ವಿದೇಶಿ ಕ್ಷೇತ್ರದಲ್ಲಿ ನೀವು ಸೇವೆಮಾಡಬಲ್ಲಿರೊ?
“ನಾನು ಒಬ್ಬ ಮಿಷನೆರಿಯಾಗುವ ಕನಸುಕಂಡಿದ್ದೆ. ಒಬ್ಬ ಅವಿವಾಹಿತ ವ್ಯಕ್ತಿಯೋಪಾದಿ ನಾನು, ಎಲ್ಲಿ ಪ್ರಚಾರಕರ ಅಗತ್ಯವು ಹೆಚ್ಚಾಗಿತ್ತೋ ಆ ಅಮೆರಿಕದ ಟೆಕ್ಸಾಸ್ನಲ್ಲಿ ಸೇವೆಮಾಡಿದೆ. ನಮ್ಮ ವಿವಾಹದ ಬಳಿಕ ನನ್ನ ಪತ್ನಿಯೂ ನನ್ನ ಜೊತೆಗೂಡಿದಳು. ನಮ್ಮ ಮಗಳು ಹುಟ್ಟಿದಾಗ, ‘ಮಿಷನೆರಿ ಸೇವೆಯನ್ನು ಮಾಡುವ ನನ್ನ ಬಯಕೆಯು ಇನ್ನೆಂದಿಗೂ ಈಡೇರುವುದಿಲ್ಲವಲ್ಲ’ ಎಂಬ ಆಲೋಚನೆ ನನ್ನ ಮನಸ್ಸಿಗೆ ಬಂತು. ಆದರೆ ನಮ್ಮ ಕನಸುಗಳು ಯೆಹೋವನ ಚಿತ್ತಕ್ಕೆ ಅನುಸಾರವಾಗಿರುವಲ್ಲಿ, ಆತನು ಆ ಕನಸುಗಳನ್ನು ನನಸಾಗಿ ಮಾಡುತ್ತಾನೆ.”—ಜೆಸೀ. ಈಗ ಇವರು ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಎಕ್ವಡಾರ್ನಲ್ಲಿ ಸೇವೆಮಾಡುತ್ತಿದ್ದಾರೆ.
“ಗಿಲ್ಯಡ್ ಮಿಷನೆರಿ ಶಾಲೆಯ ತರಬೇತಿಯಿಲ್ಲದೆ ವಿದೇಶದಲ್ಲಿ ಪಯನೀಯರ್ ಸೇವೆಯನ್ನು ಮಾಡುವ ಅವಕಾಶ ನನಗೆ ಸಿಗುತ್ತದೆಂದು ನಾನೆಂದೂ ಅಂದುಕೊಂಡಿರಲಿಲ್ಲ. ನನ್ನ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬರು ಭಾಷಣವನ್ನು ಕೊಡುತ್ತಿರುವುದು ಅಥವಾ ಸಾರುತ್ತಿರುವುದನ್ನು ನೋಡಿದಾಗ, ಅದು ನನ್ನನ್ನು ರೋಮಾಂಚನಗೊಳಿಸಿತು, ಮತ್ತು ನನಗೆ ಈ ಸದವಕಾಶವನ್ನು ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳಿದೆ.”—ಕ್ಯಾರನ್. ದಕ್ಷಿಣ ಅಮೆರಿಕದಲ್ಲಿ ಎಂಟು ವರ್ಷಗಳ ವರೆಗೆ ಪಯನೀಯರ್ ಸೇವೆಯನ್ನು ಮಾಡಿರುವ ಒಬ್ಬ ಅವಿವಾಹಿತ ಸ್ತ್ರೀ.
“ಅಮೆರಿಕದಲ್ಲಿ 13 ವರ್ಷಗಳ ವರೆಗೆ ಪೂರ್ಣ ಸಮಯದ ಸಾಕ್ಷಿಕಾರ್ಯವನ್ನು ಮಾಡಿದ ಬಳಿಕ, ಒಂದು ಹೊಸ ಪಂಥಾಹ್ವಾನವನ್ನು ಸ್ವೀಕರಿಸಬೇಕು ಎಂದು ನನಗೂ ನನ್ನ ಪತ್ನಿಗೂ ಅನಿಸಿತು. ಹಿಂದೆಂದಿಗಿಂತಲೂ ಈಗ ನಾವು ಹೆಚ್ಚು ಸಂತೋಷದಿಂದಿದ್ದೇವೆ; ನಿಜವಾಗಿಯೂ ಇದು ಅದ್ಭುತಕರವಾದ ಒಂದು ಜೀವನ ರೀತಿಯಾಗಿದೆ.”—ಟಾಮ್. ಆ್ಯಮಸಾನ್ ಪ್ರಾಂತದಲ್ಲಿ ತನ್ನ ಪತ್ನಿ ಲಿಂಡಳೊಂದಿಗೆ ಪಯನೀಯರ್ ಸೇವೆಮಾಡುತ್ತಿದ್ದಾನೆ.
ಗಣ್ಯತೆಯನ್ನು ವ್ಯಕ್ತಪಡಿಸುವಂತಹ ಈ ಅಭಿವ್ಯಕ್ತಿಗಳು, ತಮ್ಮ ಪರಿಸ್ಥಿತಿಗಳಿಂದಾಗಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಲ್ಲಿ ಮಿಷನೆರಿ ತರಬೇತಿಯನ್ನು ಪಡೆದುಕೊಳ್ಳಲು ಅಸಾಧ್ಯವಾದಂತಹ ಜನರಿಂದ ತಿಳಿಸಲ್ಪಟ್ಟವುಗಳಾಗಿವೆ. ಆದರೂ, ವಿದೇಶಿ ಸೇವೆಯಲ್ಲಿರುವ ಆನಂದ ಹಾಗೂ ಪಂಥಾಹ್ವಾನಗಳ ವೈಯಕ್ತಿಕ ಅನುಭವ ಅವರಿಗಿದೆ. ಇದು ಹೇಗೆ ಸಾಧ್ಯವಾಯಿತು? ನೀವು ಸಹ ಇಂತಹ ಸೇವೆಯನ್ನು ಮಾಡಸಾಧ್ಯವಿದೆಯೊ?
ಯೋಗ್ಯವಾದ ಹೇತುಗಳಿರಬೇಕು
ವಿದೇಶಿ ಕ್ಷೇತ್ರವೊಂದರಲ್ಲಿ ಯಶಸ್ಸನ್ನು ಪಡೆದುಕೊಳ್ಳಲಿಕ್ಕಾಗಿ, ಸಾಹಸ ಮನೋಭಾವಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ಯಾರು ಈ ಸೇವೆಯಲ್ಲಿ ಪಟ್ಟುಹಿಡಿದು ಮುಂದುವರಿದಿದ್ದಾರೊ ಅವರು ಒಳ್ಳೆಯ ಹೇತುಗಳೊಂದಿಗೆ ಹಾಗೆ ಮಾಡಿದ್ದಾರೆ. ಅಪೊಸ್ತಲ ಪೌಲನಂತೆ, ತಾವು ದೇವರಿಗೆ ಮಾತ್ರವಲ್ಲ ಮನುಷ್ಯರಿಗೂ ಋಣಿಗಳಾಗಿದ್ದೇವೆ ಎಂಬ ಮನೋಭಾವ ಅವರಿಗಿದೆ. (ರೋಮಾಪುರ 1:14) ಅವರು ತಮ್ಮ ಸ್ವದೇಶದ ಟೆರಿಟೊರಿಯಲ್ಲೇ ಇದ್ದುಕೊಂಡು ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕ ಸುವಾರ್ತೆಯನ್ನು ಸಾರುವಂತೆ ಕೊಡಲ್ಪಟ್ಟಿರುವ ದೈವಿಕ ಆಜ್ಞೆಯನ್ನು ಪೂರೈಸಬಹುದಿತ್ತು. (ಮತ್ತಾಯ 24:14) ಆದರೂ, ಯಾರಿಗೆ ಸುವಾರ್ತೆಯನ್ನು ಕೇಳಿಸಿಕೊಳ್ಳುವ ಅವಕಾಶವೇ ಇರುವುದಿಲ್ಲವೋ ಅಂತಹ ಜನರ ಕಡೆಗೆ ತಾವು ಋಣಿಗಳಾಗಿದ್ದೇವೆಂಬ ಅನಿಸಿಕೆ ಅವರಿಗಿತ್ತು, ಆದುದರಿಂದ ಅಂತಹವರ ಬಳಿಗೆ ಹೋಗಿ ಸಾರಬೇಕೆಂದು ಅವರು ಪ್ರಚೋದಿಸಲ್ಪಟ್ಟರು.
ಕೆಲವೊಮ್ಮೆ, ಹೆಚ್ಚು ಫಲದಾಯಕವಾಗಿರುವ ಟೆರಿಟೊರಿಯಲ್ಲಿ ಸೇವೆಮಾಡುವ ಬಯಕೆಯು ಸಹ ಒಂದು ಹೇತುವಾಗಿರುತ್ತದೆ ಮತ್ತು ಈ ಹೇತುವು ಯೋಗ್ಯವಾದದ್ದಾಗಿದೆ. ಒಬ್ಬ ಮೀನುಗಾರನಿಗೆ ತುಂಬ ಮೀನುಗಳು ಸಿಗುತ್ತಿರುವುದನ್ನು ನೋಡಿದ ಮೇಲೆ, ನಮ್ಮಲ್ಲಿ ಯಾರು ತಾನೇ ಸರೋವರದ ಆ ಭಾಗದ ಹತ್ತಿರ ಹೋಗುವುದಿಲ್ಲ? ತದ್ರೀತಿಯಲ್ಲಿ, ಬೇರೆ ದೇಶಗಳಲ್ಲಿನ ಅಸಾಧಾರಣ ಅಭಿವೃದ್ಧಿಗಳ ಕುರಿತಾದ ಉತ್ಸಾಹಪ್ರೇರಕ ವರದಿಗಳು, ಎಲ್ಲಿ “ಮೀನುಗಳು ರಾಶಿರಾಶಿಯಾಗಿ”ವೆಯೋ ಅಲ್ಲಿಗೆ ಹೋಗುವಂತೆ ಅನೇಕರನ್ನು ಪ್ರೋತ್ಸಾಹಿಸಿವೆ.—ಲೂಕ 5:4-10.
ಕಷ್ಟನಷ್ಟಗಳನ್ನು ತೂಗಿನೋಡಿರಿ
ವಿದೇಶದಿಂದ ಬಂದಿರುವ ಧಾರ್ಮಿಕ ಸ್ವಯಂಸೇವಕರಿಗೆ ಐಹಿಕ ಕೆಲಸವನ್ನು ಮಾಡಲು ಅನೇಕ ದೇಶಗಳು ಅನುಮತಿ ನೀಡುವುದಿಲ್ಲ. ಆದುದರಿಂದ, ವಿದೇಶದಲ್ಲಿ ಸೇವೆಯನ್ನು ಮಾಡಲು ಇಷ್ಟಪಡುವವರು, ಸರ್ವಸಾಮಾನ್ಯವಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು. ಈ ಹಣಕಾಸಿನ ಪಂಥಾಹ್ವಾನವನ್ನು ಯಾವ ರೀತಿಯಲ್ಲಿ ಎದುರಿಸಲಾಗಿದೆ? ಅಗತ್ಯವಿರುವ ಹಣಕಾಸನ್ನು ಪಡೆದುಕೊಳ್ಳಲಿಕ್ಕಾಗಿ, ಅನೇಕರು ತಮ್ಮ ಮನೆಗಳನ್ನು ಮಾರಿಬಿಟ್ಟಿದ್ದಾರೆ ಅಥವಾ ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಇನ್ನಿತರರು ತಮ್ಮ ವ್ಯಾಪಾರ-ವಹಿವಾಟುಗಳನ್ನು ಮಾರಿದ್ದಾರೆ. ಕೆಲವರು ತಮ್ಮ ಗುರಿಯನ್ನು ಸಾಧಿಸಲಿಕ್ಕಾಗಿ ಹಣ ಉಳಿತಾಯವನ್ನು ಮಾಡಿದ್ದಾರೆ. ಇನ್ನೂ ಕೆಲವರು ಒಂದೆರಡು ವರ್ಷಗಳ ವರೆಗೆ ವಿದೇಶದಲ್ಲಿ ಸೇವೆಮಾಡಿ, ಅನಂತರ ಕೆಲಸಮಾಡಲು ಹಾಗೂ ಸ್ವಲ್ಪ ಹಣವನ್ನು ಕೂಡಿಸಲಿಕ್ಕಾಗಿ ತಮ್ಮ ಸ್ವದೇಶಕ್ಕೆ ಹಿಂದಿರುಗುತ್ತಾರೆ, ಮತ್ತು ಪುನಃ ವಿದೇಶದಲ್ಲಿ ಸೇವೆಮಾಡಲು ಹಿಂದಿರುಗಿ ಹೋಗುತ್ತಾರೆ.
ಅಭಿವೃದ್ಧಿಹೊಂದುತ್ತಿರುವ ದೇಶವೊಂದರಲ್ಲಿ ಇರುವುದು ಹೆಚ್ಚು ಪ್ರಯೋಜನದಾಯಕವಾಗಿದೆ ಎಂಬುದು ಖಂಡಿತ. ಏಕೆಂದರೆ ಈಗಾಗಲೇ ಅಭಿವೃದ್ಧಿಹೊಂದಿರುವ ದೇಶಕ್ಕಿಂತಲೂ ಇಲ್ಲಿನ ಜೀವನವೆಚ್ಚವು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಮಿತವಾದ ವಿಶ್ರಾಂತಿ ವೇತನದಲ್ಲಿಯೇ ತಕ್ಕಮಟ್ಟಿಗೆ ಜೀವಿಸುವಂತೆ ಇದು ಅನೇಕರಿಗೆ ಅವಕಾಶ ನೀಡಿದೆ. ಖಂಡಿತವಾಗಿಯೂ ಒಬ್ಬನ ಖರ್ಚುವೆಚ್ಚಗಳು, ಅವನು ಯಾವ ರೀತಿಯ ಜೀವನ ಮಟ್ಟವನ್ನು ಆರಿಸಿಕೊಳ್ಳುತ್ತಾನೋ ಅದರ ಮೇಲೆ ಹೆಚ್ಚಾಗಿ ಅವಲಂಬಿಸಿರುತ್ತವೆ. ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿಯೂ, ಎಲ್ಲ ಸೌಕರ್ಯಗಳಿರುವ ವಸತಿಗೃಹಗಳು ದೊರಕಸಾಧ್ಯವಿದೆ, ಆದರೆ ಅವು ತುಂಬ ದುಬಾರಿಯಾಗಿರುತ್ತವೆ.
ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುವ ಮೊದಲೇ ಖರ್ಚುವೆಚ್ಚಗಳನ್ನು ಲೆಕ್ಕಹಾಕಿ ನೋಡಬೇಕು ಎಂಬುದು ಸ್ಪಷ್ಟ. ಆದರೂ, ಕೇವಲ ಹಣಕಾಸಿನ ಖರ್ಚುಗಳನ್ನು ಲೆಕ್ಕಹಾಕುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ. ದಕ್ಷಿಣ ಅಮೆರಿಕದಲ್ಲಿ ಸೇವೆಮಾಡಿರುವ ಕೆಲವರ ಹೇಳಿಕೆಗಳು ಇದರ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಕೊಡಬಹುದು.
ಅತಿ ದೊಡ್ಡ ಸವಾಲು
“ಸ್ಪ್ಯಾನಿಷ್ ಭಾಷೆಯನ್ನು ಕಲಿತುಕೊಳ್ಳುವುದು ನನಗೆ ನಿಜವಾಗಿಯೂ ಬಹಳ ದೊಡ್ಡ ಹೋರಾಟವಾಗಿತ್ತು” ಎಂದು ಫಿನ್ಲೆಂಡ್ನ ಮಾರ್ಕೂ ಜ್ಞಾಪಿಸಿಕೊಳ್ಳುತ್ತಾನೆ. “ನನಗೆ ಭಾಷೆಯು ಬರುವುದಿಲ್ಲವಾದ್ದರಿಂದ, ನಾನು ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಮಾಡಲು ತುಂಬ ಸಮಯ ಹಿಡಿಯುವುದೆಂದು ಭಾವಿಸಿದ್ದೆ. ಆದರೆ ಎರಡೇ ತಿಂಗಳುಗಳ ಬಳಿಕ, ಒಂದು ಪುಸ್ತಕ ಅಭ್ಯಾಸವನ್ನು ನಡೆಸುವಂತೆ ನನ್ನನ್ನು ಕೇಳಿಕೊಂಡಾಗ ನನಗೆಷ್ಟು ಆಶ್ಚರ್ಯವಾಯಿತು! ಆದರೂ, ಪೇಚಾಟವನ್ನುಂಟುಮಾಡುವ ಅನೇಕ ಸಂದರ್ಭಗಳು ಇದ್ದವು ಎಂಬುದು ನಿಜ. ವಿಶೇಷವಾಗಿ ಹೆಸರುಗಳನ್ನು ಕರೆಯುವ ವಿಷಯದಲ್ಲಿ ನನಗೆ ತುಂಬ ತೊಂದರೆಯಿತ್ತು. ಒಂದು ದಿನ ನಾನು, ಸಹೋದರ ಸಾಂಚೋ ಅವರನ್ನು ‘ಸಹೋದರ ಚಾಂಚೋ (ಹಂದಿ)’ ಎಂದು ಕರೆದುಬಿಟ್ಟೆ, ಮತ್ತು ಸಹೋದರಿ ಸಾಲಾಮೇಆಳನ್ನು, ‘ಮಾಲಾಸೇಆ (ಕೆಡುಕಿ)’ ಎಂದು ಕರೆದುದನ್ನು ನಾನೆಂದೂ ಮರೆಯಲಾರೆ. ಸಂತೋಷಕರವಾಗಿಯೇ, ಸಹೋದರ ಸಹೋದರಿಯರು ತುಂಬ ತಾಳ್ಮೆಯುಳ್ಳವರಾಗಿದ್ದರು.” ಕಾಲಕ್ರಮೇಣ ಮಾರ್ಕೂ, ತನ್ನ ಪತ್ನಿ ಸೆಲೀನ್ಳೊಂದಿಗೆ ಒಬ್ಬ ಸರ್ಕಿಟ್ ಮೇಲ್ವಿಚಾರಕನೋಪಾದಿ ಆ ದೇಶದಲ್ಲಿ ಎಂಟು ವರ್ಷಕಾಲ ಸೇವೆಮಾಡಿದನು.
ಈ ಮುಂಚೆ ಉಲ್ಲೇಖಿಸಲಾಗಿದ್ದ ಜೆಸೀಯ ಪತ್ನಿಯಾದ ಕ್ರಿಸ್ ಹೇಳುವುದು: “ನಾವು ಎಕ್ವಡಾರ್ಗೆ ಹೋದ ಮೂರೇ ತಿಂಗಳುಗಳ ಬಳಿಕ, ಪ್ರಪ್ರಥಮ ಬಾರಿಗೆ ಸರ್ಕಿಟ್ ಮೇಲ್ವಿಚಾರಕರು ನಮ್ಮ ಸಭೆಯನ್ನು ಸಂದರ್ಶಿಸಿದ್ದು ನನಗೆ ಜ್ಞಾಪಕವಿದೆ. ಆ ಸಹೋದರನು ದೃಷ್ಟಾಂತಗಳನ್ನು ಉಪಯೋಗಿಸುತ್ತಾ, ನಮ್ಮ ಮನಃಸ್ಪರ್ಶಿಸಲು ಪ್ರಯತ್ನಿಸುತ್ತಾ, ಯಾವುದೋ ಉತ್ತಮ ಸಂಗತಿಯನ್ನು ಹೇಳುತ್ತಿದ್ದನು ಎಂಬುದು ನನಗೆ ಗೊತ್ತಾಯಿತು, ಆದರೆ ಅವನು ಏನು ಹೇಳುತ್ತಿದ್ದಾನೆಂಬುದು ನನಗೆ ಅರ್ಥವಾಗಲಿಲ್ಲ. ಆಗ, ಸಭೆಯಲ್ಲಿ ಕುಳಿತಿದ್ದಾಗಲೇ ನನ್ನ ಕಣ್ಣುಗಳಿಂದ ನೀರು ಸುರಿಯತೊಡಗಿತು. ಇದು ಕೇವಲ ಸಾಮಾನ್ಯವಾದ ಕಣ್ಣೀರಾಗಿರಲಿಲ್ಲ; ನಾನು ಬಿಕ್ಕಿಬಿಕ್ಕಿ ಅಳುತ್ತಿದ್ದೆ. ಕೂಟದ ಬಳಿಕ, ಸರ್ಕಿಟ್ ಮೇಲ್ವಿಚಾರಕರಿಗೆ ನಾನು ಏಕೆ ಅಳುತ್ತಿದ್ದೇನೆಂಬುದನ್ನು ವಿವರಿಸಲು ಪ್ರಯತ್ನಿಸಿದೆ. ಅವರು ತುಂಬ ದಯಾಪರರಾಗಿದ್ದು, ಬೇರೆಯವರು ನನಗೆ ಹೇಳುತ್ತಿದ್ದಂತೆಯೇ ಇವರು ಸಹ ‘ಟೆನ್ ಪಾಸ್ಯೆನ್ಸ್ಯಾ ಎರ್ಮಾನಾ’ (‘ಸಹೋದರಿ, ತಾಳ್ಮೆ ಇರಲಿ’) ಎಂದು ನನಗೆ ಹೇಳಿದರು. ಎರಡು ಅಥವಾ ಮೂರು ವರ್ಷಗಳ ತರುವಾಯ, ಆ ಸರ್ಕಿಟ್ ಮೇಲ್ವಿಚಾರಕರೂ ನಾನೂ ಒಬ್ಬರನ್ನೊಬ್ಬರು ಪುನಃ ಸಂಧಿಸಿ, 45 ನಿಮಿಷಗಳ ವರೆಗೆ ಮಾತಾಡಿದೆವು. ಮತ್ತು ನಾವು ಈಗ ಪರಸ್ಪರ ಸಂವಾದಿಸಸಾಧ್ಯವಿದ್ದದ್ದರಿಂದ ಆನಂದಪಟ್ಟೆವು.”
“ಶ್ರದ್ಧಾಪೂರ್ವಕವಾದ ಅಭ್ಯಾಸದ ಅಗತ್ಯವಿದೆ” ಎಂದು ಇನ್ನೊಬ್ಬ ಸಹೋದರನು ಹೇಳುತ್ತಾನೆ. “ಒಂದು ಭಾಷೆಯನ್ನು ಕಲಿಯುವುದರಲ್ಲಿ ನಾವು ಹೆಚ್ಚೆಚ್ಚು ಪ್ರಯತ್ನಿಸುವಾಗ, ಬೇರೆಯವರೊಂದಿಗೆ ಸಂವಾದಿಸುವ ನಮ್ಮ ಕೌಶಲಗಳು ಸಹ ಹೆಚ್ಚು ಉತ್ತಮವಾಗುತ್ತವೆ.”
ಇಂತಹ ಪ್ರಯತ್ನಗಳು ಅನೇಕ ಪ್ರಯೋಜನಗಳನ್ನು ತರುತ್ತವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯು ಒಂದು ಹೊಸ ಭಾಷೆಯನ್ನು ಕಲಿತುಕೊಳ್ಳಲು ಪ್ರಯಾಸಪಡುತ್ತಿರುವಾಗ, ನಮ್ರತೆ, ತಾಳ್ಮೆ, ಮತ್ತು ಪಟ್ಟುಹಿಡಿಯುವಿಕೆಯಂತಹ ಗುಣಗಳು ಅವನಲ್ಲಿ ಬೆಳೆಯುತ್ತವೆ. ಬೇರೆಯವರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ಸದವಕಾಶದ ದೊಡ್ಡ ಬಾಗಿಲು ತೆರೆದಿದೆ. ಉದಾಹರಣೆಗೆ, ಸ್ಪ್ಯಾನಿಷ್ ಭಾಷೆಯನ್ನು ಕಲಿಯುವುದರಿಂದ ಒಬ್ಬ ವ್ಯಕ್ತಿಯು, ಲೋಕದಾದ್ಯಂತ 40 ಕೋಟಿಗಿಂತಲೂ ಹೆಚ್ಚು ಜನರಿಂದ ಮಾತಾಡಲ್ಪಡುವಂತಹ ಒಂದು ಭಾಷೆಯಲ್ಲಿ ಸಂವಾದಮಾಡಲು ಶಕ್ತನಾಗುತ್ತಾನೆ. ಸಮಯಾನಂತರ ಯಾರು ತಮ್ಮ ಸ್ವದೇಶಗಳಿಗೆ ಹಿಂದಿರುಗಬೇಕಾಯಿತೋ ಅವರು, ಸ್ಪ್ಯಾನಿಷ್ ಮಾತೃಭಾಷೆಯ ಜನರಿಗೆ ಸಹಾಯ ಮಾಡಲಿಕ್ಕಾಗಿ ತಮ್ಮ ಭಾಷಾ ಕೌಶಲವನ್ನು ಉಪಯೋಗಿಸಲು ಶಕ್ತರಾಗಿದ್ದರು.
ಮನೆಗಾಗಿ ಹಂಬಲಿಸುವುದರ ಕುರಿತಾಗಿ ಏನು?
ತನ್ನ ಗಂಡನಾದ ಗ್ಯಾರೀಯೊಂದಿಗೆ ಆ್ಯಮಸಾನ್ ಪ್ರಾಂತದಲ್ಲಿ ಸೇವೆಮಾಡಿದ ಡೆಬ್ರ ಜ್ಞಾಪಿಸಿಕೊಳ್ಳುವುದು: “1989ರಲ್ಲಿ ನಾವು ಎಕ್ವಡಾರ್ಗೆ ಹೊಸದಾಗಿ ಬಂದಾಗ, ನನಗೆ ಮನೆಯ ನೆನಪು ತುಂಬ ಬರುತ್ತಿತ್ತು. ನಾನು ಸಭೆಯಲ್ಲಿರುವ ಸಹೋದರ ಸಹೋದರಿಯರ ಮೇಲೆ ಹೆಚ್ಚು ಆತುಕೊಳ್ಳಲು ಕಲಿತುಕೊಂಡೆ. ಈಗ ನಾವೆಲ್ಲ ಒಂದೇ ಕುಟುಂಬದವರಂತಿದ್ದೇವೆ.”
ಈ ಲೇಖನದ ಆರಂಭದಲ್ಲಿ ತಿಳಿಸಲಾದ ಕ್ಯಾರನ್ ಹೇಳುವುದು: “ನಾನು ಪ್ರತಿ ದಿನ ಸೇವೆಯಲ್ಲಿ ಭಾಗವಹಿಸುವ ಮೂಲಕ ಮನೆಯ ಹಂಬಲವನ್ನು ಮರೆಯಲು ಪ್ರಯತ್ನಿಸಿದೆ. ಈ ಕಾರಣದಿಂದ ನಾನು ಮನೆಯ ಕುರಿತು ಯೋಚಿಸುತ್ತಿರಲಿಲ್ಲ. ಒಂದು ವಿದೇಶಿ ಕ್ಷೇತ್ರದಲ್ಲಿ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಸ್ವದೇಶದಲ್ಲಿರುವ ನನ್ನ ಹೆತ್ತವರು ಹೆಮ್ಮೆಪಡುತ್ತಾರೆ ಎಂಬ ವಿಚಾರವು ಸಹ ಸದಾ ನನ್ನ ಮನಸ್ಸಿನಲ್ಲಿತ್ತು. ‘ಯೆಹೋವನೇ ನಿನ್ನನ್ನು ನನಗಿಂತಲೂ ಚೆನ್ನಾಗಿ ನೋಡಿಕೊಳ್ಳಬಲ್ಲನು’ ಎಂಬ ಮಾತುಗಳಿಂದ ನನ್ನ ತಾಯಿ ನನ್ನನ್ನು ಯಾವಾಗಲೂ ಉತ್ತೇಜಿಸುತ್ತಿದ್ದರು.”
ಜಪಾನಿನ ಮಾಕೀಕೋ ತಮಾಷೆಯಿಂದ ಹೇಳುವುದು: “ಕ್ಷೇತ್ರ ಸೇವೆಯಲ್ಲಿ ಇಡೀ ದಿನವನ್ನು ಕಳೆದ ಬಳಿಕ, ನಾನು ತುಂಬ ದಣಿದಿರುತ್ತೇನೆ. ಆದುದರಿಂದ, ನಾನು ಮನೆಗೆ ಹಿಂದಿರುಗಿ, ಮನೆಯ ನೆನಪನ್ನು ಮಾಡಿಕೊಳ್ಳುವಷ್ಟರಲ್ಲಿ ಸಾಮಾನ್ಯವಾಗಿ ನನಗೆ ನಿದ್ರೆ ಬಂದುಬಿಡುತ್ತದೆ. ಹೀಗೆ, ಆ ನೆನಪು ಹೆಚ್ಚು ಕಾಲ ಉಳಿಯುವುದಿಲ್ಲ.”
ಮಕ್ಕಳ ಕುರಿತಾಗಿ ಏನು?
ಇದರಲ್ಲಿ ಮಕ್ಕಳು ಸಹ ಒಳಗೂಡಿರುವಾಗ, ಅವರ ಶಿಕ್ಷಣದಂತಹ ಆವಶ್ಯಕತೆಗಳ ಬಗ್ಗೆಯೂ ಯೋಚಿಸಬೇಕಾಗಿದೆ. ಈ ವಿಷಯದಲ್ಲಿ ಕೆಲವರು ಮನೆಯಲ್ಲಿಯೇ ಶಾಲಾಶಿಕ್ಷಣವನ್ನು ಕೊಡಿಸುವ ಆಯ್ಕೆಮಾಡುತ್ತಾರೆ, ಮತ್ತು ಇನ್ನು ಕೆಲವರು ತಮ್ಮ ಮಕ್ಕಳನ್ನು ಸ್ಥಳಿಕ ಶಾಲೆಗಳಿಗೆ ಸೇರಿಸುತ್ತಾರೆ.
ತನ್ನ ಪತ್ನಿ, ಇಬ್ಬರು ಮಕ್ಕಳು, ಮತ್ತು ತನ್ನ ತಾಯಿಯೊಂದಿಗೆ ಆ್ಯಲ್ ದಕ್ಷಿಣ ಅಮೆರಿಕಕ್ಕೆ ಸ್ಥಳಾಂತರಿಸಿದನು. ಅವನು ಹೇಳುವುದು: “ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಅವರು ಬೇಗನೆ ಬೇರೆ ಭಾಷೆಯನ್ನು ಕಲಿತುಕೊಳ್ಳಲು ಸಹಾಯವಾಯಿತು ಎಂಬುದು ನಮಗೆ ಗೊತ್ತಾಯಿತು. ಮೂರೇ ತಿಂಗಳುಗಳೊಳಗೆ ಅವರು ಅದನ್ನು ತುಂಬ ನಿರರ್ಗಳವಾಗಿ ಮಾತಾಡುತ್ತಿದ್ದರು.” ಇನ್ನೊಂದು ಕಡೆಯಲ್ಲಿ, ಮೈಕ್ ಮತ್ತು ಕ್ಯಾರೀಯ ಇಬ್ಬರು ಹದಿವಯಸ್ಕ ಹುಡುಗರು, ಅಧಿಕೃತ ಅಂಚೆಶಿಕ್ಷಣಶಾಲೆ (ಕರೆಸ್ಪಾಂಡೆನ್ಸ್)ಯ ಮೂಲಕ ವ್ಯಾಸಂಗಮಾಡುತ್ತಾರೆ. ಅವರ ಹೆತ್ತವರು ಹೇಳುವುದು: “ಅಂತಹ ವ್ಯಾಸಂಗದ ಎಲ್ಲ ಜವಾಬ್ದಾರಿಯನ್ನು ನಾವು ಮಕ್ಕಳ ಮೇಲೆ ಹಾಕಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಾಯಿತು. ನಾವು ಕೂಡ ನಮ್ಮ ಪಾಲನ್ನು ಮಾಡಬೇಕಿತ್ತು ಮತ್ತು ನಮ್ಮ ಹುಡುಗರು ನೇಮಿಸಲ್ಪಟ್ಟಿರುವ ಪಠ್ಯಕ್ರಮಕ್ಕೆ ಸರಿಸಮವಾಗಿ ಮುಂದುವರಿಯುತ್ತಿದ್ದಾರೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿತ್ತು.”
ಆಸ್ಟ್ರೇಲಿಯದ ಡೇವಿಡ್ ಮತ್ತು ಜ್ಯಾನೀಟರು, ತಮ್ಮ ಇಬ್ಬರು ಹುಡುಗರ ಕುರಿತಾದ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. “ಬೇರೆಯವರು ಹೇಗೆ ಜೀವಿಸುತ್ತಾರೆ ಎಂಬುದನ್ನು ನಮ್ಮ ಹುಡುಗರು ನೋಡಬೇಕು ಎಂಬುದು ನಮ್ಮ ಬಯಕೆಯಾಗಿತ್ತು. ನಾವು ಯಾವ ರೀತಿಯ ಜೀವನ ಶೈಲಿಯಲ್ಲಿ ಬೆಳೆಸಲ್ಪಟ್ಟಿದ್ದೇವೋ ಅದು ಸರ್ವಸಾಮಾನ್ಯವಾದದ್ದಾಗಿದೆ ಎಂದು ಭಾವಿಸುವುದು ತುಂಬ ಸುಲಭವಾಗಿರುವುದಾದರೂ, ವಾಸ್ತವದಲ್ಲಿ ಲೋಕದ ಜನಸಂಖ್ಯೆಯಲ್ಲಿ, ಈ ರೀತಿಯ ಜೀವನ ಶೈಲಿಯನ್ನು ಅನುಸರಿಸುವವರು ಕೊಂಚ ಮಂದಿ ಮಾತ್ರ. ಯಾವುದೇ ದೇಶವಾಗಲಿ ಅಥವಾ ಯಾವುದೇ ಸಂಸ್ಕೃತಿಯಿರಲಿ, ಇಡೀ ಲೋಕದಲ್ಲಿ ದೇವಪ್ರಭುತ್ವ ಮೂಲತತ್ವಗಳು ಹೇಗೆ ಕಾರ್ಯನಡಿಸುತ್ತವೆ ಎಂಬುದನ್ನು ಸಹ ಅವರು ನೋಡಿದ್ದಾರೆ.”
“1969ರಲ್ಲಿ ನಮ್ಮ ಕುಟುಂಬವು ಇಂಗ್ಲೆಂಡ್ನಿಂದ ಸ್ಥಳಾಂತರಿಸಿದಾಗ ನಾನು ಕೇವಲ ನಾಲ್ಕು ವರ್ಷ ಪ್ರಾಯದವನಾಗಿದ್ದೆ” ಎಂದು ಕೆನ್ ಜ್ಞಾಪಿಸಿಕೊಳ್ಳುತ್ತಾನೆ. “ಹುಲ್ಲಿನ ಛಾವಣಿಯಿದ್ದ ಒಂದು ಮಣ್ಣಿನ ಗುಡಿಸಿಲಿನಲ್ಲಿ ನಾವು ವಾಸಿಸಬೇಕು ಎಂದು ನಾನು ಕನಸುಕಂಡಿದ್ದೆ. ಆದರೆ ನನ್ನ ಆಸೆಯು ಈಡೇರಲಿಲ್ಲವೆಂದು ನನಗೆ ನಿರಾಶೆಯಾಯಿತಾದರೂ, ನನ್ನನ್ನು ತುಂಬ ಅತ್ಯುತ್ತಮ ರೀತಿಯಲ್ಲಿ ಬೆಳೆಸಲಾಯಿತು ಎಂದು ನನಗನಿಸಿತು. ಇದೇ ರೀತಿಯ ಆರೈಕೆ ಸಿಗದ ಬೇರೆ ಮಕ್ಕಳನ್ನು ನೋಡಿದಾಗ ನನಗೆ ಯಾವಾಗಲೂ ಬೇಸರವಾಗುತ್ತಿತ್ತು! ಮಿಷನೆರಿಗಳು ಮತ್ತು ವಿಶೇಷ ಪಯನೀಯರರೊಂದಿಗಿನ ಉತ್ತಮ ಸಹವಾಸದಿಂದಾಗಿ, ಒಂಬತ್ತರ ಪ್ರಾಯದಲ್ಲೇ ನಾನು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಆರಂಭಿಸಿದೆ.” ಈಗ ಕೆನ್ ಒಬ್ಬ ಸಂಚರಣ ಮೇಲ್ವಿಚಾರಕನಾಗಿದ್ದಾನೆ.
“ನಿಜವಾಗಿಯೂ ಎಕ್ವಡಾರ್ ಈಗ ನಮ್ಮ ಮನೆಯಾಗಿದೆ” ಎಂದು ಜೆಸೀಯ ಮಗಳಾದ ಗ್ಯಾಬ್ರೀಯೆಲ ಹೇಳುತ್ತಾಳೆ. “ನನ್ನ ಹೆತ್ತವರು ಇಲ್ಲಿಗೆ ಸ್ಥಳಾಂತರಿಸುವ ನಿರ್ಧಾರ ಮಾಡಿದ್ದಕ್ಕಾಗಿ ನನಗೆ ತುಂಬ ಸಂತೋಷವಾಗಿದೆ.”
ಇನ್ನೊಂದು ಕಡೆಯಲ್ಲಿ, ಕೆಲವು ಮಕ್ಕಳು ಬೇರೆ ಬೇರೆ ಕಾರಣಗಳಿಂದಾಗಿ ಒಗ್ಗಿಕೊಳ್ಳಲು ಅಸಮರ್ಥರಾದುದರಿಂದ, ಅವರ ಕುಟುಂಬಗಳು ತಮ್ಮ ಸ್ವದೇಶಗಳಿಗೆ ಹಿಂದಿರುಗಬೇಕಾಯಿತು. ಆದುದರಿಂದಲೇ ವಿದೇಶವೊಂದಕ್ಕೆ ಸ್ಥಳಾಂತರಿಸುವ ಮೊದಲು, ಒಮ್ಮೆ ಅಲ್ಲಿಗೆ ಭೇಟಿ ನೀಡುವುದು ಸೂಕ್ತವಾದದ್ದಾಗಿದೆ. ಈ ರೀತಿಯಲ್ಲಿ, ಸ್ವತಃ ನೋಡಿದ ಸಂಗತಿಗಳ ಆಧಾರದ ಮೇಲೆ, ಹೋಗಬೇಕೋ ಇಲ್ಲವೋ ಎಂಬ ನಿರ್ಣಯಗಳನ್ನು ಮಾಡಸಾಧ್ಯವಿದೆ.
ವಿದೇಶಕ್ಕೆ ಸ್ಥಳಾಂತರಿಸುವ ಮೂಲಕ ಸಿಗುವ ಆಶೀರ್ವಾದಗಳು
ಒಂದು ವಿದೇಶಿ ಕ್ಷೇತ್ರಕ್ಕೆ ಸ್ಥಳಾಂತರಿಸುವುದರಲ್ಲಿ ಅನೇಕ ಪಂಥಾಹ್ವಾನಗಳು ಹಾಗೂ ತ್ಯಾಗಗಳು ಖಂಡಿತವಾಗಿಯೂ ಒಳಗೊಂಡಿರುತ್ತವೆ. ಯಾರು ವಿದೇಶಕ್ಕೆ ಸ್ಥಳಾಂತರಿಸಿದ್ದಾರೋ ಅವರಿಗೆ, ತಾವು ಮಾಡಿದ ತ್ಯಾಗವು ಸಾರ್ಥಕವಾದದ್ದು ಎಂದನಿಸಿದೆಯೊ? ಇದರ ಬಗ್ಗೆ ಅವರೇ ನಮಗೆ ಹೇಳಲಿ.
ಜೆಸೀ: “ಆಂಬಾಟೊ ನಗರದಲ್ಲಿ ನಾವು ಸುಮಾರು ಹತ್ತು ವರ್ಷಗಳಿಂದ ಇದ್ದೇವೆ, ಮತ್ತು ಇಲ್ಲಿನ ಸಭೆಗಳ ಸಂಖ್ಯೆಯು 2ರಿಂದ 11ಕ್ಕೆ ಏರಿರುವುದನ್ನು ನಾವು ನೋಡಿದ್ದೇವೆ. ಇವುಗಳಲ್ಲಿ ಐದು ಸಭೆಗಳನ್ನು ಆರಂಭಿಸುವಂತಹ ಸುಯೋಗ ನಮಗಿತ್ತು, ಮತ್ತು ಎರಡು ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯದಲ್ಲಿಯೂ ನಾವು ಕೆಲಸಮಾಡಿದ್ದೇವೆ. ಒಂದು ವರ್ಷಕ್ಕೆ ಸರಾಸರಿ ಇಬ್ಬರು ಬೈಬಲ್ ವಿದ್ಯಾರ್ಥಿಗಳು ದೀಕ್ಷಾಸ್ನಾನಕ್ಕೆ ಅರ್ಹರಾಗುವಂತೆ ಸಹಾಯ ಮಾಡುವ ಆನಂದವನ್ನೂ ನಾವು ಅನುಭವಿಸಿದ್ದೇವೆ. ನನಗೆ ಒಂದೇ ಒಂದು ವಿಷಾದವಿದೆ, ಏನೆಂದರೆ ನಾವು ಹತ್ತು ವರ್ಷಗಳಿಗೆ ಮುಂಚೆಯೇ ಇಲ್ಲಿಗೆ ಸ್ಥಳಾಂತರಿಸಲಿಲ್ಲವಲ್ಲ ಎಂಬುದೇ.”
ಲಿಂಡ: “ಸುವಾರ್ತೆಯ ಬಗ್ಗೆ ಮತ್ತು ನಮ್ಮ ಪ್ರಯತ್ನಗಳ ಬಗ್ಗೆ ಜನರು ತೋರಿಸುವ ಗಣ್ಯತೆಯು ನಮ್ಮನ್ನು ತುಂಬ ಉತ್ತೇಜಿಸುತ್ತದೆ. ಉದಾಹರಣೆಗೆ, ಸುತ್ತಮುತ್ತಲೂ ದಟ್ಟಾರಣ್ಯವಿದ್ದ ಹಳ್ಳಿಯೊಂದರಲ್ಲಿ, ಆಲ್ಫಾನ್ಸೋ ಎಂಬ ಹೆಸರಿನ ಒಬ್ಬ ಬೈಬಲ್ ವಿದ್ಯಾರ್ಥಿಯಿದ್ದನು. ತಾನು ವಾಸಿಸುತ್ತಿರುವ ಕ್ಷೇತ್ರದಲ್ಲಿ ಬಹಿರಂಗ ಭಾಷಣಗಳನ್ನು ಏರ್ಪಡಿಸುವುದು ಎಷ್ಟು ಪ್ರಯೋಜನಕರವಾಗಿರಸಾಧ್ಯವಿದೆ ಎಂಬುದನ್ನು ಅವನು ಮನಗಂಡನು. ಆ ಹಳ್ಳಿಯಲ್ಲಿ ಮರದ ಮನೆಗಳು ಕೆಲವೇ ಇದ್ದವು ಮತ್ತು ಅವುಗಳಲ್ಲಿ ಇವನ ಮನೆಯೂ ಒಂದಾಗಿದ್ದು, ಅವನು ಹೊಸದಾಗಿ ಕಟ್ಟಲ್ಪಟ್ಟಿದ್ದ ತನ್ನ ಮರದ ಮನೆಗೆ ಸ್ಥಳಾಂತರಿಸಿ ಕೆಲವು ದಿನಗಳು ಕಳೆದಿದ್ದವಷ್ಟೇ. ಆದರೆ, ಈ ಹಳ್ಳಿಯಲ್ಲಿ ತನ್ನ ಮನೆಯು ಮಾತ್ರ ಯೆಹೋವನ ಆರಾಧನೆಗೆ ಯೋಗ್ಯವಾಗಿರುವ ಒಂದು ಕಟ್ಟಡವಾಗಿದೆ ಎಂದು ನಿರ್ಧರಿಸಿ, ತನ್ನ ಮನೆಯನ್ನು ಒಂದು ರಾಜ್ಯ ಸಭಾಗೃಹದೋಪಾದಿ ಉಪಯೋಗಿಸಲಿಕ್ಕಾಗಿ ಸಹೋದರರಿಗೆ ಕೊಟ್ಟುಬಿಟ್ಟು, ಅವನು ಪುನಃ ತನ್ನ ಹುಲ್ಲಿನ ಗುಡಿಸಿಲಿಗೆ ಹಿಂದಿರುಗಿದನು.”
ಜಿಮ್: “ಶುಶ್ರೂಷೆಯಲ್ಲಿ ನಾವು ಸ್ವತಃ ಜನರೊಂದಿಗೆ ಮಾತಾಡುತ್ತಾ ಕಳೆಯುವ ಸಮಯವು, ಅಮೆರಿಕದಲ್ಲಿ ನಾವು ಶುಶ್ರೂಷೆಯಲ್ಲಿ ಜನರೊಂದಿಗೆ ಮಾತಾಡುವುದರಲ್ಲಿ ಕಳೆಯುವ ಸಮಯಕ್ಕಿಂತ ಹತ್ತರಷ್ಟು ಹೆಚ್ಚಾಗಿರುತ್ತದೆ. ಅಷ್ಟುಮಾತ್ರವಲ್ಲ, ಇಲ್ಲಿನ ಜೀವನ ರೀತಿಯು ಹೆಚ್ಚು ಗಡಿಬಿಡಿಯದ್ದೇನಲ್ಲ. ಅಭ್ಯಾಸ ಹಾಗೂ ಕ್ಷೇತ್ರ ಸೇವೆಗಾಗಿ ಹೆಚ್ಚು ಸಮಯವು ದೊರಕುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.”
ಸ್ಯಾಂಡ್ರ: “ಬೈಬಲ್ ಸತ್ಯತೆಯು ಹೇಗೆ ಜನರನ್ನು ಹೆಚ್ಚು ಉತ್ತಮ ವ್ಯಕ್ತಿಗಳಾಗಿ ಬದಲಾಯಿಸಬಲ್ಲದು ಎಂಬುದನ್ನು ನೋಡುವುದು ನನಗೆ ತುಂಬ ಸಂತೃಪ್ತಿಯನ್ನು ತರುತ್ತದೆ. ಒಂದು ಚಿಕ್ಕ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದ 69 ವರ್ಷ ಪ್ರಾಯದ ಆಮಾಡಾ ಎಂಬ ಸ್ತ್ರೀಯೊಂದಿಗೆ ನಾನು ಬೈಬಲ್ ಅಭ್ಯಾಸಮಾಡಿದೆ. ಅವಳು ಯಾವಾಗಲೂ ಐದು ಲೀಟರ್ ಹಾಲಿಗೆ ಒಂದು ಲೀಟರ್ನಷ್ಟು ನೀರನ್ನು ಸೇರಿಸಿ ಮಾರುತ್ತಿದ್ದಳು. ಅಷ್ಟುಮಾತ್ರವಲ್ಲ, ಈ ನೀರುಹಾಲನ್ನು ಸರಿಯಾದ ಅಳತೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಾರಿ, ತನ್ನ ಗಿರಾಕಿಗಳಿಗೆ ಮೋಸಮಾಡುತ್ತಿದ್ದಳು. ಆದರೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 13ನೆಯ ಅಧ್ಯಾಯದಲ್ಲಿರುವ ‘ಪ್ರಾಮಾಣಿಕತೆ ಸಂತೋಷದಲ್ಲಿ ಪರಿಣಮಿಸುತ್ತದೆ’ ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಅಭ್ಯಾಸಿಸಿದ ಬಳಿಕ, ಆಮಾಡಾಳು ಮೋಸಮಾಡುವುದನ್ನು ನಿಲ್ಲಿಸಿಬಿಟ್ಟಳು. ಅದರ ನಂತರ ಸ್ವಲ್ಪ ಸಮಯದೊಳಗೆ ಅವಳು ದೀಕ್ಷಾಸ್ನಾನ ಪಡೆದುಕೊಳ್ಳುವುದನ್ನು ನೋಡುವುದು ಎಷ್ಟು ಆನಂದದಾಯಕವಾಗಿತ್ತು!”
ಕ್ಯಾರನ್: “ಇಲ್ಲಿ ನಾನು ಹಿಂದೆಂದಿಗಿಂತಲೂ ಹೆಚ್ಚಾಗಿ ಯೆಹೋವನ ಮೇಲೆ ಅವಲಂಬಿತಳಾಗಿದ್ದೇನೆ ಮತ್ತು ಆತನು ನನ್ನನ್ನು ಇಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಉಪಯೋಗಿಸುತ್ತಿದ್ದಾನೆ. ಯೆಹೋವನೊಂದಿಗಿನ ನನ್ನ ಸ್ನೇಹವು ಹೆಚ್ಚು ಆಪ್ತವಾಗಿದೆ ಮತ್ತು ಹೆಚ್ಚು ಬಲಗೊಂಡಿದೆ.”
ನಿಮ್ಮ ಕುರಿತಾಗಿ ಏನು?
ಅನೇಕ ವರ್ಷಗಳಿಂದ ಸಾವಿರಾರು ಮಂದಿ ಸಾಕ್ಷಿಗಳು ಹೊರದೇಶಗಳಲ್ಲಿ ಸೇವೆಮಾಡಲು ಹೋಗಿದ್ದಾರೆ. ಕೆಲವರು ಒಂದೆರಡು ವರ್ಷಗಳ ವರೆಗೆ ಅಲ್ಲಿ ಉಳಿಯುತ್ತಾರೆ, ಇನ್ನು ಕೆಲವರು ಅನಿಶ್ಚಿತ ಸಮಯದ ವರೆಗೆ ಅಲ್ಲಿರುತ್ತಾರೆ. ಒಂದು ವಿದೇಶಿ ಕ್ಷೇತ್ರದಲ್ಲಿ ರಾಜ್ಯಾಭಿರುಚಿಗಳನ್ನು ವ್ಯಾಪಕವಾಗಿ ಹಬ್ಬಿಸುವ ಗುರಿಯೊಂದಿಗೆ, ಅವರು ತಮ್ಮೊಂದಿಗೆ ತಮ್ಮ ಅನುಭವ, ಆತ್ಮಿಕ ಪ್ರೌಢತೆ, ಮತ್ತು ಆರ್ಥಿಕ ಸಂಪನ್ಮೂಲಗಳನ್ನು ತರುತ್ತಾರೆ. ಐಹಿಕ ಕೆಲಸವು ವಿರಳವಾಗಿರುವ ಕಾರಣದಿಂದ ಎಲ್ಲಿ ಸ್ಥಳಿಕ ರಾಜ್ಯ ಪ್ರಚಾರಕರು ಸೇವೆಮಾಡಲು ಅಸಮರ್ಥರಾಗಿದ್ದಾರೋ ಅಂತಹ ಕ್ಷೇತ್ರಗಳಲ್ಲಿ ಅವರು ಸೇವೆಮಾಡಲು ಶಕ್ತರಾಗಿದ್ದಾರೆ. ಬೇರಾವುದೇ ರೀತಿಯಲ್ಲಿ ತಲಪಲು ಕಷ್ಟಕರವಾದ ಕ್ಷೇತ್ರಗಳಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ಅನೇಕರು ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದ್ದಾರೆ. ನಗರದ ಜೀವನವನ್ನು ಇಷ್ಟಪಡುವ ಇನ್ನಿತರರು, ಎಲ್ಲಿ ಕೆಲವೇ ಮಂದಿ ಹಿರಿಯರು ಇದ್ದಾರೋ ಆ ದೊಡ್ಡ ಸಭೆಗಳಲ್ಲಿನ ಹಿರಿಯರಿಗೆ ಸಹಾಯಮಾಡುತ್ತಿದ್ದಾರೆ. ಆದರೂ, ತಮಗೆ ಸಿಕ್ಕಿರುವಂತಹ ಆತ್ಮಿಕ ಆಶೀರ್ವಾದಗಳು ತಾವು ಮಾಡಿರುವ ತ್ಯಾಗಗಳಿಗಿಂತಲೂ ಎಷ್ಟೋ ಹೆಚ್ಚಾಗಿವೆ ಎಂದು ಅವರೆಲ್ಲರೂ ದೃಢವಾಗಿ ಹೇಳುತ್ತಾರೆ.
ಒಂದು ವಿದೇಶಿ ಕ್ಷೇತ್ರದಲ್ಲಿ ಸೇವೆಮಾಡುವ ಸುಯೋಗದಲ್ಲಿ ನೀವು ಪಾಲ್ಗೊಳ್ಳಬಲ್ಲಿರೊ? ನಿಮ್ಮ ಪರಿಸ್ಥಿತಿಗಳು ಅನುಕೂಲಕರವಾಗಿರುವಲ್ಲಿ, ಈ ರೀತಿಯ ಸೇವಾಸುಯೋಗವನ್ನು ಕೈಕೊಳ್ಳುವ ಸಾಧ್ಯತೆಯ ಕುರಿತು ನೀವು ಯಾಕೆ ವಿಚಾರಿಸಿ ನೋಡಬಾರದು? ಮೊಟ್ಟಮೊದಲ ಹಾಗೂ ಅತ್ಯಗತ್ಯವಾದ ಒಂದು ಹೆಜ್ಜೆಯು, ನೀವು ಯಾವ ದೇಶದಲ್ಲಿ ಸೇವೆಮಾಡಲು ಬಯಸುತ್ತಿದ್ದೀರೋ ಆ ದೇಶದಲ್ಲಿರುವ ಸೊಸೈಟಿಯ ಬ್ರಾಂಚ್ ಆಫೀಸಿಗೆ ಪತ್ರ ಬರೆಯುವುದೇ ಆಗಿದೆ. ನಿಮಗೆ ದೊರಕುವ ನಿರ್ದಿಷ್ಟ ಮಾಹಿತಿಯು, ನಿಮ್ಮ ಯೋಜನೆಯನ್ನು ನೀವು ಕಾರ್ಯರೂಪಕ್ಕೆ ತರುವಂತೆ ನಿಮಗೆ ಸಹಾಯ ಮಾಡುವುದು. ಇದಕ್ಕೆ ಕೂಡಿಸಿ, ಆಗಸ್ಟ್ 15, 1988ರ ಕಾವಲಿನಬುರುಜು (ಇಂಗ್ಲಿಷ್) ಸಂಚಿಕೆಯ ‘ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ಹೊರಟುಹೋಗು’ ಎಂಬ ಲೇಖನದಲ್ಲಿ ಅನೇಕ ಪ್ರಾಯೋಗಿಕ ಸಲಹೆಗಳನ್ನು ಕಂಡುಕೊಳ್ಳಸಾಧ್ಯವಿದೆ. ಸರಿಯಾದ ಯೋಜನೆ ಮತ್ತು ಯೆಹೋವನ ಆಶೀರ್ವಾದದಿಂದ, ಒಂದು ವಿದೇಶಿ ಕ್ಷೇತ್ರದಲ್ಲಿ ಸೇವೆಮಾಡುವುದರ ಆನಂದವನ್ನು ನೀವು ಸಹ ಅನುಭವಿಸಸಾಧ್ಯವಿದೆ.
[ಪುಟ 24 ರಲ್ಲಿರುವ ಚಿತ್ರ]
ಶ್ವಾರ್ ಇಂಡಿಯನರು ವಾಸಿಸುತ್ತಿರುವ ಸ್ಥಳಕ್ಕೆ ನಡಿಸುವ ಒಂದು ಕಾಲುದಾರಿಯಲ್ಲಿ ಟಾಮ್ ಹಾಗೂ ಲಿಂಡ
[ಪುಟ 25 ರಲ್ಲಿರುವ ಚಿತ್ರ]
ಎಕ್ವಡಾರ್ನ ರಾಜಧಾನಿಯಾದ ಕ್ವಿಟೊದಲ್ಲಿ ಅನೇಕರು ಸೇವೆಮಾಡುತ್ತಿದ್ದಾರೆ
[ಪುಟ 25 ರಲ್ಲಿರುವ ಚಿತ್ರ]
ಆ್ಯಂಡೀಸ್ ಪರ್ವತಪ್ರಾಂತದಲ್ಲಿ ಸಾರುತ್ತಿರುವ ಮಾಕೀಕೋ
[ಪುಟ 26 ರಲ್ಲಿರುವ ಚಿತ್ರ]
ಕಳೆದ ಐದು ವರ್ಷಗಳಿಂದ ಹಿಲ್ಬಿಗ್ ಕುಟುಂಬವು ಎಕ್ವಡಾರ್ನಲ್ಲಿ ಸೇವೆಮಾಡುತ್ತಿದೆ