು. ಅದು ಪವಿತ್ರ ಶಾಸ್ತ್ರಗ್ರಂಥದಲ್ಲಿ ಯಾವ ಆಧಾರವೂ ಇರದ ತ್ರಯೈಕ್ಯದ ಸುಳ್ಳು ಬೋಧನೆಯ ವಿಕಾಸಕ್ಕೆ ನೆರವಾಯಿತು. ಈ ಕಾರಣದಿಂದಾಗಿ ಲಕ್ಷಾಂತರ ಜನರು ತಪ್ಪಾಗಿ ಯೇಸು ಕ್ರಿಸ್ತನನ್ನು ಮತ್ತು ಪವಿತ್ರಾತ್ಮವನ್ನು ಆರಾಧಿಸುತ್ತಾರೆ ಮತ್ತು ಅವರು ದೇವರಿಗೆ ಸರಿಸಮಾನರೆಂದು ಪರಿಗಣಿಸುತ್ತಾರೆ.a
ಆದಕಾರಣ, ಆ ಸರ್ವಶ್ರೇಷ್ಠ ನಾಮದ ಕುರಿತ ವ್ಯಾಪಕವಾದ ಅಜ್ಞಾನಕ್ಕೆ, ಯೆಹೂದ್ಯ ಮತದ ಮತ್ತು ಕ್ರೈಸ್ತಪ್ರಪಂಚದ ಮುಖಂಡರು ದೋಷದಲ್ಲಿ ಪಾಲಿಗರು. ಆದರೆ ದೇವರು ಪ್ರವಾದಿಸಿದ್ದು: “ಜನಾಂಗಗಳ ನಡುವೆ . . . ನನ್ನ ಘನನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. . . . ಹೀಗೆ . . . ನಾನೇ ಯೆಹೋವನು ಎಂದು ಅವುಗಳಿಗೆ ನಿಶ್ಚಿತವಾಗುವದು.” ಹೌದು, ಯೆಹೋವನು ತನ್ನ ಹೆಸರನ್ನು ಸಕಲ ಜನಾಂಗಗಳಲ್ಲಿ ಪ್ರಸಿದ್ಧವಾಗುವಂತೆ ಮಾಡುವನು. ಯಾಕೆ? ಯಾಕಂದರೆ ಅವನು ಕೇವಲ ಯೆಹೂದ್ಯರ ಅಥವಾ ಬೇರೆ ಯಾವುದೇ ವ್ಯಕ್ತಿಪರ ಜನಾಂಗದ ಯಾ ಜನರ ದೇವರಲ್ಲ. ಯೆಹೋವನು ಸಮಸ್ತ ಮಾನವ ಕುಲದ ದೇವರಾಗಿದ್ದಾನೆ.—ಯೆಹೆಜ್ಕೇಲ 36:23; ಆದಿಕಾಂಡ 22:18; ಕೀರ್ತನೆ 145:21; ಮಲಾಕಿಯ 1:11.
ಸರ್ವಶ್ರೇಷ್ಠ ನಾಮ ಮತ್ತು ನಮ್ಮ ಭವಿಷ್ಯತ್ತು
ಪವಿತ್ರ ಶಾಸ್ತ್ರಗ್ರಂಥವು ಹೇಳುವುದು: “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” (ರೋಮಾಪುರ 10:13, NW) ತೀರ್ಪಿನ ದಿನದಲ್ಲಿ ನಮ್ಮ ರಕ್ಷಣೆಯು ದೇವರ ಹೆಸರನ್ನು ನಾವು ತಿಳಿದಿರುವುದಕ್ಕೆ ಸಂಬಂಧಿಸಿರುವುದು. ಆತನ ಹೆಸರನ್ನು ತಿಳಿಯುವುದರಲ್ಲಿ ಆತನ ಗುಣಗಳನ್ನು, ಕೃತ್ಯಗಳನ್ನು, ಮತ್ತು ಉದ್ದೇಶಗಳನ್ನು ತಿಳಿಯುವುದು ಮತ್ತು ಆತನ ಉತ್ಕೃಷ್ಟ ತತ್ವಗಳೊಂದಿಗೆ ಹೊಂದಿಕೆಯಲ್ಲಿ ಜೀವಿಸುವುದು ಒಳಗೂಡಿರುತ್ತದೆ. ಉದಾಹರಣೆಗೆ, ಅಬ್ರಹಾಮನಿಗೆ ದೇವರ ಹೆಸರು ತಿಳಿದಿತ್ತು ಮತ್ತು ಅವನು ಆ ಹೆಸರನ್ನು ಹೇಳಿಕೊಂಡನು. ಫಲಿತಾಂಶವಾಗಿ, ಅವನು ದೇವರೊಂದಿಗೆ ಒಂದು ಸುಸಂಬಂಧದಲ್ಲಿ ಆನಂದಿಸಿದನು, ಆತನಲ್ಲಿ ನಂಬಿಕೆಯನ್ನು ತೋರಿಸಿದನು, ಆತನ ಮೇಲೆ ಆತುಕೊಂಡನು, ಮತ್ತು ಅವನಿಗೆ ವಿಧೇಯನಾದನು. ಹೀಗೆ ಅಬ್ರಹಾಮನು ದೇವರ ಸ್ನೇಹಿತನಾದನು. ಅಂತೆಯೇ, ದೇವರ ಹೆಸರನ್ನು ತಿಳಿಯುವುದು ನಮ್ಮನ್ನು ಆತನ ಸಮೀಪಕ್ಕೆ ಎಳೆಯುತ್ತದೆ ಮತ್ತು ಆತನ ಪ್ರೀತಿಯಲ್ಲಿ ದೃಢವಾಗಿ ನಿಲ್ಲುತ್ತಾ, ಆತನೊಂದಿಗೆ ಒಂದು ವ್ಯಕ್ತಿಪರ ಸಂಬಂಧವನ್ನು ವಿಕಸಿಸುವಂತೆ ನಮಗೆ ಸಹಾಯಮಾಡುತ್ತದೆ.—ಆದಿಕಾಂಡ 12:8; ಕೀರ್ತನೆ 9:10; ಜ್ಞಾನೋಕ್ತಿ 18:10; ಯಾಕೋಬ 2:23.
ಬೈಬಲಿನಲ್ಲಿ ನಾವು ಓದುವುದು: “ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16) ಆ ಸರ್ವಶ್ರೇಷ್ಠ ನಾಮದ ‘ಸ್ಮರಣೆಯನ್ನು’ ನಾವೇಕೆ ಮಾಡಬೇಕಾಗಿದೆ? ಆ ಹೆಸರಿನ ಅಕ್ಷರಾರ್ಥವು “ಅವನು ಆಗುವಂತೆ ಮಾಡುವವನು” ಎಂದಾಗಿದೆ. ಇದು ಯೆಹೋವನನ್ನು ವಾಗ್ದಾನಗಳನ್ನು ಕೈಗೂಡಿಸುವವನಾಗಿ ತನ್ನನ್ನು ಮಾಡಿಕೊಳ್ಳುವವನಾಗಿ ಪ್ರಕಟಪಡಿಸುತ್ತದೆ. ಅವನು ಯಾವಾಗಲೂ ತನ್ನ ಉದ್ದೇಶಗಳನ್ನು ಕಾರ್ಯಸಿದ್ಧಿಗೆ ತರುತ್ತಾನೆ. ಪ್ರತಿಯೊಂದು ಸದ್ಗುಣಗಳು ಕೂಡಿರುವ ಒಬ್ಬನೇ ಸೃಷ್ಟಿಕರ್ತನೂ, ಸರ್ವಶಕ್ತನೂ ಆದ ದೇವರು ಆತನು. ದೇವರ ದೈವಿಕ ಸ್ವಭಾವವನ್ನು ಪೂರ್ಣವಾಗಿ ವರ್ಣಿಸಬಲ್ಲ ಯಾವ ಏಕ ಶಬ್ದವಾದರೂ ಇಲ್ಲ. ಆದರೆ ದೇವರು ತನಗಾಗಿ—ಯೆಹೋವ—ಎಂಬ ಸರ್ವಶ್ರೇಷ್ಠ ನಾಮವನ್ನು ಆರಿಸಿಕೊಂಡನು ಮತ್ತು ಅದು ಆತನ ಎಲ್ಲಾ ಗುಣಧರ್ಮಗಳ, ಗುಣಲಕ್ಷಣಗಳ ಮತ್ತು ಉದ್ದೇಶಗಳ ಸ್ಮರಣೆಯನ್ನು ಒಬ್ಬನಿಗೆ ಕೊಡುತ್ತದೆ.
ಪವಿತ್ರ ಶಾಸ್ತ್ರಗ್ರಂಥದಲ್ಲಿ ಮಾನವ ಕುಲದೆಡೆಗಿನ ತನ್ನ ಉದ್ದೇಶಗಳ ಕುರಿತಾಗಿ ದೇವರು ನಮಗೆ ತಿಳಿಸುತ್ತಾನೆ. ಪ್ರಮೋದವನದಲ್ಲಿ ಒಂದು ನಿತ್ಯವಾದ, ಸಂತೋಷದ ಜೀವನವನ್ನು ಆನಂದಿಸುವಂತೆ ಯೆಹೋವ ದೇವರು ಮನುಷ್ಯನನ್ನು ಉಂಟುಮಾಡಿದನು. ಎಲ್ಲಾ ಜನರು ಪ್ರೀತಿ ಮತ್ತು ಶಾಂತಿಯಲ್ಲಿ ಐಕ್ಯಗೊಂಡ ಒಂದೇ ಕುಟುಂಬವಾಗಿರಬೇಕು ಎಂಬುದು ಮಾನವ ಕುಲಕ್ಕಾಗಿ ಆತನ ಚಿತ್ತವಾಗಿದೆ. ಭವಿಷ್ಯದಲ್ಲಿ ಬೇಗನೆ ಈ ಉದ್ದೇಶವನ್ನು ಪ್ರೀತಿ ಸ್ವರೂಪನಾದ ದೇವರು ನೆರವೇರಿಸಲಿರುವನು.—ಮತ್ತಾಯ 24:3-14, 32-42; 1 ಯೋಹಾನ 4:14-21.
ಮಾನವ ಕುಲದ ಕಷ್ಟಾನುಭವಕ್ಕೆ ಕಾರಣಗಳನ್ನು ದೇವರು ವಿವರಿಸುತ್ತಾನೆ ಮತ್ತು ರಕ್ಷಣೆಯು ಶಕ್ಯವೆಂಬದಾಗಿ ತೋರಿಸುತ್ತಾನೆ. (ಪ್ರಕಟನೆ 21:4) ಕೀರ್ತನೆ 37:10, 11 ರಲ್ಲಿ ನಾವು ಓದುವುದು: “ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೊರಾನ್ 21:105 ಸಹ ನೋಡಿರಿ.
ಹೌದು, ದೇವರು ತನ್ನ ಶ್ರೇಷ್ಠ ನಾಮದಿಂದ ತಿಳಿಯಲ್ಪಡುವನು. ಆತನೇ ಯೆಹೋವನೆಂದು ಜನಾಂಗಗಳು ತಿಳಿಯಲೇಬೇಕು. ಆ ಮಹಾ ನಾಮವನ್ನು ತಿಳಿದುಕೊಳ್ಳುವುದು, ಅದಕ್ಕೆ ಸಾಕ್ಷಿಕೊಡುವುದು, ಮತ್ತು ಅದನ್ನು ಭದ್ರವಾಗಿ ಹಿಡಿದುಕೊಳ್ಳುವುದು ಎಂತಹ ಆಶ್ಚರ್ಯಕರ ಸುಯೋಗವಾಗಿದೆ! ಆ ರೀತಿಯಲ್ಲಿ, ದೇವರ ಹರ್ಷಕರ ಉದ್ದೇಶವು ನಮ್ಮ ಪ್ರತಿಯೊಬ್ಬನಲ್ಲಿ ನೆರವೇರಿಸಲ್ಪಡುವುದು: “ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು. ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು. . . . ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.”—ಕೀರ್ತನೆ 91:14-16.
[ಅಧ್ಯಯನ ಪ್ರಶ್ನೆಗಳು]
a ತ್ರಯೈಕ್ಯವು ಬೈಬಲ್ ಬೋಧನೆಯಲ್ಲವೆಂಬ ರುಜುವಾತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1989 ರಲ್ಲಿ ಪ್ರಕಾಶಿಸಲ್ಪಟ್ಟ, ನೀವು ತ್ರಯೈಕ್ಯವನ್ನು ನಂಬಬೇಕೋ? ಬ್ರೋಷರನ್ನು ನೋಡಿರಿ.
[ಪುಟ 5 ರಲ್ಲಿರುವ ಚಿತ್ರ]
ಪ್ರಜ್ವಲಿಸುವ ಪೊದೆಯಲ್ಲಿ, ದೇವರು ತನ್ನನ್ನು, ‘ಅಬ್ರಹಾಮನ ದೇವರಾದ ಯೆಹೋವನು’ ಎಂದು ಮೋಶೆಗೆ ಸ್ವತಃ ಗುರುತು ಮಾಡಿಕೊಟ್ಟನು
[ಕೃಪೆ]
Moses and the Burning Bush, by W. Thomas, Sr.