ದುಷ್ಟತನದ ಕಾರ್ಯಭಾರಿಗಳು
ಮಾನವರ ವ್ಯವಹಾರಗಳಲ್ಲಿ ದೆವ್ವಗಳ ಪಾತ್ರದ ಕುರಿತು ಬೈಬಲಿನ ವಿವರಣೆಯು, ಬೇರೆ ರೀತಿಯಲ್ಲಿ ಉತ್ತರಿಸಲಾಗದಂತಹ ದುಷ್ಟತನದ ಕುರಿತಾದ ಮೂಲ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸುತ್ತದೆ. ಉದಾಹರಣೆಗೆ, ಬಾಲ್ಕನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕುರಿತಾಗಿ ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ ನಿನ ಈ ವಾಕ್ಸರಣಿಯನ್ನು ಪರಿಗಣಿಸಿರಿ: “ತನಿಖೆಗಾರರ ಒಂದು ಯೂರೋಪಿಯನ್ ಸಮುದಾಯದ ತಂಡವು, . . . ಭಯಹುಟ್ಟಿಸಲು, ಎದೆಗುಂದಿಸಲು ಮತ್ತು ಅವರ ಮನೆಗಳಿಂದ ಅವರನ್ನು ಹೊರಗಟ್ಟಿಸಲು ರೂಪಿಸಲ್ಪಟ್ಟ ಭಯಗ್ರಸ್ತತೆಯ ಒಂದು ವ್ಯವಸ್ಥಾಪಿತ ಧೋರಣೆಯ ಭಾಗದೋಪಾದಿ, 20,000 ದಷ್ಟು ಮುಸ್ಲಿಮ್ ಸ್ತ್ರೀಯರನ್ನು ಮತ್ತು ಹುಡುಗಿಯರನ್ನು [ಸೈನಿಕರು] ಬಲಾತ್ಕಾರ ಸಂಭೋಗ ನಡಿಸಿದರು ಎಂಬ ತೀರ್ಮಾನಕ್ಕೆ ಬಂದಿದೆ.”
ಟೈಮ್ ಪತ್ರಿಕೆಯ ಪ್ರಬಂಧವೊಂದು ಮನವರಿಕೆಯಾಗದ ವಿವರಣೆಯೊಂದನ್ನು ನೀಡಲು ಪ್ರಯತ್ನಿಸಿತು: “ಕೆಲವೊಮ್ಮೆ ಯುದ್ಧದಲ್ಲಿ ಎಳೆಯ ಪುರುಷರು ಅವರ ಹಿರಿಯರನ್ನು, ಅವರ ಅಧಿಕಾರಿಗಳನ್ನು ಮೆಚ್ಚಿಸಲು ಬಲಾತ್ಕಾರ ಸಂಭೋಗವನ್ನು ನಡಿಸಬಹುದು, ಮತ್ತು ತಂದೆ-ಮಗನ ವಿಧದ ಮನ್ನಣೆಯನ್ನು ಗಳಿಸಬಹುದು. ಬಲಾತ್ಕಾರ ಸಂಭೋಗವು ಒಂದು ನಿರ್ದಿಷ್ಟ ಸೇನಾತುಕಡಿಯ ಕ್ರೂರತೆಗೆ ಕಟ್ಟುಪಾಡಿನ ಪುರಾವೆಯಾಗಿದೆ. ತಂಡದ ಒಪ್ಪಂದಮಾಡಲಾರದ ಉದ್ದೇಶಗಳೊಂದಿಗೆ ಬೆಸೆಯಲು ಹೇಯಕರ ಸಂಗತಿಗಳನ್ನು ಮಾಡಲು ಇಚ್ಛೆಯುಳ್ಳ ಯುವ ಪುರುಷನೊಬ್ಬನು, ತನ್ನ ವೈಯಕ್ತಿಕ ಮನಸ್ಸಾಕ್ಷಿಯನ್ನು ಅಧೀನಮಾಡಿದ್ದಾನೆ. ಘೋರಕೃತ್ಯವನ್ನು ಮಾಡುವುದರಲ್ಲಿ ಮನುಷ್ಯನೊಬ್ಬನು ತನ್ನ ನಿಷ್ಠೆಯನ್ನು ಸ್ಥಿರೀಕರಿಸುತ್ತಾನೆ.”
ಆದರೆ ಅದರ ಸದಸ್ಯರುಗಳ ವೈಯಕ್ತಿಕ ಮನಸ್ಸಾಕ್ಷಿಗಳಿಗಿಂತ “ತಂಡದ ಒಪ್ಪಂದಮಾಡಲಾರದ ಉದ್ದೇಶಗಳು” ಅತಿ ಹೆಚ್ಚು ನೀಚತನದ್ದಾಗಿರಲು ಕಾರಣವೇನು? ಏಕ ವ್ಯಕ್ತಿಯೋಪಾದಿ, ಬಹುತೇಕ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಶಾಂತಿಯಿಂದ ಜೀವಿಸಲು ಬಯಸುತ್ತಾನೆ. ಹಾಗಿರುವಲ್ಲಿ, ಯುದ್ಧದ ಸಮಯದಲ್ಲಿ, ಜನರು ಬಲಾತ್ಕಾರ ಸಂಭೋಗ ನಡಿಸುವುದು, ಹಿಂಸೆ ಕೊಡುವುದು, ಮತ್ತು ಒಬ್ಬರು ಇನ್ನೊಬ್ಬರನ್ನು ಕೊಲ್ಲುವುದು ಯಾಕೆ? ಒಂದು ಪ್ರಮುಖ ಕಾರಣವೇನಂದರೆ ಪೈಶಾಚಿಕ ಶಕ್ತಿಗಳು ಕಾರ್ಯಮಗ್ನವಾಗಿವೆ.
ದೆವ್ವಗಳ ಪಾತ್ರವನ್ನು ತಿಳಿಯುವುದು ಯಾವುದನ್ನು ಒಂದು “ದೇವತಾ ಶಾಸ್ತ್ರಿಗಳ ಸಮಸ್ಯೆ” ಎಂದು ಕೆಲವರು ಕರೆಯುತ್ತಾರೋ ಅದಕ್ಕೊಂದು ಪರಿಹಾರವನ್ನು ಕೂಡ ಒದಗಿಸುತ್ತದೆ. ಮೂರು ಪ್ರಮೇಯಗಳನ್ನು ಸರಿಹೊಂದಿಸುವುದು ಹೇಗೆ ಎಂಬುದು ಸಮಸ್ಯೆಯಾಗಿದೆ: (1) ದೇವರು ಸರ್ವ ಬಲಾಢ್ಯನು; (2) ದೇವರು ಪ್ರೀತಿಯುಳ್ಳವನು ಮತ್ತು ಒಳ್ಳೆಯವನು; (3) ಭಯಂಕರ ಸಂಗತಿಗಳು ಸಂಭವಿಸುತ್ತವೆ. ಇದರಲ್ಲಿ ಯಾವುದೇ ಎರಡು ಪ್ರಮೇಯಗಳನ್ನು ಸರಿಹೊಂದಿಸಲು ಸಾಧ್ಯವಿದೆ, ಆದರೆ ಎಂದಿಗೂ ಎಲ್ಲಾ ಮೂರು ಪ್ರಮೇಯಗಳನ್ನು ನೀವು ಸರಿಹೊಂದಿಸಲಾರಿರಿ ಎಂದು ಕೆಲವರು ಅಭಿಪ್ರಯಿಸುತ್ತಾರೆ. ದೇವರ ವಾಕ್ಯವು ಸ್ವತಃ ಉತ್ತರವನ್ನು ಕೊಡುತ್ತದೆ, ಮತ್ತು ಆ ಉತ್ತರವು ಅದೃಶ್ಯ ಆತ್ಮಗಳನ್ನು, ದುಷ್ಟತನದ ಕಾರ್ಯಭಾರಿಗಳನ್ನು ಒಳಗೂಡಿಸುತ್ತದೆ.
ಪ್ರಥಮ ದಂಗೆಕೋರನು
ದೇವರು ತಾನೇ ಸ್ವತಃ ಒಬ್ಬ ಆತ್ಮನಾಗಿದ್ದಾನೆ ಎಂದು ಬೈಬಲು ನಮಗೆ ತಿಳಿಸುತ್ತದೆ. (ಯೋಹಾನ 4:24) ಸಮಯಾನಂತರ ಅವನು ಲಕ್ಷಾಂತರ ಇತರ ಆತ್ಮ ಜೀವಿಗಳ, ದೇವದೂತ ಪುತ್ರರುಗಳ ನಿರ್ಮಾಣಿಕನಾದನು. ದರ್ಶನದಲ್ಲಿ, ದೇವರ ಸೇವಕನಾದ ದಾನಿಯೇಲನು ಹತ್ತು ಕೋಟಿ ದೇವದೂತರನ್ನು ಕಂಡನು. ಯೆಹೋವನು ಸೃಷ್ಟಿಸಿದ ಎಲ್ಲಾ ಆತ್ಮ ವ್ಯಕ್ತಿಗಳು ನೀತಿವಂತರೂ, ಆತನ ಚಿತ್ತದೊಂದಿಗೆ ಹೊಂದಿಕೆಯುಳ್ಳವರೂ ಆಗಿದ್ದರು.—ದಾನಿಯೇಲ 7:10; ಇಬ್ರಿಯ 1:7.
ಅನಂತರ, ದೇವರು “ಲೋಕಕ್ಕೆ ಅಸ್ತಿವಾರ ಹಾಕಿದಾಗ” ಈ ದೇವ ದೂತ ಪುತ್ರರುಗಳು “ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ” ಮತ್ತು “ಆನಂದಘೋಷಮಾಡುತ್ತಾ” ಇದ್ದರು. (ಯೋಬ 38:4-7) ಆದರೆ ಅವರಲ್ಲೊಬ್ಬನು ನಿರ್ಮಾಣಿಕನಿಗೆ ಸಲ್ಲಬೇಕಾಗಿದ್ದ ನ್ಯಾಯಯುಕ್ತ ಆರಾಧನೆಯನ್ನು ಸ್ವತಃ ತನ್ನದಾಗಿ ಮಾಡಿಕೊಳ್ಳುವ ಆಶೆಯೊಂದನ್ನು ಬೆಳೆಸಿದನು. ದೇವರ ವಿರುದ್ಧವಾಗಿ ದಂಗೆಯೇಳುವ ಮೂಲಕ, ಈ ದೇವದೂತನು ಸ್ವತಃ ತನ್ನನ್ನೇ ಒಬ್ಬ ಸೈತಾನನನ್ನಾಗಿ (ಅರ್ಥ “ವಿರೋಧಕನು”) ಮತ್ತು ಒಬ್ಬ ಪಿಶಾಚನನ್ನಾಗಿ (ಅರ್ಥ “ನಿಂದಕನು”) ಮಾಡಿಕೊಂಡನು.—ಹೋಲಿಸಿರಿ ಯೆಹೆಜ್ಕೇಲ 28:13-15.
ಮೊದಲನೆಯ ಸ್ತ್ರೀಯಾದ ಹವ್ವಳೊಡನೆ ಮಾತಾಡಲು ಏದೆನಿನಲ್ಲಿ ಸರ್ಪವೊಂದನ್ನು ಬಳಸಿ, ಸೈತಾನನು ತೋಟದಲ್ಲಿದ್ದ ಒಂದು ನಿರ್ದಿಷ್ಟ ಮರದ ಹಣ್ಣನ್ನು ತಿನ್ನಬಾರದೆಂದು ದೇವರು ನೇರವಾಗಿ ಕೊಟ್ಟ ಅಪ್ಪಣೆಗೆ ಅವಿಧೇಯಳಾಗುವಂತೆ ಅವಳನ್ನು ಒಡಂಬಡಿಸಿದನು. ತದನಂತರ, ಅವಳ ಗಂಡನು ಅವಳೊಂದಿಗೆ ಸೇರಿಕೊಂಡನು. ಹೀಗೆ, ಮೊದಲನೆಯ ಮಾನವ ದಂಪತಿಗಳು ಯೆಹೋವನ ವಿರುದ್ಧದ ದಂಗೆಯೊಂದರಲ್ಲಿ ದೇವದೂತನೊಂದಿಗೆ ಸೇರಿಕೊಂಡರು.—ಆದಿಕಾಂಡ 2:17; 3:1-6.
ವಿಧೇಯತೆಯ ಒಂದು ಸ್ಪಷ್ಟವಾಗಿದ ಪಾಠವೆಂದು ಏದೆನಿನ ಘಟನೆಗಳು ಭಾಸವಾಗುವುದಾದರೂ, ಸೈತಾನನಿಂದ ಎರಡು ಪ್ರಮುಖ ನೈತಿಕ ವಿವಾದಾಂಶಗಳು ಅಲ್ಲಿ ಎಬ್ಬಿಸಲ್ಪಟ್ಟವು. ಪ್ರಥಮವಾಗಿ, ತನ್ನ ಸೃಷ್ಟಿಜೀವಿಗಳ ಮೇಲೆ ಯೆಹೋವನ ಪ್ರಭುತ್ವವು ನೀತಿಯುಕ್ತವಾಗಿ ಮತ್ತು ಅವರ ಅತ್ಯುತ್ತಮ ಅಭಿರುಚಿಗಳಲ್ಲಿ ಚಲಾಯಿಸಲ್ಪಡುತ್ತದೊ ಎಂಬದನ್ನು ಸೈತಾನನು ಚರ್ಚಾಸ್ಪದ ಮಾಡಿದನು. ಸ್ವತಃ ತಾವಾಗಿಯೇ ಆಳಿಕೊಳ್ಳುವುದರ ಮೂಲಕ ಪ್ರಾಯಶಃ ಮಾನವರು ಹೆಚ್ಚು ಉತ್ತಮ ಕೆಲಸವನ್ನು ಮಾಡಿಯಾರು. ಎರಡನೆಯದಾಗಿ, ವಿಧೇಯತೆಯು ಲೌಕಿಕ ಪ್ರಯೋಜನಗಳನ್ನು ತರುವುದಿಲ್ಲವೆಂದು ಭಾಸವಾಗುವಾಗ, ಯಾವನೇ ಪ್ರಜ್ಞಾವಂತ ಜೀವಿಯು ದೇವರಿಗೆ ನಂಬಿಗಸ್ತನಾಗಿ ಮತ್ತು ನಿಷ್ಠನಾಗಿ ಉಳಿಯುವನೋ ಎಂದು ಸೈತಾನನು ಪ್ರಶ್ನಿಸಿದನು.a
ಯೆಹೋವನ ಗುಣಲಕ್ಷಣಗಳ ಜ್ಞಾನದೊಂದಿಗೆ, ಏದೆನಿನಲ್ಲಿ ಎಬ್ಬಿಸಲ್ಪಟ್ಟ ವಿವಾದಾಂಶಗಳ ಒಂದು ಸ್ಪಷ್ಟವಾಗಿದ ತಿಳಿವಳಿಕೆಯು, “ದೇವತಾ ಶಾಸ್ತ್ರಿಗಳ ಸಮಸ್ಯೆ”ಗೆ—ಬಲ ಮತ್ತು ಪ್ರೀತಿಯ ದೇವರ ಗುಣಗಳೊಂದಿಗೆ ದುಷ್ಟತನದ ಅಸ್ತಿತ್ವವನ್ನು ಸರಿದೂಗಿಸುವುದು—ಪರಿಹಾರವನ್ನು ತಿಳಿಯಲು ನಮಗೆ ಸಹಾಯ ಮಾಡುತ್ತದೆ. ಯೆಹೋವನು ಅಸೀಮಿತವಾದ ಬಲವನ್ನು ಹೊಂದಿದ್ದಾನೆ ಮತ್ತು ಪ್ರೀತಿಯ ನಿಜ ಸ್ವರೂಪನೇ ಆಗಿದ್ದಾನೆ ಎಂಬುದು ಸತ್ಯವಾಗಿರುವಾಗ, ಅವನು ವಿವೇಕಿಯೂ, ನ್ಯಾಯಿಯೂ ಕೂಡ ಆಗಿರುತ್ತಾನೆ. ಈ ನಾಲ್ಕು ಗುಣಗಳನ್ನು ಅವನು ಪರಿಪೂರ್ಣ ಸಮತೂಕದಲ್ಲಿ ಚಲಾಯಿಸುತ್ತಾನೆ. ಹೀಗೆ, ಮೂವರು ದಂಗೆಕೋರರನ್ನು ಕೂಡಲೇ ನಾಶಮಾಡಲು ಅವನ ಎದುರಿಸಲಾಗದ ಬಲವನ್ನು ಅವನು ಬಳಸಲಿಲ್ಲ. ಅದು ನ್ಯಾಯವಾಗಿರುತ್ತಿತ್ತಾದರೂ, ಆವಶ್ಯಕವಾಗಿ ವಿವೇಕದ್ದೂ, ಯಾ ಪ್ರೀತಿಯದ್ದೂ ಆಗಿರುತ್ತಿರಲಿಲ್ಲ. ಇನ್ನೂ ಹೆಚ್ಚಾಗಿ, ಅವನು ಕೇವಲ ಕ್ಷಮಿಸಿ, ಮರೆತುಬಿಡಲಿಲ್ಲ, ಈ ವಿಧಾನವು ಪ್ರೀತಿಯ ಆಯ್ಕೆಯಾಗಿರುತ್ತಿತ್ತು ಎಂದು ಕೆಲವರು ಭಾವಿಸಬಹುದು. ಅದನ್ನು ಮಾಡುವುದು ವಿವೇಕವೂ ಅಲ್ಲ, ನ್ಯಾಯವೂ ಆಗಿರುತ್ತಿರಲಿಲ್ಲ.
ಸೈತಾನನು ಎಬ್ಬಿಸಿದಂತಹ ವಿವಾದಾಂಶಗಳನ್ನು ಪರಿಹರಿಸಲು ಸಮಯವು ಬೇಕಾಗಿತ್ತು. ದೇವರಿಂದ ಸ್ವತಂತ್ರರಾಗಿ ಮಾನವರು ಸ್ವತಃ ತಾವಾಗಿಯೇ ಯೋಗ್ಯವಾಗಿ ಆಳಶಕ್ತರೋ ಎಂದು ರುಜುಪಡಿಸಲು ಸಮಯ ತೆಗೆದುಕೊಳ್ಳುತ್ತಿತ್ತು. ಮೂವರು ದಂಗೆಕೋರರನ್ನು ಜೀವಿಸಲು ಅನುಮತಿಸಿರುವುದರ ಮೂಲಕ, ಕಷ್ಟದ ಪರಿಸ್ಥಿತಿಗಳ ಕೆಳಗೆ ನಂಬಿಗಸ್ತಿಕೆಯಿಂದ ದೇವರನ್ನು ಸೇವಿಸುವುದರ ಮೂಲಕ ಸೈತಾನನ ವಾದವು ಸುಳ್ಳೆಂದು ರುಜುಪಡಿಸುವುದರಲ್ಲಿ ಪಾಲಿಗರಾಗಲು ಸೃಷ್ಟಿಜೀವಿಗಳಿಗೆ ಯೆಹೋವನು ಸಂಭಾವ್ಯವನ್ನಾಗಿ ಕೂಡ ಮಾಡಿದನು.b
ನಿಷೇಧಿಸಲ್ಪಟ್ಟ ಹಣ್ಣನ್ನು ಅವರು ತಿನ್ನುವುದಾದರೆ ಅವರು ಸಾಯಲಿರುವರು ಎಂದು ಯೆಹೋವನು ಆದಾಮ, ಹವ್ವರಿಗೆ ಸ್ಪಷ್ಟವಾಗಿಗಿ ಹೇಳಿದ್ದನು. ಮತ್ತು ಅವಳು ಸಾಯುವುದಿಲ್ಲವೆಂದು ಸೈತಾನನು ಹವ್ವಳಿಗೆ ಆಶ್ವಾಸನೆಯನ್ನಿತ್ತಿದ್ದರೂ ಕೂಡ, ಅವರು ಸತ್ತದ್ದು ನಿಜ. ಸೈತಾನನು ಕೂಡ ಮರಣದಂಡನೆಯ ತೀರ್ಪಿನ ಕೆಳಗೆ ಇದ್ದಾನೆ; ತನ್ಮಧ್ಯೆ ಮಾನವ ಕುಲವನ್ನು ತಪ್ಪುದಾರಿಗೆಳೆಯುವುದನ್ನು ಅವನು ಮುಂದುವರಿಸುತ್ತಾ ಇದ್ದಾನೆ. ವಾಸ್ತವದಲ್ಲಿ, ಬೈಬಲು ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.”—1 ಯೋಹಾನ 5:19; ಆದಿಕಾಂಡ 2:16, 17; 3:4; 5:5.
ಇತರ ದೇವದೂತರು ದಂಗೆಯೇಳುತ್ತಾರೆ
ಏದೆನಿನ ಘಟನೆಗಳ ಸ್ವಲ್ಪ ಕಾಲದ ನಂತರ, ಯೆಹೋವನ ಸಾರ್ವಭೌಮತೆಯ ವಿರುದ್ಧ ದಂಗೆಯೇಳುವುದರಲ್ಲಿ ಇತರ ದೇವದೂತರು ಕೂಡಿಕೊಂಡರು. ಬೈಬಲು ಹೇಳುವುದು: “ಭೂಮಿಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣುಮಕ್ಕಳು ಹುಟ್ಟಲು ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.” ಇನ್ನೊಂದು ಮಾತಿನಲ್ಲಿ, ಈ ದೇವದೂತರು “ತಮ್ಮ [ಪರಲೋಕದ] ತಕ್ಕಸ್ಥಾನವನ್ನು ಬಿಟ್ಟು” ಭೂಮಿಗೆ ಬಂದು, ಮಾನವ ರೂಪದಲ್ಲಿ ದೇಹಾಂತರಗೊಂಡರು, ಮತ್ತು ಸ್ತ್ರೀಯರೊಂದಿಗೆ ಇಂದ್ರಿಯ ಸುಖಭೋಗಗಳಲ್ಲಿ ಆನಂದಿಸಿದರು.—ಆದಿಕಾಂಡ 6:1, 2; ಯೂದ 6.
ಆದಿಕಾಂಡ 6:4 ರಲ್ಲಿ ದಾಖಲೆಯು ಮುಂದುವರಿಸುವುದು: “ಆ ಕಾಲದಲ್ಲಿ ಅಂದರೆ ದೇವಪುತ್ರರು ಮನುಷ್ಯಪುತ್ರಿಯರನ್ನು ಕೂಡಿ ಅವರಲ್ಲಿ ಮಕ್ಕಳನ್ನು ಪಡೆಯುವ ಕಾಲದಲ್ಲಿ ಮಹಾಶರೀರಿಗಳು ಭೂಮಿಯ ಮೇಲಿದ್ದರು; ಅನಂತರದಲ್ಲಿಯೂ ಇದ್ದರು. ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು ಇವರೇ.” ಸ್ತ್ರೀಯರಿಗೆ ಜನಿಸಲ್ಪಟ್ಟ ಮತ್ತು ದೇವದೂತರುಗಳು ತಂದೆಯಾಗಿರುವ ಈ ಮಿಶ್ರತಳಿಯ ಪುತ್ರರು ಅಸಾಧಾರಣವಾಗಿ ಬಲಶಾಲಿಗಳು, “ಪರಾಕ್ರಮಶಾಲಿಗಳು” ಆಗಿದ್ದರು. ಅವರು ಹಿಂಸಾಚಾರದ ಪುರುಷರು, ಯಾ ನೆಫಿಲಿಮ್ ಆಗಿದ್ದರು, ಈ ಹೀಬ್ರು ಶಬ್ದದ ಅರ್ಥವು “ಇತರರನ್ನು ಬೀಳುವಂತೆ ಕಾರಣವಾಗುವವರು” ಎಂದಾಗಿದೆ.
ಪುರಾತನ ನಾಗರಿಕತೆಯ ಪುರಾಣ ಕಥೆಗಳಲ್ಲಿ ತದನಂತರ ಈ ಘಟನೆಗಳು ವ್ಯಕ್ತವಾಗಿರುವುದನ್ನು ಕಂಡುಕೊಳ್ಳುವುದು ಗಮನಾರ್ಹವಾಗಿದೆ. ಉದಾಹರಣೆಗೆ, 4,000 ವರುಷ ಹಳೆಯ ಬ್ಯಾಬಿಲೋನಿಅನ್ ಪುರಾಣಕಾವ್ಯವು ಪರಾಕ್ರಮಶಾಲಿಯೂ, ಹಿಂಸಾಚಾರಿಯೂ ಆದ ದೇವ-ಮಾನವ ಗಿಲ್ಗಾಮೆಶನ ಅತಿಮಾನವ ಸಾಹಸಕೃತ್ಯಗಳನ್ನು ವರ್ಣಿಸುತ್ತಾ, ಅವನ “ಕಾಮ ತೃಷೆಯ್ಣು ಅವಳ ಪ್ರಿಯಕರನಿಗೆ ಯಾವ ಕನ್ಯೆಯನ್ನೂ [ಬಿಡಲಿಲ್ಲ]” ಎಂದು ಹೇಳುತ್ತದೆ. ಇನ್ನೊಂದು ಉದಾಹರಣೆಯು ಗ್ರೀಕ್ ಪುರಾಣ ಕಥೆಯ ಅತಿಮಾನವ ಹರ್ಕ್ಯುಲೀಜ್ (ಯಾ ಹರಾಕ್ಲಿಸ್) ಆಗಿದ್ದಾನೆ. ಒಬ್ಬ ಮಾನವನಾದ ಅಲ್ಕ್‌ಮೆನೆಗೆ ಹುಟ್ಟಿದ್ದು, ಮತ್ತು ಜ್ಯೂಸ್ ದೇವರಿಂದ ಜನ್ಮಕೊಡಲ್ಪಟ್ಟು, ಹರ್ಕ್ಯುಲೀಜ್ ಹುಚ್ಚುತನದ ಆವೇಶದಲ್ಲಿ ತನ್ನ ಹೆಂಡತಿಯನ್ನು ಮತ್ತು ಮಕ್ಕಳನ್ನು ಕೊಂದಾದ ನಂತರ, ಹಿಂಸಾಚಾರದ ವೀರಕೃತ್ಯಗಳ ಒಂದು ಸರಣಿಯನ್ನು ಗೈಯಲು ಸಿದ್ಧನಾದನು. ಸಂತತಿಯಿಂದ ಸಂತತಿಗೆ ಅಂತಹ ಕಥೆಗಳು ಬಹಳವಾಗಿ ವಿಕೃತಿಗೊಂಡಿದ್ದರೂ, ನೆಫಿಲಿಮ್ ಮತ್ತು ಅವರ ದಂಗೆಕೋರ ದೇವದೂತ ತಂದೆಯಂದಿರ ಕುರಿತಾಗಿ ಬೈಬಲಿನಲ್ಲಿ ಹೇಳಿರುವದರೊಂದಿಗೆ ಅವು ಸಂಬಂಧಿಸುತ್ತವೆ.
ದುಷ್ಟಾತ್ಮಗಳ ಮತ್ತು ಅವರ ಅತಿಮಾನವ ಪುತ್ರರುಗಳ ಪ್ರಭಾವದ ಕಾರಣ, ಭೂಮಿಯು ಎಷ್ಟೊಂದು ಹಿಂಸಾಚಾರದಿಂದ ತುಂಬಿಕೊಂಡಿತು ಅಂದರೆ ಯೆಹೋವನು ಮಹಾ ಜಲಪ್ರಲಯವೊಂದರಿಂದ ಲೋಕವನ್ನು ನಾಶಗೈಯಲು ನಿರ್ಣಯಿಸಿದನು. ನೆಫಿಲಿಮ್ ಎಲ್ಲಾ ಭಕ್ತಿಹೀನ ಮಾನವರೊಂದಿಗೆ ಅಳಿದುಹೋದರು; ಕೇವಲ ಉಳಿದುಕೊಂಡ ಮಾನವರೆಂದರೆ ನೀತಿವಂತನಾದ ನೋಹನೂ, ಅವನ ಕುಟುಂಬವೂ ಮಾತ್ರವೇ.—ಆದಿಕಾಂಡ 6:11; 7:23.
ಆದಾಗ್ಯೂ, ದುಷ್ಟ ದೂತರುಗಳು ಸಾಯಲಿಲ್ಲ. ಬದಲಾಗಿ, ಅವರು ತಮ್ಮ ಮಾನವ ದೇಹಗಳನ್ನು ಅಪಾರ್ಥಿವವಾಗಿ ಮಾಡಿಕೊಂಡರು ಮತ್ತು ಆತ್ಮ ಕ್ಷೇತ್ರಕ್ಕೆ ಹಿಂತೆರಳಿದರು. ಅವರ ಅವಿಧೇಯತೆಯ ಕಾರಣ, ನೀತಿವಂತ ದೇವದೂತರುಗಳ ದೇವರ ಕುಟುಂಬದೊಳಗೆ ಪುನಃ ಅವರು ಸೇರಿಕೊಳ್ಳುವಂತೆ ಅವರಿಗೆ ಬಿಡಲ್ಪಡಲಿಲ್ಲ; ಯಾ ನೋಹನ ದಿನಗಳಲ್ಲಿ ಅವರು ಮಾಡಿದಂತೆ ಪುನಃ ಮಾನವ ಶರೀರಗಳನ್ನು ಧರಿಸಿಕೊಳ್ಳಲು ಅವರಿಗೆ ಅನುಮತಿಸಲೂ ಇಲ್ಲ. ಆದರೂ, ಮಾನವ ಕುಲದ ವ್ಯವಹಾರಗಳ ಮೇಲೆ, “ದೆವ್ವಗಳ ಒಡೆಯನು” ಅದ ಪಿಶಾಚನಾದ ಸೈತಾನನ ಅಧಿಕಾರದ ಕೆಳಗೆ ವಿನಾಶಕಾರಿ ಪ್ರಭಾವವನ್ನು ಬೀರುವುದನ್ನು ಅವರು ಮುಂದುವರಿಸಿದರು.—ಮತ್ತಾಯ 9:34; 2 ಪೇತ್ರ 2:4; ಯೂದ 6.
ಮಾನವಕುಲದ ಶತ್ರುಗಳು
ಸೈತಾನನು ಮತ್ತು ದೆವ್ವಗಳು ಯಾವಾಗಲೂ ಕೊಲೆಗೈಯುವವರು ಮತ್ತು ಕ್ರೂರಿಗಳು ಆಗಿರುತ್ತಾರೆ. ಸೈತಾನನು ಹಲವಾರು ವಿಧಗಳಿಂದ ಯೋಬನ ಜಾನುವಾರುಗಳನ್ನು ಕೊಂಡೊಯ್ದನು ಮತ್ತು ಸೇವಕರಲ್ಲಿ ಅನೇಕರನ್ನು ಹತಿಸಿದನು. ತದನಂತರ, ಅವರಿದ್ದ ಮನೆಯನ್ನು ಧ್ವಂಸಮಾಡಲು “ಬಿರುಗಾಳಿಯು” ಬರುವಂತೆ ಮಾಡಿ, ಯೋಬನ ಹತ್ತು ಮಕ್ಕಳನ್ನು ಹತಿಸಿದನು. ಅದರ ನಂತರ, “ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ಕೆಟ್ಟಕುರುಗಳನ್ನು ಹುಟ್ಟಿಸಿ” ಯೋಬನನ್ನು ಸೈತಾನನು ಬಾಧಿಸಿದನು.—ಯೋಬ 1:7-19; 2:3, 7.
ದೆವ್ವಗಳು ತದ್ರೀತಿಯ ದುಷ್ಟ ಮನೋವೃತ್ತಿಯನ್ನು ತೋರಿಸುತ್ತವೆ. ಯೇಸುವಿನ ದಿನಗಳಲ್ಲಿ, ಜನರ ಮಾತಾಡುವ ಮತ್ತು ನೋಡುವ ಶಕ್ತಿಯನ್ನು ಅವುಗಳು ಕಸಿದುಕೊಂಡಿದ್ದವು. ಒಬ್ಬ ಮನುಷ್ಯನು ಸ್ವತಃ ತನ್ನನ್ನು ಕಲ್ಲುಗಳಿಂದ ಕಡಿದುಕೊಳ್ಳುವಂತೆ ಮಾಡಿದವು. ಅವುಗಳು ಒಬ್ಬ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ “ಬಹಳವಾಗಿ ಒದ್ದಾಡಿಸಿ” ದವು.—ಲೂಕ 9:42; ಮತ್ತಾಯ 9:32, 33; 12:22; ಮಾರ್ಕ 5:5.
ಲೋಕದ ಸುತ್ತಲಿನ ವರದಿಗಳು ತೋರಿಸುವುದೇನಂದರೆ ಸೈತಾನನು ಮತ್ತು ದೆವ್ವಗಳು ಎಂದಿನಂತೆಯೇ ಕೇಡುಕುಮಾಡುತ್ತದಲೇ ಇವೆ. ಕೆಲವು ಜನರನ್ನು ಅವುಗಳು ರೋಗದಿಂದ ಬಾಧಿಸುತ್ತವೆ. ಇತರರನ್ನು ಅವರ ನಿದ್ರೆಗೆಡಿಸುವ ಮೂಲಕ ಯಾ ಭಯಂಕರವಾದ ಕನಸುಗಳನ್ನು ಬೀಳಿಸುವದರ ಮೂಲಕ ಯಾ ಲೈಂಗಿಕವಾಗಿ ದುರಾಕ್ರಮಣಗೈಯುವುದರ ಮೂಲಕ ಅವುಗಳು ಪೀಡಿಸುತ್ತವೆ. ಇನ್ನು ಬೇರೆಯವರನ್ನು ಅವುಗಳು ಹುಚ್ಚುತನಕ್ಕೆ, ಕೊಲೆಗೆ, ಯಾ ಆತ್ಮಹತ್ಯೆಗೆ ನಡಿಸಿವೆ.
ಇನ್ನೆಷ್ಟು ದೀರ್ಘಕಾಲ ಅವರನ್ನು ಸಹಿಸಿಕೊಳ್ಳಲಾಗುವುದು?
ಸೈತಾನ ಮತ್ತು ಅವನ ದೆವ್ವಗಳನ್ನು ಸದಾಕಾಲಕ್ಕೂ ಸಹಿಸಿಕೊಳ್ಳಲಾಗುವುದಿಲ್ಲ. ನಮ್ಮ ದಿನಗಳ ತನಕ ಇರುವಂತೆ ಯೆಹೋವನು ಒಳ್ಳೆಯ ಕಾರಣದೊಂದಿಗೆ ಅವರಿಗೆ ಅನುಮತಿಸಿದನು, ಆದರೆ ಈಗ ಅವುಗಳ ಸಮಯವು ಕೊಂಚವೇ ಆಗಿದೆ. ಈ ಶತಕದ ಆರಂಭದಲ್ಲಿ, ಅವರ ಚಟುವಟಿಕೆಯ ಕ್ಷೇತ್ರವನ್ನು ಸೀಮಿತಗೊಳಿಸಲು ಒಂದು ಪ್ರಧಾನ ಹೆಜ್ಜೆಯನ್ನು ತೆಗೆದುಕೊಳ್ಳಲಾಯಿತು. ಪ್ರಕಟನೆಯ ಪುಸ್ತಕವು ವಿವರಿಸುವುದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ [ಪುನರುತಿಥ್ಥ ಯೇಸು ಕ್ರಿಸ್ತನು] ಅವನ ದೂತರೂ ಘಟಸರ್ಪನ [ಸೈತಾನನ] ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”—ಪ್ರಕಟನೆ 12:7-9.
ಫಲಿತಾಂಶವೇನು? ದಾಖಲೆಯು ಮುಂದುವರಿಸುವುದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ.” ಸೈತಾನನು ಮತ್ತು ಅವನ ದೆವ್ವಗಳು ಇನ್ನು ಮುಂದೆ ಸ್ವರ್ಗದಲ್ಲಿ ಇರುವುದಿಲ್ಲವೆಂಬ ಕಾರಣದಿಂದ ನೀತಿವಂತ ದೇವದೂತರು ಉಲ್ಲಾಸಪಡಶಕ್ತರಾದರು. ಆದರೆ ಭೂಮಿಯ ಮೇಲಿನ ಜನರ ಕುರಿತಾಗಿ ಏನು? “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”—ಪ್ರಕಟನೆ 12:12.
ಅವರ ಕೋಪದಲ್ಲಿ ಸೈತಾನನು ಮತ್ತು ಅವನ ಗುಲಾಮರು ಅವರ ನಿಶ್ಚಿತ ಅಂತ್ಯವು ಬರುವ ಮೊದಲು ಸಾಧ್ಯವಾಗುವಷ್ಟು ವಿಪತ್ತನ್ನುಂಟುಮಾಡುವ ಧ್ಯೇಯದಿಂದಿದ್ದಾರೆ. ಈ ಶತಕದಲ್ಲಿ ಎರಡು ಲೋಕ ಯುದ್ಧಗಳು ಆದವು ಮತ್ತು ಎರಡನೆಯ ಲೋಕ ಯುದ್ಧದ ಅಂತ್ಯದಂದಿನಿಂದ 150 ಕ್ಕಿಂತಲೂ ಹೆಚ್ಚು ಕಡಿಮೆಪ್ರಮಾಣದ ಯುದ್ಧಗಳು ನಡೆದಿವೆ. ನಮ್ಮ ಶಬ್ದಕೋಶದಲ್ಲಿ ಈ ಸಂತತಿಯ ಹಿಂಸಾಚಾರವನ್ನು ಪ್ರತಿಬಿಂಬಿಸುವ ವಾಕ್ಸರಣಿಗಳು ಬಂದಿವೆ: “ವ್ಯಾಧಿವಾಹಕ ಕೀಟಯುದ್ಧ,” “ಸರ್ವನಾಶ,” “ಹತ್ಯೆ ಕ್ಷೇತ್ರಗಳು,” “ಬಲಾತ್ಕಾರ ಸಂಭೋಗ ಶಿಬಿರಗಳು,” “ಕ್ರಮಿಕ ಕೊಲೆಪಾತಕರು,” ಮತ್ತು “ಬಾಂಬು.” ವಾರ್ತೆಗಳು ಅಮಲೌಷಧಗಳ, ಕೊಲೆ, ಬಾಂಬೆಸೆತಗಳ, ಬುದ್ಧಿವಿಕಲ್ಪದ ನರಭಕ್ಷಕತೆಯ, ಕಗ್ಗೊಲೆಗಳ, ಕ್ಷಾಮ, ಮತ್ತು ಚಿತ್ರಹಿಂಸೆಯ ಕಥೆಗಳಿಂದ ಉಬ್ಬಿಕೊಂಡಿವೆ.
ಈ ಸಂಗತಿಗಳು ತಾತ್ಕಾಲಿಕವಾಗಿವೆಂಬುದು ಸುವಾರ್ತೆಯಾಗಿದೆ. ಭವಿಷ್ಯದಲ್ಲಿ ಬೇಗನೇ, ದೇವರು ಪುನಃ ಒಮ್ಮೆ ಸೈತಾನನ ಮತ್ತು ಅವನ ದೆವ್ವಗಳ ವಿರುದ್ಧ ಕಾರ್ಯವೆಸಗುವನು. ದೇವರಿಂದಾದ ದರ್ಶನವೊಂದನ್ನು ವರ್ಣಿಸುತ್ತಾ, ಅಪೊಸ್ತಲ ಯೋಹಾನನು ಹೇಳಿದ್ದು: “ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದುಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರುಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗಬೇಕು.”—ಪ್ರಕಟನೆ 20:1-3.
ಅದಾದನಂತರ, ಪಿಶಾಚನೂ, ಅವನ ದೆವ್ವಗಳೂ “ಸ್ವಲ್ಪಕಾಲ ಬಿಡುಗಡೆಯಾಗ” ಲಿರುವವು, ಮತ್ತು ಅನಂತರ ಅವುಗಳು ಸದಾಕಾಲಕ್ಕೂ ನಾಶಮಾಡಲ್ಪಡುವವು. (ಪ್ರಕಟನೆ 20:3, 10) ಅದು ಎಂತಹ ಅದ್ಭುತಕರ ಸಮಯವಾಗಲಿರುವುದು! ಸೈತಾನನೂ, ಅವನ ದೆವ್ವಗಳೂ ನಿತ್ಯಕ್ಕೂ ಇಲ್ಲದೆ ಹೋದ ನಂತರ, ಯೆಹೋವನು “ಸಮಸ್ತರಲ್ಲಿಯೂ ಸಮಸ್ತವೂ ಆಗುವನು.” ಮತ್ತು ಪ್ರತಿಯೊಬ್ಬರು ನಿಜವಾಗಿಯೂ “ಮಹಾಸೌಖ್ಯದಿಂದ ಆನಂದಿಸುವರು.”—1 ಕೊರಿಂಥ 15:28; ಕೀರ್ತನೆ 37:11.
[ಅಧ್ಯಯನ ಪ್ರಶ್ನೆಗಳು]
a ದೇವರ ಸೇವಕನಾದ ಯೋಬನ ಕುರಿತು ಸೈತಾನನು ಹೀಗಂದಾಗ, ಇದು ಸ್ಫುಟಗೊಳಿಸಲ್ಪಟ್ಟಿತು: “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.”—ಯೋಬ 2:4, 5.
b ದುಷ್ಟತನವನ್ನು ದೇವರು ಯಾಕೆ ಅನುಮತಿಸುತ್ತಾನೆ ಎಂಬುದರ ಸವಿವರವಾದ ಚರ್ಚೆಗಾಗಿ ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೋಡಿರಿ.
[ಪುಟ 7 ರಲ್ಲಿರುವ ಚಿತ್ರ]
ಅಂತಹ ಸಂಗತಿಗಳಿಗೆ ಮನುಷ್ಯನೊಬ್ಬನೇ ಜವಾಬ್ದಾರನೋ, ಯಾ ಒಂದು ಕುಟಿಲ, ಅದೃಶ್ಯ ಶಕ್ತಿಯು ದೋಷದಲ್ಲಿ ಭಾಗಿಯಾಗಿದೆಯೋ?
[ಕೃಪೆ]
ಕುವೈಟಿನಲ್ಲಿ ತೈಲಬಾವಿಗಳು ಉರಿಯುತ್ತಿರುವುದು, 1991: Oil wells burning in Kuwait, 1991: Chamussy/Sipa Press
[ಪುಟ 7 ರಲ್ಲಿರುವ ಚಿತ್ರ]
ಮಾನವ ಕುಲವನ್ನು ಇನ್ನು ಮುಂದೆ ದೆವ್ವಗಳು ಪೀಡಿಸದೆ ಇರುವಾಗ ಅದೆಂತಹ ಅದ್ಭುತಕರ ಸಮಯವಾಗಲಿರುವುದು!