ಅಧಿಕಾರಕ್ಕೆ ಏನು ಸಂಭವಿಸಿರುತ್ತದೆ?
ವಿವೇಚನೆಯುಳ್ಳ ಜನರು ಅಧಿಕಾರದ ಅಗತ್ಯವನ್ನು ಕಾಣುತ್ತಾರೆ. ಯಾವುದೇ ವಿಧದ ಒಂದು ಅಧಿಕಾರ ರಚನೆಯು ಇರದಿದ್ದಲ್ಲಿ, ಮಾನವ ಸಮಾಜವು ಬಲುಬೇಗನೆ ಅವ್ಯವಸ್ಥೆಗೆ ಒಳಗಾಗುವುದು. ಆದುದರಿಂದ ಒಂದು ಸಾಂಸ್ಕೃತಿಕ ಫ್ರೆಂಚ್ ಪಠ್ಯಪುಸ್ತಕವು ಸಾಂವಿಧಾನಿಕ ನಿಯಮದ ಕುರಿತು ಹೇಳುವುದು: “ಯಾವುದೇ ಮಾನವ ಗುಂಪಿನಲ್ಲಿ ಎರಡು ವರ್ಗದ ಜನರು ಕಂಡುಬರುತ್ತಾರೆ: ಆಜ್ಞೆಕೊಡುವವರು ಮತ್ತು ವಿಧೇಯರಾಗುವವರು, ಅಪ್ಪಣೆ ಮಾಡುವವರು ಮತ್ತು ಪಾಲಿಸುವವರು, ಮುಖಂಡರು ಮತ್ತು ಸದಸ್ಯರು, ಆಳುವವರು ಮತ್ತು ಆಳಲ್ಪಡುವವರು. . . . ಅಧಿಕಾರದ ಅಸ್ತಿತ್ವವನ್ನು ಯಾವುದೇ ಮಾನವ ಸಮಾಜದಲ್ಲಿ ಅವಲೋಕಿಸಸಾಧ್ಯವಿದೆ.”a
ಆದರೂ, ಅಧಿಕಾರದ ಕಡೆಗಿನ ಮನೋಭಾವಗಳು ಲೋಕ ಯುದ್ಧ II ರಿಂದ ಮತ್ತು ವಿಶೇಷವಾಗಿ 1960 ಗಳಿಂದ ಬದಲಾಗಿರುತ್ತವೆ. ಆ ಅವಧಿಯ ಕುರಿತು ಹೇಳಿಕೆ ಕೊಡುತ್ತಾ, ಫ್ರೆಂಚ್ ಎನ್ಸೈಕ್ಲೊಪೀಡಿಯ ಯೂನಿವರ್ಸಾಲಿಸ್, ಒಂದು “ಪುರೋಹಿತಪ್ರಭುತ್ವ ವಿರುದ್ಧ ಮತ್ತು ಅಧಿಕಾರವಿರುದ್ಧ ಬಿಕ್ಕಟ್ಟು” ಇದರ ಕುರಿತು ಮಾತಾಡಿದೆ. ಅಂತಹ ಒಂದು ಬಿಕ್ಕಟ್ಟು ಬೈಬಲ್ ವಿದ್ಯಾರ್ಥಿಗಳಿಗೇನೂ ಅಶ್ಚರ್ಯವಲ್ಲ. ಅಪೊಸ್ತಲ ಪೌಲನು ಮುಂತಿಳಿಸಿದ್ದು: “ಈ ಲೋಕದ ಕೊನೆಯ ಯುಗವು ಒಂದು ಸಂಕ್ಷೋಭೆಯ ಸಮಯವಾಗಿರುವುದೆಂದು ನೆನಪಿಡಿರಿ! ಜನರು ತಮ್ಮನ್ನು ಮತ್ತು ಹಣವನ್ನು ಹೊರತು ಬೇರೇನನ್ನೂ ಪ್ರೀತಿಸರು. ಅವರು ಬಡಾಯಿಕೊಚ್ಚುವವರು, ಅಹಂಕಾರಿಗಳು, ಮತ್ತು ದೂಷಕರು, ಹೆತ್ತವರಿಗೆ ಅವಿಧೇಯರು ಆಗಿರುವರು. . . . ಅವರು ತಮ್ಮ ದ್ವೇಷಗಳಲ್ಲಿ ಕಠೋರರೂ . . . ಅಂಕೆತಪ್ಪಿದವರೂ ಉಗ್ರತೆಯುಳ್ಳವರೂ . . . ಸ್ವಪ್ರತಿಷ್ಠೆಯಿಂದ ಉಬ್ಬಿದವರೂ ಆಗಿರುವರು. ಅವರು ತಮ್ಮ ದೇವರಿಗಿಂತ ಹೆಚ್ಚಾಗಿ ತಮ್ಮ ಭೋಗಗಳನ್ನು ಪ್ರೀತಿಸುವವರಾಗಿರುವರು.”—2 ತಿಮೊಥೆಯ 3:1-4, ದ ರಿವೈಸ್ಡ್ ಇಂಗ್ಲಿಷ್ ಬೈಬಲ್.
ಅಧಿಕಾರ ಬಿಕ್ಕಟ್ಟಿನಲ್ಲಿ
ಈ ಪ್ರವಾದನೆಯು ನಮ್ಮ ದಿನ ಮತ್ತು ಯುಗವನ್ನು ಚೆನ್ನಾಗಿ ವರ್ಣಿಸುತ್ತದೆ. ಅಧಿಕಾರವು ಎಲ್ಲಾ ಮಟ್ಟಗಳಲ್ಲಿ—ಕುಟುಂಬ, ಸಾರ್ವಜನಿಕ ಶಾಲೆ, ವಿಶ್ವವಿದ್ಯಾಲಯ, ವ್ಯಾಪಾರೋದ್ಯಮ, ಸ್ಥಳಿಕ ಮತ್ತು ರಾಷ್ಟ್ರೀಯ ಸರಕಾರಗಳಲ್ಲಿ ಪ್ರತಿಭಟಿಸಲ್ಪಡುತ್ತದೆ. ಲೈಂಗಿಕ ಕ್ರಾಂತಿ, ಗಡುಸಾದ ರ್ಯಾಪ್ ಸಂಗೀತ, ವಿದ್ಯಾರ್ಥಿ ಪ್ರದರ್ಶನಗಳು, ಸಮ್ಮತಿರಹಿತ ಮುಷ್ಕರಗಳು, ಪೌರ ಆಜ್ಞೋಲ್ಲಂಘನೆ, ಮತ್ತು ಭಯೋತ್ಪಾದಕ ಕೃತ್ಯಗಳೆಲ್ಲಾ ಅಧಿಕಾರಕ್ಕೆ ಗೌರವದಲ್ಲಿ ಒಂದು ಒಡಕಿನ ಚಿಹ್ನೆಗಳಾಗಿವೆ.
ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕಲ್ ಸೈಎನ್ಸ್ ಮತ್ತು ಪ್ಯಾರಿಸ್ ದೈನಿಕ ಲ ಮಾಂಡ್ ಇವುಗಳಿಂದ, ಪ್ಯಾರಿಸ್ನಲ್ಲಿ ಏರ್ಪಡಿಸಲ್ಪಟ್ಟ ಒಂದು ಭಾಷಣಮಾಲೆಯಲ್ಲಿ ಪ್ರೊಫೆಸರ್ ಈವ್ ಮೇನಿ ಹೇಳಿದ್ದು: “ನ್ಯಾಯಬದ್ಧತೆಯಿಂದ ಬೆಂಬಲಿಸಲ್ಪಟ್ಟರೆ ಮಾತ್ರ ಅಧಿಕಾರವು ಅಸ್ತಿತ್ವದಲ್ಲಿರಬಲ್ಲದು.” ಇಂದಿನ ಅಧಿಕಾರದ ಬಿಕ್ಕಟ್ಟಿಗೆ ಒಂದು ಕಾರಣವೇನಂದರೆ ಅಧಿಕಾರದಲ್ಲಿರುವವರ ನ್ಯಾಯಬದ್ಧತೆಯನ್ನು ಅನೇಕರು ಸಂದೇಹಿಸುತ್ತಾರೆ. ಅಂದರೆ ಅಧಿಕಾರದಲ್ಲಿರುವುದಕ್ಕೆ ಅವರಿಗಿರುವ ಹಕ್ಕಿನ ಕುರಿತು ಅವರು ಸಂದೇಹಿಸುತ್ತಾರೆ. ಒಂದು ಸಮೀಕ್ಷೆಯು ಪ್ರಕಟಿಸಿದ್ದೇನಂದರೆ 1980 ಗಳ ಆರಂಭದಲ್ಲಿ, ಅಮೆರಿಕದ ಜನಸಂಖ್ಯೆಯ 9 ಪ್ರತಿಶತ, ಆಸ್ಟ್ರೇಲಿಯದಲ್ಲಿ 10 ಪ್ರತಿಶತ, ಬ್ರಿಟನ್ನಲ್ಲಿ 24 ಪ್ರತಿಶತ, ಫ್ರಾನ್ಸ್ನಲ್ಲಿ 26 ಪ್ರತಿಶತ, ಮತ್ತು ಭಾರತದಲ್ಲಿ 41 ಪ್ರತಿಶತ ಜನರು ತಮ್ಮ ಸರಕಾರವು ನ್ಯಾಯಬದ್ಧವಾದುದಲ್ಲವೆಂದು ಪರಿಗಣಿಸಿದರು.
ನ್ಯಾಯಬದ್ಧ ಅಧಿಕಾರಕ್ಕಾಗಿ ಮನುಷ್ಯನ ಹುಡುಕಾಟ
ಬೈಬಲ್ಗೆ ಅನುಸಾರವಾಗಿ, ಮನುಷ್ಯನು ಮೂಲದಲ್ಲಿ ದೇವರ ನೇರವಾದ ಅಧಿಕಾರದ ಕೆಳಗಿದ್ದನು. (ಆದಿಕಾಂಡ 1:27, 28; 2:16, 17) ಆದರೆ ಅತ್ಯಾರಂಭದಲ್ಲೇ, ಮನುಷ್ಯರು ತಮ್ಮ ನಿರ್ಮಾಣಿಕನಿಂದ ನೈತಿಕ ಸ್ವಾತಂತ್ರ್ಯದ ಹಕ್ಕು ಕೇಳಿಕೊಂಡರು. (ಆದಿಕಾಂಡ 3:1-6) ದೇವಪ್ರಭುತ್ವವನ್ನು ಅಥವಾ ದೇವರಾಳಿಕೆಯನ್ನು ತಿರಸ್ಕರಿಸಿದ ಮೇಲೆ, ಅಧಿಕಾರದ ಬೇರೆ ವ್ಯವಸ್ಥೆಗಳನ್ನು ಅವರು ಕಂಡುಕೊಳ್ಳಬೇಕಾಯಿತು. (ಪ್ರಸಂಗಿ 8:9) ಕೆಲವರು ತಮ್ಮ ಅಧಿಕಾರವನ್ನು ಬಲಾತ್ಕಾರದಿಂದ ಒತ್ತಿಹೇಳಿದರು. ಅವರಿಗೆ ಶಕ್ತಿಯು ಹಕ್ಕಾಗಿತ್ತು. ತಮ್ಮ ಚಿತ್ತವನ್ನು ಜಾರಿಗೆ ತರಲು ಅವರು ಸಾಕಷ್ಟು ಬಲಶಾಲಿಗಳಾಗಿದ್ದದ್ದೆ ಸಾಕಿತ್ತು. ಹೆಚ್ಚಿನವರಾದರೊ ತಮ್ಮ ಆಳುವ ಹಕ್ಕನ್ನು ನ್ಯಾಯಬದ್ಧವಾಗಿ ಮಾಡುವ ಅಗತ್ಯವನ್ನು ಕಂಡರು.
ಅತ್ಯಾರಂಭದ ಸಮಯದಿಂದಲೂ ಅನೇಕ ಅಧಿಪತಿಗಳು ತಾವು ದೇವರುಗಳಾಗಿದ್ದರೆಂದು ಅಥವಾ ದೇವರುಗಳಿಂದ ಅಧಿಕಾರ ಹೊಂದಿದ್ದರೆಂದು ಹೇಳುವ ಮೂಲಕ ಇದನ್ನು ಮಾಡಿದರು. ಆರಂಭದ ಮೆಸಪೊಟೇಮ್ಯದ ಅಧಿಪತಿಗಳಿಂದ ಮತ್ತು ಪುರಾತನ ಐಗುಪ್ತದ ಫರೋಹರುಗಳಿಂದ ವಾದಿಸಲ್ಪಟ್ಟಿದ್ದ “ಪವಿತ್ರ ರಾಜಪದ”ದ ಪೌರಾಣಿಕ ಕಲ್ಪನೆ ಇದಾಗಿದೆ.
ಮಹಾ ಅಲೆಕ್ಸಾಂಡರ್, ಅವನ ಉತ್ತರಾಧಿಕಾರಿಗಳಾದ ಗ್ರೀಕ್ ಅರಸುಗಳು ಮತ್ತು ರೋಮನ್ ಸಮ್ರಾಟರಲ್ಲಿ ಅನೇಕರು ಸಹ ತಾವು ದೇವರುಗಳೆಂದು ವಾದಿಸಿದರು ಮತ್ತು ಆರಾಧಿಸಲ್ಪಡಲು ಸಹ ನಿರ್ಬಂಧಪಡಿಸಿದರು. ಅಂಥ ಅರಸುಗಳ ಕೆಳಗಿನ ವ್ಯವಸ್ಥೆಗಳು “ಶಾಸಕ ಪಂಥಗಳು” ಎಂದು ಕರೆಯಲ್ಪಟ್ಟಿದ್ದವು, ಮತ್ತು ಅವುಗಳ ಉದ್ದೇಶವು ಜಯಿಸಲ್ಪಟ್ಟ ಮಿಶ್ರ ಜನತೆಯ ಮೇಲೆ ಅರಸನ ಅಧಿಕಾರವನ್ನು ದೃಢಗೊಳಿಸುವುದಾಗಿತ್ತು. ಅರಸನನ್ನು ಆರಾಧಿಸಲು ನಿರಾಕರಣೆಯು ರಾಜ್ಯ ವಿರುದ್ಧ ಕೃತ್ಯವಾಗಿ ಖಂಡಿಸಲಾಗುತ್ತಿತ್ತು. ದ ಲೆಗಸಿ ಆಫ್ ರೋಮ್ ಪುಸ್ತಕದಲ್ಲಿ ಪ್ರೊಫೆಸರ್ ಅರ್ನೆಸ್ಟ್ ಬಾರ್ಕರ್ ಬರೆದದ್ದು: “[ರೋಮನ್] ಸಮ್ರಾಟನ ದೈವೀಕರಣವು, ಮತ್ತು ಅವನ ದೇವತ್ವದ ಶ್ರೇಷ್ಠತ್ವದಲ್ಲಿ ಅವನು ಪಡೆಯುವ ಸ್ವಾಮಿನಿಷ್ಠೆಯು, ಸಾಮ್ರಾಜ್ಯದ ತಳಪಾಯ, ಅಂತೂ ಕಲ್ಲುಗಾರೆಯಾಗಿತ್ತೆಂಬದು ಸುವ್ಯಕ್ತ.”
“ಕ್ರೈಸ್ತತ್ವ”ವು, (ಸಾ.ಶ. 306-337ರಲ್ಲಿ ಆಳಿದ) ಸಮ್ರಾಟ ಕಾನ್ಸ್ಟಾಂಟಿನನಿಂದ ನ್ಯಾಯಬದ್ಧವಾಗಿ ಮಾಡಲ್ಪಟ್ಟು, ತರುವಾಯ (ಸಾ.ಶ. 379-395ರಲ್ಲಿ ಆಳಿದ) ಸಮ್ರಾಟ 1ನೆಯ ಥಿಯೊಡೊಸಿಯಸ್ನಿಂದ ರೋಮನ್ ಸಾಮ್ರಾಜ್ಯದ ರಾಜ್ಯ ಧರ್ಮವಾಗಿ ಸ್ವೀಕರಿಸಲ್ಪಟ್ಟ ಅನಂತರವೂ ಇದು ಸತ್ಯವಾಗಿ ಉಳಿಯಿತು. ಕೆಲವು “ಕ್ರೈಸ್ತ” ಸಮ್ರಾಟರು ಸಾ.ಶ. ಐದನೆಯ ಶತಮಾನದ ತನಕವೂ ದೇವರುಗಳಾಗಿ ಆರಾಧಿಸಲ್ಪಟ್ಟಿದ್ದರು.
“ಎರಡು ಅಧಿಕಾರಗಳು,” “ಎರಡು ಕತ್ತಿಗಳು”
ಪೋಪರ ಆಡಳಿತವು ಅಧಿಕ ಬಲಾಢ್ಯವಾದಂತೆ, ಚರ್ಚು ಮತ್ತು ರಾಜ್ಯದ ನಡುವಣ ಸಮಸ್ಯೆಗಳು ತೀವ್ರವಾಗತೊಡಗಿದವು. ಆದಕಾರಣ, ಐದನೆಯ ಶತಮಾನದ ಕೊನೆಯಲ್ಲಿ, ಪೋಪ್ ಗೆಲಾಸಿಯುಸ್ “ಎರಡು ಅಧಿಕಾರಗಳ” ತತ್ವವನ್ನು ಮುಂತಂದನು: ಪೋಪರುಗಳ ಪವಿತ್ರ ಅಧಿಕಾರವು ಅರಸುಗಳ ರಾಜ್ಯಾಧಿಕಾರದೊಂದಿಗೆ ಸಹಭಾವಿಯಾಗಿದ್ದು—ಅರಸುಗಳು ಪೋಪರುಗಳಿಗೆ ಅಧೀನರಾಗಿರುವುದು. ಈ ತತ್ವವು ತದನಂತರ “ಎರಡು ಕತ್ತಿಗಳ” ಬೋಧನೆಯಾಗಿ ವಿಕಾಸಗೊಂಡಿತು: “ಆತ್ಮಿಕ ಕತ್ತಿಯನ್ನು ಪೋಪರುಗಳು ತಾವೇ ಚಲಾಯಿಸುತ್ತಿದ್ದು, ಐಹಿಕ ಕತ್ತಿಯನ್ನು ಲೌಕಿಕ ಅರಸರಿಗೆ ವಹಿಸಿಕೊಟ್ಟರು, ಆದರೂ ಅನಂತರದವರು ಐಹಿಕ ಕತ್ತಿಯನ್ನು ಮಾತ್ರ ಪೋಪ್ ಆಡಳಿತದ ಮಾರ್ಗದರ್ಶನಕ್ಕೆ ಅನುಗುಣವಾಗಿ ಬಳಸಬೇಕು.” (ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ) ಈ ಬೋಧನೆಯ ಆಧಾರದ ಮೇಲೆ, ಮಧ್ಯ ಯುಗಗಳ ಸಮಯದಲ್ಲಿ, ಅವರ ಅಧಿಕಾರವನ್ನು ನ್ಯಾಯಬದ್ಧವಾಗಿ ಮಾಡುವುದಕ್ಕಾಗಿ ಸಮ್ರಾಟರಿಗೆ ಮತ್ತು ಅರಸರಿಗೆ ಪಟ್ಟಕಟ್ಟುವ ಹಕ್ಕನ್ನು ಕ್ಯಾತೊಲಿಕ್ ಚರ್ಚು ತನ್ನದೆಂದು ಹೇಳಿತು, ಹೀಗೆ “ಪವಿತ್ರ ರಾಜಪದ”ದ ಪುರಾತನ ಮಿಥ್ಯೆಯನ್ನು ನಿರಂತರಗೊಳಿಸಿತು.
ಆದರೂ ಇದನ್ನು, ಪೋಪರ ಆಡಳಿತಕ್ಕೆ ಅಧೀನತೆಯಿಂದ ರಾಜಕೀಯ ಅರಸುಗಳನ್ನು ಮುಕ್ತಗೊಳಿಸುವ ಹೇತುವಿನಿಂದ ತದನಂತರ ವಿಕಾಸಗೊಂಡ ಅರಸುಗಳ ದೈವಿಕ ಹಕ್ಕು ಎನ್ನಲಾಗುವ ವಿಷಯದೊಂದಿಗೆ ತೊಡಕಿಸಬಾರದು. ಅರಸರು ತಮ್ಮ ಆಳುವ ಅಧಿಕಾರವನ್ನು ರೋಮಿನ ಪೋಪರ ಮೂಲಕವಾಗಿ ಅಲ್ಲ, ನೇರವಾಗಿ ದೇವರಿಂದಲೇ ಪಡೆಯುತ್ತಾರೆಂದು ದೈವಿಕ-ಹಕ್ಕು ಕಲ್ಪನೆಯು ಎತ್ತಿಹಿಡಿಯುತ್ತದೆ. ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಪೋಪರು ರಾಜ್ಯದ ಧುರೀಣರ ಮೇಲೆ ಸಾರ್ವತ್ರಿಕ ಆತ್ಮಿಕ ಮತ್ತು ಐಹಿಕ ಶಕ್ತಿಯನ್ನು ಸಹ ತೋರಿಸುತ್ತಿದ್ದ ಒಂದು ಸಮಯದಲ್ಲಿ, ದೈವಿಕ ಹಕ್ಕು ಎಂಬ ವಿಚಾರವು ರಾಷ್ಟ್ರೀಯ ರಾಜ್ಯಗಳ ಅರಸುಗಳನ್ನು ತಮ್ಮ ಅಧಿಕಾರವು ಪೋಪರದಷ್ಟೆ ಸಮಾನ ದೈವಿಕವಾದದ್ದೆಂದು ಸಮರ್ಥಿಸುವ ಒಂದು ಸ್ಥಾನದಲ್ಲಿ ಹಾಕಿತು.”b
ಜನಪ್ರಿಯ ಸಾರ್ವಭೌಮತ್ವದ ಮಿಥ್ಯೆ
ಸಮಯವು ದಾಟಿಹೋದಂತೆ, ಜನರು ಅಧಿಕಾರದ ಇತರ ಮೂಲಗಳನ್ನು ಸೂಚಿಸಿದರು. ಜನತೆಯ ಸಾರ್ವಭೌಮತ್ವ ಅದರಲ್ಲೊಂದಾಗಿತ್ತು. ಈ ವಿಚಾರವು ಗ್ರೀಸ್ನಲ್ಲಿ ಪ್ರಾರಂಭಿಸಿತೆಂದು ಅನೇಕರು ನಂಬುತ್ತಾರೆ. ಆದರೆ ಪುರಾತನ ಗ್ರೀಕ್ ಪ್ರಜಾಪ್ರಭುತ್ವವು ಕೆಲವೇ ನಗರ-ರಾಜ್ಯಗಳಲ್ಲಿ ಪ್ರಚಲಿತವಾಗಿತ್ತು, ಮತ್ತು ಇವುಗಳಲ್ಲಿಯೂ ಕೇವಲ ಗಂಡು ನಾಗರಿಕರು ಮತದಾನ ನೀಡುತ್ತಿದ್ದರು. ಸ್ತ್ರೀಯರು, ದಾಸರು, ಮತ್ತು ಪರದೇಶದ ನಿವಾಸಿಗಳು—ಸುಮಾರು ಅರ್ಧಾಂಶದಿಂದ ಐದನೇ ನಾಲ್ಕಂಶ ಜನಸಂಖ್ಯೆಯು—ಬಿಟ್ಟುಬಿಡಲ್ಪಡುತ್ತಿದ್ದರು. ಜನಪ್ರಿಯ ಸಾರ್ವಭೌಮತ್ವ ಬಹಳ ಕಷ್ಟದಿಂದ!
ಜನತಾ ಸಾರ್ವಭೌಮತೆಯ ವಿಚಾರವನ್ನು ಪ್ರವರ್ಧಿಸಿದವರಾರು? ಆಶ್ಚರ್ಯಕರವಾಗಿ, ರೋಮನ್ ಕ್ಯಾತೊಲಿಕ್ ದೇವತಾಶಾಸ್ತ್ರಿಗಳಿಂದ ಅದು ಮಧ್ಯ ಯುಗಗಳಲ್ಲಿ ಮುಂತರಲ್ಪಟ್ಟಿತು. ಹದಿಮೂರನೆಯ ಶತಮಾನದಲ್ಲಿ, ತಾಮಸ್ ಅಕಿನ್ವಾಸ್ ಎತ್ತಿಹೇಳಿದ್ದೇನಂದರೆ ಸಾರ್ವಭೌಮತ್ವವು ಮೂಲದಲ್ಲಿ ದೇವರದ್ದಾಗಿದೆಯಾದರೂ, ಜನರಿಗೆ ಅದು ವಹಿಸಲ್ಪಟ್ಟಿರುತ್ತದೆ. ಈ ವಿಚಾರವು ಜನಪ್ರಿಯವಾಗಿ ಪರಿಣಮಿಸಿತು. ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಅಧಿಕಾರದ ಮೂಲವು ಜನತೆಯದ್ದು ಎಂಬ ಈ ವಿಚಾರವು 17 ನೆಯ ಶತಮಾನದ ಅಧಿಕ ಸಂಖ್ಯಾತ ಕ್ಯಾತೊಲಿಕ್ ದೇವತಾಶಾಸ್ತ್ರಜ್ಞರಿಂದ ಬೆಂಬಲಿಸಲ್ಪಟ್ಟಿತ್ತು.”
ಯಾವುದರಲ್ಲಿ ಪೋಪರ, ಬಿಷಪರ, ಅಥವಾ ಪಾದ್ರಿಯ ಆಯ್ಕೆಯಲ್ಲಿ ಜನರಿಗೆ ಯಾವ ಹಕ್ಕೂ ಇಲ್ಲವೊ ಆ ಒಂದು ಚರ್ಚಿನ ದೇವತಾಶಾಸ್ತ್ರಜ್ಞರು ಜನತಾ ಸಾರ್ವಭೌಮತ್ವದ ವಿಚಾರವನ್ನು ಪ್ರವರ್ಧಿಸಿದ್ದೇಕೆ? ಏಕೆಂದರೆ ಕೆಲವು ಯೂರೋಪಿಯನ್ ಅರಸುಗಳು ಪೋಪರ ಆಡಳಿತದ ಅಧಿಕಾರದ ಕೆಳಗೆ ಅಧಿಕಾಧಿಕವಾಗಿ ಚಡಪಡಿಸುತ್ತಿದ್ದರು. ಜನಪ್ರಿಯ ಸಾರ್ವಭೌಮತ್ವದ ಕಲ್ಪನೆಯು ಅವಶ್ಯವೆಂದು ಕಂಡರೆ ಒಬ್ಬ ಸಮ್ರಾಟನನ್ನು ಅಥವಾ ಚಕ್ರವರ್ತಿಯನ್ನು ದೊಬ್ಬಿಬಿಡುವ ಅಧಿಕಾರವನ್ನು ಪೋಪರಿಗೆ ಕೊಟ್ಟಿತ್ತು. ಚರಿತ್ರೆಕಾರರಾದ ವಿಲ್ ಮತ್ತು ಅರೀಯೆಲ್ ಡ್ಯುರಾಂಟ್ ಬರೆದದ್ದು: “ಜನಪ್ರಿಯ ಸಾರ್ವಭೌಮತ್ವವನ್ನು ಸಮರ್ಥಿಸಿದವರಲ್ಲಿ ಅನೇಕ ಜೆಜ್ಯುಯಿಟರು ಸೇರಿದ್ದರು, ಅವರು ಈ ನೋಟದಲ್ಲಿ ಪೋಪರ ಅಧಿಕಾರದ ವಿರುದ್ಧ ಅರಸುಗಳ ಅಧಿಕಾರವನ್ನು ನಿರ್ಬಲಗೊಳಿಸುವ ಒಂದು ಸಾಧನವನ್ನು ಕಂಡರು. ಅರಸುಗಳ ಅಧಿಕಾರವು ಜನರಿಂದ ಬಂದದ್ದಾಗಿದ್ದರೆ ಮತ್ತು ಆ ಕಾರಣದಿಂದ ಜನರ ಅಧೀನದಲ್ಲಿದ್ದರೆ, ಅದು ಪೋಪರ ಅಧಿಕಾರಕ್ಕೆ ಅಧೀನವಾಗಿದೆಯೆಂಬದು ವ್ಯಕ್ತ ಎಂಬದಾಗಿ ಕಾರ್ಡಿನಲ್ ಬೆಲಾರ್ಮನ್ ವಾದಿಸಿದರು. . . . ಲೂಯೀಸ್ ಮೊಲೀನ ಎಂಬ ಸ್ಪ್ಯಾನಿಷ್ ಜೆಜ್ಯುಯಿಟ್ ನಿರ್ಣಯಿಸಿದ್ದೇನಂದರೆ, ಐಹಿಕ ಅಧಿಕಾರದ ಮೂಲವಾದ ಜನತೆಯು ಒಬ್ಬ ಅನ್ಯಾಯಿ ಅರಸನನ್ನು ನ್ಯಾಯವಾಗಿ—ಆದರೆ ಕ್ರಮಬದ್ಧ ವಿಧಾನದಿಂದ—ಪದಚ್ಛುತನನ್ನಾಗಿ ಮಾಡಬಹುದು.”
ಆ “ಕ್ರಮಬದ್ಧ ವಿಧಾನ” ವಾದರೊ, ನಿಶ್ಚಯವಾಗಿ, ಪೋಪರಿಂದ ಏರ್ಪಡಿಸಲ್ಪಡುವುದು. ಇದನ್ನು ದೃಢಪಡಿಸುತ್ತಾ, ಫ್ರೆಂಚ್ ಕ್ಯಾತೊಲಿಕ್ ಈಸ್ಟ್ವಾರ್ ಯೂನಿವರ್ಸೆಲ್ ಡ ಲೇಗ್ಲೀಸ್ ಕಾಟೊಲೀಕ್ (ಪುಸ್ತಕವು) ಬಯಾಗ್ರಫಿ ಯೂನಿವರ್ಸೆಲ್ ದಿಂದ ಉಲ್ಲೇಖಿಸುತ್ತಾ ಅನ್ನುವುದು: “ಪ್ರಭುಗಳು ತಮ್ಮ ಅಧಿಕಾರವನ್ನು ಜನತೆಯ ಆಯ್ಕೆಯಿಂದಾಗಿ ಪಡೆಯುತ್ತಾರೆಂಬ ಮತ್ತು ಜನತೆಯು ಈ ಹಕ್ಕನ್ನು ಪೋಪರ ವರ್ಚಸ್ಸಿನ ಕೆಳಗೆ ಮಾತ್ರ ನಡಿಸಬಲ್ಲರೆಂಬುದನ್ನು ಸಾಮಾನ್ಯ ಕ್ಯಾತೊಲಿಕ್ ಬೋಧನೆಯಾಗಿ ಬೆಲಾರ್ಮನ್ . . . ಕಲಿಸುತ್ತಾರೆ.” (ಒತ್ತಕ್ಷರ ನಮ್ಮದು.) ಹೀಗೆ ಜನಪ್ರಿಯ ಸಾರ್ವಭೌಮತ್ವವು ಅರಸುಗಳ ಆಯ್ಕೆಯನ್ನು ಪ್ರಭಾವಿಸಲಿಕ್ಕೆ ಮತ್ತು ಅಗತ್ಯ ಬಿದ್ದರೆ ಅವರನ್ನು ಪದಚ್ಯುತರನ್ನಾಗಿ ಮಾಡಿಸಲಿಕ್ಕೆ ಪೋಪರು ಉಪಯೋಗಿಸಬಲ್ಲ ಒಂದು ಉಪಕರಣವಾಗಿ ಪರಿಣಮಿಸಿತು. ಹೆಚ್ಚು ಈಚಿನ ಸಮಯಗಳಲ್ಲಿ, ಅದು ಕ್ಯಾತೊಲಿಕ್ ಪುರೋಹಿತ ವರ್ಗಕ್ಕೆ ಪ್ರತಿನಿಧೀ ಪ್ರಜಾಪ್ರಭುತ್ವಗಳಲ್ಲಿನ ಕ್ಯಾತೊಲಿಕ್ ಮತದಾರರನ್ನು ಪ್ರಭಾವಿಸುವಂತೆ ಅನುಮತಿಸಿದೆ.
ಆಧುನಿಕ ಪ್ರಜಾಪ್ರಭುತ್ವಗಳಲ್ಲಿ ಸರಕಾರದ ನ್ಯಾಯಬದ್ಧತೆಯು ಯಾವುದು “ಆಳಲ್ಪಡುವವರ ಸಮ್ಮತಿ” ಎಂದು ಕರೆಯಲ್ಪಡುತ್ತದೊ ಅದರ ಮೇಲೆ ಆಧಾರಿಸಿಯದೆ. ಬಹಳ ಹೆಚ್ಚೆಂದರೆ ಇದು “ಅಧಿಕ ಸಂಖ್ಯಾತರ ಸಮ್ಮತಿ” ಆದರೂ ಮತದಾರ ನಿರಾಸಕ್ತಿ ಮತ್ತು ರಾಜಕೀಯ ತುಂಟಾಟದ ಕಾರಣ, ಈ “ಅಧಿಕಸಂಖ್ಯಾತರು” ವಾಸ್ತವದಲ್ಲಿ ಜನಸಂಖ್ಯೆಯ ಕೇವಲ ಅಲ್ಪ ಸಂಖ್ಯಾತ ಜನರಾಗಿರುತ್ತಾರೆ. ಇಂದು “ಆಳಲ್ಪಡುವವರ ಸಮ್ಮತಿ”ಯು ಅನೇಕವೇಳೆ “ಆಳಲ್ಪಡುವವರ ಮೂಗೊಪ್ಪಿಗೆ, ಅಥವಾ ದೂರದೆ ಸಹಿಸಿಕೊಳ್ಳುವ ಭಾವವಲ್ಲದೆ” ಹೆಚ್ಚೇನೂ ಅರ್ಥವಿಲ್ಲದ್ದಾಗಿದೆ.
ರಾಷ್ಟ್ರೀಯ ಸಾರ್ವಭೌಮತ್ವದ ಮಿಥ್ಯೆ
ಅರಸರ ದೈವಿಕ ಹಕ್ಕಾಗಿ ಬದಲಾವಣೆಯಾದಾಗ, ಆರಂಭದ ಪೋಪ್ಗಳಿಂದ ಪ್ರವರ್ಧಿಸಲ್ಪಟ್ಟ ಆ ಪವಿತ್ರ ರಾಜಪದದ ಮಿಥ್ಯೆಯು, ಪೋಪ್ ಆಡಳಿತದ ಮೇಲೆ ಹಿಂದೇಟು ಹಾಕಿತು. ತದ್ರೀತಿ ಜನಪ್ರಿಯ ಸಾರ್ವಭೌಮತ್ವದ ಕಲ್ಪನೆಯು ಕ್ಯಾತೊಲಿಕ್ ಚರ್ಚಿನ ಮೇಲೆ ತಿರುಗಿಬಿತ್ತು. ಶತಮಾನ 17 ಮತ್ತು 18 ರ ಸಮಯದಲ್ಲಿ, ಆಂಗ್ಲರಾದ ತಾಮಸ್ ಹಾಬ್ಸ್ ಮತ್ತು ಜಾನ್ ಲಾಕ್, ಮತ್ತು ಫ್ರೆಂಚ್ ದೇಶಿಗ ಜಾನ್-ಜಾಕ್ ರಾಸ್ಸೊ ಮುಂತಾದ ಐಹಿಕ ತತ್ವಜ್ಞಾನಿಗಳು, ಜನಪ್ರಿಯ ಸಾರ್ವಭೌಮತ್ವದ ವಿಚಾರದ ಮೇಲೆ ಚಿಂತನೆ ಮಾಡಿದರು. ಆಳುವವರ ಮತ್ತು ಆಳಲ್ಪಡುವವರ ನಡುವೆ ಒಂದು “ಸಾಮಾಜಿಕ ಒಪ್ಪಂದ”ದ ಕಲ್ಪನೆಯ ಕಥನಗಳನ್ನು ಅವರು ವಿಕಾಸಿಸಿದರು. ಅವರ ತತ್ವಗಳು ದೇವತಾಶಾಸ್ತ್ರದಲ್ಲಲ್ಲ, “ನೈಸರ್ಗಿಕ ನಿಯಮ”ದ ಮೇಲೆ ಆಧಾರಿಸಿದ್ದವು, ಮತ್ತು ಆ ಭಾವನೆಯು ಕ್ಯಾತೊಲಿಕ್ ಚರ್ಚಿಗೆ ಮತ್ತು ಪೋಪರ ಆಡಳಿತಕ್ಕೆ ಗಂಭೀರ ಹಾನಿಯನ್ನು ತಂದ ವಿಚಾರಗಳಲ್ಲಿ ಕೊನೆಗೊಂಡಿತು.
ರಾಸ್ಸೊವಿನ ಮರಣದ ಕೊಂಚ ಸಮಯದಲ್ಲಿ ಫ್ರೆಂಚ್ ಕ್ರಾಂತಿಯು ತಲೆದೋರಿತು. ಈ ಕ್ರಾಂತಿಯು ನ್ಯಾಯಬದ್ಧತೆಯ ನಿರ್ದಿಷ್ಟ ವಿಚಾರಗಳನ್ನು ನಾಶಗೊಳಿಸಿತು, ಆದರೆ ಒಂದು ಹೊಸ ವಿಷಯವನ್ನು, ರಾಷ್ಟ್ರೀಯ ಸಾರ್ವಭೌಮತ್ವದ ವಿಚಾರವನ್ನು ಉತ್ಪಾದಿಸಿತು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಫ್ರೆಂಚರು ಅರಸುಗಳ ದೈವಿಕ ಹಕ್ಕನ್ನು, ಕುಲೀನತೆಯ ಆಧಿಪತ್ಯವನ್ನು, ರೋಮನ್ ಕ್ಯಾತೊಲಿಕ್ ಚರ್ಚಿನ ವಿಶೇಷಾಧಿಕಾರಗಳನ್ನು ತಿರಸ್ಕರಿಸಿದರು.” ಆದರೆ, ಬ್ರಿಟ್ಯಾನಿಕ ಹೇಳುವುದು: “ಆ ಕ್ರಾಂತಿಯು ಹೊಸ ಶೋಧವನ್ನು, ಜನಾಂಗ-ರಾಜ್ಯವನ್ನು, ಪಕ್ವತೆಗೆ ತಂದಿತ್ತು.” ಕ್ರಾಂತಿಕಾರಿಗಳಿಗೆ ಈ ಹೊಸ “ಶೋಧ” ಬೇಕಾಗಿತ್ತು. ಯಾಕೆ?
ಯಾಕಂದರೆ ರಾಸ್ಸೊ ಪ್ರತಿಪಾದಿಸಿದ್ದ ವ್ಯವಸ್ಥೆಯ ಕೆಳಗೆ, ಅರಸುಗಳ ಆಯ್ಕೆಯಲ್ಲಿ ಎಲ್ಲಾ ನಾಗರಿಕರಿಗೆ ಸರಿಸಮಾನವಾದ ಹಕ್ಕು ಇತ್ತು. ಇದು ಸಾರ್ವತ್ರಿಕ ಚುನಾಯಿಸುವ ಹಕ್ಕಿನ ಮೇಲೆ ಆಧಾರಿಸಿದ ಒಂದು ಪ್ರಜಾಧಿಪತ್ಯದಲ್ಲಿ—ಫ್ರೆಂಚ್ ಕ್ರಾಂತಿಯ ಮುಖಂಡರು ಮೆಚ್ಚದೆ ಇದ್ದ ಒಂದು ಸಂಗತಿಯಲ್ಲಿ ಕೊನೆಗೊಳ್ಳುತ್ತಿತ್ತು. ಪ್ರೊಫೆಸರ್ ಡ್ಯೂವೆರ್ಜ ವಿವರಿಸುವುದು: “ಅನಪೇಕ್ಷಣೀಯವೆಂದು ಗಮನಿಸಲಾದ ಈ ಸ್ಪಷ್ಟ ಫಲಿತಾಂಶವನ್ನು ತಪ್ಪಿಸಲಿಕ್ಕಾಗಿಯೇ, 1789 ರಿಂದ 1791ರ ವರೆಗೆ, ರಾಜ್ಯ ವ್ಯವಸ್ಥಾ ಸಭೆಯ ಮಧ್ಯಮ ತರಗತಿಯ ಪ್ರಜಾವರ್ಗವು ರಾಷ್ಟ್ರೀಯ ಸಾರ್ವಭೌಮತ್ವದ ಕಲ್ಪನೆಯನ್ನು ಕಂಡುಹಿಡಿಯಿತು. ‘ರಾಷ್ಟ್ರ’ ದೊಂದಿಗೆ ಅವರು ಜನರನ್ನು ಗುರುತಿಸಿದರು, ಅದು ಅದರ ಅಂಗಭಾಗಗಳಿಂದ ಪ್ರತ್ಯೇಕವಾಗಿ ಎದ್ದುಕಾಣುವ ಒಂದು ನಿಜ ಅಸ್ತಿತ್ವವೆಂದು ಅವರು ಪರಿಗಣಿಸಿದರು. ರಾಷ್ಟ್ರವೊಂದೇ, ಅದರ ಪ್ರತಿನಿಧಿಗಳ ಮೂಲಕ ಸಾರ್ವಭೌಮತ್ವವನ್ನು ಚಲಾಯಿಸಲು ಹಕ್ಕುಳ್ಳದ್ದಾಗಿದೆ. . . . ತೋರ್ಕೆಯಲ್ಲಿ ಪ್ರಜಾಧಿಪತ್ಯವಾದ ರಾಷ್ಟ್ರೀಯ ಸಾರ್ವಭೌಮತ್ವದ ಬೋಧನೆಯು ನಿಜವಾಗಿ ಪ್ರಜಾಧಿಪತ್ಯವೇ ಅಲ್ಲ ಯಾಕಂದರೆ ಕಾರ್ಯತಃ ಯಾವುದೇ ವಿಧದ ಸರಕಾರವನ್ನು, ವಿಶಿಷ್ಟವಾಗಿ ನಿರಂಕುಶ ಪ್ರಭುತ್ವವನ್ನು ಸಮರ್ಥಿಸುವುದಕ್ಕೂ ಅದನ್ನುಪಯೋಗಿಸಸಾಧ್ಯವಿದೆ.” (ಒತ್ತಕ್ಷರ ಅವರದ್ದು.)
ಮಾನವ ಪ್ರಯತ್ನಗಳು ಒಂದು ಸೋಲು
ರಾಷ್ಟ್ರ-ರಾಜ್ಯವನ್ನು ಅಧಿಕಾರದ ಒಂದು ನ್ಯಾಯಬದ್ಧ ಮೂಲವಾಗಿ ಸ್ವೀಕರಿಸುವಿಕೆಯು ರಾಷ್ಟ್ರೀಯತೆಗೆ ನಡಿಸಿತು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಹೆಚ್ಚಾಗಿ ರಾಷ್ಟ್ರೀಯತೆಯು ಅತಿ ಪುರಾತನದ್ದಾಗಿ ಎಣಿಸಲಾಗುತ್ತದೆ; ಕೆಲವು ಸಾರಿ ಅದು ರಾಜಕೀಯ ವರ್ತನೆಯಲ್ಲಿ ಒಂದು ಖಾಯಂ ವಿಷಯವೆಂದು ತಪ್ಪಾಗಿ ತಿಳಿಯಲ್ಪಡುತ್ತದೆ. ಕಾರ್ಯತಃ ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳನ್ನು ಅದರ ಮೊದಲನೆಯ ಪ್ರಬಲ ಪ್ರದರ್ಶನಗಳಾಗಿ ಪರಿಗಣಿಸಬಹುದು.” ಆ ಕ್ರಾಂತಿಗಳಾದಂದಿನಿಂದ, ರಾಷ್ಟ್ರೀಯತೆಯು ಅಮೆರಿಕ, ಯೂರೋಪ್, ಆಫ್ರಿಕ, ಮತ್ತು ಏಷ್ಯಾದ ಆಚೆಕಡೆಗೆ ವಿಸ್ತಾರವಾಗಿ ಹಬ್ಬಿರುತ್ತದೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಕ್ರೂರ ಯುದ್ಧಗಳನ್ನು ನ್ಯಾಯಬದ್ಧವಾಗಿ ಮಾಡಲಾಗಿದೆ.
ಬ್ರಿಟಿಷ್ ಚರಿತ್ರೆಗಾರ ಆರ್ನಲ್ಡ್ ಟಾಯಿನ್ಬಿ ಬರೆದದ್ದು: “ರಾಷ್ಟ್ರೀಯತೆಯ ಆತ್ಮವು ಗೋತ್ರತ್ವದ ಹಳೇ ಬಾಟಲುಗಳಲ್ಲಿ ಪ್ರಜಾಪ್ರಭುತ್ವದ ಹೊಸ ದ್ರಾಕ್ಷಾಮದ್ಯದ ಒಂದು ಹುಳಿಹುದುಗಾಗಿದೆ. . . . ಪ್ರಜಾಧಿಪತ್ಯ ಮತ್ತು ಗೋತ್ರತ್ವದ ನಡುವಣ ಈ ಅಪೂರ್ವ ಒಪ್ಪಂದವು ನಮ್ಮ ಆಧುನಿಕ ಪಾಶ್ಚಿಮಾತ್ಯ ಲೋಕದ ವ್ಯಾವಹಾರಿಕ ರಾಜಕಾರಣದಲ್ಲಿ ಸ್ವತಃ ಪ್ರಜಾಧಿಪತ್ಯಕ್ಕಿಂತ ಎಷ್ಟೋ ಹೆಚ್ಚು ತೀಕ್ಷೈವಾಗಿರುತ್ತದೆ.” ರಾಷ್ಟ್ರೀಯತೆಯು ಒಂದು ಶಾಂತಿಭರಿತ ಲೋಕವನ್ನು ಉಂಟುಮಾಡಿರುವುದಿಲ್ಲ. ಟಾಯಿನ್ಬಿ ಹೇಳಿದ್ದು: “ಧರ್ಮದ ಯುದ್ಧಗಳು ಅತ್ಯಂತ ಕೊಂಚ ಕಾಲಾವಕಾಶದ ಅನಂತರ ರಾಷ್ಟ್ರೀಯತೆಯ ಯುದ್ಧಗಳಿಂದ ಹಿಂಬಾಲಿಸಲ್ಪಟ್ಟಿವೆ; ಮತ್ತು ನಮ್ಮ ಆಧುನಿಕ ಪಾಶ್ಚಿಮಾತ್ಯ ಜಗತ್ತಿನಲ್ಲಿ ಧರ್ಮಾಂಧತೆಯ ಆತ್ಮವು ಮತ್ತು ರಾಷ್ಟ್ರೀಯ ಉನ್ಮತ್ತಾಭಿಮಾನವು ಪ್ರತ್ಯಕ್ಷವಾಗಿ ಎಲ್ಲಾ ಒಂದೇ ಕೆಡುಕಿನ ಭಾವೂದ್ರೇಕವಾಗಿದೆ.
“ಪವಿತ್ರ ರಾಜಪದ,” “ಅರಸುಗಳ ದೈವಿಕ ಹಕ್ಕು,” “ಜನಪ್ರಿಯ ಸಾರ್ವಭೌಮತ್ವ,” ಎಂಬ ಮಿಥ್ಯೆಗಳ ಮೂಲಕ ಅಧಿಪತಿಗಳು ತಮ್ಮ ಜೊತೆ ಮಾನವರ ಮೇಲೆ ತಮ್ಮ ಅಧಿಕಾರವನ್ನು ನ್ಯಾಯಬದ್ಧವಾಗಿ ಮಾಡಲು ಪ್ರಯತ್ನಿಸಿದ್ದಾರೆ. ಮಾನವ ಅಧಿಪತಿಗಳ ದಾಖಲೆಯನ್ನು ಪರಿಗಣಿಸಿದ ಅನಂತರವಾದರೂ, ಕ್ರೈಸ್ತನೊಬ್ಬನು ಸೊಲೊಮೋನನಿಂದ ವ್ಯಕ್ತಪಡಿಸಲ್ಪಟ್ಟ ವಿಚಾರದಲ್ಲಿ ಸಹಭಾಗಿಯಾಗದೆ ಇರಲಾರನು: “ಮನುಷ್ಯನು ಮನುಷ್ಯನ ಮೇಲೆ ಅವನ ಹಾನಿಗಾಗಿ ದಬ್ಬಾಳಿಕೆ ನಡಿಸಿದ್ದಾನೆ.”—ಪ್ರಸಂಗಿ 8:9, NW.
ರಾಜಕೀಯ ರಾಜ್ಯವನ್ನು ಆರಾಧಿಸುವ ಬದಲಿಗೆ ಕ್ರೈಸ್ತರು ದೇವರನ್ನು ಆರಾಧಿಸುತ್ತಾರೆ ಮತ್ತು ಅವನಲ್ಲಿ ಸಕಲ ಅಧಿಕಾರದ ನ್ಯಾಯಬದ್ಧ ಮೂಲವನ್ನು ಅಂಗೀಕರಿಸುತ್ತಾರೆ. ಅವರು ಕೀರ್ತನೆಗಾರ ದಾವೀದನು ಹೇಳಿದ್ದನ್ನು ಒಪ್ಪುತ್ತಾರೆ: “ಯಾಹ್ವೇ, ಮಹತ್ತು, ಬಲ, ವೈಭವ, ಕಾಲದ ಮತ್ತು ಮಹಿಮೆಯ ವ್ಯಾಪ್ತಿ, ಆಕಾಶ ಮತ್ತು ಭೂಮಿಯಲ್ಲಿರುವ ಸರ್ವಸ್ವವೂ ನಿನ್ನವೇ. ಯಾಹ್ವೇ, ಪರಮಾಧಿಕಾರ ನಿನ್ನದು; ನೀನು ಘನತೆಗೇರಿದವನು, ಸಕಲರಲ್ಲಿ ಪರಮನು.” (1 ಪೂರ್ವಕಾಲವೃತ್ತಾಂತ 29:11, ದ ನ್ಯೂ ಜೆರೂಸಲೇಮ್ ಬೈಬಲ್) ಆದರೂ, ದೇವರಿಗೆ ಮನ್ನಣೆಯಲ್ಲಿ, ಐಹಿಕ ಮತ್ತು ಆತ್ಮಿಕ ಕ್ಷೇತ್ರ ಎರಡರಲ್ಲೂ ಅಧಿಕಾರಕ್ಕೆ ಅವರು ಯೋಗ್ಯ ಗೌರವವನ್ನು ತೋರಿಸುತ್ತಾರೆ. ಇದನ್ನು ಅವರು ಹರ್ಷಪೂರ್ವಕವಾಗಿ ಹೇಗೆ ಮತ್ತು ಯಾಕೆ ಮಾಡಬಲ್ಲರೆಂಬದು ಹಿಂಬಾಲಿಸುವ ಎರಡು ಲೇಖನಗಳಲ್ಲಿ ಪರೀಕ್ಷಿಸಲ್ಪಡುವುದು.
[ಅಧ್ಯಯನ ಪ್ರಶ್ನೆಗಳು]
a ಡ್ರಾ ಕಾನ್ಸೀಟ್ಟ್ಯೂಸ್ಯೊನೆಲ್ ಏ ಆ್ಯನ್ಸೀಟ್ಟ್ಯೂಸ್ಯೊನ್ ಪಾಲಿಟೀಕ್, ಮಾರೀಸ್ ಡ್ಯೂವೆರ್ಜ ಇವರಿಂದ.
b ದ ಕ್ಯಾತೊಲಿಕ್ ಎನಸೈಕ್ಲೊಪೀಡಿಯ ಹೇಳುವುದು: “(ರಾಜನದ್ದಾಗಿರಲಿ ಪ್ರಜಾಧಿಪತ್ಯದ್ದಾಗಿರಲಿ, ಎಲ್ಲಾ ಅಧಿಕಾರವು ದೇವರಿಂದ ಬಂದದ್ದು ಎಂಬ ಬೋಧನೆಯಿಂದ ತೀರ ಭಿನ್ನವಾದ) ಈ ‘ಅರಸುಗಳ ದೈವಿಕ ಹಕ್ಕು,’ ಕ್ಯಾತೊಲಿಕ್ ಚರ್ಚಿನಿಂದ ಎಂದೂ ಒಪ್ಪಿಗೆ ಪಡೆಯಲಿಲ್ಲ. ಇಂಗ್ಲೆಂಡಿನ 8 ನೆಯ ಹೆನ್ರಿ ಮತ್ತು 1 ನೆಯ ಜೇಮ್ಸ್ರಂತಹ ಚಕ್ರವರ್ತಿಗಳು ಆತ್ಮಿಕ ಹಾಗೂ ಪ್ರಜಾಧಿಕಾರದ ಪೂರ್ಣ ಹಕ್ಕು ತಮ್ಮದೆಂದು ವಾದಿಸಿದಾಗ, ಮತೀಯ ಸುಧಾರಣೆಯಲ್ಲಿ ಅದು ಕ್ಯಾತೊಲಿಕ್ ಧರ್ಮಕ್ಕೆ ಅತ್ಯಂತ ವಿರುದ್ಧವಾದ ಒಂದು ಸ್ವರೂಪವನ್ನು ತಾಳಿತು.”
[ಪುಟ 15 ರಲ್ಲಿರುವ ಚಿತ್ರ]
ಸಮ್ರಾಟರಿಗೆ ಮತ್ತು ಅರಸುಗಳಿಗೆ ಪಟ್ಟಕಟ್ಟುವ ಅಧಿಕಾರ ತನ್ನದೆಂದು ಕ್ಯಾತೊಲಿಕ್ ಚರ್ಚು ವಾದಿಸಿತು
[ಕೃಪೆ]
Consecration of Charlemagne: Bibliothèque Nationale, Paris