ಪೂರ್ವ ಮತ್ತು ಪಶ್ಚಿಮ, ಯೆಹೋವನು ತನ್ನ ಜನರನ್ನು ಬಲಪಡಿಸುತ್ತಾನೆ
ಸಾರುವ ಕಾರ್ಯವು ನಿಷೇಧಿಸಲ್ಪಟ್ಟಿರುವ ಟೆರಿಟೊರಿಗಳಲ್ಲಿ, ಹಿಂಸಾಚಾರದಿಂದ ಇಬ್ಭಾಗವಾಗಿ ಸೀಳಲ್ಪಟ್ಟ ನಾಡುಗಳಲ್ಲಿ, ಮತ್ತು ಇತ್ತೀಚೆಗೆ ನಿಷೇಧಗಳು ತೆಗೆಯಲ್ಪಟ್ಟ ದೇಶಗಳಲ್ಲಿ—ನಿಶ್ಚಯವಾಗಿ ಜಗದ್ವ್ಯಾಪಕ ರಂಗದಲ್ಲೆಲ್ಲೂ—ಯೆಹೋವನು ತನ್ನ ಜನರಿಗೆ “ಬಲಾಧಿಕ್ಯವನ್ನು” ಒದಗಿಸುವುದನ್ನು ಮುಂದುವರಿಸುತ್ತಾ ಇದ್ದಾನೆ.—2 ಕೊರಿಂಥ 4:7.
ನಿಷೇಧದ ಕೆಳಗೆ ಸಮೃದ್ಧಿ
ದೂರಪೂರ್ವದ ಒಂದು ದ್ವೀಪಸ್ತೋಮದಲ್ಲಿ ಸಾರುವ ಕಾರ್ಯವು ಈಗ 17 ವರ್ಷಗಳಿಂದ ನಿಷೇಧಿಸಲ್ಪಟ್ಟಿರುತ್ತದೆ. ಸಾಕ್ಷಿಗಳು ನಿರುತ್ತೇಜನಗೊಂಡಿದ್ದಾರೋ? ಇಲ್ಲವೇ ಇಲ್ಲ! ಈ ಕಳೆದ ಮೇ ತಿಂಗಳಲ್ಲಿ ಅವರು 10,756 ಪ್ರಚಾರಕರ ಒಂದು ಹೊಸ ಉನ್ನತ ಸಂಖ್ಯೆಯನ್ನು ತಲಪಿರುತ್ತಾರೆ, ಅವರಲ್ಲಿ 1,297 ಮಂದಿ ಪೂರ್ಣ-ಸಮಯದ ಶುಶ್ರೂಷಕರಾಗಿ ಸೇವೆಮಾಡುತ್ತಿದ್ದರು. ಲೋಕ ಪರಿಸ್ಥಿತಿಗಳು ಕೆಡುತ್ತಾ ಬಂದಂತೆ, ದ್ವೀಪ ನಿವಾಸಿಗಳು ಸತ್ಯಕ್ಕೆ ಕಿವಿಗೊಡಲು ಎಂದಿಗಿಂತಲೂ ಹೆಚ್ಚು ಪ್ರವೃತ್ತಿಯುಳ್ಳವರಾಗಿದ್ದಾರೆ. ಹೀಗೆ ಆಸಕ್ತ ಜನರ ಮನೆಗಳಲ್ಲಿ 15,654 ಬೈಬಲಭ್ಯಾಸಗಳನ್ನು ಅವರು ವರದಿಸುತ್ತಿದ್ದಾರೆ. ಇದಕ್ಕೆ ಮುಂಚೆ, ಯೇಸುವಿನ ಮರಣದ ಸ್ಮಾರಕಕ್ಕೆ ಸದ್ದಿಲ್ಲದೆ ನಡಿಸಲ್ಪಟ್ಟ ಕೂಟಗಳನ್ನು 25,397 ಜನರು ಹಾಜರಾದರು.
“ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳು ನಡೆದಾಗ—ಸ್ಥಳಿಕ ಪರಿಸ್ಥಿತಿಗಳಿಗನುಸಾರ ಮತ್ತೊಮ್ಮೆ ಗುಪ್ತವಾಗಿ—ಅಮೆರಿಕದಲ್ಲಿ ಹೊರಡಿಸಲ್ಪಟ್ಟ ಅದೇ ಪುಸ್ತಕಗಳ ಪ್ರತಿಗಳನ್ನು ಸ್ಥಳಿಕ ಭಾಷೆಯಲ್ಲಿ ಪಡೆದುಕೊಳ್ಳಲು ಸಹೋದರರು ಸಂತೋಷಪಟ್ಟರು. ನೂರಾರು ಪುಟಗಳುಳ್ಳ ಮುಖ್ಯ ಪುಸ್ತಕದ ಬಿಡುಗಡೆಯನ್ನು ಸಕಾಲದಲ್ಲಿ ತಯಾರಿಸಲು ಸಾಧ್ಯವಾಗುವಂತೆ ಭಾಷಾಂತರಗಾರರು, ಕರಡಚ್ಚು ವಾಚಕರು, ಮತ್ತು ಇತರರು ಹೆಚ್ಚು ತಾಸುಗಳ ಕೆಲಸಕ್ಕಾಗಿ ಸ್ವಯಂಸೇವೆ ನೀಡಿದರು. ಮತ್ತು ಹೊರಗಿನ ಒಂದು ಸಹಕಾರಿ ಛಾಪಖಾನೆಯು ಮುದ್ರಣ ಮತ್ತು ಬೈಂಡಿಂಗ್ನ ಒಂದು ಅಂದವಾದ ಕೆಲಸವನ್ನು ಮಾಡಲು ಸಂತೋಷಪಟ್ಟಿತು. ಒಂದು ಸಾವಿರಕ್ಕಿಂತಲೂ ಹೆಚ್ಚು ವರ್ಣರಂಜಿತ ಚಿತ್ರಗಳ ಸರಣಿಯಿಂದ ಕೂಡಿದ ಈ ಪ್ರಕಾಶನವನ್ನು ಪಡೆಯಲು ಅಧಿವೇಶನಕಾರರು ಉಲ್ಲಾಸಪಟ್ಟರು. ಅನೇಕ ಸರಕಾರಿ ಅಧಿಕಾರಿಗಳು ಯೆಹೋವನ ಸಾಕ್ಷಿಗಳನ್ನು ಗೌರವಿಸುತ್ತಾರೆ, ಮತ್ತು ವಿರೋಧವು ಮುಖ್ಯವಾಗಿ ಕ್ರೈಸ್ತಪ್ರಪಂಚದ ವೈದಿಕರಿಂದ ಬರುತ್ತದೆ. ನಿಷೇಧವು ಬೇಗನೆ ತೆಗೆಯಲ್ಪಡುವುದೆಂದು ನಿರೀಕ್ಷಿಸಲಾಗುತ್ತಿದೆ.
ಅಮೆರಿಕಗಳ ಕುರಿತೇನು?
ಈ ಪಾಶ್ಚಾತ್ಯ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಸಮಸ್ಯೆಗಳನ್ನು ಕೈಹಚ್ಚುವುದರಲ್ಲಿ ಪೂರ್ವದಲ್ಲಿನ ತಮ್ಮ ಸಹೋದರರೊಂದಿಗೆ ಐಕಮತ್ಯದಿಂದಿದ್ದಾರೆ, ಮತ್ತು ಯೆಹೋವನ ಪವಿತ್ರಾತ್ಮವು ಕಷ್ಟದ ಸನ್ನಿವೇಶಗಳನ್ನು ಪರಿಹರಿಸಲು ಅವರಿಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಎಲ್ಲಿ ಮಾದಕ ದ್ರವ್ಯದ ಕಳ್ಳಸಾಗಣೆಗಳು ಅರಣ್ಯಗಳಲ್ಲಿ ನಡಿಸಲ್ಪಡುತ್ತವೋ ಆ ಲ್ಯಾಟಿನ್ ಅಮೆರಿಕದ ಒಂದು ದೇಶದ ಕೆಳಗಿನ ವರದಿಯನ್ನು ತೆಗೆದುಕ್ಕೊಳ್ಳಿರಿ.
ಸಾಕ್ಷಿಗಳ ಒಂದು ಗುಂಪು ಪ್ರತ್ಯೇಕವಾದ ಒಂದು ಟೆರಿಟೊರಿಗೆ ಬಸ್ಸಿನಲ್ಲಿ ಹೋಯಿತು. ಅವರು ಬಸ್ಸಿನಿಂದ ಇಳಿದಾಗ, ಹಳ್ಳಿಯಿಂದ ಹೊರಗೆ ನಡೆಸುವ ಒಂದು ಕಿರುದಾರಿಯನ್ನು ಅವರು ಗಮನಿಸಿದರು. ಆದುದರಿಂದ ಸಹೋದರಿಯರನ್ನು ಮತ್ತು ಮಕ್ಕಳನ್ನು ಹಳ್ಳಿಯಲ್ಲಿ ಸೇವೆ ಮಾಡಲು ನೇಮಿಸಿ, ಐವರು ಸಹೋದರರು ಆ ಕಾಲುಹಾದಿಯು ಎಲ್ಲಿಗೆ ನಡಿಸುತ್ತದೆಂದು ನೋಡ ಹೋದರು. ಆ ಸಹೋದರರಲ್ಲೊಬ್ಬನು ತಿಳಿಸುವುದು:
“ದಾರಿಯುದ್ದಕ್ಕೂ ಎರಡು ತಾಸು ನಡೆದಾಗ ಕೇವಲ ಕೆಲವೇ ಮನೆಗಳು ತೋರಿಬಂದವು. ಆಗ, ತಮ್ಮ ತಲೆಗಳ ಮೇಲೆ ಮುಸುಕು ಹಾಕಿದ್ದ ಎಂಟು ಮಂದಿ ಶಸ್ತ್ರಧಾರಿ ಪುರುಷರು ಅರಣ್ಯದೊಳಗಿಂದ ಥಟ್ಟನೆ ಹೊರಬಂದರು. ಕೆಲವರಲ್ಲಿ ಯಂತ್ರಫಿರಂಗಿಗಳಿದ್ದವು, ಮತ್ತು ಇನ್ನು ಕೆಲವರಲ್ಲಿ ಮಚ್ಚುಕತ್ತಿಗಳಿದ್ದವು. ನಮಗೆ ಎದುರಾಗಿರುವುದು ಇದೇನು? ಅವರಿಗೇನು ಬೇಕೆಂದು ನಾವು ಕೇಳತೊಡಗಿದೆವು, ನಾವು ಮಾತಾಡದೆ ಸುಮ್ಮಗಿರುವಂತೆಯೂ—ಸೀದಾ ಮುಂದೆ ನಡೆಯುವಂತೆಯೂ ಹೇಳಲಾಯಿತು. ನಾವು ನಡೆದೆವು! ದಟ್ಟವಾದ ಕಾಡುಪೊದೆಯೊಳಗಿನಿಂದ ಇನ್ನೆರಡು ತಾಸು ನಡೆಯುವಿಕೆಯು ನಮ್ಮನ್ನು ವ್ಯಕ್ತವಾಗಿಯೇ ಶಸ್ತ್ರಸಜ್ಜಿತ ಶಿಬಿರವಿದ್ದ ತೆರಪಿಗೆ ತಂದಿತು. ಕೋವಿಗಳನ್ನು ಹಿಡಿದಿದ್ದ ಕಾವಲುಗಾರರು ಎಲ್ಲಾ ಕಡೆ ಇದ್ದರು. ಮಧ್ಯದಲ್ಲಿ ಒಂದು ಅಂದವಾಗಿ ಕಟ್ಟಲ್ಪಟ್ಟ ಮನೆಗೆ ನಾವು ನಡಿಸಲ್ಪಟ್ಟೆವು.
“ನಾವು ಕೂತುಕೊಂಡಾಗ, ಶಿಬಿರದ ನಾಯಕನೆಂದು ವ್ಯಕ್ತವಾದ ಒಬ್ಬನಿಂದ ನಾವು ಸಂಬೋಧಿಸಲ್ಪಟ್ಟೆವು. ಅವನು ನೀಟಾದ ಉಡುಪು ತೊಟ್ಟವನೂ, ವಿದ್ಯಾವಂತನೂ, ಮತ್ತು ತೀರ ಮರ್ಯಾದಸ್ಥನೂ ಆಗಿದ್ದನು. ಅವನು ನಮ್ಮ ಸಹೋದರರ ಗುಂಪಿನ ಒಬ್ಬನಿಗೆ ಕೈತೋರಿಸಿ, ಅವನನ್ನು ನಿಲ್ಲುವಂತೆ ಹೇಳಿದನು. ಅನಂತರ ಅವನು ಕೇಳಿದ್ದು: ‘ನಮ್ಮ ಗುಂಪಿನ ಕುರಿತು ನಿನ್ನ ಅಭಿಪ್ರಾಯವೇನು?’ ನಾವೆಲ್ಲಿದ್ದೇವೆಂದು ಪೂರ್ಣ ಅರಿತವನಾಗಿ ಸಹೋದರನು ಉತ್ತರಿಸಿದ್ದು: ‘ಒಳ್ಳೇದು, ನಿಮ್ಮ ಗುಂಪಿನ ಕುರಿತು ನಮಗೆ ಗೊತ್ತಿದೆ, ಆದರೆ ನಮಗೆ ಅದರಲ್ಲಾಗಲಿ ಯಾ ಬೇರೆ ಯಾವ ರಾಜಕೀಯ ಗುಂಪಿನಲ್ಲಾಗಲಿ ಆಸಕ್ತಿ ಇಲ್ಲ. ನಾವಿಲ್ಲಿರುವ ಒಂದೇ ಕಾರಣ ಕ್ರಿಸ್ತ ಯೇಸುವಿನ ಮೂಲಕವಾದ ಯೆಹೋವನ ರಾಜ್ಯದ ಕುರಿತು ಸಾರುವುದಕ್ಕಾಗಿ. ಅದು ಬೇಗನೆ ಈ ವಿಷಯಗಳ ವ್ಯವಸ್ಥೆಯ ಎಲ್ಲಾ ರಾಜಕೀಯ ಸರಕಾರಗಳನ್ನು ನಾಶಮಾಡಲಿದೆ ಮತ್ತು—ಯಾವ ಮನುಷ್ಯನಾಗಲಿ ಮನುಷ್ಯರ ಗುಂಪಾಗಲಿ ಮಾಡಸಾಧ್ಯವಿಲ್ಲದ ಒಂದು ವಿಷಯವನ್ನು—ಪ್ರಮೋದವನ ಪರಿಸ್ಥಿತಿಗಳ ಕೆಳಗೆ ಈ ಭೂಮಿಯ ಮೇಲೆ ಜನರಿಗೆ ಆಶ್ಚರ್ಯಕರ ಆಶೀರ್ವಾದಗಳನ್ನು ಅದು ತರಲಿದೆ.’
“ಆ ಮನುಷ್ಯನ ಮನೋಭಾವವು ಬದಲಾಯಿತು. ಅವನು ಪ್ರಶ್ನೆಗಳನ್ನು ಕೇಳತೊಡಗಿದನು. ‘ನೀನು ಇದೆಲ್ಲವನ್ನು ಎಲ್ಲಿಂದ ಕಲಿತಿ? ಹಾಗೆ ಮಾತಾಡಲು ನೀನು ತಯಾರಿದ್ದದ್ದು ಹೇಗೆ?’ ಒಂದೂವರೆ ತಾಸಿನ ತನಕ ನಾವು ಅವನಿಗೆ ಲೋಕ ಪರಿಸ್ಥಿತಿಗಳ ಕುರಿತು ಒಳ್ಳೇ ಸಾಕ್ಷಿಕೊಡಲು ಮತ್ತು ಮಾನವ ಕುಲಕ್ಕಾಗಿರುವ ಒಂದೇ ನಿರೀಕ್ಷೆಯನ್ನು ಬೈಬಲು ಗುರುತಿಸುತ್ತದೆಂದು ತೋರಿಸಲು ಶಕ್ತರಾದೆವು. ಅಧಿಕಾರದಲ್ಲಿರುವ ಅಧಿಕಾರಿಗಳಿಗೆ ನಾವು ವಿಧೇಯರಾಗುತ್ತೇವೆ ಆದರೆ ಯೆಹೋವನ ವಾಕ್ಯ ಮತ್ತು ಅವರ ನಡುವೆ ಒಂದು ಘರ್ಷಣೆಯು ಇರುವಾಗ, ನಾವು ನಮ್ಮ ದೇವರಾದ ಯೆಹೋವನಿಗೇ ಮೊದಲು ವಿಧೇಯರಾಗುತ್ತೇವೆಂಬ—ರೋಮಾಪುರ 13 ನೆಯ ಅಧ್ಯಾಯದ ವಿವರವನ್ನು ಸಹ ನಾವು ತಿಳಿಸಿದೆವು. ಕೊನೆಗೆ ನಮ್ಮಲ್ಲಿದ್ದ ಪುಸ್ತಕಗಳನ್ನು ನಾವು ಅವನಿಗೆ ನೀಡಿದೆವು. ಅವನು ಅವುಗಳಲ್ಲಿ ಮೂರನ್ನು ಮತ್ತು ಒಂದು ಬೈಬಲನ್ನು ತೆಗೆದುಕೊಂಡನು, ಮತ್ತು ನಮಗೆ ಹೆಚ್ಚು ಆಶ್ಚರ್ಯವಾಗುವಂತೆ, ಅವುಗಳಿಗಾಗಿ ಕಾಣಿಕೆಯನ್ನೂ ಕೊಟ್ಟನು. ಅವುಗಳನ್ನು ತಾನು ಓದುವೆನೆಂದನು.
“ಅನಂತರ ಮುಖ್ಯಸ್ಥನು ನಮ್ಮನ್ನು ಶಿಬಿರದಿಂದ ಹೊರಗೊಯ್ಯುವಂತೆ ಅವನ ಜನರಲ್ಲೊಬ್ಬನಿಗೆ ಸಂಜ್ಞೆಮಾಡಿದನು. ಸಾಕ್ಷಿಕೊಡುವ ಇನ್ನೊಂದು ಕ್ಷೇತ್ರದಲ್ಲಿ ನಮಗೆ ದೊರೆತ ವಿಜಯಕ್ಕಾಗಿ ಯೆಹೋವನಿಗೆ ಉಪಕಾರ ಹೇಳುತ್ತಾ, ನಾವು ಬೇಗನೆ ಹಿಂದೆರಳುವ ದಾರಿ ಹಿಡಿದೆವು.”
ಕಲಹ-ಛಿದ್ರ ಆಫ್ರಿಕದಲ್ಲಿ
ದೂರ ಪೂರ್ವ ಮತ್ತು ದೂರ ಪಶ್ಚಿಮದ ನಡುವಣ ನಡುದಾರಿಯಲ್ಲಿ ಆಫ್ರಿಕನ್ ಭೂಖಂಡವು ನೆಲೆಸಿರುತ್ತದೆ. ಅಲ್ಲಿನ ಕೆಲವು ದೇಶಗಳನ್ನು ಬುಡಕಟ್ಟಿನ ಹೋರಾಟವು ಹಿಂಸಾಚಾರದ ಬಲಾಢ್ಯ ನೀರುಸುಳಿಗಳನ್ನಾಗಿ ಮಾರ್ಪಡಿಸಿದೆ. ಲೈಬೀರಿಯದಲ್ಲಿ ಯೆಹೋವನ ಜನರು ಪುನಃ ಒಳಯುದ್ಧದ ಉಬ್ಬರದಿಂದಾಗಿ ಆಳವಾಗಿ ಬಾಧಿತರಾಗಿದ್ದಾರೆ. ಮೊದಲು 1992ರ ಅಕ್ಟೋಬರ ಮತ್ತು ನವಂಬರದ ಸಮಯದಲ್ಲಿ ಮುಖ್ಯ ಪಟ್ಟಣದ ಸುತ್ತಮುತ್ತಲೂ ಹೋರಾಟ ನಡೆದಿತ್ತು. ಅನಂತರ, ಯುದ್ಧವು ಒಳನಾಡಿಗೆ ಹಬ್ಬಿದಷ್ಟಕ್ಕೆ, ಸಹೋದರರು ಉಳಿದ ಜನಸಂಖ್ಯೆಯೊಂದಿಗೆ ಪೊದೆಗಾಡಿಗೆ ಪಲಾಯನಗೈದಾಗ, ಇಡೀ ಸಭೆಗಳು ಚದರಿಹೋದವು. ಆದರೂ, ಅವರ ಹುರುಪು ಕುಂದಿಹೋಗದೆ ಉಳಿದದೆ. ಪಲಾಯನಗೈದ ಹಾಗೆ, ಅವರು ಸಾರುತ್ತಾ ಹೋದರು, ಮತ್ತು ಇದು ಒಳನಾಡಿನ ಅತಿ ದೂರದ ಭಾಗಗಳಲ್ಲಿ ಮಹಾ ಸಾಕ್ಷಿಯು ಕೊಡಲ್ಪಡುವುದರಲ್ಲಿ ಪರಿಣಮಿಸಿದೆ.
ಸ್ಥಾನಚ್ಯುತಿಗೊಂಡ ಸಹೋದರರ ಒಂದು ಸಭೆಯು ರಬ್ಬರ್ ತೋಪಿನ ಮಧ್ಯೆ ಒಂದು ತಾತ್ಕಾಲಿಕ ರಾಜ್ಯ ಸಭಾಗೃಹವನ್ನು ಕಟ್ಟಿತು. ಸೇನಾಮುಖಗಳ ಸಮೀಪದ ಒಂದು ಊರಲ್ಲಿ, ವಿಮಾನದ ಬಾಂಬ್ ಧಾಳಿಯನ್ನು ಪಾರಾಗಲಿಕ್ಕಾಗಿ ನಗರವಾಸಿಗಳು ಹಗಲು ಹೊತ್ತಿನಲ್ಲಿ ಸುತ್ತಮುತ್ತಲಿನ ರಬ್ಬರ್ ತೋಪುಗಳಿಗೆ ಓಡಿಹೋಗುತ್ತಿದ್ದರು. ಸ್ಥಳಿಕ ಸಹೋದರರು (ರಾಜಧಾನಿ ಮನ್ರೊವಿಯದಿಂದ ಸ್ಥಾನಚ್ಯುತಿಗೊಂಡ ಅನೇಕ ಪ್ರಚಾರಕರೂ ಸೇರಿ) ಕ್ಷೇತ್ರ ಶುಶ್ರೂಷೆಯನ್ನು ಸಂಘಟಿಸಿದರು ಮತ್ತು ರಬ್ಬರ್ ಮರಗಳ ಕೆಳಗೆ ಆಶ್ರಯಪಡೆದ ಸಾವಿರಾರು ಜನರಿಗೆ ಕ್ರಮವಾಗಿ ಸಾರುತ್ತಿರುವುದನ್ನು ಕಾಣಸಾಧ್ಯವಿತ್ತು! ವಿಮಾನವು ಗೋಚರಿಸಿದಾಗಲೆಲ್ಲಾ, ಸಹೋದರರು ಮತ್ತು ಸಹೋದರಿಯರು ಸಮೀಪದ ಒಂದು ಹೊಂಡಕ್ಕೆ ಹಾರಿಬಿಡುತ್ತಿದ್ದರು ಮತ್ತು ಅನಂತರ, ಅಪಾಯವು ದಾಟಿದಾಗ, ತಮ್ಮ ಸಂದರ್ಶನಗಳನ್ನು ಮುಂದುವರಿಸುತ್ತಿದ್ದರು.
ಆಶ್ಚರ್ಯಕರವಾಗಿ, ಸೊಸೈಟಿಗೆ ತಮ್ಮ ವರದಿಗಳನ್ನು ಮುಟ್ಟಿಸಶಕ್ತರಾದ ಸಾವಿರಕ್ಕಿಂತಲೂ ಹೆಚ್ಚು ಸಭಾ ಪ್ರಚಾರಕರು, ಈ ಒಳಯುದ್ಧ ಪರಿಸ್ಥಿತಿಗಳ ಮಧ್ಯೆಯೂ, ಕ್ಷೇತ್ರ ಶುಶ್ರೂಷೆಯಲ್ಲಿ ತಿಂಗಳಿಗೆ ಸರಾಸರಿ 18.1 ತಾಸುಗಳನ್ನು ಹಾಕಿದ್ದಾರೆ ಮತ್ತು 3,111 ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ.
ಆಫ್ರಿಕದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 18 ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯದ ಮೇಲಿನ ನಿರ್ಬಂಧಗಳು ತೆಗೆಯಲ್ಪಟ್ಟಿವೆ. ಆನಂದಗಳ ಆನಂದ! ಆಗಸ್ಟ್ 12 ರಂದು, ಮಲಾವಿಯಲ್ಲಿ 1967ರ ಅಕ್ಟೋಬರ್ ನಲ್ಲಿ ಸಾಕ್ಷಿಗಳ ಮೇಲೆ ಹೊರಿಸಿದ ನಿರ್ಬಂಧವು ಎತ್ತಲ್ಪಟ್ಟಿತು. ಸುವಾರ್ತೆಯ ಭೂಗತ ಸಾರುವಿಕೆಯು ಯಾವಾಗಲೂ ಅಭಿವೃದ್ಧಿ ಹೊಂದಿತ್ತು, ಆದರೆ ಆ ಸಾಕ್ಷಿಗಳು, ದಬ್ಬಾಳಿಕೆ ನಡೆಸುವವರ ಮೂಲಕ ಕೊಲ್ಲಲ್ಪಟ್ಟ ತಮ್ಮ ಸಂಗಾತಿಗಳನ್ನು ಅಭಿನಂದಿಸಲು ಪುನರುತ್ಥಾನಕ್ಕಾಗಿ ಕಾಯಬೇಕಾಗಿದ್ದರೂ, ಈಗ ತಮ್ಮ ಸ್ವಾತಂತ್ರ್ಯದಲ್ಲಿ ಮುಂದುವರಿಯಲು ಶಕ್ತರಾಗಿದ್ದಾರೆ.
ಮೋಜಂಬೀಕ್ನಲ್ಲಿ, ಅಕ್ಟೋಬರ 4, 1992 ರಲ್ಲಿ ಜಾರಿಗೊಳಿಸಲ್ಪಟ್ಟ ಒಂದು ಶಾಂತಿ ಸಂಧಾನವು ಕಳೆದ 16 ವರ್ಷಗಳ ದ್ವಂಸಕಾರಕ ಯುದ್ಧದ ಕಾರಣದಿಂದಾಗಿ ಮುಂಚೆ ಪ್ರವೇಶಿಸಲಾಗದ ಟೆರಿಟೊರಿಗಳು ಈಗ ತಲಪಲ್ಪಡುತ್ತಿವೆ. ಕಾರಿಯೋಕೊ ಕ್ಷೇತ್ರದಲ್ಲಿ, ಕಳೆದ ಏಳು ವರ್ಷಗಳಲ್ಲಿ ಸಂಸ್ಥೆಯೊಂದಿಗೆ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದ್ದ 375 ಸಹೋದರ ಮತ್ತು ಸಹೋದರಿಯರೊಂದಿಗೆ ಸಂಸರ್ಗವನ್ನು ಪುನರ್ಸ್ಥಾಪಿಸಲಾಯಿತು. ಹಿಂದೆ ಕೂಟ ಶಿಬಿರದ ನಿವೇಶನವಾಗಿದ್ದ ಮತ್ತು ಯಾರಲ್ಲಿ ಹೆಚ್ಚಿನವರು ಮಲಾವಿಯ ನಿರಾಶ್ರಿತರಾಗಿದ್ದರೋ ಆ ಯೆಹೋವನ ಸಾಕ್ಷಿಗಳ “ಪುನರ್ಶಿಕ್ಷಣ” ಕ್ಕಾಗಿ ಕೇಂದ್ರವಾಗಿ ಖ್ಯಾತವಾಗಿದ್ದ ಜಿಲ್ಲಾ ರಾಜಧಾನಿ ಮಿಲಾಂಜ್ನಲ್ಲಿ ಒಂದು ವಿಶೇಷ ಒಂದು ದಿನದ ಸಮ್ಮೇಳನ ನಡೆಸಲ್ಪಟ್ಟಿತು. ಯೆಹೋವನ ಸಾಕ್ಷಿಗಳನ್ನು ಸ್ವಾಗತಿಸಿದ ನಗರಾಡಳಿತಗಾರನೂ ಸೇರಿದ್ದ ಅಚ್ಚರಿಗೊಳಿಸುವ ಒಟ್ಟು 2,915 ವ್ಯಕ್ತಿಗಳು ಹಾಜರಾದರು. ಹೀಗೆ ಹಿಂದಿನ “ಪುನರ್ ಶಿಕ್ಷಣ” ಕೇಂದ್ರವು ಆ ದಿನಕ್ಕೆ ದೈವಿಕ ಶಿಕ್ಷಣಕ್ಕಾಗಿ ಕೇಂದ್ರವಾಯಿತು.
ಮಿಷನೆರಿಯೊಬ್ಬನು ಬರೆಯುವುದು: “ಟೇಟ ಪ್ರಾಂತದ ನಿರಾಶ್ರಿತ ಶಿಬಿರದಲ್ಲಿ ತಮ್ಮನ್ನು ಕಂಡುಕೊಂಡ ಸಹೋದರರ ವಿಷಯದಲ್ಲಿ, ಒಂದು ಕುತೂಹಲಕರ ಅವಲೋಕನವು UNHCR (ಯುನೈಟೆಡ್ ನೇಷನ್ಸ್ ಹೈ ಕಮಿಷನರ್ ಫಾರ್ ರೆಫ್ಯುಜೀಸ್)ನ ಒಬ್ಬ ಪ್ರತಿನಿಧಿಯಿಂದ ಮಾಡಲ್ಪಟ್ಟಿತು. ಯೆಹೋವನ ಸಾಕ್ಷಿಗಳು ತಮ್ಮ ಸ್ವಂತ ಶಿಬಿರಗಳನ್ನು, ಬೇರೆ ಗುಂಪುಗಳಿಂದ ಪ್ರತ್ಯೇಕವಾಗಿ ಸಂಘಟಿಸಿದ್ದರೆಂದು ಅವರಂದರು. ‘ಯೋಗ್ಯವಾಗಿ ನಿರ್ವಹಿಸಲ್ಪಟ್ಟದ್ದು ಅವರ ಶಿಬಿರ ಮಾತ್ರವೇ’ ಎಂದನ್ನುತ್ತಾ, ಅವರು ಕೂಡಿಸಿದ್ದು: ‘ಯೆಹೋವನ ಸಾಕ್ಷಿಗಳು ನಿರ್ಮಲರೂ, ಸಂಘಟಿತರೂ, ಸುಶಿಕ್ಷಿತರೂ ಆಗಿದ್ದಾರೆ.’ ಅದನ್ನು ನಾನಾಗಿಯೇ ನೋಡುವಂತೆ ಅವರು ನನ್ನನ್ನು ವಿಮಾನದಲ್ಲಿ ಪೊದೆನಾಡಿನಾಚೆ ಒಯ್ಯಲು ಆಮಂತ್ರಿಸಿದರು. ವಿಮಾನದಿಂದ ಚಾಲಕನು ಎರಡು ಶಿಬಿರಗಳನ್ನು ತೋರಿಸಿದನು. ಒಂದು ಮುರುಕಲೂ ಅಸ್ವಚ್ಚವೂ ಆಗಿದ್ದು, ಯಾವ ಯೋಜನೆಯೂ ಇಲ್ಲದೆ ಒಟ್ಟೊಟ್ಟಿಗೆ ಕಟ್ಟಲ್ಪಟ್ಟ ಹಸಿಮಣ್ಣಿನ ಮನೆಗಳಾಗಿದ್ದವು. ಇನ್ನೊಂದು, ಹಾದಿಗಳಿಂದ ಸಾಲುಗಳಾಗಿ ಪ್ರತ್ಯೇಕಿಸಲ್ಪಟ್ಟ ಮನೆಗಳಿಂದ ಚೆನ್ನಾಗಿ ಯೋಜಿಸಲ್ಪಟ್ಟದ್ದಾಗಿತ್ತು. ಮನೆಗಳಿಗೆ ಚೊಕ್ಕಟವಾದ ಅಂಗಣಗಳಿದ್ದು ನೀಟಾದ ತೋರಿಕೆ ಇತ್ತು. ಕೆಲವು ಮನೆಗಳಿಗೆ ಗೃಹನಿರ್ಮಿತ ಬಣ್ಣ ಸಹ ಬಳೆಯಲ್ಪಟ್ಟಿತ್ತು. ‘ನಿಮ್ಮ ಜನರಿಗೆ ಸೇರಿದ್ದು ಯಾವುದೆಂದು ಊಹಿಸಿರಿ’ ಎಂದನು ಚಾಲಕನು. ಈ ಶಿಬಿರದಲ್ಲಿ ಸಹೋದರರನ್ನು ಭೇಟಿಯಾಗುವುದು ನನಗೆ ಮಹಾ ಸಂತೋಷವನ್ನು ಕೊಟ್ಟಿತು. ಈ ಸಾಕ್ಷಿ ಹಳ್ಳಿಯಲ್ಲಿ ಈಗ ಎಂಟು ಸಭೆಗಳು ಇವೆ.”
“ಗರುಡನ ದೇಶ” ದಲ್ಲಿ
ಅಲ್ಲ, ಇದು ಅಮೆರಿಕದ ಗರುಡನಲ್ಲ! ಪೂರ್ವ ಮತ್ತು ಪಶ್ಚಿಮದ ನಡುವೆ ಒಂದು ಯೂರೋಪಿಯನ್ ದೇಶವಾದ ಅಲ್ಪೇನಿಯ ನೆಲೆಸಿದೆ, ಅಧಿಕೃತ ಭಾಷೆಯಾದ ಶ್ಕೈಯೀಪೀರಿಯ ದಲ್ಲಿ ಅದರ ಹೆಸರು “ಗರುಡನ ದೇಶ” ಎಂಬರ್ಥವುಳ್ಳದ್ದಾಗಿದೆ. ಈ ದೇಶದಲ್ಲಿ ಯೆಹೋವನ ಸಾಕ್ಷಿಗಳ ಮೇಲಿದ್ದ 50-ವರ್ಷಗಳ ಒಂದು ಕ್ರೂರ ನಿಷೇಧವು ಇತ್ತೀಚೆಗೆ ತೆಗೆಯಲ್ಪಟ್ಟಿತು, ಮತ್ತು ಅವರು ತಮ್ಮ ಆರಾಧನಾ ಸ್ವಾತಂತ್ರ್ಯದ ಆನಂದದಲ್ಲಿ ಪೂರ್ವದ ಮತ್ತು ಪಶ್ಚಿಮದ ತಮ್ಮ ಸಹೋದರರೊಂದಿಗೆ ಐಕ್ಯದಿಂದಿರಲು ಶಕ್ತರಾದರು. ಅವರು ನಿಜವಾಗಿಯೂ “ಅನುಕೂಲ ಸಮಯವನ್ನು ಖರೀದಿಸುತ್ತಿದ್ದಾರೆ.” (ಎಫೆಸ 5:16, NW) ಅಲ್ಪೇನಿಯದ ಇತಿಹಾಸದಲ್ಲೇ ಮೊದಲಿನ ಸಮ್ಮೇಳನವಾದ ಒಂದು ದಿನದ ಸಮ್ಮೇಳನವು, ಮಾರ್ಚ್ 21 ನೆಯ ಭಾನುವಾರದಂದು ರಾಜಧಾನಿ ಟಿರಾನದ ನ್ಯಾಷನಲ್ ತಿಯಟರ್ನಲ್ಲಿ ಜರಗಿತು. ಶನಿವಾರ ಅಪರಾಹ್ಣ 75 ಸಾಕ್ಷಿ ಸ್ವಯಂಸೇವಕರ ಒಂದು ತಂಡವು ಮುರುಕಲು ಕೂಟದ ಸ್ಥಳವನ್ನು ಒಂದು ಹೊಳಪಿನ, ಚೊಕ್ಕಟ ಅಸೆಂಬ್ಲಿ ಹಾಲ್ ಆಗಿ ರೂಪಾಂತರಿಸಿತು. ವ್ಯವಸ್ಥಾಪಕರು ಅಚ್ಚರಿಗೊಂಡರು. ಮತ್ತು ಆ 75 ಸ್ವಯಂಸೇವಕರಲ್ಲಿ ಸುಮಾರು 20 ಮಂದಿ ಮಾತ್ರವೇ ಸ್ನಾನಿತರೆಂಬದು ಗಮನಾರ್ಹವಾಗಿದೆ!
ಹವಾಮಾನವು ಇದಕ್ಕಿಂತಲೂ ಹೆಚ್ಚು ಮೇಲಾಗಿದ್ದಿರಲು ಸಾಧ್ಯವಿರಲಿಲ್ಲ. ಪರದೇಶದ ಪ್ರತಿನಿಧಿಗಳು ಆಗಮಿಸಿದಂತೆ, ಅಭಿವಂದನೆಗಳು—ಹೆಚ್ಚಾಗಿ ಭಾವಾಭಿನಯ ಮತ್ತು ಆಲಿಂಗನೆಯ ಮೂಲಕ—ಆ ವಿಶೇಷ ಸಮ್ಮೇಳನ ದಿನವನ್ನು ಅತಿ ವಿಶೇಷವಾದದ್ದಾಗಿ ಮಾಡಿತು. ಅಂಗೈಗಳನ್ನು ಆಕಾಶದೆಡೆಗೆ ಚಾಚುತ್ತಾ, ಸಹೋದರ ನಾಷೊ ಡೋರಿ ಆರಂಭದ ಪ್ರಾರ್ಥನೆಯನ್ನು ಮಾಡಿದರು. ಅವರಿಗೆ 1930 ರಲ್ಲಿ ದೀಕ್ಷಾಸ್ನಾನವಾಗಿತ್ತು ಮತ್ತು ಅವರು ಈಗ ಬಹುಮಟ್ಟಿಗೆ ದೃಷ್ಟಿಹೀನರೇ ಆಗಿದ್ದಾರೆ. ಕಾರ್ಯಕ್ರಮವು ಅಲ್ಪೇನಿಯ ಭಾಷೆಯಲ್ಲಿ, ಹೆಚ್ಚಿನಾಂಶ ವಿದೇಶೀ ವಿಶೇಷ ಪಯನೀಯರರಿಂದ ನೀಡಲಾಯಿತು. ಸಂದರ್ಶಕ ಗ್ರೀಕ್ ಸಹೋದರರು ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ದಯೆಯಿಂದ ಕಟ್ಟಿದ ಕೊಳದ ಕಡೆಗೆ 41 ಮಂದಿ ಹೊಸ ಸಹೋದರ ಮತ್ತು ಸಹೋದರಿಯರು ಮುನ್ನಡೆದಾಗ, ಉಪಸ್ಥಿತರಿದ್ದ 585 ಮಂದಿ, ಆ ಸಂದರ್ಭಕ್ಕಾಗಿ ಅಲ್ಪೇನಿಯ ಭಾಷೆಗೆ ಭಾಷಾಂತರಿಸಲ್ಪಟ್ಟ ಆರು ಸಂಗೀತಗಳಲ್ಲಿ ಒಂದಾದ—“ಕ್ರೈಸ್ತ ಸಮರ್ಪಣೆ” ಯನ್ನು ಹಾಡಿದರು. ಎಂತಹ ಬದಲಾವಣೆಯು! ಹಿಂದೆ ಒಂದು ಬೈಬಲನ್ನು ಹೊಂದಿರುವುದು ಜೀತ-ಶಿಬಿರಗಳಿಗೆ ಕಳುಹಿಸಲ್ಪಡುವ ಅರ್ಥದಲ್ಲಿತ್ತು ಮತ್ತು ಕೂಟಗಳು ಎರಡು ಯಾ ಮೂರು ಜನರ ಗುಂಪುಗಳಿಗೆ ಸೀಮಿತವಾಗಿದ್ದವು.
ಸಮ್ಮೇಳನದ ಮಾರನೇ ದಿನ ನಾಟ್ಯಮಂದಿರದ ನಿರ್ದೇಶಕನಿಂದ ವಾಚ್ ಟವರ್ ಆಫೀಸಿಗೆ ಒಂದು ಫೋನ್ ಕರೆಬಂತು. ನಾಟ್ಯಮಂದಿರವನ್ನು ಸಾಮಾನ್ಯವಾಗಿ ಯಾರು ಉಪಯೋಗಿಸುತ್ತಾರೆಂಬ ಬಗ್ಗೆ ಅವನ ಆಸಕ್ತಿ ಕೊಂಚವೇ. ಅದು ಸಹಾಯಕ ನಿರ್ದೇಶಕನ ಕೆಲಸ. ಆದರೆ ಅವನಂದದ್ದು: “ನಿಮಗೆ ಉಪಕಾರ ಹೇಳಲು ನಾನು ಕರೆಯಲೇ ಬೇಕಾಯಿತು. ಈ ಸ್ಥಳ ಇಷ್ಟು ಶುದ್ಧವಾಗಿರುವುದನ್ನು ನಾನೆಂದೂ ನೋಡಲಿಲ್ಲ. ನಾನದನ್ನು ಬಣ್ಣಿಸಲೇ ಬೇಕಾದರೆ, ನಮ್ಮ ನಾಟ್ಯಮಂದಿರದ ಮೇಲೆ ನಿನ್ನೆ ಸ್ವರ್ಗದಿಂದ ಗಾಳಿ ಇಳಿದುಬಂತು ಎಂದನ್ನುವೆ. ಯಾವುದೇ ಸಮಯ ನಮ್ಮ ಸೌಕರ್ಯಗಳನ್ನು ಉಪಯೋಗಿಸಲು ನೀವು ಬಯಸಿದರೆ, ದಯವಿಟ್ಟು ಪುನಃ ಬನ್ನಿರಿ, ನಾವು ನಿಮಗೆ ಮೊದಲ ಪರಿಗಣನೆಯನ್ನು ಕೊಡುವೆವು. ನಿಜವಾಗಿಯೂ ನೀವು ಯಾವ ಬಾಡಿಗೆಯೂ ಇಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ನಮ್ಮಲ್ಲಿಗೆ ಬರುವಂತೆ ನಾವು ಮಾಡಬೇಕು.”
ಸಾಕ್ಷಿಗಳು ಬಲಪಡಿಸಲ್ಪಟ್ಟು ಮತ್ತು ಕೃತಜ್ಞತೆಯಿಂದ ತುಂಬಿದವರಾಗಿ ತಮ್ಮ ಶಹರಗಳಿಗೆ ಹಿಂತಿರುಗಿದರು ಮತ್ತು ಯೇಸುವಿನ ಮರಣದ ಸ್ಮಾರಕಕ್ಕಾಗಿ ತಯಾರಿಸತೊಡಗಿದರು. ಕೇವಲ 15 ದಿನಗಳ ಅನಂತರ, ಎಪ್ರಿಲ್ 6 ನೆಯ ಗುರುವಾರ ಮೊದಲನೆಯ ಬಹಿರಂಗ ಸ್ಮಾರಕಾಚರಣೆಯು ಏಳು ಸ್ಥಳಗಳಲ್ಲಿ ನಡೆಯಿತು.
ಬರಾಟ್ ಶಹರದಲ್ಲಿ ಕೂಟದ ಉಪಸ್ಥಿತಿಯು ಸುಮಾರು 170 ಕ್ಕೇರಿತು, ಮತ್ತು ಸ್ಥಳಿಕ ಪಾದ್ರಿ ರೋಷಾವೇಶಗೊಂಡಿದ್ದಾನೆ. ಬರಾಟ್ನ 33 ರಾಜ್ಯ ಪ್ರಚಾರಕರಲ್ಲಿ 21 ಮಂದಿ ಸಮ್ಮೇಳನದಲ್ಲಿ ಸ್ನಾನ ಪಡೆದರು. ಸ್ಮಾರಕಕ್ಕೆ 472 ಮಂದಿ ಹಾಜರಾದದ್ದನ್ನು ಬರಾಟ್ ವರದಿಸಿತು. ಬೇರೆ ಹಾಜರಿಗಳು ಸಹ, ಬಹುಮಟ್ಟಿಗೆ ವಿಶೇಷ ಪಯನೀಯರರಿಂದ ಕೊಡಲ್ಪಟ್ಟ ಉತ್ತಮ ನಾಯಕತ್ವದ ಫಲಿತಾಂಶವಾಗಿ ಪ್ರಮುಖವಾಗಿದ್ದವು.
ಎಲ್ಲಿ ಒಂದು ಕ್ರೈಸ್ತ ಮಂದಿರವು ಇದೆಯೋ ಆ ಹೆಚ್ಚಿನ ಕ್ಯಾತೊಲಿಕರಿರುವ ಊರಾದ ಅಲ್ಪೇನಿಯದ ಶ್ಕೋಡರ್ನಲ್ಲಿ, ಚರ್ಚು, ತಿಂಗಳ ವಾರ್ತಾಪತ್ರವೊಂದನ್ನು ಮುದ್ರಿಸಲಾರಂಭಿಸಿತು, ಮತ್ತು ಅದರ ಪ್ರತಿ ಸಂಚಿಕೆಯು “ಯೆಹೋವನ ಸಾಕ್ಷಿಗಳನ್ನು ವರ್ಜಿಸುವ ವಿಧಾನ” ವನ್ನು ಚರ್ಚಿಸಿತು. ಕೊನೆಯ ಸಂಚಿಕೆಯು ಹೇಳಿದ್ದು: “ಯೆಹೋವನ ಸಾಕ್ಷಿಗಳು ಶ್ಕೋಡರನ್ನೇ ಆಕ್ರಮಿಸಿರುತ್ತಾರೆ!” ಅಲ್ಲಿ ಇಬ್ಬರು ಸಾಕ್ಷಿಗಳ ದೊಡ್ಡ ಸೇನೆಯು ಸ್ವದರ್ತನೆಯ ಮತ್ತು ಗಂಭೀರ-ಭಾವದ 74 ಮಂದಿಯನ್ನು ಸ್ಮಾರಕಕ್ಕಾಗಿ ಒಟ್ಟುಗೂಡಿಸಿತು. ಸ್ಮಾರಕ ಭಾಷಣವನ್ನು ಕೇಳಿಯಾದ ಮೇಲೆ, 15 ಕುಟುಂಬಗಳು ಮನೆ ಬೈಬಲಭ್ಯಾಸಕ್ಕಾಗಿ ವಿನಂತಿಸಿದವು. ನಾಲ್ಕು ಸಾಕ್ಷಿಗಳ ಸೇನೆಯಿದ್ದ ಡುರೆಸ್ ಎಂಬ ಇನ್ನೊಂದು ಶಹರದಲ್ಲಿ, 79 ಜನರ ಒಂದು ಅತ್ಯುತ್ತಮ ಹಾಜರಿಯಿತ್ತು.
ಸಾಕ್ಷಿಗಳನ್ನು ಕಲ್ಲು ಹೊಡೆದೋಡಿಸುವೆವೆಂದು ಬೆದರಿಸಿದ ಕ್ಯಾತೊಲಿಕ್ ಯುವಕರ ವಿರೋಧದ ಕಾರಣ, ಗುಡ್ಡಗಾಡಿನ ಹಳ್ಳಿಯಾದ ಕಾಲ್ಮೆಟಿ ಈ ಫೋಜೆಲ್ನ ಸ್ಮಾರಕ ಕೂಟವನ್ನು ಸ್ಥಳಿಕ ಸಹೋದರನೊಬ್ಬನ ಮನೆಗೆ ಬದಲಾಯಿಸಲಾಯಿತು, ಅಲ್ಲಿ 22 ಮಂದಿ ಶಾಂತಿಯಿಂದ ಹಾಜರಾದರು. ಈ ಗುಂಪಿನಲ್ಲಿ ಐದು ಪ್ರಚಾರಕರಿದ್ದರು, ಅವರಲ್ಲಿ ಮೂವರಿಗೆ ಟಿರಾನದಲ್ಲಿನ ಸಮ್ಮೇಳನದಲ್ಲಿ ದೀಕ್ಷಾಸ್ನಾನವಾಯಿತು.
ವ್ಲೋರದಲ್ಲಿ ಇಬ್ಬರು ಯುವ ಪುರುಷರು ಕಾವಲಿನಬುರುಜು ಇದರ ಒಂದು ಪ್ರತಿಯನ್ನು ಪಡೆದು, ಓದಿ, ಸೊಸೈಟಿಗೆ ಬರೆದದ್ದು: “ಕಾವಲಿನಬುರುಜು ನಲ್ಲಿ ನಾವು ಕಲಿತ ಸತ್ಯದ ಕಾರಣ ನಾವೀಗ ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ಕರೆದುಕೊಳ್ಳುತ್ತೇವೆ. ದಯವಿಟ್ಟು ನಮಗೆ ಸಹಾಯ ಕಳುಹಿಸಿರಿ.” ಅಲ್ಲಿಗೆ ಇಬ್ಬರು ವಿಶೇಷ ಪಯನೀಯರರನ್ನು ನೇಮಿಸಲಾಯಿತು, ಮತ್ತು ಈ ಯುವಕರಲ್ಲಿ ಒಬ್ಬನು ಬೇಗನೆ ಪ್ರಚಾರಕನಾಗಿ ಯೋಗ್ಯತೆ ಪಡೆದನು. ವ್ಲೋರದ ಸ್ಮಾರಕಕ್ಕೆ ಹಾಜರಾದ 64 ಮಂದಿಯೊಂದಿಗಿರಲು ಅವನು ಸಂತೋಷಪಟ್ಟನು.
ಅಮೆರಿಕದಲ್ಲಿ ಸತ್ಯ ಕಲಿತ ಒಬ್ಬ ಅಲ್ಪೇನಿಯನ್ ಸಹೋದರನು 1950 ಗಳಲ್ಲಿ ತನ್ನ ಹುಟ್ಟೂರಾದ ಜಿರಕಾಸರ್ಟ್ಗೆ ಹಿಂತಿರುಗಿ, ಅಲ್ಲಿ ತನ್ನ ಮರಣದ ತನಕ ಸಾಧ್ಯವಾದಷ್ಟು ಮಟ್ಟಿಗೆ ಸೇವೆಮಾಡಿದನು. ಅವನು ತನ್ನ ಮಗನ ಹೃದಯದಲ್ಲಿ ಸತ್ಯದ ಬೀಜವನ್ನು ಬಿತ್ತಿದನು. ನಿಷೇಧವು ತೆಗೆಯಲ್ಪಟ್ಟಾಗ, ಈ ಮಗನು ವಾಚ್ ಟವರ್ ಸೊಸೈಟಿಗೆ ಸಹಾಯಕ್ಕಾಗಿ ವಿನಂತಿಸಿದನು. ತುಸು ಉತ್ತರಕ್ಕೆ ಒಂದು ಹಳ್ಳಿಯಲ್ಲಿ ವಾಸಿಸಿದ್ದ ಇನ್ನೊಬ್ಬ ಆಸಕ್ತ ವ್ಯಕ್ತಿಯೂ ಸಹಾಯಕ್ಕಾಗಿ ಬರೆದಿದ್ದನು ಆದುದರಿಂದ, ನಾಲ್ವರು ವಿಶೇಷ ಪಯನೀಯರರು ಅಲ್ಲಿಗೆ ಕಳುಹಿಸಲ್ಪಟ್ಟರು. ಸ್ಮಾರಕವನ್ನು ಹಿಂಬಾಲಿಸಿದ ಬುಧವಾರ ಬೆಳಿಗ್ಗೆ, ಅವರಲ್ಲೊಬ್ಬನು ಸೊಸೈಟಿಯ ಟಿರಾನ ಆಫೀಸಿಗೆ ಫೋನ್ ಮಾಡಿದನು: “ಯೆಹೋವನ ಆತ್ಮವು ಎಷ್ಟು ಹೆಚ್ಚನ್ನು ಮಾಡಿದೆಯೆಂದು ನಿಮಗೆ ತಿಳಿಸದೆ ಇರಲು ನನಗಾಗದೆ ಹೋಯಿತು. ನಾವೆಷ್ಟೋ ಸಂತೋಷಿತರಾಗಿದ್ದೇವೆ. ಸ್ಮಾರಕವು ಯಶಸ್ವಿಯಾಗಿತ್ತು.” ಅವರ ಏಳು ರಾಜ್ಯ ಪ್ರಚಾರಕರ ಗುಂಪೂ ಸೇರಿ 106 ಹಾಜರಿ ಇತ್ತು.
ಜುಮ್ಲಾ ಸ್ಮಾರಕ ಹಾಜರಿಯು ಎಷ್ಟಾಗಿತ್ತು? ಇಸವಿ 1922 ರಲ್ಲಿ ಕೇವಲ 30 ಮಂದಿ ರಾಜ್ಯ ಪ್ರಚಾರಕರಿದ್ದಾಗ, ಹಾಜರಿಯು 325 ಆಗಿತ್ತು. ಇಸವಿ 1993 ರಲ್ಲಿ, 131 ಪ್ರಚಾರಕರು 1,318 ಉಪಸ್ಥಿತರನ್ನು ಕೂಡಿಸಿದ್ದರು. ಎರಡೂ ವರ್ಷಗಳಲ್ಲಿ, ಹಾಜರಿಯು ಪ್ರಚಾರಕರ ಸಂಖ್ಯೆಯ ಹತ್ತು ಪಾಲಷ್ಟು ಹೆಚ್ಚಾಗಿದೆ. ಅಷ್ಟು ಕೊಂಚ ಕಾಲಾವಧಿಯಲ್ಲಿ “ಅಲ್ಪನಿಂದ . . . ಒಂದು ಸಾವಿರವಾಗುವುದನ್ನು” ಕಾಣುವುದು ಅದೆಷ್ಟು ರೋಮಾಂಚಕ!—ಯೆಶಾಯ 60:22, NW.
“ನಿನ್ನ ಗುಡಾರದ ಹಗ್ಗಗಳನ್ನು ಉದಮ್ದಾಡು”
ಭೂಗೋಲದ ಎಲ್ಲಾ ಮೂಲೆಗಳಿಗೆ ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವು ಹಬ್ಬುವಾಗ, ಈ ಕರೆಯು ಕೇಳಬರುತ್ತದೆ: “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದಮ್ದಾಡಿ ಗೂಟಗಳನ್ನು ಬಲಪಡಿಸು. ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ.” (ಯೆಶಾಯ 54:2, 3) ಆತನ ಆರಾಧಕರ ಜಗದ್ವ್ಯಾಪಕ ಸಭೆಯಲ್ಲಿ ಪ್ರತಿನಿಧಿಸಲ್ಪಟ್ಟ—ದೇವರ ಈ “ಮಹಾ ಗುಡಾರದ” ಹಬ್ಬಿಕೊಳ್ಳುವಿಕೆಯು—ಪೂರ್ವ ಯೂರೋಪಿನಲ್ಲಿ, ವಿಶೇಷವಾಗಿ ಹಿಂದಣ ಸೋವಿಯೆಟ್ ಒಕ್ಕೂಟದ ದೇಶಗಳಲ್ಲಿ ನಿಶ್ಚಯವಾಗಿಯೂ ತೋರಿಬಂದಿರುತ್ತದೆ. ದಬ್ಬಾಳಿಕೆಯ ದಶಕಗಳ ಸಮಯದಲ್ಲಿ ತನ್ನ ಸೇವಕರನ್ನು ಪೋಷಿಸಿದ ಅನಂತರ ಯೆಹೋವನೀಗ ತನ್ನ ಸಾಕ್ಷಿಗಳಿಗೆ ಸಂಸ್ಥೆಯನ್ನು ವಿಸ್ತರಿಸಲು ಮತ್ತು ಬಲಗೊಳಿಸಲು ಕ್ರಿಯಾತ್ಮಕ ಶಕ್ತಿಯನ್ನು ಒದಗಿಸುತ್ತಿದ್ದಾನೆ.
ರಶ್ಯಾದ, ಮಾಸ್ಕೊವಿನ ಲಾಕಾಮಟೀಫ್ ಕ್ರೀಡಾಂಗಣದಲ್ಲಿ, ಜುಲೈ 22-25 ರಂದು, ಕಳೆದ ವರ್ಷದ “ದೈವಿಕ ಬೋಧನೆ” ಸರಣಿಗಳ ಒಂದು ಹೆಗ್ಗುರುತು ಅಂತಾರಾಷ್ಟ್ರೀಯ ಅಧಿವೇಶನಕ್ಕೆ 23,743 ಉನ್ನತ ಸಂಖ್ಯೆಯು ಹಾಜರಾಯಿತು. ಕೇವಲ ಎರಡು ವರ್ಷಗಳ ಹಿಂದಾದರೂ, ಇದು ಶಕ್ಯವೆಂದು ಯಾರು ಎಣಿಸಿದ್ದರು? ಆದರೆ ಅವರು ಅಲಿದ್ದರು! ಜಪಾನ್ ಮತ್ತು ಕೊರಿಯದಿಂದ 1,000 ಕ್ಕಿಂತಲೂ ಹೆಚ್ಚು ಮಂದಿ ಬಂದರು, ಅಮೆರಿಕ ಮತ್ತು ಕೆನಡದಿಂದ ಬಹುಮಟ್ಟಿಗೆ 4,000 ಮಂದಿ ಬಂದರು, ಹಾಗೂ ದಕ್ಷಿಣ ಪೆಸಿಫಿಕ್, ಆಫ್ರಿಕ, ಯೂರೋಪ್ ಮತ್ತು ಇತರ ಕ್ಷೇತ್ರಗಳಲ್ಲಿನ 30 ಕ್ಕಿಂತಲೂ ಹೆಚ್ಚು ದೇಶಗಳಿಂದ ಇನ್ನು ಸಾವಿರಾರು ಮಂದಿ ಬಂದದ್ದು—ನಿಜವಾಗಿಯೂ ಪೂರ್ವ ಮತ್ತು ಪಶ್ಚಿಮದ ಮಿಲನವೇ ಸರಿ. ಇವರೆಲ್ಲರಿಗೆ 15,000 ಕ್ಕಿಂತಲೂ ಹೆಚ್ಚಿನ ತಮ್ಮ ರಶ್ಯನ್ ಸಹೋದರ ಮತ್ತು ಸಹೋದರಿಯರೊಂದಿಗೆ ಸ್ವತಂತ್ರವಾಗಿ ಬೆರೆಯುವುದು ಅದೆಷ್ಟು ಉತ್ತೇಜನಕರವಾಗಿತ್ತು! ಸಂತೋಷದ ಭಾವನೆಗಳು ತುಂಬಿತುಳುಕುತ್ತಿದ್ದವು.
ಒಂದು ಅಚ್ಚರಿಯ ಮೊತ್ತವಾದ 1,489 ಹೊಸ ಸಾಕ್ಷಿಗಳು ದೀಕ್ಷಾಸ್ನಾನ ಪಡೆದರು. ಈ ದೀಕ್ಷಾಸ್ನಾನಕ್ಕೆ ನ್ಯೂ ಯಾರ್ಕ್ ಟೈಮ್ಸ್ನ ಮುಖಪುಟದಲ್ಲಿ ಉತ್ತಮ ಚಿತ್ರವೂ ಸೇರಿ, ಭೂಸುತ್ತಲಿನ ವಾರ್ತಾ ಮಾಧ್ಯಮದಿಂದ ಮಹತ್ತಾದ ಪ್ರಚಾರವು ಕೊಡಲ್ಪಟ್ಟಿತು. ದೀಕ್ಷಾಸ್ನಾನದ ವೇಳೆ ಭಾರೀ ಶಬ್ದದ ಕರತಾಡನವಿದ್ದರೂ, ಕೊನೆಯ ಭಾಷಣದ ಸಮಯದಲ್ಲಿ, ಭಾಷಣಕಾರನು ಅಧಿವೇಶನವನ್ನು ಅಂಥ ಒಂದು ಸಾಫಲ್ಯವನ್ನಾಗಿ ಮಾಡಲು ನೆರವಾದ 4,752 ಸ್ವಯಂಸೇವಕರಿಗೆ ಮತ್ತು ಅಧಿಕಾರಿಗಳಿಗೆ ಉಪಕಾರ ಹೇಳಿದ ಅನಂತರ ಮತ್ತು “ಎಲ್ಲಾದಕ್ಕಿಂತ ಹೆಚ್ಚಾಗಿ ನಾವು ಯೆಹೋವನಿಗೆ ಉಪಕಾರ ಹೇಳುತ್ತೇವೆ” ಎಂದು ಆತನು ಹೇಳಿದಾಗ, ಅದಿನ್ನೂ ಅತಿಶಯಿಸಿತು! ಹೌದು, ಆರ್ತೊಡಾಕ್ಸ್ ಧರ್ಮಗಳವರಿಂದ ಕಟು ವಿರೋಧವನ್ನು ಯೆಹೋವನ ಆತ್ಮವು ಹಿಮ್ಮೆಟ್ಟಿಸಿತು ಮತ್ತು ಅಧಿವೇಶನವನ್ನು ಒಂದು ರೋಮಾಂಚಕರ ವಾಸ್ತವಿಕತೆಯನ್ನಾಗಿ ಮಾಡಿದ ಆವಶ್ಯಕ ಶಕ್ತಿಯನ್ನು ಒದಗಿಸಿಕೊಟ್ಟಿತು.
ಆದರೂ, ಯುಕ್ರೇನಿಯನ್ ಶಹರವಾದ ಕೀಯವ್ನಲ್ಲಿ ಆಗಸ್ಟ್ 5-8 ರಂದು ಇನ್ನೂ ಹೆಚ್ಚು ಸಂಭವಿಸಲಿಕ್ಕಿತ್ತು. ಪುನಃ ಸಿದ್ಧಮನಸ್ಸಿನ ಸ್ವಯಂಸೇವಕರು ಕ್ರೀಡಾಂಗಣವನ್ನು ಸಂಪೂರ್ಣವಾಗಿ ಹೊಸದುಮಾಡಿದರು, ಮತ್ತು ಈ ದೊಡ್ಡ ಗಾತ್ರದ ರಾಜ್ಯ ಸಭಾಗೃಹವು ಉಚ್ಚಾಂಕ ಹಾಜರಿಯಾದ 64,714 ಮಂದಿಗೆ ಸ್ಥಳ ಒದಗಿಸಿತು. ಮತ್ತೊಮ್ಮೆ ಸಾಕ್ಷಿಗಳು, ಪೂರ್ವದಿಂದ ಮತ್ತು ಪಶ್ಚಿಮದಿಂದ ಮತ್ತು ಲೋಕದ ಎಲ್ಲಾ ಭಾಗಗಳಿಂದ ಬಂದರು. ಮುಖ್ಯ ಭಾಷಣಗಳು 12 ಭಾಷೆಗಳಿಗೆ ತರ್ಜುಮೆಯಾದವು. ವಿಮಾನ, ರೈಲು, ಯಾ ಬಸ್ಸುಗಳಿಂದ ಬಂದ ಸುಮಾರು 53,000 ಪ್ರತಿನಿಧಿಗಳನ್ನು ರೈಲ್ವೆ ಸೇಷ್ಟನುಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಸಂಧಿಸಿ, ಹೋಟೆಲ್ಗಳಲ್ಲಿ, ಶಾಲೆಗಳಲ್ಲಿ, ಮತ್ತು ಖಾಸಗಿ ಮನೆಗಳಲ್ಲಿ, ಹಾಗೂ ನದೀ ಹಡಗಗಳಲ್ಲಿ ಅವರವರ ವಸತಿಗಳಿಗೆ ಸಾಗಣೆಮಾಡಲಿಕ್ಕಿತ್ತು. ಶಹರದ ಪೊಲೀಸರಿಂದ ಅಚ್ಚರಿಯ ಅಭಿವ್ಯಕ್ತಿಗಳನ್ನು ಮತ್ತು ಸ್ತುತಿಯನ್ನು ತಂದ ಇದೆಲ್ಲವೂ ಸಂಘಟನಾ ನುಣುಪು ಮತ್ತು ದಕ್ಷತೆಯೊಂದಿಗೆ, ಕನಿಷ್ಠ ವೆಚ್ಚದಿಂದ ಪೂರೈಸಲ್ಪಟ್ಟಿತು.
ಅಧಿವೇಶನ ಕಾರ್ಯಕ್ರಮದ ಪರಮಾವಧಿಯು ಇಡೀ ಎರಡೂವರೆ ತಾಸುಗಳನ್ನೊಳಗೊಂಡ ದೀಕ್ಷಾಸ್ನಾನವಾಗಿತ್ತು. ವಿಸ್ತಾರವಾದ ಕ್ರೀಡಾಂಗಣದ ಸುತ್ತಲೂ ಕರತಾಡನವು ಮಾರ್ದನಿಸುತ್ತಾ ಮತ್ತೆ ಮತ್ತೆ ಪ್ರತಿಧ್ವನಿಸಿದಾಗ, ಒಟ್ಟಿಗೆ 7,402 ಮಂದಿ ಹೊಸ ಸಹೋದರ ಮತ್ತು ಸಹೋದರಿಯರು ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸೂಚಿಸಿದರು. ನ್ಯೂ ಯಾರ್ಕ್ ಶಹರದಲ್ಲಿ 1958 ರಲ್ಲಿ 2,53,922 ಅಧಿವೇಶನಕಾರರು ಕೂಡಿಬಂದಾಗ ದಾಖಲೆಯಾದ ಹಿಂದಣ ಅತ್ಯುನ್ನತ ದೀಕ್ಷಾಸ್ನಾನ ಉಚ್ಚಾಂಕವಾದ 7,136 ಕ್ಕಿಂತಲೂ ಇದು ಹೆಚ್ಚಾಗಿತ್ತು.
ಈ ತೀರ್ಪಿನ ಕಾಲಾವಧಿಯು ಈಗ ತನ್ನ ಸಮಾಪ್ತಿಯ ಕಡೆಗೆ ಮುಂದರಿಯುವಾಗ, ಪೂರ್ವ, ಪಶ್ಚಿಮ, ಮತ್ತು “ಭೂಮಿಯ ಕಟ್ಟಕಡೆ” ಯಿಂದ ಕೂಡ ಕುರಿಸದೃಶ ಜನರು ಮಾನವ ಇತಿಹಾಸದಲ್ಲೆಲ್ಲಾ ಸರಿಸಾಟಿಯಿಲ್ಲದ ಒಂದು ಐಕಮತ್ಯದೊಳಗೆ ಒಟ್ಟುಗೂಡಿಸಲ್ಪಡುತ್ತಿದ್ದಾರೆ. ನಿಶ್ಚಯವಾಗಿಯೂ, “ಸಕಲ ಜನಾಂಗ ಕುಲ ಪ್ರಜೆ ಭಾಷೆಗಳಿಂದ ಬಂದ ಮಹಾ ಸಮೂಹ” ವೊಂದು, ಯೆಹೋವನ ಸಾರ್ವಭೌಮ ಆಳಿಕೆಯ ನಿರ್ದೋಷೀಕರಣದಲ್ಲಿ ಪೂರೈಸಲ್ಪಡುತ್ತಿರುವ ಎಲ್ಲಾದರ ಅಸ್ತಿವಾರವಾದ ಯೇಸುವಿನ ಅಮೂಲ್ಯ ವಿಮೋಚನಾ ಯಜ್ಞದಲ್ಲಿ ಅವರ ನಂಬಿಕೆಯನ್ನು ಪ್ರಕಟಪಡಿಸುವುದರಲ್ಲಿ, ಆತ್ಮಿಕ ಇಸ್ರಾಯೇಲನ್ನು ಜತೆಗೂಡುತ್ತಿದ್ದಾರೆ.—ಅ. ಕೃತ್ಯಗಳು 1:8; ಪ್ರಕಟನೆ 7:4, 9, 10.
[ಪುಟ 8,9 ರಲ್ಲಿರುವಚಿತ್ರಗಳು]
ಮಾಸ್ಕೊ ಮತ್ತು ಕೀಯವ್ನಲ್ಲಿ ಪೂರ್ವವು ಪಶ್ಚಿಮವನ್ನು ಸಂಧಿಸುತ್ತದೆ