ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 7/1 ಪು. 18-23
  • ಅಧಿಕಾರದ ಕುರಿತ ಕ್ರೈಸ್ತ ನೋಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಧಿಕಾರದ ಕುರಿತ ಕ್ರೈಸ್ತ ನೋಟ
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ದೇವರಿಂದ ಹೊರತು ಯಾವ ಅಧಿಕಾರವೂ ಇಲ್ಲ”
  • ಆದಿ ಕ್ರೈಸ್ತರು ಮತ್ತು ರೋಮನ್‌ ಅಧಿಕಾರಿಗಳು
  • ಅಧಿಕಾರಕ್ಕೆ ಯೋಗ್ಯ ಗೌರವ
  • ಕ್ರೈಸ್ತ ಮನೆಗಳೊಳಗೆ ಅಧಿಕಾರ
  • ಸಭೆಯ ಒಳಗೆ ಅಧಿಕಾರ
  • ಮೇಲಧಿಕಾರಿಗಳ ವಿಷಯದಲ್ಲಿ ಕ್ರೈಸ್ತನ ನೋಟ
    ಕಾವಲಿನಬುರುಜು—1991
  • ನೀವು ಯಾರ ಅಧಿಕಾರವನ್ನು ಒಪ್ಪಿಕೊಳ್ಳಬೇಕು?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಅಧಿಕಾರಕ್ಕೆ ಗೌರವ—ಏಕೆ ಪ್ರಾಮುಖ್ಯ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು?
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ಇನ್ನಷ್ಟು
ಕಾವಲಿನಬುರುಜು—1994
w94 7/1 ಪು. 18-23

ಅಧಿಕಾರದ ಕುರಿತ ಕ್ರೈಸ್ತ ನೋಟ

“ದೇವರಿಂದ ಹೊರತು ಯಾವ ಅಧಿಕಾರವೂ ಇಲ್ಲ.”—ರೋಮಾಪುರ 13:1,

1. ಯೆಹೋವನು ಪರಮಶ್ರೇಷ್ಠ ಅಧಿಕಾರಿಯೆಂದು ಏಕೆ ಹೇಳಸಾಧ್ಯವಿದೆ?

ಅಧಿಕಾರವು ನಿರ್ಮಾಣಿಕತ್ವಕ್ಕೆ ಜೋಡಿಸಲ್ಪಡುತ್ತದೆ. ಸಜೀವ ಮತ್ತು ನಿರ್ಜೀವವಾದ ಸಕಲ ಸೃಷ್ಟಿಗೆ ಅಸ್ತಿತ್ವವನ್ನು ಕೊಟ್ಟ ಪರಮಶ್ರೇಷ್ಠನು ಯೆಹೋವ ದೇವರಾಗಿದ್ದಾನೆ. ಆತನು ನಿರ್ವಿವಾದವಾಗಿ ಪರಮಶ್ರೇಷ್ಠ ಅಧಿಕಾರಿಯಾಗಿದ್ದಾನೆ. ಸ್ವರ್ಗೀಯ ಜೀವಿಗಳು ಘೋಷಿಸುವ ಈ ಭಾವನೆಗಳಲ್ಲಿ ನಿಜ ಕ್ರೈಸ್ತರು ಭಾಗಿಗಳಾಗುತ್ತಾರೆ: “ಕರ್ತನೇ [ಯೆಹೋವನೇ, NW], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”—ಪ್ರಕಟನೆ 4:11.

2. ತಮ್ಮ ಜೊತೆ ಮಾನವರ ಮೇಲೆ ದಬ್ಬಾಳಿಕೆ ನಡಿಸಲು ತಮಗೆ ಯಾವ ಸಹಜವಾದ ಹಕ್ಕೂ ಇರಲಿಲ್ಲವೆಂದು ಆರಂಭದ ಮಾನವ ಅಧಿಕಾರಿಗಳು ಒಂದು ರೀತಿಯಲ್ಲಿ ಒಪ್ಪಿಕೊಂಡದ್ದು ಹೇಗೆ, ಮತ್ತು ಪೊಂತ್ಯ ಪಿಲಾತನಿಗೆ ಯೇಸು ಹೇಳಿದ್ದೇನು?

2 ಅತ್ಯಾರಂಭದ ಅನೇಕ ಮಾನವ ಅಧಿಪತಿಗಳು ತಾವು ಒಬ್ಬ ದೇವರು ಅಥವಾ ಒಬ್ಬ ದೇವರ ಪ್ರತಿನಿಧಿತ್ವ ಮಾಡುವವರೆಂದು ವಾದಿಸುವ ಮೂಲಕ ತಮ್ಮ ಅಧಿಕಾರವನ್ನು ನ್ಯಾಯಬದ್ಧವಾಗಿ ಮಾಡಲು ಪ್ರಯತ್ನಿಸಿದರೆಂಬ ಬರಿಯ ನಿಜತ್ವವು ತಾನೇ, ಯಾವ ಮಾನವನಿಗೂ ಇತರ ಮಾನವರನ್ನು ಆಳುವ ಸ್ವಭಾವಸಿದ್ಧವಾದ ಒಂದು ಹಕ್ಕು ಇಲ್ಲ ಎಂಬದರ ಮೌನ ಅಂಗೀಕಾರವಾಗಿತ್ತು.a (ಯೆರೆಮೀಯ 10:23) ಅಧಿಕಾರದ ಏಕಮಾತ್ರ ನ್ಯಾಯಬದ್ಧ ಮೂಲನು ಯೆಹೋವ ದೇವರಾಗಿದ್ದಾನೆ. ಯೂದಾಯದ ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತನಿಗೆ ಯೇಸು ಹೇಳಿದ್ದು: “ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ.”—ಯೋಹಾನ 19:11.

“ದೇವರಿಂದ ಹೊರತು ಯಾವ ಅಧಿಕಾರವೂ ಇಲ್ಲ”

3. “ಶ್ರೇಷ್ಠ ಅಧಿಕಾರಿಗಳ” ಕುರಿತು ಅಪೊಸ್ತಲ ಪೌಲನು ಹೇಳಿದ್ದೇನು, ಮತ್ತು ಯೇಸು ಮತ್ತು ಪೌಲನ ಹೇಳಿಕೆಗಳು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತವೆ?

3 ರೋಮನ್‌ ಸಾಮ್ರಾಜ್ಯದ ಪ್ರಭುತ್ವದ ಕೆಳಗೆ ಜೀವಿಸುತ್ತಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದದ್ದು: “ಪ್ರತಿಯೊಬ್ಬ ಮನುಷ್ಯನು ಶ್ರೇಷ್ಠ ಅಧಿಕಾರಿಗಳಿಗೆ ಅಧೀನನಾಗಿರಲಿ, ಏಕೆಂದರೆ ದೇವರಿಂದ ಹೊರತು ಯಾವ ಅಧಿಕಾರವೂ ಇಲ್ಲ; ಅಸ್ತಿತ್ವದಲ್ಲಿರುವ ಅಧಿಕಾರಿಗಳು ಅವರವರ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇಡಲ್ಪಡುತ್ತಾರೆ.” (ರೋಮಾಪುರ 13:1, NW) ಪಿಲಾತನ ಅಧಿಕಾರವು ಅವನಿಗೆ “ಮೇಲಣಿಂದ” ಕೊಡಲ್ಪಟ್ಟಿತ್ತೆಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ? ಮತ್ತು ಅವನ ದಿನದ ರಾಜಕೀಯ ಅಧಿಕಾರಿಗಳು ದೇವರಿಂದ ಅವರವರ ಸ್ಥಾನಗಳಲ್ಲಿ ಇಡಲ್ಪಟ್ಟಿದ್ದರೆಂದು ಪೌಲನು ಪರಿಗಣಿಸಿದ್ದು ಯಾವ ವಿಧದಲ್ಲಿ? ಈ ಲೋಕದ ಪ್ರತಿಯೊಬ್ಬ ರಾಜಕೀಯ ಅಧಿಪತಿಯ ನೇಮಕಕ್ಕಾಗಿ ಯೆಹೋವನು ವೈಯಕ್ತಿಕವಾಗಿ ಜವಾಬ್ದಾರನೆಂದು ಅವರು ಅರ್ಥಮಾಡಿದ್ದರೊ?

4. ಯೇಸು ಮತ್ತು ಪೌಲನು ಸೈತಾನನನ್ನು ಏನೆಂದು ಕರೆದರು, ಮತ್ತು ಸೈತಾನನಿಂದ ಮಾಡಲ್ಪಟ್ಟ ಯಾವ ವಾದವನ್ನು ಯೇಸು ಅಲ್ಲಗಳೆಯಲಿಲ್ಲ?

4 ಯೇಸು ಸೈತಾನನ್ನು “ಇಹಲೋಕಾಧಿಪತಿ” ಎಂದು ಕರೆದಿರಲಾಗಿ ಮತ್ತು ಅಪೊಸ್ತಲ ಪೌಲನು ಅವನಿಗೆ “ವಿಷಯಗಳ ವ್ಯವಸ್ಥೆಯ ದೇವರು” ಎಂಬ ಗುರುತುಪಟ್ಟಿ ಕೊಟ್ಟಿರುವಲ್ಲಿ, ಇದು ಹಾಗಿರುವುದು ಹೇಗೆ ಸಾಧ್ಯ? (ಯೋಹಾನ 12:31; 16:11; 2 ಕೊರಿಂಥ 4:4) ಅಷ್ಟಲ್ಲದೆ, ಸೈತಾನನು ಯೇಸುವನ್ನು ಶೋಧಿಸುವಾಗ ಈ ಅಧಿಕಾರವು ತನಗೆ ವಹಿಸಲ್ಪಟ್ಟಿದೆಯೆಂದು ವಾದಿಸುತ್ತಾ, “ಲೋಕದ ಎಲ್ಲಾ ರಾಜ್ಯಗಳ” “ಅಧಿಕಾರವನ್ನು” ಆತನಿಗೆ ನೀಡಿದ್ದನು. ಯೇಸು ಅವನ ನೀಡಿಕೆಯನ್ನು ನಿರಾಕರಿಸಿದನು, ಆದರೆ ಕೊಡುವ ಅಂಥ ಅಧಿಕಾರವು ಸೈತಾನನಿಗಿತ್ತು ಎಂಬದನ್ನು ಅವನು ಅಲ್ಲಗಳೆಯಲಿಲ್ಲ.—ಲೂಕ 4:5-8.

5. (ಎ) ಮಾನವ ಅಧಿಕಾರದ ಕುರಿತ ಯೇಸು ಮತ್ತು ಪೌಲನ ಮಾತುಗಳನ್ನು ನಾವು ಹೇಗೆ ಅರ್ಥಮಾಡಸಾಧ್ಯವಿದೆ? (ಬಿ) ಯಾವ ಅರ್ಥದಲ್ಲಿ ಶ್ರೇಷ್ಠ ಅಧಿಕಾರಿಗಳು “ಅವರವರ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇಡಲ್ಪಡುತ್ತಾರೆ”?

5 ಅವನ ದಂಗೆಯ ಬಳಿಕ ಮತ್ತು ಆದಾಮ ಮತ್ತು ಹವ್ವರನ್ನು ಶೋಧಿಸಿ, ಅವರನ್ನು ದೇವರ ಪರಮಾಧಿಕಾರಕ್ಕೆ ವಿರುದ್ಧ ದಂಗೆಯೇಳುವಂತೆ ಮಾಡಿದ ಬಳಿಕ ಸೈತಾನನನ್ನು ಜೀವಿಸಲು ಬಿಟ್ಟ ಮೂಲಕ ಯೆಹೋವನು ಈ ಲೋಕದ ಮೇಲಿನ ಆಡಳಿತವನ್ನು ಸೈತಾನನಿಗೆ ವಹಿಸಿಕೊಟ್ಟನು. (ಆದಿಕಾಂಡ 3:1-6; ಹೋಲಿಸಿ ವಿಮೋಚನಕಾಂಡ 9:15, 16.) ಆದುದರಿಂದ, ಏದೆನಿನಲ್ಲಿ ಪ್ರಥಮ ಮಾನವ ಜೊತೆಯು ದೇವಪ್ರಭುತ್ವವನ್ನು ಅಥವಾ ದೇವರಾಳಿಕೆಯನ್ನು ತಿರಸ್ಕರಿಸಿದ ಅನಂತರ, ಅವರು ಒಂದು ಕ್ರಮಬದ್ಧ ಸಮಾಜದಲ್ಲಿ ಜೀವಿಸುವಂತೆ ಅನುಮತಿಸುವ ಅಧಿಕಾರ ವ್ಯವಸ್ಥಾಪನೆಗಳನ್ನು ನಿರ್ಮಿಸುವಂತೆ ಯೆಹೋವನು ವಿಮುಖಗೊಂಡ ಮಾನವರಿಗೆ ಅನುಮತಿಸಿದನು ಎಂದೇ ಯೇಸುವಿನ ಮತ್ತು ಪೌಲನ ಮಾತುಗಳ ಅರ್ಥವಾಗಿರಬೇಕು. ಕೆಲವೊಮ್ಮೆ, ತನ್ನ ಉದ್ದೇಶವನ್ನು ನೆರವೇರಿಸುವುದಕ್ಕಾಗಿ, ನಿರ್ದಿಷ್ಟ ಅರಸುಗಳನ್ನು ಅಥವಾ ಸರಕಾರಗಳನ್ನು ಬೀಳುವಂತೆ ಯೆಹೋವನು ಮಾಡಿದ್ದಾನೆ. (ದಾನಿಯೇಲ 2:19-21) ಇತರರನ್ನು ಅಧಿಕಾರದಲ್ಲಿ ಉಳಿಯುವಂತೆಯೂ ಆತನು ಅನುಮತಿಸಿದ್ದಾನೆ. ಯಾರ ಅಸ್ತಿತ್ವವನ್ನು ಯೆಹೋವನು ಸಹಿಸಿಕೊಳ್ಳುತ್ತಾನೊ ಆ ಅಧಿಪತಿಗಳ ವಿಷಯದಲ್ಲಿ, ಅವರು “ಅವರವರ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇಡಲ್ಪಡುತ್ತಾರೆ,” ಎಂದು ಹೇಳಸಾಧ್ಯವಿದೆ.

ಆದಿ ಕ್ರೈಸ್ತರು ಮತ್ತು ರೋಮನ್‌ ಅಧಿಕಾರಿಗಳು

6. ಆದಿ ಕ್ರೈಸ್ತರು ರೋಮನ್‌ ಅಧಿಕಾರಿಗಳನ್ನು ಹೇಗೆ ವೀಕ್ಷಿಸಿದರು, ಮತ್ತು ಏಕೆ?

6 ಆದಿ ಕ್ರೈಸ್ತರು, ಇಸ್ರಾಯೇಲನ್ನು ಆಕ್ರಮಿಸಿದ ರೋಮನರ ವಿರುದ್ಧ ಒಳಸಂಚು ಮಾಡಿದ ಮತ್ತು ಹೋರಾಡಿದ ಯೆಹೂದ್ಯ ಪಂಗಡಗಳೊಂದಿಗೆ ಜತೆಗೂಡಿರಲಿಲ್ಲ. ರೋಮನ್‌ ಅಧಿಕಾರಿಗಳು ಎಷ್ಟರ ವರೆಗೆ ಅವರ ಕ್ರೋಡೀಕರಿಸಿದ ನ್ಯಾಯ ವ್ಯವಸ್ಥೆಯೊಂದಿಗೆ ನೆಲ ಮತ್ತು ಸಮುದ್ರದ ನಿಯಮ ಪಾಲನೆಯನ್ನು ನೋಡಿಕೊಂಡು, ಆನೇಕ ಉಪಯುಕ್ತ ಮೇಲುಕಾಲುವೆಗಳನ್ನು, ಬೀದಿಗಳನ್ನು, ಮತ್ತು ಸೇತುವೆಗಳನ್ನು ಕಟ್ಟಿ ಮತ್ತು ಸಾಮಾನ್ಯವಾಗಿ ಸಾಮಾನ್ಯ ಜನಹಿತ ಕಾರ್ಯಗಳನ್ನು ನಡೆಸಿದರೋ, ಅಷ್ಟರ ತನಕ ಕ್ರೈಸ್ತರು ಅವರನ್ನು ‘ತಮ್ಮ ಹಿತಕ್ಕೋಸ್ಕರ ಇರುವ ದೇವರ ಶುಶ್ರೂಷಕ’ ರಾಗಿ [ಅಥವಾ, “ಸೇವಕ,” ಪಾದಟಿಪ್ಪಣಿ] ಪರಿಗಣಿಸಿದರು. (ರೋಮಾಪುರ 13:3, 4) ಯೇಸುವಿನಿಂದ ಆಜ್ಞಾಪಿಸಲ್ಪಟ್ಟ ಪ್ರಕಾರ, ಕ್ರೈಸ್ತರು ವ್ಯಾಪಕವಾಗಿ ಸುವಾರ್ತೆಯನ್ನು ಸಾರಲು ಶಕ್ತರಾಗುವಂತಹ ಒಂದು ಪರಿಸರವನ್ನು ನಿಯಮ ಮತ್ತು ಕ್ರಮವು ಉತ್ಪಾದಿಸಿತು. (ಮತ್ತಾಯ 28:19, 20) ಅವರು ರೋಮನರಿಂದ ಹೊರಿಸಲ್ಪಟ್ಟ ತೆರಿಗೆಗಳನ್ನು, ಅದರಲ್ಲಿ ಸ್ವಲ್ಪ ಹಣ ದೇವರಿಂದ ಮೆಚ್ಚಲ್ಪಡದ ಉದ್ದೇಶಗಳಿಗಾಗಿ ಬಳಸಲ್ಪಟ್ಟರು ಸಹ, ಶುದ್ಧ ಮನಸ್ಸಾಕ್ಷಿಯಿಂದ ಅವನ್ನು ಸಲ್ಲಿಸಶಕ್ತರಾದರು.—ರೋಮಾಪುರ 13:5-7.

7, 8. (ಎ) ರೋಮಾಪುರ 13:1-7ರ ಜಾಗರೂಕತೆಯ ಓದುವಿಕೆಯು ಏನನ್ನು ಪ್ರಕಟಿಸುತ್ತದೆ, ಮತ್ತು ಪೂರ್ವಾಪರ ಸಂದರ್ಭವು ಏನನ್ನು ತೋರಿಸುತ್ತದೆ? (ಬಿ) ಯಾವ ಪರಿಸ್ಥಿತಿಗಳ ಕೆಳಗೆ ರೋಮನ್‌ ಅಧಿಕಾರಿಗಳು “ದೇವರ ಶುಶ್ರೂಷಕ” ರಾಗಿ ಕ್ರಿಯೆನಡಿಸಲಿಲ್ಲ, ಮತ್ತು ಈ ಸಂದರ್ಭದಲ್ಲಿ ಆದಿ ಕ್ರೈಸ್ತರು ಯಾವ ಮನೋಭಾವವನ್ನು ಆಯ್ದುಕೊಂಡರು?

7 ರೋಮಾಪುರ ಅಧ್ಯಾಯ 13ರ ಮೊದಲನೆಯ ಏಳು ವಚನಗಳ ಜಾಗರೂಕತೆಯ ಓದುವಿಕೆಯು ಪ್ರಕಟಿಸುವುದೇನಂದರೆ, ರಾಜಕೀಯ “ಶ್ರೇಷ್ಠ ಅಧಿಕಾರಿಗಳು” ಒಳ್ಳೇದನ್ನು ಮಾಡುವವರನ್ನು ಹೊಗಳಲು ಮತ್ತು ಕೆಟ್ಟದ್ದನ್ನು ಮಾಡುವವರನ್ನು ಶಿಕ್ಷಿಸಲು ಇರುವ “ದೇವರ ಶುಶ್ರೂಷಕ”ರು ಆಗಿದ್ದರು. ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸುವವರು ಶ್ರೇಷ್ಠ ಅಧಿಕಾರಿಗಳಲ್ಲ, ದೇವರು ಎಂಬುದಾಗಿ ಪೂರ್ವಾಪರ ಸಂದರ್ಭವು ತೋರಿಸುತ್ತದೆ. ಆದುದರಿಂದ, ರೋಮನ್‌ ಸಮ್ರಾಟನಾಗಲಿ ಬೇರೆ ಯಾವ ರಾಜಕೀಯ ಅಧಿಕಾರಿಯಾಗಲಿ ದೇವರು ನಿಷೇಧಿಸಿರುವ ವಿಷಯಗಳನ್ನು ಅವಶ್ಯಪಟ್ಟರೆ ಅಥವಾ, ವ್ಯತಿರಿಕ್ತವಾಗಿ, ದೇವರು ಅವಶ್ಯಪಡುವ ವಿಷಯಗಳನ್ನು ನಿಷೇಧಿಸಿದರೆ, ಅವನು ಆಮೇಲೆ ದೇವರ ಶುಶ್ರೂಷಕನಾಗಿ ಕ್ರಿಯೆ ನಡಿಸುವಾತನಾಗಿರುವುದಿಲ್ಲ. ಯೇಸು ಹೇಳಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 22:21) ದೇವರಿಗೆ ಸೇರಿದ ವಿಷಯಗಳಾದ ಭಕ್ತಿ ಅಥವಾ ಒಬ್ಬ ವ್ಯಕ್ತಿಯ ಜೀವವೇ ಮುಂತಾದವುಗಳನ್ನು ರೋಮನ್‌ ರಾಜ್ಯವು ಹಕ್ಕು ಕೇಳಿಕೆ ಮಾಡುವುದಾದರೆ, ನಿಜ ಕ್ರೈಸ್ತರು ಅಪೊಸ್ತಲಿಕ ಬುದ್ಧಿವಾದವನ್ನು ಅನುಸರಿಸಿದರು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.”—ಅ. ಕೃತ್ಯಗಳು 5:29.

8 ಸಮ್ರಾಟನ ಭಕ್ತಿಯನ್ನು ಮತ್ತು ಮೂರ್ತಿಪೂಜೆಯನ್ನು ನಡಿಸಲು, ತಮ್ಮ ಕ್ರೈಸ್ತ ಕೂಟಗಳನ್ನು ತ್ಯಜಿಸಲು, ಮತ್ತು ಸುವಾರ್ತೆ ಸಾರುವುದನ್ನು ನಿಲ್ಲಿಸಲು ಆದಿ ಕ್ರೈಸ್ತರ ನಿರಾಕರಣೆಯು ಹಿಂಸೆಯನ್ನು ತಂದಿತು. ಸಮ್ರಾಟ ನೀರೊವಿನ ಆಜ್ಞೆಯ ಮೇರೆಗೆ ಅಪೊಸ್ತಲ ಪೌಲನನ್ನು ವಧಿಸಲಾಯಿತೆಂದು ಸಾಮಾನ್ಯವಾಗಿ ಎಣಿಸಲಾಗುತ್ತದೆ. ಇತರ ಸಮ್ರಾಟರು, ಗಮನಾರ್ಹವಾಗಿ ಡೊಮಿಷ್ಯನ್‌, ಮಾರ್ಕಸ್‌ ಆರೀಲ್ಯಸ್‌, ಸೆಪ್ಟಿಮೀಯಸ್‌, ಸುವೇರುಸ್‌, ಡೀಷಸ್‌ ಮತ್ತು ಡಯಕೀಷ್ಲನ್‌ ಸಹ ಆದಿ ಕ್ರೈಸ್ತರನ್ನು ಹಿಂಸಿಸಿದರು. ಈ ಸಮ್ರಾಟರು ಮತ್ತು ಅವರ ಕೈಕೆಳಗಿನ ಅಧಿಕಾರಿಗಳು ಕ್ರೈಸ್ತರನ್ನು ಹಿಂಸಿಸಿದಾಗ, ಖಂಡಿತವಾಗಿಯೂ ಅವರು “ದೇವರ ಶುಶ್ರೂಷಕ” ರಾಗಿ ಕ್ರಿಯೆ ನಡಿಸತ್ತಿರಲಿಲ್ಲ.

9. (ಎ) ರಾಜಕೀಯ ಶ್ರೇಷ್ಠ ಅಧಿಕಾರಿಗಳ ವಿಷಯದಲ್ಲಿ ಯಾವುದು ಸತ್ಯವಾಗಿ ಉಳಿಯುತ್ತದೆ, ಮತ್ತು ರಾಜಕೀಯ ಮೃಗವು ಯಾರಿಂದ ಶಕ್ತಿಯನ್ನೂ ಅಧಿಕಾರವನ್ನೂ ಪಡೆಯುತ್ತದೆ? (ಬಿ) ಶ್ರೇಷ್ಠ ಅಧಿಕಾರಿಗಳಿಗೆ ಕ್ರೈಸ್ತ ಅಧೀನತೆಯ ಕುರಿತು ನ್ಯಾಯಸಮ್ಮತವಾಗಿ ಏನನ್ನು ಹೇಳಬಹುದು?

9 ಇವೆಲ್ಲವು ವಿಷದಪಡಿಸುವುದೇನಂದರೆ ರಾಜಕೀಯ ಶ್ರೇಷ್ಠ ಅಧಿಕಾರಿಗಳು ಕ್ರಮಬದ್ಧ ಮಾನವ ಸಮಾಜವನ್ನು ಪಾಲಿಸಲಿಕ್ಕಾಗಿ “ದೇವರ ಏರ್ಪಾಡು” ಆಗಿ ಕಾರ್ಯನಡಿಸುವುದಾದರೂ, ಅವರಿನ್ನೂ ಸೈತಾನನು ಯಾವುದರ ದೇವರಾಗಿದ್ದನೊ ಆ ಲೌಕಿಕ ವಿಷಯ ವ್ಯವಸ್ಥೆಯ ಭಾಗವಾಗಿ ಉಳಿಯುತ್ತಾರೆ. (1 ಯೋಹಾನ 5:19) ಅವರು ಪ್ರಕಟನೆ 13:1, 2ರ “[ವನ್ಯ, NW] ಮೃಗ” ದಿಂದ ಸೂಚಿಸಲ್ಪಟ್ಟ ಲೋಕವ್ಯಾಪಕ ರಾಜಕೀಯ ಸಂಸ್ಥೆಗೆ ಸೇರಿದವರಾಗಿದ್ದಾರೆ. ಆ ಮೃಗವು ತನ್ನ ಶಕ್ತಿ ಮತ್ತು ಅಧಿಕಾರವನ್ನು “ಮಹಾ ಘಟಸರ್ಪ” ಪಿಶಾಚನಾದ ಸೈತಾನನಿಂದ ಪಡೆಯುತ್ತದೆ. (ಪ್ರಕಟನೆ 12:9) ಆದುದರಿಂದ ನ್ಯಾಯಸಮ್ಮತವಾಗಿ ಅಂಥ ಅಧಿಕಾರಿಗಳಿಗೆ ಕ್ರೈಸ್ತರ ಅಧೀನತೆಯು ಸಾಪೇಕ್ಷವಾಗಿದೆ, ಸಂಪೂರ್ಣವಲ್ಲ.—ಹೋಲಿಸಿ ದಾನಿಯೇಲ 3:16-18.

ಅಧಿಕಾರಕ್ಕೆ ಯೋಗ್ಯ ಗೌರವ

10, 11. (ಎ) ಅಧಿಕಾರದಲ್ಲಿರುವ ಮನುಷ್ಯರಿಗೆ—ಅವರು ವೈಯಕ್ತಿಕವಾಗಿ ಅದಕ್ಕೆ ಅರ್ಹರಾಗಿರಲಿ ಇಲ್ಲದಿರಲಿ—ನಾವು ಗೌರವಯುಕ್ತರಾಗಿರಬೇಕೆಂದು ಪೌಲನು ಹೇಗೆ ತೋರಿಸಿದ್ದಾನೆ? (ಬಿ) “ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ” ಹೇಗೆ ಮತ್ತು ಏಕೆ ಪ್ರಾರ್ಥನೆಗಳನ್ನು ಮಾಡಸಾಧ್ಯವಿದೆ?

10 ಆದರೂ ಕ್ರೈಸ್ತರು ರಾಜಕೀಯ ಶ್ರೇಷ್ಠ ಅಧಿಕಾರಿಗಳ ಕಡೆಗೆ ನಿರ್ಲಜ್ಜೆಯ, ಉದಟ್ಧ ಮನೋಭಾವವನ್ನು ಆಯ್ದುಕೊಳ್ಳಬೇಕೆಂದು ಇದರ ಅರ್ಥವಲ್ಲ. ಈ ಮನುಷ್ಯರಲ್ಲಿ ಅನೇಕರು ಅವರ ಖಾಸಗಿ, ಅಥವಾ ಸಾರ್ವಜನಿಕ ಜೀವನದಲ್ಲೂ ವಿಶಿಷ್ಟವಾಗಿ ಗೌರವಾರ್ಹರು ಅಲ್ಲವೆಂಬದು ನಿಜ. ಆದರೂ, ಅಧಿಕಾರದಲ್ಲಿರುವವರನ್ನು ಗೌರವದಿಂದ ಸತ್ಕರಿಸಬೇಕೆಂಬುದನ್ನು ಅಪೊಸ್ತಲರು ತಮ್ಮ ಮಾದರಿಯಿಂದಲೂ ಬುದ್ಧಿವಾದದಿಂದಲೂ ತೋರಿಸಿದರು. ಅಗಮ್ಯಗಮನ ದೋಷಿಯಾಗಿದ್ದ ಅರಸನಾದ 2 ನೆಯ ಹೆರೋದ ಅಗ್ರಿಪ್ಪನ ಮುಂದೆ ಪೌಲನು ನಿಂತಾಗ, ಯೋಗ್ಯ ಮನ್ನಣೆಯಿಂದ ಅವನೊಂದಿಗೆ ಮಾತಾಡಿದನು.—ಅ. ಕೃತ್ಯಗಳು 26:2, 3, 25.

11 ಲೌಕಿಕ ಅಧಿಕಾರಿಗಳನ್ನು ನಮ್ಮ ಪ್ರಾರ್ಥನೆಗಳಲ್ಲಿ ಉಲ್ಲೇಖಿಸುವುದು ಯೋಗ್ಯವಾಗಿದೆ ಎಂದು ಕೂಡ ಪೌಲನು ಹೇಳಿದನು, ವಿಶೇಷವಾಗಿ ನಮ್ಮ ಜೀವಿತಗಳನ್ನು ಮತ್ತು ಕ್ರೈಸ್ತ ಚಟುವಟಿಕೆಗಳನ್ನು ಪ್ರಭಾವಿಸುವ ನಿರ್ಣಯಗಳನ್ನು ಮಾಡಲು ಅವರಿಗೆ ಅಪ್ಪೀಲುಮಾಡುವಾಗ. ಅವನು ಬರೆದದ್ದು: “ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವೆಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ [ವಿಧದ, NW] ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:1-4) ಅಂಥ ಅಧಿಕಾರಿಗಳ ಕಡೆಗೆ ನಮ್ಮ ಗೌರವಯುಕ್ತ ಮನೋಭಾವವು, “ಎಲ್ಲಾ ವಿಧದ ಮನುಷ್ಯರನ್ನು” ರಕ್ಷಿಸಲು ಪ್ರಯತ್ನಿಸುವ ನಮ್ಮ ಕೆಲಸವನ್ನು ಅಧಿಕ ಸರಾಗವಾಗಿ ನಡಿಸುವಂತೆ ಅವರು ನಮಗೆ ಅನುಮತಿಸುವಂತೆ ನಡಿಸಬಹುದು.

12, 13. (ಎ) ಅಧಿಕಾರದ ಕುರಿತ ಯಾವ ಸಮತೋಲನೆಯ ಬುದ್ಧಿವಾದವನ್ನು ಪೇತ್ರನು ಕೊಟ್ಟಿದ್ದಾನೆ? (ಬಿ) ಯೆಹೋವನ ಸಾಕ್ಷಿಗಳ ವಿರುದ್ಧ ದುರಭಿಪ್ರಾಯವನ್ನುಂಟುಮಾಡುವ “ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು” ನಾವು ಹೇಗೆ ಪ್ರತೀಕರಿಸಬಹುದು?

12 ಅಪೊಸ್ತಲ ಪೇತ್ರನು ಬರೆದದ್ದು: “ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರೂ ಕರ್ತನ ನಿಮಿತ್ತ ಅಧೀನರಾಗಿರಿ. ಅರಸನು ಸರ್ವಾಧಿಕಾರಿ (ಶ್ರೇಷ್ಠ ಅಧಿಕಾರಿ, NW) ಎಂತಲೂ ಬೇರೆ ಅಧಿಪತಿಗಳು ಕೆಟ್ಟ ನಡತೆಯುಳ್ಳವರನ್ನು ದಂಡಿಸುವದಕ್ಕೂ ಒಳ್ಳೇ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರಿ. ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನೀವು ಒಳ್ಳೇ ನಡತೆಯಿಂದ ಕಟ್ಟಬೇಕೆಂಬದೇ ದೇವರ ಚಿತ್ತ. ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ. ನೀವು ದೇವರ ದಾಸರಾಗದ್ದೀರಲ್ಲಾ. ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ.” (1 ಪೇತ್ರ 2:13-17) ಎಂತಹ ಸಮತೋಲನೆಯ ಬುದ್ಧಿವಾದವು! ದೇವರ ದಾಸರೋಪಾದಿ ನಾವು ಆತನಿಗೆ ಸಂಪೂರ್ಣ ಅಧೀನತೆ ಸಲ್ಲಿಸಬೇಕಾಗಿದೆ; ಮತ್ತು ದುಷ್ಕರ್ಮಿಗಳನ್ನು ದಂಡಿಸಲು ಕಳುಹಿಸಲ್ಪಟ್ಟ ರಾಜಕೀಯ ಅಧಿಕಾರಿಗಳಿಗೆ ಸಾಪೇಕ್ಷ ಮತ್ತು ಗೌರವಯುಕ್ತ ಅಧೀನತೆಯನ್ನು ನಾವು ಕೊಡುತ್ತೇವೆ.

13 ಅನೇಕ ಐಹಿಕ ಅಧಿಕಾರಿಗಳಿಗೆ ಯೆಹೋವನ ಸಾಕ್ಷಿಗಳ ಕುರಿತು ಅತಿ ವಿಚಿತ್ರವಾದ ತಪ್ಪುಕಲ್ಪನೆಗಳಿರುವುದು ಕಂಡುಬಂದಿದೆ. ಇದು ಸಾಮಾನ್ಯವಾಗಿ ಏಕೆಂದರೆ ದೇವರ ಜನರ ಮೇಲೆ ದ್ವೇಷಕಾರುವ ಶತ್ರುಗಳಿಂದ ಅವರು ತಪ್ಪುತಿಳಿವಳಿಕೆಯನ್ನು ಹೊಂದಿರುವುದೇ. ಅಥವಾ ನಮ್ಮ ಕುರಿತು ಅವರಿಗೆ ತಿಳಿದಿರುವುದೆಲ್ಲವೂ, ತಮ್ಮ ವರದಿಯಲ್ಲಿ ಯಾವಾಗಲೂ ನಿಷ್ಪಕ್ಷಪಾತಿಗಳಾಗಿ ಇರದ ವಾರ್ತಾ ಮಾಧ್ಯಮದಿಂದ ಅವರು ಕಲಿತಿರುವುದರಿಂದ. ನಮ್ಮ ಗೌರವಯುಕ್ತ ಮನೋಭಾವದ ಮೂಲಕ ಮತ್ತು, ಎಲ್ಲಿ ಸಾಧ್ಯವೊ ಅಲ್ಲಿ ಯೆಹೋವನ ಸಾಕ್ಷಿಗಳ ಕೆಲಸ ಮತ್ತು ನಂಬಿಕೆಗಳ ಕುರಿತು ನಿಷ್ಕೃಷ್ಟ ವಿವರವನ್ನು ಒದಗಿಸುವ ಮೂಲಕ ಕೆಲವೊಮ್ಮೆ ಈ ದುರಭಿಪ್ರಾಯವನ್ನು ನಾವು ಹೋಗಲಾಡಿಸಬಲ್ಲೆವು. ಕಾರ್ಯನಿರತ ಅಧಿಕಾರಿಗಳಿಗೆ, ಯೆಹೋವನ ಸಾಕ್ಷಿಗಳು ಇಪ್ಪತ್ತನೆಯ ಶತಮಾನದಲ್ಲಿ ಎಂಬ ಬ್ರೋಷರ್‌ ಸಂಕ್ಷೇಪವಾದ ವಿವರಣೆಯನ್ನು ಕೊಡುತ್ತದೆ. ಪೂರ್ಣ ಮಾಹಿತಿಗಾಗಿ ಜೆಹೋವಸ್‌ ವಿಟ್ನೆಸಸ್‌—ಪ್ರೊಕೆಮರ್ಸ್‌ ಆಫ್‌ ಗಾಡ್ಸ್‌ ಕಿಂಗ್‌ಡಂ (ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು) ಎಂಬ ಪುಸ್ತಕವನ್ನು ಅವರಿಗೆ ಒದಗಿಸಸಾಧ್ಯವಿದೆ, ಸ್ಥಳಿಕ ಮತ್ತು ರಾಷ್ಟ್ರೀಯ ಲೈಬ್ರೆರಿಗಳ ಪುಸ್ತಕಬೀರುಗಳಲ್ಲಿ ಒಂದು ಸ್ಥಳಕ್ಕೆ ಅರ್ಹವಾದ ಉತ್ತಮ ಉಪಕರಣವು ಇದಾಗಿದೆ.

ಕ್ರೈಸ್ತ ಮನೆಗಳೊಳಗೆ ಅಧಿಕಾರ

14, 15. (ಎ) ಒಂದು ಕ್ರೈಸ್ತ ಮನೆಯೊಳಗೆ ಅಧಿಕಾರದ ಮೂಲಾಧಾರವು ಯಾವುದು? (ಬಿ) ಗಂಡಂದಿರ ಕಡೆಗೆ ಕ್ರೈಸ್ತ ಪತ್ನಿಯರ ಮನೋಭಾವವು ಏನಾಗಿರಬೇಕು ಮತ್ತು ಏಕೆ?

14 ಕ್ರೈಸ್ತರು ಐಹಿಕ ಅಧಿಕಾರಿಗಳಿಗೆ ತಕ್ಕ ಗೌರವವನ್ನು ತೋರಿಸುವಂತೆ ದೇವರಿಂದ ಅಪೇಕ್ಷಿಸಲ್ಪಡುತ್ತಾರಾದರೆ, ಕ್ರೈಸ್ತ ಮನೆವಾರ್ತೆಗಳೊಳಗೆ ದೇವರಿಂದ ಸ್ಥಾಪಿಸಲ್ಪಟ್ಟ ಅಧಿಕಾರ ರಚನೆಗೆ ತದ್ರೀತಿಯ ಗೌರವವನ್ನು ಅವರು ತೋರಿಸಬೇಕೆಂಬುದು ಸ್ವತಸ್ಸಿದ್ಧ. ಯೆಹೋವನ ಜನರ ನಡುವೆ ಪ್ರಚಲಿತವಾಗಿರುವ ತಲೆತನದ ತತ್ವವನ್ನು ಅಪೊಸ್ತಲ ಪೌಲನು ಸಂಕ್ಷಿಪ್ತ ಮಾತುಗಳಲ್ಲಿ ನಿರೂಪಿಸಿದ್ದಾನೆ. ಅವನು ಬರೆದದ್ದು: “ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಇದು ದೇವಪ್ರಭುತ್ವದ ಅಥವಾ ದೇವರಾಳಿಕೆಯ ಮೂಲ ತತ್ವವಾಗಿದೆ. ಅದರಲ್ಲಿ ಏನು ಒಳಗೂಡಿರುತ್ತದೆ?

15 ದೇವಪ್ರಭುತ್ವಕ್ಕೆ ಗೌರವವು ಮನೆಯಲ್ಲಿ ಪ್ರಾರಂಭಿಸುತ್ತದೆ. ತನ್ನ ಗಂಡನ ಅಧಿಕಾರಕ್ಕೆ—ಅವನು ಜೊತೆ ವಿಶ್ವಾಸಿಯಾಗಿರಲಿ ಇಲ್ಲದಿರಲಿ—ತಕ್ಕ ಗೌರವವನ್ನು ತೋರಿಸದ ಸ್ತ್ರೀಯು ದೇವಪ್ರಭುತ್ವವಾದಿಯಲ್ಲ. ಪೌಲನು ಕ್ರೈಸ್ತರನ್ನು ಪ್ರಬೋಧಿಸಿದ್ದು: “ಕ್ರಿಸ್ತನಿಗೆ ಭಯಪಡುವವರಾಗಿದ್ದು ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ. ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. ಅದಿರಲಿ; ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.” (ಎಫೆಸ 5:21-24) ಕ್ರೈಸ್ತ ಪುರುಷರು ಕ್ರಿಸ್ತನ ತಲೆತನಕ್ಕೆ ಹೇಗೆ ಅಧೀನರಾಗಿರಬೇಕೊ ಹಾಗೆಯೆ ಕ್ರೈಸ್ತ ಸ್ತ್ರೀಯರು ಅವರ ಗಂಡಂದಿರ ದೇವದತ್ತ ಅಧಿಕಾರಕ್ಕೆ ಅಧೀನರಾಗುವ ವಿವೇಕವನ್ನು ಅಂಗೀಕರಿಸಬೇಕಾಗಿದೆ. ಇದು ಅವರಿಗೆ ಆಳವಾದ ಆಂತರಿಕ ಸಂತೃಪ್ತಿಯನ್ನು ಮತ್ತು ಹೆಚ್ಚು ಪ್ರಾಮುಖ್ಯವಾಗಿ, ಯೆಹೋವನ ಆಶೀರ್ವಾದವನ್ನು ತರುವುದು.

16, 17. (ಎ) ಕ್ರೈಸ್ತ ಮನೆಗಳಲ್ಲಿ ಬೆಳೆಸಲ್ಪಟ್ಟ ಮಕ್ಕಳು ಇಂದಿನ ಅನೇಕ ಯುವ ಜನರಿಂದ ತಮ್ಮನ್ನು ಹೇಗೆ ಪ್ರತ್ಯೇಕಿಸಬಲ್ಲರು, ಮತ್ತು ಯಾವ ಪ್ರೋತ್ಸಾಹವು ಅವರಿಗಿದೆ? (ಬಿ) ಯೇಸುವು ಇಂದಿನ ಯುವ ಜನರಿಗೆ ಹೇಗೆ ಒಂದು ಉತ್ತಮ ಮಾದರಿಯಾಗಿದ್ದನು, ಮತ್ತು ಅವರು ಏನು ಮಾಡುವಂತೆ ಉತ್ತೇಜಿಸಲ್ಪಡುತ್ತಾರೆ?

16 ದೇವಪ್ರಭುತ್ವವಾದಿಗಳಾದ ಮಕ್ಕಳು ತಮ್ಮ ಹೆತ್ತವರಿಗೆ ಯೋಗ್ಯ ಗೌರವವನ್ನು ತೋರಿಸಲು ಸಂತೋಷಪಡುತ್ತಾರೆ. ಕಡೇ ದಿನಗಳಲ್ಲಿರುವ ಯುವ ಸಂತತಿಯ ಕುರಿತು, ಅವರು “ತಂದೆತಾಯಿಗಳಿಗೆ ಅವಿಧೇಯರೂ” ಆಗಿರುವರು ಎಂದು ಮುಂತಿಳಿಸಲ್ಪಟ್ಟಿದೆ. (2 ತಿಮೊಥೆಯ 3:1, 2) ಆದರೆ ಕ್ರೈಸ್ತ ಮಕ್ಕಳಿಗೆ ದೇವರ ಪ್ರೇರಿತ ವಾಕ್ಯವು ಹೇಳುವುದು: “ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.” (ಕೊಲೊಸ್ಸೆ 3:20) ಹೆತ್ತವರ ಅಧಿಕಾರಕ್ಕೆ ಗೌರವವು ಯೆಹೋವನನ್ನು ಮೆಚ್ಚಿಸುತ್ತದೆ ಮತ್ತು ಆತನ ಆಶೀರ್ವಾದವನ್ನು ತರುತ್ತದೆ.

17 ಇದು ಯೇಸುವಿನ ವಿಷಯದಲ್ಲಿ ಉದಾಹರಿಸಲ್ಪಟ್ಟಿದೆ. ಲೂಕನ ವೃತ್ತಾಂತವು ಹೇಳುವುದು: “ಬಳಿಕ ಆತನು ಅವರ [ಹೆತ್ತವರ] ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. [ಅಧೀನನಾಗಿ ಮುಂದುವರಿದನು, NW] . . . ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.” (ಲೂಕ 2:51, 52) ಆ ಸಮಯದಲ್ಲಿ ಯೇಸು 12 ವರ್ಷ ಪ್ರಾಯದವನಾಗಿದ್ದನು, ಮತ್ತು ಇಲ್ಲಿ ಪ್ರಯೋಗಿಸಲ್ಪಟ್ಟ ಗ್ರೀಕ್‌ ಕ್ರಿಯಾಪದ ರೂಪವು ಅವನು ಹೆತ್ತವರಿಗೆ “ಅಧೀನನಾಗಿ ಮುಂದುವರಿದನು” ಎಂದು ಒತ್ತಿಹೇಳುತ್ತದೆ. ಹೀಗೆ ಅವನ ಅಧೀನತೆಯು ಅವನು ಹದಿವಯಸ್ಸನ್ನು ಪ್ರವೇಶಿಸಿದಾಗ ಕೊನೆಗೊಳ್ಳಲಿಲ್ಲ. ಯುವಜನರಾದ ನೀವು ಆತ್ಮಿಕತೆಯಲ್ಲಿ ಮತ್ತು ಯೆಹೋವನ ಮತ್ತು ದೇವಭಕ್ತ ಮನುಷ್ಯರ ದಯೆಯಲ್ಲಿ ಪ್ರಗತಿ ಮಾಡಬಯಸುವುದಾದರೆ, ನಿಮ್ಮ ಮನೆಯ ಒಳಗೂ ಹೊರಗೂ ಅಧಿಕಾರಕ್ಕಾಗಿ ಗೌರವವನ್ನು ನೀವು ತೋರಿಸುವಿರಿ.

ಸಭೆಯ ಒಳಗೆ ಅಧಿಕಾರ

18. ಕ್ರೈಸ್ತ ಸಭೆಯ ತಲೆಯು ಯಾರು, ಮತ್ತು ಆತನು ಯಾರಿಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದಾನೆ?

18 ಕ್ರೈಸ್ತ ಸಭೆಯೊಳಗೆ ಕ್ರಮಬದ್ಧತೆಯ ಅಗತ್ಯದ ಕುರಿತು ಮಾತಾಡುತ್ತಾ ಪೌಲನು ಬರೆದದ್ದು: “ದೇವರು ಸಮಾಧಾನದ ದೇವರೇ ಹೊರತು ಅವ್ಯವಸ್ಥೆಯಲ್ಲ . . . ಎಲ್ಲವೂ ಮರ್ಯಾದೆಯಿಂದಲೂ ಏರ್ಪಾಡಿನಿಂದಲೂ [ಅಥವಾ, “ಕ್ರಮಕ್ಕೆ ಅನುಸಾರವಾಗಿ,” ಪಾದಟಿಪ್ಪಣಿ] ನಡೆಯಲಿ.” (1 ಕೊರಿಂಥ 14:33, 40, NW) ಎಲ್ಲವೂ ಕ್ರಮಪ್ರಕಾರವಾಗಿ ನಡೆಯುವಂತೆ, ಕ್ರೈಸ್ತ ಸಭೆಯ ತಲೆಯಾದ ಕ್ರಿಸ್ತನು, ನಂಬಿಗಸ್ತ ಪುರುಷರಿಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದಾನೆ. ನಾವು ಓದುವುದು: “[ಶುಶ್ರೂಶಕ ಕಾರ್ಯಕ್ಕಾಗಿ ಪವಿತ್ರ ಜನರನ್ನು ಕ್ರಮಪಡಿಸಲು, NW] ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು. . . . ಪ್ರೀತಿಯಿಂದ ಸತ್ಯವನ್ನನುಸರಿಸುತ್ತಾ ಬೆಳೆದು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರಬೇಕು. ಆತನೇ ಶಿರಸ್ಸು.”—ಎಫೆಸ 4:11, 12, 15.

19. (ಎ) ಅವನ ಭೂಮಿಯ ಎಲ್ಲಾ ಆಸ್ತಿಯ ಮೇಲೆ ಕ್ರಿಸ್ತನು ಯಾರನ್ನು ನೇಮಿಸಿದ್ದಾನೆ, ಮತ್ತು ಯಾರಿಗೆ ಆತನು ವಿಶೇಷ ಅಧಿಕಾರವನ್ನು ಅನುಗ್ರಹಿಸಿದ್ದಾನೆ? (ಬಿ) ಕ್ರೈಸ್ತ ಸಭೆಯಲ್ಲಿ ಅಧಿಕಾರದ ಯಾವ ವಹಿಸಿಕೊಡುವಿಕೆಯು ನಡಿಯುತ್ತದೆ, ಮತ್ತು ಇದು ನಮ್ಮಿಂದ ಏನನ್ನು ಅವಶ್ಯಪಡಿಸುತ್ತದೆ?

19 ಈ ಅಂತ್ಯಕಾಲದಲ್ಲಿ ಸಂಘಟಿತ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು” ಕ್ರಿಸ್ತನು “ತನ್ನ ಎಲ್ಲಾ ಆಸ್ತಿಯ ಮೇಲೆ,” ಅಥವಾ ಭೂಮಿಯಲ್ಲಿರುವ ರಾಜ್ಯಾಭಿರುಚಿಗಳ ಮೇಲೆ ನೇಮಿಸಿರುತ್ತಾನೆ. (ಮತ್ತಾಯ 24:45-47) ಈ ಆಳು, ಮೊದಲನೆಯ ಶತಮಾನದಲ್ಲಿದ್ದಂತೆ, ಯಾರಿಗೆ ಕ್ರಿಸ್ತನು ನಿರ್ಣಯಗಳನ್ನು ಮಾಡುವ ಮತ್ತು ಬೇರೆ ಮೇಲ್ವಿಚಾರಕರನ್ನು ನೇಮಿಸುವ ಅಧಿಕಾರವನ್ನು ಕೊಟ್ಟಿರುತ್ತಾನೊ ಆ ಅಭಿಷಿಕ್ತ ಕ್ರೈಸ್ತರ ಒಂದು ಆಡಳಿತ ಮಂಡಲಿಯಿಂದ ಪ್ರತಿನಿಧಿಸಲ್ಪಡುತ್ತಾನೆ. (ಅ. ಕೃತ್ಯಗಳು 6:2, 3; 15:2) ಸರದಿಯಾಗಿ, ಆಡಳಿತ ಮಂಡಲಿಯು ಅಧಿಕಾರವನ್ನು ಬ್ರಾಂಚ್‌ ಕಮಿಟಿಗಳಿಗೆ, ಜಿಲ್ಲಾ ಮತ್ತು ಸರ್ಕಿಟ್‌ ಮೇಲ್ವಿಚಾರಕರಿಗೆ, ಮತ್ತು ಭೂಮಿಯಾದ್ಯಂತ ಇರುವ ಯೆಹೋವನ ಸಾಕ್ಷಿಗಳ 73,000 ಕ್ಕಿಂತಲೂ ಹೆಚ್ಚಿನ ಪ್ರತಿಯೊಂದು ಸಭೆಗಳಲ್ಲಿರುವ ಹಿರಿಯರಿಗೆ ವಹಿಸಿಕೊಡುತ್ತದೆ. ದೇವಭಕ್ತರಾದ ಈ ಎಲ್ಲಾ ಕ್ರೈಸ್ತ ಪುರುಷರು ನಮ್ಮ ಬೆಂಬಲ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ.—1 ತಿಮೊಥೆಯ 5:17.

20. ಯಾರು ಅಧಿಕಾರದಲ್ಲಿರುವ ಜೊತೆ ಕ್ರೈಸ್ತರಿಗೆ ಗೌರವದಲ್ಲಿ ಕೊರತೆ ತೋರಿಸುತ್ತಾರೊ ಅವರನ್ನು ಯೆಹೋವನು ಮೆಚ್ಚುವುದಿಲ್ಲವೆಂದು ಯಾವ ಉದಾಹರಣೆ ತೋರಿಸುತ್ತದೆ?

20 ಯಾರು ಕ್ರೈಸ್ತ ಸಭೆಯೊಳಗೆ ಅಧಿಕಾರದಲ್ಲಿದ್ದಾರೊ ಅವರಿಗೆ ನಾವು ಸಲ್ಲಿಸಬೇಕಾಗಿರುವ ಗೌರವದ ಸಂಬಂಧದಲ್ಲಿ, ಒಂದು ರಸಕರವಾದ ಹೋಲಿಕೆಯನ್ನು, ಐಹಿಕ ಅಧಿಕಾರಿಗಳಿಗೆ ನಾವು ತೋರಿಸಬೇಕಾದ ಅಧೀನತೆಯೊಂದಿಗೆ ಮಾಡಸಾಧ್ಯವಿದೆ. ಒಬ್ಬ ವ್ಯಕ್ತಿಯು ದೇವರು ಮೆಚ್ಚುವ ಮಾನುಷ ನಿಯಮವೊಂದನ್ನು ಮೀರುವಾಗ “ಅಧಿಪತಿ” ಯಿಂದ ಕೊಡಲ್ಪಡುವ ದಂಡನೆಯು, ವಾಸ್ತವದಲ್ಲಿ, “ಕೆಟ್ಟದ್ದನ್ನು ನಡಿಸುವವನಿಗೆ” ದೇವರ ಕೋಪದ ಒಂದು ಪರೋಕ್ಷ ಅಭಿವ್ಯಕ್ತಿಯಾಗಿದೆ. (ರೋಮಾಪುರ 13:3, 4) ವ್ಯಕ್ತಿಯೊಬ್ಬನು ಮನುಷ್ಯನ ನಿಯಮಗಳನ್ನು ಮೀರುವಾಗ ಮತ್ತು ಐಹಿಕ ಅಧಿಕಾರಿಗಳಿಗೆ ಯೋಗ್ಯ ಗೌರವದಲ್ಲಿ ಕೊರತೆ ತೋರಿಸುವಾಗ ಯೆಹೋವನು ಕ್ರೋಧಿತನಾಗುತ್ತಾನಾದರೆ, ಒಬ್ಬ ಸಮರ್ಪಿತ ಕ್ರೈಸ್ತನು ಬೈಬಲ್‌ ತತ್ವಗಳನ್ನು ಧಿಕ್ಕರಿಸಿ, ಅಧಿಕಾರದಲ್ಲಿರುವ ಜೊತೆ ಕ್ರೈಸ್ತರಿಗೆ ಅಗೌರವವನ್ನು ತೋರಿಸಿದಲ್ಲಿ, ಆತನೆಷ್ಟು ಹೆಚ್ಚು ಅಪ್ರಸನ್ನತೆಯನ್ನು ತೋರಿಸಲೇಬೇಕು!

21. ಯಾವ ಶಾಸ್ತ್ರೀಯ ಬುದ್ಧಿವಾದವನ್ನು ಅನುಸರಿಸಲು ನಾವು ಸಂತೋಷವುಳ್ಳವರಾಗುವೆವು, ಮತ್ತು ಹಿಂಬಾಲಿಸುವ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

21 ದಂಗೆಖೋರ ಮತ್ತು ಸ್ವತಂತ್ರತೆಯ ಮನೋಭಾವವನ್ನು ಸ್ವೀಕರಿಸುವ ಮೂಲಕ ದೇವರ ಅಪ್ರಸನ್ನತೆಯನ್ನು ಗಳಿಸುವ ಬದಲಿಗೆ, ಫಿಲಿಪ್ಪಿಯ ಕ್ರೈಸ್ತರಿಗೆ ಪೌಲನು ಕೊಟ್ಟ ಬುದ್ಧಿವಾದವನ್ನು ನಾವು ಅನುಸರಿಸುವೆವು: “ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಕೇಳಿದಂತೆ ಈಗಲೂ ಕೇಳಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ. ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.” (ಫಿಲಿಪ್ಪಿ 2:12-15) ತನ್ನ ಮೇಲೆ ಅಧಿಕಾರ ಬಿಕ್ಕಟ್ಟನ್ನು ಬರಮಾಡಿರುವ ಪ್ರಚಲಿತ ವಕ್ರಬುದ್ಧಿಯುಳ್ಳ ಮೂರ್ಖಜನಾಂಗದ ಹಾಗಿರದೆ, ಯೆಹೋವನ ಜನರು ಅಧಿಕಾರಕ್ಕೆ ಮನಃಪೂರ್ವಕವಾಗಿ ಅಧೀನರಾಗುತ್ತಾರೆ. ಅವರು ಹೀಗೆ, ಹಿಂಬಾಲಿಸುವ ಲೇಖನದಲ್ಲಿ ನಾವು ನೋಡುವ ಪ್ರಕಾರ, ಮಹಾ ಪ್ರಯೋಜನಗಳನ್ನು ಕೊಯ್ಯುತ್ತಾರೆ.

[ಅಧ್ಯಯನ ಪ್ರಶ್ನೆಗಳು]

a ಹಿಂದಿನ ಲೇಖನ ನೋಡಿ.

ಪುನರ್ವಿಮರ್ಶೆಯ ರೂಪದಲ್ಲಿ

▫ ಯಾರು ಪರಮಶ್ರೇಷ್ಠ ಅಧಿಕಾರಿಯು, ಮತ್ತು ಅವನ ಅಧಿಕಾರವು ಯಾಕೆ ನ್ಯಾಯಬದ್ಧವಾಗಿರುತ್ತದೆ?

▫ ಯಾವ ಅರ್ಥದಲ್ಲಿ ಶ್ರೇಷ್ಠ ಅಧಿಕಾರಿಗಳು “ಅವರವರ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇಡಲ್ಪಡುತ್ತಾರೆ”?

▫ ಶ್ರೇಷ್ಠ ಅಧಿಕಾರಿಗಳು ಯಾವಾಗ “ದೇವರ ಶುಶ್ರೂಷಕ” ರಾಗಿರುವುದು ನಿಂತುಹೋಗುತ್ತದೆ?

▫ ಕ್ರೈಸ್ತ ಕುಟುಂಬಗಳೊಳಗೆ ಯಾವ ಅಧಿಕಾರ ರಚನೆಯು ಅಸ್ತಿತ್ವದಲ್ಲಿದೆ?

▫ ಕ್ರೈಸ್ತ ಸಭೆಯ ಒಳಗೆ ಅಧಿಕಾರದ ಯಾವ ವಹಿಸಿ ಕೊಡುವಿಕೆಯು ಅಸ್ತಿತ್ವದಲ್ಲಿದೆ?

[ಪುಟ 18 ರಲ್ಲಿರುವ ಚಿತ್ರಗಳು]

ಯೇಸು ಹೇಳಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ