ದೇವರ ಸೇವೆಯಲ್ಲಿ ಮನೆಗೀಳನ್ನು ನಿಭಾಯಿಸುವುದು
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾಯ 28:19) ಅನೇಕ ಕ್ರೈಸ್ತರಿಗೆ, ಆ ನಿಯೋಗವನ್ನು ನಿರ್ವಹಿಸುವುದರ ಅರ್ಥವು, ಮನೆಯಿಂದ ದೂರ ಕಠಿನ ಪರಿಸ್ಥಿತಿಗಳನ್ನು ಸ್ವೀಕರಿಸುವುದೇ ಆಗಿದೆ. ಸಂಚರಣ ಮೇಲ್ವಿಚಾರಕರು, ಅವರ ಪತ್ನಿಯರು, ಮತ್ತು ಇತರರು ದೇವರ ಸೇವೆಯ ಸಲುವಾಗಿ ಅನೇಕ ವಿಷಯಗಳ ಪರಿತ್ಯಾಗ ಮಾಡುತ್ತಾರೆ. ಯೆಹೋವನ ಈ ಎಲ್ಲ ಸಾಕ್ಷಿಗಳಿಗೆ ಮನೆಗೀಳು ನಿಜವಾದ ಪಂಥಾಹ್ವಾನವಾಗಿರಬಲ್ಲದು.
ಮನೋಹರವಾದ ಗತಕಾಲದ ಪ್ರೀತಿ ಮತ್ತು ಭದ್ರತೆಯ ಕಡೆಗೆ ನಿಮ್ಮ ಆಲೋಚನೆಗಳನ್ನು ನೆನಪುಗಳು ಕೊಂಡೊಯ್ಯುವಾಗ, ಮನೆಗೀಳು ಸಂಭವಿಸುತ್ತದೆ. ಇದು ಎಂತಹ ತೀಕ್ಷೈವಾದ ಭಾವನೆಯನ್ನುಂಟುಮಾಡಬಲ್ಲದೆಂದರೆ, ನೀವು ಹತಾಶರಾಗುತ್ತೀರಿ ಮತ್ತು ಮುಂದುವರಿಯಲು ಅಶಕ್ತರಾಗುತ್ತೀರಿ. ವಾಸ್ತವದಲ್ಲಿ, ತಮ್ಮ ಸ್ವತ್ತುಗಳನ್ನೆಲ್ಲಾ ಮಾರಿ ವಿದೇಶಕ್ಕೆ ಒಂದು ದುಬಾರಿಯ ಸಂಚಾರವನ್ನು ಮಾಡಿಯಾದ ಬಳಿಕ, ಕೆಲವರು ತಮ್ಮ ಯೋಜನೆಗಳನ್ನು ತೊರೆದು ಮನೆಗೆ ಹಿಂದಿರುಗಿದ್ದಾರೆ. ಮನೆಗೀಳು ಅವರ ಮೇಲೆ ಜಯ ಸಾಧಿಸಿತು.
ಭಾವನೆಗಳ ಮೇಲೆ ಅಂತಹ ಆಕ್ರಮಣಗಳು ಪ್ರಥಮ ಸ್ಥಳಾಂತರದ ಬಳಿಕ ಸಾಮಾನ್ಯವಾಗಿ ಹೆಚ್ಚಾಗಿರುತ್ತವೆ, ಆದರೆ ಕೆಲವರಲ್ಲಿ ಅವು ಜೀವಮಾನವಿಡೀ ಮುಂದುವರಿಯುತ್ತವೆ. ಇಪ್ಪತ್ತಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ದೂರವಿದ್ದ ಅನಂತರ, ಯಾಕೋಬನು ‘ತಂದೆಯ ಮನೆಗೆ ಹೋಗುವದಕ್ಕೆ ಬಹಳ ಆಶೆಪಟ್ಟನು.’ (ಆದಿಕಾಂಡ 31:30) ಮನೆಗೀಳಿನ ಕಷ್ಟಾನುಭವವನ್ನು ಯಾರು ನಿರೀಕ್ಷಿಸಬಲ್ಲರು? ಅದನ್ನು ಯಾವುದು ಆರಂಭಿಸುತ್ತದೆ? ಅಂತಹ ಭಾವನೆಗಳೊಂದಿಗೆ ಒಬ್ಬ ವ್ಯಕ್ತಿಯು ಹೇಗೆ ನಿಭಾಯಿಸಬಲ್ಲನು?
ದುಃಖವನ್ನು ಯಾವುದು ಆರಂಭಿಸುತ್ತದೆ?
ಮನೆಗೀಳು ಯಾರಿಗೂ ತಟ್ಟಬಲ್ಲದು. ಮೇದ್ಯದ ಅರಸನಾದ ಆ್ಯಸಿಯ್ಟಾಗಸ್ನ ಒಬ್ಬ ಮಗಳಾದ ಆಮೀಟಸ್ ಳಿಗೆ, ಸಂತೋಷವಾಗಿರಲು ಸಕಲ ಕಾರಣಗಳೂ ಇದ್ದವು: ಐಶ್ವರ್ಯ, ಪ್ರತಿಷ್ಠೆ, ಸುಂದರವಾದೊಂದು ಮನೆ. ಆದರೂ, ಮೇದ್ಯ ದೇಶದ ಪರ್ವತಗಳಿಗೆ ಅವಳೆಷ್ಟು ಮನೆಗೀಳು ಪಟ್ಟಳೆಂದರೆ, ಅವಳ ಗಂಡನಾದ ರಾಜ ನೆಬೂಕದ್ನೆಚ್ಚರನು ಅವಳನ್ನು ಸಾಂತ್ವನಗೊಳಿಸುವ ಪ್ರಯತ್ನದಲ್ಲಿ ಬ್ಯಾಬಿಲೋನಿನ ತೂಗು ತೋಟವನ್ನು ನಿರ್ಮಿಸಿದನು.
ಜೀವನವು, ವ್ಯಕ್ತಿಯೊಬ್ಬನು ಸ್ಥಳಾಂತರಿಸುವ ಮೊದಲು ಇದ್ದ ಜೀವನಕ್ಕಿಂತ ಹೆಚ್ಚು ಕಠಿನವಾಗಿ ತೋರಿದಾಗ, ಮನೆಗೀಳು ವಿಶೇಷವಾಗಿ ಸಂಕಟಕರವಾಗಿರಬಲ್ಲದು. ಯೂದಾಯದ ಜನರು ಪರದೇಶವಾಸಿಗಳಾದಾಗ, ಅವರು ಪ್ರಲಾಪಿಸಿದ್ದು: “ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕೂತುಕೊಂಡು ಚೀಯೋನನ್ನು ನೆನಸಿ ಅತ್ತೆವು. ನಾವು ಪರದೇಶದಲ್ಲಿ ಯೆಹೋವಗೀತಗಳನ್ನು ಹಾಡುವದು ಹೇಗೆ?”—ಕೀರ್ತನೆ 137:1, 4.
ಮನೆಗೀಳಿನ ಖಿನ್ನತೆಯನ್ನು ಅನೇಕ ವಿಷಯಗಳು ಪ್ರಚೋದಿಸಬಹುದು. ಕೆನಡ ದೇಶವನ್ನು ಬಿಟ್ಟಿದ್ದ ಟೆರಿ, ಹೇಳುವುದು: “ಒಂದು ದಿನ ಪುಸ್ತಕದಿಂದ ಕುಟುಂಬದ ಚಿತ್ರವೊಂದು ಹೊರಬಿತ್ತು. ಅದನ್ನು ನಾನು ಮೇಲೆತ್ತಿಕೊಂಡಾಗ, ಮನೆಗೀಳಿನ ಒಂದು ಪ್ರವಾಹವು ಇದ್ದಕ್ಕಿದ್ದಹಾಗೆ ನನ್ನನ್ನು ಆವರಿಸಿತು, ಮತ್ತು ನಾನು ಅತ್ತೆ.” ಇಂಗ್ಲೆಂಡಿಗಿಂತ ಬಹಳ ದರಿದ್ರವಾಗಿರುವ ದೇಶಕ್ಕೆ ಮನೆಬದಲಾಯಿಸಿದ ಕ್ರಿಸ್, ಒಪ್ಪಿಕೊಳ್ಳುವುದು: “ಕೇವಲ ಒಂದು ಹಳೆಯ ಹಾಡಿನ ರಾಗವನ್ನು ಅಥವಾ ಚಿರಪರಿಚಿತವಾದ ಭಕ್ಷ್ಯವೊಂದರ ಪರಿಮಳವನ್ನು ಗುರುತಿಸುವುದು, ಹಿಂದೆ ಬಿಟ್ಟುಬಂದಿರುವ ವಿಷಯಗಳಿಗಾಗಿ ನಾನು ಹಾತೊರೆಯುವಂತೆ ಮಾಡಬಹುದಿತ್ತು.”—ಹೋಲಿಸಿ ಅರಣ್ಯಕಾಂಡ 11:5.
ನಿಕಟವಾದ ಕುಟುಂಬ ಸಂಬಂಧಗಳು ಅನೇಕ ವೇಳೆ ನೆರವಾಗುವ ಒಂದು ಅಂಶವಾಗಿದೆ. ಪಕ್ಕದ ನಾಡಿನಲ್ಲಿ ಈಗ ಜೀವಿಸುತ್ತಿರುವ ರೊಜಾಲಿ ಎಂಬ ಬ್ರೆಸಿಲ್ ದೇಶವಾಸಿಯು, ಹೇಳುವುದು: “ಮನೆಯಿಂದ ಕೆಟ್ಟ ಸಮಾಚಾರ ಬಂದಾಗ, ಸಹಾಯ ಮಾಡಲಿಕ್ಕಾಗಿ ನಾನಲ್ಲಿರಲು ಸಾಧ್ಯವಿಲ್ಲವೆಂಬ ಅನಿಸಿಕೆಯಿಂದ ನಾನು ಖಿನ್ನಳಾಗುತ್ತೇನೆ. ಕೆಲವೊಮ್ಮೆ ನನಗೆ ಯಾವ ಸಮಾಚಾರವೂ ಸಿಗದಿದ್ದಾಗ ಮತ್ತು ವಿಷಯಗಳನ್ನು ಕಲ್ಪಿಸಿಕೊಳ್ಳಲು ತೊಡಗಿದಾಗ, ಅದು ಇನ್ನೂ ಕೀಳಾದ ಸ್ಥಿತಿಯಾಗಿರುತ್ತದೆ.” ಉತ್ತರ ಅಮೆರಿಕದಿಂದ ಆ್ಯಮಜೋನಿಯನ್ ಉಷ್ಣವಲಯಗಳಲ್ಲಿರುವ ಒಂದು ಸಣ್ಣ ಪಟ್ಟಣಕ್ಕೆ ಜ್ಯಾನಿಸ್ ಮನೆ ಬದಲಾಯಿಸಿದಳು. ಅವಳು ಹೇಳುವುದು: “ಮನೆಯಿಂದ ಸುವಾರ್ತೆಯನ್ನು ನಾನು ಕೇಳಿದಾಗ ನನಗೆ ಮನೆಗೀಳುಂಟಾಗುತ್ತದೆ. ಕುಟುಂಬದವರು ಮತ್ತು ಮಿತ್ರರು ಒಳ್ಳೆಯ ಸಹವಾಸವನ್ನು ಅನುಭವಿಸುತ್ತಿರುವುದರ ಕುರಿತು ನಾನು ಕೇಳುತ್ತೇನೆ, ಮತ್ತು ಅವರೊಂದಿಗೆ ಇರಲು ಬಯಸುತ್ತೇನೆ.”
ಕೇವಲ ಜನರನ್ನು ಬಿಟ್ಟುಬರುವುದು ಮಾತ್ರ ಮನೆಗೀಳನ್ನು ಉಂಟುಮಾಡುವುದಿಲ್ಲ. ಲಿಂಡ ವಿವರಿಸುವುದು: “ಅವಶ್ಯವಿರುವ ವಸ್ತುಗಳನ್ನು ಎಲ್ಲಿ ಕೊಂಡುಕೊಳ್ಳಬೇಕೆಂದು ನನಗೆ ತಿಳಿಯದಾದಾಗ, ನಾನು ಆಶಾಭಂಗ ಪಡುತ್ತಿದ್ದೆ. ನನಗೆ ಬೆಲೆಗಳ ಕುರಿತು ಯಾ ಹೇಗೆ ವಿನಿಮಯ ಮಾಡಬೇಕೆಂಬುದು ತಿಳಿದಿರಲಿಲ್ಲ. ಒಂದು ಕಾರಿನ ಒಡೆತನ ತೀರ ದುಬಾರಿಯಾಗಿತ್ತು, ಮತ್ತು ಕಿಕ್ಕಿರಿದು ತುಂಬಿರುವ ಸಾರ್ವಜನಿಕ ಸಾರಿಗೆಯನ್ನು ಹತ್ತಲು ನಾನು ಹೋರಾಡುತ್ತಿರುವಾಗ, ಯಾವಾಗಲೂ ನೂಕಲ್ಪಡುತ್ತಿದ್ದೆ. ಇದು ಮನೆಗಾಗಿ ಹಾತೊರೆಯುವಂತೆ ಮಾಡಿತು.” ಸಾಂಸ್ಕೃತಿಕ ಮತ್ತು ಆರ್ಥಿಕ ಅಂತರದ ಕುರಿತು ಹೇಳಿಕೆಯನ್ನು ನೀಡುತ್ತಾ, ಜ್ಯಾನೆಟ್ ಹೇಳುವುದು: “ನನ್ನನ್ನು ಕಳವಳಗೊಳಿಸಿದ ಸಂಗತಿಯು ಬಡತನವಾಗಿತ್ತು. ಜನರು ರೊಟ್ಟಿಗಾಗಿ ಭಿಕ್ಷೆ ಬೇಡುವುದನ್ನು, ಅಥವಾ ದೊಡ್ಡ ಕುಟುಂಬಗಳು ಒಂದೇ ಕೋಣೆಯಲ್ಲಿ ನೀರಿನ ವ್ಯವಸ್ಥೆಯಿಲ್ಲದೆ ಜೀವಿಸುವುದನ್ನು ನಾನೆಂದೂ ಕಂಡಿರಲಿಲ್ಲ. . . . ಇಂತಹ ವಿಷಯಗಳು ನನ್ನನ್ನು ಎಷ್ಟರ ಮಟ್ಟಿಗೆ ಕಳವಳಗೊಳಿಸಿದವು ಎಂದರೆ, ಇನ್ನು ಮುಂದೆ ಅಲ್ಲಿರುವುದು ನನಗೆ ಸಾಧ್ಯವಿಲ್ಲವೆಂದು ಅನಿಸಿತು.”
ನಿಮ್ಮ ಅನಿಸಿಕೆಗಳನ್ನು ನಿಭಾಯಿಸುವುದು
ನಾವು ಪ್ರೀತಿಸುವ ಜನರಿಗಾಗಿ ಅಥವಾ ನಮ್ಮ ಬೆಳೆವಣಿಗೆಯ ವರ್ಷಗಳ ಚಿರಪರಿಚಿತ ಪರಿಸರಕ್ಕಾಗಿ ಬಲವಾದ ಭಾವನಾತ್ಮಕ ಅನಿಸಿಕೆಗಳನ್ನು ಪಡೆದಿರುವುದರ ಕುರಿತು ನಾವು ಸಂಕೋಚ ಪಡಬಾರದು. ನಾವು ಆದರದ ವೈಯಕ್ತಿಕ ಸಂಬಂಧಗಳನ್ನು ಅನುಭವಿಸಸಾಧ್ಯವಿರುವಂತೆ, ಯೆಹೋವ ದೇವರು ನಮಗೆ ಭಾವೋದ್ರೇಕಗಳನ್ನು ಕೊಟ್ಟನು. ಎಫೆಸದಲ್ಲಿದ್ದ ಸಭೆಯ ಕ್ರೈಸ್ತ ಮೇಲ್ವಿಚಾರಕರು ಭಾವನಾತ್ಮಕವಾಗಿ ಪ್ರೌಢ ಪುರುಷರಾಗಿದ್ದರು. ಆದರೆ ಅವರೊಂದಿಗೆ ಅಪೊಸ್ತಲ ಪೌಲನ ಸಂದರ್ಶನವು ಕೊನೆಗೊಂಡಾಗ ಏನು ಸಂಭವಿಸಿತು? ಯಾಕೆ, “ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು”! (ಅ. ಕೃತ್ಯಗಳು 20:37) ಆ ಘಟನೆಯು ಮನೆಗೀಳನ್ನು ಒಳಗೊಂಡಿರಲಿಲ್ಲ, ನಿಜ. ಆದರೂ, ಅದರ ಕುರಿತು ಯೋಚಿಸುವಂತೆ ಅದು ನಮ್ಮನ್ನು ಪ್ರಚೋದಿಸುತ್ತದೆ. ಭಾವಗಳಿರುವುದು ಸಾಮಾನ್ಯವಾಗಿದೆ, ಆದರೆ ಅವು ನಮ್ಮನ್ನು ನಿಯಂತ್ರಿಸುವಂತೆ ನಾವು ಬಿಡಬಾರದು. ಹಾಗಿದ್ದರೆ, ಮನೆಗೀಳಿನೊಂದಿಗೆ ನೀವು ಹೇಗೆ ಯಶಸ್ವಿಯಾಗಿ ನಿಭಾಯಿಸಬಲ್ಲಿರಿ?
ನೆಲೆಗೊಂಡಿರುವ ಅನಿಸಿಕೆಯನ್ನು ಪಡೆಯಲು, ಸ್ಥಳೀಯ ಭಾಷೆಯನ್ನು ಮಾತಾಡಲು ಕಲಿಯುವುದು ಒಂದು ಕೀಲಿಕೈಯಾಗಿದೆ. ವಿದೇಶೀ ಭಾಷೆಯೊಂದಿಗೆ ನೀವು ನಿರ್ವಹಿಸಬೇಕಾಗಿರುವುದರಿಂದ ಸಂಸರ್ಗವು ಪ್ರತಿಬಂಧಿಸಲ್ಪಟ್ಟಾಗ, ಮನೆಗೀಳಿನ ಅನಿಸಿಕೆಗಳು ಪ್ರಬಲಗೊಳಿಸಲ್ಪಡಬಹುದು. ಆದುದರಿಂದ ಸಾಧ್ಯವಾದರೆ, ಆ ಪ್ರದೇಶಕ್ಕೆ ನೀವು ಸ್ಥಳಾಂತರಿಸುವ ಮೊದಲು ಅಲ್ಲಿಯ ಭಾಷೆಯನ್ನು ಓದಲು ಮತ್ತು ಮಾತಾಡಲು ಕಲಿಯಿರಿ. ಅಥವಾ, ನೀವು ತಲಪಿದ ಬಳಿಕ ಪ್ರಥಮ ಕೆಲವು ವಾರಗಳ ಕಾಲ ಭಾಷಾ ಅಧ್ಯಯನದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ. ನಿಮಗೆ ಅತಿ ಬಲವಾದ ಪ್ರಚೋದನೆಯು ಮತ್ತು ಹೀಗೆ ಭಾಷೆಯನ್ನು ಕಲಿಯುವ ಅತ್ಯುತ್ತಮ ಪ್ರತೀಕ್ಷೆಯಿರುವ ಸಮಯವು ಅದಾಗಿದೆ. ಈ ವಾರಗಳನ್ನು ನೀವು ಪ್ರಾಮುಖ್ಯವಾಗಿ ಭಾಷಾ ಅಧ್ಯಯನಕ್ಕೆ ಸಮರ್ಪಿಸುವುದಾದರೆ, ಬೇಗನೆ ಸಂಭಾಷಣೆಗಳಲ್ಲಿ ಆನಂದಿಸುವಿರಿ, ಮತ್ತು ಇದು ಮನೆಗೀಳಿನ ಅನಿಸಿಕೆಗಳನ್ನು ತಗ್ಗಿಸಲು ಸಹಾಯ ಮಾಡಬಲ್ಲದು.
ಸಾಧ್ಯವಾದಷ್ಟು ಬೇಗನೆ ಹೊಸ ಮಿತ್ರರನ್ನು ಗಳಿಸಿರಿ ಯಾಕೆಂದರೆ, ಇದು ಹಾಯಾಗಿರುವಂತೆ ನಿಮಗೆ ಸಹಾಯ ಮಾಡುವುದು. ನಿಜವಾದ ಮಿತ್ರರನ್ನು ಗಳಿಸಲು ಯೆಹೋವನ ಸಾಕ್ಷಿಗಳ ಸಭೆಯು ಅತ್ಯುತ್ತಮವಾದ ಸ್ಥಳವಾಗಿದೆ. ಆರಂಭಿಕ ಹೆಜ್ಜೆಯನ್ನು ತೆಗೆದುಕೊಳ್ಳಿರಿ ಮತ್ತು ಇತರರಲ್ಲಿ ಆಸಕ್ತರಾಗಿರ್ರಿ. ಅವರ ಹಿನ್ನೆಲೆಯನ್ನು, ಕುಟುಂಬವನ್ನು, ಸಮಸ್ಯೆಗಳನ್ನು, ಮತ್ತು ಅವರ ಆಸಕ್ತಿಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಿರಿ. ಜೊತೆ ವಿಶ್ವಾಸಿಗಳನ್ನು ನಿಮ್ಮ ಮನೆಗೆ ಆಮಂತ್ರಿಸಿರಿ. ಸರದಿಯಾಗಿ, ಇತರರು ನಿಮ್ಮ ವಿಷಯದಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುವರೆಂದು ನೀವು ಕಾಣುವಿರಿ.
ದೇವರ ಜನರೊಳಗೆ, ಮಿತ್ರತ್ವಗಳು ಕುಟುಂಬ ಸಂಬಂಧಗಳಷ್ಟು ನಿಕಟವಾಗಿರಬಲ್ಲವು. ಯೇಸು ಅಂದದ್ದು: “ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು.” (ಮಾರ್ಕ 3:35) “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣತ್ಣಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂಮಿ ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು,” ಎಂದು ಸಹ ಕ್ರಿಸ್ತನು ತನ್ನ ಹಿಂಬಾಲಕರಿಗೆ ಆಶ್ವಾಸನೆ ನೀಡಿದನು. (ಮಾರ್ಕ 10:29, 30) ಇಂತಹ ಒಂದು ಅದ್ಭುತವಾದ ಆತ್ಮಿಕ ಸಹೋದರತ್ವದ ಜೊತೆಗೆ, ಒಂದು ಹೊಸ ದೇಶದಲ್ಲಿಯೂ ಸಹ ನಾವು ಒಬ್ಬಂಟಿಗರಾಗಿರುವುದಿಲ್ಲ.
ಹಿಂದೆ ಸ್ವದೇಶದಲ್ಲಿ ಇರುವವರೊಂದಿಗೆ ಮಿತ್ರತ್ವಗಳನ್ನು ಕಾಪಾಡಿಕೊಳ್ಳುವುದು ಕೂಡ ಮನೆಗೀಳಿನೊಂದಿಗೆ ನಿಭಾಯಿಸಲು ನಿಮಗೆ ಸಹಾಯ ಮಾಡಬಲ್ಲದು. ಈಗ ನೀವು ಸ್ಥಳಾಂತರಿಸಿದ್ದರಿಂದ, ನಿಮ್ಮ ಮಾತುಗಳಿಗೆ ನೀವು ಬಹುಶಃ ಗಣನೀಯ ಲಕ್ಷ್ಯವನ್ನು ಕೊಡುವುದರಿಂದಲೇ, ಪತ್ರದ ಮೂಲಕ ಮಾಡಲಾದ ಸಂಸರ್ಗವು ವಿಶೇಷವಾಗಿ ಅರ್ಥಭರಿತವಾಗಿದೆ ಎಂಬುದನ್ನು ಕಂಡುಕೊಳ್ಳಲು ನೀವು ಆಶ್ಚರ್ಯಗೊಳ್ಳಬಹುದು. ಹೇಳಲು ಉತ್ತೇಜಕ ಸಂಗತಿಗಳು ಇರುವವು. ಈ ಹಿಂದೆ ಹೆಸರಿಸಲ್ಪಟ್ಟ ಜ್ಯಾನೆಟ್ ಸೂಚಿಸುವುದು: “ದೀರ್ಘ ಅಂತರದ ದೂರವಾಣಿ ಕರೆಗಳು ಬೆಲೆಯುಳ್ಳದ್ದಾಗಿವೆ, ಆದರೆ ರೆಕಾರ್ಡ್ ಮಾಡಲಾದ ಕ್ಯಾಸೆಟನ್ನು ಅಂಚೆಯ ಮೂಲಕ ಕಳುಹಿಸುವುದು ಸಂಬಂಧ ಸೂಚಕವಾಗಿ ಅಗವ್ಗಾಗಿದೆ. ಯಂತ್ರಕ್ಕೆ ಮಾತಾಡುವುದು ಮೊದಲ ಬಾರಿಗೆ ವಿಚಿತ್ರವೆನಿಸಬಹುದು. ಆದರೂ, ನಡುವೆ ಸೂಕ್ಷ್ಮ ಧ್ವನಿವರ್ಧಕವನ್ನಿಟ್ಟುಕೊಂಡು ಯಾರೊಂದಿಗಾದರೂ ಸಂಭಾಷಿಸುವುದಾದರೆ, ಅದು ಸರಳವೂ ಆಸಕ್ತಿಕರವೂ ಆಗಿದೆ.” ಪ್ರತಿಯಾಗಿ ರೆಕಾರ್ಡ್ ಮಾಡಲಾದ ಕ್ಯಾಸೆಟನ್ನು ಪಡೆಯಲು ಕೂಡ ನೀವು ಕೇಳಬಹುದು.
ಇಪ್ಪತ್ತೈದು ವರ್ಷಗಳ ಹಿಂದೆ, ಅಮೆರಿಕದಿಂದ ಲ್ಯಾಟಿನ್ ಅಮೆರಿಕಕ್ಕೆ ವಲಸೆ ಹೋದ ಶರ್ಲಿ ಹೇಳುವುದು: “ಸಮಸ್ಯೆಗಳಿಗಿಂತ ಆತ್ಮೋನ್ನತಿ ಮಾಡುವ ಅನುಭವಗಳ ಕುರಿತು ನಾನು ಯಾವಾಗಲೂ ಬರೆಯುತ್ತೇನೆ. ನನಗೆ ಪತ್ರಗಳನ್ನು ಬರೆಯುತ್ತಾ ಇರುವಂತೆ ಇದು ಇತರರನ್ನು ಉತ್ತೇಜಿಸುತ್ತದೆ.” ಹಾಗಿದ್ದರೂ, ಎಚ್ಚರದಿಂದಿರ್ರಿ. ಬಹಳಷ್ಟು ಪತ್ರ ಬರೆಯುವಿಕೆಯು, ಹೊಸ ಮಿತ್ರರನ್ನು ಗಳಿಸುವುದರಿಂದ ನಿಮ್ಮನ್ನು ತಡೆಯಬಲ್ಲದು. ಕೆನಡದಿಂದ ಇನ್ನೊಂದು ದೇಶಕ್ಕೆ ಸ್ಥಳಾಂತರಿಸಿದ ಡೆಲ್ ಹೇಳುವುದು: “ಮನೆಯಲ್ಲಿದ್ದು ನೀವು ಕಳೆದುಕೊಳ್ಳುತ್ತಿರುವ ವಿಷಯಗಳ ಕುರಿತು ಮರುಗುವುದನ್ನು ತೊರೆಯಿರಿ. ಬದಲಿಗೆ, ಹೊರಗೆ ಹೋಗಿ ನಿಮ್ಮ ಹೊಸ ಸ್ಥಳದಲ್ಲಿ ಆನಂದಿಸಿರಿ.”
ಹೊಸ ದೇಶದ ರೂಢಿಗಳ, ಇತಿಹಾಸದ, ವಿನೋದದ, ಮತ್ತು ಆಸಕ್ತಿಯ ಹಾಗೂ ಸೌಂದರ್ಯದ ಸ್ಥಳಗಳ ಪರಿಚಯವನ್ನು ಮಾಡಿಕೊಳ್ಳಿರಿ. ನಿಮ್ಮ ಗಮನವನ್ನು ನಕಾರಾತ್ಮಕ ವಿಷಯಗಳ ಮೇಲೆ ನಿರ್ದೇಶಿಸದಂತೆ ಇದು ಸಹಾಯ ಮಾಡುವುದು. ಸ್ಥಳಾಂತರಿಸಿರುವ ಸ್ಥಳದಲ್ಲಿ ನೀವು ಇರಲು ಉದ್ದೇಶಿಸಿದರೆ, ನಿಮ್ಮ ಸ್ವದೇಶವನ್ನು ಬಹಳ ಬೇಗನೆ ಯಾ ಅನೇಕ ಬಾರಿ ಸಂದರ್ಶಿಸದೆ ಇರುವುದು ಅತ್ಯುತ್ತಮ. ಹೊಸ ಮಿತ್ರತ್ವಗಳನ್ನು ರೂಪಿಸಿ, ನವೀನ ಪರಿಸರಕ್ಕೆ ಹೊಂದಿಕೊಳ್ಳಲು ಸಮಯದ ಅಗತ್ಯವಿದೆ. ಸ್ವದೇಶಕ್ಕೆ ದೀರ್ಘಾವಧಿಯ ಸಂದರ್ಶನಗಳು ಆ ಪ್ರಕ್ರಿಯೆಯನ್ನು ತಡೆಯುತ್ತವೆ. ನಿಮ್ಮ ಹೊಸ ಮನೆಯಲ್ಲಿ ನೆಲೆಸಿಯಾದ ಮೇಲೆ, ನಿಮ್ಮ ಪೂರ್ವ ಮನೆಗೆ ಒಂದು ಸಂದರ್ಶನಕ್ಕಾಗಿ ಹೋಗಿ ಮತ್ತೆ ಹಿಂದಿರುಗುವುದರಲ್ಲಿ ನೀವು ಆನಂದಿಸುವಿರಿ. ಅಷ್ಟರಲ್ಲಿ, ನಿಮ್ಮ ಹೊಸ ಮನೆಯ ಕಡೆಗೆ ಒಲವನ್ನು ಬೆಳೆಸುವುದರಲ್ಲಿ ಕಾರ್ಯಮಗ್ನರಾಗಿರ್ರಿ.
ಎದುರು ನೋಡುತ್ತಾ ಇರ್ರಿ
ಯೆಹೋವನು ನಮಗೆ ಇಡೀ ಭೂಮಿಯನ್ನು ನಮ್ಮ ಮನೆಯಂತೆ ಕೊಟ್ಟನು. (ಕೀರ್ತನೆ 115:16) ಒಂದು ಆನಂದಭರಿತ ಕ್ರಿಸ್ತೀಯ ಆತ್ಮವಿರುವಲ್ಲಿ, ಜೀವನವು ಯಾವುದೇ ದೇಶದಲ್ಲಿಯೂ ಮನೋಹರವಾಗಿರಬಲ್ಲದು. ರಾಜ್ಯದ ಅಭಿರುಚಿಗಳನ್ನು ಪ್ರವರ್ತಿಸಲು ಮತ್ತು ಇನ್ನೊಂದು ದೇಶದಲ್ಲಿ ಅಥವಾ ನಿಮ್ಮ ಸ್ವದೇಶದ ಬೇರೆ ಕಡೆಯಲ್ಲಿ ಸುವಾರ್ತೆಯನ್ನು ಸಾರಲು ನೀವು ಮನೆ ಬದಲಾಯಿಸುವುದಾದರೆ, ಸಂತೋಷದ ನಿರೀಕ್ಷೆಯಿಂದ ಹಾಗೆ ಮಾಡಿರಿ. ಹೊಸ ಮಿತ್ರರನ್ನು ಗಳಿಸಲು, ಭಿನ್ನವಾದ ರೂಢಿಗಳ ಕುರಿತು ಕಲಿಯಲು, ಶಿಷ್ಯರನ್ನು ಮಾಡಲು, ಅಥವಾ ದೇವರ ಸೇವೆಯಲ್ಲಿ ಪ್ರತಿಫಲ ನೀಡುವ ಕಾರ್ಯಗಳನ್ನು ಮಾಡಲು ಎದುರುನೋಡಿ.
ನೀವು ಎಲ್ಲೇ ಇರಲಿ, ನಿಮ್ಮೊಂದಿಗೆ ಯಾವಾಗಲೂ ಇರುವ ಒಬ್ಬ ಮಿತ್ರನು ಯೆಹೋವ ದೇವರಾಗಿದ್ದಾನೆ. (ಕೀರ್ತನೆ 94:14; 145:14, 18) ಆದುದರಿಂದ ಪ್ರಾರ್ಥನೆಯಲ್ಲಿ ಆತನಿಗೆ ನಿಕಟವಾಗಿರ್ರಿ. (ರೋಮಾಪುರ 12:12) ದೇವರ ಸೇವಕನೋಪಾದಿ ಜೀವಿತದಲ್ಲಿ ನಿಮ್ಮ ಉದ್ದೇಶವನ್ನು ಮನಸ್ಸಿನಲ್ಲಿಡಲು ಇದು ನಿಮಗೆ ಸಹಾಯ ಮಾಡುವುದು. ಊರ್ ಪಟ್ಟಣದಲ್ಲಿದ್ದ ತಮ್ಮ ಸುಖಸೌಕರ್ಯಗಳಿಂದ ಕೂಡಿದ ಮನೆಯನ್ನು ಅಬ್ರಹಾಮ ಮತ್ತು ಸಾರಳು ಬಿಟ್ಟಾಗ, ಅವರು ತಮ್ಮ ಉದ್ದೇಶವನ್ನು ಮನಸ್ಸಿನಲ್ಲಿಟ್ಟರು. ಯೆಹೋವನ ಆಜೆಗ್ಞೆ ವಿಧೇಯತೆ ತೋರಿಸುತ್ತಾ, ಅವರು ಮಿತ್ರರನ್ನು ಮತ್ತು ಸಂಬಂಧಿಕರನ್ನು ಬಿಟ್ಟು ಬಂದರು. (ಅ. ಕೃತ್ಯಗಳು 7:2-4) ಅವರು ಬಿಟ್ಟು ಬಂದಿದ್ದ ಸ್ಥಳವನ್ನು ಜ್ಞಾಪಿಸಿಕೊಳ್ಳುತ್ತಾ ಅದಕ್ಕಾಗಿ ಹಾತೊರೆಯುತ್ತಾ ಇದ್ದಿದ್ದರೆ, ಹಿಂದಿರುಗಲು ಅವರಿಗೆ ಅವಕಾಶ ಇದ್ದಿರಬಹುದಿತ್ತು. ಆದರೆ ಉತ್ತಮವಾದೊಂದು ಸ್ಥಾನವನ್ನು—ಕಟ್ಟಕಡೆಗೆ ದೇವರ ಸ್ವರ್ಗೀಯ ರಾಜ್ಯದ ಕೆಳಗೆ ಭೂ ಪ್ರಮೋದವನದ ಮೇಲೆ ಜೀವಿತವನ್ನು—ಎಟಕಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು.—ಇಬ್ರಿಯ 11:15, 16.
ವಿದೇಶೀ ಕ್ಷೇತ್ರಗಳಲ್ಲಿ ಅಥವಾ ನಿಮ್ಮ ಸ್ವದೇಶದಲ್ಲಿ ರಾಜ್ಯ ಘೋಷಕರಿಗಾಗಿರುವ ಅಗತ್ಯವು ಎಲ್ಲಿ ಅಧಿಕವಾಗಿದೆಯೊ ಅಲ್ಲಿ ಸಾರುವುದು ದೊಡ್ಡ ಸವಾಲಾಗಿರಬಲ್ಲದು. ಆದರೆ ಅದು ಫಲಪ್ರದವಾದ ಹಾಗೂ ಬಹಳವಾಗಿ ಬಹುಮಾನವನ್ನೀಯುವ ಕಾರ್ಯ ಕೂಡ ಆಗಿದೆ. (ಯೋಹಾನ 15:8) ಮತ್ತು ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ತಾತ್ಕಾಲಿಕವಾಗಿ ಮುಳುಗಿಸುವುದಾದರೆ, ನಿಮ್ಮ ಗುರಿಯನ್ನು ಮನಸ್ಸಿನಲ್ಲಿಡುವ ಮೂಲಕ ಮತ್ತು ಮುಂದೆ ನೋಡುತ್ತಾ ಇರುವ ಮೂಲಕ ಅವುಗಳನ್ನು ಜಯಿಸಸಾಧ್ಯವಿದೆ. ವಿವಾಹವಾಗದ ಒಬ್ಬಾಕೆ ಮಿಷನೆರಿ ಸಹೋದರಿಯು ಹೇಳಿದ್ದು: “ದುಃಖವು ನನ್ನನ್ನು ಆವರಿಸಿದಂತೆ ನನಗೆ ಅನಿಸಿದಾಗ, ಹೊಸ ಲೋಕದ ಕುರಿತು ಮತ್ತು ಹೇಗೆ ಎಲ್ಲ ಮಾನವಜಾತಿಯು ಒಂದು ಕುಟುಂಬವಾಗಿರುವುದು ಎಂಬುದರ ಬಗ್ಗೆ ಯೋಚಿಸಲು ನಾನು ಪ್ರಯತ್ನಿಸುತ್ತೇನೆ.” ಈ ರೀತಿಯ ಹಿತಕರವಾದ ಆಲೋಚನೆಗಳು ನಿಮ್ಮ ಆನಂದವನ್ನು ಕಾಪಾಡಿಕೊಳ್ಳಲು ಮತ್ತು ಮನೆಗೀಳಿಗೆ ಒಳಗಾಗದಿರಲು ಸಹಾಯ ಮಾಡಬಲ್ಲವು.
[ಪುಟ 29 ರಲ್ಲಿರುವ ಚಿತ್ರ]
ಮನೆಗೀಳು ಕ್ರೈಸ್ತ ಶುಶ್ರೂಷೆಯ ಅಡವ್ಡಾಗಿ ಬರುವ ಅಗತ್ಯವಿಲ್ಲ