ಯುದ್ಧರಹಿತವಾದೊಂದು ಲೋಕ—ಶೀಘ್ರದಲ್ಲೇ!
ದಶಂಬರ 24, 1914 ರಂದು, ಜಿಮ್ ಪ್ರಿನ್ಸ್ ಎಂಬ ಹೆಸರಿನ ಒಬ್ಬ ಯುವ ಬ್ರಿಟಿಷ್ ಸೈನಿಕನು, ಒಬ್ಬ ಜರ್ಮನ್ ಪದಾತಿ ಸೈನಿಕನೊಂದಿಗೆ ಮಾತಾಡಲು ವಿವಾದಾಸ್ಪದ ಪ್ರದೇಶವನ್ನು ದಾಟಿ ಹೋದನು. “ನಾನು ಸ್ಯಾಕ್ಸನ್. ನೀನು ಆ್ಯಂಗ್ಲೋ ಸ್ಯಾಕ್ಸನ್. ನಾವು ಹೋರಾಡುವುದೇಕೆ?” ಎಂದು ಜರ್ಮನ್ ವ್ಯಕ್ತಿಯು ಅವನನ್ನು ಕೇಳಿದನು. ವರ್ಷಗಳಾನಂತರ, ಪ್ರಿನ್ಸ್ ಒಪ್ಪಿಕೊಂಡದ್ದು: “ಆ ಪ್ರಶ್ನೆಗೆ ಉತ್ತರ ನನಗೆ ಇನ್ನೂ ಗೊತ್ತಿಲ್ಲ.”
ಇಸವಿ 1914 ರಲ್ಲಿ, ಒಂದು ಅಸಾಧಾರಣ ವಾರದಲ್ಲಿ, ಬ್ರಿಟಿಷ್ ಮತ್ತು ಜರ್ಮನ್ ಸೇನೆಗಳ ಸೈನಿಕರು ಸ್ನೇಹ ಬೆಳೆಸಿದರು, ಕಾಲ್ಚೆಂಡಾಟವನ್ನು ಆಡಿದರು, ಮತ್ತು ಕ್ರಿಸ್ಮಸ್ ಕೊಡುಗೆಗಳನ್ನು ಕೂಡ ಅದಲು ಬದಲು ಮಾಡಿಕೊಂಡರು. ಆ ಯುದ್ಧ ವಿರಾಮವಾದರೊ, ನಿಶ್ಚಯವಾಗಿಯೂ ಅನಧಿಕೃತವಾದ ವಿರಾಮವಾಗಿತ್ತು. ಯುದ್ಧ ಪ್ರಚಾರದ ಮೂಲಕ ಚಿತ್ರಿಸಲಾದ ದುಷ್ಟ ಪಿಶಾಚಿಯು “ವೈರಿ” ಯಾಗಿರಲಿಲ್ಲ ಎಂಬುದನ್ನು ತಮ್ಮ ಪಡೆಗಳು ಕಂಡುಹಿಡಿಯುವುದನ್ನು ಸೇನಾಪತಿಗಳು ಬಯಸಲಿಲ್ಲ. ಬ್ರಿಟಿಷ್ ಸೈನಿಕ ಆಲ್ಬರ್ಟ್ ಮಾರನ್ ಅನಂತರ ಜ್ಞಾಪಿಸಿಕೊಂಡದ್ದು: “ಕದನ ವಿರಾಮವು ಇನ್ನೊಂದು ವಾರದ ವರೆಗೆ ಮುಂದುವರಿದಿದ್ದರೆ, ಯುದ್ಧವನ್ನು ಪುನಃ ಆರಂಭಿಸುವುದು ಬಹಳ ಕಠಿನವಾಗುತ್ತಿತ್ತು.”
ತರಬೇತು ಪಡೆದ ಅನೇಕ ಸೈನಿಕರು ಕೂಡ ಯುದ್ಧಕ್ಕಿಂತ ಶಾಂತಿಗಾಗಿಯೇ ಹಾತೊರೆಯುತ್ತಾರೆ ಎಂಬುದನ್ನು ಆ ಸ್ವಯಂಪ್ರೇರಿತ ಕದನ ವಿರಾಮವು ಸೂಚಿಸುತ್ತದೆ. ಕದನದ ಭೀತಿಗಳ ಕುರಿತು ಅರಿತ ಸೈನಿಕರಲ್ಲಿ ಹೆಚ್ಚಿನವರು, “ಯುದ್ಧವು ಏನಾಗಿದೆ ಎಂಬುದನ್ನು ಅರಿಯದವನು ಯುದ್ಧಕ್ಕೆ ಹೋಗಲಿ” ಎಂಬ ಸ್ಪ್ಯಾನಿಷ್ ನಾಣ್ಣುಡಿಯನ್ನು ದೃಢಪಡಿಸುವರು. ನಿಸ್ಸಂದೇಹವಾಗಿ, ಅಧಿಕಾಂಶ ಜನರು ಯುದ್ಧಕ್ಕಿಂತ ಶಾಂತಿಯನ್ನೇ ಬಯಸುವರು ಎಂದು ಸಾಮಾನ್ಯ ಜನರೊಂದಿಗೆ ನಡೆಸಲಾಗುವ ಲೋಕವ್ಯಾಪಕ ಅವಲೋಕನೆಯು ತೋರಿಸುವುದು. ಆದರೆ ಶಾಂತಿಗಾಗಿ ಇರುವ ಈ ವಿಶ್ವವ್ಯಾಪಿ ಬಯಕೆಯನ್ನು ಒಂದು ಯುದ್ಧರಹಿತ ಲೋಕವಾಗಿ ಪರಿವರ್ತಿಸುವುದು ಹೇಗೆ ಸಾಧ್ಯ?
ಯುದ್ಧವನ್ನು ರದ್ದು ಮಾಡುವ ಮೊದಲು, ಮನೋಭಾವಗಳು ಬದಲಾಗಬೇಕು. ಯುಎನ್ನ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂವಿಧಾನವು ಹೇಳುವುದು: “ಯುದ್ಧಗಳು ಮನುಷ್ಯರ ಮನಸ್ಸುಗಳಲ್ಲಿ ಆರಂಭವಾಗುವುದರಿಂದ, ಶಾಂತಿಯ ರಕ್ಷಣೆಯು ಮನುಷ್ಯರ ಮನಸ್ಸುಗಳಲ್ಲೇ ನಿರ್ಮಿಸಲ್ಪಡಬೇಕು.” ಆದರೂ, ಅಪನಂಬಿಕೆ ಮತ್ತು ದ್ವೇಷ ಹಬ್ಬಿರುವ ಆಧುನಿಕ ದಿನದ ಸಮಾಜವು, ಅಧಿಕ ಹಿಂಸಾತ್ಮಕವಾಗುತ್ತಿದೆ, ಹೆಚ್ಚು ಶಾಂತಿಭರಿತವಾಗುತ್ತಿಲ್ಲ.
ಆದರೂ, ನೀತಿಯ ಮನಃಪ್ರವೃತ್ತಿ ಇರುವ ಜನರ ಮನಸ್ಸುಗಳ ಮೇಲೆ ಒಂದು ದಿನ ಶಾಂತಿಯು ಅಚ್ಚೊತ್ತಲ್ಪಡುವುದೆಂದು ದೇವರು ತಾನೇ ವಾಗ್ದಾನಿಸಿದ್ದಾನೆ. ಆತನ ಪ್ರವಾದಿಯಾದ ಯೆಶಾಯನ ಮುಖಾಂತರ, ಆತನಂದದ್ದು: “ಆತನು [ದೇವರು] ದೇಶದೇಶಗಳ ವ್ಯಾಜ್ಯಗಳನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಯೆಶಾಯ 2:4.
ಮನಸ್ಸಿನಲ್ಲಿ ಶಾಂತಿಯನ್ನು ಪ್ರವರ್ತಿಸುವುದು
ಯೋಚನೆಯಲ್ಲಿ ಅಂತಹ ಒಂದು ಗಮನಾರ್ಹವಾದ ಬದಲಾವಣೆಯು ಸಂಭವಿಸಬಲ್ಲದೊ? ಯುದ್ಧವನ್ನು ಮಹಿಮೆಪಡಿಸುವ ಬದಲು ಶಾಂತಿಯನ್ನು ರಕ್ಷಿಸಲು ಜನರು ಎಂದಾದರೂ ಕಲಿಯುವರೊ? ವೂಲ್ಫ್ಗಾಂಗ್ ಕುಸೆರೊ ವಿನ ಉದಾಹರಣೆಯನ್ನು ಪರಿಗಣಿಸಿರಿ. ಇಸವಿ 1942 ರಲ್ಲಿ, ಅವನು ‘ಯುದ್ಧಾಭ್ಯಾಸವನ್ನು ಮಾಡದೆ ಇರುವ’ ಕಾರಣ, ನಾಜಿಗಳು ಈ 20 ವರ್ಷ ವಯಸ್ಸಿನ ಜರ್ಮನ್ ಯುವಕನ ಶಿರಚ್ಛೇದನ ಮಾಡಿದರು. ಅವನು ಸಾಯುವ ಆಯ್ಕೆ ಮಾಡಿದ್ದೇಕೆ? ಒಂದು ಲಿಖಿತ ಹೇಳಿಕೆಯಲ್ಲಿ ಅವನು, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಮತ್ತು, “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು,” ಎಂಬಂಥ ಶಾಸ್ತ್ರೀಯ ತತ್ವಗಳನ್ನು ಉದ್ಧರಿಸಿದನು. (ಮತ್ತಾಯ 22:39; 26:52) ಆಮೇಲೆ ಅವನು ಸ್ಪಷ್ಟವಾಗಿಗಿ ಕೇಳಿದ್ದು: “ನಮ್ಮ ಸೃಷ್ಟಿಕರ್ತನು ಇವೆಲ್ಲವನ್ನು ಬರೆಸಿಟ್ಟಿದ್ದು ಮರಗಳಿಗಾಗಿಯೊ?”
ಬೈಬಲಿನಲ್ಲಿ ದಾಖಲಿಸಲ್ಪಟ್ಟ ದೇವರ ವಾಕ್ಯವು, “ಕಾರ್ಯಸಾಧಕವಾದದ್ದು” ಮತ್ತು ಪರಿಣಾಮಗಳನ್ನು ಲಕ್ಷಿಸದೆ ಶಾಂತಿಯನ್ನು ಬೆನ್ನಟ್ಟುವಂತೆ, ಯೆಹೋವನ ಈ ಯುವ ಸಾಕ್ಷಿಯನ್ನು ಬಲವಂತ ಪಡಿಸಿತು. (ಇಬ್ರಿಯ 4:12; 1 ಪೇತ್ರ 3:11) ಆದರೆ ಹೀಗೆ ಶಾಂತಿಯನ್ನು ಬೆನ್ನಟ್ಟುವುದರಲ್ಲಿ ವೂಲ್ಫ್ಗಾಂಗ್ ಕುಸೆರೊ ಏಕಮಾತ್ರನಾಗಿರಲಿಲ್ಲ. ಚರ್ಚುಗಳ ನಾಜಿ ಹಿಂಸೆ 1933-45, (ದ ನಾಜಿ ಪರ್ಸಿಕ್ಯೂಷನ್ ಆಫ್ ದ ಚರ್ಚ್ಸ್ 1933-45) ಎಂಬ ಪುಸ್ತಕದಲ್ಲಿ, ಯೆಹೋವನ ಸಾಕ್ಷಿಗಳು ಒಂದು ಗುಂಪಿನೋಪಾದಿ ಯುದ್ಧಶಸ್ತ್ರಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು ಎಂಬುದನ್ನು ರುಜುಪಡಿಸುವ ಅಧಿಕೃತ ನಾಜಿ ದಾಖಲೆಗಳನ್ನು ಜೆ. ಎಸ್. ಕಾನ್ವೇ ಉದ್ಧರಿಸುತ್ತಾರೆ. ಕಾನ್ವೇ ಸೂಚಿಸುವಂತೆ, ಇಂತಹ ಧೈರ್ಯದ ನಿಲುವು ವಾಸ್ತವವಾಗಿ ತಮ್ಮ ಸ್ವಂತ ಮರಣ ಪತ್ರಕ್ಕೆ ಸಹಿ ಹಾಕುವುದನ್ನು ಅರ್ಥೈಸಿತು.
ತಮ್ಮ ಕುಲ ಯಾ ರಾಷ್ಟ್ರೀಯತೆ ಏನೇ ಆಗಿರಲಿ, ಯೆಹೋವನ ಸಾಕ್ಷಿಗಳು ಇಂದು ಶಾಂತಿಯನ್ನು ಬೆನ್ನಟಲ್ಟು ಮುಂದುವರಿದಿದ್ದಾರೆ. ಯಾಕೆ? ಯಾಕೆಂದರೆ ದೇವರ ನಿಜ ಸೇವಕರು ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡಬೇಕೆಂಬುದನ್ನು ಅವರು ಬೈಬಲಿನಿಂದ ಕಲಿತಿದ್ದಾರೆ. ಇಸವಿ 1987 ರಲ್ಲಿ ಇಸ್ರಾಯೇಲ್ಗೆ ವಲಸೆ ಹೋದ ಅರ್ಜೆಂಟೀನದ ಒಬ್ಬ ಯುವ ಮನುಷ್ಯನಾದ ಆಲೆಕಾಂದ್ರೊ, ವೈಯಕ್ತಿಕವಾಗಿ ಈ ನಿಜತ್ವಕ್ಕೆ ಪ್ರಮಾಣ ನೀಡಬಲ್ಲನು.
ಮೂರು ವರ್ಷಗಳ ಕಾಲ ಆಲೆಕಾಂದ್ರೊ ವಿಶ್ವವಿದ್ಯಾನಿಲಯವೊಂದರಲ್ಲಿ ಓದುತ್ತಾ, ವಿಭಿನ್ನ ಹೋಟೆಲು ಮತ್ತು ರೆಸ್ಟೊರಂಟ್ಗಳಲ್ಲಿ ಕೆಲಸಮಾಡುತ್ತಾ ಕಿಬ್ಬುಟ್ಸ್ ವಸಾಹತೊಂದರಲ್ಲಿ ಜೀವಿಸಿದನು. ಈ ಸಮಯದಲ್ಲಿ, ಬೈಬಲನ್ನು ಓದಲು ಅವನು ಆರಂಭಿಸಿದನು ಮತ್ತು ಜೀವಿತದಲ್ಲಿ ಒಂದು ಉದ್ದೇಶಕ್ಕಾಗಿ ಹುಡುಕುತ್ತಿದ್ದನು. ಇವೆಲ್ಲದ್ದಕ್ಕೂ ಮಿಗಿಲಾಗಿ, ಜನರು ಶಾಂತಿ ಮತ್ತು ನ್ಯಾಯವನ್ನು ಅನುಭವಿಸಬಹುದಾದ ಒಂದು ಲೋಕವನ್ನು ನೋಡಲು ಅವನು ಬಯಸಿದನು. ಯೆಹೂದ್ಯನಾದ ಆಲೆಕಾಂದ್ರೊ, ಯೆಹೂದ್ಯರೊಂದಿಗೆ ಮತ್ತು ಅರಬ್ಬಿಯರೊಂದಿಗೆ ಕೆಲಸಮಾಡಿದರೂ ಎರಡೂ ಪಕ್ಷಗಳನ್ನು ಮೆಚ್ಚಲು ಇಷ್ಟಪಡಲಿಲ್ಲ.
ಇಸವಿ 1990 ರಲ್ಲಿ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದ ಒಬ್ಬ ಮಿತ್ರನು, ಹೈಫಾದಲ್ಲಿ ಇದ್ದ ಒಂದು ದಿನದ ಸಮ್ಮೇಳನಕ್ಕೆ ಆಲೆಕಾಂದ್ರೊನನ್ನು ಆಮಂತ್ರಿಸಿದನು. ಸಮ್ಮೇಳನದಲ್ಲಿ 600 ಯೆಹೂದ್ಯರು ಮತ್ತು ಅರಬ್ಬಿಯರು ಸಂತೋಷದಿಂದ ಬೆರೆಯುವುದನ್ನು ಕಂಡು, ವಿಸ್ಮಯಗೊಂಡ ಆಲೆಕಾಂದ್ರೊ, ತನ್ನಲ್ಲಿಯೇ, ‘ಜೀವಿಸಲು ಜನರಿಗಾಗಿ ಇರುವ ಸರಿಯಾದ ಮಾರ್ಗವು ಇದೇ ಆಗಿದೆ’ ಎಂದು ಯೋಚಿಸಿದನು. ಆರು ತಿಂಗಳುಗಳೊಳಗೆ, ಅವನು ಸ್ವತಃ ಒಬ್ಬ ಸಾಕ್ಷಿಯಾದನು ಮತ್ತು ಈಗ ಅವನ ಹೆಚ್ಚಿನ ಸಮಯವನ್ನು ಬೈಬಲಿನ ಶಾಂತಿಯ ಸಂದೇಶವನ್ನು ಸಾರುವುದಕ್ಕೆ ಸಮರ್ಪಿಸುತ್ತಾನೆ.
ದೇವರು ಶಾಂತಿಯನ್ನು ತರುವ ವಿಧ
ಈ ಉದಾಹರಣೆಗಳು ಎದೆ ಕರಗಿಸುವಂತಹವುಗಳಾಗಿದ್ದು, ಇಂದಿನ ಲೋಕದಲ್ಲಿ ಸಂಗತಿಗಳ ಸಾಮಾನ್ಯ ಸ್ಥಿತಿಯಾಗಿರುವ ಬದಲು ಅಪವಾದಗಳಾಗಿವೆ. ಆಧುನಿಕ ವ್ಯವಸ್ಥೆಯ ಶಾಂತಿಗೆ ಕೇವಲ ತುಟಿ ಸೇವೆಯನ್ನು ಸಲ್ಲಿಸುವುದಾದರೂ, ಯುದ್ಧದ ಬೀಜಗಳಿಗೆ ಅದು ನೀರು ಹಾಕುತ್ತದೆ. ನಿವಾಸಿಗಳು ತಮ್ಮ ಸಂಪಾದನೆಯ 7 ರಿಂದ 16 ಪ್ರತಿಶತವನ್ನು ಬಂದೂಕುಗಳು ಮತ್ತು ಮನೆಯ ಸಂರಕ್ಷಣೆಗಾಗಿ ವ್ಯಯ ಮಾಡುವ ಕೇರಿಯಲ್ಲಿ ಜೀವಿಸಲು ನೀವು ಬಯಸುವಿರೊ? ಕಾರ್ಯತಃ, ಇತ್ತೀಚೆಗಿನ ವರ್ಷಗಳಲ್ಲಿ ಸೈನಿಕ ವೆಚ್ಚದ ಮುಖಾಂತರ ರಾಷ್ಟ್ರಗಳು ಅದನ್ನೇ ಮಾಡುತ್ತಾ ಇವೆ. ದೇವರು ‘ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವ’ ತನಕ ಮಾನವಕುಲವು ಒಂದು ಇಡೀ ಗುಂಪಿನೋಪಾದಿ ಅದರ ಕತ್ತಿಗಳನ್ನು ಗುಳಗಳನ್ನಾಗಿ ಎಂದಿಗೂ ಮಾಡದೆ ಇರುವುದೆಂದು ಯೆಶಾಯನ ಪ್ರವಾದನೆಯು ಪ್ರಕಟಿಸುವ ಸಂಗತಿಯು ಆಶ್ಚರ್ಯಕರವಲ್ಲ. ಆತನು ಅದನ್ನು ಹೇಗೆ ಮಾಡುವನು?
ವಿಷಯಗಳನ್ನು ಸರಿಪಡಿಸುವ ಪ್ರಧಾನ ವಿಧಾನವು ಯೆಹೋವ ದೇವರ ರಾಜ್ಯವಾಗಿದೆ. ‘ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು’ ಎಂದು ಪ್ರವಾದಿಯಾದ ದಾನಿಯೇಲನು ಮುಂತಿಳಿಸಿದನು. ಈ ರಾಜ್ಯವು, ಅವನು ಕೂಡಿಸುವುದು, “ಆ ರಾಜ್ಯಗಳನ್ನೆಲ್ಲಾ [ಲೌಕಿಕ ಸರಕಾರಗಳು] ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ದೇವರ ರಾಜ್ಯವು ಅದರ ನಿಯಂತ್ರಣವನ್ನು ಭೂಮಿಯ ಎಲ್ಲೆಡೆಯೂ ದೃಢವಾಗಿ ಸ್ಥಾಪಿಸುವುದೆಂದು ಈ ಮಾತುಗಳು ಪ್ರಕಟಿಸುತ್ತವೆ. ರಾಷ್ಟ್ರೀಯ ಗಡಿರೇಖೆಗಳನ್ನು ತೆಗೆದುಹಾಕುವ ಮೂಲಕ, ರಾಜ್ಯವು ಪ್ರತಿಸ್ಪರ್ಧೆಗಳನ್ನು ಬಳಕೆಯಲ್ಲಿಲ್ಲದ್ದಾಗಿ ಮಾಡುವುದು. ಇನ್ನೂ ಹೆಚ್ಚಾಗಿ, ಅದರ ಪ್ರಜೆಗಳು “ಯೆಹೋವನಿಂದ ಶಿಕ್ಷಿತರಾಗಿರು” ವುದರಿಂದ, ಅವರ ಶಾಂತಿಯು “ಹೇರಳ” ವಾಗಿರುವುದು. (ಯೆಶಾಯ 54:13) “ನಿನ್ನ ರಾಜ್ಯವು ಬರಲಿ” ಎಂಬುದಾಗಿ ದೇವರಿಗೆ ನಾವು ಪ್ರಾರ್ಥಿಸುವಂತೆ ಯೇಸು ಹೇಳಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ!—ಮತ್ತಾಯ 6:10.
ಧಾರ್ಮಿಕ ತಡೆಗಳನ್ನು ತೆಗೆದುಹಾಕುವುದು
ಶಾಂತಿಗಾಗಿ ಧಾರ್ಮಿಕ ತಡೆಗಳನ್ನೂ ಕೂಡ ದೇವರು ತೆಗೆದುಹಾಕುವನು. ಇತಿಹಾಸದಲ್ಲೇ ಅತಿ ದೀರ್ಘಾವಧಿಯ ಸಶಸ್ತ್ರ ಘರ್ಷಣೆ—II ನೆಯ ಪೋಪ್ ಅರ್ಬನ್ ಸಾ.ಶ. 1095 ರಲ್ಲಿ ಆರಂಭಿಸಿದ ಧಾರ್ಮಿಕಯುದ್ಧಗಳು ಅಥವಾ “ಪವಿತ್ರ ಯುದ್ಧಗಳು”—ಯ ಹಿಂದೆ ಧರ್ಮವಿತ್ತು.a ನಮ್ಮ ಶತಮಾನದಲ್ಲಿ, ಯುದ್ಧಗಳಿಗೆ, ಸಂಪೂರ್ಣವಾಗಿ ಐಹಿಕ ಸ್ವಭಾವದ ಯುದ್ಧಗಳಿಗೂ ಕೂಡ, ಜನಪ್ರಿಯ ಬೆಂಬಲವನ್ನು ಪ್ರೇರೇಪಿಸಿ ಗಳಿಸುವುದರಲ್ಲಿ ಪುರೋಹಿತ ವರ್ಗವು ಪ್ರಖ್ಯಾತವಾಗಿದೆ.
ಒಂದನೆಯ ಲೋಕ ಯುದ್ಧದ ಸಮಯದಲ್ಲಿ ನಾಮಮಾತ್ರದ ಕ್ರೈಸ್ತ ಚರ್ಚುಗಳ ಪಾತ್ರವನ್ನು ಸೂಚಿಸುತ್ತಾ, ಇತಿಹಾಸಗಾರ ಪೌಲ ಜಾನ್ಸನ್ ಬರೆದದ್ದು: “ಕ್ರೈಸ್ತ ನಂಬಿಕೆಯನ್ನು ರಾಷ್ಟ್ರೀಯತೆಯ ಮೊದಲು ಇರಿಸಲು ಪುರೋಹಿತರು ಅಶಕ್ತರಾಗಿದ್ದರು, ಅತ್ಯಧಿಕವಾಗಿ ಮನಸ್ಸಿಲ್ಲದವರಾಗಿದ್ದರು. ಅನೇಕರು ಸುಲಭವಾದ ಮಾರ್ಗವನ್ನು ಆರಿಸಿದರು ಮತ್ತು ಕ್ರೈಸ್ತತ್ವವನ್ನು ದೇಶಾಭಿಮಾನದೊಂದಿಗೆ ಸಮವಾಗಿಸಿದರು. ಎಲ್ಲಾ ಪಂಗಡಗಳ ಕ್ರೈಸ್ತ ಸೈನಿಕರು, ತಮ್ಮ ರಕ್ಷಕನ ನಾಮದಲ್ಲಿ ಒಬ್ಬರನ್ನೊಬ್ಬರು ಕೊಲ್ಲುವಂತೆ ಪ್ರೋತ್ಸಾಹಿಸಲ್ಪಟ್ಟರು.”
ಶಾಂತಿಯನ್ನು ಪಾಲಿಸುವುದಕ್ಕಿಂತ ಯುದ್ಧವನ್ನು ಹುರಿದುಂಬಿಸಲು ಧರ್ಮವು ಹೆಚ್ಚಿನದನ್ನು ಮಾಡಿದೆ. ವಾಸ್ತವದಲ್ಲಿ, ಬೈಬಲ್ ಸುಳ್ಳು ಧರ್ಮವನ್ನು, ಲೋಕದ ಪ್ರಭುಗಳಿಗೆ ದುರ್ಮಂತ್ರಿಯಾಗಿರುವ “ವೇಶ್ಯೆ” ಯಂತೆ ಚಿತ್ರಿಸುತ್ತದೆ. (ಪ್ರಕಟನೆ 17:1, 2) ಭೂಮಿಯ ಮೇಲೆ ಸಂಹರಿಸಲ್ಪಟ್ಟ ಎಲ್ಲರ ರಕ್ತವನ್ನು ಸುರಿಸಿದ್ದಕ್ಕೆ ಹೊಣೆಯಾಗಿರುವ ಪ್ರಧಾನ ಅಪರಾಧಿಯೆಂದು ದೇವರು ಆಕೆಯ ಮೇಲೆ ನ್ಯಾಯ ವಿಧಿಸುತ್ತಾನೆ. (ಪ್ರಕಟನೆ 18:24) ಆದಕಾರಣ, ಶಾಂತಿಗೆ ಇರುವ ಈ ತಡೆಯನ್ನು ಯೆಹೋವ ದೇವರು ಒಮ್ಮೆಗೇ ತೆಗೆದುಹಾಕುವನು.—ಪ್ರಕಟನೆ 18:4, 5, 8.
ಎಲ್ಲರಿಗಿಂತ ಅತ್ಯಂತ ಮಹಾನ್ ಯುದ್ಧವ್ಯಾಪಾರಿಯಾದ ಪಿಶಾಚನಾದ ಸೈತಾನನ ತೆಗೆದು ಹಾಕುವಿಕೆಯಿಲ್ಲದೆ, ರಾಜಕೀಯ ಮತ್ತು ಸುಳ್ಳು ಧರ್ಮದಂತಹ ವಿಭಾಜಕ ಅಂಶಗಳ ಮಾಯವಾಗುವಿಕೆಯಿಂದಲೂ ಕೂಡ, ಶಾಂತಿಯು ಎಂದಿಗೂ ಸುರಕ್ಷಿತವಾಗಿರಲಾರದು. ಭೂಮಿಗೆ ಸಂಪೂರ್ಣ ಶಾಂತಿಯನ್ನು ತರುವ ಕಾರ್ಯಕ್ರಮದಲ್ಲಿ ದೇವರ ರಾಜ್ಯವು ಕೈಗೊಳ್ಳುವ ಕೊನೆಯ ಕೆಲಸ ಅದಾಗಿದೆ. “ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ” ಅವನನ್ನು “ಹಿಡಿದು” “ಬಂಧನದಲ್ಲಿ ಇಟ್ಟು” “ಅಧೋಲೋಕದಲ್ಲಿ ದೊಬ್ಬಿ” ಬಾಗಿಲು ಹಾಕಲಾಗುವುದು ಎಂಬುದಾಗಿ ಪ್ರಕಟನೆ ಎಂಬ ಬೈಬಲ್ ಪುಸ್ತಕವು ವಿವರಿಸುತ್ತದೆ. ತದನಂತರ ಅವನು ಸಂಪೂರ್ಣವಾಗಿ ನಾಶಮಾಡಲ್ಪಡುವನು.—ಪ್ರಕಟನೆ 20:2, 3, 10.
ಯುದ್ಧಕ್ಕೆ ಒಂದು ಅಂತ್ಯದ ಕುರಿತ ಬೈಬಲಿನ ವಾಗ್ದಾನವು ನಿರಾಧಾರವಾದ ಸ್ವಪ್ನವಾಗಿಲ್ಲ. ಶಾಂತಿಗಾಗಿ ಯೆಹೋವ ದೇವರ ಏರ್ಪಾಡನ್ನು ಈಗಾಗಲೇ ಸ್ಥಾಪಿಸಲಾಗಿದೆ. ಆತನ ರಾಜ್ಯವು ಪರಲೋಕಗಳಲ್ಲಿ ಸ್ಥಾಪಿತವಾಗಿದ್ದು, ಭೌಗೋಲಿಕ ಶಾಂತಿಯ ಭರವಸೆ ನೀಡಲಿಕ್ಕೆ ಮುಂದಿನ ಕಾರ್ಯಗಳನ್ನು ನಡೆಸಲು ಸಿದ್ಧವಾಗಿದೆ. ಈ ನಡುವೆ, ಈ ಸ್ವರ್ಗೀಯ ಸರಕಾರವನ್ನು ಬೆಂಬಲಿಸುವ ಲಕ್ಷಂತರ ಯೆಹೋವನ ಸಾಕ್ಷಿಗಳು, ಶಾಂತಿಯಲ್ಲಿ ಜೀವಿಸಲು ಕಲಿತಿದ್ದಾರೆ.
ಹಾಗಾದರೆ, ಸ್ಪಷ್ಟವಾಗಿಗಿ ನಮಗೆ ಯುದ್ಧಗಳು ಅನಿವಾರ್ಯವಲ್ಲ ಎಂಬುದನ್ನು ನಂಬಲು ಸಕಾರಣಗಳು ಇವೆ. ಇನ್ನೂ ಉತ್ತಮವಾಗಿ, ಯೆಹೋವನು ಯುದ್ಧವನ್ನು ಎಂದೆಂದಿಗೂ ನಿಲ್ಲಿಸಿಬಿಡುವ—ಹತ್ತಿರವಿರುವ ಆ ದಿನವನ್ನು ನಾವು ಎದುರುನೋಡಬಲ್ಲೆವು. (ಕೀರ್ತನೆ 46:9) ಯುದ್ಧರಹಿತವಾದೊಂದು ಲೋಕ ಶೀಘ್ರದಲ್ಲೇ ಇರುವುದೆಂಬುದರ ಬಗ್ಗೆ ಆತನು ನೋಡಿಕೊಳ್ಳುವನು.
[ಅಧ್ಯಯನ ಪ್ರಶ್ನೆಗಳು]
a ಕೆಲವೊಮ್ಮೆ ಧಾರ್ಮಿಕ ನಾಯಕರು ತಾವೇ ಯೋಧರಾಗುತ್ತಾರೆ. ಹೇಸ್ಟಿಂಗ್ಸ್ನ ಕದನದಲ್ಲಿ (1066), ಕ್ಯಾತೊಲಿಕ್ ಬಿಷಪ್ ಓಡೊ, ಖಡದ್ಗ ಬದಲಿಗೆ ಒಂದು ಲೋಹದ ದಂಡವನ್ನು ಉಪಯೋಗಿಸುವುದರ ಮೂಲಕ ತನ್ನ ಸಕ್ರಿಯ ಒಳಗೊಂಡಿರುವಿಕೆಯನ್ನು ಸಮರ್ಥಿಸಿದನು. ರಕ್ತವು ಸುರಿಸಲ್ಪಡದಿರುವಲ್ಲಿ, ದೇವರ ಒಬ್ಬ ಮನುಷ್ಯನು ನ್ಯಾಯಬದ್ಧವಾಗಿ ಕೊಲೆಮಾಡಬಹುದೆಂದು ಅವನು ವಾದಿಸಿದನು. ಐದು ಶತಮಾನಗಳ ಅನಂತರ, ಕಾರ್ಡಿನಲ್ ಕೀಮೆನೆಸ್ ವೈಯಕ್ತಿಕವಾಗಿ ಉತ್ತರ ಆಫ್ರಿಕದ ಸ್ಪ್ಯಾನಿಷ್ ದಂಡನ್ನು ಮುನ್ನಡೆಸಿದನು.
[ಪುಟ 7 ರಲ್ಲಿರುವ ಚಿತ್ರ]
ಯುದ್ಧರಹಿತವಾದ ಹೊಸ ಲೋಕವೊಂದರಲ್ಲಿ ನೀವು ಜೀವಿಸಬಲ್ಲಿರಿ