ದೇವರ ವಾಕ್ಯದ ಬೋಧಕರು ತಮ್ಮ ನೇಮಕವನ್ನು ಪೂರೈಸುವಂತೆ ಉತ್ತೇಜಿಸಲ್ಪಟ್ಟರು
ಇತ್ತೀಚಿನ ತಿಂಗಳುಗಳಲ್ಲಿ ಉಪದೇಶವನ್ನು ಪಡೆದುಕೊಳ್ಳಲಿಕ್ಕಾಗಿ ಹತ್ತಾರು ಸಾವಿರ ಬೋಧಕರು ಕೂಡಿಬಂದರು. ಕಳೆದ ವರ್ಷದ ಮೇ ತಿಂಗಳಿನಿಂದ ಆರಂಭಿಸಿ, ಲೋಕದಾದ್ಯಂತ “ದೇವರ ವಾಕ್ಯದ ಬೋಧಕರು” ಎಂಬ ಯೆಹೋವನ ಸಾಕ್ಷಿಗಳ ನೂರಾರು ಜಿಲ್ಲಾ ಅಧಿವೇಶನಗಳಿಗೆ ಅವರು ಒಟ್ಟುಗೂಡಿದರು. ಬೋಧಕರೋಪಾದಿ ಹೆಚ್ಚು ಉತ್ತಮವಾಗಿ ಅರ್ಹರಾಗಲು ಮತ್ತು ತಮ್ಮ ನೇಮಕವನ್ನು ಪೂರೈಸಲು, ಮೊದಲು ಸ್ವತಃ ತಮಗೆ ಬೋಧಿಸಿಕೊಳ್ಳುವಂತೆ ಪ್ರತಿನಿಧಿಗಳನ್ನು ಉತ್ತೇಜಿಸಲಾಯಿತು.
ಈ ಅಧಿವೇಶನಗಳಲ್ಲಿ ಒಂದಕ್ಕೆ ನೀವೂ ಹಾಜರಾದಿರೋ? ಹಾಗಿರುವಲ್ಲಿ, ಸತ್ಯ ದೇವರಾಗಿರುವ ಯೆಹೋವನ ಆರಾಧನೆಗಾಗಿರುವ ಈ ಒಟ್ಟುಗೂಡುವಿಕೆಗಳಲ್ಲಿ ಕೊಡಲ್ಪಟ್ಟ ಅತ್ಯುತ್ತಮವಾದ ಆತ್ಮಿಕ ಆಹಾರವನ್ನು ನೀವು ಗಣ್ಯಮಾಡಿದಿರಿ ಎಂಬುದರಲ್ಲಿ ಸಂಶಯವೇ ಇಲ್ಲ. ಈಗ ಅಧಿವೇಶನದ ಬೋಧಪ್ರದ ಕಾರ್ಯಕ್ರಮವನ್ನು ಪುನರ್ವಿಮರ್ಶಿಸುವುದರಲ್ಲಿ ನೀವೇಕೆ ನಮ್ಮ ಜೊತೆಗೂಡಬಾರದು?
ಮೊದಲ ದಿನ—ಪ್ರೇರಿತವಾದ ಶಾಸ್ತ್ರಗಳು ಬೋಧಿಸುವಿಕೆಗೆ ಉಪಯುಕ್ತವಾಗಿವೆ
ಅಧಿವೇಶನದ ಅಧ್ಯಕ್ಷನು, “ದೇವರ ವಾಕ್ಯದ ಬೋಧಕರೇ, ನೀವು ಸಹ ಉಪದೇಶವನ್ನು ಪಡೆದುಕೊಳ್ಳಿ” ಎಂಬ ಭಾಷಣದ ಮೂಲಕ ಪ್ರತಿನಿಧಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದನು. ‘ಮಹಾನ್ ಉಪದೇಶಕನಾಗಿರುವ’ ಯೆಹೋವನ ಮೂಲಕ ಕಲಿತದ್ದರಿಂದಲೇ ಯೇಸು ಕ್ರಿಸ್ತನು ಮಹಾ ಬೋಧಕನಾದನು. (ಯೆಶಾಯ 30:20, NW; ಮತ್ತಾಯ 19:16) ದೇವರ ವಾಕ್ಯದ ಬೋಧಕರೋಪಾದಿ ನಾವು ಪ್ರಗತಿಯನ್ನು ಮಾಡಬೇಕಾದರೆ, ನಾವು ಸಹ ಯೆಹೋವನಿಂದ ಉಪದೇಶವನ್ನು ಪಡೆದುಕೊಳ್ಳಬೇಕು.
ನಂತರದ ಭಾಗವು, “ರಾಜ್ಯದ ಕುರಿತು ಬೋಧಿಸುವುದು ಅತ್ಯುತ್ತಮ ಫಲವನ್ನು ತರುತ್ತದೆ” ಎಂದಾಗಿತ್ತು. ದೇವರ ವಾಕ್ಯದ ಅನುಭವಸ್ಥ ಬೋಧಕರೊಂದಿಗೆ ಮಾಡಲ್ಪಟ್ಟ ಇಂಟರ್ವ್ಯೂಗಳ ಮೂಲಕ, ಶಿಷ್ಯರನ್ನಾಗಿ ಮಾಡುವ ಕೆಲಸದ ಆನಂದ ಹಾಗೂ ಆಶೀರ್ವಾದಗಳು ಎತ್ತಿತೋರಿಸಲ್ಪಟ್ಟವು.
ಅನಂತರ “‘ದೇವರ ಮಹತ್ತುಗಳಿಂದ’ ಪ್ರೇರಿಸಲ್ಪಡುವುದು” ಎಂಬ ಶಿರೋನಾಮವುಳ್ಳ ಪ್ರಚೋದಕ ಭಾಷಣವು ನೀಡಲ್ಪಟ್ಟಿತು. ಪ್ರಥಮ ಶತಮಾನದಲ್ಲಿ, ದೇವರ ರಾಜ್ಯವನ್ನು ಒಳಗೂಡಿದ್ದಂತಹ ‘ಮಹತ್ತುಗಳು’ ಜನರು ಕ್ರಿಯೆಗೈಯುವಂತೆ ಪ್ರಚೋದಿಸಿದವು. (ಅ. ಕೃತ್ಯಗಳು 2:11) ಪ್ರಾಯಶ್ಚಿತ್ತ, ಪುನರುತ್ಥಾನ ಮತ್ತು ಹೊಸ ಒಡಂಬಡಿಕೆಯ ಕುರಿತಾದ ಶಾಸ್ತ್ರೀಯ ಬೋಧನೆಗಳಂತಹ ‘ಮಹತ್ತುಗಳನ್ನು’ ಘೋಷಿಸುವ ಮೂಲಕ, ನಾವು ಸಹ ಜನರು ಕ್ರಿಯೆಗೈಯುವಂತೆ ಅವರನ್ನು ಪ್ರಚೋದಿಸಸಾಧ್ಯವಿದೆ.
ಮುಂದಿನ ಭಾಷಣವು, “ಯೆಹೋವನ ನೀತಿಯಲ್ಲಿ ಆನಂದವನ್ನು ಕಂಡುಕೊಳ್ಳಿರಿ” ಎಂದು ಎಲ್ಲರನ್ನೂ ಪ್ರೋತ್ಸಾಹಿಸಿತು. (ಕೀರ್ತನೆ 35:27) ನೀತಿಯನ್ನು ಪ್ರೀತಿಸುವ ಮೂಲಕ ಹಾಗೂ ಕೆಟ್ಟದ್ದನ್ನು ದ್ವೇಷಿಸುವ ಮೂಲಕ, ಬೈಬಲ್ ಅಧ್ಯಯನ ಮಾಡುವ ಮೂಲಕ, ಆತ್ಮಿಕವಾಗಿ ಹಾನಿಕರವಾಗಿರುವ ಪ್ರಭಾವಗಳನ್ನು ಕ್ರಿಯಾಶೀಲರಾಗಿ ಪ್ರತಿರೋಧಿಸುವ ಮೂಲಕ, ಮತ್ತು ದೀನಭಾವವನ್ನು ಬೆಳೆಸಿಕೊಳ್ಳುವ ಮೂಲಕ ನೀತಿಯನ್ನು ಬೆನ್ನಟ್ಟುವಂತೆ ನಮಗೆ ಸಹಾಯವು ನೀಡಲ್ಪಟ್ಟಿತು. ಈ ಹೆಜ್ಜೆಗಳು, ಅಹಿತಕರ ಸಹವಾಸಗಳಿಂದ, ಲೋಕದ ಪ್ರಾಪಂಚಿಕ ಮೌಲ್ಯಗಳಿಂದ ಮತ್ತು ಅನೈತಿಕ ಹಾಗೂ ಹಿಂಸಾತ್ಮಕ ಮನೋರಂಜನೆಯಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಸಹಾಯಮಾಡುವವು.
“ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧರು” ಎಂಬ ಶಿರೋನಾಮವಿದ್ದ ಮುಖ್ಯ ಭಾಷಣವು, ತನ್ನ ವಾಕ್ಯ, ಪವಿತ್ರಾತ್ಮ, ಹಾಗೂ ಭೂಸಂಸ್ಥೆಯ ಮೂಲಕ ಯೆಹೋವನು ನಮ್ಮನ್ನು ತನ್ನ ಅರ್ಹ ಶುಶ್ರೂಷಕರನ್ನಾಗಿ ಮಾಡುತ್ತಾನೆ ಎಂಬುದನ್ನು ನಮಗೆ ನೆನಪು ಹುಟ್ಟಿಸಿತು. ದೇವರ ವಾಕ್ಯದ ಉಪಯೋಗದ ಸಂಬಂಧದಲ್ಲಿ, ಭಾಷಣಕರ್ತನು ನಮಗೆ ಹೀಗೆ ಬುದ್ಧಿವಾದ ನೀಡಿದನು: “ನಮ್ಮ ಗುರಿಯು, ಆ ಬೈಬಲ್ ಸಂದೇಶವನ್ನು ಮುದ್ರಿತ ಪುಟಗಳಿಂದ ತೆಗೆದು, ಕೇಳುಗರ ಹೃದಯಗಳಲ್ಲಿ ಅಚ್ಚೊತ್ತಿಸುವುದೇ ಆಗಿದೆ.”
ಅಧಿವೇಶನದ ಮೊದಲ ಭಾಷಣಮಾಲೆಯ ಮುಖ್ಯ ವಿಷಯವು, “ಬೇರೆಯವರಿಗೆ ಬೋಧಿಸುವಾಗ ಸ್ವತಃ ಬೋಧಿಸಿಕೊಳ್ಳುವುದು” ಎಂದಾಗಿತ್ತು. ನಾವು ಇತರರಿಗೆ ಬೋಧಿಸುವಂಥ ಕ್ರೈಸ್ತ ನೈತಿಕತೆಯ ಉಚ್ಚ ಮಟ್ಟಗಳನ್ನೇ ನಮ್ಮ ಜೀವನದಲ್ಲೂ ಅನುಸರಿಸಬೇಕು ಎಂಬುದನ್ನು ಆರಂಭದ ಭಾಗವು ಎತ್ತಿತೋರಿಸಿತು. ಭಾಷಣಮಾಲೆಯ ಮುಂದಿನ ಭಾಗವು, ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವಂತೆ’ ನಮಗೆ ಸಲಹೆ ನೀಡಿತು. (2 ತಿಮೊಥೆಯ 2:15) ನಾವು ಸ್ವತಃ ಬೋಧಿಸಿಕೊಳ್ಳಬೇಕಾದರೆ, ನಾವು ಎಷ್ಟೇ ಸಮಯದಿಂದ ದೇವರ ಸೇವೆಮಾಡುತ್ತಿರಲಿ, ಬೈಬಲಿನ ಕ್ರಮವಾದ ಹಾಗೂ ಶ್ರದ್ಧಾಪೂರ್ವಕ ವೈಯಕ್ತಿಕ ಅಧ್ಯಯನವು ಅತ್ಯಾವಶ್ಯಕವಾಗಿದೆ. ಭಾಷಣಮಾಲೆಯ ಕೊನೆಯ ಭಾಗವು, ಅಹಂಕಾರ, ಸ್ವತಂತ್ರ ಆತ್ಮ, ಸ್ವಪ್ರಾಮುಖ್ಯತೆಯ ಅನಿಸಿಕೆ, ಹೊಟ್ಟೆಕಿಚ್ಚು, ಅಸೂಯೆ, ಅಸಮಾಧಾನ ಮತ್ತು ತಪ್ಪು ಹುಡುಕುತ್ತಾ ಇರುವಂಥ ಮನೋಭಾವವನ್ನು ನಮ್ಮಲ್ಲಿ ಕಂಡುಕೊಳ್ಳಲಿಕ್ಕಾಗಿ ಪಿಶಾಚನು ನಮ್ಮನ್ನು ಸದಾ ಗಮನಿಸುತ್ತಾ ಇರುತ್ತಾನೆ ಎಂಬುದನ್ನು ತೋರಿಸಿತು. ಆದರೂ, ಒಂದುವೇಳೆ ನಾವು ಪಿಶಾಚನನ್ನು ಬಲವಾಗಿ ವಿರೋಧಿಸುವಲ್ಲಿ, ಅವನು ನಮ್ಮನ್ನು ಬಿಟ್ಟು ಓಡಿಹೋಗುವನು. ಅವನನ್ನು ವಿರೋಧಿಸಬೇಕಾದರೆ, ನಾವು ದೇವರಿಗೆ ಸಮೀಪವಾಗುವ ಅಗತ್ಯವಿದೆ.—ಯಾಕೋಬ 4:7, 8.
“ಅಶ್ಲೀಲ ವಿಷಯವೆಂಬ ಲೌಕಿಕ ಪಿಡುಗನ್ನು ಹೇಸಿರಿ” ಎಂಬ ಸಮಯೋಚಿತ ಭಾಷಣವು, ನಮ್ಮ ಆತ್ಮಿಕತೆಗೆ ಕೀಳ್ಮಟ್ಟದ ಬೆದರಿಕೆಯೋಪಾದಿ ಇರುವ ಅದನ್ನು ಯಶಸ್ವಿಕರವಾಗಿ ಹೇಗೆ ನಿಭಾಯಿಸಸಾಧ್ಯವಿದೆ ಎಂಬುದನ್ನು ತೋರಿಸಿತು. ಪ್ರವಾದಿಯಾದ ಹಬಕ್ಕೂಕನು, “ಕೆಟ್ಟದ್ದನ್ನು ನೋಡಲಾರದ ಅತಿಪವಿತ್ರದೃಷ್ಟಿಯುಳ್ಳವನೇ, ಕೆಡುಕನ್ನು ಕಟಾಕ್ಷಿಸಲಾರದವನೇ” ಎಂದು ಯೆಹೋವನ ಕುರಿತು ಹೇಳಿದನು. (ಹಬಕ್ಕೂಕ 1:13, NW) ನಾವು ‘ಕೆಟ್ಟತನವನ್ನು ಹೇಸ’ಬೇಕು. (ರೋಮಾಪುರ 12:9) ತಮ್ಮ ಮಕ್ಕಳ ಇಂಟರ್ನೆಟ್ ಉಪಯೋಗ ಹಾಗೂ ಟೆಲಿವಿಷನ್ ವೀಕ್ಷಣೆಯನ್ನು ನಿಯಂತ್ರಿಸುವಂತೆ ಹೆತ್ತವರಿಗೆ ಬುದ್ಧಿವಾದ ನೀಡಲಾಯಿತು. ಅಶ್ಲೀಲ ಸಾಹಿತ್ಯದ ಕಡೆಗೆ ಆಕರ್ಷಿತರಾಗುವವರು, ಆತ್ಮಿಕವಾಗಿ ಪ್ರೌಢರಾಗಿರುವ ಸ್ನೇಹಿತರೊಬ್ಬರಿಂದ ಸಹಾಯವನ್ನು ಪಡೆದುಕೊಳ್ಳಬೇಕು ಎಂದು ಭಾಷಣಕರ್ತನು ಹೇಳಿದನು. ಕೀರ್ತನೆ 97:10; ಮತ್ತಾಯ 5:28; 1 ಕೊರಿಂಥ 9:27; ಎಫೆಸ 5:3, 12; ಕೊಲೊಸ್ಸೆ 3:5; 1 ಥೆಸಲೊನೀಕ 4:4, 5ರಂತಹ ವಚನಗಳನ್ನು ಕಂಠಪಾಠಮಾಡಿ, ಇವುಗಳ ಕುರಿತು ಧ್ಯಾನಿಸುವಂತೆಯೂ ಹೇಳಲಾಯಿತು.
ಮುಂದಿನ ಭಾಷಣವು, “ದೇವಶಾಂತಿಯು ನಿಮ್ಮನ್ನು ರಕ್ಷಿಸಲಿ” ಎಂದಾಗಿದ್ದು, ನಾವು ಚಿಂತೆಯಿಂದ ಮನಗುಂದಿದವರಾದಾಗ, ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಸಾಧ್ಯವಿದೆ ಎಂಬ ಆಶ್ವಾಸನೆಯು ನಮ್ಮನ್ನು ಸಂತೈಸಿತು. (ಕೀರ್ತನೆ 55:22) ನಾವು ಪ್ರಾರ್ಥನೆಯಲ್ಲಿ ನಮ್ಮ ಹೃದಯಗಳನ್ನು ತೋಡಿಕೊಳ್ಳುವಲ್ಲಿ, ಯೆಹೋವನು ನಮಗೆ “ದೇವಶಾಂತಿ”ಯನ್ನು, ಅಂದರೆ ಆತನೊಂದಿಗಿನ ನಮ್ಮ ಅಮೂಲ್ಯ ಸಂಬಂಧದಿಂದ ಫಲಿಸುವ ಪ್ರಶಾಂತತೆ ಹಾಗೂ ಆಂತರಿಕ ನೆಮ್ಮದಿಯನ್ನು ಕೊಡುವನು.—ಫಿಲಿಪ್ಪಿ 4:6, 7.
ಯೆಶಾಯ 60ನೆಯ ಅಧ್ಯಾಯದ ನೆರವೇರಿಕೆಯನ್ನು ವಿವರಿಸಿದಂಥ “ಯೆಹೋವನು ತನ್ನ ಜನರನ್ನು ಬೆಳಕಿನಿಂದ ಅಂದಗೊಳಿಸುತ್ತಾನೆ” ಎಂಬ ಸಂತೋಷಭರಿತ ಭಾಷಣದೊಂದಿಗೆ ಮೊದಲ ದಿನವು ಕೊನೆಗೊಂಡಿತು. ಲೋಕದ ಸದ್ಯದ ಅಂಧಕಾರದ ನಡುವೆ “ವಿದೇಶೀಯರು” ಅಂದರೆ ಕುರಿಸದೃಶ ಮಹಾ ಸಮೂಹದವರು, ಅಭಿಷಿಕ್ತ ಕ್ರೈಸ್ತರೊಂದಿಗೆ ಯೆಹೋವನ ಬೆಳಕಿನಲ್ಲಿ ಆನಂದಿಸುತ್ತಿದ್ದಾರೆ. 19 ಹಾಗೂ 20ನೆಯ ವಚನಗಳಿಗೆ ಸೂಚಿಸುತ್ತಾ ಭಾಷಣಕರ್ತನು ವಿವರಿಸಿದ್ದು: “ಯೆಹೋವನು ಸೂರ್ಯನಂತೆ ‘ಮುಣುಗನು,’ ಚಂದ್ರನಂತೆ ‘ತೊಲಗನು.’ ಆತನು ತನ್ನ ಜನರ ಮೇಲೆ ಬೆಳಕನ್ನು ಬೀರುತ್ತ ಅವರನ್ನು ಅಂದಗೊಳಿಸುತ್ತ ಮುಂದುವರಿಯುವನು. ಈ ಅಂಧಕಾರ ತುಂಬಿದ ಲೋಕದ ಕಡೇ ದಿವಸಗಳಲ್ಲಿ ನಾವು ಜೀವಿಸುತ್ತಿರುವಾಗ, ಇದು ನಮಗೆ ಎಷ್ಟು ಅದ್ಭುತಕರವಾದ ಆಶ್ವಾಸನೆಯಾಗಿದೆ!” ಆ ಭಾಷಣದ ಕೊನೆಯಲ್ಲಿ, ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು ಎಂಬ ಪುಸ್ತಕದ ಎರಡನೆಯ ಸಂಪುಟದ ಬಿಡುಗಡೆಯನ್ನು ಭಾಷಣಕರ್ತನು ಪ್ರಕಟಿಸಿದನು. ನೀವು ಈ ಹೊಸ ಪುಸ್ತಕವನ್ನು ಓದಿಮುಗಿಸಿದ್ದೀರೋ?
ಎರಡನೆಯ ದಿನ—ಇತರರಿಗೆ ಬೋಧಿಸಲು ಸಮರ್ಪಕವಾಗಿ ಅರ್ಹರಾಗಿರುವುದು
ಎರಡನೆಯ ದಿನದಂದು, ದಿನದ ವಚನದ ಚರ್ಚೆಯ ಬಳಿಕ, “ಇತರರನ್ನು ವಿಶ್ವಾಸಿಗಳನ್ನಾಗಿ ಮಾಡುವ ಶುಶ್ರೂಷಕರು” ಎಂಬ ಅಧಿವೇಶನದ ಎರಡನೆಯ ಭಾಷಣಮಾಲೆಗೆ ನಾವು ತೀವ್ರಾಸಕ್ತಿಯಿಂದ ಕಿವಿಗೊಟ್ಟೆವು. ಮೂರು ಭಾಗಗಳುಳ್ಳ ಈ ಭಾಷಣಮಾಲೆಯ ಭಾಷಣಕರ್ತರು, ವಿಶ್ವಾಸಿಗಳಾಗುವಂತೆ ಜನರಿಗೆ ಸಹಾಯಮಾಡುವುದರಲ್ಲಿ ಒಳಗೂಡಿರುವ ಮೂರು ಹಂತಗಳಲ್ಲಿ ಪ್ರತಿಯೊಂದನ್ನೂ ಎತ್ತಿಹೇಳಿದರು. ಅವು ಯಾವುವೆಂದರೆ, ರಾಜ್ಯದ ಸಂದೇಶವನ್ನು ಹಬ್ಬಿಸುವುದು, ಕಂಡುಬಂದ ಆಸಕ್ತಿಯನ್ನು ಬೆಳೆಸುವುದು ಮತ್ತು ಆಸಕ್ತ ಜನರು ಕ್ರಿಸ್ತನ ಆಜ್ಞೆಯನ್ನು ಪಾಲಿಸುವಂತೆ ಬೋಧಿಸುವುದೇ. ಇಂಟರ್ವ್ಯೂಗಳು ಮತ್ತು ಪುನರ್ಅಭಿನಯಗಳ ಸಹಾಯದಿಂದ, ನಾವು ಇತರರನ್ನು ಶಿಷ್ಯರನ್ನಾಗಿ ಮಾಡಲಿಕ್ಕಾಗಿ ಅವರಿಗೆ ಹೇಗೆ ಬೋಧಿಸಸಾಧ್ಯವಿದೆ ಎಂಬುದನ್ನು ವಿಶೇಷ ರೀತಿಯಲ್ಲಿ ನೋಡಲು ಶಕ್ತರಾದೆವು.
ಮುಂದಿನ ಭಾಗಕ್ಕೆ, “ನಿಮ್ಮ ತಾಳ್ಮೆಗೆ ದೇವಭಕ್ತಿಯನ್ನು ಕೂಡಿಸಿ” ಎಂಬ ಮೇಲ್ವಿಷಯವಿತ್ತು. ಕೊನೆಯದಾಗಿ ‘ಕಡೇ ವರೆಗೂ ತಾಳಿಕೊಳ್ಳುವುದೇ’ ಗಣನೆಗೆ ತರಲ್ಪಡುತ್ತದೆ ಎಂಬುದನ್ನು ಭಾಷಣಕರ್ತನು ತೋರಿಸಿದನು. (ಮತ್ತಾಯ 24:13) ನಾವು ದೇವರ ಎಲ್ಲ ಒದಗಿಸುವಿಕೆಗಳನ್ನು, ಅಂದರೆ ಪ್ರಾರ್ಥನೆ, ವೈಯಕ್ತಿಕ ಅಧ್ಯಯನ, ಕೂಟಗಳು, ಮತ್ತು ಶುಶ್ರೂಷೆಯನ್ನು ದೈವಿಕ ಭಕ್ತಿಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಲೌಕಿಕ ಬಯಕೆಗಳು ಮತ್ತು ಚಟುವಟಿಕೆಗಳು, ನಮ್ಮ ದೈವಿಕ ಭಕ್ತಿಯ ಮೇಲೆ ಆಕ್ರಮಣಮಾಡದಂತೆ ಅಥವಾ ಅದನ್ನು ಹಾಳುಮಾಡದಂತೆ ನಾವು ಅವುಗಳಿಂದ ದೂರವಿರುವ ಅಗತ್ಯವಿದೆ.
ಇಂದು ಕಷ್ಟಪಡುತ್ತಿರುವ ಮತ್ತು ಹೊರೆಹೊತ್ತಿರುವ ಜನರು ಚೈತನ್ಯವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? “ಕ್ರಿಸ್ತನ ನೊಗದ ಕೆಳಗೆ ವಿಶ್ರಾಂತಿಯನ್ನು ಕಂಡುಕೊಳ್ಳುವುದು” ಎಂಬ ಭಾಷಣವು ಈ ಪ್ರಶ್ನೆಯನ್ನು ಉತ್ತರಿಸಿತು. ತನ್ನ ನೊಗದ ಕೆಳಗೆ ಬರುವಂತೆ ಮತ್ತು ತನ್ನಿಂದ ಕಲಿತುಕೊಳ್ಳುವಂತೆ ಯೇಸು ದಯಾಭಾವದಿಂದ ತನ್ನ ಹಿಂಬಾಲಕರನ್ನು ಆಮಂತ್ರಿಸಿದನು. (ಮತ್ತಾಯ 11:28-30) ಯೇಸುವಿನ ಮಾದರಿಯನ್ನು ನಿಕಟವಾಗಿ ಅನುಸರಿಸುವುದರಿಂದ, ಸರಳವಾದ ಹಾಗೂ ಸಮತೂಕದ ಜೀವನವನ್ನು ಜೀವಿಸುವ ಮೂಲಕ ನಾವು ಯೇಸುವಿನ ನೊಗದ ಕೆಳಗೆ ಬರಸಾಧ್ಯವಿದೆ. ತಮ್ಮ ಜೀವಿತಗಳನ್ನು ಸರಳೀಕರಿಸಿಕೊಂಡಿರುವ ವ್ಯಕ್ತಿಗಳೊಂದಿಗಿನ ಇಂಟರ್ವ್ಯೂಗಳ ಮೂಲಕ ಈ ಭಾಷಣದ ಮುಖ್ಯಾಂಶಗಳು ಇನ್ನಷ್ಟು ವಿಸ್ತೃತಗೊಳಿಸಲ್ಪಟ್ಟವು.
ಯೆಹೋವನ ಸಾಕ್ಷಿಗಳ ದೊಡ್ಡ ಕೂಟಗಳ ವಿಶೇಷತೆಗಳಲ್ಲಿ ಒಂದು, ಹೊಸದಾಗಿ ಸಮರ್ಪಿಸಿಕೊಂಡಿರುವ ದೇವರ ಸೇವಕರ ದೀಕ್ಷಾಸ್ನಾನವೇ ಆಗಿದೆ. “ದೀಕ್ಷಾಸ್ನಾನವು ಹೆಚ್ಚಿನ ಬೋಧನಾ ಸುಯೋಗಗಳಿಗೆ ನಡೆಸುತ್ತದೆ” ಎಂಬ ಭಾಷಣವನ್ನು ನೀಡಿದಂಥ ಸಹೋದರನು, ದೀಕ್ಷಾಸ್ನಾನದ ಅಭ್ಯರ್ಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದನು ಮತ್ತು ಇನ್ನೂ ಹೆಚ್ಚಿನ ಸೇವಾ ಸುಯೋಗಗಳಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಆಮಂತ್ರಿಸಿದನು. ಶಾಸ್ತ್ರೀಯ ಅರ್ಹತೆಗಳನ್ನು ಮುಟ್ಟಿ, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡ ದೇವರ ವಾಕ್ಯದ ಬೋಧಕರು, ಸಭೆಯಲ್ಲಿರುವ ಅನೇಕ ಜವಾಬ್ದಾರಿಗಳಿಗಾಗಿ ತಮ್ಮನ್ನು ಎಟಕಿಸಿಕೊಳ್ಳಬಲ್ಲರು.
ಆ ದಿನ ಮಧ್ಯಾಹ್ನದ ಮೊದಲ ಭಾಷಣದ ಶೀರ್ಷಿಕೆಯು, “ಮಹಾನ್ ಬೋಧಕನನ್ನು ಅನುಕರಿಸಿ” ಎಂದಾಗಿತ್ತು. ಪರಲೋಕದಲ್ಲಿದ್ದ ಅನೇಕ ಯುಗಗಳಷ್ಟು ಸಮಯದಲ್ಲಿ ಯೇಸು, ತನ್ನ ತಂದೆಯನ್ನು ಜಾಗರೂಕತೆಯಿಂದ ಗಮನಿಸಿದ್ದನು ಮತ್ತು ಅನುಕರಿಸಿದ್ದನು. ಹೀಗೆ ಒಬ್ಬ ಮಹಾನ್ ಬೋಧಕನಾಗಿ ಪರಿಣಮಿಸಿದ್ದನು. ಭೂಮಿಯಲ್ಲಿದ್ದಾಗ, ಹೃದಯಕ್ಕೆ ನಾಟುವಂತಹ ಪ್ರಶ್ನೆಗಳು ಹಾಗೂ ಸರಳವಾದರೂ ಸ್ಪಷ್ಟವಾದ ದೃಷ್ಟಾಂತಗಳಂಥ ಪರಿಣಾಮಕಾರಿ ಬೋಧನಾ ತಂತ್ರಗಳನ್ನು ಉಪಯೋಗಿಸಿದನು. ಯೇಸು ತನ್ನ ಬೋಧನೆಯನ್ನು ದೇವರ ವಾಕ್ಯದ ಮೇಲೆ ಆಧಾರಿಸಿದನು ಮತ್ತು ಹುರುಪಿನಿಂದ, ಹಾರ್ದಿಕವಾಗಿ ಹಾಗೂ ಅಧಿಕಾರದಿಂದ ಮಾತಾಡಿದನು. ಹೀಗೆ, ಮಹಾನ್ ಬೋಧಕನನ್ನು ಅನುಕರಿಸುವಂತೆ ನಾವು ಪ್ರಚೋದಿಸಲ್ಪಡಲಿಲ್ಲವೋ?
“ನೀವು ಇತರರ ಸೇವೆಮಾಡಲು ಸಿದ್ಧರಿದ್ದೀರೊ?” ಎಂಬ ಇನ್ನೊಂದು ಪ್ರಚೋದನೀಯ ಭಾಷಣವು, ಇತರರ ಸೇವೆಮಾಡುವ ವಿಷಯದಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸುವಂತೆ ನಮ್ಮನ್ನು ಪ್ರೋತ್ಸಾಹಿಸಿತು. (ಯೋಹಾನ 13:12-15) ಇತರರಿಗೆ ಸಹಾಯಮಾಡುವ ಸಂದರ್ಭಗಳನ್ನು ಸದುಪಯೋಗಿಸಿಕೊಳ್ಳುವುದರಲ್ಲಿ ಅರ್ಹ ಪುರುಷರು ತಿಮೊಥೆಯನಂತೆ ಇರಬೇಕು ಎಂದು ಭಾಷಣಕರ್ತನು ನೇರವಾಗಿ ಉತ್ತೇಜಿಸಿದನು. (ಫಿಲಿಪ್ಪಿ 2:20, 21) ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟುವಂತೆ ತಮ್ಮ ಮಕ್ಕಳಿಗೆ ಸಹಾಯಮಾಡುವುದರಲ್ಲಿ ಹೆತ್ತವರು ಎಲ್ಕಾನಾ ಹಾಗೂ ಹನ್ನರನ್ನು ಅನುಕರಿಸುವಂತೆ ಅವರಿಗೆ ಪ್ರೋತ್ಸಾಹ ನೀಡಲಾಯಿತು. ಮತ್ತು ಮನಃಪೂರ್ವಕವಾಗಿ ತಮ್ಮನ್ನು ನೀಡಿಕೊಳ್ಳುವ ಮೂಲಕ, ಯೇಸು ಕ್ರಿಸ್ತನ ಹಾಗೂ ಚಿಕ್ಕ ಪ್ರಾಯದ ತಿಮೊಥೆಯನ ಮಾದರಿಯನ್ನು ಅನುಕರಿಸುವಂತೆ ಎಳೆಯರಿಗೆ ಸಲಹೆ ನೀಡಲಾಯಿತು. (1 ಪೇತ್ರ 2:21) ಇತರರ ಸೇವೆಮಾಡುವ ಸದವಕಾಶಗಳನ್ನು ಸದುಪಯೋಗಿಸಿಕೊಂಡಿರುವವರ ಮಾತುಗಳಿಂದಲೂ ನಾವು ಪ್ರಭಾವಿತರಾದೆವು.
ಮೂರನೆಯ ಭಾಷಣಮಾಲೆಯ ಮುಖ್ಯ ವಿಷಯವು, “ದೇವಪ್ರಭುತ್ವ ಶಿಕ್ಷಣದಿಂದ ಪೂರ್ಣವಾಗಿ ಪ್ರಯೋಜನ ಪಡೆಯಿರಿ” ಎಂಬುದಾಗಿತ್ತು. ನಮ್ಮ ಗಮನಾವಧಿಯನ್ನು ಹೆಚ್ಚಿಸುವುದರ ಪ್ರಾಮುಖ್ಯತೆಯನ್ನು ಮೊದಲ ಭಾಷಣಕರ್ತನು ಎತ್ತಿಹೇಳಿದನು. ಈ ಗುರಿಯನ್ನು ಪೂರೈಸಲಿಕ್ಕಾಗಿ, ನಾವು ಅಲ್ಪಾವಧಿಯ ವೈಯಕ್ತಿಕ ಅಧ್ಯಯನ ಸೆಷನ್ಗಳಿಂದ ಆರಂಭಿಸಿ, ಅವುಗಳನ್ನು ಇನ್ನೂ ದೀರ್ಘಗೊಳಿಸಲು ಪ್ರಯತ್ನಿಸಸಾಧ್ಯವಿದೆ. ಕೂಟಗಳ ಸಮಯದಲ್ಲಿ ವಚನಗಳನ್ನು ತೆರೆದು ನೋಡುವಂತೆ ಮತ್ತು ಟಿಪ್ಪಣಿಗಳನ್ನು ಬರೆದುಕೊಳ್ಳುವಂತೆಯೂ ಭಾಷಣಕರ್ತನು ಸಭಿಕರನ್ನು ಉತ್ತೇಜಿಸಿದನು. ಎರಡನೆಯ ಭಾಷಣಕರ್ತನು “ಸ್ವಸ್ಥಬೋಧನಾವಾಕ್ಯಗಳ ಮಾದರಿಗೆ” ಅಂಟಿಕೊಳ್ಳುವ ಆವಶ್ಯಕತೆಯ ಕುರಿತು ನಮ್ಮನ್ನು ಎಚ್ಚರಿಸಿದನು. (2 ತಿಮೊಥೆಯ 1:13, 14) ಅನೈತಿಕ ವಾರ್ತಾ ಮಾಧ್ಯಮದ ಪ್ರದರ್ಶನಗಳು, ಮಾನವ ತತ್ತ್ವಜ್ಞಾನ, ಉಚ್ಚ ವಿಮರ್ಶನೆಗಳು ಹಾಗೂ ಧರ್ಮಭ್ರಷ್ಟ ಬೋಧನೆಗಳಿಂದ ನಮ್ಮನ್ನು ಕಾಪಾಡಿಕೊಳ್ಳಲಿಕ್ಕಾಗಿ, ವೈಯಕ್ತಿಕ ಅಧ್ಯಯನ ಹಾಗೂ ಕೂಟದ ಹಾಜರಿಗಾಗಿ ನಾವು ಸಮಯವನ್ನು ಕೊಂಡುಕೊಳ್ಳಬೇಕು. (ಎಫೆಸ 5:15, 16) ಭಾಷಣಮಾಲೆಯ ಕೊನೆಯ ಭಾಷಣಕರ್ತನು, ದೇವಪ್ರಭುತ್ವ ಶಿಕ್ಷಣದಿಂದ ಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವುದರ ಆವಶ್ಯಕತೆಯನ್ನು ಎತ್ತಿತೋರಿಸಿದನು.—ಫಿಲಿಪ್ಪಿ 4:9.
“ನಮ್ಮ ಆತ್ಮಿಕ ಅಭಿವೃದ್ಧಿಗಾಗಿ ಹೊಸ ಒದಗಿಸುವಿಕೆಗಳು” ಎಂಬ ಭಾಷಣವನ್ನು ಕೇಳಿಸಿಕೊಳ್ಳಲು ನಾವೆಷ್ಟು ಪುಳಕಗೊಂಡಿದ್ದೆವು! ಅತಿ ಬೇಗನೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಶಿರೋನಾಮವಿರುವ ಹೊಸ ಪುಸ್ತಕವು ಪ್ರಕಾಶಿಸಲ್ಪಡುವುದು ಎಂಬುದನ್ನು ತಿಳಿದು ನಾವು ಸಂತೋಷಗೊಂಡೆವು. ಇದರಲ್ಲಿ ಏನು ಒಳಗೂಡಿದೆ ಎಂಬುದನ್ನು ಭಾಷಣಕರ್ತನು ವಿವರಿಸಿದಾಗ, ಆ ಪುಸ್ತಕವನ್ನು ಪಡೆಯುವ ಕಾತುರ ನಮಗಾಯಿತು. ಅನೇಕ ಸ್ಪೀಚ್ ಕೌನ್ಸಲ್ ಅಂಶಗಳನ್ನು ಒಳಗೊಂಡಿರುವ ಪುಸ್ತಕದ ಭಾಗದ ಕುರಿತು ಭಾಷಣಕರ್ತನು ಹೇಳಿದ್ದು: “ಈ ಹೊಸ ಪಠ್ಯಪುಸ್ತಕವು, ಒಳ್ಳೆಯ ಓದುವಿಕೆ, ಮಾತಾಡುವಿಕೆ ಮತ್ತು ಬೋಧಿಸುವಿಕೆಯ 53 ಅಂಶಗಳನ್ನು ನೀಡುವುದರಲ್ಲಿ ಒಂದು ಐಹಿಕ ಪಠ್ಯಪುಸ್ತಕದಂತಿರದೆ, ಶಾಸ್ತ್ರೀಯ ಮೂಲತತ್ತ್ವಗಳ ಮೇಲೆ ಆಧಾರಿತವಾಗಿದೆ.” ಪ್ರವಾದಿಗಳು, ಯೇಸು, ಹಾಗೂ ಅವನ ಶಿಷ್ಯರು ಹೇಗೆ ಒಳ್ಳೆಯ ಬೋಧನಾ ಕೌಶಲಗಳನ್ನು ತೋರಿಸಿದರು ಎಂಬುದನ್ನು ಈ ಪುಸ್ತಕದಲ್ಲಿ ಕಂಡುಕೊಳ್ಳಬಹುದು. ಹೌದು, ಈ ಪಠ್ಯಪುಸ್ತಕ ಹಾಗೂ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಹೊಸ ವೈಶಿಷ್ಟ್ಯಗಳು, ನಾವು ದೇವರ ವಾಕ್ಯದ ಉತ್ತಮ ಬೋಧಕರಾಗಲು ನಮಗೆ ಖಂಡಿತವಾಗಿಯೂ ಸಹಾಯಮಾಡುವವು.
ಮೂರನೆಯ ದಿನ—ಕಾಲವನ್ನು ನೋಡಿ, ಬೋಧಕರಾಗಿರಿ
ಕೊನೆಯ ದಿನದಂದು, ದಿನದ ವಚನದ ಚರ್ಚೆಯ ಬಳಿಕ, “ಮಲಾಕಿಯನ ಪ್ರವಾದನೆ ಯೆಹೋವನ ದಿನಕ್ಕಾಗಿ ನಮ್ಮನ್ನು ಸಿದ್ಧಗೊಳಿಸುತ್ತದೆ” ಎಂಬ ಅಧಿವೇಶನದ ಕೊನೆಯ ಭಾಷಣಮಾಲೆಗೆ ಎಲ್ಲರೂ ನಿಕಟವಾದ ಗಮನವನ್ನು ಹರಿಸಿದರು. ಯೆಹೂದ್ಯರು ಬಾಬೆಲಿನಿಂದ ಹಿಂದಿರುಗಿದ ಹೆಚ್ಚುಕಡಿಮೆ ನೂರು ವರ್ಷಗಳ ಬಳಿಕ ಮಲಾಕಿಯನು ಪ್ರವಾದಿಸಿದನು. ಆ ಯೆಹೂದ್ಯರು ಪುನಃ ಧರ್ಮಭ್ರಷ್ಟತೆ ಹಾಗೂ ದುಷ್ಟತನಕ್ಕೆ ತಿರುಗಿದ್ದರು. ಯೆಹೋವನ ನೀತಿಯ ನಿಯಮಗಳನ್ನು ಅಲಕ್ಷಿಸುವ ಮೂಲಕ ಹಾಗೂ ಯಜ್ಞಕ್ಕಾಗಿ ಕುರುಡಾದ, ಕುಂಟಾದ ಮತ್ತು ರೋಗಗ್ರಸ್ತ ಪಶುಗಳನ್ನು ತರುವ ಮೂಲಕ ಅವರು ಆತನ ಹೆಸರಿಗೆ ಅಗೌರವ ತೋರಿಸುತ್ತಿದ್ದರು. ಅಷ್ಟುಮಾತ್ರವಲ್ಲ, ಅವರು ಬಹುಶಃ ವಿಧರ್ಮಿ ಸ್ತ್ರೀಯರನ್ನು ಮದುವೆಮಾಡಿಕೊಳ್ಳಲಿಕ್ಕಾಗಿ, ತಮ್ಮ ಯೌವನದ ಪತ್ನಿಯರನ್ನು ವಿಚ್ಛೇದಿಸುತ್ತಿದ್ದರು.
ಮಲಾಕಿಯನ ಪ್ರವಾದನೆಯ ಮೊದಲ ಅಧ್ಯಾಯವು, ತನ್ನ ಜನರ ಕಡೆಗಿನ ಯೆಹೋವನ ಪ್ರೀತಿಯ ಕುರಿತು ನಮಗೆ ಆಶ್ವಾಸನೆ ನೀಡುತ್ತದೆ. ದೇವರ ಕುರಿತಾದ ಪೂಜ್ಯಭಯ ಹಾಗೂ ಪವಿತ್ರ ವಿಷಯಗಳಿಗಾಗಿರುವ ಗಣ್ಯತೆಯನ್ನು ಹೊಂದಿರುವ ಆವಶ್ಯಕತೆಯನ್ನು ಇದು ಒತ್ತಿಹೇಳುತ್ತದೆ. ತನ್ನನ್ನು ನಿಸ್ವಾರ್ಥ ಪ್ರೀತಿಯಿಂದ ಆರಾಧಿಸುತ್ತಾ, ಆತನ ಸೇವೆಯಲ್ಲಿ ನಮ್ಮಿಂದಾದುದೆಲ್ಲವನ್ನೂ ಮಾಡುವಂತೆ ಯೆಹೋವನು ನಮ್ಮಿಂದ ನಿರೀಕ್ಷಿಸುತ್ತಾನೆ. ನಮ್ಮ ಪವಿತ್ರ ಸೇವೆಯು ಕೇವಲ ಒಂದು ಔಪಚಾರಿಕ ಸಂಗತಿಯಾಗಿರಬಾರದು, ಮತ್ತು ನಾವು ದೇವರಿಗೆ ಲೆಕ್ಕವೊಪ್ಪಿಸಬೇಕು.
ಮಲಾಕಿಯನ ಪ್ರವಾದನೆಯ ಎರಡನೆಯ ಅಧ್ಯಾಯವನ್ನು ನಮ್ಮ ದಿನಗಳಿಗೆ ಅನ್ವಯಿಸುತ್ತಾ, ಭಾಷಣಮಾಲೆಯ ಎರಡನೆಯ ಭಾಷಣಕರ್ತನು ಕೇಳಿದ್ದು: “‘ನಮ್ಮ ತುಟಿಗಳಲ್ಲಿ ಅನ್ಯಾಯವೇನೂ ಕಾಣುವುದಿಲ್ಲ’ ಎಂಬುದರ ವಿಷಯ ನಾವು ವೈಯಕ್ತಿಕವಾಗಿ ಎಚ್ಚರದಿಂದಿದ್ದೇವೊ?” (ಮಲಾಕಿಯ 2:6) ಬೋಧಿಸುವುದರಲ್ಲಿ ಮುಂದಾಳತ್ವವನ್ನು ವಹಿಸುವವರು, ಅವರು ಏನು ಹೇಳುತ್ತಿದ್ದಾರೋ ಅದು ದೇವರ ವಾಕ್ಯದ ಮೇಲೆ ಬಲವಾಗಿ ಆಧಾರಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅನ್ಯಾಯದಿಂದ ವಿಚ್ಛೇದ ಪಡೆದುಕೊಳ್ಳುವಂಥ ದ್ರೋಹವನ್ನು ನಾವು ದ್ವೇಷಿಸಬೇಕು.—ಮಲಾಕಿಯ 2:14-16.
“ಯೆಹೋವನ ದಿನವನ್ನು ಯಾರು ಪಾರಾಗುವರು?” ಎಂಬ ಮುಖ್ಯ ವಿಷಯದ ಕುರಿತು ಮಾತಾಡುತ್ತಾ, ಭಾಷಣಮಾಲೆಯ ಕೊನೆಯ ಭಾಷಣಕರ್ತನು ನಾವು ಯೆಹೋವನ ದಿನಕ್ಕಾಗಿ ಸಿದ್ಧರಾಗುವಂತೆ ಸಹಾಯಮಾಡಿದನು. “ಮಲಾಕಿಯ 3ನೆಯ ಅಧ್ಯಾಯದ 17ನೆಯ ವಚನವು ತಮ್ಮ ಮೇಲೆ ಮಹಾ ನೆರವೇರಿಕೆಯನ್ನು ಪಡೆಯುತ್ತಿದೆ ಎಂದು ತಿಳಿದಿರುವುದು ಯೆಹೋವನ ಸೇವಕರಿಗೆ ಎಷ್ಟೊಂದು ಸಾಂತ್ವನದಾಯಕವಾಗಿದೆ!” ಎಂದು ಭಾಷಣಕರ್ತನು ಉದ್ಗರಿಸಿದನು. ಆ ವಚನದಲ್ಲಿ ಹೀಗೆ ತಿಳಿಸಲಾಗಿದೆ: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು.”
ಅಧಿವೇಶನದ ಇನ್ನೊಂದು ಮುಖ್ಯ ಭಾಗವು, “ಯೆಹೋವನ ಅಧಿಕಾರವನ್ನು ಗೌರವಿಸಿರಿ” ಎಂಬ, ನಟರು ಪುರಾತನ ಶೈಲಿಯ ಉಡುಪನ್ನು ಧರಿಸಿಕೊಂಡು ಮಾಡಿದ ಡ್ರಾಮಾ ಆಗಿತ್ತು. ಇದು ಕೋರಹನ ಪುತ್ರರನ್ನು ಚಿತ್ರಿಸಿತು. ಮೋಶೆಆರೋನರ ಕಡೆಗೆ ತಮ್ಮ ತಂದೆಯು ತೋರಿಸುತ್ತಿದ್ದ ದಂಗೆಕೋರ ಮನೋಭಾವದ ಮಧ್ಯೆಯೂ, ಇವರು ಯೆಹೋವನಿಗೆ ಮತ್ತು ಆತನ ಪ್ರತಿನಿಧಿಗಳಿಗೆ ನಿಷ್ಠರಾಗಿ ಉಳಿದರು. ಕೋರಹನೂ ಅವನ ಹಿಂಬಾಲಕರೂ ನಾಶಗೊಳಿಸಲ್ಪಟ್ಟಾಗ, ಕೋರಹನ ಪುತ್ರರು ಮಾತ್ರ ಪಾರಾಗಿ ಉಳಿದರು. ಅದರ ನಂತರ ಹಿಂಬಾಲಿಸಿದ “ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗಿರಿ” ಎಂಬ ಭಾಷಣವು, ಡ್ರಾಮಾದಲ್ಲಿ ಒಳಗೂಡಿದ್ದ ವಿಷಯವನ್ನು ನಮ್ಮಲ್ಲಿ ಪ್ರತಿಯೊಬ್ಬರಿಗೆ ಅನ್ವಯಿಸಿತು. ಕೋರಹನೂ ಅವನ ಹಿಂಬಾಲಕರೂ ತಪ್ಪಿಬಿದ್ದ ಆರು ಕ್ಷೇತ್ರಗಳ ಕುರಿತು ಭಾಷಣಕರ್ತನು ಎಚ್ಚರಿಸಿದನು: ಯೆಹೋವನ ಅಧಿಕಾರವನ್ನು ಅವರು ನಿಷ್ಠೆಯಿಂದ ಬೆಂಬಲಿಸಲಿಲ್ಲ; ಅವರು ಅಹಂಭಾವ, ಹೆಬ್ಬಯಕೆ, ಮತ್ತು ಮತ್ಸರವು ತಮ್ಮನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ ಅನುಮತಿಸಿದರು; ಯೆಹೋವನಿಂದ ನೇಮಿತರಾದವರ ಅಪರಿಪೂರ್ಣತೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರು; ಆಪಾದಿಸುವ ಮನೋಭಾವವನ್ನು ಬೆಳೆಸಿಕೊಂಡರು; ತಮಗಿದ್ದ ಸೇವಾ ಸುಯೋಗಗಳ ಕುರಿತು ಅತೃಪ್ತರಾದರು; ಮತ್ತು ಯೆಹೋವನಿಗೆ ತೋರಿಸುವ ನಿಷ್ಠೆಗಿಂತಲೂ, ಸ್ನೇಹ ಅಥವಾ ಕುಟುಂಬ ಸಂಬಂಧಗಳು ಹೆಚ್ಚು ಪ್ರಾಮುಖ್ಯವಾಗಿರುವಂತೆ ಅನುಮತಿಸಿದರು.
“ಎಲ್ಲಾ ಜನಾಂಗಗಳಿಗೆ ಸತ್ಯವನ್ನು ಯಾರು ಬೋಧಿಸುತ್ತಿದ್ದಾರೆ?” ಎಂಬುದು ಬಹಿರಂಗ ಭಾಷಣದ ಮೇಲ್ವಿಷಯವಾಗಿತ್ತು. ಅದರಲ್ಲಿ ಚರ್ಚಿಸಲ್ಪಟ್ಟ ಸತ್ಯವು, ಸಾಮಾನ್ಯ ಸತ್ಯದ ವಿಷಯವಾಗಿ ಅಲ್ಲ, ಬದಲಾಗಿ ಯೇಸು ಕ್ರಿಸ್ತನು ಯಾವುದರ ವಿಷಯದಲ್ಲಿ ಸಾಕ್ಷಿ ನೀಡಿದನೋ ಆ ಯೆಹೋವನ ಉದ್ದೇಶದ ಕುರಿತಾದ ಸತ್ಯವೇ ಆಗಿತ್ತು. ನಂಬಿಕೆಗಳಿಗೆ ಸಂಬಂಧಿಸಿದ ಸತ್ಯ, ಆರಾಧನಾ ರೀತಿಗೆ ಸಂಬಂಧಿಸಿದ ಸತ್ಯ ಹಾಗೂ ವೈಯಕ್ತಿಕ ನಡತೆಗೆ ಸಂಬಂಧಿಸಿದ ಸತ್ಯವನ್ನು ಭಾಷಣಕರ್ತನು ಪರಿಗಣಿಸಿದನು. ಪ್ರಥಮ ಶತಮಾನದ ಕ್ರೈಸ್ತರನ್ನು ಇಂದಿನ ಯೆಹೋವನ ಸಾಕ್ಷಿಗಳಿಗೆ ಹೋಲಿಸುವ ಮೂಲಕ, ‘ದೇವರು ಖಂಡಿತವಾಗಿಯೂ ನಮ್ಮ ನಡುವೆ ಇದ್ದಾನೆ’ ಎಂಬ ನಮ್ಮ ನಿಶ್ಚಿತಾಭಿಪ್ರಾಯವು ಇನ್ನಷ್ಟು ಬಲಗೊಂಡಿದೆ ಎಂಬುದಂತೂ ನಿಶ್ಚಯ.—1 ಕೊರಿಂಥ 14:25, NW.
ಕಾವಲಿನಬುರುಜು ಪತ್ರಿಕೆಯ ಆ ವಾರಕ್ಕಾಗಿರುವ ಅಧ್ಯಯನ ಲೇಖನದ ಸಾರಾಂಶದ ಬಳಿಕ, ಹಾಜರಿದ್ದ ದೇವರ ವಾಕ್ಯದ ಎಲ್ಲ ಬೋಧಕರು, “ಇತರರಿಗೆ ಬೋಧಿಸುವ ನಮ್ಮ ನೇಮಕವನ್ನು ತುರ್ತಿನಿಂದ ನೆರವೇರಿಸುವುದು” ಎಂಬ ಮುಕ್ತಾಯದ ಭಾಷಣದ ಮೂಲಕ ಕ್ರಿಯೆಗೈಯುವಂತೆ ಪ್ರಚೋದಿಸಲ್ಪಟ್ಟರು. ಕಾರ್ಯಕ್ರಮದ ಸಂಕ್ಷಿಪ್ತ ಪುನರ್ವಿಮರ್ಶೆಯು, ಬೋಧಿಸುವುದರಲ್ಲಿ ಶಾಸ್ತ್ರವಚನಗಳನ್ನು ಉಪಯೋಗಿಸುವುದರ ಪ್ರಮುಖತೆಯನ್ನು, ನಾವು ಅರ್ಹ ಬೋಧಕರಾಗಿ ಪರಿಣಮಿಸಸಾಧ್ಯವಿರುವ ವಿಧಗಳನ್ನು, ಮತ್ತು ನಾವು ಇತರರಿಗೆ ಕಲಿಸುವ ಸತ್ಯದಲ್ಲಿ ದೃಢಭರವಸೆಯುಳ್ಳವರಾಗಿರುವುದರ ಆವಶ್ಯಕತೆಯನ್ನು ಒತ್ತಿಹೇಳಿತು. ನಾವು ‘ನಮ್ಮ ಅಭಿವೃದ್ಧಿಯನ್ನು ಪ್ರಸಿದ್ಧ’ಪಡಿಸುವಂತೆ ಮತ್ತು ‘ನಮ್ಮ ವಿಷಯದಲ್ಲಿಯೂ ನಮ್ಮ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರುವಂತೆ’ ಭಾಷಣಕರ್ತನು ನಮಗೆ ಸಲಹೆ ನೀಡಿದನು.—1 ತಿಮೊಥೆಯ 4:15, 16.
“ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದಲ್ಲಿ ನಾವು ಎಂತಹ ಆತ್ಮಿಕ ಔತಣದಲ್ಲಿ ಆನಂದಿಸಿದೆವು! ಇತರರಿಗೆ ದೇವರ ವಾಕ್ಯವನ್ನು ಕಲಿಸುವುದರಲ್ಲಿ, ನಾವು ನಮ್ಮ ಮಹಾನ್ ಉಪದೇಶಕನಾದ ಯೆಹೋವನನ್ನೂ ನಮ್ಮ ಮಹಾ ಬೋಧಕನಾದ ಯೇಸು ಕ್ರಿಸ್ತನನ್ನೂ ಅನುಕರಿಸೋಣ.
[ಪುಟ 28ರಲ್ಲಿರುವ ಚೌಕ/ಚಿತ್ರಗಳು]
ವಿಶೇಷ ಆವಶ್ಯಕತೆಗಳನ್ನು ತೃಪ್ತಿಪಡಿಸಲಿಕ್ಕಾಗಿ ಹೊಸ ಪ್ರಕಾಶನಗಳು
“ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದ ಪ್ರತಿನಿಧಿಗಳು, ಲೋಕದ ಕೆಲವು ಭಾಗಗಳಲ್ಲಿರುವ ಜನರಿಗೆ ಶಾಸ್ತ್ರೀಯ ಸತ್ಯವನ್ನು ಕಲಿಸುವುದರಲ್ಲಿ ತುಂಬ ಸಹಾಯಕರವಾಗಿರುವಂಥ ಎರಡು ಪ್ರಕಾಶನಗಳನ್ನು ಅತ್ಯಧಿಕ ಹುರುಪಿನಿಂದ ಪಡೆದುಕೊಂಡರು. ನಿಮ್ಮಲ್ಲಿ ಅಮರ ಆತ್ಮವಿದೆಯೋ? (ಇಂಗ್ಲಿಷ್) ಎಂಬ ಮೇಲ್ಬರಹವಿರುವ ಟ್ರ್ಯಾಕ್ಟ್, “ಪ್ರಾಣ” ಮತ್ತು “ಆತ್ಮ”ದ ನಡುವೆ ಯಾವುದೇ ಭಿನ್ನತೆಯನ್ನು ತೋರಿಸದಿರುವಂಥ ಸ್ಥಳಿಕ ಭಾಷೆಗಳಿರುವ ದೇಶಗಳಲ್ಲಿ ಜೀವಿಸುತ್ತಿರುವವರೊಂದಿಗೆ ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಪ್ರಯೋಜನಾರ್ಹ ಸಾಧನವಾಗಿರುವುದು. ಆತ್ಮ ಶಕ್ತಿಯು ಆತ್ಮ ಜೀವಿಗಳಿಗಿಂತ ಭಿನ್ನವಾಗಿದೆ ಮತ್ತು ಜನರು ಸತ್ತಾಗ ಅವರು ಆತ್ಮ ಜೀವಿಗಳಾಗಿ ಪರಿಣಮಿಸುವುದಿಲ್ಲ ಎಂಬುದನ್ನು ಈ ಹೊಸ ಟ್ರ್ಯಾಕ್ಟ್ ಸ್ಪಷ್ಟವಾಗಿ ತೋರಿಸುತ್ತದೆ.
ಅಧಿವೇಶನದ ಎರಡನೆಯ ದಿನದ ಕೊನೆಯಲ್ಲಿ, ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಎಂಬ ಬ್ರೋಷರ್ ಬಿಡುಗಡೆಮಾಡಲ್ಪಟ್ಟಿತು. ವ್ಯಕ್ತಿತ್ವವನ್ನು ಹೊಂದಿರುವ ಒಬ್ಬ ಸೃಷ್ಟಿಕರ್ತನ ಹಾಗೂ ದೈವಿಕವಾಗಿ ಪ್ರೇರಿತವಾದ ಒಂದು ಪುಸ್ತಕದ ಕುರಿತಾದ ಕಲ್ಪನೆಯೇ ಇಲ್ಲದಿರುವಂತಹ ಜನರೊಂದಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಉದ್ದೇಶದಿಂದ ಈ ಬ್ರೋಷರ್ ಸಿದ್ಧಗೊಳಿಸಲ್ಪಟ್ಟಿದೆ. ನಿಮ್ಮ ಕ್ಷೇತ್ರ ಸೇವೆಯಲ್ಲಿ ಈ ಹೊಸ ಪ್ರಕಾಶನಗಳನ್ನು ನೀವು ಉಪಯೋಗಿಸಲು ಶಕ್ತರಾಗಿದ್ದೀರೋ?
[ಪುಟ 26ರಲ್ಲಿರುವ ಚಿತ್ರ]
ಇಟಲಿಯ ಮಿಲಾನ್ನಲ್ಲಿ ಮತ್ತು ಲೋಕದಾದ್ಯಂತ ನಡೆದ ಅಧಿವೇಶನಗಳಲ್ಲಿ ನೂರಾರು ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು
[ಪುಟ 29ರಲ್ಲಿರುವ ಚಿತ್ರ]
“ಯೆಹೋವನ ಅಧಿಕಾರವನ್ನು ಗೌರವಿಸಿರಿ” ಎಂಬ ಡ್ರಾಮಾದಿಂದ ಸಭಿಕರು ಪ್ರಚೋದಿಸಲ್ಪಟ್ಟರು