ಯೆಹೋವನು ನಮ್ಮನ್ನೆಂದೂ ತೊರೆಯಲಿಲ್ಲ
ನಾಶೊ ಡೊರಿ ಹೇಳಿರುವಂತೆ
ಗ್ರೀಸ್ನಿಂದ ಅಷ್ಟೇನೂ ದೂರದಲ್ಲಿರದ, ದಕ್ಷಿಣ ಅಲ್ಬೇನಿಯದಲ್ಲಿ, ಬ್ರೆಷ್ಟಾನ್ ಒಂದು ಚಿಕ್ಕ ಪರ್ವತ ಹಳ್ಳಿಯಾಗಿದೆ. ಅಲ್ಲಿ ನಾನು 1907ರಲ್ಲಿ ಜನಿಸಿದೆ. ನಾನು ಐದು ವರ್ಷ ಪ್ರಾಯದವನಾಗಿದ್ದಾಗ, ಒಂದು ಗ್ರೀಕ್ ಶಾಲೆಯನ್ನು ಹಾಜರಾಗಲು ಆರಂಭಿಸಿದೆ, ಆದರೆ Iನೇ ಲೋಕ ಯುದ್ಧದ ಸಮಯದಲ್ಲಿ ಇಟಲಿಯ ಪಡೆಗಳು ಅಲ್ಬೇನಿಯದ ಮೇಲೆ ದಾಳಿ ನಡಿಸಿದಾಗ, ನನ್ನ ಶಾಲಾಶಿಕ್ಷಣವು ಮಧ್ಯದಲ್ಲಿ ನಿಂತುಹೋಯಿತು. ಯುದ್ಧದ ನಂತರ ನಾನು ಪುನಃ ಶಾಲಾಶಿಕ್ಷಣವನ್ನು ಆರಂಭಿಸಿದೆ—ಆದರೆ ಅಲ್ಬೇನಿಯನ್ ಭಾಷೆಯಲ್ಲಿ.
ನನ್ನ ಹೆತ್ತವರು ಅಷ್ಟು ಧಾರ್ಮಿಕ ಸ್ವಭಾವದವರಾಗಿರದಿದ್ದರೂ, ಅವರು ಅಲ್ಬೇನಿಯನ್ ಆರ್ತೊಡಾಕ್ಸ್ ಚರ್ಚಿನ ಸಂಪ್ರದಾಯಗಳನ್ನು ಪಾಲಿಸಿದರು. ನನ್ನ ತಂದೆಯ ಚಿಕ್ಕಪ್ಪನವರು ಬ್ರೆಷ್ಟಾನ್ನಲ್ಲಿ ಒಬ್ಬ ಪಾದ್ರಿಯಾಗಿದ್ದರು, ಆದುದರಿಂದ ನಾನು ಚರ್ಚಿನಲ್ಲಿ ಕೆಲಸಮಾಡಿ, ಅಲ್ಲಿ ಏನು ನಡೆಯುತ್ತಿತ್ತೋ ಅದರ ಒಂದು ಒಳಗಿನ ನೋಟವನ್ನು ಪಡೆದೆ. ಆ ಸಂಸ್ಕಾರಗಳು ಬಹಳ ಪೊಳ್ಳಾಗಿ ತೋರಿದವು, ಮತ್ತು ಆ ಕಪಟತನವು ನನ್ನನ್ನು ಕಾಡಿತು.
ಸ್ಥಳಿಕ ಪದ್ಧತಿಯನ್ನು ಅನುಸರಿಸುತ್ತಾ, ನಾನು ಮದುವೆಯಾಗಲಿಕ್ಕಾಗಿ ನನ್ನ ಹೆತ್ತವರು ಒಬ್ಬ ಯುವ ಸ್ತ್ರೀಯನ್ನು ಆಯ್ಕೆಮಾಡಿದರು. ಆರ್ಗ್ಜೀರೊ, ಹತ್ತಿರದಲ್ಲಿದ್ದ ಗ್ರಾಬೊವಾ ಹಳ್ಳಿಯವಳಾಗಿದ್ದಳು, ಮತ್ತು 1928ರಲ್ಲಿ, ಅವಳು 18 ವರ್ಷ ಪ್ರಾಯದವಳಾಗಿದ್ದಾಗ ನಾವು ಮದುವೆಯಾದೆವು.
ಬೈಬಲ್ ಸತ್ಯವನ್ನು ಕಲಿಯುವುದು
ಆ ಸಮಯದಷ್ಟಕ್ಕೆ ನಾನು, ಅಮೆರಿಕದಿಂದ ಸಂದರ್ಶಿಸುತ್ತಿದ್ದ ಒಬ್ಬ ಸೋದರನಂಟನಿಗೆ ಆರ್ತೊಡಾಕ್ಸ್ ಚರ್ಚಿನ ಕುರಿತಾಗಿ ದೂರುಹೇಳಿದೆ. ಅವನು ಉತ್ತರಿಸಿದ್ದು, “ಅಮೆರಿಕದಲ್ಲಿ ನನ್ನ ಮನೆಯ ಹತ್ತಿರ, ಚರ್ಚ್ ಇಲ್ಲದಂತಹ ಜನರ ಒಂದು ಗುಂಪಿದೆ, ಆದರೆ ಅವರು ಬೈಬಲನ್ನು ಅಭ್ಯಾಸಿಸುತ್ತಾರೆ.” ಒಂದು ಚರ್ಚ್ ಇಲ್ಲದೆ ಬೈಬಲನ್ನು ಅಭ್ಯಾಸಿಸುವ ವಿಚಾರವು ನನ್ನನ್ನು ಆಕರ್ಷಿಸಿತು. ಆದುದರಿಂದ ಅವನು ನನಗೆ ಸ್ವಲ್ಪ ಬೈಬಲ್ ಸಾಹಿತ್ಯವನ್ನು ಕಳುಹಿಸುವನೋ ಎಂದು ನಾನು ಕೇಳಿದೆ.
ಸುಮಾರು ಒಂದು ವರ್ಷದ ಬಳಿಕ, ಮಿಲ್ವೌಕೀ, ವಿಸ್ಕನ್ಸಿನ್ನಿಂದ ನಾನು ಒಂದು ಕಟ್ಟನ್ನು ಪಡೆಯುವ ತನಕ ನಮ್ಮ ಸಂಭಾಷಣೆಯ ಕುರಿತಾಗಿ ನಾನು ಪೂರ್ಣವಾಗಿ ಮರೆತೆ. ಆ ಕಟ್ಟಿನೊಳಗೆ ಅಲ್ಬೇನಿಯನ್ ಭಾಷೆಯಲ್ಲಿ ದೇವರ ವೀಣೆ ಮತ್ತು ಗ್ರೀಕ್ ಭಾಷೆಯಲ್ಲಿ ಕಾವಲಿನಬುರುಜು ಪತ್ರಿಕೆ ಇತ್ತು. ನಾನು ಪುಸ್ತಕದ ಮೇಲೆ ಕಣ್ಣೋಡಿಸಿದೆ ಮತ್ತು ನಿಜ ಚರ್ಚಿಗೆ ಒಂದು ನಿರ್ದೇಶವನ್ನು ಗಮನಿಸಿದೆ. ಅದು ನನ್ನನ್ನು ಕ್ಷೋಭೆಗೊಳಿಸಿತು. ‘ನನಗೆ ಒಂದು ಚರ್ಚಿನೊಂದಿಗೆ ಯಾವ ಸಂಬಂಧವೂ ಬೇಡ,’ ಎಂದು ನನ್ನಷ್ಟಕ್ಕೆ ನಾನು ಹೇಳಿಕೊಂಡೆ. ಆದುದರಿಂದ ನಾನು ಪುಸ್ತಕವನ್ನು ಸಂಪೂರ್ಣವಾಗಿ ಓದಲಿಲ್ಲ.
1929ರಲ್ಲಿ ನಾನು ಮಿಲಿಟರಿಯನ್ನು ಪ್ರವೇಶಿಸಿದೆ ಮತ್ತು ಅಲ್ಬೇನಿಯದ ರಾಜಧಾನಿಯಾದ ಟಿರಾನೆ ನಗರಕ್ಕೆ ಕಳುಹಿಸಲ್ಪಟ್ಟೆ. ಅಲ್ಲಿ ನಾನು ಸ್ಟಾಥಿ ಮ್ಯೂಕಿಯನ್ನು ಭೇಟಿಯಾದೆ, ಅವನು ಒಂದು ಗ್ರೀಕ್ ಬೈಬಲನ್ನು ಓದುತ್ತಿದ್ದನು. “ನೀನು ಚರ್ಚಿಗೆ ಹೋಗುತ್ತೀಯೊ?” ಎಂದು ನಾನು ಕೇಳಿದೆ. “ಇಲ್ಲ,” ಎಂದವನು ಉತ್ತರಿಸಿದನು. “ನಾನು ಚರ್ಚನ್ನು ಬಿಟ್ಟುಬಿಟ್ಟಿದ್ದೇನೆ. ನಾನು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದೇನೆ.” ಇನ್ನೊಬ್ಬ ಸೈನಿಕನು ಮತ್ತು ನಾನು ಸ್ಟಾಥಿಯೊಂದಿಗೆ ಆದಿತ್ಯವಾರದಂದು ಒಂದು ಕೂಟಕ್ಕೆ ಹೋದೆವು. ನಿಜ ಚರ್ಚ್ ಒಂದು ಕಟ್ಟಡ ಅಥವಾ ಧರ್ಮವಲ್ಲ, ಬದಲಾಗಿ ಕ್ರಿಸ್ತನ ಅಭಿಷಿಕ್ತ ಸೇವಕರಿಂದ ರಚಿಸಲ್ಪಟ್ಟಿದೆಯೆಂದು ನಾನು ಅಲ್ಲಿ ಕಲಿತೆ. ದೇವರ ವೀಣೆ ಪುಸ್ತಕವು ಏನು ಹೇಳುತ್ತಿತ್ತೊ ಅದು ನನಗೆ ಈಗ ಅರ್ಥವಾಯಿತು.
ನಾಶೊ ಇಡ್ರಿಸಿ ಮತ್ತು ಸ್ಪೈರೊ ವ್ರೂಹೊ, 1920ಗಳ ಮಧ್ಯ ಭಾಗದಲ್ಲಿ ಅಮೆರಿಕದಿಂದ ಅಲ್ಬೇನಿಯಕ್ಕೆ ಹಿಂದಿರುಗಿದ್ದರು ಮತ್ತು ಅವರು ಅಲ್ಲಿ ಕಲಿತಂತಹ ಬೈಬಲ್ ಸತ್ಯಗಳನ್ನು ಹರಡಿಸುತ್ತಿದ್ದರು. ಕೆಲವೇ ಬೈಬಲ್ ವಿದ್ಯಾರ್ಥಿಗಳೊಂದಿಗೆ ನಾನು ಟಿರಾನೆಯಲ್ಲಿದ್ದ ಕೂಟಗಳನ್ನು ಹಾಜರಾಗಲು ಆರಂಭಿಸಿದೆ. ನಾನು ಯೆಹೋವನ ಸಂಸ್ಥೆಯನ್ನು ಕಂಡುಹಿಡಿದಿದ್ದೇನೆಂದು ನನಗೆ ಬೇಗನೇ ಸ್ಪಷ್ಟವಾಯಿತು. ಆದುದರಿಂದ ಆಗಸ್ಟ್ 4, 1930ರಂದು ಹತ್ತಿರದಲ್ಲಿದ್ದ ನದಿಯೊಂದರಲ್ಲಿ ನನಗೆ ದೀಕ್ಷಾಸ್ನಾನವಾಯಿತು.
ಅನಂತರ ನಾನು ಜೋಡುಗಳನ್ನು ತಯಾರಿಸುವ ನನ್ನ ವೃತ್ತಿಯನ್ನು ಬೆನ್ನಟ್ಟಲು ಬ್ರೆಷ್ಟಾನ್ಗೆ ಹಿಂದಿರುಗಿದೆ. ಆದರೆ ಹೆಚ್ಚು ಪ್ರಾಮುಖ್ಯವಾಗಿ, ನಾನು ಕಲಿತಂತಹ ಬೈಬಲ್ ಸತ್ಯಗಳನ್ನು ಇತರರೊಂದಿಗೆ ಹಂಚಲೂ ನಾನು ಆರಂಭಿಸಿದೆ. ನಾನು ಅವರಿಗೆ ಹೇಳುತ್ತಿದ್ದದ್ದು: “ಯೇಸು ಕ್ರಿಸ್ತನು ಚರ್ಚಿನಲ್ಲಿರುವ ವಿಗ್ರಹಗಳಂತಿಲ್ಲ. ಅವನು ಜೀವಂತನಾಗಿದ್ದಾನೆ!”
ವಿರೋಧದ ಹೊರತೂ ಸಾರುವುದು
1925ರಲ್ಲಿ ಆಹ್ಮದ್ ಬೇ ಜೊಗ್ಯಾ ಅಧಿಕಾರವನ್ನು ಸ್ವಾಧೀನಪಡಿಸಿ, 1928ರಲ್ಲಿ ತನ್ನನ್ನೇ ರಾಜ ಜೊಗ್ 1 ಆಗಿ ಮಾಡಿಕೊಂಡು 1939ರ ತನಕ ಆಳಿದನು. ಮಾನವ ಹಕ್ಕುಗಳ ಅವನ ಮಂತ್ರಿಯು, ನಮ್ಮ ಕ್ರೈಸ್ತ ಕಾರ್ಯಕ್ಕಾಗಿ ಸಮ್ಮತಿಯನ್ನು ಕೊಟ್ಟನು. ಹಾಗಿದ್ದರೂ, ನಮಗೆ ಸಮಸ್ಯೆಗಳಿದ್ದವು. ಇದು ಯಾಕಂದರೆ ಒಳಾಡಳಿತದ ಮಂತ್ರಿಯಾಗಿದ್ದ ಮುಸಾ ಜೂಕಾ, ರೋಮಿನಲ್ಲಿದ್ದ ಪೋಪ್ನೊಂದಿಗೆ ನಿಕಟ ಮೈತ್ರಿಯನ್ನು ಹೊಂದಿದ್ದನು. ಕೇವಲ ಮೂರು ಧರ್ಮಗಳು—ಮುಸ್ಲಿಮ್, ಆರ್ತೊಡಾಕ್ಸ್, ಮತ್ತು ರೋಮನ್ ಕ್ಯಾತೊಲಿಕ್—ಅಂಗೀಕರಿಸಲ್ಪಡಬೇಕೆಂದು ಜೂಕಾ ಆಜ್ಞೆ ಕೊಟ್ಟನು. ಪೊಲೀಸರು ನಮ್ಮ ಪುಸ್ತಕಗಳನ್ನು ವಶಪಡಿಸಿಕೊಂಡು ನಮ್ಮ ಸಾರುವಿಕೆಯನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಅವರು ಅಸಫಲರಾದರು.
ಮಿಹಾಲ್ ಸ್ವೇಕಿ ನಮ್ಮ ಪ್ರಚಾರ ಕಾರ್ಯವನ್ನು ನಿರ್ದೇಶಿಸುತ್ತಿದ್ದ, ಅಲ್ಬೇನಿಯದಲ್ಲಿನ ಒಂದು ದೊಡ್ಡ ನಗರವಾದ ಬಾರಾಟ್ಗೆ ನಾನು 1930ಗಳಲ್ಲಿ ಆಗಿಂದಾಗ್ಗೆ ಭೇಟಿಕೊಡುತ್ತಿದ್ದೆ. ದೇಶದಾದ್ಯಂತ ನಾವು ಸಾರುವಿಕೆಯ ಸಂಚಾರಗಳನ್ನು ಏರ್ಪಡಿಸಿದೆವು. ಒಮ್ಮೆ ನಾನು ಶ್ಕೋಡಾರ್ ಪಟ್ಟಣಕ್ಕೆ ಎರಡು ವಾರಗಳಿಗಾಗಿ ಕಳುಹಿಸಲ್ಪಟ್ಟೆ, ಮತ್ತು ನಾನು ತುಂಬ ಸಾಹಿತ್ಯವನ್ನು ಬಿಟ್ಟುಬರಲು ಶಕ್ತನಾದೆ. 1935ರಲ್ಲಿ ನಮ್ಮ ಒಂದು ಗುಂಪು ಕೆಲ್ಸೈರ್ ಪಟ್ಟಣದಲ್ಲಿ ಸಾರಲಿಕ್ಕಾಗಿ ಒಂದು ಬಸ್ಸನ್ನು ಬಾಡಿಗೆಗೆ ತೆಗೆದುಕೊಂಡಿತು. ಅನಂತರ ಪರ್ಮೆಟ್, ಲೆಸ್ಕೊವಿಕ್, ಎರ್ಸಿಕಿ, ಕಾರ್ಶಾ, ಪಾಗ್ರಾಡೆಟ್ಸ್, ಮತ್ತು ಎಲ್ಬಾಸಾನ್ ಪಟ್ಟಣಗಳ, ಅಲ್ಬೇನಿಯದ ಹೆಚ್ಚು ದೊಡ್ಡದಾದ ಸಂಚಾರಕ್ಕಾಗಿ ಕಾರ್ಯತಖ್ತೆಯನ್ನು ಮಾಡಲಾಯಿತು. ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸಲಿಕ್ಕಾಗಿ ಸಮಯಕ್ಕೆ ಸರಿಯಾಗಿ ನಾವು ಟಿರಾನೆಯ ಸಂಚಾರವನ್ನು ಮುಗಿಸಿದೆವು.
ಆತ್ಮಿಕ ಆಹಾರದ ಒಂದು ಸರಬರಾಯಿಯು ನಮ್ಮನ್ನು ಆತ್ಮಿಕವಾಗಿ ಬಲವಾಗಿರಿಸಲು ಸಹಾಯ ಮಾಡಿತು, ಆದುದರಿಂದ ನಾವು ತೊರೆಯಲ್ಪಟ್ಟಿದ್ದೇವೆಂದು ನಮಗೆಂದೂ ಅನಿಸಲಿಲ್ಲ. 1930ರಿಂದ 1939ರ ವರೆಗೆ, ನಾನು ಗ್ರೀಕ್ ಭಾಷೆಯ ಕಾವಲಿನಬುರುಜು ಪತ್ರಿಕೆಯನ್ನು ಕ್ರಮವಾಗಿ ಪಡೆದೆ. ಪ್ರತಿದಿನ ಕಡಿಮೆಪಕ್ಷ ಒಂದು ತಾಸಾದರೂ ಬೈಬಲನ್ನು ಓದುವುದು ಸಹ ನನ್ನ ಗುರಿಯಾಗಿತ್ತು. ನಾನು ಇದನ್ನು ಸುಮಾರು 60 ವರ್ಷಗಳ ತನಕ, ನನ್ನ ದೃಷ್ಟಿಯು ಕುಂದುವ ತನಕ ಮಾಡಿದೆ. ಇತ್ತೀಚೆಗಷ್ಟೇ ಇಡೀ ಬೈಬಲ್ ಅಲ್ಬೇನಿಯನ್ ಭಾಷೆಯಲ್ಲಿ ಲಭ್ಯವಾಯಿತು, ಆದುದರಿಂದ ಮಗುವಾಗಿದ್ದಾಗ ನಾನು ಗ್ರೀಕ್ ಭಾಷೆಯನ್ನು ಕಲಿತದ್ದಕ್ಕಾಗಿ ನಾನು ತುಂಬ ಸಂತೋಷಿತನಾಗಿದ್ದೇನೆ. ಆ ಆರಂಭದ ದಿನಗಳಲ್ಲಿ ಇತರ ಅಲ್ಬೇನಿಯನ್ ಸಾಕ್ಷಿಗಳೂ, ತಾವು ಇಡೀ ಬೈಬಲನ್ನು ಓದಲು ಶಕ್ತರಾಗುವಂತೆ ಗ್ರೀಕ್ ಭಾಷೆಯನ್ನು ಓದಲು ಕಲಿತರು.
1938ರಲ್ಲಿ ಆರ್ಗ್ಜೀರೊ ದೀಕ್ಷಾಸ್ನಾನ ಪಡೆದುಕೊಂಡಳು. 1939ರಷ್ಟಕ್ಕೆ ನಮ್ಮ ಹತ್ತು ಮಕ್ಕಳಲ್ಲಿ ಏಳು ಮಂದಿ ಹುಟ್ಟಿದ್ದರು. ದುಃಖಕರವಾಗಿ ನಮ್ಮ ಪ್ರಥಮ ಏಳು ಮಕ್ಕಳಲ್ಲಿ ಮೂವರು, ಅವರು ಎಳೆಯವರಿದ್ದಾಗಲೇ ಸತ್ತುಹೋದರು.
IIನೇ ಲೋಕ ಯುದ್ಧದ ಸಮಯದಲ್ಲಿ ಕಷ್ಟಗಳು
ಎಪ್ರಿಲ್ 1939ರಲ್ಲಿ, IIನೇ ಲೋಕ ಯುದ್ಧವು ಆರಂಭವಾಗುವ ಸ್ವಲ್ಪ ಮುಂಚೆ, ಇಟಲಿಯ ಫ್ಯಾಸಿಸ್ಟ್ ಸೈನ್ಯಗಳು ಅಲ್ಬೇನಿಯವನ್ನು ಆಕ್ರಮಿಸಿದವು. ತದನಂತರ ಬೇಗನೇ ಯೆಹೋವನ ಸಾಕ್ಷಿಗಳ ಕಾರ್ಯವು ನಿಷೇಧಿಸಲ್ಪಟ್ಟಿತು, ಆದರೆ ಸುಮಾರು 50 ರಾಜ್ಯ ಘೋಷಕರ ನಮ್ಮ ಚಿಕ್ಕ ಗುಂಪು ಸಾರುವುದನ್ನು ಮುಂದುವರಿಸಿತು. ನಮ್ಮ ಪುಸ್ತಕಗಳಲ್ಲಿ ಸುಮಾರು 15,000 ಪುಸ್ತಕಗಳು ಮತ್ತು ಪುಸ್ತಿಕೆಗಳು IIನೇ ಲೋಕ ಯುದ್ಧದ ಸಮಯದಲ್ಲಿ ವಶಪಡಿಸಿಕೊಳ್ಳಲ್ಪಟ್ಟು ನಾಶಗೊಳಿಸಲ್ಪಟ್ಟಿದ್ದವು.
ಸಾಹಿತ್ಯಕ್ಕಾಗಿ ಒಂದು ದೊಡ್ಡ ಸಂಗ್ರಹ ಕೋಣೆಯು ಜಾನಿ ಕೊಮಿನೊವಿನ ಮನೆಗೆ ಜೋಡಿಸಲ್ಪಟ್ಟಿತ್ತು. ನಮ್ಮ ಪುಸ್ತಕಗಳು ಅಮೆರಿಕದಲ್ಲಿ ಮುದ್ರಿಸಲ್ಪಟ್ಟಿದ್ದವೆಂದು ಇಟಾಲಿಯನ್ ಸೇನಾಪಡೆಗಳಿಗೆ ತಿಳಿದಾಗ, ಅವರು ತುಂಬ ಕ್ಷೋಭಿತರಾದರು. “ನೀವು ಮತಪ್ರಚಾರಕರು! ಅಮೆರಿಕವು ಇಟಲಿಗೆ ವಿರುದ್ಧವಾಗಿದೆ!” ಎಂದು ಅವರು ಹೇಳಿದರು. ತೊಮೈ ಮತ್ತು ವಾಸಿಲಿ ಕಾಮಾ ಎಂಬ ಹುರುಪಿನ ಯುವ ಸಹೋದರರು ದಸ್ತಗಿರಿ ಮಾಡಲ್ಪಟ್ಟರು, ಮತ್ತು ಅವರು ಹಂಚುತ್ತಿದ್ದ ಪುಸ್ತಕಗಳು ಕೊಮಿನೊವಿನಿಂದ ಬಂದಿದ್ದವೆಂದು ತಿಳಿದು ಬಂದಾಗ, ಅವನೂ ದಸ್ತಗಿರಿ ಮಾಡಲ್ಪಟ್ಟನು. ಬೇಗನೆ ನಾನು ಪೊಲೀಸರಿಂದ ಪ್ರಶ್ನಿಸಲ್ಪಡಲಿಕ್ಕಾಗಿ ಕರೆಯಲ್ಪಟ್ಟೆ.
“ನಿನಗೆ ಈ ಪುರುಷರ ಪರಿಚಯವಿದೆಯೇ?” ಎಂದು ಅವರು ಕೇಳಿದರು.
“ಹೌದು,” ಎಂದು ನಾನು ಉತ್ತರಿಸಿದೆ.
“ನೀನು ಅವರೊಂದಿಗೆ ಕೆಲಸ ಮಾಡುತ್ತೀಯೊ?”
“ಹೌದು. ನಾವು ಯೆಹೋವನ ಸಾಕ್ಷಿಗಳು. ನಾವು ಸರಕಾರಗಳ ವಿರುದ್ಧವಾಗಿಲ್ಲ. ನಾವು ತಟಸ್ಥರಾಗಿದ್ದೇವೆ” ಎಂದು ನಾನು ಉತ್ತರಿಸಿದೆ.
“ನೀನು ಈ ಸಾಹಿತ್ಯವನ್ನು ಹಂಚುತ್ತಿರುವಿಯೊ?”
ನಾನು ಹೌದೆಂದು ಪ್ರತಿಕ್ರಿಯಿಸಿದಾಗ, ಅವರು ನನ್ನ ಕೈಗಳಿಗೆ ಬೇಡಿತೊಡಿಸಿದರು ಮತ್ತು ಜುಲೈ 6, 1940ರಂದು ನಾನು ಸೆರೆಮನೆಗೆ ಹಾಕಲ್ಪಟ್ಟೆ. ಅಲ್ಲಿ ನನ್ನ ಹಳ್ಳಿಯವರಾದ ಇತರ ಐವರೊಂದಿಗೆ—ಜೋಸೇಫ್ ಕಾಸಿ, ಲುಕನ್ ಬಾರ್ಕೊ, ಜಾನಿ ಕೊಮಿನೊ ಮತ್ತು ಕಾಮಾ ಸಹೋದರರು—ನಾನು ಸೇರಿಕೊಂಡೆ. ಸೆರೆಮನೆಯಲ್ಲಿದ್ದಾಗ ನಾವು ಇತರ ಮೂವರು ಸಾಕ್ಷಿಗಳನ್ನು ಭೇಟಿಯಾದೆವು—ಗೊರಿ ನಾಸಿ, ನಿಕೊಧಿಮ್ ಶೈಟಿ, ಮತ್ತು ಲಿಯೋನಿಡಾಸ್ ಪೋಪ್. ನಾವೆಲ್ಲ ಒಂಬತ್ತು ಜನರು 1.8 ಮೀಟರ್ ಅಗಲ, 3.7 ಮೀಟರ್ ಉದ್ದದ ಕೋಣೆಯೊಳಗೆ ತುರುಕಲ್ಪಟ್ಟಿದ್ದೆವು!
ಕೆಲವು ದಿನಗಳ ನಂತರ, ನಮ್ಮನ್ನು ಜೊತೆಯಾಗಿ ಸರಪಣಿಯಿಂದ ಬಂಧಿಸಲಾಯಿತು ಮತ್ತು ಪರ್ಮೆಟ್ ನಗರಕ್ಕೆ ಕೊಂಡೊಯ್ಯಲಾಯಿತು. ಮೂರು ತಿಂಗಳುಗಳ ಬಳಿಕ ನಮ್ಮನ್ನು ಟಿರಾನೆಯಲ್ಲಿರುವ ಸೆರೆಮನೆಗೆ ಸ್ಥಳಾಂತರಿಸಲಾಯಿತು ಮತ್ತು ಇನ್ನೂ ಹೆಚ್ಚಾಗಿ ಎಂಟು ತಿಂಗಳುಗಳ ವರೆಗೆ ವಿಚಾರಣೆಯಿಲ್ಲದೆ ಇಡಲ್ಪಟ್ಟೆವು.
ಅಂತಿಮವಾಗಿ, ನಾವು ಒಂದು ಮಿಲಿಟರಿ ಕೋರ್ಟಿನ ಮುಂದೆ ಹಾಜರಾದೆವು. ಸಹೋದರ ಶೈಟಿ ಮತ್ತು ನನಗೆ 27 ತಿಂಗಳುಗಳು, ಸಹೋದರ ಕೊಮಿನೊಗೆ 24 ತಿಂಗಳುಗಳ ಶಿಕ್ಷೆ ವಿಧಿಸಲ್ಪಟ್ಟಿತು ಮತ್ತು ಇತರರು 10 ತಿಂಗಳುಗಳ ನಂತರ ಬಿಡುಗಡೆಗೊಳಿಸಲ್ಪಟ್ಟರು. ನಾವು ಜಿರೊಕಾಸ್ಟರ್ ಸೆರೆಮನೆಗೆ ಸ್ಥಳಾಂತರಿಸಲ್ಪಟ್ಟೆವು. ಅಲ್ಲಿ 1943ರಲ್ಲಿ ಸಹೋದರ ಗೊಲೆ ಫ್ಲೊಕೊ ನಮ್ಮನ್ನು ಬಿಡಿಸಲು ಸಹಾಯಮಾಡಿದರು. ತದನಂತರ ನಮ್ಮ ಕುಟುಂಬವು ಪರ್ಮೆಟ್ ನಗರದಲ್ಲಿ ನೆಲೆಸಿತು, ಅಲ್ಲಿ ನಾನು ಆ ಚಿಕ್ಕ ಸಭೆಯ ಮೇಲ್ವಿಚಾರಕನಾದೆ.
ನಮ್ಮ ಕೆಲಸವು ನಿಷೇಧಿಸಲ್ಪಟ್ಟಿತ್ತಾದರೂ ಮತ್ತು ನಮ್ಮ ಸುತ್ತಲಿನ ದೇಶಗಳಲ್ಲಿ IIನೇ ಲೋಕ ಯುದ್ಧವು ಅತ್ಯುಗ್ರವಾಗಿದ್ದರೂ, ರಾಜ್ಯ ಸಂದೇಶವನ್ನು ಸಾರುವ ನಮ್ಮ ನಿಯೋಗವನ್ನು ಪೂರೈಸಲು ನಾವು ನಮ್ಮಿಂದ ಸಾಧ್ಯವಾದುದೆಲ್ಲವನ್ನು ಮಾಡಲು ಮುಂದುವರಿದೆವು. (ಮತ್ತಾಯ 24:14) 1944ರಲ್ಲಿ ಒಟ್ಟು 15 ಸಾಕ್ಷಿಗಳು ಸೆರೆಮನೆಯಲ್ಲಿದ್ದರು. ಈ ಕಷ್ಟಕರ ಸಮಯಗಳಲ್ಲೂ, ನಾವು ಯೆಹೋವನಿಂದ ತೊರೆಯಲ್ಪಟ್ಟಿದ್ದೇವೆಂದು ನಮಗೆಂದೂ ಅನಿಸಲಿಲ್ಲ.
ತಾಟಸ್ಥ್ಯದ ವಿವಾದಾಂಶದ ಮೇಲೆ ಪರೀಕ್ಷಿಸಲ್ಪಟ್ಟದ್ದು
ಯುದ್ಧವು 1945ರಲ್ಲಿ ಕೊನೆಗೊಂಡಿತಾದರೂ, ನಮ್ಮ ಕಷ್ಟಗಳು ಮುಂದುವರಿದವು ಮತ್ತು ಇನ್ನೂ ಕೆಡುತ್ತಾ ಹೋದವು. ಡಿಸೆಂಬರ್ 2, 1946ರಂದು ಚುನಾವಣೆಯ ಸಮಯದಲ್ಲಿ ಕಡ್ಡಾಯದ ಮತಹಾಕುವಿಕೆಯು ಜಾರಿಗೆ ತರಲ್ಪಟ್ಟಿತು. ಅದರಿಂದ ದೂರ ಸರಿಯಲು ಧೈರ್ಯ ಮಾಡುವ ಯಾವನೇ ವ್ಯಕ್ತಿಯನ್ನೂ ಸರಕಾರದ ಶತ್ರುವಾಗಿ ಪರಿಗಣಿಸಲಾಗುತ್ತಿತ್ತು. ಪರ್ಮೆಟ್ನಲ್ಲಿನ ನಮ್ಮ ಸಭೆಯಲ್ಲಿದ್ದವರು “ನಾವೇನು ಮಾಡಬೇಕು?” ಎಂದು ಕೇಳತೊಡಗಿದರು.
“ನೀವು ಯೆಹೋವನಲ್ಲಿ ಭರವಸೆಯಿಡುವುದಾದರೆ, ಏನು ಮಾಡಬೇಕೆಂದು ನೀವು ನನಗೆ ಕೇಳಬೇಕಾಗಿಲ್ಲ. ಯೆಹೋವನ ಜನರು ತಟಸ್ಥರೆಂದು ನಿಮಗೆ ಈಗಾಗಲೇ ತಿಳಿದಿದೆ. ಅವರು ಈ ಲೋಕದ ಭಾಗವಾಗಿಲ್ಲ” ಎಂದು ನಾನು ಉತ್ತರಿಸಿದೆ.—ಯೋಹಾನ 17:16.
ಚುನಾವಣೆಯ ದಿನವು ಆಗಮಿಸಿತು, ಮತ್ತು ಸರಕಾರಿ ಪ್ರತಿನಿಧಿಗಳು ನಮ್ಮ ಮನೆಗೆ ಬಂದರು. ಅವರು ಶಾಂತರಾಗಿ ಹೀಗೆ ಮಾತನ್ನು ಆರಂಭಿಸಿದರು, “ಓಹ್, ನಾವು ಒಂದು ಕಪ್ ಕಾಫಿ ಕುಡಿಯುತ್ತಾ ಮಾತಾಡೋಣ. ಇವತ್ತು ಏನು ಇದೆ ಎಂದು ನಿಮಗೆ ತಿಳಿದಿದೆಯೊ?”
“ಹೌದು, ಇವತ್ತು ಚುನಾವಣೆಗಳು ನಡೆಯುತ್ತಿವೆ,” ಎಂದು ನಾನು ಉತ್ತರಿಸಿದೆ.
“ನೀವು ಬೇಗ ಹೋಗುವುದು ಉತ್ತಮ, ಇಲ್ಲದಿದ್ದಲ್ಲಿ ನಿಮಗೆ ತಡವಾಗುವುದು,” ಎಂದು ಒಬ್ಬ ಅಧಿಕಾರಿಯು ಹೇಳಿದನು.
“ಇಲ್ಲ, ನಾನು ಹೋಗಲು ಯೋಜಿಸಿಲ್ಲ. ನಮ್ಮ ಮತವು ಯೆಹೋವನಿಗಾಗಿದೆ,” ಎಂದು ನಾನು ಉತ್ತರಿಸಿದೆ.
“ಹಾಗಾದರೆ ಪರವಾಗಿಲ್ಲ, ಬಂದು ವಿರೋಧ ಪಕ್ಷಕ್ಕೆ ಮತಹಾಕಿರಿ.”
ಯೆಹೋವನ ಸಾಕ್ಷಿಗಳು ಸಂಪೂರ್ಣವಾಗಿ ತಟಸ್ಥರಾಗಿದ್ದಾರೆಂದು ನಾನು ವಿವರಿಸಿದೆ. ನಮ್ಮ ಸ್ಥಾನವು ಎಲ್ಲರಿಗೆ ತಿಳಿದುಬಂದಾಗ, ಅತಿ ಹೆಚ್ಚಿನ ಒತ್ತಡವು ನಮ್ಮ ಮೇಲೆ ಹಾಕಲ್ಪಟ್ಟಿತು. ನಮ್ಮ ಕೂಟಗಳನ್ನು ನಡೆಸುವುದನ್ನು ನಿಲ್ಲಿಸಲು ನಮಗೆ ಆಜ್ಞಾಪಿಸಲಾಯಿತು, ಆದುದರಿಂದ ನಾವು ಗುಪ್ತವಾಗಿ ಕೂಡಿಬರಲು ಆರಂಭಿಸಿದೆವು.
ನಮ್ಮ ಸ್ವಂತ ಹಳ್ಳಿಗೆ ಹಿಂದಿರುಗುವಿಕೆ
1947ರಲ್ಲಿ ನನ್ನ ಕುಟುಂಬವು ಮತ್ತು ನಾನು ಬ್ರೆಷ್ಟಾನ್ಗೆ ಹಿಂದಿರುಗಿದೆವು. ಆ ನಂತರ ಸ್ವಲ್ಪ ಸಮಯದಲ್ಲೇ, ಡಿಸೆಂಬರ್ ತಿಂಗಳ ಕೊರೆಯುವ ಚಳಿಯ ಒಂದು ಮಧ್ಯಾಹ್ನದಂದು, ನನ್ನನ್ನು ಸಿಗುರಿಮಿ (ಗುಪ್ತ ಪೊಲೀಸ್)ಯ ಆಫೀಸಿಗೆ ಕರೆಯಲಾಯಿತು. “ನಾನು ನಿನ್ನನ್ನು ಏಕೆ ಕರೆಸಿದ್ದೇನೆಂದು ನಿನಗೆ ತಿಳಿದಿದೆಯೊ?” ಎಂದು ಅಧಿಕಾರಿಯು ಕೇಳಿದನು.
“ನನ್ನ ವಿರುದ್ಧವಾಗಿ ನೀವು ಆಪಾದನೆಗಳನ್ನು ಕೇಳಿರುವ ಕಾರಣದಿಂದ ಎಂದು ನಾನು ಊಹಿಸುತ್ತೇನೆ,” ಎಂಬುದಾಗಿ ನಾನು ಉತ್ತರಿಸಿದೆ. “ಆದರೆ ಲೋಕವು ನಮ್ಮನ್ನು ದ್ವೇಷಿಸುವುದೆಂದು ಬೈಬಲ್ ಹೇಳುತ್ತದೆ, ಆದುದರಿಂದ ಆಪಾದನೆಗಳು ನನ್ನನ್ನು ಆಶ್ಚರ್ಯಗೊಳಿಸುವುದಿಲ್ಲ.”—ಯೋಹಾನ 15:18, 19.
“ನನ್ನೊಂದಿಗೆ ಬೈಬಲಿನ ಕುರಿತಾಗಿ ಮಾತಾಡಬೇಡ,” ಎಂದು ಅವನು ತಟ್ಟನೆ ಹೇಳಿದನು. “ನಾನು ನಿನ್ನನ್ನು ವಿಪರೀತವಾಗಿ ಹೊಡೆಯುವೆನು.”
ಆ ಅಧಿಕಾರಿ ಮತ್ತು ಅವನ ಮನುಷ್ಯರು ಆಫೀಸನ್ನು ಬಿಟ್ಟುಹೋದರು, ಆದರೆ ನನ್ನನ್ನು ಹೊರಗೆ ಚಳಿಯಲ್ಲಿ ನಿಂತುಕೊಳ್ಳುವಂತೆ ಹೇಳಿದನು. ಸ್ವಲ್ಪ ಸಮಯದ ನಂತರ ಅವನು ನನ್ನನ್ನು ತನ್ನ ಆಫೀಸಿಗೆ ಪುನಃ ಕರೆದು ನಮ್ಮ ಮನೆಯಲ್ಲಿ ಕೂಟಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ಆಜ್ಞಾಪಿಸಿದನು. “ನಿನ್ನ ಹಳ್ಳಿಯಲ್ಲಿ ಎಷ್ಟು ಜನರು ಜೀವಿಸುತ್ತಾರೆ?” ಎಂದು ಅವನು ಕೇಳಿದನು.
“ನೂರ ಇಪ್ಪತ್ತು ಜನರು,” ಎಂದು ನಾನು ಹೇಳಿದೆ.
“ಅವರು ಯಾವ ಧರ್ಮದವರಾಗಿದ್ದಾರೆ?”
“ಅಲ್ಬೇನಿಯನ್ ಆರ್ತೊಡಾಕ್ಸ್.”
“ಮತ್ತು ನೀನು?”
“ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ.”
“ನೂರ ಇಪ್ಪತ್ತು ಜನರು ಒಂದು ಮಾರ್ಗದಲ್ಲಿ ಹೋಗುತ್ತಾರೆ ಮತ್ತು ನೀನು ಇನ್ನೊಂದು ಮಾರ್ಗದಲ್ಲಿ ಹೋಗುತ್ತೀಯೊ?” ಅನಂತರ ಅವನು ನಾನು ಚರ್ಚಿನಲ್ಲಿ ಮೊಂಬತ್ತಿಗಳನ್ನು ಹೊತ್ತಿಸುವಂತೆ ಆಜ್ಞಾಪಿಸಿದನು. ನಾನು ಅದನ್ನು ಮಾಡುವುದಿಲ್ಲ ಎಂದು ಹೇಳಿದಾಗ, ಅವನು ನನ್ನನ್ನು ಒಂದು ಕೋಲಿನಿಂದ ಹೊಡೆಯಲಾರಂಭಿಸಿದನು. ನಾನು ಅಂತಿಮವಾಗಿ ಬಿಡುಗಡೆಗೊಳಿಸಲ್ಪಟ್ಟಾಗ, ಬೆಳಗ್ಗೆ ಸುಮಾರು ಒಂದು ಗಂಟೆಯಾಗಿತ್ತು.
ಸಾಹಿತ್ಯ ಸರಬರಾಯಿ ಕಡಿಯಲ್ಪಟ್ಟದ್ದು
IIನೇ ಲೋಕ ಯುದ್ಧವು ಅಂತ್ಯಗೊಂಡ ನಂತರ, ಅಂಚೆಯ ಮೂಲಕ ನಾವು ಕಾವಲಿನಬುರುಜು ಪತ್ರಿಕೆಯನ್ನು ಪುನಃ ಪಡೆಯಲಾರಂಭಿಸಿದೆವು, ಆದರೆ ಕಟ್ಟಕಡೆಗೆ ಪತ್ರಿಕೆಗಳನ್ನು ಇನ್ನುಮುಂದೆ ರವಾನಿಸಲಾಗುತ್ತಿರಲಿಲ್ಲ. ಅನಂತರ, ಒಂದು ರಾತ್ರಿ ಹತ್ತು ಗಂಟೆಗೆ, ಗುಪ್ತ ಪೊಲೀಸರಿಂದ ನನಗೆ ಒಂದು ಕರೆ ಬಂತು. “ಗ್ರೀಕ್ ಭಾಷೆಯಲ್ಲಿ ಒಂದು ಪತ್ರಿಕೆಯು ಬಂದಿದೆ, ಮತ್ತು ಅದು ಯಾವುದರ ಕುರಿತಾಗಿದೆ ಎಂಬುದನ್ನು ನೀನು ವಿವರಿಸುವಂತೆ ನಾವು ಬಯಸುತ್ತೇವೆ” ಎಂದು ನನಗೆ ಹೇಳಲಾಯಿತು.
“ನನಗೆ ಗ್ರೀಕ್ ಭಾಷೆ ಅಷ್ಟು ಚೆನ್ನಾಗಿ ಬರುವುದಿಲ್ಲ,” ಎಂದು ನಾನು ಹೇಳಿದೆ. “ನನ್ನ ನೆರೆಯವನಿಗೆ ಹೆಚ್ಚು ಉತ್ತಮವಾಗಿ ತಿಳಿದಿದೆ. ಪ್ರಾಯಶಃ ಅವನು ನಿಮಗೆ ಸಹಾಯ ಮಾಡಬಲ್ಲನು.”
ಕಾವಲಿನಬುರುಜು ಪತ್ರಿಕೆಯ ಕೆಲವು ಗ್ರೀಕ್ ಭಾಷೆಯ ಪ್ರತಿಗಳನ್ನು ಹೊರಗೆಳೆಯುತ್ತಾ, “ಇಲ್ಲ, ನೀನು ಇದನ್ನು ವಿವರಿಸಬೇಕೆಂದು ನಾವು ಬಯಸುತ್ತೇವೆ” ಎಂದನು ಒಬ್ಬ ಅಧಿಕಾರಿ.
“ಓಹ್, ಇವು ನನ್ನವು!” ಎಂದು ನಾನು ಉದ್ಗರಿಸಿದೆ. “ಖಂಡಿತವಾಗಿಯೂ, ನಾನು ಇದನ್ನು ವಿವರಿಸಬಲ್ಲೆ. ಈ ಪತ್ರಿಕೆಗಳು ಬ್ರೂಕ್ಲಿನ್, ನ್ಯೂ ಯಾರ್ಕ್ನಿಂದ ಬರುತ್ತವೆ, ನೋಡಿ. ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯವು ಇರುವುದು ಅಲ್ಲಿಯೇ. ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ. ಆದರೆ ಅವರು ವಿಳಾಸದೊಂದಿಗೆ ಒಂದು ತಪ್ಪನ್ನು ಮಾಡಿದ್ದಾರೆಂಬಂತೆ ತೋರುತ್ತದೆ. ಈ ಪತ್ರಿಕೆಗಳನ್ನು ನನಗೆ ಕಳುಹಿಸಬೇಕಾಗಿತ್ತು, ನಿಮಗಲ್ಲ.”
ಅವರು ನನಗೆ ಆ ಪತ್ರಿಕೆಗಳನ್ನು ಕೊಡಲಿಲ್ಲ, ಮತ್ತು ಅಂದಿನಿಂದ 1991ರ ತನಕ, 40 ವರ್ಷಗಳಿಗಿಂತಲೂ ಹೆಚ್ಚು ಸಮಯದ ತರುವಾಯ, ನಾವು ಅಲ್ಬೇನಿಯದಲ್ಲಿ ಯಾವುದೇ ಬೈಬಲ್ ಸಾಹಿತ್ಯವನ್ನು ಪಡೆಯಲಿಲ್ಲ. ಆ ಎಲ್ಲಾ ವರ್ಷಗಳಲ್ಲಿ ನಾವು, ಕೇವಲ ನಮ್ಮ ಬೈಬಲುಗಳನ್ನು ಉಪಯೋಗಿಸಿ, ಸಾರುವುದನ್ನು ಮುಂದುವರಿಸಿದೆವು. 1949ರಲ್ಲಿ ಸುಮಾರು 20 ಸಾಕ್ಷಿಗಳು ಸೆರೆಮನೆಯಲ್ಲಿದ್ದರು; ಕೆಲವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಲ್ಪಟ್ಟಿತ್ತು.
ಕಷ್ಟಗಳು ಹೆಚ್ಚಾಗುತ್ತವೆ
1950ಗಳಲ್ಲಿ, ತಾವು ಮಿಲಿಟರಿಯನ್ನು ಬೆಂಬಲಿಸುತ್ತೇವೆ ಎಂದು ತೋರಿಸುವ ದಸ್ತೈವಜುಗಳನ್ನು ಒಯ್ಯಬೇಕೆಂದು ಜನರಿಗೆ ಆಜ್ಞೆ ಕೊಡಲಾಯಿತು. ಆದರೆ ಯೆಹೋವನ ಸಾಕ್ಷಿಗಳು ಅಂತಹ ದಸ್ತೈವಜುಗಳನ್ನು ಒಯ್ಯಲು ನಿರಾಕರಿಸಿದರು. ಈ ಕಾರಣದಿಂದಾಗಿ, ಸಹೋದರ ಕೊಮಿನೊ ಮತ್ತು ನಾನು ಜೈಲಿನಲ್ಲಿ ಇನ್ನೂ ಎರಡು ತಿಂಗಳುಗಳನ್ನು ಕಳೆದೆವು.
ಸರಕಾರವು ನಿರ್ದಿಷ್ಟ ಧರ್ಮಗಳ ಅಸ್ತಿತ್ವವನ್ನು ಅನುಮತಿಸಿದ ಸಮಯದಲ್ಲಿ, ನಮಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವಿತ್ತು. ಆದಾಗಲೂ, 1967ರಲ್ಲಿ ಎಲ್ಲಾ ಧರ್ಮವನ್ನು ನಿಷೇಧಿಸಲಾಯಿತು, ಹೀಗೆ ಅಲ್ಬೇನಿಯವು ಅಧಿಕೃತವಾಗಿ ಸಂಪೂರ್ಣವಾಗಿ ನಾಸ್ತಿಕ ದೇಶವಾಗಿ ಮಾಡಲ್ಪಟ್ಟಿತು. ಸಾಕ್ಷಿಗಳು ಕೂಟಗಳನ್ನು ನಡೆಸುವುದನ್ನು ಮುಂದುವರಿಸಿದರು, ಆದರೆ ಅದು ತುಂಬ ಕಷ್ಟಕರವಾಗಿ ಪರಿಣಮಿಸಿತು. ನಾವು ಒಂದು ಚಿಕ್ಕ ಬೈಬಲನ್ನು ಅಡಗಿಸಲು ಸಾಧ್ಯವಾಗುವಂತೆ, ನಮ್ಮಲ್ಲಿ ಕೆಲವರು ನಮ್ಮ ಜಾಕೆಟಿನ ಒಳಗಿನ ಬಟ್ಟೆಯಲ್ಲಿ ಒಂದು ವಿಶೇಷ ಕಿಸೆಯನ್ನು ಹೊಲಿಸಿಕೊಂಡೆವು. ಅನಂತರ ನಾವು ಒಂದು ಹೊಲಕ್ಕೆ ಹೋಗಿ ಅದನ್ನು ಓದುತ್ತಿದ್ದೆವು.
ಟಿರಾನೆಯಲ್ಲಿನ ಸಾಕ್ಷಿಗಳು ಬೈಬಲನ್ನು ಓದುತ್ತಿರುವಾಗ ಹಿಡಿಯಲ್ಪಟ್ಟರು, ಮತ್ತು ಮೂವರಿಗೆ ದೂರದ ಜೀತ ಶಿಬಿರಗಳಲ್ಲಿ ಐದು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಫಲಸ್ವರೂಪವಾಗಿ, ಅವರ ಕುಟುಂಬಗಳು ಕಷ್ಟವನ್ನನುಭವಿಸಿದವು. ನಮ್ಮಲ್ಲಿ ಚಿಕ್ಕದಾದ, ಮತ್ತು ಪ್ರತ್ಯೇಕವಾಗಿದ್ದ ಹಳ್ಳಿಗಳಿಂದ ಬಂದವರನ್ನು ಕಳುಹಿಸಲಾಗುತ್ತಿರಲಿಲ್ಲ, ಯಾಕಂದರೆ ನಮ್ಮನ್ನು ಒಂದು ಗಂಭೀರ ಬೆದರಿಕೆಯನ್ನಾಗಿ ಪರಿಗಣಿಸಲಾಗುತ್ತಿರಲಿಲ್ಲ. ಆದರೆ ನಮ್ಮ ತಾಟಸ್ಥ್ಯವು, ಆಹಾರ ಪಡೆಯುವ ಪಟ್ಟಿಗಳಿಂದ ನಮ್ಮ ಹೆಸರುಗಳ ತೆಗೆಯುವಿಕೆಗೆ ನಡಿಸಿತು. ಆದುದರಿಂದ, ಜೀವನವು ತುಂಬ ಕಷ್ಟಕರವಾಗಿತ್ತು. ಮತ್ತೂ, ನಮ್ಮ ಇನ್ನೂ ಎರಡು ಮಕ್ಕಳು ಸತ್ತರು. ಆದರೂ ನಾವು ಯೆಹೋವನಿಂದ ತೊರೆಯಲ್ಪಟ್ಟಿದ್ದೇವೆಂದು ನಮಗೆಂದೂ ಅನಿಸಲಿಲ್ಲ.
ಅಲ್ಬೇನಿಯದಲ್ಲಿ ಭಯವು ಪ್ರಚಲಿತವಾಗಿತ್ತು. ಎಲ್ಲರನ್ನು ಗಮನಿಸಲಾಗುತ್ತಿತ್ತು, ಮತ್ತು ಆಳುತ್ತಿರುವ ಪಕ್ಷಕ್ಕಿಂತ ಭಿನ್ನವಾದ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಹಸ ಮಾಡುತ್ತಿದ್ದ ಯಾವನೇ ವ್ಯಕ್ತಿಯ ಮೇಲೆ ಗುಪ್ತ ಪೊಲೀಸರು ವರದಿಗಳನ್ನು ಬರೆಯುತ್ತಿದ್ದರು. ಆದುದರಿಂದ ನಾವು ನಮ್ಮ ಚಟುವಟಿಕೆಯ ಕುರಿತಾದ ಲಿಖಿತ ವರದಿಗಳನ್ನು ಮಾಡುವ ವಿಷಯದಲ್ಲಿ ತುಂಬ ಎಚ್ಚರವಾಗಿದ್ದೆವು. ಇಬ್ಬರು ಅಥವಾ ಮೂವರಿಗಿಂತ ದೊಡ್ಡದಾದ ಗುಂಪುಗಳಲ್ಲಿ ಆತ್ಮಿಕ ಉತ್ತೇಜನಕ್ಕಾಗಿ ನಾವು ಕೂಡಿಬರಲು ಸಾಧ್ಯವಿರಲಿಲ್ಲ. ಆದರೂ, ನಾವು ಸಾರುವುದನ್ನೆಂದೂ ನಿಲ್ಲಿಸಲಿಲ್ಲ.
ಸಹೋದರರ ನಡುವೆ ಗಲಿಬಿಲಿಯನ್ನು ಉಂಟುಮಾಡುವ ಪ್ರಯತ್ನದಲ್ಲಿ, ಟಿರಾನೆಯಲ್ಲಿರುವ ಒಬ್ಬ ಪ್ರಧಾನ ಸಾಕ್ಷಿಯು ಒಬ್ಬ ಗೂಢಚಾರನಾಗಿದ್ದಾನೆಂಬ ವದಂತಿಯನ್ನು ಗುಪ್ತ ಪೊಲೀಸರು ಹರಡಿಸಿದರು. ಇದು ಕೆಲವರು ಭರವಸೆಯನ್ನು ಕಳೆದುಕೊಳ್ಳಲು ಕಾರಣವಾಯಿತು ಮತ್ತು ನಮ್ಮ ಏಕತೆಯನ್ನು ಕೊಂಚಮಟ್ಟಿಗೆ ಕದಡಿಸಿತು. ಸದ್ಯದ ಯಾವುದೇ ಬೈಬಲ್ ಸಾಹಿತ್ಯವಿಲ್ಲದಿರುವ ಕಾರಣದಿಂದ, ಮತ್ತು ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ಯಾವುದೇ ಸಂಪರ್ಕವಿಲ್ಲದಿರುವ ಕಾರಣದಿಂದ, ಕೆಲವರು ಭಯಕ್ಕೆ ಬಲಿಬಿದ್ದರು.
ಇದಕ್ಕೆ ಕೂಡಿಸಿ, ಅಲ್ಬೇನಿಯದಲ್ಲಿನ ಅತಿಯಾಗಿ ಗೌರವಿಸಲ್ಪಡುತ್ತಿದ್ದ ಕ್ರೈಸ್ತ ಹಿರಿಯನೊಬ್ಬನಾದ ಸ್ಪೈರೊ ವ್ರೂಹೊ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ವದಂತಿಯನ್ನು ಅಧಿಕಾರಿಗಳು ಹರಡಿಸಿದರು. “ನೋಡಿ, ವ್ರೂಹೊ ಕೂಡ ಬಿಟ್ಟುಕೊಟ್ಟಿದ್ದಾನೆ” ಎಂದು ಅವರು ಹೇಳಿದರು. ಸಹೋದರ ವ್ರೂಹೊ ನಿಜವಾಗಿ ಕೊಲೆಗೈಯಲ್ಪಟ್ಟಿದ್ದರೆಂದು ನಂತರ ವ್ಯಕ್ತವಾಯಿತು.
1975ರಲ್ಲಿ, ಆರ್ಗ್ಜೀರೊ ಮತ್ತು ನಾನು ನಮ್ಮ ಮಗನೊಂದಿಗೆ ಟಿರಾನೆಯಲ್ಲಿ ಕೆಲವು ತಿಂಗಳುಗಳ ವರೆಗೆ ತಂಗಿದೆವು. ಚುನಾವಣೆಯ ಸಮಯದಲ್ಲಿ, ನಗರದಲ್ಲಿದ್ದ ಅಧಿಕಾರಿಗಳು ಹೀಗೆ ಬೆದರಿಕೆಯನ್ನು ಹಾಕುವ ಮೂಲಕ ನಮ್ಮ ಮೇಲೆ ಒತ್ತಡವನ್ನು ಹಾಕಿದರು: “ನೀವು ಮತ ಹಾಕದಿದ್ದರೆ, ನಾವು ನಿಮ್ಮ ಮಗನನ್ನು ಉದ್ಯೋಗದಿಂದ ತೆಗೆದುಹಾಕುವೆವು.”
“ನನ್ನ ಮಗ 25 ವರ್ಷಗಳಿಂದ ತನ್ನ ಉದ್ಯೋಗದಲ್ಲಿದ್ದಾನೆ. ಅವನ ಮತ್ತು ಅವನ ಕುಟುಂಬದ ಕುರಿತಾಗಿ ನಿಮ್ಮಲ್ಲಿ ವಿವರವಾದ ವೈಯಕ್ತಿಕ ರೆಕಾರ್ಡುಗಳಿವೆ. ನಾನು 40ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಮತ ಹಾಕಿಲ್ಲ. ಈ ಮಾಹಿತಿಯು ಸಾಮಾನ್ಯವಾಗಿ ಸಿಬ್ಬಂದಿಗಳ ರೆಕಾರ್ಡುಗಳಲ್ಲಿ ಇರುತ್ತದೆ. ಇದು ಇಲ್ಲದಿದ್ದಲ್ಲಿ, ನಿಮ್ಮ ರೆಕಾರ್ಡುಗಳು ಸರಿಯಾದ ಕ್ರಮದಲ್ಲಿಲ್ಲ. ಅದು ನಿಮ್ಮ ರೆಕಾರ್ಡುಗಳಲ್ಲಿ ಇರುವಲ್ಲಿ, ಇಷ್ಟು ವರ್ಷಗಳ ವರೆಗೆ ಕೆಲಸ ಮಾಡಲು ಅವನನ್ನು ಅನುಮತಿಸುವ ಮೂಲಕ ನೀವು ಪಕ್ಷಕ್ಕೆ ವಿಶ್ವಾಸದ್ರೋಹ ಮಾಡಿದ್ದೀರಿ” ಎಂದು ನಾನು ಉತ್ತರಿಸಿದೆ. ಇದನ್ನು ಕೇಳಿ, ಅಧಿಕಾರಿಗಳು ಹೇಳಿದ್ದೇನೆಂದರೆ, ನಾವು ಬ್ರೆಷ್ಟಾನ್ಗೆ ಹಿಂದಿರುಗುವಲ್ಲಿ, ಅವರು ಈ ವಿವಾದಾಂಶದ ಕುರಿತಾಗಿ ವಾದ ಮಾಡುವುದಿಲ್ಲ.
ಹಠಾತ್ತಾದ ಬದಲಾವಣೆಗಳು
1983ರಲ್ಲಿ ನಾವು ಬ್ರೆಷ್ಟಾನ್ನಿಂದ ಲಾಕ್ ಎಂಬ ನಗರಕ್ಕೆ ಸ್ಥಳಾಂತರಿಸಿದೆವು. ತದನಂತರ ಸ್ವಲ್ಪ ಸಮಯದಲ್ಲೇ, 1985ರಲ್ಲಿ, ಆ ನಿರಂಕುಶಾಧಿಕಾರಿಯು ಸತ್ತನು. 1946ರಲ್ಲಿ ಆ ಪ್ರಥಮ ಕಡ್ಡಾಯ ಚುನಾವಣೆಗಳಂದಿನಿಂದ ಅವನು ಆಳಿದ್ದನು. ಸಮಯಾನಂತರ, ಟಿರಾನೆಯ ಮುಖ್ಯ ಚೌಕದಲ್ಲಿ ಗಮನಸೆಳೆಯುವಂತಿದ್ದ ಅವನ ಮತ್ತು ಸ್ಟಾಲಿನನ ಮೂರ್ತಿಗಳು ಕೆಳಗೆ ತರಲ್ಪಟ್ಟವು.
ನಮ್ಮ ಚಟುವಟಿಕೆಯ ಮೇಲೆ ನಿಷೇಧವಿದ್ದ ದಶಕಗಳ ಸಮಯದಲ್ಲಿ, ಅನೇಕ ಸಾಕ್ಷಿಗಳು ಘೋರವಾಗಿ ಉಪಚರಿಸಲ್ಪಟ್ಟರು, ಮತ್ತು ಕೆಲವರು ಕೊಲ್ಲಲ್ಪಟ್ಟರು. ಒಬ್ಬ ಮನುಷ್ಯನು ಬೀದಿಯಲ್ಲಿದ್ದ ಕೆಲವು ಸಾಕ್ಷಿಗಳಿಗೆ ಹೇಳಿದ್ದು: “ಕಮ್ಯೂನಿಸ್ಟರ ಸಮಯದಲ್ಲಿ, ನಾವೆಲ್ಲರೂ ದೇವರನ್ನು ಬಿಟ್ಟುಬಿಟ್ಟಿದ್ದೆವು. ಕೇವಲ ಯೆಹೋವನ ಸಾಕ್ಷಿಗಳು ಸಂಕಷ್ಟಗಳ ಮತ್ತು ಕಷ್ಟಗಳ ಹೊರತೂ ಆತನಿಗೆ ನಂಬಿಗಸ್ತರಾಗಿ ಉಳಿದರು.”
ಹೆಚ್ಚು ಸ್ವಾತಂತ್ರ್ಯವು ಕೊಡಲ್ಪಟ್ಟಂತೆ, ಜೂನ್ 1991ರಲ್ಲಿ ಒಂಬತ್ತು ಜನರು ಕ್ರೈಸ್ತ ಶುಶ್ರೂಷೆಯಲ್ಲಿನ ಚಟುವಟಿಕೆಯನ್ನು ವರದಿಸಿದರು. ಜೂನ್ 1992ರಲ್ಲಿ, ನಿಷೇಧವು ತೆಗೆಯಲ್ಪಟ್ಟ ಒಂದು ತಿಂಗಳ ನಂತರ 56 ಮಂದಿ ಸಾರುವ ಕಾರ್ಯದಲ್ಲಿ ಭಾಗವಹಿಸಿದರು. ಆ ವರ್ಷದ ಆರಂಭದಲ್ಲಿ, ಕ್ರಿಸ್ತನ ಮರಣದ ಜ್ಞಾಪಕಕ್ಕೆ 325 ಮಂದಿ ಹಾಜರಾಗಿದುದಕ್ಕಾಗಿ ನಾವು ಅತಿಯಾಗಿ ಸಂತೋಷಿಸಿದೆವು. ಅಂದಿನಿಂದ ಸಾರುತ್ತಿರುವವರ ಸಂಖ್ಯೆಯು 600ಕ್ಕಿಂತಲೂ ಹೆಚ್ಚು ಬೆಳೆದಿದೆ, ಮತ್ತು ಎಪ್ರಿಲ್ 14, 1995ರಂದು ಒಟ್ಟು 3,491 ಜನರು ಜ್ಞಾಪಕವನ್ನು ಹಾಜರಾದರು! ಇತ್ತೀಚಿನ ವರ್ಷಗಳಲ್ಲಿ, ಇಷ್ಟೊಂದು ಯುವ ಜನರು ನಮ್ಮ ಸಭೆಗಳಿಗೆ ಕೂಡಿಸಲ್ಪಡುವುದನ್ನು ಕಾಣುವುದು ನನಗೆ ಒಂದು ಅವರ್ಣನೀಯ ಆನಂದವಾಗಿರುತ್ತದೆ.
ಆರ್ಗ್ಜೀರೊ ಈ ಎಲ್ಲಾ ಅನೇಕ ವರ್ಷಗಳಿಂದ ಯೆಹೋವನಿಗೆ ನಂಬಿಗಸ್ತಳಾಗಿ ಉಳಿದಿದ್ದಾಳೆ ಮತ್ತು ನನಗೆ ನಿಷ್ಠಳಾಗಿದ್ದಾಳೆ. ನಾನು ಸೆರೆಮನೆಯಲ್ಲಿದ್ದಾಗ ಅಥವಾ ಸಾರುವ ಕಾರ್ಯದಲ್ಲಿ ಪ್ರಯಾಣಿಸುತ್ತಿದ್ದಾಗ, ಅವಳು ತಾಳ್ಮೆಯಿಂದ, ಯಾವುದೇ ದೂರಿಲ್ಲದೆ ನಮ್ಮ ಕುಟುಂಬದ ಅಗತ್ಯಗಳನ್ನು ಪರಾಮರಿಸಿದಳು. ನಮ್ಮ ಪುತ್ರರಲ್ಲಿ ಒಬ್ಬನು ಮತ್ತು ಅವನ ಹೆಂಡತಿಯು 1993ರಲ್ಲಿ ದೀಕ್ಷಾಸ್ನಾನಪಡೆದರು. ಅದು ನಮ್ಮನ್ನು ತುಂಬ ಸಂತೋಷಪಡಿಸಿತು.
ಕೇವಲ ದೇವರ ರಾಜ್ಯಕ್ಕಾಗಿ
ಅಲ್ಬೇನಿಯದಲ್ಲಿರುವ ಯೆಹೋವನ ಸಂಸ್ಥೆಯು ಇಷ್ಟು ಐಕ್ಯವಾಗಿರುವುದನ್ನು ಮತ್ತು ಆತ್ಮಿಕ ಸಮೃದ್ಧತೆಯಲ್ಲಿ ಆನಂದಿಸುತ್ತಿರುವುದನ್ನು ಕಾಣಲು ನಾನು ಹರ್ಷಿಸುತ್ತೇನೆ. ಅವನು ಸಾಯುವ ಮುಂಚೆ, ದೀರ್ಘ ಸಮಯದಿಂದ ವಾಗ್ದಾನಿಸಲ್ಪಟ್ಟಿದ್ದ ಮೆಸ್ಸೀಯನನ್ನು ನೋಡುವ ಅಮೂಲ್ಯ ಸುಯೋಗವು ದಯಪಾಲಿಸಲ್ಪಟ್ಟ, ಯೆರೂಸಲೇಮಿನಲ್ಲಿನ ವೃದ್ಧ ಸಿಮೆಯೋನನಂತೆ ನನಗೆ ಅನಿಸುತ್ತದೆ. (ಲೂಕ 2:30, 31) ಯಾವ ವಿಧದ ಸರಕಾರವನ್ನು ನಾನು ಇಷ್ಟಪಡುತ್ತೇನೆಂದು ನನಗೆ ಈಗ ಕೇಳಲ್ಪಡುವಾಗ, ನಾನು ಹೇಳುವುದು: “ನಾನು ಕಮ್ಯೂನಿಸ್ಟ್ ಅಥವಾ ಬಂಡವಾಳಶಾಹಿ ಸರಕಾರವನ್ನು ಯಾವುದನ್ನೂ ಇಷ್ಟಪಡುವುದಿಲ್ಲ. ಜನರು ಅಥವಾ ಸರಕಾರವು ದೇಶದ ಸ್ವಾಮ್ಯವನ್ನು ಪಡೆದಿದೆಯೋ ಎಂಬುದು ಪ್ರಾಮುಖ್ಯವಲ್ಲ. ಸರಕಾರಗಳು ರಸ್ತೆಗಳನ್ನು ನಿರ್ಮಿಸುತ್ತವೆ, ದೂರದ ಹಳ್ಳಿಗಳಿಗೆ ವಿದ್ಯುತ್ತನ್ನು ತರುತ್ತವೆ, ಮತ್ತು ಸ್ವಲ್ಪ ಮಟ್ಟಿಗಿನ ಕ್ರಮಬದ್ಧತೆಯನ್ನು ಒದಗಿಸುತ್ತವೆ. ಆದಾಗಲೂ, ಯೆಹೋವನ ಸರಕಾರವು, ಆತನ ಸ್ವರ್ಗೀಯ ಸರಕಾರವು, ಅಲ್ಬೇನಿಯ ಹಾಗೂ ಲೋಕದ ಉಳಿದ ಭಾಗವು ಎದುರಿಸುತ್ತಿರುವ ಕಷ್ಟಕರ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವಾಗಿದೆ.”
ದೇವರ ರಾಜ್ಯದ ಕುರಿತಾಗಿ ಸಾರುವುದರಲ್ಲಿ ದೇವರ ಸೇವಕರು ಭೂವ್ಯಾಪಕವಾಗಿ ಮಾಡುತ್ತಿರುವ ಕೆಲಸವು ಯಾವುದೇ ಮಾನವನ ಕೆಲಸವಲ್ಲ. ಇದು ದೇವರ ಕೆಲಸವಾಗಿದೆ. ನಾವು ಆತನ ಸೇವಕರಾಗಿದ್ದೇವೆ. ಅಲ್ಬೇನಿಯದಲ್ಲಿ ನಮಗೆ ಅನೇಕ ಕಷ್ಟಗಳಿತ್ತಾದರೂ ಮತ್ತು ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ದೀರ್ಘ ಸಮಯದಿಂದ ಯಾವುದೇ ಸಂಪರ್ಕವಿಲ್ಲದಿದ್ದರೂ, ನಾವು ಎಂದೂ ಆತನಿಂದ ತೊರೆಯಲ್ಪಡಲಿಲ್ಲ. ಆತನ ಆತ್ಮವು ಯಾವಾಗಲೂ ಇಲ್ಲಿತ್ತು. ಆತನು ದಾರಿಯ ಪ್ರತಿಯೊಂದು ಹೆಜ್ಜೆಯಲ್ಲಿ ನಮ್ಮನ್ನು ಮಾರ್ಗದರ್ಶಿಸಿದನು. ಇದನ್ನು ನಾನು ನನ್ನ ಜೀವಮಾನದಲ್ಲೆಲ್ಲಾ ಕಂಡಿದ್ದೇನೆ.