“ಯೆಹೋವನನ್ನು ಹುಡುಕಿರಿ, . . . ಸಕಲ ದೀನ ವ್ಯಕ್ತಿಗಳೇ”
“ಯೆಹೋವನನ್ನು ಹುಡುಕಿರಿ, ಆತನ ಸ್ವಂತ ನ್ಯಾಯನಿರ್ಣಯಗಳನ್ನು ಆಚರಿಸಿರುವ ಭೂಮಿಯ ಸಕಲ ದೀನ ವ್ಯಕ್ತಿಗಳೇ. ನೀತಿಯನ್ನು ಹುಡುಕಿರಿ, ದೈನ್ಯವನ್ನು ಹುಡುಕಿರಿ. ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಬಹುಶಃ ಮರೆ ಮಾಡಲ್ಪಟ್ಟೀರಿ.”—ಚೆಫನ್ಯ 2:3, NW.
ಚೆಫನ್ಯ ಪ್ರವಾದಿಯು ಇದನ್ನು “ಭೂಮಿಯ ದೀನ” ರಿಗೆ ಸಂಬೋಧಿಸುತ್ತಾ, ಅವರು “ಯೆಹೋವನ ಸಿಟ್ಟಿನ ದಿನದಲ್ಲಿ” ಸಂರಕ್ಷಿಸಲ್ಪಡುವರೆ, “ದೈನ್ಯವನ್ನು ಹುಡುಕಿರಿ” ಎಂದು ಪ್ರೋತ್ಸಾಹಿಸಿದನು. ಹಾಗಾದರೆ ಪಾರಾಗುವಿಕೆಗೆ ದೈನ್ಯವು ಒಂದು ಪೂರ್ವಾವಶ್ಯಕತೆಯೆಂಬುದಕ್ಕೆ ಇದು ಯಾವ ಸಂಶಯಕ್ಕೂ ಎಡೆಕೊಡುವುದಿಲ್ಲ.
ದೈನ್ಯವನ್ನು ಏಕೆ ಹುಡುಕಬೇಕು?
ದೈನ್ಯವೆಂದರೆ ಸೌಮ್ಯ ಶೀಲ, ಅಹಂಕಾರ ಯಾ ಜಂಬಏಲ್ಲದಿರುವ ಗುಣ. ಇದು ನಮ್ರತೆ ಮತ್ತು ಸೌಮ್ಯತೆಯಂತಹ ಇತರ ಸದ್ಗುಣಗಳಿಗೆ ನಿಕಟವಾಗಿ ಸಂಬಂಧಿಸಿದೆ. ವಿಷಯ ಹೀಗಿರುವುದರಿಂದ, ದೀನ ವ್ಯಕ್ತಿಗಳು ಬೋಧ್ಯರು ಮತ್ತು ಆ ಕ್ಷಣದಲ್ಲಿ ನೀತಿಶಿಕ್ಷಣವು ಸಂಕಟಕರವಾಗಿ ಕಂಡುಬಂದೀತಾದರೂ ದೇವರ ಕೈಯಿಂದ ನೀತಿಶಿಕ್ಷೆಯನ್ನು ಅಂಗೀಕರಿಸಲು ಅವರು ಇಚ್ಫಿತರು.—ಕೀರ್ತನೆ 25:9; ಇಬ್ರಿಯ 12:4-11.
ವಸ್ತುತಃ ದೈನ್ಯಭಾವಕ್ಕೆ ಒಬ್ಬನ ವಿದ್ಯೆ ಯಾ ಜೀವನಸ್ಥಾನದೊಂದಿಗೆ ಕೊಂಚ ಸಂಬಂಧವೇ ಇದ್ದೀತು. ಆದರೂ, ಹೆಚ್ಚು ವಿದ್ಯಾವಂತರಾಗಿರುವವರು ಅಥವಾ ಲೌಕಿಕ ರೀತಿಯಲ್ಲಿ ಸಾಫಲ್ಯ ಪಡೆದಿರುವವರು, ತಾವು ಪ್ರತಿಯೊಂದರಲ್ಲಿಯೂ—ಆರಾಧನೆಯ ಸಂಬಂಧದಲ್ಲಿಯೂ—ನಿರ್ಣಯಗಳನ್ನು ಮಾಡಲು ಅರ್ಹತೆ ಪಡೆದವರು ಎಂದು ಭಾವಿಸುವ ಪ್ರವೃತ್ತಿಯವರಾಗುತ್ತಾರೆ. ಇದು ಅವರನ್ನು, ಇನ್ನೊಬ್ಬ ವ್ಯಕ್ತಿಯು ಯಾವುದೋ ವಿಷಯವನ್ನು ಕಲಿಸುವುದರಿಂದ ಯಾ ಸಲಹೆಯನ್ನು ಅಂಗೀಕರಿಸಿ ತಮ್ಮ ಜೀವನದಲ್ಲಿ ಆವಶ್ಯಕವಾದ ಪರಿವರ್ತನೆಗಳನ್ನು ಮಾಡುವುದರಿಂದ ತಡೆಯಬಹುದು. ಪ್ರಾಪಂಚಿಕವಾಗಿ ಧನಿಕರಾಗಿರುವ ಇತರರು ತಮ್ಮ ಭದ್ರತೆಯು ಲೌಕಿಕ ಸೊತ್ತುಗಳ ಮೇಲೆ ಆಧಾರಿತವೆಂಬ ತಪ್ಪು ಯೋಚನೆಯಲ್ಲಿ ಬೀಳಬಹುದು. ಈ ಕಾರಣದಿಂದ, ದೇವರ ವಾಕ್ಯವಾದ ಬೈಬಲಿನ ಆಧ್ಯಾತ್ಮಿಕ ಐಶ್ವರ್ಯವು ಆವಶ್ಯಕವೆಂದು ಅವರಿಗನಿಸುವುದಿಲ್ಲ.—ಮತ್ತಾಯ 4:4; 5:3; 1 ತಿಮೊಥೆಯ 6:17.
ಯೇಸುವಿನ ದಿನಗಳ ಶಾಸ್ತ್ರಿಗಳು, ಫರಿಸಾಯರು ಮತ್ತು ಮುಖ್ಯ ಯಾಜಕರುಗಳನ್ನು ಪರಿಗಣಿಸಿರಿ. ಒಂದು ಸಂದರ್ಭದಲ್ಲಿ, ಯೇಸುವನ್ನು ದಸ್ತಗಿರಿ ಮಾಡಲು ಕಳುಹಿಸಲ್ಪಟ್ಟಿದ್ದ ಅಧಿಕಾರಿಗಳು ಬರಿಯ ಕೈಯಲ್ಲಿ ಹಿಂದಿರುಗಿದಾಗ ಫರಿಸಾಯರು ಹೇಳಿದ್ದು: “ನೀವೂ ಮರುಳಾದಿರಾ? ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ.” (ಯೋಹಾನ 7:45-49) ಇನ್ನೊಂದು ಮಾತಿನಲ್ಲಿ. ಅವರಿಗನುಸಾರ ಬುದ್ಧಿಹೀನರು ಮತ್ತು ಅವಿದ್ಯಾವಂತರು ಮಾತ್ರ ಯೇಸುವನ್ನು ನಂಬುವಷ್ಟು ಮುಗ್ಧರು.
ಹೀಗಿದ್ದರೂ, ಕೆಲವು ಮಂದಿ ಫರಿಸಾಯರು ಸತ್ಯಕ್ಕೆ ಆಕರ್ಷಿಸಲ್ಪಟ್ಟರು, ಮತ್ತು ಅವರು ಯೇಸುವಿನ ಮತ್ತು ಕ್ರೈಸ್ತರ ಪಕ್ಷವನ್ನು ಸಮರ್ಥಿಸಿದರು. ಇವರಲ್ಲಿ ನಿಕೊದೇಮ ಮತ್ತು ಗಮಲಿಯೇಲ ಎಂಬವರಿದ್ದರು. (ಯೋಹಾನ 7:50-52; ಅ. ಕೃತ್ಯಗಳು 5:34-40) ಯೇಸುವಿನ ಮರಣಾನಂತರ, “ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.” (ಅ. ಕೃತ್ಯಗಳು 6:7) ಇವರಲ್ಲಿ ತೀರಾ ಎದ್ದುಕಾಣುವ ದೃಷ್ಟಾಂತ ಅಪೊಸ್ತಲ ಪೌಲನೆಂಬುದು ನಿಸ್ಸಂಶಯ. ಅವನು ಗಮಲಿಯೇಲನ ಪಾದಸನ್ನಿಧಿಯಲ್ಲಿ ವಿದ್ಯೆ ಪಡೆದು ಯೆಹೂದ್ಯ ಮತದ ತೀರಾ ಸುಶಿಕ್ಷಿತನೂ ಸನ್ಮಾನ್ಯನೂ ಆದ ಪಕ್ಷವಾದಿಯಾದನು. ಆದರೂ ತಕ್ಕ ಕಾಲದಲ್ಲಿ ಅವನು ಯೇಸುವಿನ ಕರೆಗೆ ದೈನ್ಯಭಾವದಿಂದ ಓಗೊಟ್ಟು ಆತನ ಹುರುಪಿನ ಅನುಯಾಯಿಯಾದನು.—ಅ. ಕೃತ್ಯಗಳು 22:3; 26:4, 5; ಗಲಾತ್ಯ 1:14-24; 1 ತಿಮೊಥೆಯ 1:12-16.
ಇದೆಲ್ಲ ಚಿತ್ರಿಸುವುದೇನಂದರೆ, ಒಬ್ಬನ ಹಿನ್ನೆಲೆ ಯಾವುದೇ ಇರಲಿ ಅಥವಾ ಬೈಬಲಿನ ಸಂದೇಶದ ಬಗೆಗೆ ಈಗ ಒಬ್ಬನಿಗೆ ಯಾವ ಅನಿಸಿಕೆಯೇ ಇರಲಿ, ಚೆಫನ್ಯನ ನುಡಿಗಳು ಇನ್ನೂ ಅನ್ವಯಿಸುತ್ತವೆ. ಒಬ್ಬನು ದೇವರಿಂದ ಅನುಮೋದಿಸಲ್ಪಡಲು ಮತ್ತು ಆತನ ವಾಕ್ಯದಿಂದ ನಡಿಸಲ್ಪಡಲು ಬಯಸುವಲ್ಲಿ ದೈನ್ಯವು ಅನಿವಾರ್ಯ.
ಇಂದು “ದೈನ್ಯವನ್ನು ಹುಡುಕು” ವವರು
ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಜನರು ರಾಜ್ಯ ಸುವಾರ್ತೆಗೆ ಓಗೊಡುತ್ತಿದ್ದಾರೆ. ಇಂತಹ ಜನರ ಮನೆಗಳಲ್ಲಿ ಯೆಹೋವನ ಸಾಕ್ಷಿಗಳು ವಾರಕ್ಕೆ ನಲ್ವತ್ತು ಲಕ್ಷಗಳಿಗೂ ಹೆಚ್ಚು ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಇವರು ಅನೇಕ ಮತ್ತು ವಿವಿಧ ಹಿನ್ನೆಲೆಗಳಿಂದಲೂ ವಿಭಿನ್ನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಿಂದಲೂ ಬರುತ್ತಾರೆ. ಆದರೂ ಅವರಲ್ಲಿರುವ ಒಂದು ಸಾಮಾನ್ಯ ಗುಣವು ಯಾವುದೆಂದರೆ ಯಾವನೋ ಒಬ್ಬನು ಅವರ ಸ್ವಂತ ಬಾಗಲಲ್ಲಿ ಅಥವಾ ಬೇರೆಡೆಯಲ್ಲಿ ಅವರಿಗೆ ನೀಡಿದ ಬೈಬಲಿನ ಸಂದೇಶವನ್ನು ಅಂಗೀಕರಿಸಲು ಸಾಕಷ್ಟು ದೈನ್ಯಭಾವವು ಅವರಲ್ಲಿದೆ. ಇವರಲ್ಲಿ ಅನೇಕರು ಉತ್ತಮ ಪ್ರಗತಿಯನ್ನು ಮಾಡುತ್ತಿದ್ದಾರೆ ಏಕೆಂದರೆ ತಮ್ಮ ಮಧ್ಯೆ ಬರುವ ತಡೆಗಳನ್ನು ಜಯಿಸಲು ಅವರು ಇಚ್ಫಿತರಾಗಿದ್ದಾರೆ. ಹೌದು, ಅವರು ಇಂದು “ಭೂಮಿಯ ದೀನರ” ಮಧ್ಯೆ ಇದ್ದಾರೆ.
ಉದಾಹರಣೆಗೆ, ಮೆಕ್ಸಿಕೊ ದೇಶದ ಮರೀಯ ಎಂಬವಳನ್ನು ತೆಗೆದುಕೊಳ್ಳಿರಿ. ಆಕೆ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರವನ್ನು ಕಲಿತಳು ಮತ್ತು ಪಿತ್ರಾರ್ಜಿತ ಆಸ್ತಿಯ ಕಾರಣ ಆರ್ಥಿಕವಾಗಿ ಭದ್ರಳಾಗಿದ್ದಳು. ಈ ಕಾರಣದಿಂದ ಆಕೆ ಕೆಲವು ತೀರ ಉದಾರಾಭಿಪ್ರಾಯದ ವಿಚಾರಗಳನ್ನು ವಿಕಸಿಸಿ, ಅದು ಆಕೆಯನ್ನು, ಆಕೆಯೇ ಹೇಳಿದಂತೆ, ಒಬ್ಬ “ಪ್ರತಿಭಟಕ, ಅಸಭ್ಯ, ಬಲಾತ್ಕಾರ ಭಾವದ ಮತ್ತು ನಾಸ್ತಿಕ” ವ್ಯಕ್ತಿಯಾಗಿ ಮಾಡಿತು. “ಪ್ರತಿಯೊಂದು ವಿಷಯವನ್ನೂ ಹಣದಿಂದ ಇತ್ಯರ್ಥಗೊಳಿಸಸಾಧ್ಯವಿದೆ ಮತ್ತು ದೇವರು ಪ್ರಾಮುಖ್ಯವಲ್ಲ ಎಂದು ನಾನು ಯೋಚಿಸುವವಳಾದೆ. ವಾಸ್ತವವಾಗಿ, ಆತನು ಅಸ್ತಿತ್ವದಲ್ಲಿ ಕೂಡ ಇಲ್ಲ ಎಂದು ನನಗನಿಸಿತು,” ಎಂದು ಮರೀಯ ನೆನಪಿಸಿಕೊಂಡಳು. “ನನಗೆ ಚರ್ಚ್ ಎಂಬುದು ಹಾಸ್ಯಾಸ್ಪದವಾಗಿತ್ತು, ಅದು ಕೇವಲ ಒಂದು ಸಾಮಾಜಿಕ ಆವಶ್ಯಕತೆಯಾಗಿತ್ತು,” ಎಂದು ಆಕೆ ಕೂಡಿಸಿ ಹೇಳಿದಳು.
ಸಮಯಾನಂತರ, ತನ್ನ ಸೋದರಬಂಧುವೊಬ್ಬನು ಯೆಹೋವನ ಸಾಕ್ಷಿಗಳಲ್ಲೊಬ್ಬನಾದಾಗ ಆಕೆ ಅವನಲ್ಲಿ ಬದಲಾವಣೆಗಳನ್ನು ಗಮನಿಸಿದಳು. “ಎಷ್ಟೋ ಭಯಂಕರನಾಗಿದ್ದ ಅವನು ಈಗ ಬಹು ಶಾಂತಸ್ಥಿತಿಯ ಮತ್ತು ಪ್ರಾಮಾಣಿಕ ವ್ಯಕ್ತಿ,” ಎಂದು ಮರೀಯ ವಿವರಿಸಿದಳು. “ಅವನು ಈಗ ಒಬ್ಬ ಸೌವಾರ್ತಿಕನಾಗಿದ್ದು ಬೈಬಲನ್ನು ಓದುವವನಾಗಿದ್ದಾನೆ, ಮತ್ತು ಈ ಕಾರಣದಿಂದ ಈಗ ಅವನು ಕುಡಿಯುವುದೂ ಇಲ್ಲ, ಹೆಣ್ಣುಗಳ ಹಿಂದೆ ಓಡುವುದೂ ಇಲ್ಲ ಎಂದು ನನ್ನ ಸಂಬಂಧಿಗಳು ಹೇಳಿದರು. ಆದುದರಿಂದ ಅವನು ಬಂದು ಬೈಬಲನ್ನು ನನಗೆ ಓದಿಹೇಳುವಂತೆ ನಾನು ಬಯಸಿದೆ, ಏಕೆಂದರೆ ಈ ರೀತಿಯಲ್ಲಿ ನನಗೆ ತೀರ ಬೇಕಾಗಿದ್ದ ಶಾಂತಿ ಮತ್ತು ಪ್ರಶಾಂತತೆ ದೊರೆಯುತ್ತದೆಂದು ನಾನು ನೆನಸಿದೆ.” ಇದರ ಫಲಿತಾಂಶವಾಗಿ ಮರೀಯ ಒಂದು ಸಾಕ್ಷಿ ದಂಪತಿಗಳಿಂದ ಬೈಬಲ್ ಅಧ್ಯಯನವನ್ನು ಅಂಗೀಕರಿಸಿದಳು.
ಆಕೆಗೆ ಬಗೆಹರಿಸಲು ಅನೇಕ ವಿಷಯಗಳಿದ್ದವು, ಮತ್ತು ತನ್ನ ಪತಿಗೆ ಅಧೀನಳಾಗಿರಲಿಕ್ಕಾಗಿ ತಲೆತನದ ಸಂಬಂಧದಲ್ಲಿರುವ ಬೈಬಲ್ ಮೂಲಸೂತ್ರವನ್ನು ಅಂಗೀಕರಿಸುವುದು ಆಕೆಗೆ ಅತಿ ಕಷ್ಟವಾಗಿತ್ತು. ಆದರೆ ಆಕೆ ತನ್ನ ಜೀವನ ಮತ್ತು ಮನೋಭಾವದಲ್ಲಿ ತೀವ್ರಗಾಮಿ ಬದಲಾವಣೆಗಳನ್ನು ಮಾಡಿದಳು. ಆಕೆ ಒಪ್ಪಿಕೊಂಡದ್ದು: “ಆ ಸಹೋದರರು ಯಾವಾಗ ನನ್ನ ಮನೆಯನ್ನು ಪ್ರವೇಶಿಸಿ ತಮ್ಮೊಡನೆ ಯೆಹೋವನ ಸಹಾಯವನ್ನು ತಂದರೋ ಅಂದಿನಿಂದ ಸಂತೋಷ, ಪ್ರಶಾಂತತೆ ಮತ್ತು ದೇವರ ಆಶೀರ್ವಾದ ನನ್ನ ಮನೆಯಲ್ಲಿ ನೆಲೆಸಿರುತ್ತದೆ.” ಇಂದು ಮರೀಯ ಒಬ್ಬ ಸಮರ್ಪಿತ, ಸ್ನಾತ ಯೆಹೋವನ ಸಾಕ್ಷಿ.
ಸತ್ಯಾರಾಧನೆಯ ಬೆನ್ನಟ್ಟುವಿಕೆಯಲ್ಲಿ, ದೈನ್ಯಭಾವ ಅಥವಾ ಅದರ ಕೊರತೆ ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುವ ಇನ್ನೊಂದು ಕ್ಷೇತ್ರವಿದೆ. ಅನೇಕಾನೇಕ ವೇಳೆ, ಕುಟುಂಬದಲ್ಲಿ ಪತ್ನಿಯು ಸತ್ಯವನ್ನು ಅಂಗೀಕರಿಸಿ ದೇವರನ್ನು ಸೇವಿಸಬಯಸುತ್ತಾಳೆ. ಆದರೂ ಪತಿ ಹಿಂಜರಿಯುತ್ತಾನೆ. ಪ್ರಾಯಶಃ ಕೆಲವು ಪತಿಗಳಿಗೆ ತಮ್ಮ ಪತ್ನಿ ಈಗ ಇನ್ನೊಬ್ಬನಿಗೆ—ಯೆಹೋವ ದೇವರಿಗೆ—ಅಧೀನಳಾಗಿರಬೇಕೆಂಬ ವಿಚಾರವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. (1 ಕೊರಿಂಥ 11:3) ಮೆಕ್ಸಿಕೋ ದೇಶದ ಚವಾವದಲ್ಲಿ ಒಬ್ಬ ಸ್ತ್ರೀ ಒಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡಳು, ಮತ್ತು ಸಕಾಲದಲ್ಲಿ ಆಕೆಯೂ ಆಕೆಯ ಏಳು ಮಂದಿ ಮಕ್ಕಳೂ ಸತ್ಯಕ್ಕೆ ಬಂದರು. ಪ್ರಥಮದಲ್ಲಿ ಗಂಡನು ವಿರೋಧಿಸುತ್ತಿದ್ದನು. ಏಕೆ? ಏಕೆಂದರೆ ಅವನ ಕುಟುಂಬ ಬೈಬಲ್ ಸಾಹಿತ್ಯಗಳನ್ನು ನೀಡುತ್ತಾ ಮನೆಯಿಂದ ಮನೆಗೆ ಸಾರುವುದು ಅವನಿಗೆ ಇಷ್ಟವಿರಲಿಲ್ಲ. ಇದು ತನ್ನ ಘನತೆಗೆ ಹೀನವಾದದೆಂದು ಅವನು ಅಭಿಪ್ರಯಿಸಿದನೆಂಬುದು ಸುವ್ಯಕ್ತ. ಆದರೆ ಅವನ ಕುಟುಂಬವು ದೇವರನ್ನು ಸೇವಿಸುವ ತಮ್ಮ ನಿರ್ಧಾರದಲ್ಲಿ ಸ್ಥಿರವಾಗಿ ನಿಂತಿತು. ಸಕಾಲದಲ್ಲಿ, ಗಂಡನು ದೇವರ ಏರ್ಪಾಡನ್ನು ಒಪ್ಪಿಕೊಳ್ಳುವ ಬೆಲೆಯನ್ನು ಗ್ರಹಿಸತೊಡಗಿದನು. ಆದರೆ ಅವನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಮೊದಲು 15 ವರ್ಷಗಳು ದಾಟಿದವು.
ಮೆಕ್ಸಿಕೋ ದೇಶಾದ್ಯಂತ, ಸ್ಥಳಿಕ ನಿವಾಸಿಗಳಿಗೆ ಅವರದ್ದೇ ಆದ ದೇಶೀಯ ಇಂಡಿಯನ್ ಭಾಷೆಗಳೂ ಪದ್ಧತಿಗಳೂ ಇರುವ, ದೂರ ಚದರಿರುವ ಅನೇಕ ಸಮುದಾಯಗಳಿವೆ. ಈ ಜನರಿಗೂ ಬೈಬಲಿನ ಸಂದೇಶವು ತಲುಪುತ್ತಿದ್ದು, ಕೆಲವರು ಓದಿ ಬರೆಯಲು ಕಲಿತು ಸತ್ಯವನ್ನು ಕಲಿಯುವಾಗ ಅದು ಅವರ ಸಾಂಸ್ಕೃತಿಕ ಮಟ್ಟವನ್ನು ಉತ್ತಮಗೊಳಿಸುವಂತೆ ಸಹಾಯಿಸುತ್ತಿದೆ. ಆದರೂ, ಜನರಿಗೆ ಅಲ್ಪ ವಿದ್ಯೆಯಿದೆ ಮತ್ತು ಸ್ವಲ್ಪವೇ ಪ್ರಾಪಂಚಿಕ ಮೂಲಸಂಪತ್ತಿದೆ ಎಂಬ ನಿಜತ್ವವು ಅವರನ್ನು ಹೆಚ್ಚು ಅಂಗೀಕಾರ ಪ್ರವೃತ್ತಿಯವರನ್ನಾಗಿ ಮಾಡಬೇಕೆಂದಿರುವುದಿಲ್ಲ. ತಮ್ಮ ಜಾತೀಯ ಹೆಮ್ಮೆ ಮತ್ತು ಪೂರ್ವಿಕರ ಸಂಪ್ರದಾಯಗಳಿಗೆ ಬಲವಾದ ಅಂಟಿಕೊಳ್ಳುವಿಕೆಯು ಕೆಲವು ವೇಳೆ ಕೆಲವರಿಗೆ ಸತ್ಯದ ಅಂಗೀಕಾರವನ್ನು ಕಷ್ಟಕರವಾಗಿ ಮಾಡುತ್ತದೆ. ಕೆಲವು ದೇಶೀ ಹಳ್ಳಿಗಳಲ್ಲಿ ಸತ್ಯವನ್ನು ಅಂಗೀಕರಿಸುವವರನ್ನು ಇತರ ಹಳ್ಳಿವಾಸಿಗಳು ಅನೇಕ ಸಲ ಏಕೆ ಪೀಡಿಸುತ್ತಾರೆಂಬುದನ್ನು ಇದು ತೋರಿಸಿ ಕೊಡುತ್ತದೆ ಕೂಡ. ಹೀಗೆ, ದೈನ್ಯಭಾವ ಅನೇಕ ರೂಪಗಳನ್ನು ತೆಗೆದುಕೊಳ್ಳುತ್ತದೆ.
ದೈನ್ಯದಿಂದ ಪ್ರತಿವರ್ತಿಸಿರಿ
ವ್ಯಕ್ತಿಪರವಾಗಿ ನಿಮ್ಮ ಕುರಿತೇನು? ದೇವರ ವಾಕ್ಯದ ಸತ್ಯಕ್ಕೆ ನೀವು ಪ್ರತಿವರ್ತನೆ ತೋರಿಸುತ್ತೀರೊ? ಅಥವಾ, ಕೆಲವು ಬೈಬಲ್ ಸತ್ಯಗಳನ್ನು ಅಂಗೀಕರಿಸುವುದು ನಿಮಗೆ ಕಷ್ಟವಾಗುತ್ತದೆಯೆ? ನಿಮ್ಮನ್ನು ಯಾವುದು ತಡೆಯುತ್ತದೆಂದು ನೀವು ಪ್ರಾಯಶಃ ನಿಮ್ಮನ್ನು ಪರೀಕ್ಷಿಸ ಬಯಸುವಿರಿ. ಸತ್ಯಕ್ಕೆ ಆಕರ್ಷಿಸಲ್ಪಡುವವರಲ್ಲಿ ಬಹುತೇಕ ಜನರು ದೀನ ಮೂಲದವರಾಗಿರುವುದು ನಿಮ್ಮನ್ನು ಗೊಂದಲಕ್ಕೊಳಪಡಿಸುತ್ತದೆಯೆ? ನಿಮ್ಮ ಯೋಚನೆಯಲ್ಲಿ ವ್ಯಕ್ತಿಪರ ಸ್ವಾಭಿಮಾನ ಸೇರಿರಬಹುದೆ? ಅಪೊಸ್ತಲ ಪೌಲನ ನುಡಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳುವುದು ಒಳ್ಳೆಯದು: “ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ. ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ. ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.”—1 ಕೊರಿಂಥ 1:27-29.
ಒಂದು ನಿಧಿಯನ್ನು ಕೀಳಾದ ಮಣ್ಣಿನ ಪಾತ್ರೆಯಲ್ಲಿ ನೀವು ಕಂಡುಹಿಡಿದ ಮಾತ್ರಕ್ಕೆ ಅದನ್ನು ನೀವು ತಳ್ಳಿಹಾಕುವಿರೊ? ನಿಶ್ಚಯವಾಗಿಯೂ ಇಲ್ಲ! ಆದರೂ ತನ್ನ ಜೀವರಕ್ಷಕ ಸತ್ಯವಾಕ್ಯವನ್ನು ನಮಗೆ ನೀಡಲು ದೇವರು ಇದೇ ಮಾರ್ಗವನ್ನು ಆರಿಸಿಕೊಂಡಿದ್ದಾನೆ. ಅಪೊಸ್ತಲ ಪೌಲನು ವಿವರಿಸುವುದು: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂಥ 4:7) ದೈನ್ಯಭಾವ ಮತ್ತು ನಮ್ರತೆಯು ಈ ನಿಕ್ಷೇಪದ ನಿಜ ಬೆಲೆಯನ್ನು—ಅದನ್ನು ತಿಳಿಯಪಡಿಸುವ “ಮಣ್ಣಿನ ಘಟ” ಗಳನ್ನು ಅಥವಾ ಮಾನವ ಮಾಧ್ಯಮಗಳನ್ನಷ್ಟೇಯಲ್ಲ—ನಾವು ನೋಡುವಂತೆ ಸಾಧ್ಯ ಮಾಡುವುದು. ಹೀಗೆ ಮಾಡುವುದರಿಂದ, “ಯೆಹೋವನ ಸಿಟ್ಟಿನ ದಿನದಲ್ಲಿ . . . ಮರೆ” ಮಾಡಲ್ಪಡುವ ಮತ್ತು “ಭೂಮಿಗೆ ಬಾಧ್ಯರು” ಆಗುವ ಸಂಭವನೀಯತೆಯನ್ನು ಸಹ ನಾವು ಹೆಚ್ಚಿಸುವೆವು.—ಚೆಫನ್ಯ 2:3; ಮತ್ತಾಯ 5:5.