ಯೆಹೋವನ ಸಾಕ್ಷಿಗಳು ಒಂದು ಪಂಥವಾಗಿದ್ದಾರೋ?
ಯೇಸು ಕ್ರಿಸ್ತನು ಒಬ್ಬ ಕುಡುಕನಾಗಿ, ಹೊಟ್ಟೆಬಾಕನಾಗಿ, ಸಬ್ಬತ್ ಭಂಜಕನಾಗಿ, ಸುಳ್ಳು ಸಾಕ್ಷಿಯಾಗಿ, ದೇವ ನಿಂದಕನಾಗಿ ಮತ್ತು ಸೈತಾನನ ದೂತನಾಗಿ ಸುಳ್ಳಾರೋಪ ಹೊರಿಸಲ್ಪಟ್ಟನು. ಅವನು ದೇಶದ್ರೋಹಿಯಾಗಿದ್ದಾನೆಂದೂ ಆರೋಪಿಸಲಾಗಿತ್ತು.—ಮತ್ತಾಯ 9:34; 11:19; 12:24; 26:65; ಯೋಹಾನ 8:13; 9:16; 19:12.
ಯೇಸುವಿನ ಮರಣ ಮತ್ತು ಪುನರುತ್ಥಾನದ ಅನಂತರ, ಅವನ ಶಿಷ್ಯರು ತದ್ರೀತಿಯ ಗಂಭೀರ ದೋಷಾರೋಪಗಳಿಗೆ ಗುರಿಹಲಗೆಯಾಗಿದ್ದರು. ‘ಈ ಮನುಷ್ಯರು ಲೋಕವನ್ನು ಅಲ್ಲಕಲ್ಲೋಲ ಮಾಡಿದರು’ ಎಂದು ಕೂಗಾಡಿದ ಜನರಿಂದ, ಒಂದನೆಯ ಶತಕದ ಕ್ರೈಸ್ತರ ಒಂದು ಗುಂಪು ನಗರದ ಅಧಿಕಾರಿಗಳ ಬಳಿಗೆ ಎಳೆಯಲ್ಪಟ್ಟಿತ್ತು. (ಅ. ಕೃತ್ಯಗಳು 17:6) ಇನ್ನೊಂದು ಸಂದರ್ಭದಲ್ಲಿ, ಅಪೊಸ್ತಲ ಪೌಲ ಮತ್ತು ಅವನ ಸಂಗಡಿಗ ಸೀಲನನ್ನು ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋಗಿ, ಫಿಲಿಪ್ಪಿ ಪಟ್ಟಣವನ್ನು ಬಹಳವಾಗಿ ಗಲಿಬಿಲಿ ಮಾಡುತ್ತಾರೆಂಬ ಆರೋಪವನ್ನು ಹೊರಿಸಿದ್ದರು.—ಅ. ಕೃತ್ಯಗಳು 16:20.
“ಈ ಮನುಷ್ಯನು ಪೀಡೆಯಂತಿದ್ದು ಲೋಕದಲ್ಲಿ ಎಲ್ಲೆಲ್ಲಿಯೂ ಇರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೆಂತಲೂ” ಮತ್ತು “ದೇವಾಲಯವನ್ನು ಹೊಲೆಮಾಡುವದಕ್ಕೆ” ಪ್ರಯತ್ನಿಸುತ್ತಾನೆಂತಲೂ ಪೌಲನ ಮೇಲೆ ತದನಂತರ ಆರೋಪವನ್ನು ಹೊರಿಸಲಾಯಿತು. (ಅ. ಕೃತ್ಯಗಳು 24:5, 6) ರೋಮಿನ ಯೆಹೂದ್ಯರಲ್ಲಿ ಪ್ರಮುಖ ಪುರುಷರು “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಎಂದು ಅಂಗೀಕರಿಸಿದಾಗ, ಅವರು ಯೇಸುವಿನ ಶಿಷ್ಯರ ಪರಿಸ್ಥಿತಿಯನ್ನು ನಿಷ್ಕೃಷ್ಟವಾಗಿ ವಿವರಿಸಿದ್ದರು.—ಅ. ಕೃತ್ಯಗಳು 28:22.
ಪ್ರತ್ಯಕ್ಷವಾಗಿ, ಯೇಸು ಕ್ರಿಸ್ತನಿಂದ ಸ್ಥಾಪಿಸಲ್ಪಟ್ಟ ಈ ಹೊಸ ಗುಂಪು, ಆ ದಿನಗಳಲ್ಲಿ ಯಾವುದು ಸಾಮಾನ್ಯ ಸಾಮಾಜಿಕ ನಡೆವಳಿಯಾಗಿ ಸ್ವೀಕರಿಸಲ್ಪಟ್ಟಿತ್ತೋ ಅದರೊಂದಿಗೆ ಸಂಘರ್ಷಿಸಿದ, ತೀವ್ರಗಾಮಿ ನೋಟಗಳು ಮತ್ತು ಪದ್ಧತಿಗಳುಳ್ಳ ಒಂದು ಧಾರ್ಮಿಕ ಗುಂಪಾಗಿ ಕೆಲವರಿಂದ ಪರಿಗಣಿಸಲ್ಪಟ್ಟಿತ್ತು. ಇಂದು ಅನೇಕರು ಕ್ರೈಸ್ತರನ್ನು ಒಂದು ನಾಶಕಾರಕ ಪಂಗಡವಾಗಿ ಪರಿಗಣಿಸುತ್ತಿದ್ದರೆಂಬದೂ ನಿಸ್ಸಂಶಯ. ದೋಷಾರೋಪಕರು ಹೆಚ್ಚಾಗಿ ಸಮಾಜದ ಪ್ರಮುಖರು ಮತ್ತು ಗೌರವಸ್ಥ ಸದಸ್ಯರಾಗಿದ್ದರು, ಮತ್ತು ಇದು ಆಪಾದನೆಗಳಿಗೆ ಹೆಚ್ಚು ಭಾರವನ್ನು ಸೇರಿಸಿದಂತೆ ತೋರುತ್ತದೆ. ಯೇಸು ಮತ್ತು ಅವನ ಶಿಷ್ಯರ ವಿರುದ್ಧವಾದ ಆರೋಪಗಳನ್ನು ಅನೇಕರು ನಂಬಿದರು. ಆದರೂ, ನಿಮಗೆ ಪ್ರಾಯಶಃ ತಿಳಿದಿರುವಂತೆ, ಈ ಆರೋಪಗಳಲ್ಲಿ ಪ್ರತಿಯೊಂದು ಸುಳ್ಳಾಗಿದ್ದವು! ಜನರು ಈ ವಿಷಯಗಳನ್ನು ಹೇಳಿದ್ದರೆಂಬ ನಿಜತ್ವವು ಅವನ್ನು ಸತ್ಯವನ್ನಾಗಿ ಮಾಡಲಿಲ್ಲ.
ಇಂದಿನ ಕುರಿತೇನು? ಯೆಹೋವನ ಸಾಕ್ಷಿಗಳನ್ನು, ಯಾವುದು ಸಾಮಾನ್ಯ ಸಾಮಾಜಿಕ ನಡೆವಳಿಯಾಗಿ ಸ್ವೀಕರಿಸಲ್ಪಟ್ಟಿದೆಯೇ ಅದನ್ನು ಸಂಘರ್ಷಿಸುವ ತೀವ್ರಗಾಮಿ ನೋಟಗಳು ಮತ್ತು ಪದ್ಧತಿಗಳಿರುವ ಒಂದು ಧಾರ್ಮಿಕ ಗುಂಪಾಗಿ ಸೂಚಿಸುವುದು ನಿಷ್ಕೃಷ್ಟವಾಗಿರುವುದೋ? ಯೆಹೋವನ ಸಾಕ್ಷಿಗಳು ಒಂದು ಪಂಥವಾಗಿದ್ದಾರೋ?
ಪುರಾವೆಯು ತೋರಿಸುವ ವಿಷಯ
ರಷ್ಯದ ಸೆಂಟ್ ಪೀಟರ್ಸ್ಬರ್ಗ್ ಶಹರದ ಒಬ್ಬ ಅಧಿಕಾರಿಯು ವಿವರಿಸಿದ್ದು: “ಯೆಹೋವನ ಸಾಕ್ಷಿಗಳು ನಮಗೆ, ಕತ್ತಲೆಯಲ್ಲಿ ಕೂತುಕೊಳ್ಳುವ ಮತ್ತು ಮಕ್ಕಳನ್ನು ಹತಿಸುವ ಹಾಗೂ ತಮ್ಮನ್ನು ಕೊಂದುಕೊಳ್ಳುವ ಒಂದು ತೆರದ ಭೂಗತ ಪಂಗಡವಾಗಿ ಸಾದರಪಡಿಸಲ್ಪಟ್ಟಿದ್ದರು.” ಆದರೆ, ರಷ್ಯದ ಜನತೆಗೆ ಇತ್ತೀಚೆಗೆ ಸಾಕ್ಷಿಗಳ ನಿಜ ಗುಣಲಕ್ಷಣಗಳ ಉತ್ತಮ ಪರಿಚಯವು ಆಯಿತು. ಒಂದು ಅಂತಾರಾಷ್ಟ್ರೀಯ ಅಧಿವೇಶನದ ಸಂಬಂಧದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಕಾರ್ಯನಡಿಸಿದ ಅನಂತರ, ಅದೇ ಅಧಿಕಾರಿಯು ಅವಲೋಕಿಸಿದ್ದು: “ನಾನೀಗ ನನಗೆ ತಿಳಿದಿರುವ ಅನೇಕ ಜನರಿಗಿಂತಲೂ ಉತ್ತಮರಾದ ಯಥಾಸ್ಥಿತಿಯ, ನಗುಮುಖದ ಜನರನ್ನು ಕಾಣುತ್ತೇನೆ. ಅವರು ಸಮಾಧಾನವುಳ್ಳವರೂ ಪ್ರಶಾಂತರೂ ಆಗಿದ್ದಾರೆ, ಮತ್ತು ಅವರು ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಾರೆ.” ಅವನು ಕೂಡಿಸಿದ್ದು: “ಅವರ ಕುರಿತು ಜನರು ಅಂಥ ಸುಳ್ಳುಗಳನ್ನು ಹೇಳುವುದೇಕೆಂದು ನನಗೆ ನಿಜವಾಗಿಯೂ ತಿಳಿಯುವುದಿಲ್ಲ.”
ಯೆಹೋವನ ಸಾಕ್ಷಿಗಳು ಸಂಸ್ಕಾರಯುಕ್ತ ಕೂಟಗಳನ್ನು ನಡಿಸುವುದಿಲ್ಲ, ಯಾ ಅವರ ಆರಾಧನೆಯು ಗೋಪ್ಯತೆಯಲ್ಲಿ ಮರೆಯಾಗಿರುವುದೂ ಇಲ್ಲ. ಸಾಕ್ಷ್ಯೇತರ ಗ್ರಂಥಕರ್ತೆ, ಜೂಲಿಯ ಮಿಚ್ಚೆಲ್ ಕಾರ್ಬೆಟ್ ಗಮನಿಸುವುದು: “ಸಾಮಾನ್ಯವಾಗಿ ವಾರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ರಾಜ್ಯ ಸಭಾಗೃಹಗಳಲ್ಲಿ (ಅವರ ಕೂಟದ ಸ್ಥಳಗಳು ಚರ್ಚುಗಳೆಂದು ಕರೆಯಲ್ಪಡುವುದಿಲ್ಲ) ಅವರು ಕೂಡಿಬರುವಾಗ, ಅವರ ಹೆಚ್ಚಿನ ಸಮಯವು ಬೈಬಲ್ ಅಧ್ಯಯನ ಮತ್ತು ಚರ್ಚೆಯಲ್ಲಿ ಕಳೆಯಲ್ಪಡುತ್ತದೆ.” ಅವರ ಕೂಟದ ಸ್ಥಳಗಳು “ರಾಜ್ಯ ಸಭಾ ಗೃಹ” ಎಂಬ ಗುರುತು ಹಲಗೆಯಿಂದ ಸ್ಪಷ್ಟವಾಗಿಗಿ ಗುರುತಿಸಲ್ಪಡುತ್ತವೆ. ಕೂಟಗಳು ಬಹಿರಂಗವಾಗಿವೆ, ಮತ್ತು ಸಾಮಾನ್ಯ ಜನತೆಯು ಹಾಜರಾಗಲು ಆಮಂತ್ರಿಸಲ್ಪಡುತ್ತದೆ. ಶ್ರುತಪಡಿಸದ ಅತಿಥಿಗಳೂ ಅತ್ಯಂತ ಸ್ವಾಗತಾರ್ಹರು.
“ಸಾಕ್ಷಿಗಳು ಪ್ರಾಮಾಣಿಕರೂ, ಸಭ್ಯರೂ, ಉದ್ಯೋಗಶೀಲರೂ ಆಗಿರುವ ಕೀರ್ತಿಯನ್ನು ಗಳಿಸಿರುತ್ತಾರೆ” ಎಂದು ಕೂಡಿಸುತ್ತಾಳೆ ಗಾರ್ಬೆಟ್, ತನ್ನ ಅಮೆರಿಕದಲ್ಲಿ ಧರ್ಮ (ರಿಲಿಜನ್ ಇನ್ ಅಮೆರಿಕ) ಪುಸ್ತಕದಲ್ಲಿ. ಯೆಹೋವನ ಸಾಕ್ಷಿಗಳಲ್ಲಿ ಯಾವುದೇ ವಿಚಿತ್ರ ಸ್ವಭಾವ ಯಾ ವಿಲಕ್ಷಣತೆ ಇಲ್ಲ ಎಂಬದಾಗಿ ಸಾಕ್ಷಿಗಳಲ್ಲದ ಅನೇಕರು ಸುಲಭವಾಗಿಯೇ ಒಪ್ಪುತ್ತಾರೆ. ಅವರ ನಡತೆಯು, ಯಾವುದು ಸಾಮಾನ್ಯ ಸಾಮಾಜಿಕ ನಡೆವಳಿಯಾಗಿ ಸ್ವೀಕರಿಸಲ್ಪಟ್ಟಿದೆಯೇ ಅದರೊಂದಿಗೆ ಸಂಘರ್ಷಿಸುವುದಿಲ್ಲ. ಸಾಕ್ಷಿಗಳು “ವೈಯಕ್ತಿಕ ನಡವಳಿಕೆಯಲ್ಲಿ ಉಚ್ಚ ನೈತಿಕ ಮಟ್ಟವನ್ನು ಒತ್ತಾಯಪಡಿಸುತ್ತಾರೆ” ಎಂದು ನಿಷ್ಕೃಷ್ಟವಾಗಿ ಹೇಳುತ್ತದೆ ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ.
ಟೀವೀ ವಾರ್ತಾ ಕಾರ್ಯಕ್ರಮ 60 ಮಿನಿಟ್ಸ್ ಎಂಬದರಲ್ಲಿ ಸಾಕ್ಷಿಗಳ ಕುರಿತು ಕೊಟ್ಟ ಪಕ್ಷಪಾತದ ವರದಿಗೆ ಪ್ರತಿವರ್ತನೆಯಲ್ಲಿ, ಅಮೆರಿಕದ ಒಂದು ಟೆಲಿವಿಷನ್ ಸೇಷ್ಟನ್ನ ವಾರ್ತೆಗಳ ಮತ್ತು ವಿಶೇಷ ಯೋಜನೆಗಳ ನಿರ್ದೇಶಕರು ಯೆಹೋವನ ಸಾಕ್ಷಿಗಳಿಗೆ ಪತ್ರ ಬರೆದರು. ಅವರು ಹೇಳಿದ್ದು: “ಹೆಚ್ಚು ಜನರು ನಿಮ್ಮ ನಂಬಿಕೆಯು ಮಾಡುವ ರೀತಿಯಲ್ಲಿ ಜೀವನವನ್ನು ನಡಿಸಿದಾದ್ದರೆ, ಈ ರಾಷ್ಟ್ರವು ಅದಿರುವಂತಹ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ನಿಮ್ಮ ಸಂಸ್ಥೆಯು ಪ್ರೀತಿಯ ಮೇಲೆ ಮತ್ತು ನಿರ್ಮಾಣಿಕನಲ್ಲಿ ಬಲವಾದ ನಂಬಿಕೆಯ ಮೇಲೆ ಆಧಾರಿಸಿದೆ ಎಂದು ತಿಳಿದಿರುವ ಒಬ್ಬ ವೃತ್ತಕಾರನು ನಾನು. ವೃತ್ತಕಾರರೆಲ್ಲರೂ ಪಕ್ಷಪಾತಿಗಳಾಗಿಲ್ಲವೆಂದು ನೀವು ತಿಳಿಯುವಂತೆ ನಾನು ಬಯಸುತ್ತೇನೆ.”
ಒಂದು ಪ್ರಖ್ಯಾತ ಧರ್ಮ
ಯೆಹೋವನ ಸಾಕ್ಷಿಗಳು ಒಂದು ಅಲ್ಪ ಅತಿರೇಕದ ಧಾರ್ಮಿಕ ಗುಂಪು ಎಂದು ಹೇಳುವುದು ಉಚಿತವಾಗಿದೆಯೋ? ಒಂದು ಅರ್ಥದಲ್ಲಿ, ಕೆಲವು ಧರ್ಮಗಳಿಗೆ ಹೋಲಿಕೆಯಲ್ಲಿ ಯೆಹೋವನ ಸಾಕ್ಷಿಗಳು ಸಂಖ್ಯೆಯಲ್ಲಿ ಕೊಂಚವಾಗಿದ್ದಾರೆ. ಆದರೂ, ಯೇಸು ಏನು ಹೇಳಿದನೆಂಬದನ್ನು ಜ್ಞಾಪಿಸಿಕೊಳ್ಳಿರಿ: “ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.”—ಮತ್ತಾಯ 7:13, 14.
ಹೇಗಿದ್ದರೂ, ಸಾಕ್ಷಿಗಳು ಒಂದು ಅಲ್ಪ ಅತಿರೇಕದ ಪಂಥವಾಗಿರುವುದಕ್ಕಿಂತ ಬಹು ದೂರವಾಗಿದ್ದಾರೆ. ಇಸವಿ 1993ರಲ್ಲಿ, 1 ಕೋಟಿ 10 ಲಕ್ಷಕ್ಕಿಂತಲೂ ಹೆಚ್ಚು ಜನರು ಸಾಕ್ಷಿಗಳ ಕ್ರಿಸ್ತನ ಮರಣದ ಸ್ಮಾರಕಕ್ಕೆ ಹಾಜರಾದರು. ಆದರೆ ಅವರ ಸಂಖ್ಯೆಗಿಂತಲೂ ಹೆಚ್ಚು ಮಹತ್ವವಾದದ್ದು, ಅವರಿಗೆ ಲೋಕವ್ಯಾಪಕವಾಗಿ ಪ್ರಶಂಸೆಯನ್ನು ತಂದಿರುವ ಅವರ ನೈತಿಕ ಗುಣಲಕ್ಷಣ ಮತ್ತು ಆದರ್ಶನೀಯ ನಡೆವಳಿಯೇ. ಒಂದು ಖ್ಯಾತವಾದ, ವಿಶ್ವಾಸಯೋಗ್ಯ ಧರ್ಮವೆಂಬದಾಗಿ ಅಧಿಕೃತ ಮಾನ್ಯತೆಯನ್ನು ಅವರಿಗೆ ಕೊಟ್ಟಿರುವ ದೇಶಗಳಲ್ಲಿ ಇದು ಒಂದು ವಾಸ್ತವಿಕತೆಯಾಗಿದೆ ನಿಸ್ಸಂಶಯ.
ಇದರಲ್ಲಿ ಪ್ರಮುಖವಾಗಿರುವುದು ಮಾನವ ಹಕ್ಕುಗಳ ಯೂರೋಪಿಯನ್ ನ್ಯಾಯಾಲಯದ ಇತ್ತೀಚಿನ ನಿರ್ಣಯವೇ. ಸಾಕ್ಷಿಗಳು ಆಲೋಚನೆ, ಮನಸ್ಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಆನಂದಿಸಬೇಕೆಂದೂ ಮತ್ತು ತಮ್ಮ ನಂಬಿಕೆಯ ಕುರಿತು ಮಾತಾಡುವುದಕ್ಕೆ ಮತ್ತು ಅದನ್ನು ಇತರರಿಗೆ ಕಲಿಸುವುದಕ್ಕೆ ಅವರಿಗೆ ಹಕ್ಕಿದೆಯೆಂದೂ ಅದು ಘೋಷಿಸಿತು. ಯೆಹೋವನ ಸಾಕ್ಷಿಗಳು ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಒಂದು ವೇಳೆ ಮೋಸಕರವಾದ ಮತ್ತು ಅನುಚಿತ ತಂತ್ರಗಳನ್ನು ಉಪಯೋಗಿಸುವುದಕ್ಕೆ ಖ್ಯಾತಿರಾಗಿದ್ದಲ್ಲಿ ಅಥವಾ ಅವರ ಅನುಯಾಯಿಗಳ ಮನಸ್ಸುಗಳನ್ನು ಸ್ವಾಧೀನಪಡಿಸಲು ಜಾಣ್ಮೆಯುಳ್ಳ ವಿಧಾನಗಳನ್ನು ಒಂದುವೇಳೆ ಅವರು ಉಪಯೋಗಿಸಿದಲ್ಲಿ, ಯೂರೋಪಿಯನ್ ಮಂಡಲಿಯು ಅಂಥ ಒಂದು ಘೋಷಣೆಯನ್ನು ಮಾಡುತ್ತಿರಲಿಲ್ಲ.
ಭೂಸುತ್ತಲಿನ ಜನಸಮುದಾಯಗಳು ಯೆಹೋವನ ಸಾಕ್ಷಿಗಳೊಂದಿಗೆ ಚಿರಪರಿಚಿತವಾಗಿರುತ್ತವೆ. ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿರುವ ಅಥವಾ ಅವರೊಂದಿಗೆ ಒಂದಲ್ಲ ಒಂದು ಸಮಯದಲ್ಲಿ ಅಭ್ಯಾಸ ಮಾಡಿರುವ ಲಕ್ಷಾಂತರ ಸಾಕ್ಷ್ಯೇತರರನ್ನು, ನಾವು ಕೇಳುವುದು, ನಿಮ್ಮ ಮಸ್ತಿಷ್ಕ ಪರಿವರ್ತನೆಯ ಯಾವುದೇ ಪ್ರಯತ್ನಗಳು ಇದ್ದವೋ? ನಿಮ್ಮ ಮೇಲೆ ಸಾಕ್ಷಿಗಳು ಮನಸ್ಸು-ಸ್ವಾಧೀನಪಡಿಸುವ ತಂತ್ರಗಳನ್ನು ಬಳಸಿದ್ದರೋ? ನಿಮ್ಮ ಪ್ರಾಮಾಣಿಕ ಉತ್ತರವು “ಇಲ್ಲ” ಎಂದಾಗಿರುವುದು ನಿಸ್ಸಂಶಯ. ಒಂದುವೇಳೆ ಈ ವಿಧಾನಗಳು ಉಪಯೋಗಿಸಲ್ಪಟ್ಟಿದ್ದರೆ, ಯೆಹೋವನ ಸಾಕ್ಷಿಗಳ ಪಕ್ಷದಲ್ಲಿರುವ ಯಾವುದೇ ವಾದಕ್ಕೆ ಪ್ರತಿವಿರುದ್ಧತೆಯಲ್ಲಿ ಬಲಿಪಶುಗಳ ಅತ್ಯಧಿಕ ಸಂಖ್ಯೆಯು ಅಲ್ಲಿರುತ್ತಿತ್ತೆಂಬದು ವ್ಯಕ್ತ.
“ಮಾನವತ್ವದಲ್ಲಿ ತಲ್ಲೀನರಾಗಿರುವುದು”
ಪಂಥ ಸದಸ್ಯರು ಹೆಚ್ಚಾಗಿ ತಮ್ಮನ್ನು ಕುಟುಂಬದಿಂದ, ಸ್ನೇಹಿತರಿಂದ, ಮತ್ತು ಸಾಮಾನ್ಯ ಸಮಾಜದಿಂದಲೂ ಪ್ರತ್ಯೇಕವಾಗಿಡುತ್ತಾರೆ. ಯೆಹೋವನ ಸಾಕ್ಷಿಗಳು ಹಾಗಿದ್ದಾರೋ? “ನಾನು ಯೆಹೋವನ ಸಾಕ್ಷಿಗಳಿಗೆ ಸೇರಿದವನಲ್ಲ,” ಎಂದು ಬರೆದನು ಚೆಕ್ ಪ್ರಜಾಧಿಪತ್ಯದ ಒಬ್ಬ ವೃತ್ತಕಾರನು. ಆದರೂ ಅವನು ಕೂಡಿಸಿದ್ದು: “ಅವರು [ಯೆಹೋವನ ಸಾಕ್ಷಿಗಳು] ಪ್ರಚಂಡವಾದ ನೈತಿಕ ಬಲವನ್ನು ಹೊಂದಿರುತ್ತಾರೆ. . . . ಅವರು ಸರಕಾರಿ ಅಧಿಕಾರಿಗಳನ್ನು ಮಾನ್ಯಮಾಡುತ್ತಾರೆ ಆದರೆ ದೇವರ ರಾಜ್ಯವು ಮಾತ್ರವೇ ಎಲ್ಲಾ ಮಾನವ ಸಮಸ್ಯೆಗಳನ್ನು ಪರಿಹರಿಸಲು ಶಕವ್ತಾಗಿದೆ ಎಂದು ನಂಬುತ್ತಾರೆ. ಆದರೆ ಗಮನಿಸಿರಿ—ಅವರು ಮತಾಂಧರಲ್ಲ. ಅವರು ಮಾನವ ಹಿತಸಾಧನೆಯಲ್ಲಿ ತಲ್ಲೀನರಾಗಿರುವ ಜನರಾಗಿದ್ದಾರೆ.”
ಮತ್ತು ಅವರು ಸಂಬಂಧಿಕರಿಂದ ಮತ್ತು ಇತರರಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡು ಪ್ರತ್ಯೇಕ ನಿಕೇತನಗಳಲ್ಲಿ ನಿವಾಸಿಸುವುದಿಲ್ಲ. ತಮ್ಮ ಕುಟುಂಬಗಳನ್ನು ಪ್ರೀತಿಸಿ, ಪಾಲಿಸುವುದು ತಮ್ಮ ಶಾಸ್ತ್ರೀಯ ಜವಾಬ್ದಾರಿಕೆಯೆಂಬದನ್ನು ಯೆಹೋವನ ಸಾಕ್ಷಿಗಳು ಅಂಗೀಕರಿಸುತ್ತಾರೆ. ಅವರು ಎಲ್ಲಾ ಜಾತಿಗಳ ಮತ್ತು ಧರ್ಮಗಳ ಜನರೊಂದಿಗೆ ಜೀವಿಸುತ್ತಾರೆ ಮತ್ತು ಕೆಲಸಮಾಡುತ್ತಾರೆ. ವಿಪತ್ತುಗಳು ಹೊಡೆಯುವಾಗ, ಪರಿಹಾರ ಸಂಗ್ರಹಗಳೊಂದಿಗೆ ಮತ್ತು ಇತರ ಮಾನವ ಹಿತಸಾಧನೆಯ ಸಹಾಯದೊಂದಿಗೆ ಪ್ರತಿಕ್ರಿಯಿಸಲು ಅವರು ಕ್ಷಿಪ್ರರಾಗಿದ್ದಾರೆ.
ಅಧಿಕ ಮಹತ್ವದ್ದಾಗಿ, ಅವರು ಒಂದು ತುಲನೆಯಿಲ್ಲದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಾರೆ. ಎಷ್ಟು ಧರ್ಮಗಳು ತಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ವ್ಯಕ್ತಿಪರ ಸಂದರ್ಶನಗಳನ್ನು ಕೊಡಲು ಒಂದು ಸಂಸ್ಥಾಪಿತ ವ್ಯವಸ್ಥೆಯನ್ನು ಹೊಂದಿವೆ? ಯೆಹೋವನ ಸಾಕ್ಷಿಗಳು ಇದನ್ನು 200 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಮತ್ತು 200 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ನಡಿಸುತ್ತಾರೆ! ಯೆಹೋವನ ಸಾಕ್ಷಿಗಳು “ಮಾನವತ್ವದಲ್ಲಿ ತಲ್ಲೀನರಾಗಿದ್ದಾರೆ” ಎಂಬದು ಸ್ಫುಟ.
ಬೈಬಲಿಗೆ ಕಟ್ಟುನಿಟ್ಟಿನ ಅವಲಂಬನೆ
ಯೆಹೋವನ ಸಾಕ್ಷಿಗಳ ಬೋಧನೆಗಳು ಚರ್ಚುಗಳಿಂದ ಒದಗಿಸಲ್ಪಡುವುವುಗಳಿಗಿಂತ ಭಿನ್ನವಾಗಿವೆಯೆಂಬದು ಒಪ್ಪತಕ್ಕದ್ದೇ. ಯೆಹೋವನು ಸರ್ವಶಕ್ತ ದೇವರೆಂದೂ ಮತ್ತು ಯೇಸು ಕ್ರಿಸ್ತನು ಅವನ ಕುಮಾರನು, ತ್ರಯೈಕ್ಯ ದೇವರ ಭಾಗವಲ್ಲ ಎಂದೂ ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಸಂತಪಿಸುವ ಮಾನವತ್ವಕ್ಕೆ ದೇವರ ರಾಜ್ಯವೊಂದೇ ಪರಿಹಾರವನ್ನು ತರಬಲ್ಲದೆಂಬ ವಿಶ್ವಾಸದಲ್ಲಿ ಅವರ ನಂಬಿಕೆಯು ದೃಢವಾಗಿ ಬಂಧಕವಾಗಿದೆ. ಈ ಭ್ರಷ್ಟ ವಿಷಯಗಳ ವ್ಯವಸ್ಥೆಯ ಸನ್ನಿಹಿತ ನಾಶನದ ಕುರಿತು ಅವರು ಜನರನ್ನು ಎಚ್ಚರಿಸುತ್ತಾರೆ. ವಿಧೇಯ ಮಾನವರಿಗಾಗಿ ಒಂದು ಭೂಪ್ರಮೋದವನದ ದೇವರ ವಾಗ್ದಾನದ ಕುರಿತು ಅವರು ಸಾರುತ್ತಾರೆ. ಅವರು ಕ್ರೂಜೆಯನ್ನು ಪೂಜಿಸುವುದಿಲ್ಲ. ಅವರು ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದಿಲ್ಲ. ಆತ್ಮವು ಮರ್ತ್ಯವೆಂದೂ ಮತ್ತು ನರಕಾಗ್ನಿಯು ಇಲ್ಲವೆಂದೂ ಅವರು ನಂಬುತ್ತಾರೆ. ಅವರು ರಕ್ತವನ್ನು ತಿನ್ನುವುದೂ ಇಲ್ಲ, ಯಾ ರಕ್ತ ಪೂರಣಗಳನ್ನು ಸ್ವೀಕರಿಸುವುದೂ ಇಲ್ಲ. ರಾಜಕಾರಣಗಳಲ್ಲಿ ಒಳಗೂಡುವಿಕೆಯಿಂದ ಮತ್ತು ಯುದ್ಧಗಳಲ್ಲಿ ಭಾಗವಹಿಸುವುದರಿಂದ ಅವರು ದೂರವಿರುತ್ತಾರೆ. ಯೆಹೋವನ ಸಾಕ್ಷಿಗಳ ಬೋಧನೆಗಳು ಅಷ್ಟು ಭಿನ್ನವಾಗಿರುವುದು ಯಾಕೆ ಎಂದು ನೀವೆಂದಾದರೂ ನಿಮ್ಮನ್ನು ಕೇಳಿಕೊಂಡಿದ್ದೀರೋ?
ಮ್ಯಾಸಕ್ಯೂಸೆಟ್ ವೃತ್ತಪತ್ರವಾದ ದ ಡೈಲಿ ಹ್ಯಾಂಪ್ಫಷಾಯರ್ ಗ್ಯಾಜೆಟ್ ವಿವರಿಸುವುದೇನಂದರೆ ಯೆಹೋವನ ಸಾಕ್ಷಿಗಳ “ಬೈಬಲಿನ ಕಟ್ಟುನಿಟ್ಟಿನ ಅರ್ಥವಿವರಣೆಯು, ಇತರರು ಯುಕ್ತವಾಗಿರುವುದೆಂದು ಊಹಿಸುವ ಅನೇಕ ಚಟುವಟಿಕೆಗಳನ್ನು ನಿಷೇಧಿಸುತ್ತದೆ, . . . ಇವೆಲ್ಲವೂ ಒಂದನೆಯ ಶತಕದ ಕ್ರೈಸ್ತರ ಮಾದರಿಯನ್ನು ಮತ್ತು ಬೈಬಲಿನ ಮಾತನ್ನು ಅನುಸರಿಸುವ ಪ್ರಯತ್ನದಲ್ಲಿಯೇ.” “ಅವರು ನಂಬುವುದೆಲ್ಲವೂ ಬೈಬಲ್ ಮೇಲೆ ಆಧಾರಿತವಾಗಿದೆ. ಸಂಪ್ರದಾಯವನ್ನು ಪೂರ್ಣವಾಗಿ ಕಿತ್ತುಹಾಕುವ ಬೈಬಲಿನ ಅಧಿಕಾರವನ್ನು ಸಂದೇಹಪಡದೆ ಸ್ವೀಕರಿಸುತ್ತಾ, ನಂಬಿಕೆಯ ಬಹುಮಟ್ಟಿಗೆ ಪ್ರತಿಯೊಂದು ಹೇಳಿಕೆಗೆ ಅವರು ‘ಪ್ರಮಾಣ ವಚನ’ (ಪ್ರೂಫ್ ಟೆಕ್ಟ್ಸ್) ಒದಗಿಸುತ್ತಾರೆ” ಎಂಬದಾಗಿ ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ಸ್ ಒಪ್ಪುತ್ತದೆ. ರಿಲಿಜನ್ ಇನ್ ಅಮೆರಿಕ ಪುಸ್ತಕವು ಹೇಳುವುದು: “ಬೈಬಲ್ ಅಧ್ಯಯನದ ಮೇಲಿನ ತನ್ನ ಏಕಾಗ್ರತೆಯಿಂದ ಗುಂಪು ಎಂದಿಗೂ ಕದಲಿರುವುದಿಲ್ಲ, ಮತ್ತು ಅದರ ಬೋಧನೆಗಳು, ಶಾಸ್ತ್ರಗ್ರಂಥಕ್ಕೆ ನಿರ್ದೇಶನೆಗಳ ಒಂದು ವಿಸ್ತಾರ ವ್ಯವಸ್ಥೆಯಿಂದ ಬೆಂಬಲಿಸಲ್ಪಟ್ಟಿರುತ್ತವೆ.”
ಅವರ ನಾಯಕನು ಯಾರು?
ಬೈಬಲ್ ಬೋಧನೆಗಳಿಗೆ ಈ ನಿಕಟವಾದ ಅವಲಂಬನೆಯ ಅದೇ ಕಾರಣದಿಂದಾಗಿ, ಇಂದು ಪಂಥಗಳಲ್ಲಿ ಅಷ್ಟು ವೈಶಿಷ್ಟ್ಯಮಯವಾಗಿರುವ ಮಾನವ ಮುಖಂಡರುಗಳೆಡೆಗಿನ ಪೂಜ್ಯಭಾವವು ಮತ್ತು ದೈವಮೂರ್ತಿಯನ್ನಾಗಿ ಪರಿಗಣಿಸುವಿಕೆಯು ಯೆಹೋವನ ಸಾಕ್ಷಿಗಳಲ್ಲಿ ಕಂಡುಬರುವುದಿಲ್ಲ. ವೈದಿಕ-ಸಭಿಕ ಎಂಬ ಭಿನ್ನತೆಯ ಕಲ್ಪನೆಯನ್ನು ಅವರು ತಿರಸ್ಕರಿಸುತ್ತಾರೆ. ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಯೆಹೋವನ ಸಾಕ್ಷಿಗಳ ಕುರಿತು ಯುಕ್ತವಾಗಿಯೇ ಹೇಳುವುದು: “ವೈದಿಕ ವರ್ಗ ಮತ್ತು ಬೇಧ ತೋರಿಸುವ ಪದವಿಗಳು ನಿಷೇಧಿಸಲ್ಪಟ್ಟಿವೆ.”
ಅವರು ಯೇಸು ಕ್ರಿಸ್ತನನ್ನು ತಮ್ಮ ನಾಯಕನಾಗಿ ಮತ್ತು ಕ್ರೈಸ್ತ ಸಭೆಯ ತಲೆಯಾಗಿ ಅನುಸರಿಸುತ್ತಾರೆ. “ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರೂ ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ. ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು,” ಎಂದು ಹೇಳಿದಾತನು ಯೇಸು ಕ್ರಿಸ್ತನೇ.—ಮತ್ತಾಯ 23:8-12.
ಯೇಸು ಒಬ್ಬ ಹೊಟ್ಟೆಬಾಕನೂ ಕುಡುಕನೂ ಆಗಿರುವುದರಿಂದ ಎಷ್ಟು ದೂರವಿದ್ದನೋ ಅಷ್ಟು ದೂರ ಯೆಹೋವನ ಸಾಕ್ಷಿಗಳು ಒಂದು ಪಂಥವಾಗಿರುವುದರಿಂದ ಇದ್ದಾರೆಂಬದು ಸ್ಫುಟವಾಗಿದೆ. ಯೇಸು ಮತ್ತು ಆತನ ಶಿಷ್ಯರ ಕುರಿತು ಸುಳ್ಳು ವರದಿಗಳಿಂದ ಪ್ರಭಾವಿತರಾದ ಪ್ರತಿಯೊಬ್ಬರು ಆತನನ್ನು ನಿಂದಿಸುವ ಪಾಶದೊಳಗೆ ಬೀಳಲಿಲ್ಲವೆಂಬದು ಅಂಗೀಕೃತ. ಕೆಲವರು ಕೇವಲ ತಪ್ಪಭಿಪ್ರಾಯವನ್ನು ಹೊಂದಿದ್ದಿರಲೂಬಹುದು. ಯೆಹೋವನ ಸಾಕ್ಷಿಗಳ ಕುರಿತು ಮತ್ತು ಅವರ ನಂಬಿಕೆಗಳ ಕುರಿತು ನಿಮಗೆ ಸಂದೇಹಗಳಿದ್ದರೆ, ಅವರನ್ನು ಯಾಕೆ ಚೆನ್ನಾಗಿ ಪರಿಚಯಿಸಿಕೊಳ್ಳಬಾರದು? ಸತ್ಯಾನ್ವೇಷಕರೆಲ್ಲರಿಗೆ ಅವರ ರಾಜ್ಯ ಸಭಾಗೃಹಗಳ ದ್ವಾರಗಳು ವಿಶಾಲವಾಗಿ ತೆರೆದಿರುತ್ತವೆ.
ನಿಷ್ಕೃಷ್ಟ ಬೈಬಲ್ ಜ್ಞಾನಕ್ಕಾಗಿ ಅವರ ಜಾಗ್ರತೆಯ ಅನ್ವೇಷಣೆಯಿಂದ ನೀವೂ ಪ್ರಯೋಜನ ಹೊಂದಬಲ್ಲಿರಿ ಮತ್ತು ಯೇಸುವಿನ ಮಾತುಗಳೊಂದಿಗೆ ಹೊಂದಿಕೆಯಲ್ಲಿ ದೇವರನ್ನು ಆರಾಧಿಸುವುದು ಹೇಗೆಂದು ನೀವೂ ಕಲಿಯಬಲ್ಲಿರಿ: “ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕಹಾಗೆ [ಆತ್ಮ ಮತ್ತು ಸತ್ಯದೊಂದಿಗೆ, NW] ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ. ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ.”—ಯೋಹಾನ 4:23.