ಮೊದಲಾಗಿ ನಾವು ರಾಜ್ಯವನ್ನು ಹುಡುಕಿದೆವು
ಆಲಿವ್ ಸ್ಪ್ರಿನ್ಗೆಟ್ರಿಂದ ಹೇಳಲ್ಪಟ್ಟಂತೆ
ತಾಯಿ ಆಗತಾನೇ ಮೊಂಬತ್ತಿಯನ್ನು ನಂದಿಸಿ, ನಮ್ಮ ಪ್ರಾರ್ಥನೆಗಳನ್ನು ಆಲಿಸಿದ ನಂತರ ಕೋಣೆಯನ್ನು ಬಿಟ್ಟು ತೆರಳಿದ್ದರು. ನನ್ನ ಕಿರಿಯ ಸಹೋದರನು ನನಗೆ ಕೂಡಲೇ ಕೇಳಿದ್ದು: “ಆಲಿವ್, ಇಟ್ಟಿಗೆಯ ಗೋಡೆಗಳ ಮೂಲಕ ದೇವರು ನಮ್ಮನ್ನು ಹೇಗೆ ನೋಡಶಕ್ತನು ಮತ್ತು ಆಲಿಸಶಕ್ತನು?”
“ತಾಯಿಯನ್ನುತ್ತಾರೆ, ಅವನು ಯಾವುದರ ಮೂಲಕವೂ ನೋಡಶಕ್ತನು,” ಎಂದು ನಾನು ಉತ್ತರಿಸಿದೆ, “ನಮ್ಮ ಹೃದಯಗಳೊಳಗೆ ಕೂಡ.” ತಾಯಿ ದೇವಭೀರು ಹೆಂಗಸಾಗಿದ್ದರು ಮತ್ತು ಹುರುಪಿನ ಬೈಬಲ್ ವಾಚಕರಾಗಿದ್ದರು, ಮತ್ತು ದೇವರಿಗಾಗಿ ಹಾಗೂ ಬೈಬಲಿನ ತತ್ವಗಳಿಗಾಗಿ ಒಂದು ಆಳವಾದ ಗೌರವವನ್ನು ಅವರು ಮಕ್ಕಳಾದ ನಮ್ಮಲ್ಲಿ ತುಂಬಿಸಿದರು.
ನಮ್ಮ ಹೆತ್ತವರು ಇಂಗ್ಲೆಂಡಿನ ಕೆಂಟ್ ಪ್ರಾಂತ್ಯದ ಚಥಮ್ನ ಒಂದು ಚಿಕ್ಕ ಶಹರದಲ್ಲಿನ ಆಂಗ್ಲಿಕನ್ ಚರ್ಚ್ ಸದಸ್ಯರಾಗಿದ್ದರು. ತಾಯಿಯು ಕ್ರಮದ ಚರ್ಚ್ಹೋಕರಾಗಿದ್ದರೂ, ವಾರಕ್ಕೆ ಒಮ್ಮೆ ಚರ್ಚಿನಲ್ಲಿ ಆಸನವನ್ನು ಕೇವಲ ಬೆಚ್ಚಗೆ ಮಾಡುವುದಕ್ಕಿಂತಲೂ ಹೆಚ್ಚಿನದ್ದು ಕ್ರೈಸ್ತನಾಗಿರುವುದರಲ್ಲಿ ಇದೆ ಎಂದು ಅವರು ನಂಬಿದ್ದರು. ದೇವರಿಗೆ ಕೇವಲ ಒಂದು ಸತ್ಯ ಚರ್ಚ್ ಇರತಕ್ಕದ್ದು ಎಂಬ ವಿಷಯದಲ್ಲೂ ಅವರು ನಿಶ್ಚಿತರಾಗಿದ್ದರು.
ಬೈಬಲ್ ಸತ್ಯಕ್ಕಾಗಿ ಗಣ್ಯತೆ
ನಾನು 1918 ರಲ್ಲಿ ಸುಮಾರು ಐದು ವರುಷದವಳಾಗಿದ್ದಾಗ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸ್ಸೆಲ್ರಿಂದ ಬರೆಯಲ್ಪಟ್ಟಿದ್ದ ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ ನಾಮಾಂಕಿತ ಸಂಪುಟಗಳನ್ನು ತಾಯಿ ಪಡೆದುಕೊಂಡರು. ಕೆಲವು ವರ್ಷಗಳಾನಂತರ, ವಿಗ್ಮೊರ್ ಎಂದು ಕರೆಯಲ್ಪಡುವ ಒಂದು ಚಿಕ್ಕ ಸ್ಥಳದಲ್ಲಿ ವಾಸಿಸುತ್ತಿದ್ದಾಗ, ಯೆಹೋವನ ಸಾಕ್ಷಿಗಳು ಆಗ ಪರಿಚಿತರಾಗಿದ್ದ ಬೈಬಲ್ ಸ್ಟೂಡೆಂಟ್ಸ್ರಲ್ಲಿ ಒಬ್ಬರಿಂದ ತಾಯಿಯು ಸಂಪರ್ಕಿಸಲ್ಪಟ್ಟರು. ದ ಹಾರ್ಪ್ ಆಫ್ ಗಾಡ್ ಬೈಬಲ್ ಅಧ್ಯಯನ ಸಹಾಯಕವನ್ನು ಅವರು ಸ್ವೀಕರಿಸಿದರು ಮತ್ತು ಬೈಬಲಿನ ಅವರ ಅನೇಕ ಪ್ರಶ್ನೆಗಳಿಗೆ ಅದರಿಂದ ಅವರು ಉತ್ತರಗಳನ್ನು ಕಂಡುಕೊಳ್ಳಲು ಆರಂಭಿಸಿದರು. ಪ್ರತಿವಾರ ಪ್ರತಿ ಅಧ್ಯಾಯದ ಮೇಲೆ ಮುದ್ರಿತ ಪ್ರಶ್ನೆಗಳಿರುವ ಎಳೆಗೆಂಪು ಬಣ್ಣದ ಕಾರ್ಡೊಂದು ಅಂಚೆಯ ಮೂಲಕ ಬರುತ್ತಿತ್ತು. ಪುಸ್ತಕದಲ್ಲಿ ಉತ್ತರವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂದು ಕೂಡ ಕಾರ್ಡಿನಲ್ಲಿ ತೋರಿಸಲಾಗುತ್ತಿತ್ತು.
ನನ್ನ ಹೆತ್ತವರು, ನನ್ನ ತಂಗಿ ಬೆರಿಲ್, ಮತ್ತು ನಾನು 1926 ರಲ್ಲಿ ಆಂಗ್ಲಿಕನ್ ಚರ್ಚಿಗೆ ಹಾಜರಾಗುವುದನ್ನು ತ್ಯಜಿಸಿದೆವು ಕಾರಣವೇನಂದರೆ ರಾಜಕೀಯದಲ್ಲಿ ಚರ್ಚಿನ ಒಳಗೂಡುವಿಕೆ ಮತ್ತು ಅದರ ಅಸಮಂಜಸವಾದ ಅನೇಕ ಬೋಧನೆಗಳಿಂದ ನಾವು ಜುಗಪ್ಸೆಗೊಂಡಿದ್ದೆವು. ಅಗ್ನಿಯ ನರಕವೊಂದರಲ್ಲಿ ನಿತ್ಯ ನಿರಂತರಕ್ಕೂ ಜನರನ್ನು ದೇವರು ಯಾತನೆಪಡಿಸುತ್ತಾನೆ ಎಂಬುದು ಒಂದು ಪ್ರಧಾನ ಬೋಧನೆಯಾಗಿತ್ತು. ಬೈಬಲ್ ಸತ್ಯವನ್ನು ನಿಜವಾಗಿಯೂ ಹುಡುಕುತ್ತಿದ್ದ ನನ್ನ ತಾಯಿ, ಆಂಗ್ಲಿಕನ್ ಚರ್ಚ್ ನಿಜವಾದ ಒಂದು ಚರ್ಚ್ ಆಗಿಲ್ಲವೆಂದು ಮನಗಂಡರು.
ತದನಂತರ ಸ್ವಲ್ಪವೇ ಸಮಯದಲ್ಲಿ, ತಾಯಿಯ ತೀವ್ರಾಸಕ್ತಿಯ ಪ್ರಾರ್ಥನೆಗಳ ಉತ್ತರವಾಗಿ, ಒಬ್ಬ ಬೈಬಲ್ ಸ್ಟೂಡೆಂಟ್ ಆಗಿದ್ದ ಶ್ರೀಮತಿ ಜ್ಯಾಕ್ಸನ್ ನಮ್ಮನ್ನು ಸಂದರ್ಶಿಸಿದರು. ಸುಮಾರು ಎರಡು ತಾಸುಗಳ ತನಕ, ಬೈಬಲಿನಿಂದ ನಮ್ಮ ಪ್ರಶ್ನೆಗಳಿಗೆ ಉತ್ತರವನ್ನೀಯುತ್ತಾ, ಅವರು ತಾಯಿ ಮತ್ತು ನನ್ನೊಂದಿಗೆ ಮಾತಾಡಿದರು. ಇತರ ಸಂಗತಿಗಳೊಂದಿಗೆ, ನಮ್ಮ ಪ್ರಾರ್ಥನೆಗಳು ಯೇಸು ಕ್ರಿಸ್ತನ ತಂದೆಯಾದ ಯೆಹೋವ ದೇವರಿಗೆ ನಿರ್ದೇಶಿಸತಕ್ಕದ್ದೇ ಹೊರತು ಯಾವುದೋ ರಹಸ್ಯವಾದ ತ್ರಿತ್ವಕ್ಕೆ ಅಲ್ಲವೆಂದು ಕಲಿಯುವುದರಲ್ಲಿ ನಾವು ಆನಂದಪಟ್ಟೆವು. (ಕೀರ್ತನೆ 83:18; ಯೋಹಾನ 20:17) ಆದರೆ ನಾನೆಂದಿಗೂ ಮರೆಯಲಾರದ ಪ್ರಶ್ನೆಯೊಂದನ್ನು ತಾಯಿಯು ಕೇಳಿದ್ದು ಇದಾಗಿದೆ: “ರಾಜ್ಯವನ್ನು ಮೊದಲಾಗಿ ಹುಡುಕುವುದು ಎಂಬುದರ ಅರ್ಥವೇನಾಗಿದೆ?”—ಮತ್ತಾಯ 6:33.
ಆ ಬೈಬಲಾಧಾರಿತ ಉತ್ತರವು ನಮ್ಮ ಜೀವಿತಗಳನ್ನು ಗಾಢವಾಗಿ ತಟ್ಟಿತು. ಅದೇ ವಾರದಿಂದ ಹಿಡಿದು, ಬೈಬಲ್ ಸ್ಟೂಡೆಂಟ್ಸ್ಗಳ ಕೂಟಗಳಿಗೆ ಹಾಜರಾಗಲು ಮತ್ತು ನಾವು ಕಲಿತದ್ದನ್ನು ಇತರರೊಂದಿಗೆ ಪಾಲಿಗರಾಗಲು ನಾವು ಆರಂಭಿಸಿದೆವು. ಸತ್ಯವನ್ನು ನಾವು ಕಂಡುಕೊಂಡಿದ್ದೇವೆ ಎಂಬುದಾಗಿ ನಮಗೆ ಮನವರಿಕೆಯಾಯಿತು. ಕೆಲವು ತಿಂಗಳುಗಳ ನಂತರ, 1927 ರಲ್ಲಿ ಯೆಹೋವನನ್ನು ಸೇವಿಸುವ ತನ್ನ ಸಮರ್ಪಣೆಯ ಸಂಕೇತವಾಗಿ ತಾಯಿ ದೀಕ್ಷಾಸ್ನಾನ ಹೊಂದಿದರು, ಮತ್ತು 1930 ರಲ್ಲಿ ನಾನು ಕೂಡ ದೀಕ್ಷಾಸ್ನಾನ ಪಡೆದೆನು.
ಪಯನೀಯರ್ ಸೇವೆಯಲ್ಲಿ ಸೇರ್ಪಡೆಗೊಳ್ಳುವುದು
ನಮ್ಮ ಕುಟುಂಬವು ಸುಮಾರು 25 ಪ್ರಚಾರಕರಿಂದ ಉಂಟುಮಾಡಲ್ಪಟ್ಟ ಗಿಲ್ಲಿಂಗ್ಹಾಮ್ ಸಭೆಯಲ್ಲಿ ಹಾಜರಾಯಿತು. ಅವರಲ್ಲಿ ಅನೇಕರು ಪಯನೀಯರರೆಂದು ಕರೆಯಲ್ಪಡುವ ಪೂರ್ಣ ಸಮಯದ ಶುಶ್ರೂಷಕರಾಗಿದ್ದರು ಮತ್ತು ಎಲ್ಲರಿಗೂ ಸ್ವರ್ಗೀಯ ನಿರೀಕ್ಷೆ ಇತ್ತು.(ಫಿಲಿಪ್ಪಿ 3:14, 20) ಅವರ ಕ್ರಿಸ್ತೀಯ ಹುರುಪು ಸೋಂಕಿನಂತೆ ಇತ್ತು. ಇನ್ನೂ ಹದಿಹರಯದವಳಾಗಿದ್ದಾಗ್ಯೂ, ನಾನು 1930 ರುಗಳ ಆರಂಭದಲ್ಲಿ ಬೆಲ್ಚಿಯಮ್ನಲ್ಲಿ ಕೊಂಚ ಸಮಯ ಪಯನೀಯರ್ ಸೇವೆ ಮಾಡಿದೆ. ಇದು ನನ್ನಲ್ಲಿ ಅಧಿಕ ರಾಜ್ಯ ಸೇವೆಯ ಆಶೆಯನ್ನು ಹೊತ್ತಿಸಿತು. ಆ ಸಮಯದಲ್ಲಿ ನಾವು ಪ್ರತಿಯೊಬ್ಬ ವೈದಿಕನಿಗೆ ದಿ ಕಿಂಗ್ಡಂ, ದಿ ಹೋಪ್ ಆಫ್ ದಿ ವರ್ಲ್ಡ್ ಪುಸ್ತಿಕೆಯ ಪ್ರತಿಯೊಂದನ್ನು ಹಂಚುವುದರಲ್ಲಿ ಪಾಲಿಗರಾದೆವು.
ಸಮಯಾನಂತರ ನನ್ನ ತಂದೆಯು ನಮ್ಮ ಕ್ರೈಸ್ತ ಚಟುವಟಿಕೆಯನ್ನು ತೀವ್ರವಾಗಿ ವಿರೋಧಿಸಿದರು, ಮತ್ತು ಆಂಶಿಕವಾಗಿ ಇದರ ಕಾರಣ, ನಾನು 1932 ರಲ್ಲಿ ಕಾಲೇಜಿಗೆ ಹೋಗಲು ಲಂಡನಿಗೆ ಹೋದೆನು. ನಂತರ ನಾಲ್ಕು ವರ್ಷಗಳ ತನಕ ನಾನು ಶಾಲೆಯಲ್ಲಿ ಕಲಿಸಿದೆನು ಮತ್ತು ಆ ಸಮಯದಲ್ಲಿ ಬ್ಲ್ಯಾಕ್ಹೆತ್ಕ ಸಭೆಯೊಂದಿಗೆ ಸಹವಾಸಮಾಡಿದೆನು, ಇದು ಆ ಸಮಯದ ಲಂಡನಿನಲ್ಲಿದ್ದ ಕೇವಲ ನಾಲ್ಕು ಸಭೆಗಳಲ್ಲಿ ಒಂದಾಗಿತ್ತು. ಹಿಟ್ಲರನ ಯುದ್ಧ ಪ್ರಯತ್ನಗಳಿಗೆ ಬೆಂಬಲಕೊಡಲು ನಿರಾಕರಿಸಿದ ಕಾರಣ, ಹಿಟ್ಲರನ ಜರ್ಮನಿಯಲ್ಲಿ ನಮ್ಮ ಕ್ರೈಸ್ತ ಸಹೋದರ, ಸಹೋದರಿಯರ ಬಂಧನ ಮತ್ತು ಹಿಂಸೆಯ ವರದಿಗಳನ್ನು ನಾವು ಕೇಳಲಾರಂಭಿಸಿದ್ದು ಆಗಲೇ.
ಇಸವಿ 1938 ರಲ್ಲಿ, ನಾನು ಪಡಕೊಂಡ ಪುಸ್ತಕಗಳ ಸಾಲವನ್ನು ನಾನು ತೀರಿಸಿದ ಆ ತಿಂಗಳಲ್ಲಿಯೇ ಪಯನೀಯರಳಾಗುವ ನನ್ನ ಆಶೆಯನ್ನು ಪೂರೈಸಲು ನನ್ನ ಕೆಲಸವನ್ನು ನಾನು ತೊರೆದೆನು. ಅದೇ ಸಮಯದಲ್ಲಿ ನನ್ನ ತಂಗಿ ಬೆರಿಲ್ ಲಂಡನಿನಲ್ಲಿ ಪಯನೀಯರಿಂಗ್ ಆರಂಭಿಸಿದಳು, ಆದರೆ ಅವಳು ಬೇರೊಂದು ಪಯನೀಯರ್ ಮನೆಯಲ್ಲಿ ವಾಸಿಸಿದ್ದಳು. ನನ್ನ ಪ್ರಥಮ ಪಯನೀಯರ್ ಜೊತೆಗಾರ್ತಿಯು ಮಿಲ್ಡ್ರೆಡ್ ವಿಲೆಟ್ಲ್ ಆಗಿದ್ದಳು, ನಂತರ ಅವಳು ಈಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಜೋನ್ ಬಾರ್ರನ್ನು ಮದುವೆಯಾದಳು. ನಮ್ಮ ಗುಂಪಿನ ಇತರರೊಂದಿಗೆ, ನಾವು ಕ್ಷೇತ್ರದಲ್ಲಿ ಸೈಕಲಿನಲ್ಲಿ ಹೋಗುತ್ತಿದ್ದೆವು ಮತ್ತು ಕೆಲವೊಮ್ಮೆ ಮಳೆ ಇದ್ದಾಗ್ಯೂ, ಇಡೀ ದಿನ ಅಲ್ಲಿಯೇ ಉಳಿಯುತ್ತಿದ್ದೆವು.
ಯೂರೋಪಿನ ಮೇಲೆ ಯುದ್ಧದ ಮೋಡಗಳು ಆವಾಗಲೇ ಸುಳಿದಾಡುತ್ತಿದ್ದವು. ಗ್ಯಾಸ್ ಮುಸುಕು ಕವಾಯತುಗಳು ನಾಗರಿಕರಿಗಾಗಿ ಜರುಗಿಸಲ್ಪಟ್ಟವು ಮತ್ತು ಒಂದು ವೇಳೆ ಯುದ್ಧ ನಡೆದರೆ, ಇಂಗ್ಲಿಷ್ ಗ್ರಾಮ ಪ್ರದೇಶಗಳಿಗೆ ಯಾ ಚಿಕ್ಕ ಶಹರಗಳಿಗೆ ಮಕ್ಕಳನ್ನು ಕಳುಹಿಸಿಬಿಡುವ ಸಿದ್ಧತೆಗಳು ನಡೆಯುತ್ತಿದ್ದವು. ಒಂದು ಜೋಡಿ ಪಾದರಕ್ಷೆಗಳನ್ನು ತೆಗೆದುಕೊಳ್ಳುವಷ್ಟೇ ಹಣ ಉಳಿತಾಯ ಮಾಡಿದ್ದು ನನ್ನ ಹತ್ತಿರವಿತ್ತು, ಮತ್ತು ನನ್ನ ಹೆತ್ತವರಿಂದ ಆರ್ಥಿಕ ಸಹಾಯದ ಸಾಧ್ಯತೆಯೇನೂ ಇರಲಿಲ್ಲ. ಆದರೆ ‘ಮೊದಲು ನೀವು ರಾಜ್ಯಕ್ಕಾಗಿ ಹುಡುಕಿದರೆ ಬೇರೆಲ್ಲಾ ಸಂಗತಿಗಳು ನಿಮಗೆ ದೊರಕುವುವು’ ಎಂದು ಯೇಸುವು ಹೇಳಲಿಲ್ಲವೇ? (ಮತ್ತಾಯ 6:33) ನನ್ನೆಲ್ಲಾ ಆವಶ್ಯಕತೆಗಳನ್ನು ಯೆಹೋವನು ಒದಗಿಸುವನು ಎಂಬ ಪೂರ್ಣ ಭರವಸೆ ನನಗಿತ್ತು, ಮತ್ತು ಇವೆಲ್ಲಾ ವರುಷಗಳಲ್ಲಿ ಅವನು ಅದನ್ನು ವಿಫುಲವಾಗಿ ಮಾಡಿದ್ದಾನೆ. ಯುದ್ಧದ ಸಮಯಾವಧಿಯಲ್ಲಿ, ನನ್ನ ಸ್ವಲ್ಪ ಪಡಿತರ ಆಹಾರದೊಂದಿಗೆ ಸಾಮಾನು ಹೇರಿಕೊಂಡ ಟ್ರಕ್ಕುಗಳು ಹೋದನಂತರ ಮಾರ್ಗದ ಬದಿಯಲ್ಲಿ ಬಿದ್ದಿರುವ ತರಕಾರಿಗಳನ್ನು ಹೆಕ್ಕಿ ಕೆಲವೊಮ್ಮೆ ಪೂರ್ತಿಗೊಳಿಸಿದ್ದುಂಟು. ಮತ್ತು ಹಣ್ಣುಗಳು ಮತ್ತು ತರಕಾರಿಗಳಿಗಾಗಿ ಬೈಬಲ್ ಸಾಹಿತ್ಯವನ್ನು ವಿನಿಮಯ ಮಾಡಿಕೊಳ್ಳುವುದರಿಂದ ನಾನು ಕೆಲವೊಮ್ಮೆ ಆಹಾರವನ್ನು ಸಂಪಾದಿಸಿಕೊಂಡೆನು.
ನನ್ನ ತಂಗಿ ಸೋನಿಯ 1928 ರಲ್ಲಿ ಜನಿಸಿದಳು. ಯೆಹೋವನಿಗೆ ಅವಳ ಜೀವಿತವನ್ನು ಸಮರ್ಪಿಸಿಕೊಂಡಾಗ ಅವಳ ವಯಸ್ಸು ಕೇವಲ ಏಳು ವರುಷಗಳಾಗಿದ್ದವು. ಆ ಚಿಕ್ಕ ವಯಸ್ಸಿನಲ್ಲೂ ಕೂಡ, ಪಯನೀಯರಿಂಗ್ ಅವಳ ಗುರಿಯಾಗಿತ್ತೆಂದು ಸೋನಿಯ ಹೇಳುತ್ತಾಳೆ. ಅವಳ ಸಮರ್ಪಣೆಯನ್ನು ಸಾಂಕೇತಿಕವಾಗಿ ನೀರಿನ ದೀಕ್ಷಾಸ್ನಾನದ ಮೂಲಕ ಮಾಡಿದ ನಂತರ, 1941 ರಲ್ಲಿ ಅವಳನ್ನು ಮತ್ತು ತಾಯಿಯನ್ನು ಸೌತ್ ವೇಲ್ಸ್ನ ಕಾರ್ಫಿಲಿಗ್ಲೆ ಪಯನೀಯರರೋಪಾದಿ ನೇಮಿಸಿದಾಗ ಅವಳ ಧ್ಯೇಯವು ಬಲುಬೇಗನೆ ಪೂರೈಸಲ್ಪಟ್ಟಿತು.
ಯುದ್ಧದ ವರುಷಗಳಲ್ಲಿ ನಮ್ಮ ಶುಶ್ರೂಷೆ
ಸಪ್ಟಂಬರ 1939 ರಲ್ಲಿ ಎರಡನೇ ಲೋಕ ಯುದ್ಧವು ಆರಂಭಗೊಂಡಿತು, ಮತ್ತು ಬ್ರಿಟನ್ನಲ್ಲಿ ನಮ್ಮ ಕ್ರೈಸ್ತ ಸಹೋದರ ಮತ್ತು ಸಹೋದರಿಯರು ನಾಜೀ ಜರ್ಮನಿಯಲ್ಲಿ ಅವರ ಜೊತೆ ವಿಶ್ವಾಸಿಗಳು ಸೆರೆಮನೆಗೆ ಹಾಕಲ್ಪಟ್ಟ ಅದೇ ಕಾರಣಕ್ಕಾಗಿ—ಯುದ್ಧದಲ್ಲಿ ಭಾಗವಹಿಸುವುದರ ಕುರಿತು ಅವರ ತಾಟಸ್ಥ್ಯದ ನಿಲುವು—ಸೆರೆಮನೆಗೆ ಹಾಕಲ್ಪಟ್ಟರು. ಇಂಗ್ಲೆಂಡಿನಲ್ಲಿ ಬಾಂಬ್ ಧಾಳಿಗಳು 1940 ರುಗಳ ಮಧ್ಯಭಾಗದಲ್ಲಿ ಆರಂಭಗೊಂಡವು. ಪ್ರತಿ ರಾತ್ರಿ ತೀವ್ರ ಆಕ್ರಮಣವು ಕರ್ಣಭೇದನವಾಗಿತ್ತು, ಆದರೆ ಯೆಹೋವನ ಸಹಾಯದೊಂದಿಗೆ ನಾವು ಸ್ವಲ್ಪ ನಿದ್ರೆಯನ್ನು ಪಡೆಯಲು ಶಕ್ತರಾದೆವು ಮತ್ತು ಮರುದಿನದ ಸಾರುವ ಕಾರ್ಯಕ್ಕಾಗಿ ಉಲ್ಲಸಿತರಾಗಿರುವಂತೆ ಆಯಿತು.
ಕೆಲವೊಮ್ಮೆ ನಾವು ಸಾರುವ ನಮ್ಮ ಕ್ಷೇತ್ರಕ್ಕೆ ಹೋದಾಗ, ಹೆಚ್ಚಿನ ಮನೆಗಳು ವಿಧ್ವಂಸವಾಗಿರುವುದನ್ನು ಮಾತ್ರ ಕಾಣುತ್ತಿದ್ದೆವು. ನವಂಬರದಲ್ಲಿ ನಮ್ಮಲ್ಲಿ ಹೆಚ್ಚಿನವರು ವಾಸಿಸುತ್ತಿದ್ದ ಮನೆಯಿಂದ ಕೆಲವು ಗಜಗಳಷ್ಟು ದೂರದಲ್ಲಿ ಒಂದು ಬಾಂಬ್ ಬಿದ್ದು, ಕಿಟಕಿಗಳನ್ನೆಲ್ಲಾ ಸಾವಿರಾರು ತುಂಡುಗಳನ್ನಾಗಿ ಮಾಡಿತು. ಮುಂಭಾಗ ಭಾರವಾದ ದ್ವಾರವು ಹಠಾತ್ ಕೆಳಕ್ಕುರುಳಿತು, ಮತ್ತು ಹೊಗೆ-ಕೊಳವೆ ಕುಸಿದುಬಿತ್ತು. ಉಳಿದ ರಾತ್ರಿಯನ್ನು ವಿಮಾನದಾಳಿ ಆಶ್ರಯಸ್ಥಾನದಲ್ಲಿ ಕಳೆದಾದ ನಂತರ, ನಾವು ಪ್ರತ್ಯೇಕಗೊಂಡು ಬೇರೆಬೇರೆ ಸಾಕ್ಷಿಗಳ ಮನೆಗಳಲ್ಲಿ ವಾಸಿಸಲು ಹೋದೆವು.
ಅದಾದ ಕೊಂಚ ಸಮಯದ ನಂತರ, ನನಗೆ ಮಹಾ ಲಂಡನ್ನಲ್ಲಿ ಕ್ರೊಯ್ಡೊನ್ನಿಗೆ ನೇಮಕವು ದೊರಕಿತು. ನನ್ನ ಪಯನೀಯರ್ ಜೊತೆಗಾರ್ತಿ ಆ್ಯನ್ ಪಾರ್ಕಿನ್ ಆಗಿದ್ದು, ಅವಳ ಸಹೋದರ ರೋನ್ ಪಾರ್ಕಿನ್ ನಂತರ ಪ್ಯುರ್ಟೊರಿಕೊದ ಬ್ರಾಂಚ್ ಕೋಆರ್ಡಿನೇಟರ್ ಆದರು. ಅನಂತರ ನಾನು ಸೌತ್ ವೇಲ್ಸ್ನ ಬ್ರಿಡ್ಜ್ಎಂಡ್ಗೆ ಹೋದೆ, ಅಲ್ಲಿ ಕುದುರೆಯಿಂದ ಎಳೆಯಲ್ಪಡುವ ವ್ಯಾನ್ನಲ್ಲಿ ಆರು ತಿಂಗಳು ವಾಸಮಾಡುತ್ತಾ ನನ್ನ ಪಯನೀಯರಿಂಗ್ ಮುಂದುವರಿಸಿದೆನು. ಅಲ್ಲಿಂದ ಪೋರ್ಟ್ ಟಾಲ್ಬೆಟ್ನಲ್ಲಿ, ಹತ್ತಿರವಾಗಿದ್ದ ದೊಡ್ಡ ಸಭೆಗೆ ಆರು ಕಿಲೊಮೀಟರುಗಳನ್ನು ಸೈಕಲ್ ತುಳಿದು ಹೋಗುತ್ತಿದ್ದೆವು.
ಈ ಸಮಯದೊಳಗಾಗಿ ಸಾರ್ವಜನಿಕರು ನಮ್ಮೆಡೆಗೆ ಬಹಳಷ್ಟು ವಿರೋಧಿಸುವವರಾಗಿ, ನಮ್ಮನ್ನು ಕೊಂಚಿಜ್ (ಮನಸ್ಸಾಕ್ಷಿಯ ಆಕ್ಷೇಪಕರು) ಎಂದು ಕರೆಯಲಾರಂಭಿಸಿದರು. ಇದರಿಂದ ನಮಗೆ ವಸತಿ ದೊರಕುವುದು ಕಷ್ಟಕರವಾಯಿತು, ಆದರೆ ಯೆಹೋವನು ವಾಗ್ದಾನವನ್ನಿತ್ತ ಹಾಗೆ ನಮ್ಮ ಆರೈಕೆ ಮಾಡಿದನು.
ತದನಂತರ, ನಾವು ಎಂಟು ಜನರು ವಿಶೇಷ ಪಯನೀಯರರಾಗಿ ಸೌತ್ ವೇಲ್ಸ್ನ ಒಂದು ಬಂದರುಶಹರವಾದ ಸ್ವಾನ್ಸೀಗೆ ನೇಮಿಸಲ್ಪಟ್ಟೆವು. ಯುದ್ಧವು ತೀವ್ರವಾಗುತ್ತಾ ಬಂದಂತೆ, ನಮ್ಮ ವಿರುದ್ಧ ದ್ವೇಷಭಾವವು ಏರುತ್ತಾ ಹೋಯಿತು. ನಮ್ಮ ಪಯನೀಯರ್ ಮನೆಗಳ ಗೋಡೆಯ ಮೇಲೆ “ಇಲಿಗಳು” ಮತ್ತು “ಹೇಡಿಗಳು” ಎಂಬ ನುಡಿಗಳು ಬರೆಯಲ್ಪಟ್ಟವು. ನಮ್ಮ ತಾಟಸ್ಥ್ಯದ ನಿಲುವಿಗಾಗಿ ನಮ್ಮನ್ನು ಖಂಡಿಸಿದ ವಾರ್ತಾಪತ್ರದ ವರದಿಗಳಿಂದ ಈ ವಿರೋಧವು ಬಹಳವಾಗಿ ಕೆರಳಿಸಲ್ಪಟ್ಟಿತು. ಕಾಲಕ್ರಮೇಣ, ಒಬ್ಬರ ನಂತರ ಇನ್ನೊಬ್ಬರು, ನಾವು ಏಳು ಜನರು ಸೆರೆಮನೆಗೆ ಕಳುಹಿಸಲ್ಪಟ್ಟೆವು. ಕಾರ್ಡಿಫ್ನ ಸೆರೆಮನೆಯಲ್ಲಿ ನಾನು 1942 ರಲ್ಲಿ ಒಂದು ತಿಂಗಳು ವ್ಯಯಿಸಿದೆನು, ಮತ್ತು ನಂತರ ನನ್ನ ತಂಗಿ ಬೆರಿಲ್ ಕೂಡ ಅಲ್ಲಿ ಸಮಯ ಕಳೆದಳು. ಲೌಕಿಕವಾಗಿ ನಮ್ಮಲ್ಲಿ ಕೊಂಚವೇ ಇದ್ದರೂ ಮತ್ತು ಅಪಹಾಸ್ಯ ಮತ್ತು ತೆಗಳುವಿಕೆಯನ್ನು ನಾವು ಅನುಭವಿಸಿದರೂ, ಆತ್ಮಿಕವಾಗಿ ನಾವು ಐಶ್ವರ್ಯವಂತರಾಗಿದ್ದೆವು.
ತನ್ಮಧ್ಯೆ, ಕಾರ್ಫಿಲಿಯ್ಲಲ್ಲಿ ತಾಯಿ ಮತ್ತು ಸೋನಿಯ ಪಯನೀಯರಿಂಗ್ ಮಾಡುತ್ತಿದ್ದರು ಮತ್ತು ಅವರಿಗೂ ತದ್ರೀತಿಯ ಅನುಭವಗಳಾದವು. ಸೋನಿಯ ನಡಿಸುತ್ತಿದ್ದ ಮೊದಲ ಬೈಬಲ್ ಅಧ್ಯಯನವು ಒಬ್ಬ ಸ್ತ್ರೀಯೊಂದಿಗೆ, ಅವಳನ್ನು ಶುಕ್ರವಾರ ಸಾಯಂಕಾಲವೊಂದರಲ್ಲಿ ಭೇಟಿ ನೀಡಲು ಅವರು ಏರ್ಪಡಿಸಿದಳ್ದು. ತಾಯಿ ಅವಳೊಂದಿಗೆ ಜೊತೆಯಾಗಿ ಬರುವರೆಂಬ ಭರವಸೆ ಸೋನಿಯಳಿಗೆ ಇತ್ತು, ಆದರೆ ತಾಯಿಯು ವಿವರಿಸಿದ್ದು: “ನನಗೆ ಇನ್ನೊಂದು ಭೇಟಿಏರ್ಪಾಡು ಇದೆ. ನೀನು ಏರ್ಪಾಡು ಮಾಡಿದ್ದೀ, ಆದುದರಿಂದ ನೀನು ಒಬ್ಬಳೇ ಹೋಗಬೇಕಾಗಿದೆ.” ಸೋನಿಯ ಕೇವಲ 13 ಆಗಿದ್ದರೂ ಕೂಡ, ಅವಳೊಬ್ಬಳೇ ಹೋದಳು, ಮತ್ತು ಆ ಸ್ತ್ರೀಯು ಒಳ್ಳೆಯ ಆತ್ಮಿಕ ಪ್ರಗತಿ ಮಾಡಿದಳು ಮತ್ತು ಅನಂತರ ಒಬ್ಬ ಸಮರ್ಪಿತ ಸಾಕ್ಷಿಯಾದಳು.
ಯುದ್ಧಾನಂತರದ ಚಟುವಟಿಕೆ—ಅನಂತರ ಗಿಲ್ಯಾದ್
ಎರಡನೆಯ ಲೋಕ ಯುದ್ಧವು 1945 ರಲ್ಲಿ ಸಮಾಪ್ತಿಗೊಂಡಾಗ, ನಾನು ಡೆರ್ಬಿಶೀರ್ನ ಹಲ್ವೆ ಬ್ರಿಡ್ಜ್ನಲ್ಲಿನ ಒಂಟಿಯಾಗಿರುವ ಕ್ಷೇತ್ರದಲ್ಲಿ ಸೇವೆಮಾಡುತ್ತಿದ್ದೆ. ಗುಂಡುಹಾರಿಸುವಿಕೆಯ ನಿಲುಗಡೆಯು ಘೋಷಿಸಲ್ಪಟ್ಟ ಬೆಳಗಾತ, ಯುದ್ಧದ ಕಾರ್ಯಾಚರಣೆಯಿಂದ—ಅದರ ಅನಾಥರು, ವಿಧವೆಯರು, ಮತ್ತು ಅಂಗಹೀನ ದೇಹಗಳು—ಪೂರ್ಣವಾಗಿ ಬೇಸತ್ತ ಜನರನ್ನು ನಾವು ಭೇಟಿಮಾಡಿ, ಸಂತೈಸಿದೆವು.
ಕೆಲವು ತಿಂಗಳುಗಳ ನಂತರ, ಎಮರಲ್ಡ್ ದ್ವೀಪವಾದ ಐರ್ಲೆಂಡ್ನಲ್ಲಿ ಸಾರಲು ಸ್ವಯಂಸೇವಕರಿಗಾಗಿ ಸೊಸೈಟಿಯು ಕೇಳಿಕೊಂಡಿತು. ಆ ದ್ವೀಪದಲ್ಲಿ ಸುಮಾರು ಕೇವಲ 140 ರಷ್ಟು ಯೆಹೋವನ ಸಾಕ್ಷಿಗಳು ಆ ಸಮಯದಲ್ಲಿ ಇದುದ್ದರಿಂದ, ಅದೊಂದು ಮಿಷನೆರಿ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿತ್ತು. ಕೆಲವು ತಿಂಗಳುಗಳೊಳಗೆ, 40 ರಷ್ಟು ವಿಶೇಷ ಪಯನೀಯರರು ಅಲ್ಲಿ ನೇಮಕಹೊಂದಿದರು, ಮತ್ತು ಅವರಲ್ಲಿ ನಾನು ಒಬ್ಬಳಾಗಿದ್ದೆ.
ಉತ್ತರದ ಕೊಲೆರೈನ್ ಮತ್ತು ಕೂಕ್ಸ್ಟೌನ್ನಲ್ಲಿ ಸ್ವಲ್ಪ ಸಮಯದ ತನಕ ಕಾರ್ಯಗೈದ ನಂತರ, ಇತರ ಮೂವರೊಂದಿಗೆ ನನ್ನನ್ನು ಪೂರ್ವ ಕರಾವಳಿಯ ಡ್ರೊಗೆಡಕ್ಕೆ ನೇಮಿಸಲಾಯಿತು. ಐರಿಷ್ ಜನರು ಸ್ವಭಾವತಃ ಅತಿ ಸ್ನೇಹಪರರು, ಸತ್ಕರಿಸುವವರಾಗಿದ್ದರೂ, ಧಾರ್ಮಿಕ ಪೂರ್ವಾಗ್ರಹವು ಅತಿಯಾಗಿತ್ತು. ಹೀಗೆ, ಇಡೀ ಒಂದು ವರುಷದಲ್ಲಿ ಸಾರ್ವಜನಿಕರೊಂದಿಗೆ ಕೇವಲ ಕೆಲವೇ ಸಾಹಿತ್ಯಗಳನ್ನು ಹಂಚಲು ಶಕ್ತರಾದೆವು (ವಾಸ್ತವದಲ್ಲಿ ಕೇವಲ ಒಂದು ಪುಸ್ತಕ ಮತ್ತು ಕೆಲವು ಪುಸ್ತಿಕೆಗಳು).
ಡ್ರೊಗೆಡದಲ್ಲಿ ನಾವು ವಾಸಿಸಿದ್ದ ಸಮಯದಲ್ಲಿ ಒಂದು ಹೊಲದಿಂದ ಇನ್ನೊಂದಕ್ಕೆ ನಾನು ಸೈಕಲ್ ತುಳಿದು ಹೋಗುತ್ತಿರುವಾಗ, ಒಬ್ಬ ಎಳೇ ಗದ್ದೆ ಕೆಲಸಗಾರನು ಒಮ್ಮಿಂದೊಮ್ಮೆಲೇ ಪೊದೆಗಳಿಂದ ರಸ್ತೆಯ ಮೇಲೆ ಕಾಣಿಸಿಕೊಂಡನು. ಅವನು ರಸ್ತೆಯಲ್ಲಿ ಹಿಂದೆ ಮುಂದೆ ನೋಡಿ, ಅನಂತರ ಮೆಲ್ಲನೇ ಕೇಳಿದ್ದು: “ನೀವು ಯೆಹೋವನ ಸಾಕ್ಷಿಗಳಲ್ಲೊಬ್ಬರೋ?” ನಾನು ಹೌದೆಂದು ಉತ್ತರಿಸಿದಾಗ, ಅವನು ಮುಂದುವರಿಸಿದ್ದು: “ಕಳೆದ ರಾತ್ರಿ ಹುಡುಗಿಯರಾದ ನಿಮ್ಮ ವಿಷಯದಲ್ಲಿ ನನ್ನ ನಿಶಿತ್ಚಾರ್ಥ ವಧುವಿನೊಂದಿಗೆ ಒಂದು ತೀವ್ರವಾದ ವಿವಾದವುಂಟಾಗಿ, ನಮ್ಮ ವಿವಾಹನಿಶ್ಚಯವನ್ನು ಕೊನೆಗೊಳಿಸಿದೆವು. ಕ್ಯಾತೊಲಿಕ್ ಪಾದ್ರಿಗಳು ಮತ್ತು ವಾರ್ತಾಪತ್ರಗಳು ಹೇಳುವಂತೆ, ನೀವು ಕಾಮ್ಯೂನಿಸ್ಟರೆಂದು ಅವಳು ಪಟ್ಟುಹಿಡಿದಳು, ಆದರೆ ನೀವು ಬಹಿರಂಗವಾಗಿ ಮನೆಯಿಂದ ಮನೆಗೆ ಹೋಗುತ್ತಿರುವುದರಿಂದ ಅದು ಸತ್ಯವಾಗಿರಲಿಕ್ಕೆ ಸಾಧ್ಯವಿಲ್ಲವೆಂದು ನಾನು ವಾದಿಸಿದೆನು.”
ನಾನು ಅವನಿಗೆ ಓದಲು ಒಂದು ಪುಸ್ತಿಕೆಯನ್ನು ಕೊಟ್ಟೆನು, ಅವನು ಅದನ್ನು ತನ್ನ ಜೇಬಿನೊಳಗೆ ಅಡಗಿಸಿಟ್ಟನು, ಮತ್ತು ಕತ್ತಲೆಯಾದ ನಂತರ ಪುನಃ ಭೇಟಿಯಾಗಿ ಹೆಚ್ಚು ಮಾತಾಡಲು ನಾವು ಏರ್ಪಡಿಸಿದೆವು, ಯಾಕಂದರೆ ಅವನಂದದ್ದು: “ನಿಮ್ಮೊಂದಿಗೆ ನಾನು ಮಾತಾಡುವುದು ನೋಡಲ್ಪಟ್ಟರೆ, ನನ್ನ ಕೆಲಸವನ್ನು ಕಳೆದುಕೊಳ್ಳುವೆನು.” ಆ ರಾತ್ರಿ ನಮ್ಮಲ್ಲಿ ಇಬ್ಬರು ಅವನನ್ನು ಭೇಟಿಯಾದೆವು ಮತ್ತು ಅವನ ಅನೇಕ ಪ್ರಶ್ನೆಗಳನ್ನು ಉತ್ತರಿಸಿದೆವು. ಇದು ಸತ್ಯವೆಂದು ಅವನಿಗೆ ಮನವರಿಕೆಯಾಯಿತೆಂದು ಭಾಸವಾಗುತ್ತಿತ್ತು, ಮತ್ತು ಹೆಚ್ಚನ್ನು ಕಲಿಯಲು ಇನ್ನೊಂದು ರಾತ್ರಿ ನಮ್ಮ ಮನೆಗೆ ಬರುತ್ತೇನೆ ಎಂದು ಅವನು ವಚನವನ್ನಿತ್ತನು. ಅವನೆಂದೂ ಬರಲಿಲ್ಲ, ಮೊದಲನೆಯ ರಾತ್ರಿ ದಾಟಿಹೋಗುತ್ತಿದ್ದ ಕೆಲವು ಸೈಕಲುಗಾರರಿಂದ ಅವನ ಗುರುತು ಹಿಡಿಯಲ್ಪಟ್ಟಿರಬೇಕು ಮತ್ತು ಪ್ರಾಯಶಃ ಅವನ ಕೆಲಸವನ್ನು ಕಳೆದುಕೊಂಡಿರಬೇಕೆಂದು ನಾವು ಭಾವಿಸಿದೆವು. ಅವನೆಂದಾದರೂ ಸಾಕ್ಷಿಯಾದನೋ ಎಂಬ ಬಗ್ಗೆ ನಾವು ಕೆಲವೊಮ್ಮೆ ಯೋಚಿಸುತ್ತೇವೆ.
ಇಂಗ್ಲೆಂಡಿನ ದಕ್ಷಿಣ ತೀರದ ಬ್ರೈಟನ್ನಲ್ಲಿ 1949ರ ಜಿಲ್ಲಾ ಅಧಿವೇಶನವನ್ನು ಹಾಜರಾದ ನಂತರ, ನಮ್ಮಲ್ಲಿ ಅನೇಕರು ನ್ಯೂ ಯಾರ್ಕ್ ಪ್ರಾಂತ್ಯದಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಆಮಂತ್ರಣಗಳನ್ನು ಪಡೆದೆವು. ಬ್ರಿಟನ್ನಿಂದ 15 ನೆಯ ತರಗತಿಗೆ ಮೊತ್ತವಾಗಿ 26 ಮಂದಿ ಹಾಜರಾದರು, ಇದು ಯಾಂಕೀ ಸ್ಟೇಡಿಯಮ್ನಲ್ಲಾದ ಅಂತಾರಾಷ್ಟ್ರೀಯ ಅಧೀವೇಶನದ ಸಮಯದಲ್ಲಿ, ಜುಲೈ 30, 1950 ರಲ್ಲಿ ಪದವೀಧರತೆ ಪಡೆಯಿತು.
ಬ್ರೆಸೀಲ್ನಲ್ಲಿ ನಮ್ಮ ಶುಶ್ರೂಷೆ
ಮರುವರುಷ ಲೋಕದಲ್ಲಿ ಬಹಳ ವೇಗದಿಂದ ಬೆಳೆಯುತ್ತಿರುವ ನಗರಗಳಲ್ಲೊಂದಾದ ಬ್ರೆಸೀಲ್ನ ಸಾನ್ ಪೌಲೋಗೆ ನನ್ನನ್ನು ನೇಮಿಸಲಾಯಿತು. ಆ ಸಮಯದಲ್ಲಿ ಅಲ್ಲಿ ಯೆಹೋವನ ಸಾಕ್ಷಿಗಳ ಕೇವಲ ಐದು ಸಭೆಗಳು ಇದ್ದವು, ಆದರೆ ಈಗ ಅಲ್ಲಿ 600ಕ್ಕೂ ನಿಕಟವಾಗಿ ಸಭೆಗಳು ಇವೆ! ಐರ್ಲ್ಯಾಂಡಿನಲ್ಲಿ ಸೇವೆ ಮಾಡುವುದಕ್ಕಿಂತ ಎಷ್ಟೊಂದು ವಿಪರ್ಯಸ್ತ! ಸಾನ್ ಪೌಲೋದಲ್ಲಿನ ನಮ್ಮ ಕ್ಷೇತ್ರದ ಹೆಚ್ಚಿನ ಮನೆಗಳು ಕಲಾಸೌಂದರ್ಯಗಳುಳ್ಳ ಮೆತುಕಬ್ಬಿಣದ ಗೇಟುಗಳೊಂದಿಗೆ ಎತ್ತರದ ಕಬ್ಬಿಣದ ಬೇಲಿಯಿಂದ ಆವೃತವಾಗಿದ್ದ ದೊಡ್ಡ ಮಹಡಿಯ ಮನೆಗಳಿದ್ದವು. ನಮ್ಮ ಕೈಗಳಿಂದ ಚಪ್ಪಾಳೆತಟ್ಟುವುದರ ಮೂಲಕ ಮನೆಯ ಧಣಿ ಯಾ ಕೆಲಸದಾಳನ್ನು ನಾವು ಕರೆಯುತ್ತಿದ್ದೆವು.
ವರುಷಗಳು ಗತಿಸಿದಷ್ಟಕ್ಕೆ, ಹೊಸ ನೇಮಕಗಳು ಆದವು. ಸಾನ್ ಪೌಲೋದ ಒಳನಾಡಿನ ಪ್ರಾಂತ್ಯದಲ್ಲಿನ ಅನೇಕ ಸ್ಥಳಗಳಲ್ಲಿ, 1955 ರಲ್ಲಿ ಜೂಂಡಿಯೈನಲ್ಲಿ ಒಂದು, ಮತ್ತು 1958 ರಲ್ಲಿ ಪಿರಸಿಕಬದಲ್ಲಿ ಇನ್ನೊಂದು ಸಹಿತ, ಹೊಸ ಸಭೆಗಳನ್ನು ರೂಪಿಸುವುದರಲ್ಲಿ ಸಹಾಯಕೊಡುವ ಸುಯೋಗವು ನನ್ನದಾಗಿತ್ತು. ತದನಂತರ, 1960 ರಲ್ಲಿ ನನ್ನ ತಂಗಿ ಸೋನಿಯ ನನ್ನ ಮಿಷನೆರಿ ಜೊತೆಗಾರ್ತಿಯಾದಳು, ಮತ್ತು ನಮ್ಮನ್ನು ರಿಯೊ ಗ್ರೆಂಡ್ ಡೊ ಸುಲ್ ಪ್ರಾಂತ್ಯದ ರಾಜಧಾನಿಯಾದ ಆಲೆಗ್ರೆಗೆ ನೇಮಿಸಲಾಯಿತು. ಅವಳು ಬ್ರೇಸಿಲ್ಗೆ ಬಂದದ್ದಾದರೂ ಹೇಗೆ ಎಂದು ನೀವು ಆಶ್ಚರ್ಯಗೊಳ್ಳಬಹುದಲ್ಲವೇ?
ಎರಡನೆಯ ಲೋಕ ಯುದ್ಧದ ನಂತರ ಸೋನಿಯ ಮತ್ತು ತಾಯಿ ಇಂಗ್ಲೆಂಡಿನಲ್ಲಿ ಒಟ್ಟಿಗೆ ಪಯನೀಯರ್ ಸೇವೆ ಮುಂದರಿಸಿದರು. ಆದರೆ 1950 ರುಗಳ ಆರಂಭದಲ್ಲಿ, ತಾಯಿಗೆ ಕ್ಯಾನ್ಸರ್ನ ಶಸ್ತ್ರಚಿಕಿತ್ಸೆಯಾದ ನಂತರ, ಮನೆಯಿಂದ ಮನೆಗೆ ಹೋಗುವುದಕ್ಕೂ ಆಗದಷ್ಟು ನಿತ್ರಾಣರಾದರು, ಆದರೂ ಬೈಬಲ್ ಅಧ್ಯಯನಗಳನ್ನು ನಡಿಸಲು ಮತ್ತು ಪತ್ರ ಬರೆಯುವುದನ್ನು ಅವರು ಮಾಡಲು ಶಕ್ತರಾಗಿದ್ದರು. ಸೋನಿಯ ಅವಳ ಪಯನೀಯರ್ ಸೇವೆ ಮುಂದರಿಸಿದಳು ಮತ್ತು ಅದೇ ಸಮಯದಲ್ಲಿ ತಾಯಿಯ ಆರೈಕೆ ಮಾಡುವುದರಲ್ಲಿ ನೆರವಾದಳು. ಗಿಲ್ಯಡ್ನ 33 ನೆಯ ತರಗತಿಯನ್ನು ಹಾಜರಾಗುವ ಸುಯೋಗವು 1959 ರಲ್ಲಿ ಸೋನಿಯಳಿಗೆ ಸಿಕ್ಕಿತು ಮತ್ತು ಅವಳು ಬ್ರೇಸಿಲ್ಗೆ ನೇಮಿಸಲ್ಪಟ್ಟಳು. ತನ್ಮಧ್ಯೆ, 1962 ರಲ್ಲಿ ತಾಯಿಯು ಸಾಯುವ ತನಕ ಬೆರಿಲ್ ತಾಯಿಯ ಆರೈಕೆ ಮಾಡಿದಳು. ಅಷ್ಟರೊಳಗೆ ಬೆರಿಲ್ ಮದುವೆಯಾಗಿದ್ದಳು ಮತ್ತು ಅವಳು ಮತ್ತು ಅವಳ ಕುಟುಂಬ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಇದ್ದಾರೆ.
ಬ್ರೆಸೀಲ್ನಲ್ಲಿ, ಸಮರ್ಪಣೆ ಮತ್ತು ದೀಕ್ಷಾಸ್ನಾನ ಪಡೆಯಲು ಅನೇಕ ಜನರಿಗೆ ಸೋನಿಯ ಮತ್ತು ನಾನು ನೆರವಾದೆವು. ಆದಾಗ್ಯೂ, ಅನೇಕ ಬ್ರೆಸೀಲಿಯಾನರಿಗೆ ಇದ್ದ ಒಂದು ಸಮಸ್ಯೆಯೆಂದರೆ ಅವರ ಮದುವೆಯನ್ನು ಕಾನೂನುಬದ್ಧವಾಗಿ ಮಾಡುವುದಾಗಿತ್ತು. ಬ್ರೆಸೀಲ್ನಲ್ಲಿ ವಿಚ್ಛೇದ ತೆಗೆದುಕೊಳ್ಳುವುದು ಕಷ್ಟಕರವಾಗಿದ್ದ ಕಾರಣ, ಮದುವೆಯ ಪ್ರಯೋಜನಗಳಿಲ್ಲದೇ ದಂಪತಿಗಳು ಒಟ್ಟಿಗೆ ಜೀವಿಸುವುದೇನೂ ಅಸಾಮಾನ್ಯವಾಗಿರಲಿಲ್ಲ. ಮೊದಲಿನ ಕಾನೂನುಬದ್ಧ ಸಂಗಾತಿಯಿಂದ ಸಂಗಾತಿಗಳಲ್ಲೊಬ್ಬರು ಅಗಲಿರುವ ವಿದ್ಯಮಾನಗಳಲ್ಲಿ ಇದು ವಿಶೇಷವಾಗಿ ಸತ್ಯವಾಗಿರುತ್ತಿತ್ತು.
ಇವಾ ಎಂಬ ಸ್ತ್ರೀಯು, ನಾನವಳನ್ನು ಭೇಟಿಯಾದಾಗ ಅಂತಹ ಸನ್ನಿವೇಶದಲ್ಲಿದ್ದಳು. ಅವಳ ಕಾನೂನುಬದ್ಧ ಸಂಗಾತಿಯು ಕಾಣೆಯಾಗಿದ್ದನು, ಆದುದರಿಂದ ಅವನು ಎಲ್ಲಿರುವನೆಂದು ಕಂಡುಹಿಡಿಯಲು, ರೇಡಿಯೋದಿಂದ ನಾವು ಒಂದು ಪ್ರಕಟನೆಯನ್ನು ಮಾಡಬೇಕಾಯಿತು. ಅವಳು ಯಾರೊಂದಿಗೆ ಜೀವಿಸುತ್ತಾ ಇದ್ದಳೋ ಆ ಅವಿವಾಹಿತ ಪುರುಷನೊಂದಿಗೆ ಅವರ ಐಕ್ಯವನ್ನು ಕಾನೂನುಬದ್ಧವಾಗಿ ಮಾಡಲು ಶಕ್ತವಾಗುವಂತೆ, ಅವಳ ಗಂಡನನ್ನು ಕಂಡುಕೊಂಡಾಗ, ಅವನಿಂದ ಬಿಡುಗಡೆಗೊಳಿಸುವ ದಸ್ತಾವೇಜೊಂದರ ಮೇಲೆ ಅವನ ಸಹಿಯನ್ನು ಪಡೆಯಲು ಇನ್ನೊಂದು ಶಹರಕ್ಕೆ ಅವಳೊಂದಿಗೆ ನಾನು ಹೋದೆನು. ವಿಚಾರಣೆಯ ಮೊದಲು ನ್ಯಾಯಾಧೀಶನ ಮುಂದೆ ಅವಳ ವೈವಾಹಿಕ ಸನ್ನಿವೇಶವನ್ನು ಕ್ರಮಪಡಿಸಲು ಅವಳು ಯಾಕೆ ಬಯಸುತ್ತಾಳೆಂದು ವಿವರಿಸಲು ಇವಾ ಮತ್ತು ನನಗೆ ನ್ಯಾಯಾಧೀಶನು ಕೇಳಿಕೊಂಡನು. ಇದು ಅವನಿಗೆ ವಿವರಿಸಲ್ಪಟ್ಟಾಗ ಆ ನ್ಯಾಯಾಧೀಶನಿಗೆ ಆಶ್ಚರ್ಯ ಮತ್ತು ತೃಪ್ತಿಯೂ ಕೂಡ ಆಯಿತು.
ಇನ್ನೊಂದು ಸಂದರ್ಭದಲ್ಲಿ, ಅವಳ ಮೊಕದ್ದಮೆಯನ್ನು ಏರ್ಪಡಿಸಲು ನನ್ನ ಬೈಬಲ್ ವಿದ್ಯಾರ್ಥಿಗಳಲ್ಲೊಬ್ಬಳನ್ನು ವಕೀಲರ ಬಳಿಗೆ ಕೊಂಡೊಯ್ದೆನು. ಪುನಃ ವಿವಾಹ ಮತ್ತು ದೇವರ ನೈತಿಕ ಮಟ್ಟಗಳ ಕುರಿತು ಒಳ್ಳೆಯ ಸಾಕ್ಷಿಯು ಕೊಡಲ್ಪಟ್ಟಿತು. ಈ ವಿದ್ಯಮಾನದಲ್ಲಿ ವಿಚ್ಛೇದನದ ಬೆಲೆಯು ಎಷ್ಟೊಂದು ಹೆಚ್ಚಾಗಿತ್ತೆಂದರೆ, ಈ ಸಂಭಾವನೆಯನ್ನು ತೆರಲು ಇಬ್ಬರೂ ಕೆಲಸಮಾಡಬೇಕಾಗಿಬಂತು. ಆದರೆ ಈ ಹೊಸ ಬೈಬಲ್ ವಿದ್ಯಾರ್ಥಿಗಳಿಗೆ, ಈ ಪ್ರಯತ್ನವು ತಕ್ಕದ್ದಾಗಿತ್ತು. ಅವರ ಮದುವೆಗೆ ಸೋನಿಯ ಮತ್ತು ನಾನು ಸಾಕ್ಷಿಗಳಾಗಿರುವ ಸುಯೋಗವು ಸಿಕ್ಕಿತು, ಅನಂತರ ಅವರ ಮೂವರು ಹದಿವಯಸ್ಕ ಮಕ್ಕಳೊಂದಿಗೆ ಅವರ ಮನೆಯಲ್ಲಿ ಒಂದು ಚಿಕ್ಕ ಬೈಬಲ್ ಭಾಷಣವನ್ನು ನಾವು ಕೇಳಿದೆವು.
ಒಂದು ವಿಫುಲ, ಪ್ರತಿಫಲದಾಯಕ ಜೀವಿತ
ಸೋನಿಯ ಮತ್ತು ನಾನು ನಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿದಾಗ ಮತ್ತು ಪಯನೀಯರರಾದಾಗ, ಸಾಧ್ಯವಿದ್ದರೆ, ನಮ್ಮ ಜೀವಿತದ ಜೀವನೋದ್ಯೋಗವು ಪೂರ್ಣ ಸಮಯದ ಶುಶ್ರೂಷೆಯಾಗಿರುವದು ಎಂಬುದು ನಮ್ಮ ಹೇತುವಾಗಿತ್ತು. ನಂತರದ ವರುಷಗಳಲ್ಲಿ ಏನು ಸಂಭವಿಸಲಿದೆ ಯಾ ಒಂದು ವೇಳೆ ಅನಾರೋಗ್ಯದಲ್ಲಿ ಬಿದ್ದರೆ ಯಾ ಆರ್ಥಿಕ ಕಷ್ಟಗಳು ಉಂಟಾದರೆ ಏನು ಎಂಬುದಕ್ಕೆ ನಾವೆಂದಿಗೂ ಹೆಚ್ಚು ಯೋಚನೆಯನ್ನು ಮಾಡಲಿಲ್ಲ. ಆದರೂ, ಯೆಹೋವನು ಆಶ್ವಾಸನೆಯನ್ನಿತ್ತಂತೆ, ನಾವೆಂದಿಗೂ ತೊರೆಯಲ್ಪಡಲಿಲ್ಲ.—ಇಬ್ರಿಯ 13:6.
ಓ, ಹೌದು, ಕೆಲವೊಮ್ಮೆ ಹಣದ ಅಡಚಣೆಯು ಒಂದು ಸಮಸ್ಯೆಯಾಗಿತ್ತು. ಒಂದು ಸಮಯ, ನನ್ನ ಜೊತೆಗಾರ್ತಿ ಮತ್ತು ನಾನು ಇಡೀ ವರುಷ ಮಧ್ಯಾಹ್ನದೂಟವಾಗಿ ಒಂದು ಕೊತ್ತುಂಬರಿ ಜಾತಿಯ ಸಸ್ಯದ ಸ್ಯಾಂಡ್ವಿಚ್ಗಳನ್ನು ತಿಂದೆವು, ಆದರೆ ನಾವೆಂದೂ ಹೊಟ್ಟೆಗಿಲ್ಲದಿರಲಿಲ್ಲ, ಇಲ್ಲವೇ ಜೀವನದ ಮೂಲ ಆವಶ್ಯಕತೆಗಳ ಕೊರತೆಯುಳ್ಳವರಾಗಿರಲಿಲ್ಲ.
ವರುಷಗಳು ಗತಿಸಿದಷ್ಟಕ್ಕೆ, ನಮ್ಮ ಶಕ್ತಿಯು ಅದಕ್ಕನುಗುಣವಾಗಿ ಕುಂದುತ್ತಾ ಬಂತು. 1980 ರುಗಳ ಮಧ್ಯಭಾಗದಲ್ಲಿ, ನಮಗಿಬ್ಬರಿಗೂ ಗಂಭೀರವಾದ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗಿಬಂತು, ಇದು ನಮಗೆ ಕಠಿಣ ಶೋಧನೆಯಾಗಿ ಪರಿಣಮಿಸಿತು, ಯಾಕಂದರೆ ನಮ್ಮ ಸಾರುವ ಕೆಲಸವು ಬಹಳಷ್ಟು ಮೊಟಕುಗೊಳಿಸಲ್ಪಟ್ಟಿತು. ಜನವರಿ 1987 ರಲ್ಲಿ ಬ್ರೆಸೀಲ್ನ ಯೆಹೋವನ ಸಾಕ್ಷಿಗಳ ಕೇಂದ್ರಾಲಯ ಶಿಬ್ಬಂದಿಗಳಲ್ಲಿ ಸದಸ್ಯರಾಗುವಂತೆ ನಮ್ಮನ್ನು ಆಮಂತ್ರಿಸಲಾಯಿತು.
ಒಂದು ಸಾವಿರಕ್ಕಿಂತಲೂ ಅಧಿಕ ಶುಶ್ರೂಷಕರ ನಮ್ಮ ದೊಡ್ಡ ಪರಿವಾರವು ಸಾನ್ ಪೌಲೋದಿಂದ ಸುಮಾರು 140 ಕಿಲೊಮೀಟರುಗಳಷ್ಟು ದೂರದಲ್ಲಿದ್ದು, ಸುಂದರವಾದ ಕಟ್ಟಡಗಳ ಸಂಕೀರ್ಣದಲ್ಲಿದೆ, ಇಲ್ಲಿ ಬ್ರೆಸೀಲ್ ಮತ್ತು ದಕ್ಷಿಣ ಅಮೆರಿಕದ ಇತರ ಭಾಗಗಳಿಗಾಗಿ ಬೈಬಲ್ ಸಾಹಿತ್ಯಗಳನ್ನು ನಾವು ಮುದ್ರಿಸುತ್ತೇವೆ. ಇಲ್ಲಿ ದೇವರ ಸಮರ್ಪಣಾಭಕ್ತಿಯ ಸೇವಕರಿಂದ ನಮಗೆ ಪ್ರೀತಿಯ ಪರಾಮರಿಕೆಯು ದೊರಕುತ್ತದೆ. ನಾನು 1951 ರಲ್ಲಿ ಬ್ರೆಸೀಲ್ಗೆ ಮೊದಲಾಗಿ ಬಂದಾಗ. ಅಲ್ಲಿ ರಾಜ್ಯ ಸಂದೇಶದ ಸುಮಾರು 4,000 ಪ್ರಚಾರಕರಿದ್ದರು, ಆದರೆ ಈಗ ಅಲ್ಲಿ 3,66,000 ಕ್ಕಿಂತಲೂ ಹೆಚ್ಚಿನವರು ಇದ್ದಾರೆ! ನಾವು ರಾಜ್ಯವನ್ನು ಮೊದಲಾಗಿ ಹುಡುಕಿದ್ದರ ಕಾರಣ, ನಮ್ಮ ಕನಿಕರದ ಸ್ವರ್ಗೀಯ ತಂದೆಯು ಖಂಡಿತವಾಗಿಯೂ ನಮಗೆ ‘ಇತರ ಸಂಗತಿಗಳನ್ನು’ ಕೂಡಿಸಿದ್ದಾನೆ.—ಮತ್ತಾಯ 6:33.
[ಪುಟ 22 ರಲ್ಲಿರುವ ಚಿತ್ರ]
ಇನ್ಫರ್ಮೇಷನ್ ಹೊರೆಬಂಡಿಯ ಫಕ್ಕದಲ್ಲಿ 1939ರಲ್ಲಿ ಮಿಲ್ಡ್ರೆಡ್ ವಿಲೆಟ್ರೊಂದಿಗೆ ಆಲಿವ್
[ಪುಟ 25 ರಲ್ಲಿರುವ ಚಿತ್ರ]
ಆಲಿವ್ ಮತ್ತು ಸೋನಿಯ ಸ್ಪ್ರಿಂಗೇಟ್