“ಎಲ್ಲಾ ಜನಾಂಗಗಳಿಗೆ” ಸಾಕ್ಷಿ ಕೊಡುವುದು
“ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.
1. ಮತ್ತಾಯ 24:14 ರಲ್ಲಿ ದಾಖಲೆಯಾದ ಯೇಸುವಿನ ಮಾತುಗಳು ಆತನ ಹಿಂಬಾಲಕರಿಗೆ ಒಂದು ಆಶ್ಚರ್ಯವಾಗಿತೇಕ್ತೆ?
ಯೇಸುವಿನ ಮೇಲಿನ ಮಾತುಗಳು ಆತನ ಯೆಹೂದ್ಯ ಶಿಷ್ಯರಿಗೆ ಎಂಥ ಆಶ್ಚರ್ಯವನ್ನು ಉಂಟುಮಾಡಿರಬೇಕು! ಪವಿತ್ರೀಕರಿಸಲ್ಪಟ್ಟ ಯೆಹೂದ್ಯರು “ಅಶುದ್ಧ” ರಾದ ಅನ್ಯರೊಂದಿಗೆ, “ಅನ್ಯ ಜನಾಂಗಗಳ ಜನ” ರೊಂದಿಗೆ ಮಾತಾಡಲಿಕ್ಕಿರುವ ವಿಚಾರವು ತಾನೇ ಯೆಹೂದ್ಯನೊಬ್ಬನಿಗೆ ಪರಕೀಯವಾಗಿತ್ತು, ಅಸಹ್ಯವಾಗಿತ್ತು ಸಹ.a ಏಕೆ, ಆತ್ಮಸಾಕ್ಷಿಯ ಯೆಹೂದ್ಯನೊಬ್ಬನು ಒಬ್ಬ ಅನ್ಯನ ಮನೆಯನ್ನು ಪ್ರವೇಶಮಾಡನು! ಆ ಯೆಹೂದ್ಯ ಶಿಷ್ಯರಿಗೆ ಯೇಸುವಿನ ಕುರಿತು, ಆತನ ಪ್ರೀತಿ, ಮತ್ತು ಆತನ ಆಜ್ಞೆಯ ಕುರಿತು ಇನ್ನೂ ಎಷ್ಟೋ ಹೆಚ್ಚನ್ನು ಕಲಿಯಲಿಕ್ಕಿತ್ತು. ಮತ್ತು ಯೆಹೋವನ ನಿಷ್ಪಕ್ಷಪಾತದ ಕುರಿತು ಇನ್ನೂ ಹೆಚ್ಚನ್ನು ಅವರಿಗೆ ಕಲಿಯಲಿಕ್ಕಿತ್ತು.—ಅ. ಕೃತ್ಯಗಳು 10:28, 34, 35, 45.
2. (ಎ) ಸಾಕ್ಷಿಗಳ ಶುಶ್ರೂಷೆಯು ಎಷ್ಟು ವಿಸ್ತಾರವಾಗಿದೆ? (ಬಿ) ಸಾಕ್ಷಿಗಳ ಪ್ರಗತಿಗೆ ಯಾವ ಮೂರು ಮೂಲಭೂತ ವಿಷಯಗಳು ನೆರವಾಗಿವೆ?
2 ಯೆಹೋವನ ಸಾಕ್ಷಿಗಳು ಜನಾಂಗಗಳ ನಡುವೆ, ಆಧುನಿಕ ಇಸ್ರಾಯೇಲನ್ನೂ ಸೇರಿಸಿ, ಸುವಾರ್ತೆಯನ್ನು ಸಾರಿರುತ್ತಾರೆ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಜನಾಂಗಗಳಲ್ಲಿ ಅದನ್ನು ಈಗ ಸಾರುತ್ತಾ ಇದ್ದಾರೆ. ಇಸವಿ 1994 ರಲ್ಲಿ ಸುಮಾರು 45 ಲಕ್ಷಕ್ಕಿಂತಲೂ ಹೆಚ್ಚು ಸಾಕ್ಷಿಗಳು ಸುಮಾರು 230 ದೇಶಗಳಲ್ಲಿ ಸಾರುತ್ತಿದ್ದಾರೆ. ಆಸಕ್ತ ಜನರೊಂದಿಗೆ ಅವರು ಸುಮಾರು 45 ಲಕ್ಷ ಬೈಬಲ್ ಅಧ್ಯಯನಗಳನ್ನು ನಡಿಸುತ್ತಿದ್ದಾರೆ. ಸಾಕ್ಷಿಗಳ ಬೋಧನೆಗಳ ಮತ್ತು ಹೇತುಗಳ ಕುರಿತ ಅಜ್ಞಾನದಲ್ಲಿ ಆಗಿಂದಾಗ್ಗೆ ಆಧಾರಿತವಾದ ಲೋಕವ್ಯಾಪಕ ದುರಭಿಪ್ರಾಯದ ಎದುರಲ್ಲಿ ಇದನ್ನು ನಿರ್ವಹಿಸಲಾಗುತ್ತಿದೆ. ಆದಿ ಕ್ರೈಸ್ತರ ವಿಷಯದಲ್ಲಿ ಹೇಳಲ್ಪಟ್ಟಂತೆಯೆ, ಅವರ ಕುರಿತೂ ಹೇಳಸಾಧ್ಯವಿದೆ: “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:22) ಹಾಗಾದರೆ ಅವರ ಸಾಫಲ್ಯಯುಕ್ತ ಶುಶ್ರೂಷೆಯನ್ನು ಯಾವುದಕ್ಕೆ ನಾವು ಅಧ್ಯಾರೋಪಿಸಬಲ್ಲೆವು? ಅವರ ಪ್ರಗತಿಗೆ ನೆರವಾಗುವ ಕಡಿಮೆ ಪಕ್ಷ ಮೂರು ವಿಷಯಗಳು ಇವೆ—ಯೆಹೋವನ ಆತ್ಮದ ಮಾರ್ಗದರ್ಶನವನ್ನು ಅನುಸರಿಸುವುದು, ಕ್ರಿಸ್ತನ ಪ್ರಾಯೋಗಿಕ ವಿಧಾನಗಳನ್ನು ಅನುಕರಿಸುವುದು, ಮತ್ತು ಪರಿಣಾಮಕಾರಿ ಸಂಸರ್ಗಕ್ಕಾಗಿ ಸರಿಯಾದ ಉಪಕರಣಗಳನ್ನು ಬಳಸುವುದು.
ಯೆಹೋವನ ಆತ್ಮ ಮತ್ತು ಸುವಾರ್ತೆ
3. ಏನು ನಿರ್ವಹಿಸಲ್ಪಟ್ಟಿದೆಯೊ ಅದಕ್ಕಾಗಿ ನಾವು ಜಂಬಕೊಚ್ಚಲು ಸಾಧ್ಯವಿಲ್ಲವೇಕೆ?
3 ಅವರಿಗೆ ಇರಬಹುದಾದ ಯಾವುದೇ ವಿಶೇಷ ಸಾಮರ್ಥ್ಯಗಳಿಂದಾಗಿಯೊ ಎಂಬಂತೆ ಯೆಹೋವನ ಸಾಕ್ಷಿಗಳು ತಮ್ಮ ಸಾಫಲ್ಯದ ಕುರಿತು ಜಂಬ ಕೊಚ್ಚುತ್ತಾರೊ? ಇಲ್ಲ, ಯಾಕಂದರೆ ಯೇಸುವಿನ ಈ ಮಾತುಗಳು ಅನ್ವಯಿಸುತ್ತವೆ: “ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ—ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ.” ಸಮರ್ಪಿತರೂ ಸ್ನಾನಿತರೂ ಆಗಿರುವ ಕ್ರೈಸ್ತರೋಪಾದಿ, ಯೆಹೋವನ ಸಾಕ್ಷಿಗಳು ತಮ್ಮ ವೈಯಕ್ತಿಕ ಪರಿಸ್ಥಿತಿ ಏನೇ ಆಗಿರಲಿ, ದೇವರನ್ನು ಸೇವಿಸುವ ಜವಾಬ್ದಾರಿಯನ್ನು ಸ್ವಸಂತೋಷದಿಂದ ಸ್ವೀಕರಿಸಿದ್ದಾರೆ. ಕೆಲವರಿಗೆ, ಅದು ಮಿಷನೆರಿಗಳಾಗಿ ಅಥವಾ ಶಾಖಾ ಆಫೀಸುಗಳಲ್ಲಿ ಮತ್ತು ಕ್ರೈಸ್ತ ಪ್ರಕಾಶನಗಳನ್ನು ಮುದ್ರಿಸುವ ಸೌಕರ್ಯಗಳಲ್ಲಿ ಪೂರ್ಣಸಮಯದ ಸೇವೆಯ ಅರ್ಥದಲ್ಲಿದೆ. ಇತರರಿಗಾದರೊ ಅಂಥ ಕ್ರಿಸ್ತೀಯ ಸಿದ್ಧಮನಸ್ಸು ಅವರನ್ನು ಧಾರ್ಮಿಕ ಕಟ್ಟಡಗಳ ನಿರ್ಮಾಣದ ಕೆಲಸಕ್ಕೆ, ಪಯನೀಯರ ಶುಶ್ರೂಷಕರಾಗಿ ಪೂರ್ಣ ಸಮಯದ ಸಾರುವಿಕೆಗೆ, ಅಥವಾ ಸ್ಥಳಿಕ ಸಭೆಗಳಲ್ಲಿ ಸುವಾರ್ತೆಯ ಪ್ರಚಾರಕರಾಗಿ ಅಂಶ-ಕಾಲಿಕ ಸಾರುವಿಕೆಗೆ ನಡಿಸುತ್ತದೆ. ನಮ್ಮ ಕರ್ತವ್ಯವನ್ನು, “ನಾವು ಮಾಡಬೇಕಾದದ್ದನ್ನೇ ಮಾಡು” ವುದರ ಕುರಿತು ನಮ್ಮಲ್ಲಿ ಯಾರೂ ಯೋಗ್ಯವಾಗಿ ಜಂಬ ಕೊಚ್ಚಲಾರನು.—ಲೂಕ 17:10; 1 ಕೊರಿಂಥ 9:16.
4. ಕ್ರೈಸ್ತ ಶುಶ್ರೂಷೆಗೆ ಲೋಕವ್ಯಾಪಕ ವಿರೋಧವು ಹೇಗೆ ಜಯಿಸಲ್ಪಟ್ಟಿದೆ?
4 ನಾವು ಹೊಂದುವ ಯಾವುದೇ ಸಾಫಲ್ಯವನ್ನು ಯೆಹೋವನ ಆತ್ಮಕ್ಕೆ ಯಾ ಕಾರ್ಯಕಾರಿ ಶಕ್ತಿಗೆ ಅಧ್ಯಾರೋಪಿಸಸಾಧ್ಯವಿದೆ. ಇಂದು ಹೀಗನ್ನುವುದು ಪ್ರವಾದಿ ಜೆಕರ್ಯನ ದಿನಗಳಷ್ಟೇ ಸಮ್ಮತವಾಗಿದೆ: “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬದು ಸೇನಾಧೀಶ್ವರ ಯೆಹೋವನ ನುಡಿ ಎಂಬೀ ಮಾತನ್ನು ಯೆಹೋವನು ಜೆರುಬ್ಬಾಬೆಲನಿಗೆ ದಯಪಾಲಿಸಿದ್ದಾನೆ.” ಹೀಗೆ, ಸಾಕ್ಷಿಗಳ ಸಾರುವ ಕಾರ್ಯಕ್ಕೆ ಲೋಕವ್ಯಾಪಕ ವಿರೋಧವು, ಮಾನವ ಪ್ರಯತ್ನದಿಂದಲ್ಲ, ದೇವರ ಮಾರ್ಗದರ್ಶನ ಮತ್ತು ಸುರಕ್ಷೆಯಿಂದಾಗಿ ಜಯಿಸಲ್ಪಟ್ಟಿದೆ.—ಜೆಕರ್ಯ 4:6.
5. ರಾಜ್ಯ ಸಂದೇಶವು ಹಬ್ಬುವಂತೆ ಮಾಡುವುದರಲ್ಲಿ ಯೆಹೋವನು ಯಾವ ಪಾತ್ರವನ್ನು ವಹಿಸುತ್ತಾನೆ?
5 ರಾಜ್ಯದ ಸಂದೇಶಕ್ಕೆ ಪ್ರತಿವರ್ತನೆ ತೋರಿಸುವವರ ವಿಷಯದಲ್ಲಿ ಯೇಸುವಂದದ್ದು: “ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ. . . . ತಂದೆಯ ಅನುಗ್ರಹವಿಲ್ಲದೆ ಯಾರೂ ನನ್ನ ಬಳಿಗೆ ಬರಲಾರರು.” (ಯೋಹಾನ 6:45, 65) ಯೆಹೋವನು ಹೃದಯಗಳನ್ನು ಮತ್ತು ಮನಸ್ಸುಗಳನ್ನು ಬಲ್ಲಾತನಾಗಿದ್ದಾನೆ ಮತ್ತು ಅವರು ಆತನನ್ನು ಇನ್ನೂ ತಿಳಿಯದೆ ಇದ್ದರೂ ಆತನ ಪ್ರೀತಿಗೆ ಯಾರು ಪ್ರತಿವರ್ತಿಸ್ಯಾರೆಂದು ಆತನಿಗೆ ತಿಳಿದದೆ. ಈ ಅಸದೃಶ ಶುಶ್ರೂಷೆಯನ್ನು ಮಾರ್ಗದರ್ಶಿಸಲು ಅವನು ದೇವದೂತರನ್ನು ಸಹ ಉಪಯೋಗಿಸುತ್ತಾನೆ. ಆದುದರಿಂದಲೆ ಯೋಹಾನನು ದರ್ಶನದಲ್ಲಿ ದೇವದೂತರ ಭಾಗವಹಿಸುವಿಕೆಯನ್ನು ಕಂಡು, ಬರೆದದ್ದು: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಿಗಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.”—ಪ್ರಕಟನೆ 14:6.
ಒಂದು ಆತ್ಮಿಕ ಅಗತ್ಯದ ಪ್ರಜ್ಞೆ
6. ಸುವಾರ್ತೆಗೆ ಪ್ರತಿಕ್ರಿಯೆ ತೋರಿಸಲು ಒಬ್ಬ ವ್ಯಕ್ತಿಗೆ ಯಾವ ಮೂಲಭೂತ ಮನೋಭಾವದ ಅಗತ್ಯವಿದೆ?
6 ಒಬ್ಬ ವ್ಯಕ್ತಿಗೆ ಸುವಾರ್ತೆಯನ್ನು ಸ್ವೀಕರಿಸುವುದಕ್ಕೆ ಯೆಹೋವನು ಸಂದರ್ಭವನ್ನು ಅನುಗ್ರಹಿಸುವುದರಲ್ಲಿ ಇನ್ನೊಂದು ವಿಷಯವು ಯೇಸುವಿನಿಂದ ವ್ಯಕ್ತಪಡಿಸಲ್ಪಟ್ಟಿದೆ: “ಆತ್ಮದಲ್ಲಿ ಬಡವರಾಗಿರುವವರು [ಆತ್ಮಿಕ ಆವಶ್ಯಕತೆಯ ಪ್ರಜ್ಞೆಯಿರುವವರು, NW] ಧನ್ಯರು. ಪರಲೋಕರಾಜ್ಯವು ಅವರದು.” (ಮತ್ತಾಯ 5:3) ಒಬ್ಬ ಸ್ವಸಂತುಷ್ಟ ವ್ಯಕ್ತಿಯು ಅಥವಾ ಸತ್ಯವನ್ನು ಹುಡುಕುತ್ತಿರದ ವ್ಯಕ್ತಿಯೊಬ್ಬನು ಒಂದು ಆತ್ಮಿಕ ಅಗತ್ಯದ ಅರುಹುಳ್ಳವನಾಗಿರನು. ಅವನು ಅಥವಾ ಅವಳು ಪ್ರಾಪಂಚಿಕವಾದ, ಶರೀರಭಾವದ ಸಂಬಂಧದಲ್ಲಿ ಮಾತ್ರ ಯೋಚಿಸುತ್ತಾರೆ, ಸಂತುಷ್ಟಿಯು ಒಂದು ತಡೆಗಟ್ಟಾಗಿ ಪರಿಣಮಿಸುತ್ತದೆ. ಆದುದರಿಂದ, ನಾವು ಮನೆ ಮನೆಗೆ ಹೋಗುವಾಗ ನಾವು ಭೇಟಿಯಾಗುವ ಅನೇಕರು ಸಂದೇಶವನ್ನು ತಿರಸ್ಕರಿಸುವಾಗ, ಅವರ ಪ್ರತಿವರ್ತನೆಗೆ ಜನರಿಗೆ ಇರಬಹುದಾದ ಎಲ್ಲಾ ವಿವಿಧ ಕಾರಣಗಳನ್ನು ನಾವು ಪರಿಗಣಿಸಬೇಕಾಗಿದೆ.
7. ಅನೇಕರು ಸತ್ಯಕ್ಕೆ ಯಾಕೆ ಪ್ರತಿವರ್ತನೆ ತೋರಿಸುವುದಿಲ್ಲ?
7 ಅನೇಕರು ತಾವು ಬಾಧ್ಯತೆಯಾಗಿ ಪಡೆದ ಧರ್ಮಕ್ಕೆ ಪಟ್ಟುಬಿಡದೆ ಅಂಟಿಕೊಳ್ಳುವ ಕಾರಣ ಕಿವಿಗೊಡಲು ನಿರಾಕರಿಸುತ್ತಾರೆ ಮತ್ತು ಒಂದು ಚರ್ಚೆಯಲ್ಲಿ ಸೇರಿಕೊಳ್ಳಲು ಇಚ್ಛೈಸುವುದಿಲ್ಲ. ಇತರರಾದರೊ ಅವರ ವ್ಯಕ್ತಿತ್ವಕ್ಕೆ ಒಪ್ಪುವಂಥ ಒಂದು ಧರ್ಮದಿಂದ ಆಕರ್ಷಿತರಾಗುತ್ತಾರೆ—ಕೆಲವರಿಗೆ ರಹಸ್ಯವಾದವು ಬೇಕು, ಬೇರೆಯವರು ಭಾವಪರವಶತೆಗೆ ಪ್ರತಿಕ್ರಿಯೆ ತೋರಿಸುತ್ತಾರೆ, ಇನ್ನೂ ಕೆಲವರು ತಮ್ಮ ಚರ್ಚಿನಲ್ಲಿ ಮುಖ್ಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದಾರೆ. ಇಂದು ಅನೇಕರು ದೇವರ ಮಟ್ಟಗಳಿಗೆ ವಿರುದ್ಧವಾಗಿರುವ ಒಂದು ಜೀವನ-ಶೈಲಿಯನ್ನು ಆರಿಸಿಕೊಂಡಿರುತ್ತಾರೆ. ಪ್ರಾಯಶಃ ಅವರು ಒಂದು ಅನೈತಿಕ ಜೀವಿತವನ್ನು ಜೀವಿಸುತ್ತಿರಬಹುದು, “ನನಗೆ ಆಸಕ್ತಿ ಇಲ್ಲ” ಎಂದು ಹೇಳುವುದಕ್ಕೆ ಅವರಿಗೆ ಅದು ಕಾರಣವಾಗಿರಬಹುದು. ತಾವು ಶಿಕ್ಷಿತರು ಮತ್ತು ವಿಜ್ಞಾನದಲ್ಲಿ ನಿರತರೆಂದು ವಾದಿಸುವ ಇನ್ನೂ ಇತರರು ಬೈಬಲನ್ನು ತೀರ ಸರಳತೆಯ ಸೋಗು ಎಂಬದಾಗಿ ತಿರಸ್ಕರಿಸುತ್ತಾರೆ.—1 ಕೊರಿಂಥ 6:9-11; 2 ಕೊರಿಂಥ 4:3, 4.
8. ತಿರಸ್ಕಾರವು ನಮ್ಮ ಹುರುಪನ್ನು ಕುಂದಿಸಬಾರದು ಏಕೆ? (ಯೋಹಾನ 15:18-20)
8 ಅಧಿಕಾಂಶ ಜನರಿಂದ ತಿರಸ್ಕಾರವು ಜೀವರಕ್ಷಕ ಶುಶ್ರೂಷೆಯಲ್ಲಿ ನಮ್ಮ ನಂಬಿಕೆ ಮತ್ತು ಹುರುಪನ್ನು ಕುಂದಿಸಬೇಕೊ? ರೋಮಾಪುರದವರಿಗೆ ಪೌಲನ ಮಾತುಗಳಿಂದ ನಾವು ಸಾಂತ್ವನವನ್ನು ಪಡೆಯಬಲ್ಲೆವು: “ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರು ನಂಬದೆ ಹೋದದರಿಂದ ದೇವರು ವಚನಕ್ಕೆ ತಪ್ಪುವವನಾದನೋ? ಎಂದಿಗೂ ಇಲ್ಲ; ಎಲ್ಲಾ ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ. ನೀನು ಎಲ್ಲಾ ನುಡಿಗಳಲ್ಲಿ ನ್ಯಾಯಸ್ಥನೆಂದು ಕಾಣಿಸಿಕೊಳ್ಳಬೇಕು, ನಿನ್ನ ಮೇಲೆ ವ್ಯಾಜ್ಯ ನಡೆಯುವಾಗ ನೀನು ಗೆಲ್ಲಬೇಕು ಎಂದು ಬರೆದದೆ.”—ರೋಮಾಪುರ 3:3, 4.
9, 10. ಅನೇಕ ದೇಶಗಳಲ್ಲಿ ವಿರೋಧವು ಜಯಿಸಲ್ಪಟ್ಟಿದೆ ಎಂಬದಕ್ಕೆ ಯಾವ ಪುರಾವೆ ಇದೆ?
9 ಏನೂ ಪ್ರತಿಕ್ರಿಯೆಯಿಲ್ಲದವುಗಳಂತೆ ತೋರಿದರೂ, ತಕ್ಕ ಸಮಯದಲ್ಲಿ ತೀರ ವಿರುದ್ಧವಾಗಿ ಪರಿಣಮಿಸಿದ ಭೂಸುತ್ತಲಿನ ದೇಶಗಳ ಅನೇಕ ಉದಾಹರಣೆಗಳಿಂದ ನಾವು ಉತ್ತೇಜನ ಪಡೆದುಕೊಳ್ಳಬಲ್ಲೆವು. ಕಂಡುಹಿಡಿಯಲಿಕ್ಕಾಗಿ ಸಹೃದಯವುಳ್ಳ ಜನರು ಅಲ್ಲಿದ್ದರೆಂದು ಯೆಹೋವ ದೇವರಿಗೆ ಮತ್ತು ದೇವದೂತರಿಗೆ ತಿಳಿದಿತ್ತು—ಆದರೆ ಯೆಹೋವನ ಸಾಕ್ಷಿಗಳು ಪಟ್ಟುಹಿಡಿಯಬೇಕಾಗಿತ್ತು ಮತ್ತು ತಮ್ಮ ಶುಶ್ರೂಷೆಯಲ್ಲಿ ತಾಳಿಕೊಳ್ಳಬೇಕಾಗಿತ್ತು. ದೃಷ್ಟಾಂತಕ್ಕಾಗಿ, ಎಲ್ಲಿ 50 ವರ್ಷಗಳ ಹಿಂದೆ ಕ್ಯಾತೊಲಿಕ್ ಧರ್ಮವು ದುಸ್ತರವಾದ ಅಡಚಣೆಯನ್ನು ನೀಡುವಂತೆ ತೋರಿತ್ತೊ ಆ ದೇಶಗಳಾದ—ಆರ್ಜೆಂಟೀನ, ಇಟೆಲಿ, ಅಯರ್ಲೆಂಡ್, ಕೊಲಂಬಿಯ, ಪೋರ್ಟ್ಯುಗಲ್, ಬ್ರೆಜಿಲ್, ಮತ್ತು ಸ್ಪೆಯ್ನ್ನನ್ನು ತೆಗೆದುಕೊಳ್ಳಿರಿ. ಹಿಂದೆ 1943 ರಲ್ಲಿ ಇದ್ದ ಸಾಕ್ಷಿಗಳು ಕೊಂಚ ಮಂದಿ, ಜಗದ್ವ್ಯಾಪಕವಾಗಿ ಕೇವಲ 1,26,000 ಮಾತ್ರವಿದ್ದರು, ಇವರಲ್ಲಿ 72,000 ಮಂದಿ ಅಮೆರಿಕದಲಿದ್ದರು. ಸಾಕ್ಷಿಗಳನ್ನು ಮುಕಾಬಿಲೆ ಮಾಡಿದ ಅಜ್ಞಾನ ಮತ್ತು ದುರಭಿಪ್ರಾಯವು ಅಬೇಧ್ಯ ಇಟ್ಟಿಗೆಯ ಗೋಡೆಯಂತೆ ತೋರಿತ್ತು. ಆದರೂ, ಇಂದು ಕೆಲವು ಅತ್ಯಂತ ಸಾಫಲ್ಯಯುಕ್ತ ಸಾರುವಿಕೆಯ ಫಲಿತಾಂಶಗಳು ಈ ದೇಶಗಳಲ್ಲಿ ಸಿಕ್ಕಿವೆ. ಹಿಂದಣ ಅನೇಕ ಕಮ್ಯೂನಿಸ್ಟ್ ದೇಶಗಳಲ್ಲೂ ಇದು ಸತ್ಯವಾಗಿದೆ. ಯುಕ್ರೇನಿನ ಕೀಯೆವ್ನಲ್ಲಿ 1993ರ ಅಧಿವೇಶನದಲ್ಲಾದ 7,402 ಮಂದಿಯ ದೀಕ್ಷಾಸ್ನಾನವು ಇದಕ್ಕೆ ಪುರಾವೆಯನ್ನೀಯುತ್ತದೆ.
10 ತಮ್ಮ ನೆರೆಯವರಿಗೆ ಸುವಾರ್ತೆಯನ್ನು ತಿಳಿಸುವುದಕ್ಕೋಸ್ಕರ ಸಾಕ್ಷಿಗಳು ಯಾವ ವಿಧಾನಗಳನ್ನು ಉಪಯೋಗಿಸಿದ್ದಾರೆ? ಕೆಲವರು ಏನನ್ನು ಆರೋಪಿಸಿರುವರೊ ಅದರಂತೆ ಮತಾಂತರಿಗಳನ್ನು ಪಡೆಯಲಿಕ್ಕಾಗಿ ಭೌತಿಕ ಪ್ರಲೋಭನೆಗಳನ್ನು ಅವರು ಉಪಯೋಗಿಸಿದ್ದಾರೊ? ಇತರರು ವಾದಿಸುವ ಪ್ರಕಾರ, ಬಡವರನ್ನು ಮತ್ತು ಅಶಿಕ್ಷಿತರನ್ನು ಮಾತ್ರ ಅವರು ಸಂದರ್ಶಿಸಿದ್ದಾರೊ?
ಸುವಾರ್ತೆಯನ್ನು ತಲಪಿಸಲು ಯಶಸ್ವಿಯಾದ ವಿಧಾನಗಳು
11. ಯೇಸು ತನ್ನ ಶುಶ್ರೂಷೆಯಲ್ಲಿ ಯಾವ ಉತ್ತಮ ಮಾದರಿಯನ್ನು ಇಟ್ಟನು? (ಯೋಹಾನ 4:6-26 ನೋಡಿ.)
11 ಯೇಸು ಮತ್ತು ಅವನ ಅಪೊಸ್ತಲರು ಸ್ಥಾಪಿಸಿದ ನಮೂನೆಯನ್ನು ಸಾಕ್ಷಿಗಳು ಈ ದಿನದ ತನಕವೂ ತಮ್ಮ ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಅನುಸರಿಸುತ್ತಾರೆ. ಐಶ್ವರ್ಯವಂತರು ಯಾ ಬಡವರು, ಎಲ್ಲೆಲ್ಲಿ ಜನರಿದ್ದರೊ ಅಲ್ಲಲ್ಲಿಗೆ ಯೇಸು ಹೋದನು—ಮನೆಗಳಿಗೆ, ಸಾರ್ವಜನಿಕ ಸ್ಥಳಗಳಿಗೆ, ಕೊಳಗಳ ತೀರಕ್ಕೆ, ಬೆಟ್ಟಗಳ ಪಕ್ಕಕ್ಕೆ, ಸಭಾಮಂದಿರಗಳಿಗೂ ಹೋದನು.—ಮತ್ತಾಯ 5:1, 2; 8:14; ಮಾರ್ಕ 1:16; ಲೂಕ 4:15.
12, 13. (ಎ) ಪೌಲನು ಕ್ರೈಸ್ತರಿಗಾಗಿ ಒಂದು ಮಾದರಿಯನ್ನು ಒದಗಿಸಿದ್ದು ಹೇಗೆ? (ಬಿ) ಯೆಹೋವನ ಸಾಕ್ಷಿಗಳು ಪೌಲನ ಮಾದರಿಯನ್ನು ಹೇಗೆ ಅನುಸರಿಸಿದ್ದಾರೆ?
12 ಅವನ ಸ್ವಂತ ಶುಶ್ರೂಷೆಯ ವಿಷಯದಲ್ಲಿ ಅಪೊಸ್ತಲ ಪೌಲನು ಸರಿಯಾಗಿಯೆ ಹೀಗೆ ಹೇಳಶಕ್ತನಾಗಿದ್ದನು: “ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿವಸದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲದಲ್ಲಿಯೂ ಹೇಗೆ ನಡಕೊಂಡೆನೆಂಬದನ್ನು ನೀವೇ ಬಲ್ಲಿರಿ. . . . ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯದೆ . . . ಬೋಧಿಸುವವನಾಗಿದ್ದೆನು.”—ಅ. ಕೃತ್ಯಗಳು 20:18-20.
13 ಅಪೊಸ್ತಲಿಕ ಮಾದರಿಯಾದ ಮನೆಮನೆಯ ಶುಶ್ರೂಷೆಯನ್ನು ಅನುಸರಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಲೋಕದಲ್ಲೆಲ್ಲೂ ಪ್ರಖ್ಯಾತರಾಗಿದ್ದಾರೆ. ದುಬಾರಿ ಖರ್ಚಿನ, ನಿರಾಳವಾದ, ಮತ್ತು ವ್ಯಕ್ತಿಪರಭಾವವಿಲ್ಲದ ಟೀವೀ ಶುಶ್ರೂಷೆಯಲ್ಲಿ ಏಕಾಗ್ರತೆಯನ್ನಿಡುವ ಬದಲಿಗೆ, ಧನಿಕರು ಯಾ ಬಡವರಾಗಿರುವ ಜನರ ಬಳಿಗೆ ಸಾಕ್ಷಿಗಳು ಹೋಗುತ್ತಾರೆ ಮತ್ತು ಅವರನ್ನು ಮುಖಾಮುಖಿಯಾಗಿ ಭೇಟಿಯಾಗುತ್ತಾರೆ. ದೇವರ ಮತ್ತು ಆತನ ವಾಕ್ಯದ ಕುರಿತು ಅವರು ಸಂಭಾಷಿಸಲು ಹುಡುಕುತ್ತಾರೆ.b ಭೌತಿಕ ವಸ್ತುಗಳನ್ನು ಧರ್ಮವಾಗಿ ಕೊಡುವ ಮೂಲಕ ಅನ್ನ ಕ್ರೈಸ್ತರನ್ನು ಮಾಡಲು ಅವರು ಯತ್ನಿಸುವುದಿಲ್ಲ. ವಿವೇಚಿಸಲು ಸಿದ್ಧರಾಗಿರುವವರಿಗೆ, ಮಾನವಕುಲದ ಸಮಸ್ಯೆಗಳಿಗೆ ಒಂದೇ ನಿಜ ಪರಿಹಾರವು ದೇವರ ರಾಜ್ಯದ ಆಳಿಕೆಯಾಗಿದೆ ಎಂದವರು ತೋರಿಸುತ್ತಾರೆ, ಅದೇ ನಮ್ಮ ಭೂಮಿಯ ಪರಿಸ್ಥಿತಿಗಳನ್ನು ಉತ್ತಮ ಸ್ಥಿತಿಗೆ ಬದಲಾಯಿಸುವುದು.—ಯೆಶಾಯ 65:17, 21-25; 2 ಪೇತ್ರ 3:13; ಪ್ರಕಟನೆ 21:1-4.
14. (ಎ) ಅನೇಕ ಮಿಷನೆರಿಗಳು ಮತ್ತು ಪಯನೀಯರರು ಹೇಗೆ ಒಂದು ದೃಢ ತಳಪಾಯವನ್ನು ಹಾಕಿದ್ದಾರೆ? (ಬಿ) ಜಪಾನಿನ ಯೆಹೋವನ ಸಾಕ್ಷಿಗಳ ಅನುಭವದಿಂದ ನಾವೇನನ್ನು ಕಲಿಯುತ್ತೇವೆ?
14 ಸಾಧ್ಯವಾದಷ್ಟು ಹೆಚ್ಚು ದೇಶಗಳಲ್ಲಿ ಕಾರ್ಯವನ್ನು ನಿರ್ವಹಿಸಲಿಕ್ಕಾಗಿ ಮಿಷನೆರಿಗಳು ಮತ್ತು ಪಯನೀಯರರು ಅನೇಕ ಜನಾಂಗಗಳಲ್ಲಿ ಒಂದು ಸೇತುದುರ್ಗವನ್ನು ಸ್ಥಾಪಿಸಿದ್ದಾರೆ. ಅವರು ಒಂದು ತಳಪಾಯವನ್ನು ಹಾಕಿದ್ದಾರೆ ಮತ್ತು ಅನಂತರ ಸ್ಥಳಿಕ ಸಾಕ್ಷಿಗಳು ನಾಯಕತ್ವವನ್ನು ವಹಿಸಿದ್ದಾರೆ. ಹೀಗೆ, ಸಾರುವ ಕಾರ್ಯವನ್ನು ಮುಂದುವರಿಸಲು ಮತ್ತು ಅದನ್ನು ಚೆನ್ನಾಗಿ ವ್ಯವಸ್ಥಾಪಿಸಿ ಇಡಲು ವಿದೇಶೀ ಸಾಕ್ಷಿಗಳ ದೊಡ್ಡ ಸಂಖ್ಯೆಯ ಆವಶ್ಯಕತೆ ಇರಲಿಲ್ಲ. ಒಂದು ಎದ್ದುಕಾಣುವ ಉದಾಹರಣೆಯು ಜಪಾನ್ ದೇಶದ್ದಾಗಿದೆ. ಇಸವಿ 1940 ಗಳ ಕೊನೆಯಲ್ಲಿ, ಮುಖ್ಯವಾಗಿ ಆಸೆಲ್ಟ್ರೇಷ್ಯನ್ ಮತ್ತು ಬ್ರಿಟಿಷ್ ಮಿಷನೆರಿಗಳು ಅಲ್ಲಿಗೆ ಹೋದರು, ಭಾಷೆಯನ್ನು ಕಲಿತರು, ಯುದ್ಧಾನಂತರದ ಕಾಲದ ಕೊಂಚಮಟ್ಟಿಗೆ ಹಳೆಯ ತೆರದ ಪರಿಸ್ಥಿತಿಗಳಿಗೆ ಹೊಂದಿಸಿಕೊಂಡರು, ಮತ್ತು ಮನೆಯಿಂದ ಮನೆಗೆ ಸಾಕ್ಷಿಕೊಡುವುದನ್ನು ಪ್ರಾರಂಭಿಸಿದರು. ಲೋಕ ಯುದ್ಧ II ರಲ್ಲಿ ಜಪಾನಿನಲ್ಲಿ ಸಾಕ್ಷಿಗಳು ನಿಷೇಧಿಸಲ್ಪಟ್ಟಿದ್ದರು ಮತ್ತು ಹಿಂಸಿಸಲ್ಪಟ್ಟಿದ್ದರು. ಹೀಗೆ ಮಿಷನೆರಿಗಳು ಆಗಮಿಸಿ ಕೆಲವೇ ಸಕ್ರಿಯ ಜಪಾನಿ ಸಾಕ್ಷಿಗಳಿರುವುದನ್ನು ಕಂಡರು. ಆದರೆ ಇಂದು ಅವರು 3,000ಕ್ಕೂ ಮಿಕ್ಕಿದ ಸಭೆಗಳಲ್ಲಿ 1,87,000 ಕ್ಕಿಂತಲೂ ಹೆಚ್ಚು ಸಂಖ್ಯೆಗೆ ಬೆಳೆದಿದ್ದಾರೆ! ಅವರ ಆರಂಭದ ಯಶಸ್ಸಿನ ಗುಟ್ಟೇನಾಗಿತ್ತು? ಅಲ್ಲಿ 25 ಕ್ಕಿಂತಲೂ ಹೆಚ್ಚು ವರ್ಷ ಸೇವೆಮಾಡಿದ ಒಬ್ಬ ಮಿಷನೆರಿಯು ಅಂದದ್ದು: “ಜನರೊಂದಿಗೆ ಸಂಭಾಷಿಸಲು ಕಲಿಯುವುದು ಅತ್ಯಂತ ಪ್ರಾಮುಖ್ಯವಾಗಿತ್ತು. ಅವರ ಭಾಷೆಯನ್ನು ತಿಳಿದುಕೊಳ್ಳುವ ಮೂಲಕ ನಾವು ಅವರೊಂದಿಗೆ ಅನನ್ಯತೆಯನ್ನು ಸ್ಥಾಪಿಸಲು, ಅವರ ಜೀವನ ಕ್ರಮವನ್ನು ತಿಳಿದುಕೊಳ್ಳಲು ಮತ್ತು ಗಣ್ಯಮಾಡಲು ಶಕ್ತರಾದೆವು. ಜಪಾನಿ ಜನರನ್ನು ಪ್ರೀತಿಸುತ್ತೇವೆಂದು ನಾವು ತೋರಿಸಬೇಕಿತ್ತು. ನಿಶ್ಚಯವಾಗಿ ನಮ್ಮ ಕ್ರಿಸ್ತೀಯ ಮೌಲ್ಯಗಳಲ್ಲಿ ಒಪ್ಪಂದ ಮಾಡದೆ, ಸ್ಥಳಿಕ ಸಮಾಜದ ಭಾಗವಾಗಲು ನಾವು ದೈನ್ಯದಿಂದ ಪ್ರಯತ್ನಿಸಿದೆವು.”
ಕ್ರೈಸ್ತ ನಡತೆಯು ಸಹ ಒಂದು ಸಾಕ್ಷಿ
15. ಸಾಕ್ಷಿಗಳು ಕ್ರೈಸ್ತ ನಡವಳಿಕೆಯನ್ನು ಹೇಗೆ ಪ್ರದರ್ಶಿಸಿದ್ದಾರೆ?
15 ಆದರೂ ಜನರು ಪ್ರತಿಕ್ರಿಯೆ ತೋರಿಸಿದ್ದು ಬೈಬಲ್ ಸಂದೇಶಕ್ಕೆ ಮಾತ್ರವಲ್ಲ. ಕ್ರೈಸ್ತತ್ವವನ್ನು ಕ್ರಿಯೆಯಲ್ಲಿ ಸಹ ಅವರು ಕಂಡಿದ್ದಾರೆ. ಒಳಯುದ್ಧಗಳು, ಕುಲೀಯ ಕಲಹಗಳು, ಮತ್ತು ವರ್ಣೀಯ ಹಗೆತನಗಳಂಥ ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ ಕೂಡ ಸಾಕ್ಷಿಗಳ ಪ್ರೀತಿ, ಹೊಂದಿಕೆ ಮತ್ತು ಐಕಮತ್ಯವನ್ನು ಅವರು ಅವಲೋಕಿಸಿದ್ದಾರೆ. ಸಾಕ್ಷಿಗಳು ಎಲ್ಲಾ ಹೋರಾಟಗಳಲ್ಲಿ ಕ್ರೈಸ್ತ ತಾಟಸ್ಥ್ಯದ ಒಂದು ಸ್ಫುಟವಾದ ನಿಲುವನ್ನು ಕಾಪಾಡಿಕೊಂಡಿದ್ದಾರೆ ಮತ್ತು ಯೇಸುವಿನ ಮಾತುಗಳನ್ನು ನೆರವೇರಿಸಿದ್ದಾರೆ: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:34, 35.
16. ಪ್ರಾಯೋಗಿಕ ಕ್ರೈಸ್ತ ಪ್ರೀತಿಯನ್ನು ಯಾವ ಅನುಭವವು ಉದಾಹರಿಸುತ್ತದೆ?
16 ಒಂದು ಸ್ಥಳಿಕ ವಾರ್ತಾಪತ್ರಕ್ಕೆ “ಶ್ರೀ ಮತ್ತು ಶ್ರೀಮತಿ ಸಜ್ಜನರ” ಕುರಿತು ಬರೆದ ಒಬ್ಬ ವೃದ್ಧ ಮನುಷ್ಯನ ಸನ್ನಿವೇಶದಲ್ಲಿ ನೆರೆಹೊರೆಯ ಪ್ರೀತಿಯು ದೃಷ್ಟಾಂತಿಸಲ್ಪಟ್ಟಿದೆ. ಅವನ ಪತ್ನಿಯು ಸಾಯುತ್ತಿರುವಾಗ ಅವನ ನೆರೆಯವರು ಅವನಿಗೆ ದಯೆತೋರಿಸಿದ್ದರೆಂದು ಅವನು ವಿವರಿಸಿದನು. “ಅವಳು ತೀರಿಹೋದಂದಿನಿಂದ . . . ಅವರು ಅತಿದಯಾಳುಗಳು,” ಎಂದು ಅವನು ಬರೆದನು. “ಅಂದಿನಿಂದ ಅವರು ನನ್ನನ್ನು ‘ದತ್ತಕ್ಕೆ’ ತೆಗೆದುಕೊಂಡಿದ್ದಾರೆ . . . , ಎಲ್ಲಾ ವಿಧದ ಕೆಲಸಗಳನ್ನು ಮಾಡುತ್ತಾ, 74 ವರ್ಷ ಪ್ರಾಯದ ಒಬ್ಬ ನಿವೃತ್ತನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡಿದ್ದಾರೆ. ಇದನ್ನು ಇನ್ನೂ ಹೆಚ್ಚು ಅಪೂರ್ವವಾಗಿ ಮಾಡುವ ವಿಷಯವೇನಂದರೆ ಅವರು ಕರಿಯರು, ನಾನು ಬಿಳಿಯನು. ಅವರು ಯೆಹೋವನ ಸಾಕ್ಷಿಗಳು, ನಾನು ಮತಾಚರಿಸದ ಕ್ಯಾತೊಲಿಕನು.”
17. ಯಾವ ಮಾರ್ಗಕ್ರಮವನ್ನು ನಾವು ವರ್ಜಿಸತಕ್ಕದ್ದು?
17 ನಮ್ಮ ದಿನನಿತ್ಯದ ನಡವಳಿಕೆಯೂ ಸೇರಿ, ಅನೇಕ ವಿಧಾನಗಳಲ್ಲಿ ನಾವು ಸಾಕ್ಷಿಯನ್ನು ಕೊಡಬಲ್ಲೆವೆಂದು ಈ ಅನುಭವವು ಉದಾಹರಿಸುತ್ತದೆ. ವಾಸ್ತವದಲ್ಲಿ, ನಮ್ಮ ನಡವಳಿಕೆಯು ಕ್ರಿಸ್ತನಂಥದ್ದಾಗಿರದ ಹೊರತು, ನಮ್ಮ ಶುಶ್ರೂಷೆಯು ಪರಿಣಾಮರಹಿತ ಕಪಟಾಚರಣೆಯಾಗಿರುವುದು. ಯೇಸು ಬಣ್ಣಿಸಿದವರಂತಿರಲು ನಾವು ಬಯಸುವುದಿಲ್ಲ: “ಆದುದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೆಯೇ ಹೊರತು ನಡೆಯುವದಿಲ್ಲ.”—ಮತ್ತಾಯ 22:37-39; 23:3.
ಆಳು ವರ್ಗವು ಸರಿಯಾದ ಉಪಕರಣಗಳನ್ನು ಒದಗಿಸುತ್ತದೆ
18. ಪ್ರಾಮಾಣಿಕ ಹೃದಯದ ಜನರಿಗೆ ಸಹಾಯ ಮಾಡಲು ಬೈಬಲ್ ಸಾಹಿತ್ಯವು ನಮ್ಮನ್ನು ಹೇಗೆ ಸನ್ನದ್ಧಗೊಳಿಸುತ್ತದೆ?
18 ಎಲ್ಲಾ ಜನಾಂಗಗಳಿಗೆ ಸುವಾರ್ತೆಯನ್ನು ಸಾರುವುದರಲ್ಲಿ ಇನ್ನೊಂದು ಮಹತ್ವದ ವಿಷಯವು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಉತ್ಪಾದಿಸಲ್ಪಟ್ಟ ಬೈಬಲ್ ಸಾಹಿತ್ಯದ ಲಭ್ಯತೆಯೆ ಆಗಿದೆ. ಬಹುಮಟ್ಟಿಗೆ ಪ್ರತಿಯೊಬ್ಬ ಪ್ರಾಮಾಣಿಕ ಪ್ರಶ್ನಿಗನನ್ನು ತೃಪ್ತಿಗೊಳಿಸಬಲ್ಲ ಪುಸ್ತಕಗಳು, ಬ್ರೋಷರ್ಗಳು, ಕಿರುಹೊತ್ತಗೆಗಳು, ಮತ್ತು ಪತ್ರಿಕೆಗಳು ನಮ್ಮಲ್ಲಿವೆ. ಒಬ್ಬ ಮುಸ್ಲಿಂ, ಒಬ್ಬ ಹಿಂದು, ಒಬ್ಬ ಬೌದ್ಧ, ಒಬ್ಬ ಟಾವೊ, ಅಥವಾ ಒಬ್ಬ ಯೆಹೂದ್ಯನನ್ನು ನಾವು ಭೇಟಿಯಾದರೆ, ಸಂಭಾಷಣೆಯನ್ನು ಅಥವಾ ಶಕ್ಯವಾದರೆ ಒಂದು ಬೈಬಲಭ್ಯಾಸವನ್ನು ಆರಂಭಿಸಲು ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ (ದೇವರಿಗಾಗಿ ಮಾನವ ಕುಲದ ಅನ್ವೇಷಣೆ) ಅಥವಾ ವಿವಿಧ ಕಿರುಹೊತ್ತಗೆಗಳನ್ನು ಮತ್ತು ಪುಸ್ತಿಕೆಗಳನ್ನು ನಾವು ಬಳಸಬಲ್ಲೆವು. ಒಂದುವೇಳೆ ಒಬ್ಬ ವಿಕಾಸವಾದಿಯು ಸೃಷ್ಟಿಯ ಕುರಿತು ಪ್ರಶ್ನಿಸುವುದಾದರೆ, ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಎವಲ್ಯೂಷನ್ ಆರ್ ಬೈ ಕ್ರಿಯೇಷನ್? (ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಅಥವಾ ಸೃಷ್ಟಿಯಿಂದಲೊ?) ಪುಸ್ತಕವನ್ನು ನಾವು ಉಪಯೋಗಿಸಬಲ್ಲೆವು. ‘ಜೀವಿತದ ಉದ್ದೇಶವೇನು?’ ಎಂದು ಯುವಕನೊಬ್ಬನು ಕೇಳುವುದಾದರೆ, ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್ ಆನ್ಸರ್ಸ್ ದಾಟ್ ವರ್ಕ್ (ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು) ಪುಸ್ತಕಕ್ಕೆ ನಾವು ಅವನನ್ನು ನಿರ್ದೇಶಿಸಬಲ್ಲೆವು. ಯಾರಾದರೊಬ್ಬನು ವೈಯಕ್ತಿಕ ಸಮಸ್ಯೆಗಳಾದ—ಖಿನ್ನತೆ, ಬಳಲಿಕೆ, ಬಲಾತ್ಕಾರ ಸಂಭೋಗ, ವಿವಾಹ ವಿಚ್ಛೇದನೆ—ಗಳಿಂದ ಆಳವಾಗಿ ಬಾಧಿಸಲ್ಪಟ್ಟಿದ್ದರೆ, ಅಂಥ ವಿಷಯಗಳೊಂದಿಗೆ ಪ್ರಾಯೋಗಿಕ ರೀತಿಯಲ್ಲಿ ವ್ಯವಹರಿಸಿರುವ ಪತ್ರಿಕೆಗಳು ನಮಲ್ಲಿವೆ. ನಿಜವಾಗಿಯೂ, ಯೇಸು ಪ್ರವಾದಿಸಿರುವ ನಂಬಿಗಸ್ತ ಆಳು ವರ್ಗವು “ಹೊತ್ತುಹೊತ್ತಿಗೆ ಆಹಾರವನ್ನು” ಒದಗಿಸಿ ತನ್ನ ಪಾತ್ರವನ್ನು ನೆರವೇರಿಸುತ್ತಾ ಇರುವುದು.—ಮತ್ತಾಯ 24:45-47.
19, 20. ಅಲ್ಪೇನ್ಯದಲ್ಲಿ ರಾಜ್ಯ ಕಾರ್ಯವು ಹೇಗೆ ತೀವ್ರತೆಯನ್ನು ಗಳಿಸಿದೆ?
19 ಆದರೆ ಜನಾಂಗಗಳನ್ನು ತಲಪುವುದಕ್ಕಾಗಿ ಈ ಸಾಹಿತ್ಯವನ್ನು ಅನೇಕ ಭಾಷೆಗಳಲ್ಲಿ ಉತ್ಪಾದಿಸುವುದು ಆವಶ್ಯಕವಾಗಿರುತ್ತದೆ. ಬೈಬಲನ್ನು ಮತ್ತು ಶಾಸ್ತ್ರೀಯ ಸಾಹಿತ್ಯವನ್ನು 200 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡಲು ಶಕ್ಯವಾಗಿರುವುದು ಹೇಗೆ? ಅಲ್ಪೇನ್ಯದ ಒಂದು ಉದಾಹರಣೆಯ ಸಂಕ್ಷಿಪ್ತ ಚರ್ಚೆಯು, ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವು ಮಹಾ ಸಂಕಷ್ಟಗಳ ನಡುವೆ ಮತ್ತು ಭಾಷೆಗಳಿಗೆ ದಿಢೀರ್ ಪ್ರಾಪ್ತಿಯನ್ನು ಕೊಡಲು ಒಂದು ಆಧುನಿಕ ಪಂಚಾಶತ್ತಮದ ಹೊರತಾಗಿ, ಸುವಾರ್ತೆಯನ್ನು ಹೇಗೆ ಪ್ರವರ್ಧಿಸಲು ಶಕವ್ತಾಗಿದೆ ಎಂಬದನ್ನು ಚಿತ್ರಿಸುತ್ತದೆ.—ಅ. ಕೃತ್ಯಗಳು 2:1-11.
20 ಕೆಲವೇ ವರ್ಷಗಳ ಹಿಂದೆ, ಅಲ್ಪೇನ್ಯವಿನ್ನೂ ಒಂದೇ ನಿಜವಾದ ನಾಸ್ತಿಕ ಕಮ್ಯೂನಿಸ್ಟ್ ದೇಶವಾಗಿ ನೋಡಲ್ಪಡುತ್ತಿತ್ತು. ನ್ಯಾಷನಲ್ ಜಿಯೊಗ್ರಾಫಿಕ್ ಪತ್ರಿಕೆಯು 1980ರಲ್ಲಿ ಹೇಳಿದ್ದು: “1967 ರಲ್ಲಿ ತನ್ನನ್ನು ‘ಲೋಕದಲ್ಲಿ ಪ್ರಥಮ ನಾಸ್ತಿಕ ರಾಜ್ಯವಾಗಿ’ ಘೋಷಿಸುತ್ತಾ, ಅಲ್ಪೇನ್ಯ [ಧರ್ಮವನ್ನು] ನಿಷೇಧಿಸುತ್ತದೆ. . . . ಅಲ್ಪೇನ್ಯದ ಹೊಸ ಸಂತತಿಯು ನಾಸ್ತಿಕತೆಯೊಂದನ್ನು ಮಾತ್ರ ತಿಳಿದಿದೆ.” ಕಮ್ಯೂನಿಸಂ ಈಗ ಅವನತಿಗೊಂಡಿರುವುದರಿಂದ, ತಮ್ಮ ಆತ್ಮಿಕ ಅಗತ್ಯವನ್ನು ಅರಿತುಕೊಂಡ ಅಲ್ಪೇನ್ಯರು ಯೆಹೋವನ ಸಾಕ್ಷಿಗಳಿಂದ ಸಾರಲ್ಪಡುತ್ತಿರುವ ಸುವಾರ್ತೆಗೆ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ. ಇಟಾಲ್ಯನ್ ಮತ್ತು ಇಂಗ್ಲಿಷ್ ಭಾಷಾಜ್ಞಾನವಿರುವ ಯುವ ಸಾಕ್ಷಿಗಳ ಒಂದು ಚಿಕ್ಕ ಭಾಷಾಂತರ ತಂಡವು 1992 ರಲ್ಲಿ ತಿರಾನದಲ್ಲಿ ರೂಪಿಸಲ್ಪಟ್ಟಿತು. ಬೇರೆ ದೇಶಗಳಿಂದ ಸಂದರ್ಶಿಸಿದ ಯೋಗ್ಯತೆಯುಳ್ಳ ಸಹೋದರರು ಅವರಿಗೆ ಅಲ್ಪೇನ್ಯನ್ ಭಾಷೆಯ ತರ್ಜುಮೆಗಾಗಿ ಲ್ಯಾಪ್ಟಾಪ್ ಕಂಪ್ಯೂಟರ್ಗಳನ್ನುಪಯೋಗಿಸಲು ಕಲಿಸಿದರು. ಅವರು ಕಿರುಹೊತ್ತಗೆಗಳ ಮತ್ತು ಕಾವಲಿನಬುರುಜು ಪತ್ರಿಕೆಯ ಭಾಷಾಂತರದೊಂದಿಗೆ ಪ್ರಾರಂಭಿಸಿದರು. ಅನುಭವವನ್ನು ಪಡೆದಂತೆ, ಇತರ ಅಮೂಲ್ಯ ಬೈಬಲ್ ಪ್ರಕಾಶನಗಳ ತರ್ಜುಮೆಯಲ್ಲಿ ಅವರು ತೊಡಗುತ್ತಾರೆ. ಪ್ರಸ್ತುತ ಆ ಚಿಕ್ಕ ದೇಶದಲ್ಲಿ (ಜನಸಂಖ್ಯೆ 32,62,000) 200 ಸಕ್ರಿಯ ಸಾಕ್ಷಿಗಳಿದ್ದಾರೆ, ಮತ್ತು 1994ರ ಜ್ಞಾಪಕಾಚರಣೆಗೆ 1,984 ಮಂದಿ ಹಾಜರಾದರು.
ನಮಗೆಲ್ಲರಿಗೆ ಒಂದು ಜವಾಬ್ದಾರಿ ಇದೆ
21. ಯಾವ ರೀತಿಯ ಅವಧಿಯಲ್ಲಿ ನಾವು ಜೀವಿಸುತ್ತಿದ್ದೇವೆ?
21 ಲೋಕ ಘಟನಾವಳಿಗಳು ಒಂದು ಪರಮಾವಧಿಯನ್ನು ತಲಪುತ್ತಿವೆ. ಪಾತಕ ಮತ್ತು ಹಿಂಸಾಚಾರದ ವೃದ್ಧಿ, ಸ್ಥಳಿಕ ಯುದ್ಧಗಳಲ್ಲಿ ಸಂಹಾರ ಮತ್ತು ಬಲಾತ್ಕಾರ ಸಂಭೋಗ, ನೆಲೆಸಿರುವ ಸಡಿಲ ನೈತಿಕತೆ ಮತ್ತು ಅದರ ಫಲವಾದ ರತಿ ರವಾನಿತ ರೋಗಗಳು, ನ್ಯಾಯಬದ್ಧ ಅಧಿಕಾರಕ್ಕೆ ಅಗೌರವ ಇವುಗಳೊಂದಿಗೆ ಲೋಕವು ಅರಾಜಕತೆಗೆ, ಅನಾಯಕತ್ವಕ್ಕೆ ತಲಪುವಂತೆ ತೋರುತ್ತಿದೆ. ಆದಿಕಾಂಡದಲ್ಲಿ ವರ್ಣಿಸಲಾದ ಪ್ರಲಯ-ಪೂರ್ವ ಕಾಲಕ್ಕೆ ಸಮಾಂತರವಾದ ಒಂದು ಅವಧಿಯಲ್ಲಿ ನಾವಿದ್ದೇವೆ: “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದಾಗಿರುವದನ್ನೂ ಯೆಹೋವನು ನೋಡಿ ತಾನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.”—ಆದಿಕಾಂಡ 6:5, 6; ಮತ್ತಾಯ 24:37-39.
22. ಯೆಹೋವನ ಸಾಕ್ಷಿಗಳೆಲ್ಲರಿಗೆ ಯಾವ ಕ್ರಿಸ್ತೀಯ ಜವಾಬ್ದಾರಿಯು ಇದೆ?
22 ನೋಹನ ದಿನಗಳಲ್ಲಿ ಮಾಡಿದಂತೆಯೆ ಯೆಹೋವನು ಕ್ರಮವನ್ನು ಕೈಕೊಳ್ಳುವನು. ಆದರೆ ಅವನ ನ್ಯಾಯಪರತೆ ಮತ್ತು ಪ್ರೀತಿಯಲ್ಲಿ, ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಮತ್ತು ಎಚ್ಚರಿಕೆಯ ಸಂದೇಶವು ಸಾರಲ್ಪಡುವಂತೆ ಆತನು ಬಯಸುತ್ತಾನೆ. (ಮಾರ್ಕ 13:10) ಈ ಸಂಬಂಧದಲ್ಲಿ ಯೆಹೋವನ ಸಾಕ್ಷಿಗಳಿಗೆ—ದೇವರ ಶಾಂತಿಗೆ ಯಾರು ಅರ್ಹರೊ ಅವರನ್ನು ಹುಡುಕುವ ಮತ್ತು ಆತನ ಶಾಂತಿಯ ಮಾರ್ಗಗಳನ್ನು ಅವರಿಗೆ ಕಲಿಸುವ—ಒಂದು ಜವಾಬ್ದಾರಿ ಇದೆ. ಶೀಘ್ರದಲ್ಲೇ, ದೇವರ ಕ್ಲುಪ್ತ ಸಮಯದಲ್ಲಿ, ಸಾರುವ ಆದೇಶವು ಯಶಸ್ವಿಯಾಗಿ ಪೂರ್ಣಗೊಳ್ಳುವುದು. “ಆಗ ಅಂತ್ಯವು ಬರುವುದು.”—ಮತ್ತಾಯ 10:12, 13; 24:14; 28:19, 20.
[ಅಧ್ಯಯನ ಪ್ರಶ್ನೆಗಳು]
a ಅನ್ಯಜನರ ಕುರಿತ ಅಧಿಕ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇವರಿಂದ ಪ್ರಕಾಶಿಸಲ್ಪಟ್ಟ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಸಂಪುಟ II, ಪುಟಗಳು 472-4 ರಲ್ಲಿ “ನೇಷನ್ಸ್” ಪ್ರಕರಣ ನೋಡಿರಿ.
b ಕ್ರೈಸ್ತ ಶುಶ್ರೂಷೆಯ ಕುರಿತ ವ್ಯಾವಹಾರ್ಯ ಸಲಹೆಗಳಿಗಾಗಿ, ದ ವಾಚ್ಟವರ್, ಆಗಸ್ಟ್ 15, 1984, ಪುಟ 15, “ಪರಿಣಾಮಕಾರಕ ಶುಶ್ರೂಷಕರಾಗುವುದು ಹೇಗೆ?” ಮತ್ತು ಪುಟ 21, “ಪರಿಣಾಮಕಾರಕ ಶುಶ್ರೂಷೆ ಅಧಿಕ ಶಿಷ್ಯರೆಡೆಗೆ ನಡಿಸುತ್ತದೆ,” ನೋಡಿರಿ.
ನಿಮಗೆ ನೆನಪಿದೆಯೇ?
▫ ಆಧುನಿಕ ದಿನದ ಯೆಹೋವನ ಸಾಕ್ಷಿಗಳಿಗೆ ಅವರ ಶುಶ್ರೂಷೆಯಲ್ಲಿ ಯಾವ ಸಾಫಲ್ಯ ದೊರೆತಿದೆ?
▫ ಕ್ರೈಸ್ತ ಸಂದೇಶವನ್ನು ಅನೇಕರು ತಿರಸ್ಕರಿಸುವುದೇಕೆ?
▫ ಸಾರುವ ಯಾವ ಅಪೊಸ್ತಲಿಕ ವಿಧಾನವನ್ನು ಸಾಕ್ಷಿಗಳು ಉಪಯೋಗಿಸುತ್ತಾರೆ?
▫ ಪರಿಣಾಮಕಾರಿ ಶುಶ್ರೂಷೆಗಾಗಿ ಯಾವ ಉಪಕರಣಗಳು ನಮ್ಮಲ್ಲಿವೆ?
▫ ಮಾರ್ಕ 13:10ಕ್ಕೆ ಹೊಂದಿಕೆಯಲ್ಲಿ ನಾವೆಲ್ಲರೂ ಏನು ಮಾಡಬೇಕು?
[ಪುಟ 19 ರಲ್ಲಿರುವ ಚೌಕ]
ದೇಶ ಇಸವಿ 1943 ರಲ್ಲಿ ಸಕ್ರಿಯ ಸಾಕ್ಷಿಗಳು ಇಸವಿ 1993 ರಲ್ಲಿ
ಆರ್ಜೆಂಟೀನ 374 102,043
ಬ್ರೆಜಿಲ್ 430 366,297
ಚಿಲಿ 72 44,668
ಕೊಲಂಬಿಯ ?? 60,854
ಫ್ರಾನ್ಸ್ ಲೋಕ ಯುದ್ಧ II—ದಾಖಲೆ ಇಲ್ಲ 122,254
ಅಯರ್ಲೆಂಡ್ 150? 4,224
ಇಟೆಲಿ ಲೋಕ ಯುದ್ಧ II—ದಾಖಲೆ ಇಲ್ಲ 201,440
ಮೆಕ್ಸಿಕೊ 1,565 380,201
ಪೆರು ಕಾರ್ಯದ ದಾಖಲೆ ಇಲ್ಲ 45,363
ಫಿಲಿಪ್ಪೀನ್ಸ್ ಲೋಕ ಯುದ್ಧ II—ದಾಖಲೆ ಇಲ್ಲ 116,576
ಪೋಲೆಂಡ್ ಲೋಕ ಯುದ್ಧ II—ದಾಖಲೆ ಇಲ್ಲ 113,551
ಪೋರ್ಟ್ಯುಗಲ್ ಕಾರ್ಯದ ದಾಖಲೆ ಇಲ್ಲ 41,842
ಸ್ಪೆಯ್ನ್ ಕಾರ್ಯದ ದಾಖಲೆ ಇಲ್ಲ 97,595
ಯುರಗ್ವೈ ಕಾರ್ಯದ ದಾಖಲೆ ಇಲ್ಲ 9,144
ವೆನಿಸ್ವೇಲ 22 64,081
[ಪುಟ 17 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ಸ್ಪೆಯ್ನ್ನಂಥ ಅನೇಕ ಕ್ಯಾತೊಲಿಕ್ ದೇಶಗಳಲ್ಲಿ ಅಭಿವೃದ್ಧಿಯಾಗುತ್ತಿದ್ದಾರೆ
[ಪುಟ 18 ರಲ್ಲಿರುವ ಚಿತ್ರಗಳು]
ಭೂಗೋಲದ ಸುತ್ತಲಿನ ಜನಾಂಗಗಳಲ್ಲಿ ಯೆಹೋವನ ಸಾಕ್ಷಿಗಳು ಸಕ್ರಿಯರಾಗಿದ್ದಾರೆ